ಒಂದು ಸಣ್ಣ ಉದಾಹರಣೆಯಿಂದ ನನ್ನ ಭಾಷಣ ಆರಂಭಿಸುತ್ತೇನೆ. ನನ್ನ ಸ್ನೇಹಿತ ಕೆ.ವಿ. ಸುಬ್ಬಣ್ಣ ಹೇಳುತ್ತಾರೆ: ಇಂಡಿಯಾಕ್ಕೆ ಹಲವು ಭಾಷೆಗಳಿದ್ದಾವೆ ಎಂದು. ಜೊತೆಗೆ ಇನ್ನೆರಡು ಭಾಷೆಗಳಿವೆ ಎಂದೂ ಅವರು ಹೇಳುತ್ತಾರೆ. ಆ ಎರಡು ಭಾಷೆಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಅವೂ ಭಾಷೆಗಳೇ. ಕುವೆಂಪು ರಾಮಾಯಣ ಬರೆದಿದ್ದಾರೆ. ಈಗ ಮೊಯಿಲಿಯವರೂ ರಾಮಾಯಣ ಬರೆಯುತ್ತಿದ್ದಾರೆ. ನಾವು ರಾಮಾಯಣ ಮತ್ತು ಮಹಾಭಾರತದ ಮುಖಾಂತರ ಭಾರತೀಯತೆಯನ್ನು ಕನ್ನಡ ಸಂಸ್ಕೃತಿಯ ಅಂಶವಾಗಿ ಪರಿಗಣಿಸಿಕೊಂಡು ಬಂದಿದ್ದೇವೆ. ಇಡೀ ಭಾರತದ ಸಾಂಸ್ಕೃತಿಕ ರಾಜಧಾನಿ ದೆಹಲಿಯಲ್ಲ ಎಂದು ಹಲವರಿಗೆ ಅನ್ನಿಸಿದರೆ ಆಶ್ಚರ್ಯಪಡಬೇಕಿಲ್ಲ. ಯಾಕೆಂದರೆ ನಮ್ಮದು ಬಹು ಕೇಂದ್ರಿತವಾದ ರಾಷ್ಟ್ರ ಎಂದು ತಿಳಿದುಕೊಂಡಾಗ ಫೆಡರಲ್ ಇಂಡಿಯಾ ಎಂಬುದು ನಮಗೆ ಸರಿಯಾಗುತ್ತೆ. ಅಂದರೆ ಭಾರತದ ಸಂಸ್ಕೃತಿಯ ಕೇಂದ್ರ ಇರುವುದು ಎಲ್ಲ ಕಡೆ. ಅದು ಕರ್ನಾಟಕದಲ್ಲಿದೆ, ತಮಿಳುನಾಡಿನಲ್ಲಿದೆ, ಮಹಾರಾಷ್ಟ್ರದಲ್ಲಿದೆ. ಹೀಗೆಯೇ ಎಲ್ಲ ಕಡೆ ಚದುರಿಕೊಂಡಿದೆ. ಈ ಭಾರತದ ಕಥನದಲ್ಲಿ ಬಂಗಾಲಿಗಳು ತಮ್ಮನ್ನು ಸ್ವಲ್ಪ ಹೆಚ್ಚೇ ಚಿತ್ರಿಸಿಕೊಂಡಿದ್ದಾರೆ. ಈಗ ತಮಿಳುನಾಡಿನವರು ರಾಜಕಾರಣದಿಂದಲೇ ತಮ್ಮ ಕಥನವನ್ನು ಭಾರತದ ಮೇಲೆ ಹೇರಿದ್ದಾರೆ. ಆದರೆ ನಾವು- ಕನ್ನಡಿಗರು ಹೀಗೆ ಏನೂ ಮಾಡುವುದಕ್ಕೆ ಹೋಗಿಲ್ಲ. ಇದು ನಮ್ಮ ಗುಣ ಮತ್ತು ಶಕ್ತಿ ದೌರ್ಬಲ್ಯವಲ್ಲ.

