ಇಲ್ಲಿರುವ ಕೆಲವು ಮಾತುಗಳು ಸಿಮೋನ್ ವೇಲ್ ಬರಹಗಳ ಒಂದು ಸಂಗ್ರಹವಾದ Gateway to God ನಿಂದ ಆಯ್ದವು. ಇವಳ ಉಳಿದ ಮುಖ್ಯ ಪುಸ್ತಕಗಳಲ್ಲಿ ಕೆಲವು: Waiting on God. The Need for Roots, First and Last Note books. ಸಿಮೋನ್‌ವೇಲ್ ಪ್ಯಾರಿಸ್‌ನಲ್ಲಿ ೧೯೦೯ ರಲ್ಲಿ ಹುಟ್ಟಿದಳು. ೧೯೩೧ ರಲ್ಲಿ ತತ್ವಶಾಸ್ತ್ರದ ಅಧ್ಯಾಪಕಿಯಾದಳು. ಅಧ್ಯಾಪಕ ವೃತ್ತಿಯ ನಡುವೆ ರೆನಾಲ್ಟ್‌ ಕಾರ್‌ ಫ್ಯಾಕ್ಟರಿಯಲ್ಲೂ, ದ್ರಾಕ್ಷಿತೋಟಗಳಲ್ಲೂ ದೈಹಿಕ ದುಡಿಮೆ ಮಾಡಿದಳು. ಸ್ಪೇನ್‌ನ ರಿಪಬ್ಲಿಕನ್ ಸೈನ್ಯ ಸೇರಿ ಕ್ಯಾಟಿಲೋನಿಯಾದಲ್ಲಿ ಕ್ರಾಂತಿಕಾರರ ಪದ ಹೋರಾಡುವಾಗ ತನ್ನ ಒಳಜೀವನವನ್ನು ಯುದ್ಧದ ಭೀಕರತೆ ಆಕ್ರಮಿಸಿದ ಅನುಭವ ಪಡೆದಳು. ೧೯೪೧ ರಲ್ಲಿ ದಕ್ಷಿಣ ಫ್ರಾನ್ಸ್‌ ನಲ್ಲಿದ್ದು ಹೊಲಗಳಲ್ಲಿ ದುಡಿಮೆ ಮಾಡುತ್ತ ಗ್ರೀಕ್, ಸಂಸ್ಕೃತ ಮತ್ತು ಹಿಂದೂ ಧರ್ಮಗಳ ತನ್ನ ಅಭ್ಯಾಸವನ್ನು ಮುಂದುವರಿಸಿದಳು. ೧೯೮೨ ರಲ್ಲಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ಫ್ಯಾಸಿಸ್ಟ್ ವಿರೋಧಿ ಫ್ರೆಂಚ್ ತಾತ್ಕಾಲಿಕ ಸರ್ಕಾರದ ಪರವಾಗಿ ಅಮೆರಿಕಾದಲ್ಲಿ ಕೆಲಸ ಮಾಡಿದಳು. ರಾಜ್ಯಸತ್ತೆಗೂ ಪ್ರಜೆಗಳಿಗೂ ಇರಬೇಕಾದ ಅನ್ಯೋನ್ಯ ಸಂಬಂಧ ಕುರಿತ ತನ್ನ ಮಹತ್ವದ ಪುಸ್ತಕವಾದ The Need of Roots ನ್ನು ಬರೆದದ್ದು ಆಗಲೇ. ಹಿಟ್ಲರ್ ಆಕ್ರಮಣ ಮಾಡಿದ ಫ್ರಾನ್ಸ್‌ ನಲ್ಲಿತನ್ನ ಜನರಿಗೆ ಕೊಡಲಾಗುತ್ತಿದ್ದ ಆಹಾರಕ್ಕಿಂತ ಹೆಚ್ಚೇನನ್ನೂ ತಿನ್ನಲು ನಿರಾಕರಿಸಿ ಕ್ರಮೇಣ ಪ್ರಾಯೋಪವೇಶವೆನ್ನಬಹುದಾದ ಸ್ಥಿತಿ ತಲುಪಿ ೧೯೪೩ ರಲ್ಲಿ ಸಿಮೋನ್ ವೇಲ್ ಸತ್ತಳು. ಈ ನಮ್ಮ ಕಾಲದ ದೊಡ್ಡ ದಾಶನಿಕರಲ್ಲಿ ಇವಳೊಬ್ಬಳು ಎನ್ನಬಹುದು. ಮಾಕ್ಸ್ ವಾದದಿಂದ ದೈವಿಕ ಶ್ರದ್ಧೆಯ ದಿಕ್ಕಲ್ಲಿ ತನ್ನ ಎಲ್ಲ ರಾಜಕೀಯ ನಿಷ್ಠೆಗಳನ್ನು ಉಳಿಸಿಕೊಂಡೇ ಇವಳು ಬೆಳೆಯುತ್ತ, ತೀವ್ರ ಆರ್ತತೆಯಲ್ಲಿ ಸತ್ಯವನ್ನು ಶೋಧಿಸುತ್ತಾ ಬದುಕಿದ ಬಗೆಯೂ, ಸತ್ತ ಬಗೆಯೂ ಅಪೂರ್ವವಾದ್ದು.

