ಡಾ. ವೈ. ಆರ್‌. ಮೋಹನ್ ಅವರು ತಮ್ಮ ನೆನಪುಗಳನ್ನು ಸ್ವಂತಕ್ಕಾಗಿ ಬರೆದುಕೊಂಡಿದ್ದು ಆದರೆ, ಅವರ ಬರವಣಿಗೆಯಲ್ಲಿ ಇರುವ ತೀವ್ರತೆ ಮತ್ತು ಘನತೆಯಿಂದಾಗಿ ಅವರ ಕೃತಿ ನಮ್ಮೆಲ್ಲರ ಒಳಜೀವನದ ಅಗತ್ಯವನ್ನು ಪೂರೈಸುತ್ತದೆ. ಈ ಬದುಕು ಹುಟ್ಟಿಕೊಂಡ ಕ್ಷಣದಿಂದಲೇ ಮೃತ್ಯುಮುಖಿ; ಹಾಗೆಯೇ ಜೀವಕಾಮಿ. ಈ ಎರಡು ಸತ್ಯಗಳನ್ನೂ ಏಕಕಾಲದಲ್ಲೇ ಗ್ರಹಿಸುವ ಶಕ್ತಿ ನಮಗಿರುವುದಿಲ್ಲ. ಅಂತಹ ಶಕ್ತಿ ಒದಗಿ ಬರುವುದು ಕೆಲವರಿಗೆ ಮಾತ್ರ. ಮೋಹನರ ಅಂತಹ ಶಕ್ತಿ ನಮ್ಮಲ್ಲಿ ಬೆರಗನ್ನೂ ಗೌರವವನ್ನೂ ಹುಟ್ಟಿಸುವಂತೆ ಈ ಕೃತಿಯಲ್ಲಿ ಮೂಡಿಬಂದಿದೆ. ಪಾರ್ಕಿನ್‌ಸನ್ ನಂತಹ ಘೋರವಾದ ದೇಹದ ಸ್ಥಿತಿಯನ್ನು ಮೋಹನರು ಅಳುಬುರುಕರಾಗದೆ, ಆತ್ಮವಂಚನೆ ಮಾಡಿಕೊಳ್ಳದೆ ಎದುರಿಸುವ ಕ್ರಮವೇ ಜೀವೋಪಿಯಾಗುವ, ಬದುಕಿನ ಸುಖ-ದುಃಖದ ನೆನಪುಗಳ ಉತ್ಸವವಾಗುವ, ಉತ್ತಮ ಸಾಹಿತ್ಯದ ಎಲ್ಲ ಗುಣಗಳೂ ಮೋಹನರ ಈ ಕೃತಿಯಲ್ಲಿದೆ.

ಈ ಕೃತಿ ಓದುತ್ತಿದ್ದಂತೆಯೇ ಕವಿ ಗಂಗಾಧರ ಚಿತ್ತಾಲರು ನನಗೆ ನೆನಪಾದರು. ಗಂಗಾಧರ ಚಿತ್ತಾಲರು ತಮ್ಮ ಬದುಕನ್ನು ದಾರುಣವಾಗಿ ಪೀಡಿಸುವ, ಅರ್ಥವೇ ಆಗದಂತೆ ವಿನಾ ಕಾರಣ ಪೀಡಿಸುವ ರೋಗಕ್ಕೆ ಎದುರಾಗಿ ವಿಧಿಯನ್ನು ಪ್ರಶ್ನಿಸುತ್ತಾರೆ. ಹಳೆ ಒಡಂಬಡಿಕೆಯ ಜೋಬ್ ನಂತೆ ಅರ್ತನಾಗಿ ಪ್ರಶ್ನಿಸುತ್ತ ದೈವವನ್ನೇ ಧಿಕ್ಕರಿಸುತ್ತಾರೆ. ಮೋಹನರೂ ತಮ್ಮ ವಿಧಿಗೆ ಎದುರಾಗುವುದು ಚಿತ್ತಾಲರಿಗಿಂತ ಭಿನ್ನವಾಗಿ ಎಂದು ನನಗನ್ನಿಸುತ್ತದೆ. ಆದರೆ ಅಷ್ಟೇ ಪರಿಣಾಮಕಾರಿಯಾಗಿಯೆಂದೂ ನನಗೆ ಅನ್ನಿಸುತ್ತದೆ. ಮೋಹನರ ಬರವಣಿಗೆಯ ಮುಖ್ಯ ಗುಣ ನಮ್ರತೆ. ಇದು ಅಸಹನೀಯ ನೋವಿನಲ್ಲಿರುತ್ತಲೇ, ಆ ನೋವನ್ನು ನುಂಗಿ ಮೂಡುವ ಮಂದಹಾಸಯುಕ್ತವಾದ ನಮ್ರತೆಯೆಂದು ನಮ್ಮಲ್ಲಿ ಬೆರಗನ್ನು ಕೃತಜ್ಞತಾ ಭಾವವನ್ನೂ ಹುಟ್ಟಿಸುತ್ತದೆ.

