ಎಲ್ಲ ದೃಷ್ಟಿಯಿಂದಲೂ ನನಗೆ ತುಂಬಾ ಹಿರಿಯರಾದವರು ಇಲ್ಲಿದ್ದಾರೆ. ಅವರಿಗೆ ಮೊದಲು ನಮಸ್ಕರಿಸಿ, ನನ್ನ ಎಲ್ಲ ಸ್ನೇಹಿತರನ್ನು ಉದ್ದೇಶಿಸಿ, ಉದ್ಘಾಟನೆಯ ರೂಪದಲ್ಲಿ ಒಂದೆರಡು ಮಾತು ಆಡುತ್ತೇನೆ. ಈ ಕಾರ್ಯಕ್ರಮದ ಸಂಚಾಲಕರಾದ ರಹಮತ್‌ ತರೀಕೆರೆಯವರ ಆಶಯಗಳಿಗೆ ಪ್ರತಿಸ್ಪಂದಿಸಲು ಪ್ರಯತ್ನಿಸುತ್ತೇನೆ.

ಮೊದಲನೆಯದಾಗಿ ಒಂದು ಮೆಟಫರಾಗಿ ಹೇಳೋದಾದ್ರೆ ಈ ಸಾಂಸ್ಕೃತಿಕ  ಮುಖಾಮುಖಿ ಬಗ್ಗೆ ಮಾತಾಡ್ತಾ ಇರೋ ಇವತ್ತಿನ ದಿನ, ಹನ್ನೊಂದನೇ ತಾರೀಖು ಒಂಬತ್ತನೇ ತಿಂಗಳು, ಅಮೆರಿಕಾದಲ್ಲಿ ವರ್ಲ್ಡಟ್ರೇಡ್  ಸೆಂಟರಿಗೆ ಬಾಂಬ್ ಬಿದ್ದ ದಿನ. ಎರಡನೆಯದಾಗಿ, ಮಹಾತ್ಮ ಗಾಂಧೀಜಿಯವರು ‘ವೆಪನ್‌ ಆಫ್‌ ಮಾಸ್‌’ ನ ಒಟ್ಟಿಎ ಸೇರಿಸೊ ಸತ್ಯಾಗ್ರಹವನ್ನು ಆರಂಭಮಾಡಿದ ದಿನ. ಇವೆರಡೂ ಪಶ್ಚಿಮಕ್ಕೆ ಪೂರ್ವವೂ ಬೇರೆ ಬೇರೆ ಬಗೆಯಲ್ಲಿ ಮುಖಾಮುಖಿ ಮಾಡಿಕೊಂಡ ಘನಟೆಗಳು. ಬಿ.ಎಂ.ಶ್ರೀ ಅವರ ‘ಇಂಗ್ಲಿಷ್‌ ಗೀತೆಗಳು’ ಕೂಡ ಇನ್ನೊಂದು ಬಗೆಯ ಮುಖಾಮುಖಿಯ ಯತ್ನ.

ಬಿ.ಎಂ.ಶ್ರೀ ಯವರ ಬಗ್ಗೆ ಎಲ್ಲ ವಿಮರ್ಶೆಗಿಂತಲೂ ಉತ್ತಮವಾದ ಒಂದು ಪದ್ಯವಿದೆ. ಅದು ಅಡಿಗರು ಬರೆದದ್ದು. ಅದು ಎಷ್ಟು ಒಳ್ಳೆಯ ಪದ್ಯ ಅಂದ್ರೆ ಅದನ್ನು ಓದಿಬಿಟ್ರೆ ಅವರನ್ನ ಹೊಗಳಿದಂಗೂ ಆಗುತ್ತೆ. ಅವರ ಜೊತೆ ಜಗಳ ಮಾಡಿದಂಗೂ ಆಗುತ್ತೆ. ನನಗೆ ನೆನಪಾಗ್ತಿದೆ, ನಮ್ಮ ಮೇಸ್ಟ್ರು ಎಸ್.ವಿ. ರಂಗಣ್ಣ ಯಾವಾಗಲಾದರೂ ನನ್ನ ಹತ್ತಿರ ಬಹಳ ಆತ್ಮೀಯವಾಗಿ ಮಾತಾಡುವಾಗಲೆಲ್ಲ ಬಿ.ಡಂ.ಶ್ರೀ. ಬಗ್ಗೇನೆ ಮಾತಾಡ್ತಾಯಿದ್ರು. (ಇವತ್ತು ‘ಕರುಣಾಳು ಬಾ ಬೆಳಕೆ’ ಹಾಡಿದ್ದನ್ನು ಕೇಳ್ತಾ ಇರುವಾಗ ನಾನು ತುಂಬಾ ಭಾವಪರವಶನಾಗಿಬಿಟ್ಟೆ. ಎಷ್ಟು ಸಾರಿ ಕೇಳಿದಾಗಲೂ ನನಗೆ ಅದು ಮೂವ್‌ ಮಾಡುತ್ತೆ’ ಮನೆ ದೂರ’ ಕನ್ನಡದ ಶಬ್ದವನ್ನು ಹೀಗೆ ಬಳಸಿದ್ದನ್ನು ಕೇಳಿ ನನಗೆ ನನ್ನ ಚಿಕ್ಕ ವಯಸ್ಸಿನಲ್ಲಿ ಈ ಸಾಲು ದಿನಗಟ್ಟಲೆ ಕಾಡಿದೆ. ತೀರ್ಥಹಳ್ಳಿಯಲ್ಲಿ ಕೃಷ್ಣಮೂರ್ತಿ ಭಟ್ಟ ಅಂತಾ, ಇದನ್ನ ಬಹಳ ಚೆನ್ನಾಗಿ ಹಾಡೋನು. ‘ಹಿಡಿದು ಮಂಜು ಬೀಳುತ್ತಿತ್ತು, ಚುಕ್ಕಿ ಕಣ್ಣ ಮಿಟುಕುತ್ತಿತ್ತು’-ನನ್ನಲ್ಲಿ ಅಚ್ಚರಿಯನ್ನು ಹುಟ್ಟಿಸಿದ ಸಾಲು. ಅರೆರೆ.., ನಾನು ಮಾತಾಡೋ ಹಾಗೆ ಇದೆಯಲ್ಲಾ, ನಾನು ಮಾತಾಡುವ ಮಾತೇ ಕಾವ್ಯ ಆಗ್ತಿದೆಯಲ್ಲ ಈ ಸಾಲು ಅಂತ ನನ್ನ ಬೆರಗು) ಇತ್ತೀಚೆಗೆ ಗಾಯತ್ರಿ ಸ್ಪೀವಾಕ್‌ ಅನ್ನೋರು ಸ್ವಲ್ಪ ಫಿಲಸಾಫಿಕಲ್ ಆಗಿ ಅನುವಾದದ ಬಗ್ಗೆ ಮಾತಾಡುತ್ತಾ, ಟ್ರಾನ್ಸ್‌ಲೇಷನ್‌ಗೆ ಅನುವಾದ ಅನ್ನುವ ಶಬ್ದವನ್ನೇ ಬಳಸಬೇಕೆಂದು ಹೇಳುತ್ತಿದ್ದರು. ಅನುವಾದ ಅಂದ್ರೆ ‘ಕಮೀಂಗ್‌ ಇಮಿಡಿಯಟ್ಲಿ ಆಪ್ಟರ್‌’ ಕೂಡಲೇ ಹತ್ತಿರವಾಗುವುದು  ಅಂತ. ಬೇರೆಲ್ಲ ಶಬ್ದಕ್ಕಿಂತ ಇದು ಒಳ್ಳೆಯದು. ಅದನ್ನ ರಾಜಕೀಯವಾಗಿಯೂ ಬಳಸತಾ ಇದ್ರು. ಯಾಕಂದ್ರೆ ನಾವು ಟ್ರೈಬಲ್ಸ್‌ ಜೊತೆ ಕೆಲಸ ಮಾಡುವಾಗ ಅವರನ್ನ ನಮಗೆ ಅನುವಾದ ಮಾಡಿಕೋತೀವಿ. ನಮ್ಮನ್ನು ಅವರಿಗೆ ಅನುವಾದ ಮಾಡಿಕೊಡ್ತಿವಿ. ಹಾಗೆ ಮಾಡಿಕೊಳ್ಳುವಾಗ, ಲೆನಿನ್‌ ಮಾಡಿದ ತಪ್ಪನ್ನು ಮಾಡದೇ ಇದೋ ಜಾಗರೂಕತೆ ಎಚ್ಚರ ಇಗುತ್ತೆ. ಅಂದರೆ ನಾವು ಎಲ್ಲ ತಿಳಿದ ಯಜಮಾನರು ನಿಮಗೆ ಅನುಕೂಲ ಮಾಡಿಕೊಡ್ತಿವಿ ಅನ್ನೋ ವ್ಯಾನ್‌ಗಾರ್ಡ್ ಆಫ್ ದಿ ಪ್ರೋಲಿಟೇರಿಯನ್‌ ತರಹ ಆಗದಿರೋ ಹಾಗೆ, ಕೆಲಸ ಮಾಡೋದು ಹೇಗೆ ಅಂತ ಗಾಯತ್ರಿ ಸ್ಟಿವಾಕ್‌ ಹುಡುಕ್ತಾ ಇದ್ದಾರೆ. ಇದಕ್ಕಾಗಿ ಅವರು ‘ಅನುವಾದ’ ಎಂಬ ಶಬ್ದವನ್ನು ಬಳಸಿದ್ದಾರೆ. ಅಂತ ನನಗೆ ಅನಿಸ್ತು. ಹಾಗೆ ಕನ್ನಡದಲ್ಲಿ ಬಹಳ ಜನಪ್ರಿಯವಾಗಿರುವ ‘ಕರುಣಾಳು ಬಾ ಬೆಳಕೆ ಮುಸುಕದೀ ಮಬ್ಬಿನಲಿ’ ಅಂತ ಶುರುವಾಗೋ ಪದ್ಯ, ಮೂಲ ಇಂಗ್ಲಿಷ್‌ನಲ್ಲಿ ಒಂದು ಸಾಮಾನ್ಯ ಪದ್ಯ ಮಾಡಿದ್ದಾರೆ. ಹಾಗೆನೇ ವಾಲ್ಟರ್‌ ಸ್ಯಾವೆಜ್‌ ಲ್ಯಾಂಡರ್‌ ಬರೆದಿರೋ ‘ರೋಸ್‌ ಆಮ್ಯಲರ್‌’ ಅನ್ನೋ ಕವನವನ್ನು ಶ್ರೀಯವರು ‘ಪದುಮ’ ಅಂತ ಅನುವಾದ ಮಾಡ್ತಾರೆ. ಇದನ್ನ ನೀವು ಕೇಳಿಸಿಕೊಂಡ್ರೆ ಕಿವಿಯಿಂದ ಕಿವಿಗೆ ಅನುವಾದ ಮಾಡಿದಂಗೆ ಮಾಡಿದ್ದಾರೆ.