೧. ಈ ಪ್ರಪಂಚ ಮುಚ್ಚಿದ ಬಾಗಿಲು. ಇದೊಂದು ತಡೆ, ಜೊತೆಗೇ ಇದೊಂದು ದಾರಿ.

೨. ಮಾನವ ಸ್ಥಿತಿಯಲ್ಲಿನ ಮೂಲ ವಿರೋಧವೆಂದರೆ ಅವನು ಕಡ್ಡಾಯಗಳಿಗೆ ಒಳಗಾಗಿದ್ದಾನೆ, ಆದರೆ ನ್ಯಾಯಕ್ಕಾಗಿ ಹಂಬಲಿಸುತ್ತಾನೆ. ನಿಯತಿಯಲ್ಲಿ ಅವನು ನಿರ್ಬಂಧಿತ; ಆದರೆ ನ್ಯಾಯಕ್ಕಾಗಿ ಹಂಬಲಿಸುತ್ತಾನೆ. ಅವನ ದೇಹ ಮಾತ್ರವಲ್ಲ, ಅವನ ಯೋಚನೆಗಳೂ ಹೀಗೆ ಸಿಕ್ಕಿ ಬಿದ್ದಿವೆ; ಆದರೂ ಒಳಿತಿಗಾಗಿ ಸತತ ಶ್ರಮಿಸುವುದೇ ಅವನ ಅಸ್ತಿತ್ವದ ಜೀವಾಳವಾಗಿದೆ. ಆದ್ದರಿಂದಲೇ ನಾವೆಲ್ಲರೂ ನಿಯತಿಗೂ ಒಳಿತಿಗೂ ನಡುವೆ ಸಂಬಂಧವಿದೆಯೆಂದು ನಂಬುತ್ತೇವೆ. ಒಳಿತಿಗಾಗಿ ನಾವು ಮಾಡುವ ವಿಚಾರ ಇಹಲೋಕದಲ್ಲೇ ಸರ್ವಶಕ್ತವಾಗುತ್ತದೆಂದು ಕೆಲವರು ತಿಳಿಯುತ್ತಾರೆ; ಅವರು ಆದರ್ಶವಾದಿಗಳು. ಅವರು ಎರಡು ಬಗೆಯ ತಪ್ಪು ಮಾಡುತ್ತಾರೆ: ಒಂದು ಈ ವಿಚಾರಗಳಿಗೇ ಸ್ವಯಂಶಕ್ತಿ ಇಲ್ಲ; ಎರಡು, ಅವು ಒಳಿತನ್ನು ಪಡೆಯುವುದಿಲ್ಲ. ಯಾಕೆಂದರೆ ಕಡ್ಡಾಯಗಳೇ ಸ್ವಯಂ ಒಳಿತಿನ ದಿಕ್ಕಲ್ಲಿ ಚಲಿಸುತ್ತವೆ ಎಂದು ತಿಳಿಯುತ್ತಾರೆ. ಇವರು ಮೂರ್ತಿ ಪೂಜಕರು. ಎಲ್ಲ ಭೌತವಾದಿಗಳ ನಂಬಿಕೆ ಇದು. ಇವರೂ ಎರಡು ಬಗೆಯ ತಪ್ಪು ಮಾಡುತ್ತಾರೆ; ಮೊದಲನೆಯದಾಗಿ, ಕಡ್ಡಾಯ ಒಳಿತಿಗೆ ಅನ್ಯವಾದ್ದು; ಎರಡನೆಯದಾಗಿ, ಎಲ್ಲಕಡೆಯೂ, ಯಾವಾಗಲೂ ಕಡ್ಡಾಯಗಳು ಒಳಿತಿಗಿಂತ ಬಲವಾದವು ಎಂಬುವಂತಿಲ್ಲ. ಇಂಥ ತಪ್ಪುಗಳನ್ನು ಮಾಡದೇ ಇರುವುದು ಯಾರಿಗೆ ಸಾಧ್ಯವೆಂದರೆ ಒಳಿತು ಮತ್ತು ನಿಯತಿಗಳ ನಡುವೆ ಆಜ್ಞೇಯವಾದ ಐಕ್ಯವಿದೆ, ಆದರೆ ಈ ಐಕ್ಯ ಪ್ರಪಂಚದ ಹೊರಗಿದೆ ಎಂದು ತಿಳಿದವರಿಗೆ. ನಮ್ಮ ಆಕಾಂಕ್ಷೆಯನ್ನೂ ಗಮನವನ್ನೂ ಈ ಐಕ್ಯದಲ್ಲಿ ನೆಟ್ಟಲ್ಲಿ ಅದು ಇಲ್ಲೂ ಸಹ ನಮ್ಮ ಅನುಭವಗಮ್ಯವಾದೀತೆಂದು ಇವಳು ತಿಳಿಯುತ್ತಾರೆ….

