ಇಲ್ಲಿ ಬಂದ ಕೂಡಲೆ ನನಗೆ ನೆನಪಾಗುವುದು ಮುರಾರಿ ಬಲ್ಲಾಳ್. ಯಾಕೆಂದರೆ ಅವರು ನಮ್ಮನ್ನು ಈ ಹಾಲಿನಲ್ಲಿ ಈ ರೀತಿ ಕೂರಿಸಿ ಎಷ್ಟೋ ಸಭೆಗಳನ್ನು ಮಾಡಿದ್ದಾರೆ. ನನಗೆ ಇಲ್ಲಿರುವ ಬಹಳ ಜನ ಗೊತ್ತಾಗಿದ್ದು ಮುರಾರಿ ಬಲ್ಲಾಳರಿಂದ. ಅದಕ್ಕಿಂತ ಹಿಂದೆ ಕು. ಶಿ. ಹರಿದಾಸ ಭಟ್‌ರಿಂದ. ಅವರನ್ನು ಖಂಡಿತ ನೆನಯಬೇಕು. ನನ್ನನ್ನು ಉಡುಪಿಗೆ ಕರೆದುಕೊಂಡು ಬಂದವರು ಅವರು. ಇದೇ ಊರಿನವರು ನನ್ನ ಪೂರ್ವಿಕರು. ಆದರೆ ನಿಜದ ನನ್ನ ಉಡುಪಿಗೆ ಕರೆದುಕೊಂಡು ಬಂದವರು ಇವರು. ಇವರಿಬ್ಬರೂ ಪೈಗಳ ಸಹಾಯ ಪಡೆದು, ಉಡುಪಿಗೆ ಉಳಿದ ಭಾರತದ ಜೊತೆ ಸಂಬಂಧ ಆಗುವಂತೆ ಮಾಡಿದರು. ಇಲ್ಲಿ ಭಿನ್ನ ವಿಚಾರಗಳಿಗೆ ಅವಕಾಶ ಇರುವ ಹಾಗೆ ಮಾಡಿದರು. ಇಲ್ಲಿ ಸಭೆಯಲ್ಲಿ ನಾಲ್ಕು ಜನ ಮಾತನಾಡಿದರೆ ನಾಲ್ಕು ತರಹ ಮಾತಾಡುತ್ತಿದ್ದರು. ಆದರೆ ಒಬ್ಬರ ಮಾತನ್ನು ಇನ್ನೊಬ್ಬರು ಕೇಳುತ್ತಾ ಇದ್ದರು. ಚರ್ಚೆ ಆಗುತ್ತಾ ಇತ್ತು. ಕ್ರಮೇಣ ಅಂತಹ ಕಾಲವೇ ನಶಿಸಿ ಹೋಗಿದ್ದುದರಿಂದ ಇಲ್ಲಿ ‘ಗಾಂಧಿ ಅಧ್ಯಯನ ಪೀಠ’ ಪ್ರಾರಂಭ ಮಾಡಿದ್ದು ಸಂತಸದ ವಿಚಾರ. ನನಗೆ ಆಶ್ಚರ್ಯ ಆಯಿತು ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಗಾಂಧೀ ಅಧ್ಯಯನ ಪೀಠ ಆರಂಭ ಮಾಡುವುದಕ್ಕೆ ಇಷ್ಟು ವರ್ಷ ಬೇಕಾಯಿತೋ ಅಂತ. ಮತ್ತೆ ನಮಗೆ ಬಹಳ ಪ್ರಿಯರಾದ ಜಯಪ್ರಕಾಶ ಮಾವಿನಕುಳಿಯವರು ಇಲ್ಲಿ ಪ್ರಿನ್ಸಿಪಾಲರಾಗಿ ಬಂದಿರುವುದು ಕೂಡ ಸಂತೋಷವೇ. ಉಡುಪಿ ನಮ್ಮೆಲ್ಲರ ಊರಾಗೇ ಇರುತ್ತದೆ. ನಾನು ಸಾಮಾನ್ಯವಾಗಿ ಎಲ್ಲಿ ಹೋದರೂ ಭಾರತದ ಅನೇಕತೆಗೆ ಉದಾಹರಣೆಯಾಗಿ ಕೊಡುವುದು ಉಡುಪಿ. ಇಲ್ಲಿರುವ ಭಾಷೆಗಳನ್ನು ನೋಡಿ-ನಾನು ಶಿವಳ್ಳಿಯವನು. ಆಶ್ಚರ್ಯ ಏನೆಂದರೆ ಶಿವಳ್ಳಿಯವರೆಲ್ಲ ಮಾಧ್ವರು ಎಂದು ತಿಳಿದಿದ್ದೆ. ಮಧ್ವಾಚಾರ್ಯರು ಶಿವಳ್ಳಿಯವರು. ಆದರೆ ಕೆಲವರು ಸ್ಮಾರ್ತರಾಗಿಯೇ ಉಳಿದವರು. ಮಧ್ವಾಚಾರ್ಯರ ಕಾಲದಲ್ಲಿಯೇ ‘ನೋ’ ಎಂದಿದ್ದರು ಅವರು. ಅದು ಆ ಊರಿನ ಮಹತ್ವ ಎಂದು ತಿಳಿದಿದ್ದೇನೆ.

ಗಾಂಧಿ ಹೇಳಿದ್ದು: My Message is My life. ಪ್ರಾಯಶಃ ಗಾಂಧೀಜಿಯ ಸಮಕಾಲೀನರಾದ ಯಾರಿಗೂ My Message is My Life ಎಂದು ಹೇಳುವುದಕ್ಕಾಗುತ್ತಿರಲಿಲ್ಲ. ಚರ್ಚಿಲ್‌ಗೆ ಆಗುತ್ತಿರಲಿಲ್ಲ. ರೂಸ್‌ವೆಲ್ಟ್‌ಗೂ ಆಗುತ್ತಿರಲಿಲ್ಲ. ಸ್ಟಾಲಿನ್‌ಗಂತೂ My Message is My life ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ವಿಚಿತ್ರವಾದ ವಿಷಯ. ನಮ್ಮ ಕಾಲದ ಮಹಾನಾಯಕರಲ್ಲಿ ಯಾರದ್ದಾದರೂ ಬಯೋಗ್ರಫಿಯೇ ಮುಖ್ಯವಾಗುವುದಾದರೆ, ಅದರಲ್ಲೇ ಅರ್ಥಗಳಿವೆ ಎಂದಾದರೆ ಅದು ಗಾಂಧಿಯವರದು ಮಾತ್ರ.

ಗಾಂಧಿಯವರ ಜೀವನವೇ ಮಾದರಿ. ಇದು ಉಳಿದವರ ವಿಷಯದಲ್ಲಿ ನಿಜವಲ್ಲ. ನಮ್ಮ ವಿಷಯದಲ್ಲಿ ನಿಜವಲ್ಲ. ನಮ್ಮ ಜೀವನವೇ ಬೇರೆ. ನಾವು ಹೇಳುವುದೇ ಬೇರೆ. ಇಂಟೆಲೆಕ್ಚುಯಲ್ಸ್ ಎಂದು ತಿಳಿದುಕೊಂಡಿರುವ ನಾವಂತೂ ‘ಇಂಟೆಲೆಕ್ಷುಯಲ್‌ ಫ್ರೀಡಮ್‌’ ಪಡೆದುಬಿಟ್ಟಿರುತ್ತೇವೆ. ಅದು ತಮ್ಮ ಎಂದು ಹೇಳುತ್ತಿಲ್ಲ. ಅದು ಇಲ್ಲದೇ ಇದ್ದರೆ ವಿಚಾರಕ್ಕೆ ಅವಕಾಶವೇ ಇಲ್ಲ. ನನಗೊಬ್ಬ ಸ್ನೇಹಿತರಿದ್ದಾರೆ, ಮಾರ್ಟಿನ್ ಗ್ರೀನ್ ಎಂದು. ನಾನು ಅವರ ಶಿಷ್ಯನಾಗಿದ್ದೆ, ಬರ್ಮಿಂಗ್‌ಹ್ಯಾಮಿನಲ್ಲಿ. ಗಾಂಧೀ ಬಗ್ಗೆ ನಾನು ಅವರ ಜೊತೆ ಮಾತಾಡುತ್ತಿದ್ದೆ. ಆಮೇಲೆ ಅವರು ಬಹಳ ದೊಡ್ಡ ಜ್ಞಾನಿ ಆಗಿ ಗಾಂಧೀ ಆಂಡ್ ಟಾಲ್ಸ್ಟಾಯ್ಎಂದು ನಾಲ್ಕೈದು ಪುಸ್ತಕ ಬರೆದು ಜಗದ್ವಿಖ್ಯಾತರಾದರು. (ಕಾಮತ್ ಅವರು ನೋಡಿರಬಹುದು) ಒಮ್ಮೆ ಅವರು ಕೇಳಿದರು –‘ಗಾಂಧಿ ಎಲ್ಲ ಸರಿ, ನನಗೆ ಭಯ ಎಂದರೆ There is no place for intellectual life in Gandhi ಅಂತ ಆದುದರಿಂದ intellectual life ಅಂದರೆ to experiment with your own mind. ಅಂದರೆ ಆಗ ನಾವು ಹುಡುಕುವುದು: ವಿಚಾರದ ಒಳಗಿರುವ ತಾರ್ಕಿಕ ಪ್ರಾಮಾಣಿಕತೆ. ಆತ್ಮಕ ಅನುಭವದ ಪ್ರಾಮಾಣಿಕತೆಯನ್ನು ಆಧರಿಸಿ ವಿಚಾರ ಮಾಡಬೇಕಾದ ಒತ್ತಾಯ ಅದಕ್ಕೆ ಇಲ್ಲ. ವಿಚಾರಕ್ಕೊಂದು ತಾರ್ಕಿಕ ಪ್ರಾಮಾಣಿಕತೆ ಇರುತ್ತದೆ. ತರ್ಕದ್ಲಲೇ ಪ್ರಮಾಣವನ್ನು ಪಡೆದಿರುತ್ತದೆ. ಅದನ್ನು ಅನುಸರಿಸಿಕೊಂಡು ಹೋದರೆ ಅದು ಗೇಮ್ ಸಹ ಹೌದು. ಅದು ಆರ್ಟ್‌ ಸಹ ಹೌದು. ಫಿಲಾಸಫಿಯಲ್ಲಿ ಆಟದ ಗುಣ ಇದೆ. ಲೀಲೆಯ ಗುಣ ಇದೆ. ಅದಕ್ಕೂ ಅವಕಾಶ ಇಲ್ಲ ಗಾಂಧಿಯಲ್ಲಿ ಎಂದು ಅನ್ನಿಸಿತ್ತು ಅವರಿಗೆ. ಅಷ್ಟು ಅನ್ನಿಸುವ ಹಾಗೆ ಮಾಡುವುದರಿಂದಲೇ ಅವರು ಈ ಬುದ್ಧಿಜೀವಿಗಳಿಗೆ ಛಾಲೆಂಜ್ ಆದರು. ಇಲ್ಲದೇ ಇದ್ದರೆ ಬುದ್ಧಿಜೀವಿಗಳಿಗೆ ಛಾಲೆಂಜೇ ಇಲ್ಲ.

