ಹುತ್ತುಗಟ್ಟದೆ ಚಿತ್ತ ಕೆತ್ತೀತೇನು ಪುರುಷೋತ್ತಮನ ಅಂಥ ರೂಪು ರೇಖೆ?’

ಗೋಪಾಲಕೃಷ್ಣ ಅಡಿಗ.

ನನ್ನ ಅಜ್ಜ ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮುದುಕರಾದವರು. ವಯಸ್ಸಾದರೂ ದೃಷ್ಟಿಯನ್ನೂ, ಹಲ್ಲನ್ನೂ, ಮೈಲುಗಟ್ಟಲೆ ಬರಿಗಾಲಲ್ಲಿ ಕಾಡುದಾರಿಯಲ್ಲಿ ನಡೆದಾಡುವ ಶಕ್ತಿಯನ್ನೂ ಸಾಯುವತನಕ-ಅಂದರೆ, ಬಚ್ಚಲೆ ಒಲೆಯೆದರು ಮೈಕಾಯಿಸಿಕೊಳ್ಳುತ್ತ ಕೂತಿರುವಂತೆಯೇ ಕಣ್ಣು ಮುಚ್ಚುವತನಕ-ಪಡೆದವರೆಂದು ನೆನಪಾಗುವ ಈ ನನ್ನ ‘ಅಜ್ಜಯ್ಯ’ ಅಂಗಿ ಹಾಕದ ಅಪ್ಪಟ ವೈದಿಕರು. ಅವರನ್ನೊಂದು ಪಾಪಭಾವನೆ ಕಾಡಿರಬಹುದೆ? ಒಲೆ ಹತ್ತಿಸಲು ಕಾಡಿಂದ ಜಿಗ್ಗು ತರುವಾಗ ನನ್ನ ಹತ್ತಿರ ಪಟ್ಟಂಗ ಹೊಡೆಯುತ್ತ ಇದ್ದ ಈ ಅಜ್ಜಯ್ಯ ಹೇಳಿದ ಮಾತೊಂದು ನೆನಪಾಗುತ್ತಿರುತ್ತದೆ.

‘ವಯಸ್ಸಾಗುತ್ತ ಹೋದಂತೆ ನಾನು ಶಾಪನುಗ್ರಹ ಶಕ್ತಿ ಕಳೆದುಕೊಂಡುಬಿಟ್ಟೆನೊ?’ ಮುಖದ ಬೆವರನ್ನು ಪಾಣಿಪಂಚೆಯಿಂದ ಒರೆಸಿಕೊಂಡು, ಆರಿಸಿದ ಜಿಗ್ಗನ್ನು ತೆಂಗಿನ ಹುರಿಯಿಂದ ಕಟ್ಟುತ್ತ ಸಮಾಧಾನದಲ್ಲಿ ಹೇಳಬಹುದಾದ ಸತ್ಯವೆಂಬಂತೆ ಒಮ್ಮೆ ಹೇಳಿದ್ದರು. ವಯಸ್ಸಾದಂತೆ ಬೆಳೆಯಬೇಕಾದ ಶಕ್ತಿ ತನ್ನಲ್ಲಿ ಯಾಕೆ ಕುಂದಿದೆ ಎನ್ನುವುದಕ್ಕೆ ಅವರು ಕೊಡುತ್ತಿದ್ದ ಕಾರಣಗಳನ್ನು ಈಗಿನ ನಾನು, ಹಾಸ್ಯಾಸ್ಪದವೆನ್ನಿಸದಂತೆ ಗ್ರಹಿಸಲು ಪ್ರಯತ್ನಿಸುತ್ತೇನೆ.

