ಶ್ರೀ ಜಿ.ಪಿ. ಬಸವರಾಜು ‘ಒಂದು ಗುಲಾಬಿ’ ಕಥಾಸಂಕಲನವನ್ನು ಓದಿದ ಸಂತೋಷದಲ್ಲಿ ಈ ನನ್ನ ಕೆಲವು ಮಾತುಗಳು ಹುಟ್ಟಿವೆ. ಬಸವರಾಜರಿಗೆ ಕಥೆಯನ್ನು ದೊರಕುವಂತೆ, ದೊರಕಿದ್ದಕ್ಕೂ ಆಚೆ ಅದು ಇಣುಕಿ ಹೊಳೆಯುವಂತೆ ಸೃಷ್ಟಿಸುವ ಕಷ್ಟ, ಅಥವಾ ಸುಖ ಗೊತ್ತಿದೆ. ಆದರೆ, ಪುಣ್ಯವಶಾತ್ ಬರೆಯುವ ಕೆಲಸ ಇವರಿಗೆ ತೀರಾ ಕಷ್ಟವಾದ್ದು ಎನ್ನಿಸುವುದಿಲ್ಲ. ತೀರಾ ಸುಲಭವಾದ್ದು ಎಂದೂ ಅನ್ನಿಸುವುದಿಲ್ಲ. ಸೂಕ್ಷ್ಮತೆಯ ಜೊತೆ ಸರಳೆಯೂ ಇದ್ದಾಗ ಹೀಗೆ ಶೈಲಿ ಸುಲಭವಾಗಿರುತ್ತದೆ. ಎಲ್ಲಿ ಎಷ್ಟು ಹಿಡಿದು ಹೇಲಬೇಕು, ತೋರುವಂತೆ ಆದರೆ ತೋರಿಕೆಯಾಗದಂತೆ ಹೇಗೆ ಹೇಳಬೇಕು, ಅದೃಶ್ಯಕ್ಕೆ ಏನನ್ನು ಬಿಟ್ಟುಕೊಡಬೇಕು ಇದು ಕಥೆಗಾರನ ಕಲಾಪ್ರಜ್ಞೆಗೂ, ಕಲಿತು ಬರುವ ನಿಪುಣತೆಗೂ ಸೇರಿದ್ದು, ಇಂಥ ಗುಣಗಳನ್ನು ಪಡೆದ ಬಸವರಾಜು ನಮ್ಮ ನಡುವಿನ ಹೊಸ ಪಿಳೀಗೆಯ ಒಳ್ಳೆಯ ಕಥೆಗಾರರಲ್ಲಿ ಒಬ್ಬರಾಗಿದ್ದಾರೆ.

ಕಥೆಗಳ ಹಿಂದಿರುವ ವೈಚಾರಿಕೆ ಆಧುನಿಕ ಉದಾರವಾದಿ ಮನಸ್ಸಿನದು. ನಾವು ಏನನ್ನು ಕಾಣುತ್ತೇವೆ ಮತ್ತು ಕಲಾವಂತಿಕೆಯಲ್ಲಿ ಕಾಣಿಸುತ್ತೇವೆ ಎಂಬುದರ ಹಿಂದೆ ಆಯಾ ಕಾಲದ ಮುಖ್ಯ ಪ್ರವಾಹದ ವೈಚಾರಿಕತೆ ಕೆಲಸ ಮಾಡಿರುತ್ತದೆ. ಈ ವೈಚಾರಿಕತೆಯನ್ನು ಸಮಸ್ಯಾತ್ಮಕಗೊಳಿಸುವ ಅನುಮಾನ ಒಳ್ಳೆಯ ಲೇಖಕರಲ್ಲಿ ಕೆಲಸ ಮಾಡುತ್ತದೆ. ಸಾಮಾನ್ಯ ಲೇಖಕ ತನ್ನ ಕಾಲದ ವೈಚಾರಿಕತೆಯನ್ನು ಕೇವಲ ಮಂಡಿಸಿ ತೃಪ್ತನಾಗುತ್ತಾನೆ. ಈ  ಬಗ್ಗೆ ಇನ್ನಷ್ಟು ಹೇಳಬಹುದು.

