ಪ್ರಿಯ ವೈಕುಂಠರಾಜು,

ಇಂಪಾಲ (ಮಣಿಪುರ)ದಲ್ಲಿ ಅಂಗಾಗಲ್ ಮೆಮೋರಿಯಲ್ ಭಾಷನಗಳನ್ನು ಮುಗಿಸಿ ದೆಹಲಿ ಮಾರ್ಗವಾಗಿ ಕಲ್ಕತ್ತದಲ್ಲಿದ್ದೇನೆ.ಈಗತಾನೆ ನಿಮ್ಮ ಕಾದಂಬರಿ ‘ಉದ್ಭವ’ ಓದಿ ಮುಗಿಸಿದ್ದರಿಂದ ನಿಮಗೆ ಬರೆಯಬೇಕೆನ್ನಿಸಿದೆ.

ನಾನು ಮೆಚ್ಚಿಕೊಂಡ ನಿಮ್ಮ ಮೊದಲ ಕೃತಿ ‘ಉದ್ಭವ’. ಹಿಂದಿನ ಎರಡು ಕಾದಂಬರಿಗಳು ನನಗೆ ಇಷ್ಟವಾಗಿರಲಿಲ್ಲ. ಈ ಕೃತಿ ಮಾತ್ರ ಮೊದಲಿನಿಂದ ಕೊನೆಯತನಕ ಸಾಚಾವಾದ ಬರವಣಿಗೆ ಎನ್ನಿಸುತ್ತದೆ. ಕುತೂಹಲ ಕೆರಳಿಸುತ್ತದೆ. ಅಂದರೆ ಹೊಸ ಮಗ್ಗಲುಗಳನ್ನು ತೆರೆದುಕೊಳ್ಳುತ್ತಾ ಬೆಳೆಯುತ್ತದೆ. ರಂಗನಾಥ್‌ ರಾವ್ ಅವರ ವಿಮರ್ಶೆಯಲ್ಲಿ ಹಲವು ಉಪಯುಕ್ತವಾದ ಬೆಳಕು ಚಲ್ಲುವ ಮಾತಾಡಿದ್ದಾರೆ. ಆದರೆ ಅವರು ಇನ್ನೂ ಹೆಚ್ಚು ಉತ್ಸಾಹದಿಮದ ನಿಮ್ಮ ಕಾದಂಬರಿ ಬಗ್ಗೆ ಬರೆಯಬಹುದಿತ್ತು ಎಂದು ನನಗೆ ಅನ್ನಿಸಿತು.

‘ಉದ್ಬವ’ ಒಂದು ಒಳ್ಳೆಯ Picaresque ಜಾತಿಗೆ ಸೇರಿದ ಕಾದಂಬರಿ. ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಅಲೆಯುವ ನಾಯಕ Rogne ಹero ಬದಲಾಗತ್ತಿರುವ ಸಮಾಜದ ವಿವಿಧ ಹಂತಗಳನ್ನು ಬಯಲು ಮಾಡಬಲ್ಲ ಶಕ್ತಿಯುಳ್ಳವನಾಗಿರುತ್ತಾನೆ. ನಿಮ್ಮ ಖದೀಮ ನಾಯಕ ‘ರಾಗಣ್ಣ’ ಒಬ್ಬ ಅದ್ಭುತ ಪುಡಾರಿ, ಪ್ರಾಯಶಃ ಇಂಗ್ಲಂಡಿನ Picaresque ಕಾದಮಬರಿಗೆ ಸಮವಾದ ಪ್ರಕಾರವೆಂದರೆ ನಮ್ಮಲ್ಲಿ ಈ ಬಗೆಯ ಪುಡಾರಿ ಕಾದಂಬರಿ, ಜಾತಿ, ಧರ್ಮ, ರಾಜಕೀಯ, ಸಮಾಜವೇಶ – ಹೀಗೆ ಸಮಾಜದ ಎಲ್ಲ ಅಂಗಗಳನ್ನೂ ಬಳಸಿಕೊಂಡು ಜೀವನ ಮಾಡುವ ಇಂಥ ಒಬ್ಬ ಪುಡಾರಿ ಚಿತ್ರವನ್ನು ನಾನು ಕನ್ನಡದಲ್ಲಿ ಓದಿದಂತಿಲ್ಲ. ಇಡಿ ಸಮಾಜವನ್ನೇ ಬಯಲುಗೊಳಿಸುವ ನಿಮ್ಮ ಕಲೆ-ಕಥೆ ಕಟ್ಟುತ್ತಾ ಹೋಗುವ ಕಲೆ ಅದ್ಭುತವಾಗಿದೆ. ಕಾದಂಬರಿಯ Plot ರಾಗಣ್ಣನ ಖದೀಮುಪಾಯಗಳ ವ್ಯೂಹವೇ ಅರ್ಥಪೂರ್ಣವಾಗಿದೆ.

