ಬಿ.ವಿ. ಕಾರಂತರನ್ನು ಪ್ರತಿಭೆಯಲ್ಲಿ ಮೀರಿಸುವ  ಇನ್ನೊಬ್ಬ ನಾಟಕ ನಿರ್ದೇಶಕ ಭಾರತದಲ್ಲಿ ಇಲ್ಲ ಎಂದು ತಿಳಿಯುವ ಹಲವು ಸ್ನೇಹಿತರು ನನಗಿದ್ದಾರೆ. ಅಂಥವರಲ್ಲಿ ಒಬ್ಬರಾದ ಹಿಂದೀ ಲೇಖಕ ನಿರ್ಮಲ ವರ್ಮರು ಕಾರಂತರನ್ನು ಹೀಗೆ ಕೊಂಡಾಡಿದಾಗ ಕಾರಂತರು ಭೂಪಾಲ್‌ನಲ್ಲಿ ಇದ್ದರು. ಅವರ ಹಲವು ಪ್ರಯೋಗಗಳಲ್ಲಿ ಶೇಕ್ಸ್‌ ಪಿಯರ್‌ನ ಮ್ಯಾಕ್‌ಬೆತ್‌ನ್ನು ಭಾರತೀಯಗೊಳಿಸಿದ ಪ್ರಯೋಗ ಆ ಹೊತ್ತಿನಲ್ಲಿ ತುಂಬಾ ಹೆಸರು ಮಾಡಿತ್ತು. ಹೆಚ್ಚು ನಾಟಕಗಳನ್ನು ನೋಡದ ನಾನು ಈ ಪ್ರಯೋಗವನ್ನು ನೋಡಿಲ್ಲವೆಂದು ವಿಷಾದದಿಂದ ಹೇಳುತ್ತೇನೆ. ಆ ಕಾರಣಕ್ಕಾಗಿಯೇ ನಿರ್ಮಲ ವರ್ಮರ ಹೇಳಿಕೆಯನ್ನು ಉದ್ಧರಿಸುತ್ತಿದ್ದೇನೆ. ಅದೇ ನಿರ್ಮಲ ವರ್ಮರು ಇನ್ನೊಂದು ಸಂದರ್ಭದಲ್ಲಿ ಕಾರಂತರ ಬಗ್ಗೆ ದುಃಖದಿಂದ ಮಾತನಾಡಿದ್ದರು. ಎಲ್ಲರಿಗೂ ಫ್ಯಾಷನ್ ಆದ ಪ್ರಗತಿಶೀಲತೆಯ ದೃಷ್ಟಿಯಿಂದ ಕಾರಂತರು ಭೂಪಾಲ್‌ನಲ್ಲಿ ಹಲವು ದ್ವಿತೀಯ ದರ್ಜೆಯ ನಾಟಕಗಳನ್ನು ಆಡಿಸಿದ್ದು ಉಂಟಂತೆ. ಹೀಗೆ ಗೆಳಯರು ಕಾರಂತರನ್ನು ಟೀಕಿಸುವಾಗ ಕಾರಂತರದ್ದೇ ಆದ ಒಂದು ದರ್ಶನ ಇಲ್ಲ, ಅವರು ತಮ್ಮ ಪಾಲಿಗೆ ಬಂದ ಏನನ್ನಾದರೂ ಒಪ್ಪಿಕೊಂಡು ರಂಗದ ಮೇಲೆ ಸೊಗಸಾಗಿ ಪ್ರದರ್ಶಿಸಿ ಬಿಡುತ್ತಾರೆ ಎಂಬ ಭಾವನೆ ಇರುತ್ತಿತ್ತು. ಮೈಸೂರಿನಲ್ಲಿ ಜರ್ಮನ್ ನಿರ್ದೇಶಕನೊಬ್ಬನನ್ನು ಕರೆಯಿಸಿಕೊಂಡು ಅವರಿಂದ ಜರ್ಮನ್ ದೇಶದಲ್ಲಿ ಹಳಸಿಹೋದ ಒಂದು ಸಮಾಜವಾದೀ ಕೃತಿಯನ್ನು ರಂಗದ ಮೇಲೆ ತಂದದ್ದನ್ನು ಕಂಡು ನನಗೂ ಅದೇ ಬಗೆಯ ಕಿರಿಕಿರಿಯಾದದ್ದೂ ಇದೆ. ಕಾರಂತರಿಗೆ ಸಾಹಿತ್ಯ ಕೃತಿಗಳನ್ನು ಆಯ್ದುಕೊಳ್ಳುವಾಗ ವಿವೇಚನಾ ಶಕ್ತಿಯೇ ಇಲ್ಲವೇನೋ ಎನ್ನುವ ಅನುಮಾನ ಬಂದದ್ದೂ ಇದೆ. ಆದರೆ ಈ ಬಗೆಯ ವಿಮರ್ಶಾತ್ಮಕ ಮಾತುಗಳನ್ನಾಡುವುದೂ ಅನನ್ಯ ರಂಗ ಪ್ರತಿಭೆಯ ಕಾರಂತರೊಬ್ಬರ ಬಗ್ಗೆ ಮಾತ್ರ ಸಾಧ್ಯ.

ಹೀಗೆ ಅನ್ನಿಸಲು ಕಾರಣವಿದೆ. ರಂಗದ ಒಟ್ಟೂ ಭಾಷೆಯನ್ನು ಕಾರಂತರಷ್ಟು ಸಹಜವಾಗಿ ಬಲ್ಲವರು ನಮ್ಮಲ್ಲಿ ಅತಿ ವಿರಳವಾದ್ದರಿಂದ ಇಷ್ಟು ಅದ್ಭುತವಾದ ಪ್ರತಿಭೆಗೆ ಸರಿಸಮಾನವಾದ ಜೀವನ ದರ್ಶನದ ಹುಡುಕಾಟವನ್ನು ಕಾರಂತರಲ್ಲಿ ನಾವು ಅಪೇಕ್ಷಿಸುವುದು ಸಹಜವಾದುದು.

ಉದಾಹರಣೆಗೆ ಕಾರಂತರ ಅತ್ಯಂತ ಯಶಸ್ವೀ ಪ್ರಯೋಗಗಳಲ್ಲಿ ಒಂದಾದ ಜಡಭರತದ ನಾಟಕ ‘ಸತ್ತವರ ನೆರಳು’ ನೆನಪಾಗುತ್ತದೆ. ಈ ನಾಟಕದಲ್ಲಿ ಬ್ರಾಹ್ಮಣ್ಯದ ಅವನತಿಯ ಬಗ್ಗೆ ಆಳವಾದ ವಿಷಾದ ಇದೆ ಎಂದು ನಾನು ತಿಳಿದಿದ್ದೇನೆ. ಆದರೆ ಇಡೀ ನಾಟಕ ಬ್ರಾಹ್ಮಣ್ಯದ ಲೇವಡಿ ಆಗುತ್ತದೆ. ಅದಕ್ಕೆ ಆ ಕಾಲದ ಅಪೇಕ್ಷೆಗಳೂ ಕಾರಣವೆನ್ನಬಹುದು. ಬ್ರಾಹ್ಮಣ್ಯದ ಲಾಂಚನ ತೊಟ್ಟವರೆಲ್ಲರೂ ರಂಗದ ಮೇಲೆ ಕಾಣಿಸಿಕೊಂಡದ್ದೇ ಹಾಸ್ಯಾಸ್ಪದ ವ್ಯಕ್ತಿಗಳೆಂದು ತೋರುವ ವಾತಾವರಣದಲ್ಲಿ ಕಾರಂತರು ಬಹಳ ಸಲೀಸಾಗಿ ಅಂಥಾ ಅಪೇಕ್ಷೆಯನ್ನು ತಮ್ಮ ಪ್ರದರ್ಶನದಲ್ಲಿ ಬೆಳೆಸಿಬಿಟ್ಟಿದ್ದಾರೆ ಎನ್ನಬಹುದು. ಪುರಂದರದಾಸರ ಎಲ್ಲ ಕೀರ್ತನೆಗಳೂ ಹಾಗೆಯೇ ಅದ್ಭುತವಾಗಿದೆ ಎನಿಸಿದರೂ ಭಕ್ತಿಯ ಪರವಶತೆಯ ಯಾವ ಲಕ್ಷಣವೂ ಅವುಗಳಲ್ಲಿ ಕಾಣಸಿಗುವುದಿಲ್ಲ. ‘ಸಂಸ್ಕಾರ’ ಸಿನಿಮಾದಿಂದ ಪ್ರಾರಂಭವಾದ ಈ ಬ್ರಾಹ್ಮಣ ಲೇವಡಿ ತೀರಾ ಸಲೀಸಾದ ವಿನೋದದ ಕಲಾ ಮಾರ್ಗವಾದದ್ದೂ ಇದಕ್ಕೆ ಕಾರಣವಿರಬಹುದು.

ಕಾರಂತರ ಬಗ್ಗೆ ಹೀಗೆ ನಾನು ಟೀಕಿಸುವಾಗ ನಮ್ಮೆಲ್ಲರನ್ನೂ ನಾನು ಒಳಪಡಿಸಿಕೊಂಡು ಮಾತನಾಡುತ್ತಿದ್ದೇನೆ. ನಮ್ಮ ಹಲವು ಕೃತಿಕಾರರಲ್ಲಿ ಮತ್ತು ಕಲಾವಿದರಲ್ಲಿ ಪ್ರಗತಿಶೀಲತೆ ಮತ್ತು ತಾತ್ವಿಕ ಬಂಡಾಯ ಆಳವಾದ ಮಾನಸಿಕ ತೊಳಲಾಟದಿಂದಲೂ ಸಂಕಟದಿಂದಲೂ ಉದ್ಭವಿಸಿ ಬಂದುದಲ್ಲ ಎಂಬ ಅನುಮಾನ ಈ ದಿನಗಳಲ್ಲಿ ನಮ್ಮಲ್ಲಿ ಹಲವರನ್ನು ಕಾಡುತ್ತಿದೆ. ಕಾಲಕ್ಕೆ ಸಲ್ಲುವುದಕ್ಕಾಗಿ ಎಲ್ಲೂ ಈ ಬಗೆಯ ಧೋರಣೆಯನ್ನು ಒಪ್ಪಿಕೊಂಡರು. ಕಾರಂತರು ದೊಡ್ಡ ಪ್ರತಿಭಾಶಾಲಿಗಳಾದ್ದರಿಂದ ಇದನ್ನು ಅತ್ಯಂತ ಆಕರ್ಷಕವಾಗಿ ಮಾಡಿದರು. ಆದರೆ ಯಾರ ಜೀವನವೂ ಇಂಥಾ ಕೃತಿಗಳಿಂದ ತಲ್ಲಣಗೊಂಡೀತೆಂದು ನನಗನ್ನಿಸುವುದಿಲ್ಲ.

ಕಾರಂತರ ಪ್ರಯೋಗಗಳು ಇಂಥಾ ಟೀಕೆಗೆ ಮಾತ್ರ ಸೀಮಿತವಾದುದ್ದಲ್ಲ ಎಂಬುದನ್ನು ಮಾತ್ರ ಕೂಡಾ ಹೇಳಲೇಬೇಕು. ಈಚಿನ ಅವರ ‘ಗೋಕುಲ ನಿರ್ಗಮನ’ ಮಾತ್ರವಲ್ಲ ಅವರ ಕಾರ್ನಾಡ್ ನಾಟಕ ಪ್ರಯೋಗಗಳು ಈ ಬಗೆಯ ಟೀಕೆಯಿಂದ ದೂರ ನಿಲ್ಲುತ್ತವೆ. ಇಂಥಾ ಕೃತಿಗಳಲ್ಲಿ ಮತ್ತು ಮಕ್ಕಳಿಗಾಗಿ ಅವರು ಆಡುವ ನಾಟಕಗಳಲ್ಲಿ ಅವರು ತಮ್ಮನ್ನು ತಾವು ಮೀರಿ ಹೋಗುತ್ತಾರೆ.

