ನಾನು ರಾಮಚಂದ್ರ ಗಾಂಧಿಯವರನ್ನು (ನನಗವರು ರಾಮೂ ಗಾಂಧಿ) ಮೊದಲು ನೋಡಿದ್ದು ಆಕ್ಸ್‌ ಫರ್ಡ್‌ನ ಒಂದು ರೆಸ್ಟೋರೆಂಟ್‌ನಲ್ಲಿ. ಅವರಿಗಾಗಿ ಇಪ್ಪತ್ತಾರೋ ಇಪ್ಪತ್ತೇಳೋ ವರ್ಷ. ದೂರದಿಂದ ಅವರನ್ನು ಕಂಡಿದ್ದೆ. ನನ್ನ ಗೆಳೆಯ ‘ಇವರೇ ರಾಮಚಂದ್ರ ಗಾಂಧಿ’ ಎಂದಾಗ ಮಹಾತ್ಮಾ ಗಾಂಧಿಯವರಿಗಿದ್ದ ಕಿವಿಗಳೇನಾದರೂ ಕಾಣಿಸಬಹುದೇ ಎಂದು ಕುತೂಹಲದಿಂದ ನಾನು ಅವರನ್ನು ದುರುಗುಟ್ಟಿ ನೋಡಿದ್ದೆ. ನನ್ನ ಪುಟ್ಟ ಮಗನಿಗೂ ಅವರನ್ನು ತೋರಿಸಿದ್ದೆ. ಇದನ್ನು ಬಹಳ ವರ್ಷಗಳಾದ ನಂತರ ಅವರಿಗೆ ನೆನಪು ಮಾಡಿಕೊಟ್ಟಾಗ ಆ ದಿನಗಳಲ್ಲಿ ತಾನು ಯೋಚಿಸುತ್ತಿದ್ದ ಕ್ರಮಕ್ಕೂ ಈಗಿನ ಕ್ರಮಕ್ಕೂ ಆಗಿರುವ ಆಗಾಧವಾದ ವ್ಯತ್ಯಾಸವನ್ನು ಕುರಿತು ಮಾತನಾಡಿದ್ದರು. ಅವರ ಮೊದಲ ಪುಸ್ತಕ ಸರಿ ಸುಮಾರು ಆ ಆಕ್ಸ್ ಫರ್ಡ್‌ ಕಾಲದಲ್ಲಿಯೇ ಪ್ರಕಟವಾಗಿತ್ತು. ಅದು ಪಾಶ್ಚಾತ್ಯ ಚಿಂತನೆಯಲ್ಲೇ ಹುಟ್ಟ ಅವರನ್ನು ಪ್ರಸಿದ್ಧರನ್ನಾಗಿ ಮಾಡಿದ ಕೃತಿಯಾಗಿತ್ತು. ಆದರೆ ರಾಮಚಂದ್ರ ಗಾಂಧಿ ಅದನ್ನು ನಿರಾಕರಿಸಿ ಬದಲಾದರು. ಅಪ್ಪಟ ಭಾರತೀಯ ಕ್ರಾಂತದರ್ಶಿಯಾದರು. ನೆಹರೂ ಸೆಂಟರ್‌ನಲ್ಲಿ ಒಮ್ಮೆ ಪ್ರಸಿದ್ಧ ಐರೋಪ್ಯ ತತ್ವಜ್ಞಾನಿ ಈ ಕಾಲದ ಬಗ್ಗೆ ಮಾತನಾಡಿದ ನಂತರ ಎಲ್ಲರೂ ಬೆರಗಾಗಿ ಕೂತಿದ್ದಾಗ, ಅಲ್ಲಿದ್ದ ರಾಮೂ ಗಾಂಧಿ ರಮಣರು ಮುಟ್ಟಿದ ಪ್ರಜ್ಞಾಸ್ಥಿತಿಯೂ ಈ ನಮ್ಮ ಕಾಲವನ್ನು ಅರಿಯಲು ಮುಖ್ಯವಲ್ಲವೆ? ಎಂದುಬಿಟ್ಟು ಪಾಶ್ಚಾತ್ಯ ಜ್ಞಾನಕ್ಕೆ ಬೆರಗಾದವರು ಋಷಿಯೊಬ್ಬನನ್ನು ಆ ಸಭೆಗೆ ಬರಮಾಡಿಕೊಳ್ಳಲೇಬೇಕಾಗಿ ಬರುವಂತೆ, ಇದರ ಅಗತ್ಯದಿಂದ ಮುಜುಗರಪಡುವಂತೆ ಮಾಡಿದ್ದರು.

