ನಾನು ಕೆಲವರ್ಷಗಳ ಹಿಂದೆ ಸಿರಿಯಾದಲ್ಲಿ ಆ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಅರಬ್ ಲೇಖಕರ ಜತೆ ಮಾತನಾಡುತ್ತಾ ಕೂತಿದ್ದೆ. ಆಗ ಅನೇಕ ಅರಬ್ ಲೇಖಕರು ನನ್ನನ್ನು ಈ ಪ್ರಶ್ನೆ ಕೇಳಿದರುಃ ‘ನಿಮ್ಮಲ್ಲಿ (ಭಾರತದಲ್ಲಿ) ಇಪ್ಪತ್ತೆರಡು ಭಾಷೆಗಳಿವೆ; ಆದರೆ ಒಂದು ರಾಷ್ಟ್ರವಾಗಿದ್ದೀರಿ. ಅದೇ ನಮ್ಮಲ್ಲಿ (ಅರಬ್ ದೇಶಗಳಲ್ಲಿ) ಇರುವುದು ಒಂದೇ ಭಾಷೆ ಮತ್ತು ಒಂದೇ ಧರ್ಮ; ವಿಚಿತ್ರವೆಂದರೆ ನಾವು ಛಪ್ಪನ್ನಾರು ರಾಷ್ಟ್ರಗಳಾಗಿಬಿಟ್ಟಿದ್ದೀವಿ. ಇದನ್ನು ನೀವು ಹೇಗೆ ವಿವರಿಸುತ್ತೀರಿ?

ಇಲ್ಲಿಂದ ಮುಂದಕ್ಕೆ ನಾನು ಹೇಳುತ್ತಾ ಹೋಗುವುದೆಲ್ಲ ಒಗಟೊಗಟಾಗಿರುವ ಭಾರತವೆಂಬ ರಾಷ್ಟ್ರದ ಬಗ್ಗೆ ಒಂದು ಊಹೆಯ/ಅಂದಾಜಿನ ವಿವರಣೆ ಆಗಬಹುದು. ಇದಕ್ಕಾಗಿ ನಾನು ಇಬ್ಬರ ಹೆಸರುಗಳನ್ನು ಇಲ್ಲಿ ಎತ್ತಿಕೊಳ್ಳುತ್ತೇನೆ. ಒಬ್ಬರು, ಮಹಾತ್ಮ ಗಾಂಧೀಜಿ. ಇನ್ನೊಬ್ಬರು, ರವೀಂದ್ರನಾಥ ಟ್ಯಾಗೋರ್. ಗಾಂಧೀಜಿ ಮತ್ತು ಟ್ಯಾಗೋರ್ ನಮಗೆ ಐರೋಪ್ಯ ಮಾದರಿಯ ‘ರಾಷ್ಟ್ರದ’ ಕಲ್ಪನೆಗಿಂತ ಭಿನ್ನವಾದ ‘ರಾಷ್ಟ್ರ’ ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟರು. ಏಕೆಂದರೆ ಐರೋಪ್ಯ ಮಾದರಿಯಲ್ಲಿ ಒಂದು ರಾಷ್ಟ್ರವೆಂದರೆ ‘ಒಂದು ಭಾಷೆ, ಒಂದು ಜನಾಂಗ ಮತ್ತು ಒಂದು ಧರ್ಮ’ ಎಂಬ ಸೂತ್ರವಿತ್ತು. ಇದಾದ ಮೇಲೂ ನಮ್ಮಲ್ಲಿ ಕೂಡ ಐರೋಪು ಮಾದರಿಯ ‘ರಾಷ್ಟ್ರ’ದ ಕಲ್ಪನೆಯನ್ನೇ ಕಂಡುಕೊಳ್ಳಲು ಪ್ರಯತ್ನಗಳು ನಡೆದಿವೆ. ಆದರೂ ನಮ್ಮ ರಾಷ್ಟ್ರದ ಕಲ್ಪನೆ ಭಿನ್ನವಾಗಿದೆ ಎಂಬುದಕ್ಕೆ ನಮ್ಮ ಭಾರತೀಯ ಸಾಹಿತ್ಯದಲ್ಲಿ ಆಧಾರಗಳಿವೆ. ಭಾರತವೆಂದರೆ ಅದು ಕೇವಲ ಒಂದೇ ಒಂದು ಭಾರತವಲ್ಲ; ಇಲ್ಲಿ ಅನೇಕ ಭಾರತಗಳಿವೆ. ನಮ್ಮ ಇಪ್ಪತ್ತೆರಡು ಭಾಷೆಗಳಿಲ್ಲಿರುವ ಸಾಹಿತ್ಯವನ್ನು ನೋಡಿದರೆ ‘ಅನೇಕ ಭಾರತಗಳು’ ಇರುವುದು ಗೊತ್ತಾಗುತ್ತದೆ. ಅಂದಹಾಗೆ ಭಾರತದ ಬಗ್ಗೆ ಒಬ್ಬ ಏನು ಹೇಳುತ್ತಾನೋ ಅದಕ್ಕೆ ತದ್ವಿರುದ್ಧವಾದುದನ್ನು ಹೇಳಲೂ ಸಾಧ್ಯವಿದೆ.

೧೯೬೧ರ ಜನಗಣತಿ ಪ್ರಕಾರ ನಮ್ಮ ದೇಶದಲ್ಲಿ ೧೬೫೨ ಮಾತೃಭಾಷೆಗಳಿವೆ. ಇವನ್ನೆಲ್ಲ ೧೦೫ ಭಾಷೆಗಳ ಅಡಿ ವರ್ಗೀಕರಿಸಲಾಗಿದೆ. ಇವಿಷ್ಟೂ ಭಾಷೆಗಳು ನಾಲ್ಕು ಭಾಷಿಕ ಕುಟುಂಬಗಳಿವೆ ಸೇರಿವೆ. ಈ ಭಾಷಿಕ ಕುಟುಂಬಗಳು ಯಾವುವೆಂದರೆ ಇಂಡೋ-ಆರ್ಯನ್, ದ್ರಾವಿಡ, ಟಿಬೆಟಿಯನ್ ಮತ್ತು ಆಸ್ಟ್ರೋ-ಏಷ್ಯಾಟಿಕ್. ಆದರೆ ಈ ೧೦೫ ಭಾಷೆಗಳಲ್ಲಿ ೯೦ ಭಾಷೆಗಳನ್ನು ೬೫ ಚಿಕ್ಕಪುಟ್ಟ ಬುಡಕಟ್ಟುಗಳು ಆಡುತ್ತವೆ. ಇವರ ಸಂಖ್ಯೆ ನಮ್ಮ ಒಟ್ಟು ಜನಸಂಖ್ಯೆಯ ಶೇಕಡ ೫ಕ್ಕಿಂತಲೂ ಕಮ್ಮಿ. ಬರೆಯಬಹುದಾದ, ಓದಬಹುದಾದ ಮತ್ತು ಮಾತನಾಡಬಹುದಾದ ಉಳಿದ ೧೫ ಭಾಷೆಗಳನ್ನು ಭಾರತದ ಶೇಕಡ ೯೫ ಜನ ಬಳಸುತ್ತಿದ್ದಾರೆ. ಇದರ ಆಧಾರದ ಮೇಲೆ ನೋಡಿದರೆ ನಮ್ಮ ಇಡೀ ಭಾರತ ಒಂದು ಬ್ಯಾಬೆಲ್ ಗೋಪುರದಂತೆ ಕಂಡೀತು. ಇದೇನೇ ಇರಲಿ, ನಮ್ಮಲ್ಲಿ ೨-೩ ಭಾಷೆಗಳು ಒಬ್ಬ ವ್ಯಕ್ತಿಗೆ ಗೊತ್ತಿದ್ದರೆ, ಅಂಥವರು ಭಾರತದ ಯಾವ ಮೂಲೆಗಾದರೂ ಹೋಗಬಹುದು.

ನಾವು ಪ್ರತಿದಿನ ಮಾತನಾಡುವಾಗ ಕೂಡ ನಮ್ಮಲ್ಲಿ ಹೆಚ್ಚಿನವರು ಕನಿಷ್ಠ ಮೂರು ಭಾಷೆಗಳನ್ನು ಬಳಸುತ್ತಾರೆ. ಒಂದು ಮನೆಯಲ್ಲಿ, ಇನ್ನೊಂದು ಹೊರಗಡೆ ಹಾಗೂ ಮತ್ತೊಂದು ನಮ್ಮ ಕಛೇರಿಗಳಲ್ಲಿ. ಒಟ್ಟಿನಲ್ಲಿ ನಾವೆಲ್ಲ ಸದಾ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ನೆಗೆಯುತ್ತಿರುತ್ತೇವೆ. ನಿಮ್ಮ ಕಛೇರಿಯಲ್ಲಿ ಏನಾಯ್ತೆಂಬುದನ್ನು ನಿಮ್ಮ ಅಜ್ಜಿಗೆ ವಿವರಿಸುವಾಗ ನೀವು ಓತಪ್ರೋತವಾಗಿ ಅದನ್ನು ಮನೆಯ ಭಾಷೆಯಲ್ಲಿ ಅನುವಾದಿಸುತ್ತಿರುತ್ತೀರಿ. ಹಾಗೆಯೇ ಇದಕ್ಕೆ ತದ್ವಿರುದ್ಧವಾದುದೂ ಸಾಧ್ಯ. ಭಾಷೆಗಳ ಬಹುಮುಖೀಯತೆ ಮತ್ತು ಇಂಥ ಅನುವಾದಗಳೆರಡೂ ಅವಿಭಾಜ್ಯ ಅಂಗಗಳು.

ನನಗೆ ಅತ್ಯಂತ ಅಚ್ಚುಮೆಚ್ಚಿನದಾದ ಇನ್ನೊಂದು ನನ್ನ ವಾದವೂ ಇದೆ. ಅದೇನೆಂದರೆ ವ್ಯಕ್ತಿಯೊಬ್ಬ ಹೆಚ್ಚುಹೆಚ್ಚು ಅಕ್ಷರಸ್ಥನಾದಷ್ಟೂ ಅತ್ಯಂತ ಕಡಿಮೆ ಭಾಷೆಗಳಷ್ಟೆ ಆತನಿಗೆ ಗೊತ್ತಿರುತ್ತವೆ. ಇಂಗ್ಲಿಷ್ ಮೂಲಕ ಅಕ್ಷರ ಕಲಿತವರು ಸದಾ ಇಂಗ್ಲಿಷ್ ಒಂದನ್ನೇ ಬಳಸುತ್ತಾರೆ. ಆದರೆ ನಾನು ಹುಟ್ಟಿಬಂದ ನನ್ನ ಸಣ್ಣ ಊರಿನಲ್ಲಿ ಅಷ್ಟೇನೂ ವಿದ್ಯಾವಂತನಲ್ಲದ ಬಸ್ ಸ್ಟ್ಯಾಂಡ್ ನ ಹಮಾಲಿಯೊಬ್ಬ ತಮಿಳು, ತೆಲಗು, ಮಲಯಾಳಂ, ಸ್ವಲ್ಪ ಸ್ವಲ್ಪ ಹಿಂದಿ, ಒಂದಿಷ್ಟು ಇಂಗ್ಲಿಷನ್ನೆಲ್ಲಾ ಮಾತನಾಡುತ್ತಾನೆ. ನಿಜವಾಗಿಯೂ ಭಾರತವನ್ನು ಒಗ್ಗೂಡಿಸಿರುವುದು ಇಂಥ ಜನರೇ ವಿನಾ ಯಜಮಾನಿಕೆ ನಡೆಸುವ ಒಂದೇ ಒಂದು ಭಾಷೆಯನ್ನು ಕಲಿತವರಲ್ಲ.