ಕೇರಳದಲ್ಲಿ ಭಟ್ಟತಿರಿ ಪಾದ್ ಎಂಬ ಹಿಂದಿನ ಕಾಲದ ಸಂಸ್ಕೃತ ಕವಿಯೊಬ್ಬನ ಬಗ್ಗೆ ಒಂದು ಕಥೆ ಹೇಳುತ್ತಾರೆ. ಭಟ್ಟತಿರಿಗೆ ಅಸಹನೀಯವಾದ ವಾತರೋಗ. ಏಳಲಾರ, ಕೂರಲಾರ. ಅವನು ಗುರುವಾಯೂರಿನ ದೇವಸ್ಥಾನದಲ್ಲಿ ಕೂತು  ನಾರಾಯಣೀಯಮ್ ಬರೆಯುತ್ತಾನೆ; ವ್ರತಶೀಲನಾಗಿ, ತನ್ನ ರೋಗ ಶಮನಕ್ಕಾಗಿ, ಭಾಗವತದ ಕಥೆಯನ್ನು ಸಂಸ್ಕೃತದಲ್ಲಿ ಬರೆಯುತ್ತ ಒಂದು ದಿನ ಎದುರಿನ ಶ್ರೀಕೃಷ್ಣ ಕುಣಿಯುವುದನ್ನು ವರ್ಣಿಸತೊಡಗುತ್ತಾನೆ. ಆಗ ಅವನು ಬರೆಯುವ ಮಾತುಗಳಿಗೇ ಕುಣಿತದ ‘ಲಯ’ ಪ್ರಾಪ್ತವಾಗುತ್ತದೆ. ಅಚರಿಯೆಂದರೆ, ಭಟ್ಟತಿರಿಯ ವಾತಪೀಡಿತ ಕಾಲುಗಳೂ ಸಡಿಲಾಗಿ ಹಗುರಾಗಿ ಕುಣಿಯತೊಡಗುತ್ತವೆ.

ಈ ಕಥೆ ನನಗೆ ಮೋಹನರ ಕೆಲವು ವರ್ಣನೆಗಳನ್ನು ಓದುತ್ತಿದ್ದಂತೆಯೇ ನೆನಪಾಯಿತು. ಉದಾಹರಣೆಗೆ ಫುಟ್ಬಾಲಿನ ಆಟದ ವರ್ಣನೆ; ಅಲ್ಲಲ್ಲಿ ಬರುವ ಕೆಲವು ಹುಡುಗಿಯರ ವರ್ಣನೆ. ಮೋಹನರಂತೆ ನಾನೂ ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದವನು. ನನಗೆ ನನ್ನ ಬಾಲ್ಯವೇ ಮರುಕಳಿಸುವಂತೆ ಮೋಹನರು ಮಾಡಿದರು. ಮೋಹನರು ತಮ್ಮನ್ನು ನರಳಿಸುವ ಪಾರ್ಕಿನ್ ಸನ್ನನ್ನು ಈ ಕ್ಷಣಗಳಲ್ಲಿ ಮೀರಿದವನಂತೆ ನನಗೆ ಕಂಡರು. ಈ ಕೃತಿಯ ಒಟ್ಟು ಜೀವದೃಷ್ಟಿ ಎಷ್ಟು ಪಕ್ವವಾದದ್ದು ಎಂದು ನನಗೆ ಸೋಜಿಗವಾಗಿದೆ. ಮೋಹನರು ತಮ್ಮ ತಂದೆಯ ಬಗ್ಗೆ ಬರೆಯುವ ಕ್ರಮ, ತಮ್ಮ ಯೌವನದ ಒಂದು ಪ್ರೇಮ ಪ್ರಕರಣದ ಬಗ್ಗೆ ಹೇಳುವ ಮಾತುಗಳು ತುಂಬಿದ ಬದುಕಿನಿಂದ ಮಾತ್ರ ಬರುವಂತಹ ಮಾತುಗಳು.

ಕನ್ನಡದಲ್ಲಿ ಇದೊಂದು ಅನನ್ಯವಾದ ಕೃತಿ. ಊರಿನಿಂದ ದೂರವಾಗಿ, ಎಲ್ಲೋ ಅಮೆರಿಕಾದಲ್ಲಿ ಇದ್ದು, ಇವರು ಕನ್ನಡವನ್ನು ಅದರ ಎಲ್ಲ ಸೊಗಸಿನಲ್ಲೂ ಶಕ್ತಿಯುತವಾಗಿ ಮತ್ತೆ  ಪಡೆದುಕೊಳ್ಳುವ ಮತ್ತು ಬಳಸುವ ಕ್ರಮ ಕೂಡ ಅನನ್ಯವಾಗಿದೆ. ಮೋಹನರು ತಮ್ಮ ಬಾಲ್ಯದ ಕನ್ನಡದಲ್ಲಿ ಮತ್ತೆ ಹುಟ್ಟಿ ಭಟ್ಟತಿರಿಯಂತೆ  ಚೈತನ್ಯಪೂರ್ಣರಾಗಿ ನಮ್ಮೆದುರು ಓಡಾಡುತ್ತಿದ್ದಾರೆ, ನಗಿಸುತ್ತಿದ್ದಾರೆ, ಟೆನ್ನಿಸ್ ಆಟವಾಡುತ್ತಿದ್ದಾರೆ ಎಂದು ನನಗೆ ಅನ್ನಿಸಿತು.

ಕುವೆಂಪು ಅವರ ‘ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಮಾತು ಮೋಹನರ ಬಗ್ಗೆ ನಿಜ. ಮೋಹನರಿಗೆ ಎಲ್ಲ ಕನ್ನಡಿಗರ ಪರವಾಗಿ ಕೃತಜ್ಞತೆಯನ್ನು ಹೇಳುವುದು ನನ್ನ ಕರ್ತವ್ಯವೆಂದುಕೊಂಡಿದ್ದೇನೆ.

*

(ವೈ.ಆರ್. ಮೋಹನ್ ಅವರ ನೆನಪುಗಳು’ (೨೦೦೦) ಕೃತಿಗೆ ಬರೆದ ಮುನ್ನುಡಿ.