ಎಲ್ಲ ನಾಟಕದ ನಿರ್ದೇಶಕರಲ್ಲೂ ಸಭಿಕರ ತತ್‌ಕ್ಷಣದ ಮೆಚ್ಚುಗೆಗಳಿಸುವ ಅಪೇಕ್ಷೆ ಸಹಜವಾಗಿ ಇರುತ್ತದೆ. ಆದ್ದರಿಂದ ಕಣ್ಣಿಗೂ ಕಿವಿಗೂ ಅಬ್ಬರವಾಗಿ ಪ್ರಿಯವಾಗುವಂತೆ ನಾಟಕಗಳನ್ನು ಪ್ರದರ್ಶಿಸುವುದೇ ನಮ್ಮಲ್ಲಿ ಹೆಚ್ಚು. ಈ ದೆಸೆಯಲ್ಲಿ ಕಾರಂತರಿಂದ ಅಲ್ಪಶಕ್ತರೂ ಕಲಿತುಕೊಂಡ ಚಟವೂ ಇದೆ. ಒಂದು ಪಿಸುಮಾತಿಗೂ ಪ್ರಪಂಚದ ಅತ್ಯುತ್ತಮ ನಾಟಕಗಳಲ್ಲಿ ಜಾಗವಿದೆ. ನಮ್ಮಲ್ಲಿ ಅಂಥಾ ನಾಟಕಗಳು ಕಡಿಮೆ ಎನ್ನಬಹುದು. ಖಂಡಿತವಾಗಿ ನಮ್ಮ ಅತ್ಯುತ್ತಮ ಕಾದಂಬರಿಗಳೂ, ಕವನಗಳೂ, ಕಥೆಗಳೂ, ಕನ್ನಡ ನಾಟಕಗಳಿಗಿಂತ ಈ ಸೂಕ್ಷ್ಮತೆಯ ವಿಷಯಕ್ಕೆ ಬಂದಾಗ ಗುಣಮಟ್ಟದಲ್ಲಿ ಹೆಚ್ಚಿನವು. ನಾಟಕದಲ್ಲಿ ಇದಕ್ಕೆ ಕೆಲವೇ ಕೆಲವು ವಿನಾಯಿತಿಗಳಿವೆ ಎನ್ನಬಹುದು. ಆದ್ದರಿಂದಲೇ ಕಾರಂತರಂಥಾ ಪ್ರತಿಭಾವಂತರು ಪ್ರದರ್ಶನದ ರಂಜಕತೆಯಿಂದ ಕೃತಿಗಳ ದೌರ್ಬಲ್ಯವನ್ನು ಮುಚ್ಚಬೇಕಾಗತುತದೆ. ಜರ್ಮನಿಯ ನಾಟಕಕಾರನೊಬ್ಬ ತನ್ನ ಕೃತಿಯಲ್ಲಿ ಒಂದು ಇಡೀ ಊರನ್ನೇ ಸುಟ್ಟು ಪ್ರೇಕ್ಷಕರಿಗೆ ತಲ್ಲಣ ಉಂಟು ಮಾಡಿದರೆ, ಶೇಕ್ಸ್‌ ಪಿಯರ್‌ ತನ್ನ ಒಥೆಲೋ ನಾಟಕದಲ್ಲಿ ಕೇವಲ ಒಂದು ಕರವಸ್ತ್ರವನ್ನು ಕೆಳಗೆ ಬೀಳಿಸಿ ಜೀವ ಅಲ್ಲಾಡುವಂತೆ ಮಾಡುತ್ತಾನೆ ಎನ್ನುತ್ತಾರೆ. ಇದನ್ನೇ ಕಲೆಯಲ್ಲಿನ ಸೂಕ್ಷ್ಮತೆ ಎನ್ನುವುದು. ತಾಳ ತಮಟೆ ಕುಣಿತಗಳಿಲ್ಲದೆ ನಾಟಕವಾಗುವುದಿಲ್ಲವೆಂಬ ಭ್ರಮೆಯಿಂದ ಕಾರಂತರಂಥವರ ಪ್ರತಿಭೆ ನಮ್ಮನ್ನು ಬಿಡುಗಡೆ ಮಾಡಬೇಕಾಗಿದೆ.