ಭಾರತದ ಜನ ಯಾವಾಗಲೂ ಹೀಗೆ ಭಾಷೆಗಳ ಕೂಟದಲ್ಲೇ ಬದುಕಿಕೊಂಡು ಬಂದಿದ್ದಾರೆ. ಸಂಸ್ಕೃತದಲ್ಲಿ ಬರೆದ ಕೇರಳದ ಶಂಕರಾಚಾರ್ಯರು ಮಲೆಯಾಳದಲ್ಲೂ ಮಾತನಾಡಿರಲೇಬೇಕು. ಹಾಗೆಯೇ ಆನಂದತೀರ್ಥರು ಕೂಡ ಮನೆಯಲ್ಲಿ ತುಳು ಬಳಸಿ ಬೀದಿಯಲ್ಲಿ ಕನ್ನಡ ಮಾತನಾಡಿರಬೇಕು. ಆದರೆ ಇವರು ಕೂಡ ಬರೆದಿದ್ದು ಸಂಸ್ಕೃತದಲ್ಲೇ. ಇದೇ ರೀತಿ ತಮಿಳಿನಲ್ಲಿ ಬರೆದ ಅಬ್ರಾಹ್ಮಣ ಸಂತರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಮಾನುಜನರು ಕೂಡ ಸಂಸ್ಕೃತದಲ್ಲೇ ಬರೆದರು. ಅದ್ವೈತ, ದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳ ಜನಕರಾದ ಈ ತತ್ವಜ್ಞಾನಿಗಳು ದೇಶಾದ್ಯಂತ ಸಂಚರಿಸಿ, ಸಾಕಷ್ಟು ಅನುಯಾಯಿಗಳನ್ನು ಸಂಪಾದಿಸಿಕೊಂಡಿದ್ದರು. ಇವರೆಲ್ಲ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಬರೆದ ಸಂತ ಕವಿಗಳ ಮೇಲೆಲ್ಲ ಸಾಕಷ್ಟು ಪ್ರಭಾವ ಬೀರಿದರು ಮತ್ತು ಇವರ ಮಾತುಗಳೇ ಜನಸಾಮ್ಯಾನರ ಮಾತಿನಲ್ಲಿ ಪುರಾಣ ಮತ್ತು ಕಾವ್ಯಗಳಾದವು. ಜನಸಾಮಾನ್ಯರ ಈ ಮಾತನ್ನು ನಾನು ‘ಭಾಷೆಗಳು’ ಎಂದು ಕರೆಯುತ್ತೇನೆ. ಇವುಗಳ ಮೂಲಕ ಗಂಭೀರ ಚಿಂತನೆಯುಳ್ಳ ಸಮಾನತೆಯ ಪ್ರತಿಪಾದಕನೊಬ್ಬ ಭಾರತೀಯ ಸಮಾಜದ ಪ್ರಧಾನ ಸಂರಚನೆಯನ್ನು ಗ್ರಹಿಸಿಕೊಳ್ಳಬಹುದು. ನಮ್ಮಲ್ಲಿ ಜಾತಿ ಪದ್ಧತಿಯನ್ನು ಪ್ರಶ್ನಿಸುವ ಧೈರ್ಯ ಬ್ರಿಟಿಷರು ಬಂದಮೇಲಷ್ಟೇ ಶುರುವಾಗಲಿಲ್ಲ, ಅದಕ್ಕಿಂತ ಮೊದಲೇ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರವೃತ್ತಿ ಇತ್ತು. ೧೨ನೆಯ ಶತಮಾನದಷ್ಟು ಹಿಂದೆಯೇ ಕನ್ನಡದ ವಚನಕಾರ ಬಸವಣ್ಣ ಬ್ರಾಹ್ಮಣರ ಹುಡುಗಿ ಮತ್ತು ದಲಿತರ ಹುಡುಗನ ಮದುವೆ ಏರ್ಪಡಿಸಿದ ಚರಿತ್ರೆ ನಮಗಿದೆ. ಈ ಮದುವೆ ಮಾಡಿಸುವ ಮೂಲಕ ಬಸವಣ್ಣ ಸಿಕ್ಕಾಪಟ್ಟೆ ತೊಂದರೆಗೆ ಒಳಗಾದ ಎನ್ನುವುದು ಬೇರೆ ಮಾತು.

ಇನ್ನೊಂದು ಕಡೆ ಬುದ್ಧ, ಪಿತೃಭಾಷೆಯಾದ ಸಂಸ್ಕೃತದಲ್ಲಿ ಬರೆಯಬಾರದೆಂದು ಪಣ ತೊಟ್ಟ (ನನ್ನ ಗೆಳೆಯರೂ ವಿದ್ವಾಂಸರೂ ಆದ ಎ.ಕೆ. ರಾಮಾನುಜನ್ ಸಂಸ್ಕೃತವನ್ನು ಸದಾ ಪಿತೃಭಾಷೆ ಎಂದೇ ಕರೆಯುತ್ತಿದ್ದರು. ಪಿತೃಭಾಷೆ ಎಂದರೆ ಇವತ್ತಿನ ಇಂಗ್ಲಿಷ್ ಇದ್ದಂತೆ). ಮಧ್ಯಯುಗೀನ ಭಾರತದ ಸಂತ ಕವಿಗಳಂತೂ ಸಂಸ್ಕೃತವನ್ನು ಬಳಸಲೇ ಇಲ್ಲ. ಇವರೆಲ್ಲ ಉಪಯೋಗಿಸಿದ್ದು ನಮ್ಮ ಜನಾರಾಡುವ ಭಾರತೀಯ ಭಾಷೆಗಳನ್ನೇ. ಆಧ್ಯಾತ್ಮ ಕವಿಗಳಾದ ಇವರೆಲ್ಲರಲ್ಲೂ ದೇವರಿಗೆ ಸಂಬಂಧಿಸಿದ ಅನುಭವಗಳೆಲ್ಲ ಆ ಗಳಿಗೆಯಲ್ಲಿ ಆಗುವಂಥದ್ದೇ ವಿನಾ ಊಹಾಪೋಹಗಳ ಮೇಲೆ ನಿಂತಿರುವಂಥವಲ್ಲ. ಆದರೆ ಈ ಆಧ್ಯಾತ್ಮಿಕ ಕವಿಗಳೆಲ್ಲ ಸಮಾಜದ ಬಗ್ಗೆ ತೀವ್ರವಾದ ಕಳಕಳಿ ಹೊಂದಿದ್ದರು. ಇವರೆಲ್ಲ ಆಧ್ಯಾತ್ಮಿಕರಾಗಿದ್ದರೂ ಯಾವತ್ತೂ ಸಮಾಜದಿಂದ ದೂರವಾಗಲಿಲ್ಲ. ಭಾರತದ ಬೇರೆ ಬೇರೆ ಭಾಗಗಳಿಗೆ ಸೇರಿದ್ದ ಇವರೆಲ್ಲ ತಮ್ಮ ಧಾರ್ಮಿಕ ಅನುಭವಗಳನ್ನು ಹಂಚಿಕೊಳ್ಳಲು ಜನಸಾಮಾನ್ಯರ ಭಾಷೆಯನ್ನು ಆಯ್ಕೆ ಮಾಡಿಕೊಂಡರು. ಇದರ ಮೂಲಕ ಇವರೆಲ್ಲ ನಿಜವಾಗಿ ತಮ್ಮ ತಮ್ಮ ದೇವರೊಂದಿಗೆ ಹಾದಿಬೀದಿಯ ಮತ್ತು ಅಡುಗೆ ಮನೆಯ ಭಾಷೆಗಳೆಲ್ಲೇ ಸಂವಾದವನ್ನು ಆರಂಭಿಸಿದರು. ಹಾಗೆ ನೋಡಿದರೆ ದೇವರ ಜತೆ ಮಾತನಾಡಲು ಒಂದು ವಿಶೇಷ ಭಾಷೆಯೇ ಇತ್ತು. ಆದರೂ ಇವರೆಲ್ಲ ತಮಗೆ ಚಿರಪರಿತವಾಗಿದ್ದ ಭಾಷೆಗಳನ್ನೇ ಬಳಸುವ ಮೂಲಕ ದೇವರನ್ನು ಶ್ರೀಸಾಮಾನ್ಯನ ಹತ್ತಿರಕ್ಕೆ ತಂದುಬಿಟ್ಟರು. ಇದರ ನೇರ ಪರಿಣಾಮವೇನೆಂದರೆ ಇವರ ಕಾವ್ಯದಿಂದ ಮೊಟ್ಟಮೊದಲ ಬಾರಿಗೆ ಮಹಿಳೆಯರು ಮತ್ತು ಕೆಳಜಾತಿಗಳ ಜನರ ಸಬಲೀಕರಣ ಸಾಧ್ಯವಾಯಿತು. ಉದಾಹಣೆಗೆ ಹೇಳುವುದಾದರೆ, ಕರ್ನಾಟಕದಲ್ಲಿ ಮುಟ್ಟಾಗುವ ಮಹಿಳೆಯರನ್ನು ಮೈಲಿಗೆ ಎಂದು ಆ ಕಾಲದಲ್ಲಿ ಪರಿಗಣಿಸಲಾಗಿತ್ತು. ಆದರೆ ಆಧ್ಯಾತ್ಮಿಕ ಕವಿಗಳು ಈ ನಂಬಿಕೆಯನ್ನು ನಿರಾಕರಿಸಿ ‘ಮುಟ್ಟಾದ ಮಹಿಳೆಯರು ಕೂಡ ಎಂದಿನಂತೆಯೇ ಪರಿಶುದ್ಧ’ ಎಂದು ಘೋಷಿಸಿದರು. ಈ ದೃಷ್ಟಿಯಿಂದ ಭಾರತದಲ್ಲಿ ಮಹಿಳೆಯರ ಸಬಲೀಕರಣ ೮೦೦ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ.

ಹೀಗೆ ಮೇಲ್ಜಾತಿಗಳ ಮತ್ತು ಆಧ್ಯಾತ್ಮಿಕ ಒಳನೋಟ ಹಾಗೂ ತಾತ್ವಿಕ ಸೂಕ್ಷ್ಮಗಳನ್ನು ಒಳಗೊಂಡಿದ್ದ ಭಾಷೆಯಾದ ಸಂಸ್ಕೃತ ಭಾರತೀಯ ಭಾಷೆಗಳ ಸ್ವತ್ತಾಯಿತು. ಆ ಮಧ್ಯಯುಗೀನ ಕಾಲದಿಂದಲೂ ಈ ಭಾರತೀಯ ಭಾಷೆಗಳು ನಮ್ಮ ಸಮಾಜದಲ್ಲಿ ಸಮಾನತೆಯ ವಾಹಕಗಳಾಗಿವೆ. ಇಲ್ಲಿ ಹೊಸದಾಗಿ ಭಾಷೆಗಳನ್ನು ಸೇರ್ಪಡೆಗೊಳಿಸಿಕೊಳ್ಳಲಾಗುತ್ತಿದೆಯೇ ವಿನಾ ಯಾವತ್ತೂ ಒಂದು ಭಾಷೆಯನ್ನು ನಿರಾಕರಿಸಿಲ್ಲ. ಅದು ಹಿಂದೆ ಸಂಸ್ಕೃತದಲ್ಲಾಗಿರಬಹುದು ಅಥವಾ ಭಾರತೀಯ ಭಾಷೆಗಳಲ್ಲಾಗಿರಬಹುದು ಅಥವಾ ಅನಂತರ ಬಂದ ಇಂಗ್ಲಿಷ್ ಆಗಿರಬಹುದು.

