ಪಠಾಭಿಯ ಈ ಕವನ ಸಂಕಲನ ೧೯೩೯ನೆಯ ಇಸವಿಯಲ್ಲಿ ಪ್ರಕಟವಾಯಿತೆಂಬುದು ಮಹತ್ವಪೂರ್ಣ. ಹಾಡುವ ಸಂಪ್ರದಾಯವನ್ನು ಇನ್ನೂ ಬಿಟ್ಟುಕೊಡದಿರುವ ತೆಲಗು ಸಾಹಿತ್ಯಲೋಕದಲ್ಲಿ ಈ ‘ಅಕಾವ್ಯ’ ಮಾದರಿಯ ಪಠಾಭಿಯ ಗದ್ಯಪದ್ಯಗಳು ಇವತ್ತಿಗೂ ಕ್ರಾಂತಿಕಾರಕ ಸಾಹಸವಾಗಿ ಉಳಿದಿರಬೇಕೆಂದು ನಾವು ಊಹಿಸಬಹುದು. ಕಾವ್ಯ ಅತಿ ಸಿಹಿಯಾಗಿ ಜೀವನಕ್ಕೆ ದೂರವಾದಾಗಲೆಲ್ಲ ಗದ್ಯದ ಸಂವೇದನೆಯನ್ನು ತನ್ನಲ್ಲಿ ಒಳಗೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಕಾವ್ಯದ ಅನುಭವ ವಲಯ ಇದರಿಂದ ಹಿಗ್ಗುತ್ತದೆ. ಕಾವ್ಯದಲ್ಲಿ ಗೇಯತೆ ಹೆಚ್ಚಾದಂತೆ ಅದು ಸೆಂಟಿಮೆಂಟಲ್ ಆಗುವ ಅಪಾಯವಿದೆ. ಸೆಂಟಿಮೆಂಟಾಲಿಟಿ ಕಲಿತದ್ದು, ಒಗ್ಗಿದ್ದು, ನಿಜವಾದ ಭಾವನೆಗಳನ್ನು ಎದುರಿಸಬೇಕಾದ ಕಷ್ಟಗಳನ್ನು ಹಿತವೆನ್ನಿಸುವಂತೆ ನಿವಾರಿಸುವಂಥದ್ದು. ಸೆಂಟಿಮೆಂಟಾಲಿಟಿಯಲ್ಲಿ ನೈಜವಾದ ಭಾವೋದ್ರೇಕ ಸಹ ಇರುವುದಿಲ್ಲ. ಪಠಾಭಿ ತನ್ನ ಕವನಗಳಲ್ಲಿ ಲಂಪಟರಾಗದೆ, ಕ್ರೂರಿಯಾಗದೆ, ಭಾವುಕರಾಗದೆ ಸಾಮಾನ್ಯ ವಾಸ್ತವವನ್ನು ಕುತೂಹಲದಿಂದ ನೋಡುತ್ತಾರೆ. ಅವರ ಜಾಣತನ ಸೆಂಟಿಮೆಂಟಲ್ ಜನರಿಗೆ ಮುಜುಗುರ ಹುಟ್ಟಿಸುವ ಅಸ್ತ್ರ; ನೀವು ಸೆಂಟಿಮೆಂಟಲ್ ಅಲ್ಲದಿದ್ದರೆ ಈ ಕವನಗಳಲ್ಲಿ ಕೆಲವು ಕಡೆ ಕಾಣಿಸುವ ಜಾಣತನ ಅನಾವಶ್ಯಕವೆನ್ನಿಸಬಹುದು. ಒಟ್ಟಿನಲ್ಲಿ ಈ ಕವನಗಳ ಮಿತಿ ಮತ್ತು ಹೆಚ್ಚಳ ತೆಲಗು ಕವನ ರಚನೆಯ ಸಾಹಿತ್ಯ  ಸಂದರ್ಭವನ್ನು ಅವಲಂಬಿಸಿವೆ ಎನ್ನಬಹುದು. ಕವನಗಳಲ್ಲಿ ಕಾಣುವ ಚುರುಕಾದ ಕಣ್ಣು, ಏನನ್ನೂ ಉತ್ಪೇಕ್ಷಿಸದೆ ಅನುಭವದ ತಳಹದಿಯಲ್ಲಿರುವ ಸಾಮಾನ್ಯತೆಯನ್ನು ಬಿಚ್ಚಿಡುವ ಕವಿಯ ನಿರಂಬಳ ದೃಷ್ಟಿ ಮೂರು ದಶಕಗಳ ನಂತರವೂ ನಮಗೆ ಬೇಕೆನಿಸುವಂತೆ ಇವೆ; ಕಾರಣ ಪ್ರಾಯಶಃ ಪಠಾಭಿಯ ರೀತಿಯ ಪ್ರತಿಕ್ರಿಯೆ ಇವತ್ತಿಗೂ ಅಗತ್ಯವಾಗಿ ಉಳಿದಿರಬಹುದು. ಈಚೆಗೆ ಕನ್ನಡದಲ್ಲಿ ಬರುತ್ತಿರುವ ಗದ್ಯ-ಪದ್ಯಗಳಿಗಿಂತ ಹೆಚ್ಚು ಆಕರ್ಷಕವಾದ ಸಂವೇದನೆ ಪಠಾಭಿಯ ಕವನಗಳಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನಂತೂ ಖಮಡಿತವಾಗಿ ಹೇಳಬಹುದು. ೧೯೩೯ರಲ್ಲಿ ಕನ್ನಡದ ಕಾವ್ಯಪ್ರಪಂಚದಲ್ಲಿ ಇಂಥ ಒಂದು ಸಂಕಲನ ಬಾಂಬಿನಂತಿರುತ್ತಿತ್ತು.

