ಇಂಗ್ಲಿಷ್  ಲೇಖಕ ಇ.ಎಮ್.ಫಾರ್‌ಸ್ಟರ್ ಹೇಳಿದ ಒಂದು ಮಾತು ನೆನಪಾಗುತ್ತದೆ. ‘ಓನ್ಲಿ ಕನೆಕ್ಟ್’. ಸಂಬಂಧವಿದೆ ನಾವು ತಿಳಿಯದೇ ಇರುವ ವಿದ್ಯಮಾನಗಳಲ್ಲಿ ಥಟ್ಟನೆ ಒಂದು ಸಂಬಂಧವನ್ನು ಕಾಣಿಸುವುದು ಜಾಣತನ ಮಾತ್ರವಲ್ಲ; ಅದೊಂದು ನೋಡುವ ಕ್ರಮ. ಅಕ್ಷರನ ‘ಸ್ವಗತ’ದ ಹಲವೆಡೆ ಈ ಗುಣವನ್ನು ಕಂಡಿದ್ದೇನೆ. ಉದಾಹರಣೆಗೆ ‘ಚಿತ್ರ ನಗರಿಯ ವಿಚಿತ್ರ ದೇಗುಲ’, ಹಾಗೆಯೇ ‘ಮತ್ತೂ ಒಂದು ರಾಮಾಯಣ’. ಇನ್ನೊಂದು ‘ಅಮಲು ಮತ್ತು ಭಿಕ್ಷಾಪಾತ್ರೆ’, ಹೀಗೆ ಬೆಳೆಸುತ್ತಾ ಹೋಗುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಇಲ್ಲಿ ಸ್ವಾರಸ್ಯವಿಲ್ಲದ ಯಾವ ಲೇಖಕವೂ ಇಲ್ಲ.

ಕನ್ನಡ ಸಾಹಿತ್ಯ ಲೋಕಕ್ಕೆ ಈ ಕಾಲದಲ್ಲಿ ಪ್ರವೇಶಿಸಿರುವ ಗಟ್ಟಿಗರಲ್ಲಿ ಅಕ್ಷರ ಒಬ್ಬರು ಎಂಬುದನ್ನು ಅವರ ನಾಟಕಗಳಲ್ಲಿ, ನಾಟಕದ ಪ್ರಯೋಗಗಳಲ್ಲಿ, ನಾಟಕದ ಬಗ್ಗೆ ಅವರು ಬರೆದ ಗ್ರಂಥಗಳಲ್ಲಿ ಕಂಡಿರುವ ನನಗೆ, ಈ ಲೇಖನಗಳಲ್ಲಿನ ಸಮಕಾಲೀನವಾದ ಅವರ ಚಿಂತನಶೀಲ ಗುಣವನ್ನು ಕಂಡು ಕನ್ನಡದ ಭವಿಷ್ಯದ ಬಗ್ಗೆ ಭರವಸೆ ಮೂಡಿದೆ. (ಹೀಗೆ ಬರೆಯುವಾಗ ನನಗೆ ಮುಜುಗುರವಾಗುತ್ತದೆ, ಯಾಕೆಂದರೆ ಅಕ್ಷರನನ್ನು ಸಣ್ಣ ಹುಡುಗನಾಗಿದ್ದಾಗಿನಿಂದಲೂ ನೋಡಿರುವ ನನಗೆ ಪ್ರಶಂಸೆ ಕಷ್ಟವಾದದ್ದು, ಬಹುವಚನದಲ್ಲಿ ಅಕ್ಷರನ ಬಗ್ಗೆ ಮಾತನಾಡುವುದು ಇನ್ನೂ ಕಷ್ಟವಾದದ್ದು).

