ಪ್ರೊ. ಸುನಿಲ್ ಕುಮಾರ್‌ ಸಹಸ್ರ ಬುದ್ಧೆ ಜೊತೆಗಿನ ನನ್ನ ಸ್ನೇಹ ಬಹಳ ಹಳೆಯದು. ಅವರು ಗಾಂಧಿಯನ್ನು ಕೇವಲ ಪೂಜ್ಯ ಭಾವನೆಯಿಂದಲ್ಲದೆ ಒಬ್ಬ ತತ್ತ್ವಜ್ಞಾನಿಯ ತರಹ ನೊಡುತ್ತಾರೆ. ಅವರು ಸ್ವತಃ ವಿಜ್ಞಾನಿಯೂ ಆಗಿರುವುದರಿಂದ ವಿಜ್ಞಾನದ ಎಲ್ಲ ಶಿಸ್ತುಗಳನ್ನು ಬಳಸಿಕೊಂಡು ಗಾಂಧಿಯನ್ನು ಅಧ್ಯಯನ ಮಾಡಿದ್ದಾರೆ. ಒಬ್ಬ  ತತ್ವಜ್ಞಾನಿಯ ಶಿಸ್ತನ್ನು, ವಿಜ್ಞಾನಿಯ ಶಿಸ್ತನ್ನು ಮತ್ತು ಸಮಾಜಶಾಸ್ತ್ರಜ್ಞನ ಶಿಸ್ತನ್ನೂ ಇಟ್ಟುಕೊಂಡು ಅವರು ಗಾಂಧೀಯನ್ನು ನೋಡುತ್ತಾರೆ.

ಈ ಪುಸ್ತಕದ ಬಹಳ ಮುಖ್ಯವಾದ ಒಳನೋಟವೊಂದನ್ನು ಮೊದಲು ಹೇಳಿಬಿಡುತ್ತೇನೆ. ಗಾಂಧಿಯವರು ತಮ್ಮ ಎಲ್ಲ ನೈತಿಕ ಪ್ರೇರಣೆ ಮತ್ತು ತಾತ್ವಿಕತೆಯನ್ನು ಪಡೆಯುವುದು – ಬದುಕಿನ ಸಾಮಾನ್ಯತೆಯಿಂದ. ಪ್ರತಿಯೊಬ್ಬ ಗೃಹಸ್ಥನಿಗೂ, ಗೃಹಿಣಿಗೂ ಗೊತ್ತಿರುವ ಎಲ್ಲ ತಾಕಲಾಟ, ಗೋಜಲು ಸಂಕಷ್ಟಗಳಿಗೆ, ನಮ್ಮ ದಿನನಿತ್ಯದ ಸಂಕಟಗಳಿಗೆ ಗಾಂಧೀಜಿ ಸ್ಪಂದಿಸಬಲ್ಲರು. ನಮ್ಮ ಮಲೆನಾಡಿನಲ್ಲಂತೂ ಗೃಹಿಣಿಯ ದಿನ ನಿತ್ಯದ ಸಂಕಷ್ಟಗಳು ಕಟ್ಟಿಗೆಯಿಂದಲೇ ಪ್ರಾರಂಭವಾಗುತ್ತದೆ. ಇಬ್ಬರು ಗೃಹಿಣಿಯರು ಸಂಧಿಸಿದಾಗ ಅವರು ಮಾತನಾಡುವುದು ಮನೆಯ ಸೌದೆ/ ಕಟ್ಟಿಗೆಯ ಕುರಿತಾಗಿ. ‘ನಿಮ್ಮ ಮನೆ ಕಟ್ಟಿಗೆ ಒಣಗಿದೆಯೇ? ನಮ್ಮ ಮನೆ ಸೌದೆ ಇನ್ನೂ ಹಸಿ…..’ ಇತ್ಯಾದಿ. ಹೀಗೆ ಗಾಂಧೀಜಿ ಅವರ ನೈತಿಕತೆ ಬಂದಿರುವುದು ಆರ್ಡಿನರಿ ಜನರ ಅಗತ್ಯಗಳನ್ನು ಕಂಡು. ಅವರ ಗ್ರಹಿಕೆಗಳೆಲ್ಲ ಬಂದಿರುವುದು ಈ ನೆಲೆಯಿಂದಲೇ. ವಿಜ್ಞಾನದ ಗ್ರಹಿಕೆ ಕೂಡ ಗಾಂಧೀಜಿಗೆ ಸಾಮಾನ್ಯನೊಬ್ಬನು ಅದನ್ನು ಗ್ರಹಿಸುವ ದೃಷ್ಟಿಯಿಂದಲೇ ಬಂದಿರುವಂಥದು.

ಅಷ್ಟೇ ಅಲ್ಲ; ಗಾಂಧಿಯು ಒಬ್ಬ ಸಾಮಾನ್ಯ ಮನುಷ್ಯನೇ ತಾನೆ? ಅದಕ್ಕೆ ಆ ಗ್ರಹಿಕೆ ಸಾಧ್ಯ. ಸಾಮಾನ್ಯನ ರೀತಿ ಬದುಕುವುದು ಸಾಧ್ಯ ಎಂದು ಗಾಂಧಿ ತಿಳಿದಿದ್ದರು. ಏಕೆಂದರೆ ಅವರು ನಮ್ಮ ಹಾಗೆ ಸುಳ್ಳು ಹೇಳಿದ್ದಾರೆ. ರಟ್ಟೆಗೆ ಬಲ ಬರಲಿ ಎಂದು ಮಾಂಸ ತಿಂದಿದ್ದಾರೆ. ಕಾಮೋದ್ರಿಕ್ತರಾಗಿ ವೇಶ್ಯಾಗ್ರಹಕ್ಕೆ ಹೋಗಿದ್ದಾರೆ. ಯಾವುದೋ ಬ್ರಿಟಿಷ್ ಹುಡುಗಿ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಗೊತ್ತಾದಾಗ ತಮಗೆ ಮದುವೆ ಆಗಿದ್ದನ್ನು ಹೇಳದೆ ಇದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ನಮ್ಮ ಮುಜುಗುರಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಅವುಗಳನ್ನು ಮುಚ್ಚಿಡುವುದಕ್ಕೆ ನೋಡುತ್ತೇವೆ. ಆದರೆ ಗಾಂಧಿ ತನ್ನ ಮುಜುಗುರಗಳನ್ನು ಮುಚ್ಚಿಡುವುದಿಲ್ಲ.

