ಮಾದಿಗರ ಆಚರಣೆಗಳಲ್ಲಿ ಧಾರ್ಮಿಕತೆ

ಮನುಷ್ಯ ಜನನದಿಂದ ಮರಣದವರೆಗೂ ತನ್ನ ಬದುಕಿನ ಉದ್ದಕ್ಕೂ ಈ ಕಲೆಗಳು ಮತ್ತು ಆಚರಣೆಗಳು ಅವರ ಜೀವನ ಮೌಲ್ಯಗಳನ್ನು ಶ್ರೇಷ್ಠೀಕರಿಸುವಂತೆ ಮಾಡುವ ಆಯಾಮಗಳಾಗಿರುತ್ತವೆ. ಅವರ ಪ್ರತಿದಿನದ ಕಲಿಕೆಯಲ್ಲಿಯೂ ಸಹ ಕಲೆಗಳು ಒಂದಲ್ಲ ಒಂದು ತೆರನಾಗಿ ಮನೆ ಮಾಡಿಕೊಂಡು ಅದರ ಮುಖಾಂತರ ಆ ವ್ಯಕ್ತಿಯ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಸಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮನುಷ್ಯ ಅನಾದಿಯಿಂದ ನಡೆಸುತ್ತ ಬಂದಿರುವಂತಹ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ನಡುವೆ ಕಲೆಗಳು ಜನ್ಮತಾಳಿ ಆ ಮೂಲಕ ಈ ಕಲೆಗಳು ಆ ಸಮುದಾಯದ, ಆ ಮನೆತನದ ಸಂಕೇತವಾಗಿ ಮುಂದಿನ ದಿನಗಳಲ್ಲಿ ಆ ಮನೆತನಗಳ ಹಬ್ಬವಾಗಿ ಕುಲದ, ಆ ಸಮುದಾಯದ ಜನರ ಮನದಲ್ಲಿ ನೆಲೆನಿಲ್ಲುತ್ತದೆ. ಅದು ಕಾಲಕ್ರಮೇಣದಲ್ಲಿ ಸಾಮಾಜಿಕ ಪಲ್ಲಟಗಳಿಂದ ಬೇರೆ-ಬೇರೆ ಸಂದರ್ಭದಲ್ಲಿ ಇದೇ ಆಚರಣೆಗಳನ್ನು ಬೇರೆ ಸಮುದಾಯದವರು ಆಚರಿಸಿಕೊಂಡು ಬಂದಂತಹ ಅನೇಕ ಉದಾಹರಣಗಳು ಪ್ರಸ್ತುತ ನಮ್ಮ ಕಣ್ಮುಂದೆ ಇದೆ. ಇಂತಹ ಈ ಆಚರಣೆಗಳು ಆಚರಿಸುವಂತಹ ಸಮುದಾಯದ ಶ್ರೇಷ್ಠತೆಯ ಜೊತೆಗೆ ಆ  ಸಮುದಾಯದೊಳಗಿನ ಸಂಸ್ಕೃತಿಯನ್ನು ಅನಾವರಣ ಮಾಡುತ್ತ ಬರುತ್ತದೆ. ಇಂತಹ ಈ ಆಚರಣೆಗಳು ಆ ಸಮುದಾಯದ, ಕುಲದ ಸಂಪ್ರದಾಯವನ್ನು ಎತ್ತಿ ಹಿಡಿಯುವುದೇ ಅಲ್ಲದೆ ಕಾಲಾನಂತರದಲ್ಲಿ ಅವರ ಆಹಾರ ಪದ್ಧತಿ, ಜೀವನ ವಿಧಾನ, ಆಚಾರ-ವಿಚಾರಗಳಲ್ಲಿ ಕೆಲವೊಂದು ಸಾಂದರ್ಭಿಕ ಬದಲಾವಣೆಗಳನ್ನು ತರುತ್ತ, ಹೊಸ ಅನುಭವಗಳನ್ನು ಕಟ್ಟುತ್ತ, ಹೊಸ ದೃಷ್ಟಿಕೋನಗಳನ್ನು ಬೆಳೆಸುತ್ತ ದೀರ್ಘಕಾಲದವರೆಗೆ ಆ ಕುಲದ ಒಡನಾಡಿಯಾಗಿ ಹೆಜ್ಜೆ ಬೆಳೆಸುತ್ತ ಸಾಗುತ್ತದೆ.

