‘ಅಭಿನವ’ದಿಂದ ಪ್ರಕಟವಾದ ನನ್ನ ಹಿಂದಿನ ಒಂದು ಲೇಖನಗಳ ಸಂಕಲನ ವಾಲ್ಮೀಕಿಯ ನೆವದಲ್ಲಿ ಬಗ್ಗೆ ದಿನಪ್ರತಿಕೆಯೊಂದರ ಎರಡು ಭಾನುವಾರದ ಸಂಚಿಕೆಗಳಲ್ಲಿ ಒಂದು ರಿವ್ಯೂ ಕಾಣಿಸಿಕೊಂಡಿತು. ಈ ಕಾಲದ ಕಷ್ಟಗಳನ್ನು ಸಂಕಟಗಳನ್ನು ನಿವೇದಿಸಿಕೊಳ್ಳುವ ನನ್ನ ಬರವಣಿಗೆಯನ್ನು ಯಾವೊಂದು ಖಚಿತ ತೀರ್ಮಾನಕ್ಕೂ ನೈಜ ಅನುಸಂಧಾನಕ್ಕೂ ಬರದಂತಹ ನುಣುಚಿಕೊಳ್ಳುವ ‘ವಿಲೇವಾರಿಯ’ ಪ್ರಯತ್ನವೆಂದು ಅದು ಬಣ್ಣಿಸಿತು. ಇದಕ್ಕೆ ಉತ್ತರವಾಗಿ ನಾನೇನು ಹೇಳಬಹುದು ಎಂದು (ಬರೆದವರು ಗೌರವಾನ್ವಿತ ಪ್ರೊಫೆಸರ್ ಆದ್ದರಿಂದ) ಯೋಚಿಸುತ್ತ ಇದ್ದಂತೆ ಶ್ರೀ ಅಕ್ಷರ, ಹಲವರಿಂದ ಅನುವಾದಿಸಿ ಹೊರತಂದ ಆಶೀಶ್ ನಂದಿ ಮತ್ತು ವಿನಯಲಾಲ್ ರವರು ಸಂಪಾದಿಸಿದ ‘ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು’ ಪುಸ್ತಕ ನನಗೆ ಉಪಯುಕ್ತವೆನ್ನಿಸಿತು. ಅದರಲ್ಲೂ ಈ ಪರಿಭಾಷಾಕೋಶದ ಸಂಪಾದಕರಾದ ಅಕ್ಷರ ಉದ್ಧರಿಸುವ ಈ ಕೆಲವು ಮಾತುಗಳು:

ಜಾಗತೀಕರಣದ ಹೊಸ ಜಗತ್ತಿನಲ್ಲಿ ಒಂದೆಡೆ, ಎದ್ದು ಕಾಣುವಂತೆ ಕಾಲದೇಶಗಳ ವಿಸ್ತರಣೆ ನಡೆಯುತ್ತಿವೆ; ಇನ್ನೊಂದೆಡೆ ಒಳಗೊಳಗೇ ಕಾಲದೇಶ ಪರಿಕಲ್ಪನೆಗಳ ಅರ್ಥದ ಸಂಕೋಚನೆಯ ಕ್ರಿಯೆಯೂ ಸಂಭವಿಸತೊಡಗಿದೆ. ಇದರ ಮೊದಲ ದುಪ್ಷರಿಣಾಮವೆಂದರೆ ಆದರ್ಶ ಸಮಾಜಗಳನ್ನು ಕುರಿತು ಪರ್ಯಾಯ ದೃಷ್ಟಿಕೋನಗಳ ಮೂಲಕ ಹುಟ್ಟುವ ದರ್ಶನವೊಂದರ ವಿನಾಶ, ಕಾರಣ, ಆದರ್ಶ ಸಮಾಜವೊಂದರ ಕಲ್ಪನೆಯು ಭವಿಷ್ಯದಲ್ಲಾಗಲೀ ಭೂತಕಾಲದಲ್ಲಾಗಲೀ ಅಸ್ತಿತ್ವದಲ್ಲಿರಬಲ್ಲಂಥದೇ ಆಗಿರಬೇಕಿಲ್ಲ. ಇದು ಕೇವಲ ಮನುಷ್ಯರ ಮನೋಲೋಕದೊಳಗೆ ನಡೆಯುವ ಸಾಧ್ಯತೆಗಳ ಹುಡುಕಾಟವಷ್ಟೇ ಆಗಿಯೂ ಅಡಗಿರಲು ಸಾಧ್ಯ; ಒಂದು ಸಮಾಜದೊಳಗೆ ಅಂಥ ಪರ್ಯಾಯಗಳನ್ನು ಹುಡುಕುವ ಆಟವನ್ನಾಡುವ ಸಾಮರ್ಥ್ಯ ಉಳಿದಿದೆಯೆಂಬುದೇ ಪರ್ಯಾಯ ಸಾಧ್ಯತೆಯೊ ಉಳಿದಿದೆಯೆಂಬುದಕ್ಕೆ ಸಾಕ್ಷ್ಯವಾಗಬಲ್ಲುದು. ಇಂಥ ಆಟದ ಸಾಮರ್ಥ್ಯವೇ ಇವತ್ತಿನ ಜಗತ್ತಿನ ಪ್ರಧಾನಧಾರೆಯ ಚಿಂತನಾಕ್ರಮಗಳಲ್ಲಿ ಅಪಾಯಕ್ಕೆ ಸಿಲುಕಿರುವ ಒಂದು ಪ್ರಭೇದವಾಗಿಬಿಟ್ಟಿದೆ…’ (ಅನುವಾದ: ಕೆ.ವಿ.ಅಕ್ಷರ)

ಇಂತಹ ಪರ್ಯಾಯಗಳನ್ನು ಕಾಣಬಲ್ಲ, ಅದನ್ನು ಚೈತನ್ಯಪೂರ್ಣವಾಗಿ ಕಾಣಿಸಬಲ್ಲ ಲೋಹಿಯಾರಂಥವರ ಜೊತೆ ಒಡನಾಡಲು ಸಾಧ್ಯವಾದದ್ದು ನನ್ನ ಅದೃಷ್ಟವೆಂದೇ ತಿಳಿದಿದ್ದೇನೆ. ಅವರ ವಿಚಾರಗಳ ಮೂಲಕ ಕರ್ನಾಟಕದಲ್ಲಿ ತೇಜಸ್ವಿ, ರಾಮದಾಸ್ ರಂತಹವರು ನನ್ನ ಗೆಳೆಯರಾದರು. ಈ ಗೆಳೆತನದಲ್ಲಿ ಗುಮಾನಿಯೂ ಇತ್ತು; ಗೌರವವೂ ಇತ್ತು. ಈ ವಲಯದವರೇ ಆದ ಗತಿಸಿದ ಲಂಕೇಶ್, ಚಿಂತಕ ಪ್ರೊಫೆಸರ್ ಜಿ.ಕೆ.ಗೋವಿಂದರಾವ್ ಮತ್ತು ಮಾರ್ಕ್ಸ್‌ವಾದಿಗಳಾದ ಡಾ.ರಾಮಕೃಷ್ಣರಂಥವರು ಸತ್ಯದ ಆಧಾರವಿಲ್ಲದೆ ನನ್ನನ್ನು ವೈಯುಕ್ತಿಕವಾಗಿ ಸಂಶಯಿಸಿ ಟೀಕಿಸಿದ್ದೂ ಇದೆ. ನನಗೆ ಮಂಜೂರಾಗಿದ್ದ ನಿವೇಶವನ್ನು ಹಿಂದಕ್ಕೆ ಕೊಟ್ಟು, ಬೆಂಗಳೂರಿನಲ್ಲಿ ವಾಸಿಸಲು ಕಟ್ಟಿದ ಮನೆಯೊಂದನ್ನು ಕೋರಿ ಪಡೆದಿದ್ದ ಸಂಧರ್ಭದಲ್ಲಿ ಇದು ನಡೆದದ್ದು, ಪ್ರಶಸ್ತಿ ಪಡೆದ ಹಲವು ಲೇಖಕರಿಗೆ, ನನಗೆ ಮಾತ್ರವಲ್ಲ, ಮಾತ್ರವಲ್ಲ, ಶ್ರೀ ಮೊಯಿಲಿಯವರು ನಿವೇಶನವನ್ನು ಮಂಜೂರು ಮಾಡಿದ್ದರು. ಶ್ರೀ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ನನ್ನ ಕೋರಿಕೆಯ ಮೇಲೆ, ನನ್ನ ನಿವೇಶನವನ್ನು ಹಿಂದೆ ಪಡೆದು, ಕಟ್ಟಿದ ಮನೆಯನ್ನು (ಬದಲಾದ ಮಾರುಕಟ್ಟೆಯ ಬೆಲೆಯನ್ನು ಆಧರಿಸಿ ಹಲವರಿಗೆ ಕೊಟ್ಟಾಗಿನ ಬೆಲೆಗಿಂತ ಹೆಚ್ಚನ್ನು ಪಡೆದು) ನನಗೆ ಕೊಡಲಾಯಿತು. ಪಟೇಲರು ಬಾಲ್ಯದ ಗೆಳೆಯರೂ ಆಗಿದ್ದರೆಂಬುದು ನನ್ನ ಮೇಲಿನ ಗುಮಾನಿಗೆ ಕಾರಣವಾಯಿತು. ಕಾನೂನು ಬಾಹಿರವಾದದ್ದೇನೂ ಆಗಿರದಿದ್ದರೂ ನನ್ನ ಮೇಲೆ ವೈಯುಕ್ತಿಕ ದಾಳಿಯಾಯಿತು. ಇದರಿಂದ ನಾನು ವಿಚಲಿತನಾಗಿದ್ದು ಉಂಟು. ಯಾಕೆಂದರೆ ನಾನು ನನ್ನ ಟೀಕಾಕಾರರ ವೈಯುಕ್ತಿಕ ಪ್ರಾಮಾಣಿಕತೆಯನ್ನು ಸಂಶಯಿಸಿರಲಿಲ್ಲ. ಯಾವುದಾದರೂ ಒಂದು ದಿನ ನನ್ನ ಬಗ್ಗೆಯೇ ಪಾರದರ್ಶಕವಾಗಿ ಬರೆದುಕೊಳ್ಳುವುದು ಸಾಧ್ಯವಾದಾಗ ನಾನು ಈಗ ಮರೆತಿರುವ ನೋವಿನ ಕಥೆಯನ್ನು ಹೇಳಿಕೊಳ್ಳುವೆ.

