ಡಾ. ಗುರುಪ್ರಸಾದ್‌ ಕಾಗಿನೆಲೆಯವರ ‘ಬಿಳಿಯ ಚಾದರ’ವನ್ನು ಎರಡು ಸಾರಿ ಓದಿ ನಾನು ಮಾಡಿಕೊಂಡ ಟಿಪ್ಪಣಿಗಳನ್ನು ಇಲ್ಲಿ ಗುರುತಿಸುತ್ತಿದ್ದೇನೆ. ಈ ಮಾತುಗಳನ್ನು ಕಾದಂಬರಿಯೋದುವ ಮುನ್ನ ಓದಿಕೊಳ್ಳುವುದಕ್ಕಿಂತ ಓದಿಯಾದ ಮೇಲೆ ಗಮನಿಸಿದರೆ ಓದುಗನಿಗೆ ಉಪಯುಕ್ತವಾಗಬಹುದು. ತನ್ನ ಓದಿನ ಜೊತೆ ಇನ್ನೊಬ್ಬನ ಓದನ್ನು ಹೋಲಿಸಿಕೊಳ್ಳುವುದರಲ್ಲಿ ಖುಷಿಯಿರುತ್ತದೆ. ಇದು ‘ಹೌದು’ ಎನ್ನುವ ಖುಷಿಯೆಷ್ಟು, ಅಷ್ಟೇ ‘ಹೌದು… ಆದರೆ…’ ಎನ್ನುವ ಅನುಮಾನದ ರಸಿಕತೆಯ ಮರು ಓದಿನ ವ್ಯಾಯಾಮವೂ ಆಗಬಹುದು.

ಕಾದಂಬರಿಯ ಮೊದಲ ಪುಟದಿಂದಲೇ ಪ್ರಾರಂಭಿಸುವೆ. ಮೊದಲ ಪುಟದಲ್ಲಿ ನನಗೆ ಎದುರಾಗುವ ಇಂಗ್ಲಿಷ್ಗೆ ಪರ್ಯಾಯವಾದ ಕನ್ನಡ ಶಬ್ದಗಳೇ, ಮಾತಿನ ಅರ್ಥದ ಜೊತೆಗೆ ಮಾತಿನ ಧಾಟಿಯೊಂದನ್ನು ಸೂಚಿಸಿತು. ಈ ಧಾಟಿಯಲ್ಲಿ ವಿನೋದವಿದೆ. ‘ಪ್ರಾಣಪಾಲಕರು’ ‘ಧನ್ವಂತರಿ’ ‘ಪಾಳಯ’–ಈ ಶಬ್ದಗಳು ಇಂಗ್ಲಿಷ್ ಕಥನದಲ್ಲಿ ಕೇವಲ ವೃತ್ತಿ ಸೂಚಕ, ವಸ್ತು ಸೂಚಕ ಶಬ್ದಗಳು. ಕನ್ನಡದಲ್ಲಿ ಒಂದು ಅತಿರೇಕಾಭಾಸದ ‘ಡಿಕನ್‌ಸ್ಟ್ರಕ್ಷನ್‌’ ಆಗುತ್ತದೆ. ರಾಮಾನುಜನ್‌ರ ವಚನ ಭಾಷಾಮತರದಲ್ಲಿ ‘ಕೂಡಲ ಸಂಗಮದೇವ’, Lord of the Meeting rivers ಆಗಿ, ಕೇಳಿಸಿಕೊಂಡ ಪರಿಚಿತ ಶಬ್ದ ಹೊಸದಾಗಿ ಕಾಣಿಸುವ ಅರ್ಥವಾಗುವ ಹಾಗೆ. ಕಾಗಿನೆಲೆ ತಾನು ಮಾಡುವ ಭಾಷಾಪರಿವರ್ತನೆಯನ್ನು ಗಮನಿಸಿದಂತೆಯೇ ಇದೆ. ಬಂಗಾರದ ಕೂದಲಿನಾಕೆ ತನ್ನ ಮುದ್ದು ತುಟಿಗಳನ್ನು ಇನ್ನಷ್ಟು ಕೆಂಪಾಗಿಸಿಕೊಂಡು ಆವುಡು ಕಚ್ಚುತ್ತಾ ಮಲಗಿದ್ದ ಸತ್ತವನೊಬ್ಬನ ಎದೆಯನ್ನು ತಿದಿಯಂತೆ ಒತ್ತುವಾಗ ಡಾ. ಶ್ರೀಧರನ ಕಣ್ಣುಗಳಲ್ಲಿ (ಹೊಸದಾಗಿ ಕೆಲಸಕ್ಕೆ ಸೇರಿದ ‘ಧನ್ವಂತ್ರಿ’) ಅವಳ ಮೊಲೆಗಳು ಕುಣಿಯುತ್ತವೆ. ಇದನ್ನು ನೋಡಿ ಕಾಮುಕನಾಗುವ ಡಾ. ಶ್ರೀಧರ, ಈ ಜೀವ ಉಳಿಸುವ ಪಾಲಯದ ‘ನಾಟಕ’ವನ್ನು ಗುಪ್ತವಾಗಿ ಅನುಮಾನಿಸುವವನೂ ಆದ್ದರಿಂದ, ತನ್ನಲ್ಲಿ ಹುಟ್ಟಿದ ಚಪಲದ ಬಗ್ಗೆ ‘ಛೇ ತಪ್ಪು’ ಎಂದು ಕನ್ನಡದಲ್ಲನಿಸಿದರೆ ‘ಯ್ಯ ರೈಟ್’ ಎಂದು ಇಂಗ್ಲಿಷನಲ್ಲಿ ಎನಿಸಿತು ಎಂದು ಕೊಳ್ಳುತ್ತಾನೆ.

