ಶ್ರೀ ಕೆ.ಪಿ ಸುರೇಶರ ‘ದಡಬಿಟ್ಟ ದೋಣಿ’ – ಕವಿಯೊಬ್ಬನ ಭವಿಷ್ಯದಲ್ಲಿ ಭರವಸೆಯನ್ನು ಹುಟ್ಟಿಸುವ, ಸಧ್ಯದ ಅದರ ಸಾಧನೆಯಲ್ಲೂ ಸಂತೊಷವನ್ನು ಕೊಡುವ ಮೊದ ಸಂಕಲನ. ಈಚೆಗೆ ಅಪರೂಪವಾಗಿರುವ, ಹಿಂದಿನ ಕವಿಗಳಲ್ಲಿ ಕಾಣಲು ಸಿಗುತ್ತಿದ್ದ ವಿಷಯಗಳ ವಿಸ್ತಾರ, ಅನುಭವದ ತೂಕ, ಕಾವ್ಯ ಕಸುಬಿನ ತಾಜಾತನದ ಹುಡುಕಾಟ ಈ ಮೊದಲ ಸಂಕಲನದಲ್ಲೇ ಇವೆ. ನನಗೆ, ಮತ್ತೆ ಓದಬೇಕೆನ್ನಿಸುವಷ್ಟು ಇಷ್ಟವಾದ ಕವನಗಳನ್ನು ಮೊದಲಾಗಿ ಗುರುತಿಸುತ್ತೇನೆ.

ಹೀಗೆ ಗುರುತಿಸುವುದನ್ನು ಸ್ಪಷ್ಟಪಡಿಸಿಕೊಳ್ಳಲೆಂದು ಊನವಾದ ಆಕೃತಿಯ ‘ಈ ಮುದುಕಿ’ ಕವನವನ್ನು ಮೊದಲು ಆಯುತ್ತೇನೆ. ಗೊರಬೆ ಹೊತ್ತಳವನ್ನು ‘ಕಡಲಡಿಯ ಜಗಹೊತ್ತ ಕೂರ್ಮಾವತಾರಿ’ಯಂತೆ ಕಾಣುವ ಈ ಪದ್ಯ, ‘ಭೂಮಿಯೂ ಅವಕಾಶದಾಕಾಶ’ ಎಂಬ ನಿಲುವಿಗೆ ಬರಬಲ್ಲಷ್ಟು ವಾಚ್ಯವಾಗಿ ಸಲ್ಲುತ್ತಲೇ ಮೊನಚು ವಿವರಗಳಲ್ಲಿ ಧ್ವನಿಸುತ್ತಿದೆಯೇ, ಅಂತಹ ಧ್ವನಿ ತರುವ ಅರ್ಥಪಲ್ಲಟವನ್ನು ಸಹಜ ಎಂಬಂತೆ ಹೊರಬಲ್ಲ ಶಕ್ತಿ ಕವನದ ವಿವರಗಳಿಗಿದೆಯೇ ಎಂಬ ಅನುಮಾನವನ್ನು ಹುಟ್ಟಿಸುವಂತಿದೆ. ‘ಇವಳ ನಡಿಗೆ ಎಡವಿದರೆ/ ತಲ್ಲಣಿಸೀತು ಜಗ’ ಎನ್ನುವ ಮಾತು ನಾವು ಒಪ್ಪಿದರೆ ಹೌದು, ಒಪ್ಪದಿದ್ದರೆ ಅಲ್ಲ, ಹಿಂದಿನ ಕಾವ್ಯ ಉತ್ಪ್ರೇಕ್ಷಾಲಂಕಾರವನ್ನು ಕಾವ್ಯ ರಚನೆಯ ಸಹಜ ಅಂಗವೆನ್ನುವಂತೆ ಪಡೆದಿರುತ್ತಿತ್ತು. ಆಧುನಿಕ ಸಂರಚನೆಯಲ್ಲಿ ಅದು ಶಿಫಾರಸಿನಂತೆ ಕಂಡು ಬಿಡುತ್ತದೆ.

