‘ಸಂಸ್ಕಾರ’ವನ್ನು ಅದರ ಸಾರದಲ್ಲಿ, ಅದರ ಒಟ್ಟಾಗಿ ಹಿಡಿಯಲು ಶ್ರೀ ಅಂಕುರ್ ಎಷ್ಟು ಶ್ರಮವಹಿಸಿದ್ದಾರೆಂಬುದು ಕೃತಿಯ ಲೇಖಕನಾದ ನನಗೆ ಖುಷಿ ಕೊಟ್ಟಿದೆ.

ನಾನು ನೊಡಿದ್ದು ಆರಂಭದ ಅರ್ಧದಷ್ಟು ರಿಹರ್ಸಲ್ ಆದರೂ ಅಂಕುರ್ ಕೃತಿಯನ್ನು ಸ್ಫುಟವಾಗಿ ಅರ್ಥೈಸಿಕೊಂಡು ಅದನ್ನು ಪ್ರೇಕ್ಷಕರ ಜೊತೆ ಹಂಚಿಕೊಳ್ಳಲು ಪ್ರಯತ್ನಪಟ್ಟಿದ್ದು ನನಗೆ ಸ್ಪಷ್ಟವಾಗಿ ಕಂಡುಬಂತು, ಕೃತಿಯ ತದ್ವದ್ ಆದರೂ ನಾಟಕೀಯ ಮಂಡನೆಯಲ್ಲಿ ಕೃತಿಯ ಸಾಹಿತ್ಯ ವಿಮರ್ಶೆ ಮತ್ತು ವಿಶ್ಲೇಷಣೆಗಳೂ ಅಡಗಿದ್ದವು, ಕೃತಿಯಿಂದ ನಾಟಕದ ಸ್ಕ್ರಿಪ್ಟ್ ಆಗಬಹುದೆಂಬುದು ನನಗೆ ಆಶ್ಚರ್ಯಕರವಾದ ಸಂತೋಷವನ್ನು ಕೊಟ್ಟಿತು. ಯಾವ ಹೊಸ ಪ್ರಯೋಗವೇ ಆಗಲಿ. ಆಯಾ ಮಾಧ್ಯಮದ ಬಗ್ಗೆ ನಾವು ಯೋಚಿಸುವ ಕ್ರಮವನ್ನು ಉದಲಾಯಿಸಬೇಕು ಎಂಬ ದೃಷ್ಟಿಯಿಂದ ನೋಡಿದರೆ, ಅಂಕುರ್ ಪ್ರಯೋಗ ನನ್ನ ಮಟ್ಟಿಗೆ ನನ್ನ ಪರಿಮಿತ ರಂಗಪ್ರಜ್ಞೆಯನ್ನು ಹಿಗ್ಗಿಸುವಂಥದ್ದಾಗಿತ್ತು. ಕಾದಂಬರಿ ಅಂಗೈಯ ಮೇಲಿನ ರಂಗಭೂಮಿ ಎಂಬ ಮಾತಿದೆ. ಒಂಟಿಯಾಗಿ ಓದುವಾಗಿನ ಊಹೆಯ ವಿಲಾಸ, ಸ್ವಾತಂತ್ರ್ಯಗಳು ಆಯಾ ಓದುಗನಿಗೆ ಬೇರೆ ಬೇರೆಯಾಗಬುದಾದರೂ, ಕೃತಿಯ ಮೂರ್ತ ಭಾಷಾಪ್ರಪಂಚ ಅವನ್ನೆಲ್ಲ ಒಂದು ಚೌಕಟ್ಟಿನೊಳಗೆ ಕಟ್ಟುತ್ತದೆ. ಅಂಕುರ್ ನಿರ್ದೇಶಿಸುವ ರಂಗದ ಮೇಲಿನ ಕಾದಂಬರಿ, ಅಂಗೈ ಮೇಲಿನ ಈ ನಾಟಕಕ್ಕೆ ಇನ್ನಷ್ಟು ಮೂರ್ತತೆಯನ್ನು ತಂದು, ತನ್ಮೂಲಕ ಪ್ರೇಕ್ಷಕ-ಸಮಷ್ಠಿ ಹಂಚಿಕೊಳ್ಳಬಲ್ಲ ಅನುಭವವಾಗಿ ಮೂಡುತ್ತದೆ.