ಇಷ್ಟು ಹೇಳಿದ ಅನಂತರ ಲೇಖನಗಳು ಒಂದು ಆಹ್ವಾನವೆಂದು ಭಾವಿಸಿ ಈ ಕಾಲದ ಸತ್ಯ ಹೇಳುವ ಕ್ರಮಗಳ ಬಗ್ಗೆ ಒಂದು ಪಟ್ಟಿಯನ್ನು ನಾನು ಮಾಡಲಿದ್ದೇನೆ. ಫುಕೋ ತಮಾಷೆ ಮಾಡುವ ಪಟ್ಟಿಯಂತೆ ಅಕ್ಷರನಿಗೆ ಇದು ಕಂಡಿತೇ? ಕಾಣಲಿ.

೧) ಕೆಲವು ವಾರಪತ್ರಿಕೆಗಳ ‘ಪತ್ತೇದಾರಿ’ ಸತ್ಯ ಮೊದಲನೆಯದು. ನಾನು ‘ವಸ್ತ್ರಾಪಹರಣ ವಿಮರ್ಶೆ’ ಎಂದು ಇದನ್ನು ಕರೆಯುತ್ತೇನೆ. ತಾವು ಹೇಳುವುದು ಸತ್ಯವೋ ಅಲ್ಲವೋ ಎಂಬುದು ಮುಖ್ಯವಾಗದೆ, ಓದುಗರಿಗೆ ಇದು ರೋಚಕವಾಗಬೇಕು: ಆಗ ಪತ್ರಿಕೆಯ ಮಾರಾಟ ಹೆಚ್ಚಾಗುತ್ತದೆ. ಎಂಬ ಲೆಕ್ಕಾಚಾರದ ಸತ್ಯವಿದು. ಇಂಥಲ್ಲಿ ಸತ್ಯವೂ ಇರುತ್ತದೆ. ಕೆಲವೊಮ್ಮೆ ಆದರೆ ಸಂಕಟದಲ್ಲಿ ಕಂಡುಕೊಂಡ ಓದುಗರಲ್ಲಿ ಸಂಕಟ ಹುಟ್ಟಿಸಿ ಕಾಡುವ ಸತ್ಯವಾಗಿ ಇದು ಉಳಿಯುವುದಿಲ್ಲ. ಅದೇ ಒಂದು ರುಚಿಯಾಗಿಬಿಡುತ್ತದೆ. ಪ್ರಜಾತಂತ್ರದಲ್ಲಿನ ಭ್ರಷ್ಟಾಚಾರಕ್ಕೆ ನಾವು ಒಗ್ಗುವಂತೆ ಮಾಡುವ ವೈರಸ್ ಇದು.

೨) ಈ ಕಾಲದಲ್ಲಿ ಸಲ್ಲಬೇಕೆಂಬ ಕಾರಣದಿಂದಾಗಿ ನಾವು ಪುನರುಚ್ಚರಿಸುವ ಕೆಲವೊಂದು ಸತ್ಯಗಳು. ಇವುಗಳನ್ನು ‘ಪೊಲಿಟಿಕಲಿ ಕರೆಕ್ಟ್’ ಆಗುವಂತೆ ಒಗೆದು ಇಸ್ತ್ರಿ ಮಾಡಿದ ಸತ್ಯಗಳು ಎನ್ನಬಹುದು. ಸ್ವಗತದಲ್ಲಿಯಾದರೋ, ಅದು ತನಗೇ ಹೇಳಿಕೊಳ್ಳುವ ಸತ್ಯ. ಇದು ಆಗದೆ ಇದ್ದಾಗ, ಆಡುವ ಮಾತು ಅಧಿಕೃತವಾಗುವುದಿಲ್ಲ; ನಿಷ್ಠುರವೆಂದೂ ಅನ್ನಿಸುವುದಿಲ್ಲ. ಜುಲು ಜನಾಂಗದ ಬಗ್ಗೆ ಸಾಲ್ಬೆಲೋ ಹೇಳಿದ್ದನ್ನು ಸಮರ್ಥಿಸುವುದು ತಪ್ಪೆಂದು ಅಕ್ಷರನಿಗೆ ಗೊತ್ತಿದೆ. ಆದರೂ ಹಲವರು ಹೀಗೆ ನಿಜದಲ್ಲಿ ಅನಿಸಿದ್ದನ್ನು ಹೇಳದೆ ಇದ್ದಾಗ, ಸಾಲ್ಬೆಲೋ ಹೇಳಿದನೆಂದು ಅಕ್ಷರ ಅನುಮಾನದಲ್ಲಿ ಮೆಚ್ಚುತ್ತಾನೆ.

