ಕೆಲವು ವರ್ಷಗಳ ಹಿಂದೆ ‘ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ’ ಎನ್ನುವ ಲೇಖನವನ್ನು ಬರೆದಿದ್ದೆ. ಈಚಗೆ ಈ ವಿಷಯದಲ್ಲಿ ಕೆಲವು ಲೇಖಕರು ಬರೆದಿರುವ ಲೇಖನವನ್ನು ಓದಿದ ಮೇಲೆ ನನ್ನ ವಿಚಾರಗಳನ್ನು ಇನ್ನಷ್ಟು ಸ್ಪಷ್ಟಪಡಿಸಬೇಕಾದ ಅಗತ್ಯವಿದೆ ಎನಿಸಿದೆ. ಯಾವುದೇ ಒಂದು ಜನಾಂಗದ ದ್ವೇಷವಾಗಿ ವ್ಯಕ್ತವಾಗುವ ವಿಚಾರ ಕ್ರಮ ಅಪಾಯಕಾರಿ. ಹಾಗೆ ನೋಡಿದರೆ ನಮ್ಮ ದೇಶದ ಒಕ್ಕಲಿಗರಿಗಾಗಲೀ ಲಿಂಗಾಯತರಿಗಾಗಲೀ ಬ್ರಾಹ್ಮಣರನ್ನು ದ್ವೇಷಿಸುವ ಅಧಿಕಾರವಿಲ್ಲ. ಅಮೆರಿಕಾದಲ್ಲಿ ಒಬ್ಬ ನೀಗ್ರೋಗೆ ಅನ್ನಿಸಬಹುದಾದ ಕೋಪದ ಅಧಿಕಾರ ಪಡೆದಿರುವ ಭಾರತೀಯ ಜನರೆಂದರೆ ಇಲ್ಲಿನ ಹೊಲೆಮಾದಿಗರು ಮಾತ್ರ. ನೌಕರಿಯಲ್ಲಿರುವ ಗೌಡರು, ಲಿಂಗಾಯತರು, ಬ್ರಾಹ್ಮಣರು ಪರಸ್ಪರ ದ್ವೇಷಾಸೂಯೆಗಳಿಂದ ಕುದಿಯಲು ಕಾರಣ: ಈ ಬಡತನದ ದೇಶದಲ್ಲಿರುವ ಕೆಲವೇ ಕೆಲವು ಉದ್ಯೋಗಾವಕಾಶಗಳಿಗಾಗಿ ವಿದ್ಯಾವಂತರು ಪೈಪೋಟಿ ನಡೆಸಬೇಕಾಗಿ ಬಂದಿರುವುದರಿಂದ. ಹಾಗೆಯೇ ಈಚೆಗೆ ಸಾಹಿತ್ಯದಲ್ಲಿ ಬ್ರಾಹ್ಮಣನೊಬ್ಬ ಅಖಿಲ ಭಾರತೀಯ ಖ್ಯಾತಿ ಪಡೆದನೆಂದು ಬ್ರಾಹ್ಮಣೇತರ ಅಸೂಯೆಯಿಂದ ಕುದಿಯುವುದಾಗಲೀ, ಬ್ರಾಹ್ಮಣೇತರ ಸಾಹಿತಿಯೊಬ್ಬ ಈ ದೇಶದಲ್ಲಿ ಉನ್ನತ ಹುದ್ದೆಯನ್ನು ಗಳಿಸಿದನೆಂದು ಬ್ರಾಹ್ಮಣರು ಒಳಗೊಳಗೇ ವಿಷಕಾರುವುದಾಗಲೀ ಒಟ್ಟಿನಲ್ಲಿ ಕ್ಷುಲ್ಲಕವಾದ ಸಂಗತಿ.