ನನ್ನ ಪರಮಾಪ್ತದಲ್ಲಿ ರಾಮೂ ಗಾಂಧಿಯೂ ಒಬ್ಬರು. ಆಶೀಶ್ ನಂದಿ, ಶಿವ ವಿಶ್ವನಾಥನ್, ನಮ್ಮ ಕೆ.ವಿ. ಸುಬ್ಬಣ್ಣ ಇವರ ಮಾತುಗಳಿಗೆ ಹೇಗೋ, ಹಾಗೆಯೇ ನಾನು ರಾಮೂ ಗಾಂಧಿಗೆ ಕಣ್ಣು, ಕಿವಿ ಮತ್ತು ಮನಸ್ಸನ್ನು ಸದಾ ತೆರೆದಿರುತ್ತಿದ್ದೆ. ಆದರೆ ಅಷ್ಟು ಪರಮಾಪ್ತರಾದರೂ ಅವರ ಜತೆ ನನಗೆ ಸಲಿಗೆ ಇರಲಿಲ್ಲ. ನನಗೆ ಮಾತ್ರವಲ್ಲ; ಅವರ ಯಾವ ಸ್ನೇಹಿತರಿಗೂ ಅವರೊಂದಿಗೆ ಸಲಿಗೆ ಇರಲಿಲ್ಲ. ಇಂಡಿಯಾ ಇಮಡರ್ ನ್ಯಾಶನಲ್ ಸೆಂಟರ್‌ನಲ್ಲಿ-ಈಗ ಅವರು ಕೊನೆಯುಸಿರೆಳೆದ ಸ್ಥಳ-ನಾನು ಸದಾ ಅವರನ್ನು ಕಾಣುತ್ತಿದ್ದೆ. ಕಂಡ ಪ್ರತಿಸಲವೂ ನಾನು ಅವರನ್ನು ಮಾತನಾಡಿಸಲು ಹೋಗುತ್ತಿರಲಿಲ್ಲ. ಯಾಕೆಂದರೆ ಅಷ್ಟು ತನ್ಮಯರಾಗಿ, ಧ್ಯಾನಸ್ಥರಾಗಿ ಅವರು ಒಂದು ಮೂಲೆಯಲ್ಲಿ ತಾನೇ ಹೊತ್ತುತಂದು ಹಾಕಿಕೊಂಡ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂತಿರುತ್ತಿದ್ದರು. ಅವರ ಎದುರಿಗೊಂಡು ‘ರಂ’ ಬೆರೆಸಿದ ಗ್ಲಾಸಿರುತ್ತಿತ್ತು. ಗಂಟೆಗಟ್ಟಲೆ ಅದು ಖಾಲಿಯಾಗದೆ ಇದ್ದದನ್ನೂ ನೋಡಿದ್ದೆ. ಕೆಲವೊಮ್ಮೆ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್‌ನ ಬಾರ್‌ನಲ್ಲಿ ಇದ್ದ ಕುತೂಹಲಿಗಳು ನಮ್ಮ ಸ್ನೇಹಿತರಿಗೆ ಅವರನ್ನು ಪರಿಚಯ ಮಾಡಿಕೊಡುವುದಿತ್ತು-‘ಇವರು ಮಹಾತ್ಮಾ ಗಾಂಧಿಯವರ ಮೊಮ್ಮಗ’ ಎಂದು. ಆಗ ತುಂಬಾ ಮುಜುಗರಪಡುತ್ತಿದ್ದ ರಾಮೂ ನನಗೆ ಹೇಳುತ್ತಿದ್ದರು; ‘ನೋಡಿ ಈ ಗಾಂಧಿಯ ಮೊಮ್ಮಗ ರಂ ಕುಡಿಯುತ್ತಾನೆ. ಎನ್ನುವುದನ್ನು ಸೂಚಿಸಲೆಂದೇ ಈ ಕುಹಕ-ಕುತೂಹಲಿಗಳು ನನ್ನನ್ನು ಹೀಗೆ ಪರಿಚಯ ಮಾಡಿಕೊಡುತ್ತಾರೆ’. ರಾಮುವಿನ ಕಷ್ಟ ಇಬ್ಬರ ಖ್ಯಾತ ಅಜ್ಜರನ್ನು ಪಡೆದ್ದು. ತಾಯಿಯ ಕಡೆಯಿಂದ ಪರಮ ಚಾಣಾಕ್ಷ ನೀತಿನಿಷ್ಠರಾದ ರಾಜಾಜಿ ಅವರ ಇನ್ನೊಬ್ಬ ಅಜ್ಜ.