ಅಜ್ಜಯ್ಯನಿಗೆ ಮದುವೆಯಾದ ನನ್ನ ಅಜ್ಜಿಯಲ್ಲದೆ ಅವರು ಕೇರಳದಲ್ಲಿ ಪುರೋಹಿತರೂ ವೈದ್ಯರೂ ಆಗಿದ್ದಾಗ ಅಲ್ಲಿನ ರೂಢಿಯಂತೆ ಮಾಡಿಕೊಂಡಿದ್ದ ಮೊದಲನೆಯ ಸಂಬಂಧ ಈ ಪಾಪ ಭಾವನೆಗೆ, ಈಗಿನ ನಾವು ಊಹಿಸಿಬಹುದಾದಂತೆ, ಖಂಡಿತ ಕಾರಣವಾಗಲಿಲ್ಲ. ಅವರ ಪ್ರೇಯಸಿಯೇ ಅವರಿಗೆ ನನ್ನ ಅಜ್ಜಿಯನ್ನು ಮದುವೆ ಮಾಡಿಸಿ, ನನ್ನ ತಂದೆಯವರು ಹುಟ್ಟಿ ಹತ್ತುವರ್ಷಗಳ ಕಾಲ ತಾನೇ ಅವರ ತಾಯಿಯೊಡನೆ ಸಾಕಿ ಸಲುಹಿ, ಅವರನ್ನು ಊರಿಗೆ ಕಳುಹಿಸಿದ್ದರು. ಇದೊಂದು ಯಾರಿಗೂ ಗುಟ್ಟಿನ ವಿಷಯವಾಗಿ ಉಳಿದಿರಲಿಲ್ಲ. ಅವರ ಪಾಪಭಾವನೆಗೆ ಕಾರಣವಾದದ್ದು ಆಶ್ಚರ್ಯವೆಂದರೆ ಮಲೆನಾಡಿಗೆ ಹಿಂದುರಿಗಿದ ಮೇಲೆ ಅವರಲ್ಲಿ ಬೆಳೆದಿದ್ದ ಕಾಫಿಯ ಚಟ. ಅದು ದುರ್ಲಭವಾದ ಎರಡನೆಯ ಮಹಾಯುದ್ಧ ಕಾಲದ ನಮ್ಮ ಬಡತನ.

ಪುರೋಹಿತರಾಗಿಯೂ, ಸಂಭಾವನೆಗಾಗಿಯೂ ಊರು ಸುತ್ತುತ್ತ ಇದ್ದ ನನ್ನ ಅಜ್ಜಯ್ಯ, ಅವರ ಕಾಫಿ ಚಟದಿಂದಾಗಿ ಪೇಟೆಯ ಹೋಟೇಲಲ್ಲಿ, ಮೈಲಿಗೆಯಲ್ಲೆ ಕಾಫಿ ಕುಡಿಯುತ್ತ ಇದ್ದುದನ್ನು ನೋಡಿದವರು ಅವರಂತೆ ವೈದಿಕರಾಗಿದ್ದರೆ ಅಷ್ಟೊಂದು ಚಿಂತಿಸುವ ಅಗತ್ಯವಿರಲಿಲ್ಲ; ಅವರೂ ಕಾಣದ ಪರ ಊರಿನಲ್ಲಿ ಮಾಡಬಹುದಾದ್ದು ಅದು. ಆದರೆ ಅಜ್ಜಯ್ಯನ ಮಾಂತ್ರಿಕ ಶಕ್ತಿಯನ್ನು ನಂಬಿದ್ದ ಊರಿನ ಯಜಮಾನರಾದ ಗೌಡರೇ ನೋಡಿದ್ದರು. ನಮ್ಮ ಮನೆಯಲ್ಲಿ ಇದೊಂದು ಗುಟ್ಟು; ನನ್ನ ತಾಯಿ ಬಚ್ಚಿಡುತ್ತ ಇದ್ದ ಗುಟ್ಟು. ಈ ಗುಟ್ಟು ತನ್ನ ಸೊಸೆಗೂ, ಹಬ್ಬ ಹರಿದಿನಗಳಿಗೆ ತನ್ನನ್ನು ಕರೆಯುತ್ತಿದ್ದ ಊರಿನ ಯಜಮಾನರಿಗೂ ರಟ್ಟಾಯಿತೆಂದು ಅಜ್ಜಯ್ಯನಿಗೆ ನಾಚಿಕೆ. ಆದರೂ ತನ್ನ ಸನಾತನಿಯ ನಡಾವಳಿಗಳನ್ನು ಅವರು ಬಿಡರು. ತೆಂಗಿನ ರುಚಿಯಿಲ್ಲದ ಬೋಳು ಹುಳಿಯ ಊಟ ಮುಗಿಸಿ ಆಪೋಶನ ತೆಗೆದುಕೊಳ್ಳುವಾಗ ‘ಅನ್ನಧಾತ ಸುಖೀಭವ’ ಎಂದು ಹರಸಲೇಬೇಕು. ಊಟಕ್ಕೆ ಕೂರುವ ಮುಂಚೆ ಹಸಿದವರು ಯಾರಾದರೂ ಬೀದಿಯಲ್ಲಿ ಇದ್ದಾರೋ ಎಂದು ಶಾಸ್ತ್ರೋಕ್ತವಾಗಿ ಹೊರಗೆ ಬಂದು ನೋಡಲೇಬೇಕು.