ಈಗ ಹೇಳಬೇಕಾದ್ದು, ಈ ಸಂಕಲನದ, ಸಂದರ್ಭದಲ್ಲಿ, ಮುಖ್ಯವಾಗಿ ಇದುಃ ಕೋಮುವಾದಿಗಳಿಗೆ, ಭ್ರಷ್ಟಾಚಾರಿಗಳಾದ ಧನಿಕರಿಗೆ ಆತ್ಮ ವಿಮರ್ಶೆ ಸಾಧ್ಯವಿಲ್ಲ; ಅಗತ್ಯವೂ ಇಲ್ಲ. ಆದರೆ ಇಂಥವರಿಗೆ ವಿರೋಧಿಯಾದವನು ತನ್ನ ಬಂಡಾಯಶೀಲತೆಯನ್ನೂ, ಅದರಿಂದ ಹುಟ್ಟುವ, ತೋರುಗಾಣಿಕೆಯ ಚಪಲವನ್ನೂ ಆತ್ಮ ವಿಮರ್ಶೆಗೆ ಸದಾ ಒಳಪಡಿಇಕೊಳ್ಳುತ್ತಲೇ ಇರಬೇಕಾಗುತ್ತದೆ. ಲಂಕೇಶರು ಮಾತ್ರ ತಮ್ಮ ಸೋಗುಗಳನ್ನೂ ಕಟುವಾದ ಅಭಿಪ್ರಾಯಗಳನ್ನೂ ತಮ್ಮ ಅತ್ಯುತ್ತಮ ಕಥೆಗಳಲ್ಲಿ-ಕೇವಲ ಮಂಡನೆಯಾಗದಂತೆ ಶೋಧನವಾಗುವ ಕಥೆಗಳಲ್ಲಿ-ಮೀರುತ್ತಾರೆ. ತನ್ನನ್ನೇ ತಾನು ಗೇಲಿಮಾಡಿಕೊಳ್ಳುವ, ಅಹಂಭಾವದ ಸೋಂಕಿಲ್ಲದ ಹಾಸ್ಯದಲ್ಲಿ, ತಾನೆಂಬುದು ಹಗುರಾಗಿಬಿಟ್ಟು, ಕಾಣುವ ‘ಅನ್ಯ’ದಲ್ಲೇ ತನ್ನನ್ನು ತೊಡಗಿಸಿಕೊಳ್ಳುವ ತನ್ಮಯತೆಯಲ್ಲಿ ತೇಜಸ್ವಿಯವರು ಬಂಡಾಯದ ಮಾತಿನ ಚಪಲದ ಸ್ವಪ್ರತಿಷ್ಠೆಯನ್ನು ಮೀರುತ್ತಾರೆ. ಹೀಗೆ ಮಾಡಲಾರದವರು ಚೀನಾದ, ಸೋವಿಯತ್ತಿನ, ಈಚೆಗೆ ಬಂಗಾಳದ ಲೆಫ್ಟಿಸ್ಟರಂತೆ ಬ್ಯಾಡ್ ಫೈತ್ ನಲ್ಲಿ ಬದುಕುವವರಾಗುತ್ತಾರೆ.

ಈ ಎಲ್ಲದರ ನಡುವೆ ಯಾವತ್ತೂ ಗೆಳೆಯ ಸುಬ್ಬಣ್ಣನ ಜೊತೆ ನನ್ನೊದೊಂದು ನಿಸ್ಸಂಕೋಚದ ಸಂವಾದ ನಡೆದಿತ್ತು. ಕರ್ನಾಟಕದ ಹೊರಗೆ ರಾಮಚಂದ್ರ ಗಾಂಧಿಯಂಥವರು, ಆಶೀಶ್ ನಂದಿಯವರು, ವಿದ್ಯಾರ್ಥಿಯಾಗಿದ್ದಾಗ ಇಂಗ್ಲೆಂಡಿನಲ್ಲಿ ರಿಚರ್ಡ್ ಹಾಗರ್ಟರು, ಮಾರ್ಟಿನ್ ಗ್ರೀನರು ನನ್ನ ಚಿಂತನೆಗಳು ಇನ್ನೂ ದಟ್ಟಗೊಳ್ಳುವಂತೆ ಮಾಡಿದರು. ಕಾಗೋಡು ಸತ್ಯಾಗ್ರಹದ ದಿನಗಳಿಂದ ನನಗೆ ಆತ್ಮೀಯರಾದ ಕನಸುಗಾರ ರಾಜಕಾರಿಣಿ ಶಾಂತವೇರಿಯವರೂ, ನಾನು ಸಾಹಿತ್ಯ ವಿಮರ್ಶೆಯಲ್ಲಿ ಬಹುವಾಗಿ ಗೌರವಿಸುವ ಲೀವಿಸರೂ, ಒಟ್ಟು ಚಿಂತನೆಯನ್ನೂ, ನಾನು ಎಲ್ಲರಿಂದ ಪಡೆದದ್ದನ್ನೂ ಮರು ಚಿಂತನೆಗೆ ಒಡ್ಡುವಂತೆ ಮಾಡಿದ ಜಿಡ್ಡು ಕೃಷ್ಣಮೂರ್ತಿಗಳೂ, ಕನ್ನಡದಲ್ಲಿ ನನಗೆ ಆಪ್ತರಾದ ಕವಿ ಅಡಿಗರೂ ನನ್ನ ಮನೋಲೋಕದ ಹಲವು ಸಂಘರ್ಷಗಳಿಗೂ, ಒಂದಕ್ಕಿನ್ನೊಂದನ್ನು ಹೊಂದಿಸಿ, ಅನುಸಂಧಾನಿಸಿ ಬೆಸೆಯಬೇಕಾದ ಸವಾಲಿಗೂ, ಎಲ್ಲ ಒಳತೋಟಿಯಲ್ಲೂ ಸತ್ಯ ಸರಳವಾಗಿರಬಹುದೆಂಬ ಆಕಸ್ಮಿಕವಾಗಿ ಹೊಳೆದುಬಿಡುವ ಅರಿವಿಗೂ ಕಾರಣರಾದರು.

ನಮಗೆ ಈ ಕಾಲದ ಎಲ್ಲ ಸಂಕಟಗಳಿಗೂ, ಗೊಂದಲಗಳಿಗೂ ಕಾರಣರಾದ ಬಲಪಂಥೀಯರಂತೆಯೂ ಆಗದೆ, ಒಂದೋ ವಾಕ್ ಶೂರ ಅಥವಾ ರಕ್ತ ಪಿಪಾಸು ಎಡಪಂಥೀಯರಂತೆಯೂ ಆಗದೆ, ಒಳಬಾಳಿನಲ್ಲೂ ಗೋಚರಿಸುವ ವೈರುಧ್ಯಗಳನ್ನು ಒರೆಸಿಹಾಕದಂತೆ, ಓದುಗನನ್ನೂ ಈ ಸಂವಾದಕ್ಕೆ ಆಹ್ವಾನಿಸುವಂತೆ ನಾನು ಬರೆಯಬೇಕೆಂಬ ಆಸೆ ಉಳ್ಳವನು. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ತಿಳಿದಿಲ್ಲ. ಬರವಣಿಗೆಯಲ್ಲಿ ತೋರುವ ಅರ್ಧ, ಸೂಕ್ಷ್ಮಜ್ಞನಾದ ಓದುಗ ಒದಗಿಸುವ ಇನ್ನರ್ಧದಿಂದ ಪೂರ್ಣವಾಗುತ್ತದೆ ಎಂಬ ಭರವಸೆಯ ಲೇಖಕ ನಾನು.

ಇಷ್ಟೆಲ್ಲ ಹೇಳುವಾಗಲೂ ಮನುಷ್ಯ ಮಾತ್ರದವನು ನಾನು ಎಂಬುದನ್ನು ಮರೆಯಲಾರೆ. ರಾಜ್ಯಸಭೆಗೆ ಆಯ್ಕೆಯಾಗುವುದು ಅಸಾಧ್ಯವೆಂದು ಗೊತ್ತಿದ್ದೂ, ಅದೊಂದು ಭ್ರಷ್ಟಾಚಾರದ ವಿರುದ್ಧದ ಜೆಶ್ಚರ್ ಎಂದು ತಿಳಿದು ನಿಂತೆ. ನಿರೀಕ್ಷಿಸಿದಂತೆ ಸೋತೆ. ನನ್ನ ಬಗ್ಗೆ ಪ್ರೀತಿ ಮತ್ತು ಅಭಿಮಾನವಿರುವ ಕೆಲವು ಪರಿಚಿತರು, ಹಲವು ಅಪರಿಚಿತರು ನಾನು ಅಧಿಕಾರದ ಆಸೆಯಿಂದ ನಿಂತದ್ದೇ ಎಂದು ಗುಮಾನಿಸಿ ವಿಷಾದಿಸಿದರು. ನನ್ನನ್ನು ಕಂಡಾಗ ಕೋಪದಲ್ಲಿ ಟೀಕಿಸಿದರು. ಎಲ್ಲ ಮುಗಿದ ಮೇಲೆ ಈ ಚುನಾವಣೆಯ ನಾಟಕದಿಂದ ನಾನೇನೂ ಸಾಧಿಸಿದಂತೆ ಆಗಲಿಲ್ಲವೆಂದು ಗೊತ್ತಾಯಿತು. ನನಗೂ ಸುದ್ದಿಯಲ್ಲಿ ಇರಬೇಕೆಂಬ ಆಸೆಯಿರಬಹುದೆಂದು ಸದಾ ನನ್ನನ್ನು ಟೀಕಿಸುವ, ಸಂಶಯಪಡುವ ನನ್ನ ಹೆಂಡತಿ, ‘ಇನ್ನು ಮುಂದೆ ತೆಪ್ಪಗಿರಿ, ನಿಮ್ಮನ್ನು ಓಲೈಸಿಕೊಂಡು ಬರುವ ಖದೀಮರಿಂದ ದೂರವಿರಿ’ ಎಂದಳು.