ಹೀಗೆ ಬಂದ ಅತ್ಯಂತ ಮಹಾನ್ ಸಂತರಲ್ಲಿ ಇತ್ತೀಚಿನವರೆಂದರೆ ಮಹಾತ್ಮ ಗಾಂಧಿ. ಈ ಗಾಂಧಿ ಗುಜರಾತಿ, ಹಿಂದೂಸ್ತಾನಿಗಳ ಜತೆಗೆ ಇಂಗ್ಲಿಷ್ ನಲ್ಲಿ ಕೂಡ ಬರೆದರು. ಗಾಂಧಿಯನ್ನು ನಾವು ಭಾರತೀಯ ನಾಗರಿಕತೆ ಕಂಡ ಅತ್ಯಂತ ದೊಡ್ಡ ಕ್ರಿಟಿಕಲ್ ಇನ್ ಸೈಡರ್ ಎಂದು ಬೇಕಾದರೂ ಬಣ್ಣಿಸಬಹುದು (ಇಂಥ ಹಲವರನ್ನು ನಾನು ‘ಕ್ರಿಟಿಕಲ್ ಇನ್ ಸೈಡರ್’ ಎಂದೇ ಕರೆಯುತ್ತೇನೆ. ಇವರೆಲ್ಲ ನಮ್ಮ ಸಂಪ್ರದಾಯದ ಒಳಗಿನವರೇ. ಆದರೂ ಇವರು ಈ ಸಂಪ್ರದಾಯವನ್ನು ಅತ್ಯಂತ ನಿಷ್ಠುರವಾಗಿ ನೋಡುತ್ತಿದ್ದರು).

ನಮ್ಮ ಕಾಲದಲ್ಲಿ ಇಂಗ್ಲಿಷ್ ಸಂವಹನದ ಭಾಷೆಯಾಗಿದೆ. ಹಿಂದೆ ಸಂಸ್ಕೃತ ಈ ಸ್ಥಾನದಲ್ಲಿತ್ತು. ಆಗಿನ ಲೇಖಕರೆಲ್ಲ ಸಂಸ್ಕೃತದೊಂದಿಗೆ ಹೆಣಗಾಡಬೇಕಿತ್ತು. ಆದರೆ ೧೪ನೆಯ ಶತಮಾನದಲ್ಲಿ ಬಂದ ಕನ್ನಡದ ಲೇಖಕನೊಬ್ಬ ಒಂದು ಸಲ, ‘ಸಂಸ್ಕೃತದಲ್ಲಿ ಈಗ ಏನೇನೂ ಉಳಿದಿಲ್ಲ. ಎಲ್ಲವನ್ನೂ ಸೂರೆಗೈಯಲಾಗಿದೆ’ ಎಂದು ಉದ್ಗರಿಸಿದ್ದುಂಟು. ಆಗ ಸಂಸ್ಕೃತದ ಜತೆ ಹೋರಾಡಿ ಅದನ್ನು ಜೀರ್ಣಸಿಕೊಂಡ ಭಾರತೀಯ ಭಾಷೆಗಳು ಈಗ ಪಶ್ಚಿಮದ ಜಗತ್ತು ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಬೇಕಾಗಿದೆ. ಕಾಫ್ಕಾ, ಟಾಲ್ ಸ್ಟಾಯ್ ಮತ್ತಿತರ ಐರೋಪ್ಯ ಲೇಖಕರೆಲ್ಲ ಭಾರತೀಯ ಭಾಷೆಗಳ ಲೇಖಕರನ್ನು ಗಾಢವಾಗಿ ಪ್ರಭಾವಿಸಿದ್ದಾರೆ. ಅಂದಹಾಗೆ ಯೂರೋಪಿಯನ್ನರು ಗ್ರಹಿಸಿರುವ ರೀತಿಯಲ್ಲಿ ನಾನು ‘ಮಾತೃಭಾಷೆ’ ಎಂಬ ಪದವನ್ನು ಬಳಸುವುದಿಲ್ಲ. ಉದಾಹರೆಣೆಗೆ ಹೇಳುವುದಾದರೆ, ಯಶವಂತ ಚಿತ್ತಾಲ ಮತ್ತು ಕಾರ್ನಾಡ್ ರಂಥ ಲೇಖಕರು ತಮ್ಮ ಮಾತೃಭಾಷೆಯಲ್ಲಿ ಬರೆಯದೆ, ತಾವು ಅಳವಡಿಸಿಕೊಂಡ ಕನ್ನಡದಲ್ಲಿ ಅತ್ಯುತ್ತಮವಾಗಿ ಬರೆಯುತ್ತಿದ್ದಾರೆ. ಆದರೆ ಇಂಥ ಉದಾಹರಣೇ ಯೂರೋಪಿನಲ್ಲಿ ಬೆರಳೆಣೀಕೆಯಷ್ಟು ಮಾತ್ರ ಸಿಕ್ಕುತ್ತವೆ. ಇದೇನೇ ಇರಲಿ, ಭಾರತದ ಹೆಚ್ಚಿನ ಲೇಖಕರು ಬರೆಯಲು ನೆಚ್ಚಿಕೊಂಡ ಭಾಷೆಯನ್ನು ಸಾಮಾನ್ಯವಾಗಿ ಮನೆಯಲ್ಲಿ ಆಡುತ್ತಿರುವುಲದಿಲ್ಲ. ನಾನು ಒಂದು ಸಲ ಈ ಬಗ್ಗೆ ಕನ್ನಡದ ಮಹಾನ್ ಕವಿಯಾದ ಬೇಂದ್ರೆಯವರನ್ನು ‘ನೀವು ಸದಾ ಕನ್ನಡದಲ್ಲೇ ಮಾತನಾಡುತ್ತಿರುತ್ತೀರಾ?’ ಎಂದು ಕೇಳಿದ್ದುಂಟು. ಯಾಕೆಂದರೆ ವಿಲಿಯಂ ಬ್ಲೇಕ್ ಇಂಗ್ಲಿಷನ್ನು ಎಷ್ಟು ಮಾಂತ್ರಿಕವಾಗಿ ಬಳಸಿದನೋ ಅದೇ ರೀತಿ ಬೇಂದ್ರೆ ಕೂಡ ಕನ್ನಡವನ್ನು ಅದರ ಮಾಂತ್ರಿಕ ಸ್ವರೂಪದಲ್ಲಿ ಬಳಸಿದರು. ನನ್ನ ಈ ಪ್ರಶ್ನೆಗೆ ಬೇಂದ್ರೆ, ‘ಇಲ್ಲಪ್ಪ ಇಲ್ಲ….. ನಾನು ಮನೆಯಲ್ಲಿ ಮಾತನಾಡುವುದೆಲ್ಲಾ ಮರಾಠಿ. ಇಷ್ಟೇ ಅಲ್ಲ, ನನಗೆ ೧೨-೧೩ ವರ್ಷಾಗಳಾಗುವವರೆಗೂ ಎರಡು ಭಾಷೆಗಳನ್ನು ಬಲ್ಲವನು ಎಂಬುದೇ ನನಗೆ ಗೊತ್ತಿರಲಿಲ್ಲ!’ ಎಂದರು. ಅಷ್ಟು ಹೊತ್ತಿಗಾಗಲೇ ಬೇಂದ್ರೆ ವರ್ಣರಂಜಿತ ವ್ಯಕ್ತಿತ್ವದವರಾಗಿದ್ದರು. ನಮ್ಮಿಬ್ಬರ ಮಾತುಕತೆ ಕನ್ನಡದಲ್ಲೇ ನಡೆಯುತ್ತಿದ್ದ ಈ ಗಳಿಗೆಯಲ್ಲಿ ಅವರ ಸೊಸೆ ಅಲ್ಲಿಗೆ ಬಂದು, ಬೇಂದ್ರೆಯವರ ಕಿವಿಯಲ್ಲೇನೋ ಪಿಸುಗುಟ್ಟಿದರು. ಅದನ್ನು ಕೇಳಿಸಿಕೊಂಡ ಬೇಂದ್ರೆ ಹಾಗೆಯೇ ಒಂದು ಸಲ ತಿರುಗಿ ತಮ್ಮ ಸೊಸೆಯ ಜೊತೆ ಮರಾಠಿಯಲ್ಲಿ ಮಾತನಾಡಿದರು. ಆದರೆ ತಾನು ಮರಾಠಿಯಲ್ಲಿ ಮಾತನಾಡುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತೇ ಇರಲಿಲ್ಲ! ಇಂಥ ಭಾಷಿಕ ಪಲ್ಲಟಗಳು ನಿರಂತರವಾಗಿ ಮತ್ತು ನಮಗೇ ಗೊತ್ತಿಲ್ಲದಂತೆ ಇಲ್ಲಿ ನಡೆಯುತ್ತಲೇ ಇರುತ್ತದೆ.

ಬಹುಭಾಷೆಗಳು ಮತ್ತು ಬಹುಪಠ್ಯಗಳು

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಹೀಗೆ ಪಲ್ಲಟಗೊಳ್ಳುವುದು ರಾಜಸ್ಥಾನಿ, ಭೋಜ್‌ಪುರಿ ಮತ್ತು ಹಿಂದಿಗೆ ಹತ್ತಿರವಿರುವ ಇನ್ನೂ ಅನೇಕ ಭಾಷೆಗಳನ್ನು ಮಾತನಾಡುವ ಹಲವು ಮಂದಿ ಹಿಂದಿ ಲೇಖಕರಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಅವರ ಸಾಹಿತ್ಯ ಕೃತಿಗಳಲ್ಲಿರುವ ಪಾತ್ರಗಳು ಅವರವರ ಭಾಷೆಗಳಲ್ಲಿ-ಅಂದರೆ ರಾಜಸ್ಥಾನಿ, ಭೋಜ್‌ಪುರಿ ಇತ್ಯಾದಿ-ಮಾತನಾಡಬಹುದು. ಆದರೆ ಈ ಲೇಖಕರು ತಮಗನಿಸಿದ್ದನ್ನೆಲ್ಲ ಹಿಂದಿಯಲ್ಲಿ ಕೊಡುತ್ತಿದ್ದಾರೆ.

