ಮಾನವ ತನ್ನ ನಾಲಗೆಯ ರುಚಿಗಳನ್ನು ಬೆಳೆಸಿಕೊಳ್ಳದಿರುವುದನ್ನು ಗಾಂಧೀಜಿ ‘ಆಸ್ವಾದ’ ಎನ್ನುತ್ತಾರೆ.  ಇರುವುದೊಂದೆ ಆದ ಈ ಭೂಮಿಯನ್ನು ತನ್ನ ನಾಲಗೆ ಬೆಳೆಸಿಕೊಂಡ ವೈವಿಧ್ಯಮಯ ರುಚಿಗಳಿಂದಾಗಿ ಮಾನವ ಕ್ರಮೇಣ ನಾಶ ಮಾಡುತ್ತಾ ಬಂದಿದ್ದಾನೆ. ಹೊಗೆಸೊಪ್ಪಿನ ರುಚಿಯಿಂದ, ಕಾಫಿಯ ರುಚಿಯಿಂದ, ಚಹಾದ ರುಚಿಯಿಂದ ಎಷ್ಟೊಂದು ಕಾಡು ನಾಶವಾಗಿದೆಯೆಂಬುದು ಇದಕ್ಕೆ ನಿದರ್ಶನ. ಆದರೆ ಮಾನವ ನಾಗರಿಕನಾಗುತ್ತ ಹೋದಂತೆ ಅವನ ರುಚಿಗಳು ವಿಸ್ತಾರವಾಗುತ್ತ, ವೈವಿಧ್ಯಮಯವಾಗುತ್ತ ಹೋಗುವುದು ಅನಿವಾರ್ಯ. ಹಾಗೆಯೇ ರುಚಿಗಳನ್ನು ನಿಯಂತ್ರಿಸುವುದು ಭೂಮಿಯ ಆರೋಗ್ಯಕ್ಕೆ ಎಷ್ಟೋ ಅಷ್ಟೇ ಮಾನವನ ದೈಹಿಕ, ಮಾನಸಿಕ ಆರೋಗ್ಯಕ್ಕೂ ಅಗತ್ಯ. ಚರಿತ್ರೆಯಲ್ಲಿ ಮಾನವ ಎಲ್ಲ ಕಾಲದಲ್ಲೂ, ಎಲ್ಲ ದೇಶಗಳಲ್ಲೂ ಈ ದ್ವಂದ್ವಕ್ಕೆ ಉತ್ತರಗಳನ್ನು ಹುಡುಕಿದ್ದಾನೆ. ಈ ಹುಡುಕಾಟದಲ್ಲಿ ರುಚಿಯ ಕಲ್ಪನೆಯನ್ನೇ ಬದಲಿಸಿಕೊಂಡಿದ್ದಾನೆ. ಅವನ ಪ್ರಪಂಚದ ಅನುಭವ ಗಾಢವಗಿರುವಂತೆಯೇ ಅನಾಸಕ್ತವೂ ಆಗುವ ಸಾದ್ಯತೆಯಲ್ಲಿ ಇನ್ನೊಂದು ಬಗೆಯ ಈ ರುಚಿಯ ಸ್ವರೂಪವಿದೆ.

