ನನ್ನ ಪ್ರಿಯ ಮಿತ್ರರಾದ ಡಾ. ಮುರಾರಿ ಬಲ್ಲಾಳರು ಈಗಾಗಲೇ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರದು ಬಹುಮುಖಿ ಪ್ರತಿಭೆ. ಪರಿಸರದ ಬಗ್ಗೆ, ಅರ್ಥವ್ಯವಸ್ಥೆಯ ಬಗ್ಗೆ ದೇಶದ ರಾಜಕೀಯದ ಬಗ್ಗೆ ಸದಾ ಮಗ್ನರಾಗಿ ತಮ್ಮನ್ನು ಮರೆತು ಬದುಕುವ ಈ ಸೂಕ್ಷ್ಮ ಮನಸ್ಸಿನ ಧೀಮಂತ, ಕರ್ನಾಟಕದ ಗಣ್ಯ ಚಿಂತಕರಲ್ಲಿ ಒಬ್ಬರು. ಇವರು ಸಂಗಿತಕ್ಕೂ ಕಾವ್ಯಕ್ಕೂ ಮಿಡಿಯುವವರೂ ಹೌದು ಎನ್ನುವದು ವಿಶೇಷ. ಯಾಕೆಂದರೆ ಮೌನದಲ್ಲಿ ತನ್ನ ಅಂತರಂಗದ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬಲ್ಲವನ ಬಹಿರಂಗ ವರ್ತನೆಗಳು, ವಿಚಾರಗಳು ಶೋಭಾಯಮಾನವಾಗಿ ನಮ್ಮನ್ನು ಸೆರೆಹಿಡಿಯುತ್ತವೆ.

ಕೃಷ್ಣಾಜಿ ಇಲ್ಲೇ ಇದ್ದು ಹೋದವರು. ಬಿಟ್ಟು ಹೋದ ಅವರ ಪ್ರವಚನಗಳಲ್ಲಿ ಈಗಲೂ ಇರುವವರು. ಬದುಕಿದ್ದಾಗ ಪ್ರತಿದಿನವೂ ಮರುಹುಟ್ಟು ಪಡೆದವರಂತೆ ಸ್ಪಂದಿಸಿದವರು. ‘ನಿನ್ನೆ’ಗೆ ಸತ್ತವರು. ಇರುವ ತನಕ ಸತ್ತು, ಹುಟ್ಟಿ ಮಿಡಿದು ಕಾಲದಲ್ಲಿ ಲೀನವಾದವರು.

ಇಂಥವರ ಜೀವನ ಚರಿತ್ರೆ ಬರೆಯುವುದರಲ್ಲಿ ಒಂದು ವಿರೋಧಾಭಾಸವಿದೆ. ಡಾ. ಮುರಾರಿ ಬಲ್ಲಾಳರು ಇದನ್ನು ತಿಳಿದವರೇ.

ಚರಿತ್ರೆಗೆ ‘ನಿನ್ನೆ’ಯ ‘ನಿಜ’ ಮುಖ್ಯವಾಗಿರುತ್ತದೆ. ‘ನಿನ್ನೆ’ಯನ್ನು ತಿಳಿಯಲು ಮಾತ್ರವಲ್ಲ, ಇಂದಿನ ಸತ್ಯವನ್ನು ಅರಿಯಲೂ ಮುಖ್ಯವಾಗುತ್ತದೆ. ‘ನಾಳೆ’ಯನ್ನು ಊಹಿಸಲು, ರೂಪಿಸಲು ಅಗತ್ಯವಾದ ಅನುಭವವೆನ್ನಿಸುತ್ತದೆ. ಕ್ರಿಯಾಶೀಲ ರಾಜಕಾರಣದಲ್ಲಿ ನಾಳೆಯನ್ನು ಕಟ್ಟುವುದು ಹೇಗೆಂಬ ಹುಡುಕಾಟದಲ್ಲಂತೂ ಚರಿತ್ರೆಯದು ಸಿಂಹಪಾಲಾಗಿರುತ್ತದೆ. ಈ ವಿಚಾರದಲ್ಲಿ ಮುರಾರಿ ಬಲ್ಲಾಳರು ನನ್ನಂತೆ ಚಿಂತಿಸುವವರು ಎಂದುಕೊಂಡಿದ್ದೇನೆ.