ಆದರೆ ಒಂದು ಪಠ್ಯವನ್ನು ರೂಪಿಸುವ ಇನ್ನೂ ಮಹತ್ವದ ಒಂದು ಭಾರತೀಯ ಚಮತ್ಕಾರ ಇಲ್ಲಿದೆ. ಆದರೆ ಅದನ್ನು ನಾವು ಪದೇ ಪದೇ ಮರೆತಿದ್ದೇವೆ. ಕಾಳಿದಾಸನ ‘ಶಾಕುಂತಲ’ ಕೇವಲ ಒಂದೇ ಒಂದು ಭಾಷೆಯಲ್ಲಿರುವ ಪಠ್ಯವಲ್ಲ. ಕನ್ನಡದ ಆರಂಭ ಕಾಲದ ಕವಿಗಳಲ್ಲಿ ಒಬ್ಬರಾದ ಶಿಶುನಾಳ ಷರೀಫರ ಪದಗಳಲ್ಲಿ ಮೊದಲ ಸಾಲು ಕನ್ನಡದಲ್ಲಿ, ಎರಡನೆಯ ಸಾಲು ತೆಲುಗಿನಲ್ಲಿ ಮತ್ತು ಮೂರನೆಯ ಸಾಲು ಉರ್ದು ಎಂದು ಕರೆಯಬಹುದಾದ  ಭಾಷೆಯಲ್ಲಿ ಇರುತ್ತದೆ. ಷರೀಫರು ಬೆಳೆದು ಬಂದಿದ್ದೇ ಈ ಮೂರೂ ಭಾಷೆಗಳನ್ನು ಜನ ಆಡುತ್ತಿದ್ದ ಪ್ರದೇಶದಿಂದ. ಹೀಗಾಗಿ ಜನ ಶಿಶುನಾಳ ಷರೀಫರ ಪದಗಳಲ್ಲಿ ಬರುವ ಮೂರೂ ಭಾಷೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಜತೆಗೆ ಈ ಮೂರೂ ಭಾಷೆಗಳು ಹೀಗೆ ಜತೆಜತೆಯಾಗಿ ಇರುವುದೇ ಆ ಜನರಿಗೆಲ್ಲ ಒಂದು ಅನನ್ಯತೆಯ ಭಾವವನ್ನು ಮೂಡಿಸುತ್ತಿತ್ತು. ಹೀಗಾಗಿ ಈ ಜನರೆಲ್ಲ ಮಾತಿನ ಜಗತ್ತಿನ ಆಚೆಗೂ ಇರುವ ಮೌನಕ್ಕೆ ತಮ್ಮ ಕಿವಿ ತೆರೆದಿರುತ್ತಿದ್ದರು. ಅದರಲ್ಲೂ ಪದಗಳಲ್ಲಿ ತುಂಬಾ ಸಂಭ್ರಮದಿಂದ ಹಿಡಿದಿಟ್ಟಿರುವ ಮೌನವನ್ನು ಆ ಜನರೆಲ್ಲ ಆಲಿಸುತ್ತಿದ್ದರು. ಹೀಗೆ ಮುಕ್ತ ಪಲ್ಲಟ ಮತ್ತು ಮಿಶ್ರಣದ ಜತೆಗೆ ಯಜಮಾನಿಕೆಯ ಲಕ್ಷಣಗಳೂ ಒಂದು ಭಾಷೆಯ ಜತೆಯಲ್ಲೇ ಇರುತ್ತವೆ. ಹೀಗಾಗಿಯೇ ಹಿಂದೆ ಭಾರತೀಯ ಭಾಷೆಗಳಲ್ಲಿ ಬರೆದ ಕವಿಗಳೆಲ್ಲ ಸಂಸ್ಕೃತವನ್ನು ದಕ್ಕಿಸಿಕೊಂಡರು. ಭಾರತೀಯ ಭಾಷೆಗಳ ಬಳಿಕ ಯಾವತ್ತೂ ಇನ್ನೊಬ್ಬರ ಜತೆಗಿನ ಸಂವಾದಕ್ಕೆ ಬೆದರಿಕೆಯಾಗಿ ಪರಿಣಮಿಸಿಲ್ಲ. ಹಾಗೆಯೇ ಇದು ಯಾವುದೇ ಭಾಷೆಯನ್ನು ಅದರದೇ ಬೀಡಿನಲ್ಲಿ ಒಬ್ಬಂಟಿಯನ್ನಾಗಿಯೂ ಮಾಡಿಲ್ಲ. ಇಂಥ ಸಾಂಸ್ಕೃತಿಕ ಸೇರ್ಪಡೆ ಮತ್ತು ಸಮನ್ವಯತೆಯ ಪ್ರಕ್ರಿಯೆ ಭಾರತದಲ್ಲಿ ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಮೊದಲಿಗೆ ದೈವಭಾಷೆಯಾದ ಸಂಸ್ಕೃತವು ಜನಸಾಮಾನ್ಯರ ಭಾಷೆಗಳಿಗೆ ದಾರಿ ಕೊಟ್ಟಿತು. ಈಗ ಜನಗಳ ಸಬಲೀಕರಣಕ್ಕೆ ಇಂಗ್ಲಿಷ್-ಅದು ಎಷ್ಟೇ ಜಿಗುಟಿನಿಂದ ಕೂಡಿದ್ದರೂ-ಭಾರತೀಯ ಭಾಷೆಗಳಿಗೆ ಹೀಗೆ ಅವಕಾಶ ಮಾಡಿಕೊಡುತ್ತಿದೆ. ಇಂಥ ಅರ್ಥಪೂರ್ಣ ಸಂಧಾನಗಳಿಗೆ ಈಗಾಗಲಿ, ಹಿಂದೆಯಾಗಲಿ ಪ್ರಧಾನವಾಗಿ ನಿಂತಿರುವುದು ಅನುವಾದವೇ ಇದು ಜಾನಪದಕ್ಕೂ ಅನ್ವಯಿಸುತ್ತದೆ; ಹಾಗೆಯೇ ಗ್ರಾಂಥಿಕಕ್ಕೂ ಅನ್ವಯಿಸುತ್ತದೆ.

ನನ್ನ ಈ ಚಿಂತನೆಗಳಿಗೆ ಪೂರಕವಾಗಿ ಇಲ್ಲೊಂದಿಷ್ಟು ಸ್ಥಾಯಿಯಾದ ಉದಾಹರಣೆಗಳಿವೆ. ಕರ್ನಾಟಕದ ಕರಾವಳಿಯಲ್ಲಿ ಉಡುಪಿ ಎಂಬ ಒಂದು ಸಣ್ಣ ಪಟ್ಟಣವಿದೆ. ಭಾರತದ ಮೂಲೆಮೂಲೆಗಳಿಗೆಲ್ಲ ಹೋಗಿ ಹೊಟೇಲುಗಳನ್ನು ಶುರು ಮಾಡಿರುವ ಈ ಊರಿನ ಜನರಿಂದಾಗಿ, ಉಡುಪಿ ಎಂಬ ಹೆಸರು ಈಗ ಚಿರಪರಿಚಿತ. ಇಂಥ ಉಡುಪಿ ಮತ್ತು ಸುತ್ತಮುತ್ತ ಜನರೆಲ್ಲ ಸಾಮಾನ್ಯವಾಗಿ ಮೂರು ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿಯ ಮೂಲನಿವಾಸಿಗಳ, ರೈತರ ಮತ್ತು ಕೂಲಿ ಕಾರ್ಮಿಕರ ಭಾಷೆ ತುಳು. ಇಂಥ ತುಳುವಿನಲ್ಲಿ ಅಗಾಧವಾದ ಜಾನಪದ ಸಂಪತ್ತೂ ಇದೆ. ಅಂದಹಾಗೆ ತುಳುವನ್ನು ಕೇವಲ ಕೆಳಜಾತಿಯವರಷ್ಟೇ ಆಡುವುದಿಲ್ಲ. ಈ ಭಾಷೆಯ ಸಂಸ್ಕೃತ ಭೂಮಿಷ್ಠ ರೂಪವೂ ಇದ್ದು, ಇದನ್ನು ಬ್ರಾಹ್ಮಣರು ತಮ್ಮ ಮಾತೃಭಾಷೆಯಾಗಿ ಬಳಸುತ್ತಾರೆ. ಆದರೆ ಸ್ಥಳೀಯ ಶೂದ್ರರು ಈ ಬ್ರಾಹ್ಮಣರ ತುಳುವನ್ನು ‘ಅಶುದ್ಧ’ ಎಂದು ಪರಿಗಣಿಸಿದ್ದಾರೆ. ತುಳುವಿನ ನಂತರ ಇಲ್ಲಿ ಬರುವುದು ಬಹಳ ಮುಖ್ಯವಾಗಿ ವ್ಯಾಪಾರಸ್ಥರು ಉಪಯೋಗಿಸುವ ಕೊಂಕಣಿ. ಮುಸ್ಲಿಮರು ಮಾತಾಡುವುದು ‘ಬ್ಯಾರಿ’ ಎಂಬ ಭಾಷೆ. ಹೀಗಾಗಿ ಉಡುಪಿಯಲ್ಲಿ ಕನ್ನಡ ಇತರ ಎರಡು ಮೂರು ಭಾಷೆಗಳೊಂದಿಗೆ ಅಸ್ತಿತ್ವದಲ್ಲಿದೆ. ಯಾರಾದರೂ ಬೇಕಾದರೆ ಕನ್ನಡವನ್ನು ಉನ್ನತ ಸಂಸ್ಕೃತಿಯ ಭಾಷೆ ಎಂದು ಹೇಳಬಹುದು. ಇದರ ಅರ್ಥ ಏನೇ ಇರಬಹುದು, ಅದು ಬೇರೆ ಮಾತು. ಆದರೆ ಇದೇ ಉಡುಪಿಯಲ್ಲಿ ಕನ್ನಡ ಕೂಡ ಬಹುತೇಕ ಜನರ ಮಾತೃಭಾಷೆಯಾಗಿದೆ. ಇಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಇಷ್ಟೆ-ಹಿಂದೆಯೂ ಈಗಲೂ ಕನ್ನಡ ಲೇಖಕರಲ್ಲಿ ಬಹಳಷ್ಟು ಜನ ಈ ಕರಾವಳಿಯಿಂದಲೇ ಬಂದವರು. ಇಲ್ಲಿ ಯಾವುದೇ ಒಬ್ಬ ವ್ಯಕ್ತಿ ಬೀದಿಯಲ್ಲೆ ಒಬ್ಬ ಅಪರಿಚಿತನ ಜತೆ ಮಾತಾನಾಡುವ ಭಾಷೆ ಕನ್ನಡವಾಗಿರುತ್ತದೆ. ಆದರೆ ತುಳು/ಕೊಂಕಣಿ ಬಲ್ಲವರು ಇದೇ ಭಾಷೆಗಳನ್ನು ಬಲ್ಲ ಮತ್ತೊಬ್ಬರನ್ನು ಕಂಡ ತಕ್ಷಣ ಇದೇ ಭಾಷೆಗಳಲ್ಲೇ ಮಾತನಾಡುತ್ತಾರೆ. ಇವೆರಡೂ ಭಾಷೆಯನ್ನು ಬಳಸದೆ ಇನ್ನಾವುದಾದರೂ ಒಂದನ್ನು ಬಳಸಿದರೆ ಅದು ಉಡಾಫೆತನ ಎಂದು ತೀರ್ಮಾನವಾಗುತ್ತದೆ. ಹಾಗೆಯೇ ಉಡುಪಿ ಪರಿಸರದಲ್ಲಿ ತುಳು/ಕೊಂಕಣಿ ಮಾತನಾಡುವವರೆಲ್ಲರಿಗೂ ಕನ್ನಡ ಕೂಡ ಚೆನ್ನಾಗಿ ಅರ್ಥವಾಗುತ್ತದೆ/ ಬರುತ್ತದೆ. ಹೀಗಾಗಿ ಈ ಪರಿಸರದಲ್ಲಿ ಯಾರಾದರೂ ಒಬ್ಬರು ಸಾಹಿತ್ಯ ಕೃಷಿ ಆರಂಭಿಸಲು ಮುಂದಾದರೆಂದರೆ ಅವರೆಲ್ಲ ಆರಿಸಿಕೊಳ್ಳವ ಭಾಷೆ ಕನ್ನಡವೇ ಆಗಿರುತ್ತದೆ.

