ಹಲವು ವರ್ಷಗಳ ಸ್ನೇಹದ ಫ್ರೊಪೆಸರ್‌ ರಘುನಾಥರ ಈ ಪುಸ್ತಕಕ್ಕೆ ನನ್ನ ಎರಡು ಮಾತುಗಳನ್ನು ಸೇರಿಸುವುದು ನನಗೆ ಸಂತೋಷದ ವಿಷಯ. ನಾನು ಭಾಷಾತಜ್ಞನಲ್ಲ. ಈ ಪುಸ್ತಕ ಓದಿ ರಘುನಾಥರ ಚಿಂತನೆಯನ್ನು ಬೆಳೆಸಬೇಕಾದವರು ಕವಿಗಳೂ ಚಿಂತನಶೀಲ ಭಾಷಾತಜ್ಞರೂ ಆದ ಡಾ. ತಿರುಮಲೇಶ ರಂತಹವರು. ಆದರೂ ಇಲ್ಲಿರುವ ವಿಷಯಗಳ ಬಗ್ಗೆ ಪದೇ ಪದೇ ಬರೆಯುತ್ತಲೇ ಬಂದಿರುವ ನನಗೂ ಹೇಳುವುದಿದೆ ಎಂದು ರಘುನಾಥರು ಅವರ ಪ್ರೀತಿಯಲ್ಲಿ ತಿಳಿದಿದ್ದಾರೆ. ಆದ್ದರಿಂದ ಕೆಲವು ಮಾತುಗಳು.

ಪ್ರೋಪೆಸರ್‌ ರಘುನಾಥರು ನನ್ನ ಕೆಲವು ಬರಹಗಳನ್ನು ತಮ್ಮ ಬರವಣಿಗೆಯಲ್ಲಿ ಬಳಸಿಕೊಂಡಂತೆ ನನಗೆ ತೋರದಿದ್ದರೂ ತಮ್ಮ ವಾದಕ್ಕೆ ಪೂರಕವಾಗಬಲ್ಲವು ಎಂದು ತಿಳಿದಾರೆಂಬ ನಿರೀಕ್ಷೆಯಿಂದ ಅವುಗಳನ್ನು ಪುನಃ ಹೇಳಿಕೊಳ್ಳಲು ಮುಂದಾಗುತ್ತೇನೆ.

೧) ಎಲ್ಲ ಭಾಷೆಗಳೂ ಉಳಿಯುವುದು ಆ ಭಾಷೆಯನ್ನು ಮಾತ್ರ ಬಲ್ಲ ಜನರು ಇರುವ ತನಕ. ಆದರೆ ಇಲ್ಲೊಂದು ವಿರೋಧಾಭಾಸವೆಂದು ಕಾಣುವ ಸಂಗತಿಯಿದೆ. ಭಾಷೆಗಳು ಬೆಳೆಯುವುದು ಆ ಭಾಷೆಗಳನ್ನು ಬಲ್ಲ ಜನರಿಗೆ ಇನ್ನೊಂದು ಸಾಹಿತ್ಯ ಸಮೃದ್ಧವಾದ ಭಾಷೆಯಾದರೂ ಗೊತ್ತಿದ್ದಾಗ. ಹಿಂದೆ ಸಂಸ್ಕೃತದ ಜೊತೆ ಕನ್ನಡ ಅದರ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿತು. ಈ ಕಾಲದಲ್ಲಿ ಇಂಗ್ಲಿಷ್‌ ಜೊತೆ ಕೆಲಸ ಮಾಡಿತು.

೨) ಈ ಎರಡು ಭಾಷೆಗಳ ನಡುವಿನ ಕೊಡುಕೊಳ್ಳುವ ಸಂಬಂಧ ಒಂದು ಇನ್ನೊಂದಕ್ಕೆ ಮೇಲಿನದು ಎಂಬ ಭಾವನೆ ಇದ್ದಾಗ, ಈ ಭಾವನೆ ರಾಜಕೀಯ ಆರ್ಥಿಕ ಕಾರಣಗಳನ್ನೂ ಪಡೆದಿದ್ದಾಗ ಈ ಒಡನಾಟ ‘ಒಂದು ಭಾಷೆ ಕೊಡುವುದು ಮಾತ್ರ, ಇನ್ನೊಂದು ಭಾಷೆ ಪಡೆಯುವುದು ಮಾತ್ರ’ ಎಂಬ ಯಜಮಾನಿಕೆದಾಗಿರುತ್ತದೆ.

