ಶ್ರೀಮತಿ ಶಶಿಕಲಾ ಚಂದ್ರಶೇಖರ್ ಎಷ್ಟು ಅಮೆರಿಕಾದಲ್ಲಿ ಇರುವವರಾಗಿ ಬರೆಯುತ್ತಾರೋ, ಅಷ್ಟೇ ಕನ್ನಡ ನಾಡಿನಲ್ಲಿ ಇರುವವರಂತೆಯೂ ಬರೆಯುತ್ತಾರೆ. ಎರಡು ದೇಶಗಳು, ಎರಡು ವಿಭಿನ್ನ ಸಂಸ್ಕೃತಿಗಳು ಹೀಗೆ ಎದುರಾಗುವುದು, ಲೇಖಕ ಇಬ್ಬಂದಿಯಾಗಿ ಸ್ಪಂದಿಸುವುದು, ಸ್ಪಂದನ ಒಳತೋಟಿಗೆ ಕಾರಣವಾಗುವುದು ಸಾಹಿತ್ಯಾಸಕ್ತರಿಗೆ ಪರಿಚಿತವಾದ ವಿಷಯವೇ. ಆದರೆ, ಶಶಿಕಲಾ ಚಂದ್ರಶೇಖರರ ಕಥೆಗಳು ದ್ವಂದ್ವಗಳ ಸಂಕಟದಲ್ಲಿ ಮಾತ್ರ ಹುಟ್ಟಿದ ಕಥೆಗಳಲ್ಲ ಎನ್ನುವುದು ವಿಶೇಷವಾಗಿ ನಮ್ಮ ಗಮನಕ್ಕೆ ಬರುವಂಥದು. ಅಲ್ಲಿ ಇಲ್ಲಿ ಈ ಮಾತಿಗೆ ವಿನಾಯಿತಿ ಇದ್ದರೂ ಈ ಕಥೆಗಳ ಸ್ಥಾಯಿಭಾವ ಭಾವುಕರಾದ ಪೂರ್ವ ಪಶ್ಚಿಮಗಳ ಬೆಸುಗೆಯದು; ನಾನು ಲೇಖಕನಾಗಿ ಯೋಚಿಸುವ, ಭಾವಿಸುವ ಕ್ರಮಕ್ಕೆ ಇದು ಅನ್ಯವಾದ್ದರಿಂದಲೇ ನಾನು ಶಶಿಕಲಾರ ಕಥೆಗಳನ್ನು ಮೆಚ್ಚಿಕೊಂಡಿದ್ದೇನೆ.