ಕನ್ನಡದಲ್ಲಿ ಶಿವರಾಮ ಕಾರಂತರು ಬರೆದ ಒಂದು ಖ್ಯಾತ ಕಾದಂಬರಿ ಇದೆ. ಅದು ಚೋಮನ ದುಡಿ ಕಾದಂಬರಿಯ ನಾಯಕನಾದ ಚೋಮ, ಜಾತಿಯಿಂದ ಅಸ್ಷೃಶ್ಯ. ನಿಜ ಜೀವನದಲ್ಲಿ ಈತ ತುಳು ಮಾತನಾಡುತ್ತಿದ್ದ ವ್ಯಕ್ತಿಯಾಗಿರಬಹುದು. ಇದಕ್ಕಿಂತ ಹೆಚ್ಚಾಗಿ, ಇಡೀ ಕಾದಂಬರಿಯ ಬಹುಭಾಗ ನಡೆಯುವುದೆಲ್ಲ ತುಳುವಿನಲ್ಲೇ ಎಂದು ಯಾರಾದರೂ ಹೇಳಬಹುದು. ಹಾಗೆ ನೋಡಿದರೆ ಕಾರಂತರು ಈ ಕಾದಂಬರಿ ಬರೆಯುವಾಗ ಅದನ್ನು ವಾಸ್ತವವಾಗಿ ತುಳುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಆದರೆ ಇದು ಭಾರತದಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಕಾದಂಬರಿಯ ವಿಚಾರದಲ್ಲೂ ಸತ್ಯವಲ್ಲವೇ? ಸಲ್ಮಾನ್ ರಶ್ದಿ ತಮ್ಮ ಕೃತಿಗಳ ಸೃಜನಶೀಲ ಸಾಲುಗಳಲ್ಲೆಲ್ಲ ಬೊಂಬಾಯಿ ಹಿಂದಿಯಿಂದ ಪಡೆದುಕೊಂಡು ಇಂಗ್ಲಿಷಿಗೆ ಅನುವಾದಿಸಿಲ್ಲವೇ ಇದೇ ರೀತಿ ಅರುಂಧತಿ ರಾಯ್ ಅವರ ಸಾಹಿತ್ಯ ಕೂಡ ಅತ್ಯಂತ ಪರಣಾಮಕಾರಿ-ಯಾಗಿರುವುದು ಅವರು ಕೇರಳದ ಸಿರಿಯನ್ ಕ್ರಿಶ್ಚಿಯನ್ನರು ಆಡುವ ಮಲಯಾಳಂ ಭಾಷೆಯನ್ನು ಅನುಕರಿಸಿದಾಗಲೇ ಎನ್ನುವುದು ನನ್ನ ಭಾವನೆ. ಹೊಸ ದಾರಿ ಹುಟ್ಟುಹಾಕಿದ ನಮ್ಮ ರಾಜಾರಾಯರ ಕಾಂತಾಪುರ ಕಾದಂಬರಿಗೂ ಈ ಮಾತು ಸಲ್ಲುತ್ತದೆ. ರಾಜಾರಾಯರು ಆ ಕಾದಂಬರಿಯನ್ನು ಇಂಗ್ಲಿಷಿನಲ್ಲೇ ಬರೆದಿರಬಹುದು, ಆದರೆ ಅದು ನಿಜವಾಗಿಯೂ ಕನ್ನಡದಲ್ಲೇ ಇರುವ ಕಾದಂಬರಿ! ಕಾಂತಾಪುರದ ಪಠ್ಯ ಮತ್ತು ಅದರ ನಿರೂಪಣೆಯ ಶೈಲಿ ಎರಡರ ದೃಷ್ಟಿಯಿಂದಲೂ ಇದು ಸರಿ. ಏಕೆಂದರೆ ರಾಜಾರಾಯರು ಇವೆರಡನ್ನೂ ಪಡೆದುಕೊಂಡಿರುವುದು ಕನ್ನಡದ ಮೌಖಿಕ ಸಂಪ್ರದಾಯಗಳಿಂದಲೇ. ಇಂಗ್ಲಿಷಿನಲ್ಲಿ ಬರೆಯುತ್ತಿರುವ ನಮ್ಮ ಅನೇಕ ಸೃಜನಶೀಲ ಲೇಖಕರ ಬಗ್ಗೆ ಹೇಳುವುದಾದರೆ ಇವರೆಲ್ಲ ಇಂಗ್ಲಿಷನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದಕ್ಕೆ ಒಂದಿಷ್ಟಾದರೂ ಕಾಣಿಕೆ ನೀಡಿದ್ದಾರೆ. ಇವರ ಬಗ್ಗೆ ಕೂಡ ನಾನು ಇದೇ ಮಾತನ್ನು ಹೇಳಲು ಬಯಸುತ್ತೇನೆ. ಅಂದರೆ, ಇಂಗ್ಲಿಷಿನಲ್ಲಿ ಬರೆಯುತ್ತಿರುವ ಈ ಲೇಖಕರು ನಿಜಕ್ಕೂ ಅನನ್ಯವಾದುದನ್ನು ಸೃಷ್ಟಿಸಬೇಕೆಂದರೆ ಇವರೆಲ್ಲ ಭಾರತೀಯ ಭಾಷೆಗಳಿಂದ ಹೀಗೆ ಆವಾಹನೆ ಮಾಡಿಕೊಳ್ಳಬೇಕು.

ಭಾಷೆಯಾಗಿ ಮಹಾಕಾವ್ಯಗಳು                 

ಸಾವಿರ ವರ್ಷಗಳ ಹಿಂದೆಯೇ ಕನ್ನಡದ ಮತ್ತೊಬ್ಬ ಮಹಾನ್ ಕವಿಯಾದ ಪಂಪ, ಮಹಾಭಾರತದ ಅರ್ಜುನನ್ನು ಕಥಾನಾಯಕನನ್ನಾಗಿ ಮಾಡಿಕೊಂಡು ಕಾವ್ಯ ಬರೆದ. ಸ್ವತಃ ಜೈನನಾಗಿದ್ದ ಪಂಪ, ಕೃಷ್ಣನನ್ನು ಕಥಾನಾಯಕನನ್ನಾಗಿ ಮಾಡಿಕೊಳ್ಳಲೇ ಇಲ್ಲ. ಕೃಷ್ಣ ಅವನ ಪಾಲಿಗೇನಿದ್ದರೂ ಆಧ್ಯಾತ್ಮಿಕ ಜೀವಿ. ಹೀಗಾಗಿ ಪಂಪ, ಮಹಾಭಾರತದ ಅರ್ಜುನನನ್ನು ಕಥಾನಾಯಕನ್ನಾಗಿ ಮಾಡಿಕೊಂಡು, ಅವನನ್ನು ತನಗೆ ಆಶ್ರಯ ಕೊಟ್ಟಿದ್ದ ಹಿಂದೂ ಅರಸನಾದ ಅರಿಕೇಸರಿಯ ಜತೆ ಸಮೀಕರಿಸಿದ. ಅಂದರೆ ಅರಿಕೇಸರಿಯು ಪಂಪನ ಪಾಲಿಗೆ ಒಳ್ಳೆಯ ಗೆಳೆಯನೂ ಆಗಿದ್ದ. ಇದರ ಜತೆಗೆ ಪಂಪ ಆಸಕ್ತಿಕರವಾದ ಇನ್ನೊಂದು ಸಾಧನೆಯನ್ನೂ ಮಾಡಿದ್ದಾನೆ. ಅದೇನೆಂದರೆ ವ್ಯಾಸರ ಮಹಾಭಾರತವನ್ನು ಆಧರಿಸಿದ ಆತ, ತನ್ನದೇ ನಿರೂಪಣೆಯನ್ನೂ ಇಲ್ಲಿ ಸೇರಿಸಿದ್ದಾನೆ. ಅಲ್ಲದೆ, ‘ಸಮಾಸ ಅಲಂಕಾರ’ ಎಂಬ ಹೊಸದೊಂದು ಅಲಂಕಾರವನ್ನೇ ಈತ ಹುಟ್ಟುಹಾಕಿದ್ದಾನೆ. ಈ ದೃಷ್ಟಿಯಿಂದ ನೋಡಿದರೆ ಇದು ಒಂದು ಮಹಾಕಾವ್ಯ ಮತ್ತು ಸಮಕಾಲೀನ ಘಟನೆಯ ನಡುವೆ ತೀರಾ ಅವಾಸ್ತವಿಕ ಸಮೀಕರಣಗಳನ್ನು ಸೃಷ್ಟಿದುತ್ತದೆ. ಆದರೆ ವೈಯುಕ್ತಿಕವಾಗಿ ಹೇಳುವುದಾದರೆ, ಪಂಪ ತನ್ನ ಲೌಕಿಕ ಆಸಕ್ತಿಗಳನ್ನು ಅಭಿವ್ಯಕ್ತಿಸಲು ಹೀಗೆ ಮಾಡಿದ್ದು ದೊಡ್ಡ ಸಾಧನೆ. ತನ್ನ ಪೂರ್ವ ಪರಂಪರೆಗೆ ಸೇರಿಕೊಳ್ಳುವ ಗುರಿಯಿಂದ ಕವಿಯೊಬ್ಬ ಹೀಗೆ ಮಾಡುವುದು ಅತ್ಯಂತ ಧೈರ್ಯದ ಸಂಗತಿ ಎನ್ನುವುದರಲ್ಲಿ ಅನುಮಾನವಿಲ್ಲ (ನಾನು ಪದೇ ಪದೇ ಕನ್ನಡದಿಂದಲೇ ಉದಾಹರಣೆಗಳನ್ನು ಕೊಡುತ್ತಿರುವುದನ್ನು ದಯವಿಟ್ಟು ಯಾರೂ ‘ಚಾವನಿಸಂ’ ಎಂದು ತಪ್ಪು ತಿಳಿದುಕೊಳ್ಳಬಾರದು. ಕನ್ನಡದ ಉದಾಹರಣೆಗಳನ್ನೇ ನಾನು ಯಾಕೆ ಕೊಡುತ್ತಿದ್ದೇನೆಂದರೆ, ಅದರ ಬಗ್ಗೆ ಖಚಿತವಾಗಿ ಮಾತನಾಡಬಲ್ಲೆ ಎಂಬ ಭಾವನೆಯಿಂದ ).

ಅನುವಾದದ ಈ ನಿತ್ಯ ಪ್ರಕ್ರಿಯೆಯಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಕೇವಲ ಅನುಭವಗಳಷ್ಟೆ ನಿರಂತರವಾಗಿಯೂ ಸ್ವಯಂ ಸ್ಫೂರ್ತವಾಗಿಯೂ ಪಲ್ಲಟಗೊಳ್ಳುತ್ತಿರುವುದಿಲ್ಲ. ವಾಸ್ತವವಾಗಿ ಭಾರತೀಯರು ಏಕಕಾಲದಲ್ಲೇ ಅನೇಕ ಯುಗಗಳ ಜತೆಯೂ ಬದುಕುತ್ತಿದ್ದಾರೆ. ಇದಕ್ಕಾಗಿ ಮಹಾಭಾರತವನ್ನು ಅತ್ಯಂತ ಮುಕ್ತವಾಗಿ ಬಳಸಿಕೊಳ್ಳಲಾಗಿದೆ. ಆದ್ದರಿಂದ ಭಾರತದಲ್ಲಿ ಈಗಾಗಲೇ ಇರುವ ಅಸಂಖ್ಯಾತ ಭಾಷೆಗಳ ಜತೆಗೆ ಇನ್ನೂ ಎರಡು ಭಾಷೆಗಳಿವೆ ಎಂದು ಹೇಳಬಹುದು. ಈ ಇನ್ನೆರಡು ಬಾಷೆಗಳೆಂದರೆ ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ. ಭಾರತೀಯರಲ್ಲಿ ಹೆಚ್ಚಿನವರು ಈ ಮಹಾಕಾವ್ಯಗಳನ್ನು ತಮ್ಮ ಜೀವನದಲ್ಲಿ ಒಂದೇ ಒಂದು ಸಲವೂ ಓದಿಲ್ಲ ಎಂದು ನಾನು ಧೈರ್ಯವಾಗಿ ಹೇಳುತ್ತೇನೆ. ಆದರೂ ಪ್ರತಿಯೊಬ್ಬರೂ ತಮ್ಮ ಬಾಲ್ಯದಂದಲೇ ಅನೇಕ ರೂಪಗಳಲ್ಲಿ ಈ ಮಹಾಕಾವ್ಯಗಳ ಜತೆ ಮುಖಾಮುಖಿಯಾಗುತ್ತಿರುತ್ತಾರೆ ಎಂಬುದು ಸತ್ಯ.