ಇಪ್ಪತ್ತೈದು ಶತಮಾನಗಳ ಹಿಂದೆಯೇ, ಕೆಲವು ಗ್ರೀಕ್ ದಾರ್ಶನಿಕರು ಗುಲಾಮಗಿರಿ ನೈಸರ್ಗಿಕವಾಗಿಯೂ ವೈಚಾರಿಕವಾಗಿಯೂ ತಪ್ಪೆಂದು ಹೇಳಿದ್ದರು. ಕಾಲ ದೇಶಗಳಿಗೆ ಅನುಗುಣವಾಗಿ ನಮ್ಮ ನೈತಿಕತೆ ಬದಲಾಗುತ್ತಾದಾದರೂ ಅನುಭಾವದಿಂದ ಹುಟ್ಟುವ ನೈತಿಕತೆ ಮಾತ್ರ ಯಾವಾಗಲೂ ಸ್ಥಿರವಾಗಿದೆ, ಏಕವಾಗಿದೆ, ಒಂದೇ ರೀತಿಯಾಗಿದೆ. ಉದಾಹರಣೆಗೆ ಈಜಿಪ್ಟ್‌, ಗ್ರೀಸ್, ಇಂಡಿಯಾ, ಚೀನಾ, ಬೌದ್ಧಧರ್ಮ, ಇಸ್ಲಾಂ, ಕ್ರೈಸ್ತ ಧರ್ಮ ಎಲ್ಲ ದೇಶಗಳ ಜಾನಪದ ಪರಂಪರೆ-ಇವನ್ನು ನೋಡಬಹುದು. ಈ ನೈತಿಕತೆಯನ್ನು ಬದಲಿಸಲು ಸಾಧ್ಯವಿಲ್ಲ; ಯಾಕೆಂದರೆ, ಈ ಪ್ರಪಂಚದ ಹೊರಗಿರುವ ಪರಿಪೂರ್ಣ ಒಳಿತಿಂದ ಪ್ರತಿಫಲವಾದ್ದು ಅದು. ಎಲ್ಲ ಧರ್ಮಗಳೂ ಈ ನೈತಿಕತೆಯನ್ನೂ, ಸಾಮಾಜಿಕ ನೈತಿಕತೆಯನ್ನೂ ಬೇರೆ ಬೇರೆ ಹದಗಳಲ್ಲಿ ಮಿಶ್ರಗೊಳಿಸಿಲ್ಲವೆಂದಲ್ಲ. ಆದರೆ ಶುದ್ಧವಾದ ಅತೀತವಾದ ಒಳಿತೊಂದು ಇದೆ ಎಂಬುದಕ್ಕೆ, ಈ ಪ್ರಪಂಚಕ್ಕೆ ಸಂಬಂಧಿಸಿದಂತೆ, ಇದೇ ಪ್ರಾಯೋಗಿಕವಾದ ಪ್ರಮಾಣ; ದೇವರು ಇದ್ದಾನೆಂಬುದಕ್ಕೂ ಇದೇ ಪ್ರಾಯೋಗಿಕ ರುಜುವಾತು.

ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ದೇವರು ಈ ಜಗತ್ತನ್ನೊ, ನಮ್ಮ ಜೀವನವನ್ನೊ ಪ್ರವೇಶಿಸಿ ಕೆಲವು ಗುರಿಗಳನ್ನು ಸಾಧಿಸುತ್ತಾನೆಂಬ ಹಾಸ್ಯಾಸ್ಪದವಾದ ದೈವದ ದೃಷ್ಟಿ ನೈಜಶ್ರದ್ಧೆಗೆ ವಿರೋಧವಾದ್ದು. ವೈಜ್ಞಾನಿಕವಾದ ಲೋಕದೃಷ್ಟಿಯಿಂದ ಇದನ್ನು ಒಪ್ಪುವುದು ಅಸಾಧ್ಯ. ವಿದ್ಯೆಯ ಪ್ರಭಾವಕ್ಕೊಳಗಾದ ಕ್ರಿಶ್ಚಿಯನ್ನರು ಜಗತ್ತನ್ನು ವೈಜ್ಞಾನಿಕವಾಗಿ ಭಾವಿಸುವುದರ ಜೊತೆಗೇ, ದೈವ ತಮಗಾಗಿ ದುಡಿಯುತ್ತದೆಂಬ ನಂಬಿಕೆಯನ್ನೂ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರ ಮನಸ್ಸು ಇಬ್ಭಾಗವಾಗಿ ಒಡಕೊಂಡುಬಿಡುತ್ತದೆ…. ಹೀಗಾಗಿ ಅವರು ವೈಜ್ಞಾನಿಕವಾಗಿಯಾಗಲೀ, ಧಾರ್ಮಿಕವಾಗಿಯಾಗಲೀ ಆಲೋಚಿಸಲಾರದವರಾಗಿಬಿಡುತ್ತಾರೆ. ದೇವರು ನಮಗಾಗಿ ಮಧ್ಯಪ್ರವೇಶ ಮಾಡುವನೆಂಬುದನ್ನಂತೂ ಗಂಭೀರವಾಗಿ ಪರಿಶೀಲಿಸುವುದು ಸಹ ಸಾಧ್ಯವಿಲ್ಲ. ಹೀಗಾಗಿ ಧಾರ್ಮಿಕ ಶ್ರದ್ಧೆ ದೇವರನ್ನು ನಂಬದವರಿಗೆ ಹಾಸ್ಯಾಸ್ಪದ ಎನಿಸುತ್ತದೆ….

ಒಳಿತೇ ಬೇರೆ, ನಿಯತಿಯೇ ಬೇರೆ; ಒಂದು ಇನ್ನೊಂದಲ್ಲ. ಎರಡೂ ಬಹುದೂರದಲ್ಲಿರುವಂಥವು. ಎರಡರ ನಡುವಿನ ಐಕ್ಯ ಕಾಣುವುದು ನಮಗೆ ಅನಿವಾರ್ಯವಾದರೂ ಈ ಐಕ್ಯತೆ ರಹಸ್ಯವಾದ್ದು. ಈ ಅವ್ಯಕ್ತ ಐಕ್ಯತೆಯ ಧ್ಯಾನವನ್ನೇ ಅಪ್ಪಟ ಧಾರ್ಮಿಕ ಜೀವನ ಎನ್ನಬಹುದು.