ಇದೊಂದು ರೀತಿ ಕ್ರಮ, ಅದೊಂದು ರೀತಿ ಕ್ರಮ ಅಂತ ಅವರು ತಮ್ಮ ಸಿಸ್ಟಮ್‌ನಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳುವ ಕ್ರಮವನ್ನು ಧೀಮಂತರು ಹುಡುಕಿರುತ್ತಾರೆ. ನೀವು ಒಂದು ಸಿಸ್ಟಮ್‌ನಲ್ಲಿ ಗಾಂಧಿಯನ್ನು ಇಡಲು ಹೋದರೆ ಅವರು ಅದರಲ್ಲಿ ಸಿಗುವುದೇ ಇಲ್ಲ. ಆ ಸಿಸ್ಟಮ್‌ನಲ್ಲಿ ಸಿಗದೇ ಇರುವುದಕ್ಕೆ ಕಾರಣ ಆತನ ಆಳತೆಗೋಲೇ ವೈಚಾರಿಕತೆಯಲ್ಲಿರುವ ತಾರ್ಕಿಕತೆ ಅಲ್ಲ. ಆ ತಾರ್ಕಿಕತೆಯಲ್ಲಿಮಾತ್ರ ಕಾಣಬಹುದಾದ ಪ್ರಮಾಣಿಕತೆ ಅಲ್ಲ. ತನ್ನ ಸ್ವಂತ ಜೀವನದಲ್ಲಿ ಅನುಷ್ಠಾನಕ್ಕೆ ಎಷ್ಟು ತರುವುದಕ್ಕೆ ಸಾಧ್ಯ ಎನ್ನುವುದರ ಮೇಲೆ ಈ ತಾರ್ಕಿಕ ಪ್ರಮಾಣಿಕತೆ ಅವಲಂಬಿತವಲ್ಲ.

ತಾತ್ಕಾಲಿಕತೆಯಲ್ಲಿ ಸಿಕ್ಕುವ ಪ್ರಮಾಣ ಚಿರಕಾಲದಲ್ಲೂ ಒಂದು ಅಜೆಂಡಾ ಆಗಿ ಉಳಿಯಬೇಕು ಗಾಂಧಿಗೆ. ಅವರಿಗೆ ಮನುಷ್ಯನ ಬಗ್ಗೆ, ಮನುಷ್ಯನ ವರ್ತನೆ ಬಗ್ಗೆ ಹೇಗೆ ಅನ್ನಿಸುತ್ತಿತ್ತು ಎಂದರೆ he said something very wonderful. Human history is not long enough for us to conclude about what human beings potentially are. We have not lived ling enough in history to know what human beings are truly capable of ಅಂತ. ಅಂದರೆ ಗಾಂಧಿಗೆ ಎಷ್ಟು ತಾತ್ಕಾಲಿಕ ಸದ್ಯತನ ಇತ್ತೋ ಅಷ್ಟೇ ಶಾಶ್ವತದ ನೆಲೆಯಲ್ಲೂ ಕೆಲವು ಸಾಧ್ಯತೆಗಳ ಯೋಚನೆ ಇತ್ತು. (ಇದು ಲೆನಿನ್‌ಗೂ ಇರಲಿಲ್ಲ. ಮಾವೋಗೂ ಇರಲಿಲ್ಲ. ಕಾರ್ಲ್‌ಮಾರ್ಕ್ಸ್‌ಗೂ ಇರಲಿಲ್ಲ-ಯಾರಿಗೂ ಇರಲಿಲ್ಲ. ಅಂದರೆ ಅವರ ಚಿಂತನ ಲೋಕದಲ್ಲಿ ಇದ್ದಿರಬಹುದು, existentially ಇರಲಿಲ್ಲ.) ಅಂದರೆ ತನ್ನ ಮೇಲೇ ಮಾಡಿಕೊಂಡ ಎಕ್ಸ್‌ಪೆರಿಮೆಂಟ್ಸ್ ಮೇಲೆ ಗಾಂಧಿ ಸತ್ಯದ ವ್ಯಾಖ್ಯಾನ ಮಾಡುವುದು. ಕೊನೆಗೆ ತಾನು ಬ್ರಹ್ಮಚಾರಿಯಾಗಿ ಉಳಿದಿದ್ದೇನೋ ಇಲ್ಲವೋ ಎಂದು ತಿಳಿಯುವುದಕ್ಕೋಸ್ಕರ ಒಂದು ಹೆಣ್ಣುಮಗಳ ಜೊತೆ ಬೆತ್ತಲೆ ಮಲಗುವತನಕ ಹೋಗಿದ್ದರು ಗಾಂಧಿ. ‘ನೀನು ಮಾಡುತ್ತಿರುವುದು ತಪ್ಪು’ ಎಂದು ಕೃಪಲಾನಿಯಂತಹವರು ಹೇಳಿದಾಗ ಅವರಿಗೆ ತಪ್ಪು ಎಂದು ಗೊತ್ತಾಯಿತು.

ಮುಸ್ಲಿಮರು ತಮ್ಮ ಪ್ರಾಫೆಟ್‌ನ್ನು ದೇವರು ಅಂತ ತಿಳಿಯಬಾರದು ಎಂಬ ಕಾರಣಕ್ಕಾಗಿ ಫ್ರಾಫೆಟ್‌ನ ಹೆಸರು ಹೇಳಿದ ಕೂಡಲೆ ದೇವರ ಕರುಣ ಸದಾ ಅವರ ಮೇಲೆ ಇರಲಿ ಅಂತಾರೆ. ವಂಡರ್‌ಫುಲ್ ಅದು. ಯಾಕೆಂದರೆ ಅವನನ್ನು ದೇವರು ಆಗುವುದಕ್ಕೆ ಬಿಡಬಾರದು. ತಮ್ಮ ಗುರುವನ್ನು ದೇವರು ಆಗುವುದಕ್ಕೆ ಬಿಡಬಾರದು ಎನ್ನುವ ಈ ಹಠ ಇರುವ ಯಾವ ಬೇರೆ ಧರ್ಮವೂ ಪ್ರಪಂಚದಲ್ಲಿ ಇಲ್ಲ. ಗಾಂಧಿಯ ಬಗ್ಗೆ ಕೂಡ ಅದು ನಿಜ. ತಾನು ಕೇವಲ ಮನುಷ್ಯ ಎಂದು ತಿಳಿದು ಕೊನೆಯ ತನಕ ಬದುಕಿದರು ಅವರು. ಕೇವಲ ಮನುಷ್ಯನಾಗಿ ಮಹಾತ್ಮನಾದರು. ಮಹಾತ್ಮಾ ಅಂದ ಕೂಡಲೆ ಅವರು ಕೇವಲ ಮನುಷ್ಯ ಎನ್ನುವುದನ್ನು ಮರೆಯಬಾರದು. ಕೊನೆಯ ತನಕ ಅವರಿಗೆ ಸಿಟ್ಟು ಬರುತ್ತಿತ್ತು. ಬೇಸರ ಬರುತ್ತಿತ್ತು.

ಕೊನೆಗಾಲದಲ್ಲಿ ಭಾರತ ಸ್ವತಂತ್ರ ಆಗುವ ಮುಂಚೆ ಹಿಂದ್ ಸ್ವರಾಜ್ ಬಗ್ಗೆ ನೆಹರೂಗೆ ಒಂದು ಪತ್ರ ಬರೆಯುತ್ತಾರೆ. ಈ ಪತ್ರದ ಒಂದು ಮಾತು ನನಗೆ ವಿಚಿತ್ರ ಅನ್ನಿಸುತ್ತದೆ. ‘ನಿನಗೆ ನಾನು ಈ ಪತ್ರವನ್ನು ಹಿಂದೂಸ್ಥಾನಿಯಲ್ಲಿ ಬರೆಯಬೇಕೋ ಇಂಗ್ಲಿಷ್‌ನಲ್ಲಿ ಬರೆಯಬೇಕೋ ಅಂತಾ ಗೊತ್ತಾಗುತ್ತಾ ಇಲ್ಲ’ ಎನ್ನುತ್ತಾರೆ. (ನಾನು ಓದಿರುವುದು ಇಂಗ್ಲಿಷ್‌ನಲ್ಲಿ ಆದ್ದರಿಂದ ಅವರು ಇಂಗ್ಲಿಷ್‌ನಲ್ಲೇ ಬರೆದರೋ ತಿಳಿಯದು) ಅವರು ಹಿಂದೂಸ್ಥಾನಿಯಲ್ಲಿ ಬರೆದಿದ್ದರೆ ನೆಹರೂಗೆ ಬಹುಶಃ ತನ್ನ ಪತ್ರದ ಪ್ರಾಮುಖ್ಯತೆ ಅರ್ಥ ಆಗುತ್ತದೋ ಇಲ್ಲವೋ ಎನ್ನುವ ಅನುಮಾನ ಸಹ ಗಾಂಧಿಗೆ ಶುರುವಾದಂತೆ ನನಗೆ ತೋರುತ್ತದೆ.

‘ನೋಡು ನೀನು ನನ್ನ ಹಿಂದ್ ಸ್ವರಾಜ್ನ್ನು ಗಂಭೀರವಾಗಿ ಗಮನಿಸಿರುವಂತೆ ನನಗೆ ತೋರುವುದಿಲ್ಲ. ನೀನು ಭಾರತದ ಭವಿಷ್ಯದ ನಾಯಕನಾಗುವವನು. ನನ್ನ ಕನಸನ್ನು ನಿಜಮಾಡಬೇಕಾದವನು.’ (ನೆಹರೂರನ್ನೆ ತನ್ನ ಉತ್ತರಾಧಿಕಾರಿಯೆಂದು ಗಾಂಧಿ ಆಯ್ಕೆ ಮಾಡಿರುತ್ತಾರೆಯಾದ್ದರಿಂದ ಈ ಆರ್ತನೆಯಲ್ಲಿ ಗಾಂಧಿ ಬರೆಯುವುದು) ಅದಕ್ಕೆ ನೆಹರು ಉತ್ತರ ಬರೆಯುತ್ತಾರೆ-‘ನಮ್ಮ ಹಳ್ಳಿಗಳಲ್ಲಿ ನಮ್ಮ ಭವಿಷ್ಯ ಇರುವುದಲ್ಲ. ನಮ್ಮ ಹಳ್ಳಿಗಳು ಮೂಢನಂಬಿಕೆಯ ಕೊಂಪೆಗಳು. ಭವಿಷ್ಯ ಇರುವುದು ಆ ಪಶ್ಚಿಮ ಪ್ರಣೀತ ಆಧುನಿಕತೆಯ ಜೊತೆಗೆ’. ನೆಹರೂಗೂ ಒಂದು ಆದರ್ಶವಾದಿತ್ವ ಇರುವುದರಿಂದ ‘ಇಡೀ ಪ್ರಪಂಚವೇ ಆತ್ಮಹತ್ಯೆಯ ದಾರಿಯಲ್ಲಿದ್ದರೆ ನಾವೇನು ಮಾಡುವುದಕ್ಕೆ ಸಾಧ್ಯ?’ ಎಂತಲೂ ಬರೆಯುತ್ತಾರೆ. ಏನಾದರೂ ಮಾಡಲು ಸಾಧ್ಯ ಇದ್ದವರು ಏನೂ ಮಾಡಲು ಸಾಧ್ಯ ಇಲ್ಲ ಅಂತ ಬರೆಯುತ್ತಾರೆ. ಏನಾದರು ಮಾಡಬಹುದಿತ್ತು. ಯಾಕೆಂದರೆ Only a mass leader like Nehru could have taken some action.