೩) ‘ಎಲ್ಲ ಸತ್ಯವೂ ಸಾಪೇಕ್ಷವಾದದ್ದು; ನಾವಾಗಿ ಕಟ್ಟಿಕೊಮಡದ್ದು, ಸಾರ್ವಕಾಲಿಕವಾದ ಸಾರ್ವತ್ರಿಕವಾದ ನಿತ್ಯ ಸತ್ಯವಿದೆ ಎಂಬುದೊಂದು ಭ್ರಮೆ’-ನವೋತ್ರರವಾದಿಗಳು (ಪೋಸ್ಟ್ಟ ಮಾಡರ್ನಿಸ್ಟರು) ಸತ್ಯವನ್ನು ಪರಿಭಾವಿಸುವ ರೀತಿ ಇದು. ಅಕ್ಷರ ಕೊಂಚ ಈ ಬಗೆಯ ಚಿಂತನೆಗೆ ವಾಲುತ್ತಿರಬಹುದೆಂಬ ಅನುಮಾನ ನನಗಿದೆ.

ನಾನು ಒಬ್ಬ ಲೇಖಕನಾಗಿ ಬೆಳೆದು ಬಂದ ಕಾಲವೇ ಈ ಮೂರು ಬಗೆಗಳಿಗಿಂತ ಬೇರೆ, ಅಕ್ಷರ ಈಗ ಬರೆಯುತ್ತಿರುವ ಕಾಲವೇ ಬೇರೆ – ಎಂದು ಇಂತಹ ವಾದದ ಎದುರಿನಲ್ಲಿ ನನಗೆ ಕಾಣಿಸುತ್ತದೆ. ಇದೊಂದು ರೀತಿಯ ಆಧುನಿಕ ‘ಸ್ಯಾದ್ವಾದ’ ಜೈನರು ಬಳಸುವ ಶ್ರೀಮಂತವಾದ ಈ ಪದವನ್ನು ‘ಪೋಸ್ಟ್ ಮಾಡರ್ನ್’ ಜನಾಂಗದ ಚಿಂತನಾಕ್ರಮಕ್ಕೆ ಕ್ಷಮೆಕೋರಿ ಬಳಸುತ್ತಿದ್ದೇನೆ. ಈ ವಾದದವರಿಗೆ ಯಾವುದೂ ನಿತ್ಯ ಸತ್ಯವಲ್ಲವಾದರೂ, ತಮ್ಮದು ಮಾತ್ರ ನಿತ್ಯಸತ್ಯ ಎಂಬ ಭ್ರಮೆ ಇರಬಹುದೇನೋ ಎಂದು ನನಗೆ ಗುಮಾನಿ.

ನಮ್ಮದು ಬಹು ಕಷ್ಟದ, ಕೆಲವೊಮ್ಮೆ ಬಹುದುಷ್ಟ ಎನಿಸುವ ಕಾಲ. ಇಂತಹ ಕಾಲಕ್ಕೆ ಎದುರಾಗಿ, ಎದುರಾದ ಕ್ರೂರ ವಿದ್ಯಮಾನಗಳನ್ನು ಬದಲಾಯಿಸುವಂತಹ ಕ್ರಿಯೆಯನ್ನು ಸಾಧ್ಯವಾಗಿಸುವ ವೈಚಾರಿಕೆ ನಮಗೆ ಬೇಕು. ತಾವು ತಿಳಿದದ್ದೇ ನಿತ್ಯಸತ್ಯವೆಂದು, ಎಲ್ಲರೂ ಅನುಸರಿಸಬೇಕಾದ ಸತ್ಯವೆಂದು ತಿಳಿದವರು ಆತ್ಮಾಹುತಿ ಯನ್ನೂ ಮಾಡಿಕೊಂಡು, ಜೊತೆಗೆ ಮುಗ್ಧರಾದ ಹಲವರನ್ನು ಕೊಲ್ಲುತ್ತಿರುವ ಕಾಲದಲ್ಲಿ ನಾವಿದ್ದೇವೆ ಎಂಬುದನ್ನು ಮರೆಯಕೂಡದು.