-ಕಾದಂಬರಿಯುದ್ಧಕ್ಕೂ ಇಂಗ್ಲಿಷ್‌ನಲ್ಲಿ ಜರುಗುವ ಘಟನೆಗಳ ಪ್ರಪಂಚವನ್ನು ಕನ್ನಡಿಸಿಕೊಂಡು ಮಾತನಾಡುವಾಗ ಹುಟ್ಟಿಕೊಳ್ಳುವ ಹೊಸ ಭಾವಾರ್ಥ ಇಡೀ ಕಾದಂಬರಿಯ ಅರ್ಥದ ಪದರುಗಳನ್ನು (ನೇಯ್ಗೆಯನ್ನು) ಸಮೃದ್ಧಗೊಳಿಸುವಂತಿದೆ.

*

ಇಲ್ಲೇ ಹೇಳಬೇಕಾದ ಇನ್ನೊಂದು ಮಾತು: ಕಾರಂತರ ಕಾದಂಬರಿಗಳಲ್ಲಿ ತುಳುವಿನಲ್ಲಿ ಸಂಭವಿಸುವ ಪ್ರಪಂಚವಿದೆ. ಚಿತ್ತಾಲ, ಜಯಂತ ಕಾಣ್ಕಿಣಿ, ವಿವೇಕ ಶಾನಭಾಗ ಮತ್ತು ಇನ್ನೂ ಹಲವು ಸಮರ್ಥರು ಬರೆಯುತ್ತಿರುವ ಕಾದಂಬರಿಗಳಲ್ಲಿ ಕೊಂಕಣಿ ಮಾತನಾಡುವವರ ಪ್ರಪಂಚವಿದೆ. ಆದರೆ ಈ ಪ್ರಪಂಚಗಳು ಕನ್ನಡದಲ್ಲಿ  ಬೆರೆತು ಹರಿಯುತ್ತವೆ. ಇಂಗ್ಲಿಷ್ ಭಾಷೆಯಲ್ಲಿ, ಅದೂ ಅಮೆರಿಕಾದಲ್ಲಿ, ಜರುಗುವ ವಿದ್ಯಮಾನಗಳು ಕನ್ನಡಗೊಳ್ಳುವಾಗ, ಆಗುತ್ತಿರುವುದು ಹೊಸ ರೂಪ ಪಡೆದು ನಮಗಿದಿರಾಗುತ್ತದೆ. ಇದು ಈ ಎರಡು ಭಾಷೆಗಳ ನಡುವಿನ ಸಂಸ್ಕೃತಿಗಳ ಅಂತರದಿಂದಾಗಿ ಹುಟ್ಟಿಕೊಂಡ ‘ಅನುವಾದ’ ಅಂದರೆ ಒಮದಕ್ಕೊಮದು ಅನುವಾಗುವ, ಹತ್ತಿರವಾಗುವ ಸಮಸ್ಯೆಯೂ ಹೌದು. ಡಾ. ಕಾಗಿನೆಲೆಯವರು ಓ ಇಬ್ಬಗೆಯ ಭಾವ ಪ್ರಪಂಚಗಳನ್ನು ಒಮ್ಮೆಲೇ ಪಡೆಯಲು ನಡೆಸುವ ಪ್ರಯತ್ನ ವೈಚಾರಿಕವಾಗಿ ಮಾತ್ರವಲ್ಲದೆ, ಭಾಷಾತ್ಮಕವಾಗಿಯೂ ಗಮನಾರ್ಹವೆಂದುಕೊಂಡು ಈ ಕಾದಂಬರಿಯನ್ನು ನಾನು ಓದುತ್ತಾ ಹೋಗುತ್ತಿದ್ದೇನೆ.

*

ಡಾ.ಶ್ರೀಧರನಿಗೆ ಈ ಅಮೆರಿಕನ್ ಆಸ್ಪತ್ರೆಯ ಪ್ರಪಂಚ ಹೊಸದು. ಸತ್ತವರ, ಸಾಯುವವರ ಕಾನೂನು ಬದ್ಧವಾದ ನಿಯಮ ನಿರ್ಣತವಾದ ತಪಾಸಣೆಗಳ ‘ನಾಟಕ’ದಲ್ಲಿ ಪಾತ್ರಧಾರಿಯಾದ ಶ್ರೀಧರ ಸ್ಮೃತಿ ತಪ್ಪಿ ಬೀಳುತ್ತಾನೆ. ಇಂಟರ್‌ಶಿಪ್ ಸುಲಭವಲ್ಲ ಎಂದು ಪ್ರಾಣಪಾಲಕಿ ಅವನಿಗೆ ಸಮಾಧಾನ ಹೇಳುತ್ತಾಳೆ. ಹೀಗೆ ಎಚ್ಚರ ತಪ್ಪಿ ಬಿದ್ದ ಶ್ರೀಧರ, ಕ್ರಮೇಣ ಈ ಅಮೆರಿಕನ್‌ ಪ್ರಾಣಪಾಲನೆಯ ‘ನಾಟಕ’ಕ್ಕೆ ಹೊಂದಿಕೊಳ್ಳುತ್ತಾ ‘ಪ್ರಬುದ್ಧ’ನಾಗುವುದೇ, ಭಾರತದ ರಿಯಾಲಿಟಿಗಳಿಂದ ದೂರವಾಗುತ್ತ ಹೋಗುವುದೇ ಕಾದಂಬರಿಯ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಅಮೆರಿಕನ್‌ ಪ್ರಾಣಪಾಲಕಿ ಹೇಳುವಂತೆ ಅವನು ಕಲಿಯುತ್ತ ಹೋಗಬೇಕಾದ್ದು ‘ವ್ಯವಹಾರಸ್ಥನ ನಾಜೂಕು’ ಮತ್ತು ‘ಸ್ಥಿತಪ್ರಜ್ಞತ್ವ’. (ಅವಳು ಉಪಯೋಗಿಸುವ ಇಂಗ್ಲಿಷ್ ಪದಕ್ಕೆ  ಈ ಪದದ ಧ್ವನಿಯಿರಲಾರದು. ಕೇಳಿಸಿಕೊಳ್ಳುವ ಶ್ರೀಧರ ತನ್ನ ಭಾರತೀಯತೆಯಿಂದ ಕನ್ನಡದಲ್ಲಿ ಪಡೆಯುವ ಧ್ವನಿ ಇದು).