ಕವಿತೆಯ ಅನುಭವದ ಬಗ್ಗೆ ಮಾತಾಡುವಾಗ ಏಳುವ ಬಹುಮುಖ್ಯ ಪ್ರಶ್ನೆಯೆಂದರೆ, ಒಂದು ಕವನ, ಶಬ್ದದ ಆಕೃತಿಯೋ ಅಥವಾ ಕವಿಯ ಮಾತಿನ ಆಗ್ರಹದಿಂದ ಹುಟ್ಟಿದ್ದೋ ಎನ್ನುವುದು. ಆಕೃತಿ ನಮ್ಮ ಏಕಾಂತದ ಒಪ್ಪಿಗೆಯನ್ನು ಪಡೆಯುವಂತಿರುತ್ತದೆ; ಆದರೆ ಆಗ್ರಹ ನಮ್ಮನ್ನು ಮಾತಿನಿಂದ ಆಕ್ರಮಿಸುವ ‘ಉಪಾಯ’ ವಾಗಿರುತ್ತದೆ. ಸಮುದಾಯದ ಆಚರಣೆಯಾಗಿ ಸದ್ಯೋಜಾತವೆನ್ನುವಂತೆ ಹುಟ್ಟಿಕೊಳ್ಳುವ ಕಾವ್ಯದಲ್ಲಿ ಆಗ್ರಹವಿದೆ. ಆದರೆ ಅದು ಹಾಡುವವನದು ಮಾತ್ರವಲ್ಲ, ಪರವಶವಾಗಲು ಬಯಸಿ ಬಂದ ಆಚರಣೆಯಲ್ಲಿ ಪಾಲುದಾರನೂ ಆದ ಕೇಳುಗನದೂ ಹೌದು. ಆಧುನಿಕರಾದ ನಾವು ಈ ಪರವಶತೆಯನ್ನು ಕಳೆದುಕೊಂಡು ಕೆಲವು ‘ಅತಿ’ಗಳಲ್ಲಿ ಮಾತ್ರ ಕಾಣಬಲ್ಲ ಸತ್ಯಗಳನ್ನು ಕಾಣಲಾರದವರಾಗಿದ್ದೇವೆ ಎಂಬ ದುಗುಡವೂ ನನ್ನ ಮಾತಿನ ಹಿಂದಿದೆ. ನಮ್ಮ ನಡುವೆ ಈಗಲೂ ಕಂಬಾರರಿಗೆ ಮಾತ್ರ ಸಾಧ್ಯವಾದ ‘ಆವೇಶ’ ಇದು.

‘ಆ ಮುದುಕಿ’ ಎನ್ನುವ ಇನ್ನೊಂದು ಪದ್ಯದಲ್ಲಿ ನಾವು ಎದುರಾಗುವುದು ಗೊರಬೆ ಹೊತ್ತವಳಂತೆಯೇ ತರಕಾರಿ ಮಾರಲು ಕೂತಿರುವ ಇನ್ನೊಬ್ಬ ಹೆಂಗಸನ್ನು. ಇವಳು ತಾಳ್ಮೆಯಲ್ಲಿ ಕೂತು :

ಎಚ್ಚರದಲಿ, ಕಾತರದಲಿ
ಗಮನಿಸುವಳು ಮಂದಿಯ
ರೆಕ್ಕೆಯುಬ್ಬಿಸಿದ ತಾಯಿಕೋಳಿ
ಒಂದೊಂದು ಪಲ್ಲೆಗಡಣವೂ ಮಾಯವಾದಂತೆ
ಸಂದ ನೋಟುಗಳನು ಬೆಚ್ಚಗಿಡುವಳು
ಸಂದಕಾಲಕ್ಕೆ ಸುಖನೀಡಿ ಉಣಿಸಿ ಬೆಚ್ಚಗಿರಿಸಿ
ಸಂತೃಪ್ತ ಬೆಳೆದು ಜೋತ,
ಸಮೃದ್ಧ ಮೊಲೆಗಳೆಡೆ
ಇವಳು ವ್ಯವಹಾರ ನಿಪುಣೆ ಕೂಡ;
ಈ ಉಳಿದ ತರಕಾರಿ
ಸುಳಿವ ಜನ, ಇಳಿವ ಮಳೆ
ಈ ಎಲ್ಲ, ಎಲ್ಲವೂ
ಮರುಹುಟ್ಟು ಪಡೆಯುವುದು ನಾಳೆ ನಾಳೆ

ವ್ಯವಹಾರ ನಿಪುಣೆಯಾಗಿದ್ದೇ, ಅದರಿಂದಾಗಿ ಕಮ್ಮಿಯಾಗದೆ, ಈ ಹೆಂಗಸು ಪೊರೆಯುವ ತಾಯಿಯೂ, ಪ್ರಾಣಶಕ್ತಿಯೂ ಆಗುತ್ತಾಳೆ. ಕವಿ ಹಾಗೆ ಕಾಣುವಂತೆ ನಮ್ಮನ್ನು ಆಗ್ರಹಿಸಲು ಮಾತಿನಲ್ಲಿ ಹೊಂಚುವುದಿಲ್ಲ.