ನನ್ನ ಅನುಮಾನ ಇದು: ಈ ದುಷ್ಟರು ಜಯಗಳಿಸಿದರೆ, ನಮ್ಮ ‘ಸ್ಯಾದ್ವಾದಿ’ಗಳು ಇದೂ ಇನ್ನೊಂದು ಬಗೆಯ ‘ಕಟ್ಟಿಕೊಂಡಿರುವ’ ಸತ್ಯವೆಂದು ಹುಷಾರಾಗಿ ಒಪ್ಪಿಕೊಂಡುಬಿಡಬಹುದು. ಬಹುರಾಷ್ಟ್ರೀಯ ಕಂಪೆನಿಗಳ ಜಾಗತೀಕರಣವನ್ನು ಒಪ್ಪಿಕೊಂಡವರು ಏನನ್ನಾದರೂ ಸಕಾರಣವಾಗಿಯೇ ಒಪ್ಪಿಕೊಂಡಾರು.

ನಾನು ಬರೆಯಲು ಪ್ರಾರಂಭಿಸಿದ ಲೋಹಿಯಾರ ಮಾತು ನನಗೆ ಬಹಳ ಮುಖ್ಯವಾಗಿತ್ತು. ಸತ್ಯ ಬಹುಮುಖೀ ಎನ್ನುವುದು ಹೌದು; ಆದರೆ ಬಹುಮುಖೀ ಗುಣದ ಔದಾರ್ಯಕ್ಕೆ ಅಪಚಾರವಾದರೂ ಸರಿಯೇ ‘ಏನೂ ತ್ರಿಕರಣಶುದ್ಧಿಯಲ್ಲಿ ಕಂಡ ಸತ್ಯವನ್ನು ಆಳವಾಗಿ ಊರುವಂತೆ ಹಠ ಮಾಡಬೇಕು’ ಎಂದು ಲೋಹಿಯಾ ತಿಳಿದಿದ್ದರು. ಅರವತ್ತರ ದಶಕದಲ್ಲಿ ಬೆಳೆದಿದ್ದ ನಮ್ಮ ಮನಸ್ಸು ಈ ಬಗೆಯ ತೀವ್ರತೆಯನ್ನು ಪಡೆದಿತ್ತು.