*

‘ಆಗಮ-ಉಗಮ’ ಎನ್ನುವ ಚಾಪ್ಟರ್‌ನಲ್ಲಿ ಶ್ರೀಧರನ ಅಪ್ಪನ ಕಥನವಿದೆ. ಇಡೀ ಕಾದಂಬರಿಗೆ ಇದೊಂದು ಕೌಂಟರ್‌‌ ಪಾಯಿಂಟ್ ನಾಗಮಂಗಲ ಇವನ ಅಪ್ಪ ಮಾಧವರಾಯರು ವೀರ ಮಾಧ್ವರು. ಹರಿವಾಯುಗಳ ಪ್ರೇರಣಾನುಸಾರ ಮಂಡ್ಯ ತಾಲೂಕಿನ ಹೆಣ್ಣನ್ನು ಮದುವೆಯಾದರು. ಇಲ್ಲಿರುವ ಕಥನ ಕ್ರಮದ ವ್ಯಂಗ್ಯವನ್ನು ಐರನಿಯನ್ನು ಗಮನಿಸಬೇಕು. ಮಾಧವರಾಯರು ತನ್ನ ಮಾತಾ ಪಿತೃಗಳಿಗಿಂತಲೂ ಹೆಚ್ಚು ನಿಷ್ಠರಾದ ಮಡಿವಂತ ಮಾಧ್ವರು. ಅವರ ಕಥನವಿರುವುದು ಅದರಿಂದ  ಹೊರಬಂದು ಬಚಾವಾದ, ಆದರೆ ಇನ್ನೊಂದು ಬಂದೀಖಾನೆಗೆ ಸೇರಿದ ಮಗನ ಕಣ್ಣಿನಿಂದ.

ಈ ಮಾಧವರಾಯರಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಅವರೇ ಈ ಕಾದಂಬರಿಯ ಮುಖ್ಯ ಪಾತ್ರಗಳಾದ ರಶ್ಮಿ ಮತ್ತು ಶ್ರೀಧರ. ಹೆರಿಗೆ ಮಾಡಿಸಿದ ಸ್ಥಳೀಯ ಡಾಕ್ಟರು ಅವರ ಅರ್ಧಂಬರ್ಧ ಜ್ಞಾನದಲ್ಲಿ ಮೊದಲು ಹುಟ್ಟಿದ ರಶ್ಮಿ, ನಂತರ ಹುಟ್ಟಿದ ಶ್ರೀಧರನ ರಕ್ತವನ್ನು ಕುಡಿದಿದ್ದಾಳೆ ಎಂಬರ್ಥ ಬರುವ ತಪ್ಪು ವಿಶ್ಲೇಷಣೆ ಕೊಟ್ಟು, ಅದನ್ನು ತಪ್ಪೆಂದು ತಿಳಿದ ಮೇಲೂ ಅದರಿಂದ ಹೊರಬರಲಾರದೆ ಈ ಇಬ್ಬರೂ ಮಕ್ಕಳಲ್ಲೂ ಒಂದು ಗಾಢವಾದ ಪೈಪೋಟಿಗೂ ಅಸೂಯೆಗೂ ಕಾರಣರಾಗುತ್ತಾರೆ.

ಶ್ರೀಧರ ಮತ್ತು ರಶ್ಮಿ ಆಧುನಿಕರಾಗುವ ಎರಡು ಭಿನ್ನ ದಾರಿಗಳನ್ನು, ಭಿನ್ನರಾಗಿ ಇರಬೇಕೆಂಬ ದೃಷ್ಟಿಯಿಂದಲೇ, ಆಯ್ದುಕೊಳ್ಳುತ್ತಾರೆ. ರಶ್ಮಿ ‘ತೊಡೆ’  ಮೇಲಿಗನ ಮೋಹದಲ್ಲಿ ‘ಮೃದು ತಂತ್ರಿ’ಯಾಗುತ್ತಾಳೆ. (ಈ ಕನ್ನಡ ಪರ್ಯಾಯಗಳನ್ನು ಗಮನಿಸಿ) ಮಾಧವರಾಯರ ನುಡಿಯ ಲೋಕದಲ್ಲಿ ಈ ಮಕ್ಕಳು ಆಧುನಿಕರಾಗುತ್ತ ಹೋಗುವುದರ ಸ್ವಾರಸ್ಯವಾದ ವಿವರಗಳನ್ನು ಗಮನಿಸಿ (ಪುಟ ೨೪) ರಶ್ಮಿ ಪ್ರಬುದ್ಧಳಾಗುವ ಬೆಳವಣಿಗೆಗಳ ಘಟ್ಟವನ್ನು ಅವಳ ಸೋದರ ಗಮನಿಸುತ್ತಾನೆ. ಶ್ರೀಧರ ರಶ್ಮಿಯಷ್ಟು ಚುರುಕಾಗಿರದೆ ಕಷ್ಟಪಟ್ಟು ಬೆಳೆಯುತ್ತಾನೆ. ಈ ಸಾಂಸಾರಿಕ ವಿವರಗಳು ಸಾಂಸಾರಿಕವಲ್ಲದ ಈ ಕಾದಂಬರಿಯಲ್ಲಿ ಯಥೋಚಿತವಾಗಿ ಬರುತ್ತವೆ.

