ನನ್ನ ಕಾದಂಬರಿ ‘ಸಂಸ್ಕಾರ’ದ ಬಗ್ಗೆ ಮುಂಬಯಿಯಲ್ಲಿ ನಡೆದ ಒಂದು ಚರ್ಚೆಯ ವರದಿ (೧೩-೩-೧೯೬೭ರ ಸಂಯುಕ್ತ ಕರ್ನಾಟಕದಲ್ಲಿ ಬಂದ್ದು) ಮತ್ತು ಮನುಕುಲದಲ್ಲಿ ‘ಚಕ್ರಧಾರಿ’ಯವರು ಮಾಡಿದ ವಿಮರ್ಶೆ ನನ್ನ ಗಮನವನ್ನು ಸೆಳೆದಿವೆ. ಈ ವಿಮರ್ಶೆಗಳು ನನ್ನ ಕಾದಂಬರಿ ಕಲಾಕೃತಿಯಾಗಿ ಯಶಸ್ವಿಯಾಗಿದೆಯೇ? ಅಥವಾ ಸೋತಿದೆಯೇ? ಎಂಬ ಪ್ರಶ್ನೆಗಷ್ಟೆ ಪರಿಮಿತವಾಗಿದ್ದಿದ್ದರೆ ಕೃತಿಗಾರನಾದ ನಾನು ನಡುವೆ ತಲೆಹಾಕುವುದು ತಪ್ಪಾಗುತ್ತಿತ್ತು. ಯಾವ ಲೇಖಕನೂ ತಾನು ರಚಿಸಿದ ಕೃತಿಗೆ ತಾನೇ ವಕೀಲಿ ವಹಿಸಕೂಡದು. ಕೃತಿಯ ಬಗ್ಗೆ ಚರ್ಚೆ ಓದುಗರು ಮತ್ತು ವಿಮರ್ಶಕರ ನಡುವೆ ನಡೆಯಬೇಕಾದದ್ದು. ಈ ವಿಮರ್ಶೆಯನ್ನು ಆಲಿಸುವುದರಲ್ಲಿ ವಿಮರ್ಶೆ ಗಂಭೀರ ಸ್ವರೂಪದ್ದಾಗಿದ್ದರೆ- ಕೃತಿಗಾರನಿಗೂ ಸಹಜವಾಗಿ ಆಸಕ್ತಿಯಿರುತ್ತದೆ. ಅಲ್ಲದೆ ಇಂತಹ ವಿಮರ್ಶೆಯಿಂದ ಅವನು ಕಲಿಯಬಹುದಾದ್ದೂ ಕೆಲವೊಮ್ಮೆ ಇರುತ್ತದೆ.