ಈ ಯಜಮಾನಿಕೆಯನ್ನು ಗೆದ್ದವರು ನಮ್ಮ ಹಲವು ಹಿರಿಯ ಲೇಖಕರು ಮುಖ್ಯವಗಿ ಸಾಹಿತ್ಯದಲ್ಲಿ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತನ್ನ ಪ್ರವೇಶದ್ದು ಮಾತ್ರವಾದ ಚಲಿಸದ ಭಾಷೆಯಾದ ಕನ್ನಡ ತನ್ನೊಳಗೆ ಇಡೀ ಪ್ರಪಂಚವನ್ನು ಕಂಡು ಕಾಣಿಸಬಲ್ಲೆ ಎನ್ನುವ ವಿಶ್ವಾಸ ಕವಿರಾಜಮಾರ್ಗದ ಕಾಲದಿಂದ ಈವರೆಗೆ ನಮ್ಮ ಅತ್ಯುತ್ತಮ ಮನಸ್ಸುಗಳಲ್ಲಿ ಕೆಲಸ ಮಾಡಿದೆ. (ಇಂಗ್ಲಿಷನಲ್ಲೂ ಅದು ಚಲಿಸದ ಭಾಷೆಯಾಗಿದ್ದಾಗ ಅದರ ಶೇಕ್ಸ್‌ಪಿಯರ್‌ ಬಂದನೆಂಬುದನ್ನು ಮರೆಯಬಾರದು.)

೩) ಚಲಿಸದ ಸ್ಥಳೀಯ ಭಾಷೆಗೂ ಕಲಿಸುವ ಇನ್ನೊಂದು ಭಾಷೆಗೂ ನಡುವೆ ಏರುಪೇರಿಲ್ಲದ ಸಮಸಮ ಎನ್ನಿಸುವ ಸಂಬಂಧವಿರಬಹುದೆಂಬುದನ್ನು ಮೊನ್ನೆ ತಾನೇ ರಾಧಾ ಎಂಬ ಯುಗೋಸ್ಲಾವಿಯಾದ, ಫ್ರಾನ್ಸ್‌ನಲ್ಲಿ ಕಲಿಸುವ ಒಬ್ಬ ಮಹಿಳೆಯನ್ನು ಕೇರಳದಲ್ಲಿ ಭೇಟಿಯಾದಾಗ ತಿಳಿದೆ. ತಮ್ಮ ಜನರ ಜೊತೆ ಮಾತಾಡುವಾಗ ಸ್ವೀಡಿಷ್‌ ಜನರು ಸ್ವೀಡಿಷ್‌ ಭಾಷೆಯನ್ನು ಮಾತ್ರ ಬಳಸುತ್ತಾರೆ. ಅದರಲ್ಲೇ ಬರೆಯುತ್ತಾರೆ. ಅದರಲ್ಲೇ ಕಲಿಯುತ್ತಾರೆ. ಜೊತೆಗೆ ಎಲ್ಲರಿಗೂ  ಇಂಗ್ಲಿಷ್ ಕೂಡ ಇನ್ನೊಂದು ಭಾಷೆಯಾಗಿ ಗೊತ್ತಿರುತ್ತದೆ; ಹೊರಗಿನವರ ಜೊತೆ ಇಂಗ್ಲಿಷ್‌ನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಅದರದರ ಸ್ಥಾನ, ಮನ್ನಣೆಗಳಲ್ಲಿ ಗೊಂದಲವಿಲ್ಲ; ಎರಡೂ ಒಂದೇ ಬಲದ ಭಾಷೆಗಳು. ಫ್ರೆಂಚ್ ಆಗಲಿ, ಜರ್ಮನ್‌ ಆಗಲಿ ಅವರು ಕಲಿಯಬಹುದು. ಆದರೆ ಹೀಗೆ ಇಂಗ್ಲಿಷ್‌ನ್ನು ಬಳಸುವಂತೆ ಉಳಿದ ಐರೊಪ್ಯ ಭಾಷೆಗಳನ್ನು ಅವರು ಬಳಸುವುದಿಲ್ಲ.