ಬಾಲ್ಯದ ನನ್ನ ಆಗಿನ ಗ್ರಹಿಕೆ ಸರಳವಾಗಿತ್ತು. ಮಾತಿನ ಶಾಪಾನುಗ್ರಹ ಶಕ್ತಿಗೂ ನಮ್ಮ ಜೀವನಕ್ರಮಕ್ಕೂ ಏನೋ ಸಂಬಂಧವಿದೆ. ಮತ್ತು ಅದು ನಾವು ಗಳಿಸಿದ್ದು ಮಾತ್ರವಲ್ಲದೆ ಇತರರಿಂದ ನಾವು ಪಡೆದದ್ದು ಎಂದು ತಿಳಿಯುವಂತೆ ನನ್ನ ಅಜ್ಜಯ್ಯ ಮಾಡಿದ್ದರು.

*

ಆದರ್ಶ ಸ್ಥತಿಯಲ್ಲಿ ಮಾತು ಜ್ಯೋತಿರ್ಲಿಂಗ-ಬ್ರಾಹ್ಮಣರಿಗೆ ಮಾತ್ರವಲ್ಲ, ಅವರಿಗೆ ಸಾಮಾಜಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಸವಾಲು ಹಾಕಿದ, ಜಾತಿಸಂಕರ ಮಾಡಿದ ವಚನಕಾರರಿಗೂ. ಆಡಿದ ಮಾತು ಹೇಗಿರಬೇಕೆಂದರೆ, ‘ಲಿಂಗಮೆಚ್ಚಿ ಅಹುದು ಅಹುದು ಎನ್ನುವಂತಿರಬೇಕು’.ಈ ಎಲ್ಲರಿಗೂ ಇದ್ದ ನಂಬಿಕೆಯೆಂದರೆ ತ್ರಿಕರಣ ಶುದ್ಧಿಯಲ್ಲಿ ತಪಸ್ವಿಗಳು ಮತ್ತು ಕವಿಗಳು ಮಾತಿಗೆ ಈ ಶಕ್ತಿ ದಕ್ಕುವಂತೆ ಮಾಡಬಲ್ಲರು, ಜೊತೆಗೇ ಇದನ್ನು ತತ್ ಕ್ಷಣದಲ್ಲಿ ಗುರುತಿಸಿ ‘ಅಹುದು ಅಹುದು’ ಎನ್ನಬಲ್ಲ ಸಮುದಾಯದಿಂದಲೂ ಆ ಶಕ್ತಿಯನ್ನು ಪಡೆಯಬಲ್ಲರು ಎಂಬುದು. ಪ್ರವಾದಿ ಮಹಮ್ಮದ್ ಗೇಬ್ರಿಯಲ್ ಮುಖೇನ ದೇವರಿಂದ ಪಡೆದ ಮಾತು, ಅಪೌರುಷೇಯವೆಂದು ನಾವು ತಿಳಿಯುವ ವೇದ, ಬ್ಲೇಕ್ ದೇವದೂತರಿಂದ ಕೇಳಿಸಿಕೊಂಡು (ಆಮೇಲೆ ತಿದ್ದಿ) ಬರೆದ ಮಾತು, ಶರಣರ ವಚನಗಳು-ಈ ಬಗೆಯವು. ಬ್ಲೇಕ್ ನಂತಹವರು, ನಮ್ಮ ಅಂಬಿಕಾತನಯದತ್ತರಾದ ಬೇಂದ್ರೆಯವರು ಈ ಬಗೆಯಲ್ಲೇ ತಾವು ಬಗೆದದ್ದನ್ನು ಬರೆಯುತ್ತ ಇದ್ದೇವೆಂದು ತಿಳಿದವರು.

