ನಮ್ಮ ಕಾಲದ ಚರಿತ್ರೆಯ ದೊಡ್ಡ ದುರಂತ ಟಿಬೆಟ್‌ನಲ್ಲಿ ಚೀನಿಯರ ಆಕ್ರಮಣದಿಂದಾಗಿ ನಡೆದಿದೆ. ಯಾವತ್ತೂ ಸಮಾಜವಾದದಲ್ಲಿ ನಂಬಿಕೆಯನ್ನು ಕಳೆದುಕೊಳ್ಳದ ನನ್ನಲ್ಲಿ ಈ ಭಾವನೆ ಮೊದಲಿನಿಂದಲೂ ಕೆಲಸ ಮಾಡಿದೆ. ಅರವತ್ತರ ದಶಕದಲ್ಲಿ ನಾಣು ಬರ್ಮಿಂಗ್‌ಹ್ಯಾಮ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಜಾರ್ಜ್ ಥಾಮ್ಸನ್‌ ಎಂಬ ಒಬ್ಬ ದೊಡ್ಡ ಗ್ರೀಕ್ ಸಾಹಿತ್ಯದ ಜ್ಞಾನಿ ಪ್ರೊಪೆಸರ್ ಆಗಿದ್ದರು. ಇವರು ಇಂಗ್ಲಂಡಿನ ಕಮ್ಯೂನಿಸ್ಟ್ ರ ಪಿತಾಮಹರು. ಇವರು ಬರೆದ ‘ಮಾರ್ಕಿಸಂ ಅಂಡ್ ಪೊಯಿಟ್ರಿ’ ಎನ್ನುವ ಪುಸ್ತಕ ಹಲವು ಒಳನೋಟಗಳಿಂದ ಕೂಡಿರುವ ಅನನ್ಯವಾದ ಗ್ರಂಥ. ಮನೆಯಿಂದ ಯೂನಿವರ್ಸಿಟಿಗೆ ಸೈಕಲ್ ಮೇಲೆ ಬರುತ್ತಿದ್ದ ಈ ಥಾಮ್ಸನ್, ಪಂಡಿತರ ಜೊತೆಗೆ ಮಾತ್ರವಲ್ಲದೆ; ಅಲ್ಲಿನ ಕಾರ್ಮಿಕ ಸಂಘಗಳಲ್ಲೂ ತನ್ನನ್ನು, ತನ್ನ ಹೆಂಡತಿ ಮಕ್ಕಳನ್ನು ತೊಡಗಿಸಿಕೊಂಡಿದ್ದ ಮಹಾನುಭಾವ. ಇವರ ಮನೆಯಲ್ಲಿ ವಾರಕ್ಕೊಮದು ಸಾರಿ ಮಾರ್ಕ್ಸ್ ವಾದದ ಬಗೆಗೆ ಚರ್ಚೆ ನಡೆಸಲು ಹಲವರು ಸೇರುತ್ತಿದ್ದರು. ಇದರಲ್ಲಿ ಬ್ರಿಟಿಷ್ ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಲ್ಲದೆ, ಮಾರ್ಕ್ಸ್‌ಸ್ಟ್ ಪಂಥ ಪ್ರೇಮಿಗಳೂ ಇರುತ್ತಿದ್ದರು. ಇವರ ನಡುವೆ ಶ್ರೀಲಂಕಾದ ಬಹುಗಂಭೀರ ಚಿಂತಕನಾದ, ಗತಿಸಿದ ನನ್ನ ಗೆಳೆಯ (ತಮಿಳಿನ ಬಹಳ ದೊಡ್ಡ ವಿಮರ್ಶಕ) ಕೈಲಾಸಪತಿಯೂ ಇರುತ್ತಿದ್ದರು.

