ವೇಗವಾಗಿ ಓದುವವರು ಪ್ರಾಯಶಃ ಉದಾರವಾಗಿ ಪ್ರತಿಕ್ರಿಯಿಸುತ್ತಾರೆ; ತಾವು ಓದಿದ್ದರಲ್ಲಿ ತಂಗಿ ನಿಂತು ತಮಗಾದ ಲಾಬವನ್ನು ಎಣಿಸುವ ಜುಗ್ಗರಲ್ಲ ಅವರು. ಇದು ನನ್ನ ಊಹೆಯಿರಬಹುದೆನೊ?

ಅಪಾರವಾದ ಓದಿನಿಂದ ಸಂಸ್ಕಾರಗೊಂಡ ತುಂಬು ಹೃದಯದ ತ.ಸು. ಶಾಮರಾಯರು ಒಮ್ಮೆ ವಾಕಿಂಗ್ ಹೋಗುವಾಗ ಮೈಸೂರಲ್ಲಿ ನನ್ನನ್ನು ನಿಲ್ಲಿಸಿ ತಾವು ಹಿಡಿದ ಕೋಲಿನ ಮೇಲೆ ಊರಿ ನಿಂತು ಮುಗುಳ್ನಗುತ್ತಾ ಹೇಳಿದ್ದು ನೆನಪಾಗುತ್ತದೆ; ‘ನಾನು ಹಳೆಯ ಕಾಲದವನು, ಸತ್ಯಣಾಭ್ಯವಹಾರಿ. ಹುಲ್ಲು ಕೂಡ ನನಗೆ ರಸವೇ. ನೀವು ಅರೋಪಿಗಳು. ಯಾವುದೂ ಸುಲಭವಾಗಿ ನಿಮಗೆ ರುಚಿಸುವುದಿಲ್ಲ’. ಅವರ ಮಾತಿನಲ್ಲಿ ಹಾಸ್ಯವೂ ಇತ್ತು. ನನ್ನನ್ನು ತಿದ್ದುವ ವಿನಯದ ಮೆಚ್ಚುಗೆಯೂ ಇತ್ತು.