ರಾಮೂ ಗಾಂಧಿ ನಿಜವಾದ ಅರ್ಥದಲ್ಲಿ ಜಂಗಮರು. ಯಾವ ಒಂದು ಕೆಲಸಕ್ಕೂ ಅಂಟಿಕೊಂಡವರಲ್ಲ, ಆಕ್ಸ್‌ ಫರ್ಡ್‌ನಲ್ಲಿ ಓದಿ ಬಂದ ನಂತರ ಹೈದರಾಬಾದ್‌ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಫಿಲಾಸಫಿಯ ಪ್ರೋಫೆಸರ್ ಆಗಿ ಆಯ್ಕೆಯಾದರು. ಕೆಲವು ವರ್ಷ ಇವತ್ತಿಗೂ ಅಲ್ಲಿನ ವಿದ್ವಾಂಸರು ನೆನೆದುಕೊಳ್ಳುವಂತಹ ವಿಭಾಗವನ್ನು ಕಟ್ಟಿದರು. ಅವರ ವಿಭಾಗ ಇದ್ದ ಜಾಗ ಸರೋಜಿನಿ ನಾಯ್ಡು ಅವರು ವಾಸವಾಗಿದ್ದ ಬಂಗಲೆಯಾಗಿತ್ತು. ಅದು ಹಳೆಯ ಕಾಲದ ಸುಂದರವಾದ ಕಟ್ಟಡ. ಕಾಂಪೌಂಡಿನ ತುಂಬಾ ಹಳೆಯ ಕಾಲದ ಬೆಳೆದು ನಿಂತ ಮರಗಳು. ಆದರೆ ವಿಶ್ವವಿದ್ಯಾಲಯದ ಕುಲಪತಿಗೆ ಆ ಮರಗಳ ಮೇಲೆ ಕಣ್ಣು ಬಿತ್ತು. ಅದರಲ್ಲೂ ಅಲ್ಲಿದ್ದ ಒಂದು ದೊಡ್ಡ ಮರವೊಂದರ ಮೇಲೆ ಅವರ ಕಣ್ಣಿತ್ತು. ಕವಿಯಗಿದ್ದ ಸರೋಜಿನಿ ನಾಯ್ಡುಗೆ ಪ್ರಿಯವಾಗಿದ್ದ ಮರ ಅದು. ಅದನ್ನು ಕಡಿಯಬೇಕೆಂದು ಕುಲಪತಿ ನಿರ್ಣಯಿಸಿದರು. ರಾಮೂ ಗಾಂಧಿ ಇದನ್ನು ವಿರೋಧಿಸಿದರು. ಕುಲಪತಿ ಇವರ ಮಾತು ಕೇಳಲಿಲ್ಲ. ಮರವನ್ನು ಕಡಿದೇ ಬಿಟ್ಟರು. ಅದನ್ನು ಕಡಿದ ದಿನವೇ ರಾಮಚಂದ್ರ ಗಾಂಧಿ ಪ್ರೊಫೆಸರ್ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ ರಾಮೂಗಾಂಧಿ ಎಲ್ಲಿಯೂ ಸ್ಥಿರವಾಗಿ ನಿಂತು ಕೆಲಸ ಮಾಡಲಿಲ್ಲ. ತನ್ನಲ್ಲಿರುವ ಅಲ್ಪ ಸ್ವಲ್ಪ ಹಣವನ್ನೇ ಬಹಳ ಮಿತವಾಗಿ ವ್ಯಯಿಸಿ ದಿಲ್ಲಿಯ ಬಂಗಾಲಿ ಮಾರ್ಕೆಟ್‌ನ ಬಳಿ ಇದ್ದ ಒಂದು ಮನೆಯ ಹೊರಾಂಗಣದ ರೂಮಿನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಆಗೀಗ ಅವರ ಮಗಳು ಬಂದು ಅವರನ್ನು ನೋಡಿ ಹೋಗುತ್ತಿದ್ದಳು. ಅವರ ವಾಸ ಈ ಬೋಳು ಬೋಳಾದ ಕೋಣೆಯಲ್ಲಿ. ಅಲ್ಲಿದ್ದದ್ದು ರಮಣರ ಒಂದು ಚಿತ್ರ ಮಾತ್ರ. ಧೃಡವೆನ್ನಿಸುವಂತೆ ದೊಣ್ಣೆಯೊಂದನ್ನು ನೆಲಕ್ಕೆ ಊರಿ, ಅನಾಯಾಸವೆನಿಸುವಂತೆ ಇಳಿಬಿಟ್ಟ ಬೋಳುಕಾಲಿನಮೇಲೊಂದು ಕಾಲನ್ನು ಇಟ್ಟು, ಕೌಪೀನಧಾರಿಯಾಗಿ, ಬಂಡೆಯ ಮೇಲೆ ಪ್ರಸನ್ನರಾಗಿ ಕೂತ ಗಾಂಧಿಗಿಂತಲೂ ಹೆಚ್ಚು ಬೆತ್ತಲಾದ ರಮಣರು. ಅವರಲ್ಲಿದ್ದ ಇನ್ನೊಂದು ಕಟ್ಟುಹಾಕಿದ ಕರುಣೆ ಉಕ್ಕುವ ಕಣ್ಣುಗಳ ರಮಣರ ಚಿತ್ರವನ್ನು ನನ್ನ ಹೆಂಡತಿ ಎಸ್ತರ್‌ಗೆ ಅವಳು ಕ್ಯಾನ್ಸರ್‌ನಿಂದ ಗುಣಮುಖಳಾದಾಗ, ಕಟ್ಟುಹಾಕಿದ ಚಿತ್ರದ ಭಾರಕ್ಕೆ ಮುಜುಗರಪಡುತ್ತ, ಕೊಡಲೆ ಎಂದು ಕೋರಿ ಕೊಟ್ಟಿದ್ದರು. ಈಗಲೂ ಅದು ಮನೆಯಲ್ಲಿದೆ.

ನಿತ್ಯ ರಾಮೂ ಗಾಂಧಿ ನಾಕು ತುತ್ತು ಊಟ ಮಾಡಲು, ಮತ್ತು ಓದಲು ಹತ್ತಿರವೇ ಇದ್ದ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ಗೆ ಬರುತ್ತಿದ್ದರು. ನಮ್ಮ ನಡುವೆ ಒಂದು ಜೋಕ್ ಇತ್ತು. ರಾಮೂ ಗಾಂಧಿ ಜಂಗಮರು. ಆದರೆ ನನ್ನ ಬಂಗಾಳಿ ಮಾರ್ಕೆಟ್‌ನ ಸನ್ಯಾಸಿ ಕೋಣೆ ಮತ್ತು ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನ ಹಿತವಾದ ಪರಿಸರಕ್ಕೆ ಅಂಟಿಕೊಂಡ ಜಂಗಮರು. ಪ್ರಾಯಶಃ ಬಿಸಿಲಿನ ಬೇಗೆಯನ್ನು ತಾಳಲಾರದೆ ಕೆಲವು ದಿನಗಳಿಗೆಂದು ಸೆಂಟರ್‌ನ ರೂಮ್‌ನಲ್ಲಿ ಅವರು ಇದ್ದು ನಿದ್ದೆಯಲ್ಲಿ ಸತ್ತಿರಬೇಕು. ಕೆಲವು ತಿಂಗಳೂಗಳ ಹಿಂದೆ ಅವರನ್ನು ನಾನು ಬೆಂಗಳೂರಿಗೆ ಬರುವಂತೆ ಕರೆದಿದ್ದೆ. ‘ಬರಲು ನನಗೂ ಇಷ್ಟ, ಸದ್ಯ ಆರೋಗ್ಯ ಸರಿಯಿಲ್ಲ’ ಎಂದು ಅವರು ಉತ್ತರ ಬರೆದಿದ್ದರು.

