‘ಅಕ್ಷರ ಹೊಸಕಾವ್ಯ’ದ ಮುನ್ನುಡಿಯಾಗಿ ಲಂಕೇಶರು ಆಡಿರುವ ಮಾತುಗಳಲ್ಲಿ ಅಡಿಗೋತ್ತರ ಕವಿಗಳಲ್ಲಿ ಕೆಲವರನ್ನು ‘ಹಿಪ್ಪಿ’ಗಳೆದು ಕರೆದದ್ದು ನೋಡಿ ನನಗೆ ಆಶ್ಚರ್ಯವಾಗಿದೆ. ಅವರ ಗಮನದಲ್ಲಿರುವ ‘ಹಿಪ್ಪಿ’ಗಳು ಇವರು: ಲಕ್ಷ್ಮಣರಾವ್, ಸುಮತೀಂದ್ರ, ಕಂಬಾರ, ಚೆನ್ನಯ್ಯ ಮತ್ತು ತಿರುಮಲೇಶ್. ತಿರುಮಲೇಶ್‌ರ ಐರನಿ, ಕುಂಬಾರರ ರಭಸ, ಚೆನ್ನೆಯ್ಯನವರು ತಮ್ಮ ಕವನಗಳಲ್ಲಿ ಮನಸ್ಸಿನ ಕೆಲವು ಗೂಢ ಅವಸ್ಥೆಗಳನ್ನು ನಿರ್ಲಿಪ್ತವಾಗಿ ಅರಿಯಲು ಮಾಡುತ್ತಿರುವ ಪ್ರಯತ್ನ-ಇವು ಭರವಸೆ ಹುಟ್ಟಿಸುತ್ತವೆ. ಆದ್ದರಿಂದ ಇವರನ್ನು ಬಿಟ್ಟು ನನ್ನ ಮುಂದಿನ ಮಾತುಗಳನ್ನು ಆಡಬಯಸುತ್ತೇನೆ. ಉಳಿದ ಇಬ್ಬರಲ್ಲಿ ಒಬ್ಬರಾದ ಸಮತೀಂದ್ರರ ನಿರ್ಬಲತೆ ಮತ್ತು ಸುಕುಮಾರತನ ಅವರ ಕಾವ್ಯದ ಸಾರ್ಥಕ ವಸ್ತುಗಳಾಗುವುದಿಲ್ಲ, ಕಾರಣ, ಅವರ ಬರವಣಿಗೆಯೂ ದುರ್ಬಲ ಎನ್ನಿಸುವುದರಿಂದ. ಬುದ್ಧಿಶಕ್ತಿ ಕಮ್ಮಿಯಾಗಿರುವ ಕಾಲೇಜು ವಿದ್ಯಾರ್ಥಿಯೊಬ್ಬನು ಡೈರಿಯಲ್ಲಿ ಬರೆದುಕೊಂಡ ಆತ್ಮಮಂಥನ ಅವನ ಉದ್ಧಾರಕ್ಕೆ ಅವಶ್ಯವಿರಬಹುದು; ಆದರೆ ಎಲ್ಲರೂ ಅದನ್ನು ಓದಬೇಕಾಗಿದ್ದಿಲ್ಲ. ನಮ್ಮ ಕವಿಗಳಲ್ಲಿ ಅನೇಕರಿಗೆ ಈ ವಿವೇಕ ಇಲ್ಲದಿರುವುದರಿಂದಲೇ ನವೋದಯ ನವ್ಯ ಮಾರ್ಗಗಳೆರಡರಲ್ಲೂ ಈ ಕನ್ನಡ ಕಂದರವೇದನೆ ಆಕ್ರೋಶಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಸಿಕ್ಕಿಬಿಟ್ಟಿರುವುದು. ಸುಮತೀಂದ್ರರ ‘ಕಪ್ಪು ದೇವತೆ’ಯ ಕೆಲವು ಸಾರ್ಥಕ ಭಾಗಗಳನ್ನು ನಾನು ಮೆಚ್ಚಿಕೊಂಡಿದ್ದರೂ, ಅವರು ಈತನಕ ಸಾಹಿತ್ಯದಲ್ಲಿ ಮಹತ್ತರವಾದ ತಪಸ್ಸಿನಿಂದ ಸಾಧಿಸಿದ್ದು ಅಲ್ಪವೆಂದೇ ತಿಳಿದಿದ್ದೇನೆ. ಲೀಲಾರಾವ್ ಎನ್ನುವ ಇನ್ನೊಂದು ಹೆಣ್ಣು ಹೆಸರಿನಲ್ಲಿ ಇವರು ಬರೆದ ಕೆಲವು ಕವನಗಳು ಮನಃಶಾಸ್ತ್ರದ ದೃಷ್ಟಿಯಿಂದಲಾದರೂ ಕುತುಹಲಕಾರಿಯಾಗಿವೆ-ಅಷ್ಟೆ. ಲಕ್ಷ್ಮಣರಾವ್‌ರವರ ಬರವಣಿಗೆ ಜಾಣತನದಿಂದ ಕೂಡಿದೆ; ಆದರೆ ಇನ್ನೂ ಎಳಸು, ಕಾದು ನೋಡಬೇಕು ಎನ್ನಿಸುತ್ತದೆ. ಸಂಡೆ ಕಾವ್ಯದ ಜಾಣತನದಲ್ಲೇ ಇವರು ತೃಪ್ತರಾಗಿ ಉಳಿದರೆ ಸಾಲದು (ಈ ಸಂಡೆ ಕಾವ್ಯಕ್ಕಿಂತ ಇವುಗಳಿಗೆ ಚಿತ್ರ ಬರೆಯುವ ಮೂರ್ತಿಯವರ ಕಲೆಗಾರಿಕೆಯೇ ಆಕರ್ಷಕವಾಗಿರುತ್ತವೆ ಎಂದು ನನಗೆ ಅನ್ನಿಸಿದ್ದುಂಟು) ತನ್ನ ಸದ್ಯದ ಸ್ಥಿತಿಯನ್ನು ಕವಿ ವ್ಯಕ್ತಪಡಿಸಿಕೊಳ್ಳುವುದರ ಜೊತೆಗೇ ಅದನ್ನು ದಾಟಿ ಹೋಗಲು ಪ್ರಯತ್ನಿಸುತ್ತಾನೆ; ಇದರಿಂದ ಕಾವ್ಯ ತೀವ್ರವಾಗುತ್ತದೆ ಎಂಬುದನ್ನು ತಿಳಿಯದ ಹೊರತು ಲಕ್ಷ್ಮಣರಾವ್‌ರಂತಹ ಕವಿಗಳು ನಮ್ಮ ಮನಸ್ಸನ್ನು ದುಡಿಸಿಕೊಳ್ಳುವಂತಹ ಕವನಗಳನ್ನು ಬರೆಯಲಾರರು. ‘ಜಾಣತನ, ಪ್ರತಿಭಟನೆ ಸೃಷ್ಟ್ಯಾತ್ಮಕವಾದ ಪ್ರತಿಭೆಗಳಿಗೆ ನಾನು ಬೆಲೆ ಕೊಡುತ್ತೇನೆ’ ಎಂಬ ಲಂಕೇಶರು, ಜಾಣತನ ಕಿಡಿಗೇಡಿತನಗಳಿಂದ ಮಾತ್ರ ತೃಪ್ತರಾಗುವಂತೆ ನನಗೆ ಕಂಡಿದ್ದರಿಂದ ಲಕ್ಷ್ಮಣರಾವ್, ಸುಮತೀಂದ್ರರ ನೆವದಲ್ಲಿ ಹೀಗೆ ಮಾತು ಬೆಳೆಸಬೇಕಾಯಿತು.