ಥಾಮ್ಸನ್ ಹಲವು ವಿಷಯಗಳ ಬಗೆಗೆ ಮಾತಾಡುತ್ತಿದ್ದರು. ಬ್ರಿಟನ್ನಿನ ಸ್ಟಾಲಿನ್‌ವಾದಿ ಕಮ್ಯುನಿಸ್ಟ ಧೋರಣೆಗಳನ್ನು ವಿರೋಧಿಸಿದವರಲ್ಲಿ ಇವರು ಪ್ರಮುಖರು. ಕ್ರಿಸ್ಟ್‌ಫರ್‌ ಕಾರ್ಡ್‌ವೆಲ್‌ನ ಪುಸ್ತಕಗಳನ್ನು ಪ್ರಕಟಿಸಿ, ಸಮರ್ಥಿಸುವ ಧೈರ್ಯ ತೋರಿದವರು ಇವರು. ಸ್ಪಾನಿಷ್ ಸಿವಿಲ್ ವಾರ್‌ನಲ್ಲಿ ಹತನಾದ ಕ್ರಿಸ್ಟ್‌ಫರ್‌ ಕಾರ್ಡ್‌ವೆಲ್ ಆಗ ಪ್ರಚಲಿತವಿದ್ದ ಸೋಷಿಯಲಿಸ್ಟ್‌ ರಿಯಲಿಸಂನ್ನು ಮೀರಿ ಗಾಢವಾದ, ವಿಶಾಲವಾದ ತಾತ್ವಿಕ ಆಯಾಮಗಳುಳ್ಳ ಸಾಹಿತ್ಯವನ್ನು ಮಾರ್ಕ್ಸ್‌ವಾದಿಯೊಬ್ಬ ಪಕ್ಷಾತೀತ ಆದೇಶವಾಗಿ ತತ್ವ ನಿಕಟವಾಗಿ ಹೇಗೆ ಗ್ರಹಿಸಬಹುದೆಂದು ತೋರಿದವನು.

ಥಾಮ್ಸನ್‌ನ ತಾತ್ವಿಕ ಗಾಢತೆಯ ಬಗೆಗೆ ಇಷ್ಟೆಲ್ಲಾ ನಾನು ವಿವರಿಸಲು ಒಂದು ಕಾರಣವಿದೆ. ಇಂಥ ಥಾಮ್ಸನ್‌ರೂ ಟಿಬೆಟ್‌ನ ವಿಷಯ ಬಂದಾಗ ಅಪ್ಪಟ ಮಾವೋವಾದಿಯಂತೆ ಮಾತಾಡಿದ್ದರು. ಒಂದು ಚರ್ಚಾಕೂಟದಲ್ಲಿ ನಾನು ಅವರನ್ನು ಕೇಳಿದ್ದೆ : ‘ಟಿಬೆಟ್‌ಗೆ ತನ್ನದೇ ಆದ ಅನನ್ಯವಾದ ಸಂಸ್ಕೃತಿ ಇದೆ. ಕಾಲದ ಪ್ರವಾಹದಲ್ಲಿ ಅದು ತಾನಾಗಿಯೇ ತನ್ನ ಒಳಗಿನ ಸಂಘರ್ಷದಿಂದಲೇ ಎಷ್ಟು ಬದಲಾಗಬೇಕೋ, ಹೇಗೆ ಬದಲಾಗಬೇಕೋ ಹಾಗೆಯೇ ಆಗಬೇಕು. ಬದಲಾಗಿ ಚೀನಿ ಆಕ್ರಮಣದಿಂದ ಅದು ಬದಲಾಗುವುದು ಅರಿಯೆ?’ ಎಂದು

ಕಣ್ಣು ಮಿಟುಕಿಸದೆ ಥಟ್ಟನೆ ನಾನು ತುಂಬಾ ಗೌರವಿಸುತ್ತಿದ್ದ ಥಾಮ್ಸನ್ ಹೀಗೆ ಉತ್ತರಿಸಿದ್ದರು:‘ಟಿಬೆಟ್‌ನಲ್ಲಿರುವ ವ್ಯವಸ್ಥೆ ದುಷ್ಟ ಜಮೀನುದಾರಿ ಪದ್ಧತಿಯದು. ಬೌದ್ಧ ಧರ್ಮದ ನೆವದಲ್ಲಿ ಈ ಕ್ರೂರ ಬಮಡವಾಳಶಾಹಿ ಪದ್ಧತಿ ಟಿಬೆಟ್‌ನಲ್ಲಿ ಬೇರೂರಿದಾಗ ಅದನ್ನು ಕೊನೆಗಾಣಿಸುವ ಕರ್ತವ್ಯವನ್ನು ಚೀನಿ ಕಮ್ಯುನಿಸ್ಟರು ನೆರವೇರಿಸಿದ್ದಾರೆ ಅಷ್ಟೆ’.