ರಾಮೂ ಗಾಂಧಿ ಆಗೀಗ ಜೇಬಿನಿಂದ ಒಂದು ನೋಟ್‌ ಬುಕ್ ತೆರೆದು, ಅದರಲ್ಲೇನೋ ಬರೆದುಕೊಳ್ಳುತ್ತಿದ್ದರು ಅಥವಾ ಹೆಗಲ ಮೇಲೊಂದು ಚೀಲವನ್ನು ಸಿಕ್ಕಿಸಿ ಎರಡೆರೆಡು ವೇಸ್ಟ್‌ ಕೋಟ್‌ಗಳನ್ನು ಇಸ್ತ್ರಿಯಾಗದ ಜುಬ್ಬಾದ ಮೇಲೆ ಧರಿಸಿ ಕತ್ತಿಗೊಂದು ಮಫ್ಲರ್ ಸುತ್ತಿ ಲೋದಿ ಗಾರ್ಡನ್‌ನಲ್ಲಿ ವಾಕಿಂಗ್ ಮಾಡುವಾಗಲೂ, ತಟ್ಟನೇ ನಿಂತು, ನೋಟ್ ಬುಕ್ ತೆಗೆದು ಏನನ್ನೋ ಬರೆದುಕೊಳ್ಳುತ್ತಿದ್ದರು. ನನಗಂತೂ ಅವರು ಪೂರ್ವಕಾಲದ ಋಷಿಯಂತೆಯೇ ಭಾಸವಾಗುತ್ತಿದ್ದರು. ಕೆಲವೊಮ್ಮೆ ದೂರ್ವಾಸರಂತೆ ಕೂಡ.

ನನ್ನ ಒಂದು ನೆನಪನ್ನು ಹೇಳುತ್ತೇನೆ. ಅಯೋಧ್ಯೆಯಲ್ಲಿ ಮಸೀದಿಯನ್ನು ಕೆಡವಿ ದೇಶದಲ್ಲೆಲ್ಲಾ ಹಿಂಸೆ ಮತ್ತು ಭಯದ ವಾತಾವರಣ ಹಬ್ಬಿದಾಗ ರಾಮೂ ಗಾಂಧಿ ನನ್ನಲ್ಲೊಂದು ವಿಚಾರ ಹಂಚಿಕೊಂಡಿದ್ದರು. ‘ಇನ್ನು ಹದಿನೈದು ದಿವಸದಲ್ಲಿ ನಾವೆಲ್ಲರೂ ಒಟ್ಟಾಗಿ ಪಾರ್ಲಿಮೆಂಟ್ ಭವನದಿಂದ ಶುರುಮಾಡಿ ಗಾಂಧಿಯವರು ಕೊಲೆಯಾದ ಬಿರ್ಲಾ ಮನೆಯ ತನಕ ಪಾದಯಾತ್ರೆ ಮಾಡಬೇಕು. ಆದ್ದರಿಂದ ಇವತ್ತಿನಿಂದ ನಾನು ರಂ ಕುಡಿಯುವುದಿಲ್ಲ. ನಿನ್ನ ಎಲ್ಲಾ ಸ್ನೇಹಿತರಿಗೂ ಹೇಳು. ನನ್ನ ಎಲ್ಲ ಸ್ನಾಹಿತರಿಗೂ ಹೇಳುತ್ತೇನೆ.’

ನಾವೆಷ್ಟು ಪ್ರಯತ್ನಪಟ್ಟರೂ ನಮಗೆ ಸಿಕ್ಕವರು ಸುಮಾರು ೨೫ ಮಂದಿ. ಇದರಿಂದ ರಾಮೂ ಎದೆಗುಂದಲಿಲ್ಲ. ‘ಎಲ್ಲ ಮಹತ್ವದ ಕೆಲಸವೂ ಕೆಲವೇ ಜನರಿಂದ ಪ್ರಾರಂಭವಾಗುವುದು ತಾನೆ’ ಎಂಬುದು ಅವರ ಅಭಿಪ್ರಾಯವಾಗಿತ್ತು. ನಾವೆಲ್ಲರೂ ಒಂದು ಬೆಳಿಗ್ಗೆ ಸೇರಬೇಕಾದಲ್ಲಿ ಸೇರಿದೆವು. ರಾಮೂ ನಮ್ಮ ನಾಯಕತ್ವ ವಹಿಸಿದ್ದರು. ನಾವು ಪಾದಯಾತ್ರೆಯಲ್ಲಿ ಹಾಡಲೆಂದು ಅವರು ಟ್ಯಾಗೋರರ ‘ಏಟ್ಲ ಚಲೋ….’ ಆರಿಸಿದ್ದರು. ಶುರು ಮಾಡಿದಾಗ ನನಗೆ ಆ ಹಾಡನ್ನು ಹಾಡುತ್ತಾ ಜನಸಂದಣಿಯ ಮಧ್ಯೆ ನಾವು ಇಪ್ಪತ್ತೈದು ಜನ ಗಂಭೀರವಾಗಿ ಪಾದಯಾತ್ರೆ ಮಾಡುವುದು ಮುಜುಗರ ಎನ್ನಿಸಿತ್ತು. ಆದರೆ ಟ್ಯಾಗೋರರ ಹಾಡಿನ ಬಲವೋ, ಅಥವಾ ತುಂಬಾ ಮೋಹಕವಾದ ಕಣ್ಣುಗಳ ರಾಮೂ ಗಾಂಧಿಯ ಮುಖದ ಆರ್ದ್ರತೆಯೋ ಅಂತೂ ನಮ್ಮನ್ನು ನಾವು ಮರೆತು ನಮ್ಮ ಘನೋದ್ದೇಶದಲ್ಲಿ ಮಗ್ನರಾಗಿ ನಮ್ಮ ನಮ್ಮ ಘನತೆ ಮರೆತು, ಶಿಸ್ತಾಗಿ ಸಾಲಾಗಿ ನಡೆಯುವುದು ಸಾಧ್ಯವಾಯಿತು.

