ಸಸ್ಯಹಾರಿಯೂ, ಅಹಿಂಸೆಯ ಪ್ರತಿಪಾದಕರೂ ಆಗಿದ್ದ ಕಳೆದ ಶತಮಾನದ ಮೋಹನ ದಾಸ ಗಾಂಧಿ ಮನುಷ್ಯರ ಹೃದಯ ಪರಿವರ್ತನೆ ಕೂಡ ಸಾಧ್ಯ ಎಂದು ನಂಬಿದ್ದಂಥವರು. ಇಂಥ ಗಾಂಧೀಜಿಯನ್ನು ಬಹಳ ಹಿಂದೆ ಪತ್ರಕರ್ತನೊಬ್ಬ ‘ಪಾಶ್ಚಾತ್ಯ ದೇಶಗಳ ಆಧುನಿಕ ನಾಗರಿಕತೆ ಬಗ್ಗೆ ನಿಮಗೇನನಿಸುತ್ತೆ?’ ಎಂದು ಪ್ರಶ್ನಿಸಿದ್ದ. ಅದಕ್ಕೆ ಗಾಂಧೀಜಿ ಕುಶಾಲಿನ ವ್ಯಂಗ್ಯದಲ್ಲಿ ‘ಇದೊಂದು ಒಳ್ಳೆಯ ಕಲ್ಪನೆ….’ ಎಂದು ಉತ್ತರಿಸಿದ್ದರು. ಆಧುನಿಕ ನಾಗರಿಕತೆಯ ಭ್ರಮೆಯಲ್ಲಿ ನಾವು ರೂಢಿ ಮಾಡಿಕೊಂಡಿರುವ ಅರ್ಥಹೀನ ಗ್ರಾಹಕ ಸಂಸ್ಕೃತಿ ಮತ್ತು ಅಭಿವೃದ್ಧಿಯ ಕಲ್ಪನೆಯಿಂದಾಗಿ ಇಡೀ ಜಗತ್ತೇ ಸರ್ವನಾಶದ ಅಂಚಿಗೆ ಸುಮಾರು ಮೂರುದಶಕಗಳ ಹಿಂದೆ ಬಂದನಂತರ, ಈವರೆಗೂ, ಗಾಂಧೀಜಿಯ ಈ ಮಾತುಗಳನ್ನು ನಾವು ಮತ್ತೆ ಮತ್ತೆ ನೆನೆದು ಅಪಾಯದಿಂದ ಪಾರಾಗುವ ಉಪಾಯಗಳನ್ನು ಹುಡುಕಿಕೊಳ್ಳಬೇಕಾಗಿ ಬಂದಿದೆ.

ಗಾಂಧೀಜಿಯ ಭಾರತ ಮತ್ತು ಮಾವೋನ ಚೀನಾಗಳು ಕೂಡ ಅಮೆರಿಕದ ನಾಗರಿಕತೆಯನ್ನು ಕುರುಡಾಗಿ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅನುಕರಿಸತೊಡಗಿ, ಜಾಗತಿಕ ಉಷ್ಣಾಂಶ ಏರಿಕೆ ವಿರುದ್ಧ ಹೊರಬೀಳತ್ತಿರುವ ಎಚ್ಚರಿಕೆಗಳನ್ನೆಲ್ಲ ಕಡೆಗಣಸಿದ್ದವು. ಆ ಕಾಲದ ಕೊನೆಯ ಘಟ್ಟದಲ್ಲಿ ನಮ್ಮಲ್ಲಿ ಹಿಂದೂ ಮೂಲಭೂತವಾದ ಮತ್ತು ಮುಸ್ಲಿಂ ಮೂಲಭೂತವಾದ ಅಪಾಯಕಾರಿಗಳಾಗಿ ಕಂಡಿದ್ದವು ಎನ್ನುವುದು ನಿಜ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಆಳುವ ಶಕ್ತಿಗಳ ಒಪ್ಪಿಗೆಯನ್ನು ದಕ್ಕಿಸಿಕೊಂಡಿದ್ದ ಇನ್ನೊಂದು ಮೂಲಭೂತವಾದವಿತ್ತು. ಅದು ಮಾರುಕಟ್ಟೆ ಮೂಲಭೂತವಾದ. ಇದರ ಪರಿಣಾಮವಾಗಿ ಭಾರತದಲ್ಲಿ ಒಂದು ಜೀವನಕ್ರಮವೇ ಆಗಿದ್ದ ಮತ್ತು ನಮ್ಮ ಸಾಂಸ್ಕೃತಿಕ ನೆನಪುಗಳನ್ನು ಜೀವಂತವಾಗಿ ಇಟ್ಟಿದ್ದ ಕೃಷಿ ಉದಾಸೀನಕ್ಕೆ ಈಡಾಗಿದ್ದು, ಅದನ್ನು ವ್ಯವಸ್ಥವಾಗಿ ಕೊಲ್ಲಲಾಗಿತ್ತು. ಅದರ ಪರಿಣಾಮವಾಗಿ ಎಲ್ಲೆಡೆಯೂ ವಿಶೇಷ ಆರ್ಥಿಕ ವಲಯಗಳು (ಎಸ್‌ಇಜೆಡ್) ತಲೆಯೆತ್ತತೊಡಗಿದವು. ಕಮ್ಯುನಿಸ್ಟರೂ ಇದರಲ್ಲಿ ಭಾಗಿಗಳಾದರು.