ಮೆಡಿಕಲ್ ವಿದ್ಯಾಭ್ಯಾಸದ ಬಗ್ಗೆಯೂ ಕಾದಂಬರಿಯಲ್ಲಿ ಒಳನೋಟಗಳಿವೆ. ಡಾ. ಕಾಗಿನೆಲೆ ಸ್ವತಃ ವೈದ್ಯರಾದ್ದರಿಂದ ತಮ್ಮ ಲೋಕದ ಸಮರ್ಥ ಒಳವಿಮರ್ಶಕರಾಗಿ ಬರೆಯುತ್ತಾರೆ. ಶ್ರೀಧರ ಮೆಡಿಕಲ್ ಮುಗಿಸುತ್ತಿದ್ದಂತೆ ಅವನ ಮಡಿವಂತ ಅಪ್ಪನ ಜೊತೆ ಅವನ ಸಂಭಾಷಣೆಯನ್ನು ನಾವು ಗಮನಿಸುತ್ತೇವೆ. ಮಧ್ಯಮ ವರ್ಗದ ಕುಟುಂಬದಲ್ಲಿ ಮೇಲಕ್ಕೆ  ಬರುವ ಮಕ್ಕಳಲ್ಲಿ ಬೆಳೆಯುವ ಅಪರಾಧಿ ಪ್ರಜ್ಞೆಯ ಒಳನೋಟ ಇಲ್ಲಿ ನಮಗೆ ಸಿಗುತ್ತದೆ. (ಪುಟ.೩೩-೩೪). ಅಪ್ಪನ ಹೃದಯದ ಸ್ಥಿತಿಯೇ ಮಗನಿಗೆ  ಮೊದಲು ಒದಗುವ ಪರೀಕ್ಷೆ. ಮಡಿವಂತ ಮಾಧವರಾಯರು (ಅಂಗಾರ, ಜುಬ್ಬ, ಕಚ್ಚೆಪಂಚೆಯಲ್ಲಿ ಮೆಡಿಕಲ್ ಕಾಲೇಜಿನ ವಾತಾವರಣದಲ್ಲಿ ಅಸಂಬದ್ಧವೆನ್ನಿಸುವಂತೆ ಕಾಣುವವರು) ಶ್ರೀಧರ ಅನಿವಾರ್ಯವಾಗಿ ಕಳೆದುಕೊಳ್ಳಬೇಕಾದ ಅವನ ಭೂತಕಾಲವಾಗುತ್ತಾರೆ. ಎರಡು ಲೋಕಗಳೇ ಬೇರೆ. ಅಪ್ಪ ಮಗನಿಗೆ ಅಂಟಿಕೊಳ್ಳುವುದಿಲ್ಲ. ಅಮೆರಿಕಾಕ್ಕೆ ಅವನನ್ನು ಕಳಿಸಲು ತಾನು ಉಳಿಸಿದ್ದ ಹಣವನ್ನೆಲ್ಲ ಕೊಡಲು ಮುಂದಾಗುತ್ತಾರೆ. ಈ ಭೇಟಿ ಭಾವೋದ್ವೇಗ ಹುಟ್ಟಿಸದೆ ತಣ್ಣನೆಯ ಬರವಣಿಗೆಯಾಗಿ ಬಂದಿದೆ. ಆದರೆ ಮನಸ್ಸನ್ನು ಕಲಕುವಂತೆ ಇದೆ.

*

ಮುಂದಿನ ಕಾದಂಬರಿಯೆಲ್ಲವೂ ಹೆಚ್ಚಾಗಿ ಅಮೆರಿಕನ್‌ ಮೆಡಿಕಲ್‌ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಮನಮುಟ್ಟುವಂತಹ ವಿವರಗಳಲ್ಲಿ ವಿನೋದಾತ್ಮಕವಾಗಿ ನೋಡುವ ಬರವಣಿಗೆಯಾಗಿದೆ. ಇದು ಕನ್ನಡಕ್ಕೆ ಹೊಸತು. ನಗರ ಪ್ರಜ್ಞೆಯೆಂದರೆ ಬೊಂಬಾಯಿ ಬೆಂಗಳೂರುಗಳಿಗೆ ಸೀಮಿತವಾಗಿದ್ದ ಕನ್ನಡದ ಬರವಣಿಗೆ ಇಲ್ಲಿ ಅಮೆರಿಕಾವನ್ನೇ ತನ್ನ ಕ್ಯಾನ್‌ವಾಸ್‌ ಮಾಡಿಕೊಂಡಿದೆ.