Ah What avails the sceptred race, ah What the form divine
What every virtue, every grace, Rose Aylmer. All were thine
Rose Aylmer, Whom those wakeful eyes
May weep. But never see,
A night of memories and signs, I consecrate thee.
ಅರಸಿನ ಕುಲವೊ, ಏನಿದ್ದೇನು! ಸುರ ವಧುರೂಪೋ; ಏನಿದ್ದೇನು!
ಗುಣವೋ, ಸೊಬಗೋ, ಏನಿದ್ದೇನು! ಪದುಮಾ, ಇದ್ದುವು ನಿನಗೆಲ್ಲಾ
ಪದುಮಾ, ಎಚ್ಚತ್ತಳುವುದೆ ಅಲ್ಲದೆ ಕಣ್ಣಿವು ನಿನ್ನನ್ನು ಕಾಣುವುದೇ?
ನೆನಸಿಕೊಳುವೆ, ಬಿಸುಸುಯ್ಯುವೆ, ಇರುಳನು ನಿನಗೆಯೆ ಮೀಸಲು ತೆಗೆದಿಡುವೆ

ಇದು ಕಿವಿಯಿಂದ ಕಿವಿಗೆ ಆದ ಅನುವಾದ. ಇಂಗ್ಲಿಷ್‌ನಲ್ಲಿ ಒಂದು ಸಾಮಾನ್ಯವಾದ ಪದ್ಯವನ್ನು ಇದು ಕನ್ನಡದ್ದೇ ಅನ್ನಿಸುವ ಹಾಗೆ ಶ್ರೀಕಂಠಯ್ಯನವರು ಅನುವಾದ ಮಾಡಿದ್ರು. ಇಂಗ್ಲಿಷ್‌ನಲ್ಲಿ ಅದಕ್ಕಿಂತ ಇನ್ನೊಂದು ಬಹಳ ಸೆಂಟಿಮೆಂಟಲಾದ ಪದ್ಯ ‘ಬ್ರಿಡ್ಜ್‌ ಆಫ್‌ ಸೈಸ್‌’ One more unfortunate, weary of breath, Rashly importunate Gone to her death ಇಂಗ್ಲಿಷ್‌ನಲ್ಲಿ ನೀವು ಈ ರೀತಿ ರೈಮ್‌ ಮಾಡಿದಾಗ ಸ್ವಲ್ಪ ತಮಾಷೆ ಅನ್ನಿಸುತ್ತೆ. ಆದರೆ –

ಅನಾಥೆ ಇವಳಿನ್ನೊಬ್ಬಳಿ ಜನ್ಮರೋಸಿ
ವೇದೆಯನು ತಾಳದೆಯೆ ಮುಳುಗಿದಳು ಹೊಳೆಗೆ
ಮೆಲ್ಲಗಿವಳನು ಮುಟ್ಟು, ಮರುಗಿ ಹಿಡಿದೆತ್ತು
ಏನು ಕೋಮಲ ಕಾಯ ಹೊಳಪು ಹೊಸಪ್ರಾಯ!

‘ಅನಾಥೆ ಇವಳಿನ್ನೊಬ್ಬಳೀ ಜನ್ಮರೋಸಿ’ ಎನ್ನುವ ಸಾಲನ್ನು ಸೇರಿಸಿ ಎಷ್ಟು ಒಳ್ಳೆಯ ಪದ್ಯ ಮಾಡಿದರೆ ಶ್ರೀಕಂಠಯ್ಯನವರು. ಹೀಗೆ ಮಾಡೋದರಿಂದ ಅವರು ಕನ್ನಡವನ್ನು ಬೆಳೆಸಿದರು. ಆದರೆ ಈಗ ಕನ್ನಡ ಬೆಳಿತಿರೋದು ಈ ರೀತಿಯ ಪದ್ಯಗಳಿಂದಲ್ಲ ವಚನಕಾರರಿಂದ ನಾವು ಇವತ್ತು ಸ್ಫೂರ್ತಿ ಪಡೆದುಕೊತಾ ಇದ್ದೀವಿ. ವಚನಕಾರರಲ್ಲೂ ಎಷ್ಟು ಅಚ್ಚ ಕನ್ನಡ ಇತ್ತು ಅಂದ್ರೆ, ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರಯ್ಯ’ ನನಗೆ ಬಿ.ಎಂ.ಶ್ರೀಯವರಿಂದ ಯಾವ ಸಂತೋಷ ಸಿಗುತ್ತೋ ಅದೇ ಸಂತೋಷ ಕೆಲವು ವಚನಕಾರರ ಸಾಲುಗಳಿಂದ ಈಗಲೂ ಪಡೆಯಬಹುದು. ಯಾವುದಾದರೂ ಬೇರೆ ಭಾಷೆಯಲ್ಲಿ ಎಂಟುನೂರು ವರ್ಷದ ಹಿಂದಿನ ಒಂದು ಮಾತನ್ನು ಇವತ್ತಿಗೆ ಕೋಟ್‌ ಮಾಡೋದಿಕ್ಕೆ ಸಾಧ್ಯವಿದೆಯಾ? ಇಂಗ್ಲಿಷಲ್ಲಂತೂ ಇದು ಅಸಾಧ್ಯ. ಕ್ಯನ್‌ ಯು ಕೋಟ್‌ ಛಾಸರ್‌? ಇಟಲಿಯವನು ಏನಾದರೂ ತನ್ನ ಐನೂರು ವರ್ಷದ ಹಿಮದಿನದನ್ನು ಕೋಟ್‌ ಮಾಡಬಲ್ಲನಾ? ಜರ್ಮನಿಯವನು ಮಾಡಬಲ್ಲನಾ? ನಾನು ಪಂಪನ್ನ ಕೋಟ್‌ ಮಾಡಿದ್ರೆ, ಸ್ವಲ್ಪ ಕಷ್ಟವಾದ್ರೂ ನಿಮಗೆ ಗೊತ್ತಾಗ್ತದೆ. ವಚನಕಾರರನ್ನ ಕೋಟ್‌ ಮಾಡಿದ್ರಂತೂ ಇಮಿಡಿಯೆಟ್ಲಿ ಗೊತ್ತಾಗುತ್ತೆ. ‘ನಾನೇನು ಮಾಡಲಿ ಬಡವನಯ್ಯ’ ಇದೆಲ್ಲ ಇವತ್ತಿನ ಕನ್ನಡದಲ್ಲಿದೆ. ಆದ್ರೂ ಕೂಡ ಇದು ನಿಜ. ಬಿ.ಎಂ.ಶ್ರೀಯವರು ಮಾಡಿದ ಕೆಲಸ ನಿಜವಾಗಿ ಫಲ ಕೊಟ್ಟಿದ್ದು ಬೇಂದ್ರಯಲ್ಲಲ್ಲ. ಕುವೆಂಪು ಅವರಲ್ಲಿ ಯಾಕಂದ್ರೆ ಬಿ.ಎಂ.ಶ್ರೀಯವರು ಅನುವಾದ ಮಾಡೋದಕ್ಕೆ ಯಾವ ರೀತಿಯ ಪದ್ಯಗಳನ್ನು ಆಯ್ದುಕೊಂಡರೋ ಅವಕ್ಕಿಂತ ಘನವಾದ ಇಂಗ್ಲಿಷ್‌ ಮತ್ತು ಐರೋಪ್ಯ ಕಾವ್ಯವವನ್ನು ಕುವೆಂಪುವರು, ತಮ್ಮ ಕಾವ್ಯವನ್ನು ಬೆನ್ನಿಗಿಟ್ಟುಕೊಂಡು, ಭಾರತೀಯ ಕಾವ್ಯವನ್ನು ಬೆನ್ನಿಗಿಟ್ಟುಕೊಂಡು, ಸಂಸ್ಕೃತವನ್ನು ಬೆನ್ನಿಗಿಟ್ಟುಕೊಂಡು ಎದುರಾದರು. ಅದು ಸಾಧ್ಯವಾಗಿದ್ದು ಚಾರಿತ್ರಿಕವಾಗಿ ಬಿ.ಎಂ.ಶ್ರೀ ಮಾಡಿದ ಕೆಲಸದಿಂದ. ಅನಂತರ ಮತ್ತೆ ಪಶ್ಚಿಮಕ್ಕೆ ಹೀಗೇನೇ ಎದುರಾಗಿದ್ದು ನವ್ಯರ ಕಾಲದಲ್ಲಿ ಅಡಿಗರು. ಅದು ಕೂಡ ಹಾಗೇನೇ ಮತ್ತೆ ಪಶ್ಚಿಮ ಜಗತ್ತನ್ನು ಮೈಮೇಲೆ ಹಾಕಿಕೊಳ್ಳುವ ಒಂದು ಕೆಲಸ. ಈ ವಿಷಯದಲ್ಲಿ ಬೇಂದ್ರೆ ಬೇರೇನೆ.

ಇವತ್ತಿನ ‘ಸಾಂಸ್ಕೃತಿಕ ಮುಖಾಮುಖಿ’ಯಲ್ಲಿ ಕೆಲವು ಪ್ರಶ್ನೆಯನ್ನು ನಾವು ಎತ್ತಬೇಕು. ಒಂದು : ಪಾಶ್ಚಾತ್ಯಕ್ಕೆ ಮುಖಾಮುಖಿ ಆಗೋದರ ಮುಖಾಂತರ ನಮ್ಮತನವನ್ನು ಹುಡುಕಿಕೊಳ್ಳೋ ವಿಧಾನ. ಇನ್ನೊಂದು : ಅದನ್ನು ಬಿಟ್ಟು ನಮ್ಮ ಜಾನಪದದಿಂದ, ನಮ್ಮ ವಚನಕಾರರಿಂದ, ನಮ್ಮದೇ ಆದ ಸಂಪ್ರದಾಯಗಳಿಂದ, ಸಂಪ್ರದಾಯಸ್ಥರಾಗದೇ ಕ್ರಾಂತಿಕಾರಕವಾದ ಪ್ರೇರಣೆ ಪಡೆಯೋದು. ಯಾಕಂದ್ರೆ ನಮ್ಮ ನಿಜವಾದ ಕನ್ನಡದ ಟ್ರೆಡಿಶನ್ನ ಕ್ರಾಂತಿಕಾರಕವಾದದ್ದು. ಅದಕ್ಕೆ ಮುಖ್ಯ ಕಾರಣ ಅಂದ್ರೆ, ಈ ಭಾರತೀಯ ಭಾಷೆಗಳು ಯಾವತ್ತೂ ಯಜಮಾನಿಕೆಯ ಇನ್ನೊಂದು ಭಾಷೆಯಿಂದ ಬದುಕಬೇಕಾಗಿ ಬಂದ ಭಾಷೆ ತನ್ನಲ್ಲಿ ಯಜಮಾನಿಕೆಗೆ ವಿರೋಧವಾದ ಅಂಶಗಳನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಯಜಮಾನಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಅದಕ್ಕೆ ಗುಲಾಮನಾಗಬೇಕು. ಈ ಎರಡರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ನಮ್ಮಲ್ಲಿ ಕಾಳಿದಾಸನಿಗೆ ಎದುರಾಗೋ ಹಾಗೆ ಪಂಪ ಬರೆದನೇ ಹೊರತು, ಅವನಿಗೆ ಅನುವಾಗೋ ಹಾಗೆ ಬರೀಲಿಲ್ಲ. ಕುಮಾರವ್ಯಾಸ ತನ್ನದನ್ನೇ ಮಾಡಿದ. ನಮ್ಮ ವಚನಕಾರರು ಏನನ್ನ ತಗಂಡರೂನೂ ಹಾಗೇ ಮಾಡಿದರು. ಇದು ಒಂದು ಭಾಷೆಗೇ ಇರೋ ಸಮಸ್ಯೆಯೋ ಏನೋ? ಯಾವ ಭಾಷೆಯಾದರೂ ಉಳಿಯೋದು ಯಾರಿಂದ ಅಂದ್ರೆ, ಆ ಭಾಷೆಯನ್ನ ಮಾತ್ರ ಬಲ್ಲ ಜನರಿಂದ.