ವಿಮರ್ಶೆಯೆಂದರೆ ತಜ್ಞರು ಕಲಾಕೃತಿಯ ತಂತ್ರದ ಬಗ್ಗೆ ಮಾತ್ರ ನೀಡುವ ಅಭಿಪ್ರಾಯವೆಂದು ನಾನು ತಿಳಿದಿಲ್ಲ; ವಿಮರ್ಶೆಯಲ್ಲಿ ತಂತ್ರ ಮತ್ತು ವಸ್ತುಗಳನ್ನು ಮೂಲತಃ ಅಭೇದವೆಂದು ಕಾಣುವ ಎಚ್ಚರವಿರುತ್ತದೆ. ಕಲಾಕೃತಿಯನ್ನು ಒಳಗಿನಿಂದ ವಶಪಡಿಸಿಕೊಳ್ಳುವ ಮತ್ತು ಕೃತಿಗೆ ತಾನು ಒಳಗಾಗುವ ಸಂದರ್ಭದಲ್ಲೇ ಕೃತಿಯ ಹೊರಗೆ ನಿಂತು ವಿಚಾರ ಮಾಡಬಲ್ಲ ವಿಮರ್ಶಕ ತನ್ನ ಸ್ವಂತ ಜೀವನದ ಆಂತರಿಕತೆಯನ್ನು ಮತ್ತು ಕೃತಿಯ ಆಂತರಿಕತೆಯನ್ನು ಒಟ್ಟಿಗೇ ಅನ್ವೇಷಣಾತ್ಮಕ ಎನ್ನುವಂತಹ ಒಂದು ಕ್ರಿಯೆಯಲ್ಲಿ ತೊಡಗಿಸುತ್ತಾನೆ. ಹೀಗೆ ಸಂಪೂರ್ಣವಾದ ಶೋಧನೆಯಲ್ಲಿ ತೊಡಗಲು ಕೃತಿ ಅದು ಉತ್ತಮವಾದದ್ದಿದ್ದರೆ ಮಾತ್ರ ಆಹ್ವಾನಿಸುತ್ತದೆ. ನಿತ್ಯಜೀವನದಲ್ಲಿ ನಾವು ಬಚ್ಚಿಡುವ ಅಥವಾ ದುಡಿಸಿಕೊಳ್ಳದ ಪ್ರಜ್ಞೆಯನ್ನು ಕಲಾಕೃತಿ ಎಚ್ಚರಿಸಬೇಕು. ಎಚ್ಚರಿಸುವ ಶಕ್ತಿ ಅದಕ್ಕಿರಬೇಕು. ಇಂತಹ ಎಚ್ಚರದಲ್ಲಿ ಓದುವಾಗ ಮತ್ತು ಬರೆಯುವಾಗ ಸಾಮಾಜಿಕ ವ್ಯವಹಾರದಲ್ಲಿ ನಾವು ಒಪ್ಪದಂತಹ  ನಡವಳಿಕೆಗಳಿಗೆ ಕಲಾಕೃತಿಯಲ್ಲಿ ಸಮ್ಮತಿಸುತ್ತೇವೆ; ನೀತಿಯ ದೃಷ್ಟಿಯಿಂದ ನಾವು ಬಹಿಷ್ಕೃತವೆಂದು ದಿಗಿಲುಪಡುವುದಕ್ಕೂ ಅವಕಾಶಮಾಡಿಕೊಡುತ್ತೇವೆ. ಯಾವ ರೀತಿಯ ಪ್ರತಿಪಾದನೆಯಾಗಲಿ ನಮ್ಮ ಉದ್ದೇಶವಾದ್ದಲ್ಲಿ ಅದು ಧರ್ಮದ ಬಗ್ಗೆ ಇರಲಿ, ಅಧರ್ಮದ ಬಗ್ಗೆ ಇರಲಿ ಶೋಧನಾತ್ಮಕವಾಗಿ ತೊಡಗಿದ ಕಲಾಕೃತಿಯ ಸೃಷ್ಟಿಗೆ ಕಾರಣವಾಗಲಾರದು. ಸಮಾಜಬಾಹಿರ ವಾದದ್ದನ್ನು, ನೀತಿಬಾಹಿರವಾದದ್ದನ್ನು ಎತ್ತಿ ಹಿಡಿಯವುದಾಗಲಿ ಅಥವಾ ಬರೀ ಹಳಿಯುವುದಾಗಲಿ ಕಲಾಕೃತಿಯ ಉದ್ದೇಶವಾಗಲಾರದು. ಮನುಷ್ಯನ ಸಾಮಾಜಿಕ+ಆಂತರಿಕ ವ್ಯಕ್ತಿತ್ವದ ಸಂಪೂರ್ಣ ಸತ್ಯದಲ್ಲಿ ಯಾವುದಕ್ಕೂ ಕಣ್ಣು ಮುಚ್ಚದಂತೆ ತೊಡಗುವುದು ಸಾಹಿತ್ಯದ ಉದ್ದೇಶ.