ಹೊಸಲೋಕ ನಮ್ಮ ಭೌಗೋಳಿಕ ಸೀಮಿತವಾದ ಕನ್ನಡದೊಳಕ್ಕೆ ಬರುವಾಗ ಆ ಲೋಕಕ್ಕೆ ಸಾಮಾನ್ಯವಾದ್ದನ್ನು, ಸಾಧಾರಣವಾದ್ದನ್ನು ವಿಶೇಷವೆಂಬಂತೆ ನೋಡುತ್ತದೆ. ಅಥವಾ ಕಣ್ಣಿಗೆ ಹೊಡೆಯುವುದನ್ನೇ  ಕಾಣಿಸುತ್ತದೆ. ಈ ಎರಡು ಪ್ರಕ್ರಿಯೆಗಳು ಈ ಕಾದಂಬರಿಯಲ್ಲಿವೆ.

ಪಾಳಯಕ್ಕೆ ಟ್ರೀಟ್‌ಮೆಂಟ್‌ಗೆಂದು ಬರುವ ಪಾತ್ರಗಳನ್ನು ಗಮನಿಸಿ. ‘ಡೆತ್‌ ಟು ಅಮೆರಿಕ’ ಎಂದು ಕೂಗಿಕೊಳ್ಳುವ ಅರೆಹುಚ್ಚ ಲಕ್ಕಿಅಲಿ. ಅಂಟಿ ಅಮರಿಕನ್ ಕುಡುಕ. ಪಾಕಿಸ್ತಾನದ ಧನ್ವಂತ್ರಿ ಆಖ್ತರ್‌, ಆದರೆ ಅಮೆರಿಕನ್‌ ಪೌರ. ‘ದನಕ್ಕೆ ಮೂರು ಬಾರಿ ನಮಾಜು ಮಾಡಿ ಶುಕ್ರವಾರ ಕಣ್ಣಿಗೆ ಕಾಡಿಗೆಯಿಟ್ಟು, ಪಾಳಯದ ಸಲಿಂಗಿ ರೋಗಿಗಳಿಗೆ ರೋಮಾಂಚನವನ್ನೂ, ಕೆಫೆಟೇರಿಯಾದಲ್ಲಿ ‘ಹಲಾಲ್’ ಮಾಂಸವನ್ನು ಕೇಳಿ, ಅಲ್ಲಿನ ಅಡುಗೆಯವರಿಗೆ ಕೆಂಡದಂತಾ ಸಿಟ್ಟನ್ನೂ ಏಕಕಾಲದಲ್ಲಿ ತರಿಸಿದವ. ಬರುವ ಇನ್ನೊಬ್ಬ ರೋಗಿ ಮಿಸೆಸ್‌ ಬೆನೆಟ್‌. ಇನ್ನೊಬ್ಬ ಧನ್ವಂತ್ರಿ ರಾಘವೇಂದ್ರ ಘೂಗೆ. (ಮರೆಯಲಾಗದ ವಿಲಕ್ಷಣ ಮನುಷ್ಯ ಇವನು).

ಅಮೆರಿಕನ್ ಲಾಭಾನ್ವೇಷಣೆಯ ಮಾರ್ಕೆಟ್ಟಿನ ಒಂದು ಸಂಸ್ಥೆಯಾದ ಈ ರೋಗಿಗಳ ಪಾಳಯದಲ್ಲಿ ನಡೆಯುವ ಚಿಕಿತ್ಸೆಯ ಕ್ರಮ. ಅದರ ಹಿಂದಿರುವ ಹವಣಿಕೆಗಳು ಲೇಖಕರ ವಿನೋದಕ್ಕೂ ವ್ಯಂಗ್ಯಕ್ಕೂ ಧರಳವಾದ ಅವಕಾಶಗಳನ್ನು ಒದಗಿಸುತ್ತವೆ. ಧನ್ವಂತ್ರಿ ಘೂಗೆ ಸಿನಿಕತನದ ಕಣ್ಣಲ್ಲಿ ಕಾಣುವ ರೋಗನಿಧಾನದ ವರ್ಣನೆ ಗಮನಿಸಬೇಕು. ಗುಳಿಗೆಗಳನ್ನು ಪೂರಕವಾಗಿ, ವಿರೋಧವಾಗಿ ನುಂಗಿಸುವ ಅಲೊಪತಿಯ ನಿಷ್ಠುರವಾದ ವಿಮರ್ಶೆ ಇಲ್ಲಿದೆ (ಪುಟ.೪೮) ಇಂಗ್ಲಿಷ್‌ನಲ್ಲಿ ಬರೆದಿದ್ದರ ಸಾಮಾನ್ಯ ಸತ್ಯವೆಂದು ಭಾಸವಾಗಬಹುದಾದ್ದು ಕನ್ನಡದಲ್ಲಿ ಬರೆಯುವುದರಿಂದಲೇ ಹಾಸ್ಯಾಸ್ಪದವೆಂದು ಕಾಣತೊಡಗುತ್ತದೆ. ಇದೇ ಒಂದು (ಪುಟ.೪೯) ನಮಗೆ ಅಲೋಪಥಿಕ್ ವೈದ್ಯಲೋಕವನ್ನು ಹೊಸದಾಗಿ ಕಾಣುವ ಬಗೆಯೂ ಆಗುತ್ತದೆ.