ಒಟ್ಟಿನಲ್ಲಿ ನನಗೆ ಅನುಮಾನ; ಲಂಕೇಶದ ಆದರ್ಶ ಕವಿ ಎಲ್ಲಾ ಮರ್ಯಾದೆಗಳನ್ನು ಮೀರಿ ನಿಂತ ‘ಹಿಪ್ಪಿ’ಯಲ್ಲ; ಮಧ್ಯಮ ವರ್ಗದ ಪರಿಮಿತ ಸಂವೇದನೆಯ ‘ಡ್ಯಾಂಡಿ’- ಎಂದು. ಪೇಟೆಯ ವಿಲಾಸೀತನ, ಮುಜುಗರದಿಂದ ಹುಟ್ಟಿದ ಹಾಸ್ಯ, ಚಪಲದ ಮಟ್ಟದಲ್ಲಿರುವ ಕಾಮ, ಸ್ತ್ರೀ ಸಹವಾಸಕ್ಕೆ ಹಾತೊರೆಯುವ ಕಾಲೇಜು ವಿದ್ಯಾರ್ಥಿಗಳ ಪೋಲೀಜೋಕು-ಒಟ್ಟಿನಲ್ಲಿ ಮಧ್ಯಮ ವರ್ಗದ ಅಳ್ಳೆದೆಯ ಅಲ್ಪತನಗಳೇ ಅಡಿಗರ ನಂತರ ಬರೆಯುತ್ತಿರುವ ಕವಿಗಳ ಧಾಟಿಯಾಗಬೇಕೆಂದು ಲಂಕೇಶರು ಭಾವಿಸಿದಂತಿದೆ. ಅಡಿಗರಿಗಿಂತ ಪ್ರತ್ಯೇಕವಾದ ವ್ಯಕ್ತಿತ್ವ ಸೃಷ್ಟಿಸಿಕೊಳ್ಳಲೆಂದು ಈ ಎಲ್ಲಾ ಆಟ ಚೇಷ್ಟೆಗಳು ಕೆಲವು ಕವಿಗಳಿಗೆ ಅವರ್ಶಯವಿರಬಹುದು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಈ ಬಗೆಯ ಸ್ವಂತಿಕೆ ಹುಡುಕಾಟ ಅರ್ಥಪೂರ್ಣವಾಗದೇ ಹೋಗುವುದು. ಅಡಿಗರ ಕಾವ್ಯದ ಬೇರುಗಳು, ಬ್ರಾಹ್ಮಣ ಧರ್ಮದಲ್ಲಿ, ಹಳಗನ್ನಡ ಕಾವ್ಯದಲ್ಲಿ, ನಮ್ಮ ಸಮಕಾಲೀನ ಜೀವನದಲ್ಲಿ, ತನ್ನ ಸ್ವಂತದ ತಳಮಳದಲ್ಲಿ ಇವೆ. ಉಳಿದವರಿಗೆ ಈ ಹಿನ್ನೆಲೆ ಇಲ್ಲ. ಇರದಿದ್ದರೂ ಸಹಾ ಮಧ್ಯಮ ವರ್ಗದ ಅನುಭವಹೀನತೆ ಅಲ್ಪತನ, ಸಪ್ಪೆತನಗಳೇ ಕಾವ್ಯದ ವಸ್ತುವಾಗಿ ಉತ್ತಮ ಕಾವ್ಯ ಹುಟ್ಟಿಬರುವುದು ಸಾಧ್ಯ. ಇದಕ್ಕೆ ಅವಶ್ಯವಾದ ಎಚ್ಚರ ಕೆಲವು ನವ್ಯ ಕವಿಗಳಲ್ಲಾದರೂ ಇದೆ ಎಂಬುದನ್ನು ಈ ಚರ್ಚೆಯಲ್ಲಿ ಮರೆಯಕೂಡದು. ಆದರೆ ಲಂಕೇಶರು ಮೆಚ್ಚುವ ಕಿಡಿಗೇಡಿ ಡ್ಯಾಂಡಿಗೆ ತಮ್ಮ ಮಧ್ಯಮ ವರ್ಗತನ, ಅನುಭವದ ಅಲ್ಪತೆಗಳು ಸ್ವಸಂತೃಪ್ತಿಯ ವಿಷಯಗಳು. ಹೀಗೆ ನೋವು, ತೀವ್ರತೆ, ಪರವಶತೆ, ಸಂಕಟಗಳಿಂದ ಬಾಧಿತನಾಗದೇ ಇರುವುದೇ ಪರಮ ಆದರ್ಶವಾಗಿಬಿಟ್ಟರೆ ಕಾವ್ಯ ಮುರುಟಿಕೊಳ್ಳುತ್ತದೆ, ಅಥವಾ ‘ಹಲ್ಕಾ’ (ಹಗುರ ಎನ್ನುವ ಅರ್ಥದಲ್ಲೂ) ಆಗುತ್ತದೆ. ಉತ್ತಮ ಕಾವ್ಯದಲ್ಲಿ ತನಗೆ ಹೊರತಾದ್ದನ್ನು, ಮೀರಿದ್ದನ್ನು ಜೀವನ ದ್ರವ್ಯವಾಗಿ ಮಾರ್ಪಡಿಸಿಕೊಳ್ಳುವ ಕವಿಯ ಹೋರಾಟವನ್ನೂ ಕಾಣುತ್ತೇವೆ. ಆದರೆ ಎಲ್ಲಾ ಬಗೆಯ (ಈಗಿನ ಆಗಿನ) ರೊಮ್ಯಾಂಟಿಕ್ ಕಾವ್ಯದ ದೋಷವೆಂದರೆ ಲೋಲುಪತೆ. ಕೃತಕ ಗಾಂಭೀರ್ಯದಲ್ಲಿ ಸುಳ್ಳನ್ನು, ಆಧ್ಯಾತ್ಮವನ್ನು ಮಾತಾಡಿ ತಮ್ಮ ಮಧ್ಯಮವರ್ಗದ ನೀರಸತೆಯನ್ನು ಮರೆಯುವ ಕವಿಗಳು ಮತ್ತು ತಮ್ಮ ಮಧ್ಯಮವರ್ಗತನವನ್ನು ಮೆರೆಸುವ ಲಂಕೇಶರ ಡ್ಯಾಂಡಿಗಳು- ಇರುವ ನಡುವಿನ ವೈರಕ್ಕೆ ಅರ್ಥವಿಲ್ಲ. ಸೋಗಿನ ಆಧ್ಯಾತ್ಮದ ಟ್ವೀಡಲ್ ಡಮ್ ಒಬ್ಬನಾದರೆ, ಸೊಗಸಿನ ರಸಿಕತೆಯ ಟ್ವೀಡಲ್ ಡೀ ಇನ್ನೊಬ್ಬ. ಸುಳ್ಳು ಪ್ರೀತಿ, ಶೃಂಗಾರ, ವೈಭವಗಳನ್ನೊಡ್ಡಿ ನಿತ್ಯ ಜೀವನದ ಒತ್ತಡವನ್ನೂ ದಾರಿದ್ರ್ಯವನ್ನೂ ಸಂಕಟಗಳನ್ನೂ ಮರೆಮಾಡುವ ಹಿಂದೀ ಚಿತ್ರಗಳಂತೆ ಇಂಥವರ ಕಾವ್ಯ ಕೂಡಾ ಅಶ್ಲೀಲ. ಆದ್ದರಿಂದಲೇ ಕಾವ್ಯದಲ್ಲಿ ಮುಕ್ತ ಸಂವೇದನೆ ಇರಬೇಕೆಂದು ನಾನು ಚಿತ್ತಾಲರ ಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು. ಆದರೆ ಲಂಕೇಶರಿಗೆ ಮುಕ್ತ ಸಂವೇದನೆ ಸೆಂಟಿಮೇಟ್ಯಾಲಿಟಿಯಾಗಿ ಕಂಡಿದೆ. ಮುಕತ ಸಂವೇದನೆ ಎಂದರೆ ನಿಸ್ಸಂಕೋಚವಾಗಿ ಜೀವನದ ಅನುಭವವನ್ನು ಎದುರಿಸುವ, ಸುಳ್ಳು ಗಾಂಭೀರ್ಯದಲ್ಲಾಗಲೀ ಅಥವಾ ಇದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳುವ ಮುಜುಗರದ ಹಾಸ್ಯದ್ಲಲಾಗಲೀ ತನ್ನ ಸಂಶೋಧನೆಯಿಂದ ವಂಚಿತವಾಗದ ಧೋರಣೆ. ಕೃತಕ ಗಾಂಭೀರ್ಯಕ್ಕೆ ಅಲ್ಪತನವೊಂದೇ ಮದ್ದೆಂದು ತಿಳಿದಿರುವ ಲಂಕೇಶರು ನನ್ನ ಮಾತನ್ನು ಅಪಾಯಕಾರಿ ಎಂದು ತಿಳಿದದ್ದು ಆಶ್ಚರ್ಯವಲ್ಲ. ಭಾರತದ ಸ್ವಸಂತೃಪ್ತ ಮಧ್ಯಮವರ್ಗದ ವೈಚಾರಿಕ ಮಿತಿಯನ್ನು ಇವರ ಧೋರಣೆ ಎತ್ತಿ ತೋರಿಸುತ್ತದೆ ಅಷ್ಟೇ. ಹಿಪ್ಪಿ ಏನೇ ಇರಲಿ-ಪುಣ್ಯ ಸಂಪಾದನೆಯಲ್ಲಾಗಲೀ ಡ್ಯಾಂಡಿಯ ಕಿಡಿಗೇಡಿತನದ ರಸಿಕ ಚೇಷ್ಟೆಗಳಲ್ಲೇ ತೊಡಗಿರುವ ಲಂಕೇಶರ ಮಧ್ಯಮವರ್ಗದ ಪಳಗಿದ ಪ್ರಾಣಿಯಂತೂ ಖಂಡಿತಾ ಅಲ್ಲ.