‘ಈಗ, ಇಲ್ಲಿ ಯಾವ ಮಾನಸಿಕ ಸಮಾಧನವನ್ನು ಬಯಸದೆ ಎಲ್ಲದಕ್ಕೂ ಕಾಲ್ಪನಿಕವಾಗಿ ಅನುಭವಿಸುತ್ತೇನೆ, ನೋಡುತ್ತೇನೆ’ ಎಂದು ಸತ್ವಪೂರ್ಣ ಕೃತಿಯನ್ನೋದುವಾಗ ಓದುಗನಿಗೆ ಅನ್ನಿಸಬೇಕು. ಇಷ್ಟು ದೊಡ್ಡ ಆಹ್ವಾನವಾಗಬಲ್ಲ ಕೃತಿಯನ್ನು ರಚಿಸುವಾತನಿಗೆ ಸಮಾಜದಲ್ಲಿ ರೂಢವಾದ ನೀತಿ ನಿಯಮಗಳನ್ನು ಉಲ್ಲಂಘಿಸುವ ಅವಶ್ಯಕತೆ ಬಿದ್ದಲ್ಲಿ, ಈ ಅವಶ್ಯಕತೆ ಎಷ್ಟು ಆಳವಾದದ್ದು ತನ್ನಲ್ಲಿ ಎಂಬ ಕಾಳಜಿಯಿರಬೇಕು. ಈ ಕಾಲಜಿ ಪ್ರತಿಯೊಂದು ಕೃತಿಯನ್ನು ರಚಿಸುವಾಗಲೂ ಇದ್ದೇ ಇರುತ್ತದೆ. ಕೆಲವೊಂದು ವಿಷಯಗಳನ್ನು ಹೇಳಬೇಕಾಗಿ ಬಂದಾಗ ತನ್ನ ಬಗ್ಗೆ ಮತ್ತು ಪರರಲ್ಲಿ ಇದರಿಂದುಂಟಾಗುಬಹುದಾದ ಗೊಂದಲದ ಬಗ್ಗೆ ಭಯವೂ ಆಗುತ್ತದೆ; ತನಗಿಷ್ಟು ಅಧಿಕಾರವಿದೆಯೇ ಎಂಬ ಸಂದೇಹವೂ ಬರುತ್ತದೆ. ಎಲ್ಲರ ಬಗ್ಗೆ ಈ ಮಾತುಗಳು ಎಷ್ಟು ನಿಜವೊ, ಸುಳ್ಳೊ ನನ್ನ ಬಗೆಗಂತೂ ಇದು ನಿಜ: ಜೀವನದ ಬಗೆಗೆ ನನ್ನ ಪರಿಜ್ಞಾನ ಎಷ್ಟು ಖಚಿತವಾದದ್ದು ಎಂಬ ಬಗ್ಗೆ ಅನೇಕ ಸಂದೇಹಗಳಿಂದ ಪೀಡಿತನಾಗುವ ನಾನು, ಪ್ರತಿಯೊಂದು ಕೃತಿ ನಿರ್ಮಾಣದ ಪೂರ್ವದಲ್ಲೂ ನಾನು ಬರೆಯುತ್ತಿರುವುದು ನನ್ನೊಳಗಿನ ಎಷ್ಟು ಆಳದಿಂದ ಬಂದದ್ದು ಎಂಬ ಪರೀಕ್ಷೆಯಲ್ಲಿ ತೊಡಗಿರುತ್ತೇನೆ. ಪರರ ಉದ್ಧಾರಕ್ಕಾಗಿ ಬರೆಯುತ್ತೇನೆಂಬ ನಿಜವಾದ ಆತ್ಮಜ್ಞಾನದಿಂದಲೋ, ಅಥವಾ ಆತ್ಮವಂಚಿತ ಅಹಂಕಾರದಿಂದಲೋ ಬರೆಯುವ ಲೇಖಕನಿಗೂ ಈ ಪ್ರಶ್ನೆ ಏಳುವುದಿಲ್ಲ; ಜೊತೆಗೆ ಆಹ್ಲಾದದಾಯಕವಾಗುವಂತೆ ಬರೆಯಲೆಳೆಸುವ ಜನಪ್ರಿಯ ಲೇಖಕರೂ ಈ ಸಂದೇಹದ ಅವಶ್ಯಕತೆಯಿಲ್ಲ.

ಚಕ್ರಧಾರಿಗಳ ವಿಮರ್ಶೆಯ ಒಟ್ಟು ಧಾಟಿ ಮತ್ತು ಮುಂಬಯಿ ಚರ್ಚೆಯ ವರದಿಯಲ್ಲಿನ ನಿಲುವು ಈ ಕಾರಣಗಳಿಂದಾಗಿ – (ಸಂಸ್ಕಾರ ಕೃತಿಯ ಯೋಗ್ಯತೆಯ ಬಗ್ಗೆಯಲ್ಲ-ಕೃತಿಕಾರನಾಗಿ ಮತ್ತು ವಿಮರ್ಶಕನಾಗಿ ನನ್ನ ದೃಷ್ಟಿ ಯಾವುದು ಎಂಬ ಬಗ್ಗೆಯಾದ್ದರಿಂದ) – ಈ ಮೇಲಿನ ಮಾತುಗಳನ್ನು ನಾನು ಬರೆಯಬೇಕಾಯಿತು. ನನ್ನನ್ನು ಉದ್ದೇಶಿಸಿ ಮಾಡಿದ ಸೂಚನೆಯೊಂದಿಗೆ ಚಕ್ರಧಾರಿಗಳ ವಿಮರ್ಶೆ ಕೊನೆಗೊಂಡಿರುವುದು ಗಮನೀಯ.