ರಿಹರ್ಸಲನ್ನು ನೋಡಿಯಾದ ಮೇಲೆ ಚರ್ಚೆಯಲ್ಲಿ ಗೆಳೆಯ ಕೆ.ವಿ. ನಾರಾಯಣ್ ಒಂದು ಮುಖ್ಯ ಪ್ರಶ್ನೆ ಎತ್ತಿದರು: ಕೃತಿಯನ್ನು ಮೊದಲೇ ಓದಿದವರೂ, ಓದದವರೂ ಹೇಗೆ ಈ ಪ್ರಯೋಗಕ್ಕೆ ಸ್ಪಂದಿಸಿಯಾರು? ಅವರ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತವೆಯೆ ? ಮತ್ತು ಈ ಭಿನ್ನತ ಕೃತಿಯ ಬಗ್ಗೆಯೂ ಪ್ರಯೋಗದ ಬಗ್ಗೆಯೂ ಏನು ಬೆಳಕನ್ನು ಚೆಲ್ಲಬಹುದು ? ನಾನೇ ಓದಿ ಕಲ್ಪಿಸಿಕೊಂಡ ಕೃತಿಯ ಜೊತೆಗೆ, ನಿರ್ದೇಶಕ ಒಂದು ವಿಶಿಷ್ಟ ಧಾಟಿ, ಧೋರಣೆ ಹೊಮ್ಮುವಂತೆ ಓದಿಸುತ್ತ, ರಂಗದ ಮೇಲೆ ತರುವ ಕೃತಿ, ಒಂದಕ್ಕೊಂದು ಎದುರಾಗಿ ಅಥವಾ ಮಿಳಿತವಾಗಿ, ಓದಿದ ಅನುಭವವನ್ನು ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡಬಹುದು. ಕೃತಿಯಿಂದ ಪ್ರೇರಿತವಾದ ಸ್ಕ್ರಿಪ್ಟ್ ಇನ್ನೊಂದೇ ಬೇರೆ ಕೃತಿಯಾಗುವಂತೆ, ಅಂಕುರದು ಭಿನ್ನ ಕೃತಿಯಲ್ಲ.-ಯಾಕೆ ? ಹೇಗೆ? ಎಂಬ ಪ್ರಶ್ನೆಗಳು ಪ್ರೇಕ್ಷಕರ ಅನುಭವಕ್ಕೆ ವಿಶಿಷ್ಟವಾದ ಗ್ರಹಿಕೆಯನ್ನು ತರಬಲ್ಲದು.

