(ಶಿಲಾಲತೆ: ೩೭ ಕವನಗಳ ಸಂಗ್ರಹ. ಪ್ರೋಫೆಸರ್‌ ಡಿ.ಎಲ್. ನರಸಿಂಹಾಚಾರ್ಯರ ಮುನ್ನುಡಿಯೊಂದಿಗೆ ಬರೆದವರು ಶ್ರೀ ಕೆ. ಎಸ್. ನರಸಿಂಹಸ್ವಾಮಿ. ಪ್ರಕಾಶಕರು ಕಾವ್ಯಾಲಯ. ಬೆಲೆ ಸಾದಾ ಪ್ರತಿ ರೂ.೧.೫೦ ಉತ್ತಮ ಪ್ರತಿ ರೂ. ೩.೦೦)

‘ಶಿಲಾಲತೆ’ಗೆ ಮುನ್ನುಡಿಯನ್ನು ಬರೆದ ಪ್ರೋಫೆಸರ್‌ ಡಿ.ಎಲ್‌. ನರಸಿಂಹಾಚಾರ್ಯರು ಕನ್ನಡ ಕವಿಗಳಿಗೆ ಬಹು ಅವಶ್ಯಕವಾದ ಎಚ್ಚರಿಕೆಯ ಮಾತನ್ನು ಆಡಿದ್‌ಆರೆ. ‘ಅಗ್ಗದ ಆಧ್ಯಾತ್ಮವನ್ನು ಕಿವಿ ಹಿಡಿದು ತಂದು ಕಾವ್ಯದಲ್ಲಿ ತುಂಬುವುದಕ್ಕಿಂತ ಇಹದ ಭವದ ದೀರ್ಘ ಗಂಭೀರ ಪರಿಶೀಲನೆಯಿಂದ ಬಂದ ಅನುಭವವಷ್ಟನ್ನು ಹೇಳುವುದು ಮೇಲು’. ಸದ್ಯದ ಕನ್ನಡ ಸಾಹಿತ್ಯದ ದೃಷ್ಟಿಯಿಂದ ಇದು ಬಹಳ ಬೆಲೆಯುಳ್ಳ ಮಾತು. ಈಗತಾನೆ ಕಣ್ಣುಬಿಡುವ ಕವಿಗಳಿಂದ ಹಿಡಿದು, ಹಿರಿಯರೆಂದು ಮರ್ಯಾದಿತರಾದ ಕವಿಗಳವರೆಗೆ ಎಲ್ಲರೂ ಅರವಿಂದರ ತತ್ವಗಳನ್ನೋ ಅಥವಾ ಇನ್ನಾವುದೋ ವೇದಾಂತವನ್ನೋ ಪದ್ಯಕ್ಕಿಳಿಸಿ ಬಿಡುವಷ್ಟರಲ್ಲೇ ತೃಪ್ತರಾಗಿರುವಾಗ ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳು‘ ನಾನು ಅನುಭವಿಸಿದ್ದನ್ನಷ್ಟೇ ಹೇಳುತ್ತೇನೆ’ ಎನ್ನುವ ನಿಲುವು ಕವಿತೆಯಲ್ಲಿ ವ್ಯಕ್ತಿ ವಿಶಿಷ್ಟ ಅನುಭವದ ಹೊಸ ರುಚಿಯನ್ನು ತಂದು ಕಾವ್ಯವನ್ನು ಜೀವಂತವಾಗಿಸುವಂಥದು. ಪ್ರಾಮಾನಿಕತೆಯ ಅವಶ್ಯಕತೆ ಇದೆ ಇದಕ್ಕೆ. ‘ಅರಳು-ಮರಳು’ ಸಂಗ್ರಹಕ್ಕಿಂತ ಹಿಂದಿನ ಬೇಂದ್ರೆಯೊಬ್ಬರೇ ಅಲೌಕಿಕವೆನ್ನಿಸುವ ಅನುಬವಗಳನ್ನು ಕಾವ್ಯವಾಗಿ ಮಾಡಬಲ್ಲ ಮಾಂತ್ರಿಕ ಶಕ್ತಿಯಿದ್ದವರು. ಉಳಿದವರು ಶ್ರೀ ಕುವೆಂಪು, ಪು.ತಿ.ನ., ವಿನಾಯಕ, ಡಿ.ವಿ.ಜಿ., ಎಲ್ಲರೂ ತತ್ವಗಳನ್ನೂ ಪದ್ಯಗಳಾಗಿ, ಕೆಲವು ಸಲ  ಓದಲು ಚೆನ್ನಾಗಿರುವಂತೆ, ಬರೆದವರು ಈ ನಡುವೆ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಮಿತಿಯಲ್ಲಿಯೇ ಕಾವ್ಯ ರಚನೆ ಮಾಡುತ್ತ ಬಂದಿರುವುದು ತುಂಬ ಗೌರವಕ್ಕೆ ಅರ್ಹವಾದ ವಿಷಯ. ‘ಮೈಸೂರು ಮಲ್ಲಿಗೆ’ ಯಿಂದಲೂ ನರಸಿಂಹಸ್ವಾಮಿಯವರ ಕಾವ್ಯ ಅಪ್ಪಟ ಮೋಸವಿಲ್ಲ. ನಾಜೂಕು ಕುಸುರಿ ಕೆಲಸ ಅವರ ಕಾವ್ಯದ ಗುಣವೂ ಹೌದು; ಮಿತಿಯೂ ಹೌದು. ಎಲ್ಲದಕ್ಕಿಂತ ಹೆಚ್ಚಿನದು ನರಸಿಂಹಸ್ವಾಮಿಯವರು ಸಾಮಾನ್ಯ ಜೀವನದ ಬಗ್ಗೆಯೂ ತೋರಿಸುವ ಶೃದ್ಧೆಯಿಂದ ಕೂಡಿದ ಪ್ರೀತಿ. ಇವರ ಕಣ್ಣು ಕಿವಿ ತುಂಬ ಚುರುಕು. ಆಗಾಗ, ‘ತುಂಗಭದ್ರೆ’, ‘ಗಡಿಯಾರದಂಗಡಿ’ಯ ಮುಂದೆ ಇಂತಹ ಕವನಗಳಲ್ಲಿ ನರಸಿಂಹಸ್ವಾಮಿಯವರ ಕಾವ್ಯ ಗಂಭಿರವಾಗುತ್ತದೆ. ಆದರೆ ಹೆಚ್ಚು ಪಾಲು ಇವರು ಜೀವನವನ್ನು ಪ್ರೀತಿಯಿಂದ ನೋಡಿ ಮೃದು ಹಾಸ್ಯದಿಂದ ಟೀಕಿಸುತ್ತಾರೆ. ಈ ಜೀವನಶೃದ್ಧೆ ‘ಹುಬ್ಬಳ್ಳಿಯಾಂವ’, ‘ನೀ ಹಿಂಗ ನೋಡಬ್ಯಾಡ ನನ್ನ’ಗಳಷ್ಟು ಎತ್ತರದ ಕರತಿಗಳನ್ನು ಕೊಡದಿದ್ದರೂ ‘ಬಳೆಗಾರನ ಹಾಡು’, ‘ತುಂಗಭದ್ರೆ’ಗಳಂತ ಕವನಗಳನ್ನು ಬರೆಸಿದೆ. ಎಲ್ಲಿಯೂ ಮಹತ್ವಾಕಾಂಕ್ಷೆಯಿಲ್ಲ; ಉದ್ಭಾಹು ವಾಮನನಂತೆ ನಗೆಗೀಡಾಗುವುದಿಲ್ಲ.