ನಮ್ಮ ಮರಾಠಿ ಲೇಖಕ ಬಾಲಚಂದ್ರ ನೆಮಾಢೆ ಒಂದು ಮಾತು ಹೇಳ್ತಿದ್ರು. ಬೊಂಬಾಯಿಗೆ ಬಿಹಾರದಿಂದ ತಮ್ಮದೇ ಆದ ಭಾಷೆ ಆಡೋ ಒಂದಷ್ಟು ಜನ ತರಕಾರಿ ಮಾರೋಕೆ ಬರ್ತಾರೆ. ಅವರು ಮರಾಠಿ ಕಲಿಯೋಲ್ಲ. ತಮ್ಮ ಭಾಷೆ ಮಾತ್ರ ಮಾತಾಡೋರು. ನಾವು ಮರಾಠಿ ಜನ, ಅವರ ಭಾಷೆ ಮಾತಾಡೋಕೆ ಶುರು ಮಾಡಿದಿವಿ. ಅವರ ತರಕಾರಿ ಕೊಂಡುಕೊಳ್ಳಬೇಕಾದ್ರೆ ಅವರ ಭಾಷೆಯನ್ನು ನಾನು ಸ್ವಲ್ಪನಾದರೂ ಮಾತನಾಡಬೇಕಾಗುತ್ತೆ, ಚೌಕಾಸಿ ಮಾಡಬೇಕಾಗುತ್ತೆ ಅಂತ.

ಅನೇಕ ಸಾರಿ ತಮ್ಮ ಭಾಷೆಯನ್ನು ಮಾತ್ರ ಬಲ್ಲ ಜನರಿಂದ ಆ ಭಾಷೆ ಉಳಿಯೋದು ಹಾಗೂ ಇನ್ನೊಂದು ಭಾಷೆಯನ್ನೂ ಬಲ್ಲ ಜನರಿಂದ ಮಾತ್ರ ಭಾಷೆ ಸಾಹಿತ್ಯಿಕವಾಗಿ ಬೆಳೆಯೋದು. ಇದರ ಪ್ಯಾರಡಾಕ್ಸ್‌ ಏನಪ್ಪಾ ಅಂದ್ರೆ, ಆ ಭಾಷೆ ಮಾತ್ರ ಗೊತ್ತಿಲ್ಲದೆ ಇರೋನು ಇಲ್ಲದಿದ್ರೆ, ಆ ಭಾಷೆ ಸತ್ತು ಹೋಗುತ್ತೆ. ಆ ಭಾಷೆ ಜೊತೆ ಇನ್ನೊಂದು ಭಾಷೆ ಗೊತ್ತಿಲ್ಲದೋನು ಇರದೇಯಿದ್ರೆ, ಅದರ ಸಾಹಿತ್ಯ ಬೆಳೆಯೋದಿಲ್ಲ. ಈಗ ನೀವು ಡಾಂಟೆಯನ್ನ ತಗೊಳ್ಳಿ. ಪಂಪನನ್ನ ತಗೊಳ್ಳಿ. ಯಾರನ್ನೇ ತಗೊಳ್ಳಿ. ಇನ್ನೊಂದು ಭಾಷೆ ಗೊತ್ತಿರೋದರಿಂದಲೇ ಅವರೆಲ್ಲರೂ ಸಾಹಿತ್ಯವನ್ನು ಬೆಳೆಸೋದಿಕ್ಕೆ ಸಾಧ್ಯವಾಯ್ತು. ಆ ಇನ್ನೊಂದು ಭಾಷೆ ಯಜಮಾನನ ಭಾಷೆಯಾಗಿದ್ದಾಗ ಒಂದು ಸಮಸ್ಯೆ ಬರುತ್ತೆ. ನಮ್ಮ ಭಾಷೆಯನ್ನು ಅದನ್ನ ಬೆಳೆಸೋದಿಕ್ಕೆ ಬಳಸಿಕೊಳ್ಳುತ್ತೇವೆ. ಅದನ್ನ ಅನುಸರಿಸೋದಕ್ಕೂ ಉಪಯೋಗಿಸಿಕೊಳ್ಳುತ್ತೇವೆ. ನಮ್ಮನ್ನು ನಾವು ಅದಕ್ಕೆ ಅನುವಾದವಾಗೋಕು ಕೂಡ ನೋಡ್ತಿವಿ. ಅಂದರೆ ಅದನ್ನ ನಮಗೆ ಅನುವಾದ ಮಾಡಿಕೊಳ್ಳೋದಕ್ಕಲ್ಲ. ನಮ್ಮನ್ನ ಅದಕ್ಕೆ ಅನುವಾದ ಮಾಡಿಕೊಳ್ಳೋದಕ್ಕೆ ನೋಡ್ತಿವಿ. ನಮ್ಮ ಬುದ್ಧಿಯನ್ನ, ನಮ್ಮ ಆಲೋಚನಾ ಕ್ರಮಗಳನ್ನು ಅದಕ್ಕೆ ಒಗ್ಗಿಸಿಕೊಳ್ಳೋದಕ್ಕೆ ನೋಡ್ತಿವಿ.  ಈ ಎಲ್ಲವು ಹುಟ್ಟಿದ್ದು ಬಿ.ಎಂ.ಶ್ರೀಕಂಠಯ್ಯನವರಿಂದ. ಅವರನ್ನ ನಾನೇನು ಕೇವಲ ಟೀಕೆ ಮಾಡ್ತಾಯಿಲ್ಲ; ನಮ್ಮನ್ನೇ ಅವಲೋಕನ ಮಾಡಿಕೊಳ್ತಾ ಇರೋದರ ಕಡೆ ನನ್ನ ಗಮನ.

ಯಾರೋ ಹೇಳ್ತಾ ಇದ್ರು ನನಗೆ; ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಮಾತಾಡೋದಕ್ಕೆ ನಾಚಿಕೊಳ್ತಾಯಿದ್ರು ಅಂತ. ಬ್ರಿಟಿಷರು ಅಧಿಕಾರದಲ್ಲಿ ಇದ್ದ ಕಾಲದಲ್ಲಿ ಇವನು ಕನ್ನಡದಲ್ಲಿ ಸಭೆಯಲ್ಲಿ ಮಾತಾಡ್ತಾನೆ ಅಂದ್ರೆ ಮರ್ಯಾದೆ ಕಡಿಮೆ ಅಂತ ತಿಳ್ಕೊತಿದ್ರು ಅಂತ ಕಾಣುತ್ತೆ. ನಾವು ಈಗಲೂ ಹಂಗೆ ತಿಳ್ಕೋತಿವಿ. ನೀವು ಕನ್ನಡಿಗರಾಗಿದ್ರೂನು ಏರ್‌ಪೋರ್ಟ್‌‌ಲ್ಲಿ ಕೂತಾಗ ಕನ್ನಡದ ಪುಸ್ತಕವನ್ನು ತೆಗೆಯೋದಿಲ್ಲ. ಯಾಕಂದ್ರೆ ಏರ್‌ಪೋರ್ಟ್ ಅದು. ಯಾವುದೋ ದರಿದ್ರ ಅಮೆರಿಕನ್‌ ಪುಸ್ತಕವನ್ನು ಕೈಯಲ್ಲಿ ಹಿಡಕೊಂಡು ಕುಂತಿರ್ತಿವಿ. ಆದರೆ ಪಾಪ ಆ ತಮಿಳರು ಮಾತ್ರ ತಮಿಳು ಪುಸ್ತಕವನ್ನು ತೆರಕೊಂಡು ಕೂತುಕೊಳ್ತಾರೆ. ಹಿಂದೆ ಯೂನಿವರ್ಸಿಟಿಗಳಲ್ಲೂ ಈ ಏರ್‌ಪೋರ್ಟ್‌ಗಳಲ್ಲಿ ಇದ್ದ ವಾತಾವರಣಾನೇ ಇತ್ತು ಅಂತ ಕಾಣುತ್ತೆ. ಅಲ್ಲೆಲ್ಲಾ ಸ್ಟಾಫ್‌ರೂಮ್‌ನಲ್ಲಿ ಕನ್ನಡ ಗಿನ್ನಡ ಓದ್‌ಕೊಂಡು ಕೂತಿದ್ದರೆ ಏನಪ್ಪಾ ಇವನು! ಅಂದುಕೊಳ್ಳೋ ಕಾಲದಲ್ಲಿ ಬಿ.ಎಂ.ಶ್ರೀ ಬಂದವರು. ಆದರೆ ಅವರು ಎಷ್ಟು ದೊಡ್ಡವರು ಅಂದ್ರೆ, ಇದನ್ನೆಲ್ಲ ಅವರು ನಂತರ ಮೀರಿದರು. ಬಹುಶಃ ಈ ವಾತಾವರಣದೊಳಗಡೆ ಅವರಿಗೆ ಒಂದು ಸೆಲ್ಫ್‌ ಹೆಡ್ರೇಟ್‌ನಂತಹ ಏನೋ ಒಂದು ಒಳಗೆ ಉದ್ವೇಗದಂತೆ ಬೆಳೆದಿರಬಹುದು. ಯಾವುದೋ ಒಂದು ಕಷ್ಟ ಬಂದಿರಲೇಬೇಕು. ನೀನು ಕನ್ನಡ ಪ್ರೊಫೆಸರ್‌ ಆಗ್ತಿಯಾ ಅಂದ್ರೆ, ಇಲ್ಲ ನಾನು ಇಂಗ್ಲಿಷ್‌ ಪ್ರೊಫೆಸರ್‌ ಆಗಿದ್ದೇ ಕನ್ನಡ ಮಾತಾಡ್ತೇನೆ ಅಂತ ಹೇಳಿದ್ರು. ಆವಾಗ. (ಈ ಸಭೆಯಲ್ಲಿ ಬಿ.ಎಂ.ಶ್ರೀಯವರ ಶಿಷ್ಯರಾದ ವೆಂಕಟಸುಬ್ಬಯ್ಯನವರಿದ್ದಾರೆ-ಆ ಕಾಲವೆಲ್ಲ ನೆನಪಾಗಬಹುದು ಅವರಿಗೆ) ಆ ಕಾಲದಲ್ಲಿ ಕನ್ನಡ ಮೇಷ್ಟ್ರಾದರೆ ಐವತ್ತು ರೂಪಾಯಿ ಸಂಬಳ ಕಮ್ಮಿಯಂತೆ. ಈ ತರಹದ ಅವಮಾನಗಳೆಲ್ಲ ಇದ್ದ ಕಾಲದಲ್ಲಿ ಬದುಕಿದವರು ಅವರು. ಇವನ್ನೆಲ್ಲ ನಾವು ಅವರನ್ನ ಸರಿ ಅನ್ನೋದಕ್ಕೂ ಬಳಸಬಾರದು. ತಪ್ಪು ಅನ್ನೋದಕ್ಕೂ ಬಳಸಬಾರದು. ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಬಳಸಬೇಕು.

ಎರಡು ಭಾಷೆ ಗೊತ್ತಿದ್ದೊನು ಸಾಹಿತ್ಯ ಬೆಳಸ್ತಾನೆ ಅಂತಂದೆ. ಆದರೆ ಯಜಮಾನನ ಭಾಷೆಯಲ್ಲಿ ಮಾತ್ರ ನೀವು ಲಿಟರೇಟ್‌ ಆದರೆ ಉಳಿದ ಯಾವ ಭಾಷೆಗಳೂ ನಿಮಗೆ ಬರೋದಿಲ್ಲ. ಅದಕ್ಕೆ ನನ್ನದೊಂದು ಮಾತಿದೆ. ‘ದಿ ಮೋರ್‌ ಲಿಟರೇಟ್‌ ಯು ಆರ್, ದಿ ಲೆಸ್‌ ಲಾಂಗ್ವೇಜಸ್ ಯು ನೊ; ಇದು ಕೂಡ ನಿಜ. ಬಹಳ ಬಡವರಿಗೆ ಬಹಳ ಭಾಷೆಗಳು ಬರ್ತಾಯಿರುತ್ತೆ. ಬಸ್‌ಸ್ಟ್ಯಾಂಡ್‌ಗೆ ಹೋದ್ರೆ ಅಲ್ಲಿ ಕೂಲಿ ಮಾಡೋನು ಎಲ್ಲ ಭಾಷೆಗಳನ್ನು ಮಾತಾಡ್ತಾ ಇರ್ತಾನೆ.

ನಾನು ಇನ್ನೊಂದು ಕಾನ್ಸೆಪ್ಟನ್ನು ನಿಮ್ಮೆದಿರುಗೆ ಇಡೋಕೆ ನೋಡ್ತಿನಿ. ಈ ಕಾನ್ಸೆಪ್ಟ್‌ ನನಗೆ ಹುಟ್ಟಿದ್ದು ಹಂಪಿಯಲ್ಲಿ. ಚಂದ್ರಶೇಖರ ಕಂಬಾರರಿದ್ದಾಗ ಹಂಪಿ ಯುನಿವರ್ಸಿಟಿಗೆ ಭಾಷಣ ಮಾಡೋಕೆ ಹೋಗಿದ್ದೆ. ನನ್ನ ಗೆಳೆಯ ಜೆ.ಎಚ್. ಪಟೇಲರೂ ಬಂದಿದ್ರು. ಅವರು ಮುಖ್ಯಮಂತ್ರಿ ಹಾಗೂ ಕುಲಾಧಿಪತಿ. ಡಿಗ್ರಿಯನ್ನು ಪ್ರಧಾನ ಮಾಡೋ ಸಂದರ್ಭದಲ್ಲಿ ನಾನು ಘಟಿಕೋತ್ಸವವ ಭಾಷಣ ಮಾಡಿದೆ. ನಂತರ ಪಟೇಲರಿಗೂ ಏನೊ ಒಂದು ಹುಚ್ಚು ಪ್ರೇರಣೆ ಬಂದುಬಿಟ್ಟು, ‘ನಾನು ಬರೆದು ತಂದಿರೋದನ್ನ ಮಾತಾಡೋದಿಲ್ಲ. ಬೇರೆ ಮಾತಾಡ್ತಿನಿ’ ಅಂತಂದ್ರು. ಹಾಗೆ ಮಾತಾಡ್ತಾ ನಾನು ಎತ್ತಿದ ಪ್ರಶ್ನೆಗಳನ್ನು ಇಟ್ಟುಕೊಂಡು ಅವರು ಒಂದು ಮಾತು ಹೇಳಿದ್ರು. ‘ನೋಡ್ರಿ, ನಾವೆಲ್ಲ ಒಂದು ರೈಲಿನಲ್ಲಿ ಪ್ರಯಾಣ ಹೊರಟಿದ್ದೀವಿ. ಆ ರೈಲು ಹೋಗ್ತಾ ಇರೋದು ಪಶ್ಚಿಮ ದಿಕ್ಕಿಗೆ. ಆದರೆ ನಾವೆಲ್ಲ ಎಂಥ ಜಾಣರು ಅಂದ್ರೆ, ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಂಡು ಬಿಟ್ಟು, ಪೂರ್ವದ ಕಡೆ ಹೋಗ್ತಾಯಿದ್ದೀವಿ ಅಂತಲೇ ತಿಳ್ಕೊಂಡಿದಿವಿ’ ಅಂತ. ನಾನು ಮೊನ್ನೆ ಒಂದು ಲೇಖನ ಬರೆದಿದ್ದೀನಿ. ‘ಪಶ್ಚಿಮಕ್ಕೆ ಪ್ರಯಾಣ ಪೂರ್ವಕ್ಕೆ ಮುಖ’ ಅಂತ. ಬಿ.ಎಂ.ಶ್ರೀಕಂಠಯ್ಯನವರು ಮಾಡಿದ ಕೆಲಸದಿಂದ ಶುರುವಾಗಿದ್ದು ಏನಪ್ಪಾ ಅಂತಂದ್ರೆ ಪೂರ್ವಕ್ಕೆ ಮುಖ, ಪಶ್ಚಿಮಕ್ಕೆ ಪ್ರಯಾಣ.

ಈ ಬಗ್ಗೆ ನನ್ನದೊಂದು ವಿಚಾರವಿದೆ. ಇದನ್ನ ಹೇಳೊಕೆ ನಾನು ಒಂದು ಶಬ್ದ ಉಪಯೋಗಿಸ್ತಿನಿ. ಬ್ಯಾಡ್‌ಫೈತ್‌. ಇದು ಸಾರ್ತ್ರ ಬಳಸಿದ ಶಬ್ದ. ನಾವೆಲ್ಲ ಒಂದು ತರಹದ ಬ್ಯಾಡ್‌ಫೈತ್‌ನಲ್ಲಿ ಇದ್ದೀವಿ. ಈ ಬ್ಯಾಡ್‌ಫೈತ್‌ಗೆ ನನಗೊಂದು ಮೆಟಫರ್‌ ಹೊಳೀತಾ ಇದೆ. ನಾವು ಹುಡುಗರಾಗಿದ್ದಾಗ, ಯಾವುದಾದ್ರು ಹುಡುಗಿ ಇಷ್ಟ ಆದರೆ, ಅಥವಾ ಅವಳಿಗೆ ನನ್ನ ಮೇಲೆ ಇಷ್ಟವಾದ್ರೆ, ಸಾಮಾನ್ಯವಾಗಿ ಹಸ್ತಸಾಮುದ್ರಿಕ ನೋಡೋ ಕೆಲಸ ಮಾಡ್ತಾ ಇದ್ದಿವಿ. ಹುಡುಗನ ಕೈಯನ್ನು ಹುಡುಗಿ ಹಿಡಕೊಂಡು ನೋಡೋದು ಅಂತಾ ಹುಡುಗಿಯ ಕೈಯನ್ನು ನಾವು ಹಿಡಕೊಂಡು ನೋಡೋದು. ನೋಡುವಾಗ ನಾವು ಏನು ಯೋಚನೆ ಮಾಡ್ತಿರ್ತೀವಿ ಅಂತಂದ್ರೆ, ಸುಮ್ಮನೆ ಒಂದು ಹಸ್ತಸಾಮುದ್ರಿಕ ನೋಡೋಕೆ ಅಂತ ಕೈ ಹಿಡಿದ್ದೀವಿ ಅಂತ. ಅದು ಹಿಡಿದಾಗ ಸ್ವಲ್ಪ ಹತ್ತಿರಕ್ಕೆ ಕೂತಿರ್ತಿವಿ. ಒಂಚೂರು ಸ್ವಲ್ಪ ಕೈಕೈ ತಾಕೋಹಾಂಗೆ ಮಾಡ್ತಿವಿ. ನಮಗೇ ಗೊತ್ತಿಲ್ಲದೆ ಹಸ್ತ ನೊಡೋದಿಕ್ಕೆ ಸ್ವಲ್ಪ ಹತ್ತಿರವಾಗಲಿ ಅಂತ ಏನೇನೋ ಮಾಡ್ತಾ ಇರ್ತೀವಿ. ಅಂದ್ರೆ ನಮಗೆ ಈ ಹಸ್ತ ಸಾಮುದ್ರಿಕದ ಕ್ರಿಯೆ, ಇನ್ಯಾವುದೊ ಒಂದು ಕ್ರಿಯೆಗೆ ಪೂರ್ವಭಾವಿಯಾದ ಗೆಸ್ಚರ್‌ಗಳು ಅನ್ನೋದು ನನಗೆ ಗೊತ್ತಿಲ್ಲದ ಹಾಗೆ ಮಾಡೋದರಿಂದ ಏನೋ ಸಮಾಧಾನದಲ್ಲಿ ಅದನ್ನ ಮಾಡ್ತಾ ಇರ್ತೀವಿ.