ಇದನ್ನು ಕೇಳಿದಾಗ ನನ್ನ ನೆನಪಿಗೆ ಬಂದದ್ದು ನಾವು ಕೊಂಕಣಿ ತುಳುಗಳ ಜೊತೆ ಕನ್ನಡವನ್ನು ಬಳಸುವ ಬಗೆಯಲ್ಲಿ. ಇಲ್ಲಿ ಹೆಜಿಮನಿ, ಯಜಮಾನ್ಯದ ಮೇಲುಗಾರಿಕೆಯಿಲ್ಲ.

ಇಂಗ್ಲಿಷಾದರೋ ಕನ್ನಡವನ್ನು ಕೇವಲ ಅಡುಗೆಮನೆ ಭಾಷೆಯಾಗಿ ತಳ್ಳುತ್ತಿದೆ. ಅಥವಾ ಕನ್ನಡ ಬೆರಕು ಭಾಷೆಯಾಗಿ ತನ್ನ ಗುಣಗಳನ್ನು ಶಬ್ದಗಳನ್ನು ಕಳೆದುಕೊಳ್ಳುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದಿದ ಪುಣ್ಯವಂತರು ಕನ್ನಡವನ್ನು ಕೇವಲ ಅಡುಗೆಮನೆ ಭಾಷೆಯಾಗಿ ಬಳಸಬಲ್ಲವರಾಗಿರುತ್ತಾರೆ. ಇವರಿಗೆ ಸ್ವಂತ ಮನೆಯ ಪರಿಸರದಲ್ಲೇ ಇಂಗ್ಲಿಷ್‌ ಇರುತ್ತದೆ. ಇದು ಇಲ್ಲದ ದುರದೃಷ್ಟ ಇಂಗ್ಲಿಷ್‌ ಮಾಧ್ಯಮದವರು ಏನನ್ನೂ ಆತ್ಮೀಯವಾಗಿ ಪಡೆದಿರುವುದಿಲ್ಲ.

೪) ಕನ್ನಡ ಶಿಕ್ಷಣ ಮಾಧ್ಯಮವಾಗಿರಬೇಕೆಂದೂ, ಇಂಗ್ಲಿಷನ್ನು ಕಲಿಸುವುದಾದರೆ ಅದನ್ನು ತಡವಾಗಿ ಕನ್ನಡ ಕಲಿತ ನಂತರ ಕಲಿಸಬೇಕೆಂದೂ ರಘುನಾಥರು ವಾದಿಸುತ್ತಾರೆ. ಇದು ಸರಿಯಾದ ವಾದ. ಎಲ್ಲ ಮಕ್ಕಳಿಗೂ ಅನ್ವಯಿಸಿದಾಗ ಮಾತ್ರ ಸರಿಯಾದ ವಾದ. ಮೊದಲಿನಿಂದ ಕೊನೆಯ ವರೆಗೆ, ಸ್ನಾತಕ್ಕೋತ್ತರ ಶಿಕ್ಷನದಲ್ಲೂ ಅನ್ವಯವಾಗುವಂತಿದ್ದರೆ ಅತ್ಯಂತ ಸಮರ್ಪಕವಾದ ಕ್ರಮ. ಆದರೆ ತಡವಾಗಿ  ಇಂಗ್ಲಿಷ್ ಕಲಿತವರೂ, ಮುಂಚೆಯೇ ಕಲಿತವರೂ ಒಟ್ಟಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಲೇಬೇಕಾದ ಸ್ಥಿತಿಯಲ್ಲಿ ಇದು ಅಸಮಾನತೆಯನ್ನು ಸೃಷ್ಟಿಸು ತ್ತಿರುವುದರಿಂದ ಸಮಸ್ಯೆಯಾಗಿ ಪರಿಣಮಿಸಿದೆ.