ಇಂತಹ ಈ ಆಚರಣೆಗಳನ್ನು ಗ್ರಹಿಸಲು ಆ ಕುಲದ ಸಮುದಾಯದೊಳಗಿನ ಸಂಸ್ಕೃತಿಯ ಎಳೆಯನ್ನು ಹಿಡಿಯಬೇಕಾಗುತ್ತದೆ. ಅದರ ಹೊರತಾಗಿ ಅವರ ದೈನಂದಿನ ಆಹಾರ ಪದ್ಧತಿಗಳು, ಪದಾರ್ಥಗಳು, ಉಡುಗೆ-ತೊಡುಗೆಗಳು ಮೊದಲಾದವುಗಳನ್ನು ಪರಿಶೀಲಿಸಿದರೆ ಇವರ ಮೂಲ ಸಂಸ್ಕೃತಿಯ ಆಕರ ಸಾಮಗ್ರಿಗಳ ಯಾವ ಎಳೆಯೂ ಸಿಗುವುದಿಲ್ಲ. ಏಕೆಂದರೆ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ತೆರನಾದಂತಹ ಆಹಾರ ಪದ್ಧತಿಯನ್ನು ಹವಾಮಾನಕ್ಕೆ ತಕ್ಕಂತೆ ಬಳಸುವುದರಿಂದ ಅವರ ಆಹಾರ ಪದ್ಧತಿ, ಉಡುಗೆ-ತೊಡುಗೆಗಳು ಆ ಕುಲದ ಒಂದು ಭಾಗವಾಗಿರುವಂತಹ ಸಾಧ್ಯತೆ ಇದೆ. ಇಂತಹ ಸಂದಿಗ್ದತೆಯಲ್ಲಿ ಒಂದು ಕುಲದ ಮೂಲ ಸಾಂಸ್ಕೃತಿಕ ಬೇರನ್ನು ಮುಟ್ಟಬೇಕಾದರೆ ಆ ಕುಲವು ಅನಾದಿಯಿಂದ ಆಚರಿಸಿಕೊಂಡು ಬಂದಂತಹ ಹುಟ್ಟು, ಸಾವು, ಮದುವೆ ಮೊದಲಾದಂತಹ ಆಚರಣೆಗಳಿಗೆ ಸಂಬಂಧಿಸಿದಂತಹ ಆಯಾಮಗಳನ್ನು ತಟ್ಟಿ ಮಾತಾಡಬೇಕಾಗುತ್ತದೆ. ಈ ಎಲ್ಲಾ ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಯಿಂದ ಕೂಡಿರುವಂತಹ ಒಂದು ಕುಲದ ಸಂಸ್ಕೃತಿಯ ಎಳೆಯನ್ನು ಹಿಡಿಯಲು ಆ ಕುಲದ ರೂಢಿಗತ ಸಂಪ್ರದಾಯಗಳನ್ನು ದಾಖಲಿಸಲು ಆ ಕುಲ ಆಚರಿಸಿಕೊಂಡು ಬಂದಂತಹ ಹುಟ್ಟು, ಸಾವು, ಮದುವೆ, ಹಬ್ಬ-ಹರಿದಿನಗಳು ಮೊದಲಾದ ಆಚರಣೆಗಳು ಹೆಚ್ಚು ಪ್ರಯೋಜನಕಾರಿಯಾದುದು. ಈ ಮೇಲ್ಕಂಡ ಆಕೃತಿಗಳ ಮುಖಾಂತರ ಮಾದಿಗರ ಸಂಸ್ಕೃತಿಯನ್ನು ಅರಿಯುವುದು ಒಳಿತು.