ಭಾರತೀಯ ಸಾಹಿತ್ಯದ ಅನುವಾದಕರೊಬ್ಬರು ಒಂದು ಸಲ ನನ್ನ ಜತೆ ತಮಗಾದ ಅನುಭವವನ್ನು ಹಂಚಿಕೊಂಡರು. ಅದೇನೆಂದರೆ, ಈ ಅನುವಾದಕರು ಕನ್ನಡದ ಮೌಖಿಕ ಕಥೆಗಳನ್ನು ಸಂಗ್ರಹಿಸುತ್ತಿದ್ದರು. ನಮ್ಮ ಹಳ್ಳಿಗಳ ಅನಕ್ಷರಸ್ಥರು ತಮ್ಮ ನೆನಪಿನ ಶಕ್ತಿಯಿಂದಷ್ಟೇ ನಿರೂಪಿಸುವ/ ಹೇಳುವ ಅಥವಾ ಹಾಡುವ ಇಂಥ ಸಾವಿರಾರು ಕಥೆಗಳು ಕನ್ನಡದಲ್ಲಿವೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನು ವನವಾಸಕ್ಕೆ ಹೊರಟು ನಿಂತಿದ್ದಾನೆ. ಆಗ ಪತ್ನಿಯಾದ ಸೀತೆ ತಾನೂ ಜತೆಯಲ್ಲಿ ಕಾಡಿಗೆ ಬರುತ್ತೇನೆ ಎನ್ನುತ್ತಾಳೆ.  ಆಗ ರಾಮನು ‘ಬೇಡ ಬೇಡ. ನೀನೇನೂ ಕಾಡಿಗೆ ಬರುವುದು ಬೇಡ. ನೀನು ರಾಣಿ. ನಿನ್ನ ಪಾದಗಳು ಕೋಮಲ…. ನೀನು ಅಷ್ಟೊಂದು ಜೋಪಾನವಾಗಿ ಬೆಳೆದಿದ್ದೀಯ. ಆದ್ದರಿಂದ ದಯವಿಟ್ಟು ನೀನೇನೂ ಕಾಡಿಗೆ ಬರಲು ಹೋಗಬೇಡ…’ ಎಂದು ಸೀತೆಗೆ ಇದು ಒಪ್ಪಿಗೆ ಇಲ್ಲ. ಆಗ ಅವಳು. ‘ಇಲ್ಲ ಇಲ್ಲ…. ನಾನು ನಿನ್ನ ಹೆಂಡತಿ. ಕಾಡಿಗಾದರೂ ಸರಿ, ಎಲ್ಲಿಗಾದರೂ ಸರಿ, ನಾನು ನಿನ್ನನ್ನೇ ಅನುಸರಿಸಬೇಕು’ ಎನ್ನುತ್ತಾಳೆ. ಆದರೆ ರಾಮಾಯಣದ ಒಂದು ಜಾನಪದ ಕಥೆಯಲ್ಲಿ ಏನಾಗುತ್ತದೆಂದರೆ, ರಾಮ ಇದೇ ರೀತಿ ಸೀತೆಗೆ ಬುದ್ಧಿವಾದ ಹೇಳುತ್ತಾನೆ. ಆಗ ಸೀತೆ, ‘ಇದೇನಿದು, ನನಗೆ ಗೊತ್ತಿರುವ ಪ್ರತಿಯೊಂದು ರಾಮಾಯಣದ ಕಥೆಯಲ್ಲೂ ರಾಮನು ಕಾಡಿಗೆ ಹೊರಟಾಗ ಜತೆಯಲ್ಲಿ ಸೀತೆಯನ್ನೂ ಕರೆದುಕೊಂಡು ಹೋಗುತ್ತಾನೆ. ಆದರೆ ನೀನು ಅದ್ಹೇಗೆ ಅದನ್ನು ನನಗೆ ನಿರಾಕರಿಸುತ್ತಿದ್ದೀಯ ?’ ಎನ್ನುತ್ತಾಳೆ. ಆ ಅನುವಾದಕರ ಪ್ರಕಾರ ಈ ವೈಶಿಷ್ಟ್ಯವೇ ಭಾರತವನ್ನು ಬಿಗಿಯಾಗಿ ಹೆಣೆದಿರುವುದು. ಅಂದರೆ ಈ ಅಂತರ್ಪಠ್ಯೀಯತೆ ಕೇವಲ ನಾವು ಓದುವಂಥ ಪಠ್ಯಗಳಲ್ಲಿ ಮಾತ್ರ ಸಂಭವಿಸುವುದಿಲ್ಲ, ಮೌಖಿಕ ಪಠ್ಯಗಳಲ್ಲೂ ಆಗುತ್ತಿರುತ್ತದೆ. ಹೀಗಾಗಿಯೇ ನಾನು ಇಡೀ ಭಾರತವನ್ನೇ ಹಿಡಿದಿಟ್ಟಿರುವಂಥ ರಾಮಾಯಣ ಮತ್ತು ಮಹಾಭಾರತಗಳನ್ನು ನಮ್ಮ ಮತ್ತೆರಡು ಭಾಷೆಗಳೆಂದು ಕರೆಯಬಹುದೆಂದು ಹೇಳಿದ್ದು. ಅಂದಹಾಗೆ ಈ ಹಳ್ಳಿಗಾಡಿನ ಸೀತೆಗೆ, ಲೇಖಕರ ಹೆಸರುಗಳೇ ಗೊತ್ತಿಲ್ಲದ ಇನ್ನೂ ಅನೇಕ ರಾಮಾಯಣಗಳು ನಮ್ಮಲ್ಲಿವೆ ಎನ್ನುವುದು ಚೆನ್ನಾಗಿಯೇ ಗೊತ್ತಿದೆ.

ಬಹುಮುಖೀಯತೆ ಮತ್ತು ಸಂಕರ, ಏಕತೆ ಮತ್ತು ವೈವಿಧ್ಯತೆ

ಹೀಗಾಗಿ ಆಧುನಿಕ ಭಾರತೀಯ ಲೇಖಕನಿಗೆ ಹಲವು ಭಾಷೆಗಳ ಸಂಗಮ ಲಭ್ಯಾವಾಗಿದೆ. ಅಂದರೆ ಸಂಸ್ಕೃತ, ಇಂಗ್ಲಿಷ್, ಹಾಗೆಯೇ ಫ್ರೆಂಚ್ ಮತ್ತು ಪೋರ್ಚುಗೀಸ್ ಭಾಷೆಗಳ ಕೃತಿಗಳ ಅನುವಾದ, ಜತೆಗೆ ರಷ್ಯನ್ ಭಾಷೆಗಳೆಲ್ಲ ಸಿಕ್ಕಿವೆ. ಏಕೆಂದರೆ ನಮ್ಮಲ್ಲಿ ಬ್ರಿಟಿಷರ ಆಡಳಿತ ನಡೆಯುತ್ತಿದ್ದಾಗ ಕೂಡ ರಷ್ಯನ್ ಲೇಖಕನಾದ ಟಾಲ್ ಸ್ಟಾಯ್ ನನ್ನು ಭಾರತೀಯ ಲೇಖಕರೆಲ್ಲ ಓದುತ್ತಿದ್ದರು. ಅಂದರೆ, ನಮ್ಮಲ್ಲಿ ಕೇವಲ ಬ್ರಿಟಿಷ್ ಲೇಖಕರನ್ನಷ್ಟೆ ಓದಲು ನಾವು ಇಂಗ್ಲಿಷ್ ಬಳಸಿಕೊಳ್ಳಲಿಲ್ಲ. ನನಗನಿಸುವಂತೆ ಜೇನ್ ಆಸ್ಟಿನ್ ನಂಥ ಲೇಖಕಿ ಯಾವತ್ತೂ ಭಾರತೀಯ ಲೇಖಕನೊಬ್ಬನ ಮೇಲೆ ಪ್ರಭಾವ ಬೀರಿಲ್ಲ. ಆದರೆ ಟಾಲ್ ಸ್ಟಾಯ್ ನಮ್ಮ ಲೇಖಕರ ಮೇಲೆ ಉಂಟು ಮಾಡಿರುವ ಪ್ರಭಾವ ಅಪಾರ. ಹಲವು ಅನುವಾದಗಳನ್ನು ಒದಗಿಸಿದ ಸತ್ಕಾರದ/ ಉಪಚಾರದ ಭಾಷೆಯಾದ ಇಂಗ್ಲಿಷನ್ನು ನಾವು ಯೂರೋಪಿನ ಬೇರೆ ಬೇರೆ ಸಾಹಿತ್ಯವನ್ನು ಓದಲೂ ಉಪಯೋಗಿಸಿಕೊಂಡೆವು. ಹೀಗಾಗಿ ಈ ಬಹುಮುಖೀಯತೆ ಭಾರತದೊಳಗೆ ಇರಬೇಕೆಂದು ನಾನು ಒತ್ತಿ ಹೇಳುತ್ತೇನೆ.

ಉದಾಹರಣೆಗೆ ಹೇಳುವುದಾದರೆ ನಮ್ಮ ಆಧುನಿಕ ಭಾಷೆಗಳೆಲ್ಲೇ ಅತ್ಯಂತ ಹಳೆಯದಾದ ತಮಿಳಿನಲ್ಲಿ ಸಂಸ್ಕೃತದ ಕಾವ್ಯ ಮೀಮಾಂಸೆ ಮತ್ತು ವ್ಯಾಕರಣಕ್ಕೆ ಪರ್ಯಾವಾಗಿ ಇವೆರಡನ್ನೂ ಕಟ್ಟುವ ಯತ್ನ ನಡೆದಿದೆ. ಇಷ್ಟೇ ಅಲ್ಲ, ಸಂಸ್ಕೃತದ ಕಾವ್ಯ ಸಿದ್ಧಾಂತಕ್ಕಿಂತ ಸಂಪೂರ್ಣ ಭಿನ್ನವಾದ ಒಂದಿ ಕಾವ್ಯ ಸಿದ್ಧಾಂತ ತಮಿಳಿನಲ್ಲಿದೆ. ಇನ್ನೊಂದೆಡೆ ಗಾಂಧೀಜಿ ಮತ್ತು ಟ್ಯಾಗೋರ್ ಅವರವರ ಭಾಷೆಯ ಜನರ ಪಾಲಿಗೆ ಅಂದರೆ ಗುಜರಾತಿ ಮತ್ತು ಬಂಗಾಳಿಗಳಿಗೆ-ಕೇವಲ ಸಾಹಿತಿಗಳಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನದಾಗಿದ್ದಾರೆ. ಇಲ್ಲೊಂದು ಆಸಕ್ತಿಕರ ಅಂಶವನ್ನು ಗುರುತಿಸಬಹುದು. ಕೆಲವು ಸಾಹಿತ್ಯಗಳಲ್ಲಿರುವ ಛಂದಸ್ಸಿನ ಸಂಯೋಜನೆಯನ್ನು ಕೇವಲ ಓದಬಹುದಷ್ಟೆ. ಆದರೆ ಇನ್ನೊಂದೆಡೆ ಛಂದಸ್ಸಿನ ಸಾಹಿತ್ಯ ರಚನೆಗಳೂ ಇವೆ. ಇವನ್ನು ಯಾವುದೇ ಕಷ್ಟವಿಲ್ಲದೆ ಜ್ಞಾಪಕದಲ್ಲಿ ಇಟ್ಟುಕೊಳ್ಳಬಹುದು. ನಮ್ಮ ಕೆಲವು ಮಹಾನ್ ಕವಿಗಳು ಹೀಗೆ ಒಮ್ಮೆ ಕೇಳಿದರೆ ನೇರವಾಗಿ ನೆನಪಿನಕೋಶದಲ್ಲಿ ಅಚ್ಚಳಿಯದೆ ಕೂರಲು ನೆರವಾಗುವಂಥ ಇಂಥ ಲಯಗಳನ್ನೇ ಬಳಸಿಕೊಂಡಿದ್ದಾರೆ. ಇಂಥ ಛಂದಸ್ಸಿನ ಒಳಗಡೆಯೇ ನಮಗೆ ಅಚ್ಚರಿ ಹುಟ್ಟಿಸುವಂತೆ ಅದನ್ನು ನೆನಪಿನಾಳದಿಂದ ತರಬಲ್ಲಂಥ ಕೆಲವು ಅಂಶಗಳೆಲ್ಲ ಮೂಳಭೂತವಾಗಿ ಜನರಾಡುವ ಭಾಷೆಯಲ್ಲೇ ಇವೆ.