‘ಸಂಸ್ಕಾರ’ ಕೇವಲ ವ್ಯಕ್ತಿವ್ಯಂಗ್ಯವಲ್ಲ, ಧರ್ಮ ವ್ಯಂಗ್ಯವೂ ಹಾಸುಹೊಕ್ಕಾಗಿದೆ. ಇಂತಹ ಪ್ರವೃತ್ತಿಯಿಂದ ವರ್ಗ ದೋಷಕ್ಕೆ ನಾಂದಿಯಾಗಬಹುದು. ಇದು ಸರ್ವಥಾ ಆರೋಗ್ಯವಲ್ಲವೆಂದು ಲೇಖಕರಿಗೆ ವಿನಯದಿಂದ ಸೂಚಿಸಿದರೆ ತಪ್ಪಾಗಲಾರದಷ್ಟ?’

‘ಚಕ್ರಧಾರಿ’ಗಳು ‘ವರ್ಗದೋಷ’ ಎಂಬ ಶಬ್ದವನ್ನು ಯಾವ ಅರ್ಥದಲ್ಲಿ ಬಳಸಿದ್ದಾರೆ ನನಗೆ ಗೊತ್ತಾಗಲಿಲ್ಲ. ಅವರ ಇಡೀ ಲೇಖನದ ಧಾಟಿಯಿಂದ ನನ್ನ ಉದ್ದೇಶ ‘ವರ್ಗದ್ವೇಷ’ವನ್ನು ಹೆಚ್ಚಿಸುವುದು ಎಂದು ಅವರು ತಿಳಿದಿರಬಹುದು ಎಂದು ನನ್ನ ಊಹೆ. ನನ್ನ ಕಾದಂಬರಿ ವರ್ಗ ದ್ವೇಷವನ್ನು ಹೆಚ್ಚಿಸಲಿಕ್ಕೆಂದು ಬರೆದದ್ದೊ, ಅಥವಾ ಜಟಿಲವೊ ಗಹನವೂ ಆದ ಸಮಸ್ಯೆಯೊಂದಕ್ಕೆ ಅಭಿವ್ಯಕ್ತಿ ನೀಡುವುದು ನನ್ನ ಆಶಯವೊ-ವಿಮರ್ಶಕರು ಹೇಳಬೇಕು. ಚಕ್ರಧಾರಿಗಳಿಗೆ ಮತ್ತು ಮುಂಬಯಿಯ ವಿಮರ್ಶಕರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಯಾವ ದ್ವೇಷವೂ ಇರಲಿಕ್ಕಿಲ್ಲವೆಂದು ನಾನು ತಿಳಿದಿರುವುದರಿಂದ ನನ್ನ ಕಾದಂಬರಿಯಿಂದ ಅವರಿಗೆ ನಿಜವಾಗಿ ನೋವಾಗಿದೆ ಎಂಬುದು ಖಚಿತ. ಕಲಾಕೃತಿಯೊಂದನ್ನು ಸ್ವಯಂಪೂರ್ಣ ವಸ್ತುವೆಂದು ತಿಳಿದು ಅದರ ತಂತ್ರದ ವಿಶ್ಲೇಷಣೆ ಮಾತ್ರದಲ್ಲಿ ತೊಡಗುವ ತಜ್ಞ ವಿಮರ್ಶೆಯಲ್ಲಿ ನನಗೇನೂ ಅಷ್ಟು ವಿಶ್ವಾಸವಿಲ್ಲದಿರುವುದರಿಂದ ನನ್ನ ಕಾದಂಬರಿಯಿಂದ ಈ ವಿಮರ್ಶಕರಿಗಾದ ನೋವನ್ನು, ಮತ್ತು ತತ್ಪರಿಣಾಮ ಬಂದ ಸಿಟ್ಟನ್ನು ನಾನು ಗಂಭೀರವಾಗಿಯೇ ಪರಿಶೀಲಿಸಲು ಇಚ್ಚೀಸುತ್ತೇನೆ.