ಈ ಉತ್ಪ್ರೇಕ್ಷೆಯಿಲ್ಲದೆಯೂ ಬಹಳ ಜನರಲ್ಲಿ ಮಾತಿಗೆ ಬೆಚ್ಚಿಸುವ, ಒಲಿಸುವ, ಗೆಲ್ಲುವ ಶಕ್ತಿಯಿರುತ್ತದೆಯೆಂಬ ನಂಬಿಕೆ ಅವರ ಮಾತಿನ ಆಧಾರವಾಗಿ ಇರುತ್ತದೆ. ಹತ್ತೊಂಬತ್ತನೆಯ ಶತಮಾನದ ಪ್ರಜಾತಾಂತ್ರಿಕ ಇಂಗ್ಲೆಂಡಿನಲ್ಲಿ ಮ್ಯಾತ್ಯೂ ಆರ್ನಾಲ್ಡ್, ಕರ್ಲೈಲ್, ರಸ್ಕಿನ್ ಮುಂತಾದವರು ತಾವು ನಡೆಸುತ್ತ ಇದ್ದ ಸಂವಾದಗಳನ್ನು ಮನಸ್ಸಿನಲ್ಲಿ ಊರುವಂತೆ ಮಾಡಲು ಬಗೆಬಗೆಯ ಗದ್ಯ ಶೈಲಿಗಳಿಗೂ, ಆಗಿನ ಪ್ರಜಾತಂತ್ರದ ಹೊಸ ಅರಿವಿನ ಆವಿಷ್ಕಾರಗಳಿಗೂ, ಜನಸಮುದಾಯದ ಕೇಳುವ ಹಸಿವಿಗೂ ಸಂಬಂಧವಿತ್ತು. ನಮ್ಮ ಜೀವನ ಕ್ರಮಕ್ಕೂ, ನಮ್ಮ ಆಹಾರಕ್ಕೂ, ನಮ್ಮ ಮಾತಿಗೂ ಸಂಬಂಧವಿದೆಯೆಂಬ ನನ್ನ ಅಜ್ಜಯ್ಯನ ಸರಳವಾದ ಯೋಚನಾಕ್ರಮ ಇದಕ್ಕಿಂತ ತೀರಾ ಏನೂ ಭಿನ್ನವಲ್ಲವೆಂಬ ಧೈರ್ಯಮಾಡಿ ಮುಂದುವರೆಯುತ್ತೇನೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮಾತಿಗೆ ಎದುರಾಳಿಯನ್ನು ಗೆಲ್ಲಬಲ್ಲ ಶಕ್ತಿಯಿದೆ ಎಂದು ನಂಬಿದ ಮಹಾನುಭಾವರು ಇದ್ದರು. ತಿಲಕರು, ಗೋಖಲೆಯವರು, ಅಂಬೇಡ್ಕರ್-ಹೀಗೆ ಹಲವರು persuade ಮಾಡಲೆಂದೇ, ಎದುರಾಳಿಯನ್ನು ಒಲಿಸಬಲ್ಲ ನಂಬಿಕೆಯಲ್ಲೇ ಬರೆದವರು. ನಾಗರಿಕ ಸಮಾಜದ ಗುಣ ಇದು ಮಾತಿನಲ್ಲಿ ಒಲಿಸಿಬಲ್ಲೆನೆಂಬ ಶ್ರದ್ಧೆ.

ಗಾಂಧಿಯಂತೂ ಅವರ ಎದುರಾಳಿಗೆ ಆಫಿಶಿಯನ್ ಕಾಗದ ಬರೆಯುವಾಗ ‘ಯುವರ್ ಎಕ್ಸೆಲೆನ್ಸಿ’ ಎಂದೇ ಸಂಭೋದಿಸಿ ಲಾಯರಿನ ಉಪಾಯಗಳನ್ನೆಲ್ಲ ಬಳಸಿ ವಾದಿಸುತ್ತ ಇದ್ದರು. ಮಧ್ಯಾಹ್ನ ಹೀಗೆ ಬರೆದವರೇ, ಅದೇ ಸಂಜೆ ವೈಯುಕ್ತಿಕವಾಗಿ ‘ಪ್ರಿಯ ಸ್ನೇಹಿತರೆ’ ಎಂದು ಸಂಬೋದಿಸಿ ‘ಈಚೆಗೆ ನೀವು ಚೆನ್ನಾಗಿ ನಿದ್ದೆ ಮಾಡುತ್ತ ಇಲ್ಲವೆಂದು ನನಗೆ ಆತಂಕವಾಗುತ್ತಾ ಇದೆ’ ಎಂದು ಬರೆಯುತ್ತಿದ್ದರು. ಆಳುವವರರ ಜೊತೆ ಎಲ್ಲ ವಾದಗಳು ನಿರರ್ಥಕವೆಂದು ಅವರಿಗೆ ಮನದಟ್ಟಾಗುವ ತನಕ ಒಂದು ಬಿರುನಡಿ ಆಡದ ಗಾಂಧಿ, ನಲವತ್ತೆರಡನೆಯ ಇಸವಿಯಲ್ಲಿ ಬೆಚ್ಚಿಸುವ ಹಾಗೆ ‘quit India’ ‘ಭಾರತ ಬಿಟ್ಟು ತೊಲಗಿ’ ಎಂದರು. ನಿತ್ಯ ಕಿರುಚುವಾತ ಈ ಮಾತನ್ನು ಆಡಿದ್ದರೆ ಭಾರತೀಯರೂ ಕಿವಿಗೊಡುತ್ತಿರಲಿಲ್ಲ; ಬ್ರಿಟಿಷರೂ ಕಿವಿಗೊಡುತ್ತಿರಲಿಲ್ಲ. ಶಾಪಾನುಗ್ರಹ ಶಕ್ತಿ ಭಾಷೆಗೆ ದಕ್ಕುವುದು ಮೌನದ ತಪಸ್ಸಿನಲ್ಲಿ-ಒಳನೋಟಗಳ ಸತ್ಯ ಮಾಗಿ ಹೊರಬೀಳುವ ಈ ಸಂಯಮದಲ್ಲಿ; ಹೊರಬಿದ್ದುದಕ್ಕೆ ಜನಸಮುದಾಯ ಸ್ಪಂದಿಸುವ ಔದಾರ್ಯದಲ್ಲಿ.