ಗಾಂಧಿಗೂ ನೆಹರೂಗೂ ಹೀಗೆ ವಾಗ್ವಾದ ಇತ್ತು. ಹಾಗೆಯೇ ಗಾಂಧಿಗೆ ಟ್ಯಾಗೋರ್ ಜೊತೆಗೂ ಒಂದು ವಾಗ್ವಾದ ಇತ್ತು. ನಾನು ನ್ಯಾಷನಲ್ ಬುಕ್ ಟ್ರಸ್ಟ್‌ನ ಚೇರ್‌ಮನ್ ಆಗಿದ್ದಾಗ ಒಂದು ಪುಸ್ತಕ ಪ್ರಕಟಿಸಬೆಕೆಂದು ಆಸೆ ಪಟ್ಟಿದ್ದೆ. (ಆಮೇಲೆ ಅದು ಬಂತು.) ಮಹಾತ್ಮಾ ಆಂಡ್ ಪೊಯೆಟ್ಈ ಪುಸ್ತಕದ ಹೆಸರು. ಗಾಂಧಿ ಮತ್ತು ಟ್ಯಾಗೋರ್‌ರಿಗೆ ನಡೆದ ವಾಗ್ವಾದದ ಪುಸ್ತಕ. ಬಹಳ ಅದ್ಭುತವಾದ ಪುಸ್ತಕ. ಎಲ್ಲ ವಿದ್ಯಾರ್ಥಿಗಳು ಓದಬೇಕಾದ ಒಂದು ಮೂಲಭೂತ ಪಠ್ಯ ಇದು. ನಮ್ಮ ರಾಷ್ಟ್ರದ ಸ್ವರೂಪ ಹೇಗಿರಬೇಕು, ನಮ್ಮ ಸಮಾಜದ ಸ್ವರೂಪ ಹೇಗಿರಬೇಕು ಎಂದು ಇಬ್ಬರು ಮಹಾನುಭಾವರು ಚರ್ಚಿಸುತ್ತಾರೆ- ಗಾಂಧಿಯನ್ನು ಮಹಾತ್ಮಾ ಅಂತ ಕರೆದಿದ್ದು ಟ್ಯಾಗೋರ್, ಟ್ಯಾಗೋರ್‌ರನ್ನು ಗುರುದೇವ್ ಅಂತ ಕರೆದಿದ್ದು ಗಾಂಧೀಜಿ. (ಆದರೆ ಒಳ್ಳೆಯ ಶಿಷ್ಯನಾಗಿ ನಡೆದುಕೊಳ್ಳುತ್ತಿರಲಿಲ್ಲ ಗಾಂಧೀಜಿ) ಇವರು ಮಹಾತ್ಮಾ ಅಂತ ತಿಳಿದೂ ಜಗಳ ಆಡುತ್ತಿದ್ದರು ಟ್ಯಾಗೋರರು. ಈ ಭಿನ್ನತೆ ಇಬ್ಬರ ನಡುವಿನ ಸಂಬಂಧದಲ್ಲಿ ನಮಗೆ ಬಹಳ ಮುಖ್ಯವಾದದ್ದು. Mahatma and the Poet ಓದುವಾಗ ಒಮ್ಮೊಮ್ಮೆ ಗಾಂಧಿಯೇ ಕವಿ ಅಂತ ಅನ್ನಿಸುತ್ತದೆ; ಟ್ಯಾಗೂರರು ಹೆಚ್ಚು ಪ್ರಾಕ್ಟಿಕಲ್ ಅಂತ ಅನ್ನಿಸುತ್ತದೆ.

ಇದನ್ನು ಯಾಕೆ ಹೇಳುತ್ತೇನೆ ಅಂದರೆ, ಗಾಂಧಿ ಮನುಷ್ಯ ಮಾತ್ರನಾಗಿ ಉಳಿದು ಯಾವುದೇ ವಿಶೇಷ ಶಕ್ತಿ ತನ್ನಲ್ಲಿಲ್ಲ ಅಂತ ತಿಳಿದು ಆದರೆ ತಾಂತ್ರಿಕರಿಗೆ ಇರುವುದಕ್ಕಿಂತ ಹೆಚ್ಚಿನ ಶಕ್ತಿ ಪಡೆದರು. ನನಗೆ ರಾಮಚಂದ್ರ ಗಾಂಧಿ ಹೇಳುತ್ತಿರುತ್ತಾರೆ- ತಾಂತ್ರಿಕರ ಗುರಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದು. ಅದು ತಂತ್ರದ ಅಜೆಂಡಾ. ಗಾಂಧಿಗೆ ಒಂದು ತಾಂತ್ರಿಕನ ಗುಣ ಇತ್ತು. ಇಲ್ಲದಿದ್ದರೆ ಒಂದು ಹಿಡಿ ಉಪ್ಪನ್ನು ಅವರು ಎತ್ತಿ ಹಿಡಿದ ಕ್ಷಣವೇ ಇಡೀ ಬ್ರಿಟಿಷ್ ಸಾಮ್ರಾಜ್ಯ ಕುಸಿಯುವಂತೆ ಆಯಿತು. ಆಶೀಶ್ ನಂದಿ ಹೇಳಿದಂತೆ ನೆನಪು- ಇಂಡಿಯಾ ಸ್ವಾತಂತ್ರ ಪಡೆದದ್ದು ಆಗಸ್ಟ್‌ ಹದಿನೈದರಂದು ಮಾತ್ರವಲ್ಲ; ಗಾಂಧಿ ಒಂದು ಹಿಡಿ ಉಪ್ಪನ್ನು ಸಮುದ್ರದ ದಂಡಮೇಲೆ ನಿಂತು ಹಿಡಿದು ಎತ್ತಿದಾಗ. ಲಕ್ಷಾಂತರ ಜನರನ್ನು ಜೈಲಿಗೆ ಹಾಕಬೇಕಾಯಿತು. ಅವರು ಯಾರೂ ಪ್ರತೀಕಾರದ ಹಿಂಸೆಗೆ ಇಳಿಯಲಿಲ್ಲ. ಬ್ರಿಟಿಷರಿಗೆ ನಾರಾಯಣಮೂರ್ತಿ ಉಪಯೋಗಿಸಿದ ಶಬ್ಧ ಇದೆಯಲ್ಲ embarrass- ಅದು ಆಯಿತು.

ಜನ ಎಲ್ಲೆಲ್ಲೂ ನೀರು ಕುದಿಸಿ ಉಪ್ಪನ್ನು ಮಾಡಿ ಕಾನೂನನ್ನು ಭಂಗ ಮಾಡುತ್ತಿದ್ದಾರೆ. ಆದರೆ ಈ ಎಲ್ಲರನ್ನು ಜೈಲಿಗೆ ಹಾಕುವುದೆಂದರೆ ಅಷ್ಟು ಜಾಗ ಎಲ್ಲಿದೆ? ಆದರೆ ಶಿಕ್ಷಿಸದಿದ್ದರೆ ಸರ್ಕಾರವೇ ಇಲ್ಲವೆಂದಂತೆ ಆಯಿತು. ಎಂಥಾ ತಂತ್ರಗಾರಿಕೆ ನೋಡಿ ಗಾಂಧಿಗೆ. ಒಂದು ರೀತಿಯ ಜಾಣತನವೆನ್ನಬಹುದೆ? ಕನ್ನಿಂಗ್‌ ಎನ್ನಬಹುದೆ? ಅದೂ ಇತ್ತು ಗಾಂಧಿಗೆ.

ಅವರು ಮನುಷ್ಯ ಮಾತ್ರದವರು ಅಂದೆ. ಅವರಿಗೆ ಅವರು ಹುಟ್ಟಿದ ಜಾತಿಯ ವೈಶ್ಯ ಗುಣ ಇತ್ತು. ಕೊನೆಯವರೆಗೂ ಅವರಲ್ಲಿ ಒಂದು ಗುಜರಾತಿ ಗುಣ ಇತ್ತು. ಕೊನೆವರೆಗೂ ಒಬ್ಬ ಲಾಯರ್‌ಗುಣ ಇತ್ತು. ಇವೆಲ್ಲ ಇದ್ದು ಇವನ್ನು ಮೀರುತ್ತಲೇ ಇದ್ದರು. ಆದ್ದರಿಂದಲೇ ಇವರು ಮನುಷ್ಯ, ಆದರೂ ಇವರಲ್ಲಿ ಸುಳ್ಳಿಲ್ಲ ಅಂತ ಅನ್ನಿಸುವುದು. ಅವರ ಮಕ್ಕಳ ಜೊತೆ ಅವರ ಹೆಂಡತಿ ಜೊತೆ ಅವರು ಮಾಡಿದ ಕಾದಾಟಗಳಲ್ಲೂ ಇದನ್ನು ಕಾಣಬಹುದು.

ಆದರೆ ಗಾಂಧಿಗಿಂತ ಗಾಂಧೀಸಂನ್ನು ಅಕ್ಷರಶಃ ನಂಬಿದ್ದವರು ವಿನೋಬಾಬಾವೆ. ಗಾಂಧಿಯವರನ್ನು ಕಾರ್ಟೂನ್ ಮಾಡುವುದಾದರೆ ನಮಗೆ ಕಾಣುವುದು ವಿನೋಭಾ ಬಾವೆ. He literally believed Gandhi. ಗಾಂಧಿ ಕಾಲ್ನಡಿಗೆಯಲ್ಲಿ ಹೋಗಿ ಸತ್ಯಾಗ್ರಹ ಮಾಡುತ್ತಿದ್ದರು. ಭಾವೆ ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿದ್ದರು. ಗಾಂಧಿ ೨-೩ ದಿವಸ ಮೌನ ವ್ರತ ಮಾಡುತ್ತಿದ್ದರು. ಇವರು ವರ್ಷಗಟ್ಟಲೆ ಮೌನವ್ರತ ಮಾಡಿದರು. ಬ್ರಹ್ಮಚರ್ಯದಲ್ಲೂ ಅಷ್ಟೆ. ಗಾಂಧಿಯ ಬ್ರಹ್ಮಚರ್ಯವೇ ಬೇರೆ ತರಹದ್ದು. ಕೃಪಲಾನಿಯವರು ವಯಸ್ಸಾದವರು-ಚಿಕ್ಕವಳಾಗಿದ್ದವಳನ್ನು ಮದುವೆಯಾಗಬೇಕು ಎಂದಾಗ ವಿನೋಬಾ said, ‘no, this is immoral…’ ಆದರೆ ಗಾಂಧಿ ಇಬ್ಬರೂ ಒಬ್ಬರಿಗೊಬ್ಬರು ಹಲುಬುವುದನ್ನು ನೋಡಿದಾಗ ‘if you like each other so much then ಆಗಿ’ ಅಂದರಂತೆ. ಅಂದರೆ ಗಾಂಧಿಗೆ ಒಂದು ಸಂಸಾರಿಯ ಗುಣ ಇತ್ತು. ಸಹನೆ ಇತ್ತು. It makes him a complex character. ನಮ್ಮಲ್ಲಿ ತತ್ಸಮಾನವಾಗಿ ಸಿಗುವ character ರಾಮ. ಅದಕ್ಕೆ ನೋಡಿ ಇವತ್ತಿಗೂ ನಾವು ರಾಮನ ವರ್ತನೆಗಳ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದೇವೆ. ಅವನು ವಾಲಿಯನ್ನು ಹಿಂದಿನಿಂದ ಕೊಂದದ್ದು ಸರಿಯೋ? ಸೀತೆಯನ್ನು ಬೆಂಕಿಯಲ್ಲಿ ನಡೆಸಿದ್ದು ಸರಿಯೋ? ಅವನು ರಾವಣನ ತಮ್ಮ ವಿಭೀಷಣನ ಜೊತೆ ಒಪ್ಪಂದ ಮಾಡಿದ್ದು ಸರಿಯೋ? ಎಲ್ಲ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಅಂದರೆ ಅವನು ethical personality.

