‘ವನ್ಯಜೀವಿಗಳ ವನ್ಯಲೋಕ’ ಓದಲು ಸರಳವಾಗಿದೆ; ಆದರೆ ಈ ಕೃತಿಯಲ್ಲಿ ಎಲ್ಲೂ ಗಾಢವಾದ ವಿಷಯಗಳನ್ನು ಸರಳಗೊಳಿಸಿಲ್ಲ. ಸುಮಾರು ಇಪ್ಪತ್ತೇಳು ಪರಿಣತರು ವನ್ಯಜೀವಿಗಳ ವಿಷಯಕ್ಕೆ ಸಂಬಂಧಿಸಿದಂತೆ ಬಾನೂಲಿ ಸರಣಿಯಲ್ಲಿ ಭಾಗವಹಿಸಿದ ಪರಿಣಾಮವಾಗಿ ಹುಟ್ಟಿಕೊಂಡದ್ದು ಈ ಕೃತಿ.

ಇದರಲ್ಲಿ ಶೈಕ್ಷಣಿಕವಾಗಿ ಮಹತ್ವದ ವಿಷಯಗಳನ್ನು ಸುಲಭವಾಗಿ ವೇದ್ಯವಾಗುವಂತೆ, ಆದರೆ ಎಲ್ಲೂ ಎಡಬಿಡಂಗಿತನದಿಂದ ಹುಟ್ಟಿಕೊಳ್ಳುವ ಮನಸ್ಸಿನ ಸೋಮಾರಿತನಕ್ಕೆ ಅವಕಾಶವಿಲ್ಲದಂತೆ, ಜ್ಞಾನದ ರಾಜಕಾರಣ ಮಾಡದಂತೆ, ನಿಷ್ಠುರವಾಗಿ ಚರ್ಚಿಸಲಾಗಿದೆ.

‘ವನ್ಯಜೀವಿಗಳು’ ಎಂದರೆ ಏನು? ಅವು ನಾಶವಾದರೆ ನಮಗೇನು ನಷ್ಟ? ಅವುಗಳನ್ನು ಏಕೆ ಉಳಿಸಿಕೊಳ್ಳಬೇಕು? ಸರ್ವಶಕ್ತನಾಗಿಬಿಟ್ಟಂತೆ ತೋರುವ ಮಾನವ ಯಾವ ತ್ಯಾಗದ ಮುಖೇನ ಈ ವನ್ಯಜೀವಿಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ? ಈ ತ್ಯಾಗ ನೈತಿಕವಾದ ಅಗತ್ಯ ಮಾತ್ರವೇ? ಅಥವಾ ವೈಜ್ಞಾನಿಕವಾಗಿಯೂ ಮಾನವನ ಉಳಿವಿಗೆ ಅಗತ್ಯವೆ? ಕೃಷಿಯ ವಿಸ್ತರಣೆಯ ಮುಖಾಂತರ ಮಾತ್ರ ಬಡತನದ ನಿವಾರಣೆಗೆ ಯತ್ನಿಸುವ ಭಾರತ ವನ್ಯಜೀವಿಗಳಿಗೆ ಅಗತ್ಯವಾದ ಅರಣ್ಯಗಳನ್ನು ಉಳಿಸಿಕೊಳ್ಳುವುದು ಸಾಧ್ಯವೇ? ಸಾಧುವೆ?

ಈ ಮೇಲಿನ ಪ್ರಶ್ನೆಗಳನ್ನು ಗಂಭೀರವಾಗಿ, ಉಡಾಫೆಗೆ ಎಡೆಯಿಲ್ಲದಂತೆ ನಮಗೇ ನಾವು ಕೇಳಿಕೊಂಡಲ್ಲಿ ಮಾತ್ರ ನಾವು ಒಂದು ನಾಗರಿಕ ಸಮುದಾಯವಾಗಿ ಬಾಳುವುದು ಸಾಧ್ಯ. ಅಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕಾಗುವಂತೆ ಒತ್ತಾಯಿಸುವ ಈ ಪುಸ್ತಕ ಎಲ್ಲ ವಿದ್ಯಾರ್ಥಿಗಳೂ ತಮ್ಮ ವಿದ್ಯಾರ್ಜನೆಯ ಸಂದರ್ಭದಲ್ಲಿ ಓದಬೇಕಾದ ಪುಸ್ತಕವೆಂದು ನಾನು ಹೇಳಬಯಸುತ್ತೇನೆ. ನಮ್ಮ ಎಲ್ಲ ರಾಜಕಾರಣಿಗಳೂ, ಅಧಿಕಾರಿಗಳೂ ಇಂತಹದೊಂದು ಪುಸ್ತಕವನ್ನು ಓದಿ ಮನನ ಮಾಡಿಕೊಂಡಿರದೆ ಅರಣ್ಯಕ್ಕೆ ಸಂಬಂಧಿಸಿದ ಯಾವ ವಿಷಯದ ಬಗ್ಗೆಯೂ ಮಾತಾಡಕೂಡದು ಎಂದರೆ, ಅದೊಂದು ಕ್ಷಮಾರ್ಹವಾದ ಉತ್ಪ್ರೇಕ್ಷೆಯೆಂದು, ಅಂತಹ ಸಂದರ್ಭಗಳಲ್ಲಿ ಭಾಗವಹಿಸಿರುವ ನಾನು ನನಗೇ ಹೇಳಿಕೊಳ್ಳುತ್ತಿರುವ ಮಾತಿದು ಎಂದು ತಿಳಿಯಬೇಕು.