ಕೃಷ್ಣಾಜಿ  ನಮ್ಮನ್ನು ಅಂತರಂಗದಲ್ಲಿ ಮುಟ್ಟಿದಾಗ ನಮ್ಮ ಮೇಲಿನ ಗ್ರಹಿಕೆ ತಬ್ಬಿಬ್ಬುಗೊಳ್ಳುತ್ತದೆ. ನಾವು ಹಲವು ‘ನಿನ್ನೆ’ಗಳಲ್ಲಿ ಗಳಿಸಿದ ಜ್ಞಾನ, ಬಿಡುಗಡಯ ಜ್ಞಾನವಲ್ಲ, ಉಪಯುಕ್ತವಾದ ತಿಳುವಳಿಕೆ ಮಾತ್ರ. ಈ ರಸ್ತೆಯಿಂದ ಇನ್ನೊಂದು ರಸ್ತೆಗೆ ಹೋಗುವುದು ಹೇಗೆ, ಯಾವ ಪದಾರ್ಥ ಯಾವ ಉಪಯೋಗಕ್ಕೆ ಇತ್ಯಾದಿ ಜೀವನಕ್ಕೆ ಅವಶ್ಯವಾದ ಮಾಹಿತಿಗಳನ್ನು ಒಳಗೊಂಡಿರುವ ತಿಳುವಳಿಕೆ ಮಾತ್ರ.

ಆದರೆ ಅಂತರಂಗದ ಸತ್ಯದ ಗ್ರಹಿಕೆಗೆ, ನಮ್ಮ ಇರುವಿಕೆಯ/ಆಗುವಿಕೆಯ ಪೂರ್ಣ ಗ್ರಹಿಕೆಗೆ ಈ ಗ್ರಹಿತಗಳಿಂದ ಯಾವ ಪ್ರಯೋಜನವೂ ಇಲ್ಲ. ಆಧ್ಯಾತ್ಮಿಕ ವಿಚಾರಗಳಂತೂ ಸಿದ್ಧಜ್ಞಾನವಾಗಿ ನಮಗೆ ಒದಗಿಬರುವಂಥಹದ್ದೂ ಅಲ್ಲ. ಯಾವ ಪ್ರಮಾಣದಲ್ಲಿ ಜಲಜನಕ ಮತ್ತು ಆಮ್ಲಜನಕಗಳು ಕೂಡಿ ನೀರಾಗುತ್ತವೆ ಎನ್ನುವಂತಹ ಸತ್ಯದ ಮಾಹಿತಿಯನ್ನು ಗೀತೆಯಾಗಲೀ, ಬೈಬಲ್ ಆಗಲೀ, ಕುರಾನ್ ಆಗಲಿ, ನಮ್ಮ ಒಳ ಜಗತ್ತಿನ ಬಗ್ಗೆ ಕೊಡಲಾರದು. ಸುಖ, ಕಷ್ಟಗಳಲ್ಲಿ ಪೇಚಾಡುವ ಜೀವ ಎಷ್ಟು ದೊಡ್ಡ ವಿಚಾದಿಂದಲೂ ತನ್ನ ಸದ್ಯದ ಸತ್ಯ ತಿಳಿದು ಬಿಡುಗಡೆ ಪಡೆಯಲಾರದು. ದುಃಖ ಏಕಿದೆ? ಹಿಂಸೆ ಏಕಿದೆ? ಭ್ರಷ್ಟಾಚಾರ ಏಕಿದೆ? ಸುಲಿಗೆ ಏಕಿದೆ?– ಹೋರಾಟದ ತಲ್ಲಣದಲ್ಲಿ ತಿಳಿಯುವ ಸಂಗತಿಗಳಲ್ಲ ಇವು. ಶಪಿಸಿ, ಪೂಜಿಸಿ, ಭ್ರಮಿಸಿ, ಊಹಿಸಿ, ಹಲವು ವಿಚಾರಗಳ ಸಿಕ್ಕು ಬಿಡಿಸಿ, ತರ್ಕಿಸಿ ಗೆಲ್ಲುವ ಸಂಗತಿಯಂತೂ ಖಂಡಿತಾ ಅಲ್ಲ – ಇದು ಕೃಷ್ಣಾಜಿ ವಿಚಾರ.