ಆ ದಿನಗಳಲ್ಲಿ ನಾನು ಅಡಿಗರ ಅತ್ಯುತ್ತಮ ಪದ್ಯಗಳನ್ನು ಮಾತ್ರ ಬಹುವಾಗಿ ಮೆಚ್ಚುತ್ತಾ ಅವರ ‘ಭೂಮಿಗೀತೆ’ ಪದ್ಯವನ್ನು ರೇಡಿಯೋ ಭಾಷಣದ ಧಾಟಿಯಲ್ಲಿ ಗ್ರಾಂಥಿಕ ಗಂಧವಿದೆ ಎಂದು ಗೊಣಗಿದ್ದೆ. ‘ಅರಳು-ಮರಳು’ ಸಂಗ್ರಹಕ್ಕಿಂತ ಹಿಂದಿನ ಬೇಂದ್ರೆ ಮಾತ್ರ ಶ್ರೇಷ್ಠ ಕವಿ ಎನ್ನುವ ಉದ್ಧಟತನ ತೋರಿದ್ದೆ. ಮೈಸೂರು ಯುನಿವರ್ಸಿಟಿ ಕ್ಯಾಂಟಿನಲ್ಲಿ ಕಾಫಿ ಕುಡಿಯುತ್ತಾ ಸರಸವಾಗಿ ಹರಟುತ್ತಾ ಕೂತಾಗ ನನ್ನ ಜೊತೆಯಲ್ಲಿದ್ದ ಪು.ತಿ.ನ ಅವರು ಒಮ್ಮೆ ‘ನೀವೆಲ್ಲ ಬಿ.ಎಂ.ಶ್ರೀ. ಕನ್ನಡ ಪಂಥದವರಪ್ಪ; ನಾನು ಹಿರಿಯಣ್ಣನವರ ಸಂಸ್ಕೃತ ಪಂಥದವನು. ಸಂಸ್ಕೃತದ ಗುಣವನ್ನು ಲಯಗಳನ್ನು ಕನ್ನಡಕ್ಕೆ ತರಲು ಪ್ರಯತ್ನಿಸುವ ನಾನು ನಿಮಗೆ ಇಷ್ಟವಾಗುವುದಿಲ್ಲ’ ಎಂದಿದ್ದರು. ಸ್ವಲ್ಪ ಕಾಲ ಕಣ್ಣುಮುಚ್ಚಿ ಧ್ಯಾನಸ್ಥರಾಗಿ ಕುಳಿತು ತನ್ನೊಂದು ಪದ್ಯವನ್ನು ನೆನಪು ಮಾಡಿಕೊಂಡು, ಅದರ ಮೊದಲ ಸಾಲುಗಳನ್ನು ನುಡಿದು ಏನಪ್ಪ ಇಬ್ಬನಿ ಬಿದ್ದ ಗರಿಕೆ ಮೇಲೆ ರೋಡ್‌ರೋಲರ್‌ ಹೋದಂತೆ ನಿಮಗನ್ನಿಸುತ್ತದೆಯೇ?’ ಎಂದು ಅಪಾರ ವಿನಯದಲ್ಲಿ ನಕ್ಕು ನನಗೆ ನಾಚಿಕೆಯಾಗುವಂತೆ ಮಾಡಿದ್ದರು. ಪು.ತಿ.ನ. ಹಾಗೆ ಬರೆಯದಿದ್ದರೆ ಕನ್ನಡ ಕಾವ್ಯಲೋಕ ತನಗೆ ಸಾಧ್ಯವಾದ ವಿಸ್ತಾರವನ್ನು, ಆಲವನ್ನು ಪಡೆಯುತ್ತಾ ಇರಲಿಲ್ಲವೆಂಬ ವಿವೇಕ ಆ ಹೊತ್ತಿಗಾಗಲೇ ನನಗೆ ಮೂಡಲು ತೊಡಗಿತ್ತು.

ಕೊಂಚ ಅವಿವೇಕವೆನ್ನಿಸುವ ಓದಿನಲ್ಲಿ ತೀವ್ರತೆಯಿರುತ್ತದೆ; ಬದಲಾಗಿ ಅತಿಯಾದ ವಿವೇಕದ ಓದು ‘ಜಾಣ’ವಾಗುತ್ತಾ ಹೋಗುತ್ತದೆ. ಇದೊಂದು ಓದಿನಲ್ಲೇ ಇರುವ ವಿಪರ್ಯಾಸ. ವೈಯಕ್ತಿಕ ತುರ್ತಿನಲ್ಲಿ ಹಚ್ಚಿಕೊಂಡು ಓದಿದ್ದು ತನ್ನ ಅತಿಯಲ್ಲಿ ಈವರೆಗೆ ಕಣದ ಬಾಗಿಲುಗಳನ್ನು ತೆರೆಯಬಲ್ಲುದು. ಈ ‘ಅತಿ’ ಯಿಂದ ಸಾಹಿತ್ಯಕ್ಕೆ ಬಾಧೆಯಾಗಲಾರದು. ಯಾಕೆಂದರೆ ಈ ಅತಿಗಳನ್ನು ತಿದ್ದುವ ಹಲವು ಇತರ ದೃಷ್ಟಿಕೋನಗಳೂ ಆ ಕಾಲದಲ್ಲೇ ಜಾಗೃತವಾಗಿರುತ್ತವೆ. ಆದ್ದರಿಂದ ವಿಮರ್ಶೆಯೆಂದರೆ ‘ಸಂವಾದ’ವಾಗಿ ಒಂದನ್ನೊಂದು ತುಂಬುವ ತಿದ್ದುವ ಕ್ರಿಯೆಯಾಗುತ್ತದೆ.