ಈವರೆಗೆ ನಾನು ಕಾರಂತರನ್ನು ಕುರಿತು ಮಾತನಾಡುತ್ತಿರುವ ರೀತಿ ನಮ್ಮ ನಡುವಿನ ಅತ್ಯಂತ ಶ್ರೇಷ್ಠ ಕಲಾವಿದರೆಂದು ಅವರನ್ನು ತಿಳಿದು ನೇರವಾಗಿ ಹೇಳದಿದ್ದರೆ ನನ್ನ ಟೀಕೆ ಸಣ್ಣತನಕ್ಕೂ, ಅಪಾರ್ಥಕ್ಕೂ ಎಡೆಮಾಡಬಹುದೆಂಬ ಭಯ ನನಗಿದೆ. ಅವರ ಬಗ್ಗೆ ಬರೆಯುವ ಹಲವರು ಕಾರಂತರ ಹಲವು ಮುಖಗಳ ಪ್ರತಿಭೆಯನ್ನು ಕೊಂಡಾಡಿರುತ್ತಾರೆ ಎಂದು ನನಗೆ ಗೊತ್ತು. ಕಣ್ಣಿನ ಜೊತೆಗೆ ಕಿವಿ ಕೆಲಸ ಮಾಡಿದಾಗ ನಾಟಕದ ಶಬ್ದ ಶರೀರ ಉತ್ಪನ್ನವಾಗುತ್ತದೆ. ಈ ವಿಷಯವಾಗಿ ಕಾರಂತರಿಗಿಂತ ದೊಡ್ಡ ಜೀನಿಯಸ್ಸ್‌ ನ್ನು ನಾನು ನೋಡಿಲ್ಲ. ಹಾಗೆಯೇ ಒಂದನ್ನು ಇನ್ನೊಂದರ ಜೊತೆ ಸಂಬಂಧಪಡಿಸಿ ನೋಡುವ ಶಕ್ತಿ ಅತ್ಯುತ್ತಮ ಪ್ರತಿಭೆಯ ಲಕ್ಷಣ ಎನ್ನುವುದಾದರೆ, ಕಾರಂತರು ತಮ್ಮ ನೆನಪುಗಳನ್ನು ಬಳಸಿಕೊಳ್ಳುವ ಕ್ರಮ ಅದ್ಭುತವಾದ್ದು. ಅವರು ಮಾಡಿದ್ದು ಪೂರ್ವಭಾವಿಯಾಗಿ ಇದ್ದದ್ದಲ್ಲ. ಅದು ಅಲ್ಲೇ ರಂಗದ ಮೇಲೆಯೇ ಹುಟ್ಟಿಕೊಳ್ಳುವುದು. ಕಾರಂತರಿಗೂ ಕೂಡಾ ಅದು ಆ ಕ್ಷಣದಲ್ಲಿ ಅವತರಿಸಿತ್ತು.