ಒಂದು ಜಾತಿಯನ್ನು ಹೀಯಾಳಿಸಿ, ಈ ಜಾತಿ ನಂಬಿದ ಧರ್ಮವನ್ನು ವ್ಯಂಗ್ಯಕ್ಕೊಳಪಡಿಸುವುದು ನನ್ನ ಏಕಮಾತ್ರ ಗುರಿಯೆಂದು ಈ ವಿಮರ್ಶಕರು ತಿಳಿದಂತಿದೆ. ಬರಿಯ ವ್ಯಂಗ್ಯ ನನ್ನ ದೃಷ್ಟಿ ಸರ್ವಥಾ ಅಲ್ಲ ಎಂದು ನಾನು ತಿಳಿದಿರುವೆನಾದ್ದರಿಂದ, ಈ ಒಂದೇ ಮಾತಿನಿಂದ ನಾನು ಚಕ್ರಧಾರಿಗಳ ಆರೋಪದಿಂದ ಪಾರಾಗಿಬಿಡಬಹುದು. ಆದರೆ ಜಾತಿ ಮತ್ತು ಮತಗಳ ಬಗ್ಗೆ ಚಕ್ರಧಾರಿಯಂತಹ ವಿಮರ್ಶಕರು ತಾಳಿರುವ ಪೂಜ್ಯಭಾವಕ್ಕೂ ನನ್ನ ನಿಲುವಿಗೂ ಮೂಲಭೂತವಾದ ವ್ಯತ್ಯಾಸವಿರುವುದರಿಂದ ನಮ್ಮ ನಡುವೆ ಸುಲಭವಾದ ಒಪ್ಪಂದವೂ ಸಾಧ್ಯವಿಲ್ಲ. ವೈಯಕ್ತಿಕವೆನ್ನಬಹುದಾದ ನನ್ನ ನಿಲುವು ಅದರ ಎಲ್ಲ ಸಂದಿಗ್ಧತೆಯನ್ನೂ ಒಳಪಡಿಸಿಕೊಂಡು ನನ್ನ ಕೃತಿಯಲ್ಲಿ ಅಭಿವ್ಯಕ್ತವಾಗಿದೆಯೇ ಇಲ್ಲವೇ ಎಂಬುದು ನಮ್ಮ ಇಬ್ಬರ ನಡುವೆ ಇರುವ ಪ್ರಶ್ನೆಯಲ್ಲ. ಈಗ ಕೃತಿಯಲ್ಲಿರುವ ಸಂದಿಗ್ಧತೆ ಕಾಣಿಸಲಿ ಬಿಡಲಿ-ಜಾತಿಮತದ ಬಗ್ಗೆ ನನಗೆ ಪೂಜ್ಯ ಭಾವನೆಯಿಲ್ಲ ಎಂಬುದಂತೂ ಈ ವಿಮರ್ಶಕರಿಗೆ ಖಚಿತವಾಗಿದೆ. ಹಾಗೆಯೇ ಅವರಿಗಿರುವ ಪೂಜ್ಯಭಾವನೆ ನನಗಿಲ್ಲ ಎಂಬುದೂ ನಿಜ. ಬರಿಯ ವ್ಯಂಗ್ಯವಾಗಲಿ, ಬರಿಯ ಪೂಜ್ಯಭಾವವಾಗಲಿ ನನ್ನ ನಿಲುವಾಗಿದ್ದರೆ ಕೃತಿ ಈಗಿನ ತನ್ನ ಸ್ವರೂಪ ತಾಳುತ್ತಿರಲಿಲ್ಲವೆಂದು ನನ್ನ ನಂಬಿಕೆ.

ಕೃತಿಯಲ್ಲಿ ಜಾತಿ ಮತದ ಬಗ್ಗೆ ನನ್ನ ನಿಲುವು ಸಂದಿಗ್ಧವಾಗಿ ಅಭಿವ್ಯಕ್ತವಾಗಿದ್ದರೂ ಬುದ್ಧಿಪೂರ್ವಕವಾಗಿ ನನ್ನ ಧೋರಣೆ ಈ ವಿಷಯಗಳ ಬಗ್ಗೆ ಅತ್ಯಂತ ಖಚಿತವಾಗಿದೆ ಎಂಬುದನ್ನು ನಾನು ಮುಚ್ಚಿಸಲು ಬಯಸುವುದಿಲ್ಲ. ಚಕ್ರಧಾರಿಗಳ ಬಂದೂಕಿಗೆ ನಾನು ಮದ್ದನ್ನು ಒದಗಿಸುತ್ತಿದ್ದೇನೆಂಬುದು ನನಗೆ ತಿಳಿದಿದ್ದರೂ ನಾನು ಸ್ಪಷ್ಟವಾಗಿ ಹೇಳಬಯಸುವುದು ಇದನ್ನು : ನನ್ನ ಪಾಲಿಗೆ ಬ್ರಾಹ್ಮಣ ಧರ್ಮ ತನ್ನ ಎಲ್ಲ ಸತ್ವವನ್ನೂ ಕಳೆದುಕೊಂಡ ಪ್ರೇತ ಅಲ್ಲದೆ ಅದು ಸತ್ವಶಾಲಿಯಾಗಿದ್ದ ಕಾಲದಲ್ಲೂ ಹೀನ ಜಾತಿಯರ ಬಗ್ಗೆ ಅದು ತಾಳಿದ್ದ ನಿಲುವು ಅಪಾರ್ಥೈಡ್ ನಷ್ಟೆ ಖಂಡನಾರ್ಹ. ಮಧ್ವ, ಶಂಕರರ ಮಹತ್ವಪೂರ್ಣಸಾಧನೆಗಿಮತಲೂ ನನಗೆ ಪ್ರಿಯವಾದದ್ದು ಬುದ್ಧ. ಬಸವಣ್ಣರಂತಹ ಕ್ರಾಂತಿಕಾರಿಯ ನಿಲುವು.