ಕೃಷ್ಣನ ಬಗ್ಗೆ  ಯಾರಾದರೂ ಈ ರೀತಿಯ ಪ್ರಶ್ನೆ ಎತ್ತುವುದುಂಟೆ? ಅವನು ಏನು ಬೇಕಾದರೂ ಮಾಡಬಹುದು. ಅವನಿಗೆ ದೈವತ್ವ ಲಭಿಸಿದೆ. ಆದರೆ ರಾಮನಿಗಿಲ್ಲ. ಲೋಹಿಯಾ ಅವರು ರಾಮ ಕೃಷ್ಣ ಶಿವ ಎನ್ನುವ ಅದ್ಭುತವಾದ ಲೇಖನ ಬರೆದಿದ್ದಾರೆ. ಅದರಲ್ಲಿ ಹೇಳ್ತಾರೆ-Rama is a personality of the ethical kind. ಹಾಗೆನೇ Gandhi is an ethical personality. ಆದುದರಿಂದ ಇವತ್ತಿಗೂ ಅವರು ಚರ್ಚಾರ್ಹರಾಗಿಯೇ ಉಳಿದಿದ್ದಾರೆ.

ಆಮೇಲೆ ಗಾಂಧಿಯಲ್ಲಿ ಉಪಾಯ ಅಂತ ಹೇಳಿದೆನಲ್ಲವೆ?- ಅದೂ ವಿಷನ್ನೇ. ನಮ್ಮಲ್ಲಿ ತಿಲಕರು ಬಹಳ ದೊಡ್ಡ ರಾಷ್ಟ್ರಪ್ರೇಮಿಗಳು. ಆರತವನ್ನು ಕೇವಲ ರಾಷ್ಟ್ರವಾಗಿ ನೋಡಬೇಕು. ಸದ್ಯಕ್ಕೆ ನಮಗಿರುವ ಎಲ್ಲ ಜಗಳಗಳನ್ನು ಬದಿಗಿಟ್ಟು ಮೊದಲು ಇದು ಸ್ವತಂತ್ರವಾಗಲಿ ಎಂದರು. ಅಂಬೇಡ್ಕರು ‘ಇಲ್ಲ ನೀವೇನಾದರೂ ಸ್ವತಂತ್ರರಾದರೆ- ಮೇಲ್ಜಾತಿಯವರು-ನಮ್ಮನ್ನು ಆಳಿ ಬ್ರಿಟಿಷರ ಜಾಗದಲ್ಲಿ ಕುಳಿತುಬಿಡುತ್ತೀರಿ. ನಮಗದು ಬೇಕಾಗಿಲ್ಲ. ಮೊದಲು ಸಮಾಜ ಸುಧಾರಣೆಯಾಗಲಿ’ ಎಂದರು. ಗಾಂಧಿ ಏನು ಮಾಡಿದರು ನೋಡಿ-ಇದೊಂದು ವಿಚಿತ್ರವಾದ ವಿಷಯ. ಒಂದು ದೇಶವನ್ನು ಏಕಕಾಲಕ್ಕೆ ಒಂದು ಸಮಾಜವಾಗಿಯೂ, ರಾಷ್ಟ್ರವಾಗಿಯೂ ನೋಡುವ ಶಕ್ತಿ ಗಾಂಧಿಗೆ ಇತ್ತು. ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ನಾವೆಲ್ಲರೂ ಭಾರತವನ್ನು ರಾಷ್ಟ್ರವಾಗಿ ನೋಡಿದಾಗ ಸಮಾಜವಾಗಿ ನೋಡುವುದಿಲ್ಲ. ಸಮಾಜವಾಗಿ ನೋಡಿದಾಗ ರಾಷ್ಟ್ರವಾಗಿ ನೋಡುವುದಿಲ್ಲ. ಸಮಾಜವಾಗಿ ಇಂಡಿಯಾವನ್ನು ನೋಡಿದಾಗ ಇಲ್ಲಿ ಯಾರೂ ಯಾರ ಮೇಲೆ ದಬ್ಬಾಳಿಕೆ ಮಾಡುತ್ತಾರೆ, ಹೆಂಗಸರ ಸ್ಥಿತಿ ಏನಾಗಿದೆ, ಇಲ್ಲಿ ಶೂದ್ರರು ಏನಾಗಿದ್ದಾರೆ, ಬಡವರು ಹೇಗಿದ್ದಾರೆ ಇವೆಲ್ಲ ನೋಡಬೇಕಾಗುತ್ತದೆ. ರಾಷ್ಟ್ರ ಎಂದು ನೋಡಿದಾಗ ನಾವೆಲ್ಲ ಒಬ್ಬನ ತುಳಿತಕ್ಕೆ ಒಳಗಾಗಿದ್ದೇವೆ. ಒಗ್ಗಟ್ಟಾಗಬೇಕು ಎಂದು ಹೇಳಬೇಕಾಗುತ್ತದೆ. ನೀವು ಬರೀ ರಾಷ್ಟ್ರೀಯವಾದಿಯಾಗಿದ್ದರೆ ಇಡೀ ದೇಶವನ್ನು ಒಟ್ಟು ಮಾಡುವುದಕ್ಕಾಗುತ್ತಿರಲಿಲ್ಲ. ಬಡಬಗ್ಗರು ಇದರಲ್ಲಿ ಒಳಗಾಗುತ್ತಿರಲಿಲ್ಲ. ಒಮ್ಮೆ ಅಮೆರಿಕನ್ ಜರ್ನಲಿಸ್ಟ್‌ ಬಂದು ಗಾಂಧಿಯನ್ನು ‘what is your agenda?’ ಅಂತ ಕೇಳುತ್ತಾರೆ. ಏನು ಹೇಳಬೇಕು ಗಾಂಧಿ-‘ರಾಷ್ಟ್ರದಲ್ಲಿ ರಾಜಕೀಯ ಸ್ಥಿತ್ಯಂತರ ನನ್ನ ಅಜೆಂಡಾ’. ಅಂತ ಹೇಳಬೇಕು. ‘ಬ್ರಿಟಿಷರಿಂದ ಸ್ವಾತಂತ್ರ್ಯ ತೆಗೆದುಕೊಳ್ಳುವುದು ನನ್ನ ಅಜೆಂಡಾ’ ಅಂತ ಹೇಳಬೇಕು. ಅವನ ಆಶ್ವರ್ಯಕ್ಕೆ ಗಾಂಧಿ ಅದನ್ನು ಹೇಳುವುದೇ ಇಲ್ಲ. ‘My agendas are three. ಮೊದಲನೆಯದು ಹಿಂದೂ ಮುಸ್ಲಿಂ ಯೂನಿಟಿ, ಎರಡನೆಯದು, removal of untouchability. ಮೂರನೆಯದು,  ಹಿಂದೂ ಮುಸ್ಲಿಂ ಯೂನಿಟಿ, ನಾಲ್ಕನೆಯದು ಯಾವುದು? ಅವರು ಹೇಳುವುದೇ ಇಲ್ಲ. ಯಾಕಂದರೆ ಈ ಮೂರು ಈಡೇರಿದರೆ ಬ್ರಿಟಿಷರಿಗೆ ಇಲ್ಲಿ ಇರುವ ಅಗತ್ಯವೇ ಇಲ್ಲ.

ನಿಜವೆಂದರೆ ಬ್ರಿಟಿಷರು ತಮ್ಮ ಸರಕು ಸಾಮಾನು ಮಾರುವುದಕ್ಕೆ ಬಂದವರು. ಅವರ ಉದ್ದೇಶ ಮಾರುಕಟ್ಟೆ ಹುಡುಕುವುದು. ಸ್ವದೇಶೀ ಚಳುವಳಿ ಮಾಡಿದಾಗ ಗಾಂಧಿ ಮ್ಯಾಂಚೆಸ್ಟರ್‌ಗೆ ಹೋಗುತ್ತಾರೆ. ಅಲ್ಲಿ ಮಿಲ್ಲುಗಳು ಮುಚ್ಚಿದ್ದವು. ಅವರು ಒಂದು ಮಿಲ್ಲಿಗೆ ಹೋಗಿ ಅಲ್ಲಿ ಕೆಲಸ ಕಳೆದುಕೊಂಡವರನ್ನು ಭೇಟಿಯಾಗಿ ನಮ್ಮ ಸ್ವದೇಶಿ ಚಳುವಳಿಯಿಂದ ನೀವು ಕೆಲಸ ಕಳೆದುಕೊಂಡಿದ್ದೀರಿ. ನಮಗೆ ನಿಮ್ಮ ಸಹಾನುಭೂತಿ ಬೇಕು ಅಂತ ಕೇಳುತ್ತಾರೆ. ಆ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಒಂದು ಹಣ್ಣು ಹಣ್ಣು ಮುದುಕಿ ಬಂದು ಇವರಿಗೆ ಒಂದು ಮುತ್ತು ಕೊಡುತ್ತಾಳೆ. ಅದೊಂದು ಅದ್ಭುತ ದೃಶ್ಯ. ಇದು ಸ್ವದೇಶಿ ಮ್ಯಾಂಚೆಸ್ಟರ್‌ನ ಕೆಲಸ ಕಳೆದುಕೊಂಡ ಮುದುಕಿಯನ್ನು ಪ್ರೀತಿಸಬಲ್ಲ ಸ್ವದೇಶಿ.