ಅದಕ್ಕೆ ಉತ್ತರವಾಗಿ ಹಿಂಜರಿಯುತ್ತಲೇ ನಾಣು ಹೀಗೆ ಹೇಳಿದ್ದೆನೆಂದ ನೆನಪು. ‘ಪ್ರೊ.ಥಾಮ್ಸನ್‌ ಇದೇ ವಾದದಿಂದ ಬ್ರಿಟಿಷರು ಇಂಡಿಯಾವನ್ನು ಆಳಿದ್ದನ್ನು ಸಮರ್ಥಿಸಬಹುದು ಅಲ್ಲವೆ? ಇಂಡಿಯಾದಲ್ಲಿ ಬಾಲ್ಯ ವಿವಾಹವಿತ್ತು, ಸತಿ ಪದ್ಧತಿ ಇತ್ತು, ಪಾಳೆಯಗಾರಿಕೆ ಇತ್ತು, ಇವನ್ನೆಲ್ಲ ಕೊನೆಗಾಣಿಸಿ ಭಾರತೀಯರನ್ನು ಆಧುನಿಕ ಕಾಲಕ್ಕೆ ಹೊಂದಿಕೊಳ್ಳುವಂತೆ ಬ್ರಿಟಿಷರು ತಿದ್ದಿದರು ಎಂದು ಯಾಕೆ ನೀವು ವಸಾಹತು ಶಾಹಿಯನ್ನೂ ಸಮರ್ಥಿಸುತ್ತಿಲ್ಲ’?

ಪ್ರೊ. ಥಾಮ್ಸನ್‌ ನನ್ನ ಮಾತನ್ನು ತಿರಸ್ಕಾರದಿಂದ ಕಾಣಲಿಲ್ಲ. ಈ ಕುರಿತು ಮುಂದೆ ಚರ್ಚಿಸೋಣ ಎಂದಷ್ಟೇ ಹೇಳಿದ್ದರು.

ನಾನು ಬರ್ಮಿಂಗ್‌ಹ್ಯಾಮ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪ್ರೊ. ಥಾಮ್ಸನ್‌ರ ನೆರವಿನಿಂದಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯಲು ಹಲವು ಚೀನಿ ವಿದ್ಯಾರ್ಥಿಗಳು ಬರುತ್ತಿದ್ದರು. ಥಾಮ್ಸನ್‌ ಮಾವೋರವರ ‘ಕಲ್ಚರರ್‌ ರೆವಲ್ಯೂಷನ್‌’ನ ಬಹುದೊಡ್ಡ ಬೆಂಬಲಿಗ. ಗೆಳೆಯ ಕೈಲಾಸಪತಿಯಿಂದಾಗಿ ನಾನೂ ಮಾವೋನ ಕ್ರಾಂತಿಕಾರತೆಯನ್ನು ಮೆಚ್ಚಿಕೊಂಡವನಾಗಿದ್ದೆ. ಆದರೆ ನನ್ನ ಮೆಚ್ಚಿಗೆಯಲ್ಲಿ ಒಂದು ಅನುಮಾನದ ಎಳೆಯೂ ಇರುತ್ತಿತ್ತು. ಕ್ಯಾಂಟೀನುಗಳಲ್ಲಿ ತುಂಬಾ ಸ್ನೇಹದಿಂದ ಈ ಚೀನಿ ಹುಡುಗರನ್ನು ಏನಾದರೂ ಪ್ರಶ್ನೆ ಮಾಡಿದರೆ, ಅವರು ತಮ್ಮ ದೇಶದ ರಾಜಕೀಯ ಪರಿಸ್ಥಿತಿಯ ಬಗೆಗೆ ಮುಕ್ತವಾಗಿ ಮಾತನಾಡಲು ನಿರಾಕರಿಸುತ್ತಿದ್ದರು. ಆಗ ನಾನು ಅವರಿಗೆ ಹೇಳುತ್ತಿದ್ದೆ : ‘ನೆಹರು ಬಗ್ಗೆ, ಭಾರತದ ರಾಜಕೀಯದ ಬಗ್ಗೆ, ನೀವು ಏನಾದರೂ ಕೇಳಿ ನಾನು ನಿರ್ಭಯವಾಗಿ ಉತ್ತರಿಸುತ್ತೇನೆ. ನೀವು ಯಾಕೆ ಹೀಗೆ ದಿಗಿಲು ಬೀಳುತ್ತೀರಿ?’ ಎಂದು

