ಕೃತಿಕಾರರಾದ ಸುರೇಂದ್ರನಾಥರನ್ನು ಮಾತ್ರವಲ್ಲ, ನನ್ನನ್ನೂ ಈ ಕಾದಂಬರಿ ‘ದಿಕ್ಕುತಪ್ಪಿಸಿದೆ, ಅಚ್ಚರಿಗೊಳಿಸಿದೆ’. ಸ್ವತಃ ಲೇಖಕನಿಗೇ ಹೀಗಾಗುವುದು ಗದ್ಯದ ಬರವಣಿಗೆ ಕಾವ್ಯಗಂಧಿಯಾದಾಗ. ತನ್ನನ್ನೇ ತಾನು ಮೀರುವಂತೆ ಬರೆಯುವ, (ಬರೆಸಿಕೊಳ್ಳವ) ಸೃಷ್ಟಿಯಲ್ಲಿ ಮಾತ್ರ ಗದ್ಯ ಕಾವ್ಯಗಂಧಿಯಾಗುವುದು. ಹೀಗೆ ಬರೆಯುವ ಕ್ರಿಯೆಯಲ್ಲಿ ಸೋಲೂ ಉಂಟು, ಗೆಲುವೂ ಉಂಟು. ಕೇವಲ ಕಥೆ ಹೇಳುವುದು ಹಾಗೂ ಹೀಗೂ ಒಪ್ಪಿಗೆಯಾಗಿ ಬಿಡುತ್ತದೆ. ಆದರೆ ಸುರೇಂದ್ರನಾಥರು ರಿಸ್ಕ್ ತೆಗೆದುಕೊಂಡು ಬರೆಯುವವರು.

ಸುರೇಂದ್ರನಾಥರು ವಿಮರ್ಶೆಯ ವ್ಯಾಖ್ಯಾನಕ್ಕೆ ಸಿಗದಂತೆ ಇಲ್ಲಿ ಕಥೆಯನ್ನು ಬೆಳೆಯಲುಬಿಟ್ಟಿದ್ದಾರೆ. ಪ್ರಾರಂಭದಲ್ಲೇ ರಾಧನ ನಾಲ್ಕನೇ ಮಗಳು ಕರಿಬೇವು, ಕೊತ್ತಂಬರಿ, ಉಳ್ಳಾಗಡ್ಡಿಯ ವಾಸನೆ ಹೊತ್ತು ಅಡುಗೆ ಮನೆಯಲ್ಲಿ ಹುಟ್ಟುತ್ತಾಳೆ. ಈ ಕಣ್ಣೀರಿನ ಸರಸ್ವತಿ ಕಾದಂಬರಿಯುದ್ದಕ್ಕೂ ಅಡುಗೆ ಮನೆಯ ವಾಸನೆಗಳಲ್ಲಿ ನಮಗೆ ನಿಜವಾಗಾಗುತ್ತಾ ಹೋಗುತ್ತಾಳೆ.