ಈ ಮಾತುಗಳಿಂದ ನನ್ನ ಧೋರಣೆ ದಕ್ಷಿಣ ಭಾರತದಲ್ಲಿ ಈಚೆಗಷ್ಟೆ ಕಾಣಿಸಿಕೊಂಡಿರುವ ಬ್ರಾಹ್ಮಣ ದ್ವೇಷದಂತಿದೆ ಎಂದು ತಿಳಿಯುವುದಾದರೆ ಅದು ಸವ್ತಾ ತಪ್ಪು. ಬ್ರಾಹ್ಮಣ್ಯವನ್ನು ಪ್ರತಿಪಾದಿಸುವ ಜನ್ಮತಃ ಬ್ರಾಹ್ಮಣರಷ್ಟೇ, ಈಚೆಗೆ ಶಿಕ್ಷಿತರಾಗಿ ಮೇಲಕ್ಕೆ ಬಂದ ದಲಿತ ವರ್ಗದ ನವೀನ ಬ್ರಾಹ್ಮಣರೂ, ನನಗೆ ಖಂಡನಾರ್ಹರಾಗಿ ಕಾಣುತ್ತಾರೆ. ಒಟ್ಟಿನಲ್ಲಿ ಭಾರತದಲ್ಲಿ ಅತ್ಯಂತ ಹೇಯವಾದ ವರ್ಗದವರೆಂದರೆ ಮಧ್ಯಮ ವರ್ಗದ ಜನ. ಈ ವರ್ಗದಲ್ಲಿ ಈಗ ಪರಸ್ಪರ ಅಸೂಯೆಯಿಂದ ಹಲ್ಲು ಮಸೆಯುವ ಎಲ್ಲ ಜಾತಿಯ ಜನರೂ ಇದ್ದಾರೆ. ಜಾತಿಯ ಬಗ್ಗೆ ನಮ್ಮ ಭಾವನೆಗಳನ್ನೆಲ್ಲ ಈ ಹೊಸ ಬೆಳವಣಿಗೆ ಸಂದಿಗ್ಧಗೊಳಿಸುತ್ತದೆ.

*

ಸಂಸ್ಕಾರದ ಬಗ್ಗೆ ಬಂದ ಒಂದು ವಿಮರ್ಶಾ ಲೇಖನದ ಕೊನೆಯ ಮಾತುಗಳು ಇವು :