ಜನಸಂಖ್ಯೆಯ ಜೊತೆಗೇ ಬಡತನ ಬೆಳೆಯುತ್ತಿರುವ ಭಾರತದಲ್ಲಿ ವನ್ಯಜೀವಿಗಳಿಗೆ ಬದುಕಲು ಅವಕಾಶವಿರುವ ಅರಣ್ಯ ಪ್ರದೇಶ ಕೇವಲ ಶೇಕಡಾ ಮೂರರಷ್ಟು ಮಾತ್ರ. ಇದರಲ್ಲೂ ಶೇಕಡಾ ಒಂದರಷ್ಟು ವನ್ಯಜೀವಿಗಳಿಗಾಗಿ ಮುಡಿಪಾಗಿರುವುದು. ಈ ಭಾಗವನ್ನು ಮಾನವ ತನಗಾಗಿ ಬಡತನದ ಒತ್ತಡಕ್ಕೆ ಮಣಿದು ಕೃಷಿಗೋ, ಗಣಿಗಾರಿಕೆಗೋ ಬಳಸಿಕೊಂಡುಬಿಟ್ಟ ಎಂದುಕೊಳ್ಳೋಣ. ಆಗಲು ನಮ್ಮ ಬಡತನದ ಪ್ರಶ್ನೆ ನಿವಾರಣೆಯಾಗಲಾರದು. ಇದೊಂದು ವೈಜ್ಞಾನಿಕವಾದ ಕಠೋರವಾದ ಸತ್ಯ. ಈ ಸತ್ಯ ಮನದಟ್ಟಾಗದ ಹೊರತು ಬಡತನದ ನಿವಾರಣೆಗೆ ಅಗತ್ಯವಾದ ಕ್ರಮಗಳನ್ನು (ಇರುವ ಭೂಮಿಯ ಸರಿಯಾದ ಹಂಚಿಕೆ, ಇರುವ ನೀರಿನ ಸಮರ್ಪಕವಾದ ಬಳಕೆ ಇತ್ಯಾದಿಗಳನ್ನು) ನಾವು ಕೈಗೊಳ್ಳದೇ ನಮಗೇ ನಾವು ಮೋಸಮಾಡಿಕೊಳ್ಳುತ್ತಾ ಹೋಗುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ಪ್ರಾಮಾಣಿಕವಾಗಿ ತುಡಿಯುವ ನಾವೆಲ್ಲರೂ ಈ ಸತ್ಯವನ್ನು ಮನಗಂಡು ಮುಂದುವರೆಯಬೇಕು. ಈ ಶೇಕಡಾ ಮೂರರಷ್ಟು ಅರಣ್ಯಪ್ರದೇಶ ಶೇಕಡಾ ಹತ್ತರಷ್ಟಾದರೂ ನಮ್ಮ ಜೀವಿತಕಾಲದಲ್ಲಿ ಆಗುವುದು ಸಾಧ್ಯವೆ ಎಂದು ತರುಣರು ಹಠತೊಟ್ಟು ಕೆಲಸ ಮಾಡಬೇಕು. ನಮ್ಮ ಭೂಮಿಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಇದು. ಇದು ಎಷ್ಟು ವೈಜ್ಞಾನಿಕವೋ ಅಷ್ಟೇ ಆಧ್ಯಾತ್ಮಿಕವಾದ ಅಗತ್ಯ.