ಹೊಸ ಕಾಲದ ಅಕ್ಷರನಿಗೆ ‘ಕೂಲ್’ ಆಗಿ ಯೋಚಿಸುವುದು ಸಾಧ್ಯವಾಗಿದೆ. ಇದನ್ನು ಮೆಚ್ಚುತ್ತಲೇ ನಾನು ನಮ್ಮ ಕಾಲದ ಆಹ್ವಾನವನ್ನು ನೆನದು, ಅಕ್ಷರನ ಆಕರ್ಷಕವಾದ ಉದಾರ ಚಿಂತನಾಕ್ರಮವನ್ನು ಅನುಮಾನಿಸುತ್ತೇನೆ.
‘ಜನಸಾಮಾನ್ಯರ ಆವಾಹನೆ’ ಬಗ್ಗೆಯೋ, ‘ಋ’ ಕಾರದ ಬಗ್ಗೆಯೋ, ‘ಆತ್ಮಹತ್ಯೆ ವರ್ಸಸ್ ವಿಜ್ಞಾನ’ ಮತ್ತು ‘e-ನರಕ e-ಪುಲಕ’ದ ಬಗ್ಗೆಯೋ, ಅವನೇ ಇಷ್ಟಪಡುವ ಅಡಿಕೆಯ ಬಗ್ಗೆಯೋ ಬರೆಯುವ ಅಕ್ಷರನಿಗೂ ತಾನು ಕಂಡದ್ದನ್ನು ನೆಡುವಷ್ಟು ಆಳವಾಗಿ ಊರುವಂತೆ ಮಾತಾಡುವ ಆಸೆಯಿರುವುದನ್ನು ನಾನು ಗುರುತಿಸಿದ್ದೇನೆ. ಆದರೆ ಇವು ನಮ್ಮನ್ನು ಒದೆಯುತ್ತಿರುವ ವಿದ್ಯಮಾನಗಳಲ್ಲ.

ಅಕ್ಷರನ ಒಟ್ಟು ದೃಷ್ಟಿ ವಾಲಿರುವುದು ಸತ್ಯವನ್ನು ಸಾಪೇಕ್ಷವೆಂದು ತಿಳಿಯುವುದೇ ಆಗಿದೆಯೇನೋ? ತಾನು ಕಂಡದ್ದು ಮಾತ್ರ ಸತ್ಯವೆಂದು ತಿಳಿಯುವ ಆತ್ಮಾಹುತಿಯ ಹುಂಬರು ಒಂದು ಕಡೆ, ಮಾರುಕಟ್ಟೆಗಾಗಿ ವಸ್ತ್ರಾಪಹರಣ ಮಾಡುವ ಮೋಸಗಾರ ಒರಟರು ಇನ್ನೊಂದು ಕಡೆ, ವಿರೋಧಪಕ್ಷದಲ್ಲಿದ್ದಾಗ ಮಾತ್ರ ಸತ್ಯವನ್ನು ಕಾಣುವ ರಾಜಕಾರಣಿಗಳು ಇನ್ನೊಂದು ಕಡೆ ಇದನ್ನು ಕಂಡಾಗ ಅನುಮಾನಗಳನ್ನು ಬಿಡದಂತೆ ಯೋಚಿಸುವ ಅಕ್ಷರನ ರೀತಿ ಇಷ್ಟವಾಗಿದೆ ಎಂದು ಹೇಳುತ್ತಲೇ ನನ್ನ ಟೀಕೆಯನ್ನು ಮಾಡುತ್ತಿದ್ದೇನೆ.

ಕುವೆಂಪು, ಬೇಂದ್ರೆ, ಅಡಿಗ, ಕಂಬಾರ ಇಂತಹವರ ದಟ್ಟವಾದ ತೀವ್ರತೆಗೆ ಎದುರಾಗಿಯೋ, ಅಥವಾ ಪೂರಕವಾಗಿಯೋ ಅಕ್ಷರನಂತೆ ಯೋಚಿಸುವ ಈ ಕಾಲದ ಗಟ್ಟಿಗರು ಕನ್ನಡದಲ್ಲಿ ಕನ್ನಡದಲ್ಲಿ ಏನನ್ನು ಸೃಷ್ಟಿಸಿಯಾರು ಎಂಬ ಕುತೂಹಲದಿಂದ ಹೊಸ ಕಾಲದ ಲೇಖಕರನ್ನು ಕೆಣಕುವ ಈ ಮಾತುಗಳನ್ನು ಆಡಿದ್ದೇನೆ.

*

ಕೆ.ವಿ. ಅಕ್ಷರ ಅವರ ಸುಮ್ಮನಿರದ ಸ್ವಗತಅಂಕಣ ಬರಹಗಳ ಸಂಕಲನ (೨೦೦೪)ಕ್ಕೆ ಬರೆದ ಮುನ್ನುಡಿ