‘ಶಿಲಾಲತೆ’ಯಲ್ಲಿ ‘ಮೈಸೂರು ಮಲ್ಲಿಗೆ’ ಯ ದೃಷ್ಟಿಯನ್ನು ಒಳಗೊಂಡು ಬೆಳೆದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ‘ಮೈಸೂರು ಮಲ್ಲಿಗೆ’ಯ ಶೃಂಗಾರ ಪ್ರಪಂಚದ ಕವಿ ‘ಇಕೋ ಬಂದೆನು’ ಎನ್ನುವಂತಹ ಪ್ರೇಮ ಕವನ ಬರೆದಿರುವುದು ಗಮನಿಸಬೇಕಾದ ಸಂಗತಿ. ಬೇಂದ್ರೆಯೊಬ್ಬರೇ ‘ಸಖೀಗೀತ’ದಂತಹ ಕವನಗಳಲ್ಲಿ ಶೃಂಗಾರದ ಜೊತೆಗೆ ಪ್ರೇಮದ ಉಳಿದ ಮುಖಗಳನ್ನು ನೋಡುವ ಸಾಮರ್ಥ್ಯವುಳ್ಳ ಕವಿಗಳಾಗಿದ್ದರು. ನರಸಿಂಹಸ್ವಾಮಿಯವರಿಗೆ ಶೃಂಗಾರದ ಬಗ್ಗೆ ಮಾತನಾಡುವುದು ಬಿಡಲಾರದ ಅಭ್ಯಾಸವಾಗಿ ಬಿಟ್ಟಿದೆಯೋ ಎಂದು ಶಂಕಿಸಿದವರಿಗೆ ‘ಶಿಲಾಲತೆ’ಯ ‘ಇಕೋ ಬಂದೆನು’, ‘ಕೇಳಬೇಡ ಎಲ್ಲಿಗೆ?’ ಈ ಕವನಗಳಲ್ಲಿ ಹೊಸಧ್ವನಿ ಕೇಳಿಸುತ್ತದೆ. (ಆದರೆ ಕವನಗಳೇನೂ ಅಷ್ಟು ಚೆನ್‌ಆಗಿಲ್ಲ). ‘ನಲವತ್ತರ ಚೆಲುವೆ’ ಕವನದ ಬಗ್ಗೆ ನರಸಿಂಹಾಚಾರ್ಯರು ಆಡಿರುವ ಮಾತು ಹೆಚ್ಚಾಯಿತು ಎನ್ನಿಸುತ್ತದೆ.

ಕನ್ನಡ ಮಾಧ್ಯಮದ:
ಕನ್ನಡ ಮಾಧ್ಯಮವಾದರೆ ಸಾಲದು
ಕನ್ನಡ ಮಕ್ಕಳಿಗೆ
ಕನ್ನಡ ಮಾಧ್ಯಮವಾಗಲೇಬೇಕು
ಮೊದಲೀಕವಿಗಳಿಗೆ
ಕನ್ನಡ ಕವಿಗಳಿಗೆ !

ಎನ್ನುವ ಸಾಲುಗಳು, ‘ಎರಡೂ ಒಂದೇ’ ಎಂಬ ಕವನದ

ಪಾಂಟಿಯಾಕ್‌ ಕಾರೇನು, ಎತ್ತಿನ ಬಂಡಿಯೇನು?
ಎರಡೂ ಒಂದೆ ನನಗೆ. ಕಾರೆ ಇರಲಿ

ಎನ್ನುವ ಸಾಲುಗಳು ಈಗ ಮತ್ತು ‘ಕವಿತೆ ಹುಟ್ಟಿತು’ ಕವನದ

‘ತನ್ನ ಪಾಡನು ಬಲ್ಲ ಲೋಕ ತಣ್ಣಗೆ ಉರುಳಿ
ಹೊಸಕವಿಗೆ ವಿಧಿಸಿತ್ತು ಕೀರ್ತೀಯ ಸಜ’

ಎನ್ನುವ ಸಾಲು, ನರಸಿಂಹಸ್ವಾಮಿ ಒಳ್ಳೆಯ ವಿಡಂಬನಾಕಾರರು ಎನ್ನುವುದನ್ನು ತೋರಿಸುತ್ತದೆ. (ಆದರೆ ಒಟ್ಟಿನಲ್ಲಿ ಕವನಗಳು ತೃಪ್ತಿದಾಯಕವಾಗಿಲ್ಲ) ನಮ್ಮ ನಾಡಿನ ಸದ್ಯದ ಪರಿಸ್ಥಿತಿಯಲ್ಲಿ ಪ್ರಾಯಶಃ ಇನ್ನು ಮುಂದೆ ಸಾಹಿತ್ಯದಲ್ಲಿ ವಿಡಂಬನೆ ಹೆಚ್ಚಾಗಬಹುದೆಂಬುದಕ್ಕೆ ಅಡಿಗರ ಎಲ್ಲ ಕವನಗಳು, ನರಸಿಂಹಸ್ವಾಮಿಯವರ ಕೆಲವು ಕವನಗಳು ನಿದರ್ಶನವಾಗಿವೆ. ತಾತ್ವಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಕೊನೆಗೆ ಸಾಂಸಾರಿಕ ಎಲ್ಲ ರಂಗದಲ್ಲೂ ಭಾವಾತಿಸಾರದ, ಮೋಸದ ಮಾತುಗಳೇ ಹೆಚ್ಚಾಗಿರುವಾಗ ವಿಡಂಬನೆಯೊಂದೇ ಉತ್ತಮ ಚಿಕಿತ್ಸೆ ಮಾಡೀತು. ನರಸಿಂಹಸ್ವಾಮಿಯವರ ಕೆಲವು ಶಬ್ದ ಚಿತ್ರಗಳು ತುಂಬ ಪರಿಣಾಮಕಾರಿಯಾಗಿವೆ.

‘ಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ
ಮಟ ಮಟ ಮಧ್ಯಾಹ್ನದಲ್ಲಿ’

ಎನ್ನುವಾಗ ಬಾಯಿ ತೆರೆದು ಕಾಯುತ್ತಿರುವ ಕೊಡಗಳು ಅಭಯ ಹಸ್ತದಂತೆ ಇರುವ ನೀರಿಲ್ಲದ ನಲ್ಲಿ, ಅದು ‘ಸ್ಸ್‌’ ಎಂದು ಮೃದು ಸ್ವರದಲ್ಲಿ ಸಮಾಧಾನ ಹೇಳುತ್ತಿರುವುದು, ಟೊಳ್ಳು ತಾತ್ವಿಕರನ್ನು ನಂಬಿದ ಮೂಢರ ಬಗ್ಗೆ ಮರೆಯಲಾಗದ ಪ್ರತಿಮಾಚಿತ್ರವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. (ಆದರೆ ಇಡೀ ಕವನ ಯಶಸ್ವಿಯಾಗಿಲ್ಲ) ಒಂದರ ಮೇಲೊಂದು ಬರುವ ಶಬ್ದ ಚಿತ್ರಗಳು ಒಟ್ಟಾಗಿ ಸೃಷ್ಟಿಸಲು ಯತ್ನಿಸಿರುವ ಅರ್ಥ ಅಸ್ಪಷ್ಟವಾಗಿದೆ. ಬೇಸಿಗೆಯ ಮೌನ ವಾತಾವರಣವನ್ನು ಸಾಂಕೇತಿಕವಾಗಿ ಮಾಡಲು ಉಪಯೋಗಿಸಿರುವ ಕೆಲವು ಶಬ್ದ ಚಿತ್ರಗಳು ಅತಿ ಸಾಮಾನ್ಯವಾಗಿವೆ.

ನಿರ್ಜೀವವಾಗಿದೆ ನಿರಂತರ ನಿರ್ಭಾಗ್ಯ ನೀಲ ಗಗನ
(ರಾತ್ರಿಯ ಮಾತು ರಾತ್ರಿಗಾಯಿತು ಈಗ ಹೇಳಿ!)
ಒಂದಾದರೂ ಬಿಳಿ ಮಿಗಿಲೆ, ಶಾಂತಿಯೋ ರಾಮ ರಾಮ!’

ಉದ್ಗಾರ ಕಾವ್ಯವಲ್ಲ. ಕವನದ ಚಿತ್ರಗಳನ್ನು ಅರ್ಥಪೂರ್ಣವಾಗಿ ಮಾಡಲು ಬರುವ ‘ಯಾರಿಗೆ ಬೇಕೀ ಗತವೈಭವಗಳ ಪರಂಪರೆ’ ಎನ್ನುವ ಸಾಲುಗಳು ಕವನದ ಹೊರಗೆ ನಿಲ್ಲುತ್ತದೆ.