ಇಂಥ ಕೃಷ್ಣಾಜಿಯನ್ನು ಅವರ ಬೆಳವಣಿಗೆಯ ಮೂಲಕ, ಅವರ ಹಲವು ಚಟುವಟಿಕೆಗಳ ಮೂಲಕ ಕಾರ್ಯಕಲಾಪಗಳ ಸರಪಳಿಯಲ್ಲೋ ಗಂಟುಗಳಲ್ಲೋ ತಿಳಿಯುವುದು ಸಾಧ್ಯವಿಲ್ಲ. ಜೀವನ ಚರಿತ್ರೆಯಾಗಬಲ್ಲ ಕೃಷ್ಣಾಜಿಯ ಚಟುವಟಿಕೆಗಳು, ಅವರ ಜೀವನದ ಘಟನೆಗಳು ಕೃಷ್ಣಾಜಿಯ ನೈಜ ಜೀವನ ಚರಿತ್ರೆಯಲ್ಲ. ಅವರು ಸತ್ಯವೆಂದು ಕಾನುತ್ತಿದ್ದುದು, ಕಾನಿಸಲು ಪ್ರಯತ್ನಿಸುತ್ತಿದ್ದುದು, ಈಗಲೂ ಜೀವಂತವೆನಿಸುವಂತೆ ಅವರ ಮಾತುಗಳಲ್ಲಿ ಹೊಳೆಯುತ್ತಿದ್ದದು ಮಾತ್ರ ನಿಜ.

ಮುರಾರಿಯವರ ಈ ಕೃತಿಯ ನಿಜವಾದ ಸಾಧನೆ ಇರುವುದು ಅವರು ನಮಗೆ ಕೃಷ್ಣಾಜಿ ನಮ್ಮೆದುರು ಕೂತು ಮಾತಾಡುತ್ತಿದ್ದಾರೆ ಎನ್ನಿಸುವಂತೆ ಮಾಡುವುದರಲ್ಲಿ.

ಮುರಾರಿ ಬಲ್ಲಾಳರು ಕೃಷ್ಣಾಜಿಯ ಬಗ್ಗೆ ತತ್ಪರರಾಗಿ ಬರೆಯುತ್ತಾರೆ. ತತ್ಪರಾಗಿ ಹೇಳಿದ ಮಾತುಗಳಿಗೆ ‘ಹೊಳೆಯುವ ಗುಣ’ ಇರುತ್ತದೆ. ಮಾತಿಗೆ, ಹೇಳಿದ್ದನ್ನು ಸದ್ಯೋಜಾತಗೊಳಿಸುವ ಕಾವ್ಯದ ಗುಣ ಬರುವುದು ಹೀಗೆ. ಕೃಷ್ಣಾಜಿ ತಮ್ಮ ಮಾತುಗಳನ್ನು ‘ಟೀಚಿಂಗ್ಸ್’ ಎಂದು ಕರೆಯುತ್ತಾರೆ. ನಮ್ಮ ಮಾತನಲ್ಲಿ ಇದನ್ನು ‘ಉಪದೇಶ’ ಎನ್ನುವಂತಿಲ್ಲ. ಯಾಕೆಂದರೆ  ಉಪದೇಶಗಳಲ್ಲಿ ಹೇಳುವವನ ‘ಮೇಲೂ’ ಕೇಳುವವನ ‘ತಗ್ಗು’ ಇರುತ್ತದೆ. ಸಂವಾದಕ್ಕೆ ಎಳೆಯುವ ಕೃಷ್ಣಾಜಿ ಮಾತುಗಳನ್ನು ನಾವು ‘ವಚನ’ಗಳೆಂದೇ ಕರೆಯಬಹುದೆನೋ. ವಚನ ಎಂದರೆ ಅದು ಶೃತಿಯೂ ಅಲ್ಲ. ಸ್ಮೃತಿಯೂ ಅಲ್ಲ. ‘ಶೃತಿ’ ಪರಮಾತ್ಮನಿಂದ ಋಷಿ ನೇರ ಕೇಳಿ ಪಡೆದದ್ದಾದರೆ, ‘ಸ್ಮೃತಿ’ ಅನುಸರಿಸಬೇಕಾದ  ಆಜ್ಞಾರೂಪವಾದ ನೀತಿ ಸಂಹಿತೆ. ಆದರೆ ಶೃತಿ ಮತ್ತು ಸ್ಮೃತಿಯ ರೂಢಿಗತ ಜಾಲದಲ್ಲಿ ಸಿಕ್ಕಿದ ಮನುಷ್ಯನನ್ನು ಬಿಡುಗಡೆ ಮಾಡಲೆಂದೇ ಕೃಷ್ಣಾಜಿ ಮಾತು ‘ವಚನ’ಗಳಾಗುತ್ತದೆ. ಅದರ ಸದ್ಯತನವನ್ನು ತೀವ್ರತೆಯನ್ನು ಮುರಾರಿ ಬಲ್ಲಾಳರು ತತ್ಪರರಾಗಿ, ತಾವು ತಮ್ಮೊಳಗೆ ಪಡೆದು ನಮಗೆ ಹೊಮ್ಮಿಸಿದ್ದಾರೆ. ಈ ಪುಸ್ತಕದ ಅತ್ಯುತ್ತಮ ಭಾಗಗಳು ಕನ್ನಡದಲ್ಲಿ ಹೊಮ್ಮಿದ ಕೃಷ್ಣಾಜಿ ವಚನಗಳು ಎನ್ನಬಹುದು.