ಗಾಂಧೀಜಿಯವರ ಆತ್ಮಕಥೆಯನ್ನೇ ನೋಡಿ. ಅವರು ಇಂಗ್ಲಂಡ್‌ನಲ್ಲಿ ಇಳಿದ ಕೂಡಲೇ ಅಲ್ಲಿನ ಭಾರತೀಯರ ನಡುವೆ ಬಹಳ ದೊಡ್ಡ ಮನುಷ್ಯ ಎನಿಸಿಕೊಂಡ ಒಬ್ಬರನ್ನು ನೋಡುವುದಕ್ಕೆ ಹೋಗುತ್ತಾರೆ ಗಾಂಧಿ. ಆ ಉದ್ಯಮಿಯ ಹತ್ತಿರ ಒಂದು ಉಣ್ಣೆಯ ಟೋಪಿ ಇರುತ್ತದೆ. ಬಹಳ ಮೃದುವಾದ ಉಣ್ಣೆಯಿಂದ ಮಾಡಿದಂತಹ ಟೋಪಿ ಅದು ಟೇಬಲ್ ಮೇಲೆ ಅದನ್ನು ಅವರು ಇಟ್ಟಿರುತ್ತಾರೆ. ಲಾಯರ್‌ ಪರೀಕ್ಷೆ ಕಟ್ಟಲು ಹೋಗಿದ್ದ ಹುಡುಗ ಗಾಂಧಿ ತನ್ನ ಕುತೂಹಲ ತಡೆಯಲಾರದೆ ಅದರ ನಯವಾದ ರೋಮಗಳನ್ನು ಬೆರಳಿನಿಂದ ಸವರುತ್ತಾರೆ. (ಗಾಂಧಿಯವರಿಗೆ ಮುಟ್ಟುವುದೊಂದು ಆತ್ಮದ ಹಂಬಲವಿದ್ದಂತೆ ದೇಹದ ತುಡಿತವೆಂದೂ ಅನ್ನಿಸುತ್ತದೆ. ಅಸ್ಪೃಷ್ಯತೆಯ ಆಚರಣೆ ಅವರಿಗೆ ಅಸಹ್ಯ. ಅವರು ಕೊನೆಯಲ್ಲಿ ಇಬ್ಬರು ಹುಡುಗಿಯರ ಹೆಗಲಮೇಲೆ ಕೈ ಇಟ್ಟು ನಡೆಯುತ್ತ ಇದ್ದರು. ನವಾಖಲಿ ದಿನಗಳಲ್ಲಿ ಹುಡಗಿಯ ಜೊತೆ ಬೆತ್ತಲೆ ಮಲಗಿ ತನ್ನ ಬ್ರಹ್ಮಚರ್ಯವನ್ನು ಪರೀಕ್ಷೆಗೆ ಒಡ್ಡಿಕೊಂಡು ತನ್ನ ಆಪ್ತರ ಟೀಕೆಗೆ ಒಳಗಾಗಿದ್ದರು). ಗಾಂಧಿಜಿ ಟೋಪಿ ಮುಟ್ಟಿದ್ದನ್ನು ನೋಡಿದ ಆ ದೊಡ್ಡ ವ್ಯಕ್ತಿ ‘ಇಂಗ್ಲಂಡಿನಲ್ಲಿ ನೀನು ಕಲಿಯಬೇಕಾದ ಮೊದಲ ಪಾಠ-ಬೇರೆಯವರ ವಸ್ತುಗಳನ್ನು ಮುಟ್ಟದಿರುವುದು’ ಎಂದು ಹೇಳುತ್ತಾನೆ. ಇದನ್ನು ಗಾಂಧೀಜಿ ಸಂಕೋಚವಿಲ್ಲದೆ ಬರೆಯುತ್ತಾರೆ. ಅವರಿಗೆ ಯಾವುದೂ ಸಣ್ಣ ವಿಚಾರವಲ್ಲ; ಯಾವುದೂ ದೊಡ್ಡ ವಿಚಾರವಲ್ಲ.

ಈ ಕನ್‌ಫೆಷನ್ ರೈಟಿಂಗ್‌ನಲ್ಲಿ ಒಂದು ಸಮಸ್ಯೆ ಇದೆ. ಸೇಂಟ್ ಥೆರೆಸಾ ಅಂತ ಒಬ್ಬಳು ಬಹಳ ದೊಡ್ಡ ಕ್ರಿಶ್ಚಿಯನ್ ಸೈಂಟ್ ಇದ್ದಳು. ತಪ್ಪೊಪ್ಪಿಗೆ ಮಾಡುವಾಗ ಅವಳು ಎಷ್ಟು ದೊಡ್ಡ ಗಂಟಲಲ್ಲಿ ಅದನ್ನು ಮಾಡುತ್ತಾಳೆಂದರೆ ‘ಇವತ್ತು ಬ್ರೆಡ್ ಇಷ್ಟ ಆಯ್ತು ಹೆಚ್ಚಿಗೆ ತಿಂದು ಬಿಟ್ಟೆ, ಸ್ವಲ್ಪ ಬೆಣ್ಣೆ ಜಾಸ್ತಿ ಹಾಕ್ಕೊಂಡೆ…’ ಎನ್ನುವುದರಿಂದ ಹಿಡಿದು ನೂರಾರು ಸಣ್ಣ-ಪುಟ್ಟ ತಪ್ಪುಗಳವರೆಗೆ ನಿವೇದನೆ ಮಾಡಿಕೊಳ್ಳುತ್ತಾಳೆ. (ನಂಬಿಕೆಯನ್ನೇ ಅಲ್ಲಾಡಿಸಬಲ್ಲ ತಪ್ಪೊಪ್ಪಿಗೆ ಇದಲ್ಲ). ತಪ್ಪೊಪ್ಪಿಕೊಳ್ಳುವವರ ಮನಸ್ಸಿನಲ್ಲಿ ‘ತಾನು ಮಾಡಿದ ತಪ್ಪುಗಳನ್ನು ಹೇಳಿಕೊಂಡುಬಿಟ್ಟರೆ ಮುಂದೆ ಅಂಥ ತಪ್ಪುಗಳನ್ನು ಮಾಡುವುದಿಲ್ಲ. ನೋಡು ನಾನು ಕ್ಲೀನಾದೆ’ ಎನ್ನುವ ತೋರುಗಾಣಿಕೆ ಇರುವುದು ಸಾಧ್ಯ. ಅಥವಾ ನಾಣು ತಪ್ಪೊಪ್ಪಿಗೆ ಮಾಡಿಕೊಳ್ಳುತ್ತಿರುವುದರಿಂದ ನಾನು ಶ್ರೇಷ್ಠವ್ಯಕ್ತಿ ಎನ್ನುವ ಭಾವನೆಯೂ ಇರಬಹುದು. ಅಲ್ಲದೆ ಇಷ್ಟೇ ನನ್ನ ದೋಷ ಎಂದು ಮಹತ್ವದ ದೋಷಗಳನ್ನು ಮುಚ್ಚಿಡುವ ಉಪಾಯವು ಇದಾಗಬಹುದು. ಆದರೆ ಒಂದು ತಪ್ಪೊಪ್ಪಿಗೆಯನ್ನು ಈ ಯಾವ ಭಾವನೆಯೂ ಇಲ್ಲದೆ ಬರೆದುಕೊಳ್ಳುವುದು ಸುಲಭವಲ್ಲ. ಸೇಂಟ್ ಅಗಸ್ಟೀನ್ ಬರೆದಿರುವ ‘ಕನ್‌ಫೆಷನ್’ ಪುಸ್ತಕದಲ್ಲಿ ಅಂಥಾ ನಿರ್ಲಿಪ್ತತೆ ಇದೆ. ಬಹುಶಃ ಅದರ ನಂತರ ಅದೇ ಮಟ್ಟದ ದೊಡ್ಡ ಕೃತಿ ಎಂದರೆ ಗಾಂಧಿಯವರ ಸತ್ಯಾನ್ವೇಷಣೆಯ ಆತ್ಮಕಥೆ. ಇದನ್ನು ಬರೆದಾದ ನಂತರವೂ ಕನಸಿನಲ್ಲಿ ತನಗೆ ಕಾಮೋದ್ರೇಕವಾಗುವುದನ್ನು ಮಹಾತ್ಮರು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ.