ನರಸಿಂಹಸ್ವಾಮಿಯವರ ಜೀವನ ದರ್ಶನವನ್ನರಿಯಲು ಮುಖ್ಯವಾದ ಕವನ ‘ಬಿಳಿಯ ಹೂಗಳ ಕವಿಗೆ ಗೋರಿಗಳ ಮೇಲೆ’. ನಾಟಕೀಯವಾಗಿ ಪದ್ಯ ಪ್ರಾರಂಭವಾಗುತ್ತದೆ. ಕವನ ಬರೆಯುವ ಚಿಂತೆಯಲ್ಲಿರುವ ಕವಿಯನ್ನು ತಾಯಿ ನೋಡುತ್ತಾ ನಿಂತಿದ್ದಾಳೆ. ಮೊದಲು ಕವಿ ‘ಭೂಮಿ ಮಣ್ಣೆಂದು’ ಬರೆಯುತ್ತಾನೆ. ಅನುಭವಿಸಿದ ನೋವು, ಪಡೆದ ಭಾಗ್ಯವನ್ನು ನುಡಿಯಲಾರದ ಕವಿ ಆಡುವ ಮಾತು- ‘ ಒಂದೆರಡು ಜಳ್ಳು ನುಡಿ – ಕಾವಿಲ್ಲ- ಬೂದಿ ಕಿಡಿ’ ಮತ್ತು ‘ ಒಂದೆರಡು ದುಂಡು ನುಡಿ ಪಂಡಿತರ ಪಾಳುಗುಡಿ’ ಜೀವನಾನುಭವದ ಸತ್ಯ ಹೀಗೆ ಕವನ ಹೊಸೆಯುವ ಚಿಂತೆಯಲ್ಲಿ ದೊರೆಯಲಾರದೆಂದು ತಾನು ಕಂಡ ‘ನೆಲೆನೆಲೆಯ ನಂಜು,’ ‘ನೆಲೆಯ ಚೆಲುವನ್ನು’ ಮುಂದೆ ಚಿಂತಿಸುತ್ತಾನೆ. ಈ ‘ನೆಲೆನೆಲೆಯ ನಂಜಿ’ನ ಅನುಭವ ಅಭಿವ್ಯಕ್ತವಾಗುವುದು ಹೀಗೆ :

‘ನಾ ಕಂಡ ನೆಲೆನೆಲೆಯ ನಂಜು
ಒಡಲಿನುರಿ ನುಡಿಯ ಮರಿ
ರಣಕಹಳೆ ದೆವ್ವಗಳ ಪಂಜು
ಸಿಡಿಲ ಸಾವಿರ ಒಡೆವ ಗಗನದ ಹೆಡೆ
ಎದೆ ತಾಪ, ಹಿಡಿ ಶಾಪ
ರಣಹದ್ದು ಡೇಗೆಗಳ ಗಾಳಿಯ ಪಡೆ’

ಇಲ್ಲಿ ಬರುವ ಚಿತ್ರಗಳೆಲ್ಲ ಸಾಮಾನ್ಯವಾದುವು; ದುಂಡು ನುಡಿಗಳೆ – ಜೀವವಿಲ್ಲ. ಇದರ ಜೊತೆಗೆ ಅಡಿಗರ ‘ಭೂಮಿಗೀತ’ ದ ಕೆಲವು ಸಾಲುಗಳನ್ನಿಟ್ಟು ನೋಡಬಹುದು. ಎರಡು ಕವನಗಳ ಕಾವ್ಯ ವಸ್ತು ಭೂಮಿ ಮತ್ತು ಮನುಷ್ಯನ ಸಂಬಂಧವಾದ್ದರಿಂದಲೇ ಈ ಹೋಲಿಕೆ .

‘ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;
ತಿರು ತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;
ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು.
ಸಸಿ ಕೊರಳನು ಕೊಯ್ದು ತಿಂಡಿಯನು ತಿನಿಸಿದಳು.
ಪ್ರೇಮಧೃತರಾಷ್ಟನಪ್ಪಿಗೆ  ಭಗ್ನ ಬಲಭೀಮ
ಎಲ್ಲು ಕೃಷ್ಣನ ಕಾಪು ಕಾಣಲಿಲ್ಲ.
ಇವಳೆದೆಗೆ ಬೇರಿಳಿದ ಕಾಲು ನನ್ನದು ಬರಿದೆ ನಕ್ಷತ್ರಲೋಕಕ್ಕೂ
ರೈಲುಬಿಟ್ಟೆ’

ಭೂಮಿಯ ಪ್ರೀತಿಯೆ, ಚೆಲುವೆ ನಂಜಾಗುತ್ತದೆ ಇಲ್ಲಿ ‘ಎದೆಶಾಪ’ ‘ಹಿಡಿಶಾಪ’ ಬರಿ ಮಾತುಗಳು. ಆದರೆ ‘ಭೂಮಿಗೀತ’ದ ಸಾಲುಗಳಲ್ಲಿ ಬರುವ ಚಿತ್ರಗಳು ಕವಿಯ ಅನುಭವವನ್ನು ನಮ್ಮದಾಗಿಸುತ್ತವೆ. ನರಸಿಂಹಸ್ವಾಮಿಗಳ ಅನುಭವ ಸರಳ. ಭೂಮಿಯಲ್ಲಿ ಕಂಡ ನಂಜಿನ ಬಗ್ಗೆ ಮೊದಲು ಹೇಳುತ್ತಾರೆ, ಚೆಲುವಿನ ಬಗ್ಗೆ ಆಮೇಲೆ ಹೇಳುತ್ತಾರೆ. ಎರಡೂ ಬೇರೆ ಬೇರೆ ಅನುಭವ, ಎನ್ನಿಸುವ ಹಾಗೆ- ಪಟ್ಟಿ ಹಾಕಿದ ಹಾಗೆ. ಮಾತು ವಿಶಿಷ್ಟವಾದ ಅನುಭವದಿಂದ ಬಂದುದಲ್ಲ. ನರಸಿಂಹಸ್ವಾಮಿ ‘ಒಡಲ ತಂಪು’, ‘ಬಾಳಸೊಂಪು’, ‘ಹಸುರೆಲ್ಲಾ ಹೂವಾದ ಹೊನ್ನ ಗೆಲುವು’ ಎಂದು ನೆಲೆ ನೆಲೆಯ ಚೆಲುವಿನ ಬಗ್ಗೆ ಹೇಳಿದರೆ ಅಡಿಗ:

‘ತೆಂಗು ಗರಿಗಳ ಬೀಸಿ ಕೈಚಾಚಿ ಕರೆದಳು
ಅಡಿಕೆ ಕೊನೆ ಗಿಲುಕಿ ಹಿಡಿದಾಡಿಸಿದಳು’

ಎನ್ನುತ್ತಾರೆ. ‘ಬೀಸಿ ಕೈಚಾಚು’ವಾಗಿನ ದೀರ್ಘ, ‘ಅಡಿಕೆ ಗೊನೆ ಗಿಲುಕಿ’ ಎನ್ನುವಾಗಿನ ಹ್ರಸ್ವ, ‘ಕರೆದಳು’ ‘ಹಿಡಿದಾಡಿಸಿದಳು’ ಎನ್ನುವಲ್ಲಿನ ಮಾತೃ ವಾತ್ಸಲ್ಯದ ಚಿತ್ರ- ಚೆಲುವನ್ನು ಸೃಷ್ಟಿಸುವ ರೀತಿ. ಅಡಿಗರು ಎಲ್ಲವು ಕವನದಲ್ಲಿ ಆಗುವಂತೆ ಮಾಡುವುದರಿಂದ ಕವಿಗೆ ತನ್ನ ಅನುಭವವನ್ನು ಸರಳಗೊಳಿಸುವುದು ಸಾಧ್ಯವಾಗುತ್ತದೆ. ‘ನೆಲತಾಯಿ ಮಲತಾಯಿ’ ಎಂದೂ ಕವಿ ಹೇಳಿದರೂ ಚಿಂತೆಯಿಲ್ಲ. ಒಟ್ಟು ಕವನದ ತಿರ್ಮಾನ ಹೀಗೆ ಎಂದು ಹೇಳಲು ಕವಿ ಇಚ್ಚಿಸಿದರೂ ಕವನ ನಮ್ಮನ್ನೂ ಅದರ ವಿರುದ್ಧವಾದ ಅನುಭವಗಳ ಸೆಳೆತಕ್ಕೂ ಸಿಕ್ಕಿಸಿ ಜೀವನದ ಅನುಭವಗಳ ಸಂಕೀರ್ಣತೆಯನ್ನು ಗಂಭೀರವಾಗಿ ಪರಿಶೀಲಿಸುವಂತೆ ಮಾಡುತ್ತದೆ. ಅನುಭವಗಳನ್ನು ಕೇವಲ ವರ್ಣಿಸುವುದರ ಬದಲು ಸೃಷ್ಟಿಸುವ ಕಾರ್ಯದಲ್ಲಿ ಕವಿ ತೊಡಗಿದರೆ ಅವನ ಯಾವ ತಿರ್ಮಾನವಾಗಲಿ, ನೀತಿಬೋಧೆಯಾಗಲಿ, ಕವನವನ್ನು ಕೆಡಿಸಲಾರದು. ಕವಿಯ ತಿರ್ಮಾನ ಏನೇ ಇರಲಿ ಕವನ ಏನು ಹೇಳುತ್ತದೆ ನೋಡು – ಎಂದು ಆಗ ನಾವು ಹೇಳಬಹುದು. ಹೀಗೆ ಸೃಷ್ಟಿಸುವ ರೀತಿ ನರಸಿಂಹಸ್ವಾಮಿಯವರಿಗೆ ಸಾಧ್ಯ. ಈ ಕವನದಲ್ಲಿಯೇ ಬರುವ ಈ ಸಾಲುಗಳನ್ನು ನೋಡಿ:

‘ಕಪ್ಪು ಸರಿ ನಾ ಕಂಡ ಹೆಣ್ಣು!
ಇವಳ ಮದುವೆ: ಒಂದು ಹಸೆಗೆ
ಬೆರಗಾಗಿ ನಾಚುವುದೆ ತುಂಬ ಚೆನ್ನು!
ದ್ರಾಕ್ಷಿ ಕಪ್ಪಾಗಿತ್ತು ಬಳ್ಳಿಗಳಲಿ
ಸಿಪ್ಪೆ ತೆಳುವು, ಒಳಗೆ ಒಲವು
ಅವು ತುಟಿಗೆ ಈಗಲೇ ಬಂದು ಬಿಡಲಿ
ಮಣ್ಣು ಕೊಡುವುದನೆಲ್ಲ ಕೊಟ್ಟುಬಿಡಲಿ’

ಮಾತಿನಿಂದ ಮಾತಿಗೆ ಕವನದ ಅರ್ಥ ಇಲ್ಲಿ ಬೆಳೆಯುವುದನ್ನು ನೋಡಬಹುದು.‘ಸಿಪ್ಪೆ ತೆಳವು,ಒಳಗೆ ಒಲವು’ ಎನ್ನುವಾಗ ರಸಭರಿತ ದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಮೃದುವಾಗಿ ಅಮುಕಿದ ಅನುಭವವಾಗುತ್ತದೆ. ‘ಅವು ತುಟಿಗೆ ಈಗಲೇ ಬಂದುಬಿಡಲಿ’ ಎನ್ನುವಲ್ಲಿ ‘ಈಗಲೇ’ ಎಂಬ ಮಾತಿನಲ್ಲಿರುವ ಚೆಲುವಿನಾಸ್ವಾದದ ಆತುರ ಮುಂದಿನ ಸಾಲಿನ ‘ಮಣ್ಣು  ಕೊಡುವುದನ್ನೆಲ್ಲಾ ಕೊಟ್ಟು ಬಿಡಲಿ’ ಎನ್ನುವ ನಿರ್ಧಾರದ ಮಾತಿಗೆ ಪುಷ್ಟೀ ಕೊಡುತ್ತದೆ. ‘ಭೂಮಿಗೀತ’ ದ ಕವಿಯ ಆಕಾಶಲೋಕಕ್ಕೆ ರೈಲು ಬಿಡುವ ವ್ಯರ್ಥ ಹೋರಾಟಕ್ಕೆ ಉತ್ತರದಂತಿದೆ ಈ ಸಾಲು. ಅಡಿಗ ‘ನೆಲತಾಯಿ ಮಲತಾಯಿ’ ಎಂದರೆ ನರಸಿಂಹಸ್ವಾಮಿ ‘ಮಣ್ಣು ಕೊಡುವುದನ್ನೆಲ್ಲ ಕೊಟ್ಟು ಬಿಡಲಿ! ಪಡೆದು ಬೆಳೆದು, ಅದನೆ ಹಳಿದು ಮೆರೆವ ಕವಿಯನ್ನು ತಾನ ಕನಿಕರಿಸಲಿ’ ಎನ್ನುತ್ತಾರೆ. ನಾಚುವ ಕಪ್ಪು ಹುಡುಗಿಯ ಚೆಲುವನ್ನು ಕಾಣುವ ಕಣ್ಣು ನರಸಿಂಹಸ್ವಾಮಿಗೆ ವಿಶಿಷ್ಟವಾದುದು. ಪೂರ್ಣ ಸಿದ್ಧಿಯ ವಾಂಛಲ್ಯದ ಅಡಿಗರ ಕಣ್ಣಿಗೆ ಜೀವನವನ್ನು ಸಹ್ಯಮಾಡುವ  ಇಂತಹ ಸೌಂದರ್ಯ ಕಾಣದು. ನರಸಿಂಹಸ್ವಾಮಿ ನಮಗೆ ತುಂಬಾ ಪ್ರೀಯವಾಗುವುದು ಇಂತಹ ಕಡೆಗಳಲ್ಲಿ. ವ್ಯಕ್ತಿ ವಿಶಿಷ್ಟ ಅನುಭವದ ಒತ್ತಾಯ ಆಪ್ತತೆ, ಇರುವಲ್ಲೆಲ್ಲಾ ನರಸಿಂಹಸ್ವಾಮಿ ಕನ್ನಡದ ಒಬ್ಬ ಅತ್ಯುತ್ತಮ ಕವಿಯಾಗಿ ಉಳಿಯುತ್ತಾರೆ. ಈ ಆಪ್ತವಾಕ್ಯದ ಅನನ್ಯತೆ ಈ ಕವಿಯ ವಿಶಿಷ್ಟ ಗುಣ.‘ಮೈಸೂರು ಮಲ್ಲಿಗೆ ’ಯಿಂದ ಹಿಡಿದು ‘ಶಿಲಾಲತೆ’ ಯವರೆಗೂ ಕವಿ ಆಪ್ತ ಸ್ನೇಹಿತನಂತೆ ‘ಅನುಭವದ ಕಿವಿಮಾತ’ ನ್ನು ಆಡುತ್ತಾ ಬಂದಿದ್ದಾರೆ. ‘ಶಿಲಾಲತೆ’ಯಲ್ಲಿ ಈ ಆಪ್ತವಾಕ್ಯದ ರೀತಿ ಬೇರೆ ಬೇರೆ ಸ್ತರದ ಅನುಭವಗಳ ಅಭಿವ್ಯಕ್ತಿಗೆ ಉಪಯೋಗಿಸಲ್ಪಡುತ್ತಿದೆ.