ಓದುಗನ ಕಡೆ ಮುಖ ಮಾಡಿದ ಜಾಗರೂಕತೆಯ ಶಿಷ್ಟತನದಲ್ಲಿ ಕಾವ್ಯ ಮಾತಾಡಿದಾಗ ಈಗಲೂ ನಾನು ಅದಕ್ಕೆ ತೆರೆದುಕೊಳ್ಳಲು ಹಿಂಜರಿಯುತ್ತೇನೆ. ಅಡಿಗರು ‘ಅಂಬೇಡ್ಕೆರ್‌’ ಬಗ್ಗೆ ಬರೆದೊಂದು ಪದ್ಯ ನನಗೆ ಇಷ್ಟವಾಗಲೇ ಇಲ್ಲ. ನಮ್ಮನ್ನು ಸೆಳೆಯುವಂತೆ ಇಲ್ಲಿ ಅಡಿಗರು ಕೊಂಚ ಸಂಸ್ಕೃತ ಭೂಯಿಸ್ಟವಾದ ವಾಗ್ಝರಿ ಹರಿಸುತ್ತ ವಾದಿಸುತ್ತಾರೆ ಎಂದು ನನಗನ್ನಿಸುತ್ತದೆ. ಆದರೆ ಈ ಬಗೆಯ ಮಾತುಗಾರಿಕೆಯ ಉತ್ಸಾಹ ಕುವೆಂಪು ಅವರಲ್ಲೂ ಯಥೇಚ್ಛವಾಗಿ ಇದೆ. ನಾವೆಲ್ಲರೂ ನಂಬುವುದನ್ನೇ ಉತ್ಸಾಹದಲ್ಲಿ ಕವಿ ಮಾತನಾಡುವುದು ಒಂದು ಬಗೆ; ಆದರೆ ತನ್ನ ದೃಷ್ಟಿಕೋನಕ್ಕೆ ನಮ್ಮನ್ನು ಹುರಿದುಂಬಿಸುವ ಉಪಾಯದ ಉತ್ಸಾಹ ಇನ್ನೊಂದು ಬಗೆ. ಭಾರತ ವಿಭಜನೆಯಾದಾಗ ರಾಜಾಜಿಯಂತೆ ಅಂಬೇಡ್ಕರ‍‍ ಕೂಡ ಮತದಾರರ ‘Transfer of Population’ ನನ್ನು ಬೆಂಬಲಿಸಿದ್ದು ಎಷ್ಟು ವಿವೇಕವಾದ್ದು ಎನ್ನುವುದನ್ನು ಹೇಳಲು ಅಡಿಗರು ಪದ್ಯದ ಕಟ್ಟಡವನ್ನೇ ಆಧಾರ ಮಾಡಿಕೊಂಡಿದ್ದಾರೆ. ಇದನ್ನು ಓದುಗ ಒಪ್ಪುವನೋ ಇಲ್ಲವೋ ಎಂಬುದೇ ಇಂಥ ಪದ್ಯಗಳಲ್ಲಿ ಮುಖ್ಯವಾಗಿಬಿಡಬಹುದು.

ಕುವೆಂಪು ಅವರ ‘ಉತ್ಸಾಹ’, ಬೇಂದ್ರೆಯ ‘ಬೆರಗು’ ಮತ್ತು ಅಡಿಗರ ಉತ್ತಮ ಕವನಗಳನ್ನು (ಉದಾ : ಕೂಪಮಂಡೂಕ) ಕಾಣುವ ದುಃಖ ನಮ್ಮನ್ನು ಆಳವಾಗಿ ಕಾಡುತ್ತವೆ. ಸಿಡ್ನಿ ಎಂಬ ಪೂರ್ವ ಕಾಲದ ಇಂಗ್ಲಿಷ್ ಲೇಖಕ ಕಾವ್ಯದ ಪರವಾಗಿ ಆಡಿದ್ದು ನೆನಪಾಗುತ್ತದೆ. ‘poetry lieth not, for it assenteth not’  ಅಂದರೆ ‘ಕಾವ್ಯ ಸುಳ್ಳು ಹೇಳುವುದಿಲ್ಲ ; ಯಾಕೆಂದರೆ ಅದು ಏನನ್ನೂ ಸಮರ್ಥಿಸಲು ಹೋಗುವುದಿಲ್ಲ’. ತತ್ವಶಾಸ್ತ್ರ, ನೀತಿಶಾಸ್ತ್ರ ಮತಧರ್ಮಕ್ಕೆ ಸಂಬಂಧಿಸಿದ ಶಾಸ್ತ್ರಗಳು ಇವೆಲ್ಲಕ್ಕಿಂತ ಕಾವ್ಯ ಭಿನ್ನವಾದ್ದು, ಈ ದೃಷ್ಟಿಯಿಂದ.