ಚೀನಿ ವ್ಯವಸ್ಥೆಯ ಬಗ್ಗೆ ನನ್ನ ಅನುಮಾನಗಳು ಬೆಳೆಯುತ್ತಲೇ ಹೋದವು. ೯೦ರ ದಶಕದಲ್ಲಿ ಒಮ್ಮೆ ನಾನು ಶ್ರೀ ಅದ್ವಾನಿಜಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಲಿದ್ದರು. ನಾನೂ ಮಂಗಳೂರಿಗೆ ಹೋಗುತ್ತಿದ್ದೆನೆಂಬುದನ್ನು ತಿಳಿದ ಶ್ರಿ ಯಡಿಯೂರಪ್ಪನವರು ಶ್ರೀ ಅದ್ವಾನಿಯವರ ಜೊತೆ ಕೂರುವಂತೆ ತಮ್ಮ ಸೀಟನ್ನು ಬಿಟ್ಟುಕೊಟ್ಟರು. ಈ ಅವಕಾಶವನ್ನು ಬಳಸಿಕೊಂಡು ತುಂಬಾ ಸಜ್ಜನಿಕೆಯವರಾದ ಶ್ರೀ ಅದ್ವಾನಿಯವರಿಗೆ ನನ್ನ ಮನಸ್ಸಿನಲ್ಲಿ ಇದ್ದುದನ್ನು ಹೇಳಿದೆ : ‘ಭಾರತೀಯ ಸಂಸ್ಕೃತಿಗೆ ಮುಸಲ್ಮಾನರು ವೈರಿಗಳಲ್ಲ. ಭಾರತೀಯರೂ ತಮಗಿಂತ ದೇವರು ದೊಡ್ಡವನೆಂದು ತಿಳಿಯುತ್ತಾರೆ. ಇಸ್ಲಾಂ ಧರ್ಮವಂತೂ ಮನುಷ್ಯ ದೇವರಿಗೆ ಶರಣಾಗತ ವಾಗಬೇಕೆಂದು ಹೇಳುತ್ತದೆ. ಅಂದರೆ ತನ್ನ ದುರಹಂಕಾರ ಮತ್ತು ಆಸೆಬುರುಕತನದ ಮೇಲೆ ಇಡೀ ಸಮಾಜವನ್ನು ಕಟ್ಟಬೇಕೆಂಬ ಮನುಷ್ಯನ ಆಸೆಗೆ ಈ ಎರಡೂ ಧರ್ಮಗಳೂ ತಾತ್ವಿಕವಾಗಿಯಾದರೂ ಮಿತಿಗಳನ್ನು ಒಡ್ಡುತ್ತದೆ. ಆದರೆ ಚೀನೀ ಕಮ್ಯೂನಿಸ್ಟ್‌ರು ತಾವು ಸಾಧಿಸಿ ಗೆದ್ದದ್ದೇ ಸತ್ಯವಾಗುತ್ತದೆ ಎಂದು ತಿಳಿದವರು. ಮನುಷ್ಯನ ದುಸ್ಸಾಹಸವನ್ನು ಮೀರಿ ಚರಿತ್ರೆಯಲ್ಲಿ ಸತ್ಯ ಗೆಲ್ಲುತ್ತದೆ ಎಮದು ತಿಳಿಯುವ ಧರ್ಮನಿಷ್ಠರು ಅವರಲ್ಲ. ಮನುಷ್ಯ ಪ್ರಯತ್ನವನ್ನು ಮೀರಿದ್ದು ಇದೆ ಎಂದು ಅವರು ತಿಳಿದವರಲ್ಲ. ಇವತ್ತು ಸಂಸ್ಕೃತ, ಪಾಲಿ ಇತ್ಯಾದಿ ಭಾಷೆಗಳಲ್ಲಿದ್ದ ಧರ್ಮಗ್ರಂಥಗಳು ಮಾಯವಾದರೂ ಟಿಬೆಟ್‌ನ ಭಾಷೆಯಲ್ಲಿ ಇನ್ನೂ ಉಳಿದಿದೆ.

ಹೀಗೆ ಭಾರತದ ಬಹು ಅಮೂಲ್ಯ ಭೂತಕಾಲವನ್ನು ತನ್ನೊಳಗೆ ಕಾಪಾಡಿಕೊಂಡ ಟಿಬೆಟ್‌ನಲ್ಲಿ ಅಲ್ಲಿನ ಕಮ್ಯೂನಿಸ್ಟ್‌ರು ಎಲ್ಲವನ್ನೂ ನಾಶಮಾಡುತ್ತಿದ್ದಾರೆ. ಆದ್ದರಿಂದ ತಮಗೆ ಹಿಂದುತ್ವದ ವೈರಿ ಮುಸಲ್ಮಾನರ ಧರ್ಮವೆಂದು ಅನ್ನಿಸಬಾರದು. ನಾವು ಪವಿತ್ರವೆಂದು ತಿಳಿಸಿರುವುದು, ನಾಶವಾಗುತ್ತಿರುವುದು ಟಿಬೆಟ್ಟಿನಲ್ಲಿ’ ಎಂದು.