ಸಾಮಾನ್ಯದಲ್ಲಿ ವಿಶೇಷವನ್ನು ಕಾಣುವ ಈ ಬಗೆಗಿಂತ ಸಾವು-೨ ಪದ್ಯದಲ್ಲಿ ಕಾಣುವ ಕ್ರಿಯೆಯೇ ವಿಲಕ್ಷಣವಾಗಿದೆ. ಅಂಗಾತ ಬಿದ್ದಿರುವ ಹೆಣ ಎಷ್ಟು ವಿಕಾರವಾಗಿದೆ ಎಂದರೆ ಸಾವಿನಂತಹ ಸಾವು

ಇವನ ಒಳಹೊಕ್ಕು
ಹೊರಡಲಿಂಬಿಲ್ಲದಂತೆ
ಒಳಗೆ ಹೂತಿದೆ

ಊರಿನ ಜನ, ಕಾಗೆ, ನಾಯಿಗಳು ಸಾವನ್ನು ಇವನಿಂದ ಬಿಡುಗಡೆ ಮಾಡಬೇಕು. ಈ ಬಗೆಯ ಭವನೆಯನ್ನು ಒತ್ತಾಯಪಡಿಸದೆ ನಮ್ಮಲ್ಲಿ ಹುಟ್ಟಿಸಬಲ್ಲವನಾದಾಗ ಕವಿ ತಾನು ಆಡಿದ್ದು ಆಗುವಂತೆ ಮಾಡಬಲ್ಲ; ಈ ಪದ್ಯದಲ್ಲಿ ಭೀಕರವಾದ ಸಾವು.

ಇದೇ ದೇಹದಲಿ ಬಂದಿಯಾದರೆ
ಇನ್ನುಳಿದವರ ಸೇರುವುದೆಂತು?

ಅಡಿ ಮರೆಯುವ ನಿತ್ಯದ ಮಾತಲ್ಲದ, ವಿಶೇಷವಾಗಿ ಕಂಡಾಗ ಮಾತ್ರ ಹೊಳೆಯುವ ಇಂಥ ಮಾತನ್ನು ಕವಿ ಆಡಿದಾಗ ನಮ್ಮ ಅರಿವು ಚುರುಕಾಗುತ್ತದೆ.

ಸಾವಿನ ಬಗ್ಗೆ ಇರುವ ಇನ್ನೊಂದು ಪದ್ಯವೂ ಕಾಣುವ ವಿಶೇಷವಾದ ಬಗೆಯಿಂದಾಗಿ ನಮ್ಮ ಅರಿವನ್ನು ಬೆಚ್ಚಿಸುತ್ತದೆ. ಮುಪ್ಪಾದ ಒಂದು ಮರಕ್ಕೆ ನೇಣು ಹಾಕಿಕೊಂಡು ಸತ್ತವನನ್ನು ಈ ಪದ್ಯ (ಕೊಂಬೆಗೆ ನೇತ ಜೀವ)

ಈ ಮರದ ಕೊಂಬೆಗೆ ನೇತವನು
ಹಣ್ಣೇ ತೂಗಿದಂತಿಹನು
ಕತ್ತಷ್ಟು ಓರೆಯಾಗಿ
ಅದಾವ ಕೋನದಲೋ
ಜಗವ ಅಳೆವಂತಿಹನು

ಎಂದು ನಮಗೆ ತೋರಿಸುತ್ತದೆ. ಈ ಪದ್ಯದಲ್ಲಿ ‘ನಿಸೂರು’ ಕೂತು ಮುಪ್ಪಾದ ಗೊಡ್ಡು ಮರವನ್ನೂ, ಜೀವದ ಭಾವ ಕಳಕೊಂಡು ಹಗುರಾದ ಹೆಣವನ್ನೂ ಒಟ್ಟಾಗಿ ನಾವು ಕಾಣುವುದರಲ್ಲೇ ನಮ್ಮ ರೂಢಿಗತವಾದ ಧೋರಣೆಗಳಂತೆ ಯಾವುದು ಭಾರ, ಯಾವುದು ಹಗುರ ಎಂಬುದನ್ನು ಬದಲಾಯಿಸಿಕೊಳ್ಳುವುದರಲ್ಲೇ ಕವಿಯ ಅಬ್ಬರವಿಲ್ಲದ ಶಕ್ತಿ ಕೆಲಸ ಮಾಡಿದೆ. ಕವಿತೆ ನಮ್ಮ ಕಸಿವಿಸಿಯ ರೂಪಕವಾಗಿದೆ.