*

ಅದೆಷ್ಟೋ ವರ್ಷಗಳಿಂದ ನಾನು ಓದಿಕೊಂಡು ಬಂದಿರುವ ಸುಬ್ರಾಯ ಚೊಕ್ಕಾಡಿ ಬಗ್ಗೆ ಇಷ್ಟು ತಡವಾಗಿ ನಾನೇಕೆ ಬರೆಯುತ್ತಿದ್ದೇನೆಂಬುದಕ್ಕೆ ನನ್ನ ವಿಮರ್ಶೆಯ ಉಬ್ಬರದ ಕಾಲವನ್ನು ನಿರ್ವಚಿಸಿದ್ದೇನೆ. ನಾನೊಂದು ಪತ್ರಿಕೆಯನ್ನೋ, ಮ್ಯಾಗಜಿನನ್ನೋ ತಿರುವಿ ಹಾಕುವಾಗ ನಾನು ಮೊದಲು ಓದುವುದು ಅದರಲ್ಲಿ ಪ್ರಕಟವಾದ ಪದ್ಯವನ್ನು. ಒಳ್ಳೆ ಪದ್ಯಗಳಿಂದ ಆಗುವ ಹಿಗ್ಗು ನನಗೆ ಅಗತ್ಯ. ಲಯದಲ್ಲಿ, ಲಯಕಟ್ಟುವ ಚಿತ್ರಗಳಲ್ಲಿ, ಅಂದರೆ ಪದ್ಯ ಮಾತನಾಡುವ ಬಗೆಯಲ್ಲಿ ಕೊಂಚವಾದರೂ ಸೊಗಸಿದೆ ಎನಿಸಿದರೆ ನಾನು ಹಿಗ್ಗುತ್ತೇನೆ. ಪದ್ಯವನ್ನು ನೆನಪಿನಲ್ಲಿಟ್ಟುಕೊಳ್ಳುವಷ್ಟು ಮೆಚ್ಚದಿದ್ದರೂ ಹಿಗ್ಗುತ್ತೇನೆ. ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವೂ ನನಗೆ ಕಳಪೆ ಎನ್ನಿಸಿದ್ದಿಲ್ಲ. ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಈ ಮತ್ತೇ ಅವರ ಕೆಲವು ಪದ್ಯಗಳನ್ನು ಓದುತ್ತಾ ನನ್ನ ಮನಸ್ಸಿಗೆ ಹೊಳೆದುದನ್ನು ಹೊಳೆದಂತೆ ಮೂಡಿಸಲು ಯತ್ನಿಸುತ್ತೇನೆ. ನಾನು ಆಡುವ ಮಾತು ಕೊನೆಯ ಮಾತು ಎನ್ನಿಸುವ ಅಹಂಕಾರವಾಗಬಾರದೆಂದು ಕೆಲವು ಪದ್ಯಗಳಿಗೆ ನನ್ನ ಸ್ಪಂದನವನ್ನು ಮಾತ್ರ ಸೂಚಿಸುತ್ತೇನೆ.

*

‘ಇನ್ನೊಂದು ಬೆಳಗು’ ೧೯೯೬ರ ನಂತರ ಅವರು ಬರೆದ ಕವನಗಳ ಸಂಗ್ರಹ ನನ್ನ ಎದುರಿಗಿದೆ.