ಈ ಕಾಲದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರ ಕೈಗೆಟುಕುವಂತಿರುವ ಆಧುನಿಕ ಔಷಧಿಗಳು ಕೇವಲ ಆಯುಸ್ಸನ್ನು ಮಾತ್ರ ಹೆಚ್ಚಿಸುತ್ತೆದ್ದವೇ ವಿನಃ ಬದುಕಿನ ಗುಣಮಟ್ಟವನ್ನು ಅವು ಹೆಚ್ಚಿಸುತ್ತಲೇ ಇರಲಿಲ್ಲ. ಸುಮಾರು ೩೦ ವರ್ಷಗಳಲ್ಲಿ-ಅಂದರೆ ೨೦೩೭ರ ಹೊತ್ತಿಗೆ-ಜಗತ್ತಿನ ಅತ್ಯಂತ ಶ್ರೀಮಂತ ವರ್ಗದಲ್ಲಿ ಯುವಕರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಕಾರ್ಪೂರೇಟ್ ಅಧೀನದ ಜಮೀನುಗಳಲ್ಲಿ ರಸಗೊಬ್ಬರ ಸುರಿದು ಬೆಳೆದ ಬೆಳೆಗಳಲ್ಲಿ ಯಾವ ರುಚಿಯೂ ಇರುತ್ತಿರಲಿಲ್ಲ. ಕಲ್ಲಿದ್ದಲು ಮತ್ತು ಪರಮಾಣು ಬಳಸಿ ಉತ್ಪಾದಿಸುವ ವಿದ್ಯುತ್ ನಿಂದಾಗಿ ಜನ ಬಳಸುವ, ಬಳಸಬಾರದ ವಸ್ತುಗಳೆಲ್ಲವೂ ಹೇರಳವಾಗಿ ಉತ್ಪಾದನೆಯಾಗತೊಡಗಿದ್ದವು. ಇದರ ಫಲವಾಗಿ ಪ್ರತಿಯೊಂದು ನಗರವೂ ಇನ್ನೊಂದು ನಗರದ ಪಡಿಯಚ್ಚಿನಂತೆಯೇ ಕಾಣಲು ಶುರುವಾಗಿತ್ತು. ಇಷ್ಟೇ ಅಲ್ಲ, ತಿನ್ನುವ ಆಹಾರ ಕೂಡ ಜಗತ್ತಿನೆಲ್ಲೆಡೆ ಇನ್ನೊಬ್ಬರು ತಿನ್ನುತ್ತಿರುವ ಪದಾರ್ಥದಂತೆಯೇ ಗೋಚರಿಸಲು ಆರಂಭವಾಗತೊಡಗಿತ್ತು.

ಹೀಗಾಗಿ ಜೀವನದಲ್ಲಿ ದಣಿವು ಮತ್ತು ಏಕಾತಾನತೆ ಕಂಡುಬಂದಿತು. ಪರಿಣಾಮವಾಗಿ ಶಕ್ತರಾಷ್ಟ್ರಗಳ ಕಲ್ಪನೆ ಮತ್ತು ಭೂಮಿಯೊಂದು ಅಕ್ಷಯಪಾತ್ರೆ ಎಂಬ ಆಧುನಿಕ ನಾಗರಿಕತೆಯ ಮಾನವಕೇಂದ್ರಿತ ಮೂಢನಂಬಿಕೆಯನ್ನು ಪುನರ್ ಪರಿಶೀಲಿಸಬೇಕೆಂಬ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅಗತ್ಯ ಸೃಷ್ಟಿಯಾಯಿತು. ಇದರ ಫಲವಾಗಿ ಭಾರತ ೩೦ ವರ್ಷಗಳ ಹಿಂದೆಯೇ ವಿಕೇಂದ್ರೀಕೃತ ಗ್ರಾಮ ಗಣರಾಜ್ಯಗಳು ಅಗತ್ಯವೆಂಬ ಗಾಂಧೀಜಿಯ ಕನಸನ್ನು ಅರಿತುಕೊಂಡಿತು. ಇಂಥ ಗ್ರಾಮ ಗಣರಾಜ್ಯಗಳಲ್ಲಿ ಕೇಂದ್ರೀಕೃತ ಅಧಿಕಾರವಾಗಲಿ, ರಕ್ಷಣೆಗೆ ಸೇನೆಯಾಗಲಿ ಬೇಕಾಗಿರಲಿಲ್ಲ. ಇಡೀ ದೇಶ ಮುಳ್ಳುಹಂದಿಯಂತಿರುವಾಗ ಅದರ ಮೇಲೆ ಯಾರು ಎರಗಲು ಮುಂದಾದಾರು?