ನಾವು ಪೂರ್ವದವರು. ವೆಸ್ಟರ್ನೈಸ್‌ ಆಗತಾಯಿರೋದು ಹೀಗೆ. ಒಂದು ಬ್ಯಾಡ್‌ಫೈತ್‌ನಲ್ಲಿ. ಅದಕ್ಕೆ ನೆಹರೂ ಮುಖ್ಯ ಕಾರಣ. ಎಲ್ಲರೂ ಅದಕ್ಕೆ ಕಾರಣ. ಇದು ಗೊತ್ತಾದಾಗ ಒಂದು ಸಂಕಟ. ಇವತ್ತಿನ ಕ್ರಿಯೇಟಿವಿಟಿ ಈ ಸಂಕಟದಿಂದ ಬರಬೇಕು. ಯಾಕಂದ್ರೆ ಇನ್ನೊಂದು ಭಾಷೆ ಗೊತ್ತಿಲ್ಲದೆ ನಾವು ಬೆಳೆಯೊದಿಲ್ಲ. ಇಂಗ್ಲಿಷ್‌ ನಮ್ಮ ಎಲ್ಲ ಬೆಳವಣಿಗೆಗೂ ಕಾರಣವಾಯಿತು. ಕುವೆಂಪು ಅವರಿಗೆ ಕಾರಣವಾಯಿತು. ಅಡಿಗರಿಗೂ ಕಾರಣವಾಯಿತು. ಬಿ.ಎಂ.ಶ್ರೀಯವರಿಗೆ ಕಾರಣವಾಯಿತು. ಮಾಸ್ತಿಗೂ ಕೂಡ ಕಾರಣವಾದದ್ದು ಅದೇನೆ. ಯಾಕಂದ್ರೆ ಇವರೆಲ್ಲ ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದವರು. (ನಮ್ಮ ಶೇಷಗಿರಿರಾಯರು ಕೂಡ) ನಬಾವೆಲ್ಲ ಹೀಗೆನೇ. ಆದರೆ ನಾವೇ ಕಾಣ್ತಾಯಿರೋ ಹಾಗೆ ಇಂಗ್ಲಿಷ್‌ ಕನ್ನಡವನ್ನು ರಿಪ್ಲೇಸ್‌ ಮಾಡುತ್ತೆ. ಯಾಕಂದ್ರೆ ಅದರಿಂದಲೇನೆ ನಮಗೆ ಹೆಚ್ಚು ಲಾಭಯಿರೋದು. ಅದು ನಮಗೆ ಸ್ವಲ್ಪ ಕಷ್ಟವಾಗ್ತಾ ಇರೋದರಿಂದ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಂಡಿದ್ದೇವೆ. ಪೂರ್ವಾಭಿಮುಖವಾಗಿ ಕುಳಿತು ಪಶ್ಚಿಮಕ್ಕೆ ಪ್ರಯಾಣ ಮಾಡ್ತಾಯಿದ್ದೀವಿ. ಇದನ್ನ ದಾಟೋದು ಹೇಗೆ ಅಂದ್ರೆ, ಅದನ್ನ ಎದುರಿಸಿಯೇ ದಾಟಬೇಕು ಅಂತಲೇ ನಾನು ತಿಳಕೊಂಡಿದ್ದೀನಿ.

ಅದಕ್ಕೆ ನಾನು ಕನ್ನಡದಲ್ಲೊಂದು ಜೀರ್ಣಾಗ್ನಿಯಿದೆಯೆಂದು ಒಂದು ಕಡೆ ಬರೆದಿದ್ದೀನಿ. ಈ ‘ಜೀರ್ಣಾಗ್ನಿ’ ಅನ್ನೋ ಶಬ್ದವನ್ನು ನನ್ನ ಚಿಕ್ಕ ವಯಸ್ಸಿನಲ್ಲಿ ನಾನು ಕೇಳಿಸಿಕೊಂಡಿದ್ದು. ಅದು ಹೆಬ್ಬಟ್ಟಿನಷ್ಟು ದೊಡ್ಡದು. ಅದರಲ್ಲೊಂದು ಅಗ್ನಿಯಿರುತ್ತದೆ ಅಂತೆ. ಒಳಗೆ ಅದಕ್ಕೆ ಎಲ್ಲವನ್ನು ಜೀರ್ಣೀಸಿಕೊಳ್ಳುವ ಶಕ್ತಿಯಿರುತ್ತಂತೆ. ಹೀಗೆನೇ ಕನ್ನಡವು ಸಂಸ್ಕೃತವನ್ನು ಜೀರ್ನೀಸಿಕೊಂಡಿತ್ತು. ಈಗ ಅದು ಇಂಗ್ಲಿಷನ್ನ, ವೆಸ್ಟನ್ನ ಜೀರ್ಣಿಸಿಕೊಳ್ತಾಯಿದೆ. ನಮ್ಮಂತಹವರ ಮುಖಾಂತರ. ನಾವೆಲ್ಲ ಅದರ ಜೀರ್ಣಾಗ್ನಿಗಳಿದ್ದ ಹಾಗೆ. ಇದನ್ನ ಕೂಡ ಸ್ವಲ್ಪ ಬ್ಯಾಡ್‌ಫೈತ್‌ನಲ್ಲಿ ಹೇಳಿಕೊತಾ ಇದೀನೋ ಏನೋ ಅನುಮಾನ ನನಗೆ. ಯಾಕಂದ್ರೆ ಆಗ್ತಾಯಿರೋದನ್ನ ನೋಡಿದಾಗ ಹಾಗನ್ನಿಸ್ತು. ಅದನ್ನೂ ಮಾಡದೇಯಿದ್ರೆ ಇವತ್ತು ಕನ್ನಡ ಉಳಿಯೊಲ್ಲ. ಕನ್ನಡ ಈ ಪರಿಸ್ಥಿತಿಯನ್ನ ಎದುರಿಸಲೇಬೇಕು. ಅದಕ್ಕೆ ನಮ್ಮ ರಾಮಚಂದ್ರದೇವ ಶೇಕ್ಸ್‌ಪೀಯರ್‌ನ ಟ್ರಾನ್ಸ್‌ಲೇಟ್‌ ಮಾಡಿದಾಗ, ‘ಕ್ರಮ ವಿಕ್ರಮ’ ದಂತಹ ಅಕ್ಷರನ ನಾಟಕ ನೋಡಿದಾಗ ನನಗೆ ಬಹಳ ಸಂತೋಷವಾಗಿ ಬಿಡ್ತು. ಅರೆರೆ…. ಶೇಕ್ಸ್‌ಪೀಯರ್‌ ಇವತ್ತು ಕನ್ನಡಕ್ಕೆ ಕನ್ನಡದವನಾಗೇ ಬಂದುಬಿಟ್ಟನಲ್ಲ ಅಂತ. ಕನ್ನಡದ್ದೇ ಅನ್ನಿಸುವ ಹಾಗೆ ಬಂದ್ನಲ್ಲ ಅಂತ; ಆದರೆ ನಮ್ಮ ಕ್ರಿಯೇಟಿವಿಟಿಯನ್ನ ನಾವು ಒಂದು ಕಾಲದಲ್ಲಿ ಬಹಳ ದೊಡ್ಡವದಿಂದ ತಗೊಂಡೆವು. ಚಾರ್ಲ್ಸ ಡಿಕೆನ್ಸ್‌ನಿಂದ ತಗೊಂಡಿವಿ. ಮಿಲ್ಟನ್‌ನಿಂದ ತಗೊಂಡಿವಿ. ಶೇಕ್ಸ್‌ಪೀಯರ್‌ನಿಂದ ತಗೊಂಡಿವಿ. ಈಗ ನಾವು ತಗೋಳ್ತಿರೋದು ಮೂರನೇ ದರ್ಜೆಯ ಐರೋಪ್ಯ ಸಾಹಿತ್ಯದಿಂದ. ಅನೇಕ ಸಲ ಎರಡನೆಯ ದರ್ಜೆಯ ಸಾಹಿತ್ಯದಿಂದ.

ಇದು ಎಲ್ಲಿಯವರೆಗೆ ಹೋಗಿದೆ ಅಂದ್ರೆ, ಈಗ ಯಾವ ಕನ್ನಡ ಚಾನೆಲ್‌ಗಿಂತಲೂ ಚೆನ್ನಾಗಿರೋದು ಟ್ವೆಮಟಿಪೋರ್‌ ಸವೆನ್‌ ಚಾನಲ್! ಅದನ್ನೇ ನೋಡೋದು ನಾವು. ಅದರಲ್ಲಿ ಅದ್ಯಾವನೊ ಜೋಹರ್‌ ಅನ್ನೋನು ದಾಂಪತ್ಯದ ಬಗ್ಗೆ ಒಂದು ಸಿನಿಮಾ ಶುರು ಮಾಡಿ ಬಿಟ್ಟಿದ್ದಾನೆ. ಧಾರಾವಾಹಿ, ಏನೋ ಒಂದು ಹೆಸರು. ಅದರಲ್ಲಿ ಒಬ್ಬ ಹೆಣ್ಣು ಮಗಳನ್ನು ಬಿಟ್ಟು ಇನ್ನೊಬ್ಬ ಹುಡುಗಿಯನ್ನು ಅವನು ಮದುವೆಯಾಗ್ತಾನೆ. ಅಂದರೆ ವಿವಾಹ ಅನ್ನೋದನ್ನ ಅವರು ಸಮಸ್ಯೆ ಮಾಡಿದ್ದಾರೆ. ಎಷ್ಟು ದರಿದ್ರವಾದ ಸಿನೆಮಾ ಅಂದ್ರೆ, ಇವತ್ತು ನಮ್ಮ ಇಂಟಲೆಕ್ಚುಯಲ್ಸ್‌ಗಳೆಲ್ಲ ಕೂಡಿ ಆ ಸಿನೆಮಾದ ಆಧಾರದ ಮೇಲೆ ವೈವಾಹಿಕ ಜೀವನ ಅನ್ನೋದು ಅರ್ಥಪೂರ್ಣ ಹೌದೋ ಅಲ್ಲವೊ ಅನ್ನೋದನ್ನ ಡಿಸ್ಕರ್ಷನ್ ಮಾಡ್ತಾಯಿದ್ದಾರೆ. ನಮ್ಮ ಕಾಲದಲ್ಲಿ ನಾವು ವೆಸ್ಟಿಗೆ ತೆರೆದುಕೊಂಡಾಗ, ‘ಅನ್ನಾ ಕರೆನೀನಾ’ ಅಥವಾ ‘ಮದಾಮ್‌ ಬಾವರಿ’ ಕಾದಂಬರಿ ಇಟ್ಟುಕೊಂಡು ವಾದ ಮಾಡ್ತಾ ಇದ್ದೆವು. ಈಗ ಇಂಥ ಸಿನೆಮಾದಿಂದ ನಾವು ಈ ವಾದವನ್ನು ಇಂಗ್ಲಿಷ್‌ ಭಾಷೆಯಲ್ಲಿ ಮಾಡ್ತಾಯಿದ್ದೀವಿ.