ಅದಕ್ಕೆ ಅದ್ವಾನಿಯವರು ಕೂಡಲೇ ಉತ್ತರಿಸಲಿಲ್ಲ. ವಿಮಾನದ ಕಿಟಕಿಯಿಂದ ಹೊರಗಿನ ಆಕಾಶವನ್ನು ನೋಡುತ್ತಾ ಸ್ವಲ್ಪ ಹೊತ್ತು ಕುಳಿತವರು, ನನ್ನ ಕಡೆ ತಿರುಗಿ ‘ಟಿಬೆಟ್‌ ನಾಶವಾದಂತೆಯೇ ಇದೊಂದು ದೊಡ್ಡ ದುರಂತ’ ಎಂದು ನಿಟ್ಟುಸಿರು ಬಿಟ್ಟರು. ಧಾರ್ಮಿಕರಾದ ಮುಸ್ಲಿಂರಿಗೂ ನಮಗೂ ವಿರೋಧಗಳಿರಬೇಕಾಗಿಲ್ಲ ಎಂಬ ಮಾತಿಗೆ ಅವರು ಉತ್ತರಿಸಲಿಲ್ಲ.

ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗುವುದರ ಮೊದಲು ಚೀನಾಕೆ ಹೋಗಿದ್ದಾಗ ಟೈಯನಾಮನ್ ದುರಂತ ಸಂಭವಿಸಿತು. ಬೀಜೀಂಗ್‌ನ ವಿಮಾನ ನಿಲ್ದಾಣದಿಂದ ನಮ್ಮ ಹೋಟೆಲ್‌ಗೆ ಹೋಗುವ ದಾರಿಯಲ್ಲಿ ಮದ್ಯಾಹ್ನ ಚೀನಿ ಟ್ಯಾಂಕರುಗಳನ್ನು ಜನ ಸುತ್ತುವರೆದಿದ್ದ ದೃಶ್ಯವನ್ನು ಕಂಡೆ. ಬಹಳ ಸಂಸಾರಗಳು ತಮಗಿರುವ ಒಂದೇ ಒಂದು ಮಗುವನ್ನು ಕಂಕುಳಲ್ಲಿ, ಹೆಗಲ ಮೇಲೆ ಎತ್ತಿಕೊಂಡು ಈ ಟ್ಯಾಂಕರುಗಳನ್ನು ಸುತ್ತುವರೆದು ಸಿಪಾಯಿಗಳ ಜೊತೆ ಅವರು ಹಿಂದಿರುಗುವಂತೆ ಅಹಿಂಸಾತ್ಮಕವಾಗಿ ವಾಗ್ವಾದದಲ್ಲಿ ತೊಡಗಿದ್ದ ಅಮೋಘ ದೃಶ್ಯವದು. ಆ ದಿನ ರಾತ್ರಿಯೇ ಟೈಯನಾಮನ್‌ ವೃತ್ತದಲ್ಲಿ ವಿದ್ಯಾರ್ಥಿಗಳನ್ನು ಕೊಲ್ಲಲಾಯಿತು. ಇದನ್ನು ತಿಳಿಯದ ನಾವು; ಹೋಟೆಲ್‌ನಲ್ಲಿ ಕುಳಿತಿದ್ದ ಟೆಲಿವಿಷನ್ ನೋಡುತ್ತಿದ್ದೇವು. ಚೀನಾದ ಯಾವುದೋ ಪ್ರಾಂತದ ಯಾವುದೋ ಹಳ್ಳಿಯ ಜಾನಪದ ಕಲೆಗಳ ಬಗೆಗೆ ಗಂಟೆಗಟ್ಟಲೆ ಒಂದು ಸಿನೆಮಾವನ್ನು ತೋರಿಸುತ್ತಿದ್ದರೆ ವಿನಃ ಟೈಯನಾಮನ್ ವೃತ್ತದಲ್ಲಿ ನಡೆದ ಯಾವ ಘಟನೆ ಬಗೆಗೂ ಸುದ್ದಿ ಇರಲಿಲ್ಲ. ಅದು ತಿಳಿಯಬೇಕಾದರೆ BBC ನೋಡಬೇಕಾಗಿತ್ತು. ಆದರೆ ಹೊಟೆಲಿನಲ್ಲಿ BBC ಲಭ್ಯವಿರಲಿಲ್ಲ.

