ಈಚಿನ ಕನ್ನಡ ಬರವಣಿಗೆಯಲ್ಲಿ ಮುಖ್ಯವಾಗಿ ಎರಡು ವಿಧಗಳಲ್ಲಿ ಲೇಖಕನ ‘ಅಹಂ’ ಬಳಕೆಯಾಗುತ್ತಿದೆ. ತನ್ನನ್ನು ಆಕರ್ಷಕವಾಗಿ ತೋರಿಕೊಳ್ಳುವ ಅಹಂ ಒಂದಾದರೆ, ಮುಜುಗುರಗೊಳ್ಳದೆ ತನ್ನ ನಿಜವನ್ನು ತೋಡಿಕೊಳ್ಳುವ ಅಹಂ ಇನ್ನೊಂದು. ಲಂಕೇಶರನ್ನು ಜರ್ನಲಿಸ್ಟಾಗಿ ಮೆರೆಸಿದ್ದು (ಎಲ್ಲೆಡೆಯಲ್ಲಿ? ಅಥವಾ ಕೆಲವೆಡೆಯಲ್ಲಿ) ಮೊದಲನೆಯ ಅಹಂ; ಅವರನ್ನು ನಮ್ಮ ಕಾಲದ ಮಹತ್ವದ ಲೇಖಕರ ನಡುವೆ ಅನನ್ಯಗೊಳಿಸಿದ್ದು ಮಾತ್ರ, ಸಾಮಾಜಿಕ ಮುಜುಗುರಗಳನ್ನು ಮೀರುವಂತೆ, ನಮ್ಮ ನಡತೆಯ ತೋರಿಕೆಗಳನ್ನು ಬಯಲಿಗೆಳೆದು ಬೆಚ್ಚಿಸುವಂತೆ ಶೋಧವಾಗುವ ಎರಡನೆಯ ಅಹಂ, ನಮ್ಮೆದುರು ಒಡ್ಡಿ ನಿಲ್ಲುವ ಅಹಂ ಅಲ್ಲ; ಆಪ್ತ ಕಾಣಿಕೆಗಳಿಗೆ ವಸ್ತುವಾಗುವ ಅಹಂ : ಅಂದರೆ ನಿಷ್ಠುರವಾಗಿ ಶೋಧಗೊಳ್ಳುವ ಅಹಮಿಕೆ. ಚಲನಚಿತ್ರ ಲೋಕದಲ್ಲೂ, ಕಥೆಗಾರರಾಗಿಯೂ ಪ್ರಸಿದ್ಧರಾದ ನಾಗತಿಹಳ್ಳಿಯವರ ಬರವಣಿಗೆ ಎರಡನೆಯ ಬಗೆಯದು.

ತನ್ನಲ್ಲಿನ ದೇವತ್ವವನ್ನು ಗುರಿತಿಸಿಕೊಳ್ಳುವುದು ಮೇಲಿನ ಎರಡು ಬಗೆಗಳಿಗೂ ಭಿನ್ನವಾದದ್ದು. ತನ್ನನ್ನು ಒಂದು ‘ಆತ್ಮ’ವೆಂದು ಗುರುತಿಸಿಕೊಳ್ಳುವ ಸಂವೇದನೆಯಿಂದ ಹುಟ್ಟುವುದು ‘ಅಹಂ’ನ ಭಾವವನ್ನು ಮೀರಿನಿಂತ ಒಂದು ಸ್ಥಿತಿ. ಕುವೆಂಪು ಕುರಿತು ನಾನು ಬರೆದ ಸಾಲೊಂದು ಹೀಗಿದೆ : ‘ಕುವೆಂಪು ಹಾಘೆ ಮಾತಾಡಬೇಕಾದರೆ / ತನ್ನ ಘನತೆಯಲ್ಲೇ ಅಪಾರ ನಂಬಿಕೆ ಬೇಕು’, ನವೋದಯದ ಹಿರಿಯರಿಗೆ ಸಾಧ್ಯವಾದದ್ದು ಇದು; ನಮ್ಮ ಕಾಲದ ಲೇಖಕರಿಗೆ ಇದು ಸಾಧ್ಯವಿಲ್ಲ ಮಾತ್ರವಲ್ಲ; ಹಾಗೆ ತಮ್ಮ ಅನುಭವವನ್ನು ಕಂಡುಕೊಳ್ಳುವುದರಲ್ಲಿ ಗುಮಾನಿಯೂ ಇದೆ. ಯಾಕೆಂದರೆ ‘ಇದು ನಾನು ಮಾತ್ರವಲ್ಲ; ಸಾರ್ವಕಾಲಿಕ ಸತ್ಯದ ಆತ್ಮ’ ಎಂಬ ನಂಬಿಕೆಯ ಆಧಾರಗಳನ್ನು ಫ್ರಾಯ್ಡ್ ಮತ್ತು ಮಾರ್ಕ್ಸರು ನಾಶಮಾಡಿದ್ದಾರೆ. ಎರಡು ಮಹಾಯುದ್ಧಗಳ ಹಿಂಸೆ ಭಾರತದಲ್ಲಿ ನಡೆಯುತ್ತಿರುವ ಕೋಮುಹಿಂಸೆ, ವ್ಯಾಪಾರ ಕೇಂದ್ರಿತ ಜಾಗತೀಕರಣ, ಭೋಗ ಮೂಲವಾದ ನಾಗರಿಕತೆ – ಎಲ್ಲವೂ ಕೂಡಿ ಮಾನವನ ತಾನೊಂದು ಆತ್ಮ ಎಂಬ ಭಾವನೆಯನ್ನು ಅಲ್ಲಾಡಿಸಿದೆ.