ಅಮೆರಿಕಾದ ಪ್ರಸಿದ್ಧ ವಿಮಶರಶಕ ಮಾರ್ಟಿನ್ ಗ್ರೀನ್ ಗಾಂಧಿ ಮತ್ತು ಟಾಲ್‌ಸ್ಟಾಯ್‌ (೧೮೨೮-೧೯೧೦) ಅವರನ್ನು ಹೋಲಿಸಿ ಒಂದು ಗಹನವಾದ ಪುಸ್ತಕ ಬರೆದಿದ್ದಾರೆ. ಟಾಲ್‌ಸ್ಟಾಯ್‌ ಗಾಂಧಿಗೆ ಬಹಳ ಹತ್ತಿರವಾದಂಥವರು. ಟಾಲ್‌ಸ್ಟಾಯ್‌ ಕೂಡಾ ಗಾಂಧಿಯಂತೆಯೇ ಸರಳತೆಯನ್ನು ಹುಡುಕಿಕೊಂಡು ಹೊರಟವರು. ಅವರು ಸರಳತೆಯನ್ನು ಎಷ್ಟು ಹುಡುಕಿದರೆಂದರೆ ಅವರ ಯಾಸ್ನಾ ಪೊಲ್ಯಾನಾದ ಮನೆಯನ್ನು ನೋಡಿದರೆ ತಿಳಿಯುತ್ತದೆ. ಅವರದು ಅರಮನೆಯಂತಹ ದೊಡ್ಡ ಮನೆ. ಈ ಮನೆಯಲ್ಲಿ ಅವರು ತಾನು ಮಲಗುವ ಕೋಣೆಯನ್ನು, ತನ್ನ ಉಡುಗೆ-ತೊಡುಗೆಗಳನ್ನು, ತನ್ನ ಆಹಾರವನ್ನು ಬದಲಿಸುತ್ತ ಹೋದರು; ಕೊನೆಗೆ ಕೆಲಸದ ಆಳುಗಳಿಗೆಂದು ಇದ್ದ ಕೋಣೆಯೊಂದರಲ್ಲಿ ಅವರು ಮಲಗಲು ಶುರುಮಾಡಿದರು. ರೈತ ಪೋಷಾಕು ತೊಟ್ಟು ಓಡಾಡಿದರು. ಸಸ್ಯಾಹಾರಿಯಾದರು. ತನ್ನ ಘನವಂತಳೂ, ಆಕರ್ಷಕ ಸುಂದರಿಯೂ, ಸೂಕ್ಷ್ಮಜ್ಞ ಓದುಗಳೂ ಆದ ಹೆಂಡತಿಗೆ ಕರತಕವೂ, ಗುರು ಪಟ್ಟದಲ್ಲಿ ಉನ್ನತವಾಗಲು ಪೆದ್ದು ಶಿಷ್ಯ ಬಳಗದ ಹೊಗಳಿಕೆ ಗಳಿಸುವ ಆತ್ಮ ಘಾತುಕ ಹುನ್ನಾರವೂ ಎನ್ನಿಸಿದ ಈ ಸರಳತೆಯ ಹುಡುಕಾಟದಲ್ಲಿ ಅವರು ತಮ್ಮ ಹೆಂಡತಿಯ ಜೊತೆಗೆ ಗುದ್ದಾಡಿ ಬಳಲಿದರು. ಬದಲಾಗದ ಶ್ರೀಮಂತಿಕೆಯ ಆಸೆಯ ಹೆಂಡತಿಯಿಂದ ಬೇಸತ್ತರು. ತನಗೆ ಶರಣಾದ ಮೊಂಡು ಹಠದ ಶಿಷ್ಯಕೋಟಿಯ ನಿರೀಕ್ಷಣೆಗಳಿಂದ ಜಡ್ಡಾದರು. ಕೊನೆ ಮಗಳು ಮಾತ್ರ ಅಪ್ಪನ ಕಡೆ; ಉಳಿದ ಮಕ್ಕಳು, ಮುಖ್ಯವಾಗಿ ಗಂಡು ಮಕ್ಕಳು ಅಮ್ಮನ ಕಡೆ. ಟಾಲ್‌ಸ್ಟಾಯ್ ಹೆಂಡತಿಗೆ ಗಂಡನ ಎಲ್ಲ ಗುಟ್ಟುಗಳೂ ತೀಟೆ ತೇವಲುಗಳು ಗೊತ್ತಿದ್ದವು. ಅಲ್ಲವೆ? ಬೆತ್ತಲಲ್ಲಿ ತನಗೆ ತಿಳಿದವನು ಅವನು ಅಲ್ಲವೆ? ತನಗಿಂತ ಹದಿನೈದು ವರ್ಷ  ಕಿರಿಯವಳು, ತನ್ನೆಲ್ಲ ಬರವಣಿಗೆಯನ್ನು ಅಚ್ಚುಕಟ್ಟು ಮಾಡಿ ಪ್ರಕಟಿಸುತ್ತ ಇದ್ದ ಹೆಂಡತಿಗೆ ತನ್ನೆಲ್ಲ ದೌರ್ಬಲ್ಯಗಳನ್ನು ಗಂಡನಾಗಿ ಹೇಳಿಕೊಂಡಿದ್ದರು. ‘ನೀನು ಎಲ್ಲರಗಿಂತ ಹೆಚ್ಚಿನ ಲೋಲುಪನಾದ ಕಾಮುಕ. ನಿನ್ನ ಸೃಜನಶಕ್ತಿಯ ಮೂಲ ಈ ನಿನ್ನ ಅದಮ್ಯ ಕಾಮದಲ್ಲೇ ಇರುವುದು; ನಿನ್ನ ಸರಳತೆಯ ಸೋಗಿನಲ್ಲಿ ಅಲ್ಲ ಎಂದು ಅವಳು ಮೂದಲಿಸುತ್ತ ಇದ್ದಳು. ಅವನ ಭಾವನಾ ಪರವಶ ಶಿಷ್ಯರಿಗೆ ಗೊತ್ತಾಗುವ ಹಾಗೆ. ಅಷ್ಟೇ ಅಲ್ಲ; ಟಾಲ್‌ಸ್ಟಾಯ್‌ ಒಬ್ಬ ಸಂತನಿರಬಹುದೆನೋ ಎಂಬ ರಷ್ಯನ್ನರ ನಂಬಿಕೆ ಗಾಢವಾಗುತ್ತಿದ್ದ ಕಾಲದಲ್ಲಿ ಆಕೆ ಗರ್ಭಿಣಿಯಾಗುತ್ತ ಇದ್ದಳು. ಟಾಲ್‌ಸ್ಟಾಯ್‌ಗಿಂತ ಕಿರಿಯವಳಾದ ಈ ಮೋಹದ ಹೆಂಡತಿಯೂ ಸಾಮಾನ್ಯಳೇನೂ ಅಲ್ಲ, ಅವಳದೇ ಆದ ಸತ್ಯಪ್ರತಿಪಾದನೆ ಅವಳ ಹಠದಲ್ಲಿ ಇದೆ. ಇವಳು ಕೂಡ ಅವನ ಒಳಗಿನ ಇನ್ನೊಂದು ಸತ್ಯ. ಅನ್ನಾ ಕರೇನಿನಾದಂತಹ ಕೃತಿಯನ್ನು ಸೃಷ್ಟಿಸಿದವನಿಗೆ ತನ್ನ ಒಳಗೇ ಗೊತ್ತಿದ್ದ ಸತ್ಯ.