೫) ಇದನ್ನು ಕೊಂಚ ಬೆಸರದಲ್ಲಿ ಹೇಳುತ್ತಿದ್ದೇನೆ. ನಮ್ಮ ಸರಕಾರಿ ಶಾಲೆಗಳಲ್ಲಿ ಎಲ್ಲ ಮಕಕಳೂ ಹತ್ತನೇ ಇಯತ್ತೆಯ ತನಕವಾದರೂ ಒಟ್ಟಾಗಿ ವಿದ್ಯಾಭ್ಯಾಸ ಪಡೆಯಬೇಕೆಂದೂ, ನಮ್ಮ ದುಬಾರಿಯ ಖಾಸಗಿ ಶಾಲೆಗಳು ದುಷ್ಟವೆಂದೂ ನಾನು ಹೇಳುತ್ತ ಬಂದಿರುವುದನ್ನು ಕನ್ನಡದ ವಾದಿಗಳೆಲ್ಲರೂ ನಿರ್ಲಕ್ಷಿಸಿದ್ದಾರೆ.

೬) ಈ ಸಾಮಾನ್ಯ ಶಾಲೆಗಳಿಗೆ ಎಲ್ಲ ಮಕ್ಕಳೂ ಹೋಗಿ ಕಲಿಯುವಂತಾಗಲು ಇಂಗ್ಲಿಷನ್ನು ಒಂದನೆ ತರಗತಿಯಿಂದ ಕಲಿಸುವುದು ಅಗತ್ಯವಾದರೆ ಮಾತಾಡಲು ಓದಲು ಬರೆಯಲು ಅಲ್ಲಿ ಕಲಿಸಬೇಕೆಂದು ನಾನು ಹೇಳುತ್ತಿದ್ದೇನೆ. ಬಡ ತಾಯಿ-ತಂದೆಯರೂ ಇದನ್ನು ಬಯಸುವುದರಿಂದ – ಅಷ್ಟೇ. ಈ ವಾದವನ್ನು ರಘುನಾಥರು ಕೂಡ ಗಂಭೀರವಾಗಿ ಗಣಿಸಿಲ್ಲ.

೭) ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳನ್ನು ಕಾನೂನುಬದ್ಧವಾಗಿ ನಾವು ಮುಚ್ಚುವಂತಿಲ್ಲ. ಆದರೆ ಒಂದು ವಿಷಯವನ್ನು ಮಾನವಿಕ ವಿಷಯವನ್ನು ಈ ಶಾಲೆಗಳಲ್ಲಿ ಕನ್ನಡದಲ್ಲೇ ಕಲಿಸಬೇಕೆಂಬ ನಿಯಮವಿರಬೇಕು.

ಈ ಎಲ್ಲದರ ಬಗ್ಗೆ ನಾನು ಬರೆದದ್ದೆಲ್ಲವೂ ಪ್ರಕಟವಾಗಿದೆ. ರಘುನಾಥರ ಆಳವಾದ ಭಾಷಾತಜ್ಞವಾದವನ್ನು ನಾನು ಪ್ರಶ್ನಿಸುತ್ತಲೇ ಇಲ್ಲ. ಸಾಮಾನ್ಯ ಶಾಲೆಗಳನ್ನು ಬಲಪಡಿಸುವ, ಅಂದರೆ ಎಲ್ಲ ಮಕ್ಕಳೂ ಅಲ್ಲಿ ಒಟ್ಟಾಗಿ ಕಲಿಯುವಂತಾಗುವ ಸನ್ನಿವೇಶವನ್ನು ಸೃಷ್ಟಿಸುವುದರತ್ತ ಅವರ ಗಮನವನ್ನು ತರಲು ಮತ್ತೆ ನಾನು ಹೇಳಿದ್ದೆಲ್ಲವನ್ನೂ ಹೇಳುವ ತಪ್ಪನ್ನು ಮಾಡಲೇಬೇಕಾಗಿ ಬಂದಿದೆ.

*

(ಎನ್.ಎಸ್. ರಘುನಾಥರರಾಜ್ಯ ಸಂಸ್ಕೃತಿಗಳ ಅಳಿವು ಉಳಿವು Not Kannada V/s English’ (2007) ಪುಸ್ತಕಕ್ಕೆ ಬರೆದ ಮುನ್ನುಡಿ.