ಅವರು ಮೊದಲನೆಯ ದರ್ಜೆಯ ರೈಲಿನಲ್ಲಿ ಕುಳಿತಾಗ ಅವರನ್ನು ತಳ್ಳಿ ಹೊರಗೆ ಹಾಕಿದಾಗ ಅವರಿಗೆ ಬದೇ ಸಿಟ್ಟು ಬಂದಿದ್ದರೆ ಅವರು ಸಾವರ್ಕರ್ ಆಗುತ್ತಿದ್ದರು. ಆ ಸಿಟ್ಟಿನ ಜೊತೆಗೆ ಅವರಿಗೆ ನಮ್ಮ ದೇಶದಲ್ಲಿ ನಾವು ಕೂಡ ಬೇರೆಯವರಿಗೆ ಈ ತರ ಮಾಡುತ್ತೇವೆ ಅಂತ ಅನ್ನಿಸಿದ್ದರಿಂದ ಅವರು ಗಾಂಧಿ ಆದರು. ಒಂದೇ ಅನ್ನಿಸಿದ್ದರೆ ಬ್ರಿಟಿಷರ ವಿರುದ್ಧ ದಂಗೆಗೆ ಸಾಮಗ್ರಿಯಾಗುತ್ತಿತ್ತು. ತನ್ನನ್ನು ಕರಿಯ ಅಂತ ಹೊರಗೆ ಹಾಕಿದಾಗ, ನಾವು ಹೊಲೆಯ ಅಂತ ಹೊರಗಿಡುತ್ತೇವಲ್ಲ ಅಂತ ನೆನಪಾಗದಿದ್ದರೆ ಅವರು ಗಾಂಧಿ ಆಗುತ್ತಿರಲಿಲ್ಲ.

ಆದ್ದರಿಂದ ನಮಗೆ ರಾಷ್ಟ್ರ ಅಂದಾಗ ಸಮಾಜದ ನೆನಪಾಗಬೇಕು. ಸಮಾಜದ ಪ್ರಶ್ನೆ ಎತ್ತಿದಾಗ ರಾಷ್ಟ್ರದ ನೆನಪಾಗಬೇಕು. ತಿಲಕರು ಸತ್ತಾಗ ಬಹಳ ದೊಡ್ಡ ಪ್ರಮಾಣದಲ್ಲಿ ಅವರ ಶವ ಸಂಸ್ಕಾರ ಆಗುತ್ತದೆ. ಲಕ್ಷಾಂತರ ಜನ ಹೋಗುತ್ತಾರೆ. (ಕೆಲವರು ಹೇಳುತ್ತಾರೆ. ಮೊದಲ ಡಾಕ್ಯುಮೆಂಟರಿ ಸಿನೆಮಾ ಆದದ್ದು ತಿಲಕ್ ಸತ್ತಾಗ) ಆಗ ಒಬ್ಬ ಗಾಂಧಿಯವರ ಪತ್ರಿಕೆಯಾದ ಹರಿಜನ್ಗೆ ಒಂದು ಕಾಗದ ಬರೆಯುತ್ತಾನೆ. ಇದು ಏನೆಂದು ಹೇಳುವ ಮುಂಚೆ ವಿವರಣೆ ಬೇಕು-ಗೋಖಲೆ ಬಗ್ಗೆ. ಗೋಖಲೆ ಸ್ವಲ್ಪ ಲಿಬರಲ್ ವಾದಿ. ಗಾಂಧಿ ತಾನು ಗುರು ಅಂತ ತಿಳಿದುಕೊಂಡಿದ್ದು ಗೋಖಲೆಯನ್ನು ಮಾತ್ರ. ಗೋಖಲೆ ಉದ್ದದ ಕೋಟು ಹಾಕುತ್ತಿದ್ದರು. ಗಾಂಧಿ ಇದು ಯಾಕೆ ಅಂತ ತಮಾಷೆ ಮಾಡಿದರೆ ‘ಇದು ನನಗೋಸ್ಕರ ಅಲ್ಲ ಜನಗಳಿಗೋಸ್ಕರ’ ಎನ್ನುತ್ತಿದ್ದರಂತೆ. ವಯಸ್ಸಾದ ಕಾರಣ ಅವರಿಗೆ ಬಗ್ಗಿ ಆ ಉದ್ದನೆಯ ಕೋಟಿನ ಗುಂಡಿ ಹಾಕುವುದು ಕಷ್ಟ ಆಗುತ್ತಿತ್ತು. ಗಾಂಧಿ ಅವರ ಕೋಟಿನ ಎಲ್ಲಾ ಗುಂಡಿಗಳನ್ನು ಹಾಕುತ್ತಿದ್ದರಂತೆ. ಗೋಖಲೆ ಅಷ್ಟು ಹತ್ತಿರ ಅವರಿಗೆ.

ತಿಲಕರು ಸತ್ತಾಗ ಹರಿಜನ ಪತ್ರಿಕೆಗೆ ಯಾರೋ ಒಬ್ಬ ತನ್ನ ಹೆಸರು ಬಚ್ಚಿಟ್ಟು ಬರೆದ ಪತ್ರದ ಸಾರಾಂಶ ಇದು: ‘ನೀನು ತಿಲಕ್‌ವಾದಿ ಆಗಬೇಕಿತ್ತು-ನೀನು ಸುಮ್ಮನೆ ಗೋಖಲೆಯ ಶಿಷ್ಯ ಅಂತ ಕರೆದುಕೊಳ್ಳುತ್ತೀಯಾ? ಅದು ಸುಳ್ಳು’. ಗಾಂಧೀ ಇದಕ್ಕೆ ಹೀಗೆ ಉತ್ತರ ಬರೆಯುತ್ತಾರೆ ‘ನೀವು ನಿಮ್ಮ ಹೆಸರನ್ನು ಬಚ್ಚುಟ್ಟು ಯಾಕೆ ಬರೆದರೊ ಗೊತ್ತಿಲ್ಲ. ನಾನು ಸತ್ಯ ಹೇಳುತ್ತೇನೆ. ತಿಲಕರು ಬಹಳ ದೊಡ್ಡವರು. ಅವರ ಹತ್ತಿರ ಹೋದಾಗ ನನಗೆ ಗಾಬರಿ ಆಗುತ್ತಿತ್ತು. I never felt comfortable. ಆದರೆ ಗೋಖಲೆ ಜೊತೆ I felt very comfortable.’

ಈ ಮಾತುಗಳಿಗೆ ಪೂರಕವಾಗಿ ಲೋಹಿಯಾ ಹೇಳಿದ ಒಂದು ಘಟನೆ ನೆನಪಾಗುತ್ತದೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಸೌತ್ ಆಫ್ರಿಕಾವನ್ನು ಬಿಳಿಯರ ಆಡಳಿತದಿಂದ ಈಗಿಂದೀಗಲೇ ಬಿಡುಗಡೆ ಮಾಡಬೇಕು ಅಂತ ಅವರು ಒಂದು ನಿರ್ಣಯ ಮಂಡಿಸಿದರಂತೆ. ಗಾಂಧೀ ಅದನ್ನು ವಿರೋಧಿಸಿದರು ಎಂದು ಲೋಹಿಯಾಗೆ ಶಾಕ್ ಆಯಿತು. ಮರುದಿನ ವಾಕ್ ಹೋಗುವಾಗ ಗಾಂಧಿ ಹೇಳಿದರಂತೆ-ಸದ್ಯಕ್ಕೆ ನಮಗೆ ಮಾಡಲು ಆಗದೇ ಇರುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು emotional indulgence. ಅಥವಾ ರಾಜಕೀಯ ತೋರುಗಾಣಿಕೆಯಾಗಿಬಿಡುತ್ತದೆ. ನೈಜ ಕ್ರಾಂತಿಕಾರಕ ಸಮಾಧಾನಿಯೂ ಆಗಿರಬೇಕು. ಅದಕ್ಕೇ ಗೋಖಲೆ ಗಾಂಧಿಗೆ ತಿಲಕರಿಗಿಂತ ಹೆಚ್ಚು ಪ್ರಿಯರು.

ಆದರೆ ಒಂದು ತೀರ್ಮಾನಕ್ಕೆ ಬಂದದ್ದೇ ಗಾಂಧಿ ಅಚಲರು; ತನ್ನ ನಂಬಿಕೆಗೆ ತ್ರಿಕರಣಪೂರಕವಾಗಿ ಬದ್ಧರು. ತನ್ನ ಮಗ ರಾಜಗೋಪಾಲಾಚಾರ್ಯರ ಮಗಳನ್ನು ಮದುವೆಯಾಗುತ್ತೇನೆ ಅಂದಾಗ ಬೇಡ ಅಂದರು. ಯಾಕೆಂದರೆ ನಮ್ಮಲ್ಲಿ ಮೇಲ್ಜಾತಿಯವರ ಹೆಣ್ಣು ಮಕ್ಕಳನ್ನು ಕೆಳಜಾತಿಯವರು ತರಬಾರರು ಎಂಬ ಮಟ್ಟಿಗೆ ಅವರು traditional. ಆಮೇಲೆ ಹೀಗೆ ಮದುವೆ ಆಗುವುದು ಸರಿ ಅಂತ ಗೊತ್ತಾದಾಗ ಇನ್ನು ಇಂಟರ್‌ಕಾಸ್ಟ್ ಮದುವೆಗಳಿಗೆ ಮಾತ್ರ ತಾನು ಹೋಗುವುದು ಎಂದಿದ್ದರು. ನಾವು ಇಂಟೆಲೆಕ್ಚುಯಲ್ಸ್‌-ನಾಲ್ಕೈದು ಸ್ಟೆಪ್ ತೆಗೆದುಕೊಂಡಂತೆ ಕಂಡಿದ್ದರೂ ನಾಲ್ಕೈದು ಸ್ಟೆಪ್ ಹಿಂದೆ ಹೋಗಿರುತ್ತೇವೆ. ಆಳುವವರು ಯಾರು ಅಂತ ನಾವು ನೋಡುತ್ತಿರುತ್ತೇವೆ. ಅವರಿಗೆ ಸರಿಯೆನ್ನಿಸುವಂತೆ ಇರಲು ಸ್ವಲ್ಪವಾದರೂ ಮಾತಾಡಿರುತ್ತೇವೆ. ಅದಕ್ಕೆ ನಾನು ಹೇಳಿದ್ದು- ಅವರು ಸಮಾಜ ಮತ್ತು ರಾಷ್ಟ್ರದ ಪ್ರಶ್ನೆಯನ್ನು ಒಬ್ಬ ಸಂಸಾರಿಯ ನೆಲೆಯಲ್ಲಿ ನೋಡುತ್ತಾ ಇದ್ದರು. ಆದುದರಿಂದಲೇ ಭಾರತದ ಎಲ್ಲ ಜನ ಅವರೊಂದಿಗೆ ಭಾಗಿಯಾಗುವುದು ಸಾಧ್ಯ ಆಯಿತು.

