ವೆಂಕಟೇಶಮೂರ್ತಿ ನನಗೆ ಪ್ರಿಯರಾದ್ದು ಅವರ ಬರವಣಿಗೆಯ ಪ್ರಾರಂಭದ ಕಾಲದಲ್ಲೇ. ಆಗ ಅವರು ವಿಸ್ಮಯದಲ್ಲಿ ತನ್ನ ಲೋಕವನ್ನು ನೋಡಿ ಬರೆಯತೊಡಗಿದ್ದರು. ವಿಸ್ಮಯದ ಅಂಗವಾಗಿ ಅವರ ದನಿಯಲ್ಲಿ ತುಂಟತನವೂ ಬೆರೆತು ಅವರ ಕಾವ್ಯ ಕೊಡುತ್ತಿದ್ದ ಸುಖವನ್ನು ಮರೆಯಲಾರೆ.

ತನಗೆ ಪ್ರಸಿದ್ಧಿಯನ್ನು ತಂದ ಧಾಟಿ ಧೋರಣೆಗಳನ್ನು ಬಹುಬೇಗ ಈ ಕವಿ ಮೀರಿ ಬೆಳೆದರು. ಹೀಗೆ ಬದಲಾಗಲು ಧೈರ್ಯ ಬೇಕು. ಸತತವಾದ ಸಾಧನೆ ಬೇಕು. ಹೊಸ ಲಯ, ಹೊಸ ಮಾತು, ಹೊಸ ವಸ್ತುಗಳಿಗೆ ತವಕಿಸಬೇಕು. ತವಕಿಸಿ ಎಲ್ಲೆಲ್ಲಿಂದಲೋ ಪಡೆದದ್ದನ್ನು ತನ್ನ ದಾಗಿಸಿಕೊಳ್ಳಬೇಕು. ವಿಶೇಷ ಲಕ್ಷಣಗಳ ಹೊಸ ಹೊಸ ರೂಪಗಳನ್ನು ಕನ್ನಡದಲ್ಲಿ ಮೂಡಿಸುತ್ತಿರುವ ವೆಂಕಟೇಶಮೂರ್ತಿಯವರ ಕಾವ್ಯ ಕುತೂಹಲ ಕವನ ರಚನೆಯ ಕಸುಬನ್ನು ಜೀವಂತವಾಗಿ ಇಡುವಂಥದು.

ಈ ಕಾವ್ಯದ ಹಿಂದಿರುವ ಪ್ರೇರಣೆ ಬದುಕನ್ನು ಅದರ ಉತ್ಪಾತಗಳಲ್ಲಿ ಕಂಡು ಬಾಳಿನ ಅರ್ಥವನ್ನು ಹುಡುಕಬೇಕೆಂಬ ಛಲದ್ದಲ್ಲ. ಕುವೆಂಪುರವರ ಮೂವ್ವತ್ತರ ದಶಕದ ಸ್ಮಶಾನ ಕುರುಕ್ಷೇತ್ರವನ್ನು ಓದಿದಾಗ ಅಥವಾ ಬೇಂದ್ರೆ, ಪುತಿನ, ಅಡಿಗರನ್ನು ಓದಿದಾಗ ನಾವು ಪಡೆಯಬೇಕಾದ ಎಚ್ಚರದ ಗ್ರಹಿಕೆಯನ್ನು, ತೀವ್ರ ಸ್ಪಂದನವನ್ನು ವೆಂಕಟೇಶಮೂರ್ತಿಯವರ ಕಾವ್ಯ ಬೇಡುವುದಿಲ್ಲ. ಆದರೆ ಬದಲಾಗಿ, ಇಡೀ ಕನ್ನಡ ಕಾವ್ಯದ ಮುಖ್ಯ ಪ್ರವಾಹದ ಜೊತೆ ನಮ್ಮ ಸಂಬಂಧ ಕಳೆಯದಂತೆ ಎಲ್ಲವನ್ನೂ ಒಳಗೊಳ್ಳಬೇಕೆಂಬ ಎಚ್ಚರಲ್ಲಿ ವೆಂಕಟೇಶ ಮೂರ್ತಿಗಳು ಮಾಡುತ್ತಿರುವ ಸಾಧನೆಯನ್ನು ನಾವು ಕೃತಜ್ಞತೆಯಲ್ಲಿ ಮೆಚ್ಚುತ್ತೇವೆ.

ನಮ್ಮ ಕಾಲದ ಕವಿಗಳಲ್ಲಿ ಇವರಷ್ಟು ಕನ್ನಡಕಾವ್ಯ ಪರಂಪರೆಗೆ ತೆರೆದುಕೊಂಡವರು ಇಲ್ಲವೆನ್ನಬಹುದೇನೊ? ಮೆಚ್ಚುಗೆಯಲ್ಲಿ ಆಡಿದ ಈ ಮಾತಿನಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಪುತಿನ, ನರಸಿಂಹಸ್ವಾಮಿ, ವಿ.ಸೀ., ಶಿವರುದ್ರಪ್ಪ, ಕಣವಿ, ಅಡಿಗ, ಎಕ್ಕುಂಡಿ೦ ಈ ಎಲ್ಲರಿಂದಲೂ ಕಲಿತು ಬೆಳೆಯಲು ವೆಂಕಟೇಶಮೂರ್ತಿಗೆ ಸಾಧ್ಯವಾಗಿದೆ. ಏಕೆಂದರೆ ಕನ್ನಡ ಮಾತಿನ ಸಾಧ್ಯತೆಗಳಿಗೂ ಲಯಕ್ಕೂ ಇವರು ಎಲ್ಲೆಲ್ಲೂ ಹುಡುಕಾಡಿದವರು; ಕೇವಲ ಧೋರಣೆಗಳಿಗಾಗಿ ಅಲ್ಲ.