ಇದರ ಪರಿಣಾಮವಾಗಿ ಮತ್ತು ಅತಿ ಬಳಕೆಯಿಂದ ದಣಿದು ಹೋದ ಸಾಹಿತ್ಯ ಪ್ರಕಾರಗಳಿದಾಗಿ, ಸಾಹಿತ್ಯದ ಅಪೇಕ್ಷೆಗಳೂ ಬದಲಾಗಿವೆ; ಇದು ಕಥೆ, ಇದು ಕವನ, ಇದು ಎಸ್ಸೆ ಇತ್ಯಾದಿಗಳ ಅಚ್ಚುಕಟ್ಟುಗಳೂ ಅಳಿಸಿ ಹೋಗುತ್ತಿವೆ. ಹಿಂದೊಂದು ಕಾಲದಲ್ಲಿ ‘ಪ್ರಬುದ್ಧ ಕರ್ನಾಟಕ’ದಲ್ಲೋ, ‘ಜೀವನ’ದಲ್ಲೋ, ‘ಕನ್ನಡನುಡಿ’ಯಲ್ಲೋ ಬೆಳಕಿಗೆ ಬರುತ್ತಿದ್ದ ಹೊಸ ಲೇಖಕರು ತುರ್ತಾದ ಐಹಿಕಗಳಿಗೆ ಮುಖವಾಣಿಗಳಾದ ವಾರಪತ್ರಿಕೆಗಳಲ್ಲಿ, ದೈನಿಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

*

ಮೇಲಿನ ಮಾತುಗಳು ‘ಇದು ಸರಿ, ಇದು ತಪ್ಪು’ ಎನ್ನುವಂತಹ ಮಾತುಗಳಲ್ಲ. ಇರುವುದನ್ನು ಗುರುತಿಸಿ ಕೊಳ್ಳುವ ಮಾತುಗಳು.

ನಾಗತಿಹಳ್ಳಿ ಚಂದ್ರಶೇಖರರ ‘ನನ್ನ ಪ್ರೀತಿಯ ಹುಡುಗಿಗೆ’ ಪತ್ರಗಳನ್ನು ಓದುತ್ತಿದ್ದಂತೆ, ಓದುವ ಸಂತೋಷದಲ್ಲೇ ಹುಟ್ಟಿದ ಭಾವನೆ ಮೇಲಿನವು. ಆದರೆ ಹಳೆಯ ತಲೆಮಾರಿನವನಾದ ನನಗೆ ನನ್ನ ಮೆಚ್ಚಿಗೆಯನ್ನು ಹೇಳಬಹುದಾದ ಕ್ರಮವೂ ಹೊಳೆಯುತ್ತಿಲ್ಲ. ರವಿ ಬೆಳೆಗೆರೆಯವರು ಬರೆದಂತೆ ನಾನು ಬರೆಯಬೇಕು; ಆದರೆ ಅದು ನನ್ನ ಕ್ರಮವಲ್ಲ.