ಆದರೆ ಇದೇನೂ ಸುಲಭವಾದ ಪರ್ಯಾಯವಾಗಿರಲಿಲ್ಲ. ಈ ಗ್ರಾಮ ಗಣ ರಾಜ್ಯಗಳನ್ನು ಪರಸ್ಪರ ಅವಲಂಬಿಗಳನ್ನಾಗಿ ಮಾಡಲು ಮತ್ತು ಮೂಲ ಅಗತ್ಯಗಳಾದ ಆಹಾರ ಮತ್ತು ಬಟ್ಟೆಗಳಂಥ ವಿಷಯಗಳಲ್ಲಿ ಸ್ವಾಲಂಬಿಗಳನ್ನಾಗಿ ಮಾಡಲು ನಾವು ಇನ್ನೂ ಹೆಣಗಾಡುತ್ತಿದ್ದೇವೆ. ಆದರೆ ಪುಣ್ಯವಶಾತ್ ಭಾರತದಲ್ಲಿರುವ ಬಡವರು ಇನ್ನೂ ಸ್ಥಳೀಯವಾಗಿ ಸಿಕ್ಕುವ ವಸ್ತುಗಳಿಂದಲೇ ಹೊಟ್ಟೆಪಾಡಿಗೆ ಬೇಕಾದ ಆಹಾರ ಸಿದ್ಧಮಾಡಿಕೊಳ್ಳುವ ಬಗೆಬಗೆಉ ವಿದ್ಯೆಗಳನ್ನು ಕಾಪಾಡಿಕೊಂಡಿದ್ದಾರೆ. ಅಲ್ಲದೆ ೩೦ ವರ್ಷಗಳ ಹಿಂದೆ ನಮ್ಮ ಪುನಶ್ಚೇತನ ಪ್ರಕ್ರಿಯೆ ಆರಂಭವಾದಾಗ ಇವಕ್ಕೆಲ್ಲ ಮತ್ತೆ ಜೀವ ತುಂಬಲಾಯಿತು. ಇನ್ನೊಂದೆಡೆ ದೀರ್ಘಾಯುಸ್ಸಿಗಿಂತ ಜೀವನದ ಗುಣಮಟ್ಟವೇ ಮುಖ್ಯವೆಂಬುದು ಗೊತ್ತಾಯಿತು. ಹೀಗಾಗಿ ಆಧುನಿಕ ಔಷದೋಪಚಾರಗಳು ಬದಲಾವಣೆಗೆ ಒಳಗಾದವು. ಇವೆಲ್ಲಕ್ಕಿಂತ ಹೆಚ್ಚಾಗಿ ೨೦೬೭ರ ಹೊತ್ತಿಗೆ ವಿಜ್ಞಾನವು ಆಯುಧ ಉತ್ಪನ್ನದ ಗುರಿಯ ಎಲ್ಲ ರಾಷ್ಟ್ರಶಕ್ತಿಗಳ ಅಧೀನದಿಂದಲೂ, ನಿರಂತರ ಅಭಿವೃದ್ಧಿಯ ಕನಸಿನ ಟೆಕ್ನಾಲಜಿಯಯಿಂದಲೂ ಹೊರಬಂದು ಸತ್ಯದ ಶೋಧನೆಯಲ್ಲಷ್ಟೆ ತಲ್ಲೀನವಾಗಲಿದೆ ಎಂದು ಈಚೆಗೆ ಅನ್ನಿಸತೊಡಗಿದೆ. ತ್ಪರಿಣಾಮವಾಗಿ, ಗಾಂಧೀಜಿ ಮತ್ತು ಐನ್ ಸ್ಟೀನ್ ಇಬ್ಬರೂ ತಮ್ಮ ಚೈತನ್ಯದ ಮೂಲಕ ಜೀವಂತವಾಗಿಯೇ ಇದ್ದಾರೆ.

*

(ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ೧೫ನೆಯ ಆಗಸ್ಟ್ ೦೭ರಂದು ಪ್ರಕಟವಾದ ಲೇಖನ. ಕನ್ನಡಕ್ಕೆಃ ಬಿ.ಎಸ್. ಜಯಪ್ರಕಾಶ ನಾರಾಯಣ)