ಇವತ್ತು ಇಲ್ಲಿ ಬರುವಾಗ ಮುರಳೀಧರ ಅವರು ಒಂದು ಚಿತ್ರ ಕೊಟ್ಟರು. ಇದು ಗಾಂಧೀಜಿ ೧೯೩೪ ರಲ್ಲಿ ಗಾಂಧೀಜಿ ಉದ್ಯಾವರದಲ್ಲಿ ಬಂದಾಗ ದೋಣಿಯಿಂದ ಇಳಿಯುವ ಚಿತ್ರ. ಮೊನ್ನೆ ತೀರ್ಥಹಳ್ಳಿಗೆ ಹೋದೆ. ಅಲ್ಲಿ ನನ್ನ ಸ್ನೇಹಿತ ಗಂಗಾಧರ ಅವರು ರಿಸರ್ಚ್‌ ಮಾಡುತ್ತಾ ಇದ್ದಾರೆ. ಗಾಂಧಿ ತೀರ್ಥಹಳ್ಳಿಗೆ ಬಂದಾಗಿನ ಪ್ಯಾಂಫ್ಲೆಟ್‌ ಹುಡುಕಿದ್ದಾರೆ. ತೀರ್ಥಹಳ್ಳಿಯ ಮಹಾನಾಗರಿಕರು ಹಾಕಿದ ಪ್ಯಾಂಫ್ಲೆಟ್‌. ಅದರಲ್ಲಿ ಏನಿದೆ ಅಂದರೆ ‘ಗಾಂಧೀಜಿ ಬರ್ತಾರೆ ಇಷ್ಟು ಹೊತ್ತಿಗೆ-ಯಾರೂ ‘ಮಹಾತ್ಮಾ ಗಾಂಧಿಕಿ ಜೈ ಅಂತ ಕೂಗಬಾರದು. ಅವರನ್ನು ಮುತ್ತಿಗೆ ಹಾಕಬಾರದು. ಅವರ ಕೈ ಕುಲುಕಬಾರದು. ಅವರಿಗೆ ವಯಸ್ಸಾಗಿದೆ. ಸುಸ್ತಾಗುತ್ತದೆ ಮತ್ತು ಜೈಕಾರ ಹಾಕಿದರೆ ಇಷ್ಟವಾಗುವುದಿಲ್ಲ’. ಜೊತೆಗೇ ಗಾಂಧಿಗೆ ತೀರ್ಥಹಳ್ಳಿಯ ಜನರು ಕೊಟ್ಟ ಒಂದು ಅಹವಾಲೂ ಇದೆ. ಅದರ ಪ್ರಾಮಾಣಿಕತೆ ನನಗೆ ಇಷ್ಟವಾಯಿತು. ‘ನಾವು ಸ್ವಲ್ಪ ಖಾದಿ ಮಾಡಿದ್ದೇವೆ. ಅದಕ್ಕೆ ದುಡ್ಡು ಕಲೆಕ್ಟ್‌ ಮಾಡಿದ್ದೇವೆ. ಆದರೆ ಅಸ್ಪೃಶ್ಯತಾ ನಿವಾರಣೆಯಲ್ಲಿ ಮಾಡಲಾಗಲಿಲ್ಲ. ನೀವು ಕ್ಷಮಿಸಬೇಕು.’

ಈ ಕಾಲದಲ್ಲಿ ಹೀಗೆ ಯಾರೂ ಸತ್ಯವನ್ನು ಬರೆದುಕೊಳ್ಳುವುದಿಲ್ಲ.

ಜಯಪ್ರಕಾಶ್ ಮಾವಿನಕುಳಿಗೆ ಒಂದು ಸೂಚನೆ ಏನೆಂದರೆ- ಇದೊಂದು ಅಧ್ಯಯನ ಸಂಸ್ಥೆ- ಎಲ್ಲಾ ಅಧ್ಯಯನ ಸಂಸ್ಥೆ-ಎಲ್ಲಾ ಅಧ್ಯಯನ ಸಂಸ್ಥೆಯಂತೆ ಆಗಬಾರದು. ಗಾಂಧಿ ಕರ್ನಾಟಕದಲ್ಲಿ ಯಾವ ಯಾವ ಊರಿಗೆ ಹೋಗಿದ್ದಾರೆ. ಆ ಕಾಲದಲ್ಲಿ ಬಂದಿರುವ ನ್ಯೂಸ್ ಹೇಗಿತ್ತು. ಆ ಕಾಲದಲ್ಲಿ ಯಾವುದಾದರೂ ಪ್ಯಾಂಪ್ಲೆಟ್‌ ಹಾಕಿದ್ದರೋ ಇತ್ಯಾದಿಗಳು ಇಲ್ಲಿ ಸಂಶೋಧನೆಗೆ ಒಳಗೊಳ್ಳಬೇಕು.

*

ಈ ಹಿಂದೆ ಇಲ್ಲಿ ನಾನು ಇದ್ದಾಗ ಶ್ರೀ ಕೆ.ಕೆ. ಪೈಗಳ ಜೊತೆ ಅದೂ  ಇದೂ ಮಾತಾಡುತ್ತ ಹಲವು ಗಂಟೆಗಳನ್ನು ತುಂಬ ಖಷಿಯಲ್ಲಿ ಕಳೆದಿದ್ದೇನೆ. ಉಡುಪಿಯ ಪುರಾಣ ಬೇಕೆಂದರೆ, ಪ್ರಿಂಟ್ ಮಾಡಬಹುದಾದ, ಪ್ರಿಂಟ್ ಮಾಡಲಾಗದ ಎರಡೂ ಗೊತ್ತಿರುವುದು ಕೆ.ಕೆ. ಪೈಗಳಿಗೆ. ಇವರ ಹತ್ತಿರ ನೀವು ಕೇಳಿಕೊಳ್ಳಬೇಕು: ‘ನಾವು ಈಗ ಪ್ರಿಂಟ್ ಮಾಡುವುದಿಲ್ಲ ಸರ್ ಆಮೇಲೆ ಮಾಡುತ್ತೇವೆ’ ಅಂತ ಹೇಳಿ ಅವರನ್ನು ಮಾತಾಡಿಸಿ ಅವರ ನೆನಪುಗಳನ್ನು ದಾಖಲಿಸಬೇಕು. ಹಾಗೆ ಗಾಂಧಿಯ ಬಗ್ಗೆ ಏನೇನು ಸಂಗ್ರಹ ಮಾಡಬೇಕೋ ಕರ್ನಾಟಕದಲ್ಲಿ ಅದನ್ನೆಲ್ಲ ಸಂಗ್ರಹ ಮಾಡಬೇಕು- ಇನ್ನೂ ನೆನಪಿರುವ ಹಿರಿಯರಿಂದ. ಆ ಊರಿಗೆ ಬಂದಾಗ ಏನಾಗಿತ್ತು? ಜನ ಹೇಗೆ ಸ್ಪಂದಿಸಿದ್ದರು? ಏನಾದರೂ ಪಾಂಫ್ಲೆಟ್ ಹಂಚಿದ್ದರೋ? ಯಾವ ರೀತಿ ಅಹವಾಲನ್ನು ಕೊಟ್ಟರು? ಸಭೆಗಳು ಹೇಗೆ ನಡೆದವು? ಅವರು ಏನು ಹೇಳಿದರು? ಈ ರೀತಿ ಸಂಗ್ರಹ ಮಾಡಿಡಬೇಕು.

ಗಾಂಧಿ ನಾನು ಹೇಳಿದಂತೆ ಬ್ರಿಟಿಷರನ್ನು ಓಡಿಸುತ್ತೇನೆ ಅಂತ ಹೇಳಲಿಲ್ಲ. ಹಿಂದೂ ಮುಸ್ಲಿಮ್‌ ಯೂನಿಟ್ ಮಾಡುತ್ತೇನೆ. ಅಸ್ಪೃಶ್ಯತಾ ನಿವಾರಣೆ ಮಾಡುತ್ತೇನೆ, ಖಾದಿ ಪ್ರಚಾರ ಮಾಡುತ್ತೇನೆ ಅಂತ ಹೇಳಿದರು. ಹಾಗೆ ನಿಮ್ಮ ಅಧ್ಯಯನ ಸಂಸ್ಥೆ ಒಂದು ಕೆಲಸ ಮಾಡಬೇಕು. (ಇಲ್ಲಿ ಕೆಲವು ಗೆಳೆಯರು ಆ ಕೆಲಸ ಮಾಡುತ್ತಾ ಇದ್ದಾರೆ) ಈ ಕರಾವಳಿ ಪ್ರದೇಶದಲ್ಲಿ ತುಂಬ ಹಿಂದೂ ಮುಸ್ಲಿಂ ಮೈತ್ರಿಗೆ ಧಕ್ಕೆ ಆಗುವಂತಹ ಕೆಲಸಗಳು ನಡೆಯುತ್ತಾ ಇವೆ. ಈ ಹಿಂದೂ ಮುಸ್ಲಿಂ –ಯೂನಿಟಿ-ಅವರಿಬ್ಬರು ಒಟ್ಟಾಗುವುದು, ಪ್ರೀತಿಯಿಂದ ಒಬ್ಬರಿಗೊಬ್ಬರು ಬದುಕುವುದು, ಸಹಬಾಳ್ವೆಯಿಂದ ಬದುಕುವುದು, ಅವರಿಗಿರುವ ವೈಮನಸ್ಸನ್ನು ಹೋಗಲಾಡಿಸುವುದು. ಇದು ನಿಮ್ಮ ಕೆಲಸವಾಗಬೇಕು. ಗಾಂಧಿಯವರಿಗೆ ಅಂತಹ ಶಕ್ತಿ ಇತ್ತು. ನನಗೆ ಒಂದು ಘಟನೆ ನೆನಪಾಗುತ್ತದೆ. ಮಹಮ್ಮದ್ ಆಲಿ ಜಿನ್ನಾ, ಗಾಂಧಿಗೆ ಬಹಳ ಪ್ರಿಯರಾಗಿದ್ದವರು. ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಒಂದು ಸಾರಿ ಅವರು ‘ನೀವು ಮದನಮೋಹನ ಮಾಲವೀಯರನ್ನು ಕಮ್ಯುನಲ್ ಅಂತ ಕರೆಯಬೇಕು’ ಅಂತ ಹೇಳಿದರು. ಗಾಂಧಿ ಹೇಳುತ್ತಾರೆ- ‘I will never call Madan Mohan Malaviya communal’. ಇಂತಹ ಮೂರ್ಖತನದ ಬೇಡಿಕೆಗಳನ್ನು ಮಾಡಬೇಡಿ ಅಂತ. Gandhi had that kind of courage to deal with Muslims and to deal with Hindus. ನಿಷ್ಠುರವಾಗಿ ಸತ್ಯವಾಗಿ, ಯಾಕೆಂದರೆ ಅವರಿಗೆ ಇಬ್ಬರ ಮೇಲೂ ಪ್ರೀತಿ ಇರುವುದರಿಂದ. ನಮ್ಮಲ್ಲಿ ಯಾರ ಮೇಲೂ ಯಾರಿಗೂ ನಿಜದ ಪ್ರೀತಿ ಇಲ್ಲ. ನಾವು ಎಲ್ಲ ಮಾಡುವುದು ವೋಟ್ ಬ್ಯಾಂಕ್‌ಗಾಗಿಯೇ. ಹಿಂದೂ ಪ್ರೀತಿ ಗಳಿಸುವುದು ವೋಟ್ ಬ್ಯಾಂಕಿಗಾಗಿ. ಮುಸ್ಲಿಂ ಪ್ರೀತಿ ಗಳಿಸುವುದು ವೋಟ್ ಬ್ಯಾಂಕಿಗಾಗಿ. ನಮಗೆ ಅವರ ಸುಖ ಬೇಕಾಗಿಲ್ಲ. ಅವರು ಮುಂದುವರಿಯುವುದು ಬೇಕಾಗಿಲ್ಲ. ಗಾಂಧಿ ಅಧ್ಯಯನ ಸಂಸ್ಥೆ ಶಾಶ್ವತವಾಗಿ ಸಹಬಾಳ್ವೆಯನ್ನು ಪ್ರೀತಿಯಿಂದ ಮಾಡುವುದಕ್ಕೆ ಏನು ಬೇಕೋ ಆ ಕೆಲಸ ಮಾಡುವುದಕ್ಕೆ ಮುಂದಾಗಬೇಕು. ‘ನಾವು ಕಾಲೇಜಿನವರು ಹೇಗೆ ಮಾಡುವುದು?’ ಎಂದು ಯೋಚನೆ ಮಾಡಬಾರದು. ಸ್ವತಂತ್ರವಾಗಿ ಮಾಡಬೇಕು. ಇಲ್ಲಿ ಮಾಡುವವರಿಗೆ ಸಹಕಾರ ಮಾಡಬೇಕು. ನನಗೆ ಕರಾವಳಿಯ ಬಗ್ಗೆ ಇರುವ ಆತಂಕಗಳಲ್ಲಿ ಇದೂ ಒಂದು.