ಯಾವುದು ಜೀವಂತ ಎಂದು ನಿರ್ಣಯಿಸುವಲ್ಲಿ ಪುಟಗಳನ್ನು ಹಂಚುವಲ್ಲಿ ಲಂಕೇಶರ ವಿಮರ್ಶಾ ತತ್ವಗಳು ಕೆಲಸ ಮಾಡಿದೆಯಾದ್ದರಿಂದ ಮೇಲಿನ ಈ ಮಾತುಗಳನ್ನು ಬರೆಯಬೇಕಾಯಿತು. ಗೋಕಾಕರನ್ನು ಸಂಕಲನಕ್ಕೆ ಸೇರಿಸದ ಇವರ ಧೋರಣೆ ವಿಮರ್ಶೆಗೆ ಅವಶ್ಯವಾದ ನಿಷ್ಠರತನದ್ದೋ ಅಥವಾ ಚೇಷ್ಟೆ ವ್ಯಂಗ್ಯ ಕಂಡಕೂಡಲೇ ದ್ರವಿಸಿಬಿಡುವ ಇವರ ಸಂವೇದನೆ ಅತಿ ಔದಾರ್ಯದ್ದೋ ಅಥವಾ ನವ್ಯ ಸಾಹಿತ್ಯಕ್ಕೂ ರಾಜಕಾರಣ ಪ್ರವೇಶಿಸಿ ಇದೂ ಪ್ರಗತಿಶೀಲ ಚಳುವಳಿಯಂತಾಗಿ ಬಿಡುತ್ತದೆಯೋ ಎಂದು ಲಂಕೇಶರ ಅಕ್ಷರ ಹೊಸ ಕಾವ್ಯ ಸಂಕಲವನ್ನು ತಿರುವಿ ಹಾಕುತ್ತಿದ್ದಂತೆ ಅನುಮಾನವಾಗುತ್ತದೆ.