ಭಾರತದ ಅತ್ಯುತ್ತಮ ಲೇಖಕರು ಕನ್ನಡದಲ್ಲಿ ಆಗಿ ಹೋಗಿದ್ದಾರೆ. ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ ಇಲ್ಲರೂ. ಆದರೆ ಅದು ಭಾರತಕ್ಕೆ ಅಷ್ಟಾಗಿ ತಿಳಿದಿಲ್ಲ. ಸುಮ್ಮನೆ ಒಂದು ಪ್ರತಿಷ್ಠೆಯಾಗಿ ಗೊತ್ತಿದೆ. ಅದನ್ನು ಓದಿ ತಿಳಿದು ಗೊತ್ತಿಲ್ಲ. ಆದ್ದರಿಂದ ನಾವು ಅಪಸ್ವರ ಎತ್ತದೆ ಎದ್ದರೂ ನಾವು ಇದ್ದೇವೆ ಎನ್ನುವುದನ್ನು ಗುರುತಿಸುವುದಕ್ಕೆ ಈ ದೆಹಲಿ ಕರ್ನಾಟಕ ಸಂಘ ಕೆಲಸ ಮಾಡುವುದು. ಅದು ಯಾವ್ಯಾವ ರೀತಿಯಲ್ಲಿ ಎಂದು ಯೋಚಿಸೋಣ.

ಮೊದಲನೆಯದಾಗಿ ರಾಜಕೀಯ ಪಕ್ಷಗಳ ಜವಾಬ್ದಾರಿ. ಯಾವ ರಾಜಕೀಯ ಪಕ್ಷವೂ ಅದು ಇರುವ ಜನರ ಆದೇಶದ ಮೇಲೆಯೇ ಕೆಲಸ ಮಾಡಬೇಕಾಗಿದೆ. ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ಆ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಪ್ರಾಂತ್ಯಗಳನ್ನು ಸಂಪೂರ್ಣವಾಗಿ ಎತ್ತಿ ಹಿಡಿಯಬೇಕು. ಆದರೆ ಆ ಪಕ್ಷವು ರಾಷ್ಟ್ರೀಯ ಪಕ್ಷ ಆದಾಗ, ಪ್ರಾಂತ್ಯವನ್ನು ಎತ್ತಿ ಹಿಡಿಯುವುದರಲ್ಲಿ ಹಿಂಜರಿಕೆ ಆಗಬಹುದು. ಜೊತೆಗೆ ಪ್ರಾದೇಶಿಕ ಪಕ್ಷಗಳು ಬಂದುಬಿಟ್ಟರೆ, ಅದು ಯಾವತ್ತೂ ಭಾರತದೊಳಗೆ ನಾವು ಬೆರೆತು ಮಾಡಿರುವ ಕೆಲಸ ಮುಂದುವರಿಯದೇ ಹೋಗಬಹುದು. ಆದ್ದರಿಂದ ನಾನು ಪ್ರಾದೇಶಿಕ ಪಕ್ಷಗಳಿಗೆ ಬೆಲೆ ಕೊಡೋನಯ ಅಲ್ಲ.  ಆದರೆ ದೆಹಲಿಯಲ್ಲಿ ನಮ್ಮ ಮಾತು ಕೇಳಿಸುವುದರಲ್ಲಿ ಅಖಿಲ ಭಾರತ ಪಕ್ಷಗಳು ವಿಫಲವಾದರೆ ಆಗ ಈ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗುತ್ತದೆ. ಕರ್ನಾಟಕದಲ್ಲಿ ಅದು ಆಗದೇ ಇದ್ದ ಹಾಗೆ ಮಾಡಬೇಕಾದರೆ ಇವತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಆಗಲೀ, ಅಥವಾ ಭಾರತೀಯ ಜನತಾ ಪಾರ್ಟಿಯಾಗಲೀ- ಅದು ರಾಷ್ಟ್ರೀಯ ಪಕ್ಷ ಎಂದು ಅನಿಸಿಕೊಳ್ಳೋದಾದರೆ- ಅದಕ್ಕೆ ದೆಹಲಿಯಲ್ಲಿ ಪ್ರೆಸೆನ್ಸ್ ಇದ್ದರೆ, ಅವು ಕರ್ನಾಟಕದ ಧ್ವನಿಯು ಕೇಂದ್ರದವರ ಕಿವಿಗೆ ಬೀಳುವ ಹಾಗೆ ಕೆಲಸ ಮಾಡಬೇಕಾಗುತ್ತದೆ. ಆಗ ಪ್ರಾದೇಶಿಕ ಪಕ್ಷಗಳ ಅಗತ್ಯ ಇರುವುದಿಲ್ಲ. ಚಂದ್ರಬಾಬು ನಾಯ್ಡು ಪ್ರಾದೇಶಿಕ ಪಕ್ಷವೊಂದರ ಮೂಲಕ ಸಾಧನೆ ಮಾಡಿ ತೋರಿಸಿದರು. ಆದರೆ ಅದು ಅಲ್ಪಾವಧಿಯದು. ನಮ್ಮ ರಾಜಕೀಯ ಪಕ್ಷಗಳಲ್ಲಿ ಹೆಚ್ಚು ‘ಡೆಮಾಕ್ರಟಿಕ್’ ಆದ ಒಂದು ವ್ಯವಸ್ಥೆ ಇರಬೇಕು ಎಂದು ಕಾಣುತ್ತದೆ. ಆಗ ನಮ್ಮ ಮಾತು ದೆಹಲಿಯಲ್ಲಿ ಕೇಳಿಸಬಹುದು.

ಇನ್ನೊಂದು ವಿಷಯ ಗಮನಿಸಿರಿ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಂಥ ದೊಡ್ಡ ರಾಜ್ಯಗಳಗೆ ಬಹಳ ದೊಡ್ಡ ಬಂಡವಾಳಗಾರರಿದ್ದಾರೆ. ಅಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳಿದ್ದಾರೆ. ಕರ್ನಾಟಕದಲ್ಲಿ ಅಂತಹ ದೊಡ್ಡ ಉದ್ಯಮಗಳೇ ಇಲ್ಲ. ದೊಡ್ಡ ಉದ್ಯಮಿಗಳು ಕರ್ನಾಟಕದಲ್ಲಿ ಯಾಕೆ ಬೆಳೆಯೋದಿಲ್ಲ? ಅಥವಾ ಕರ್ನಾಟಕದಲ್ಲಿ ಭೇರೆಯವರೇ ಯಾಕಿರುತ್ತಾರೆ? ಇದರಲ್ಲಿ ಕರ್ನಾಟಕ ಸರ್ಕಾರದಿಂದ ಏನಾದರೂ ತಪ್ಪಾಗಿದೆಯಾ? ಮತ್ತು ಈ ಜಾಗತೀಕರಣದ ಕಾಲದಲ್ಲಿ ಕಾಯೆ ಅಪಾಯವಿದೆ? ಅಂದರೆ ಯಾರು ಯಾರು ಬಂಡವಾಳವನ್ನು ಯಾವ ಯಾವ ಪ್ರಾಂತ್ಯದಲ್ಲಿ ಹೆಚ್ಚು ಹೊಂದಿರುತ್ತಾರೆಯೋ ಅವರು ಹೆಚ್ಚು ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕೈಗಾರಿಕೆಗಳು ಹೆಚ್ಚು ಹೆಚ್ಚು ಬೆಳೆಯುವ ಹಾಗೆ ಮಾಡಬೇಕಾಗಿದೆ. (ನಾನು ಸಮಾಜವಾದಿ. ಆದರೂ ಹೇಳುತ್ತೇನೆ ಈ ಸ್ಥಿತಿಯಲ್ಲಿ ನಾವು ಉದ್ದಿಮೆಗಳನ್ನು ಬೆಳೆಸಬೇಕಾಗುತ್ತದೆ ಎಂದು.)