ಮನುಷ್ಯ ಸಂಬಂಧಗಳ ಮೂಲಕವೇ ಶಶಿಕಲಾರವರು ತಮ್ಮ ಎಲ್ಲ ಒಳ ನೋಟಗಳನ್ನು ಬಿಂಬಿಸುತ್ತಾರೆ. ಈ ಸಂಗ್ರಹದ ‘ದೀಪವು ನಿನ್ನದೆ, ಗಾಳಿಯು ನಿನ್ನದೆ’ ಎನ್ನುವ ಕಥೆಯ ಇಡೀ ಕಟ್ಟಡವೇ ಗಮನಾರ್ಹವಾಗಿದೆ. ಭಾರತಕ್ಕೂ ಅಮೆರಿಕಾಕಕ್ಕೂ ಇರುವ ಸಾಂಸ್ಕೃತಿಕ ನಡೆ-ನುಡಿಯ ವ್ಯತ್ಯಾಸಗಳು ಭಾವನಾತ್ಮಕವಾಗಿ ಅರ್ಥಹೀನ ಎನ್ನಿಸುವಂತೆ ನೆರೆಹೊರೆಯ ಪ್ರೀತಿಯ ಸಂಬಂಧವಾಗಿ, ಬೆಳೆಯುತ್ತ ಹೋಗುವ ಈ ಕಥೆ ಅಪ್ಪಟ ಸಾಂಸಾರಿಕ ಕಥೆಯಾಗಿ ನಮ್ಮ ಮನಸ್ಸನ್ನು ಗೆಲ್ಲುತ್ತ ಹೋಗುತ್ತದೆ. ಹಿತವಾದ ಬಿಸಿಲಿನ ಬಣ್ಣದ ಬೆಡಗಿನ ಅಕ್ಟೋಬರ್ ಮೆರವಣಿಗೆಗೆ ಸಿದ್ಧತೆ ನಡೆಸುವ ಸಪ್ಟಂಬರ್‌ ತಿಂಗಳಿನಿಂದ ಕಥೆ ಶುರುವಾಗುತ್ತದೆ. ನೆರೆಯವರಾದ ನೆಸ್ಮಿತ್ ಹುಡುಗಿಯರೂ, ಭಾರತೀಯ ಕಥೆಗಾರರ ಮಕ್ಕಳೂ ಕೂಡಿ ಹುಲ್ಲಿನ ಮೇಲೆ ಆಡುತ್ತಾರೆ. ಮಿಂಚಿನ ಹುಳ ಹಿಡಿಯುತ್ತಾರೆ. ಕುಂಟೆಬಿಲ್ಲೆ, ಅಳಗುಣಿಮಣೆ, ಸ್ಲೈಡಿಂಗ್, ರೋಲರ ಬ್ಲೇಡ್ – ಪೂರ್ವ-ಪಶ್ಚಿಮಗಳ ಆಟಗಳನ್ನು ಮಕ್ಕಳು ಕೂಡಿ ಆಡುತ್ತಾರೆ.

ನೆರೆಯ ಮಕ್ಕಳ ತಾಯಿ ಲೋರಿ ಊರಿಗೆ ಬಂದ ಹೊಸಬರಾದ ಭಾರತೀಯರನ್ನು ಸ್ವಾಗತಿಸಲು ಮೌಂಟನ್ ಲಾರೆನ್ ಹೂವಿನ ಗಿಡವೊಂದನ್ನು ತರುತ್ತಾಳೆ. ಶಶಿಕಲಾ ಹೀಗೆ ತಂದದ್ದನ್ನು ವರ್ಣಿಸುವ ಕ್ರಮ ಶಶಿಕಲಾರ ಶೈಲಿಗೆ ವಿಶೇಷವಾದ್ದು:‘ಗಿಡದ ತುಂಬೆಲ್ಲ ಬಿಳಿ ಬಟ್ಟಲ ಆಕಾರದ ಹೂವು. ಹೂವಿನ ಪಾತ್ರೆಯಲ್ಲಿ ಕಂದು ಚುಕ್ಕೆಗಳು. ಹೂವಿನ ಮೊಗ್ಗು ಸಿದ್ಧಗಂಗೆ ಜಾತ್ರೆಯಲ್ಲಿ ಬತ್ತಾಸಿನ ಜೊತೆ ಸಿಗುತ್ತಿದ್ದ ಕಲ್ಯಾಣಸೇವೆ ತರಹ ಇತ್ತು.

ಶಶಿಕಲಾರ ನೆನಪುಗಳು ಚುರುಕಾಗಿ, ತೀವ್ರವಾಗಿ, ದಟ್ಟವಾಗಿ ತಾಯ್ನಾಡನ್ನೂ, ಸೇರಿರುವ ದೇಶವನ್ನು ಈ ಬಗೆಯಲ್ಲಿ ಹೆಚ್ಚು ಕಡಿಮೆ ಎಲ್ಲ ಕಥೆಗಳಲ್ಲೂ ಬೆಸೆಯುವ ಪರಿ ಕನ್ನಡ ಕಥಾಲೋಕಕ್ಕೆ ಹೊಸದನ್ನು ಸೇರಿಸುತ್ತಿದೆ.