‘ಸಂಸ್ಕಾರ’ ಕೇವಲ ವ್ಯಕ್ತಿಗತ ವ್ಯಂಗ್ಯವಲ್ಲ, ಧರ್ಮ ವ್ಯಂಗ್ಯವೂ ಹಾಸು ಹೊಕ್ಕಾಗಿದೆ. ಇಂತಹ ಪ್ರವೃತ್ತಿಯಿಂದ ವರ್ಗದೋಷಕ್ಕೆ ನಾಂದಿಯಾಗಬಹುದು. ಇದು ಸರ್ವಥಾ ಆರೋಗ್ಯವಲ್ಲವೆಂದು ಲೇಖಕರಿಗೆ ವಿನಯದಿಂದ ಸೂಚಿಸಿದರೆ ತಪ್ಪಾಗಲಾರದಷ್ಟೆ. ಕಟ್ಟಕಡೆಯ ಮಾತು ನನ್ನನ್ನು ಉದ್ದೇಶಿಸಿಯೇ ಬರೆದದ್ದಾದ್ದರಿಂದ ನಾನು ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದು ಸರಿ; ವಿಮರ್ಶಕರಾದ ‘ಚಕ್ರಧಾರಿ’ ನನ್ನಿಂದ ಪ್ರತಿಕ್ರಿಯೆಯನ್ನು ಅಪೇಕ್ಷಿಸಿಯೇ ಸಭ್ಯನುಡಿಯಲ್ಲಿ ನನಗೆ ಕೊನೆಯ ಸವಾಲನ್ನೆಸೆದರು ಎಂದು ನಂಬಿದ್ದೇನೆ. ಆದರೆ ಕಾದಂಬರಿ ಕಲಾಕೃತಿಯಾಗಿ ಯಶಸ್ವಿಯಾಯಿತೇ ಇಲ್ಲವೇ ಎನ್ನುವ ಬಗ್ಗೆ ಚಕ್ರಧಾರಿ ಆಡಿರುವ ಮಾತುಗಳ ಬಗ್ಗೆ ನಾನು ಸಂಪೂರ್ಣ ಮೌನತಾಳಲು ಆಶಿಸುತ್ತೇನೆ. ಏಕೆಂದರೆ ಇದು ವಿಮರ್ಶಕರಿಗೆ ಬಿಟ್ಟ ವಿಷಯ.  ಕೃತಿ ಓದುಗರ ಮುಂದಿದೆ. ಕೃತಿಯ ಬಗ್ಗೆ ನನ್ನದೇ ಆದ ಅಭಿಪ್ರಾಯಗಳಿದ್ದರೂ ಓದುಗನೊಬ್ಬ ನನ್ನ ಆಶಯಗಳನ್ನು ನನ್ನ ಕೃತಿಯ ಬಗ್ಗೆ ನನ್ನದೇ ಆದ ಅಭಿಪ್ರಾಯಗಲಿದ್ದರೂ ಓದುಗನೊಬ್ಬ ನನ್ನ ಆಶಯಗಳನ್ನು ನನ್ನ ಕೃತಿಯಲ್ಲಿ ಕಂಡೇ ತೀರಬೇಕೆಂಬ ನಿಯಮವೂ ಇಲ್ಲ; ಕಂಡೇ ಕಾಣುವನೆಂಬ ಮೂರ್ಖ ನಂಬಿಕೆಯೂ ನನಗಿಲ್ಲ. ಶ್ರೀ ‘ಚಕ್ರಧಾರಿ’ ಕಾದಂಬರಿಯನ್ನು ಓದಿದ ರಿತಿಯಲ್ಲಲ್ಲದೆ ಬೇರೆ ರೀತಿಯಲ್ಲೂ ಓದಿದವರು ಇದ್ದಾರೆಂಬುದು ನನಗೆ ಗೊತ್ತಿರುವುದರಿಂದ ನನಗಂತಹ ವ್ಯಥೆಯೂ ಆಗಲಿಲ್ಲ ಅವರ ಲೇಖನವನ್ನು ಓದಿ.

ಶ್ರೀ ಚಕ್ರಧಾರಿಗಳ ಇಡೀ ಲೇಖನದ ಧಾಟಿ, ಆ ಧಾಟಿಯ ಹಿಂದೆ ಅಡಗಿದ, ಅವರಿಗಾದ ನೋವು ನನ್ನಿಂದ ಈ ಮಾತುಗಳನ್ನು ಬರೆಸತೊಡಗಿದೆ. ‘ಸಂಸ್ಕಾರ’ದ ಬಗ್ಗೆ ಮುಂಬಯಿಯಲ್ಲಿ ನಡೆದ ಒಂದು ಚರ್ಚೆಯ ವರದಿಯನ್ನು ೧೩.೩.೧೯೬೭ನೇ ಸಂಯುಕ್ತ ಕರ್ನಾಟಕದಲ್ಲಿ ಓದಿದಾಗಲೂ ಈ ನೋವಿನ ಮತ್ತು ನೋವಿನಿಂದ ಉಂಟಾಗುವ ಕೋಪದ ಪರಿಚಯ ನನಗಾಯಿತು. ನನ್ನ ಕೃತಿಯಿಂದ ಈ ಮಹನೀಯರಿಗೆಲ್ಲ ನೋವಾಗಿದೆ ಎಂಬುದು ದಿಟ. ಈ ನೋವಿನಿಂದ ಕೆಲವರಿಗೆ ನನ್ನ ಬಗ್ಗೆ ಕೋಪ ಉಕ್ಕಿದೆ ಎಂಬುದೂ ದಿಟ. ಸಂಸ್ಕಾರ ಅನುದ್ದಿಶ್ಯವಾದ ಕಲಾಕೃತಿ, ಇಂತಹ ನೋವಿಗೆ ನನ್ನ ಕೃತಿಯಲ್ಲಿ ಎಳ್ಳಷ್ಟು ಅವಕಾಶವಿಲ್ಲವೆಂಬ ಸಮಾಧಾನದ ಜಾರು ಮಾತನ್ನಾಡಿ ತಪ್ಪಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಒಂದು ಗಂಭೀರವಾದ ಪ್ರಶ್ನೆಯನ್ನು ಅದರ ಸಮಸ್ತ ಸಂದಿಗ್ಧತೆಯಲ್ಲೂ ಪರೀಕ್ಷಿಸಿ ಒಡಮೂಡಿಸುವುದು ಕಲಾಕೃತಿಯೊಂದರ ಉದ್ದಿಶ್ಯವೆಂದು ನಾವು ಒಪ್ಪಿಕೊಳ್ಳುವುದಾದರೆ, ‘ಸಂಸ್ಕಾರ’ ಬರೆಯುವಾಗ ನನ್ನ ಉದ್ದೇಶ ಬರಿಯ ‘ಧರ್ಮವ್ಯಂಗ್ಯ’ವಾಗಿರಲಿಲ್ಲ ಎಂದು ಹೇಳ ಬಯಸುತ್ತೇನೆ. ಆದರೆ ಹೀಗೆ ನಾನು ಹೇಳುವುದು ಚಕ್ರಧಾರಿಗಳಿಗೆ ಸಮಾಧಾನವಾಗಲಿ ಎಂದಲ್ಲ – ನನಗೂ ಸಾಹಿತ್ಯಕ್ಕೂ ಇರುವ ಸಂಬಂಧ ಎಂತಹದು ಎಂಬುದನ್ನು ಸ್ಪಷ್ಟಪಡಿಸಲಿಕ್ಕೆ.