ನನಗೊಬ್ಬ ಹಿಂದಿ ಲೇಖಕ ಗೆಳೆಯನಿದ್ದಾನೆ ಅಶೋಕ ವಾಜಪೇಯಿ ಅವನ ಹೆಸರು. ಬಲು ಚುರುಕು ಮಾತಿನ ಬರಹಗಾರ. ಅವನ ಅರವತ್ತನೇಯ ಹುಟ್ಟುಹಬ್ಬದಲ್ಲಿ ಮಾತಾಡುತ್ತಾ ನಾನು ಅವನ ಅತ್ಯಂತ ಆಕರ್ಷಕ ತುಂಟತನವನ್ನು ಮೆಚ್ಚುತ್ತಲೇ ಹೇಳಿದೆ : ‘ಸ್ವಲ್ಪ ಡಲ್ಲಾಗುವ ಧೈರ್ಯವನ್ನು ನೀನು ಇನ್ನು ಮುಂದೆ ತೋರದೆ ಬೆಳೆಯಲಾರೆ’. ವಿಪರ್ಯಾಸವೆಂದರೆ, ನನ್ನದೂ ತುಂಟ ಮಾತಾಗಿ ತೋರಿ ಎಲ್ಲರೂ ನಕ್ಕರು, ಅಶೋಕನೂ ನಕ್ಕ!

ನಾಗತಿಹಳ್ಳಿ ತಮ್ಮ ಕಾಲಂನಲ್ಲಿ ಒಮ್ಮೆ ಕವಿಯಾಗಿ, ಇನ್ನೊಮ್ಮೆ ಕತೆಗಾರನಾಗಿ, ಅಲ್ಲಿ ಇಲ್ಲಿ ಆತ್ಮಶೋಧಕನಾದ ಚಿಂತನಾಗಿ, ಮುಚ್ಚುಮರೆಯಿಲ್ಲದ ಪ್ರೇಮಿಯಾಗಿ, ನಿರೀಶ್ವರವಾದಿಯಾಗಿದ್ದು, ತಾಯಿತಂದೆಯ ಪ್ರೀತಿಗಾಗಿ ತನ್ನ ಹಳ್ಳಿಯಲ್ಲಿ ದೇವಸ್ಥಾನ ಕಟ್ಟಿಸುವವನಾಗಿ ನಮಗೆ ಎದುರಾಗುತ್ತಾರೆ. ಇಂಥ ನಿವೇದನೆಗಳಲ್ಲಿ ‘ಉತ್ಪ್ರೇಕ್ಷೆಗಳಿರದಂತೆ, ಸತ್ಯನಾಶವಾಗದಂತೆ’ ಮಾತಾಡಬೇಕೆಂಬ ಅರಿವು ಅವರಿಗಿದೆ. ‘ಪರನಿಂದೆಯ ಗುರಿಯ ಆತ್ಮ ನಿಂದೆಯ’ ಹುನ್ನಾರ ಅವರಿಗೆ ತಿಳಿಯುತ್ತದೆ. ಆತ್ಮಪ್ರಶಂಸೆಯಿಂದ ಶುರುವಾದದ್ದು ಆತ್ಮ ವಿಮರ್ಶೆಯಾಗಬಹುದೆಂಬುದೂ ಅವರಿಗೆ ತಿಳಿದಿದೆ. ಇವೆಲ್ಲದರ ಜೊತೆಗೆ, ಬಡತನ, ಸೋಲು, ಅಪಮಾನಗಳಲ್ಲದೆ, ಅಂತರ ರಾಷ್ಟ್ರೀಯವಾದ ಯಶಸ್ಸು, ತಾನು ಹಲವರಿಗೆ ಆಕರ್ಷಕವಾಗಿದ್ದೇನೆಂಬ ನಿಜ – ಇವೂ ಗೊತ್ತಿದೆ. ಗೊತ್ತಿದ್ದೂ ತನ್ನ ಒಳಜೀವನದ ಆತಂಕಗಳನ್ನು, ತಳಮಳಗಳನ್ನು ಹೇಳಿಕೊಳ್ಳುವ ಧೈರ್ಯವಿದೆ.