೧) ‘ಬಿತ್ತಿ ಬೆಳೆದದ್ದು’, ‘ಈ ನೆಲವ ಹಸುರಾಗಿಸುವ ಧ್ಯಾನದಲ್ಲಿ’ ಅವಧೂತನಂತಹ ಈ ಫಕೀರ ಯಾತ್ರೆ ಹೊರಟಿದ್ದಾನೆ’, ‘ನೆಲವ ಹಸುರಾಗಿಸುವ’ ಎನ್ನುವ ಪದ ಸಂಯೋಜನೆ ನನಗೆ ಹಿತವೆನ್ನಿಸುವುದಿಲ್ಲ. (ಯಾಕೆ?) ಆದರೆ ಮುಂದಿನ ಈ ಸಾಲುಗಳು ನನ್ನನ್ನು ಹಿಗ್ಗಿಸುತ್ತವೆ :

ಬಿತ್ತುತ್ತ ಹೋದ ಹೋದಲ್ಲೆಲ್ಲ ಧ್ಯಾನಗಳ
ನಿರಪೇಕ್ಷ ಭಾವದಲ್ಲಿ
ಗಂಟು ಬರಿದಾಯಿತು, ನಾಡು ಕಿರಿದಾಯಿತು
ಈ ಇವನ ಅಲೆತದಲ್ಲಿ

ಇವನ ಅಲೆತದಲ್ಲಿ ‘ನಾಡು ಕಿರಿದಾಯಿತು’ ಎನ್ನುವ ಮಾತು ಪದ್ಯದಲ್ಲಿ ಹುದುಗಿದ ಎಲ್ಲ ಅರ್ಥವನ್ನು ‘ಹೊಳೆಯಿಸುತ್ತದೆ’ ಮುಂದೆ ಇಡೀ ಪದ್ಯ ಗಾಂಧಿಪಂಥದವರನ್ನು ನೆನಪು ಮಾಡಿ, ನನಗೆ ಗೊತ್ತಿರುವುದನ್ನೇ ನನಗೆ ಮತ್ತೇ ಹಿತವಾಗುವಂತೆ ಹೇಳುತ್ತದೆ.

ಇನ್ನೊಂದು ಪದ್ಯ ‘ಇರುಳ ಸದ್ದುಗಳು’ ಕೇಳಿಸಿಕೊಳ್ಳುತ್ತಿದ್ದಂತೆಯೇ ಇಷ್ಟವಾಗುವ ಪದ್ಯ. ಕವಿ ಖುದ್ದು ಕೇಳಿಸಿಕೊಂಡಂತೆ ಇರುಳ ಸದ್ದುಗಳನ್ನು ಮೂಡಿಸುತ್ತಾರೆ. ಚೊಕ್ಕಾಡಿ ಮುಖ್ಯವಾಗಿ ಧ್ಯಾನಶೀಲ ಮನಸ್ಸಿನ ಕವಿ ಎನ್ನಿಸುತ್ತದೆ. ಸೂಕ್ಷ್ಮವಾಗಿ, ಎಚ್ಚರವಾಗಿ ಗಮನಿಸುತ್ತ  ಹೋಗುವ ಸದ್ದುಗಳು ಗಮನದ ಎಚ್ಚರವನ್ನು, ತಾನು ಗಮನಿಸುತ್ತಿದ್ದೇನೆ ಎನ್ನುವ ಸ್ವಮನಸ್ಕತೆಯನ್ನು ಮೀರುವುದು ಇಲ್ಲಿ ಮುಖ್ಯ.