ಇನ್ನೊಂದು ಆತಂಕ ಇದೆ ನನಗೆ. ಗಾಂಧೀಜಿ ಬಹಳ ಸ್ಥಳೀಯರಾಗಿದ್ದರು. (ಇಂದು ವೈಷ್ಣವ ಜನತೋ ಹಾಡುವಾಗ I felt very moved.) ಒಂದು ಗುಜರಾತಿ ಹಾಡನ್ನು ನ್ಯಾಶನಲ್ ಹಾಡು ಮಾಡಿದರು. ಉಡುಪಿಗೂ ಒಂದು ಸ್ಥಳೀಯತೆ ಇದೆ. ಇಲ್ಲಿ ಎಷ್ಟೋ ಜನರು ತಮ್ಮ ತಮ್ಮ ಭಾಷೆಯಲ್ಲೇ ಮಾತಾಡುತ್ತಾರೆ. ತುಳು, ಕೊಂಕಣಿ, ಬ್ಯಾರಿ- ತಮ್ಮ ಭಾಷೆಯನ್ನು ಜನ ಬಿಟ್ಟುಕೊಡುವುದಿಲ್ಲ. ಅಷ್ಟು ಸ್ಥಳೀಯವಾದದ್ದು ಈ ಜಾಗ. ಜಾಗತೀಕರಣ ಲೋಭದಲ್ಲಿ ನಾವು ಈ ದೇಶದಲ್ಲೇ ಇಲ್ಲ. ನಾವು ಈಗಾಗಲೇ ನ್ಯೂಯಾರ್ಕಿಗೋ ಯಾವುದಕ್ಕೋ ಸಂಬಂಧಪಟ್ಟಿದ್ದೀವೆ ಎನ್ನುವ ಭ್ರಮೆ ದಕ್ಷಿಣ ಕನ್ನಡ ಜಿಲ್ಲೆಗೆ ಬರದಂತೆ ನೋಡಿಕೊಳ್ಳಿ.

ನಾನು ಇತ್ತೀಚೆಗೆ ಒಂದು ಪುಸ್ತಕ ಓದುತ್ತಾ ಇದ್ದೇನೆ, ಅದರ ಲೇಖಕಿ ಬರೆಯುತ್ತಾರೆ-ಮನುಷ್ಯನ ಮೊದಲ ಕನಸು ಭೂಮಿಯಿಂದ ಸ್ವತಂತ್ರ ಆಗಬೇಕು ಎಂಬುದು. ಮೊದಲನೆಯ ಉಡಾಣ ಹಾರಿಸಿದಾಗ ಭೂಮಿಯಿಂದ ಸ್ವತಂತ್ರರಾಗಬೇಕು; ನಮ್ಮ ಸಮಾಜದಿಂದ ನಾವು ಸ್ವತಂತ್ರರಾಗಬೇಕು; ಸಮಾಜದಿಂದ ಸ್ವತಂತ್ರರಾದಾಗ ಅವರಿಗೂ ನನಗೂ ಯಾವುದೇ ಸಂಬಂಧ ಇಟ್ಟುಕೊಳ್ಳದಾದಾಗ ಮತ್ತೇನು? ನನಗೆ ಆಗ ನಾನೇ ನನ್ನ ಹಿತಕ್ಕಾಗಿ ಮಾತ್ರ ಪರಮ ಸ್ವಾರ್ಥದಲ್ಲಿ ಕಟ್ಟಿಕೊಳ್ಳುವ ಇನ್ನೊಂದು ಭ್ರಾಮಕ ಸಮಾಜ ಇರುತ್ತದೆ. ಆಗ ನನ್ನ ಸ್ನೇಹಿತರು ಇರುವುದು ಫ್ರಾನ್ಸಿನಲ್ಲಿ, ಇಟಲಿಯಲ್ಲಿ, ನ್ಯೂಯಾರ್ಕಿನಲ್ಲಿ-ಎಲ್ಲ ದೇಶಗಳಲ್ಲಿ ದೊಡ್ಡ ದೊಡ್ಡವರು ಇದ್ದಾರಲ್ಲ, ಅವರು ಮಾತ್ರ ನನ್ನ ಸ್ನೇಹಿತರು. ನನ್ನ ಬಳಗದವರು.

ಇಂಥವರನ್ನು ಕಾಸ್ಮೊಪೊಲೈಟ್ ಅಂತಾರೆ. ನೆಹರೂನಲ್ಲಿ ಸ್ವಲ್ಪ ಕಾಸ್ಮೊಪೊಲೈಟ್ ಗುಣ ಇತ್ತು. ಆದರೆ ಅವನು ಗಾಂಧಿಗೆ ಬಹಳ ಹತ್ತಿರ ಇದ್ದದ್ದರಿಂದ ಅವನಿಗೆ ನೆಹರೂ ಎಲ್ಲರಿಗೂ ಓಟು ಕೊಡುತ್ತಿರಲಿಲ್ಲ. ಭಾರತ ಸ್ವಾತಂತ್ರವಾಗುತ್ತ ಇದ್ದಂತೆ The First decision was to give vote for everyone. It is universalist agenda. ಈಗ ನಮ್ಮ ಐಟಿ ಬಿಟಿಯವರನ್ನು ಕೇಳಿ. ಎಲ್ಲರಿಗೂ ಓಟ್ ಬೇಕಾ ಅಂದರೆ ನಮ್ಮ ಪಾಲಿಗೆ ಕೊಟ್ಟರೆ ಸಾಕು ಅಂತಾರೆ. ಅಂತಹವರಿಗೆ ಬೇಡವಾದದ್ದು ಯೂನಿವರ್ಸಲಿಸ್ಟ್ ಅಜೆಂಡ.

ಸಾಮಾನ್ಯ ಜನ ನಮ್ಮ ಕಣ್ಣಿಗೆ ಕಾಣಬೇಕು. ಗಾಂಧಿಗೂ ಜನ ಕಾಣುತ್ತಿದ್ದರು. ನೆಹರೂಗೂ ಜನ ಕಾಣುತ್ತಿದ್ದರು. ಆದರೆ ನಾಝರ್, ನೆಹರೂರಂಥವರಿಗೆ ಸ್ವಲ್ಪ ಕಾಸ್ಮೊಪಾಲಿಟನ್ ಅಜೆಂಡಾನೂ ಇತ್ತು. ಅದು ಜಗತ್ತಿನ ಅಲೆ ಆಗಿತ್ತು. ಅದರಲ್ಲಿ ಅವರೂ ಇದ್ದರು. ನಾನು ಅವರನ್ನು ವೈಯಕ್ತಿಕವಾಗಿ ತೆಗಳುತ್ತ ಇಲ್ಲ. ನಾವು ಇಂತಹ ಒಂದು ಅಲೆಯಲ್ಲಿ ಇದ್ದುಕೊಂಡೇ ಅದರಿಂದ ಲಾಭ ಮಾಡಿಕೊಂಡೇ ಅದರ ವಿರುದ್ಧ ಮಾತಾಡುವುದು ಒಂದು ರೀತಿಯ ಬ್ಯಾಡ್ ಫೈತ್ ಆಗುತ್ತೆ.

ಆದರೆ ಅನೇಕ ಸಾರಿ ಎಂಥ ಮನುಷ್ಯರಿಗೂ ನೆಮ್ಮದಿ ಬೇಕು ಅನ್ನಿಸಿದಾಗ ಗ್ಲೋಬಲೈಸೇಶನ್ ಕಷ್ಟ ಆಗುತ್ತದೆ. (ಎಂ.ವಿ. ಕಾಮತ್ ಮುಂಬೈ ಬಿಟ್ಟರು, ಉಡುಪಿಗೆ ಬಂದರು.) ಮಕ್ಕಳಿಗೂ ಬೆಳೆಯಲು ನೆಮ್ಮದಿ ಬೇಕು. ಈ ಪ್ರಪಂಚದಲ್ಲಿ ಮಕ್ಕಳು ಮುದುಕರು ಇದ್ದಾರೆ ಎಂಬುದನ್ನು ಮರೆತು ಬರೀ ಯುವಕರು ಇದ್ದಾರೆ ಎನ್ನುವ ಗ್ಲೋಬಲೈಸ್‌ಡ್ ಅಜೆಂಡಾ ಹಿಡಿದು ನಮ್ಮನ್ನು ಆಳುವವರು ಕಾರ್ಯ ನಿರತರಾಗಿದ್ದಾರೆ. ಅಮೆರಿಕಾದ ಹಗಲಿಗೆ ಇಂಡಿಯಾದ ರಾತ್ರಿಯನ್ನು ಕೊಲೊನೈಸ್ ಮಾಡಿದ್ದೇವೆ. All our nights are colonized to the day time there. ಇದರ ಬಗ್ಗೆ ಕ್ರಿಟಿಕಲ್ ಆಗಿ ಮಾತನಾಡಬೇಕು. ನನಗೂ ಒಬ್ಬ ಮಗ ಇದ್ದು ಅವನಿಗೆ ಕೆಲಸ ಇಲ್ಲದೆ ಇದ್ದರೆ ನಾನು ಅವನನ್ನು ಕಾಲ್‌ಸೆಂಟರ್‌ಗೆ ಕಳಿಸುತ್ತಿದ್ದೆನೇನೊ? ಆದುದರಿಂದ ಬ್ಯಾಡ್ ಫೈತ್‌ನಲ್ಲಿ ಮಾತಾಡಬಾರದು. I do not know how to react to this.