ನಮ್ಮ ರೂಢೀಗತವಾದ ಕಾಣುವಿಕೆಯನ್ನು ಎಡವಿಸುವ ಸುರೇಶರ ಕವನಗಳು ನಮ್ಮ ಅಲೆಯುವ ಮನಸ್ಸನ್ನು ಕೊಕ್ಕೆಯಂತೆ ತಮಗೆ ಸಿಕ್ಕಿಸಿಕೊಳ್ಳುತ್ತವೆ. ಸಿಡಿಲು ಬಡಿದಾಗ ಅಣಬೆಗಳು ಹುಟ್ಟಿಕೊಳ್ಳುತ್ತವೆ ಎಂಬ ವಿಚಾರದಿಂದ ಶುರುವಾಗುವ ‘ಅಣಬೆ’ ಪದ್ಯ ಎತ್ತೆತ್ತಲೋ ಅನಿರೀಕ್ಷಿತವಾಗಿ ನಿರುದ್ಧಿಶ್ಯ ಲಹರಿಯಂತೆ ಬೆಳೆಯುತ್ತದೆ. ಅನಿರೀಕ್ಷಿತವಾದದಕ್ಕೆ ನಾವು ಎದುರಗುವಂತೆ ಮಾಡುತ್ತದೆ.

ನನಗೆ ಇಷ್ಟವಾದ ‘ನನ್ನೆದುರು ಬಾಹುಬಲಿ’ ಪದ್ಯದಲ್ಲಿ ಕೋಶವಾಗಿ ಕೂರಲಿರುವ ಕಂಬಳಿಹುಳ ಒಂದರ ವರ್ಣನೆ ಬರುತ್ತದೆ.

ಎ.ಕೆ. ರಾಮಾನುಜರನ್ನು ನೆನಪು ಮಾಡುವ ಪದ್ಯ ಇದು. ರಮಾನುಜರಿಂದಲೂ ತಿರುಮಲೇಶರಿಂದಲೂ ಹರಿತಗೊಂಡ ಸಂವೇದನೆ ಸುರೇಶರದು ಎನ್ನಬಹುದೇನೋ? ಕಂಬಳಿ ಹುಳು ಕೋಶವಾಗುವ ಮುಂಚೆ, ಬಟ್ಟಲು ಕಣ್ಣಿನಂತೆ ಭಾಸವಾಗುವ ಅದರ ಅಂಡನ್ನು ಊರಿ, ಯೋಗಾಸನದ ಭಂಗಿಯಲ್ಲಿ ಇರುವುದೆಂದು ಕಾಣಬಲ್ಲ ಶಕ್ತಿ ಯಾವುದು ‘ಆಧ್ಯಾತ್ಮಿಕ’ವೆಂದು ನಮಗಿರುವ ರೂಢಿಗತ ಧೋರಣೆಯನ್ನು ಬದಲಿಸಬಲ್ಲಂಥದ್ದು. ನಾವು ಕಾಣುವ ಬಗೆಗಳನ್ನು ಬದಲಿಸಲು ಸುರೇಶರು ಬಳಸುವ ರೂಪಕಗಳು ಈ ಸಂಕಲನದಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದವು. ಒಮ್ಮೆ ಎಲೆನ್ಸ್ ಗಿನ್ಸ್ ಬರ್ಗ್ ಹೀಗೆ ಮಾತಿನ ವಕ್ರತೆಯಿಂದ ಹುಟ್ಟಿಕೊಳ್ಳುವ ಅತಾರ್ಕಿಕ ರೂಪಕಗಳನ್ನು ‘ಉಪಾಯ’ವೆಂದು (ಹತ್ತಿರ ತರುವ ಓರೆ ಮಾತಿನ ಉಪಾಯವೆಂದು) ಕರೆದಿದ್ದರು.

‘ಕತ್ತಲ ಹೆಜ್ಜೆ’ ಎನ್ನುವ ಪದ್ಯದಲ್ಲೂ ಹಗಲು ರಾತ್ರಿಗಳನ್ನು ನಾವು ಭಾವಿಸುವ ಪರಿ ಬದಲಾಗುತ್ತದೆ:

ಹಗಲೆಂತ ಸರಳ ವಿವರಗಳ ಪಟ್ಟಿ
ನಡೆ ನಡಡೆಯೂ ಅರಿವ ಸಿಕ್ಕಿನೊಳಗಿರುವುದು

ಹೀಗೆ ಕಾಣುವ ಕವಿ ಒಳಗಣ್ಣು ತೆರೆಯಲೆಂದು ‘ಮನುಜ’ ಸದಾ ಕತ್ತಲೆಯ ಪ್ರವೇಶಿಸುತ್ತಿರಲಿ’ ಎನ್ನುತ್ತಾನೆ.