ಹೀಗೆ ಈ ನಡುರಾತ್ರಿಯ ನಿಶ್ಯಬ್ದದಲ್ಲೂ
ತೆರೆದ ಪಂಚೇಂದ್ರೀಯಗಳಿಗೆ
ಎಚ್ಚರವಾಗಿಯೇ ಉಳಿದ ಮನಸ್ಸಿಗೆ
ಮುಗಿಬೀಳುವ ಸದ್ದುಗಳ ಗುದ್ದು

ಹೀಗೆ ಮುಗಿಬೀಳುವ ಸದ್ದುಗಳ ಗುದ್ದು ನಿದ್ದೆಯನ್ನು ಕೆಡಿಸುತ್ತದೆ. ಹೀಗಾದ ನಂತರ ಕವಿ ಕಾಯುವುದು, ಕಾತುರದಲ್ಲಿ/ಮೌನದಲ್ಲಿ ಕಣ್ಬಿಡುವ ಹೊಸ ಹಗಲಿಗಾಗಿ-ಚೊಕ್ಕಾಡಿಗೆ ಕವನ ರಚನೆಯ ಕಸಬುಗಾರಿಕೆ ತನ್ನನ್ನು ನೋಡಿಕೊಳ್ಳುತ್ತ ತೋಡಿಕೊಳ್ಳುವ ಕಲೆ ಸಾಧಿಸಿದೆ ಎಂಬುದನ್ನು ಇಂತಹ ಕಡೆಗಳಲ್ಲಿ ನಾವು ಮೆಚ್ಚುತ್ತ ಓದಿಕೊಳ್ಳುತ್ತೇವೆ.

ಮುಂದಿನ ಪದ್ಯ ‘ಆ ಹಕ್ಕಿ’. ಆ ಹಕ್ಕಿಯ ರೆಕ್ಕೆಗಳಿದ್ದವು ಆ ಪರ್ವತಕ್ಕೆ ಆದರೆ ಋಷಿ ಕತ್ತರಿಸುತ್ತಾನೆ ರೆಕ್ಕೆಯನ್ನು. ಈಗ ಒಮದು ಚಿಕ್ಕಿಲಿಯೂ ಪರ್ವತದ ಉದರವನ್ನು ಕೊರೆಯಬಲ್ಲದು. ಆ ಹಕ್ಕಿಯ ಕೊಕ್ಕು ಇದ್ದ ಮರವೊಂದನ್ನು ಬಾನು ಕುಟುಕುತ್ತದೆ. ಆ ಹಕ್ಕಿಯ ಹಗುರದ ದೇಹವಿದ್ದ ಬಂಡೆಯನ್ನು ಶ್ರೀರಾಮ ಎತ್ತಿಹಾಕುತ್ತಾನೆ. ಆ ಹಕ್ಕಿಯ ಎತ್ತಿದ ಕತ್ತಿನ ಅಹಂಕಾರದ ಮನುಷ್ಯನನ್ನು ಇಂದ್ರ ಗೋಣು ಮುರಿದು ನಾಶ ಮಾಡುತ್ತಾನೆ.

ಹೀಗೆ ಪರ್ವತ, ಮರ, ಬಂಡೆ, ಮನುಷ್ಯ ಎಲ್ಲವೂ ಹಕ್ಕಿಯ ಒಂದೊಂದು ಗುಣವನ್ನು ಅಧಿಕಗೊಳಿಸಿಕೊಂಡು ಹೆಮ್ಮೆಯಿಂದ ಬೀಗಿ ಅಹಂಕಾರ ಭಂಗವಾಗಿ ನಾಸವಾಗುತ್ತದೆ. ಆದರೆ ತನ್ನ ಯಾವ ಗುಣವನ್ನು ಅತಿಗೊಳಿಸಿಕೊಳ್ಳದ ಸಹಜತೆಯ ಹಕ್ಕಿ ಮಾತ್ರ ಹಕ್ಕಿಯಾಗಿಯೇ ಉಳಿಯುತ್ತದೆ.

ಆ ಹಕ್ಕಿ ಮಾತ್ರ ಇದೆಲ್ಲವನ್ನೂ ನೋಡುತ್ತಲೇ
ಹಾರುತ್ತದೆ ನೀಲಿ ಆಕಾಶದಲ್ಲಿ
ಚಲಿಸುತ್ತದೆ ಜಿಗಿಜಿಗಿಯುತ ನೀರಿನಲ್ಲಿ
ನಡೆಯುತ್ತದೆ ತಲೆಯೆತ್ತಿ ಈ ನೆಲದಲ್ಲಿ
ಎಂದಿನಂತೆ…..