ಸಾಮಾನ್ಯವಾಗಿ ಸಾಹಿತಿಗಳೆಲ್ಲ ತುಂಬಾ ಎತ್ತರದ ಸ್ತರದಲ್ಲಿರುತ್ತಾರೆ. ಇದನ್ನೇ ನಾವು ‘ಶಾಸ್ತ್ರಿಯ’ ಎನ್ನುತ್ತೇವೆ. ಇದೇನೇ ಇರಲಿ, ಭಾರತೀಯ ಭಾಷೆಗಳಲ್ಲಿ ಮುಖ್ಯವಾಗಿ ಎರಡು ಧಾರೆಗಳಿವೆ. ಒಂದು ಮಾರ್ಗ, ಇನ್ನೊಂದು ದೇಸಿ. ನಮ್ಮಲ್ಲಿ ಕಾಳಿದಾಸನಂಥ ಮಹಾನ್ ಪ್ರತಿಭೆಯನ್ನು ಬಿಟ್ಟರೆ ಟ್ಯಾಗೋರರು ಬರುವವರೆಗೂ ಇಡೀ ಭಾರತಕ್ಕೆ ಸಲ್ಲುವಂತಹ, ಅನುಕರಿಸಬೇಕೆನ್ನುವಂತಹ ಒಬ್ಬ ‘ಲಿಟೆರರಿ ಫಿಗರ್’(literary figure) ಜನರ ಮನಸ್ಸಿಗೆ ಬರಲಿಲ್ಲ; ಅಂಥವನು ಇದ್ದರೂ ಕಾಣಲಿಲ್ಲ. ಆದರೆ ಇಲ್ಲಿ ಅತ್ಯಂತ ಆಸಕ್ತಿಕರ ವಿಚಾರವೆಂದರೆ, ಹಿಂದಿಯಷ್ಟು ವ್ಯಾಪಕವೂ ಅಲ್ಲದ, ತಮಿಳಿನಷ್ಟು ಪ್ರಾಚೀನವೂ ಅಲ್ಲದ ಬಂಗಾಳಿ ಭಾಷೆಯ ನಮ್ಮಲ್ಲಿನ ಕಾಳಿದಾಸನಿಗೆ ಸಮನಾದ ಪ್ರತಿಭಾವಂತರನ್ನು ಕಾಣುವಂತೆ ಮಾಡಿತು. ಆಗಿನ ದಿನಗಳಲ್ಲಿ ಅತ್ಯಂತ ದಟ್ಟವಾಗಿದ್ದ ರಾಷ್ಟ್ರೀಯಭಾವನೆಯ ಚೈತನ್ಯ ಇದಕ್ಕೆ ಕಾರಣ. ಆದರೆ ಸ್ವಾತಂತ್ರ್ಯ ಬಂದ ನಂತರ ನಾವು ಮತ್ತೆ ಐರೋಪ್ಯ ಕೇಂದ್ರಿತರಾಗಿದ್ದು, ಭಾರತೀಯ ಭಾಷೆಯೊಂದು ಇಡೀ ದೇಶಕ್ಕೆ ಸಲ್ಲುವಂಥ ಸಾಹಿತಿಯೊಬ್ಬನನ್ನು ಹುಟ್ಟುಹಾಕಬಲ್ಲದೆಂದು ಚಿಂತನೆಯನ್ನೂ ಮಾಡದಂತಾಗಿದ್ದೇವೆ. ಬದಲಿಗೆ ನಾವು ನಮಗೆ ಬೇಕಾದ ಸಾಹಿತಿಗಳ ಮಾದರಿಗಳನ್ನು ಯೂರೋಪ್ ನಿಂದ ಕಡ ಪಡೆಯುತ್ತಿದ್ದೇವೆ. ಈ ಹಂತದಲ್ಲಿ ನನಗೆ ‘ಏಕತೆ ಮತ್ತು ವೈವಿಧ್ಯತೆ’ ಬಗ್ಗೆ ಕೆಲವು ಮಾತುಗಳನ್ನಾಡಬೇಕು ಎನಿಸುತ್ತಿದೆ.

ಅತ್ಯಂತ ದೊಡ್ಡ ತತ್ವಜ್ಞಾನಿಗಳಾದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಒಂದು ಸಲ ಸಾಹಿತ್ಯ ಅಕಾಡೆಮಿಗೆ ಬಂದಿದ್ದರು. ಆಗ ಅವರು, ‘ಎಲ್ಲಾ ಇಪ್ಪತ್ತೆರಡು ಭಾರತೀಯ ಭಾಷೆಗಳನ್ನೂ ಅಕಾಡೆಮಿ ಪ್ರತಿನಿಧಿಸುತ್ತದೆ. ಹೀಗಾಗಿ ಅನೇಕ ಭಾಷೆಗಳಲ್ಲಿ ಸಾಹಿತ್ಯ ರಚನೆಯಾದರೂ, ಅಂತಿಮವಾಗಿ ಭಾರತೀಯ ಸಾಹಿತ್ಯವೆಂದರೆ ಒಂದೇ’ ಎಂದರು. ‘ಏಕತೆ ಮತ್ತು ವೈವಿಧ್ಯತೆ’ ಎಂಬ ನುಡಿಗಟ್ಟಿನ ಬಳಕೆ ಈಗ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಂತೂ ಕ್ಲೀಷೆಯಾಗಿಬಿಟ್ಟಿದೆ. ನಿಜ ಹೇಳಬೇಕೆಂದರೆ, ಈ ನುಡಿಗಟ್ಟನ್ನು ಬಳಸಲು ನನಗೇ ನಾಚಿಕೆಯಾಗುತ್ತದೆ. ಆದರೆ ಸಾಹಿತ್ಯವೆನ್ನುವುದು ಒಂದು ನಿರಂತರ ಪ್ರಕ್ರಿಯೆ ಎಂದುಕೊಂಡಾಗ‘ಏಕತೆ ಮತ್ತು ವೈವಿಧ್ಯತೆ’ ಎಂಬ ಮಾತನ್ನು ಸಾಹಿತ್ಯಕ್ಕೆ ಅನ್ವಯಿಸಬಹುದು ಎಂದು ನನಗೆ ತತ್ ಕ್ಷಣವೇ ಮನದಟ್ಟಾಯಿತು.

ಆದರೆ ಭಾರತದಲ್ಲಿ ಏಕತೆಗೆ ವಿಪರೀತ ಒತ್ತು ಕೊಟ್ಟರೆ ಮತ್ತು ‘ಇರುವುದೇನಿದ್ದರೂ ಏಕೈಕ ಭಾರತ ’ ಎಂದು ಪ್ರತಿಪಾದಿಸುತ್ತಿದ್ದರೆ ಇಲ್ಲಿರುವ ವೈವಿಧ್ಯತೆ ನಮಗೆ ಕಾಣಲು ಶುರುವಾಗುತ್ತದೆ. ಇದು ರಾಜಕೀಯವಾಗಿಯೂ ಸತ್ಯ. ಉದಾಹರಣೆಗೆ ಹಿಂದೆ ಇಂದಿರಾ ಗಾಂಧಿ ಅತ್ಯಂತ ಪ್ರಬಲಾವದ ಕೇಂದ್ರ ಸರಕಾರ ಇರಬೇಕೆಂದು ಬಯಸಿದರು. ಆದರೆ ಅವರು ಈ ವಾದಕ್ಕೆ ಅಂಟಿಕೊಂಡ ಕಾಲದಲ್ಲೇ ಅಸ್ಸಾಂ, ಪಂಜಾಬ್ ಮತ್ತು ಕಾಶ್ಮೀರಗಳೆಲ್ಲೆಲ್ಲ ಸಮಸ್ಯೆಗಳು ಶುರುವಾದವು. ಇನ್ನೊಂದು ಘಟ್ಟದಲ್ಲಿ, ತಮಿಳು ಭಾಷೆಯ ಹಿಂದಿಗಿಂತ ಪ್ರಾಚೀನವಾದುದು. ಆದ್ದರಿಂದ ಹಿಂದಿಯನ್ನು ತಮಿಳಿನ ಮೇಲೆ ಹೇರಬಾರದು ಎಂದು ವಾದಿಸಲಾಯಿತು. ಇದನ್ನು ಹೀಗೆಯೇ ಬಂಗಾಳಿ ಅಥವಾ ಮರಾಠಿಗಳಿಗೂ ಹಿಗ್ಗಿಸಬಹುದು. ಆದ್ದರಿಂದ ಯಾರಾದರೊಬ್ಬರು ಏಕತೆಯ ಬಗ್ಗೆ ವಿಪರೀತ ಮಾತಾಡಲು ಶುರು ಮಾಡಿದಾಗಲೆಲ್ಲ ಇಲ್ಲಿರುವ ವೈವಿಧ್ಯಗಳು ಕಾಣತೊಡಗುತ್ತವೆ. ಇನ್ನೊಂದೆಡೆ ‘ಭಾರತೀಯರೆಲ್ಲ ಭಿನ್ನ ಭಿನ್ನ. ಇಡೀ ಭಾರತೀಯರಲ್ಲಿ ಸಾಮಾನ್ಯವೆನ್ನುವಂಥ ಒಂದೇ ಒಂದು ಅಂಶವೂ ಇಲ್ಲ ಎಂದು ವಾದಿಸಲು ಆರಂಭಿಸಿದರೆ ನನಗೆ ಕಿರಿಕಿರಿಯಾಗುತ್ತದೆ. ಅದೇ ಕ್ಷಣದಲ್ಲಿ ನನಗೆ, ಒಬ್ಬ ಬಂಗಾಳಿ ಮತ್ತು ನನ್ನ ನಡುವೆ ಹಾಗೂ ಉಳಿದವರೆಲ್ಲರ ನಡುವೆ ಸಾಮಾನ್ಯವಾದ್ದೊಂದು ಅಂಶ ಇದ್ದೇ ಇದೆ’ ಎಂದಸು ಅನಿಸಲು ಶುರುವಾಗುತ್ತದೆ. ನಾವೆಲ್ಲರೂ ಭಾರತೀಯರು ಒಟ್ಟಿನಲ್ಲಿ ಏಕತೆ- ವೈವಿಧ್ಯತೆ ಎನ್ನುವುದು ಸತ್ಯವಾಗಿಯೂ ವಾಸ್ತವಿಕತೆಯಲ್ಲಿ ಅನಾವರಣಗೊಳ್ಳುತ್ತದೆ. ಅಂದಹಾಗೆ ಕಳೆದ ಐವತ್ತು ವರ್ಷಗಳಿಂದಲೂ ನಾವೆಲ್ಲ ಈ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ನಾಟಕವನ್ನು ನೋಡುತ್ತಲೇ ಇದ್ದೇವೆ.