ನನ್ನ ಗೆಳೆಯರಿಬ್ಬರು ಅಧಿಕಾರದಲ್ಲಿ ಇದ್ದಾಗ ಸದಾ ಯಾವುದಾದರೂ ಲಾಭಕ್ಕಾಗಿ ನನ್ನ ಸುತ್ತ ಸುಳಿದು ಕಾಡುತ್ತ ಇದ್ದವರಲ್ಲಿ ಕೆಲವರು ಪುಣ್ಯವಶಾತ್ ಈ ದಿನಗಳಲ್ಲಿ ನನ್ನಿಂದ ದೂರವಾಗಿದ್ದಾರೆ. ಕೇವಲ ಪ್ರೀತಿ ಇರುವವರು ಮಾತ್ರ, ನನ್ನನ್ನು ಓದಿಕೊಂಡುವರು ಮಾತ್ರ, ನನ್ನವರಾಗಿಯೇ ಉಳಿದಿದ್ದಾರೆ. ದಾಕ್ಷಿಣ್ಯಕ್ಕೆ ಬಸುರಾಗಿ ಹೆರಲು ಜಾಗವಿಲ್ಲ ಎನ್ನುವ ಪರಿಸ್ಥಿತಿಯಿಂದ ಪಾರಾಗಿದ್ದೇನೆ. ಹಲವರ ಒಡನಾಟದಲ್ಲಿ ಸದಾ ಇರಬೇಕೆಂಬ ನನ್ನ ದೌರ್ಬಲ್ಯ ವಯಸ್ಸಾಗುತ್ತ ಇದ್ದಂತೆ, ಈ ನನ್ನ ಎಪ್ಪತ್ತೈದನೇ ವಯಸ್ಸಿನಲ್ಲಿ, ಕಮ್ಮಿಯಾಗಿದೆ. ನಾನು ಗೌರವಿಸುವ ಪ್ರೀತಿಸುವ ಹಲವು ನನಗಿಂತ ಕಿರಿಯರಾದ ಗೆಳೆಯರು ಕಣ್ಮರೆಯಾಗಿ ಬದುಕಿನ ಕ್ಷಣಿಕತೆಯನ್ನೂ, ಅದರ ಪ್ರತಿಕ್ಷಣದ ವಿಸ್ಮಯವನ್ನೂ ನನಗೆ ಮನದಟ್ಟಾಗುವಂತೆ ಮಾಡಿದ್ದಾರೆ.

ಅಧಿಕಾರದಲ್ಲಿ ಇರುವವರಿಗೆ ಪ್ರಿಯರಾಗಿ ಇರುವುದು, ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಇದ್ದಾಗಲೂ, ಎಷ್ಟು ಅಪಾಯಕಾರಿಯೆಂಬುದು ನನಗೆ ಕ್ರಮೇಣ ಮನದಟ್ಟಾಗುತ್ತಾ ಹೋಗಿದೆ. ಈ ಬಗ್ಗೆ ನಾನು ಇನ್ನೂ ಹೆಚ್ಚು ಬರೆಯುವುದು ಇದೆ. ಇದನ್ನು ಬರೆದಾಗ ಇನ್ನೂ ಹಸಿವಾಗಿಯೇ ಉಳಿದಿವರು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆಯೂ, ಅದರ ಹಿಂದಿರುವ ಭ್ರಷ್ಟಾಚಾರದ ಅಗೋಚರ ಕಬಂಧಬಾಹುವಿನ ಬಗ್ಗೆಯೂ ಬರೆದಂತಾಗುತ್ತದೆ.

ಕವಿ ಯೇಟ್ಸ್ ಐರ್ಲೆಂಡೆನ್ನೂ ಪ್ರೀತಿಸಿದ; ಇಂಗ್ಲೆಂಡನ್ನೂ ಪ್ರೀತಿಸಿದ. ಆದರೆ ಈ ಎರಡು ದೇಶಗಳೂ ಪರಸ್ಪರ ವೈರಿಗಳಾಗಿದ್ದವು. ಯೇಟ್ಸ್‌ನ ವರ್ತನೆಗಳು ಎರಡೂ ದೇಶದವರ ಗುಮಾನಿಗೂ ಕಾರಣವಾದವು. ಏಕಕಾಲದಲ್ಲಿ ಈ ಎರಡು ದೇಶಗಳ ರಾಜಕೀಯ ಸಂಘರ್ಷದಲ್ಲೂ, ಆಧ್ಯಾತ್ಮಿಕವಾದ ದರ್ಶನದಲ್ಲೂ, ದೇಶದ ರಾಜಕಾರಣಕ್ಕೆ ಬಲಿಯಾದ ಅತ್ಯಂತ ಗಾಢವಾದ ವೈಯುಕ್ತಿಕ ಪ್ರೇಮಪ್ರಕರಣದಲ್ಲೂ ಸಿಕ್ಕಿಕೊಂಡ ಸಂಕಟದಲ್ಲಿ ಈ ಕವಿ ಬರೆದ Easter 1916 ನನಗೆ ಪ್ರಿಯವಾದ ಪದ್ಯ. ತನ್ನ ಇಷ್ಟಗಳ ಸಾಧನೆಯಲ್ಲಿ ತೊಡಗಿದ ದೊಡ್ಡ ರಾಜಕಾರಣಿಯೊಬ್ಬನಿಗೆ ಸತ್ಯದ ಒಳನೋಟಗಳು ಇರುತ್ತವೆ; ಆದರೆ ಸದ್ಯದ ಪ್ರಯೋಜನದ ದೃಷ್ಟಿಯಿಂದ ಅವನು ಬಿಡುಗಡೆಯಾಗಲಾರ ತಮ್ಮ ವಿಚಾರಗಳಿಗಾಗಿ ಅವರು ದುಡುಕಿ ಹುತಾತ್ಮರಾದಾಗ ಶಾಶ್ವತಕ್ಕೆ ಅವರು ಸಲ್ಲುವವರಂತೆ ಅವರನ್ನು ಒಪ್ಪದೆ ಯೇಟ್ಸ್ ಗೆ ತನ್ನ ಅನುಮಾನದಲ್ಲೂ ಕಾಣುತ್ತಾರೆ. ಕವಿಯೂ ವೈಯುಕ್ತಿಕವಾಗಿ ಈ ಇಹದಿಂದ ಬಿಡುಗಡೆಯಾಗಲಾರನಾದರೂ, ತನ್ನ ಕಾವ್ಯದ ಕಾಯಕದಲ್ಲಿ ಎಲ್ಲ ಗೊಂದಲಗಳ ಕೊಚ್ಚೆಯಿಂದ ಮೇಲೆದ್ದು, ಎಲ್ಲವನ್ನೂ ಸಾಕ್ಷಿಯಾಗಿ ಕಾಣುವ ಆಶಯ ಅವನ ಬರವಣಿಗೆಯಲ್ಲಿ ಇರುತ್ತದೆ. ಈ ಆಶಯ ಪೂರ್ಣ ಸಫಲವಾಗದೇ ಇದ್ದರೂ ಅಂತಹ ತುಡಿತವನ್ನು ನಮ್ಮಲ್ಲಿ ಜೀವಂತವಾಗಿ ಕಾವ್ಯ ಉಳಿಸಬಲ್ಲದಾಗಿರುತ್ತದೆ. ಇದೇ ಸಾಹಿತ್ಯದ ಪರಮಲಾಭಗಳಲ್ಲಿ ಮುಖ್ಯವಾದ್ದು. ‘ಸದ್ಯಃ ಪರನಿವೃತ್ತಯೇ’ ನಮ್ಮ ಪೂರ್ವ ಸೂರಿಗಳ ಮಾತು ಇದು.

ಇಂತಹ ಪ್ರೇರಣೆಗಳಿಂದ ಹುಟ್ಟಿದ್ದು ನನ್ನ ಕಾದಂಬರಿ ‘ಅವ್ಯಸ್ಥೆ’. ಇದರ ವಿರುದ್ಧ ನನ್ನ ಪ್ರಗತಿಶೀಲ ಗೆಳೆಯರೇ ಕೋರ್ಟಿಗೆ ಹೋದರು; ಗೆಳೆಯ ರಾಮದಾಸ್ ನನ್ನ ವಿರುದ್ಧ ಬಂಡೆದ್ದರು. ಆದರೆ ರಾಮದಾಸ್ ಎಷ್ಟು ಪ್ರಾಮಾಣಿಕರೆಂದರೆ, ಎಷ್ಟು ಪಾರದರ್ಶಕ ಮನಸ್ಸಿನವರೆಂದರೆ, ತಮ್ಮದು ತಪ್ಪೆಂದು ಹೊಳೆದದ್ದೇ ತನಗಾದ ನಾಚಿಕೆಯನ್ನು ತನ್ನದೇ ಆದ ನಿರಂಬಳ ಘನತೆಯಲ್ಲಿ ನನಗೆ ಹೇಳಿಕೊಂಡರು. ನನ್ನ ಪುಣ್ಯವೆಂದರೆ ಇಂತವರು ನನ್ನನ್ನು ವಿರೋಧಿಸಿದಾಗ, ಇವರಿಗೆ ವಿರೋಧವಾದ ಬಣದ ರಾಜಕೀಯದಲ್ಲಿ ನನ್ನನ್ನು ನಾನು ಗುರುತಿಕೊಳ್ಳಲು ಹೋಗಲಿಲ್ಲ. ಈ ವಿಷಯದಲ್ಲಿ ನನಗೆ ಕೊನೆತನಕ ಅನೂಹ್ಯ ಪ್ರತಿಭಾವಶಾಲಿಗಳಾಗಿ ಉಳಿದಿದ್ದ ಕವಿ ಅಡಿಗರ ರಾಜಕೀಯ ನಿಲುವುಗಳನ್ನು ನಾನು ಒಪ್ಪದೇ ಉಳಿದೆ. ಆಳದಲ್ಲಿ ನಾನೂ, ನನ್ನನ್ನು ಗುಮಾನಿಯಿಂದ ಟೀಕಿಸುತ್ತ ಇದ್ದ ಗೆಳೆಯರೂ ನಮ್ಮ ಪ್ರಾಮಾಣಿಕ ಒಳನೋಟಗಳನ್ನು ಕಳೆದುಕೊಳ್ಳಲಿಲ್ಲ. ಸ್ವಾರ್ಥದ ರಾಜಕಾರಣದಲ್ಲಿ ನಿರತರಾದವರಿಗೆ ನಮ್ಮ ಈ ಅಳಿಯದ ಪಾರದರ್ಶಕವಾದ ಸ್ನೇಹ ಅರ್ಥವಾಗದು. ವಿರೋಧಭಾಸವೆಂದೇ ಕಾಣಬಹುದು.

ಈ ಸಂಕಲನದ ಹಲವು ಲೇಖನಗಳಿಗೆ ಈ ನನ್ನ ಅಲೆಯುವ ಮಾತುಗಳೆಲ್ಲವೂ ಅಗತ್ಯ. ಆದರೆ ಓದದೇ ನಾನು ಬರೆಯುವುದು ‘ವಿಲೇವಾರಿ’ಯೆಂದೂ ‘ಸಮಜಾಯಿಷಿ’ಯೆಂದೂ ತಿಳಿಯುವುದೇ ರಾಜಕಾರಣವಾಗಿರುವವರಿಗೆ ನಾನು ಬರೆಯುವುದೆಲ್ಲವೂ ಅಪ್ರಸ್ತುತ.