ಇನ್ನು ದಟ್ಟ ಬಿಳಿಗೂದಲಿನ ಮಾಮಿಯೋ-ಮಾಮಿಯಂಥ ಮಾಮಿ ಅವಳು. ಅವಳ ರೂಪ, ಅವಳ ನಿಲುವು, ಅವಳ ಹಠ, ಅವಳ ರಾಕ್ಷಸೀಯವಾದ ಸೌಂದರ್ಯ ಎಲ್ಲವೂ ಅವಳನ್ನು ಒಂದು ಪೌರಾಣಿಕ ಪಾತ್ರವಾಗುವಂತೆ ಮಾಡಿವೆ. ಅವಳಲ್ಲಿ ಅತೀಂದ್ರಿಯವಾದ ಶಕ್ತಿಯಿದೆ. ಬರಲಿರುವ ಸಾವನ್ನು ಅವಳು ಮೂಸಿ ತಿಳಿಯಬಲ್ಲಳು. ಸಾಮಾಜಿಕವಾಗಿ, ಸಾಂಸಾರಕವಾಗಿ, ಸಾಂಸ್ಕೃತಿಕವಾಗಿಯೂ ನಾವು ನಮಗೆ ಗೊತ್ತಿದೆಯೆಂದು ಭ್ರಮಿಸುವ ಕಾಮದ ಆದಿಮ ರೂಕ್ಷಸ್ವರೂಪವನ್ನ ಅಂದರೆ ನಮಗೆ ಗೊತ್ತಿರುವುದರ ಆಚಿನದನ್ನು, elemental ಎನಿಸುವುದನ್ನು, ದಿಗಿಲು ಹುಟ್ಟಿಸುವಂತೆ ಮಾಮಿ ತನ್ನಲ್ಲೇ ತೋರುತ್ತ ಮಾಯಾವಿಯಂತೆ ಇಡೀ ಕಾದಂಬರಿಯ ಲೋಕವನ್ನು ಆಳುತ್ತಾಳೆ. ಅವಳ ಜಾಯಮಾನವೇ ಅದು. ಅದಕ್ಕೆ ಕಾರಣದ ಹಂಗಿಲ್ಲ. ಸಂಸಾರದಲ್ಲೂ, ಹೊಟೇಲು ವ್ಯವಹಾರದಲ್ಲೂ, ಪಂಪಾಪತಿ ಸ್ನೇಹದಲ್ಲೂ ಪಳಗಿ, ಹಣ್ಣಾಗಿ, ಒಣಗಿ ಸಾಯುತ್ತಿರುವ ಗಂಡನ ಜೊತೆ ಸಂಭೋಗಿಸುವ ಈ ಮಾಮಿ ವಾಸ್ತವ ಪಾತ್ರವೇ ಎಂದು ಈ ಲೋಕದ ನಾವು ಸಂಶಯಗ್ರಸ್ತರಾಗುವುದು ಸಹಜವೇ. ಆದರೆ ಕಾವ್ಯಕ್ಕೆ ಸಹಜವಾದಿ ವಿಪರೀತಗಳಲ್ಲಿ, ಉತ್ಪ್ರೇಕ್ಷೆಗಳಲ್ಲಿ ಕಾದಂಬರಿಯ ಎಲ್ಲಾ ಪಾತ್ರಗಳೂ ಮೈದಾಳುವುದರಿಂದ ಕೃತಿಕಾರ ತೆಗೆದುಕೊಳ್ಳುವ ರಿಸ್ಕಿನಲ್ಲಿ ನಾವೂ ಭಾಗಿಯಾಗುತ್ತೇವೆ. ಕಥೆಯಲ್ಲಿರುವ ಈ ಪ್ರಪಂಚ ನಮ್ಮ ಪ್ರಪಂಚದ ಪ್ರತಿಯಲ್ಲ. ಅದು ಇನ್ನೊಂದೇ ಪ್ರಪಂಚ. ಅದರ ಲಾಜಿಕ್ಕೇ ಬೇರೆ.

ಕಾದಂಬರಿಯ ಉದ್ದಕ್ಕೂ ನಮ್ಮನ್ನು ಕಾಡುವ ವಾಸನೆಗಳೂ ಈ ಬಗೆಯ ವಾಸ್ತವದ ಉಲ್ಲಂಘನೆಗಳಿಗೆ ಸಹಾಯಕವಾಗುತ್ತವೆ. ನಮ್ಮ ಮೂಗಿಗೆ ಬಡಿಯುವ ನಾಗಲಿಂಗಪುಷ್ಪ, ಕರಿಬೇವುಗಳು ವರ್ಣಿತವಾಗುವ ಜಾಗಗಳನ್ನು ಕಾದಂಬರಿಯ ಉದ್ದಕ್ಕೂ ನಾಣು ಗುರುತಿಸಿಕೊಂಡು ಓದಿದ್ದೇನೆ. ಕಾಯಕಲ್ಪದ ಚಿಕಿತ್ಸೆಯ ಗಿಡಿಮೂಲಿಕೆಗಳ ಅಭ್ಯಂಜನಗಳ ವಾಸನಾಪ್ರಪಂಚವೂ ಕಾದಂಬರಿಯುದ್ದಕ್ಕೂ ಇದೆ-ಅಮರತ್ವದ ಬಯಕೆಯ ಮಾಮಿಯ ಸ್ನಾನಗಳು ಇವು.