*

‘ಮೃದುಯಂತ್ರಿ’ಯಾಗುವ ರಶ್ಮಿ ಬರೆಯುವ ಪದ್ಯಗಳು, ಅವಳ ಒಳನೋಟ ಮೊದಮೊದಲು ನಮಗೆ ಕೃತಕವೆನಿಸುತ್ತವೆ. ಆದರೆ ಮುಂದೆ ಅವಳ ಮೂಲಕ ಮತ್ತು ನಾಗೇಶನ ಮೂಲಕ ಅಮೆರಿಕಾದ ಇನ್ನೊಂದು ದೊಡ್ಡ ಆಕರ್ಷಣೆಯಾದ ಮೃದುತಮತ್ರಿ ಇಂಕ್ ಕಣಿವೆಯ ಲೋಕ ತೆರೆದುಕೊಳ್ಲುತ್ತದೆ.

ಇಡೀ ಕಾದಂಬರಿಯ ಎರಡು ಮುಖ್ಯ ಪಾತಳಿಗಳು ಇವು. ವೈದ್ಯ ವ್ಯವಸ್ಥೆ ಮತ್ತು ಸಾಫ್ಟ್‌ವೇರ್‌ ಜಗತ್ತು. ಭಾರತದ ಸದ್ಯದ ದೊಡ್ಡ ಭ್ರಮೆಗಳಾದ ಈ ಎರಡು ಸಂಸ್ಥೆಗಳನ್ನು ಡಾ. ಕಾಗಿನೆಲೆಯವರು ಪ್ರಥಮಬಾರಿಗೆ  ಅತ್ಯಂತ ನಿಷ್ಠುರವಾದ ಒಳನೋಟಗಳಿಂದ ಚಿತ್ರಿಸಿದ್ದಾರೆ.  ಈ ಭಾಗಗಳು ನನಗೆ ಬಹುಮುಖ್ಯವೆನ್ನಿಸಿವೆ. ಆಪ್ರಿಕನ್‌ ಚಿನುವಾ ಆಚಿಬೆ ಹೇಳುವಂತೆ  ಕಾದಂಬರಿಕಾರ ಇಲ್ಲಿ ಟೀಚರ್‌ ಆಗುತ್ತಾನೆ;  ಈ ಸಾಫ್ಟ್‌ವೇರ್‌ ಲೋಕದ ಡ್ಯಾನ್ ದಾಮೋದರ ನಾಗೇಶನಿಗೆ ಹೇಳುವುದು ಇಷ್ಟು! ತಮ್ಮ ಕೆಲಸವೆಂದರೆ ‘ಕಾಳಿನ ಬೋಳಿ ಮಾಡೋದು, ಬೋಳಿನ ಕಾಳಿ ಮಾಡೋದು’, (ಇವನು ಹೈದರಾಬಾದ್‌ದಲ್ಲಿ ದಾಮೋದರ ರೆಡ್ಡಿ ಎಂಬ ಹೆಸರಿನವನಾಗಿದ್ದವನು) ಇಂಡಿಯಾದಿಂದ ಅಮೆರಿಕಾಕ್ಕೆ ರಫ್ತಾಗುವ ಮೃದು ಯಂತ್ರಿಗಳ ಕಂಟ್ರಾಕ್ಟರ‍‌‌ ಈತ. (ನೋಡಿ ಪುಟ ೫೯, ೬೦) ಇದೊಂದು ಕಾಲ ದೇಶಗಳ ಹಂಗಿಲ್ಲದ, ಅಬ್ಸರ್ಡ್ ಲೋಕ. ನಾಗೇಶ ಒಮ್ಮೆ ‘ರೆಡ್ಡಿ ಇನ್‌ಕ್‌’ ನಿಂದ ಏನೋ ಕೊಳ್ಳಲೆಂದು ಎಲ್ಲಿಗೋ ಫೋನು ಮಾಡಿ ಕ್ರೆಡಿಟ್‌ ಕಾರ್ಡಿನ ನಂಬರನ್ನು ಕೊಟ್ಟಾಗ ಫೋನು ಮಾಡಿದಾಗ ಅದು ಜಯನಗರದ ಕಾಲ್‌ಸೆಂಟರ್‌ಗೆ ಹೋಗಿತ್ತೆಂದು ಹಿಂದೆ ಬರುತ್ತಿದ್ದ ‘ಉದಯ ವಾರ್ತೆ‍ಗಳ’ ಹಿನ್ನೆಲೆ ಸಂಗೀತದಿಂದ ಕಂಡು ಹಿಡಿದಿದ್ದ’ (೬೦) ಇನ್ನೂರು ಜನರಿರುವ ಒಂದು ಡೈರಿ ಫಾರಂನಲ್ಲಿ ಫಿಲಿಪ್ಸ್‌ ಎಂಬ ನಿರ್ಜನ ಪ್ರದೇಶದಲ್ಲಿ ನಾಗೇಶ ಮೃದುಯಂತ್ರಿಯಾಗಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ತನ್ನಷ್ಟೇ ವಯಸ್ಸಿನ ಹೆಣ್ಣು ಮಕ್ಕಳಿಗೆ ಮೊಮ್ಮಕ್ಕಳಾಗಿರುವುದನ್ನು ಕಾಣುತ್ತಾನೆ. ನಾಗೇಶ ಇಂಡಿಯನ್‌ ಎಂದರೆ ಅವನ ಬಾಸ್‌ ಈತನನ್ನು ರೆಡ್‌ ಇಂಡಿಯನ್‌ ಎಂದುಕೊಳ್ಳುತ್ತಾನೆ. ಆದರೆ ನಾಗೇಶನಿಗೆ ತಾನೊಬ್ಬ ‘ಬಬ್ಬರಕಮ್ಮೆ’ ಎಂದು ಗುರುತಿಸಿಕೊಳ್ಳಬೇಕು ಅನ್ನಿಸುತ್ತೆ. ಇದೊಂದು ಅಬ್ಸರ್ಡ್ ಆದ ಅರ್ಥಹೀನವಾದ ಹಣ ಪ್ರಪಂಚ. ಈ ಸಾಫ್ಟ್‌ವೇರ್‌ ಲೋಕದ್ದು.