ಇದರ ಜೊತೆಗೆ ಹೇಳಬೇಕಾದ ಮಾತು – ನರಸಿಂಹಸ್ವಾಮಿ ಬದುಕಿನ ರುದ್ರ ಚಿತ್ರವನ್ನು ನೋಡುವುದಿಲ್ಲ; ನೋಡಲು ಇಷ್ಟಪಡುವುದಿಲ್ಲ ಎನ್ನುವುದು. ಇವರ ದೃಷ್ಠಿ ಮುಖ್ಯವಾಗಿ ‘ಆಲ್ ಇಸ್ ರೈಟ್ ವಿಥ್ ದಿ ವಲ್ಡ್ ’ ವೈಜ್ಞಾನಿಕ ಪ್ರಗತಿಯನ್ನು ಸಾಧಿಸುತ್ತಿರುವ ಈ ಜಗತ್ತಿನ ಬಗ್ಗೆ ಕವಿಗೆ ತುಂಬ ನಂಬಿಕೆಯಿದೆ. (ಉದಾ: ‘ಹೊಸಚಂದಿರ’) ಶರತ್- ಶಾರದೆಯಲ್ಲಿ ‘ನಗರದ ಬಾಳು ಏನು ಹಾಳು’ ಎಂಬ ಜಿಗುಪ್ಸೆಯ ಭಾವ ತೆಳ್ಳಗಿದೆ. ಮಾತಿನಲ್ಲಿ ಕಸುವಿಲ್ಲ. ಸಮಕಾಲೀನ ಜೀವನದ ಬಗ್ಗೆ  ಬರೆದ ಯಾವ ಕವನವೂ ಇಲ್ಲಿ ಮಹತ್ವಪೂರ್ಣ ಕೃತಿಗಳಾಗಿಲ್ಲ. (ಉದಾ: ಬೆಳಗಿನ ಮಂಜು, ಲಾಲ್ಬಾಗ್ ಕೆರೆ ಮತ್ತು ಜಯನಗರದ ದೀಪಗಳು) ತಮಗೆ ಸುಖವನ್ನು ಕೊಡುವ ವಿಷಯಗಳ ಬಗ್ಗೆ ಬರೆಯುವಾಗ ಮಾತ್ರ ನರಸಿಂಹಸ್ವಾಮಿಗಳ ಪ್ರತಿಭೆ ಉಜ್ವಲವಾಗಿರುತ್ತದೆ. ಇವರ ಮನಸ್ಸಿನ ಒಲವು ಯಾವ ಕಡೆಗಿದೆ ಎನ್ನುವುದು ನವ್ಯ ಕಾವ್ಯದ ಸ್ವರೂಪದ ಬಗ್ಗೆ ಬರೆದಿರುವ ಲೇಖನದಲ್ಲಿ ಸ್ಪಷ್ಟವಾಗುತ್ತದೆ: ‘ಇಲ್ಲಿ (ಕನ್ನಡದಲ್ಲಿ ಬಂದ ನವ್ಯಕಾವ್ಯದಲ್ಲಿ ) ನಿರಾಶೆಯ ಶಿಲ್ಪ ನಡೆದಿರುವುದಷ್ಟು ಇತರ ಮಾನವ ಸಂಬಂಧಗಳು ಮೂಡಿಲ್ಲ ಎಂದು ಕಾಣುತ್ತದೆ. ಈ ನಿರಾಶೆಯನ್ನೇ ಸಮರ್ಥಿಸುವುದು – ಏಕನಯನ ವಿಮರ್ಶೆ; ಇದರಿಂದ ಪ್ರಯೋಜನವಿಲ್ಲ. each animal is nothing but a parcel of joy ಎಂಬುದು ನಿರಾಶೆಗಿಂತ ಭಯಂಕರವಾದ ಭರವಸೆ, ಸ್ವಂತ ಆಸೆ ನಿರಾಶೆಗಳಿಗಿಂತ ದೊಡ್ಡ ಮಾತು ನವ್ಯಕಾವ್ಯದಲ್ಲಿ ಅದರ ಶಕ್ತಿ, ಸುಂದರ, ವಾಸ್ತವಿಕ ಶೈಲಿಯಲ್ಲಿ ಮೂಡಬೇಕು ’- ಒಪ್ಪತ್ತಕ್ಕ ಮಾತು. ಆದರೆ ಸ್ಫೂಟ್ನಿಕ್ ಯುಗದಲ್ಲಿ ನಾವಿದ್ದೇವೆ ಎಂದೊ ಅಥವಾ ಅಲ್ಲಿ ಸ್ಫೂಟ್ನಿಕ್ ಇದ್ದರೇನು ಇಲ್ಲಿ ವಿನೋಬಾ ಇಲ್ಲವೆ ಎಂದೊ ಪಡುವ ಸಮಾಧಾನ, ಭರವಸೆ ಸಾಲದು.

ಕವಿಯ ಮನಸ್ಸು ಹೆಚ್ಚು ಸೂಕ್ಷ್ಮವೇದಿಯಾದಂತೆಲ್ಲಾ ಈ ರೀತಿಯ ಭರವಸೆಯನ್ನಿಟ್ಟುಕೊಂಡು ಬರೆಯುವುದು ಅಸಾಧ್ಯವಾಗುತ್ತದೆ. ಇಂತಹ ಅಲ್ಪ ಭರವಸೆಗಳಿಗೆ ಮರುಳಾಗದಿರುವುದರಿಂದಲೇ ಅಡಿಗ ನಮ್ಮ ತಲೆಮಾರಿನ ಶ್ರೇಷ್ಠ ಕವಿಗಳಾಗಿದ್ದಾರೆ.

ನಮ್ಮ ಸಾಹಿತ್ಯ ಪ್ರಪಂಚ ಈಗ ಇರುವ ಸ್ಥಿತಿ ನೋಡಿ ಯಾರು ಸಂತೋಷಪಡುವ ಹಾಗಿಲ್ಲ. ನಾವು ಬರೆದದ್ದು ಪಠ್ಯಪುಸ್ತಕವಾಗಬೇಕು, ಜನ ಒಪ್ಪಬೇಕು, ಸರ್ಕಾರ ಅಥವಾ ಸಾಹಿತ್ಯ ಅಕಾಡೆಮಿ ಬಹುಮಾನ ಕೊಡಬೇಕು ಇತ್ಯಾದಿ ಒಳಸಂಚುಗಳು ನಡೆಯುವ ಈ ಕಾಲದಲ್ಲಿ, ಬರಹಗಾರರು – ಅದರಲ್ಲೂ ಸುಲಭವಾಗಿ ಯಾವ ಒಳಗುದಿಗೂ ಒಳಗಾಗದಂತೆ ಮುಗ್ಧತೆಯ, ಅಂತರ್ಮುಖತೆಯ ವ್ಯಾಕ್ಸಿನೇಷನ್ ಮಾಡಿಸಿಕೊಂಡ ಕವಿಗಳು – ಈ ಭರವಸೆ ಮತ್ತು ಜೀವನ ಸಂತೋಷವನ್ನು ಸುಲಭವಾಗಿ ಮಾರಾಟವಾಗುವ ವ್ಯಾಪಾರದ ಸರಕಾರಿ ಉಪಯೋಗಿಸುವ ಸಂಭವವೇ ಹೆಚ್ಚು. ಈ ಭರವಸೆ, ಜೀವನ ಸಂತೋಷ – ಇಹಕ್ಕೂ ಆಗುತ್ತದೆ. ಪರಕ್ಕೂ ಆಗುತ್ತದೆ. ಪ್ರಾಮಾಣಿಕವಾಗಿ ನಾನು ಕಂಡದ್ದೇನು ಎಂದು ಹೇಳಲು ಚಡಪಡಿಸುವುದೇಕೆ? ‘ರಸಾನುಭವ’ ವಾದರೆ ಸಾಲದೆ? ಈ ಪುಣ್ಯ ಭೂಮಿಯಲ್ಲಿ ಹಾಡಲು ಕಡಿಮೆ ಸರಕುಗಳಿವೆಯ? – ಪೂರ್ಣಚಂದ್ರ, ಕೋಗಿಲೆ, ಭಾರತೀಯ ಸಂಸ್ಕೃತಿ, ಅರಬಿಂದೊ- ನೂರಾರು!….. ಸೌಭಾಗ್ಯದರ್ಶನ ಬಹಳ ಸುಲಭ.

ಭರವಸೆ ಬೇಕು ಆದರೆ ನಿರಾಸೆಗಿಂತ ಭಯಂಕರವಾದ ಈ ಭರವಸೆ ಬರುವುದು ಬದುಕಿನ ಆಳವಾದ ಜೀವನದ ರುದ್ರ ಸತ್ಯವನ್ನು ಕಂಡ ಎದೆಗಿರುವ ಭರವಸೆ ಹೆಚ್ಚು ಜೀವೋಪಯೋಗಿ. ಲಾರೆನ್ಸಿನ ಜೀವನಾಸಕ್ತಿ, ಷೇಕ್ಸ್ ಪಿಯರ‍್ನ ಔದಾರ್ಯ ದೊಡ್ಡದು- ಕಾರಣ ಅವರು ಕತ್ತಲೆಯಲ್ಲಿ ತಡಕಾಡಿ ಬೆಳಕು ಕಂಡವರು. ‘we begin to live really life as tragedy ’ಎನ್ನುತ್ತಾನೆ ಏಟ್ಸ್. ಆಸೆ ನಿರಾಸೆಗಳಿಗಿಂತ ಆಳವಾದ vision of evil ಕನ್ನಡದ ಅನೇಕ ಉತ್ಕೃಷ್ಟ ಬರಹಗಾರರಲ್ಲಿ ಇಲ್ಲ. ನಮ್ಮವರಲ್ಲಿ ಪ್ರಸನ್ನತೆ ಮತ್ತು ಜೀವನ ಸಂತೋಷ ಸರ್ವಾನುಭವದ ದರ್ಶನವಲ್ಲ; ಅನೂಚಾನವಾಗಿ ಸಭ್ಯತೆಯ ದೃಷ್ಟಿಯಿಂದ ನಾವು ಆಡುವ ಮಾತಿನ ಗತ್ತು ಒಬ್ಬರನ್ನು ಕಂಡಾಗ ಇನ್ನೊಬ್ಬರು ಆಡುವ ಪದ್ಧತಿಯ ಭೋಳೆಮಾತುಗಳು ಸಭ್ಯತೆ, ಸಾಮಾಜಿಕತೆಯನ್ನು ಮರೆತು ಅಂತಃಕರಣದ ಭಯ ಹುಟ್ಟಿಸುವ ಸತ್ಯವನ್ನು ಹೇಳುವ ಧೈರ್ಯ ಅದಕ್ಕೆ ಬೇಕಾದ ಸೂಕ್ಷ್ಮ ದೃಷ್ಠಿ ಇರುವ ಲೇಖಕರು ಕನ್ನಡದಲ್ಲಿ ಕಡಿಮೆ.