ನೆಪೋಲಿಯನ್ ಹೇಳಿದ ಒಂದು ಮಾತಿದೆ. ಅರಮನೆಯ ಒಳಗಿರುವವನು ಭಾವಿಸುವ ಕ್ರಮ ಬೇರೆ, ಹೊರಗಿರುವವನು ಭಾವಿಸುವ ಕ್ರಮ ಬೇರೆ ಎಂಬುದು ಅವನ ಮಾತಿನ ತಾತ್ಪರ್ಯ. ಅಂದರೆ ತಂತ್ರ ಸ್ವತಂತ್ರ ವಿಚಾರವೆಂಬುದು ಇಲ್ಲ. ಸರ್ವಮಾನ್ಯ ವಿಚಾರ  ಎಂಬುದೂ ಇಲ್ಲ. ನಾವು idea (ವಿಚಾರ) ಎಂದುಕೊಂಡದ್ದು ಅದನ್ನು ಭಾವಿಸುವವನ ಐಡಿಯಾಲಜಿ (idealogy) ಆಗಿರುತ್ತದೆ. ಎಲ್ಲಿ ನಿಂತು ನೋಡಿದ್ದು ಕಾಂಟೆಕ್ಟ್ಸ್ ಯಾವುದು ಎಂಬುದನ್ನು ತಿಳಿಯದ ಹೊರತು ಐಡಿಯಾಕ್ಕೆ ಸ್ವತಂತ್ರ ಅರ್ಥವಿಲ್ಲ.

ಒಂದು ವಿಚಾರದ ಹಿಂದೆ ಅಪ್ರತ್ಯಕ್ಷವಾಗಿ ವೈಯಕ್ತಿಕ ಸ್ವಾರ್ಥವೋ, ಅಥವಾ ಒಂದು ಸಮುದಾಯದ ಸ್ವಾರ್ಥವೊ ಅಡಗಿರಬಹುದೆನೊ ಎಂಬ ಅನುಮಾನ; ಮನುಷ್ಯನ ಕೃತಿಯಲ್ಲಿ ಇತಿಹಾಸದ ನಿರ್ದಯ ಅಗತ್ಯದ ಪೂರೈಕೆಯಾಗುತ್ತಿದೆಯೇ ಎಂಬ ಅನುಮಾನ; ಧಿರೋದಾತ್ತ ನಿಲುವು ಎಂದು ತಿಳಿದು ನಾವು ಬೀಗಬಹುದಾದ ಸಂದರ್ಭದಲ್ಲಿ ಅದನ್ನು ಕೊಂಚ ಹಂಗಿಸಿ ನೋಡುವ ಐರನಿ ಇದಕ್ಕೆ ಅವಕಾಶವಿಲ್ಲದ ಸಮಾಜ ಅಲ್ಪವಾದದ್ದಾಗುತ್ತದೆ. ಆಗ ನಾವು ಒಂದು ನಾಗರಿಕತೆಯಲ್ಲಿ ಜೀವಿಸುತ್ತಿರುವುದಿಲ್ಲ. ಕನ್ನಡದ ಎಲ್ಲ ಒಳ್ಳೆಯ ಬರಹಗಾರರೂ ತಮ್ಮ ಐಡಿಯಾಲಜಿಗಳನ್ನು ಅಂದರೆ ನಂಬಿಕೆಗಳನ್ನು ವಜ್ರಕವಚ ಮಾಡಿಕೊಂಡವರಲ್ಲ ಎಂಬುದು ನಮ್ಮ ಕಥಾಲೋಕದ ಕಲ್ಪನಾಶಕ್ತಿಗೆ ಪ್ರಿಯವಲ್ಲದ್ದನ್ನೂ ಕಾಣುವ, ಕಾಣಿಸುವ ಶಕ್ತಿಯನ್ನು ಒದಗಿಸಿದೆ ಎನ್ನಬಹುದು. ಸೋವಿಯತ್ ಲೇಖಕರು ಸ್ಟಾಲಿನ್ ವಾದಕ್ಕೆ ಬಲಿಯಾದಂತೆ, ತಮಿಳು ಲೇಖಕರು ದ್ರಾವಿಡ ಕಜಗಂನ ಭಕ್ತರಾದಂತೆ ಕನ್ನಡದ ಯಾವ ಗಣ್ಯ ಲೇಖಕನೂ ಆಗಿಲ್ಲವೆಂಬುದು ಹೊಸ ಪಿಳೀಗೆಯ ಶ್ರೀ ಬಸವರಾಜುರಂಥವರ ಬರವಣಿಗೆಯ ಹಿಂದಿರುವ ಮುಕ್ತ ಮನಸ್ಸಿನ ಪೋಷಕವಾಗಿದೆ ಎಂದು ನನಗೆ ಅನ್ನಿಸುತ್ತದೆ.