ನೈತಿಕವಾಗಿ ನಿರ್ಲಿಪ್ತರಾಗಿ ನಿಂತು ನೀವು ರಾಗಣ್ಣನ ಖದೀಮತನವನ್ನು ನೋಡುವ ರಿತಿಯನ್ನು ಮಾತ್ರ ನಾನು ಒಪ್ಪುವವನಲ್ಲ. ಆರ್. ಕೆ. ನಾರಾಯಣರ ಅನೇಕ ನಾಯಕರೂ ಸಹ ರಾಗಣ್ಣನಂತೆಯೇ ತಮ್ಮ ಕುಶಾಗ್ರ ಬುದ್ಧಿಯನ್ನು ಸೃಜನಾತ್ಮಕವಾಗಿ ದುಡಿಸಿಕೊಳ್ಳಲಾರದೆ ಪೋಕರಿಗಳೊ ಪುಡಾರಿಗಳೊ ಆಗುತ್ತಾರೆ. ಆದರೆ ಅವರ Guideನ ರಾಜು ಹೇಗೆ ತನ್ನ ಉದ್ದೇಶ ಮೀರಿ ಬದಲಾಗಿ ಬಿಡುತ್ತಾನೆ.  ನೊಡಿ. ನೀವು ಮಾತ್ರ ರಾಗಣ್ಣನ ಕುಶಾಗ್ರ ಬುದ್ಧಿ ಕೆಲಸ ಮಾಡುವ ಕ್ರಮವನ್ನು ಬರೀ ಬಿಚ್ಚಿ ಬಿಡುತ್ತೀರಿ. ಆಮೇಲೆ? ನಿಮ್ಮ ಕೃತಿ ಒಟ್ಟಿನಲ್ಲಿ ಏನು ಹೇಳುತ್ತದೆ? ಎಲ್ಲೂ ವೈಯಕ್ತಿಕ ಸಂಬಂಧಗಳ ಗೊಡವೆಗೆ ಹೋಗದ್ದರಿಂದ ನಿಮಗೆ ಈ ನಿಲ್ಲಿಪ್ತ ಕಥಾನಕ ಸಾಧ್ಯವಾಯಿತು ಎಂದು ಸುಲಭವಾಗಿ ಎನ್ನಿಸುತ್ತದೆ.

ಆದರೆ ರಸ್ತೆಯ ಕಥೆ ಅದ್ಭುತವಾಗಿದೆ. ನಾನು ಲೇಖಕನಾಗಿ ನಿಮಗಿಂತ ಮೂಲತಃ ಬೇರೆ. ಪ್ರಾಯಶಃ ನಾನು ಕವಿ, ಕನಸುಗಾರ, ಆಧ್ಯಾತ್ಮಿಕ ಪ್ರಶ್ನೆಗಳಿಂದ ಬಾಧಿತ. ನೀವು ನಿಜವಾದ Meterialist ಆದ್ದರಿಂದ ‘ಉದ್ಬವ’ ಓದುತ್ತಾ ನನಗೆ ತುಂಬ ಮೆಚ್ಚುಗೆ ಜೊತೆ. ವಿವರವಾಗಿ ಖದೀಮತನವನ್ನು ಬಿಚ್ಚುತ್ತಾ ಹೋಗುವ ನಿಮ್ಮ ಸಹನೆ ಕುತೂಹಲಗಳ ಬಗ್ಗೆ ಕಿರಿಕಿರಿಯು ಆಯಿತು. Congratulation. ೯ನೇ ತಾರೀಖು ಬರುತ್ತೇನೆ.

ನಿಮ್ಮ
ಅನಂತಮೂರ್ತಿ
ದಿನಾಂಕ : ೨ ಜನವರಿ, ೧೯೭೬
ಕಲ್ಕತ್ತ (ಢಂಢಂ ನಿಲ್ದಾಣ)

*

(ಕೃಪೆ ರಾಜಪಥ (ಬಿ.ವಿ. ವೈಕುಂಠರಾಜು ಅಭಿನಂದನೆ) ೨೦೦೬