ತನ್ನ ಸಂಸಾರ ಜೀವನದ ಶ್ರೀಮಂತಿಕೆಯನ್ನು, ಆಕರ್ಷಣೆಗಳನ್ನು ತಾಳಲಾರದೆ ಕೊನೆಯಲ್ಲಿ ಮುದುಕ ಟಾಲ್‌ಸ್ಟಾಯ್‌ ತನ್ನ ೮೨ನೇ ವಯಸ್ಸಿನಲ್ಲಿ ತಮ್ಮ ಹೆಂಡತಿಯನ್ನು ಬಿಟ್ಟು, ಅರಮನೆಯಂಥ ಮನೆಯನ್ನು ಬಿಟ್ಟು, ಆಸ್ತಿಯನ್ನು ತ್ಯಜಿಸಿ ರೈತರ ಪೋಷಾಕು ತೊಟ್ಟು ಹೊರಬೀಳುತ್ತಾರೆ. ಇದು ಪುರಾತನರ ಪದ್ಧತಿಯಂತೆ ಸನ್ಯಾಸಕ್ಕಿಂತ ಮುಂಚಿನ ತನ್ನ ವಾನಪ್ರಸ್ಥವೆಂದು ಹೆಂಡತಿಗೊಂದು ಕಾಗದ ಬರೆದಿಟ್ಟು ಬೆಳಗಾಗುವ ಮುಂಚೆ ಮನೆ ತೊರೆಯುತ್ತಾರೆ. ಎಲ್ಲೆಲ್ಲೋ ಅಲೆದು ಅಲೆದು ಕೊನೆಗೆ ರೈತ ಪೋಷಾಕಿನಲ್ಲಿ ಒಂದು ರೈಲ್ವೇ ಸ್ಟೇಷನ್‌‌ನಲ್ಲಿ ಕುಳಿತು ರೈಲ್‌ಗಾಗಿ ಕಾಯುತ್ತಿದ್ದಾಗ ಖಾಯಿಲೆ ಬೀಳುತ್ತಾರೆ, ಜಗತ್ತಿನಲ್ಲಿ ಖ್ಯಾತನಾಗಿದ್ದ ಸಾಹಿತಿ ಒಬ್ಬ ಬೀದಿಹೋಕನಂತೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಲ್ಲೂ ಅವರ ಹೆಂಡತಿ ಟಾಲ್‌ಸ್ಟಾಯ್‌ ಅವರನ್ನ ನೋಡುವುದಕ್ಕೆ ಬಯಸುತ್ತಾಳೆ. ‘ಎಲ್ಲವನ್ನೂ ಬಿಟ್ಟು ಮುಕ್ತವಾಗಿ ಅವರು ಸಾಯ್ತಾ ಇದ್ದಾರೆ, ನೀನು ಹೋಗುವುದು ಬೇಡ’ ಎಂದು ಯಾರು ಹೇಳಿದರೂ ಅವಳು ಕೇಳುವುದಿಲ್ಲ. ತನಗೆ ಗೊತ್ತಿರುವ ಅವನು ಮಾತ್ರ ನಿಜವೆಂದು ಜಗತ್ತಿಗೆ ಸಾರಲು ಅವಳು ಅಂಜುವುದಿಲ್ಲ. ಆಕೆ ಎಷ್ಟು ಹಠದ ಹೆಂಗಸರೆಂದರೆ ಟಾಲ್‌ಸ್ಟಾಯ್‌ ಮಲಗಿದ್ದ ರೂಮಿನ ಹೊರಗೆ ನಿಂತು ಅಲ್ಲಿಂದ ಹೊರಬರುತ್ತ ಇರುವಳೆಂದು ಭಾಸವಾಗುವಂತೆ ಫೋಟೋ ತೆಗೆಸಿಕೊಳ್ಳುತ್ತಾಳೆಂದು ಓದಿದ ನೆನಪು ನನಗೆ.

ಅದು ಮಾಧ್ಯಮದವರು ಮೇಲೆ ಬರುತ್ತಿದ್ದ ಕಾಲ. ಅಮೆರಿಕಾದಿಂದ ಕ್ಯಾಮೆರಾ ಹಿಡಿದುಕೊಂಡು ಈ ದೃಶ್ಯವನ್ನು ಸೆರೆಹಿಡಿಯಲು ಮಾಧ್ಯಮದವರು ಬಂದಿರುತ್ತಾರೆ…. ಜಗತ್ತಿನ ಒಬ್ಬ ದೊಡ್ಡ ಸಾಹಿತಿ ಹೀಗೆ ತನ್ನ ಇನ್ನೊಂದು ಸಾಧ್ಯತೆಯ ಹುಡುಕಾಟದಲ್ಲಿ ಸತ್ತ.

ಈ ಟಾಲ್‌ಸ್ಟಾಯ್‌ ಗಾಂಧಿಗೆ ಪ್ರಿಯವಾದರು. ಗಾಂಧಿ ಟಾಲ್‌ಸ್ಟಾಯ್‌ಗೂ ಪ್ರಿಯವಾದರು. ದಕ್ಷಿಣ ಆಫ್ರಿಕಾದಲ್ಲಿ ತನ್ನ ಪ್ರಯೋಗಗಳನ್ನು ಗಾಂಧಿ ‘ಟಾಲ್‌ಸ್ಟಾಯ್‌ ಫಾರ್ಮ್‌’ ಎಂದೇ ಶುರು ಮಾಡಿದರು.

ಟಾಲ್‌ಸ್ಟಾಯ್‌ ತಾನು ಮೆಚ್ಚುವ ಗಾಂಧಿ ಬಗ್ಗೆ ಒಂದು ಮಾತು ಬರೆಯುತ್ತಾರೆ : ‘ಈತನ ರಾಷ್ಟ್ರಪ್ರೇಮ ಮಾತ್ರ ಅವನ ಸರಳತೆ ಸತ್ಯಗಳ ಹುಡುಕಾಟದಲ್ಲಿ ಅಡ್ಡಿಯಾಗಬಹುದು’ ಎಂದು. ಆದರೆ ಗಾಂಧಿಗೆ ಸಂತತನದ ಹುಡುಕಾಟ ಟಾಯ್‌ಸ್ಟಾಯ್‌‌ದಕ್ಕಿಂತ ಭಿನ್ನವಾದ್ದು. ರಾಜಕಾರಣದ ಕೊಳಚೆ ಪ್ರದೇಶದಲ್ಲಿ ಇದ್ದು ಅವರು ಸಂತರಾದ್ದು. ಅದೇ ಅವರ ವಿಶೇಷ; ಟಾಲ್‌ಸ್ಟಾಯ್‌ರಂತೆ ಎಲ್ಲವನ್ನು ಕಳಚಿಕೊಂಡ ನಿರ್ಲಿಪ್ತತೆಯಲ್ಲಿ ಅಲ್ಲ. ನಮ್ಮ ದೇಶವನ್ನು ದಾಸ್ಯದಿಂದ ಬಿಡುಗಡೆ ಮಾಡುವ ಮೂಲಕವೇ ಗಾಂಧಿಗೆ ಸತ್ಯದ ದರ್ಶನವಾಗಬೇಕು. ಟಾಲ್‌ಸ್ಟಾಯ್‌ ಏನನ್ನು ಮಾಡುವುದಕ್ಕೆ ಲೆನಿನ್ ಬೆಳೆಯುತ್ತ ಇದ್ದ ರಷ್ಯದಲ್ಲಿ ಸಾಧ್ಯವಾಗಲಿಲ್ಲವೋ ಗಾಂಧಿ ಅದನ್ನು ಸಾದಿಸಿದರು. ಅಥವಾ ಸಾದಿಸಲು ಯತ್ನಿಸಿ ಟಾಲ್‌ಸ್ಟಾಯ್‌ರಂತೆಯೇ ಸೋತು ಸತ್ತು ಗೆದ್ದರು.

ಟಾಲ್‌ಸ್ಟಾಯ್‌ ಎಂಥಾ ದೊಡ್ಡ ಲೇಖಕ; ಆದರೂ ತಾನು ಬರೆದಿದ್ದೆಲ್ಲಾ ಪೊಳ್ಳು ಎಂದು ನಮಗೆ ಅದು ನಿಜವೆನಿಸದಂತೆ, ಹೆಂಡತಿಗೆ ನಿಜವೆನ್ನಿಸದಂತೆ ಭಾವಿಸಿದ್ದರು. ಆಮೇಲೆ ಜನಸಾಮಾನ್ಯರಿಗೆ ಗೊತ್ತಾಗಲಿ ಎಂದು ಸರಳವಾದ ನೀತಿ ಕಥೆಗಳನ್ನು ಬರೆದರು. ಶೇಕ್ಸ್‌ಪಿಯರ್‌‌ನನ್ನು ಜನ ಜರೆದರು. ಆದರೆ ನಿಜದಲ್ಲಿ ಟಾಲ್‌ಸ್ಟಾಯ್‌ ಕಿಂಗಲಿಯರ್‌ನಂತಹ ಮನುಷ್ಯನೇ ಎಂದು ಆರ್ವೆಲ್‌ ಟೀಕಿಸಿದರು.

