ಪ್ರಿಯ ಮೊಕಾಶಿ,

ಮೊದಲಲ್ಲಿ ಹಿಡಿದು, ಬಿಟ್ಟು, ಕೊನೆಯಲ್ಲಿ ಒಂದು ಉಸಿರಿಗೆ ನಿಮ್ಮ ಅವಧೇಶ್ವರಿಯನ್ನು ಓದಿ ಮುಗಿಸಿದೆ. ಒಂದು ಘನವಾದ  ಅಪ್ಪಟ ಕೃತಿಯನ್ನು ಓದಿದ ಅನುಭವವಾಗಿದೆ. ನಿಮಗೆ ಕೃತಜ್ಙ. ಕೃತಿ ಐತಿಹಾಸಿಕವಾಗಿ ನಿಜವೇ ಎಂಬ ಪ್ರಶ್ನೆಯೇ ನನಗೆ ಅಪ್ರಸ್ತುತ. ನಿಮ್ಮ ಜೀವನದ ದರ್ಶನ ಕೃತಿಯಲ್ಲಿದೆ. ಆದರ್ಶವಾದಿಯಲ್ಲದ ನೈತಿಕ ಪ್ರಜ್ಞೆ ಇರುವುದು ಸಾಧ್ಯವೆಂದು ತಿಳಿಯಲಾರದಷ್ಟು ನಾವೆಲ್ಲ ಐರೋಪ್ಯ ಚಿಂತನೆಯಿಂದ ಪ್ರಭಾವಿತಾರಿಗಿಟ್ಟಿದ್ದೇವೆ. ಆದರೆ ನೀವು ತೋರಿಸಿದ್ದೀರಿ – ವೃತ್ತಿಧರ್ಮ, ಕುಲಧರ್ಮ, ಋತ – ಈ ಕಲ್ಪನೆಗಳು ಆಳವಾದ ನೈತಿಕ ಪ್ರಜ್ಞೆಯನ್ನು ವ್ಯಕ್ತಿಯ ಅಹಮಿಕೆಯಿಂದ ಮುಕ್ತವಾದ ಜಾಗತಿಕ ಅರಿವನ್ನೂ ನಮಗೆ ತಂದು ಕೊಡಬಲ್ಲದೆಂದು. ನಿಮ್ಮ ರಾಣಿ ನನಗೆ ಬಹಳ ಪ್ರಿಯಳಾದಳು. ನಿಯೋಗ ವೃತ್ತಾಂತವೊಂದನ್ನು ಇನ್ನು ಯಾರೂ ಬರೆಯುವುದು ಸಾಧ್ಯವಿತ್ತು ಅವಧೇಶ್ವರಿಯನ್ನ? ಏಟ್ಸ್ ಹೊಟ್ಟೆಕಿಚ್ಚು ಪಡುವಂತೆ ಕೆಲವೆಡೆ ನೀವು ಬರೆದಿದ್ದೀರಿ.

ನಿಮಗೆ ಶ್ರೀಮತಿ ಗಾಂಧಿ ಯಾಕೆ ಪ್ರಿಯಳು ಎಂಬುದು ಅರ್ಥವಾಗುತ್ತದೆ. ಆದರೆ ನಿಮ್ಮ ಆಳದ ಒಳನೋಟಗಳು ನನ್ನ ವಿರೋಧವನ್ನು ಗೆದ್ದಿವೆ.

ಟಿಪ್ಪಣಿ ಮಾಡಿಕೊಳ್ಳುತ್ತ ಓದಿದೆ. ಬಿಡುವಾದಾಗ ಚರ್ಚಿಸಬೇಕು. ಏನೇನೋ ಹೇಳುವುದಿದೆ. ಮೀಮಾಂಸಕಾರರು ಪ್ರಾಯಶಃ ನಿಮ್ಮ ಹಾಗೆ ವೇದದ ಅರ್ಥವನ್ನು ಗ್ರಹಿಸಲು ಒಪ್ಪುವುದಿಲ್ಲ ಎನ್ನಿಸುತ್ತದೆ. ಎಲ್ಲವನ್ನು ಅಮೂರ್ತಗೊಳಿಸದ ಹೊರತು ಬ್ರಾಹ್ಮಣ ತನ್ನ ಆಳ್ವಿಕೆಯನ್ನು ಹೇರಲಾರೆನೆನೋ! ಅದು ಹೇಗೆ ಮೊಕಾಶಿ ಬ್ರಾಹ್ಮಣನಾಗಿಯೂ ಕ್ಷತ್ರಿಯ ಮನಸ್ಸಿಗೆ ಅಷ್ಟು ಹತ್ತಿರವಾದರು. ರಾಜಕೀಯ ಅರಿತರು? ಎಂದು ನಾನು ಬಲು ಮೆಚ್ಚುತ್ತ ಓದಿದೆ. congratulations

*

ಶಂಕರ ಮೊಕಾಶಿ ಪುಣೇಕರ್‌‌ ಅವರಿಗೆ ಬರೆದ ಪತ್ರ ಅವರ ಅಭಿನಂದನಾ ಗ್ರಂಥ ಗಂಧ ಕೊರಡು೨೦೦೩ ವಿನಲ್ಲಿ ಪ್ರಕಟವಾಗಿದೆ.