ಇಂಥ ಒಂದು ಲೋಕದಲ್ಲಿ ದಾವಣಗೆರೆಯ ವಿಲಕ್ಷಣ ರಾಜಕಾರಣಿ ಪಂಪಾಪತಿ ಕೂಡ ಇದ್ದಾರೆ. ಒಂದು ಹೊಟೇಲನ್ನು ನಡೆಸುವ ವಾಸ್ತವ ವಿವರಗಳೂ ಇವೆ. ಒಂದು ಊರಾಗಿ ದಾವಣಗೆರೆಯೂ ಇದೆ. ಕಾರ್ಮಿಕ ಸಂಘರ್ಷದ ರಾಜಕಾರಣವೂ ಇದೆ. ನಮಗೆ ಗೊತ್ತಿರುವ ಲೋಕದಲ್ಲೇ ಗೊತ್ತಿಲ್ಲದ್ದು ನಡೆಯುವ ಸೋಜಿಗ ಈ ಕಾದಂಬರಿಯ ಶೈಲಿಯ ಮುಖ್ಯ ಲಕ್ಷಣ.

ನಾವು ನಿರೀಕ್ಷಿಸಿದಂತೆ ಕಾದಂಬರಿ ಬೆಳೆಯುವುದಿಲ್ಲ. ದಾರಿತಪ್ಪಿ ಕಾಡಿನಲ್ಲಿ ಓಡಾಡಿದಂತೆ ಕೆಲವೊಮ್ಮೆ ಭಾಸವಾಗುತ್ತದೆ. ನಾವು ಓದುಗರು ಮಾತ್ರವಲ್ಲ; ಲೇಖಕರೂ ನಡೆದಾಡುವ ಬಗೆ ಇದು. ಭಾಷೆಯನ್ನು ಕಾದಂಬರಿಯ ಭಾವದ ತೀವ್ರತೆಗೆ ಹುರಿಗೊಳಿಸುವದರಲ್ಲಿ ಸುರೇಂದ್ರನಾಥರು ಅತಿರೇಕಗಳಿಗೆ ಹಿಂಜರಿಯುವುದಿಲ್ಲ. ಆದರೆ ಇದು ನನಗೆ ಅತಿಯಾಯಿತು ಎನ್ನಿಸಿ ಕೃತಿಕಾರ ತನ್ನನ್ನೇ ತಾನು ಹುರಿದುಂಬಿಸಿ ಕೊಂಡಂತೆ ಕೆಲವು ಕಡೆ ಭಾಸವಾಗಿದೆ. ಇದು ಕೃತಿಕಾರರ ಮೊದಲ ಕಾದಂಬರಿಯಲ್ಲವೆ? ಮೌನಕ್ಕೆ ಅವಕಾಶವಿಲ್ಲದ ಉಮೇದು, ಆತುರ, ನಿರಂಬಳವೆನ್ನಿಸಬೇಕಾದ ಕಾದಂಬರಿಯ ಸಾಂಗತ್ಯದಲ್ಲಿ ಕೊಂಚ ಅತಿಯೆನ್ನಿಸಬಹುದು.

‘ಎನ್ನ ಭವದ ಕೇಡು’ ರಾಕ್ಷಸ ವರ್ಚಸ್ಸಿನ ಮತ್ತು ಛಲದ ಮಾಮಿಯ ಸುತ್ತ ಹೆಣೆದಿರುವ ಒಂದು ಸ್ತ್ರೀಲೋಕ. ಈ ಮಾಮಿಯೂ ಹಿಂದೊಂದು ಕಾಲದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದ್ದಳು ಎಂಬುದನ್ನು ಸರಸ್ವತಿ ಗುಟ್ಟಾಗಿ ತಿಳಿಯುತ್ತಾಳೆ. ಇದರಿಂದ ತಾನು ದ್ವೇಷಿಸುವ ಮಾಮಿ ಅವಳಿಗೆ ಇನ್ನಷ್ಟು ಗೂಢವಾಗುತ್ತಾಳೆ. ನಮಗೆ ಮಾಮಿ ಮನಃಶಾಸ್ತ್ರದ ವಿಶ್ಲೇಷಣೆಗೆ ದಕ್ಕಬಲ್ಲ ಪಾತ್ರವಿರಬಹುದು ಎಂದು ಒಂದು ಕ್ಷಣ ಅನ್ನಿಸುತ್ತದೆ. ಆದರೆ ಒಂದು ಕ್ಷಣ ಮಾತ್ರ.