ಮೊನ್ನೆ ಇನ್ಸ್ಟಿಟ್ಯೂಟ್ ಆಫ್‌ ಕ್ವಾಂಟಂ ಫಿಜಿಕ್ಸ್‌ಗೆ ಹೋಗಿ ಮಾತಾಡ್ತಾ ಇದ್ದೆ. ಬಹಳ ದೊಡ್ಡ ದೊಡ್ಡ ಸೈಮಟಿಸ್ಟ್‌ ಇದ್ದಾರೆ ಅಲ್ಲಿ. ಆತ್ಮೀಯವಾಗಿ ಮಾತಾಡೋದಿಕ್ಕೆ ಸಾಧ್ಯವಾಯ್ತು. ನಾನು ಕೇಳಿದೆ. ‘ಏನಪ್ಪಾ, ಈ ಕಾಲದಲ್ಲಿ ಯಾರಾದರೂ ಇವತ್ತು ಬಹಳ ಬುದ್ಧಿವಂತರು ಇಂಗ್ಲಿಷ್‌ ಬಲ್ಲಂತಹವರು ಫಿಸಿಕ್ಸ್‌, ಕೆಮೆಸ್ಟ್ರಿ ಓದೋಕೆ ಬರ್ತಾರಾ? ಅಮತ. ‘ಇಲ್ಲ’ ಅಂದ್ರು. ಈಗ ಬಿ.ಎ. ಯೊಳಗೆ ಇಂಲಿಷ್‌ ಚೆನ್ನಾಗಿ ಬಂದು ಬಿಟ್ರೆ ಕಾಲ್‌ಸೆಂಟರ್‌ ಸೇರಿ ಬಿಡ್ತಾರೆ. ಇಪ್ಪತ್ತು ಸಾವಿರ ರೂಪಾಯಿ ಸಂಬಳ ತಗೊಳ್ತಾರೆ. ನೀವು ಬಿ.ಎಡ್‌. ಮಾಡ್ಕೊಂಡು ಸ್ಕೂಲ್ ಟೀಚರಾದ್ರೂ ಅಷ್ಟು ಸಂಬಳ ಬರಲ್ಲ. ಎಂ.ಎಸ್.ಸಿ. ಮಾಡ್ಕೊಂಡು ಲೆಕ್ಚರಾದ್ರೂ ಅಷ್ಟು ಸಂಬಳ ಬರಲ್ಲ. ಇಂಗ್ಲಿಷ್‌ ಇವತ್ತೊಂದು ಶಾಪ. ಮುಂದೆ ಜ್ಞಾನಾರ್ಜನೆಗೆ ಅವಕಾಶವೇ ಇಲ್ಲದಿದ್ದ ಹಾಗೆ ಮಾಡುವ ಒಂದು ದೊಡ್ಡ ಆಕರ್ಷಣೆ ಅದು. ನಮಗೆ ಹಂಗಿರಲಿಲ್ಲ. ಈ ಸಾಂಸ್ಕೃತಿಕ ಮುಖಾಮುಖಿ ಅಂತ ಈ ‘ಇಂಗ್ಲಿಷ್ ಗೀತೆಗಳು’ ಮೇಲೆ ಚರ್ಚೆ ಮಾಡ್ತಾ ಇದ್ದೀವಲ್ಲ, ಇಂತಹವನ್ನು ಇನ್ಮುಂದೆ ಯಾರೂ ಓದೊದಿಲ್ಲ. ಇವತ್ತು ಇಂಗ್ಲಿಷ್‌ ಕಲಿತವರು ಇಂತಹದ್ಯಾವುದೂ ಓದಲ್ಲ. ಬಿ.ಎಂ.ಶ್ರೀಯವರು ಓದಿದಂತಹದ್ದನ್ನು ಅವರು ಓದೋದಿಲ್ಲ. ಅವರು ಓದೋದೆಲ್ಲ ಬಹಳ ಚೀಪಾದ ಪುಸ್ತಕಗಳು. ಅವು ಕೋಟಿಗಟ್ಟಲೆ ಕಾಪಿಸ್‌ ಖರ್ಚಾಗ್ತಾಯಿದ್ದಾವೆ. ಮಕ್ಕಳೆಲ್ಲ ಅದನ್ನ ಓದ್ತಾಯಿದ್ದಾರೆ. ಆ ತರಹದ್ದು ಯಾರೋ ಒಬ್ಬಳು ಬರೀತಾಳೆ. ಎಲ್ಲ ಉರಿನಲ್ಲೂ ಅದು ಒಟ್ಟಿಗೆ ಬಿಡುಗಡೆ ಆಗುತ್ತೆ. ಚೀನಾದಲ್ಲೂ ಬಿಡುಗಡೆ ಮಾಗುತ್ತೆ. ಈಗ ನಮ್ಮ ಕೆಲವನ್ನು ಜರ್ಮನಿಯಲ್ಲಿ ನಡೀತಾ ಇರೋ ಬುಕ್‌ಫೇರ್‌ಗೆ ಕಳಿಸ್ತಾ ಇದಾರೆ. ‘ಯಾರ‍್ಯಾರನ್ನು ಕಳಿಸ್ತಾಯಿದ್ದೀರಿ’ ಅಂದ್ರೆ, ಇಲ್ಲಿರುವ ಎರಡು ಇಂಗ್ಲಿಷ್‌ ಲೇಕಕರ ಹೆಸರು ಹೇಳ್ತಾರೆ,. ನನ್ನ ಹೆಸರು ಬಿಡ್ರಿ, ಮಹಾಶ್ವೇತಾದೇವಿ ಹೆಸರನ್ನೂ ಹೇಳಲ್ಲ. ಮಹಾಶ್ವೇತಾದೇವಿ ಸಾಮಾನ್ಯಳಲ್ಲ. ನಾವು ಹಿಂದೆ ಬ್ಯಾಡ್‌ಫೈತಿಯಲ್ಲಿ ಏನೇನೋ ಮಾಡ್ತಾಯಿದ್ದೆವೊ, ಅದನ್ನೇ ಈಗ ಬ್ಯಾಡ್‌ಫೈತಿಯಲ್ಲಿ ಮಾಡೋಕೆ ಶುರುವಾಗಿದೆ. ಈಗ ಇಂಗ್ಲಿಷ್‌ ಇಲ್ಲದೆನೇ ಕ್ರಿಯೇಟಿವ್‌ ಆಗಲಿಕ್ಕೆ ಸಾಧ್ಯವಿದೆಯಾ ಅನ್ನೋ ಪ್ರಶ್ನೆಯನ್ನು ಕೇಳೊದಕ್ಕೂ ಕೂಡ ನಮಗೆ ಸಾಧ್ಯವಾಗ್ತಾಯಿಲ್ಲ

ಅದನ್ನ ಕೇಳಿದವನು ಒಬ್ಬನೇ ಮನುಷ್ಯ. ಅವನು ಗಾಂಧಿ. ಪುರಿಯಲ್ಲಿದ್ದಾಗ ಯಾರೋ ಒಬ್ಬರು ಗಾಂಧಿಯನ್ನ ರಾಜಾರಾಂ ಮೋಹನ್‌ರಾಯ್‌ ಬಗ್ಗೆ ಕೇಳ್ತಾರೆ. ರಾಜಾರಾಂ ಮೋಹನ್‌ರಾಮ್‌ರು ನಮಗೆ ಇಂಗ್ಲಿಷ್‌ ಕಲಿಸದೇ ಇದ್ದಿದ್ದರೆ ನಮಗೆ ಆಧುನಿಕ ಲೋಕಕ್ಕೆ ಬರೋಕೆ ಆಗ್ತಿರಲಿಲ್ಲ. ಆದ್ದರಿಂದ ಇಂಗ್ಲಿಷ್‌ ಅನ್ನೋದನ್ನ ಕಲಿಸಿ ಅಮತ ಚಳವಳಿ ಶುರು ಮಾಡಿದೋರು ರಾಜಾರಂ ಮೋಹನ್‌ರಾವ್‌ ಅಂತ. ಗಾಂಧಿ ಕೂಡ ಇಂಗ್ಲಿಷ್‌ನ ಮುಖಾಂತರವೇ ಬೆಳೆದದ್ದು. ಅವರು ದಕ್ಷಿಣ ಆಫ್ರಿಕಾಕ್ಕೆ ಹೋದರು. ಇಂಗ್ಲೆಂಡಿನಲ್ಲಿ ಬಾರ್ ಅಟ್‌ ಲಾ ಮಾಡಿದರು. ಅವರು ಅಲ್ಲೆಲ್ಲ ಇಂಗ್ಲಿಷನ್ನೇ ಬಳಸಿದ್ರು. ಆದರೆ ನಾವೆಲ್ಲ ಇಮಗ್ಲಿಷನ್ನ ಬೈದಾಗ ಒಂಥರ ಬ್ಯಾಡ್‌ಫೈತ್‌ ಇರುತ್ತೆ. ಅದನ್ನ ಬಳಸ್ತಾನೇ ಬೈತಿರ್ತಿವಿ. ಈ ಸಮಸ್ಯೆ ಎಲ್ಲರಿಗೂ ಇರೋ ಹಾಗೆ ಗಾಂಧಿಗೂ ಇತ್ತು ಅಂತ ಕಾಣುತ್ತೆ. ಆದರೆ ಗಾಂಧಿ ತನ್ನೊಳಗಡೇನೇ ಬದಲಾಗೋದಿಕ್ಕೆ ನೋಡ್ತಾ ಇದ್ದ ಮನುಷ್ಯ. ರಾಜಾರಂ ಮೋಹನರಾಯರ ಬಗ್ಗೆ ಗಾಂಧಿಜಿಗೆ ಕೇಳಿದಾಗ ಅವರು ಏನಂದರು ಗೊತ್ತಾ’? ‘ಹಿ ಇಸ್‌ ಎ ಪಿಗ್ಮಿ’ ಅಂತ. ಪಿಗ್ಮಿ ಅಂದ್ರೆ ಕುಬ್ಜ. ರವೀಂದ್ರನಾಥ ಟ್ಯಾಗೋರ‍್ಗೆ ಇದನ್ನ ಸಹಿಸಿಕೊಳ್‌ಳೊಕೆ ಆಗಲಿಲ್ಲ. ಅವರಿಗೆ ಬಹಳ ಸಿಟ್ಟು ಬಂತು. ‘ಏನು ನೀವು ಮೋಹನರಾಯರನ್ನ ಪಿಗ್ಮಿ ಅಂತ ಅಂದ್ರಲ್ಲ’. ನೀವು ಮಹಾತ್ಮರು. ಹೀಗೆಲ್ಲ ಮಾತಾಡಬಾರದು. ‘ಆವಾಗ ಗಾಂಧಿ ಒಂದು ಮಾತು ಬರೀತಾರೆ’ ನಾನು ಪಿಗ್ಮಿ ಅಂದೆನಲ್ಲಾ, ಅದು ಅಹಕಾರದಿಂದ ಆಡಿದ್ದಲ್ಲ. ನಾವೆಲ್ಲ ಪಿಗ್ಮಿಗಳೇ ಈವಾಗ.ನಾವೇನು ತಿಳ್ಕೊಂಡಿದ್ದೀವಿ ಅಂದ್ರೆ ಯಾವ ಹೊಸ ವಿಚಾರ ಬರಬೇಕಾದ್ರೂ ಅದು ವೆಸ್ಟ್‌ನಿಂದ ಬರಬೇಕು ಅಂತ ತಿಳ್ಕೊಂಡಿದಿವಿ.  ನಮ್ಮಲ್ಲಿ ಕಬೀರ್‌ ಇದ್ದ. ನಮ್ಮಲ್ಲಿ ತುಲಸಿದಾಸರು ಇದ್ದರು. ನಮ್ಮಲ್ಲಿ ಉಪನಿಷತ್ತುಕಾರರು ಇದ್ದರು. ನಮ್ಮಲ್ಲಿ ದೊಡ್ಡ ದೊಡ್ಡ ಆಚಾರ್ಯರಿದ್ದರು. ಬಹಳ ದೊಡ್ಡ ಆಲೋಚನೆ ಮಾಡಿದೋರಿದ್ದರು. ಯಾವ ಇಂಗ್ಲಿಷಿನ ಜ್ಞಾನವಿಲ್ಲದೆ ಇವೆಲ್ಲ ಇತ್ತು ಅನ್ನೋದನ್ನೇ ಮರೆತುಬಿಟ್ಟಿದ್ದೀವಿ. ಅದೊಂದು ಮರೆವು ಕೂಡಾ ಆಗಿದೆ ನಮಗೆ. ಆದರೆ ನಮಗೆ ಗೊತ್ತಿರಬೇಕು, ಇಡೀ ಸಮಾಜವನ್ನು ಬದಲಾವಣೆ ಮಾಡೋದಕ್ಕಾಗಿಯೇ ಬುದ್ಧ ಬಂದಿದ್ದು. ಇಡೀ ವೇದಗಳು ಅಪೌರುಷೇಯ, ಅವು ದೈವ ಬಲದಿಂದ ಬಂದವು ಅನ್ನೋದನ್ನ ಪ್ರತಿಭಟಿಸಿದವರು ಅವನು. ಇಂಗ್ಲಂಡಿನಲ್ಲಿ ರೆನೈಸಾನ್ಸ್ ಬಂದಿದ್ದು ಯಾವಾಗ? ‘೧೫-೧೬ನೇ ಶತಮಾನದಲ್ಲಿ. ನಮ್ಮಲ್ಲಿ ಎರಡೂವರೆ ಸಾವಿರ ವರುಷದ ಹಿಂದೆ ಬುದ್ಧ, ಮಹಾವೀರ, ಆಮೇಲೆ ನಮ್ಮ ಬಸವಣ್ಣ ಇವೆಲ್ಲವನ್ನು ವಿರೋಧಿಸಿದ್ರು.