‘ಶಿಲಾಲತೆ’ ಯಲ್ಲಿ ಮತ್ತು ಇಡೀ ಕನ್ನಡ ಕಾವ್ಯದಲ್ಲಿ ಅತ್ಯಂತ ಗಮನಾರ್ಹವಾದ ಕವನ ಗಡಿಯಾರದಂಗಡಿಯ ಮುಂದೆ ‘ಎಷ್ಟೊಂದು ಗಡಿಯಾರ ಅಂಗಡಿಯಲಿ’ ಎನ್ನುವ ಭ್ರಮೆಯಿಂದ ‘ಗಡಿಯಾರ ನಡೆದಷ್ಟು ಗಂಟೆ ’ ಎನ್ನುವ ತೀರ್ಮಾನದವರೆಗೆ ಬೆಳೆಯುವ ಈ ಕವನದ ವಸ್ತು ಚಕ್ರನೇಮಿ ವೃತ್ತಿಯ ಮಾನವನ ಏರಿಳಿತದ ಜೀವಿತದ ದೃಷ್ಟಿಯಿಂದ ಮತ್ತು ಅನಂತತೆಯ ದೃಷ್ಟಿಯಿಂದ  ಕಾಲದ ಸ್ವರೂಪ. ಕಣ್ಣಪಟ್ಟಿಯ ನೋಟದಿಂದ ಭ್ರಮೆ ಮಾತ್ರ ಸಾಧ್ಯ. ಅದರ ಬದಲು ಇನ್ನೊಂದು ದೃಷ್ಠಿಯಿಂದ ಕಾಲವನ್ನು ನೋಡಲಾಗಿದೆ. ಇಡೀ ಬದುಕನ್ನು ಘಳಿಗೆ ಘಳಿಗೆಯ ಅಸಹ್ಯ ವೇದನೆಯನ್ನು ಕಳೆದಾಗ ಕಾಣುವ ಕಾಲ- ‘ಬಿಡುಗಣ್ಣ ನಿಮಿಷಗಳ ಹುಲಿಯಂಕಿ ತೋಟದಲಿ ಕತ್ತು ಹಿಸುಕಿದ ಬಳ್ಳಿ ಕಳೆದ ಬೆಳಗು.’ ಆದರ್ಶಗಳೆಲ್ಲಾ ಭಗ್ನವಾಗಿವೆ. ‘ಬಿರುಗಾಳಿ ಮೂರನೆಯ ದಾರಿ ಮನೆಯ ಬೀಳಿಸಿದೆ. ಈ ವರ್ತಮಾನ, ಭೂತ, ಭವಿಷ್ಯತ್ತಿನ ಪಾಡಿನಲ್ಲಿ – ‘ಅಲ್ಲೊಂದು ಅಳುವ ಮಗು ಒಂದೇ ಸಮನೆ.’ ಮನುಷ್ಯನ ಅನಂತ ಅನಾಥ ಭಾವ ಇದು.‘ನನಗಿತ್ತು ಮೊದಲಿಗಿವನೆಲ್ಲಾ ಬದಲಿಸುವಾಸೆ’ ಆದರೆ ಧದೀಚಿಯಂತೆ ಮೂಳೆ ಬಿಲ್ಲನು ಹಿಡಿದು ಮುಂದೆ ನಡೆದ ಕ್ರಾಂತಿಕಾರ ಕಾಣುವುದು, ಅವನಿಗಿಂತ ಮೊದಲೆ ಬದಲಾದ ಬಂಡೆಯನ್ನು. ಹೀಗೆಯೇ ಇವನು ಹುಟ್ಟುವ ಮೊದಲೆ ನಿರ್ನಾಮವಾಗಿರುವ ನೀಲ ನಗರಾವಳಿ ಗಳಷ್ಟೋ! ದೃಷ್ಟಿ ಅಂತರ್ಮುಖವಾಗುತ್ತದೆ. ನಕ್ಷತ್ರದ ನೀಲಿಯಾಗಿ, ಕಂಪಿನ ಲಾಲಿಯಾಗಿ, ಲೋಕವೇ ತಾನಾಗಿ, ತನ್ನ ವಧುವನ್ನು ಬಳಿಗೆ ಕರೆಯುತ್ತಾನೆ ಅದು ಬಣ್ಣಗಳ ಬಿಳಿ ಪಂಚೇಂದ್ರಯದ ಕಾಯದ ಬಣ್ಣದ ಹಸೆಗೆ ಬರುವಳು ಇವಳು. ಮುಂದೆ ಬರುವ ಋತುವರ್ಣನೆ  ಮತ್ತು ಸಂಗತವಾಗಿ ಬರುವ ಮಾನವ ಜೀವನದ ವಿವಿಧ ಆವಸ್ಥೆಗಳ ವರ್ಣಣೆ ಚಿರಸ್ಮರಣೆಯಲ್ಲಿ ಉಳಿಯುವ ಭಾಗ; (ಸಖೀಗೀತದಲ್ಲಿ ಋತುವರ್ಣಿತವಾಗಿರುವ ಭಾಗವನ್ನು ಇಲ್ಲಿ ನೆನೆಯಬಹುದು)’

‘ಮಳೆ ನಿಂತು ಚಳಿ ಬಂತು. ಗಲ್ಲ ಬೆಳ್ಳಗೆ ಹುಡುಗಿ
ಬಿಳಿಹೂ ಮುಟ್ಟಿಸಿದೆ ನನ್ನ ತುಟಿಗೆ.
ಸಂಜೆಗೊಬ್ಬಳು ಮುದುಕಿ ಕೊನೆಯಕೆಂಡವ ಕೆದಕಿ
ಎತ್ತಿ ಮುಡಿದಳು ಗಂಡು ಜಡೆಗೆ  ’

‘ಬೆಳ್ಳಗೆ’ ಎನ್ನುವ ಶಬ್ದದಲ್ಲಿ ನಾವು ಸ್ವಲ್ಪ ಅನಿವಾರ್ಯವಾಗಿ ತಂಗಿ, ಬಣ್ಣ ಸೂಚಿಸುವ ಕನ್ಯಾವಸ್ಥೆಯ ಪರಿಶುದ್ಧತೆ ಶುಭ್ರತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಮುಂದೆ ಓದುತ್ತೇವೆ. ‘ಗಲ್ಲ ಬೆಳ್ಳಗೆ ಹುಡುಗಿ’ ಇದು ನಿಜವಾಗಿ ಪ್ರತಿಭೆಯ ಮಿಂಚು ಯಾವ ಶಬ್ದವನ್ನು ಮಿಡಿದರೆ ಏನು ಧ್ವನಿ ಬರುತ್ತದೆ ಎಂದು ನರಸಿಂಹಸ್ವಾಮಿಗಳಿಗೆ ಗೊತ್ತು. ಕನ್ನಡವನ್ನು ಹೀಗೆ ಉಪಯೋಗಿಸಬಲ್ಲ ಕವಿಗಳು ಎಷ್ಟಿದ್ದಾರೆ ನಮ್ಮಲ್ಲಿ ?