ಮಾರನೆಯ ಬೆಳಿಗ್ಗೆ ಎದ್ದಾಗಲೇ ನಾವು ಹಿಂದಿನ ರಾತ್ರಿಯ ರಕ್ತಪಾತವನ್ನು ಕಣ್ಣಾರೆ ಕಂಡದ್ದು, ಈ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. (ನೋಡಿ ‘ಬೀಜೀಂಗ್ ದಿನಚರಿ’- ಬೆತ್ತಲೆ ಪೂಜೆ ಏಕೆ ಕೂಡದು ೧೯೯೪). ಆದರೆ ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದಂತೆ ನಡೆದ ಒಂದು ಘಟನೆಯನ್ನು ನಾನಿಲ್ಲಿ ಹೇಳಲೇಬೇಕು. ಬೀಜೀಂಗ್ ಯುನಿವರ್ಸಿಟಿಯ ಒಬ್ಬ ಪ್ರಸಿದ್ಧ ಚೀನಿಯನಾದ ಉರ್ದು ಪ್ರೊಪೆಸರ್‌‌, ನಮ್ಮ ತಂಡದಲ್ಲಿದ್ದ ಪ್ರಖ್ಯಾತ ಉರ್ದು ವಿಮರ್ಶಕ ಪ್ರೊ. ನಾರಂಗರನ್ನು ಭೇಟಿಯಾಗಲು ಬಂದ. ಉದ್ವೇಗದಲ್ಲಿ ಅವನೊಂದು ಮಾತು ಹೇಳಿದ : ‘ಟೈಯಿನಾಮ್‌ನ ದುರಂತದ  ಬಗ್ಗೆ ನಾನು ಇಲ್ಲಿದ್ದು ಏನನ್ನೂ ಬರೆಯಲಾರೆ. ಆದರೆ ನಿಮ್ಮ ದೇಶದ ಭಾಷೆಯಾದ ಉರ್ದುವಿನಲ್ಲಿ ನನಗೆ ತಿಳಿದಷ್ಟು ಒಂದು ಪದ್ಯವನ್ನು ಕಟ್ಟಿದ್ದೇನೆ. ನಿಮ್ಮ ದೇಶದಲ್ಲಿ ಸತ್ಯ ಕಿವಿಯಿಂದ ಕಿವಿಗೆ ದಾಟುತ್ತದೆ. ಇದನ್ನು ದಯಮಾಡಿ ಓದಿ ನೆನಪಿಟ್ಟುಕೊಂಡು ನಿಮ್ಮ ದೇಶದಲ್ಲಿ ಎಲ್ಲರಿಗೂ ಹೇಳಿ, ಅವರೂ ನೆನಪಿಟ್ಟುಕೊಳ್ಳುತ್ತಾರೆ. ಇಲ್ಲಿ ನಡೆದ ದುರಂತದ ಸತ್ಯ ಹೀಗಾದರೂ ಉಳಿದಿರುತ್ತದೆ’ ನಾರಂಗ್ ಅವರ ಪದ್ಯವನ್ನು ಸ್ವೀಕರಿಸಿದರು.