ಗಾಂಧಿಯನ್ನು ಮೆಚ್ಚಿಕೊಂಡಿರುವ ಮಾರ್ಟಿನ್‌ ಗ್ರೀನ್ ಕೂಡಾ ಒಂದು ಮಾತನ್ನು ಹೇಳುತ್ತಾರೆ. ‘ಗಾಂಧಿಯಲ್ಲಿ ಒಂದು ಅಪಾಯವಿದೆ. ಅದೇನೆಂದರೆ–ಒಬ್ಬ ಇಂಟಲೆಕ್ಚುಯಲ್‌ ಆಗುವುದಕ್ಕೆ ಗಾಂಧಿಯಲ್ಲಿ ಅವಕಾಶವಿಲ್ಲ. ವೈಚಾರಿಕತೆಯಲ್ಲೆ ಖುಷಿ ಕಾಣುವುದೂ ಒಂದು ಬಗೆಯ ಲೋಲುಪತೆಯೇ. ಆದರೆ ಸಹಸ್ರ ಬುದ್ದೆಯವರು ಈ ಪುಸ್ತಕದಲ್ಲಿ ಗಾಂಧಿಯ ಒಳಗಿದ್ದ ಒಬ್ಬ ಅಸಾಮಾನ್ಯ ಧೀಮಂತನನ್ನು ಕಂಡಿದ್ದಾರೆ. ಎಲ್ಲಿ ಇಂಟಲೆಕ್ಚು ಯಾಲಿಟಿಯ ಮೇಲಾಟಗಲಿಗೆ ಅವಕಾಶವಿಲ್ಲವೆಂಬಂತೆ ತೋರುತ್ತದೋ ಅಲ್ಲಿ ಇಂಟಲೆಕ್ಚುಯಾಲಿಟಿ, ಅಂದರೆ ತಾಜಾ ಆದ ಇಂಟಲೆಕ್ಚುಯಾಲಿಟಿ, ಇರುವುದನ್ನು ಅವರು ಕಂಡಿದ್ದಾರೆ. ಸಹಸ್ರ ಬುದ್ಧೆಯನ್ನು ಓದುತ್ತ ಇದ್ದಂತೆ ಇದನ್ನು ಮಾರ್ಟಿನ್‌ ಗ್ರೀನ್‌ ಗಮನಕ್ಕೆ ತರಬೇಕೆಂದು ನನಗೆ ಅನ್ನಿಸಿತು.

ಗಾಂಧೀಜಿಯವರು ತಮ್ಮ ನೈತಿಕತೆಯನ್ನು ಸಾಮಾನ್ಯ ಜೀವನದಿಂದ ಪಡೆಯುತ್ತಾರೆ ಎಂದೆ. ಅದಕ್ಕಿಂತ ಹೆಚ್ಚಾಗಿ ಜೀವನದ ಸಾಮಾನ್ಯತೆಯಿಂದ ಪಡೆಯುತ್ತಾರೆ ಎನ್ನುವುದು ಹೆಚ್ಚು ಸಮಂಜಸ. ವಿಜ್ಞಾನದ ಬಗ್ಗೆ ಅವರ ಅಭಿಪ್ರಾಯ ಹೀಗಿದೆ : ‘ಈ ಅಣುವನ್ನು ಒಡೆಯೋದಕ್ಕೆ ಸಾಧ್ಯ’ ಎಂದು ಹೇಳಿದವನು ಐನ್‌ಸ್ಟೀನ್‌. ಅಣುವನ್ನು ಒಡೆದಾಗ E=mc2ನಷ್ಟು ದೊಡ್ಡ ಪ್ರಮಾಣದ ಶಕ್ತಿ ಉತ್ಪಾದನೆಯಾಗುತ್ತದೆ ಎಂದು ಹೇಳಿದನಲ್ಲಾ ಅದು ವಿಜ್ಞಾನ; ಸತ್ಯದ ನಿರ್ಲಿಪ್ತ ತಿಳುವಳಿಕೆ. ಆದರೆ ಒಡೆಯಬಹುದಾದ ಅಣುವಿನಿಂದ ಬಾಂಬ್ ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟ ವಿಜ್ಞಾನವನ್ನು ತಂತ್ರಜ್ಞಾನಕ್ಕೆ ಅಳವಡಿಸಿದವನು ರಾಬರ್ಟ್ ಓಪನ್‌ ಹೈಮರ್‌. ಅವನಂಥವರು ವಿಚಾರದಲ್ಲಿ ಆಸಕ್ತರು ಮಾತ್ರವಲ್ಲ; ವಿಲಾಸಿಗಳು. ಅಣು ಸ್ಫೋಟವನ್ನು ಕಣ್ಣಾರೆ ಕಂಡು (ಕಾಣದೆ ಇರಲು ಸಾಧ್ಯವೇ?) ವಿಸ್ಮಯದಲ್ಲಿ ಅವನು ಗೀತೆಯನ್ನು ಉದ್ಧರಿಸುತ್ತಾನೆ- ವಿಶ್ವರೂಪ ದರ್ಶನವಾದಾಗ ಅರ್ಜುನನಿಗೆ ಸಹಸ್ರ ಸೂರ್ಯರನ್ನು ಕಂಡಹಾಗೆ ಆಯಿತು ಎನ್ನುವ ಮಾತನ್ನು. ಅದು ಜಗತ್ತನ್ನೇ ನಾಶಮಾಡಬಲ್ಲ ಸ್ಫೋಟ ಎಂದು ಗೊತ್ತಿದ್ದರೂ ಅವನು ಅದನ್ನು ಯಾಕೆ ತಯಾರು ಮಾಡಿದ? ಇದಕ್ಕೆ ಒಬ್ಬರು ಹೇಳುತ್ತಾರೆ : ‘ವಿಜ್ಞಾನಿಗೆ ಇಂಥದ್ದೊಂದು ವಿಷಯ ನಿಜ ಎಂದು ಗೊತ್ತಾದ ಮೇಲೆ ಅದು ಎಷ್ಟು ನಿಜ ಎಂದು ತಿಳಿಯದೇ ಸುಮ್ಮನಿರಲಾರ’. ಗಾಂಧಿ ಇದನ್ನೇ, ಈ ಕುತೂಹಲವನ್ನೇ, ‘ಅಸುರಿ’ ಎನ್ನುತ್ತಾರೆ.

ಅಷ್ಟೇ ಅಲ್ಲ; ಈ ಬಾಂಬ್ ಸ್ಫೋಟವಾದ ಮೇಲೆ ಅಮೇರಿಕನ್ನರು ಜಪಾನಿನಲ್ಲಿ ಎರಡು ಆಸ್ಪತ್ರೆಗಳನ್ನು ಮಾಡಿದರಂತೆ. ರೇಡಿಯೇಷನ್‌ನಿಂದ ನರಳುವವರನ್ನು ಗುಣ ಮಾಡುವುದಕ್ಕಲ್ಲವಂತೆ ಆ ಆಸ್ಪತ್ರೆಗಳನ್ನು ಮಾಡಿದ್ದು; ಈ ವಿಕಿರಣದ ಪರಿಣಾಮಕ್ಕೆ ಒಳಗಾದವರ ಚರ್ಯೆ ಹೇಗಿರುತ್ತದೆ ಎನ್ನುವುದನ್ನು ತಿಳುಯುವುದಕ್ಕಂತೆ. ವಿಜ್ಞಾನ ಅಸುರಿಯಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ನಮ್ಮೆಲ್ಲರಲ್ಲೂ ಅಡಗಿರುವ ಜೈನ ತಿಳುವಳಿಕೆಯಾದ ‘ಸಂಕಲ್ಪ ಹಿಂಸೆ’ ಈ ಅಸುರಿತನದ ಮೂಲದಲ್ಲಿ ಇರುವುದು.

ನಮ್ಮ ದೇಶದಲ್ಲೂ ಬಾಂಬ್ ಸ್ಫೊಟವಾಯ್ತು. ನಮ್ಮ ಕವಿಗಳಾದ ಪ್ರಧಾನಿಗಳು ಅದೇನೋ ‘ಬುದ್ಧಸ್ಮಿತ’ ಎಂದು ಹೇಳಿದರು. ನಮ್ಮ ವಿಜ್ಞಾನಿಗಳು ಖುಷಿಯಾಗಿಬಿಟ್ಟರು-ನಾವೂ ಒಂದು ಬಾಂಬ್ ಮಾಡಿಬಿಟ್ಟೆವು ಎಂದು. ಆದರೆ ಅದರಿಂದ ಮೂರು ಕಾಸಿನ ತಿಳುವಳಿಕೆ ಏನೂ ಹೆಚ್ಚಾಗಲಿಲ್ಲ.

