ನಮ್ಮ ನಡುವಿನ ಲೇಖಕಿಯರಲ್ಲಿ ಚಂದ್ರಿಕಾ ಕವಿ ಮನಸ್ಸಿನವರು. ಭಾಷೆಯ ಜೊತೆ ಅರ್ಥಗಭಿತವಾದ ಆಟ ಆಡಬಲ್ಲವರು. ಪುಟ್ಟ ಕಥೆಗಳನ್ನು ಇಬ್ಬನಿಯಂತೆ ಹಗುರಾಗಿಯೂ ಮುತ್ತಿನಂತೆ ದೃಢವಾಗಿಯೂ ತನ್ನ ಒಳಗಿನಿಂದ ಪಡೆದು ನಮಗೆ ಕೊಡಬೇಕೆಂಬ ಆಸೆ ಉಳ್ಳವರು. ಇಲ್ಲಿನ ಪುಠಾಣಿ ಕಥೆಗಳನ್ನು ಒಂದಾದ ನಂತರ ಇನ್ನೊಂದನ್ನು ಓದುತ್ತ ನನಗೆ ಹೊಳೆದ ಭಾವಗಳು ಇಲ್ಲಿವೆ :

೧) ನಾನು ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕವಿ ಮತ್ತು ಭಾಷಾತಜ್ಞ ಹೆಚ್‌. ಎಸ್‌. ಬಿಳಿಗಿರಿಯೂ ವಿದ್ಯಾರ್ಥಿ; ನನಗಿಂತ ಹಿರಿಯ, ಕಾಣಲು ಎಲ್ಲರಿಗಿಂತ ಎತ್ತರದವ; ಅಲೆಯುವಾಗ ದಾರಿಯಲ್ಲಿ ಒಂದು ಮರದ ಕೆಳಗೆ ನಿಲ್ಲಿಸಿ ಸಿಗರೇಟು ಹಚ್ಚಿ ‘ಕೇಳು’ ಎಂದು ಶುರು ಮಾಡಿ ಬಿಡುತ್ತಿದ್ದ. ಒಂದಾದ ನಂತರ ಇನ್ನೊಂದು ಪುಟ್ಟ ಕಥೆ. ಯಾವತ್ತು ಅವನು ಒಂದೇ ಕಥೆ ಹೇಳಿದ್ದಿಲ್ಲ. ನಾವು ಗಹಗಹಿಸಿ ನಗುವಾಗ ಅವನು ನಕ್ಕಿದ್ದಿಲ್ಲ.

ಹೀಗೆ ಒಂದಾದ ನಂತರ ಒಂದು ಕಥೆ ಹೇಳುವುದರಲ್ಲಿ ಅವನದೊಂದು ತಂತ್ರ ಅಡಗಿತ್ತು. ಒಂದೇ ಹೇಳಿದರೆ ನಾವದನ್ನು ನೆನಪಿಟ್ಟುಕೊಂಡು ಬಿಡುತ್ತೇವೆ. ಅವನ ಒಡೆತನ ತಪ್ಪುತ್ತದೆ. ಹಲವನ್ನು ಒಟ್ಟಿಗೆ ಕೇಳಿಸಿಕೊಂಡಾಗ ಪೂರ್ತೀ ಕಥೆಯೂ ತಾನು ಕೊಡುವ ಸುಖದಲ್ಲೇ ನಿವೃತ್ತವಾಗುತ್ತದೆ. ಅವನ ಒಡೆತನ ಕಥೆಯ ಮೇಲೆ ಉಳಿದಿರುತ್ತದೆ. ಆ ಕಥೆಗಳನ್ನು ಆಮೇಲೆ ಇನ್ನೊಂದು ದಿನ ಹೀಗೆ ನಮ್ಮನ್ನು ಮರದ ಕೆಳಗೆ ನಿಲ್ಲಿಸಿ, ಸಿಗರೇಟು ಹಚ್ಚಿ, ಮುಷ್ಠಿಯಲ್ಲಿ ಅದನ್ನು ಹಿಡಿದು, ಬಾಯಿಗಿಟ್ಟು ದಮ್ಮೆಳೆದು ನಮ್ಮ ನಗುವಿನ ಸುಖವನ್ನು ಕಥೆಗಳ ಒಡೆಯನಾಗಿ ಮತ್ತೆ ಮತ್ತೆ ಪಡೆಯಬಹುದಲ್ಲವೆ? ಪುನರುಕ್ತವೆನ್ನಿಸದಂತಹ ಪುನರ್ಜನ್ಮ ಅವನ ಕಥೆಗಳಿಗೆ. ಪ್ರತಿ ಸಾರಿ ಕೇಳಿಸಿಕೊಂಡಾಗಲೂ ಅವು ಹೊಸ ಕಥೆಗಳೇ.