ದೂರ್ವಾನಿಸಮುನಿ ಕೋಪದ ಕೃಪಾಲಾನಿ ಒಮ್ಮೆ ಪಾರ್ಲಿಮೆಂಟಿನಲ್ಲಿ ಗುಡುಗಿದ್ದು ನೆನಪಾಗುತ್ತದೆ. ಅವರ ವಾದಕ್ಕೆ ಕಿವುಡರಂತೆ ಕಂಡ ಆಳುವ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಕೃಪಾಲಾನಿ ಕೆಂಡಮಂಡಲರಾಗಿ ಅಂದದ್ದು ಹೀಗೆ: ‘ನೀವು ಹೀಗೇ ನಿರ್ಲಕ್ಷಿಸಿದರೆ ನಾನು ಎಂದೂ ಮಾಡದ್ದನ್ನು ಮಾಡಬೇಕಾಗಿ ಬಂದೀತು. ಈ ಸದನವನ್ನು ಯಾವತ್ತೂ ಗೌರವದಿಂದ ಕಾಣುವ ನಾನು ವಾಕ್ ಮಾಡಿದರೂ ಮಾಡಿಯೇನು?’

ಈ ದಿನಗಳಲ್ಲಿ ನಿತ್ಯದ ವಾಕ್ ಔಟ್ ಕನ್ವೆನ್ ಶನ್ ಆಗಿಬಿಟ್ಟಿದೆ; ಕಿರುಚಾಡುವುದು, ಜಗ್ಗಾಡುವುದು ಆಗೀಗ ಸುದ್ದಿಯಾಗಲೆಂದು ನಡೆಯುವುದೂ ಉಂಟು. ಇದು ಕ್ಯಾಮರಾದ ಅಗತ್ಯವೂ ಹೌದು. ದೃಶ್ಯವಾಗಲಾರದ್ದು ಟೆಲಿವಿಶನ್ ಗಳಿಗೆ ಸುದ್ದಿಯೇ ಅಲ್ಲ. ಸುದ್ದಿಯಾದರೂ ಮಹಾ ಅದೇನೋ ಆದಂತೆಯೂ ಅಲ್ಲ. ಇವೆಲ್ಲವೂ ನಿರೀಕ್ಷಿಸುವ ನಾಟಕಗಳೇ ಕಾಣುವವರ ಪಾಲಿಗೆ. ಈಗ ಅಧಿಕಾರದಲ್ಲಿ ಇರುವವರು ವಿರೋಧ ಪಕ್ಷದಲ್ಲಿದ್ದಾಗ ಆಡಿದ ನಾಟಕಕ್ಕಿಂತ ಕೊಂಚ ಹೆಚ್ಚು ಆಕರ್ಷಕವಾಗಿತ್ತು ಎನ್ನಿಸಿದ್ದರೆ ಸಾಕು. ಅವರು ಚಪ್ಪಲಿ ಬಿಚ್ಚಿ ತೋರಿಸಿದ್ದರು; ಇವರು ಎಸದೇ ಬಿಟ್ಟರು. ಪುಣ್ಯಕ್ಕೆ ಯಾರ ಮೇಲೂ ಅದು ಬೀಳಲಿಲ್ಲ. ಮುಂದಿನ ನಾಟಕಕ್ಕೆ ಹೊಸದೇನಾದರೂ ಉಳಿದಿರಬೇಕು, ಅಲ್ಲವೆ?