ನಿಸಾರ್, ಪಾಟೀಲ್, ಕಂಬಾರ, ತಿರುಮಲೇಶ್, ಲಕ್ಷ್ಮೀನಾರಾಯಣ ಭಟ್ಟ, ಚೆನ್ನಯ್ಯ ಇತ್ಯಾದಿ ಯುವ ಲೇಖಕರ ತಮ್ಮ ವ್ಯಕ್ತಿತ್ವಕ್ಕೆ ಗಟ್ಟಿಯಾದದ್ದು ಯಾವುದು ಎಂಬುದನ್ನು ಹುಡುಕಿಕೊಳ್ಳುತ್ತಿದ್ದಾರೆ. ಇವರಿಗಿಂತ ಕಿರಿಯರಾದ ಆಲನಹಳ್ಳಿ ಕೃಷ್ಣ, ಚೊಕ್ಕಾಡಿ, ರಾಮಚಂದ್ರ ದೇವ, ರಾಮದಾಸ್, ದೇವನೂರ ಮಹಾದೇವ ಇತ್ಯಾದಿ ಸತ್ವಶಾಲಿಗಳಾದ ಕವಿಗಳೂ ಇದ್ದಾರೆ. ಇವರನ್ನೆಲ್ಲಾ ಓದುತ್ತಿರುವಂತೆ ಓದುತ್ತಿರುವಂತೆ ಈಗಿನ ಕವಿಗಳು ಎಷ್ಟು ದಕ್ಷತನದಿಂದ ಬರೆಯಬಲ್ಲರು ಎನ್ನವುದರ ಜೊತೆಗೆ, ಇವರು ತಮ್ಮ ವ್ಯಕ್ತಿತ್ವಕ್ಕ ಸಹಜವಾದ ಅವಶ್ಯವಾದ ಜೀವನದ್ರವ್ಯಕ್ಕೆ ಈತನಕ ಅರ್ಥಪೂರ್ಣವಾದ ರೂಪಕೊಡಲಾರದೆ ಹೋಗಿದ್ದಾರೆಂದೂ ಅನಿಸುತ್ತದೆ. ಈ ಕವಿಗಳಲ್ಲೆಲ್ಲಾ ನಾನು ಮೆಚ್ಚಿಕೊಂಡಿರುವ ಗುಣವೆಂದರೆ-ಅವರಿಗೆ ತಮ್ಮ ಬಗೆಗೆ ಇರುವ ಅತೃಪ್ತಿ. ಈ ಕವಿಗಳ ನಡುವೆ ಲಕ್ಷ್ಮಣರಾವ್ ಒಬ್ಬರನ್ನು ಮಾತ್ರ ಬಗೆಗೆ ಇರುವ ಅತೃಪ್ತಿ. ಈ ಕವಿಗಳ ನಡುವೆ ಲಕ್ಷ್ಮಣರಾವ್ ಒಬ್ಬರನ್ನು ಮಾತ್ರ ಹೊಗಳಲು ಲಂಕೇಶರ ಪರಿಮಿತ ಸಂವೇದನೆಗೆ ಉದಾಹರಣೆಯಾಗಿದೆ. ಲಂಕೇಶರಿಗೆ ಸಂಕೀರ್ಣವಾದದ್ದು, ತೀವ್ರವಾದದ್ದು ಬೇಡ; ಸಲೀಸಾದ್ದೇ ಬೇಕು. ಅಲ್ಲದೆ ತನ್ನ ಮಾರ್ಗದ್ಲಲಿ ಬರೆಯುತ್ತಿರುವವರನ್ನು ಹುರಿದುಂಬಿಸುವುದು ಬೇಕು. ಆದರೆ ಲಂಕೇಶರ ಕಾವ್ಯ ಶೈಲಿಯ ಜರ್ನಲಿಸ್ಟ್ ಸದ್ಯತನ, ಗತ್ತು, ತತ್ಪರತೆಯನ್ನಾಗಲೀ, ರಾಮಾನುಜನ್ನರ ಸೂಕ್ಷ್ಮಕಲೆಗಾರಿಕೆಯನ್ನಾಗಲೀ ಹೊಂದಿರದ ಲಕ್ಷ್ಮಣರಾವ್‌ ತನ್ನತನದ ಶೋಧನೆಯಲ್ಲಿ ಇನ್ನೂ ಬಹಳ ಕಷ್ಟದ ದಾರಿಯನ್ನು ತುಳಿಯಬೇಕಾದ್ದಿದೆ ಎಂಬುದನ್ನು ಮರೆಯಕೂಡದು.

ಅಡಿಗರ ನಂತರ ಬರೆಯುತ್ತಿರುವ  ಈ ರಲ್ಲರೂ (ಇವರಲ್ಲೆಲ್ಲಾ ಹೆಚ್ಚು ಪ್ರತಿಭಾಶಾಲಿಯಾದ ಕಂಬಾರರೂ ಸಹಾ) ಉತ್ತಮ ಬಿಡಿ ಕವನಗಳನ್ನು ಆತ್ರ ಈ ತನಕ ಬರೆದಿದ್ದಾರೆ ಎಂದು ಎನ್ನಿಸುತ್ತದೆ. ಒಂದು ವಿಶಿಷ್ಟ ಸಂವೇದನೆಯಾಗಿ ಅರ್ಥಪೂರ್ಣ ವ್ಯಕ್ತಿತ್ವವಾಗಿ ಇವರಲ್ಲಿ ಯಾರು ಯಾರು ಬೆಳೆಯಬಲ್ಲರು, ಯಾರು ತಮ್ಮ ಕಲೆಯಲ್ಲೇ ಲೋಲುಪರಾಗೇ ನಿಂತುಬಿಟ್ಟಾರು, ಯಾರು ಪ್ಯಾಷನ್ನಿನಲ್ಲಿರುವ ತತ್ವಗಳ ಬೆನ್ನು ಹತ್ತಿ ಜಾರಿಕೊಂಡಾರು, ಯಾರು?