೨) ಅರ್ಜುನ ಅತ್ಯಂತ ಪರಿಣತ ಬಿಲ್ಲುಗಾರನೆಂಬುದಕ್ಕೆ ಒಂದು ದೃಷ್ಟಾಂತ ಕಥೆಯಿದೆ. ಕೌರವ ಪಾಂಡವರೆಲ್ಲರೂ ಮರದ ಮೇಲಿನ ಪಕ್ಷಿಯ ಕತ್ತಿಗೆ ಗುರಿಯಿಟ್ಟು ನಿಂತಾಗ ಅವರೆಲ್ಲರಿಗೂ ಪಕ್ಷಿಯ ಕತ್ತು ಕಾಣುತ್ತದೆ; ಅದು ಕೂತ ಮರವೂ ಕಾಣುತ್ತದೆ. ಆದರೆ ಅರ್ಜುನನಿಗೆ ಪಕ್ಷಿಯ ಕತ್ತಲ್ಲದೆ ಬೇರೆ ಏನೂ ಕಾಣುವುದಿಲ್ಲ.

ಈ ಅರ್ಜುನ ಬಿಲ್ಲುಗಾರನಾದಾನು; ಖಂಡಿತ ಕಥೆಗಾರನಾಗಲಾರ.

೩) ರಾಜಾಜ್ಞೆಯಂತೆ ಮಾತು ನೇರ; ಅದಕ್ಕಿರುವುದು ಒಂದೇ ಅರ್ಥ. ನೀತಿ ಹೇಳುವ ಪ್ರಭು ಸಂಹಿತೆ ನೇರ; ಅದಕ್ಕಿರಬೇಕಾದ್ದು ಒಂದೇ ಅರ್ಥ. ಒಂದೇ ಮಾತಾಗಿ ಹೊಮ್ಮಬಲ್ಲ ಈ ಬಗೆಯ ಮನಸ್ಸಿನ ವ್ಯಾಪಾರಕ್ಕೂ, ಮಾತಿಗೆ ಇನ್ನೊಂದು ಮಾತು ಕೊಂಡಿಯಾಗುವ, ಮಾತು ಮಾತಿಗೆ ಕೂಡುವ ವಕ್ರ ಗುಪ್ತ ವ್ಯವಹಾರದಲ್ಲಿ ಮಾತು ಬಸಿರಾಗುವ ಕಥನವೆಂಬ ವ್ಯಾಪಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಥೆಯದು ಗುಪ್ತಗತ ವ್ಯವಹಾರದ ಬಚ್ಚಿಟ್ಟ ಸತ್ಯ.

೪) ಅದಾಯಿತು, ಆಮೇಲೆ ಇದಾಯಿತು ಎನ್ನುವುದೂ ಕಥೆಯೇ. ಎಲ್ಲ ಕಥೆಗಳಲ್ಲೂ ಹೀಗೆ ಬತ್ತಿ ಹಣತೆ ಎಲ್ಲ ಇರುತ್ತದೆ. ಆದರೆ ಪ್ರತಿಭೆಯಿದ್ದರೆ ಮಾತ್ರ ತಾನು ತೋರುತ್ತಲೇ ತನ್ನ ಸುತ್ತಲಿನ ಎಲ್ಲವನ್ನೂ ತೋರುವ ಉರಿಯುವ ಜ್ಯೋತಿ ಬತ್ತಿಯಲ್ಲಿ ಬೆಳಗುತ್ತದೆ.

೫) ಬ್ಲೇಕ್‌ ಹೇಳುವ ಒಂದು ಕಥೆ. ಪರಮ ಸುಂದರಿಯೊಬ್ಬಳನ್ನು ಮೋಹಿಸಿದ ಪರಮ ನೀತಿವಂತನೊಬ್ಬ ಬಗೆಬಗೆಯ ಧೀರೋದಾತ್ತ ಮಾತುಗಳಲ್ಲಿ ತನ್ನ ಪ್ರೇಮವನ್ನು ದಿನಗಟ್ಟಳೆ ಅರಿಕೆ ಮಾಡಿಕೊಂಡರೂ ಅವಳು ಒಲಿಯುವುದಿಲ್ಲ. ಹಾದಿಹೋಕ ಚೋರನೊಬ್ಬ ತುಂಟಾಗಿ ಅವಳನ್ನು ನೋಡಿ ಕಣ್ಣು ಹೊಡೆದದ್ದೇ ಅವನಿಗವಳು ಒಲಿದು ಬಿಡುತ್ತಾಳೆ.

ಇದು ಕಥೆಮಾತ್ರ ತೋರಬಲ್ಲ ಗುಟ್ಟಿನ ಸತ್ಯ.

*

(ಪಿ. ಚಂದ್ರಿಕಾ ಅವರನನ್ನೊಳಗಿನ ನಿನ್ನ ಕಥೆಗಳು೨೦೦೬ (ನಾಕುತಂತಿ ಪ್ರಕಾಶನ) ಸಂಕಲನಕ್ಕೆ ಪ್ರತಿಸ್ಪಂದನೆಯಾಗಿ ಬರೆದದ್ದು)