ನಾನು ಬಹು ಮೆಚ್ಚುವ ಕಾವ್ಯ crisisನಲ್ಲಿ ಊರಿದ್ದು. ಆದರೆ ಕವಿಯ ಮಾತಿನ ತೀವ್ರತೆ ತನ್ನ ದೃಷ್ಟಿಕೋನದಾಚಿಗಿನ ಸತ್ಯಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಿ ಚೀರಿಕೊಳ್ಳುವ ಅಪಾಯದಲ್ಲಿರುತ್ತದೆ. ವೆಂಕಟೇಶಮೂರ್ತಿ ಏರು ದನಿಯ ಬಂಡಾಯದಿಂದ ಹೊರಗುಳಿದರು, ತಾತ್ವಿಕ ನಿಷ್ಠೆಯ ಹುಡುಗಾಟಗಳಿಂದ ಬಡಿದಾಟಗಳಿಂದ ಹೊರಗುಳಿದರು. ಕಾಲದ ಎಲ್ಲ ವಾಗ್ವಾದಗಳಿಗೂ ಮೈಯೊಡ್ಡಿ ಸ್ಥಿರನಿಂತು ಸ್ವಂದಿಸುವ ಕಾವ್ಯ ಪ್ರತಿಭೆ ಅಪರೂಪದ್ದು. ಏಟ್ಸ್, ಕುವೆಂಪು, ಅಡಿಗ, ಬೇಂದ್ರೆ- ಈ ಕಾರಣದಿಂದ ಬಹುಮುಖ್ಯ ಕವಿಗಳು. ಅಂತಹ ಕವಿಗಳನ್ನು ಬರಮಾಡಿಕೊಳ್ಳಲು ಆಸ್ಪದವಿರುವಂತೆ ಕಾವ್ಯ ರಚನೆಯ ಬಹುರೂಪಗಳನ್ನು ಜೀವಂತ ಉಳಿಸಿಕೊಳ್ಳುವುದೂ ಸಾಮಾನ್ಯ ಸಾಧನೆಯಲ್ಲ. ವೆಂಕಟೇಶಮೂರ್ತಿಗಳ ಸಾಧನೆ ಈ ಬಗೆಯದು. ಈ ಸಾಧನೆಯಲ್ಲಿ ಕಾಳಿದಾಸನಂತಹ ಕ್ಲಾಸಿಕಲ್ ಕವಿಗೂ ತಮ್ಮ ನುಡಿಗಟ್ಟಿನಲ್ಲಿ ಜೀವ ಬರುವಂತೆ ಬರೆದಿದ್ದಾರೆ. ಹೀಗೆ ವೆಂಕಟೇಶಮೂರ್ತಿ ಎಲ್ಲ ಕಾಲಕ್ಕೂ ಸಲ್ಲುವ ಕಾವ್ಯ ಪರಂಪರೆಯ ಸಾತತ್ಯ ಸಾಧಿಸಿದ್ದಾರೆ.

ಲಕ್ಷ್ಮೀನಾರಾಯಣ ಭಟ್ಟರಂತೆ ವೆಂಕಟೇಶಮೂರ್ತಿಯವರೂ ಮಕ್ಕಳಿಗೆಂದು ಕಾವ್ಯ ರಚಿಸಿದ್ದಾರೆ. ಹರ್ಷ, ಉತ್ಸಾಹಗಳ ಗೃಹಸ್ಥಧರ್ಮದ ನಿತ್ಯದ ದಿವ್ಯಕ್ಕೆ ಎಡೆಯಿರುವ ಸಮಾಧಾನದ ಪ್ರತಿಭೆಗೆ ಇದು ಸಾಧ್ಯವಾದ್ದು. ನಮ್ಮ ಕಾಲದ ಆತಂಕಗಳಿಗೆ ಮಾತ್ರ ತೆರೆದುಕೊಂಡವರಿಗೆ ಅಲಭ್ಯವಾದ್ದು.

ಕಾವ್ಯವನ್ನು ಕಥನಕ್ಕೆ ಒಗ್ಗುವಂತೆ ಮಾಡಿರುವ ವೆಂಕಟೇಶಮೂರ್ತಿಯವರು ತೀವ್ರತೆಯಲ್ಲಿ ಮಾತ್ರವಲ್ಲದೆ, ತನ್ನ ಧಾರಾಳದಲ್ಲೂ ಕನ್ನಡ ಕಾವ್ಯ ಹಿಗ್ಗುವಂತೆ ಮಾಡಿದವರು.

*

ಗಂಧವ್ರತದಲ್ಲಿ ಪ್ರಕಟಿತ ಲೇಖನ (೨೦೦೫)