ವೈವಿಧ್ಯತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಳೆದ ಐವತ್ತು ವರ್ಷಗಳಲ್ಲಿ ವಸಾಹತೋತ್ತರ ಸಂದರ್ಭವನ್ನು ಬೇರು ಮಟ್ಟದಲ್ಲಿ ಅರ್ಥ ಮಾಡಿಕೊಳ್ಳುವ ಅನೇಕ ಯತ್ನಗಳು ನಡೆದಿವೆ. ವಿಭಿನ್ನ ದೃಷ್ಟಿಕೋನಗಳಿಂದ ನಾವು ಇದನ್ನು ನೋಡಲು ಯತ್ನಿಸಿದ್ದೇವೆ; ನಂತರ ಇದನ್ನು ಕೈಬಿಟ್ಟಿದ್ದೇವೆ. ಸಮುದಾಯಗಳನ್ನು ಕಲ್ಪಿಸಿ ಕೊಂಡಿದ್ದೇವೆ; ನಂತರ ವಿಸರ್ಜಿಸಿದ್ದೇವೆ. ಸಂಪ್ರದಾಯಗಳ ವಿಷಯದಲ್ಲೂ ಹೀಗೆಯೇ ಆಗಿದೆ. ಒಟ್ಟಿನಲ್ಲಿ ಏಕತೆ ಮತ್ತು ವೈವಿಧ್ಯತೆ ತತ್ವಗಳನ್ನು ಸರದಿಯ ಪ್ರಕಾರ ಪರ್ಯಾಯವಾಗಿ ನೋಡುತ್ತಲೇ ಬಂದಿದ್ದೇವೆ. ಇಷ್ಟೇ ಅಲ್ಲ, ಪಶ್ಚಿಮದ ಉಪಸ್ಥಿತಿಯ ಅನುಮೋದನೆ ಮತ್ತು ನಿರಾಕರಣೆಗಳೂ ಇಲ್ಲಿ ಜರುಗಿದೆ. ಯೂರೋಪಿನ ಕ್ರಾಂತಿಕಾರಿ ಕಲ್ಪನೆಗಳನ್ನು ನಮ್ಮ ದೇಶಿಯ ಮೂಲಗಳಿಗೆ, ನಮ್ಮ ಪರಂಪರೆಯ ಶಾಸ್ತ್ರಿಯ, ಜಾನಪದೀಯ ಸಂಗತಿಗಳಿಗೆ ಹೊಂದುವಂತೆ ರೂಪಾಂತರಿಸಿಕೊಂಡಿದ್ದೇವೆ. ಒಟ್ಟಿನಲಲ್‌ಇ ವಿಕೇಂದ್ರೀಕರಣ ಇಲ್ಲಿ ದೊಡ್ಡ ಸ್ವರೂಪದಲ್ಲೇ ನಡೆಯುತ್ತಿದೆ.

ಸೃಜನಶೀಲತೆ ಎನ್ನುವುದು ಭಾರತದಲ್ಲಿ ಹೊಸ ಸ್ವರೂಪದಲ್ಲಿ ಅನಾವರಣಗೊಳ್ಳುತ್ತಿದೆ. ನಮ್ಮ ಸಾಹಿತ್ಯ ಸಂಕಥನಗಳಲ್ಲೆಲ್ಲ ಈಗ ಅಗತ್ಯವಾದ ಸಂಪ್ರದಾಯ ವಿರೋಧಿ ಧೋರಣೆ (ಅವೈದಿಕ) ಎದ್ದುಕಾಣುತ್ತಿದೆ. ಸಾಂಸ್ಕೃತಿಕ ವೈರುದ್ಧಗಳು ಮತ್ತು ಸಾಂಸ್ಕೃತಿಕ ಸಂಕರಗಳೊಂದಿಗೆ ಬದುಕಿದ ಸಮುದಾಯಗಳ ಅಸ್ಮಿತೆಯಕಲ್ಪನೆಯೂ ಇಲ್ಲಿದೆ. ಕಾಲ ಕಳೆದಂತೆ ಈ ಸಂಕರ ಗುಣ ಭಾಷೆಗಳನ್ನೂ ಪ್ರವೇಶಿಸಿದೆ. ಕನ್ನಡದಲ್ಲಂತೂ ನೂರಾರು ಪೋರ್ಚುಗೀಸ್ ಮತ್ತು ಅರಬ್ ಶಬ್ದಗಳಿವೆ. ಆದರೆ ಕನ್ನಡ ಮಾತನಾಡುವ ಬಹುತೇಕ ಮಂದಿಗೆ ತಾವು ಹೀಗೆ ಬೇರೆಯ ಭಾಷೆಗಳ ಶಬ್ದಗಳನ್ನು ಬಳಸುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಭಾರತೀಯ ಭಾಷೆಗಳು ಇರುವುದೇ ಹೀಗೆ. ಅಂದಹಾಗೆ ತತ್ವಜ್ಞಾನಿಗಳು, ಏನನ್ನೂ ಬೇಕಾದರೂ ಜೀರ್ಣಿಸಿಕೊಳ್ಳವಂಥ / ದಕ್ಕಿಸಿಕೊಳ್ಳುವಂಥ ಜೀರ್ಣಾಗ್ನಿ ನಮ್ಮ ಆತ್ಮದಲ್ಲಿದೆ ಎಂದು ಹೇಳುತ್ತಿರುತ್ತಾರೆ. ನನ್ನ ಪ್ರಕಾರ ನಮ್ಮ ಈ ಭಾಷೆಗಳೇ ಭಾರತದ ಬಹುದೊಡ್ಡ ಜೀರ್ಣಾಗ್ನಿಗಳು. ಯಾಕೆಂದರೆ, ಈ ಭಾಷೆಗಳು ಈಗ ಯೂರೋಪನ್ನು ಜೀರ್ಣಿಸಿಕೊಳ್ಳುತ್ತಿರುವಂತೆಯೇ ಹಿಂದೆ ಒಂದು ಕಾಲದಲ್ಲಿ ಸಂಸ್ಕೃತವನ್ನು ಜೀರ್ಣಿಸಿಕೊಂಡವು. ಭಾರತೀಯ ಭಾಷೆಗಳ ಚರಿತ್ರೆಯನ್ನು ನೋಡಿದರೆ ಇವೆಲ್ಲ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಭಾಷೆಯನ್ನು ಹೀಗೆಯೇ ತಮ್ಮದಾಗಿಸಿಕೊಂಡಿವೆ.

ಭಾರತೀಯ ಭಾಷೆಗಳ ಬಹುದೊಡ್ಡ ಮತ್ತು ಹೊಸ ವಿದ್ಯಮಾನವೆಂದರೆ ದಲಿತ ಸಾಹಿತ್ಯ. ಈ ವರ್ಗದಿಂದ ಬಂದವರು ಮೊದಲು ಮರಾಠಿಯಲ್ಲಿ, ನಂತರ ಗುಜರಾತಿಯಲ್ಲಿ ಬರೆದರು. ಈಗ ಕನ್ನಡ, ತೆಲುಗು ಮತ್ತು ತಮಿಳುಗಳಲ್ಲೆಲ್ಲ ದಲಿತರು ಬರೆಯುತ್ತಿದ್ದಾರೆ. ದಲಿತರು ನಿರಂತರವಾಗಿ ಮೂವತ್ತು ಶತಮಾನಗಳಷ್ಟು ದೀರ್ಘಕಾಲ ಅನುಭವಿಸಿದ ವೇದನೆ, ಮೌನವೇ ಪ್ರಧಾನವಾಗಿರುವ ಅವರ ಸಂಸ್ಕೃತಿಗಳೆಲ್ಲ ಅವರ ಸಿಟ್ಟಿನ ಹಿಂದಿದೆ. ಕೆಳಸ್ತರದ ಪ್ರತಿಭಟನೆಯ ದನಿಗಳು ಇವರ ಸಾಹಿತ್ಯದಲ್ಲಿದೆ. ಒಟ್ಟಿನಲ್ಲಿ ಹೊಸ ಬಗೆಯ ಅನುಭವಗಳನ್ನು ಹಿಡಿದಿಡುವ ಮೂಲಕ ದಲಿತರು ಇಡೀ ಸಾಹಿತ್ಯದ ನಕ್ಷೆಯನ್ನೇ ಪುನರ್ ರೂಪಿಸಲು ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲದೆ ಸಾಹಿತ್ಯದಲ್ಲಿ ಇದುವರೆಗೂ ಬಳಸದಿದ್ದ ಹೊಸ ಬಗೆಯ ಶೈಲಿ, ಪದಗಳು, ನುಡಿಗಟ್ಟುಗಳು, ಗುಣಗಳನ್ನೆಲ್ಲ ಬಳಸುವ ಮೂಲಕ ತಮ್ಮತಮ್ಮ ಭಾಷೆಗಳಿಗೂ ಇವರೆಲ್ಲ ಕಸುವು/ ಜೀವಕಳೆ ತುಂಬಿದ್ದಾರೆ.

ಭಾರತೀಯ ಭಾಷೆಗಳ ಒಂದು ಪ್ರವೃತ್ತಿಯೆಂದರೆ, ಇಲ್ಲಿ ಸಂಸ್ಕೃತಕ್ಕೆ ಹತ್ತಿರವಾದುದನ್ನೆಲ್ಲ ಮೇಲ್ಜಾತಿಗಳು ಬಳಸಿವೆ. ಆದರೆ ಒಂದು ಹೊಸ ಗುಂಪು/ಜಾತಿ/ಸಮುದಾಯ ಸಾಹಿತ್ಯದ ಬಗ್ಗೆ ಮಾತನಾಡಲು ಶುರು ಮಾಡಿತೆಂದರೆ, ಅಲ್ಲಿವರೆಗೂ ಸಾಹಿತ್ಯದ ಸಂದರ್ಭದಲ್ಲಿ ಬಳಸದೆ ಇದ್ದ ಪದಗಳೆಲ್ಲ ಸಾಹಿತ್ಯ ಪಠ್ಯದಲ್ಲಿ ಪ್ರವೇಶ ಪಡೆಯುತ್ತವೆ. ಇದರ ಬಗ್ಗೆ ನಾನು ಹೇಳಬೇಕಾದ್ದು ಇನ್ನೂ ಇದೆ. ಭಾರತದಲ್ಲಿ ದಲಿತ ಸಾಹಿತ್ಯದ ಜತೆಗೆ ಅತ್ಯಂತ ಬದ್ಧತೆಯುಳ್ಳ ಮಹಿಳಾ ಸಾಹಿತ್ಯವೂ ಇದೆ. ನಮ್ಮ ಅತ್ಯಂತ ದೊಡ್ಡ ಲೇಖಕಿಯೆಂದರೆ ಲಲಿತಾಂಬಿಕಾ ಅಂತರ್ಜನಂ, ಮಹಾದೇವಿ ವರ್ಮ, ಮಹಾಶ್ವೇತಾದೇವಿ ಮತ್ತು ಕನ್ನಡದ ವೈದೇಹಿ. ಇವರೆಲ್ಲ ಪೂಜ್ಞಾಪೂರ್ವಕವಾಗಿ ಕೇವಲ ಸ್ತ್ರೀವಾದಿ ಲೇಖಕಿಯರಲ್ಲ ಎನ್ನುವುದು ಮುಖ್ಯ.

*

(ಒರಿಸ್ಸಾದ ರಾಜಧಾನಿಯಾದ ಭುವನೆಶ್ವರದಲ್ಲಿರುವ ‘ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್’ನಲ್ಲಿ ೨೦೦೬ರ ಸೆಪ್ಟಂಬರ್ ೩ರಂದು ಮಾಡಿದ ಭಾಷಣ ಸಾರಾಂಶ. ಕನ್ನಡಕ್ಕೆಃ ಬಿ.ಎಸ್.ಜಯಪ್ರಕಾಶ ನಾರಾಯಣ)