ಇಂಗ್ಲೆಂಡಿನ ಉದಾರವಾದಿಯಾದ ಜಾನ್ ಸ್ಟುವರ್ಟ್ ಮಿಲ್ ತನ್ನ ಅನುಯಾಯಿಗಳಿಗೆ ಹೇಳುತ್ತಿದ್ದನಂತೆ : ನಮ್ಮ ವಿಚಾರಗಳಿಗೆ ಪರಮ ವಿರೋಧಿಯಾದ ಕೋಲ್ ರಿಡ್ಜನ ಕನ್‌ಸರ್ವೆಟಿವ್ ವಿಚಾರಗಳನ್ನು ಅಪ್ರಿಯವಾದರೂ, ಆಳವಾಗಿ ಪರಾಮರ್ಶಿಸಿ ಗಟ್ಟಿಯಾಗಿ ಎಂದು. ಪ್ರಪಮಚದ ಸಾಹಿತ್ಯ ಲೋಕದಲ್ಲಿ ಎಷ್ಟು ಮಾನವತಾವಾದಿಗಳಾದ ಪ್ರಗತಿಪರರು ಇದ್ದಾರೊ, ಅಷ್ಟೇ ಪ್ರಾಯಶಃ ಇನ್ನೂ ಹೆಚ್ಚು ಶಕ್ತರಾದ ಮಾನವನ ಒಳ್ಳೆಯತನವನ್ನೇ ಶಂಕಿಸುವ, ಜೀವನದಲ್ಲಿಯ ಈವಿಲ್‌ಗೆ ಎದುರಾಗಿ ದಿಗ್ಭ್ರಮೆಯಿಂದ ಬರೆಯುವ ದಾಸ್ತೋವಸ್ಕಿಯಂಥ ಲೇಖಕರೂ ಇದ್ದಾರೆ. ‘ಪ್ರಗತಿ ವಿರೋಧಿ’ ದಾಸ್ತೋವಸ್ಕಿಗೆ ಮಾನವೀಯತೆಯ ಸಂಕಲ್ಪಗಳಿಗೆ ವಿರೋಧವಾಗುವುದರಲ್ಲೇ ಖುಷಿಪಡುವ ಲಂಪಟತೆಯೂ ಅಲ್ಪತೆಯೂ ಗೊತ್ತಿವೆ. ಅಂತಯೇ ಟಾಲ್ ಸ್ಟಾಯ್‌ಗೆ ನಮ್ಮ ಉದಾತ್ತ ಧೋರಣೆಗಳನ್ನೇ ಮುಖವಾಡ ಮಾಡಿಕೊಂಡು ಹೊಂಚುವ ಈವಿಲ್‌ಗೆ ಪರಿಚಯವಿದೆ.

ಈ ಮಾತುಗಳು ಕೊಂಚ ಅಪ್ರಸ್ತುತ ಎನ್ನಿಸಬಹುದು – ಸಧ್ಯದ ಬಸವರಾಜುವನ್ನು ತಿಳಿಯಲು, ಆದರೆ ತನ್ನ ಶೃದ್ಧೆ ಇಡಿಯಾಗಿ ಗಟ್ಟಿಯಾಗಲು ಹೀಗೆ ಜೀವನವನ್ನು  ಮುಕ್ತವಾಗಿ ಪರಿಭಾವಿಸುವ ಅಗತ್ಯವಿದೆ ಎಂಬುದು ಲೇಖಕನಾಗಿ ಅವರಿಗೆ ತಿಳಿದಿರಬಹುದು ಎನ್ನಿಸುತ್ತದೆ.

