‘ಸನ್ಮಾರ್ಗಿ’ ಎಂಬ ಕಾವ್ಯನಾಮದಲ್ಲಿ ಶ್ರೀ ಇಬ್ರಾಹಿಂ ಸಯೀದ್‌ರು ಪ್ರಜಾವಾಣಿಯಲ್ಲಿ ಪ್ರಕಟಿಸಿದ ‘ಅರಿವಿನ ಅಂತರಾಳ’ ಅಂಕಣ ಕನ್ನಡ ಭಾಷೆಯಲ್ಲಿ ನಡೆದಿರುವ ಆಳವಾದ ಧಾರ್ಮೀಕ ಚಿಂತನೆಯಾಗಿದೆ. ಮುತ್ತು ರತ್ನಗಳನ್ನು ಸುಂದರವಾಗಿ ಜೋಡಿಸಿ ಪೋಣಿಸಿದ ಹಾರದಂತೆ ಈ ಅಂಕಣ ನಮ್ಮ ಅರಿವಿನಲ್ಲಿ ತೋರುತ್ತ, ಹೊಳೆಯುತ್ತ ಬೆಳೆಯುತ್ತದೆ. ಈ ಚಿಂತನೆಯ ಮೂಲಕ ಕನ್ನಡ ಭಾಷೆಯಲ್ಲಿದ್ದ ಒಂದು ಕೊರತೆಯನ್ನು ಸಯೀದ್ ಅವರು ತಮ್ಮ ಆಳವಾದ ಧಾರ್ಮಿಕ ಸಂವೇದನೆಯಿಂದ ತುಂಬಿದ್ದಾರೆ. ಎಲ್ಲರೂ ಸರಳವಾಗಿ, ಸಂತೋಷಪಡುತ್ತ, ಅರಳುತ್ತ ಓದುವ ಒಂದು ಕೃತಿಯನ್ನು ಸೃಷ್ಟಿಸಿದ್ದಾರೆ.

ಈ ಅಂಕಣಗಳನ್ನು ಓದುತ್ತ ಹೋದಂತೆ ನನ್ನಲ್ಲಿ ಎರಡು ಭಾವನೆಗಳು ಬೆಳೆಯುತ್ತ ಹೋಗಿವೆ. ಮೊದಲನೆಯದಾಗಿ ಪವಿತ್ರ ಕುರಾನ್ ಮತ್ತು ಪ್ರವಾದಿ ಪೈಗಂಬರರ ಬಗ್ಗೆ ನಮಗಿರುವ ಅಜ್ಞಾನದಿಂದಾಗಿ ನಾವು ಈ ಕಾಲದಲ್ಲಿ ಮಾಡುತ್ತಿರುವ ತಪ್ಪುಗಳ ಅರಿವಾಗುತ್ತ ಹೋಯಿತು. ಭಾರತ ಎಲ್ಲ ಧರ್ಮಗಳ ಪವಿತ್ರ ಕ್ಷೇತ್ರವಾಗಲು ಇರುವ ಕಾರಣಗಳಲ್ಲಿ ಬೌದ್ಧಧರ್ಮ, ವೈದಿಕಧರ್ಮ, ಜೈನಧರ್ಮ, ಕ್ರೈಸ್ತಧರ್ಮದಷ್ಟೇ ಇಷ್ಲಾಂ ಕೂಡ ಒಂದು ಪ್ರಮುಖ ಕಾರಣವಾಗಿದೆ. ನಮಗೆ ಅರಿವಿಲ್ಲದಂತೆಯೇ ಜನಸಾಮಾನ್ಯರು ಈ ಎಲ್ಲ ಧರ್ಮಗಳ ನೆರಳಿನಲ್ಲಿ ಬೆಳೆದಿದ್ದಾರೆ. ಕುರಾನ್ ದಲ್ಲಿರುವ ಪರಮಾತ್ಮನ ತೊಂಬತ್ತೊಂಬತ್ತು ಗುಣನಾಮಗಳು ನಮ್ಮೆಲ್ಲರ ಅಂತರಂಗವನ್ನು ಮುಟ್ಟಿ ಉದ್ದೀಪನಗೊಳಿಸಬಲ್ಲವು ಆಗಿವೆ. ಒಬ್ಬ ಮುಸ್ಲಿಂ ಶೃದ್ಧೆಯಿಂದ ದೇವರನ್ನು ಪ್ರಾರ್ಥಿಸುವಾಗ ಇಡೀ ಮಾನವಕುಲಕ್ಕಾಗಿ ಪ್ರಾರ್ಥಿಸುತ್ತಿದ್ದಾನೆ.