ನಾಗೇಶ ಶಾಸ್ತ್ರಿ ಇಲ್ಲಿರಲಾರದೆ ರಶ್ಮಿಯಿದ್ದಲ್ಲಿ ಬರುತ್ತಾನೆ.

*

ನನಗೆ ಇಡೀ ಕಾದಂಬರಿ ಮುಖ್ಯವೆನಿಸುವುದು ಈ ಘಟನೆಗಳೆಲ್ಲವೂ ಆದ ನಂತರವೇ. ಡಾ. ಕಾಗಿನೆಲೆ ಕಾದಂಬರಿ ಪ್ರಕಾರಕ್ಕೆ ಹೊಸಬರು. ಸಂಗೀತದ ಆಲಾಪದಂತೆ ಎಷ್ಟಾದರೂ ವಿಸ್ತಾರಗೊಳ್ಳಬಲ್ಲದ್ದಾದ ಘನವಾದ ಒಂದು ಕಾದಂಬರಿಯ ಲೋಕ ತನ್ನ ವಿಸ್ತಾರವಾದ ಪ್ರತಿ ಘಳಿಗೆಯಲ್ಲೂ ಈ ಘಳಿಗೆಯಿಲ್ಲದಿದ್ದರೆ ಏನೋ ಕೊರತೆಯಾಗುತ್ತಿತ್ತು ಎನ್ನಿಸುವಂತಿರುತ್ತದೆ. ಹೀಗೆ ಮುಟ್ಟಿದಲ್ಲೆಲ್ಲ ಮಿಡಿಯಬಲ್ಲ ಕಲೆಗಾರಿಕೆ ಡಾ. ಕಾಗಿನೆಲೆಗೆ ಸಿದ್ಧಿಸಿಲ್ಲ. (ಎಷ್ಟು ನುರಿತ ಕಾದಂಬರಿಕಾರನಿಗೂ ಇದು ವರವೆಂಬಂತೆ ಸಿದ್ಧಿಸಿರುವುದಿಲ್ಲ) ಡಾ. ಕಾಗಿನೆಲೆಯವರು ನಮಗೆ ಮುದವಾಗುವಂತೆ ಬರೆಯಬಲ್ಲರು: ಆದರೆ ಅವರ ಮಾತಿಗೆ ನಮ್ಮನ್ನು ಬೆಚ್ಚಿಸಿ ಹೊಸ ಅರಿವನ್ನು ಉಂಟು ಮಾಡುವ ಶಕ್ತಿ ಬರುವುದು ರಶ್ಮಿ ಮತ್ತು ಶ್ರೀಧರ ಮಾಡಿಕೊಳ್ಳುವ ಸಂಬಂಧಗಳಲ್ಲಿ. ರಶ್ಮಿ ತನ್ನ ಬಾಲ್ಯದ ಗೆಳೆಯನೂ ಸತತ ಹತಾಶಿಯೂ ಆದ ನಾಗೇಶನ ಜೊತೆ ಸಂಬಂಧ ಬೆಳೆಸುತ್ತಾಳೆ. ಡಾ. ಶ್ರೀಧರ ಬೆಟ್ಟೆಯೆಂಬ ‘ಪ್ರಾಣಪಾಲಕಿ’ ಜೊತೆ ಸಂಬಂಧ ಬೆಳೆಸುತ್ತಾನೆ.

ಇಡೀ ಕಾದಂಬರಿಯಲ್ಲಿ ವಿಶೇಷವೆನಿಸುವಂತೆ ಹೊಳೆಯುವ ಪಾತ್ರ ರಶ್ಮಿಯದು. ಅಂತೆಯೇ ಎಲ್ಲ ಗಂಡು ಪಾತ್ರಗಳೂ ಟೊಳ್ಳಿನವು, ಬಾಯ್ಬಡಕಗಳು. ಇದನ್ನೊಂದು ದೋಷವೆನ್ನಲೆ? ಅಥವಾ ಕಾದಂಬರಿ ಖುದ್ದಾಗಿ ಹೇಳಬೇಕೆಂದುಕೊಂಡ ಸತ್ಯವೆನ್ನಲೇ? ನನ್ನ ಎದುರು ಕೆಲವು ಕಾದಂಬರಿಯ ಭಾಗಗಳು ಇವೆ. ಈ ಪುಟಗಳು ಸ್ವತಃ ಬರಹಗಾರನಾದ ನನಗೆ ಎಚ್ಚರದಲ್ಲಿ ದಿಟ್ಟವಾಗಿ ತೋರುವ ಸತ್ಯಗಳನ್ನು ಕಾಣಿಸಿ ಖುಷಿ ಕೊಟ್ಟಿವೆ. ರಶ್ಮಿ ಮತ್ತು ನಾಗೇಶ ಕ್ಲಿಂಟನ್‌ ಮತ್ತು ಮೋನಿಕಾರ ಲೈಂಗಿಕ ಸಂಬಂಧ ಚರ್ಚಿಸುವುದು (ಪುಟ ೬೮, ೬೯, ೭೦) ;  ಬೆಟ್ಟಿ ಮತ್ತು ಶ್ರೀಧರ ನಡುವಿನ ಸಂವಾದ (ಪುಟ ೮೯, ೯೦, ೯೧)–ಇವು ಪುರುಷ ಪ್ರಪಂಚ ಕಾಣಲು ಇಷ್ಟಪಡದ ಸ್ತ್ರಿ ಪ್ರಜ್ಞೆಯ ದಿಗಿಲು ಹುಟ್ಟಿಸುವ ಒಳನೋಟಗಳನ್ನು ಸೂಚಿಸುತ್ತವೆ. ಭೆಟ್ಟಿ ತಾಯಿಯಾಗಲು ಇಷ್ಟಪಡುವವಳಲ್ಲ ವಾದರೂ ಗರ್ಭವತಿಯಾದಾಗ ಹೂವಿನಂತೆ ಅರಳುತ್ತಾಳೆ.