ಹುಟ್ಟಿನ ಆಧಾರದ ಮುಖಾಂತರ ಮಾದಿಗರ ಸಂಸ್ಕೃತಿಯನ್ನು ಅರಿಯುವಲ್ಲಿ ನಮಗೆ ಮೊದಲು ಎದುರಾಗುವುದು ಅವರ “ಜನನ”ದ ಸಂದರ್ಭದಲ್ಲಿ ನಡೆಸುವಂತಹ ವಿವಿಧ ತೆರನಾದಂತಹ ಸಂಪ್ರದಾಯಗಳು. ಈ ಸಂದರ್ಭದಲ್ಲಿ ಆಚರಿಸುವಂತಹ ಈ ಆಚಾರ-ವಿಚಾರಗಳು ಮೊದಲಿನಂತಹ ಶ್ರೇಷ್ಠತೆಯನ್ನು ಪ್ರಸ್ತುತ ಹೊಂದಿಲ್ಲ. ಏಕೆಂದರೆ ಆಧುನಿಕತೆಯ ಸುಳಿಗೆ ಸಿಕ್ಕಿ ಅದು ಕಾಲಾನಂತರದಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದುಕೊಂಡು ತನ್ನ ಓರುಕೋರೆಗಳ ತೀಕ್ಷ್ಣತೆಯನ್ನು ಕಳೆದುಕೊಂಡಿದೆ. ಆದರೂ ಅಲ್ಲಲ್ಲಿ ತನ್ನ ಮೂಲ ಮಾತೃಕೆಯ ಗುಣವನ್ನು ಎಲ್ಲಿಯೂ ಹರಿಯಬಿಡದ ಹಾಗೆ ಯಥಾವತ್ತಾಗಿ ಪಾಲಿಸಿಕೊಂಡು ಬರುತ್ತಿರುವದನ್ನು ಕಾಣಬಹುದು.

ಆದರೆ ನಾಲ್ಕೈದು ದಶಕಗಳ ಹಿಂದೆ “ಜನನ”ದ ಸಂದರ್ಭದ ಆಚರಣೆಗಳು ತನ್ನದೆ ಆದಂತಹ ಶ್ರೇಷ್ಠತೆಯನ್ನು ಹೊಂದಿತ್ತು. ಈ ಮಾದಿಗರ ಕುಲದಲ್ಲಿ ಯಾವುದಾದರೂ ಮಗು ಜನಿಸಿದರೆ ಆ ಕುಲದ ಸಂಕೇತವಾಗಿ ಬಂದಂತಹ ಕಂಚಿನ ತಟ್ಟೆ, ಗಂಪೆ (ಮಂಕರಿಗೆ ಸಗಣೆಯನ್ನು ಮೆತ್ತಿಸಿರುತ್ತಾರೆ) ಮೊರಗಳಲ್ಲಿ ಹುಟ್ಟಿದಂತಹ ಆ ಮಗುವನ್ನು ಮಲಗಿಸುತ್ತಿದ್ದರು. ಇಲ್ಲಿ ಸಂಕೇತವಾಗಿ ಬಳಸುತ್ತಿದ್ದ ಆ ವಸ್ತುಗಳು ಆ ಸಮುದಾಯದ ಕುಲದ ಚಿಹ್ನೆಯಾಗಿ ಬಂದಂತಹ ವಸ್ತುಗಳಾಗಿ ಆಯಾ ಮನೆತನದವರು ಮಾತ್ರ ಬಳಸಬೇಕೆಂಬ ಕಟ್ಟಳೆ ಇವರಲ್ಲಿತ್ತು. ಇಂತಹ ಈ ಸಂಕೇತಗಳು ಯಾಕೆ ಬಂದವೆಂಬುದಕ್ಕೆ ಜನಪದರಲ್ಲಿ ಪ್ರಚಲಿತವಿರುವಂತಹ ಒಂದು ಕಥೆಯಿದೆ.