*

ನಾನು ಮೇಷ್ಟ್ರಾಗಿದ್ದಾಗ ನನ್ನ ದೀರ್ಘ ಸ್ವಗತಗಳಿಗೆ ಕಿವಿಗೊಟ್ಟು, ಕೇವಲ ಒಪೀನಿಯನ್ ಆಗಬಹುದಾದ ನನ್ನ ವಿಚಾರಗಳನ್ನು ನಾನೇ ಮೀರುವಂತೆ ತಮ್ಮ ಧೀಮಂತಿಕೆಯಿಂದ ನೆರವಾಗುತ್ತ ಇದ್ದವರು ಅನೇಕ ಮಂದಿ. ಈಗಲೂ ಅಂತಹ ಗೆಳೆಯರು, ಮನು ಚಕ್ರವರ್ತಿ, ಇಸ್ಮಾಯಿಲ್ ಅಂಥವರು, ನನ್ನ ಪಾಲಿಗೆ ಇದ್ದಾರೆ. ನನ್ನ ಕಥೆ, ಕಾದಂಬರಿ, ಕವಿತೆಗಳೂ, ನನ್ನ ಈ ಸಂಕಲನದ ಬಗೆಗಿನ ಬರವಣಿಗೆಯೂ ಅನ್ಯೋನ್ಯವೆಂಬಂತೆ ನನ್ನನ್ನು ಕಟ್ಟುತ್ತ ಹೋಗಿವೆ ಎಂದು ತಿಳಿದಿದ್ದೇನೆ. ಹೀಗೆ ಕಟ್ಟಿಕೊಳ್ಳುವುದು ಯಾವತ್ತೂ ನನಗೆ ಅಯೋಜಿತವೂ ಅನೀರಿಕ್ಷಿತವೂ ಆಗಿರುತ್ತವೆ. ಕಾಲಮೇಲೆ ನಿಂತು ಮಾತಾಡುವಾಗ ಅಕಸ್ಮಾತ್ತಾಗಿ ಒದಗುವ ವಿಚಾರಗಳೂ ಇಲ್ಲಿವೆ. ಆಡಿದ್ದನ್ನು ಕೇಳಿ ಬರೆದುಕೊಂಡ ರಹಮತ್ ತರೀಕೆರೆಯವರ ಸಹೃದಯತೆಯಿಂದಾಗಿ ಇಲ್ಲಿ ಪ್ರಕಟವಾದ ಬಿಎಂಶ್ರೀ ಮೇಲಿನ ನನ್ನ ಮಾತಿನ ಲಹರಿಯಲ್ಲಿ ಕಾಣಿಸುವ ವಿಚಾರಗಳು, ಕುವೆಂಪುರವರ ‘ಸ್ಮಶಾನ ಕುರುಕ್ಷೇತ್ರ’ದ ಬಗ್ಗೆ ನಾನಾಡಿದ ಮಾತುಗಳು, ಆಡಿಬಿಟ್ಟ ಮಾತಿನಂತೆಯೇ ಕಾಣುವ, ಪ್ರಾಯಶಃ ಓದಲು ತೊಡಕಾದರೂ ಸದ್ಯವೆನ್ನಿಸುವ ನನ್ನ ಮಾತುಗಳು, ಈ ಬಗೆಯವು.

ನಾನು ಮೇಲೆ ಹೆಸರಿಸಿದ ಹಲವರು (ಜಗಳಗಳ ನಡುವೆಯೂ ಸ್ನೇಹಿತರಾಗಿ ಉಳಿದವರು) ಈ ಸಂಕಲನದಲ್ಲೂ, ‘ಋಜುವಾತು’ ಸಂಕಲನದಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದೊಮ್ಮೆ ನನ್ನ ಹಿತೈಷಿಗಳೂ ಗೆಳೆಯರೂ ಆಗಿದ್ದ ಶ್ರೀ ವೈಕುಂಠರಾಜುರವರಿಗೆ ಬರೆದಿದ್ದ ಪತ್ರವೊಂದನ್ನು ರವಿಕುಮಾರ್ ಹುಡುಕಿ ತಂದು ಉಪಕಾರಮಾಡಿದ್ದಾರೆ. ಹಾಗೆಯೇ ಶ್ರೀ ಶಂಕರ ಮೊಕಾಶಿ ಅವರಿಗೆ ಅವಧೇಶ್ವರಿ ಕಾದಂಬರಿ ಓದಿ ಬರೆದಿದ್ದ ಪತ್ರವನ್ನು ಸಹ. ಸುಮಾರು ನಲವತ್ತು ವರ್ಷಗಳ ಹಿಂದೆ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತ ಇದ್ದ ವೈಚಾರಿಕ ಸರಳತೆಯ ನಿಷ್ಠುರತೆಗೆ (ಅಥವಾ ಹುಂಬುತನವೆಂದು ಕಾಣಬಹುದಾದ ಉತ್ಸಾಹಕ್ಕೆ) ಉದಾಹರಣೆಯಾಗಿ ನಾನು ಆ ದಿನಗಳಲ್ಲಿ (೧೯೬೧?) ಪ್ರಕಟಿಸದೇ ಇದ್ದ ನರಸಿಂಹಸ್ವಾಮಿಗಳ ‘ಶಿಲಾಲತೆ’ಯ ಒಂದು ರಿವ್ಯೂನನ್ನೂ ಇಲ್ಲಿ ಪ್ರಕಟಿಸುತ್ತ ಇದ್ದೇನೆ. ಇದರ ಬಗ್ಗೆ ನಾನು ನೆನಪಿನಿಂದ ಹೇಳುವ ಕೆಲವು ವಿಷಯಗಳು ಇವೆ.

ಇದನ್ನು ಆ ದಿನಗಳಲ್ಲಿ ಓದಿದ ವಿದ್ಯಾರ್ಥಿಯಾಗಿದ್ದ ತೇಜಸ್ವಿ ಹೀಗೆ ಬರೆಯುವುದು ಕೂಡ ನಿಮಗೆ ಗೊತ್ತಿಲ್ಲದಂತೆ ಸಾಹಿತ್ಯದ ಸೂಕ್ಷ್ಮ ರಾಜಕೀಯವಾಗಬಹುದು ಎಂದಿದ್ದರೆಂದು ನೆನಪು. ನವ್ಯದ ಮಂಡನೆಯ ಹುಮ್ಮಸ್ಸಿನ ಕಾಲ ಅದು. ಕುವೆಂಪು ಕಾವ್ಯದ ಬಗ್ಗೆ ಆ ದಿನಗಳಲ್ಲಿ ನಾವು-ಲಂಕೇಶರೂ ಕೂಡಿದಂತೆ-ಉತ್ಸಾಹಿಗಳಾಗಿರಲಿಲ್ಲ. ನಾನಂತೂ ಕುವೆಂಪುರವರ ಮಹಾಕಾವ್ಯವೆಂದರೆ ಅವರ ಗದ್ಯ ಕೃತಿಗಳೆಂದೇ ತಿಳಿದಿದ್ದೆ. ನಮ್ಮ ಜೊತೆಗೇ ಅವರ ಬರವಣಿಗೆಯ ಹುಡುಕಾಟದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ತೇಜಸ್ವಿಗೆ ಕುವೆಂಪು ಕಾವ್ಯದ ಬಗೆಗಿನ ನಮ್ಮ ನಿಲುವು ಸರಿಯೆನ್ನಿಸಿರಲಿಲ್ಲ ಮಾತ್ರವಲ್ಲ ಅವರಲ್ಲೊಂದು ನಮ್ಮ ಬಗ್ಗೆ ಗುಮಾನಿಯೂ ಇತ್ತು ಎನ್ನುವುದು ಅವರ ‘ಅಣ್ಣನ ನೆನಪು’ ಪುಸ್ತಕದಲ್ಲಿ ಸೂಚ್ಯವಾಗಿ ಬಂದಿದೆ.

ತೇಜಸ್ವಿ ತನ್ನ ತಂದೆಯ ದುರ್ಬಳಕೆಯಲ್ಲಿ ನಡೆಯುತ್ತ ಇದ್ದ ಯೂನಿವರ್ಸಿಟಿಯ ಹೊಲಸು ಜಾತಿ ರಾಜಕಾರಣದಿಂದ ದೂರವೇ ಉಳಿದರು ಎಂಬುದನ್ನು ಇಲ್ಲಿಯೇ ನಾನು ಹೇಳದಿದ್ದರೆ ತಪ್ಪಾಗುತ್ತದೆ. ಜೊತೆಗೇ ತೇಜಸ್ವಿಯವರ ನಿಲುವನ್ನು-ಕುವೆಂಪುಕಾವ್ಯದ ರೆಟರಿಕ್ ಅನ್ನು ಟೀಕಿಸಿದವರು ಜಾತಿಭಾವನೆಯಿಂದಲೂ ಪ್ರೇರಿತರಾಗಿದ್ದಿರಬಹುದು ಎಂಬುದನ್ನು- ‘ಅಣ್ಣನ ನೆನಪು’ ಕೃತಿಯನ್ನು ಧಾರವಾಹಿಯಾಗಿ ಪ್ರಕಟಿಸಿದ ಅವರ ಮೆಚ್ಚಿನ ಸ್ನೇಹಿತರೇ ಆಗಿದ್ದ ಲಂಕೇಶರೂ ಒಪ್ಪಲಿಲ್ಲ. ಈ ವಿರೋಧಾಭಾಸಗಳು ಕೇವಲ ವೈಯುಕ್ತಿಕ ತೆವಲುಗಳಿಂದ ಹುಟ್ಟಿಕೊಂಡವು ಅಲ್ಲ. ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಗಾಢವಾಗಿ ತಿಳಿಯಲು ಇವೆಲ್ಲವೂ ಮುಖ್ಯವಾದ ಸಂಗತಿಗಳು.