ಇನ್ನೊಂದು ಸಮಸ್ಯೆ ಎಂದರೆ ನಮ್ಮಲ್ಲಿ ಒಂದು ಬಲವಾದ ಐ.ಎ.ಎಸ್. ಲಾಬಿ ಇಲ್ಲ. ತಮಿಳುನಾಡಿನಲ್ಲಿದೆ, ಕೇರಳದಲ್ಲಿದೆ, ಬೇರೆ ರಾಜ್ಯಗಳಲ್ಲಿದೆ. ಅದಕ್ಕೆ ಕಾರಣ: ನಮ್ಮಲ್ಲಿ ಅನೇಕ ಬುದ್ದಿವಂತ ಹುಡುಗರು, ಡಾಕ್ಟರುಗಳು, ಇಂಜನಿಯರುಗಳಾಗುತ್ತಾರೆ. ಈಗಂತೂ ಈ ಐಟಿನಲ್ಲಿ, ಕೆಲಸ ಮಾಡದೇ ತುಂಬ ಸಂಬಳ ಸಿಗುವುದರಿಂದ ಹೆಚ್ಚು ಬುದ್ಧಿವಂತರೂ ಆಗುತ್ತಿಲ್ಲ ನಮ್ಮ ಹುಡುಗರು. ಇನ್ನೂ ಕೆಲವು ಜನ ಇಂಗ್ಲಿಷ್ ಕಲಿತರೆ ಸಾಕು, ಕಾಲ್‌ ಸೆಂಟರ್‌ನಲ್ಲಿ ಹೋಗಿ ಕೆಲಸ ಮಾಡಬಹುದೆಂದು ತಿಳಿದಿದ್ದಾರೆ. ನಾವು ನೋಡಿದರೆ ಇಷ್ಟು ಜನಕ್ಕೆ ಕೆಲಸ ಕೊಡ್ತೀದೀವಿ ಎಂದು ಹೇಳುತ್ತೇವೆ. ಆದರೆ ಅದು ಗುಣಾತ್ಮಕ ಉದ್ಯೋಗ ಅಲ್ಲ. ಕಾಲ್‌ಸೆಂಟರ್‌ಗೆ ಹೋದೋರು ೮-೧೦ ವರ್ಷದ ನಂತರ ಮನೋರೋಗಿಗಳಾಗಬಹುದು; ಅದಲ್ಲ. ಅಂದರೆ ಈ ರೀತಿಯ ಅಭಿವೃದ್ಧಿ ಕರ್ನಾಟಕದಲ್ಲಿ ಆಗ್ತಾ ಇಲ್ಲ. ನಮ್ಮಲ್ಲಿ ಮಾನವಿಕ ವಿಭಾಗಗಳು ಬಲವಾಗಿ ಇದ್ದುವು. ಇಡೀ ಕರ್ನಾಟಕದಲ್ಲಿ ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ ಇವೆಲ್ಲದರ ಬೆಳವಣಿಗೆಗೆ ದೆಹಲಿಗೆ ಬರಬೇಕಾಗಿದೆ. ಕರ್ನಾಟಕ ಸಾಕಾಗುವುದಿಲ್ಲ. ಆದ್ದರಿಂದ ದೆಹಲಿಯಲ್ಲಿ ನಮ್ಮ ಮಾತನ್ನು ಕೇಳಬೇಕಾದರೆ, ಹೆಚ್ಚು ಜನ ಐ.ಎ.ಎಸ್.ಗೆ ಬರಬೇಕಾಗುವಂತೆ ಕರ್ನಾಟಕದಲ್ಲಿ ಪ್ರೇಕರಣೆ ಕೊಡಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ನಾವು ಪ್ರೊಫೆಶನಲ್ ಕೋರ್ಸ್‌ಗೆ ಹೋಗ್ತಾ ಇದೀವಿ. ಅದು ತಪ್ಪಲ್ಲ. ಜೊತೆಗೆ ಇನ್ನೊಂದರ ಕಡೆಗೂ ನಾವು ಗಮನ ಕೊಡಬೇಕು.