ಮುರಾರಿ ಬಲ್ಲಾಳರು ಕೃಷ್ಣಾಜಿಯ ಮಾತುಗಳ ಪೂರ್ಣ ಸ್ವೀಕಾರಕ್ಕಾಗಿ ತನ್ನನ್ನು ತೆರೆದುಕೊಂಡು ಬರೆಯುತ್ತಾರೆ. ಹೀಗೆ ಕೃಷ್ಣಾಜಿಯನ್ನು ಮುಂದಿಟ್ಟು ತಾನು ಹಿಂದೆ ನಿಲ್ಲುವ ಈ ಬಗೆಯ ತತ್ಪರತೆಯನ್ನು ನವು ಹೊಗಳಿ ಸಮಾಧಾನ ಪಡಬಾರದು. ನನ್ನ ಮೇಲಿನ ಮಾತುಗಳಲ್ಲಿ ಹೊಗಳಿದಂತೆ ಕಂಡದ್ದು ಇದ್ದರೆ ಬೇರೆ ದಾರಿ ತೋರದೆ ನಾನು ಪಟ್ಟ ಸಂತೋಷವನ್ನು ಓದುಗರಲ್ಲಿ ಹಂಚಿಕೊಳ್ಳಲಿಕ್ಕಾಗಿ ಎಂದು ತಿಳಿಯಬೇಕು.