ಇಂಗ್ಲಿಷ್ ಊರಿಂದೂರಿಗೆ ಚಲಿಸುವ ಭಾಷೆ. ಶಶಿಕಲಾರ ಪ್ರತಿಭೆಯಿಂದಾಗಿ ಕನ್ನಡವೂ ಯಾವ ದೇಶದ ಅನುಭವನ್ನಾಗಲೀ ತನ್ನದಾಗಿಸಿಕೊಳ್ಳಬಲ್ಲ ‘ಚಲಿಸುವ’ ಭಾಷೆಯಾಗಿದೆ. ಇದು ನಮ್ಮ ಭಾಷೆ ಅರ್ಥಪೂರ್ಣವಾಗಿ ಹಿಗ್ಗುವ ಇನ್ನೊಂದು ಬಗೆಯಾಗಿದೆ.

ತುಮಕೂರಿನ ಮನೆಯ ನೆನಪುಗಳನ್ನು ಅಮೆರಿಕಾದಲ್ಲಿ ಬೆಸೆಯುತ್ತಾ ಲೋರಿ ಮತ್ತು ಅವಳ ಗಂಡ ಬ್ರೂಸ್ ರನ್ನು ನಮಗೂ ಆತ್ಮೀಯಗೊಳಿಸುತ್ತ ಕುಟುಂಬ ಪುರಾಣವಾಗಿ ಬೆಳೆಯುತ್ತ ಹೋಗುವ ಈ ಕಥೆ ಕೊನೆಯಲ್ಲಿ ‘ಸೆಪ್ಟಂಬರ‍ ೧೧’ರ ಭೀಕರ ದುರಂತವನ್ನು ಕುಟುಂಬದ ಪ್ರಶಾಂತ ದೈನಿಕಗಳ ಒಳಗೇ ತಂದು ತೋರುತ್ತದೆ. ಯಾವ ತಾತ್ವಿಕ ವಿಶ್ಲೇಷಣೆಗೂ ಸಿಗಲಾರದ ದುಃಖವಾಗಿ, ಅಮೆರಿಕಾದ ರಾಜಕಾರಣದಿಂದ ಹುಟ್ಟಿದೊಂದು ಘಟನೆ ನಮ್ಮೆದುರ ನಿಲ್ಲುತ್ತದೆ. ಸೆಪ್ಟಂಬರ ೧೧ರ ಘಟನೆಯನ್ನು ರಾಜಕೀಯವಾಗಿ, ಆರ್ಥಿಕವಾಗಿ, ಬಲಿಷ್ಠರ ಪೈಪೋಟಿಯಾಗಿ ಕಾಣುವುದಕ್ಕೂ ಅತೀತವಾದ, ಯಾವ ವಿಶ್ಲೇಷಣೆಗೂ ದಕ್ಕದ ನೆಲೆಯಲ್ಲಿ ಕಥೆ ನಿಂತು ನಮ್ಮನ್ನು ಕಾಡುತ್ತದೆ. ಕಥೆಯ ಅತ್ಯಂತ ಮಾರ್ಮಿಕ ಘಳಿಗೆಯೆಂದರೆ ಲೋರಿ ಹಂತಕನ ಮುಖವನ್ನು ನೆನಪು ಮಾಡಿಕೊಳ್ಳುವುದು. ನಮ್ಮ ಹಾಗಿನ ಇನ್ನೊಬ್ಬ ಮನುಷ್ಯ ಅವನು ಎನ್ನುವುದೇ ಈ ತರ್ಕಾತೀತವಾದ ನಮ್ಮ ಸ್ಪಂದನಕ್ಕೆ ಕಾರಣವಾಗಿದೆ.

ನಮ್ಮ ಕಾಲವೇ ಈಗ ಹೇಗಾಗಿದೆ ಎಂದರೆ ಇಂಥ ಸ್ಪಂದನದಲ್ಲೂ ನಮ್ಮನ್ನು ರಾಜಕೀಯ ಸತ್ಯಗಳು ಕಾಡುತ್ತವೆ. ಲೋರಿ ದಂಪತಿಗಳನ್ನು ಪಡೆದುಕೊಂಡ ಅಮೆರಿಕಾ ದೇಶವೇ ಅದರ ಗುಪ್ತ ರಾಜಕಾರಣದಲ್ಲಿ ಈ ಕಾಲದ ಹಲವು ದುರಂಗತಗಳಿಗೆ ಕಾರಣವಾಗಿದೆ. ಅಮೆರಿಕಾದ ಚೆಲುವಿಗೂ, ಸಮೃದ್ಧಿಗೂ, ನಿರಾತಂಕ ಜೀವನ ಶೈಲಿಯ ಭ್ರಮೆಗೂ ಹಿನ್ನೆಲೆಯಾಗಿ ಕ್ರಿಮಿನಲ್ ರಾಜಕಾರಣವಿದೆ. ಇಸ್ರೇಲ್ ಪಾಲಿಸ್ತೈನ್ ಸಂಘರ್ಷವಿದೆ. ತಮ್ಮ ತಾಯ್ನಾಡಿನಿಂದಲೇ ಹೊರಗೆ ದಬ್ಬಲ್ಪಟ್ಟ ಪಾಲಿಸ್ತೈನ್ ಮುಸ್ಲೀಂರ ಸಂಕಟದ ಪಾಡಿದೆ. ಆದರೆ ಸಪ್ಟಂಬರ ೧೧ರ ಕ್ರೌರ್ಯ ಸಾಧುವೆ? ಅಲ್ಲ, ಖಂಡಿತ ಅಲ್ಲ. ಆದರೆ ನಮಗಾಗುವ ದುಃಖದಲ್ಲಿ, ವಿಶ್ಲೇಷಣೆಗೆ ಅತೀತವಾದ ದುಃಖದಲ್ಲಿ ಅರಬ್ ಹಂತಕನ ಮುಖಮಾತ್ರ ಕಾಣಿಸಬೇಕೆ? ಬುಷ್ ಮತ್ತು ಅವನ ಸಹಚರರ ಮುಖಗಳೂ ಕಾಣಿಸಬಾರದೆ? ಈ ಎರಡೂ ಕಂಡು ಪಡುವ ದುಃಖಕ್ಕೆ ಮಾತ್ರ ಬದ್ಧ ಗುಣವಿರುತ್ತದೆ.

*

ಶಶಿಕಲಾ ಪ್ರೀತಿಯ ಬಗ್ಗೆ ಬರೆದಿರುವುದೇ ಹೆಚ್ಚು. ಮುಖ್ಯವಾಗಿ ಇವರು ಭಾವುಕ ಕಥೆಗಾರರು. ಅವರದೇ ಒಂದು ಮಾತನ್ನು ಉದ್ಧರಿಸುತ್ತೇನೆ.

‘ಮನಸ್ಸು ಅನುವಿಸುತ್ತಿದ್ದ ಸುಖದಿಂದೆದ್ದು ಬರಲು, ಅರಿವು ಸೂಚಿಸುತ್ತಿತ್ತು; ನಿಜ ಜೀವನದ ಸತ್ಯಾಸತ್ಯತೆಯ ನೆನಪು ಕೊಟ್ಟು. ಆದರೆ ಭಾವುಕತೆಗೆ ಪಕ್ಕಾದ ಮನಸ್ಸು ಎಂದಾದರು ಅರಿವಿಗೆ ಪ್ರಾಮುಖ್ಯೆತೆ ಕೊಟ್ಟಿದ್ದಿದೆಯೇನು’ (ನಂತರ ಆ ನಂತರ ಅದಾದ ನಂತರ…..’)