ಒಂದು ವಿಷಯವನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಕನ್ನಡಿಗರಲ್ಲಿ ಒಂದು ಸಮಸ್ಯೆ ಇದೆ. ಬಂಗಾಲಿಗಳು ಎಲ್ಲಿ ಹೋದರೂ ಬಂಗಾಲಿಗಳಂತಲೇ ಗುರುತಿಸಿಕೊಳ್ಳುತ್ತಾರೆ. ತಮಿಳುನಾಡಿನವರು ತಾವು ತಮಿಳರು ಅಂತಲೇ ಗುರುತಿಸಿಕೊಳ್ಳುತ್ತಾರೆ. ಕನ್ನಡಿಗರು ತಮ್ಮ ಜಾತಿಗಳ ಮುಖಾಂತರ ಗುರುತಿಸಿಕೊಳ್ಳುವುದೇ ಹೆಚ್ಚು. ನಾವು ಕನ್ನಡಿಗರೆಂದು ಪ್ರಾಥಮಿಕವಾಗಿ ಗುರುತಿಸಿಕೊಳ್ಳಬೇಕಾದರೆ ಏನು ಮಾಡಬೇಕೋ, ಅದನ್ನು ನಾವು ಮೊದಲು ಯೋಚಿಸಬೇಕು. ಆಂದ್ರದಲ್ಲಿ ಚಂದ್ರಬಾಬು ನಾಯ್ಡು ಬಲವಾಗಿದ್ದ ಕಾಲದಲ್ಲಿ ಇದ್ದ ಪ್ರಾಶಸ್ತ್ರ ಈಗ ಕಡಿಮೆ ಆಗುತ್ತಿದೆ. ‘ಆಲ್‌ ಇಂಡಿಯಾ ಪ್ರೆಸೆನ್ಸ್’ ಎನ್ನುವುದು ಕರ್ನಾಟಕಕ್ಕೆ ಅಗತ್ಯವಾಗಿಬೇಕು, ಅದನ್ನು ಹೇಳುವವರು ಮತ್ತು ಕೇಳುವವರು ಬೇಕು, ಅದನ್ನು ಮಾಡುವವರೂ ಬೇಕು. ದೆಹಲಿಯಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳು ಈ ಮಾದರಿಯದು.

ಶ್ರೀ ವಿಜಯನ ಕಾಲದಿಂದ ನಮ್ಮಲ್ಲಿ ಬೆಳೆದು ಬಂದು ಆಲೋಚನಾಕ್ರಮ ಒಂದಿದೆ. ಅವನು ದಂಡಿಯನ್ನು ಆದರ್ಶವನ್ನಾಗಿ ಇಟ್ಟುಕೊಂಡು ಅವನನ್ನು ಮೀರಿ ಹೋಗುವ ಉಪಾಯಗಳನ್ನು ಹುಡುಕಿದ. ಸ್ನೇಹಿತ ಸುಬ್ಬಣ್ಣ ಹೇಳುತ್ತಾರೆ, ಕನ್ನಡಕ್ಕೆ ಸ್ವೀಕಾರದ ಗುಣ ಹೆಚ್ಚಿದೆ. ಅದು ಬೇರೆ ಭಾಷೆಗಳಲ್ಲೂ ಇದೆ ಆದರೆ ತಮಿಳಿಗಿಲ್ಲ. ತಮಿಳು ತನಗೆ ಎಷ್ಟು ಬೇಕೋ ಅಷ್ಟು ಮಾತ್ರ ಅಕ್ಷರಗಳನ್ನ ಸ್ವೀಕರಿಸಿಕೊಂಡಿದೆ. ತಮಿಳಿನಲ್ಲಿ ‘ಕ್ಲಿಂಟನ್’ ಎಂಬುದು ‘ಗ್ಲಿಂಟನ್’ ಆಗುತ್ತೆ ‘ಗಾಂಧಿ’ ಬರೆಯುವುದಕ್ಕೆ ಆಗಲ್ಲ. (ಕನ್ನಡದಲ್ಲಿ ಯಾರ ಹೆಸರನ್ನೂ ಬರೆಯಬಹುದು.) ಕನ್ನಡದಲ್ಲಿ ಯಾವ ಶಬ್ದವನ್ನೂ ಬರೆಯಬಹುದು. ಈ ಸ್ವೀಕಾರ-ಅದೊಂದು ಔದಾರ್ಯದ ಗುಣ-ಇರುವುದರಿಂದ ಕನ್ನಡಕ್ಕೆ ಬೇಕಾದ ಕೆಲಸವನ್ನು ಮಾಡುವ ಛಲವಂತರಿಲ್ಲದೇ ಹೋದರೆ, ಇದು ಕೇವಲ ಔದಾರ್ಯವಾಗಿ ಬಿಡುತ್ತದೆ. ಅಂದರೆ ಕರ್ನಾಟಕಕ್ಕೆ ಸಿಗಬೇಕಾದ್ದನ್ನು ಸಿಗುವಂತೆ ಮಾಡುವವರು ದೆಹಲಿಯಲ್ಲಿರಬೇಕು. ದೆಹಲಿಯಲ್ಲಿದ್ದು ಕೆಲಸ ಮಾಡಬೇಕು.