ಮತ್ತೆ ಈ  ಸಾಲುಗಳನ್ನು ನೋಡಿ

‘ಹೊತ್ತ ಮುಟೆಗಳೇನು ! ಹಿಡಿದ ಗಿಂಡಿಗಳೇನು?
ಹೆಜ್ಜೆ ಸಾಲಿನ ಪಯಣ ನಾರಾಯಣ ’

ಇಲ್ಲಿ ‘ನಾರಾಯಣ’ ಎನ್ನುವುದು ಧ್ವನಿಪೂರ್ಣವಾದ ಶಬ್ದ. ಇದು ಇಲ್ಲಿ ವರ್ಣಿತವಾಗಿರುವ, ಕರ್ಮದ ಗಂಟನ್ನು ಹೊತ್ತು ತೀರ್ಥದ ಗಿಂಡಿಯನ್ನು ಹಿಡಿದ ಯಾತ್ರಿಕರು ಹೇಳುತ್ತಿರುವ ಮಾತು; ಅಲ್ಲದೆ ಇದನ್ನು ಸಾಕ್ಷಿಯಾಗಿ ನೋಡುತ್ತ, ಈ ಬದುಕಿ ಅನಂತಯಾತ್ರೆಯನ್ನು ಸಮರ್ಪಣ ಭಾವದಲ್ಲಿ ನೋಡುವ ಕವಿಯ ಪ್ರತಿಕ್ರಿಯೆ.ಆರ್ಯ ಸಂಸ್ಕೃತಿಯ ಸಾರವೆಲ್ಲ ಇದೆ ‘ನಾರಾಯಣ’ ಎನ್ನುವ ಮಾತಿನಲ್ಲಿ. ಯಾತ್ರೆಯಲ್ಲಿ ಜೀವನದ ಕೊನೆಯ ಯಾತ್ರೆಯಲ್ಲಿ, ಸಂತೋಷದಲ್ಲಿ-ದುಃಖದಲ್ಲಿ, ಎನ್ನುವ ಈ ಮಾತಿನ ಹಿಂದೆ ಅರ್ಥ ಮಾತ್ರವಲ್ಲ, ಅರ್ಥಕೋಶವೆ ಇದೆ. ಹೆಜ್ಜೆ ಸಾಲಿನ ಪಯಣ ‘ನಾರಾಯಣ’-ಕಾಲದ ಗತಿ ಅನಂತ; ಆದರೆ ಈ ಅನಂತತೆ ಒಂದೊಂದು ಜೀವನದ ಅನುಭವದಲ್ಲೂ ನಿರಂತರವಾಗಿ ಮರಳುವುದರಿಂದ ಬರುವ ಪ್ರಜ್ಞೆಯೇ ಕಾಲ. ಕಾಲ ಇಲ್ಲ, ಕಾಲ ಎಲ್ಲ-ಎರಡೂ ಮಾತು ನಿಜ. ‘ಸೆಕೆಂಡಿನ ರೆಕ್ಕೆಪುಕ್ಕ ಬರಿ ಸೊನ್ನೆಗೆ’ ವಸಂತ, ಮುಂಗಾರು, ಮಾಗಿ, ಪ್ರೇಮ, ಯೌವನ, ಮುಪ್ಪು-ಹೀಗೆಲ್ಲ ಮರುಕಳಿಸುವ ಬಾಳಿನ ಬಯಕೆ-ಸ್ಮರಣೆಯಲ್ಲಿ ಈ ಪ್ರಜ್ಞೆ ಮೂಡಿ ಕವಿಯ ಬಾಯಾದ ‘ನಾರಾಯಣ’ ಎನ್ನಿಸಿದೆ. (‘….all time is eternally ’ T.S.Eliot)

ಹೀಗೆ – ಕೌಮಾರ್ಯ, ಆಸೆಯ ಬೆಂಕಿಯಳಿಯದೆ ಉಳಿದ ಮುಪ್ಪು, ಜೀವನದ ಅನಂತಯಾತ್ರೆ- ಇವುಗಳನ್ನು ಧ್ಯಾನಿಸುತ್ತಿರುವ ಕವಿ ಥಟ್ಟನೆ ಎಚ್ಚರವಾಗಿ ಪ್ರಶ್ನೆ ಕೇಳಿದ ‘ಗಂಟೆ ಎಷ್ಟೆಂದೀಗ ಯಾರ ಕೇಳಿದೆ ನೀನು? ಗಡಿಯಾರದಂಕಿ ಯಾರಿಗೆ ಪಾವನ!’ ಎನ್ನುತ್ತಾನೆ. ಹೀಗೆ ಫಕ್ಕನೆ ಮೈತಿಳಿದು ಮಾತನಾಡುವ ಅನುಭವ ನಮಗೂ ಆಗುತ್ತದೆ. ಕೆಳಗಿಳಿದು ಆಡಿದ ಮಾತಿನಲ್ಲಿ ಏರಿದ ಎತ್ತರದ ಅನುಭವ ‘ಗುಂಗು’ ಇದೆ. ‘ಗಂಟೆ ಎಷ್ಟೆಂದೀಗ ಯಾರ ಕೇಳಿದೆ ನೀನು?’ ‘ಆಗ’ ಕೇಳಿದ್ದನ್ನಲ್ಲವೆ? ಇವನನ್ನೆ ಕೇಳಿದ್ದಲ್ಲವೆ? ಆದರೆ ‘ಆಗ’ ಎಷ್ಟೊಂದು ಗಡಿಯಾರ ಅಂಗಡಿಯಲ್ಲಿ ಎಂದು ಭ್ರಮಿಸಿದವನು, ಈಗ ಕಾಲದ ನಿಜ ಕಾಣ್ಕೆ ಪಡೆದು ‘ಹೊಸಬ’ ನಾಗಿದ್ದಾನೆ. ನಾವೂ ಹೊಸಬರಾಗಿದ್ದೆವೆ. ‘ಗಡಿಯಾರದಂಕಿ ಯಾರಿಗೆ ಪಾವನ!’ ಮೈತಿಳಿದು ಆಡಿದ ಮಾತಿನಲ್ಲಿರುವ ‘ಗುಂಗು’ ಕವನದಿಂದ ನಾವು ಪಡೆದ ಕಾಲದ ನಿಜಸ್ವರೂಪದ ಚಿಂತನೆಯಲ್ಲಿ ಮತ್ತೆ ನಮ್ಮನ್ನು ತೊಡಗಿಸುತ್ತದ. ಕಾವ್ಯದಲ್ಲಿ ಧ್ವನಿಶಕ್ತಿಯೆಂದರೆ ಇದು.

ಮುಂದೆ ಕಾಲ ಬೆಳದಿಂಗಳಿಗೆ ಹೊರಳುತ್ತದೆ. ಹಾಗೆಯೇ ಕವನದ ಛಂದಸ್ಸೂ ಹೊರಳುತ್ತದೆ.‘ಚಿತಾಗ್ನಿಯಿಂದ ಚಂದ್ರಿಕೆಗೆ ನೆಲದ ಕಣ್ಣು ಹೊರಳಿದೆ’ ಈ ಭಾಗದಲ್ಲಿ ಕಾವ್ಯ ಸಪ್ಪೆಯಾಗಿದೆ ಎನ್ನಿಸುತ್ತದೆ.‘ಗೋರಿ ದೀಪದ ಕೆಳಗೆ ಹಲ್ಲಿ ಐದರ ಹರಕೆ’-ಗೋರಿಯ ಮೇಲೆ ‘೫’ ಬರೆದ ಹಾಗೆ ಕೂತ ಹಲ್ಲಿ ಅಥವಾ ಐದು ಸಾವಿರ ನುಡಿಯುವ ಹಲ್ಲಿಯ ಶುಭ ಚಿತ್ರವನ್ನು ಸೂಚಿಸಲು ಬಂದಿದೆ. ಇಂತಹ ಸಾಲುಗಳಲ್ಲಿ ಉದ್ದೇಶ ಪೂರ್ವಕತೆ ಹೆಚ್ಚಾಗಿ ಕೃತಕತೆ ಕಾಣುವುದಿಲ್ಲವೆ? ‘ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ’ ಎನ್ನುವುದೂ ಈ ಜಾತಿಗೆ ಸೇರಿದ ಸಾಲು. ಅಸುಂದರವಾದದ್ದರ ಜೊತೆಗೆ ಸುಂದರವಾದದ್ದನ್ನು ಲಗತ್ತು ಮಾಡಿ ಭರವಸೆಯನ್ನು ಕಾಣಿಸುವ ವಿಧಾನ ಕನ್ನಡ ಕಾವ್ಯದ ಕ್ಲೀಷೆಯಾಗಿದೆ.ಶಬ್ದ ಚಿತ್ರದಿಂದ ಅರ್ಥ ಮೂಡಿ ಬರುವುದರ ಬದಲು ಒಂದು ಅರ್ಥಕ್ಕಾಗಿ ಮಾಡಿರುವ ಶಬ್ದ ಚಿತ್ರ ಹೆಚ್ಚು ಕಾಲ ಹಿಡಿದು ನಿಲ್ಲಿಸಲಾರದು. ಫೋಟೋ ಪಾಸಿಟಿವ್ ನೆಗೆಟಿವ್ನಂತೆ ಹೀಗೆ ಬರುವ ಆಸೆ ನಿರಾಸೆಯೇ ಹೆಚ್ಚಾಗುವ ಸಂಭವವಿದೆ. ಕನ್ನಡ ನವ್ಯ ಕಾವ್ಯದಲ್ಲಿ ಉದ್ದೇಶಪೂರ್ವಕತೆಸ್ವಲ್ಪ ಇದ್ದರೂ ಅತ್ಯಂತ ಪರಿಣಾಮಕಾರಿಯಾದ ಮಾತು ‘ನೀರಮೇಲೂ ನೆಲದಮೇಲೂ ಬೆರಳೈದರ ನೆರಳಿದೆ’ ಎನ್ನುವುದು. ಸಾಲಿನ ವಿಳಂಬ ನಡಿಗೆಯಲ್ಲಿ ಅಭಯ ಹಸ್ತದ ಚಿತ್ರ ಮೂಡಿ ಮನಸ್ಸನ್ನು ತುಂಬಿ ನಿಲ್ಲುತ್ತದೆ. (ಇಲ್ಲಿ ಬರೆದಿರುವುದು ಕವನದ ಅರ್ಥವನ್ನು ತಿಳಿಯಲು ಸಾಲದೆನ್ನಿಸಿದರೆ ಶ್ರೀ ವಿ. ಸೀ ಈ ಕವನದ ಬಗ್ಗೆ ಬರೆದ ಹೆಚ್ಚು ಉಪಯುಕ್ತವಾದ ವಿವರಣೆಯನ್ನು ನೋಡಬಹುದು.)