ಭಿನ್ನವಾದ ಕಾಣುವಿಕೆಯ ಪ್ರಯೋಗಗಳಲ್ಲಿ ‘ಮುತ್ತುರಾಜನಿಗೆ’ ಇನ್ನೊಂದು ಚುರುಕಾದ ಪದ್ಯ. ಎದುರಾಗುವ ಆನೆ ಪಳಗಿದ ಪರಿಚಿತವೂ ಅಲ್ಲ: ಭಯಮಾತ್ರ ಹುಟ್ಟಿಸುವ ಕಾಡಾನೆಯೂ ಅಲ್ಲ. ಸಿಟ್ಟಿಲ್ಲದ ಅದರ ಪುಟ್ಟ ಕಣ್ಣುಗಳ ನಿರ್ಲಕ್ಷ್ಯ ನೋಟದ ‘ರಮ್ಯ ಉದಾಸೀನ’ದಲ್ಲಿ ನಾವೂ ಎದುರಿನ ಜಗತ್ತನ್ನು ನೋಡುವಂತಾಗುತ್ತದೆ. ‘ಕದಳಿಗೊಂದು ಕವನವೂ’ ಬಾಳೆಯ ಮರ ನೆಲವನ್ನು ಭೇದಿಸುವ ಸಾತ್ವಿಕತೆಯ ಶಕ್ತಿಗೆ ಸಂಕೇತ ಮಾಡುತ್ತದೆ. ಇಂತಹ ಕಡೆಯಲ್ಲೆಲ್ಲ ಇರುವ ಅಪಾಯ ಕೋಲ್ ರಿಡ್ಜ್, ವರ್ಡ್ಸ್‌ವರ್ತ್ ಕವಿಯಲ್ಲಿ ಗಮನಿಸುವ ಮೆಂಟಲ್ ಬೊಂಬಾಸ್ಟ್‌ನದು. ಅದರ ಅಂಚಿನಲ್ಲಿ ಸುರೇಶ ಸಂಚರಿಸುತ್ತಾರೆ. ಈ ಧೈರ್ಯ ಮೆಚ್ಚಬೇಕಾದ್ದೆ. ಇಲ್ಲವಾದರೆ ನಮ್ಮ ಪತ್ರಿಕೆಗಳ ಸಂಡೇ ಪದ್ಯಗಳಾಗಿ ಈ ಪದ್ಯಗಳು ನೆಲಕಚ್ಚಿ ತೆವಳುತ್ತಿದ್ದವು. ಕವನ ರಚನೆಯಲ್ಲಿ ಅಧಿಕ ಪ್ರಸಂಗಿಗೆ ಎದುರಾಗಬೇಕಾದ್ದು ಅಲ್ಪ ಪ್ರಸಂಗಿಯಲ್ಲ.

ಮೇಲಿನ ಮಾತಿಗೆ ಇನ್ನೊಂದು ಮಾತು ಸೇರಿಸಬೇಕು. ಕನ್ನಡ ಕಾವ್ಯಕ್ಕಿರುವ ಪ್ರಲೋಭನೆಯೆಂದರೆ ಸಣ್ಣಪುಟ್ಟ ವಿಷಯಗಳ ಅವಜ್ಞತೆ, ಭೂಮದ ಮೋಹ, ಮಾತಿನ ಕೃತಕ ಶ್ರೀಮದ್ಗಾಂಭೀರ್ಯ ಹಾಗೂ ಗರ್ವ, ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತೇವೆ. ಆದರೆ ರವಿ ಕಾಣುವಷ್ಟನ್ನು ಕವಿ ಕಾಣದೇ ಹೋದಾನು. ಅವನ ಕೃತಕವಾದ ಘನತೆಯ  ಗತ್ತಿನಲ್ಲಿ.

ಸುರೇಶರ ‘ಬೆರಳುಗಳು’ ಪದ್ಯ ನೋಡಿ. ಇಲ್ಲಿ ಬೆರಳುಗಳು ಮುಷ್ಟಿಯ ಬಿಗುವೂ ಆಗುತ್ತವೆ. ಚಂದಿರನನ್ನು ಕರೆಯುವ ಮೃದು ಹಗುರವೂ ಆಗುತ್ತವೆ. ರೋಜಾ ಹೂವನ್ನು ಮೂಗಿಗೊತ್ತುತ್ತೇವೆ. ಪಿತೃಗಳಿಗೆ ತರ್ಪಣವನ್ನು ಕೊಡುತ್ತೇವೆ; ಜೀವೋಪಿಯಾಗಿ ಕಣ್ಣಿನಲ್ಲಿ ಬೀಜ ಬಿತ್ತುತ್ತೇವೆ. ಇಷ್ಟೇ ಮುಕ್ಯವಾಗಿ ನಮ್ಮ ಘನತೆಗೆ ತೋರದ ಒಂದು ಕೆಲಸಕ್ಕೂ ಬೆರಳುಗಳು ನೆರವಾಗುತ್ತವೆ- ನಿರುದ್ದಿಶ್ಯ ಸುಖಕ್ಕೆ ಬೆನ್ನನ್ನು ಕೆರೆಯುತ್ತೇವೆ.