ಮುಖ್ಯವಾದ ಪ್ರಶ್ನೆ-ಸಾಹಿತ್ಯದ ದೃಷ್ಟಿಯಿಂದ-ಇದು: ಅಡಿಗರ ‘ಭೂತ’ ಪದ್ಯದ ಸರಕು ವೈದಿಕ ಧರ್ಮಕ್ಕೆ ಸೇರಿದ್ದು; ಕಂಬಾರರ ‘ಹೇಳತೀನ ಕೇಳ’ದ ಸರಕು ಒಂದು ಪ್ರದೇಶದ್ದು, ಶೂದ್ರ ಜೀವನದ್ದು. ಶೂದ್ರನಿಗೆ ಒಂದು ದೂರವಾದರೆ, ಬ್ರಾಹ್ಮಣನಿಗೆ ಇನ್ನೊಂದು ದೂರ. ‘ಭೂತ’ದ ಭೂಮಿಕೆಯನ್ನು ಕೂಡಲೇ ಅರ್ಥಮಾಡಿಕೊಳ್ಳಬಲ್ಲ ವೈದಿಕ ಧರ್ಮದ ಅಲ್ಪಸಂಖ್ಯಾತ ಜನ ಭಾರತದಲ್ಲಿ ಎಲ್ಲ ಕಡೆಯೂ ಇದ್ದಾರೆ. ಪ್ರಾದೇಶಿಕ ಅನುಭವದಿಂದ ದಟ್ಟವಾದ ಸಾಹಿತ್ಯ ಸುಲಭವಾಗಿ ಅಖಿಲ ಭಾರತೀಯವಾಗಲಾರದು; (ಶ್ರೇಷ್ಠತೆಯ ಕಲ್ಪನೆಯಿಂದ ಆಡಿದ ಮಾತಲ್ಲ ಇದು) ಇದನ್ನು ಭಾಷಾಂತರಿಸುವುದೂ ಕಷ್ಟ. ಎಲ್ಲ ವೈದಿಕರೂ ಅಡಿಗರಂತೆ ಬರೆಯಲಾರರು; ಎಲ್ಲ ಶೂದ್ರರೂ ಕಂಬಾರರಂತೆ ಬರೆತಲಾರರು. ಹಾಗೆಯೇ ಪ್ರಯತ್ನಪೂರ್ವಕವಾಗಿ ವೈದಿಕನೊಬ್ಬ ಕಂಬಾರರ ಸರಕನ್ನು ಬಳಸಿಕೊಳ್ಳುವುದೂ, ಶೂದ್ರನೊಬ್ಬ ಅಡಿಗರ ಸರಕನ್ನು ತನ್ನದಾಗಿಸಿಕೊಳ್ಳುವುದೂ ಅಸಂಭವವಲ್ಲ. ಒಂದೇ ಕಾಲದ ಕವಿಗಳಾದ ಕುವೆಂಪು ಹೆಚ್ಚು ಸಂಸ್ಕೃತಕ್ಕೂ, ಬೇಂದ್ರೆ ಹೆಚ್ಚು ಜಾನಪದಕ್ಕೂ ತಮ್ಮ ಪ್ರಜ್ಞೆಗಳನ್ನೊಡ್ಡಿ ಬರೆಯಲಿಲ್ಲವೇ? ಶೂದ್ರ ಬ್ರಾಹ್ಮಣನ ಹಾಗೆ ಬರೆಯುವ ಪ್ರಯತ್ನ ಮಾಡಬೇಕಿಲ್ಲ, ಮಾಡದಿರೆ ಅದು ಕೃತಕವಾಗುತ್ತದೆ ಎನ್ನುವುದಾದರೆ ಬ್ರಾಹ್ಮಣನೂ ‘ಶೂದ್ರ’ಕ್ಕೆ ಹತ್ತಿರವಾಗುವುದರ ಪ್ರಯತ್ನ ಕೃತಕವಾಗುತ್ತದೆ ಎನ್ನಬಹುದಲ್ಲ? ಹಾಗೆ ನೋಡಿದರೆ, ಈಗ ವಿದ್ಯಾವಂತರಾಗಿ ಬರೆಯುತ್ತಿರುವ ಶೂದ್ರರೆಲ್ಲ ತಮ್ಮ ವಿದ್ಯೆಯ ಮೂಲಕ ಸಂಸ್ಕೃತ ಇಂಗ್ಲಿಷ್ ಸಾಹಿತ್ಯಗಳ ಆದರ್ಶವನ್ನು ಮೈಗೂಡಿಸಿಕೊಂಡು ಹೆಚ್ಚು ಕಡಿಮೆ ತಮ್ಮ ಸ್ಮೃತಿ ಮತ್ತು ಬಾಲ್ಯಾನುಭವದಲ್ಲಿ ಅಲ್ಲದಿದ್ದರೂ ತಮ್ಮ ಸದ್ಯದ ಜೀವನದಲ್ಲಿ ಬ್ರಾಹ್ಮಣರಂತೆ ಬದುಕುವವರೆ ಅಲ್ಲವೆ? ಆದ್ದರಿಂದ ಬ್ರಾಹ್ಮಣ ಸಾಹಿತಿ ಶೂದ್ರಾನುಭವದ ಸರಕನ್ನು ಬಳಸುವುದಕ್ಕಿಂತ ಹೆಚ್ಚು ಸಹಜವಾದ ನೈಜವಾದ ಪ್ರಕ್ರಿಯೆ ಶೂದ್ರ ಬ್ರಾಹ್ಮಣನಂತಾಗುವುದೇ. ಯಾಕೆಂದರೆ ಬದಲಾಗುವ ಸಮಾಜದಲ್ಲಿ ಇದು ಅನಿವಾರ್ಯವೇನೋ?

*

(೧೯೭೨ ಮಾಡಿಕೊಂಡ ಒಂದು ಅಪ್ರಕಟಿತ ಟಿಪ್ಪಣಿಯಿಂದ