ಆದರೂ ಸ್ಫೋಟ ಮಾಡಬೇಕು. ಅದನ್ನು ನೋಡಬೇಕು. ಅದು ಚಾಲ್ತಿಗೆ ಬಂದ ನಂತರ ಅದರ ಪರಿಣಾಮಗಳನ್ನು ನೋಡಬೇಕು. ಅದರಿಂದ ಸಾವಿರಾರು ಜನ ಸಾಯುತ್ತಾ ಇದ್ದರೆ ಅವರು ಹೇಗೆ ಸಾಯುತ್ತಾರೆ ಎನ್ನುವುದನ್ನು ನೋಡಬೇಕು. ಇದು ಹಿಂಸೆ; ಇದು ವಿಜ್ಞಾನ ಹುಟ್ಟು ಹಾಕುವಂತಹ ಹಿಂಸೆ. ಜೈನರು ತಿಳಿಯುವಂತೆ ಇದು ನಾನು ಮೇಲೆ ಹೇಳಿದ ಸಂಕಲ್ಪ ಹಿಂಸೆ. ಹಿಪ್ಪಿ ಕೂದಲಿನ, ಮಗುವಿನ ಮುಗ್ಧತೆಯ ನಮ್ಮ  ಸಸ್ಯಾಹಾರಿ ರಾಷ್ಟ್ರಪತಿಯಲ್ಲೂ ಕಾಣಿಸಿಕೊಳ್ಳುವ ಹಿಂಸೆ. ಬಾಂಬ್ ಮಾಡಿದರೆ ಸಾಕೆ? ಅದನ್ನು ರವಾನಿಸುವ ಕ್ಷಿಪಣಿಗಳನ್ನೂ ನಾವು ತಯಾರಿಸುವುದು ಅಗತ್ಯವಲ್ಲವೇ? ಎಂದವರು ನಮ್ಮ ಮೆಚ್ಚುಗೆಯ ಅಬ್ದುಲ್ ಕಲಾಮರು. ಕೈಯಾರೆ ಒಂದು ಇಲಿಯನ್ನು ಕೊಲ್ಲಲು ಒಲ್ಲದವರು.

ಹಿಂಸೆಯ ಮಾತು ಬಂದಾಗ ನೆನಪಾಗುತ್ತದೆ. ನಮ್ಮಲ್ಲಿ ಹಿಂಸೆ ಹೇಗೆ ಸೆಲಬರೇಟ್ ಆಗುತ್ತೆ ನೋಡಿ. ನಮ್ಮ ಮಾಧ್ಯಮಗಳಿಗೆ ಹಿಂಸೆ ಹಬ್ಬ. ಒಂದು ಅಪಘಾತ ಅಂದರೆ ಕೇವಲ ವರದಿ ಇರುವುದಿಲ್ಲ. ಸತ್ತವನ ಬುರುಡೆ ಒಡೆದಿರುವುದು, ರಕ್ತ ಎಲ್ಲದರ ಚಿತ್ರವನ್ನೂ ಹಾಕುತ್ತಾರೆ. ಏನಾದರೂ ಇಂಥದ್ದೊಂದು ಆಯ್ತು ಎಂದರೆ ಕ್ಯಾಮೆರಾಮನ್‌ಗೆ ಇರುವ ದೊಡ್ಡ ಅವಕಾಶ ಅದು.

ನಾನು ಇಂಗ್ಲಂಡ್‌ದಲ್ಲಿ ಓದಿದವನು. ಇಂಗ್ಲಂಡ್‌ ಬಗ್ಗೆ ಬಹಳ ಗೌರವ ಇತ್ತು. ಮೊನ್ನೆ ಬಿಬಿಸಿಯಲ್ಲಿ ಸದ್ದಾಂ ಹುಸೇನನ್ನು ಹಿಡಿದಿದ್ದ ಚಿತ್ರವನ್ನು ನೋಡಿದೆ. ಪ್ರತಿಯೊಂದು ನಿಮಿಷವೂ ಮತ್ತೆ ಮತ್ತೆ ಅದನ್ನೇ ತೋರಿಸುತ್ತಿದ್ದರು. ಆ ಸದ್ದಾಂ ಹುಸೇನ್ ಗಡ್ಡ ಬಿಟ್ಟಿದ್ದಾನೆ ಮುಖವೆಲ್ಲಾ ಕೊಳಕಾಗಿದೆ. ರೋಗಿಷ್ಟನಾಗಿ ಕಾಣುತ್ತಾನೆ. ಒಬ್ಬ ಡಾಕ್ಟರ್‌ ಟಾರ್ಚ್ ಹಿಡಿದು ಅವನ ಬಾಯನ್ನು ಅಗಲಿಸಿ ನೋಡುತ್ತಾನೆ. ಸದ್ದಾಂ ಬಾಯಿ ತೆಗೆಯುತ್ತಾನೆ, ಮುಚ್ಚುತ್ತಾನೆ. ನಿಮಿಷ ನಿಮಿಷಕ್ಕೂ ಅದನ್ನೇ ತೋರಿಸುತ್ತಿದ್ದಾರೆ! ವಲ್ಗಾರಿಟಿ ಎನ್ನುವುದು ಜಗತ್ತಿನಲ್ಲಿ ಇದ್ದರೆ ಅದಿರುವುದು ಪಾಶ್ಚಾತ್ಯ ದೇಶದಲ್ಲಿ.

ನಮ್ಮ ದೇಶದಲ್ಲಿ ಇಲ್ಲ ಎಂದಲ್ಲ. ಕೂಡಲೇ ನನಗೆ ನೆನಪಾಗುವುದು ಭಾಸ ದುರ್ಯೋಧನನನ್ನು ಹಿರೋ ಆಗಿ ನೋಡುತ್ತಾನೆ. ರಾಮಾಯಣದಲ್ಲೂ ಸಹಾ ಕವಿಗಳು ರಾವಣನನ್ನು ಜ್ವಾಜ್ವಲ್ಯಮಾನವಾದ ಅನೇಕ ಸಾಧ್ಯತೆಗಳ ವ್ಯಕತಿಯನ್ನಾಗಿ ನೋಡುತ್ತಾರೆ. ಕುವೆಂಪು ರಾಮಾಯಣದಲ್ಲಿ ರಾವಣ ಕೊನೆಗೆ ಶಿಶುವಾಗಿ ಸೀತೆಯನ್ನು ತಾಯಿಯಾಗಿ ಪಡೆಯುತ್ತಾನೆ. ಇದು ನಮ್ಮ ಪರಂಪರೆ: ನೀನು ಯಾರ ವಿರುದ್ಧ ಯುದ್ಧ ಮಾಡಬೇಕೋ ಆ ಪ್ರತಿಸ್ಪರ್ಧಿಯ ವಿರುದ್ಧ ಗೌರವದಿಂದ ಯುದ್ಧ ಮಾಡಬೇಕು ಎನ್ನುವುದು ಇಲ್ಲಿಯ ನೀತಿ. ಈ ನೀತಿಯನ್ನು ಭೀಮ ಮೀರಿದನೆಂಬುದು ಒಂದು ಕಳಂಕವೇ ನಮಗೆ.