ಸುತ್ತಲಿನ ಜನ ಕೆಲವೊಮ್ಮೆ ನಗುತ್ತಾ, ಕೆಲವೊಮ್ಮೆ ಪರಿಹಾಸ್ಯದಲ್ಲಿ ನೋಡುತ್ತಿದ್ದರೂ ಅದೇ ಧಾಟಿಯಲ್ಲಿ ಅದೇ ಉತ್ಕಂಠದಲ್ಲಿ ಹಾಡುತ್ತಾ ನಾವು ಸೀದಾ ಗಾಂಧಿ ಕೊಲೆಯಾದ ಜಾಗವನ್ನು ತಲುಪಿ ಅಲ್ಲಿ ಮೌನವಾಗಿ ಕುಳಿತು ಪ್ರಾರ್ಥನೆ ಮಾಡಿದೆವು. ನಂತರ ಅಲ್ಲೇ ಶುರುವಾದ ಸಭೆಯಲ್ಲಿ ಟಿಬೆಟ್‌ನ ಯತಿಗಳು ಕೆಲವರು ಬಂದು ಅವರ ಪ್ರಾರ್ಥನೆಯನ್ನು ಮಾಡಿದರು. ಟಿಬೆಟನ್ನರ ಪ್ರಾರ್ಥನಾ ಕ್ರಮ ನಮಗೆ ವಿಲಕ್ಷಣವೆನಿಸುತ್ತದೆ. ಆದರೆ ಆ ವಿಲಕ್ಷಣತೆಯೇ ನಮ್ಮ ಮನಸ್ಸನ್ನು ಗಾಢವಾಗಿ ತಟ್ಟಿತು. ಅಲ್ಲಿ ಕೆಲವರು ಮಾತಾಡಿದ ನಂತರ ನಾವು ಹಿಂದೆ ಬಂದೆವು (ರಾಮೂ ಗಾಂಧಿಗೆ ತನ್ನ ಅಜ್ಜನ ಅಹಿಂಸೆಯ ಬದ್ಧತೆಯನ್ನು ಈ ಕಾಲದಲ್ಲಿ ಉಳಿಸಿಕೊಂಡವರು ದಲೈಲಾಮ).

ಆಗಾಗ ರಾಮೂ ಗಾಂಧಿಗೆ ತನ್ನ ತಪಸ್ಸಿನಿಂದ ಹೊರಬಂದು ಕ್ರಿಯಾಶೀಲನಾಗಬೇಕು ಅನಿಸುತ್ತಿತ್ತು. ಒಮ್ಮೆ ರಾಮೂ ನನಗೆ ಹೇಳಿದ್ದರು. ‘ಗಾಂಧೀಜಿಯಷ್ಟು ದೊಡ್ಡ ತಾಂತ್ರಿಕ ಯಾವ ಕಾಲದಲ್ಲೂ ಇರಲಿಲ್ಲವೇನೋ?’ ಚರಕದಿಂದ ನೂಲುವುದರಿಂದ ಶುರುವಾಗಿ ಉಪ್ಪಿನ ಸತ್ಯಾಗ್ರಹ ತನಕ ಮತ್ತು ಕೊನೆಯಲ್ಲಿ ತನಗಿಂತ ಎತ್ತರವಾದ ಒಂದು ದೊಣ್ಣೆಯನ್ನು ಹಿಡಿದು ನವಾಖಲಿಯಲ್ಲಿ ಕಲ್ಲು ಮುಳ್ಳು ಪಾಯಿಖಾನೆಯನ್ನು ಗುಡಿಸಿ ಬರಿಗಾಲಿನಲ್ಲಿ ನಡೆಯುವ ತನಕ-ಅವರ ಎಲ್ಲಾ ಕ್ರಿಯೆಗಳೂ ಆಶಿಸಿದ್ದನ್ನು ಆಗುವಂತೆ ಮಾಡುವ ತಾಂತ್ರಿಕರ ‘ತಂತ್ರ’ ವೆಂದೇ ರಾಮೂ ತಿಳಿದಿದ್ದರು.