*

ಕಡುಬಡವರು ರೊಚ್ಚಿಗೆದ್ದು ತಮ್ಮ ತಲೆಗೂದಲನ್ನೇ ಕೀಳುವಂತೆ ಜಗ್ಗಿಕೊಳ್ಳುತ್ತ ಬಗೆ ಬಗೆಯಲ್ಲಿ ತಮಗೆ ಅನ್ಯಾಯ ಮಾಡಿದವರನ್ನು ಶಪಿಸುವುದನ್ನು ನೋಡಿದಾಗ ತಮ್ಮ ಪರಮ ನಿಸ್ಸಹಾಯಕತೆಯಲ್ಲೂ ಅವರು ಮಾತಿಗೆ ಶಾಪಾನುಗ್ರಹ ಶಕ್ತಿಯನ್ನು ತರಬಲ್ಲ ದೀಕ್ಷಿತರಂತೆ ನಮಗೆ ಭಾಸವಾಗುತ್ತಾರೆ. ತಮ್ಮ ಮೌನದ ಅನುಗ್ರಹದಿಂದ ಬಲಿಷ್ಠರಾಗಿ ಈಗ ತಮಗೇ ಮೃತ್ಯುಪ್ರಾಯರಾದವರನ್ನು ಅವರು ಮೌನಮುರಿದು ಶಪಿಸುತ್ತಿದ್ದಾರೆ. ಹೀಗೆ ಶಾಪಹಾಕಿದಾಗಲೂ ಎದುರಾಳಿಗೆ ಏನೂ ಆಗದಿದ್ದಾಗ ಸಂಬಂಧಗಳೆಲ್ಲವೂ ಮುರಿದುಬಿದ್ದವೆಂದು ಅರ್ಥ. ಮಾತು ತನ್ನ ಅತಿಶಯದ ಕ್ರೌರ್ಯದ ಸ್ಥಿತಿಯಲ್ಲೂ ಶಾಪವಾಗುವ ಮಾಂತ್ರಿಕತೆಯನ್ನು ಕಳೆದುಕೊಂಡಂತೆ ಅನ್ನಿಸಿದಾಗ ಮಾನವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ರೈತರ ಆತ್ಮಹತ್ಯೆ ಈ ಬಗೆಯವು.

ಮಾತಿನ ಸಂವಾದ ಶಕ್ತಿಯಲ್ಲಿ ಒಬ್ಬರನ್ನೊಬ್ಬರು ಒಲಿದು ಒಲಿಸಿಕೊಳ್ಳವುದು ಸಾಧ್ಯವೆಂಬುದು ಪ್ರಜಾತಂತ್ರ ನಾಗರಿಕತೆಯ ಬಹು ಮುಖ್ಯಲಕ್ಷಣ. ಒಬ್ಬನ ದುಃಖ ಇನ್ನೊಬ್ಬನಿಗೆ ಗೊತ್ತಾಗುವುದು ಹೀಗೆ. ನಾವು ಬದಲಾಗುವುದಕ್ಕೂ, ನಮ್ಮ ಅರಿವು ಹಿಗ್ಗುವುದಕ್ಕೂ ಪ್ರೇರಕವಾಗುವುದು ಮಾತಿನ ಶಕ್ತಿ. ಸಮೂಹ ಸಮುದಾಯವಾಗುವುದು ಮಾತಿನ ಮೂಲಕ. ಈ ಮಾತು ಹೇಗಿರಬೇಕೆಂದರೆ ಎಲ್ಲ ಮಾತಿನ ಗರ್ಭದಲ್ಲೇ ಮಾತಿಗೆ ದಕ್ಕದ ಮೌನವಿದೆಯೆಂದೂ ಕೇಳುವವನಿಗೆ ಅನ್ನಿಸಬೇಕು. ಆಗ ಮಾತು ನಾವು ಬದಲಾಗಬೇಕಾಗುವಂತೆ ಕಾಡುತ್ತದೆ.

ಕ್ಯಾಮರಾದೆದುರು ನಮ್ಮ ಸದನಗಳಲ್ಲಿ ನಾಟಕಗಳು ನಡೆಯುವುದಷ್ಟೇ ಅಲ್ಲ. ಆತ್ಮಹತ್ಯೆಮಾಡಿಕೊಳ್ಳುವವರೂ ಕೂಡ ಕ್ಯಾಮರಕ್ಕಾಗಿ ಕಾಯುವುದನ್ನು ನಾವು ಈಗ ಕಾಣಬೇಕಾಗಿ ಬಂದಿದೆ. ತಮ್ಮ ಜೀವನೋಪಾಯ ಕಳೆದುಕೊಂಡ ಅಂಗವಿಕಲರು ವಾರಣಾಸಿಯಲ್ಲಿ ಕ್ಯಾಮರಾದ ಎದುರು ವಿಷಕುಡಿದು ಸತ್ತರು. ಹಿಂಸೆಗೊಳಗಾದ ಯುವತಿಯೊಬ್ಬಳು ಬೀದಿಯಲ್ಲಿ ಬೆತ್ತಲೆ ನಡೆದಳು. ಇದು ಟೆಲಿಬಿಷನ್ನಿನ ಅಗತ್ಯವೂ ಆಗಿರಬಹುದೆ? ಇದು ನೈತಿಕವೆ? ಹೀಗೆ ಮಾರುಕಟ್ಟೆಯ ಪದಾರ್ಥಗಳನ್ನು ಬ್ರೇಕ್ ಗಳಲ್ಲಿ ಮಾರಿ ಬದುಕುವ ಛಾನೆಲ್‌ಗಳು ಇಂತಹ ಪ್ರದರ್ಶಿತ ಆತ್ಮಹತ್ಯೆಗಳಿಗೆ ಪ್ರೇರಕರಾಗಿ ಇರಬಹುದೆ?