‘ಗಹ್ವರದ ಒಳಗತ್ತಲಲ್ಲಿ ಸುತ್ತಲೂ ತಡಕಿ ತಡೆದು ನಡೆಯುವ,
ನಡೆದು ಮುಗ್ಗರಿಸಿ ಬಿದ್ದದು ಹರೆವ, ಹರಿಯುವ ಜಾಡು
ಹಿಡಿವ ಗುರುತಿಸುವ ಬೇರೆ ಬಗೆವ ಕಳೆದದ್ದನ್ನು ಪಡೆವ
ಪಡೆದದ್ದಕ್ಕೆ ಪಡಿಹತ್ತು ಹಡೆವ ಕವನದ ಕರಡು
ಸಿದ್ಧಪಡಿಸುವ……..’ (ಅಡಿಗರ ವರ್ಧಮಾನ)

ದಿವ್ಯವನ್ನು ಎದುರಿಸಲಾಗದೇ ಗೆಳೆರ ಪರಸ್ಪರ ಸಹಕಾರಿ ಸಂಸ್ಥೆಗಳಲ್ಲಿ ಮೈಮರೆತು ಕೂಡುತ್ತಾರೆ. ಇವೇ ಇವತ್ತು ವಿಮರ್ಶೆ ಎಚ್ಚರದಿಂದ ಚರ್ಚಿಸಬಹುದಾದ ವಿಷಯಗಳಾಗಿವೆ. ಆದರೆ ಲಂಕೇಶರು ಎತ್ತಿ ಹಿಡಿಯುವ ಆಂಟೀಹೀರೋ ಸೋಗಿನ ಡ್ಯಾಂಡೀ ಮೌಲ್ಯಗಳು ಈ ಕವಿಗಳಲ್ಲಿ ಹಗುರವಾದದ್ದನ್ನು ಮಾತ್ರ ಮೆಚ್ಚಿಸುವಂಥವು. ಅವರು ನಡೆಯಬೇಕಾದ ಸ್ವಂತಿಕೆಯ ಹಾದಿಯನ್ನು ಸಲೀಸುಗೊಳಿಸುವಂಥವು. ತೆರದ ಬಾಗಿಲು, ಫೋಟೋಗ್ರಾಫರ್, ಗೋಪಿ ಮತ್ತು ಗಾಂಡಲೀನದಂತಹ, ಜಾಣ, ಸಾಮಾನ್ಯ ಕವನಗಳಲ್ಲಿ ಕನ್ನಡ ಕಾವ್ಯದ ಭವಿಷ್ಯವನ್ನು ಕಾಡುವ ಲಂಕೇಶರು ಸಾಹಿತ್ಯದಿಂದ ಅತ್ಯಂತ ಅಲ್ಪವಾದುದ್ದನ್ನು ಅಪೇಕ್ಷಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ‘ಕೊರವಂಜಿ’ ಜೀವಂತವಾಗಿದ್ದು ಅದರಲ್ಲಿ  ಕವನಗಳು ಬಂದಿದ್ದರೆ ನಾನೂ ಅವುಗಳನ್ನು ಓದಿ ಸಂತೋಷಪಡುತ್ತಿದ್ದೆ. ಮನರಂಜನೆ ಯಾರಿಗೆ ಬೇಡ?