ಪುನರುಕ್ತಿ ಎನ್ನಿಸಿದರೂ ಹಿಂದೆ ಹೇಳಿದ್ದನ್ನು ಮತ್ತೆ ನೆನಪಿಸಿಕೊಳ್ಳುವೆ. ಕೃಷ್ಣಾಜಿ ಚರಿತ್ರೆಯಲ್ಲಿ ಇದ್ದರು, ಆಮೇಲೆ ಇಲ್ಲವಾದರು. ಅವರು ಇದ್ದು, ಇಲ್ಲವಾಗುವ ಕಾಲಘಟ್ಟವನ್ನು ಅದರ ಎಲ್ಲಾ ವಿವರಗಳಿಂದ ಗುರುತಿಸುತ್ತಾ ಹೋದರೆ ಅದು ಕೃಷ್ಣಾಜಿ ಜೀವನ ಚರಿತ್ರೆಯಾಗಲಾರದು. ಯಾಕೆಂದರೆ ಕೃಷ್ಣಾಜಿ ನಿನ್ನೆಯ ನೆನಪುಗಳಿಗೂ, ನಾಳೆಯ ಭರವಸೆಗಳಿಗೂ ಬೆಲೆಯನ್ನು ಕೊಡದವರು. ಈ ಪ್ರಪಂಚವನ್ನು ತಾರ್ಕಿಕವಾಗಿ ನಿರ್ವಹಿಸಲು ನಾವು ಪಡೆದುಕೊಂಡಿರುವ ಎಲ್ಲಾ ನಿನ್ನೆಗಳ ಮಾಹಿತಿ ರೂಪದ ಜ್ಞಾನವನ್ನು ಅವರು ಅಲ್ಲಗಳೆದವರಲ್ಲ. ಆದರೆ ಒಳಲೋಕದ ನಿಜವನ್ನು ಎದುರಾಗಲು ಈ ಎಲ್ಲಾ ಜ್ಞಾನವೂ ತೊಡಕಾಗುತ್ತದೆ ಎಂದು ಕೃಷ್ಣಾಜಿ ತಿಳಿದವರು. ಅಲ್ಲದೇ ನಮ್ಮಲ್ಲಿ ಹುಟ್ಟುವ ಅರಿವು ಸ್ಫೋಟದಲ್ಲಿ ನಾವು ಒಡನೆಯೇ ಕಾಣುವಂಥದ್ದೇ ಹೊರತಾಗಿ, ಕ್ರಮೇಣದಲ್ಲಿ ವಿಕಾಸವಾಗುತ್ತಾ ಹೋಗುವ, ‘ಭಂಡಾರ’ವಾಗುವ ಜ್ಞಾನವಲ್ಲ. ಬೈಬಲ್ ನಲ್ಲಿ, ‘ಸೀಕ್, ದೌ ಶಲ್ಟ್ ಫ್ಲೈಂಡ್’ ಎನ್ನುವ ಮಾತು ಬರುತ್ತದೆ. ಆದರೆ ಕೃಷ್ಣಾಜಿ, ‘ಸೀಕ್, ದೌ ಶಲ್ಟ್ ನಾಟ್ ಫ್ಲೈಂಡ್’ ಎನ್ನುವವರೆಂದು ನಮಗೆ ಅನ್ನಿಸುತ್ತದೆ. ಉದ್ದೇಶಪೂರ್ವಕವಾಗಿ ಹಠದಲ್ಲಿ ಹುಡುಕಿದ್ದು ನಮ್ಮ ಕಲ್ಪನೆಯಲ್ಲಿ ಮೊದಲಿನಿಂದಲೇ ಇದ್ದ ಸತ್ಯವಾಗಿರುತ್ತದೆ, ನಾವು ಏನೂ ಹೊಸದನ್ನು ಪಡೆದಿರುವುದಿಲ್ಲ. ನಾವು ಸತ್ಯವನ್ನು ನಿರೀಕ್ಷಿಸದೇ ಎಡವಿ  ಕಾಣುತ್ತೇವೆ ಎಂದು ಕೃಷ್ಣಾಜಿ ಭಾವಿಸಿದಂತೆ ತೋರುತ್ತದೆ. ಆದ್ದರಿಂದ ಎಲ್ಲಾ ಮತಗಳ ಶೃತಿ, ಸ್ಮೃತಿಗಳ ಶಿಸ್ತುಗಳನ್ನು ನಿರಾಕರಿಸಿ ಒಳಗಿನಿಂದ ತೆರೆದು ಕಾಣುವ ಶಿಸ್ತನ್ನು ಮಾತ್ರ ಮುಖ್ಯವೆನ್ನುತ್ತಾರೆ.

ನಾವು ನೋಡುತ್ತೇವೆ, ಅದರ ಬಗ್ಗೆ ಮಾತಾಡುತ್ತೇವೆ, ಆದರೆ ಎದುರು ಇರುವುದನ್ನು ತದ್ವತ್ತಾಗಿ ಗಮನಿಸುವುದೇ ಇಲ್ಲ ಎಂದು ಕೃಷ್ಣಾಜಿ ಪದೇ ಪದೇ ಹೇಳುತ್ತಾರೆ. ಹೀಗೆ ಗಮನದ ತತ್ಪರತೆಯಲ್ಲಿ ಕಾಣುವ ನಿಜವನ್ನು ಮತ್ತೆ ಮತ್ತೆ ಮಾತಾಡಿ ಕೃಷ್ಣಾಜಿ ಯಾಕೆ ಹೇಳುತ್ತಾರೆ ಎಂಬುದು ನಮ್ಮನ್ನು ಕೆಲವೊಮ್ಮೆ ಬಾಧಿಸುತ್ತದೆ. ಆದರೆ ಇದಕ್ಕೆ ಕಾರಣ ಕೃಷ್ಣಾಜಿಯವರಿಗೆ ತನ್ನ ಹತ್ತಿರ ಬಂದವರೆಲ್ಲರ ಬಗ್ಗೆ ಇದ್ದ ಕಾಲಜಿ ಮತ್ತು ಪ್ರೀತಿಯೇ ಇದ್ದಿತು ಅಥವಾ ಇಂತ ವಿಷಯಗಳಲ್ಲಿ ಅವರು ಯಾವತ್ತೂ ಮನುಷ್ಯ ಮಾತ್ರರಾಗಿಯೇ ಉಳಿದಿದ್ದರು ಎನ್ನಬಹುದೆನೋ? ಹೀಗಾಗಿ ಕೃಷ್ಣಾಜಿ ನಮಗೆ ಆಪ್ತನಾಗುವ ‘ಗುರುಮಿತ್ರ’ ಆಗುತ್ತಾರೆ.