ಈ ಪ್ರಶ್ನೆಯನ್ನೂ ಒಂದು ಜನಪ್ರಿಯ ಛಾನೆಲ್ ಚರ್ಚೆಗೆ ಎತ್ತಿಕೊಂಡಿತು. ದೃಶ್ಯವಿಲ್ಲದೆ ಯಾವ ಸುದ್ದಿಯೂ ಆಗುವುದಿಲ್ಲ; ಚರ್ಚೆಯೂ ನಡೆಯುವಂತಿಲ್ಲ ಆದ್ದರಿಂದ ಯಾವುದು ಅನೈತಿಕವೆಂದು ಚರ್ಚಿತವಾಯಿತೊ, ಈ ಚರ್ಚೆಯೂ ಆ ಅನೈತಿಕ ದೃಶ್ಯಗಳನ್ನು ಪಕ್ಕದಲ್ಲಿ ತೋರಿಸುತ್ತಲೇ ನಡೆಯಿತು. ಅಂದರೆ ತನ್ನ ಬ್ರೇಕ್ ಗಳಲ್ಲಿ ಶ್ರೀಮಂತರಿಗೆ ಬೇಕಾದುದನ್ನು ಮಾರುವ ಈ ಛಾನೆಲ್ ಬಲು ಜಾಣ. ಅದರ ಪಾಲಿಸಿ; ‘ಅಜ್ಜಿ ಸುಟ್ಟು ಹಾಗೂ ಆಗಬೇಕು; ಛಳಿ ಕಾಯಿಸಿಕೊಂಡ ಹಾಗೂ ಆಗಬೇಕು’.

ಈ ಕಾಲದಲ್ಲಿ ಮಾತು ಸತ್ತಿದೆಯೆಂದು ಭಯೋತ್ಪಾದಕರೆಲ್ಲರೂ ದೃಢೀಕರಿಸುತ್ತ ಇದ್ದಾರೆ. ವೈಚಾರಿಕವಾದ ಮಾತಿನ ಮೂಲಕವೂ, ಅಹಿಂಸಾತ್ಮಾಕ ಸತ್ಯಾಗ್ರಹದ ಮೂಲಕವೂ ಹೋರಾಡುತ್ತಾ ಇರುವ ಮೇಧಾ ಪಾಟ್ಕರ್ ರಂತಹವರು ಕಾಫ್ಕಾನ ಹಂಗರ್ ಆರ್ಟಿಸ್ಟರ ಹಾಗೆ ನಮ್ಮ ಮಾಧ್ಯಮಗಳಿಗೆ ಕಾಣತೊಡಗಿದ್ದಾರೆ. ಸಮೂಹಸನ್ನಿ ಹುಟ್ಟಿಸುವ ತೊಗಾಡಿಯಾ ತರಹದ ವಿಕಾರಿಗಳು ಒಂದೆರಡು ವಾರದಲ್ಲೇ ದೃಶ್ಯಮಾಧ್ಯಮಗಳು ಟೀಕಿಸುತ್ತಲೂ ಬೆಳೆಸುವ ನ್ಯಾಷನಲ್ ಹೀರೋಗಳಾಗಿರುತ್ತಾರೆ.

ಈ ಟೆರರಿಸ್ಟರು- ಅವರು ಮುಸ್ಲಿಮ್ ಇರಲಿ, ಹಿಂದೂ ಇರಲಿ, ಬುಷ್ ಇರಲಿ, ಮೋದಿ ಇರಲಿ, ಇವರೆಲ್ಲರಿಗೂ ವಿರೋಧಿಗಳೆಂದುಕೊಳ್ಳುವ ನಕ್ಸಲೈಟರಿರಲಿ-ಅವರು ಕೊಲ್ಲುವುದು ಯಾರನ್ನ ? ಹೆಚ್ಚಾಗಿ ಬಡಪಾಯಿಗಳಾದ ಮಾನವರನ್ನೇ, ಆಗೀಗ ದೊಡ್ಡವರೂ ಬಲಿಯಾದಾಗ ಹೆಡ್ ಲೈನ್ ನ್ಯೂಸ್ ಆಗುತ್ತದೆ. ಮತ್ತೆ ಎಲ್ಲವೂ ಬೇಗ ಮರೆತುಹೋಗಿ ಟೆಲಿವಿಷನ್ನಗಳು ಬ್ರೇಕ್ ಗಳು ಆಗುತ್ತವೆ.