ಹಲವು ವೈವಿಧ್ಯಗಳ ಅರಣ್ಯಗಳನ್ನೂ, ವನ್ಯಜೀವಿಗಳನ್ನೂ ಪಡೆದ ಕರ್ನಾಟಕದ ನಮಗಂತೂ ಈ ಪುಸ್ತಕ ಬಹಳ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಸದ್ಯದಲ್ಲೇ ಕುದುರೆಮುಖದ ಪ್ರಶ್ನೆ ನಮ್ಮ ಎದುರಿಗಿದೆ. ಗಣಿಗಾರಿಕೆಯನ್ನು ಹೇಗೋ ಮುಂದುವರೆಸಿ ಕಾಡನ್ನೂ ನದಿಯನ್ನೂ ನಾಶಮಾಡುವ ಲೋಭಿಗಳು ಒಂದು ಕಡೆ, ಓಟಿನ ಬೇಟೆಗೆ ರಾಜಕಾರಣ ಒಮದು ಕಡೆ. ಸಾಮಾಜಿಕ ನ್ಯಾಯದ ನೆವದಲ್ಲಿ ಹಿಂಸಾತ್ಮಕವಾಗಿ ಅಧಿಕಾರವನ್ನು ಗ್ರಹಿಸಬೇಕೆಂಬ ನಕ್ಸಲೀಯ ಹೊಂಚು ಒಂದು ಕಡೆ, ಅಲ್ಲೇ ಇರುವುದೋ, ಹೊರಬರುವುದೋ ತಿಳಿಯದೇ ದಿನದೂಡುತ್ತಿರುವ, ನಕ್ಸಲೀಯರಿಂದಲೂ ಕಾಡುಗಳ್ಳರಿಂದಲೂ ಮಾರ್ಕೆಟ್ಟಿನ ದುರಾಸೆಯಿಂದಲೂ ವಂಚಿತರಾಗುತ್ತಿರುವ ಅಮಾಯಕ ಆದಿವಾಸಿಗಳು ಒಂದು ಕಡೆ ಹೀಗೆ ಆವೃತವಾದ ಸನ್ನಿವೇಶದಲ್ಲಿ ನಾವು ಮುಂದಿನ ಕ್ರಮಗಳನ್ನು ಚಿಂತಿಸಬೇಕಾಗಿದೆ. ಕುದುರೆಮುಖದ ಅರಣ್ಯಪ್ರದೇಶದಲ್ಲಿ ವಾಸಿಸುವ ಗಿರಿಜನರ ಬಗ್ಗೆಯೂ ಉಢಾಪೆ ಮಾಡದೆ, ವನ್ಯ ಜೀವಿಗಳ ಬಗ್ಗೆಯೂ ಉಢಾಪೆ ಮಾಡದೆ, ಅಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ವಾದಿಸುತ್ತ ಬಂದಿರುವ ನಾನು ಅಷ್ಟಿಷ್ಟು ತಿಳಿದಿದ್ದೇನೆಂಬ ಭಾವನೆಯಿಂದ ಈ ಪುಸ್ತಕವನ್ನು ಓದಲು ತೊಡಗಿದೆ. ಆದರೆ ಓದುತ್ತ ಹೋದಂತೆ ನನ್ನ ಅರಿವು ಇನ್ನಷ್ಟು ವಿಸ್ತಿರಿಸಿತು. ಆದಿವಾಸಿಗಳ ಹಿತವನ್ನೂ ವನ್ಯಜೀವಿಗಳ ರಕ್ಷಣೆಯನ್ನೂ ಒಟ್ಟಾಗಿ ಸಾಧಿಸುವ ಕ್ರಮಗಳಿಗಾಗಿ ನಾವೆಲ್ಲರೂ, ಆದಿವಾಸಿಗಳನ್ನೂ ಜೊತೆಯಲ್ಲಿರಿಸಿಕೊಂಡು ಈ ಪುಸ್ತಕದ ಕರ್ತೃಗಳ ಜೊತೆಗೆ ಅತ್ಯಂತ ಜರೂರಾಗಿ ಸಂವಾದ ಮಾಡುವುದು ಅಗತ್ಯವೆಂದು ನಾನು ತಿಳಿದಿದ್ದೇನೆ.

*

ವನ್ಯ ಜೀವಿಗಳ ವನ್ಯಲೋಕ೨೦೦೪ ಕೃತಿಗೆ ಬರೆದ ಮುನ್ನುಡಿ