ಈ ಕೃಷ್ಣಾಜಿಗೆ ಚರಿತ್ರೆಯೇ ಇಲ್ಲ, ಆದರೆ ಜೀವನ ಚರಿತ್ರೆ ಬರೆಯುವವನು ಒಬ್ಬ ವ್ಯಕ್ತಿಯ ವಿಕಾಸದಲ್ಲಿ ಏನಾಯಿತು? ಈ ಆದದ್ದರ ಕಾರ್ಯ ಕಾರಣ ಸಂಭಂಧಗಳೇನು ಎಂದು ವಿವರಿಸಲೂ ಬೇಕಾಗುತ್ತದೆ. ಮುರಾರಿ ಬಲ್ಲಾಳರನ್ನು ಈ ಪ್ರಶ್ನೆ ಕಾಡಿದೆ. ಅದನ್ನು ವಿವರಿಸಲು ಹೊರಟು ನಮ್ಮ ಕುತೂಹಲವನ್ನು ಕೆರಳಿಸಿ, ತೃಪ್ತಿ ಪಡಿಸಲಾರದೆ ಹೋದುದೂ ಉಂಟು. ಈ ಪುಸ್ತಕದ ಒಟ್ಟು ತತ್ಪರತೆಯಲ್ಲಿ ಅಲ್ಲಲ್ಲಿ ಕಾಣುವ ವಿಘ್ನಗಳು ಇವು. ಆದರೆ ಇಡೀ ಕೃತಿಯ ಪ್ರಬಂಧ ಧ್ವನಿಗೆ ಈ ವಿಘ್ನಗಳು ಬಾಧಕವಾಗುವುದಿಲ್ಲ.

ಎಷ್ಟೊಂದು ಮಾತನಾಡುತ್ತಲೇ ಇದ್ದ ಗೌತಮ ಬುದ್ಧ ತನ್ನ ಒಂದು ಉಪದೇಶವನ್ನು ಮಾಡುವುದು ಮಾತ್ರ ಹೀಗೆ. ಒಂದು ತಾವರೆಯ ಹೂವನ್ನು ಕೈಯಲ್ಲಿ ಹಿಡಿದು ಎದುರಿಗೆ ನಿಮತ ಶಿಷ್ಯನಿಗೆ ಅದನ್ನು ಕೊಡುತ್ತಾನೆ. ಕೊಟ್ಟು ಮೌನವಾಗಿ ಅರ್ಥವಾಯಿತೇ ಎಂದು ಸನ್ನೆ ಮಾಡುತ್ತಾನೆ. ಹೂವನ್ನು ಕೈಯಲ್ಲಿ ಪಡೆದ ಶಿಷ್ಯ ಅರ್ಥವಾಯಿತು ಎನ್ನುವ ಸನ್ನೆ ಮಾಡುತ್ತಾನೆ. ಎಲ್ಲೆಲ್ಲೂ ಕೃಷ್ಣಾಜಿ ಬಯಸುವುದು ಈ ಬಗೆಯ ಸಂವಹನವನ್ನೇ ಎನ್ನುವ ಭಾವನೆ ನಮಗೆ ಹುಟ್ಟುತ್ತದೆ.