ಜನಪ್ರಿಯವಾಗುವ ಪದ್ಯಗಳು, ಏನಿಲ್ಲದಿದ್ದರೂ, ಇಷ್ಟಾದರೂ ಜಾಣವಾಗಿರಬೇಕು. ಜಾಣತನಕ್ಕೆ ಮೀರಿದ್ದನ್ನು ಕಾಣುವುದೊಂದು ಅದೃಷ್ಟ. ಎಲ್ಲ ಘನವಾದ ಕಾನ್ಕೆಯೂ ಅದೃಷ್ಟವೇ ಇರಬಹುದು. ಕಾಣುವ, ಕಾಣಿಸುವ ಇಂದ್ರಿಯಗಳನ್ನು ಹರಿತವಾಗಿಯೂ, ಶುದ್ಧವಾಗಿಯೂ ಇಟ್ಟುಕೊಂಡು ‘ಅದೃಷ್ಟ’ವನ್ನು ಗುರುತಿಸಿ ಸ್ವೀಕರಿಸಬಲ್ಲವನು ಕಸುಬುದಾರನಾದ ಕವಿ.

ಈ ಪದ್ಯಗಳ ನನ್ನ ಓದಿಗೆ ಹಿನ್ನೆಲೆಯಾಗಿ ಕೆಲವು ಮಾತುಗಳು :

೧) ಓದುವುದೆಂದರೆ  ಕೃತಿಗೆ ಎದುರಾಗುವುದು, ಕೃತಿಯನ್ನು ಎದುರುಗೊಳ್ಳುವುದು; ಕೃತಿಗೆ ನಮ್ಮನ್ನು ಒಪ್ಪಿಸಿಕೊಳ್ಳುವುದು; ಮನಸ್ಸಿನ ಧಾರಾಳದಲ್ಲಿ ನಿರೀಕ್ಷಿಸುವುದು. ಧಾರಾಳ ನಿರೀಕ್ಷೆಯಲ್ಲಿ ಒದಗಿ ಬಂದದ್ದನ್ನು ಪರೀಕ್ಷಿಸುವುದು. ಇದು ಕೃತಿಯ ಪರೀಕ್ಷೆ ಮಾತ್ರವಲ್ಲ. ಕೃತಿ ನಮ್ಮನ್ನು ಮಾಡುವ ಪರೀಕ್ಷೆ. ಈ ಪರೀಕ್ಷೆಯ ಫಲ ನಿಷ್ಠುರವಾದ ವಿಮರ್ಶೆ.

೨) ಇದೇನೂ ಸನ್ನಡತೆಯ ವ್ಯವಹಾರವಲ್ಲ; ದೊಡ್ಡಸ್ತಿಕೆಯ ಔದಾರ್ಯವು ಅಲ್ಲ. ಕೊಡುಕೊಳ್ಳುವ ಧಾರಾಳದಲ್ಲಿ ಹಿಗ್ಗಿದ ಮನಸ್ಸು ಏನನ್ನಾದರೂ ತುಂಬಬಲ್ಲ ಗೋಣಿಚೀಲವಲ್ಲ. ಇಂಥ ಮನಸ್ಸು ತನ್ನ ನಿರಂತರ ವಿಸ್ತಾರಕ್ಕೆ ಅಗತ್ಯವಾದದ್ದನ್ನು ಮಾತ್ರ ತನ್ನ ಸ್ಮೃತಿಯಲ್ಲಿ ಉಳಿಸಿಕೊಳ್ಳುತ್ತದೆ ಎನ್ನಬಹುದೆನೋ?

೩) ನಮ್ಮಂತೆ ಮನುಷ್ಯನಾದ ಕವಿಯದೂ ಅಲೆಯುವ ಮನಸ್ಸು; ಓದಿನಿಂದ ಸಂಸ್ಕರಗೊಂಡವನದೂ ಅಲೆಯುವ ಮನಸ್ಸು. ತನ್ನನ್ನು ತಾನೇ ಓದಿಕೊಳ್ಳಬಲ್ಲ ಕವಿ ಏಕಾಗ್ರನಾಗಿ ಬರೆದುಕೊಂಡಿರುವ ಮಾತು ಓದುಗನ ಅಲೆಯುವ ಮನಸ್ಸನ್ನು ಕೊಕ್ಕೆಯಾಗಿ ಹಿಡಿದು ನಿಲ್ಲಿಸುವ ಶಕ್ತಿ ಪಡೆದಿರಬೇಕು. ಆವೇಶ, ಉತ್ಕಟತೆ, ನಿರಾಳತೆ, ವಕ್ರತೆ, ವ್ಯಂಗ್ಯ ಯಾವುದದರೂ ಇಂಥಹಿಡಿದು ನಿಲ್ಲಿಸುವ ಮಾತಿನ ಹಿಂದೆ ಇರುತ್ತವೆ. ಓದಿನ ಸಲೀಸಾದ ಮುನ್ನಡೆಯನ್ನು ತಡೆಯುವಂತೆ, ಕೂಡಲೇ ಅರ್ಥವಾಗದ ಹಾಗೆ, ಆಡಿದ ಮಾತಿಗೆ ನಾವು ಮತ್ತೆ ಬರುವ ಹಾಗೆ ಇರುವ ಓರೆ ಮಾತಿನ ನೇರಮಾತಿನ ಉಪಾಯಗಳು ಕಾವ್ಯದಲ್ಲಿಹಲವು.