ಲೇಖಕನಾದ ನನಗೆ ಅಂಕುರ್‌ ಹೇಳುತ್ತಿದ್ದುದು ‘ಇದು ನನ್ನದಲ್ಲ’ ಎಂಬ ವಿಚಿತ್ರವಾದ ಅನುಭವವನ್ನು ತಂದಿತು. ಈ ಕಸಿವಿಸಿಯ ಬಗ್ಗೆ ನಾನು ಮೆಚ್ಚುಗೆಯಿಂದಲೇ ಮಾತನಾಡುತ್ತಿದ್ದೇನೆ ಎಂಬುದು ಗಮನಿಸಬೇಕು. ನಾಡಿನ ಹೊರಗೆ, ಒಳಗೆ, ಒಬ್ಬೊಬ್ಬರು ಒಂದೊಂದು ಅರ್ಥಹಚ್ಚಿ ಓದಿದ ಕೃತಿ ‘ಸಂಸ್ಕಾರ’ ವಾದ್ದರಿಮದ ನನಗೆ ಇಂತಹ ಕಸಿವಿಸಿಯೇನು ಹೊಸದಲ್ಲ. ಕರ್ನಾಟಕದ ಬ್ರಾಹ್ಮಣರ ಒಂದು ಗುಂಪಿಗೆ ಮತದ್ವೇಷವಾಗಿ ಕಮಡ ‘ಸಂಸ್ಕಾರ’ ಹಲವರಿಗೆ ಇಡೀ ಜಾತಿಪದ್ಧತಿಯ ವಿಶ್ಲೇಷಣೆಯಾಗಿ ಕಂಡಿದೆ. ಅಯೋವಾದ ಯಹೂದ್ಯ ಮಹಿಳೆಯೊಬ್ಬಳು, ಆಕೆ ಪ್ರಸಿದ್ಧ ವಿಜ್ಞಾನಿಯೊಬ್ಬನ ಹೆಂಡತಿ. ಇದು ಯಹೂದ್ಯನೊಬ್ಬನ ಕಥೆಯಾಗಿರಬಹುದೆಂದು ಅಂದಿದ್ದಳು. ‘ಸಮಸ್ಕಾರವನ್ನು ಸಾಮಾಜಿಕ ದೃಷ್ಟಿಯಿಂದ, ಸಾಂಸ್ಕೃತಿಕ ಕೋನದಿಂದ, ಅಸ್ತಿತ್ವವಾದದ ನಿಲುವಿನಿಂದ ನೋಡಿದ ನಿದರ್ಶನಗಳಿವೆ. ಯಾವುದು ಸರಿ, ಹೀಗೆನ್ನುವುದರಲ್ಲಿ ಎಂದು ಈಗ ಯಾರಾದರೂ ನನ್ನನ್ನು ಕೇಳಿದರೆ, ನನಗೆ ಪ್ರಾಮಾಣಿಕವಾಗಿ ಉತ್ತರ ಕೊಡುವುದೇ ಕಷ್ಟವಾಗುತ್ತದೆ.

ಮಾರ್ಕ್ಸ್‌ವಾದದ ಮತ್ತು ಅಸ್ತಿತ್ವವಾದಗಳು ನನ್ನನ್ನು ತೀವ್ರವಾಗಿ ಕಲಕಿದ್ದ ಕಾಲದಲ್ಲಿ, ಜಾತಿ ಪದ್ಧತಿ ಹೇಗೆ? ಏಕೆ ನಮ್ಮ ಜೀವಂತಿಕೆಯನ್ನು  ಕೃಶವಾಗಿಸಿದೆ ಎಂಬ ಪ್ರಶ್ನೆಗಳು ನನ್ನನ್ನು ಬಾಧಿಸುತ್ತಿದ್ದ ಕಾಲದಲ್ಲಿ ನಾನು ಈ ಕೃತಿಯನ್ನು ಬರೆದದ್ದು, ಸುಮಾರು ಹದಿನೇಳು ವರ್ಷಗಳ ಹಿಂದೆ, ಕೃತಿ ನಿರ್ಮಾಣದ ಪ್ರಕ್ರಿಯೆ ವಿಚಿತ್ರವಾದ್ದು