ಎಲ್ಲವನ್ನೂ ಸಾಂಕೇತಿಕವಾಗಿ, ಆದರೆ ಸಂಕೇತಗಳನ್ನು ‘ಸ್ವ’ದಿಂದ ಮುಕ್ತವಾದ, ಅರ್ಥ ಗರ್ಭಿತವಾದ ಆತ್ಮದ ಸಂಜ್ಞೆಗಳಾಗಿ ನೋಡುವುದೇ ರಾಮೂ ಗಾಂಧಿಯವರ ಚಿಂತನಾಶೈಲಿ. ತನಗಿಂದ ಎತ್ತರದ ಕೋಲನ್ನು ಹಿಡಿದು ಗಾಂಧಿ ನವಾಖಲಿಯಲ್ಲಿ ನಡೆಯುವುದರ ಬಗ್ಗೆ ಅವರು ಗಮನಿಸಿದ್ದು, ಗಾಂಧಿ ಹೇಗೆ ತಾನಿರುವುದಕ್ಕಿಂತ ದೊಡ್ಡವನಾಗುವ, ಬೆಳೆಯುವ ಆಸೆಯನ್ನು ಆ ಹಳ್ಳ ಕೊಳ್ಳಗಳ ಭೂಪ್ರದೇಶದಲ್ಲಿ ಉಪಯುಕ್ತವೂ ಆದ ಕೋಲಿನಿಂದ ಸೂಚಿಸಿದ್ದಾರೆ ಎಂದು.

ಗಾಂಧಿ ಅವರ ಅಜ್ಜ. ಆದರೆ ಕೆಲವೊಮ್ಮೆ ನನಗೆ ಅನ್ನಿಸುತ್ತಿದ್ದುದು ರಾಮೂ ಶರಣಾದ್ದು ರಮಣ ಮಹರ್ಷಿಗಳಿಗೇ ಎಂದು, ಅವರು ಪ್ರತಿ ‌ಕ್ಷಣದಲ್ಲೂ ಅದ್ವೈತ ಸಿದ್ಧಾಂತವನ್ನು ನಮಗೆ ನಿಜವೆನ್ನಿಸುವಂತೆ ಎಲ್ಲೆಲ್ಲಿಂದಲೋ ಪುರಾವೆಗಳನ್ನು ತರುತ್ತಿದ್ದರು. ಅವರು ಬರೆದ ತಯ್ಯೆಬ್ ಮೆಹ್ತಾರ ಶಾಂತಿ ನಿಕೇತನ್ ತ್ರಿವಳಿ ಚಿತ್ರದ ಕುರಿತ ಪುಸ್ತಕ ‘ಸ್ವರಾಜ್’ ಇದಕ್ಕೊಂದು ಉದಾಹರಣೆ. ಈ ಪುಸ್ತಕಕ್ಕೆ ನಾನು ಮುನ್ನುಡಿಯನ್ನು ಬರೆಯಬೇಕೆಂದು ಅವರು ಆಶಿಸಿದ್ದರು. ಪ್ರಪಂಚದಲ್ಲಿ ಬೇರೆ ಯಾರೂ ಚಿತ್ರಕಲೆಯನ್ನು ಕುರಿತು ಬರೆಯದ ರೀತಿಯಲ್ಲಿ ರಾಮೂ ಬರೆದಿದ್ದಾರೆ. ಇದೊಂದು ದೀರ್ಘವಾದ ಧ್ಯಾನ. ಹೊರಗಿನ ಚಿತ್ರದ ಜತೆಗೆ ಒಳಗಿನ ಮನಸ್ಸು ಸೇರಿ ಒಮ್ಮೈ ಆಗಿಬಿಡುವ ಧ್ಯಾನ. ನಾನು ಈ ಪುಸ್ತಕ ಕುರಿತು ಬರೆದ ಒಂದು ಮಾತು ಅವರಿಗೆ ಹಿತವಾಗಿತ್ತು. ದೇವಸ್ಥಾನದಲ್ಲಿ ಆರತಿ ಎತ್ತುವುದನ್ನು ನಾನು ನೆನಪು ಮಾಡಿಕೊಂಡಿದ್ದೆ. ಒಂದೇ ಕುಡಿಯ ಆರತಿಯಿಂದ ಆರಂಭವಾಗಿ ಹಲವು ಕುಡಿಗಳ ಆರತಿಯಲ್ಲಿ ದೈವಶಿಲ್ಪವನ್ನು ಪ್ರದಕ್ಷಿಣೆಯಲ್ಲಿ ಸುತ್ತಾಗಿ ತೋರುತ್ತಾ, ಅಲ್ಲಲ್ಲಿ ತಂಗುತ್ತ, ಕ್ರಮೇಣ ಇಡೀ ಶಿಲ್ಪ ಆರತಿಯ ಬೆಳಕಿನಲ್ಲಿ ಕೊಂಚ ಕೊಂಚವಾಗಿ ಆದರೆ ಕೊನೆಯಲ್ಲಿ ಪೂರ್ಣವಾಗಿ ನಮಗೆ ಕಾಣುವಂತೆ ಮಾಡುವ ಬರವಣಿಗೆ ಇದು.

ರಾಮೂ ಗಾಂಧಿಯವರ ಅದ್ಭುತವಾದ ಇನ್ನೊಂದು ಪಸ್ತಕವೆಂದರೆ ‘ಸೀತಾಸ್‌ ಕಿಚನ್’- ಸೀತೆಯ ಅಡುಗೆ ಮನೆ. ಸಂಘ ಪರಿವಾರದವರು ರಾಮ ಹುಟ್ಟಿದ ಸ್ಥಳ ಎಂದು ನೋಡುವ ಸ್ಥಳವನ್ನೇ ರಾಮೂ ಗಾಂಧಿ ಆ ಪ್ರದೇಶದ ಜಾನಪದ ಕಥೆಗಳನ್ನು ಅನುಸರಿಸಿ ಅದನ್ನು ಸೀತೆಯ ಅಡುಗೆ ಮನೆ ಎಂದು ಕರೆಯುತ್ತಾರೆ. ಅಯೋಧ್ಯೆಯ ಪ್ರಕರಣದ ಬಗ್ಗೆ ಇಷ್ಟೊಂದು ಗಾಢವಾದ ಭಾರತೀಯ ಪ್ರಜ್ಞೆಯಿಂದಲೇ ಹೊಮ್ಮಿದ ಇನ್ನೊಂದು ಪುಸ್ತಕವಿಲ್ಲ.