೪) ಕವಿಯಲ್ಲಿ ಮೂಡಿದ್ದು ಓದುಗನಲ್ಲೂ ಮೂಡುವ ಈ ಸಹೃದಯತೆ ಲಿಖಿತವಾದ ಕಾವ್ಯದಲ್ಲಿ ಮೈ ಪಡೆದಾಗ ನಾವು ಕಳೆದುಕೊಳ್ಳುತ್ತಿರುವ ಮೌಖಿಕ ಸಂಪ್ರದಾಯ ಕಂಠವನ್ನೂ ಕಿವಿಯನ್ನೂ ಮರಳಿ ಪಡೆದಂತಾಗುತ್ತದೆ. ಹೀಗೆ ಪಡೆದಿದ್ದರ ಸ್ವರೂಪವೂ ಬೇರೆಯಾಗಿರುತ್ತದೆ. ಕವಿಯ ಏಕಾಂತದಿಂದ ಓದುಗನಿಗೆ ಒಳಗಿಂದ ಕೇಳಿಸುವಂತೆ ತಲುಪುವ ಮಾತು ಉತ್ಸಾಹವನ್ನು ಮಾತ್ರವಲ್ಲದೆ ಚಿಂತನಾತ್ಮಕವಾದ ಕವಿಯ ಮಾತಿಗೆ ಮತ್ತೆ ಮರಳಬೇಕೆನ್ನಿಸುವ ಧ್ಯಾನಶೀಲತೆಯನ್ನೂ ತರುತ್ತದೆ.

ಮೇಲಿನ ಮಾತುಗಳು ಸುರೇಶನ ಸದ್ಯದ ಸಾಧನೆ ಬಗ್ಗೆ ನನಗಿರುವ ಅತೃಪ್ತಿಯನ್ನೂ, ನಿರೀಕ್ಷೆಯನ್ನೂ, ಸಂತೋಷವನ್ನೂ ಒಟ್ಟಾಗಿ ಹೇಳುತ್ತವೆ ಎಂದು ತಿಳಿದಿದ್ದೇನೆ. ಸುರೇಶರು ತಮ್ಮ ಕನಸುಗಳನ್ನು ಓದುವಾಗ ಕೇಳಿಸಿಕೊಂಡು ಅವರ ಜೊತೆ ನಾನು ಪ್ರೀತಿಯ ಜಗಳವನ್ನೂ ಆಡಲು ಹೋಗಿ ಸೋತಿದ್ದೇನೆ. ನನಗಿಂತ ಅವರಿಗೇ ತಮ್ಮ ರಚನೆಗಳ ಕೊರತೆ ಹೆಚ್ಚಾಗಿ ತಿಳಿದಿದೆ. ದೇವರ ಹೆಳವತನದ ಬಗ್ಗೆ ‘ಹುಸಿ’ ಪ್ರಶ್ನೆಯೆತ್ತುವ ‘ರಥ’ ಪದ್ಯದ ಬಗ್ಗೆ ಅವರೇ ಮುಜುಗುರಪಡಬಲ್ಲರು. ಜೇಡನ ಪ್ರಾಣಶಕ್ತಿಯನ್ನೂ ರಥದ ಚಿತ್ರಗಳ ರತ್ಯಾತುರತೆಯನ್ನೂ ನಡುವಿನ ದೇವ ಮೌನವನ್ನೂ ಕಾಣಬಹುದಾದ ಹಲವು ಬಗೆಗಳನ್ನು ಸುರೇಶರು ಈ ಕಾಲದ ಸಮ್ಮತಿಗಾಗಿ ಕಳೆದುಕೊಂಡಿದ್ದಾರೆ. ನಾನು ಚರ್ಚಿಸದ ಹಲವು ಒಳ್ಳೆಯ ಕವನಗಳೂ ಸಂಕಲನದಲ್ಲಿವೆ. ಆದರೆ ಕವನಕ್ಕಾಗಿಯೇ ಅವರು ಬಳಸುವ ಪದಪುಂಜಗಳ ಕೃತಕತೆಯೂ, ಪದ ಜೋಡಣೆಯ ವಯ್ಯಾರವೂ ಸುರೇಶರ ಹಲವು ಕವನಗಳಲ್ಲಿ ಉಳಿದಿದೆ. ಅವನ್ನು ಅವರು ಬೇಕೆಂದೇ ಬದಲಾಯಿಸಿಲ್ಲ. ಅವರ ಬೆಳವಣಿಗೆಯ ಚರಿತ್ರೆಯೇ ಈ ಕವನಗಳಲ್ಲಿ ಇರಲೆಂದು ಅವರು ಬಯಸಿದ್ದಾರೆ.