*

ಬಡವರ ಬಗ್ಗೆ ಅನುಕಂಪದಿಂದ ಬರೆಯಬೇಕೆನ್ನುವುದು ಈ ಕಾಲದ ಒಂದು ಗ್ರಹಿತ. ಆದ್ದರಿಂದಲೇ ಅಂಥ ಬರವಣಿಗೆ ನಮಗೆ ತಟ್ಟದೆ ಹೋಗುತ್ತದೆ. Politically correct ಆಗಿ ಮಾತಾಡುವನು ಮುಂದೇನು ಆಡುತ್ತಾನೆ ಎಂಬುದು ಅವನು ಬಾಯಿ ತೆರೆಯುವ ಮುಂಚೆಯೇ ನಮಗೆ ತಿಳಿದಿರುತ್ತದೆ. ಈ ದೃಷ್ಟಿಯಿಂದ ಮನೆ ಬಂತಾ ಮನೆ ಬಂತಾ? ಕತೆಯ ನಿರ್ವಹಣೆ ಗಟ್ಟಿಯಾಗಿದೆ.  ಇಲ್ಲಿ ಬೀದಿಯಲ್ಲಿ ಸಿಕ್ಕ ಅನಾಥ ಮಗುವುದ ತನ್ನನ್ನು ಶೋಷಿಸುತ್ತಿರಬಹುದು ಎಂಬ ಅನುಮಾನಕ್ಕೂ ಎಡೆಯಿದೆ. ಆ ಮಗುವಿನ ಕಡೆಯವರು ಎಂದು ಹೇಳಿಕೊಂಡು ಕಥೆಯ ನಾಯಕನನ್ನು ಹಿಂಸೆಗೆ ಒಳಪಡಿಸುವ ಬೀದಿಹೋಕರು ನತದೃಷ್ಟರೂ ಹೌದು. ಕೆಡುಕರೂ ಹೌದು. ಕಥಾನಾಯಕನ ಧೀರೋದಾತ್ತ ಒಳ್ಳೆಯತನ ತಾನು ಸಿಕ್ಕಿಹಾಕಿಕೊಂಡ ಪೇಚಿನಲ್ಲಿ ನರಳಿ ಬಡವಾಗುತ್ತದೆ. ಅದೇ ಕಥೆಯಲ್ಲಿ ಸಿನಿತನಕ್ಕೆ ಅವಕಾಶವಿಲ್ಲದಂತೆ ಈ ಸತ್ಯಗಳು ನಮಗೆ ಎದುರಾಗುತ್ತವೆ. ಅಂತಃಕರಣ ಇನ್ನೇನು ಬತ್ತಿಯೇ ಹೋಯಿತು ಎನ್ನಿಸುವಾಗ ಕಥಾನಾಯಕನ ಮುಗ್ಧ ಮಗು – ಅದೃಷ್ಟಶಾಲಿಯಾದ ಮಗು ಇಷ್ಟೆಲ್ಲ ಹಿಂಸೆಗೆ ಕಾರಣವಾದ ಅನಾಥ ಮಗುವನ್ನು ನೋಡಬೇಕೆಂದು ಆಸೆಪಡುತ್ತದೆ. ಮಾನವೀಯ ಅನುಕಂಪ ಕಳೆದುಹೋಗುವುದು ಎಷ್ಟು ಸಹಜವೋ ಮತ್ತೆ ಅದು ತನ್ನ ಕಹಿಯನ್ನು ಕಳೆದುಕೊಂಡು ತಲೆಯೆತ್ತುವುದು ಅಷ್ಟೇ ಸಹಜವೆನಿಸುವ ಇಲ್ಲಿಯ ಕಥನ ಆರೋಗ್ಯ ಪೂರ್ಣವಾದ ವಿವೇಕದ್ದಾಗಿದೆ.