ಕುರಾನಿನ ಪಾವಿತ್ರರ್ಯದಿಂದ ಆಳವಾಗಿ ಪ್ರಭಾವಿತರಾದ ಶ್ರೀ ಸಯೀದ್ ಅವರು ಇನ್ನೊಂದು ಭಾವನೆಯನ್ನೂ ನನ್ನಲ್ಲಿ ಆಳವಾಗಿ ಪ್ರಚೋದಿಸಿದರು. ತೀಕ್ಷ್ಣವಾಗಿ  ನೋಡಿದಾಗ ನಮ್ಮ ಎಲ್ಲ ಧರ್ಮಗ್ರಂಥಗಳಲ್ಲೂ ಎಷ್ಟು ಸಮಾನವಾದ ವಿಚಾರಗಳು ಇವೆ ಎಂಬುದು ಅದು. ಮತೀಯವಾಗಿ ನೋಡಿದಾಗ ಕಾಣದೇ ಹೋಗುವ ಸಮಾನ ಅಂಶಗಳು ಧರ್ಮಶೃದ್ಧೆಯಿಂದ ನೋಡಿದಾಗ ಕಾಣುತ್ತೇವೆ. ಶ್ರೀ ಸಯಿದ್ ಅವರು ತಮಗೆ ಇಸ್ಲಾಂ ಧರ್ಮ ಕೊಟ್ಟ ಕಣ್ಣುಗಳಿಂದಲೇ ಉಳಿದೆಲ್ಲ ಧರ್ಮಗಳ ತಿರುಳನ್ನು ಗ್ರಹಿಸಿದ್ದಾರೆ. ಹೀಗೆ, ಶ್ರೀ ಇಬ್ರಾಹೀಂ ಸಯಿದ್ ಅವರು ತಮ್ಮ ಕನ್ನಡದ ಬರವಣಿಗೆಯ ಮುಖಾಂತರ ನಮ್ಮೆಲ್ಲರಲ್ಲೂ ಸದ್ಭಾವನೆಯನ್ನು ಜಾಗೃತಗೊಳಿಸಿದ್ದ ಕುರಾನನ್ನು ಭಾರತದ ಇನ್ನೊಂದು ಮುಖ್ಯ ಧರ್ಮಗ್ರಂಥವಾಗಿ ಮಾಡಿದ್ದಾರೆ. ಇತರ ಧರ್ಮಗ್ರಂಥಗಳ ಜೊತೆಗೆ ಕುರಾನನ್ನು ಹೆಣೆದಿದ್ದಾರೆ. ಕನ್ನಡದ ಅಭಿವ್ಯಕ್ತ ಸಾಮರ್ಥ್ಯವನ್ನು ಹಿಗ್ಗಿಸಿದ್ದಾರೆ. ಕುರಾನಿನ ತಿರುಳನ್ನು ಕನ್ನಡಿಸಿದ್ದಾರೆ.

ಈ ಪುಸ್ತಕವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಬೇಕೆಂದು ನನ್ನ ಆಸೆ. ಭಾರತೀಯವಾದ ಹಿಂದೂ, ಜೈನ, ಬೌದ್ಧ ಧರ್ಮಗ್ರಂಥಗಳ ಪರಿಚಯ ಮುಸ್ಲಿಂರಿಗೂ, ಕ್ರೈಸ್ತರಿಗೂ ಇದ್ದಲ್ಲಿ, ಅಂತೆಯೇ ಕುರಾನ್ ಮತ್ತು ಬೈಬಲ್ ಪರಿಚಯ ನಮ್ಮ ಹಿಂದೂಗಳಿಗೆ ಇದ್ದಲ್ಲಿ ನಮ್ಮ ಭಾರತ ಇಡೀ ಪ್ರಪಂಚಕ್ಕೆ ಮಾದರಿಯಾಗಬಲ್ಲದು. ಆ ದಿಕ್ಕಿನಲ್ಲಿ ಇಬ್ರಾಹಿಂ ಸಯೀದ್ ರ ಈ ಪ್ರಯತ್ನ ಒಂದು ಮಹತ್ವದ ಕೊಡುಗೆಯಾಗಿದೆ.

*

(ಇಬ್ರಾಹಿಂ ಸಯಿದ್ ಅವರ ಅರಿವಿನ ಅಂತರಾಳ’ (೨೦೦೫) ಕೃತಿಗೆ ಬರೆದ ಮುನ್ನುಡಿ)