ದೆಹಲಿಯಲ್ಲಿರುವ ಕನ್ನಡಿಗರು ಮತ್ತು ಕರ್ನಾಟಕ ಸಂಘಕ್ಕೆ ನನ್ನ ಕೆಲವು ಸೂಚನೆಗಳಿವೆ. ನಾವು ಇಲ್ಲಿ ಒಂದು ‘ಫ್ರೆಂಡ್ಸ್ ಆಫ್ ಕರ್ನಾಟಕ’ (ಕರ್ನಾಟಕದ ಗೆಳೆಯರು) ಎಂಬ ಸಣ್ಣ ಗುಂಪನ್ನು ಮಾಡಬೇಕಾಗಿದೆ. ಎಂದರೆ ಕನ್ನಡದ ಬಗ್ಗೆ ಪ್ರೀತಿಯಿರುವವರು ಹಿಂದಿ ಭಾಷೆಯಲ್ಲಿದ್ದಾರೆ, ಬಂಗಾಲಿಯಲ್ಲಿದ್ದಾರೆ, ಮಲಯಾಳದಲ್ಲಿದ್ದಾರೆ. ಕನ್ನಡದವರಲ್ಲದೇ ಇರುವವರು ಬೇಕಾದಷ್ಟು ಜನ ಇದ್ದಾರೆ. ತಿಂಗಳೀಗೆ ಒಂದು ಸಾರಿಯೋ, ಎರಡು ತಿಂಗಳಿಗೆ ಒಂದು ಸಾರಿಯೋ ಅವರನ್ನು ಕರೆದು ಸಮಾಲೋಚನೆ ಮಾಡಬೇಕು. ಕರ್ನಾಟಕದ ಬಗ್ಗೆ ಆಸಕ್ತಿ ಇರುವವರೆಲ್ಲ ಒಟ್ಟಾಗಿ ಸಮಾಲೋಚನೆ ಮಾಡುವುದಕ್ಕೆ ದೆಹಲಿ ಕರ್ನಾಟಕ ಸಂಘ ವೇದಿಕೆ ಕಲ್ಪಿಸಬೇಕು.