ಎಲ್ಲರೂ ಸತ್ತು ಕೆಟ್ಟು ಬೃಂದಾವನ ಬರಿದಾದ ಮೇಲೂ ಬೆನ್ನು ಮುರಿದ ಬಿಳಿಗೂದಲಿನ, ದೊಣ್ಣೆ ಹಿಡಿದ ಮಾಮಿ ಮಾತ್ರ ಉಳಿದಿರುತ್ತಾಳೆ. ಈ ಮಾಮಿ ನಮ್ಮ ಅನುಭವಕ್ಕೆ ತರುವ ಜೀವಕಾಮದ ಸುತ್ತಮುತ್ತಲೂ ಸಾವು ಇದೆ; ಗೋದಾವರಿಗೆ ಹುಚ್ಚು ಹಿಡಿಸುವ ಸಂಗೀತ ಇದೆ; ಸರಸ್ವತಿಯ ಅಡುಗೆ ಕಾಯಕವಿದೆ. ಹಲವು ವಾಸನೆಗಳಿವೆ. ‘ವಾಸನ” ಎನ್ನುವ ವಿಶೇಷವಾದ ಅರ್ಥದಲ್ಲೂ ಇರುವ ವಾಸನೆ ಇದು.

‘ಕೂಡಲ ಸಂಗನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯಾ’ ಎಂಬ ವಚನದಿಂದ ಕಾದಂಬರಿ ತನ್ನ ಶೀರ್ಷಿಕೆಯನ್ನು ಪಡೆದಿದೆ. ಕಾದಂಬರಿ ಲೋಕದ ‘ಭವ’ ಎಷ್ಟು ತೀವ್ರವಾದ್ದೆಂದರೆ ಅದರ ತೀವ್ರತೆಯೇ ಅದರ ಕೇಡೆಂದು ನಮಗೆ ಅನ್ನಿಸುವಂತಿದೆ. ಅನುಭಾವಕ್ಕೆ ಆಸ್ಪದವಿಲ್ಲದ ದಟ್ಟ ಭವದ ವಾಸನೆಯ ಕೃತಿ ಇದು.

ತಾರ್ಕಿಕವಾಗಿ ನಾವು ತಿಳಿದು ಬದುಕುವ ಈ ಸಂಸಾರದ ಲೋಕದಲ್ಲಿ ನಮಗೆ ತಿಳಿಯದಂತೆ ಉರಿಯುವ ಸತ್ಯಗಳನ್ನು ದರ್ಶಿಸುವ ಈ ಕಾದಂಬರಿ ತನ್ನ ಉದ್ದೇಶದಲ್ಲಿ ಸಾರ್ಥಕವಾಗಿದೆಯೇ? ಸ್ಪಷ್ಟವಾದ ಒಂದು ಉದ್ದೇಶವಿಟ್ಟುಕೊಂಡು ಬರೆದ ಕೃತಿ ಇದು ಎಂದು ಹೇಳುವುದು ಕೂಡ ಸರಿಯೇ? ಇತ್ಯಾದಿ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಎದ್ದಿರುವಂತೆ ಓದುಗರಲ್ಲೂ ಏಳಬಹುದು. ಪ್ರತಿ ಓದುಗನೂ ತನ್ನದೇ ಅರ್ಥ ಕಟ್ಟಿಕೊಳ್ಳುವಂತೆ ಈ ಕೃತಿ ಇದೆ ಎಂದು ನನಗನ್ನಿಸಿದೆ.