ಗಾಂಧಿಗೆ ಗೊತ್ತಿರುತ್ತಿತ್ತು. ನಮಗೆ ಗೊತ್ತಿಲ್ಲ. ನಾವು ಇಂಟೆಲೆಕ್ಚುಯಲ್ ಆಗಿ ಮಾತಾಡುತ್ತಿದ್ದೇವೆ- ಈ ಕಷ್ಟಗಳೆಲ್ಲ ಸಾಲ್ವ್‌ ಆಗಬೇಕಾದರೆ ಕಾಯಬೇಕು. ಹೀಗೆ ಕಾಲದಲ್ಲಿ ಕಾಯುತ್ತ ಇರುವಾಗ ಮಕ್ಕಳು ಹುಟ್ಟುತ್ತಲೇ ಇರ್ತಾರೆ. ನಾವು ಸಾಯ್ತನೇ ಇರುತ್ತೇವೆ. ಇಲ್ಲವಾದರೆ ಈ ಪ್ರಪಂಚದಲ್ಲಿ ಯಾರಾದರೂ ಬದುಕುವುದು ಸಾಧ್ಯವೆ? ಇನ್ನೂ ಆ ಸ್ಟಾಲಿನ್, ಹಿಟ್ಲರ್ ಇದ್ದು ಬಿಡ್ತಿದ್ದರು. ಅಂತಹ ದುಷ್ಟರು ಬಿಡಿ; ಎಲ್ಲ ಸಂತರು ಇಲ್ಲಿ ಸಾಯದೇ ಉಳಿದುಬಿಟ್ಟಿದ್ದರೆ ಅವರೂ ನಮಗೆ ಪ್ರಾಬ್ಲೆಮ್ ಆಗಿಬಿಡುತ್ತಿದ್ದರು. Really death is wonderful. And also birth.

ಹೊಸತಾಗಿ ಹುಟ್ತಾನೇ ಇರುತ್ತಾರಲ್ಲವೆ? ಅವರ ಅಜೆಂಡಾ ಏನಾಗಿರುತ್ತೋ. ಆದರೆ ಅವರಿಗೆ ಯಾವ ಅಜೆಂಡಾ ಇಲ್ಲವಾಗುವಂತೆ ನಾವು ಈ ಭೂಮಿಯನ್ನೇ ನಾಶ ಮಾಡಿಬಿಟ್ಟರೆ ಏನು ಗತಿ? ಈ ಭೂಮಿ ಇರುವ ತನಕ ಅವರಿಗೆ ಬೇರೆ ಅಜೆಂಡಾ ಇರುವುದಕ್ಕೆ ಸಾಧ್ಯತೆ ಇದೆ.

ನೀವು ಬೇಂದ್ರೆ ಕವನಗಳನ್ನು ನೋಡಬೇಕು. ಭೂಮಿ ತಾಯಿಗೆ ಬಹಳ ಸಹಿಸಿಕೊಳ್ಳುವ ಶಕ್ತಿ ಇದೆ. ಎಲ್ಲಿ ತನಕ ನಾವು ಭೂಮಿ ತಾಯನ್ನು ಉಳಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ನಮ್ಮ ನಂತರ ಬರುವವರಿಗೆ ಅವರದೇ ಆದ ಅಜೆಂಡಾ ಇರಲು ಸಾಧ್ಯ.

ಈಗ ನಿಮ್ಮಲ್ಲಿ ನಾಗಾರ್ಜುನ ಬಂದಿದೆಯಂತೆ- ಬಂದು, ಅದು ಇದೆ. ಇದ್ದ ಮೇಲೆ ಅದು ಅಲ್ಲಿಗೇ ನಿಲ್ಲುವುದಿಲ್ಲ. ಮತ್ತೊಂದು ಬರುತ್ತದೆ. ಇನ್ನೊಂದು ಬರುತ್ತದೆ. ಆಮೇಲಿಂದ ಇಲ್ಲಿ ಯುವಕರು ಮಾತ್ರ ಹೆಲಿಕಾಪ್ಟರ್‌ಗಳಲ್ಲಿ ಮಾತ್ರ ಓಡಾಡಿಕೊಂಡು ಇರುವುದಕ್ಕೆ ಆಗಬಹುದೇನೊ! ಮುದುಕರಿಗೂ, ಮಕ್ಕಳಿಗೂ ಎಡೆಯಿರದ ಜಗತ್ತು ಅದು.

ನಮ್ಮ ಮುಂದಿನವರ ಬಗ್ಗೆ ಯೋಚನೆ ಮಾಡಬೇಕು ಎನ್ನುವುದು ಗಾಂಧಿಯವರಿಗೆ ಇದ್ದ ಬಯಕೆ. ಆದುದರಿಂದ ಗಾಂಧಿ ಅಧ್ಯಯನ ಸಂಸ್ಥೆ will be very revolutionary ಇನ್ನು ಮುಂದೆ.

ಯಾಕೆ ಹೀಗೆ ಹೇಳುತ್ತೇನೆ ಕೇಳಿ. ಮಾರ್ಕ್ಸಿಸ್ಟ್‌ಗಳಿಗೂ ಗಾಂಧಿಯಂತೆ ಯೋಚಿಸುವುದು ಕಷ್ಟ. ಅವರ ಅಜೆಂಡಾನೂ ಸತತವಾದ ಪ್ರೊಗ್ರೆಸ್. ಚೀನಾದಲ್ಲಿ ಲಾಂಗ್ ಮಾರ್ಚ್‌ ಮಾಡಿ ಅವರು ತಲುಪಿದ್ದು ಕೋಕಾಕೋಲದ ನೀರಡಿಕೆಯಲ್ಲಿ, ಬಂಗಾಲದಲ್ಲಿ ಮಾಡಿದ್ದೇನು? ಕಮ್ಯುನಿಷ್ಟ್‌ agenda is not very different. It is to modernize, westernise, Europeanize and destroy various ways of living. ಲೆನಿನ್ ಮಾಡಿದ್ದು ಇದನ್ನೇ. ರೈತಾಪಿ ಜನ ಇರುವವರೆಗೆ ರಷ್ಯನ್ ಸಂಸ್ಕೃತಿ ಇರುತ್ತದೆ ಅಂತ ಅವರನ್ನು ‘ಕುಲಕ್ಸ್‌’ ಅಂತ ಕರೆದು ಧ್ವಂಸ ಮಾಡಿದ. ದೊಡ್ಡ ಮನುಷ್ಯ ಲೆನಿನ್. ಅವನ ಬಗ್ಗೆ ವೈಯಕ್ತಿಕವಾಗಿ ಹೇಳುತ್ತಿಲ್ಲ. ಅಜೆಂಡನೆ ಹಾಗಿತ್ತು ಏನು ಮಾಡುತ್ತೀರಿ? ಅದು ಎಸ್‌ಇಝೆಡ್ ಅಜೆಂಡ.

ಅಜೆಂಡಾದಿಂದ ಶುರುವಾಗುತ್ತೆ ಇಂತಹ ಪ್ರೋಗ್ರಸ್ಸಿನ ಆಕ್ಸನ್ಸ್. ಪರಿಣಾಮದಲ್ಲಿ ಕಮ್ಯುನಿಸ್ಟರು, ಕ್ಯಾಪಿಟಲಿಸ್ಟರು ಎಲ್ಲರೂ ಕಟ್ಟುವುದು ಒಂದೇ ರೀತಿರಿವಾಜಿನ ಸಮಾಜವನ್ನು.

ಗಾಂಧಿಯ ಕೊನೆಯ ಮಾತು ಹೇಳಿ ಮುಗಿಸುತ್ತೇನೆ. The smallest army imaginable ಇರುವ ದೇಶಬೇಕು ಅನ್ನುವ ಗಾಂಧಿಯ ಕಲ್ಪನೆ ಅದು –ಬರಿಯ ಕನಸಲ್ಲ ಅದು existentially possible. ವಿಚಿತ್ರವಾದ ಅಜೆಂಡಾ ಅದು, ಗ್ರಾಮಸ್ವರಾಜ್ಯ ಆದರೆ, ಪರಮಾಧಿಕಾರ ಪ್ರತಿಯೊಂದು ಗ್ರಾಮ ಸ್ವರಾಜ್ಯಕ್ಕೆ ಇರುವುದಾದರೆ, ಇದರದ್ದೆಲ್ಲ ಒಕ್ಕೂಟ ದೆಹಲಿಯಲ್ಲಿರುವುದಾದರೆ ಅದಕ್ಕೊಂದು ಸಣ್ಣ ಸೈನ್ಯ ಇದ್ದರೆ ಸಾಕು. ಯಾಕೆಂದರೆ ಅದಕ್ಕೆ ಸಾಮ್ರಾಟರಿರುವುದಿಲ್ಲ. ಆದರೆ ಯಾರೂ ಭಾರತದ ಮೇಲೆ ಬೀಳುವುದಿಲ್ಲ. ಯಾಕೆಂದರೆ ಭಾರತ ಆಗ ಮುಳ್ಳುಹಂದಿಯಂತಿರುತ್ತದೆ. ಪ್ರತಿಯೊಂದು ಗ್ರಾಮಸ್ವರಾಜ್ಯವೂ ಮುಳ್ಳಾಗಿದ್ದರೆ ಯಾತಾದರೂ ಅದರ ಮೈಮೇಲೆ ಬೀಳುವುದು ಸಾಧ್ಯವೆ?

ನಾವು ಭಾರತ ಮಹಾರಾಷ್ಟ್ರ ಆಗುವ ಕನಸಿನಲ್ಲಿ ಸ್ವಲ್ಪ ಮುಳ್ಳುಹಂದಿಯಂತೆ ಅದು ಇರಲಿ ಅನ್ನುವ ಆಸೆ ಇದ್ದರೆ ಒಳ್ಳೆಯರು.

ಜಯಪ್ರಕಾಶ ಮಾವಿನಕುಳಿ ಹೇಳುತ್ತಾ ಇದ್ದರು ಗಾಂಧಿ ಹೋದ ಅಂತ. ಎಲ್ಲೂ ಹೋಗಿಲ್ಲ. ಸೌತ್ ಆಫ್ರಿಕಾದ ಲಿಬರೇಶನ್‌ನ ಹಿಂದೆ ಗಾಂಧಿ ಇದ್ದಾನೆ, ಅಮೆರಿಕಾದ ಬ್ಲಾಕ್ಸ್‌ ನ ಲಿಬರೇಶನ್‌ ಹಿಂದೆ ಗಾಂಧಿ ಇದ್ದಾನೆ. ಇವತ್ತಿಗೂ ಯಾವ ಬಲವೂ ಇಲ್ಲದ ಜನರ ದುಃಖದಲ್ಲಿ ಗಾಂಧಿ ಇದ್ದಾನೆ. ಯಾರು ಜನರ ದುಃಖದಲ್ಲಿ ನೆನಪಾಗುತ್ತಾನೋ ಅವನು ಉಳಿಯುತ್ತಾನೆ. ಸಂಭ್ರಮದಲ್ಲಿ ನೆನಪಾಗುವವನು ಸಂಭ್ರಮ ಮುಗಿಯುತ್ತಿದ್ದಂತೆ ಮರೆತು ಹೋಗುತ್ತಾನೆ. ನಮ್ಮ ದುಃಖಗಳಲ್ಲಿ ಸಂಕಟಗಳಲ್ಲಿ  ಉಳಿಯುತ್ತಾನೆ ಗಾಂಧಿ. ನಮಸ್ಕಾರ.

*

(ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾಡಿದ ಭಾಷಣ, ಏಪ್ರಿಲ್೨೦೦೭)