ಇನ್ನೊಂದು, ಮುಂಬೈನ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವಿದೆ. ಆದ್ದರಿಂದ ಮುಂಬೈನಲ್ಲಿ ವಿದ್ವತ್ಪೂರ್ಣ ಕೆಲಸಗಳು ನಡೆಯುತ್ತಿವೆ. ಪ್ರಕಟಣೆಗಳು ಬರುತ್ತಿವೆ. ಇಂಥ ಕೆಲಸ ಮದರಾಸಿನಲ್ಲಿಯೂ ನಡೆಯುತ್ತದೆ. ಆದರೆ ದೆಹಲಿಯಲ್ಲಿ ಇಲ್ಲ. ದೆಹಲಿಯಲ್ಲಿರು ಎರಡು ವಿಶ್ವವಿದ್ಯಾಲಯಗಳಿವೆ. ಅಲ್ಲಿ ಒಂದು ಕರ್ನಾಟಕ ಅಧ್ಯಯನ ವಿಭಾಗ ಇರುವಂತೆ ಮಾಡಬೇಕು. (ಕರ್ನಾಟಕ ಸ್ಟಡೀಸ್) ಅದರಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಜೊತೆಗೆ ಇಕನಾಮಿಕ್ಸ್ ಬಗ್ಗೆ, ಇಂಡಸ್ಟ್ರೀಸ್ ಬಗ್ಗೆ, ಸಮಾಜದ ಬಗ್ಗೆ ರಾಜಕೀಯದ ಬಗೆಗೆ ಅಲ್ಲಿ ಬರೆಯುವವರು, ಮಾತನಾಡುವವರು ಇರಬೇಕು. (ಇದನ್ನ ನಾನು ಮೊಯಿಲಿಯವರಿಗೆ ಹೇಳಿದ್ದೆ) ಇದಕ್ಕೆ ಹೆಚ್ಚು ಹಣ ಖರ್ಚಾಗಲಿಕ್ಕಿಲ್ಲ. ಒಂದು ‘ಸೆಂಟರ್ ಫಾರ್ ಕರ್ನಾಟಕ ಸ್ಟಡೀಸ್’ನ್ನು ದೆಹಲಿಯ ವಿಶ್ವವಿದ್ಯಾಲಯವೊಂದರ್ಲಲಿ ಅಥವಾ ಜವಾಹರಲಾಲ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಬೇಕು. ಅದಕ್ಕೆ ಕರ್ನಾಟಕ ಸರಕಾರನೂ ಮುಂದಾಗಬೇಕು ಮತ್ತು ಕೇಂದ್ರ ಸರರ್ಕಾರದ ನೆರವನ್ನೂ ಪಡೆಯಬೇಕು. ಇಲ್ಲಿ ಬಹಳ ಜನ ವಿಚಾರವಂತರಿದ್ದಾರೆ. ಅತ್ಯುತ್ತಮವಾದ ಹಿಂದಿ ಸಾಹಿತಿಗಳಿದ್ದಾರೆ. ಹಿಂದಿ ಸಾಹಿತ್ಯವನ್ನು ಗುರುತಿಸುವ ಕನ್ನಡಿಗರು ಮತ್ತು ಕನ್ನಡವನ್ನು ಗುರುತಿಸುವಂತಹ ಹಿಂದಿಯವರ ಮಧ್ಯೆ ಸೇತುವೆಯನ್ನು ನಿರ್ಮಿಸುವ ಕೆಲಸ ಕೂಡಲೇ ಆಗಬೇಕು. ಕನ್ನಡದ ಬಲ ಇರುವುದು ಸಾಹಿತ್ಯ ಕ್ಷೇತ್ರದಲ್ಲಿ. ಅವರ ಜೊತೆ ಸಂಪರ್ಕ ಇರುವ ಹಾಗೆ ಕೆಲಸ ಸಾಧ್ಯವಾಗಬೇಕು. ಭಾಷಾಂತರದ ಕೆಲಸವೂ ಆಗಬೇಕು.