ಕುವೆಂಪು ಕಾವ್ಯದ ನಮ್ಮ ವಿಮರ್ಶೆಗೆ ಕಾರಣ ಖಂಡಿತ ಜಾತಿ ರಾಜಕೀಯವಾಗಿರಲಿಲ್ಲ. ಅಪ್ರಜ್ಞಾಪೂರ್ವಕವಾಗಿಯೂ ಆಗಿರಲಿಲ್ಲ. ಕುವೆಂಪುರವರ ಘನ ರೆಟರಿಕ್ ನಿಂದ ಬಿಡುಗಡೆಯಾಗುವುದು ಆ ಕಾಲದ ಅಗತ್ಯವಾಗಿತ್ತು. (ತೇಜಸ್ವಿಗೂ) ಕುವೆಂಪು ಬಳಸುತ್ತ ಇದ್ದ ಏರುದನಿಯ ಭಾಷೆಯ ಅನುಕರಣೆ ಮಾಡುತ್ತ ಇದ್ದ ಆ ಕಾಲದ ಯಾರೂ ನಿಜವಾದ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದು ಸಾಧ್ಯವಿರಲಿಲ್ಲ. ಅಡಿಗರು ಈ ಕಾರಣಕ್ಕಾಗಿ ನಮಗೆ ಮುಖ್ಯರಾದರು.

ಆದರೆ ಹಿನ್ನೋಟದಲ್ಲಿ ನನಗೆ ಈಗ ಅನ್ನಿಸುವುದು ಕುವೆಂಪು ತನ್ನ ಕಾಲದ ನಾಡಿಮಿಡಿತಕ್ಕೂ ಭವಿಷ್ಯದ ನಮ್ಮ ಬೆಳವಣಿಗೆಗೊ ಸ್ಪಂದಿಸಿದ ಯುಗದ ಕವಿ ಎಂದು. ಅವರಿಗೆ ಮಾತ್ರ ಸಲ್ಲುತ್ತ ಇದ್ದ, ತಮ್ಮ ತಪಸ್ವಿಯಾದ ಶೀಲದಿಂದಲೇ, ಗಳಿಸಿಕೊಂಡ ಶೈಲಿ ಅವರದು. ಬೇರೆಯವರಲ್ಲಿ ಅದು ಹಾಸ್ಯಾಸ್ಪದವಾಗಿ ನಮಗೆ ಕಾಣುತ್ತ ಇತ್ತು-ಹಿಂದೆ ಮಾತ್ರವಲ್ಲ, ಈಗಲೂ. ಆದರೆ ಈ ಎಲ್ಲ ನಮ್ಮ ಅನುಮಾನಗಳನ್ನು ಮೀರಿ ನಾವು ಕಾಣಲೇ ಬೇಕಾದ್ದು ಏನೆಂದರೆ, ಕಾದಂಬರಿಗಳಲ್ಲಿ ಮಾತ್ರವಲ್ಲದೆ ವಿಮರ್ಶೆಗಳಲ್ಲೂ, ನಾಟಕಗಳಲ್ಲೂ, ಅವರ ಕೆಲವು ಅತ್ಯುತ್ತಮ ಕವಿತೆಗಳಲ್ಲಿ ಕೂಡ ಅವರು ನಮ್ಮ ಕಾಲದ ದೊಡ್ಡ ಚೇತನಾ ಪುರುಷ.

ಕ್ರಮೇಣ ಕುವೆಂಪು ಬರೆಹದ ಬಗ್ಗೆ ಈ ದಿಕ್ಕಿನಲ್ಲಿ ನನ್ನಲ್ಲಾದ ಬದಲಾವಣೆಗಳನ್ನೂ ಇಲ್ಲಿ ದಾಖಲಿಸಿದ್ದೇನೆ. ಕುವೆಂಪುರವರಿಗೆ ಆ ದಿನಗಳಲ್ಲಿ ಅವರನ್ನು ಬಳಸಿಕೊಳ್ಳುತ್ತ ಇದ್ದ ಅವರ-ಖೋಟಾ ಮತ್ತ ಸಾಜಾ-ಹಿಂಬಾಲಕರಿಂದಲೇ ಹೆಚ್ಚು ಅನ್ಯಾಯವಾಗಿದೆ. ಖಂಡಿತವಾಗಿ ನವ್ಯರ ವಿಮರ್ಶೆಯಿಂದಲ್ಲ. (ಕುವೆಂಪು ಬಗ್ಗೆ ನನ್ನ ಬದಲಾದ ನಿಲುವನ್ನು ಗುರುತಿಸಿ ಬರೆದ ವಿಮರ್ಶಕ ನಾಗಭೂಷಣರಿಗೆ ನಾನು ಕೃತಜ್ಞನೆಂದು ಹೇಳುವುದು ಇಲ್ಲಿ ಪ್ರಸ್ತುತ.)

ಆ ಕಾಲದಲ್ಲಿ ನಡೆಯುತ್ತ ಇದ್ದ, ಕುವೆಂಪು ಮತ್ತು ಕನ್ನಡದ ಹೆಸರಿನಲ್ಲೇ ನಡೆಯುತ್ತ ಇದ್ದ, ಶಕ್ತಿ ರಾಜಕಾರಣದ ಜಾತೀಯತೆಗೆ ಬಲಿಯಾದವರಲ್ಲಿ ಅತ್ಯಂತ ಮುಖ್ಯರಾದವರು ಗೆಳೆಯ ಜಿ.ಹೆಚ್.ನಾಯಕರು ಬಹಳ ವರ್ಷಗಳ ಕಾಲ ಕನ್ನಡದ ಸ್ನಾತಕೋತ್ತರ ಇಲಾಖೆಯಿಂದ ದೂರವೇ ಉಳಿಯಬೇಕಾಯಿತು. ಇದರಿಂದ ನಾಯಕರಿಗೆ ಮಾತ್ರವಲ್ಲ, ಕನ್ನಡದ ಅಧ್ಯಯನಕ್ಕೂ ಅನ್ಯಾಯವಾಯಿತು.

ಕೆಲವು ವರ್ಷಗಳ ನಂತರ ಸಾಹಿತ್ಯದ ವಿಮರ್ಶೆಯನ್ನು ನಿರ್ಭಯವಾಗಿ ಮಾಡುವುದು ಸಾಧ್ಯವಾದ್ದು ಕುವೆಂಪುರವರ ಪರಮ ಶಿಷ್ಯರೇ ಆಗಿದ್ದ ಪ್ರೊಫೆಸರ್ ಶಿವರುದ್ರಪ್ಪನವರು ಬೆಂಗಳೂರಿನ ಕನ್ನಡ ಇಲಾಖೆಯ ಮುಖ್ಯಸ್ಥರಾದ ಮೇಲೆ. ತಮ್ಮ ಸುತ್ತ ನಡೆಯುತ್ತ ಇದ್ದ ಶಕ್ತಿರಾಜಕಾರಣದಿಂದ ಕುವೆಂಪು ಮಾತ್ರ ಯಾವತ್ತೂ ಪ್ರಭಾವಿತರಾಗಿರಲಿಲ್ಲ ಎಂಬುದಕ್ಕೆ ಅವರ ಮಗನೇ ಆಗಿದ್ದ ತೇಜಸ್ವಿ, ಅವರ ಪರಮ ಶಿಷ್ಯ ಜಿ.ಎಸ್.ಶಿವರುದ್ರಪ್ಪ, ಕುವೆಂಪುರನ್ನು ತನ್ನ ನಿಷ್ಠುರವಾದ ಪ್ರಜ್ಞೆಯಲ್ಲೂ ಈ ಕಾಲದ ಶ್ರೇಷ್ಠ ಚೇತನವೆಂದು ಕಾಣುವ ಜಿ.ಹೆಚ್.ನಾಯಕರಂಥವರು ಜೀವಂತ ಸಾಕ್ಷಿಗಳಾಗಿ ಬಾಳಿದ್ದಾರೆ; ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ‘ಶಿಲಾಲತೆಗೆ’ ನಾನು ಬರೆದ ಕೊಂಚ ಅಪಕ್ವ ಮಾತಿನ ಅತಿಗಳಿಗೂ ಅರ್ಥಬರಹಬಹುದೇನೋ? ಕಾಲದ ಬಿಕ್ಕಟ್ಟುಗಳನ್ನು ಸೂಚಿಸಲು, ಅದಕ್ಕಿಂತ ಹಿಂದೆ ಬರೆದಿದ್ದ ನನ್ನ ‘ಭೂಮಿಗೀತ’ದ ಮುನ್ನಡಿಯ ಮಟ್ಟದ್ದಲ್ಲವಾದರೂ, ನಾನು ಆಗ ಪ್ರಕಟಿಸದ ‘ಶಿಲಾಲತೆ’ಯ ವಿಮರ್ಶೆಯನ್ನು ಒಂದು ಕಾಲದ ಪ್ರೇರಣೆಗಳನ್ನು ಗಹ್ರಹಿಸಲು ಮುಖ್ಯವೆಂದು ತಿಳಿದು ಈಗ ಪ್ರಕಟಿಸುತ್ತಿದ್ದೇನೆ.

*

ಅಂತೆಯೇ ನನ್ನನ್ನು ಯಾವತ್ತೂ ಕಾಡಿದ ಜಾತಿಯ ಬಗ್ಗೆ (ಬ್ರಾಹ್ಮಣಿಕೆಯನ್ನು ತೊರೆದೂ, ಜರೆದೂ, ಬ್ರಾಹ್ಮಣನಾಗಿಯೇ ಉಳಿದವನಂತೆ ಕೆಲವು ಟೀಕಾಕಾರ ಗೆಳೆಯರಿಗೆ ಕಾಣುವ ನಾನು) ದಿನಚರಿಯಲ್ಲಿ ಮಾಡಿಕೊಂಡ ಒಂದು ಟಿಪ್ಪಣಿ ಇಲ್ಲಿ ಇದೆ. (ಈಚೆಗೆ ‘ವಾರ್ತಾ ಭಾರತಿ’ಯ ವಿಶೇಷಾಂಕದಲ್ಲಿ ಶ್ರೀಮತಿ ವೈದೇಹಿಯವರು ನಾನು ಬರೆಯುವುದಕ್ಕಿಂತ ಗಾಢವಾಗಿ, ಹೆಚ್ಚು ಸ್ವಾರಸ್ಯವಾಗಿ ಜಾತಿಗಳ ಬಗ್ಗೆ ಬರೆದಿದ್ದಾರೆ) ‘ಸಂಸ್ಕಾರ’ ಕಾದಂಬರಿ ಬಗ್ಗೆ ಎದ್ದ ವಿವಾದಕ್ಕೆ (ಬ್ರಾಹ್ಮಣರು ಸಿಟ್ಟಾಗಿ ನನ್ನ ವಿರುದ್ಧ ಮಾಡಿದ ಅಪಾದನೆಗಳಿಗೆ) ಉತ್ತರವಾಗಿ ನಾನು ಪ್ರಕಟಿಸದೇ ಬರೆದುಕೊಂಡಿದ್ದ ನನ್ನ ಟಿಪ್ಪಣಿಯೊಂದೂ ಈ ಸಂಕಲನದಲ್ಲಿದೆ. ಈ ಟಿಪ್ಪಣಿಯಲ್ಲಿರುವ ಮಾತುಗಳಿಗೆ ಈಗಲೂ ನನ್ನ ಒಪ್ಪಿಗೆಯಿದೆ. ನಾಣು ದಾಟಿ ಬಂದ ಒಂದು ಕಾಲದ ಬಗ್ಗೆ ಚಾರಿತ್ರಿಕವಾದ ಒಳನೋಟಗಳನ್ನು ಕೊಡುವುದರ ಮೂಲಕ ಈ ಹಿಂದೆ ಪ್ರಕಟಿಸದೇ ಉಳಿದ ನನ್ನ ಬರೆವಣಿಗೆಗಳು ಸಾಹಿತ್ಯದ ವಿದ್ಯಾರ್ಥಿಗೆ ಉಪಯುಕ್ತವಾದೀತೆಂದು ಭಾವಿಸುತ್ತೇನೆ.