ಬೇಟೆಯಲ್ಲಿದ್ದ ಸುಖ ಮತ್ತು ಸಾಹಸಪ್ರಿಯತೆಗಳು ಪಕ್ಷಿಗಳನ್ನೂ, ವನ್ಯಮೃಗಗಳನ್ನು ಕುತೂಹಲದಿಂದ ವೀಕ್ಷಿಸುವುದರಲ್ಲೂ ಇವೆ ಎಂದು ಮಾನವ ಕಂಡುಕೊಳ್ಳುತ್ತಾನೆ. ನಿಸರ್ಗದ ಸೌಂದರ್ಯಕ್ಕೆ ತನ್ನ ಎಲ್ಲ ಇಂದ್ರಿಯಗಳನ್ನೂ ತೆರೆದುಕೊಂಡು, ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳದಂತೆ ನಿಸರ್ಗಕ್ಕೆ ತಾನೇ ಪರವಶನಾಗುವುದರಿಂದ ಮಾನವ ಸುಖಿಯಾಗುವುದನ್ನು ಕಲಿಯುತ್ತಾನೆ. ಮದ್ಯ-ಮಾಂಸಗಳ ಭೋಜನದಷ್ಟೆ, ಸಪ್ಪೆಯಾದ ಆಹಾರವೂ ಸೌಮ್ಯವಾದ ವಿವಿಧ ರುಚಿಗಳನ್ನು ಪಡೆದಿದೆ ಎಂಬುದನ್ನು ಸಾತ್ವಿಕರು ಅರಿಯುತ್ತಾರೆ. ಒಟ್ಟಿನಲ್ಲಿ ಸುಖದ ಕಲ್ಪನೆಯ ಬದಲಾವಣೆಯಲ್ಲಿ ಮನುಷ್ಯ ನಿಸರ್ಗದ ಜೊತೆ ಸಾಮರಸ್ಯ ಪಡೆಯುತ್ತಾನೆ. ಇದೇನೂ ಎಲ್ಲರಿಗೂ ಸುಲಭವಲ್ಲ. ಕ್ರಮೇಣ ಮಾಲಿನ್ಯದಿಂದ ನಾಶವಾಗುತ್ತ ಹೋಗುತ್ತಿರುವ ಪರಿಸರ ಈ ಬಗೆಯ ಆದರೆ ಎಲ್ಲರಲ್ಲೂ ಆಧ್ಯಾತ್ಮಿಕ ಪರಿವರ್ತನೆಯನ್ನು ಆತಂಕದಲ್ಲಿ ಅಗತ್ಯಗೊಳಿಸುತ್ತದೆ. ಆಧ್ಯಾತ್ಮ ಸಾಧುಸಂತರ ವೈಯಕ್ತಿಕ ಹುಡುಗಾಟದ ವಿಷಯವಾಗುವುದರ ಬದಲು ಊಟ, ವಸತಿ, ಭೋಗ, ವಿರಾಮದ ಬಳಕೆ, ಇಂದ್ರಿಯದ ಹಸಿವುಗಳು ಹೀಗೆ ನಾಗರಿಕನ ಇಡೀ ದೈನಿಕವನ್ನೇ ವ್ಯಾಪಿಸಿಬಿಡಬೇಕಾದ ಅನಿವಾರ್ಯ ಎದುರಾಗಿದೆ. ಹೀಗೆ ಆತಂಕದಲ್ಲಿ ಎದುರಾಗುವ ಸತ್ಯವನ್ನು ಸ್ವಸಂತೋಷದಿಂದ ಮಾನವ ಒಪ್ಪಿಕೊಳ್ಳಬಲ್ಲನೇ ಎಂಬುದು ಸಮಸ್ಯಾತ್ಮಕ ಪ್ರಶ್ನೆಯಾಗಿಯೇ ಉಳಿದಿದೆ.

ಅಮೆರಿಕನ್ನರು ಬಳಸುವಷ್ಟು ವಿದ್ಯುತನ್ನು, ಅವರು ತಿನ್ನುವಷ್ಟು ಮಾಂಸವನ್ನು, ಅವರು ನಿತ್ಯ ಚಲಿಸುವಷ್ಟು ದೂರಗಳನ್ನು ಇಡೀ ಜಗತ್ತಿನ ಎಲ್ಲ ದೇಶಗಳು ದಕ್ಕಿಸಿಕೊಳ್ಳುವುದು ಅಸಾಧ್ಯ ಎಂದಾದರೂ ಒಮ್ಮೆ ಅದು ಸಾಧ್ಯವಾದರೆ ಆಗ, ಈ ಭುಮಿ ಹೀಗೆ ಉಳಿದಿರುವುದಿಲ್ಲ. ಕೆಲವೇ ದಿನಗಳಲ್ಲಿ ನಾಶವಾಗುತ್ತದೆ. ಆದರೆ ಇವತ್ತಿನ ಮೀಡಿಯಾಗಳು ಜಗತ್ತಿನ ಎಲ್ಲರದಲ್ಲೂ ಅಂಥ ಆಸೆಯನ್ನು ಹುಟ್ಟಿಸುತ್ತಿವೆ. ಫಲಪ್ರದವಾಗಲಾರದ ಇಂಥ ಆಸೆಯಿಂದ ಅಸೂಯೆ ಬೆಳೆಯುತ್ತದೆ. ಇಡೀ ಜಗತ್ತು ಮಾರಕವಾದ ರಣರಂಗವಾಗುತ್ತದೆ. ಯಾಕೆ – ಈಗಾಗಲೇ ಆಗಿದೆ.

ನಾವು ಪಾರಾಗಲು ಎರಡು ಉಪಾಯಗಳು ಇವೆ. ಒಂದು : ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಅಗತ್ಯವಾದ ಕಾನೂನುಗಳು ಇಡೀ ಜಗತ್ತಿನಲ್ಲಿ ಒಂದು ದೇಶದಲ್ಲಿ ಮಾತ್ರವಲ್ಲ ಜಾರಿಗೆ ಬರಬೇಕು. ಇನ್ನೊಂದು : ಮಾನವ ತನ್ನ ಆಸೆ ಆಕಾಂಕ್ಷೆಗಳಲ್ಲೇ ಬದಲಾಗಬೇಕು. ಎರಡೂ ಒಟ್ಟಿಗೆ ಆಗಬೇಕು. ಇದರ ಅರ್ಥ ಪರಿಸರ ಚಳುವಳಿ ಮಾತ್ರ. ಈ ನಮ್ಮ ಕಾಲದಲ್ಲಿ ಏಕಕಾಲಕ್ಕೆ ರಾಜಕೀಯ ಚಳುವಳಿಯೂ ಆಧ್ಯಾತ್ಮಿಕ ಚಳುವಳಿಯೂ ಆಗಬೇಕಾಗಿದೆ.