ಡಾ. ಮುರಾರಿ ಬಲ್ಲಾಳರು ನನ್ನಂತೆಯೇ ಹಲವು ವಿಷಯಗಳಲ್ಲಿ ಆಸಕ್ತರು. ಪರಿಸರ, ರಾಜಕೀಯ, ಸಾಹಿತ್ಯ, ಸಂಸ್ಕೃತಿ, ಸಂಘಟನೆ ಇತ್ಯಾದಿಗಳಲ್ಲಿ ಸದಾ ಪ್ರವೃತ್ತರು. ಹೀಗಿರುವ ಮುರಾರಿಯವರ ಒಳ ಮನಸ್ಸಿನ ಮೌನದ ಮಡುವಿನಲ್ಲಿ ಕೃಷ್ಣಾಜಿ ಇದ್ದಾರೆಂಬುದು ನನಗೆ ಯಾವತ್ತೂ ಅವರ ಬಗ್ಗೆ ಆಶ್ಚರ್ಯವನ್ನು ಹುಟ್ಟಿಸಿದೆ. ಅವರು ತಮ್ಮ ಎಲ್ಲಾ ಆಸಕ್ತಿಗಳ ಜೊತೆ ಕೃಷ್ಣಾಜಿಯನ್ನು ಹೊಂದಿಸಿಕೊಳ್ಳುವ ಬಗೆಯನ್ನು ಕುರಿತು ಬೇರೊಮದು ಪುಸ್ತಕವನ್ನು ಬರೆಯಭೇಕೆಂದು ನನಗೆ ಅನ್ನಿಸುತ್ತದೆ. ಹೀಗೆ ಬರೆಯುವಾಗ ಅವರಿಗಿರುವ ಭಕ್ತಿಭಾವ ಕೊಂಚ ಕಮ್ಮಿಯಾಗಿ, ತನ್ನ ಮನಸ್ಸನ್ನೂ ಮತ್ತು ಕೃಷ್ಣಾಜಿಯನ್ನೂ ಹೆಚ್ಚು ಗಂಭೀರವಾಗಿ ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಕೃಷ್ಣಾಜಿಯವರಿಗೆ ತನ್ನ ‘ಟೀಚಿಂಗ್ಸ್’ ಪರಿಶುದ್ಧವಾಗಿ ಉಳಿಯಬೇಕು. ಉಳಿಸಲು ಒಂದು ಸಂಸ್ಥೆ ಬೇಕು ಎಂದು ಯಾಕೆ ಅನ್ನಿಸಿತ್ತು? ಹೀಗೆ ಅನ್ನಿಸುವಾಗ ಕೃಷ್ಣಾಜಿ ತಮ್ಮ ದರ್ಶನದಿಂದಲೇ ಕೋಂಚ ಬದಲಾದರೆ? ಅಥವಾ ಅವರ ದಾರ್ಶನವೂ ಬೆಳೆಯಿತೇ? ಈ ಪ್ರಶ್ನೆಯನ್ನು ನಾವು ತುಂಬಾ ವಿನಯದಿಂದ ಆದರೆ ನಿಷ್ಠುರವಾಗಿ ಕೇಳಬೇಕು.

ಬೌದ್ಧ ಧರ್ಮಿಗಳಿಗೆ ಪ್ರಾರ್ಥನಾ ರೂಪವಾಗಿರುವ ಈ ಮೂರು ಸೂಕ್ತಿಗಳನ್ನು ಗಮನಿಸಬೇಕು. ೧) ಬುದ್ಧಂ ಶರಣಂ ಗಚ್ಛಾಮಿ ೨) ಸಂಘಂ ಶರಣಂ ಗಚ್ಛಾಮಿ ೩) ಧಮ್ಮಂ ಶರಣಂ ಗಚ್ಛಾಮಿ. ಇಲ್ಲಿ ಬರುವ ಮೂರರಲ್ಲಿ ಮೊದಲನೆಯದು ಯಾರಿಂದ ಉಪದೇಶ ಪಡೆದೆವೋ ಆ ಗುರು, ಈತ ಬರಿಯ ವ್ಯಕ್ತಿ ಮಾತ್ರವಲ್ಲ, ನಮ್ಮ ಪ್ರೀತಿಗೂ, ಗೌರವಕ್ಕೂ ಸದಾ ಸಲ್ಲುವ ವ್ಯಕ್ತಿಯೂ ಹೌದು.

ಎರಡನೆಯದು ಈ ಗುರುವಿನಿಂದ ಹುಟ್ಟಿದ ಅರಿವನ್ನು ಕಾಪಾಡುವ, ಹರಡುವ ಸಂಸ್ಥೆ – ಅದೇ ಸಂಘ. ಮೂರನೆಯದು, ವ್ಯಕ್ತಿಯಿಂದ ಹೊಮ್ಮಿದ ಸತ್ಯಕ್ಕೂ, ಅದನ್ನು ಕಾಪಾಡುವ ಸಂಘಕ್ಕೂ ಆಳದಲ್ಲಿ ಇರುವ ಧಮ್ಮ, ವ್ಯಕ್ತಿಗೂ ಆಚಿನದು, ಸಂಘಕ್ಕೂ ಆಚಿನದು, ಆದರೆ ವ್ಯಕ್ತಿ ಮತ್ತು ಸಂಘದ ತ್ರಿವಳಿಯಲ್ಲಿ ಮನುಷ್ಯ ಮಾತ್ರರಾದ ನಾವು ಕಾಣುವಂತದ್ದು.