ಇವತ್ತು ಯಾರನ್ನು ಕೇಳಿದರೂ ಸದ್ದಾಂ ಬಹಳ ಕ್ರೂರಿ ಎನ್ನುತ್ತಾರೆ. ಕ್ರೂರಿ ಹೌದು.  ತನ್ನ ಕಲ್ಪನೆಯ ಬಲಿಷ್ಠ ರಾಷ್ಟ್ರ ಕಟ್ಟುವುದಕ್ಕೆ ಹಿಂಸೆ  ಉಪಾಯ ಎಂದು ಸದ್ದಾಂ ಎಲ್ಲರಂತೆ (ಲೆನಿನ್‌ರಂತೆ, ಮಾವೋರಂತೆ, ನೆಪೋಲಿಯನ್‌ನಂತೆ) ಭಾವಿಸಿದ್ದ. ಪಶ್ಚಿಮ ರಾಷ್ಟ್ರಗಳು ಅರಬರ ನಾಡನ್ನು ಹರಿದು ಹಂಚಿ ಇದು ಕುರ್ಡ್ಸ್‌ರಿಗೆ, ಇದು ಶಿಯಾರಿಗೆ, ಇದು ಸುನ್ನಿಗಳಿಗೆ ಎಂದು ಅಪ್ಪಣೆ ಮಾಡಿ, ಪ್ಯಾಲಿಸ್ತೇನರಿಂದ ಅವರು ಬದುಕುತ್ತ ಇದ್ದ ನಾಡನ್ನು ಕಸಿದು ಇಸ್ರೇಲ್ ಮಾಡಿ ಈ ಜನ ಸಮುದಾಯ ಎಂದೂ ಒಟ್ಟಾಗದಂತೆ ಮಾಡಿದರು. (ನಮಗೂ ಬ್ರಿಟಿಷರು ಹಾಗೆ ಮಾಡಿದರು) ಸದ್ದಾಂ ಈ ಎಲ್ಲರನ್ನೂ ಒಟ್ಟಾಗಿಟ್ಟುಕೊಳ್ಳಲು, ಹಲವರನ್ನು ಕೊಂದ, ಕೆಲವರನ್ನು ಬಡಿದ ಅಥವಾ ಎತ್ತಿದ, ಒಟ್ಟಿನಲ್ಲಿ ಹಿಂಸೆಯನ್ನು ಬಳಸಿದ. ಜನರಲ್ಲಿ ಸಾಕಷ್ಟು ಭಯೋತ್ಪಾದನೆ ಮಾಡಿದರೆ ಅವರು ವಿಧೇಯರಾಗಿರುತ್ತಾರೆ ಎಂಬುದು ಅವನ ನಂಬಿಕೆ. ನಮ್ಮಲ್ಲಿ ಕೆಲವರು ಈ ಹೊತ್ತು ಅದನ್ನೇ ಹೇಳುತ್ತಿದ್ದೇವೆ–ಮುಸ್ಲಿಂರಿಗೆ ಮತ್ತು ಕ್ರಿಶ್ಚನ್ನರಿಗೆ ಸಾಕಷ್ಟು ಭಯ ಹುಟ್ಟಿಸಿದರೆ ಅವರು ನಮ್ಮ ದೇಶಕ್ಕೆ ವಿಧೇಯರಾಗಿರುತ್ತಾರೆ ಎಂದು.

*

ಊಳಿದವರಿಗೆ ನೀತಿ ಹೇಳಲು ಪಾಸ್ಚಾತ್ಯ ದೇಶಗಳಿಗೆ ಯಾವ ಹಕ್ಕು ಇದೆ? ಯೂರೋಪಿನ ಜನರು ಅಮೆರಿಕಾಕ್ಕೆ ಹೋಗಿ ಅಲ್ಲಿನ ಬುಡಕಟ್ಟು ಜನರನ್ನು ಸಂಪೂರ್ಣ ನಾಶ ಮಾಡಿದರು. ಇವತ್ತು ಅಮೆರಿಕಾದ ಬುಡಕಟ್ಟು ಜನರು ಹೆಂಡ ಕುಡಿದು ಕೆಲವು ರಿಸರ್ವೇಷನ್‌ ಕ್ಯಾಂಪ್‌ಗಳಲ್ಲಿ ಪ್ರಯೋಜನಕ್ಕೆ ಬಾರದ ರೀತಿಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಬುಡಕಟ್ಟು ಜನರು ಸಂಪೂರ್ಣವಾಗಿ ನಾಶಮಾಗಿದ್ದಾರೆ. ನಾವು ಅಧಿಕ ಸಂಖ್ಯೆಯಲ್ಲಿದ್ದ ಕಾರಣ ಬ್ರಿಟಿಷರು ನಮ್ಮನ್ನು ಸಂಪೂರ್ಣ ನಾಶ ಮಾಡಲು ಸಾಧ್ಯವಾಗಲಿಲ್ಲವೆನೋ! ಇಲ್ಲದಿದ್ದರೆ ಅಮೆರಿಕನ್ನರೋ ಇನ್ನಾರೋ ಈ ದೇಶವನ್ನು ಆಳಿಬಿಡುತ್ತಿದ್ದರು.

ಇಡೀ ಜಗತ್ತನ್ನು ಒಂದು ಮುಷ್ಠಿಯಲ್ಲಿಟ್ಟುಕೊಳ್ಳಬೇಕೆಂಬ ಐರೋಪ್ಯ ಜನಾಂಗದ ಆಸೆ ಇಂದು ಸಫಲವಾಗುತ್ತ ಇರುವಂತೆ ಕಾಣುತ್ತಿದೆ. ನಮ್ಮ ಸಹಕಾರದಿಂದಲೇ ಹೇಗೆಂದರೆ ನಮ್ಮ ಬಹಳ ಸುಂದರವಾದ ಹುಡುಗಿಯರು ಅಮೆರಿಕಾದವರು ಮಾತನಾಡುವ ರೀತಿಯನ್ನು ಕಲಿತು ರಾತ್ರಿಯಲ್ಲಿ ಯಾವುದೋ ಒಂದು ಶಿಬಿರದಲ್ಲಿ ಯಾವನೋ ಎಲ್ಲಿಂದಲೋ ಫೋನ್ ಮಾಡಿದರೆ ಅಮೆರಿಕಾದ ವಾಯ್ಸ್‌ನಲ್ಲೆ ಉತ್ತರ ಕೊಡುತ್ತಾರೆ. ಅದನ್ನೇ ನಾವು ಭಾಗ್ಯ ಎಂದು ತಿಳಿದುಕೊಂಡಿದ್ದೇವೆ. ಈಗ ನಮ್ಮ ಕಾಲೇಜು ಶಿಕ್ಷಣ ಸಂಸ್ಥೆಗಳೂ ಇಂಥಾ ‘ವಾಯ್ಸ್ಸ’ ನನ್ನು ಸೃಷ್ಟಿ ಮಾಡುವ ಕಡೆ ಇದೆ.

ಇದೂ ಒಂದು ರೀತಿಯ ಹಿಂಸೆಯೇ. ರಾಗಿ ಮುದ್ದೆ ಸೊಪ್ಪಿನ ಸಾರಿನಲ್ಲಿ ಸುಖ ಕಾಣುತ್ತಿದ್ದ ನಾಗರಿಕತೆಯನ್ನೇ ನಾಶಮಾಡಿದ ನಂತರ ಭಾರತದ ಜನರನ್ನು ಗೆಲ್ಲಬಹುದು ಎನ್ನುವುದು ನಮ್ಮನ್ನು ಆಳುವ ಶ್ರೀಮಂತರಿಗೆ ಗೊತ್ತಿದೆ. ಕುಡಿಯಲು ನೀರಿಲ್ಲದಾಗ, ಕೋಕಾಕೋಲಾ ಬಾಯಾರಿದವರ ವರವಾಗಿ ಕಾಣುತ್ತದೆ ಎಂದು ಅವರಿಗೆ ಗೊತ್ತಿದೆ.

ಅದು ಗಾಂಧೀಜಿಯವರಿಗೆ ಆಡಳಿತ ಹೇರುವ ಹಿಂಸೆ ಎಂದು ಗೊತ್ತಿತ್ತು. ಆದ್ದರಿಂದ ಈ ರೀತಿಯ ಹಿಂಸೆಯನ್ನು ಸಾಧ್ಯ ಮಾಡುವ ವಿಜ್ಞಾನಕ್ಕೆ, ಟೆಕ್ನಾಲಜಿಗೆ ಅವರು ವಿರೋಧಿಯಾದರು. ಆದರೆ ಗಾಂಧೀಜಿ ವಿಜ್ಞಾನ ವಿರೋಧಿಯಲ್ಲ. ಯಾಕೆಂದರೆ ಚರಕವೂ ಒಂದು ಯಂತ್ರ ಎಂದು ತಿಳಿದಿದ್ದರು.