ಭಾವುಕತೆ ಕಳೆದುಕೊಳ್ಳದಂತೆ ಸತ್ಯಗಳನ್ನು ಅರಿಯಲು ಶಶಿಕಲಾ ಪ್ರಯತ್ನಿಸುತ್ತಾರೆ. ಭಾವುಕತೆಗೆ ಸಾಮಗ್ರಿಯಾಗಿ ಎಲ್ಲೆಲ್ಲೂ ನಿಸರ್ಗದ ಚೆಲುವಿನ ವರ್ಣನೆ ಬರುತ್ತದೆ. ಭಾರತಕ್ಕೂ ಅಮೆರಿಕಾಕ್ಕೂ ಇರುವ ಕಾಲಮಾನದ ಅಂತರವೂ ಭಾವುಕವಾಗಿ ಮೂಡುತ್ತ ಹೋಗುತ್ತದೆ. ಪ್ರೀತಿ ಇದೆ; ಹಾಗೆಯೇ ಸಾವೂ ಇದೆ; ಒಟ್ಟಾಗಿ ಇದೆ. ನಮ್ಮ ಅರಿವಿಗೆ ಅತೀತವಾಗಿ ಇದೆ. ಇಂತಹ ಸತ್ಯಗಳು ಭಾವುಕವಾಗಿ ಮೂಡುತ್ತವೆ. ಹೀಗೆ ಮಾಡಿದ್ದು ಆಳವಾದ ವಿಚಾರಗಳಾಗಲು ಹೊಂಚುತ್ತವೆ. ಆದರೆ ಹೊಂಚುವುದು ಕಥೆಯ ಪಠ್ಯದಲ್ಲಿ ಅಲ್ಲ. ಕಥೆ ನಮ್ಮಲ್ಲಿ ಎಬ್ಬಿಸುವ ಅನುಕಂಪದ ಅಲೆಗಳಲ್ಲಿ.

ಮೇಲಿನ ಮಾತಿಗೆ ಅತ್ಯುತ್ತಮ ಉದಾಹರಣೆಯಾದ ಕಥೆ ಎಂದರೆ ‘ಅಶ್ಲಿ’. ಇಡೀ ಕಥೆ ನಮ್ಮ ಕಣ್ಣಿಗೆ ಕಟ್ಟುವಂತ ನಿರೂಪಿತವಾಗಿದೆ. ಕನ್ನಡ ಭಾಷೆ ಅಮೆರಿಕಾದ ಜೀವನ ಚಿತ್ರವೊಂದನ್ನು ಅಲ್ಲಿಯ ಭಾಷೆಯೇ ಎಂಬಂತೆ ಇಲ್ಲಿ ಚಿತ್ರಿಸುತ್ತದೆ. ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಮಾಡಬಹುದಾದ ಉತ್ತಮ ರಚನೆಗಳಿಗೆ ಇದೊಂದು ಒಳ್ಳೆಯ ಉದಾಹರಣೆ.

ಆದರೂ ಇದೊಂದು ಕನ್ನಡದ ಕಥೆಯೇ. ಏಕೆಂದರೆ ಅಮೆರಿಕನ್ ಸಾಹಿತ್ಯ ಲೋಕದಲ್ಲಿ ಶಶಿಕಲಾರ ಭಾವುಕತೆಗೆ ಈಗ ಮರ್ಯಾದೆಯ ಸ್ಥಾನವಿಲ್ಲ. ಎಲ್ಲ ಬರವಣಿಗೆಯಲ್ಲೂ ಅನುಮಾನದ ಕಣ್ಣೊಂದನ್ನು ತೆರೆದುಕೊಂಡಿರುವುದು ಬರವಣಿಗೆಯ ಅಸ್ಥಿತ್ವಕ್ಕೆ ಅಲ್ಲಿ ಅಗತ್ಯವಾಗಿಬಿಟ್ಟಿದೆ. ಆದರೆ ಶಶಿಕಲಾರ ಕನ್ನಡದ ಮನಸ್ಸು ‘ಅಶ್ಲಿ’ ಒಳಗಿನ ನಿಷ್ಕಳಂಕ ಪ್ರೇಮವನ್ನು, ನಿಷ್ಕಾರಣವಾಗಿ ಒದಗುವ ದುರಂತಗಳನ್ನು ಆರ್ದ್ರತೆಯಿಂದ ನೋಡಬಲ್ಲುವಾಗಿದೆ. ಇದೊಂದು ಕನ್ನಡ ನಾಡಿನ ಅಮೆರಿಕನ್ ಕಥೆ.