‘ಉಪವನ’ದಲ್ಲಿ ನರಸಿಂಹಸ್ವಾಮಿಗಳು ಬರೆದ ಗದ್ಯಲೇಖನಗಳಿವೆ. ಶ್ರೀ ಕುವೆಂಪುರವರ ಕಾವ್ಯದ ಬಗ್ಗೆ ಬರೆಯುತ್ತ ‘ಇಲ್ಲಿ ಬರುವ ಕಷ್ಟ ಕವಿತೆಯದಲ್ಲ, ಭಾಷೆಯದು’ ಎನ್ನುತ್ತಾರೆ. ಈ ವಿಮರ್ಶೆ ಚಾರಿತ್ರಿಕ ಮಹತ್ವವುಳ್ಳದ್ದಾಗಿದೆ. ಶ್ರೀ ವಿನಾಯಕ, ನರಸಿಂಹಸ್ವಾಮಿ ಮತ್ತು ಈಚೆಗೆ ಶ್ರೀ ಕುರ್ತುಕೋಟಿಯವರು ವಿಮರ್ಶೆ ಕುವೆಂಪುರವರ ಕಾವ್ಯದ ನಿಜವಾದ ಬೆಲೆಯನ್ನರಿಯಲು ಸಹಾಯವಾಗುವುವು. ಯಾವ ಕವಿಯನ್ನೇ ಆಗಲಿ ಪರಮ ಪೂಜ್ಯರು ಎನ್ನುವ ಭಾವನೆಯಿಂದ ನೋಡುವುದರ ಬದಲು ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ನೋಡುವುದು ಒಳ್ಳೇಯದು. ಆದರೆ ಕುವೆಂಪುರವರ ಶೈಲಿಯನ್ನು ಈ ದೃಷ್ಟಿಯಿಂದ ನೋಡಿದ ನರಸಿಂಹಸ್ವಾಮಿ ಶ್ರೀ ಡಿ.ವಿ.ಜಿ ಯವರ ಅಂತಃಪುರಗೀತೆಯನ್ನು ಹೇಗೆ ಹೊಗಳಿದರೊ ತಿಳಿಯುವುದಿಲ್ಲ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಈ ಸಂಕಲನದ ಅತ್ಯುತ್ತಮ  ಲೇಖನ ಮಾಸ್ತಿಯವರ ಬಗ್ಗೆ ಬರೆದದ್ದು. ಅಡಿಗ, ಬೇಂದ್ರೆಯ ಹಾದಿ  ತುಳಿದ ಕವಿಯಾದರೆ, ನರಸಿಂಹಸ್ವಾಮಿ, ಬಿ.ಎಂ.ಶ್ರಿ ಮತ್ತು ಮಾಸ್ತಿಯ ಸಂಪ್ರದಾಯಕ್ಕೆ ಸೇರಿದ ಕವಿ. ಇವರ ‘ತುಂಗ ಭದ್ರೆ’ ಕವನ ಮಾಸ್ತಿಯವರ ಮಾರ್ಗದಲ್ಲಿ ಬಂದ ಅತ್ಯುತ್ತಮ ಕವನ ಜೀವನವನ್ನು ನೋಡುವ ದೃಷ್ಟಿ ಆಡುಮಾತನ್ನು ಬಳಸುವ ವಿಧಾನ ಎಲ್ಲದರಲ್ಲೂ ನರಸಿಂಹಸ್ವಾಮಿ ಮಾಸ್ತಿಯವರಿಂದ ಪ್ರಭಾವಿತರಾಗಿದ್ದಾರೆ. ‘ವಿ.ಸೀ’ ಯ ಬಗ್ಗೆ ಬರೆದ ಲೇಖನವೂ ಚೆನ್ನಾಗಿದೆ. ಶ್ರಿ .ವಿ.ಸೀ ಯವರ ಕಾಗದಗಳಿಂದ ಉದ್ಧರಿಸಿರುವ ಕೆಲವು ವಾಕ್ಯಗಳು ವಿ.ಸೀ ಯವರ ರಸಜ್ಞತೆ ಎಷ್ಟು ಆಳವಾದದ್ದು ಎನ್ನುವುದನ್ನು ಸೂಚಿಸುತ್ತದೆ. ಇಷ್ಟು ಮೇಲ್ತರಗತಿಯ ರಸಜ್ಞತೆಯನ್ನು ಇಂತಹ ಹಿರಿಯರು ನಿರ್ದಾಕ್ಷಿಣ್ಯವಾಗಿ ಹೆಚ್ಚು ಕೃತಿ ವಿಮರ್ಶೇ ಮಾಡಿ ದಾರಿತೋರಿಸಬೇಕು. ‘ವಿಮರ್ಶೆಯಲ್ಲಿ ಅಹಿಂಸವಾದಿ’ ಗಳಾದ ಇವರು ಈ ಕೆಲಸ ಮಾಡುವರೆ? – ಮಾಡಲಿ ಎಂಬುದು ನಮ್ಮ ಬಯಕೆ.

ಕೊನೆಗೊಂದು ಮಾತು ಅಪ್ರಕೃತವಾಗಲಾರದು. ಸದ್ಯದ ಕನ್ನಡ ಕಾವ್ಯಕ್ಕೆ ಮಾರ್ಗದರ್ಶಕರಾಗಬಲ್ಲ ಕವಿಗಳು ಅಡಿಗ ಮತ್ತು ನರಸಿಂಹಸ್ವಾಮಿ. ಇಬ್ಬರ ಮಾತಿನ ದಾಟಿ ಬೇರೆ, ಜೀವನದ ದೃಷ್ಟಿಬೇರೆ. ಇದು ತುಂಬಾ ಸಂತೋಷದ ವಿಷಯ. ಈಗ ಕಾವ್ಯ ರಚಿಸುತ್ತಿರು ತರುಣರಿಗೆ ಇಬ್ಬರಿಂದಲೂ ಕಲಿಯಬೇಕಾದ್ದು ಬಹಳವಿದೆ.

*

ಹಿಂದೆ ಕೆ.ಎಸ್ ನರಸಿಂಹಸ್ವಾಮಿಯವರ ಶಿಲಾಲತೆ ಪ್ರಕಟವಾದಾಗ (೧೯೬೨) ಬರೆದಿಟ್ಟು ಪ್ರಕಟಿಸದೇ ಹೋದ ಲೇಖನ.. (ನೋಡಿ ಸಂಕಲನದ ಮೊದಲ ಮಾತು)