ನೆಲೆ ಕಥೆ ನಮ್ಮನ್ನು ಕಾಡುವಂತಿದೆ. ಆಧುನಿಕ ಜಗತ್ ವ್ಯವಸ್ಥೆಯ ಹಿಂದಿರುವ ಟ್ರೈಬಲ್ ಜನಾಂಗದ ಬಗೆಗಿನ ಮೆಚ್ಚುಗೆ, ಕುತೂಹಲ, ಹೊಸ ಅನುಭವದ ಹುಟುಗಾಟ ಈ ಎಲ್ಲವೂ ನಿಷ್ಠುರವಾದ ಶೋಧಕ್ಕೆ ಈ ಕಥೆಯಲ್ಲಿ ಒಳಗಾಗಿವೆ. ಸಿನಿಮಾ ತಂಡದವರ ನಡುವಿನ ಸಂಕೀರ್ಣವಾದ ಸಂಬಂಧಗಳನ್ನು ಕಾನಿಸುತ್ತಲೇ ಕಥೆ ನಾಗರಿಕರೆಂದುಕೊಂಡ ಜನರು ಮಾಡುವ ಶೋಷಣೆಯನ್ನು ಬಯಲು ಮಾಡುತ್ತದೆ. ಆದರೆ ಕಥೆಯ ಅರ್ಥಪೂರ್ಣ ತಿರುವಿರುವುದು ರಾಮಪ್ಪ ಕೊಡುವ ಹಣಕ್ಕಾಗಿ ದೇವರಾಗಿಬಿಟ್ಟು ಕುಣಿಯತೊಡಗಿದ ಮಾಯನ ಅದಮ್ಯ ಅಟ್ಟಹಾಸದ ಬೇಡಿಕೆಯಲ್ಲಿ. ಕಥೆ ದಟ್ಟವಾಗಿದೆ, ಶ್ರಿಮಂತವಾಗಿದೆ, ಅನಿರೀಕ್ಷಿತಕ್ಕೆ ನಾವು ಎದುರಾಗುವಂತೆ ಹೆನೆದುಕೊಳ್ಳುತ್ತಾ ಬೆಳೆದಿದೆ.