ಅದಕ್ಕೆ ನಾನು ನೈನ್‌ ಇಲವೆನ್‌ ಘಟನೆಯನ್ನ ಒಂದು ಮೆಟಫರ್‌ ಆಗಿ ಹೇಳಿದ್ದು. ಈ ಘಟನೆ ಇದೆಯಲ್ಲ, ವರ್ಲ್ಡಟ್ರೇಡ್ ಸೆಂಟರ್‌ ಮೇಲೆ ಬಾಂಬ್ ಬಿದ್ದ ದಿನ, ಮೂರು ಸಾವಿರ ಜನ ಸತ್ತದಿನ, ಅದರ ಹಿಂದೆ ಅಮೆರಿಕಾದವರು ಸಾವಿರಾರು, ಪ್ಯಾಲೆಸ್ತೈನರನ್ನ ಕೊಂದ ಕತೆಯಿದೆ; ಅವರ ದೇಶವನ್ನ ಕಸಿದುಕೊಂಡ ಕತೆಯಿದೆ. ಚಿಲಿಯಲ್ಲಿ ತನ್ನದೇ ರೀತಿಯ ಒಂದು ದೊಡ್ಡ ಪ್ರಜಾತಾಂತ್ರಿಕವಾದ ಸಮಾಜವಾದಿ ಸರಕಾರ ಹುಟ್ಟುಹಾಕ್ತಾ ಇದ್ದಾಗ, ಅಮೆರಿಕಾ ಅದನ್ನ ನಾಶಮಾಡಿದ ಕತೆಯಿದೆ. ಅದೆಲ್ಲದರ ಪರಿಣಾಮವಾಗಿ ವರ್ಲ್ಡ್‌ಟ್ರೇಡ್ ಸೆಂಟರ್‌ ಕಟ್ಟಡಗಳು ಬಿದ್ದವು. ನಿನ್ನೆ ನಾನು ಒಂದು ಕಡೆ ಓದಿದೆ. ಅದರಲ್ಲಿ ಒಸಾಮಾಬಿನ್‌ ಲಾಡೆನಗೂ ಬುಷ್‌ಗೂ ಕೂಡಿ ಒಬ್ಬನೇ ಗುಪ್ತಚಾರ ಇದಾನಂತೆ. ಅವನ್ನ ಬುಷ್‌ನೂ ಉಪಯೋಗಿಸಿಕೋತಾ ಇದ್ದಾನೆ. ಲ್ಯಾಡೆನೂ ಉಪಯೋಗಿಸಿಕೊಳ್ತಾ ಇದಾನೆ. ಅವನದು ಎಂಥ ಬ್ಯಾಡ್‌ಫೈತ್‌ ಇರಬೇಕು ನೋಡಿ! ಲಾಡೆನ್ ಜೊತೆಗೆ ಇದ್ದಾಗ ಬುಷ್‌ಗೆ ಬ್ಯಾಡ್‌ಪೈತ್; ಬುಷ್ ಜೊತೆಯಿದ್ದಾಗ ಲಾಡೆನ್‌ಗೆ ಬ್ಯಾಡ್‌ಫೈತ್‌. ಇಬ್ಬರೂ ಒಟ್ಟಿಗೆ ಕೂಡಿ ಈ ಪ್ರಪಂಚವನ್ನು ನಾಶಮಾಡ್ತಾ ಇದ್ದಾರೆ.

ಆದ್ದರಿಂದ ಇಂಗ್ಲಿಷಿನ ಜೊತೆ ಶುರುವಾದ ನಮ್ಮ ಈ ಪ್ರೇಮ ವ್ಯವಹಾರ ಇದೆಯಲ್ಲ, ಅದು ಈ ಹಸ್ತ ಸಾಮುದ್ರಿಕಾ ನೋಡೋಕೆ ನಾವು ಹತ್ತಿರ ಕೂತು ಮಾಡ್ತಾ ಇದ್ದ ಪ್ರೀತಿಯ ವ್ಯವಹಾರ ಇದ್ದ ಹಾಗೆ. ಅದು ಎಲ್ಲಿಗೆ ನಮ್ಮನ್ನು ಕರಕೊಂಡು ಹೋಗುತ್ತೆ ಅನ್ನೋದನ್ನ ನಾವು ಇವತ್ತು ನೋಡ್ತಾ ಇದ್ದೀವಿ. ಪ್ರಾಯಶಃ ನಮಗೆ ಬಿ.ಎಂ.ಶ್ರೀ ಏನು ಮಾಡಿದ್ರು ಅಂತಂದ್ರೆ, ನಾವು ಮರೆತದ್ದನ್ನ ಮತ್ತೆ ನೆನಪು ಮಾಡಿದರು. ಆದರೆ ನಮ್ಮಲ್ಲಿ ಅದಿತ್ತು. ವಚನಕಾರರಲ್ಲಿ ಅದಿತ್ತು. ಯಾಕೆ ಹೊಯ್ತೊ ಗೊತ್ತಿಲ್ಲ. ನಾನು ಇತ್ತೀಚೆಗೆ ಇಂಗ್ಲಿಷ್‌ ಮೇಷ್ಟ್ರುಗಳ ಒಂದು ಸಮಾರಂಭದಲ್ಲಿ ಹೋಗಿ ಮಾತಾಡಿದೆ. ಈಗ ಮ್ಯಾಕ್ಸ್ ಮುಲ್ಲರ್‌ ಸಂಸ್ಕೃತ ಕಲಿತ. ಜ್ಞಾನಿಯಾಗಿ ಕಲಿತ. ಆದರೆ ಸಂಸ್ಕೃತದಲ್ಲಿ ರುಚಿ ಬೆಳೆಸಿಕೊಳ್ಳಲಿಲ್ಲ. ನಮಗೆ ಒಂದು ಭಾಷೆಯನ್ನು ಜ್ಞಾನವಾಗಿ ಕಲಿಯೋದಕ್ಕೂ ಅದರಲ್ಲಿ ರುಚಿಯನ್ನು ಬೆಳೆಸಿಕೊಳ್ಳೊದಕ್ಕೂ ವ್ಯತ್ಯಾಸವಿದೆ. ನನಗೊಬ್ಬ ಷೆಲ್ಡನ್‌ ಪೊಲಾಕ್‌ ಎಂಬ ಸ್ನೇಹಿತ ಇದಾನೆ. ಸಂಸ್ಕೃತದಲ್ಲಿ ನಮ್ಮ ಯಾವ ಸಂಸ್ಕೃತ ಪಂಡಿತರಿಗಿಂತಲೂ ಮೇಲಿನ ಪಂಡಿತ ಅಂವ. ಅವನಿಗೆ ಒಂದು ಶ್ಲೋಕ ಕೊಟ್ರೆ ಅದು ಇಷ್ಟವಾಗುತ್ತೋ ಇಲ್ಲವೋ. ಆದರೆ ಜ್ಞಾನವಾಗಿ ಅದು ಗೊತ್ತಾಗುತ್ತೆ. ನಾವೂ ಇಂಗ್ಲಿಷನ್ನ ಹಂಗೆ ಕಲಿತಿದ್ರೆ ಯಾವ ಸಮಸ್ಯೆಯೂ ಇರ್ತಿರಲಿಲ್ಲ. ಆದರೆ ನಾವು ಏನು ಮಾಡಿದೆವು ಅಮದ್ರೆ, ಅದು ಯಜಮಾನನ ಭಾಷೆಯಾದ್ದರಿಂದ ಅದರಲ್ಲಿ ಒಂದು ರುಚಿಯನ್ನು ಬೆಳೆಸೋಕೆ ನೋಡಿದಿವಿ.