ಮೇಲಿನ ಗುಣಗಳು ಉತ್ಕೃಷ್ಟವಾದ ಸಾಹಿತ್ಯದ ಲಕ್ಷಣಗಳೂ ಹೌದು. ಒಂದೇ ಕೃತಿಯಲ್ಲಿ ಈ ಎಲ್ಲವನ್ನೂ ಒಂದಕ್ಕೊಂದು ಗುಣಿಡಿಕೊಳ್ಳುವ ಸಂಬಂಧವಿರುವಂತೆ ಧ್ಯಾನಿಸಬೇಕೆಂಬ ಸಂಕಲ್ಪದ ನನ್ನಂಥ ಬರಹಗಾರನಿಗೆ ಪ್ರತಿವಾರವೂ ಆಕರ್ಷಕವಾಗಿರಬೇಕಾದ ಇಂತಹ ಅಹಂ ಶೋಧದಲ್ಲಿ ಅವು ಚೆಲ್ಲಿ ಹೋಗುತ್ತವೆಂಬ ಭಯವಿದೆ; ಆದರೆ ನಾಗತಿಹಳ್ಳಿಯವರಂತಹ ಈ ಕಾಳದ ಶ್ರೇಷ್ಠ ಬರಹಗಾರರಿಗೆ ಈ ಆತಂಕ ಕಾಡುವಂತೆ ತೋರುವುದಿಲ್ಲ. ಆಕರ್ಷಕವಾದ ಪ್ರಾಮಾಣಿಕತೆ, ಸಭ್ಯತನದ ತುರ್ತಿನ ಭಾಷೆ, ಭಾರವಾಗದ ಸಂವಹನ ಇಷ್ಟರಲ್ಲೇ, ಓದುಗನಿಗೆ ಇಷ್ಟವಾಗುವಂತೆ, ಇವರು ಬರೆಯಬಲ್ಲರು.

‘ಸ್ಥಾಯಿ’ಯಾದ ಈ ಪತ್ರಗಳನ್ನು ಬರೆಸಿಕೊಳ್ಳುವ ಹುಡುಗಿಯಲ್ಲದೆ, ಎಷ್ಟೋ ಚಂಚಲೆಯರು ಈ ಪತ್ರಗಳಲ್ಲಿ ಬಂದು ಹೋಗುತ್ತಾರೆ. ಆದರೆ ಯಾರ ನೈತಿಕತೆಯನ್ನೂ ನಾವು ಅನುಮಾನಿಸುವಂತೆ ನಾಗತಿಹಳ್ಳಿಯವರು ಬರೆಯುವುದಿಲ್ಲವೆನ್ನುವುದನ್ನೂ, ತನ್ನ ಗಂಡಸುತನದ ಹೆಚ್ಚುಗಾರಿಕೆಯನ್ನು ಈ ಪ್ರೇಮ ಪ್ರಸಂಗಗಳು ತೋರುವಂತಿರಬಾರದೆಂದೂ ನಾಗತಿಹಳ್ಳಿ ಎಚ್ಚರಿಕೆ ವಹಿಸುತ್ತಾರೆ. ನಿಜ ಆದರೆ…..

ಹುಡುಗಿಯರು ಹೀಗೆ ಬರೆದುಕೊಳ್ಳುವುದಿಲ್ಲ, ಒಂದು ವೇಳೆ ಬರೆದುಕೊಂಡರೂ ಓದುಗರು ಚಪಲದಲ್ಲಿ ಓದಿಯಾರು ಎಂಬ ಅನುಮಾನ ನನಗಿದೆ. ಆದ್ದರಿಂದ …….

ಮೇಲಿನ ಅನುಮಾನ ಬೇರೊಂದು ವಾದ ಹುಟ್ಟಿಸಬಹುದೇನೋ?

*

ನಾಗತಿಹಳ್ಳಿ ನಮ್ಮ ಕಾಲದ ಚುರುಕಾದ ಕಣ್ಣಿನ, ಚುರುಕಾದ ಮಾತಿನ ಆಕರ್ಷಕ ಬರಹಗಾರ. ಕನ್ನಡ ಓದುಗರನ್ನು ಮಹತ್ವದ ಕೊಡುಗೆಗೆ ಕಾಯಿಸುತ್ತಿರುವ ಬರಹಗಾರ. ತನಗಿರುವ ಆಕರ್ಷಣೆಯಿಂದಲೇ ಇವರು ಕೆಡಲಾರರು. ಇವರು ಉಂಡಿರುವ ಅನುಭವ, ಇವರ ಜೀವನ ಪ್ರೀತಿ, ಇವರ ತೆರೆದಿರುವ ಶೋಧದ ಚಿಂತನಶೀಲತೆ ಇವರನ್ನು ಕಾಪಾಡುತ್ತದೆ ಎಂಬ ಭರವಸೆ ಈ ಕೃತಿಯ ನಿವೇದನೆಗಳಲ್ಲಿ ಎದ್ದು ಕಾಣುವ ಗುಣ.

*

ಜುಲೈ , ೨೦೦೨, ನಾಗತಿಹಳ್ಳಿ ಚಂದ್ರಶೇಖರ್ಅವರ ಅಂಕಣ ಬರಹಗಳ ಪುಸ್ತಕ ನನ್ನ ಪ್ರೀತಿಯ ಹುಡುಗಿಗೆಬರೆದ ಮುನ್ನುಡಿ.