ಪೂರ್ವ ಸಿದ್ಧತೆ ಇಲ್ಲದಂತೆ ಅನುಭವಕ್ಕೆ ಎದುರಾಗುವ ಈ ಶಕ್ತಿ ಎಲ್ಲಾ ಕಲೆಗಳ ಜೀವನದಲ್ಲಿ ಇರುವ ಗುಣ. ಅದು ಕಾರಂತರಲ್ಲಿ ಯಥೇಚ್ಛವಾಗಿದೆ. ಅಂದರೆ ಅತ್ಯುತ್ತಮ ಕಲಾವಿದನ ಪಾಡು ಅವರದ್ದಾಗಿದೆ. ಆದ್ದರಿಂದರಲೇ ಅವರು ಕೆಲವೊಮ್ಮೆ ತಾನು ಇನ್ನು ಮುಂದೆ ಏನನ್ನೂ ಮಾಡಲಾರೆನೆಂಬ ಸ್ಥಿತಿಯನ್ನು ತಲುಪುತ್ತಲೇ ಇರುತ್ತಾರೆ. ಎಲ್ಲಾ ದೊಡ್ಡ ಕಲಾವಿದರೂ ತಮ್ಮ ಅತ್ಯುತ್ತಮ ಕೃತಿರಚನೆಯ ನೆನಪಿನಿಂದ ಪೀಡಿತರಾಗಿರುತ್ತಾರೆ. ಹೀಗೆ ಪೀಡಿತರಾದವರೂ ಇನ್ನೊಂದು ಕೃತಿ ತಮಗೆ ಸಾಧ್ಯವಾಯಿತೆಂದೂ ಅಚ್ಚರಿಪಡುತ್ತಾರೆ. ಅಥವಾ ತನಗೆ ದೊರೆತ ಗೌರವ ಅನುಭವ ನೆರಳಿನಲ್ಲಿ ತಮಗೆ ಸಲೀಸಾದ್ದನ್ನು ಮಾಡುತ್ತಾ ನಿಂತುಬಿಡುತ್ತಾರೆ. ಕಾರಂಭತರು ಸಲೀಸಾದ್ದನ್ನು ಆಗಾಗ ಮಾಡಿದರೂ ನಿಜಕ್ಕೂ ಅವರು ತಮ್ಮಲ್ಲಿ ಅ-ದೃಷ್ಟವಾಗಿ ಇರುವುದರಿಂದ ಸದಾ ಬಾಧಿತರಾದವರು. ಆದ್ದರಿಂದಲೇ ಅವರನ್ನು ಹೀಗೆ ಚುಚ್ಚಿ ಮಾತನಾಡುವುದು ಸಾಧ್ಯ. ಅವರು ಎಷ್ಟು ನಮ್ಮ ಕಾಲದವರೆಂದರೆ, ಹಾಗೆಯೇ ಈ ಕಾಲದವರಾಗಿದ್ದೂ ಎಷ್ಟು ಪೂರ್ವಸ್ಮೃತಿಗಳನ್ನು, ಜನಪದ ಅಭಿವ್ಯಕ್ತಿ ಕ್ರಮಗಳನ್ನೂ ನೆನಪಾಗಿ ಪಡೆದವರೆಂದರೆ, ನಮ್ಮ ಕಾಲದ ಇತಿಮಿತಿಗಳನ್ನು ಅವರು ಮೀರುವುದನ್ನು ನಾವು ಸಹದವಾಗಿ ನಿರೀಕ್ಷಿಸುತ್ತೇವೆ.

*

(ಮುರಳೀಧರ ಉಪಾದ್ಯ ಅವರಿಗೆ ಹೇಳಿ ಬರೆಸಿದ ಲೇಖನ. ‘ಬಿ.ವಿ. ಕಾರಂತಪುಸ್ತಕದಲ್ಲಿ ಪ್ರಕಟಿತ. ಪ್ರಕಟಣೆ ಕರ್ನಾಟಕ ಸಂಘ ಪುತ್ತೂರು ೧೯೯೬