ಹೀಗೆ ಸುಮಾರು ವರ್ಷಗಳ ಹಿಂದೆ ಬಹುದೊಡ್ಡ ಬರಗಾಲವೊಂದು ಬಂದಿತ್ತಂತೆ. ಆ ಬರಗಾಲದಲ್ಲಿ ತಿನ್ನಲು ಆಹಾರ, ಕುಡಿಯಲು ನೀರು ಸಹ ಸಿಗದೆ, ಜನರು ಹಸಿವಿನಿಂದ ಎಲ್ಲೆಂದರಲ್ಲಿ ಪ್ರಾಣಬಿಟ್ಟರು. ಅಂತಹ ಘೋರ ಬರಗಾಲ ಅದಾಗಿತ್ತು. ಅಂತಹ ಸಂದರ್ಭದಲ್ಲಿ ಮಾದಿಗರ ಕುಲದ ಕುಲಸ್ಥರು, ಸದಸ್ಯರೆಲ್ಲ ಸೇರಿ ಅನ್ನಕ್ಕಾಗಿ ಅಲೆದಾಡಿ, ಅಲೆದಾಡಿ ಏನೂ ಸಿಗದೆ ಇದ್ದಾಗ ಭೂಮಿ ತಾಯಿಯ ಮಗಳಾದ ವನದೇವತೆಗೆ ಮೊರೆ ಹೋದರು. ಆ ಕಾಡು -ಮೇಡುಗಳಲ್ಲಿ ಇವರೆಲ್ಲಾ ಅಲೆದಾಡಿ ಕೆಲವು ಸಸ್ಯಗಳನ್ನು, ಗಿಡ-ಮೂಲಿಕೆಗಳನ್ನು ತಂದು ಅದನ್ನೇ ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕೊನೆಗೆ ಅದು ಮುಗಿದು ಹೋದಾಗ ಕೆರೆ, ಕುಂಟೆ, ಕಾಲುವೆಗಳ ದಡದಲ್ಲಿ ಸಿಗುವಂತಹ ಗೊಡ್ಡುಗೆಡ್ಡೆಗಳು (ಬಂಜೆರೆಡ್ಡೆ)ಗಳನ್ನು ತಂದು ಅದರ ಹೊರಮೈಯನ್ನು ಬೇರ್ಪಡಿಸಿ ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನುತ್ತಿದ್ದರು. ಈ ಗಡ್ಡೆ ಬಹಳ ಕಹಿಯಾಗಿರುತ್ತಿತ್ತು. ಆದರೂ ಹಸಿವಿನ ಪಿಶಾಚಿ ದೊಡ್ಡದು. ಅದಕ್ಕಾಗಿ ಅದು ಕಹಿಯಾಗಿದ್ದರೂ ಸರಿ ಅದನ್ನು ಬಿಡದೆ ತಿನ್ನುತ್ತ ಜೀವನ ಸಾಗಿಸುತ್ತಿದ್ದರು. ಇಂತಹ ಅನ್ನವಿಲ್ಲದ ಸಂದರ್ಭದಲ್ಲಿ ಆ ಊರಿನ ಗೌಡನ ಮನೆಯಲ್ಲಿ ಮಗಳ ಮದುವೆಯ ಕಾರ್ಯವೊಂದು ನಡೆಯಿತು. ಸಾಮಾಜಿಕ ಸ್ಥಿತ್ಯಂತರದ ದೃಷ್ಟಿಯಿಂದ ಮಾದಿಗರ ಕುಲದ ಯಾವೊಬ್ಬ ವ್ಯಕ್ತಿಗೂ ಅಲ್ಲಿಗೆ ಬರಲು ಆಹ್ವಾನವಿರಲಿಲ್ಲ. ಹೀಗೆ ಗೌಡನ ಮಗಳ ಮದುವೆ ಬಹಳ ಅದ್ದೂರಿಯಿಂದ ನಡೆಯಿತು. ಆ ಮದುವೆಯಲ್ಲಿ ಮಾಡಿದ್ದ ಊಟಗಳ ಕುರಿತು ಅವರಿವರ ಹತ್ತಿರ ಕೇಳಿದ ಈ ಮಾದಿಗರು ಆ ಆಹಾರಗಳ ಕನಸಲ್ಲಿ ಕಾಲ ಕಳೆದರು. ಮದುವೆಯಲ್ಲಾ ಆಯಿತು. ಅಲ್ಲಿ ಉಳಿದಂತಹ ಆಹಾರ ಪದಾರ್ಥಗಳನ್ನು ಹಂಚುವಂತಹ ಕಾರ್ಯ ಪ್ರಾರಂಭವಾಯಿತು.