ರಹಸ್ಯಮಯವಾದ್ದು, ಹಾಗಿದ್ದಾಗಲೇ ಅದು ಸೃಜನಕ್ರಿಯೆ ಎಂದು ಬರಹಗಾರನಿಗೆ ಅನ್ನಿಸುವುದು. ನನ್ನ ವ್ಯಂಗ್ಯ ನನ್ನ ಅನುಮಾನ ನನ್ನ ಸಿಟ್ಟುಗಳಿಗೆ ಕಾರಣವಾದವು. ನನ್ನ ಹೊರಗಿನವು ಮಾತ್ರ ಅಲ್ಲ; ಅವು ನನ್ನ ಒಳಗಿನವು ಕೂಡ ತನ್ಮಯವಾಗಿ ನಾವು ಏನನ್ನೇ ನೋಡಲಿ, ನಮ್ಮ ವೈಚಾರಿಕತೆ ಕಲ್ಪನೆಯ ಸಹವಾಸದಲ್ಲಿ ತನಗೆ ಅನುಕೂಲವಲ್ಲದ್ದನ್ನೂ ಗ್ರಹಿಸತೊಡಗುತ್ತದೆ. ಮಂಡನೆ, ಖಂಡನೆಗಳಲ್ಲಿ ನಾವು ಕ್ಷೇಮದ ನೆಲೆಯಲ್ಲಿ ನಿಂತಿರುತ್ತೇವೆ. ಅಹಂಕಾರಿಗಳಾಗಿರುತ್ತೆವೆ. ಆದರೆ ಸೃಜನತೆ ಸಾಧ್ಯವಾಗಿಸುವ ‘ಕಾಣುವಿಕೆ’ಯಲ್ಲಿ ಲೇಖಕನ ಹಠಗಳು ಕರಗುತ್ತವೆ. ತುಂಬ ಹಠದ ಕಾಲದಲ್ಲಿದ್ದಾಗ ನಾನು ನನ್ನ ಹಠವನ್ನು ಅದನ್ನು ಎದುರಿಸುತ್ತಲೇ ಮೀರಲು ಪ್ರಯತ್ನಿಸುತ್ತಿದ್ದೆ. ‘ಸಂಸ್ಕಾರ’ ಬರೆಯುವಾಗ ಎನ್ನಬಹುದೇನೋ? ಕೆಲವು ವಿಮರ್ಶಕರು ಇದನ್ನು ಒಪ್ಪಲಾರರು. ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿ ಇನ್ನೂ ನೋವಿನ ಸಂಗತಿಗಳಾಗಿ ಉಳಿದ ವಿಷಯಗಳ ಸಂದರ್ಭದಲ್ಲಿ ‘ಸಂಸ್ಕಾರ’ ಓದಿದಾಗ ಅದು ಪರ-ವಿರೋಧಗಳ ತೀವ್ರ ಭಾವನೆಯನ್ನೇ ಹುಟ್ಟಿಸುತ್ತದೆ ಎಂಬುದು ಸಹಜ. ಆದರೆ ಇದನ್ನೊಂದು ಕೇವಲ ಕೃತಿಯಾಗಿ ಓದಬಲ್ಲ ಹೊರಗಿನವರಿಗೆ ‘ಸಂಸ್ಕಾರ’ ಕೆಲವು ಸಾರ್ವಕಾಲಿಕ ಸತ್ಯಗಳನ್ನು ಹೇಳುವಂತೆಯೂ ಕಂಡಿದೆ, ಈ ಎರಡು ಬಗೆಯ ಪ್ರತಿಕ್ರಿಯೆಗಳು ಸಾಧ್ಯವಾಗುವಂತಹ ಕೃತಿಯನ್ನು ಬರೆಯುವುದಕ್ಕಿಂತ ಹೆಚ್ಚಿನ ಕೃತಕೃತ್ಯತೆ ಲೇಖಕನಾದವನಿಗೆ ಇನ್ನೊಂದು ಇಲ್ಲ, ಎಂದು ತಿಳಿದವನು ನಾನು.