ನನ್ನ ಕಾಲದ ಒರಿಜಿನಲ್ ಎನ್ನಬಹುದಾದ ಪ್ರತಿಭಾವಂತ ಲಂಕೇಶರ ಜೊತೆ ಅವರ ‘ಅಕ್ಷರ ಹೊಸ ಕಾವ್ಯ’ ಪ್ರಕಟವಾದಾಗ ನಾನು ಮಾಡಿದ ‘ಹಿಪ್ಪಿಯೋ ಡ್ಯಾಂಡಿಯೋ’ ಎನ್ನುವ ವಿಮರ್ಶೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾಯಿತೆಂದೂ, ಆ ಬಗ್ಗೆ ಒಂದು ದೀರ್ಘ ಚರ್ಚೆ ನನ್ನ ಮತ್ತು ಲಂಕೇಶರ ನಡುವೆ ನಡೆಯಿತೆಂದೂ ನನ್ನ ನೆನಪು. ನಮ್ಮ ನಡುವೆ ತೀವ್ರ ಭಿನ್ನಪ್ರಾಯಗಳೂ ಇದ್ದವು; ಒಬ್ಬನ್ನೊಬ್ಬರು ಬೆಳೆಸುವ ಸಂವಾದವೂ ಇತ್ತು. ಈ ನನ್ನ ಲೇಖನ ಕೆಲವರನ್ನು ಸಿಟ್ಟಿಗೇಳಿಸಿತ್ತು. ಆದರೆ ನಾನು ಟೀಕಿಸದ ನನ್ನ ಗೆಳೆಯರೂ ಆಗಿದ್ದ ಸುಮತೀಂದ್ರ ನಾಡಿಗರ ‘ದಾಂಪತ್ಯ ಗೀತೆ’ಯನ್ನು ಮೆಚ್ಚಿ ಹಲವು ವರ್ಷಗಳ ನಂತರ ಒಂದು ಮುನ್ನುಡಿಯನ್ನೂ ಬರೆಯುವುದು ಅವರ ಕೃಪೆಯಿಂದಲೇ ನನಗೆ ಸಾಧ್ಯವಾಯಿತು. ನನಗಿಂತ ವಯಸ್ಸಿನಲ್ಲಿ ಕಿರಿಯರಾದ, ಈಗ ಪ್ರಸಿದ್ಧರಾದ ಲಕ್ಷ್ಮಣರಾಯರು ಮತ್ತು ನನ್ನ ನಡುವೆ, ನನ್ನ ಕಟು ಮಾತುಗಳಿಂದ ಯಾವತ್ತೂ ಕಹಿ ಉಂಟಾಗಲಿಲ್ಲ. ಅವರ ಕವನ ಸಂಕಲಕ್ಕೂ ಒಂದು ಮುನ್ನುಡಿಯನ್ನು ನಾನು ಬರೆದಿದ್ದೇನೆ. ಇದನ್ನೆಲ್ಲ ನಾನು ನೆನಸಿಕೊಳ್ಳಲು ಕಾರಣ ಆ ದಿನಗಳಲ್ಲಿ ಇದ್ದ ಸಾಹಿತ್ಯ ಸಂವಾದದ ಗುಣಮಟ್ಟಕ್ಕೂ, ಈ ಕಾಲದ ಗೊಡ್ಡಾದ ಮರಗಟ್ಟಿದ ಸಾಹಿತ್ಯ ಸಂದರ್ಭಕ್ಕೂ ಇರುವ ಅಪಾರ ಅಂತರವನ್ನು ಸೂಚಿಸಲು.

ಹೆಚ್ಚೇನೂ ಹೇಳದೆ ಈಚಿನ ಒಂದು ಘಟನೆಯ ಮೂಲಕ ಈ ಅಂತರವನ್ನು ನಾನು ಓದುಗರ ಮುಂದಿಡುತ್ತೇನೆ. ನಾನು ಮಾಡಿದ ಭೈರಪ್ಪನವರ ‘ಆವರಣ’ ಕೃತಿಯ ಮೇಲಿನ ಭಾಷಣದ ತಮ್ಮ ವರದಿಯನ್ನು ಮಾತ್ರ ಆಧರಿಸಿ, ನನ್ನ ಭಾಷಣದ ಸಾರಾಂಶವನ್ನು ನಾನು ಕೋರಿದರೂ ಹಾಕದೆ ನನ್ನ ಮೇಲೆ ಒಂದು ಪತ್ರಿಕೆ (ಎರಡು ಪತ್ರಿಕೆಗಳು? ಇನ್ನೊಂದನ್ನು ನಾನು ಓದಲು ಹೋಗಲಿಲ್ಲ) ನಡೆಸಿದ ಆಧುನಿಕ ಎಸ್‌ಎಂಎಸ್ ದಾಳಿ ಹಿಂದೆಂದೂ ನಡೆಯದ ಲೇಖಕನೊಬ್ಬನ ಮೇಲಿನ ದುಷ್ಟ ಬಲಿಷ್ಠರ ಕ್ರೂರ ಆಕ್ರಮಣವಾಗಿತ್ತು. ಕೋಮುವಾದವನ್ನು ಟೀಕಿಸಿ ನಾನು ಬರೆದಿರುವ ಹಲವು ಲೇಖನಗಳಲ್ಲಿ, ಭಾಷಣಗಳಲ್ಲಿ ಕೋಮುವಾದಿಗಳನ್ನು ಹೀಯಾಳಿಸುವುದು ಮಾತ್ರ ನನ್ನ ಗುರಿಯಲ್ಲ. ನಾನು ಪ್ರೀತಿಸುವ ಹಲವರು, ಇನ್ನೆಲ್ಲ ವಿಷಯಗಳಲ್ಲೂ ಸಾತ್ವಿಕರಾದ ಸಂಸಾರಿಗಳು ಕೂಡ, ಅಪ್ರಜ್ಞಾಪೂರ್ವಕವಾಗಿ ಮುಸ್ಲಿಮರನ್ನು ದ್ವೇಷಿಸುತ್ತಾರೆಂಬುದನ್ನು ಗಮನಿಸಿ ನಾನು ಆತಂಕಗೊಂಡಿದ್ದೇನೆ. ನನಗೆ ಇದೊಂದು ಬಗೆಯ ವೈರಸ್ ಎನ್ನಿಸಿದೆ. ಅಂಥವರ ಜೊತೆ ರಾಜಿಯಿಲ್ಲದೆ ವಿಶ್ವಾಸ ಮೂಡುವಂತೆ ಮಾತಾಡಬೇಕೆಂಬುದೇ

ನನ್ನ ಉದ್ದೇಶವೆನ್ನುವುದು ಇಲ್ಲಿನ ಹಲವು ಲೇಖನಗಳಿಂದಲೂ, ನನ್ನೆಲ್ಲ ಬರವಣಿಗೆಯಿಂದಲೂ ಸ್ಪಷ್ಟವಾದೀತೆಂದು ನಾನು ಆಸೆ ಪಡುತ್ತೇನೆ. ಈ ಆಸೆ ಎಷ್ಟು ನನ್ನಲ್ಲಿ ಆಳವಾದದ್ದೆಂದರೆ, ಅದನ್ನೇ ಕುರಿತು ಹೇಳಿದ್ದನ್ನೇ ಹೇಳುವ ಕಿಸುಬಾಯಿದಾಸನಂತೆ ಸೂಕ್ಷ್ಮಜ್ಞರಾದ ಓದುಗರಿಗೆ ನಾನು ಕಾಣಬಹುದಾದ ಅಪಾಯವನ್ನು ನಿರ್ಲಕ್ಷಿಸಿ ಮಾತಾಡಲು ತೊಡಗಿದ್ದೇನೆ.

ಇದನ್ನು ಹೇಳದಿದ್ದರೆ ಅಹಂಕಾರವಾಗುತ್ತದೆಃ ಈ ವಿಷಯದಲ್ಲಿ ನಾನೇನೂ ಒಬ್ಬಂಟಿಯಲ್ಲ. ನನಗಿಂತ ಹೆಚ್ಚು ವಸ್ತುನಿಷ್ಠ ಜ್ಞಾನದಲ್ಲಿ ಇಂತಹ ವಿಷಯಗಳ ಬಗ್ಗೆ ಡಾ.ರಹಮತ್ ತರೀಕೆರೆ ಬರೆದಿದ್ದಾರೆ. ಉದಾಹರಣೆಗೆ ಅವರು ದತ್ತಪೀಠದ ಬಗ್ಗೆ ಬರೆದದ್ದನ್ನು ನೋಡಿ. ನಮ್ಮ ಎಲ್ಲ ದಲಿತ ಲೇಖಕರು, ಹೊಸಕಾಲದ ಅನೇಕ ಸಮರ್ಥ ಕಥೆಗಾರರು, ಕೋಮುವಾದದ ವಿರುದ್ಧ ಧೀರರಾಗಿ ಕ್ರಿಯಾಶೀಲರಾದ ರಾಜಶೇಖರ, ಪಟ್ಟಾಭಿರಾಮ ಸೋಮಾಯಾಜಿ, ಫಣಿರಾಜ್ ರಂಥವರು, ಅವರ ಹಲವು ದಕ್ಷಿಣಕನ್ನಡ ಜಿಲ್ಲೆಯ ಸಂಗಡಿಗರು, ಗೌರಿ ಲಂಕೇಶ್ ರಂತಹ, ದುಡುಕುವವರಂತೆ ಕಾಣುವ, ಅನ್ನಿಸಿದ್ದನ್ನು ಅನ್ನಿಸಿದಂತೆ ಹೇಳುವ ಪತ್ರಕರ್ತೆಯರು, ಹೆಣ್ಣಿನ ಕಣ್ಣಿನಿಂದ ನೋಡುವ ವೆಬ್ ಸೈಟ್ ಒಂದನ್ನು ಸಂಪಾದಿಸುವ ಲೇಖಕಿ ಸುಕನ್ಯಾ ಕನಾರಳ್ಳಿಯವರು, ‘ವಾರ್ತಾ ಭಾರತಿ’ ಪತ್ರಿಕೆಯ ಈ ದಿನಗಳ ಸಂಪಾದಕೀಯಗಳಂತೂ ನನಗೆ ಬಹಳ ಪ್ರಿಯವಾಗಿವೆ, ಸದ್ಯ ಎಲ್ಲ ಕನ್ನಡ ದಿನಪತ್ರಿಕೆಗಳಿಗಿಂತ ಗುಣದಲ್ಲಿ ಶ್ರೇಷ್ಠವಾಗಿರುವ ಈ ಪತ್ರಿಕೆ ಯಾವ ರಾಜಿಯನ್ನೂ ಮಾಡಿಕೊಳ್ಳದಂತೆ ಬೆಳೆಯಬೇಕೆಂಬುದು ನನ್ನ ಆಶಯ. ‘ದಿ ಹಿಂದೂ’ ಪತ್ರಿಕೆಗೆ ಬರೆಯುವ ಸಾಯಿನಾಥರಂಥವರು ಕನ್ನಡದಲ್ಲೂ ದೊರಕುವಂತೆ ಈ ಪತ್ರಿಕೆ ಬೆಳೆಯಲಿ ಎಂದು ನನ್ನ ಹಾರೈಕೆ.