ಒಂದು ಗುಲಾಬಿ ಒಳ್ಳೆಯ ಕಥೆ ಎಂದು ಹೇಳಿ ನಾನು ತೃಪ್ತಿಪಡಲಾರೆ, ಈ ಕಥೆ ಕೆಲವು ತಾತ್ವಿಕ ಪ್ರಶ್ನೆಗಳನ್ನು ಎತ್ತುವಂತಿದೆ. ಮುಸ್ಲಿಂ ಜನಾಂಗಕ್ಕೆ ಸೇರಿದ ‘ಸರ್ದಾರ‍್’ ನ ಮೋಹಕವಾದ ವ್ಯಕ್ತಿತ್ವವನ್ನು ಕಥೆ ತುಂಬ ನೈಪುಣ್ಯದಿಂದ ಕಟ್ಟಿಕೊಡುತ್ತದೆ. ನಾವೆಲ್ಲರೂ ಬಯಸುವ ಸೆಕ್ಯುಲರ‍್ ಐಡಿಯಾಲಜಿಯನ್ನು ಗಟ್ಟಿಗೊಳಿಸುವಂತೆ, ಹೃದ್ಯಗೊಳಿಸುವಂತೆ ಕಥೆ ಬೆಳೆಯುತ್ತದೆ. ಆದರೆ ಯಾವುದೋ ಮರೆಯಲ್ಲಿ ನಿಂತು ನಮ್ಮ ಸೆಕ್ಯೂಲರ‍‌‌ ಐಡಿಯಾಲಜಿ ಈ ಮುಸ್ಲಿಂ ಪಾತ್ರದಿಂದ ಘೋಷಣೆಯನ್ನು ಬಯಸದೇ ಇದ್ದಲ್ಲಿ ಇದೊಂದು ಮನಮುಟ್ಟುವ ಕಥೆಯಾಗಿ ಮಾತ್ರ ಇರುತ್ತಿತ್ತು. ಆದರೆ ಸೆಕ್ಯೂಲರ್‌ ಧೋರಣೆಗೆ ಪೋಷಕವಾಗುವ ಹೊಂಚು ಕಥೆಯಲ್ಲಿರುವುದರಿಂದ ಕಥೆಯಿಂದ ದೂರವಾದೊಡನೆಯೇ ನಾವು ಕೇಳುವ ಪ್ರಶ್ನೆಯೆಂದರೆ, ನಮ್ಮ ಸಹಾನೂಭೂತಿ ಪಡೆಯಲು ಒಬ್ಬ ಮುಸ್ಲಿಂ, ಸರ್ದಾರನಷ್ಟು ಒಳ್ಳೆಯವನಾಗಿರ ಬೇಕಾಗಿರುವುದು ಯಾಕೆ ಅಗತ್ಯ? ಎಲ್ಲಾ ಮನುಷ್ಯರಂತೆ ಮುಸ್ಲಿಂರೂ ಇರುವುದಿಲ್ಲವೇ? ನಮ್ಮ ಕಾಲದ ಎಲ್ಲಾ ಲೇಖಕರಿಗೂ ಮುಸ್ಲಿಂ ಪಾತ್ರ ನಿರ್ವಹಣೆಯಂತೆಯೇ ದಲಿತ ಪಾತ್ರ ನಿರ್ವಹಣೆಯೂ ಸುಲಭವಾದದ್ದಲ್ಲ. ಪರ-ವಿರೋಧ ಧೋರಣೆಗಳ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಈ ಕಾಲದ ಲಿಬರಲ್ ಲೇಖಕ ತನಗೆ ತಿಳಿಯದಂತೆ ಒಂದೊ ಉಬ್ಬಿ ಹೇಳುತ್ತಾನೆ; ಅಥವಾ ಉಬ್ಬಿಸಿ ತೋರಿಸುತ್ತಾನೆ. ಬಸವರಾಜು ಸರ್ದಾರನನ್ನು ‘ಉಬ್ಬಿಸಿ’ ತೋರಿಸಿದ್ದಾರೆಂದು ನಾನು ಹೇಳುತ್ತಿಲ್ಲ ಆದರೆ ಹಾಗೆನ್ನಿಸಬಹುದಾದ ಸಮದರ್ಭದಲ್ಲಿ ನಾವಿದ್ದೇವೆ. ನಾವು ಸಾಮಾನ್ಯವಾಗಿ ಯಾವ ಅಂಜಿಕೆಯಿಲ್ಲದೆ ಕುಂಕುಮವಿಟ್ಟ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಹೆಂಗಸಿನಿಂದ ಪುಳಕಿತರಾಗುತ್ತೇವೆ. ಅಥವಾ ‘ನೋಡಿ ಹಳ್ಳಿಯಲ್ಲಿ ಮತೀಯ ಭಾವನೆಯಿಲ್ಲ’ ಎನ್ನುತ್ತೇವೆ. ಮುಸ್ಲಿಂರನ್ನು ಇನ್ನೊಂದು ಜಾತಿಯೆಂದು ತಿಳಿಯಬಹುದಾದ ಹಳ್ಳಿಗಳಲ್ಲಿ ಮತೀಯ ಭಾವನೆ ಇಲ್ಲದಿರುವುದು ದೊಡ್ಡ ವಿಷಯವಲ್ಲ. ಹಿಂದುಗಳಿಗೆ ಅನ್ಯವಾದ ದೈವಕಲ್ಪನೆಯುಳ್ಳ ಮುಸ್ಲಿಂರು ಹೀಗೆ ತಮ್ಮನ್ನು ಇನ್ನೊಂದು ಜಾತಿಯೆಂದು ತಿಳಿಯುವುದನ್ನು ಸಹಿಸದೇ ಹೋಗಬಹುದು ಎಂಬುದು ನಮಗೆ ಹೊಳೆಯುವುದಿಲ್ಲ. ಹಾಗೆಯೇ ಒಂದು ದಲಿತ ಪಾತ್ರ ಒಳ್ಳೆಯವನಾಗಿ ಕಂಡರೂ ಅಥವಾ ಕೆಟ್ಟವನಾಗಿ ಕಂಡರೂ ಸವರ್ಣೀಯ ಲೇಖಕ patronizing ಎಂದೋ, ಅನಾದಾರದ ಧೋರಣೆಯವನೆಂದೋ ನಾವು ಗುಮಾನಿಯಿಂದ ನೋಡಬಹುದಾದ ಕಾಲ ಇದು. ಆದರೆ ಆಶ್ಚರ್ಯವೆಮದರೆ ನಾಯಿಗುತ್ತಿಯನ್ನು ಸೃಷ್ಟಿಸಿದ ನವೋದಯದ ಕುವೆಂಪುವಾಗಲೀ, ಚೋಮನನ್ನು ಸೃಷ್ಟಿಸಿದ ಕಾರಂತರಿಗಾಗಲೀ ಈ ಸಮಸ್ಯೆ ಇರಲಿಲ್ಲ. ಮತ್ತೆ ನಾವು ಈ ಹಿಂದಿನ ಲೇಖಕರ ನಿರಂಬಳತೆಯನ್ನು ಪಡೆದುಕೊಳ್ಳಬೇಕಾಗಿದೆ, ಪಡೆದುಕೊಂಡ ಲೇಖಕ ದೊಡ್ಡವನಾಗುತ್ತಾನೆ.

*

‘ಒಂದು ಗುಲಾಬಿ’ (೨೦೦೪) ಕಥಾಸಂಕಲನಕ್ಕೆ ಬರೆದ ಮುನ್ನುಡಿ