*

ಶಶಿಕಲಾ ಕಥೆಗಳ ಬಗ್ಗೆ ನಾನು ಹೇಳಿರುವ ಮಾತುಗಳಿಗೆ ವಿನಾಯಿತಿಯಾಗಿ ‘ಮೇಣ್ ಮರಿದುಂಬಿಯಾಗಿ.’ ಇದೆ. ಅಮೆರಿಕಾದಲ್ಲಿನ ಭಾರತೀಯ ‘ಮಾಧುರಿ’ ಈ ಕಥೆಯ ನಾಯಕಿಗೆ ರೋಲ್ ಮಾಡೆಲ್ ಆಗಬಹುದಿತ್ತು. ಆದರೆ ಈ ಕಥೆಯ ನಾಯಕಿ ಕರ್ನಾಟಕಕ್ಕೆ ಹಿಂದಿರುಗುತ್ತಾಳೆ. ನನಗೆ ಈ ಕಥೆ ಓದುತ್ತಿದ್ದಂತೆ ಒಂದು ಸಣ್ಣ ಅನುಮಾನ ಹುಟ್ಟಿಕೊಂಡಿತು. ಈ ಕತೆಯ ನಾಯಕಿ ಇಂಡಿಯಾಕ್ಕೆ ಹಿಂದಿರುಗಿಲ್ಲ. ಅಲ್ಲೇ ಇದ್ದು, ಗೆದ್ದು ಭಾರತವನ್ನೂ ಅಮೆರಿಕವನ್ನೂ ಬೆಸೆದುಕೊಂಡು ಶಶಿಕಲಾ ಚಂದ್ರಶೇಖರ್‌ ಆಗಿ ನಮಗೆ ಈ ಸಂಕಲನದ ಕಥೆಗಳನ್ನು ಕೊಡುತ್ತಿದ್ದಾರೆ.

*

ಇನ್ನೊಂದು ವಿನಾಯಿತಿ : ‘ಮೌನ ಮಾತಾಡಿದ ಗಳಿಗೆ. ಇಲ್ಲಿ ನಾಯಕಿ ಭಾರತಕ್ಕೆ ಹಿಂದಿರುತ್ತಾಳೆ. ಕೈ ಹಿಡಿದ ಗಂಡನಲ್ಲಿ ಅಮೆರಿಕಾದ ಧನ ಲೋಭ ಹುಟ್ಟಿಸಿದ ವಿಕಾರದಿಂದಾಗಿ. ತಗ್ಗಿ ನಡೆಯುವ ಸಾಂಪ್ರದಾಯಿಕ ಹೆಣ್ಣು ತಲೆ ಎತ್ತಿ ನಿಲ್ಲುವ ಕಥೆಯಾಗಿ ಶಶಿಕಲಾರು ಇನ್ನು ಮುಂದೆ ಮೂಡಿಸಬಹುದಾದ ಸತ್ಯಗಳನ್ನು ಈ ಕಥೆ ಸೂಚಿಸುವಂತಿದೆ. ಕೇವಲ ಭಾವುಕ ಬೆಸುಗೆಗಳ ಹಿತವಾದ ಕಥನಕಾರರು ಮಾತ್ರವಾಗಿ ಶಶಿಕಲಾರು ಉಳಿಯಲಿಕ್ಕಿಲ್ಲವೆಂಬ ಭರವಸೆಯನ್ನು ಈ ಕಥೆಯಲ್ಲಿ ಹುಟ್ಟಿಸಿದ್ದಾರೆ. ಬದುಕಿನ ಎಲ್ಲ ಸತ್ಯಗಳನ್ನೂ ತನ್ನ ತೆಕ್ಕೆಗೆ ಬಗ್ಗಿಸಿಕೊಳ್ಳುವ ಸರ್ವ ಗ್ರಾಹ್ಯತೆ ಉತ್ತಮ ಲೇಖಕನಿಗೆ ಇದ್ದೇ ಇರುತ್ತದೆ ಎಂದು ತಿಳಿಯಬೇಕಾದಂತೆ ಈ ಕಥೆ ಒಟ್ಟು ಸಂಗ್ರಹದಲ್ಲಿ ವಿಶಿಷ್ಟವಾಗಿ ಕಾಣುವಂತೆ ಮುಡಿದೆ.