*

೩. ನಿರೀಶ್ವರವಾದದ ಅತ್ಯಂತ ಮಹತ್ವದ ವಿಚಾರವೆಂದರೆ, ಪ್ರಗತಿ. ಆದರೆ ಇದು ವಸ್ತುವಿನ ಮೂಲ ಸ್ವರೂಪ ತಿಳಿದು ಮಾಡುವ ಪ್ರಾಯೋಗಿಕ ತರ್ಕಕ್ಕೆ ವಿರೋಧವಾದದ್ದು. ತನ್ನಲ್ಲೆ ಸಾಮಾನ್ಯವಾದಂಥ ಗುಣ ಪಡೆದದ್ದು ಸ್ವಯಂ ಅತ್ಯುತ್ತಮ ಗುಣವಿಶೇಷ ಪಡೆದದ್ದನ್ನು ಹುಟ್ಟಿಸಬಲ್ಲದೆಂದು ಹೇಗೆ ಹೇಳಲು ಸಾಧ್ಯ?

*

೪. ನಾನು ಒಳಿತಿಗಾಗಿ ಆಸೆಪಡುವುದು ಮಾತ್ರ ಸಾಧ್ಯ. ಉಳಿದೆಲ್ಲ ಆಸೆಗಳೂ ಕೆಲವು ಸಾರಿ ಪರಿಣಾಮಕಾರಿಯಾಗಬಹುದು, ಅಥವಾ ಆಗದೇ ಇರಬಹುದಾದರೂ ಇದೊಂದು ಆಸೆ ಮಾತ್ರ ಯಾವತ್ತೂ ಪರಿಣಾಮಕಾರಿಯಾಗುತ್ತದೆ. ಕಾರಣವಿಷ್ಟೇ. ಚಿನ್ನದ ಮೇಲಿನ ಆಸೆ ಚಿನ್ನವೇ ಆಗಲಾರದು; ಆದರೆ ಒಳಿತಿಗಾಗಿನ ಆಸೆಯೇ ಒಳಿತಾದ್ದು.

*

೫. ಧರ್ಮ ಸಂತೈಕೆಯ ಆಕರವಾಗಿರುವತನಕ ನೈಜ ಶ್ರದ್ಧೆಗೆ ಅಡ್ಡಿಯಾಗುತ್ತದೆ.

೬. ದೇವರು ರೊಟ್ಟಿಯಾದಾನು, ಕಲ್ಲಾದಾನು, ವೃಕ್ಷವಾದಾನು, ಕುರಿಯಾದಾನು, ಮನುಷ್ಯನಾದಾನು; ಆದರೆ ಅವನು ಜನತೆಯಾಗಲಾರ. ಇಡೀ ಜನತೆ ದೇವರ ಅವತಾರವಾಗುವುದು ಅಸಾಧ್ಯ.

*

೭. ಪಯಿರಿನಲ್ಲಿ, ಬಳ್ಳಿಗಳಲ್ಲಿ ಎಲ್ಲ ಸೌರಶಕ್ತಿಯೂ ಶೇಖರವಾಗಿ, ಪತ್ರಹರಿತ್ತಿನಲ್ಲಿ ಸಾಂದ್ರಗೊಳ್ಳುತ್ತದೆ. ಈ ಮುಖಾಂತರವಾಗಿ ಸೂರ್ಯನ ಶಕ್ತಿಯೇ ಮಾನವರನ್ನು ಪ್ರವೇಶಿಸಿ, ಅವರನ್ನು ಜೀವಂತಗೊಳಿಸುತ್ತದೆ….

ರೈತ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾನೆ….