ಈ ಹತ್ತಿಪ್ಪತ್ತು ವರ್ಷಗಳು ನನ್ನ ಮನೋಲೋಕದಲ್ಲಿ ಬಹಳ ಗೊಂದಲಗಳ, ಸಂಕಟಗಳ ಕಾಲ. ದ್ವೇಷಾಸೂಯೆ ಹಿಂಸೆಗಳ ಉಗ್ರಮತೀಯವಾದವನ್ನು ಮೆಟೀರಿಯಲಿಸ್ಟ್‌ ಆಗಿ, ಸೆಕ್ಯುಲರಿಸ್ಟ್ ಆಗಿ ಮಾತ್ರ ತಿರಸ್ಕರಿಸದೆ, ಆಳವಾದ ಆಧ್ಯಾತ್ಮಿಕ ನೆಲೆಯಿಂದಲೂ ಅದನ್ನು ತಿರಸ್ಕರಿಸುವುದನ್ನು ನನಗೆ ಕಲಿಸಿದ ಗುರು ಮತ್ತು ಗೆಳೆಯ ರಾಮಚಂದ್ರ ಗಾಂಧಿ.

ನಾನು ಕೇರಳದಲ್ಲಿದ್ದಾಗ ರಾಮೂ ಗಾಂಧಿಯವರನ್ನು ಒಂದು ವಿಚಾರ ಸಂಕಿರಣಕ್ಕೆ ಕರೆಯಿಸಿಕೊಂಡಿದ್ದೆ. ಅವರ ಜತೆ ನನ್ನ ಗೆಳೆಯರಾದ ದಿವಂಗತ ನಿರ್ಮಲ ವರ್ಮಾ ಬಂದಿದ್ದರು. ಭಾರತದ ದೊಡ್ಡ ದಾಶನಿಕರಲ್ಲಿ ಒಬ್ಬರಾದ ದಯಾ ಕೃಷ್ಣ ಕೂಡಾ ಇದ್ದರು. ಅವರ ಹೆಂಡತಿ ಸೀರೆಯುಟ್ಟು, ಕುಂಕುಮವಿಟ್ಟುಕೊಂಡು, ಕ್ಯಾನ್ಸರ್‌ನಲ್ಲಿ ಕಳೆದುಕೊಂಡು, ಉಳಿದ ಅಲ್ಪಸ್ವಲ್ಪ ಕೂದಲನ್ನು ನೀಟಾಗಿ ಬಾಚಿರುತ್ತಿದ್ದ ಪರಮ ಪ್ರೀತಿಯ ಅಮೆರಿಕನ್ ಮಹಿಳೆ. ಆಕೆಗೆ ಗುರುವಾಯೂರು ದೇವಸ್ಥಾನವನ್ನು ನೋಡಬೇಕೆಂದು ಆಸೆಯಾಯಿತು. ರಾಮಚಂದ್ರ ಗಾಂಧಿ ಅವರನ್ನು ಕರೆದುಕೊಂಡು ಹೋದರು. ಆದರೆ ಗುರುವಾಯೂರಿನಲ್ಲಿ ಆಕೆ ಹಿಂದೂ ಅಲ್ಲವೆಂದು ಒಳಗೆ ಬಿಡಲಿಲ್ಲ. ಕೂಡಲೇ ರಾಮೂ ಗಾಂಧಿಗೆ ಅವರ ಅಜ್ಜನ ನೆನಪಾಯಿತು. ತಾನೂ ದೇವಸ್ಥಾನದೊಳಗೆ ಬರುವುದಿಲ್ಲವೆಂದು ಪ್ರತಿಭಟಿಸಿ ದೂರ್ವಾಸ ಕೋಪದಲ್ಲಿ ಹಿಂದಕ್ಕೆ ಬಂದಿದ್ದರು.

ಭಾರತೀಯ ಶಾಸ್ತ್ರಗಳು, ಧಾರ್ಮಿಕ ಪಂಥಗಳು, ವೇದೋಪನಿಷತ್ತುಗಳು, ಪುರಾಣಗಳು-ಇವುಗಳಲ್ಲಿ ಆಳವಾದ ಶ್ರದ್ಧೆ, ಜೊತೆಗೇ ನಮ್ಮ ಪೂರ್ವಜರಿಗಿದ್ದಂತೆ ಸತತ ಭಿನ್ನಮತದ ‘ಪ್ರತಿವಾದಿ ಭಯಂಕರ’ನ ಗುಣ ಇರುವ ಮನುಷ್ಯನೇ ಹಿಂದೂಗಳ ಸಣ್ಣತನ, ಜಾತೀಯತೆ, ಮತೀಯ ಅಹಂಕಾರಗಳಿಂದ ಎಷ್ಟು ಕೋಪಗ್ರಸ್ತರಾಗಬಲ್ಲರು ಎಂಬುದನ್ನು ನಾನು ರಾಮೂ ಅವರಲ್ಲಿ ಸತತವಾಗಿ ಕಂಡಿದ್ದೇನೆ. ಅವರಿಗೊಂದು ದೊಡ್ಡ ಆಸೆ ಇತ್ತು. ಇಸ್ಲಾಮಿನ ಒಬ್ಬ ದೊಡ್ಡ ತತ್ವಜ್ಞಾನಿಯ ಜತೆ ಗಾಢವಾದ ಚರ್ಚೆಯನ್ನು ಮಾಡಬೇಕೆಂದು. ಮಾಡಿ ಗೆಲ್ಲಬೇಕೆಂದು! ಅದೂ ಅದ್ವೈತದ ಬಗ್ಗೆ.