ನಮ್ಮ ಸಾಹಿತ್ಯ ಲೋಕದ ದೊಡ್ಡ ಅಫಾತ ‘ಇನ್‌ ಬ್ರೀಡಿಂಗ್’. ಸಾಹಿತಿಗಳು ಇನ್ನಿತರ ಸಾಹಿತಿಗಳಾಗಿ ಬರೆಯುವುದೇ ಹೆಚ್ಚು. ಅಡಿಗರ ‘ಭೂತ’, ‘ರಾಮನವಮಿಯ ದಿವಸ’, ‘ಭೂಮಿ ಗೀತ’ ಇತ್ಯಾದಿ ಕವನಗಳನ್ನೂ, ಕಾರಂತರ ಕಾದಂಬರಿಗಳನ್ನೂ ಗ್ರಾಮಾಯಣವನ್ನೂ, ಕಾರ್ನಾಡ್, ಜಿ.ಬಿ. ಜೋಷಿಯವರ ನಾಟಕಗಳನ್ನು ಸಾಹಿತಿಗಳಲ್ಲದವರ ಜೊತೆಗೂ ಚರ್ಚಿಸಬೇಕು ಎನ್ನಿಸುತ್ತದೆ. ಯಾಕೆಂದರೆ ಅವು ನಾರ್ಸಿಸ್ಸಿನಂತೆ ಸ್ವಮಗ್ನವಾದ ಕೃತಿಗಳಲ್ಲ; ನಮ್ಮ ಸುಖ ದುಃಖಕ್ಕೆ ಕಾರಣವಾದ ಪ್ರಪಂಚದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸಬಲ್ಲ  ಕೃತಿಗಳು. ಈಸ್ತೇಟರ  ಕಸರತ್ತು ಸ್ವತಃ ಸಾಹಿತಿಗಳಾದವರು ಕಸುಬುದಾರಿಕೆಯ ಕುತೂಹಲವನ್ನು ಮಾತ್ರ ಕೆರಳಿಸೀತು. ಚಿತ್ತಾಲರನ್ನು ಓದುವಾಗ ಅವರ ಕಲೆಗಾರಿಕೆ ಸೀಮಿತವಾದದ್ದು ಎಂದು ನನಗೆ ಅನ್ನಿಸಿದರೂ ಜೀವನ ತತ್ಪರವಾದ ಅವರ ದೃಷ್ಟಿ ನಮ್ಮ ನವ್ಯರಿಗೆ ಚಿಕಿತ್ಸೆಯಾದೀತು ಎಂದೂ, ನನಗೆ ಮೇಲಿನ ಕಾರಣಗಳಿಂದ ನನಗೆ ಅನ್ನಿಸಿದ್ದು. ಗುಂಪುಗಾರಿಕೆ ತರುವ ಸುಖವನ್ನು ತಿರಸ್ಕರಿಸಿ ಒಂಟಿಯಾಗಿ ನಿಲ್ಲದ ಲೇಖಕ ಎಂದೂ ತನ್ನತನವನ್ನು ಕಂಡುಕೊಳ್ಳಲಾರ; ಸಾರ್ಥಕ ಕೃತಿಗಳನ್ನು ರಚಿಸಲಾರ. ಆದ್ದರಿಂದ ಹೊಸ ಸಾಹಿತ್ಯಕ್ಕೆ ಲಂಕೇಶರು ವಹಿಸುತ್ತಿರುವ ವಕೀಲಿಯ ರೀತಿ (ಹಿಂದಿನ ಅನಕೃ, ನಿರಂಜನರನ್ನು ನೆನಪಿಗೆ ತರುವ ರೀತಿ) ಅಪಾಯಕಾರಿ ಎಂದು ನಾನು ತಿಳಿದಿದ್ದೇನೆ.

*

(ಲಂಕೇಶರು ಸಂಫಾದಿಸಿ ಅಕ್ಷರ ಪ್ರಕಾಶನ ಹೊರತಂದಅಕ್ಷರ ಹೊಸ ಕಾವ್ಯಕೃತಿಯಲ್ಲಿ ಸಂಪಾದಕರ ಮಾತುಗಳಿಗೆ ಸ್ಪಂದಿಸಿ ಬರೆದಿದ್ದು ಲೇಖನ. ಸುಮಾರು ೧೯೭೩ ರಲ್ಲಿ ಕನ್ನಡ ಪ್ರಭದಲ್ಲಿ ಪ್ರಕಟವಾದ ಲೇಖನದ ಸುತ್ತ ದೊಡ್ಡ ಚರ್ಚೆಯೇ ನಡೆಯಿತು)