ಪಠಾಭಿ ಮುಖ್ಯವಾಗಿ ಲೇವಡಿ ಮಾಡುವ ಕವಿ. ಸ್ವಂತದ ಭ್ರಮ ನಿರಸನ ಅವರ ಕಾವ್ಯವಸ್ತುವಲ್ಲ; ಓದುಗರ ಭ್ರಮೆಗಳನ್ನು ಲೇವಡಿ ಮಾಡುವುದು ಅವ ಉದ್ದೇಶ. ಪ್ರೇಮ, ಚಂದ್ರ, ಅಹಂಭಾವ, ಸಮುದ್ರ ಪ್ರಕೃತಿ, ರಾಮಾಯಣ, ಭರತನಾಟ್ಯ, ಪ್ರಣಯಿಗಳ ಭೇಟಿ – ಎಲ್ಲವನ್ನೂ ಸರ್ವೇಸಾಮಾನ್ಯ ಅನುಭವವಾಗಿ ನೋಡಿ ಭಾವುಕ ದೃಷ್ಟಿಯ ಸುಳ್ಳುಗಳನ್ನು ಪಠಾಭಿ ಗೇಲಿ ಮಾಡುತ್ತಾರೆ. ಪ್ರಪಂಚ ನಾವು ಕನಸಿನಲ್ಲಿ ಸೃಷ್ಟಿಸಿಕೊಂಡಂತೆ ಇಲ್ಲವಲ್ಲ ಎನ್ನುವ ನೋವು ಪಠಾಭಿ ಕಾವ್ಯದಲ್ಲಿ ಕಾಣುವುದಿಲ್ಲ. ಹೊಳಪಿಲ್ಲದ ಮಾತುಗಳಲ್ಲಿ ಹೊಳಪಿಲ್ಲದ ಅನುಭವದ ಬಗ್ಗೆ ಬರೆಯುವ ಪಠಾಭಿ ಎಲ್ಲಾ ಮೂರನೆಯ ಆಯಾಮವನ್ನು ಕಾವ್ಯದಲ್ಲಿ ತರಲು ಪ್ರಯತ್ನಿಸುವುದಿಲ್ಲ. ಈ ಗದ್ಯ ದೃಷ್ಟಿ ಭಯ ಹುಟ್ಟಿಸಬಹುದು – ಆದರ್ಶ ಮತ್ತು ಭಾವುಕತೆಗಳನ್ನು ಕಾವ್ಯದಿಂದ ಅಪೇಕ್ಷಿಸುವ ಓದುಗರಿಗೆ ಪಠಾಭಿ ಕಾವ್ಯ ತೆಲಗು ಸಾಹಿತ್ಯ ಪ್ರಪಂಚಕ್ಕೆ ಔಷಧಿಯಂತೆ ಕಹಿಯಾಗಿದ್ದಿರಬೇಕು.

ಡಾ. ಸುಂದರಂ ಕನ್ನಡ ತೆಲಗು ಎರಡು ಭಾಷೆಗಳಲ್ಲೂ ಪರಿಣಿತರು. ಹೊಸ ಸಾಹಿತ್ಯಕ್ಕೆ ಸ್ಪಂದಿಸಬಲ್ಲ ಕ್ರಾಂತಿಕಾರಕ ದೃಷ್ಟಿಯುಳ್ಳವರು. ಪಠಾಭಿಗೆ ಸುಂದರರಿಗಿಂತ ಉತ್ತಮ ಭಾಷಾಂತರಕಾರರು ಕನ್ನಡದಲ್ಲಿ ಪ್ರಾಯಶಃ ಸಿಗಲಾರರು.

ಕನ್ನಡ ಕಾವ್ಯ ನಗರ ಪ್ರಜ್ಞೆಯನ್ನು ಒಳಗೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪಠಾಬಿಯ ಈ ಕವನಗಳು ೧೯೩೯ರಲ್ಲಿ ಪ್ರಕಟವಾದ ಕವನಗಳು ಸ್ವಾಗತಾರ್ಹವೆಂದು ನಾನು ತಿಳಿದಿದ್ದೇನೆ. ನಗರ ಜೀವನ ಯಾಕೆ ಲೇವಡಿಯ ವಸ್ತುವಾಗಬೇಕು? ತಲಸ್ಪರ್ಶಿಯಾದ ಕಾವ್ಯ ನಗರ ಪ್ರಜ್ಞೆಯಿಂದಲೂ ಯಾಕೆ ಬರಬಾರದು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವವರಿಗೆ ಪಠಾಭಿಯವರ ಬರವಣಿಗೆ ಖಂಡಿತ ಮುಖ್ಯವೆನಿಸುತ್ತದೆ.

*

(ಪಠಾಭಿಯವರ ತೆಲಗು ಕವನ ಸಂಕಲನದ ಅನುವಾದಿತ ಕೃತಿ ಪಿಟೀಲು ರಾಗಗಳ ಡಜನ್ಗೆ ೧೯೭೬ ಕನ್ನಡಕ್ಕೆ ಸುಂದರಂ) ಬರೆದ ಮುನ್ನುಡಿ.