ಇದಾದ ಬಳಿಕ ನಾನು ಮತ್ತೊಮ್ಮೆ ಚೈನಾಗೆ ಸಾಹಿತ್ಯ ಅಕಾಡೆಮಿಯಿಂದ ಕೆಲವು ಲೇಖಕರನ್ನು ಕರೆದುಕೊಂಡು ಹೋಗಬೇಕಾಗಿ ಬಂದಿತ್ತು. ಲೇಖಕರ ಜೊತೆ ಒಂದು ಒಪ್ಪಂದಕ್ಕೆ ಬಂದಿದ್ದೆ. ‘ನಾವು ಲೇಖಕರು. ಜಗತ್ತಿನಲ್ಲಿ ನಡೆಯುವುದಕ್ಕೆ ಸಾಕ್ಷಿಗಳು. ನಾವು ರಾಜಕಾರಣರಲ್ಲ. ಆದ್ದರಿಂದ ಚಿನಾದ ಲೇಖಕರನ್ನು ನಾವು ಭೇಟಿಯಾದಾಗ ಟಿಬೆಟನ್ನು ಅದರ ಪಾಡಿಗೆ ಬಿಡಿ. ಅಲ್ಲಿನ ಸಂಸ್ಕೃತಿಯನ್ನು ದಬ್ಬಾಳಿಕೆಯಲ್ಲಿ ನಾಶ ಮಾಡಬೇಡಿ ಎಂದು ನಾವು ಲೇಖಕರಾಗಿ ಹೇಳಬೇಕು. ಜೊತೆಗೆ ಭಾರತದಲ್ಲೂ ನಮ್ಮ ಕೇಂದ್ರ ಸರಕಾರ ಯಾವುದಾದರೊಂದು ಜನಾಂಗದ ಸಂಸ್ಕೃತಿಯನ್ನು ದುರಾಕ್ರಮಣದಲ್ಲಿ ನಾಶ ಮಾಡಲು ಹೊರಟಾಗ ಅವನ್ನು ಕೂಡ ವಿರೋಧಿಸಲು ನಾವು ಬದ್ಧರು’ ಎಂಬುದೇ ಆ ಒಪ್ಪಂದ. ಎಲ್ಲ ಲೇಖಕರ ಒಪ್ಪಿಗೆ ಸಿಕ್ಕ ಮೇಲೆ ನಾವು ಚೀನಿ ಲೇಕರನ್ನು ಭೇಟಿಯಾದಾಗಲೆಲ್ಲ ಈ ಮಾತನ್ನು ಹೇಳುತ್ತಿದ್ದೆವು. ನಮ್ಮ ಜೊತೆ ನಮ್ಮ ಚೀನೀ ದುಭಾಷಿ ಇರುತ್ತಿದ್ದುದರಿಂದ ಚೀನೀ ಲೇಖಕರಿಗೆ ತಮ್ಮ ಅಭಿಪ್ರಾಯವನ್ನು ಹೇಳಲು ಮುಜುಗುರವಾಗಕೂಡದೆಂದು ‘ನನ್ನ ಮಾತಿಗೆ ನೀವು ಪ್ರತಿಕ್ರಿಯಿಸಬೇಕೆಂಬ ಒತ್ತಾಯವಿಲ್ಲ’ ಎಂದೂ ಹೇಳುತ್ತಿದ್ದೆ. ಸ್ವತಂತ್ರ ಮನೋವೃತ್ತಿಯವರೆಂದು ನಾವು ತಿಲಿದಿದ್ದ ಲೇಖಕರು ಕೂಡ ಸುಮ್ಮನಿರುತ್ತಿದ್ದರು ಅಥವಾ ಮಾವೋನ ‘ಕಲ್ಚರಲ್ ರೆವಲ್ಯೂಷನ್’ ಕಾಲದಲ್ಲಿ ತಾವು ಪಟ್ಟ ಕಷ್ಟಗಳನ್ನು, ಅವಮಾನಗಳನ್ನು ನಮ್ಮಲ್ಲಿ ಹೇಳಿಕೊಳ್ಳುತ್ತಿದ್ದರು. ಎದ್ದು ಬರುವಾಗ ಅವರು ನನ್ನ ಕೈ ಕುಲುಕಿದ ಕ್ರಮದಿಂದ ನನ್ನ ಮಾತಿಗೆ ಅವರ ಸಮ್ಮತಿಯನ್ನು ಊಹಿಸಬಹುದಾಗಿತ್ತು.

ಕಮ್ಯೂನಿಸಂ ಹೆಸರಿನಲ್ಲಿರುವ  ಈ ನವ ವಸಾಹತುಶಾಹಿ ಅಥವಾ ಭಾರತದ ಓಟು ಗಳಿಕೆಗಾಗಿ ಕಟ್ಟಿಕೊಂಡ ‘ವೀರ ರಾಷ್ಟ್ರೀಯತೆ’ ಬಹುರೂಪಿ ಸಂಸ್ಕರತಿಗಳನ್ನು ಸಂಪೂರ್ಣ ನಾಶಮಾಡಬಬಲ್ಲದೇ? ನಾಶವಾಗಿ ಹೋದಂತೆ ತೋರಿದರೂ ಎಲ್ಲ ಸಂಸ್ಕೃತಿಗಳೂ ತಮ್ಮ ಅಡಗುದಾನಗಳನ್ನು ಹುಡುಕಿಕೊಂಡಿರುತ್ತವೆಯೇ? ಟಿಬೆಟ್‌ನ ಬಗ್ಗೆಯೂ ಇದೊಂದು ಮಹತ್ವದ ಪ್ರಶ್ನೆ.