ಅಂಕುರ್ ‘ಸಂಸ್ಕಾರವನ್ನು ಚುಚ್ಚುವಂತೆ ಓದಿದ್ದಾರೆ, ಓದಿಸುತ್ತ ಆಡಿಸುತ್ತಾರೆ ಎಂದು ನನಗೆ ಅನ್ನಿಸಿತು. ನಾನು ಕೃತಿಯಲ್ಲಿ ಬರೆದ ಈ ವಾಕ್ಯಗಳನ್ನು ವ್ಯಂಗ್ಯವಾಗಿಯೂ ಓದಲು ಸಾಧ್ಯವೇ? ಈ ಮಾತಿಗೆ ಈ ಅರ್ಥ ಇದೆಯೆ? ಹೀಗೆ ಕೇಳಿಕೊಳ್ಳುತ್ತ ನೋಡುವಾಗ, ನಿರ್ದೇಶಕನ ಗ್ರಹಿಕೆಯ ಕ್ರಮಕ್ಕೆ ಕೃತಿಯಲ್ಲಿ ಆಸ್ಪದವೇ ಇಲ್ಲ ಎಂದು ಹೇಳಲಾರದವನಂತೆ ನಾನು ಅಂಕುರ್‌ ಓದಿದ ‘ಸಂಸ್ಕಾರ’ವನ್ನು ನೋಡುತ್ತಿದ್ದೆ. ಇದೊಂದು ನನಗೆ ವಿಶಿಷ್ಟ ಅನುಭವ. ಪಠಾಭಿಯವರ ಸಿನಿಮಾ ‘ಸಂಸ್ಕಾರ’ ನನ್ನ ‘ಸಂಸ್ಕಾರ’ವನ್ನು ಆಧಾರವಾಗಿಯುಳ್ಳ ಇನ್ನೊಂದು ಕೃತಿ ಅಂದರೆ ಅಂಕುರ್‌ ಓದುವ ‘ಸಂಸ್ಕಾರ’ ನನ್ನ ಮಾತುಗಳಲ್ಲಿ ಮೂಡುತ್ತಲೇ, ಬೇರೆಯಾಗುವ ಮತ್ತೊಂದು ಕೃತಿ. ಬರೆದಾದ ಮೇಲೆ ಲೇಖಕರನ್ನು ಕೃತಿ ಬಿಟ್ಟು ನಿಲ್ಲಬೇಕು. ‘ಸಂಸ್ಕಾರ’ ಹಾಗೆ ನಿಲ್ಲಬಲ್ಲದು: ಈ ಕಾಲಕ್ಕೆ ಅಗತ್ಯವೆಂದು ಅನ್ನಿಸಿದ್ದನ್ನು ಒಬ್ಬ ನಿರ್ದೇಶಕ ಅದರ ಮೂಲಕ ನುಡಿಸಬಹುದು ಎಂಬ ಅನುಭವ ಲೇಖಕನಾದ ನನಗೆ ಹೆಮ್ಮೆ ತರುವಂಥದ್ದು.

ಅಂಕುರ್‌ ಪ್ರಯೋಗ ಹಲವಾರು ಕನ್ನಡ ಕಥೆ ಕಾದಂಬರಿಗಳನ್ನು ರಂಗದಮೇಲೆ ತರುವುದಕ್ಕೆ ನಾಂದಿಯಾಗಬಹುದೆಂದು ಭರವಸೆ ನನಗಿದೆ. ಕಲಾತ್ಮಕತೆಯನ್ನು ವೈಚಾರಿಕೆಯನ್ನು ಒಟ್ಟಾಗಿ ಅಭಿವ್ಯಕ್ತಿಸಬೇಕೆಂಬ ಸಮುದಾಯದವರ ಪ್ರಯತ್ನಕ್ಕೆ ಯಥೇಚ್ಛ ವಸ್ತು ಕನ್ನಡದ ನಾಟಕಗಳಲ್ಲಿ ದೊರೆಯುವುದಕ್ಕಿಂತ ಕನ್ನಡ ಕಥೆ, ಕಾದಂಬರಿಗಳಲ್ಲಿ ಸಿಗುತ್ತದೆಂಬುದು ನಮ್ಮ ಈ ಉತ್ಸಾಹಕ್ಕೆ ಕಾರಣವಾಗಿದೆ.

*

(ಸಮುದಾಯ ವಾರ್ತಾಪತ್ರದಲ್ಲಿ ಪ್ರಕಟ. ‘ಸಂಸ್ಕಾರನಾಟಕ ನೋಡಿ ವ್ಯಕ್ತಪಡಿಸಿದ ಅಭಿಪ್ರಾಯ)