ಈ ಕಾಲದ evil ಎಂದರೆ ಎಲ್ಲಡೆ ಕಾಣುತ್ತ ಇರುವ intolerance. ಮತ್ತು ಎಲ್ಲ ರಾಜಕೀಯ ಪಕ್ಷಗಳೂ ಗುಪ್ತವಾಗಿ ಹಂಚಿಕೊಳ್ಳುತ್ತ ಇರುವ ಗಣಿಗಾರಿಕೆಯ ಭ್ರಷ್ಟಾಚಾರ. ಇವರು ಪರಸ್ಪರ ಜಗಳವಾಡುವಂತೆ ತೋರುತ್ತಾರೆ; ಆದರೆ ಹೀಗೆ ಜಗಳವಾಡುವವರಿಗೆ ತಮ್ಮದೇ ಗಣಿಗಳೂ ಇವೆಯಂತೆ; ಇವೆ ಎಂಬುದು ಎಲ್ಲರಿಗೂ ಗೊತ್ತಿದೆಯಂತೆ, ಸಿನಿಕರಾಗದೆ ಇದನ್ನು ವಿರೋಧಿಸುವುದು ಹೇಗೆ ತಿಳಿಯದು. ಕೆಲವು ಸಾರಿ ಮೇಧಾ ಪಾಟ್ಕರ್, ಸಾಯಿನಾಥರಂಥವರು ಇನ್ನೂ ಇದ್ದಾರಲ್ಲ ಎಂದು ಕೊಳ್ಳುತ್ತೇನೆ. ಆದರೆ ಇದು ಸಮಾಧಾನದ ಮಾತುಗಕೂಡದು. ಇಂಗ್ಲಿಷ್ ಭಾಷೆಯಿಂದ ಬದುಕುವ ಹಲವು ಮಧ್ಯಮವರ್ಗದ ಅರೆ ವಿದ್ಯಾವಂತರು. ಇವರಲ್ಲಿ ಹೆಚ್ಚು ಜನ ವಿದೇಶೀಯರು, ಮುಸ್ಲಿಮರು ಪ್ರಗತಿಗೆ ತೊಡರಾಗುವವರೆಂಬ ಕಾರಣಕ್ಕಾಗಿ (ಒಂದು ದೃಷ್ಟಿಯಿಂದ ಸೆಕ್ಯುಲರ್ ಕಾರಣಕ್ಕಾಗಿಯೇ) ಕೋಮುವಾದಿಗಳಾದ್ದಾರೆಂಬುದು ಅವರ ಎಸ್‌ಎಂಎಸ್ ದಾಳಿಯಿಂದ ನನಗೆ ಮನದಟ್ಟಾಯಿತು. ಕೆಲವು ದಿನಗಳ ಹಿಂದೆ ತಮಿಳುನಾಡಿಗೆ ಹೋಗುವ ಬಸ್ಸನ್ನು ಸುಟ್ಟು ಇಬ್ಬರನ್ನು ಕೊಂದದ್ದಾಯಿತು. ಕರುಣಾನಿಧಿ ಮಗಳ ಮನೆಯ ಮೇಲೆ ಬೆಂಗಳೂರಿನಲ್ಲಿ ದಾಳಿ ನಡೆಯಿತು. ಯಾರಿವರು? ನಮ್ಮ ಸಮ್ಮಿಶ್ರ ಸರ್ಕಾರ ಯಾರೆಂದು ಪತ್ತೆ ಮಾಡಿ ಶಿಕ್ಷಿಸುತ್ತಾರೊ ನೋಡಬೇಕು.

*

ತುಳಸೀದಾಸ, ಕಂಬನ್, ಎಳ್ಳುತ್ತಚ್ಚನ್, ವಾಲ್ಮೀಕಿ, ಕುವೆಂಪು, ಗಾಂಧಿಯಂಥವರು ಜೀವಂತಗೊಳಿಸಿದ ರಾಮನನ್ನು ಅವನ ಭಕ್ತರೆಂದು ತಿಳಿದವರೇ ನಾಶಮಾಡುವುದನ್ನು ನಾವು ಕಣ್ಣಾರೆ ನೋಡಬೇಕಾಗಿದೆ. ಸಾಮಾನ್ಯ ಮನುಷ್ಯನೊಬ್ಬ ತನ್ನ ಕಷ್ಟದಲ್ಲೂ ಸುಖದಲ್ಲೂ ನೆನಸುವ ರಾಮನೇ ಬೇರೆ; ಚರಿತ್ರೆಯ ಒಬ್ಬ ವ್ಯಕ್ತಿಯಂತೆ ಭಾವಿಸಿ ಓಟಿಗಾಗಿ ಬಳಸುವ ಈ ರಾಮನೇ ಬೇರೆ. (‘ಭಾರತವನ್ನು ಬೆಸೆದಿರುವ ಪುರಾಣಪ್ರಜ್ಞೆ ಮತ್ತು ಇತಿಹಾಸ’ ಲೇಖನ ನೋಡಿ)

ನನಗೊಂದು ಭಯವಿದೆ. ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಕಾರಿನಲ್ಲಿ ಓಡಾಡುವ ಸಭ್ಯರಂತೆ ಕಾಣುವ ಗೃಹಿಣಿಯರು ಮುಸ್ಲಿಮರು ಅಂಗಡಿಗಳಿಗೆ ನುಗ್ಗಿ ಅಲ್ಲಿರುವ ಬೆಲೆಬಾಳುವ ಸಾಮಾನುಗಳನ್ನು ನಿರ್ಲಜ್ಜೆಯಿಂದ ದೋಚುವುದನ್ನು ಕಂಡಿದ್ದೇವೆ. ಹಿಂದೂಗಳಿದ್ದ ಒಂದು ರೈಲಿನ ಬೋಗಿಗೆ ಬೆಂಕಿ ಹಚ್ಚಿದ್ದರಿಂದ ಅದರಲ್ಲಿ ಕೂತಿರುವವರು ಬೆಂದು ಸತ್ತದ್ದನ್ನು ನಾವು ನೊಡಿದ್ದೇವೆ. ಭಾರತ ವಿಭಜನೆಯ ಕಾಲದಲ್ಲಿ ಸಮ್ಮಂತಹ ಮನುಷ್ಯರೇ ರಾಕ್ಷಸರಾದದ್ದನ್ನು ನೋಡಿದ್ದೇವೆ. ಕರ್ನಾಟಕದ ನಾವೂ ಗುಜರಾತನ್ನು ಇಲ್ಲಿ ಸೃಷ್ಟಿಸಿದರೆ ನಮ್ಮಂಥವರು ಯಾರಿಗಾಗಿ ಬರೆಯಬೇಕು? ನಮ್ಮ ಅದೃಷ್ಟವೆಂದರೆ ಕರ್ನಾಟಕದ ಮುಸ್ಲಿಮರು ‘ಆವರಣ’ವೆಂಬ ಕೃತಿಯೂ, ಅದರ ಬೆಂಬಲಿಗರಾದ ನಮ್ಮ ಅತ್ಯಧಿಕ ಪ್ರಸಾರದ ಪತ್ರಿಕೆಯೊಂದರ ಕಟ್ಟಾ ಬೆಂಬಲಿಗರೂ ನಿರೀಕ್ಷಿಸಿದಂತೆ ದಂಗೆ ಏಳಲೇ ಇಲ್ಲ.

*

ಈ ಸಂಕಲನದಲ್ಲಿ ಹೊಸ ತಲೆಮಾರಿನ ಕೆಲವು ಲೇಖಕರ ಬಗ್ಗೆ ನಾನು ಬರೆದ ವಿಮರ್ಶೆ ಇದೆ. ನನ್ನ ಮನಸ್ಸನ್ನು ವಿಸ್ತಾರಗೊಳಿಸಲು ಸಾಧ್ಯವಾಗುವಂತೆ ಈ ಹೊಸತಲೆಮಾರಿನ ಲೇಖಕರು ಪ್ರೇರೇಪಿಸಿದ್ದಾರೆ. ಇಂಥವರ ಪ್ರೀತಿ ವಿಶ್ವಾಸಗಳೇ ಎಸ್‌ಎಂಎಸ್‌ಗಳ ಮೂಲಕವೂ, ಅನಾನಿಮಸ್ ಕಾಗದಗಳ ಮೂಲಕವೂ ತಮ್ಮ ದ್ವೇಷವನ್ನು ಚೀರಿಕೊಳ್ಳುವ ಕೆಲವು ಅಲ್ಪರಿಂದ ಎದೆಗುಂದದಂತೆ ನನ್ನನ್ನು ಉಳಿಸಿದೆ.