ಈ ಮೇಲಿನ ವ್ಯಕ್ತಿ-ವ್ಯವಸ್ಥೆ-ಧರ್ಮ ನಮಗೆ ನಿತ್ಯ ಜೀವನದಲ್ಲಿ ಅಗತ್ಯವೆನಿಸುತ್ತದೆ. ಹಾಗೆ ನಿಜವೆನ್ನಿಸಿದಾಗ, ವ್ಯಕ್ತಿಯಾಗಿ ಕೃಷ್ಣಾಜಿ ಮತ್ತು ಅವರ ಮಾತಿಗೆ ಮಂಟಪವಾಗಬಲ್ಲ ಸಂಸ್ಥೆ ಮತ್ತು ಅವರ ಉಕ್ತಿಗಳು ಈ ಮೂರು ತ್ರಿವಳಿಯಾಗಿ ನಾವು ನಮ್ಮ ನಮ್ಮ ಕಾಲದಲ್ಲಿ ಸಾರ್ಥಕಗೊಳ್ಳುವಂತೆ ಒದಗಿಬರಬಲ್ಲದು ಎನ್ನಿಸುತ್ತದೆ.

ಈ ಮೇಲಿನ ಮಾತುಗಳನ್ನು ಬರೆಯುತ್ತಿದ್ದಂತೆಯೇ ನಾನು ನನ್ನ ಮಾತುಗಳನ್ನು ಅನುಮಾನಿಸುತ್ತಿದ್ದೇನೆ. ವ್ಯಕ್ತಿಯ ಆರಾಧನೆ ವ್ಯಕ್ತಿಗೆ ಅಪಚಾರ ಮಾತ್ರವಲ್ಲದೇ ನಮ್ಮ ಅಲ್ಪಲಾಭದ ಹಂಚಿಕೆಯೂ ಆಗಬಹುದು. ವ್ಯಕ್ತಿಯ ಆರಾಧನೆಗಾಗಿ ಕಟ್ಟಿದ ಸಂಸ್ಥೆ ಧನ ಮೋಹದ, ಅಧಿಕಾರ ಲೋಭದ ಹುನ್ನಾರವಾಗಬಹುದು. ಪ್ರಚಾರಕ್ಕಾಗಿ ಮಾತ್ರ ಎತ್ತಿಕೊಳ್ಳುವ ವಚನಗಳು, ನಮ್ಮ ವಿದ್ವತ್ತಿನ ಪ್ರದರ್ಶನದ ವಸ್ತುಗಳಾಗಬಹುದು.

ಈ ಮೂರು ಅಪಾಯಗಳನ್ನು ಕೃಷ್ಣಾಜಿ ಬಲ್ಲವರಾಗಿದ್ದರು. ಆದರೆ ತನ್ನ ಮಾತನ್ನು ಅರಿತು, ಆದರೆ ಅದನ್ನೇ ಗೀಳು ಮಾಡಿಕೊಳ್ಳದೆ ಉಳಿಸಿಕೊಳ್ಳುವವರು ಬೇಕೆಂದೂ ಬಯಸಿದ್ದರು.

ಇಂತಹ ಎಲ್ಲಾ ಅನಿಸಿಕೆಗಳಿಗೂ ಆಸ್ಪದವಿರುವಂತೆ ಮುರಾರಿ ಬಲ್ಲಾಳರು ಕೃಷ್ಣಾಜಿಯವರನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಮತೀಯತೆ ಆಗದ, ಜನಾಂಗ ದ್ವೇಷವಾಗದ ಆಧ್ಯಾತ್ಮಕ ಸತ್ಯಗಳು ಇವೆ ಎಂದು ಈ ನಮ್ಮ ದುಷ್ಟ ಕಾಲದಲ್ಲಿ ಹೇಳಬಲ್ಲವರು ಬೇಕು. ಡಾ.ಮುರಾರಿ ಬಲ್ಲಾಳರಿಗೆ ಈ ಶಕ್ತಿ, ಈ ಒಳನೋಟ ಇವೆ. ಅವರನ್ನು ಪ್ರಿತಿಯಿಂದ ಅಭಿನಂದಿಸುತ್ತೇನೆ.

ಈ ಕೃತಿಯು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಮೌಲಿಕವಾದ ಕೊಡುಗೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತದೆ.

*

ಮುರಾರಿ ಬಲ್ಲಾಳರಜಿಡ್ಡು ಕೃಷ್ಣಮೂರ್ತಿ : ಜೀವನ ದರ್ಶನಕೃತಿಗೆ ಬರೆದ (೨೦೦೫) ಮುನ್ನುಡಿ.