ಹಿಂದಿಯ ಕುರಿತು ಒಂದು ಮಾತು ಹೇಳುತ್ತೇನೆ. ನಾವು ಹಿಂದಿಯನ್ನು ವಿರೋಧಿಸಬಾರದು ಎಂದು ನನಗೆ ಬಲವಾಗಿ ಅನಿಸುತ್ತದೆ. ಯಾಕೆಂದರೆ ಹಿಂದಿ ಭಾಷೆ ಹಲವು ಭಾಷೆಗಳನ್ನು ಉದಾರವಾಗಿ ಒಪ್ಪಿಕೊಳ್ಳುವ ಭಾಷೆ. ಹಿಂದಿಯಲ್ಲಿ ಬಂದರೆ ಓದುತ್ತಾರೆ. (ಹಿಂದಿ ಭಾಷಿಕರು ಅನುವಾದಗಳ ಬಗ್ಗೆ ತುಂಬಾ ಉದಾರವಾಗಿರುತ್ತಾರೆ). ಅನುವಾದಿಗಳಿಗೆ ಒಂದೂರು ಹಾಸ್ಪಿಟಾಲಿಟಿ ಇಲ್ಲದಂತಹ ಒಂದು ಪ್ರಾಂತ್ಯ ಎಂದರೆ ಬಂಗಾಲ. ಅವರು ಫ್ರೆಂಚೇ ಓದೋದು. ಉಳಿದ ಭಾಷೆಗಳನ್ನು ಓದೋದೇ ಇಲ್ಲ. ಅಲ್ಲೇ ಹೋಗಿ ತಮಾಷೆ ಮಾಡ್ತೇನೆ. ‘ಬಂಗಾಲ ಬಿಟ್ರೆ, ಫ್ರಾನ್ಸ್ ಅಂತೀರಿ ನೀವು’ ಎಂದು. ಆದರೆ ಹಿಂದಿ ಭಾಷೆಯಲ್ಲಿ ಹೆಚ್ಚು ಭಾಷಾಂತರ ಕಾರ್ಯ ನಡೆಸಬಹುದು ಅದರಿಂದ ‘ಫ್ರೆಂಡ್ಸ್ ಆಫ್ ಕರ್ನಾಟಕ’ಎಇಂದ ಹೆಚ್ಚು ನೆರವಾಗಬಹುದು. ದೆಹಲಿ ಕರ್ನಾಟಕ ಸಂಘ ಈ ಕೆಲಸ ಮಾಡಬಹುದು.

ಒಟ್ಟಾರೆಯಾಗಿ ರಾಜಕೀಯವಾಗಿ ಕರ್ನಾಟಕಕ್ಕೆ ಭಾರತದಲ್ಲಿ ಸ್ಥಾನ ಸಿಗಬೇಕಾಗುವಂತೆ ಮಾಡಬೇಕಾಗಿದೆ. ಅದಕ್ಕೆ ದೆಹಲಿಯೇ ಕೇಂದ್ರವಾಗಬೇಕು. ಕರ್ನಾಟಕ ಸಂಘಕ್ಕೆ ಈಗೊಂದು ಒಳ್ಳೆಯ ಕಟ್ಟಡ ಇದೆ. ಇದರ ಪ್ರಯೋಜನ ಕರ್ನಾಟಕಕ್ಕೆ ಆಗಬೇಕಾಗಿದೆ. ಆಮೇಲೆ ನಮ್ಮ ಕನ್ನಡಿಗರಲ್ಲಿ ಒಂದು ರೋಗ ಇದೆಯಲ್ಲ. ಇದ್ದಲ್ಲಿ ನಾಲ್ಕು ಗುಂಪಾಗೋದು, ಐದು ಗುಂಪಾಗೋದು. ಈ ರೀತಿ ಆಗದಂತೆ ಒಂದು ಒಳ್ಳೆಯ ಕೆಲಸಕ್ಕೆ ಒಟ್ಟಾಗಿ ನಮ್ಮ ನಮ್ಮ ಜಾತಿಗಳನ್ನು ಮರೆಯೋದು, ಸಾಧ್ಯವಾದರೆ ನಮ್ಮ ಬಗ್ಗೆ ನಾವೇ ಹೆಮ್ಮೆಪಟ್ಟುಕೊಳ್ಳಬಹುದು. ಇದನ್ನು ನೆನಪಿಟ್ಟುಕೊಂಡರೆ ಅದರಿಂದ ಕನ್ನಡಕ್ಕೆ ತುಂಬಾ ಒಳ್ಳೆಯದಾಗಬಹುದೆಂದು ನನ್ನ ಭಾವನೆ.

*

(ದೆಯಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣದ ಲೇಖನ ರೂಪ. ನಂತರ ಇದು ಪುಸ್ತಕ ರೂಪದಲ್ಲಿಯೂ ಹೊರಬಂದಿದೆ೨೦೦೬ ಸಂ. ಪುರುಷೋತ್ತಮ ಬಿಳಿಮಲೆ. ಭಾಷಣದಿಂದ ಬರಹ ರೂಪ: ವೈ ಅವನೀಂದ್ರನಾಥ್ರಾವ್)