ರಾಮೂವಿಗೆ ಥಟ್ಟನೇ ಹೊಸ ವಿಚಾರಗಳು ಹುಟ್ಟುತ್ತಿದ್ದವು. ಉದಾಹರಣೆಗೆ ಒಮ್ಮೆ ಅವರು ನನಗೆ ಹೇಳಿದರು. ತತ್ವಶಾಸ್ತ್ರದ ಒಂದು ಲೈಬ್ರರಿಯನ್ನು ನಾನು ರಚಿಸುವುದಾದರೆ ಪುಸ್ತಕಗಳನ್ನು ಹೇಗೆ ವಿಂಗಡಣೆ ಮಾಡುತ್ತೇನೆ- ಒಂದು: ಪರಮಾತ್ಮನನ್ನು ಸಾಕಾರ ಮತ್ತು ಸಗುಣ ಎಂದು ತಿಳಿದಿರುವವರ ಪುಸ್ತಕಗಳು. ಇವುಗಳಲ್ಲಿ ವೈಷ್ಣವ ಧರ್ಮದ ಗ್ರಂಥಗಳು ಇರುತ್ತವೆ. ಎರಡು: ಪರಮಾತ್ಮನನ್ನು ನಿರಾಕಾರ ಮತ್ತು ಸಗುಣ ಎಂದು ತಿಳಿಯುವವರ ಗ್ರಂಥಗಳು.  ಗ್ರಂಥಗಳನ್ನು ಬರೆದವರು ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದ್ಯ ಧರ್ಮವನ್ನು ನಂಬಿದವರಾಗಿರುತ್ತಾರೆ; ಇವರಲ್ಲಿ ಶೈವರೂ ಇದ್ದಾರು. ಮೂರು: ಪರಮಾತ್ಮನನ್ನು ನಿರಾಕಾರ ಮತ್ತು ನಿರ್ಗುಣ ಎಂದು ತಿಳಿದವರ ಪುಸ್ತಕಗಳು. ಇಲ್ಲಿ ಬೌದ್ಧ ಗ್ರಂಥಗಳಿರುತ್ತವೆ. ರಮಣರ ಗ್ರಂಥಗಳಿರುತ್ತವೆ. ನಾನಾಗ ಒಂದು ಮಾತು ಸೇರಿಸಿದ್ದೆ- ‘ಅಲ್ಲಮನ ವಚನಗಳೂ ಇರುತ್ತವೆ’.

ನಾನು ತುಂಟತನಕ್ಕೆ ಒಂದು ಮಾತನ್ನು ರಾಮೂ ಹತ್ತಿರ ಆಗ ಎತ್ತಿದ್ದೆ: ‘ಪರಮಾತ್ಮ ಸಗುಣ, ಸಾಕಾರ ಎಂದು ತಿಳಿಯುವುದು, ಸಗುಣ, ನಿರಾಕಾರ ಎಂದು ತಿಳಿಯುವುದು, ನಿರಾಕಾರ ನಿರ್ಗುಣ ಎಂದು ತಿಳಿಯುವುದು ನನಗೆ ಅರ್ಥವಾಗುತ್ತದೆ. ಆದರೆ ಪರಮಾತ್ಮನನ್ನು ಸಾಕಾರ ಆದರೆ ನಿರ್ಗುಣ ಎಂದು ತಿಳಿಯುವುದು ಸಾಧ್ಯವೇ?’ ರಾಮೂ ಎಷ್ಟು ಸಾತ್ವಿಕ ಮೌನಿಯೋ, ಅಷ್ಟೇ ಕೆಲವು ಸಲ ನೀಶೆ ವರ್ಣಿಸುವ ಡಯೊನೀಸಿಯನ್ ಮತ್ತಿನ ಉತ್ಸಾಹಿ. ಆವಾಹಿತರಾದ ರಾಮೂ ಬಹಳ ನಾಟಕೀಯವಾಗಿ ತನ್ನ ಇಡೀ ದೇಹವನ್ನು ಕುಣಿದಾಡಿಸಿ ಮಾತನಾಡುತ್ತಿದ್ದ ವ್ಯಕ್ತಿ. ಎರಡೂ ಕೈಗಳನ್ನು ಎತ್ತಿ ಗಹಗಹಿಸಿ ನಕ್ಕು ‘ಅದು ಬ್ಯೂರೋಕ್ರಸಿ’ ಎಂದಿದ್ದರು. ತನಗೆದುರಾದ ಯಾರನ್ನಾದರೂ ವ್ಯಂಗ್ಯ ಚಿತ್ರಕಾರನಂತೆ ಯಾವುದೋ ಪ್ರಾಣಿಗೆ ಹೋಲಿಸಿ, ನಮಗೆ ‘ಅ