ಕಾದಂಬರಿಯ ಅತ್ಯಂತ ಸೂಕ್ಷ್ಮವಾದ ವೈಚಾರಿಕತೆಯೆಂದರೆ ರಶ್ಮಿ ಪತ್ತೆ ಹಚ್ಚುವ ಔಷಧ ಲೋಕದ ರಾಜಕಾರಣ. ಇದು ಅವಳ ನೈತಿಕ ಬೆಳವಣಿಗೆಯನ್ನು ನಮ್ಮಲ್ಲಿ ಅಚ್ಚರಿ ಹುಟ್ಟಿಸುವಂತೆ ಕಾಣಿಸುತ್ತದೆ. ಈ ಮೂಲಕ  ಗೊಂದಲದಲ್ಲಿರುವ, ತಂದೆಯನ್ನು ಕಳೆದುಕೊಂಡ, ತಾನು ಗರ್ಭೀಣಿಯಾಗಿರಬಹುದು ಎಂದು ಅನುಮಾನಿಸುವ, ತಾನೊಲಿದವನ ಬಗ್ಗೆ ಗೌರವ ಕಳೆದುಕೊಂಡ, ಏಕಾಂಗಿಯಾಗಿ, ಕಾಶಿಯಾತ್ರೆಗೆ ಹೊರಟ ತಾಯಿಯನ್ನು ನೆನೆಯುತ್ತಿರುವ ಹೆಣ್ಣೊಬ್ಬಳು ತನ್ನ ನೈತಿಕತೆಯಲ್ಲೇ ಯಾವ ತೋರುಗಾಣಿಕೆಯಿಲ್ಲದೆ ಆಧ್ಯಾತ್ಮಿಕವಾಗುವ ಮನಕಲಕುವ ಚಿತ್ರವೊಂದನ್ನು ಕಾದಂಬರಿಕಟ್ಟಿಕೊಡುತ್ತದೆ.

ಈ ರಶ್ಮಿ ನಿಷ್ಕಾರಣವಾದ ಅರ್ಬ್ಡ್ ಆದ ಸಾವಿನಲ್ಲಿ ಕೊನೆಯಾಗಬೇಕೆ? ಹೀಗೆ ಅವಳು ಯಾರದೋ ಪುಡಿಕಾಸಿನ ಅಲ್ಪ ಲಾಭಕ್ಕಾಗಿ ಅಮೆರಿಕಾದಲ್ಲಿ ಸಾಯುತ್ತಾಳೆ ಎಂಬುದನ್ನು ವೈಚಾರಿಕ ನೆಲೆಯಲ್ಲಿ ಗಮನಿಸುವುದು ನನಗೆ ಪ್ರಸಂಗವನ್ನು ಅಧಿಕಗೊಳಿಸಿದಂತೆ ಅನ್ನಿಸುತ್ತದೆ. ಆದರೆ, ಈ ಸಾವನ್ನು ಗಮನಿಸದಿರುವುದು ಸಾಧ್ಯ ವಾಗುವುದಿಲ್ಲ. ರಶ್ಮಿಯ ಸಾವು, ಅವಳ ಜೊತೆ ಸದಾ ಪೈಪೋಟಿಯಲ್ಲಿದ್ದ ಅಪಕ್ವನಾದ ಶ್ರೀಧರನನ್ನು ಅವನ ಒಳಗಿನಿಂದ ಎಚ್ಚರಗೊಳ್ಳುವಂತೆ ಮಾಡಬಹುದೆಂದು ಕೊನೆ ಅರ್ಥಪೂರ್ಣವಾಗಿದೆ. ಅಷ್ಟು ಅರ್ಥಮಾತ್ರ ಈ ಸಾವಿಗೆ ದಕ್ಕುತ್ತದೆ.

*

ಇದೊಂದು ಪ್ರಾಯೋಗಿಕ ಕಾದಂಬರಿ. ಕನ್ನಡ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ ವೈಚಾರಿಕ ಶೋಧದ ಕಸುವನ್ನು ಪಡೆದು ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ ಎಂಬುದು ಕನ್ನಡದ ಲೇಖಕರಲ್ಲಿ ಒಬ್ಬನಾದ ನನಗೆ ಹೆಮ್ಮೆಯನ್ನೂ ಸಂತೊಷವನ್ನೂ ತಂದಿದೆ.

*

(ಗುರು ಪ್ರಸಾದ್ಕಾಗಿನೆಲೆ ಅವರ ಕಾದಂಬರಿಒಯಬಿಳಿಯ ಚಾದರಕ್ಕೆ ಬರೆದ ಮುನ್ನುಡಿ (೨೦೦೭)