ಈ ಕೃತಿಯನ್ನು ನಿರ್ಮಾಣ ಮಾಡುವ ಘಳಿಗೆಯಲ್ಲಿ ಸಂಪೂರ್ಣವಾಗಿ ಕೃತಿಯಲ್ಲಿ ತೊಡಗಲು ಬಯಸುವ ಸ್ವಭಾವ ನನ್ನದಾದ್ದರಿಂದ ಸಾಮಾನ್ಯವೂ ಸುಲಭವೂ ಆದ ವ್ಯಂಗ್ಯದಿಂದ ನಾನು ತೃಪ್ತನಾಗಲಾರೆ. ಯಾವ ವಿಷಯದ ಬಗ್ಗೆಯಾದರೂ ನನ್ನಲ್ಲೇ ಒಂದು ವ್ಯಂಗ್ಯಭಾವವಿದ್ದರೆ ಆ ವ್ಯಂಗ್ಯಭಾವ ಕೂಡ ಕೃತಿಯಲ್ಲಿ ಒಳಗಾಗಬೇಕು ಎಂಬುದು ನನ್ನ ನಿಲುವು.

*

(ಸಂಸ್ಕಾರಕುರಿತ ೧೩..೧೯೬೭ರ ಸಂಯುಕ್ತ ಕರ್ನಾಟಕದಲ್ಲಿ ಬಂದ ವರದಿಗೆ ನನ್ನ ದಿನಚರಿಯಲ್ಲಿ ಬರೆದಿಟ್ಟುಕೊಂಡ ಪ್ರತಿಸ್ಪಂದನೆ. ಇದು ಅಪ್ರಕಟಿತವಾಗಿದ್ದು ಈಗ ಪ್ರಕಟವಾಗುತ್ತಿದೆ. ಇದರಲ್ಲಿನ ಪುನರುಕ್ತಿಯ ದೋಷವನ್ನು ತಿದ್ದದೆ ಉಳಿಸಿಕೊಂಡಿದ್ದೇನೆ. ಜಾತಿ ಹುಟ್ಟಿಸುವ ತಾರತಮ್ಯಗಳನ್ನು ಟೀಕಿಸುತ್ತಲೇ, ಜಾತಿಯೊಳಗೆ ಬದುಕುವರರ, ಅನಿವಾರ್ಯವಾಗಿ ಬದುಕಬೇಕಾದವರ ಬಗ್ಗೆ ಸಹಾನುಭೂತಿಯಿಂದ ಎನ್ನಿಸುವಂತೆ ಆಮೇಲಿಂದ ನನ್ನಲ್ಲಿ ಹುಟ್ಟಿದ ಭಾವನೆಗಳು ಲೇಖನದ ನಿರಾಕರಣೆಯಲ್ಲವೆಂದು ನಾನು ತಿಳಿದಿದ್ದೇನೆ).