ಸದ್ಯದ ಚಪಲಗಳನ್ನು ತೀರಿಸಿ ಅಧಿಕಾರದಲ್ಲಿ ಉಳಿಯಬೇಕಾದ ಪ್ರಜಾತಾಂತ್ರಿಕ ಸರಕಾರಗಳು ದೂರದೃಷ್ಟಿಯನ್ನು ಕಳೆದುಕೊಳ್ಳುತ್ತವೆ. ಆದರೆ, ಪ್ರಜಾತಂತ್ರ ಬಿಟ್ಟರೆ ನಮಗೆ ಬೇರೆ ಮಾರ್ಗವಿಲ್ಲ. ಒಬ್ಬ ಹುಚ್ಚ ಸರ್ವಾಧಿಕಾರಿಯಾದರೆ ಎಲ್ಲವನ್ನೂ ಈ ಕ್ಷಣವೇ ನಾಶ ಮಾಡಿಯಾನು. ಆದ್ದರಿಂದ ಜನರ ಎಲ್ಲ ಆಸೆಗಳನ್ನೂ ಭ್ರಮಾತ್ಮಕವಾಗಿಯಾದರೂ ತೀರಿಸಲು ಪೈಪೋಟಿಯಲ್ಲಿರುವ ಪ್ರಜಾತಂತ್ರದ ಪಕ್ಷ ರಾಜಕಾರಣದಲ್ಲೇ, ಭವಿಷ್ಯದ ಜನಾಂಗಗಳಿಗಾಗಿ ಈ ಭೂಮಿಯನ್ನು ಒಣಗದಂತೆ ಉಳಿಸಿಕೊಳ್ಳುವ ಸಹಿಷ್ಣುತೆಯನ್ನು, ಅನಾಸಕ್ತ ಪ್ರೀತಿಯನ್ನು ಹೇಗೆ ರೂಢಿಸಬೇಕೆಂದು ನಾವು ಕಂಡುಕೊಳ್ಳಬೇಕಾಗಿದೆ.

ಮಾನವನ ಪ್ರಗತಿಗೆ ಯಾವ ಅಡತಡೆಯೂ ಇಲ್ಲ; ಈ ಭೂಮಿ ಒಂದು ಅಕ್ಷಯಪಾತ್ರೆಯಂತೆ ಮಾನವನ ಎಲ್ಲ ಹಸಿವುಗಳನ್ನೂ ಪೂರೈಸಬಲ್ಲದು ಎಂಬುದು ೧೮ ಮತ್ತು ೧೯ನೆಯ ಶತಮಾನಗಳ ಐರೋಪ್ಯ ಚಿಂತನೆಯ ಫಲ. ನಿರಂತರವಾದ ಅಭಿವೃದ್ಧಿಯ ಈ ಕಲ್ಪನೆಯನ್ನು ಬಿಡದ ಹೊರತು ಪ್ರಾಯಶಃ ನಾವು ಪರಿಸರದ ಬಗ್ಗೆ ನಿಷ್ಠುರವಾಗಿ ಆಲೋಚನೆ ಮಾಡಲಾರೆವು. ಮಾನವ ಚೈತನ್ಯದ ಮೂಲ. ಅವನ ನಂತರ ಅಭಿವೃದ್ಧಿಯ ಕನಸಿನಲ್ಲಿ ಎಷ್ಟು ಅಡಗಿದೆಯೋ, ಅಷ್ಟೇ ಮಾನವನ ಸರ್ವಭೂತ ನಿರಂತರ ಪ್ರೇರಣೆಯಲ್ಲೂ ಇದೆ ಎಂಬುದನ್ನು ಪ್ರಾಚೀನ ಧರ್ಮಗಳು ನಿಚ್ಚಳವಾಗಿ ಅರಿತಿದ್ದವು. ಈ ಅರಿವಿನಿಂದಲಾಗಿಯೇ ನಮ್ಮ ಪರಂಪರಾಗತ ಕೃಷಿ ವಿಧಾನಗಳು, ವೈದ್ಯಕೀಯ ಶಾಸ್ತ್ರಗಳು ಹುಟ್ಟಿಕೊಂಡಿದ್ದವು. ಈ ನಮ್ಮ ಕಾಲದಲ್ಲಿ ನಾವು ತಂತ್ರಜ್ಞಾನದ ದುರಹಂಕಾರದಲ್ಲಿ ಮರೆತಿದ್ದನ್ನೆಲ್ಲ ಸ್ಮರಿಸಿಕೊಳ್ಳಬೇಕಾಗಿ ಬಂದಿದೆ.

*

ಪರಿಸರ ಪ್ರಜ್ಞೆ ಕಥೆ ವ್ಯಥೆಪುಸ್ತಕಕ್ಕೆ ಮುನ್ನುಡಿಯಿಂದ ೨೦೦೧