ಈಚಿನ ದಿನಗಳಲ್ಲಿ ಪದ್ಯಗಳು ಬರೆದಿರುವ ಅಕ್ಷರಗಳಾಗಲಿ, ಮತ್ತೆ ಪ್ರಿಂಟಾದ ಪುಟಗಳಾಗಲಿ, ತೆರೆದು ಗಟ್ಟಿಯಾಗಿ ಓದಿಕೊಳ್ಳದ ಪುಸ್ತಕವಾಗಿ ತಮ್ಮ ತವರನ್ನೇ ಮರೆತಂತೆ ಕಾಣುತ್ತವೆ. ಬೀದಿ ಜಗಳದ ಆವೇಶದ ಲಯವೂ ನಮ್ಮ ಹಲವು ಕವಿಗಳ ಗೊಣಗಾಟದಲ್ಲಿ ಕಾಣುತ್ತಿಲ್ಲ. ಫ್ರೆಂಚ್ ಲೇಖಕ ಫ್ಲಾಬೇ ತನ್ನ ಗದ್ಯವನ್ನು ಮೇಜು ತಟ್ಟಿ ಓದಿ ಲಯಪರೀಕ್ಷೆ ಮಾಡುತ್ತಿದ್ದನಂತೆ. ಕನ್ನಡ ನುಡಿಕಟ್ಟಿನ ಲಯದ ಹಂಬಲ ಸುರೇಶರಿಗೆ ಇದೆ.  ಆದರೆ ಇವರು ಹೆಚ್ಚು ಬರೆದದ್ದು ಮೌನದ ಓದಿಗೆಂದೇ ಎನ್ನಿಸುತ್ತದೆ. ಕನ್ನಡ ಕಾವ್ಯಕ್ಕೆ ಸದ್ಯದಲ್ಲಿ ಬಡಿದಿರುವ ರೋಗಗಳೆಂದರೆ : ಅಬ್ಬರದ ವಾದ್ಯಗಳ ಹಿನ್ನೆಲೆಯ ಸಂಗಿತದಲ್ಲಿ ತಿರುಚಿಕೊಳ್ಳುವ ಕನ್ನಡದ ಮಾತುಗಳು ಅಥವಾ ಲಯಹೀನ ಗೊಣಗಾಟವೆನ್ನಿಸುವ ಮುಖಹೀನ ಮಾತುಗಳು.

ಇಹದಲ್ಲಿ ಕಾಲೂರಿದ್ದೇ ‘ಪರ’ಕ್ಕೂ ಅಂದರೆ ಇಹದಲ್ಲೇ ಇರುವ ಪರಕ್ಕೂ ಕೈ ಚಾಚುವ ಸುರೇಶರ ಕವನಗಳು ಉಸಿರಾಡುತ್ತವೆ; ಕೆಲವೊಮ್ಮೆ ಮನಸ್ಸನ್ನು ಕಾಡುವಂತೆ ಮೈದಾಳುತ್ತವೆ. ತರ್ಕಾತೀತವಾದ್ದಕ್ಕೆ ಎರೆದು ಕೊಳ್ಳಲಾರದ ಕಾವ್ಯ ಇದ್ದೇನು ಪ್ರಯೋಜನ?

ಕೆ.ಪಿ.ಸುರೇಶರನ್ನು ಅವರ ಪ್ರಾಧ್ಯಾಪಕನಾಗಿ ಹಲವು ವರ್ಷಗಳಿಂದಲೇ ಬಲ್ಲ ನಾನು ಸಂತೋಷದಿಂದ ಅವರ ಕವನಗಳನ್ನು ಓದುಗರ ಮುಂದಿಡುತ್ತಿದ್ದೇನೆ.

*

(ಕೆ.ಪಿ. ಸುರೇಶ ಅವರದಡ ಬಿಟ್ಟ ದೋಣಿ’-೨೦೦೩ ಕವನ ಸಂಗ್ರಹಕ್ಕೆ ಬರೆದ ಮುನ್ನುಡಿ.