ನನಗೆ ಇನ್ನೂ ನೆನಪಿದೆ. ಪಾಪ ಹಳ್ಳಿಗಾಡಿಂದ ಬಂದ ಹುಡುಗರಿಗೆ, ಕೀಟ್ಸ್‌ನ ಪದ್ಯ ತೊಗೊಂಡು ನಾನು ಅವನ ನೈಂಟಿಗೇಲ್‌ಗೆ ಹೇಗೆ ಶುರುವಾಗುತ್ತೆ, ಎಷ್ಟು ಕಲಾತ್ಮಕವಾಗಿದೆ, ಅಂತ ನಾನು ಲೆಕ್ಚರ್‌ ಮಾಡ್ತಾ ಇದ್ದೆ. ಇಂಗ್ಲಂಡಿನಲ್ಲಿ ಮೂರು ವರ್ಷ ಇದ್ದ ನನಗೆ ‘ಯ’ ಕಾರ ಮತ್ತು ‘ಹ’ ಕಾರ ವ್ಯತ್ಯಾಸ ಮಾಡೋದಕ್ಕೆ ಗೊತ್ತಾಗದೆನೇ ಬಹಳ ಗೋಳಿಗೆ ಒಳಗಾಗಿದ್ದೆ.  ಒಬ್ಬ ಪ್ರೊಫೆಸರ್‌ ನನಗೆ ‘ನೀನು ಲೆಕ್ಚರನ್ನೇ ಮಾಡಬೇಡ’ ಅಂತ ಕೂತಿದ್ದ.  ‘ಸರಿಯಾಗಿ ಇಂಗ್ಲಿಷನ್ನ ಮಾತಾಡೋದು ಕಲಿತುಕೊ’ ಅಂತಿದ್ದ. ಅವನು ಬಹಳ ಪ್ರೀತಿಯಿಂದ ಹೇಳ್ತಿದ್ದ. ‘ನೋಡು, ಆ ರಾಜನ್ ಅಂತನ್ನೋನು ಯುನೆಸ್ಕೋದಲ್ಲಿದ್ದಾನೆ. ಯುಎನ್‌ಓನಲ್ಲಿರೋ ಬಹಳ ಬುದ್ಧಿವಂತ ಅಂತ ಖ್ಯಾತನಾಗಿದಾನೆ. ನೀನು ಹಾಗೆ-ಆಗಬಲ್ಲೆ. ಇಂಗ್ಲಿಷನ್ನು ಚೆನ್ನಾಗಿ ಕಲಿತುಕೊ’ ಅಂತ ಎಡ್ವರ್ಡ್ ಮೇಲೆ ನಾನೊಂದು ಥಿಸಿಸ್‌ ಬರಿಬೇಕು ಅಂತಿದ್ದೀವಿ ಅಂತಂದೆ. ಅವನು ಅದಕ್ಕೆ ‘ಯಡ್ವರ್ಡ್ , ಎಡ್ವರ್ಡ್ ಅಪ್‌ವರ್ಡ್ ಅಲ್ಲ’, ಎಂದು ಅವನು ನನ್ನನ್ನು ತಿದ್ದುತಿದ್ದ. ಹಾಗೆ ತಿದ್ದುತಾ ಇದ್ದಂತೆ ಹೇಳಿದ : ‘ನಾನು ಮದ್ರಾಸಿಗೆ ಹೋಗಿದ್ದೆ ಶ್ರೀನಿವಾಸ್‌ ಇಯ್ಯಂಗಾರ್‌ ಸಿಕ್ಕಿದ್ರು’ ಅಂತ ನಾನು ಉದ್ಧಟನಾಗಿ ಹೇಳಿದೆ : ‘ಐಯ್ಯಂಗಾರ್‌ ಹೇಳು. ನಿನಗೆ ಐಯ್ಯಂಗಾರ್ ಹೇಳೊಕೆ ಬರದೇಯಿದ್ರೆ ನಾನು ಎಡ್ವರ್ಡ್ ಯಾಕೆ ಸರಿ ಹೇಳಬೇಕು?; ಆಮೇಲೆ ನಾನು ರಿಚರ್ಡ್ ಹಾಗರ್ಟ್ ಅನ್ನೋನಿಂದ ಬಚಾವಾದೆ. ಯಾಕಂದರೆ ಅವನು ವರ್ಕಿಂಗ್ ಕ್ಲಾಸ್‌ನವನು. ಅವನಿಗೂ ಉಚ್ಚಾರಣೆ ಸಮಸ್ಯೆ ಇತ್ತು. ಅವನಿಗೆ ಇವರ ಹಂಗೆ ಮಾತಾಡೋಕೆ ಬರ್ತಿರಲಿಲ್ಲ. ಅವನು ನನಗೆ ಪ್ರಿಯನಾಗಿದ್ದ. ನನಗೆ ಹೇಳಿದ : ‘ಇದನ್ನ ಅಷ್ಟೇನೂ ಹಚ್ಚಕೊಬೇಡ. ನನಗೂ ಶುದ್ಧವಾದ ಇಂಗ್ಲಿಷ್ ಮಾತಾಡೋಕೆ ಬರಲ್ಲ’; ಗಾಂಧಿಗೂ ಪ್ರಜ್ಞೆ ಬಂದಿದ್ದು ಹಂಗೇನೆ. ಅವರನ್ನು ಆಫ್ರಿಕಾದಲ್ಲಿ ಟ್ರೈನ್‌ನಿಂದ ಹೊರಗೆ ಹಾಕಿದಾಗ.

ಮತ್ತೆ ಭಾಷೆ ವಿಷಯಕ್ಕೆ ಬರ್ತಿನಿ. ಭಾಷೆಯನ್ನು ನಾವು ವೈಜ್ಞಾನಿಕವಾಗಿ ಕಲಿಯೋಕೆ ಶುರುಮಾಡಿದ್ರೆ ಯಾವ ಸಮಸ್ಯೆ ಇಲ್ಲ. ಇವಾಗ ನಮಗೆ ಫ್ರೆಂಚ್ ಬೇಕು. ಜರ್ಮನ್ ಬೇಕು. ಇಟಾಲಿಯನ್ ಬೇಕು – ವೈಜ್ಞಾನಿಕವಾಗಿ ಷೆಲ್ಡನ್‌ ಪೊಲಾಕ್‌ ನನ್ನ ಭಾಷೆಯನ್ನು ಹೆಂಗೆ ಕಲೀತಿದ್ದಾನೋ, ನಾನು ಹಂಗೇ ಕಲಿಯಬೇಕು. ಅದರಲ್ಲಿ ರುಚಿ ಬೆಳೆಸಿಕೊಳ್ಳೊಕೆ ಹೋಗಬಾರದು. ಅದಕ್ಕೆ ನನಗೆ ಬಹಳ ಸಂತೋಷ ಏನಂದ್ರೆ ಬಿ.ಎಂ.ಶ್ರೀಕಂಠಯ್ಯ ಇವರೆಲ್ಲ ಶೆಲ್ಲಿ, ವರ್ಡ್ಸ್‌ವರ್ತ ಅನ್ನುವಾಗ, ಈ ಬೇಂದ್ರೆ ‘ಶೆಲೆ’ ಅಂತಾರೆ. ಶೆಲ್ಲಿ ಅನ್ನೋದನ್ನ ಶೆಲೆ ಅಂತ ಹೇಳೊಕೆ ಕನ್ನೆ ಕವಿಯೊಬ್ಬನಿಗೆ ಧೈರ್ಯ ಬಂತಲ್ಲ, ಆದ್ದರಿಂದಲೇ ನನಗೆ ಎಡ್ವರ್ಡ್ ಅನ್ನೋದಿಕ್ಕೆ ಧೈರ್ಯ ಬಂತು.

ಆದ್ದರಿಂದ ವೆಸ್ಟ್‌ನಿಂದ ಇಂಥ ದೊಡ್ಡ ಶ್ರೀಮಂತ ಸಂಪತ್ತನ್ನು ನಮಗೆ ಒದಗುವಂತೆ ಮಾಡಿ ಒಬ್ಬ ಕುವೆಂಪು, ಒಬ್ಬ ಅಡಿಗ ಹಾಗೂ ನಮ್ಮನ್ನೆಲ್ಲ ಸೃಷ್ಟಿಸಿದ, ಬಿ.ಎಂ.ಶ್ರೀಕಂಠಯ್ಯ ಎಂಬ ಈ ಮನುಷ್ಯನಿಗೆ ನಮ್ಮ ಪ್ರಿತಿಯನ್ನ, ಗೌರವನ್ನ ತೋರಲೇಬೇಕು. ಹಾಗೆ ಹೇಳ್ತಾ ಇದ್ದಂಗೆ, ಈ ಸಂಕಟಕ್ಕೂ ನೀವು ಕಾರಣರು; ನಿಮ್ಮ ಹಿಂದಿನವರು ನಿಮ್ಮ ಸಂಕಟಕ್ಕೆ ಕಾರಣರು. ಆದ್ರೆ, ಈ ಸಂಕಟದಿಂದ ವಿಮೋಚನೆಯಾಗುವ ಸಾಹಿತ್ಯ ನಮ್ಮಲ್ಲಿ ಇದೆ. ಯಾವುದನ್ನ ಜಗತ್ತಿನ ಗ್ರೇಟ್ ರೈಟಿಂಗ್ ಅಂತೀವಿ, ಅದು ಕನ್ನಡದಲ್ಲಿದೆ. ಆದರೆ ಜಗತ್ತಿನ ಗ್ರೇಟ್ ರೈಟಿಂಗ್ನಲ್ಲಿ ಪಂಪನನ್ನ ಇಂಗ್ಲಿಷನಲ್ಲಿ ಓದೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಅವರಿಗೆ ಪಂಪನ ರೀತಿಯ ಬರವಣಿಗೆಯ ರುಚಿ ಹತ್ತಿರೋದಿಲ್ಲ. ಅವರು ಅಂಥದ್ದನ್ನೆಲ್ಲ ಹಚ್ಚಿಸಿಕೊಳ್ಳೊಕೆ ತಯಾರಿಲ್ಲ. ಅದರ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳೊದಿಕ್ಕೆ ತಯಾರಿದ್ದಾರೆ. ನಾವು ಹಾಗೇನೇ. ವೆಸ್ಟ್ ಬಗ್ಗೆ ಜ್ಞಾನವನ್ನ ಬೆಳೆಸಿಕೊಳ್ಳೋದಿಕ್ಕೆ ತಯಾರಿದೀವಿ, ರುಚಿಯನ್ನ ಬೆಳೆಸಿಕೊಳ್ಳೋದಿಕ್ಕೆ ತಯಾರಿಲ್ಲ ಅಂತಂದಾಗ, ಪ್ರಾಯಶಃ ಆಗ ನಾವು ಬಳಸುವ ವೆಸ್ಟನ ಕ್ರಮ ಬಿ.ಎಂ.ಶ್ರೀ. ಬಳಸಿದ್ದಕ್ಕಿಂತಲೂ ಬೇರೆಯಾಗಿರುತ್ತೆ. ಅದರಿಂದ ನಮಗೆ ಒಳ್ಳೆಯದಾಗುತ್ತೆ ಅಂತ ಹೇಳಿ ನನ್ನ ಮಾತನ್ನ ಮುಗಿಸ್ತಿನಿ, ನಮಸ್ಕಾರ.

*

(ಸೆಪ್ಟಂಬರ್೧೧, ೨೦೦೬ ರಂದು ಕನ್ನಡ ವಿಶ್ವವಿದ್ಯಾಲಯ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕೀರ್ಣದ ಉದ್ಘಾಟನಾ ಭಾಷಣ. ಬರಹ ರೂಪ : ಸುಧಕರ. ಕೃಪೆಇಂಗ್ಲೀಷ್ ಗೀತೆಗಳು’ : ಸಾಂಸ್ಕೃತಿಕ ಮುಖಾಮುಖಿಕನ್ನಡ ವಿ.ವಿ. ಹಂಪಿ)