*

ಕೆಲವು ವರ್ಷಗಳ ಹಿಂದೆ ನಾನು ಫಿಲಿಡೆಲ್ಫಿಯಾದ ‘ಯೂಪೆನ್’ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಶಶಿಕಲಾ ಚಂದ್ರಶೇಖರ್‌ ದಂಪತಿ ಪರಿಚಯ ನನಗಾಯಿತು. ಶಶಿಕಲಾ ನನಗೆ ಬಹುಬೇಗ ಆತ್ಮೀಯರಾದರು. ಆಗ ಅವರು ನನಗೆ ಕಳುಹಿಸಿದ ಎರಡು ಕಥೆಗಳ ಬಗ್ಗೆ ನಾನು ಮಾಡಿದ ಟಿಪ್ಪಣಿಗಳನ್ನು ಅವರು ಈಗ ನನಗೆ ಕಳುಹಿಸಿ ಅಚ್ಚರಿಯನ್ನು ಹುಟ್ಟಿಸಿದ್ದಾರೆ. ಯಾಕೆ ಅಚ್ಚರಿಯೆಂದರೆ ಹಿಂದೆ ನಾನು ಹೇಳಿದ ಂಆತುಗಳನ್ನು ಕಥೆಗಳನ್ನು ಮತತೆ ಓದಿದಾಗ ಮತ್ತೆ ಹೇಳಬಹುದು ಎನ್ನಿಸಿತು. ನಾನು ಮಾಡಿದ ಟಿಪ್ಪಣಿಗಳನ್ನು ಉದ್ಧರಿಸುತ್ತೇನೆ.

ತೌರ್ಬಣ್ಣ ಉಟ್ಕೊಂಡು ಕಥೆಯ ಬಗ್ಗೆ : ‘ತವರಿನಿಂದ ದೂರ ಇರುವ ವ್ಯಾಕುಲ, ಉದ್ವೇಗ, ಜೊತೆಗೆ ದೂರದ ಊರಿನ ಸೌಂದರ್ಯ, ತವರಿನ ಅಕ್ಕರೆ ಎಲ್ಲವನ್ನೂ ಹೇಳುವ ಸಹಜವಾದ ಬರವಣಿಗೆ, ಪ್ರಾಮಾಣಿಕವಾದ ಭಾವದ ಅಭಿವ್ಯಕ್ತಿ ಇಲ್ಲಿದೆ. ಪ್ರೀತಿಯ ಬಗ್ಗೆ, ಸಮತೋಷದ ಬಗ್ಗೆ, ಉತ್ಸಾಹದ ಬಗ್ಗೆ ಇರುವ ಈ ಕಥೆ ತನ್ನ ತುದಿಯಲ್ಲಿ ಏನೋ ಇನ್ನಷ್ಟು ಉತ್ಕಟವಾದ್ದನ್ನು ನಿರೀಕ್ಷಿಸುವಂತೆ ಮಾಡುತ್ತದೆ. ನೀವು ಇನ್ನಷ್ಟು ಉತ್ಕಟವಾದ ಕೊನೆಯನ್ನು ಸೃಷ್ಟಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಕಥೆ ನಮ್ಮಲ್ಲಿ ಈ ನಿರೀಕ್ಷೆ ಹುಟ್ಟಿಸುತ್ತದೆ. ಎಲ್ಲ ಕಥೆಗಳ ನಿರೂಪಣೆಯಲ್ಲೇ ಹುಟ್ಟಿಕೊಳ್ಳುವ ಕಥೆಯ ‘ಪಾಡು’ ಇದು. ಆದರೂ ನಿಮ್ಮ ಕಥೆ ಹಿಗೆಯೇ ಇರಲಿ – ತವರಿಗೂ ಸಲ್ಲುವಂತೆ ಪರದೇಶಕ್ಕೂ ಸಲ್ಲುವಂತೆ. ನೀವು ಇಲ್ಲಿ ಕಳೆದುಹೋಗಿಲ್ಲ, ಕಳೆದುಕೊಂಡು ಇಲ್ಲ. ಇವು ಬರವಣಿಗೆಯ ಸಾಧನೆ ಮಾತ್ರವಲ್ಲ – ‘ಬದುಕಿನ ಸಾಧನೆ’.