ಹೀಗೇ ಕೊನೆಯ ಮಾತೆಂದು ಅನ್ನಿಸುವಂಥ ಮಾತಿನಿಂದ ನಾನು ಈ ಕಾದಂಬರಿಯ ಒಟ್ಟು ಅನುಭವವನ್ನು ವರ್ಣಿಸುವುದು ಸರಿಯಲ್ಲ. ಯಾಕೆಂದರೆ ಈ ಬಗೆಯ ಬರವಣಿಗೆಯಲ್ಲಿ ಲೇಖಕನಾಗಿ ನನಗೊಂದು ಸಮಸ್ಯೆಯಿದೆ. ಅರವತ್ತರ ದಶಕದಲ್ಲಿ ಗೋಪಾಲಕೃಷ್ಣ ಅಡಿಗರಿಂದ ಪ್ರೇರಿತನಾದ ನನ್ನಂಥವರು ಹುಡುಕುತ್ತ ಇದ್ದುದು “ಸಾವಯವ ಶಿಲ್ಪದ ಸಮಗ್ರೀಕರಣ” ಬಲ ಹೊಂದಿದ ಕೃತಿಗಳಿಗೆ. ಚೆಲ್ಲಿಕೊಳ್ಳುವ ಸಮೃದ್ಧಿಯಿಂದ ಅತೃಪ್ತರಾಗದ ಹೊರತು, ತೋರಿಕೊಳ್ಳುವ ಶೈಲಿಗಳಿಂದ ಮುಕ್ತರಾಗದ ಹೊರತು ಈ ಬಗೆಯ ಪ್ರಬಂಧ ಧ್ವನಿ ಪಡೆದ ಕೃತಿ ನಿರ್ಮಾಣ ಅಸಾಧ್ಯ. ಶಿಲ್ಪದಂತಹ ಕೃತಿಯಲ್ಲಿ ಏನಾದರೂ ಕೊಂಚ ಕಮ್ಮಿ ಅನ್ನಿಸಿದರೆ ತೀರಾ ಕಮ್ಮಿ. ಕೊಂಚ ಹೆಚ್ಚೆನ್ನಿಸಿದರೆ ತೀರಾ ಹೆಚ್ಚು.

ಆದರೆ ನಮ್ಮ ಜನಪ್ರಿಯ ಸಿನಿಮಾ ನೋಡಿ. ಅದರ ಕುತೂಹಲ ಕಟ್ಟುವ ಕಥನದಲ್ಲೂ ಎಷ್ಟು ಹಾಡುಗಳು ನುಸುಳಿಕೊಳ್ಳುತ್ತವೆ! ಹಾಗೆಯೇ ಕಥೋಪಕಥೆಗಳ ಅಲೆದಾಟವೆನ್ನಿಸುವ ನಮ್ಮ ಪುರಾಣಕಾವ್ಯಕತೆಗಳೂ, ಗದ್ಯಪದ್ಯ ಮಿಶ್ರವಾದ ಚಂಪೂ ಕಾವ್ಯಗಳೂ ಕನ್ನಡದ ಪ್ರಧಾನ ರಾಜಮಾರ್ಗವೇ ಇರಬಹುದು.

ಸುರೇಂದ್ರನಾಥರೂ ಒಂದು ಚಂಪೂ ಕೃತಿಯನ್ನೇ ಇಲ್ಲಿ ಬರೆದಂತೆ ತೋರುತ್ತದೆ.

ಇಲ್ಲವಾದರೆ, ನಾನು ಬಹುವಾಗಿ ಮೆಚ್ಚಿರುವ ಶಾವಿಗೆಯ ತಯಾರಿಯಂಥ ಹಲವು ಲಿರಿಕಲ್ ವರ್ಣನೆಗಳಿಗೆ ಸಾವು ನೋವು ಪ್ರೇಮದ, ಉನ್ಮಾದದ, ಹೊಟೇಲ್ ಉದ್ಯಮದ ದೈನಿಕದ ಈ ಕಥನದಲ್ಲಿ ಜಾಗವೇ ಇರುತ್ತಿರಲಿಲ್ಲ.

*

(ಸುರೇಂದ್ರನಾಥ್ ಅವರ ‘ಎನ್ನ ಭವದ ಕೇಡು’ (೨೦೦೭) ಕಾದಂಬರಿಗೆ ಬರೆದ ಮುನ್ನುಡಿ).