*

ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯವರು ಹತ್ತು ಜನರಿಂದ ಭಾರತ ಇನ್ನು ಅರವತ್ತು ವರ್ಷಗಳ ನಂತರ ಹೇಗಿರಬಹುದೆಂದು ಊಹಿಸಿ ಬರೆಯಲು ಕೇಳಿದ್ದರು. ನಮ್ಮ ಪ್ರಧಾನಿಯಿಂದ ಹಿಡಿದು ಉದ್ಯಮಿಗಳವರೆಗೆ ನಡುವೆ ಇದಕ್ಕೆ ಸ್ಪಂದಿಸಿದವರಲ್ಲಿ ನಾನೊಬ್ಬ ಅನ್ಯನಾಗಿದ್ದೇನೆ ಎಂಬುದನ್ನು ಹಲವು ಓದುಗರು ಗಮನಿಸಿ ನನಗೆ ಬರೆದಿದ್ದಾರೆ. ನನ್ನ ಉಳಿದೆಲ್ಲ ಲೇಖನಗಳಿಗೂ ಈ ಮಾತುಗಳು ಭರವಸೆಯ ಶೃತಿಯಂತೆ ಕಂಡರೆ ನನಗೆ ಸಂತೋಷ. ಇಷ್ಟು ಬೇಗ ಹೀಗಾಗಲಾರದು ಎನ್ನಿಸಿದರೂ ನನ್ನ ಮಾತಿನಲ್ಲಿ ಓದುಗ ತೊಡಗಿಕೊಂಡಂತೆಯೇ.

*

ಎಲ್ಲೆಲ್ಲೋ ಚೆಲ್ಲಿಕೊಂಡಿದ್ದ ನನ್ನ ಬರವಣಿಗೆಗಳನ್ನು ಆಸ್ಥೆಯಿಂದ ಆಯ್ದು ಗೆಳೆಯ ರವಿಕುಮಾರ್ ಈ ಸಂಕಲನದಲ್ಲಿ ಸೇರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಈಚಿನ ಕೆಲವು ಅತ್ಯುತ್ತಮ ಚಿಂತನಶೀಲ ಪುಸ್ತಕಗಳನ್ನು ಪ್ರಕಟಿಸುತ್ತ ಇರುವ ಇವರ ಅಪಾರವಾದ ಪ್ರೀತಿಗೆ, ವೈಚಾರಿಕ ನಿಷ್ಠೆಗೆ ನಾನು ಕೃತಜ್ಞ. ಈ ದಿನಗಳಲ್ಲಿ ನಾನು ಬರೆದದ್ದನ್ನು ಕೆಲವು ಪತ್ರಿಕೆಗಳು ಎಷ್ಟೇ ಲೇವಡಿ ಮಾಡಲಿ, ನಾನದನ್ನು ತೀರಾ ಹಚ್ಚಿಕೊಳ್ಳುವುದಿಲ್ಲ. ಯಾಕೆಂದರೆ ಮೊದಲಿನಂತೆ ಈಗಲೂ ನಾನು ಬರೆದಿದ್ದನ್ನು ನಿಷ್ಠುರವಾಗಿ, ತಮ್ಮ ಒಳಗಿನ ಸತ್ಯದಲ್ಲಿ ನೋಡಿ ಸ್ಪಂದಿಸುವ ಹೊಸತಲೆಮಾರಿನ ಹಲವು ಚಿಂತನಶೀಲ ಗೆಳೆಯರು ನನಗೆ ಇದ್ದಾರೆ. ಅವರ ಹೆಸರುಗಳನ್ನು ನಾನು ಕೃತಜ್ಞತೆಯಲ್ಲಿ ನೆನಸುವುದನ್ನೂ ಅವರು ಇಚ್ಛಿಸುವುದಿಲ್ಲ. ಒಬ್ಬಂಟಿಗರದೇ ಒಂದು ಸಮುದಾಯವಾಗಬೇಕೆಂಬ ನನ್ನ ಬರವಣಿಗೆಲ್ಲಿ ಈ ಬಗ್ಗೆ ಚಿಂತಿಸಿದ್ದೇನೆ.

*

ಬರೆಯಲೇಬೇಕಾಗಿ ಬಂದಾಗ ಮಾತ್ರ ನಾನು ಇಂಗ್ಲಿಷಿನಲ್ಲಿ ಬರೆಯುತ್ತೇನೆ. ದೆಹಲಿ ವಿಶ್ವ ವಿದ್ಯಾಲಯದಲ್ಲಿ ನಾನು ಮಾಡಿದ ಘಟಿಕೋತ್ಸವ ಭಾಷಣ, ಭುವನೇಶ್ವರದ ಪ್ರಸಿದ್ದವಾದ ಭೌತಶಾಸ್ತ್ರಜ್ಞರ ಸಂಸ್ಥೆಯಲ್ಲಿ ನಾನು ಮಾಡಿದ ಅವರ ವರ್ಷದ ಕೊನೆಯ ಭಾಷಣ ಈ ಬಗೆಯವು. ಇಂತಹ ಕಡೆಗಳಲ್ಲಿ ಪುನರುಕ್ತಿಯ ದೋಷಗಳು ಇವೆ; ಅವು ಕ್ಷಮಾರ್ಹವೆಂದು ತಿಳಿದಿದ್ದೇನೆ. ಆಯಾ ಸಂದರ್ಭಗಳ ಚೌಕಟ್ಟಿನಲ್ಲಿ ನನ್ನ ಪರಿಚಿತ ವಿಚಾರಗಳಿಗೆ ಹೊಸ ಅರ್ಥಗಳು ಮೂಡಿಯಾವೆಂದು ಬರಹಗಾರನಾಗಿ ನನ್ನ ವ್ಯಾಮೋಹದ ಭಾವನೆ. ಈ ಲೇಖನಗಳನ್ನು ಬಹಳ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ ಶ್ರೀ ಜಯಪ್ರಕಾಶ ನಾರಾಯಣ ಮತ್ತು ಭಾರತೀದೇವಿ ಅವರಿಗೆ ನಾನು ಋಣಿ.

*

ಈ ಸಂಕಲನದ ಪ್ರಕಾಶನದಲ್ಲಿ ನನಗಾಗಿರುವ ದೊಡ್ಡ ಸಂತೋಷ ಇದನ್ನು ನನ್ನ ಇಬ್ಬರು ಗೆಳೆಯರಾದ ಡಾ| ದಾಮೋದರರಾಯರು ಮತ್ತ ಪ್ರೊಫೆಸರ್ ಜಿ.ಹೆಚ್. ನಾಯಕರಿಗೆ ಅರ್ಪಿಸುವುದು ಸಾಧ್ಯವಾಯಿತು ಎಂಬುದು. ಸಾರ್ವಜನಿಕ ಹಾಸ್ಟೆಲ್ಲಿನ ನನ್ನ ವಿದ್ಯಾರ್ಥಿ ದಿನಗಳಿಂದ ನಾಯಕರು ಮತ್ತು ನನ್ನ ನಡುವಿನ ಪ್ರೀತಿ ಗೌರವಗಳು ಎಲ್ಲ ಭಿನ್ನಾಪ್ರಾಯಗಳನ್ನೂ ಮೀರಿ ಉಳಿದಿವೆ. ಅವರ ಪ್ರಾಮಾಣಿಕತೆ ಆದರ್ಶಪ್ರಾಯವಾದ್ದು; ಅವರ ಬರೆವಣಿಗೆಯಲ್ಲಿನ ವಿನಯ ಮತ್ತು ನಿಷ್ಠುರತೆ ಒಂದನ್ನಿನ್ನೊಂದು ಪೋಷಿಸುವಂಥವು. ನಾಯಕರು ಪ್ರಾಯಶಃ ಒಪ್ಪದ ನನ್ನ ಸೃಜನಶೀಲ ಕೃತಿಗಳನ್ನು ದಾಮೋದರರಾಯರು ಅವರದೇ ಆದ ವಿಮರ್ಶಾಪ್ರಜ್ಞೆಯಲ್ಲಿ ಮೆಚ್ಚಿ ಬರೆದಿದ್ದಾರೆ. ಹಾಗೆಯೇ ನಾಯಕರಿಗೆ ನನ್ನಲ್ಲಿ ಇಷ್ಟವಾದ್ದು ದಾಮೋದರರಾಯರಿಗೆ ಅಷ್ಟು ಪ್ರಿಯವಲ್ಲದೇ ಇರಬಹುದು. ನಾನು ಎಲ್ಲಿ ನನ್ನ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುತ್ತ ಇದ್ದೇನೆಂದು ತಿಳಿದಿದ್ದೇನೊ, ಅದು ನಾಯಕರಿಗೆ ಹೊಂದಾಣಿಕೆಯಂತೆ ಕಾಣಬಹುದು. ಗಾಢವಾದ ಚಿಂತನಶೀಲರ ಸ್ನೇಹದಲ್ಲಿ ಅವರ ಅನುಮಾನಗಳೂ ನಮ್ಮ ಒಳಜೀವನವನ್ನು ಚುರುಕುಗೊಳಿಸುವ ಶಕ್ತಿ ಪಡೆದಿರುತ್ತವೆ.

ದಾಮೋದರರಾಯರು ನಮ್ಮ ಕಾಲದ ಅತ್ಯುತ್ತಮ ಅಧ್ಯಾಪಕರಲ್ಲಿ ಮುಖ್ಯರು; ಅವರು ಬರೆದಿರುವುದು ಕಡಿಮೆಯಾದರೂ ಆಳವಾದ ಸಾಹಿತ್ಯದ ಜ್ಞಾನ ಮತ್ತು ಅಂತರಂಗದಿಂದ ಹುಟ್ಟಿದ ಸ್ಪಂದನ ಅವುಗಳಲ್ಲಿ ಇವೆ.

ಈ ಇಬ್ಬರೂ ನನ್ನ ಸ್ನೇಹಿತರು ಮಾತ್ರವಲ್ಲದೆ ಪರಸ್ಪರ ಸ್ನೇಹಿತರು ಕೂಡ.

*

ಕೊನೆಯದಾಗಿ ಈ ಸಂಕಲನದಲ್ಲಿರುವ ಕೆಲವು ಲೇಖನಗಳನ್ನು ಪ್ರಕಟಿಸಿದ ವಿವಿಧ ಪತ್ರಿಕೆಗಳ ಸಂಪಾದಕರಿಗೂ, ಛಾಯಾಗ್ರಾಯಕರಿಗೂ, ಮುಖಪುಟ ಯೋಜಿಸಿದ ಕಲಾವಿದರಿಗೂ ಅಚ್ಚಿನ ಮನೆಯವರಿಗೂ, ಕರಡು ತಿದ್ದಿದವರಿಗೂ ಕೃತಜ್ಞ.

ಯು.ಆರ್. ಅನಂತಮೂರ್ತಿ