ಹೀಗೆ ಈಗ ಎಲ್ಲವೂ ಜಾಹೀರಾತು; ಪ್ರಜಾತಂತ್ರ ರಾಜಕಾರಣವೂ ಜಾಹೀರಾತು. ನಮ್ಮ ಎಲ್ಲ ಮಾತಿನ ಹಿಂದಿರುವ ಸಂರಚನೆ ಜಾಹೀರಾತಿನ ಸಂರಚನೆ. ಕಾಫಿಯ ಚಟ ನನ್ನ ಅಜ್ಜನ ಶಾಪಾನುಗ್ರಹ ಶಕ್ತಿಯನ್ನು ಕುಂದಿಸಿದ್ದರೆ, ಸರಕು ಸಂಸ್ಕೃತಿಯ ಮಾರುಕಟ್ಟೆ ನಮ್ಮ ಕಣ್ಣು ಕಿವಿ ನಾಲಗೆಗಳನ್ನು ಆಕ್ರಮಿಸಿ ಆಳಲೆಂದೇ ಎಲಿಬಿಲ್ಲದ ನಾಲಗೆಯ ಮಾತನ್ನು ತನ್ನ ಗುಲಾಮನನ್ನಾಗಿ ಮಾಡಿಕೊಂಡಿದೆ.

ಇದರ ಒಳಗಿರುವವರು ಭಯಗ್ರಸ್ತ ಭೋಗಿಗಳು; ಹೊರಗಿರುವವರು ಭಯೋತ್ಪಾದಕ ಕ್ರೂರಿಗಳು.

ಈ ಎರಡೂ ಅಲ್ಲದವರು, ಮಕ್ಕಳನ್ನು ಹೆತ್ತು ಹೊತ್ತು ಸಲಹುವ ಸಾಮಾನ್ಯ ಸಂಸಾರಿಗಳು, ನಾಗರಿಕ ಸಮುದಾಯಗಳಿಗಾಗಿ ಹಂಬಲಿಸುವ ಕೆಲವು ಕನಸುಗಾರರು ಷಷ್ಯ್ಠಬ್ದಿ ಮುಗಿಸಿದ ನಮ್ಮ ಪ್ರಜಾತಂತ್ರದಲ್ಲಿ ಮಾತಿನ ಸಾಚಾತನವನ್ನು ಕಿಂಚಿತ್ತಾದರೂ ಉಳಿಸಿಕೊಳ್ಳಲೆಂದು ಇಷ್ಟಾದರೂ ಸದ್ಯದಲ್ಲಿ ಆಚರಿಸುವ ಅಗತ್ಯವಿದೆಃ

ಅದೇನು ದೊಡ್ಡವೆಂದು ಸಮಸ್ಯೆಗೆ ಪರಹಾರವೆ? ಎನ್ನಿಸಬಹುದು.

ಎಲ್ಲರಿಗೂ ಸಾಧ್ಯವಿರುವ ಮೊದಲನೇ ಹೆಜ್ಜೆ ಅದು-ಅಷ್ಟೆ.

ಈ ಒಂದು ವ್ರತವನ್ನಾದರೂ ನಾವೆಲ್ಲರೂ ನಮ್ಮ ದೈನಿಕ ಜೀವನದಲ್ಲಿ ಅನುಸರಿಸಬೇಕು:

೧. ಪ್ರಚೋದಕವಾದ ಆವೇಶದ ಹಿಂಸಾತ್ಮಕ ಮಾತನ್ನು ನಾವು ನಂಬುವುದಿಲ್ಲ;

೨.ನನಗೇ ಅನುಭವಕ್ಕೆ ಬಂದುದನ್ನು ಕೂಡ ಪೂರ್ವಾಪರ ನೋಡಿ ಅರ್ಥಮಾಡಿಕೊಳ್ಳುದೆ ಇತರರಿಗೆ ಇದು ಕೊನೆಯ ಸತ್ಯವೆಂಬಂತೆ ಸಾರುವುದಿಲ್ಲ.

*

(ಸ್ವಾತಂತ್ಯ್ರೋತ್ಸವದ ೬೦ನೆಯ ವರ್ಷಾಚರಣೆ ಸಂದರ್ಭದಲ್ಲಿ ಉದಯವಾಣೀ ಪತ್ರಿಕೆಯಲ್ಲಿ ೧೫-೮-೨೦೦೭ರಂದು ಪ್ರಕಟವಾದ ಲೇಖನ)