ವೀಣಾ ಪಾಣಿ ಚಾವ್ಲರ ‘ಬೃಹನ್ನಳೆ’ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಮತ್ತೆ ಚಿಂತಿಸುವಂತೆ ಮಾಡುವ ಪ್ರಯೋಗ ನಾಟ್ಯ ಎಂದರೆ ಮುಖ ಮೈ ಕೈ ಕಾಲುಗಳ ಸುಂದರವೆನ್ನಿಸುವ ಅಭಿವ್ಯಕ್ತಿ ಎಂದು ತಿಳಿಯುವ ನಾವು ವಿನಯಕುಮಾರರ ಅಂಗಚೇಷ್ಟೆಯೆಂದೂ ಅನ್ನಿಸುವ ಅಭಿನಯವನ್ನೂ ಮಾತಿಗೂ ನಿಲುಕದ, ಎನನ್ನಾದರೂ ಹೇಳಬಲ್ಲ ಹೊಸಭಾಷೆಯೆಂದು ಗುರುತಿಸ ತೊಡಗುತ್ತೇವೆ. ಸುಮ್ಮನೆ ಕೂತು ನೋಡುತ್ತಿರುವ  ನಮ್ಮ ಮೈಗಳೂ ವಿನಯಕುಮಾರರ ಮೈಯನ್ನೇ ಆಲಿಸುತ್ತಾ ಇರುವಂತೆ ಭಾಸವಾಗುತ್ತಾ ಹೋಗುತ್ತದೆ. ಗಂಭೀರವಾದ ಭಾವವನ್ನು ಸೂಚಿಸುವ ಮುಖಮುದ್ರೆ ಕೊಂಚ ಸ್ಥಾಯಿ ಎನಿಸುವ ಭಾರದ್ದು. ನಾವು ನೋಡುವ ನಾಟಕದಲ್ಲಿ ಮೈ ಬಲು ಹಗುರ; ಸದಾ ಸಂಚಾರಿ. ಸಂತ ತನ್ನ ನಿಶ್ಚಲತೆಯ ಗಾಂಭಿರ್ಯವನ್ನು ಮುಖ್ಯವಾಗಿ ತೋರುವುದಾದರೆ ಬಪೂನ ತನ್ನ ಮೈಯನ್ನು ಬಳಸಿ ಕೊಂಕಿಸಿ, ಅಟ್ಟಹಾಸದಲ್ಲಿ ತನ್ನ ಚಲನವಲನಗಳದೇ ಅದೊಂದು ಭಾಷೆಯನ್ನು ಸೃಷ್ಟಿಸುತ್ತಾನೆ. ಚಾರ್ಲಿ ಚಾಪ್ಲಿನ್‌ ನಂತೆ. ಈ ನಾಟಕದಲ್ಲಿ ವಿನಯ ಕುಮಾರಂತೆ, ಈತ ಬಪೂನನೂ ಹೌದು; ಸಂತನಾಗುವ ಕೇವಲ ಮನುಷ್ಯನೂ ಹೌದು.

ಈಗ ಇದು ಮುಖ್ಯವೆನ್ನಿಸಿದರೆ ಇನ್ನೊಂದು ಕ್ಷಣದಲ್ಲಿ ಇದು ಮೂತಿ. ನಾಯಿಯ ಮೂತಿ, ಹುಲಿಯ ಮೂತಿ, ಈ ಮೂತಿಯೇ ಕಾಲ ದ್ವೇಷಗಳ ಅಪಾರತೆಯನ್ನೂ ಅನಂತೆಯನ್ನೂ ಧ್ಯಾನಿಸಲೂ ಬಲ್ಲ ನಿರ್ವಿಕಾರದ ಮುಖ. ಎಡವಿ ಮುಗ್ಗರಿಸಿ ಅರ್ಥಗಳನ್ನು ತಲುಪುವಂತೆ ಮಾಡುವ ವಿಸ್ಮಯದ ಮೈಭಾಷೆಯಿದು. ನಾನು ಬೇಕೆಂದೆ ಬಳಸುವ ‘ಅಂಗಚೇಷ್ಟೆ’ ಎನ್ನುವ ಶಬ್ದ ಗಾಣಭಿರ್ಯವನ್ನೂ ಲಾಲಿತ್ಯವನ್ನೂ ಹೇಳಲಾರದ ಮೈಭಾಷೆಯೇನಲ್ಲ. ವಿನಯಕುಮಾರರ ಬಾಯಿಂದ ಹೊರಡುವ ಭಾಷೆಯೂ ಇದೇ ಬಗೆಯದು. ಹೆಣ್ಣಿನದೋ ಗಂಡಿನದೋ ಎರಡೂ ಕೂಡಿದ್ದೋ, ಶುದ್ದವಾಗಿ ಎರಡೂ ಅಲ್ಲದ್ದೋ ಎಂದು ನಾವು ಅಚ್ಚರಿಯಲ್ಲಿ ಆಲಿಸುತ್ತೇವೆ. ನಟನ ಮೈ ವಿಲಾಸವನ್ನೂ ನಾವು ಆಲಿಸುತ್ತಾ ಹೋಗುವಂತೆ.

ಅರ್ಜುನ ಸವ್ಯಸಾಚಿ ಎಡಬಲಗಳ ದ್ವಂದ್ವ ದಾಟಿದ ನಿಪುಣ. ಶಿವನ ಕರುಣೆಯಲ್ಲಿ ಗಂಡು ಹೆಣ್ಣಿನ ವ್ಯತ್ಯಾಸಗಳನ್ನು ದಾಟಿದ ಎರಡನ್ನೂ ಒಳಗೊಂಡ ಅರ್ಧನಾರೀಶ್ವರ. ಒಂದನ್ನು ಮಾತ್ರ ಕಾನುವುದು ಕೇವಲವಾಗಿರುವ ಗಂಡು, ಇದಕ್ಕೆ ವಿರೋಧವಾದದ್ದು ಚಂಚಲ ಸ್ಥಿತಿ. ಕೇವಲ ಗಂಡಿನ ಪಾಡಿನಂತೆ ಕೇವಲ ಹೆಣ್ಣಿನ ‘ಪಾಡು’ ಒಂದಿದೆಯೇ? ಕಾಲವಿಲ್ಲದ ‘ಆಕಾಶ’ವಿಲ್ಲ. ಆಕಾಶವಾಗದ ಕಲವಿಲ್ಲ. ಹಾಗೆಯೇ ಕೇವಲ ಹೆಣ್ಣೂ ಅಲ್ಲ ಕೇವಲ ಗಂಡೂ ಅಲ್ಲ ಎನ್ನಬಹುದೇ? ಬೃಹನ್ನಳೆಯಾಗುವ ಗಂಡು ಮಾತ್ರ ಸವ್ಯಸಾಚಿಯೂ ನರ-ನಾರಾಯಣನೂ ಆಗುವುದೇ?

ನಾನು ತನ್ಮಯವಾಗಿ ಅನುಭವಿಸಿದ ಈ ನಾಟಕ ತಾತ್ವಿಕ ವೈಚಾರಿಕತೆಯನ್ನು ಬಾಯಿಬಿಟ್ಟು ಹೇಳುವ ಮಾತುಗಳು ನನಗೆ ಭಾರವೆನಿಸಿತು. ಭಾರವೆನಿಸಬಾರದೆನ್ನುವ ಕೋಡಂಗಿಯ ಧಾಟಿಯಲ್ಲಿ ನಟ ಆಡುವ ಮಾತುಗಳು ಕೃತಕವೆನಿಸುತ್ತವೆ. ಒಳಗಿನಿಂದ ಭಾವಿಸಬಲ್ಲಂತೆ ಅನುರಣನದಲ್ಲಿ ತಿಳಿಯುತ್ತಾ ಹೋಗಬಲ್ಲಂತೆ ನೊಯೋಜಿಸಿದ ಅಂಗಾಂಗಗಳ ಸಂಝ್ಞ ಭಾಷೆಗೆ ಅರವಿಂದರ ಫಿಲಾಸಫಿಯ ಟೀಕೆ ಟಿಪ್ಪಣಿಗಳೇಕೇ ಬೇಕು ಎನ್ನಿಸುವಷ್ಟು ನಾನು ನಾಟಕವನ್ನು ಮೆಚ್ಚಿದ್ದೇನೆ. ನೋಡಿ ತಿಳಿಯಬೇಕಾದ ನಾಟಕ. ತಿಳಿದು ನೋಡಬೇಕಾದ ನಾಟಕವಾಗಬಾರದಿತ್ತು. ಇಂತಹ ವಿಘ್ನಗಳ ನಡುವೆಯೂ ವೀಣಾ ಪಾಣಿ ಚಾವ್ಲಾ ನಮಗೆ ಹೊಸದೊಂದು ಅನುಭವವಾಗುವಂತೆ ಮಾಡಿದ್ದಾರೆ.

*

(ಜೂನ್ , ೨೦೦೪ರಂದು ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಪಾಡಿಚೆರಿಯ ಆದಿಶಕ್ತಿ ತಂಡದ, ವೀಣಾ ಪಾಣಿ ಚಾವ್ಲಾ ಬರೆದು, ಸಂಗೀತ, ನೃತ್ಯ ಸಂಯೋಜಿಸಿ, ನಿರ್ದೇಶಿಸಿದ ಬೃಹನ್ನಳೆ ನಾಟಕವನ್ನು ನೋಡಿ ವಿಜಯ ಕರ್ನಾಟಕ ಪತ್ರಿಕೆ (೨೦೦೪) ಯಲ್ಲಿ ಬರೆದ ಲೇಖನ)