ಇದು ಕಥೆಯಲ್ಲ ಎಲ್ಲೋ ಓದಿದ್ದು. ಸಿಂಗರ‍ ಎನ್ನುವವನು ಒಂದು ಹೊಲಿಗೆ ಯಂತ್ರವನ್ನು ಕಂಡು ಹಿಡಿದ. ಯಾಕೆಂದರೆ ಅವನ ಹೆಂಡತಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಅವಳು ಸೂಜಿಗೆ ದಾರ ಪೋಣಿಸಲು ಪಡುತ್ತಿದ್ದ ಕಷ್ಟವನ್ನು ಕಂಡು ಒಂದು ಹೊಲಿಗೆ ಯಂತ್ರ ಇರಬೇಕು’ ಎಂದರಂತೆ. ನಾನು ಒಂದೊಂದು ಸಾರಿ ತಮಾಷೆಯಾಗಿ ಹೇಳುತ್ತೇನೆ: ‘ಕಂಪ್ಯೂಟರ್‌ ಸೌಲಭ್ಯವನ್ನು ನೋಡಿದ್ದರೆ ಗಾಂಧಿ ಪ್ರತಿಯೊಂದು ಮನೆಯಲ್ಲೂ ಕಂಪ್ಯೂಟರ್‌ ಇರಬೇಕು ಎಂದು ಹೇಳ್ತಿದ್ದರೋ ಏನೋ’ ಎಂದು (ಪುಟ್ಟಸ್ವಾಮಿಯವರು  ಆರಂಭದಲ್ಲಿ ಗಾಂಧೀ ಮತ್ತು ನೆಹರೂ ಅವರಿಗೆ ನಡೆದ ಒಂದು ಮುಖ್ಯವಾದ ಪತ್ರವನ್ನು ಪ್ರಕಟಿಸಿ ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ). ಗಾಂಧಿಯವರು ಯಂತ್ರಕ್ಕೆ ವಿರೋಧಿಯಲ್ಲ.  ಆದರೆ ಯಂತ್ರದಿಂದ ಹುಟ್ಟುವ ಹಿಂಸೆ ಮತ್ತು ಅಧಿಕಾರದ ಹೇರಿಕೆಗೆ ವಿರೋಧಿಯಾಗಿದ್ದರು. ಅದಕ್ಕಾಗಿಯೇ ಪ್ರತಿಯೊಬ್ಬರೂ ಕಾಯಕವನ್ನು ಮಾಡಬೇಕು ಎಂದು, ಟಾಲ್‌ಸ್ಟಾಯ್‌ ರಂತೆಯೇ ಹೇಳುತ್ತಿದ್ದರು. ಅಹಿಂಸೆ ಸತ್ಯ ಆಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶರೀರಶ್ರಮ, ಆಸ್ವಾದ, ಸರ್ವತ್ರ ಭಯವರ್ಜನ, ಸರ್ವಧರ್ಮ ಸಮಭಾವ, ಸ್ವದೇಶಿ, ಸ್ಪರ್ಶ ಭಾವನಾ – ಇವನ್ನು ಅವರು ಮಂತ್ರ ಮಾಡಿಕೊಂಡಿದ್ದರು.

ಗಾಂಧಿ ಹೇಳುವ ಆಸ್ವಾದದ ಬಗ್ಗೆ ಒಂದು ಮಾತು: ರುಚಿಗಳನ್ನು ಬೆಳೆಸಿಕೊಂಡ ಕಾರಣದಿಂದಲೇ ಈ ದಿನ ಕಾಡೆಲ್ಲಾ ಟೀ ಗಾರ್ಡನ್ ಮತ್ತು ಕಾಫಿ ತೋಟ ಆಗಿವೆ. ಆದರೆ ನಮ್ಮ ನಾಗರಿಕತೆ ಇರುವುದು ರುಚಿಗಳನ್ನು ಸೂಕ್ಷ್ಮಗೊಳಿಸುವ ವಿಧಾನದಲ್ಲಿ. ನಮ್ಮ ಎಲ್ಲಾ ಮಾರಾಟಗಳೂ ಸಾಧ್ಯವಾಗುವುದೂ ರುಚಿಗಳನ್ನು ಬೆಳೆಸಿಕೊಳ್ಳುತ್ತಾ ಹೋಗುವುದರಲ್ಲಿ. ಇದರಲ್ಲಿ ನಾವೆಲ್ಲರು ಪಾಲುದಾರರೇ. ಇಷ್ಟಪಡುವ ಪಾಲುದಾರರೆ. ಇದನ್ನು ತಾತ್ವಿಕವಾಗಿ ವಿರೋಧಿಸಿದರೂ ನಿಜದಲ್ಲಿ ಅದನ್ನೇ ಇಷ್ಟಪಡುತ್ತೇವೆ ಎಂಬ ವಿಷಾದವಾದರು ನಮ್ಮಲ್ಲಿ ಕಾಣಿಸಿಕೊಂಡರೆ ನಾವು ಕೊನೆಯ ಪಕ್ಷ ಮನುಷ್ಯ ಮಾತ್ರದವರು.

ಗಾಂಧಿ ಮತ್ತು ಟಾಲ್‌ಸ್ಟಾಯ್‌ ಈ ಆಸೆಯಲ್ಲೇ ಹಿಂಸೆಯ ಉಗಮ ಕಂಡರು. ಇಂಥಾ ಹಿಂಸೆಯನ್ನು ಕಂಡ ಗಾಂಧೀ ವಿಜ್ಞಾನ ವಿರೋಧಿಯಂತೆ ಕಂಡರು ಅದರ ಹಿಂಸೆಗೆ ವಿರೋಧವಾಗಿದ್ದರೆ ಹೊರತು. ಜೀವಪರವಾದ ವಿಜ್ಞಾನ ತಂತ್ರಜ್ಞಾನಕ್ಕೆ ವಿರೋಧವಾಗಿರಲಿಲ್ಲ. ಈಗ ಬೇಕಾಗಿರುವುದು ಪರ್ಯಾಯ ತಂತ್ರಜ್ಞಾನ; ಮಧ್ಯಮ ಮಾರ್ಗಿಯ ತಂತ್ರಜ್ಞಾನ. ಬಹುಶಃ ಗಾಂಧಿಯ ಪ್ರೇರಣೆಯಿಂದ ಜೀವಪರ ವಿಜ್ಞಾನವೂ ಪರ್ಯಾಯ ತಂತ್ರಜ್ಞಾನವೂ ಹುಟ್ಟಬಹುದು. ಆ ದೆಸೆಯಲ್ಲಿ ಈ ಪುಸ್ತಕ ಗಾಂಧಿಯ ನೈತಿಕ ಭಾಷೆಯಲ್ಲಿ ಇಲ್ಲದ, ಶಾಸ್ತ್ರೀಯವಾಗಿ ಗಾಂಧಿಯ ಬಗ್ಗೆ ಬರೆದಿರುವ ಬಹಳ ಗಹನವಾದ ಪುಸ್ತಕ.

*

(೨೩, ಡಿಸೆಂಬರ್೨೦೦೩ರಲ್ಲಿ ಸುನಿಲ್ಸಹಸ್ರ ಬುದ್ಧೇ ಅವರಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಗಳು’ (ಅನುವಾದ : ಕೆ. ಪುಟ್ಟಸ್ವಾಮಿ. ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ) ಪುಸ್ತಕವನ್ನು ಬಿಡುಗಡೆ ಮಾಡಿ ಆಡಿದ ಮಾತುಗಳ ಸಾರಾಂಶ ರೂಪ. ಮಾತಿನಿಂದ ಬರಹಕ್ಕೆ ಕೆ. ಪುಟ್ಟಸ್ವಾಮಿ)