‘ಹಕ್ಕಿ’ ಹೇಗೆ ನಮ್ಮ ಧ್ಯಾನದ ಪ್ರತಿಮೆಯಾಗಿ ನಾವು ಕೊಡುವ ಅರ್ಥಗಳನ್ನು ಪಡೆಯಬಲ್ಲುದಾಗುತ್ತದೆ. ನವ್ಯಕಾವ್ಯದ ಸಾರ್ಥಕ ಪದ್ಯಗಳಲ್ಲಿ ಕಾಣುವ ಗುಣವಿದು.

ಮುಂದಿನ ಪದ್ಯ ‘ಹಣ್ಣು ಮತ್ತು ಚೂರಿ’ ತನ್ನ ಅರ್ಥವನ್ನು ಬಚ್ಚಿಡದಂತೆ, ಆದರೆ ಸೂಕ್ಷ್ಮವಾಗುವಂತೆ ಹೇಳುವ ಪದ್ಯ. ಆದರೆ ಈ ಪದ್ಯದ ಹಿಂದಿರುವ ವೈಚಾರಿಕತೆ ಪಡೆಯುವ ತಿರುವು ಈ ಕವಿಗೆ ಮಾತ್ರ ಹೊಳೆಯುವಂತಹದು. ಚೂರಿ ಮತ್ತು ಹೆಣ್ಣು ಎರಡೂ ಹಣ್ಣಿನ ಫಲಗಳು. ಆದರೆ ಚೂರಿ ಬಳಸಿ ಹಣ್ಣು ಮತ್ತರಿಸುವ ಮನುಷ್ಯನೂ ಮಣ್ಣಿನ ಫಲವೇ. ಮಣ್ಣಿನ ಗುಣ ಹೇಗೆ ಈ ಮೂರು ಫಲಗಳಲ್ಲಿ ವಿಚಿತ್ರವಾಗಿ ವ್ಯತಿರಿಕ್ತವಾಗುತ್ತದೆ ಎಂಬುದು ಪದ್ಯದ ಉದಾಹರಣಾ ರೂಪಣದ ಸಂಕೇತಕ್ಕೆ ಮಾತ್ರ ಸೀಮಿತವಲ್ಲ.

ಚೊಕ್ಕಾಡಿಯವರ ಕಾವ್ಯದ ಸತ್ವ ಕಾಣಿಸಿಕೊಳ್ಳುವುದು ಅವರ ವೈಚಾರಿಕತೆ ತನ್ನ ಪರಿಧಿಯನ್ನು ಓದುಗರ ಮನಸ್ಸಿನಲ್ಲಿ ವಿಸ್ತರಿಸಿಕೊಳ್ಳುವಂತೆ ಮೂಡಿಸುವ ಪ್ರತಿಮೆಗಳಲ್ಲಿ, ಅಥವಾ ಸಂಕೇತಗಳಲ್ಲಿ. ದೃಷ್ಟಾಂತಗಳಂತೆ ಅವು ಪದ್ಯದಲ್ಲಿ ಬರುತ್ತವೆ. ‘ಮೀನಿನ ಹೆಜ್ಜೆ’ ಅಂತಹ ಒಂದು ಪದ್ಯ. ಪ್ರತಿಯೊಂದು ಶಬ್ದವೂ ಎಚ್ಚರದಲ್ಲಿ ಪದ್ಯದ ಒಳಗನ್ನು ಬೆಳಗಿಸುವಂತೆ ಇದೆ. ಮೀನಿಗೂ, ನೀರಿಗೂ ಇರುವ ನಂಟು ನಮ್ಮ ಕಣ್ಣಿಗೆ ಕಟ್ಟುವಂತೆ ಮೂಡಿದಾಗ ಇದೊಂದು ದೃಷ್ಟಾಂತ ಮಾತ್ರ ಎನ್ನುವಂತೆ ನಾವು ಓದುವುದಿಲ್ಲ. ಇಲ್ಲಿ ಕಾಣುವುದು ನಾವು ನಿಜವಾದ ಮೀನನ್ನೇ, ನಿಜವಾದ ನೀರನ್ನೇ ಆದರೆ ಅಷ್ಟನ್ನು ಮಾತ್ರವಲ್ಲ. ಚೊಕ್ಕಾಡಿ ಧ್ಯಾನಶೀಲ ಕವಿ ಮಾತ್ರರಲ್ಲ; ಧ್ವನಿಶಕ್ತಿಯುಳ್ಳ ಮಾತಿನ, (ಎಲವು ಸಾರಿ ಮಾತುಗಾರಿಕೆಯ) ಕವಿ ಕೂಡ.