ದಲೈಲಾಮಾರನ್ನು ಒಮ್ಮೆ ಭೇಟಿಯಾಗುವ ಸುಯೋಗ ನನಗೆ ಒದಗಿತ್ತು. ನನ್ನ ಜೊತೆಗಿದ್ದ ನಿರ್ಮಲ ವರ್ಮಾ ಎಂಬ ಖ್ಯಾತ ಹಿಂದಿ ಲೇಖಕರು ದಲೈಲಾಮಾರಿಗೆ ಹೇಳಿದರು : ನೀವು ಭಾರತದಲ್ಲಿ ಆಶ್ರಯ ಪಡೆಯುವುದರ ಬದಲು ಅಮೆರಿಕದಲ್ಲಿ ಆಶ್ರಯ ಪಡೆದಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತೆನೋ? ಅಮೆರಿಕ ಬಲಿಷ್ಠ ದೇಶವಾಗಿದ್ದರಿಂದ ಚೀನೀ ಕಮ್ಯೂನಿಸ್ಟ್‌ರು ಈಗಿನಂತೆ ಯಾವ ಭೀತಿಯೂ ಇಲ್ಲದೆ ಟಿಬೆಟ್‌ನ ಸಂಸ್ಕೃತಿಯನ್ನು ನಾಶಮಾಡದೆ ಇರುತ್ತಿದ್ದರೆನೋ’ ಎಂದು ಅದಕ್ಕೆ ಲಾಮಾರವರು ತಮ್ಮ ದಿವ್ಯವಾದ ಮಗುವಿನ ನಗುವನ್ನು ನಕ್ಕು, ಎರಡೂ ಕೈಗಳನ್ನೂ ಎತ್ತಿ ಹೇಳಿದರು : ‘ನೋ ಅಮೆರಿಕದಲ್ಲಿ ನಾನು ಆಶ್ರಯ ಪಡೆದಿದ್ದರೆ ನನ್ನ ಸಂಗಾತಿಗಳು ಇಷ್ಟರಲ್ಲಿಯೇ ಅಮೆರಿಕನ್ನಾಗಿಬಿಟ್ಟು, ಟಿಬೆಟ್‌ನಲ್ಲಿರಲಿ, ನಮ್ಮಲ್ಲೂ ಟಿಬೆಟ್‌ತನ ಮಾಯವಾಗಿ ಬಿಡುತ್ತಿತ್ತು. ಹೇಗೆ ಭಾರತ ಪೂರ್ವಕಾಲದ ಟಿಬೆಟ್‌ನಲ್ಲಿ ಅನುವಾದಿತವಾಗಿ ಉಳಿದುಬಿಟ್ಟಿತೋ ಹಾಗೆಯೇ ನಾವು – ಟಿಬೆಟಿಯನ್ನರು ನಮ್ಮತನವನ್ನೇ ಭಾರತದ ಸಹನಾಮಯ ಜಗತ್ತಿನಲ್ಲಿ ಉಳಿಸಿಕೊಂಡು ನಾವು ಟಿಬೆಟ್‌ಗೆ ಹಿಂದಿರುಗುವ ಕಾಲಕ್ಕಾಗಿ ಕಾದೇ ಇದ್ದೇವೆ’.

ದಲೈಲಾಮಾ ಕಾದೇ ಇದ್ದಾರೆ. ನವು ಮಾತ್ರ ಜಾಗತೀಕರಣದ ಅವಸರದಲ್ಲಿ ಟಿಬೆಟ್‌ನ ದುರಂತವನ್ನು ಮರೆತುಬಿಟ್ಟು ಮತೀಯ ಅಂತಃಕಲಹದಲ್ಲಿ ನಮ್ಮ ಶಕ್ತಿಯನ್ನು ವ್ಯಯಮಾಡಿಕೊಳ್ಳುತ್ತಿದ್ದೇವೆ.

ಶ್ರೀ ಮಂಗಳೂರ ವಿಜಯರನ್ನು ನಾನು ಹಲವು ವರ್ಷಗಳಿಂದ ಬಲ್ಲೆ. ಅವರ ಮೇಲಿನ ಪ್ರೀತಿ ಗೌರವಗಳ ಕಾರಣದಿಂದಲೇ ಈ ಪುಸ್ತಕಕ್ಕೆ ಈ ಕೆಲವು ಮಾತುಗಳನ್ನು ಬರೆಯಲು ಹಲವು ವರ್ಷಗಳ ಕಾಲ ಕಾಯಿಸಿದ್ದೇನೆ. ಅವರ ಪರವಾಗಿ ಶ್ರೀ ರವಿಕುಮಾರ್‌‌ ನನ್ನನ್ನು ಕ್ಷಮಿಸಿ, ನಾನು ಹೇಳಬೇಕೆಂಬುದನ್ನು ಕೇಳಿಸಿಕೊಂಡು ಬರೆದು ಪ್ರಕಟಿಸುತ್ತಿದ್ದಾರೆ. ಇಬ್ಬರಿಗೂ ನನ್ನ ಕೃತಜ್ಞತೆಗಳು.

*

ಮಂಗ್ಳೂರ ವಿಜಯ ಅವರಟಿಬೆಟ್‌-ಅರ್ಧಶತಮಾನದ ಆರ್ತಮೊರೆ೨೦೦೫, ಕೃತಿಗೆ ಬರೆದ ಮುನ್ನುಡಿ.