ಸಾವು ಮತ್ತು ದುಡಿಮೆಗಳು ಅಗತ್ಯಗಳೇ ಹೊರತು ನಮ್ಮ ಸ್ವತಂತ್ರ ಆಯ್ಕೆಗಳಲ್ಲ. ಮನುಷ್ಯ ಶ್ರಮದ ಮೂಲಕ ಕೊಟ್ಟಿದ್ದನ್ನು ಪ್ರಪಂಚ ಅನ್ನವಾಗಿ ಶಾಖವಾಗಿ ಮನುಷ್ಯನಿಗೆ ಹಿಂದಿರುಗಿಸುತ್ತದೆ…. ಸಾವು ಎದುರಾದಾಗ ಅದನ್ನು ಒಪ್ಪಿಕೊಳ್ಳುವುದೆಂದರೆ ಇದು ತಾನು ಎಂದು ತಿಳಿದುಕೊಳ್ಳುವ ಪ್ರತಿಯೊಂದರಿಂದಲೂ ಅಂತಿಮವಾಗಿ, ಥಟ್ಟನೇ ಕಿತ್ತುಕೊಳ್ಳುವುದಾಗಿದೆ. ಶ್ರಮವನ್ನು ಒಪ್ಪಿಕೊಳ್ಳುವುದು ಇದಕ್ಕಿಂತ ಕಡಿಮೆ ಕ್ರೂರವಾದ್ದು. ಜೀವನದುದ್ದಕ್ಕೂ ಪ್ರತಿ ಬೆಳಿಗ್ಗೆ ಇದು ಸಂಭವಿಸುತ್ತದೆ, ಸಂಜೆಯತನಕ ಮುಂದುವರಿಯುತ್ತದೆ. ದಿನಕಳೆದು ದಿನವಾದರೂ ಬೆಳಿಗ್ಗೆಯಿಂದ ಸಂಜೆ ತನಕ ಸಾಗುವ ಇದು, ಮಾರನೇ ದಿನ ಮತ್ತೆ ಅಗತ್ಯವಾಗುತ್ತದೆ-ಹೀಗೆ ಸಾಯುವ ತನಕ. ಪ್ರತಿ ಬೆಳಿಗ್ಗೆ ಕೂಲಿಗಾರ ಆ ದಿನದ ದುಡಿಮೆ ಮಾಡಲು ಅನುವಾಗುತ್ತಾನೆ, ತನ್ನ ಆಯುಷ್ಯ ತೀರುವತನಕ.

ದುಡಿಮೆಯಿಂದ ಅವನು ಬಳಲಿ ಸುಸ್ತಾಗುವುದು ಊಟಮಾಡಲೆಂದು, ಊಟ ಮಾಡುವುದು ದಿಡಿಮೆಗಾಗಿ ಮತ್ತು ಶಕ್ತಿಯನ್ನು ಪಡೆಯಲೆಂದು. ಒಂದು ವರ್ಷದ ಶ್ರಮದ ನಂತರ ಎಲ್ಲವೂ ಶುರುವಿನಲ್ಲಿ ಹೇಗಿತ್ತೊ ಹಾಗೇ ಇರುತ್ತದೆ. ಅನಂತತೆಯಿಂದ ಅವನ ದುಡಿಮೆ ಪ್ರಕಾಶಿತವಾದಲ್ಲಿ ಮಾತ್ರ ದುಡಿಮೆಯ ಏಕತಾನದ ಬೇಸರ ಸಹನೀಯವಾಗುತ್ತದೆ.

ಯಂತ್ರ ಕಲ್ಲಿದ್ದಲನ್ನು ಉರಿಸುವಂತೆ ದುಡಿಮೆಗಾರ ತನ್ನ ಮಾಂಸವನ್ನೇ ಉರಿಸುತ್ತ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತಾನೆ. ತನ್ನ ರಕ್ತಮಾಂಸವನ್ನು ಶ್ರಮದ ಫಲಗಳಾಗಿ, ಆಹಾರ ಮದಿರೆಗಳಾಗಿ ಮಾಡಿಕೊಡುತ್ತಾನೆ:

ಈ ಕಾಯಕ ಶ್ರಮ ಒಂದೋ ಕೀಳುಗೊಳಿಸುವ ಜೀತವಾಗುತ್ತದೆ, ಅಥವಾ ಯಜ್ಞವಾಗುತ್ತದೆ.

*

(ರುಜುವಾತು, ಮೊದಲ ಸಂಚಿಕೆ ೧೯೮೦)