ನಿಕಟ ಕಥೆಯ ಬಗ್ಗೆ : ನಿಮ್ಮ ‘ನಿಕಟ’ ಓದಿ ಮುಗಿಸಿ ಸಂತೋಷದಲ್ಲಿ ಬರೀತಿದೀನಿ. ಎಷ್ಟು ನಿಜವಾಗಿ, ಸಹಜವಾಗಿ, ಸತ್ವಯುತವಾಗಿ ನಿಮ್ಮ ಬರಹ ಇಲ್ಲಿ ಮೂಡಿದೆ ಎಮದು ಆಶ್ಚರ್ಯವಾಯ್ತು. ಪ್ರಾಯಶಃ ಪರದೇಶದ ಅನುಭವವನ್ನು ಕನ್ನಡದಲ್ಲಿ-ಈ ಅನುಭವಕ್ಕೆ ತಕ್ಕುದಾದ ಕನ್ನಡದಲ್ಲಿ ಕೃತಕವೂ ಆಗದಂತೆ, ಕಲಬೆರಕೆಯೂ ಆಗದಂತೆ ನೀವು ಬರೆಯಬಲ್ಲಿರಿ. ಇದೊಂದು ಮಹತ್ವದ ಸಾಧನೆಯಾಗುತ್ತದೆ.

ವರ್ಷಗಳು ಕಳೆದರೂ ನನ್ನ ಓದಿನ ಹಿಂದಿನ ಉಲ್ಲಾಸ ಮಾಸಿಲ್ಲ. ಶಶಿಕಲಾ ಸುಂದರವಾದ ಗದ್ಯವನ್ನು ಅದರಲ್ಲೇ ತನ್ಮಯರಾಗಿ ಬರೆಯುತ್ತಾರೆ. ಹೀಗೆ ಬರೆಯುವುದು ಅವರಿಗೆ ನಿರಾಯಾಸವೂ, ಸಹಜವೂ ಆಗುತ್ತ ಹೋಗಬೇಕು. ಆಡಿದ್ದೆಲ್ಲವೂ ಕಥೆಯಲ್ಲಿ ಆಗುವಂತೆ ಮಾಡುವ, ಹೀಗೆ ಆಗಿದ್ದು ಹೆಚ್ಚು ಹೆಚ್ಚು ಪ್ರಬಂಧ ಧ್ವನಿ ಪಡೆಯುವ ಭಾಗ್ಯ ಶಶಿಕಲಾರದು ಆಗಲಿ ಎಂದು ಹಾರೈಸುತ್ತೇನೆ.

*

ಶ್ರೀಮತಿ ಶಶಿಕಲಾ ಚಂದ್ರಶೇಖರ್ಅವರದೀಪವೂ ನಿನ್ನದೇ ಗಾಳಿಯೂ ನಿನ್ನದೆಪುಸ್ತಕಕ್ಕೆ ಬರೆದ ಮುನ್ನುಡಿ. ೨೦೦೪.