(ಈ ಬಗೆಯ ದೃಷ್ಟಾಂತವಾಗಬಲ್ಲ ಕವನಗಳನ್ನು ರಚಿಸುವಾಗ ಚೊಕ್ಕಾಡಿಯವರ ಯಶಸ್ಸು ಒಂದೇ ರೀತಿಯದು ಅಲ್ಲ. ಉದಾಹರಣೆಗೆ ಈ ಸಂಕಲನದ ಒಂದು ಪದ್ಯ ‘ಅಸ್ತವ್ಯಸ್ತ’)

‘ಖಡ್ಗ’ ಎನ್ನುವಂತಹ ಪದ್ಯವನ್ನು ಗಟ್ಟಿಯಾಗಿ ಓದಿದಾಗ ಅದರ ಅರ್ಥ ಮನದಟ್ಟಾಗುವಂತೆ ಮೂಡುತ್ತದೆ. ಆದರೆ ನಾವೇ ಓದಿಕೊಂಡಾಗ ಪದ್ಯದ ಮಾತಿನ ವಿವರಣೆ ಹೆಚ್ಚಾಯಿತು ಎನಿಸುತ್ತದೆ. ‘ಮೀನಿನ ಹೆಜ್ಜೆ’ ಪದ್ಯದಲ್ಲಿ ಹೀಗಾಗುವುದಿಲ್ಲ. ಚೊಕಾಡಿಯವರು ವಿಚಿತ್ರವೆನ್ನಿಸುವಂತೆ ಸಾಮಾನ್ಯವಾದ ಘಟನೆಯನ್ನು ಬೆಳೆಸಬಲ್ಲರು ಎಂಬುದಕ್ಕೆ ‘ಹುಲ್ಲ ಬಣವಿಯಲ್ಲಿ ಬಿದ್ದ ಸೂಜಿ’ ಒಂದು ಉದಾಹರಣೆ. ಆದರೆ ಈ ಬಗೆಯ ಜಾಣ ಕಥನದಲ್ಲಿ ಪದ್ಯ ನಮ್ಮದಾಗುವುದಿಲ್ಲ. ಕವಿಯ ಸ್ವತಂತ್ರ ಮಾತ್ರ ಉಳಿದಿರುತ್ತದೆ.

ಈ ಸಂಕಲನದ ಅನೇಕ ಪದ್ಯಗಳನ್ನು ನಾನು ಮನಸ್ಸಿಗೆ ಹಚ್ಚಿಕೊಳ್ಳಲಾಗದಂತೆ ಆದರೆ ಇಷ್ಟಪಡದಂತೆ ಓದುತ್ತ ಹೋಗಿದ್ದೇನೆ. ಆದರೆ ‘ಮಗುವೇ ಮನೆಗೆ ಹೋಗು’ ಎನ್ನುವ ಪದ್ಯವನ್ನು ಇಷ್ಟಪಟ್ಟು ಮಾತ್ರ ನನಗೇ ಓದಿಕೊಂಡಿದ್ದೇನೆ.

ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದ ಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತಿದೆ.

*

(ಕೃಪೆ : ‘ಮುಕ್ತ ಹಂಸಸುಬ್ರಾಯ ಚೊಕ್ಕಾಡಿ ಅಭಿನಂದನೆ, ೨೦೦೬)