ಈ ಆಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಮಾದಿಗರಿಗೆ ಬುಲಾವ್‌ಬಂತು. ಅವರೆಲ್ಲಾ ಬಹು ಉತ್ಸಾಹದಿಂದ ಅನ್ನ ಸಂಗ್ರಹಿಸಿಕೊಂಡು ಬರಲು ಮಾನಸಿಕವಾಗಿ, ದೈಹಿಕವಾಗಿ ಸಿದ್ಧರಾದರು. ಗೌಡನು ಕೊಡುವಂತಹ ಆ ಪದಾರ್ಥಗಳ ಶೇಖರಣೆಗೆ ಮಕ್ಕಳು ಮರಿ ಎನ್ನದೆ ಕೈಗೆ ಯಾವ ಪರಿಕರ ಸಿಗುತ್ತದೆಯೊ ಅದನ್ನು ತೆಗೆದುಕೊಂಡು ಮಾದಿಗರು ಊರಗೌಡನ ಮನೆ ಮುಂದೆ ಹಾಜರಾದರು. ಅಂತಹ ಸಮಯದಲ್ಲಿ ಕೆಲವರು ಮೊರಗಳನ್ನು, ಮಣ್ಣಿನ ತಟ್ಟೆಗಳನ್ನು ಮತ್ತು ಗಂಪೆಗಳನ್ನು ಹಿಡಿದಂತಹ ದೃಶ್ಯ ಕಂಡ ಊರಗೌಡ ಅವರು ಹಿಡಿದಿರುವಂತಹ ವಸ್ತುಗಳ ಆಧಾರದ ಮೇಲೆ ಅವರಿಗಿರುವಂತಹ ಹಸಿವನ್ನು ನಿರ್ಣಯಿಸಿ ಅವರೆಲ್ಲರಿಗೂ ಅನ್ನಿವಿಟ್ಟು ಕಳುಹಿಸಿದ. ಹೀಗೆ ಮಾದಿಗ ಸಮುದಾಯದವರು ತೆಗೆದುಕೊಂಡು ಹೋದ ವಸ್ತುಗಳು ಕಾಲಾನಂತರದಲ್ಲಿ ಆ ಕುಲದ ಚಿಹ್ನೆಗಳಾಗಿ, ಅವು ಆ ಕುಲದ ಪವಿತ್ರ ಸಂಕೇತಗಳಾಯಿತು ಎನ್ನುತ್ತಾಳೆ ಗುರಮ್ಮ. ಈ ಕಥೆಯನ್ನು ಹೇಳುವಾಗ ಗುರಮ್ಮನ ಕಣ್ಣುಗಳಲ್ಲಿ ಅಂದಿನ ಹೊಳಪು ಕ್ಷಣಹೊತ್ತು ಮಿಂಚಿ ಮರೆಯಾಗಿದ್ದು ಕಾಣಿಸಿತು.ಹೀಗೆ ಬಂದಂತಹ ಈ ಪರಿಕರಗಳು ಮುಂದಿನ ದಿನಗಳಲ್ಲಿ ಆಯಾ ಪಂಗಡದ ಆಚಾರ-ವಿಚಾರಗಳಲ್ಲಿ ಬಳಕೆಯಾಗುವಂತಹ ಪವಿತ್ರ ವಸ್ತುಗಳಾಗಿ ಬಂದವು.

ಈ ಸಂಕೇತದ ಹಿನ್ನೆಲೆಯಿಂದ ಹೇಳುವುದಾದರೆ ಮಾದಿಗರ ಕುಲಸ್ಥರು ಹಿಡಿದು ನಿಂತಂತಹ ಈ ವಸ್ತುಗಳು ಕಾಲಕ್ರಮೇಣ ಅವರ ಆಚಾರ-ವಿಚಾರ, ರೂಢಿ ಸಂಪ್ರದಾಯದಲ್ಲಿ ಪಾಲ್ಗೊಳ್ಳುತ್ತ ಬಂದ ಕಾಲ ಕ್ರಮೇಣ ಆಯಾ ಕುಲದ ಹೆಸರಾಗಿರಬಹುದು. ಈ ಆಧಾರದ ಮೇಲೆಯೇ ಮಾದಿಗರ ಸಮುದಾಯದಲ್ಲಿ ತಟ್ಟೆ ಮಾದಿಗರು, ಮೊರದ ಮಾದಿಗರು ಮತ್ತು ಗಂಪೆ ಮಾದಿಗರು ಎಂಬ ಉಪಜಾತಿಗಳು ಈಗ ಇರುವುದನ್ನು ಕಾಣಬಹುದು. ಇಂತಹ ಈ ವಿಂಗಡನೆಯು ಮಾದಿಗರಲ್ಲಿ ಮಾತ್ರ ಇದೆ. ಇದರ ಹೊರತಾಗಿ ಮಾಸ್ವೀಕ ಮಾದಿಗರು, ದಕ್ಕಲರು, ಸಿಂಧ್‌ಮಾದಿಗರು ಇನ್ನಿತರ ಮಾದಿಗರಿಗೆ ಮತ್ತು ಇದಕ್ಕೆ ಯಾವುದೇ ತೆರನಾದಂತಹ ಸಂಬಂಧ ಇಲ್ಲ. ಇಂತಹ ಈ ವಸ್ತುಗಳನ್ನು ಹಂಚಿಕೊಂಡ ಈ ಕುಲಸ್ಥರಲ್ಲಿ ತಟ್ಟೆ ಮಾದಿಗರು ತಟ್ಟೆ ಮಾದಿಗರಲ್ಲಿ ಮಾತ್ರ ವೈವಾಹಿಕ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕು. ಅದರ ಹೊರತಾಗಿ ಮೊರದ ಮಾದಿಗರಲ್ಲ. ಗಂಪೆ ಮಾದಿಗರಲ್ಲಿ ವಿವಾಹ ಸಂಬಂಧ ಮೊದಲಾದವುಗಳಿಗೆ ನಿಷೇಧವಿತ್ತು. ಆದರೂ ಮಾದಿಗರಲ್ಲಿ ಯಾರಾದರೂ ಸತ್ತರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಊಟ ಉಪಚಾರ ಮಾಡುವುದು ಮೊದಲಾದವುಗಳನ್ನು ಮೇಲಿನ ಮೂರು ಪಂಗಡದವರು ಮಾಡಬಹುದಿತ್ತು. ಅದಕ್ಕೆ ಯಾವುದೇ ತೆರನಾದಂತಹ ಕಟ್ಟುಪಾಡುಗಳು ಇರಲಿಲ್ಲ. ಬಹುಶಃ ಈ ಆಚರಣೆಯು ಆಯಾ ಪಂಗಡದ ಶ್ರೇಷ್ಠತೆಯನ್ನು, ಪವಿತ್ರತೆಯನ್ನು ಹೆಚ್ಚಿಸಿಕೊಂಡು ಅವರಿಗಿಂತ ನಾವು ಶ್ರೇಷ್ಠರು ಎಂದು ಸಾರುವುದಕ್ಕಾಗಿ ಉಂಟಾಗಿರಬಹುದು. ಅದಕ್ಕೆಂದೇ ಅವರಲ್ಲಿ ವೈವಾಹಿಕ ಸಂಬಂಧ ಮತ್ತು ಇತರ ಲೈಂಗಿಕ ಚಟುವಟಿಕೆಗಳಲ್ಲಿ ನಿಷೇಧವನ್ನು ಹೇರಿರಬಹುದು.

ಹೀಗೆ ತಮ್ಮ ತಮ್ಮಲ್ಲಿಯ ಶ್ರೇಣೀಕೃತವಾಗುತ್ತ ಬಂದಂತಹ ಮಾದಿಗರು ಆ ಸಂಕೇತಗಳನ್ನು ಕುಲದ ಶ್ರೇಷ್ಠ ರೂಪಕಗಳಾಗಿ ಬದುಕಿನ ಅನೇಕ ಸಂದರ್ಭಗಳಲ್ಲಿ ಆ ವಸ್ತುಗಳನ್ನು ಆಗಾಗ ಬಳಸುತ್ತ ಅದರಲ್ಲಿಯ ಜೀವಂತಿಕೆಯನ್ನು ವಿಸ್ತರಿಸಿಕೊಳ್ಳುತ್ತ ಬಂದರು. ಇದರ ಹಿನ್ನೆಲೆಯಲ್ಲಿಯೇ ಅನೇಕ ಹಾಡುಗಳು, ಕಥೆಗಳನ್ನು ಅವರು ಕಟ್ಟಿ ಆ ವಸ್ತುಗಳಿಗಿರುವಂತಹ ಪ್ರಾಮುಖ್ಯತೆಯನ್ನು ಹೇಳುತ್ತ ಬಂದರು.

ಇಂತಹ ಈ ಸಮುದಾಯಗಳು ತಾವು ದೈನಂದಿನವಾಗಿ ಬಳಸುತ್ತಿದ್ದಂತಹ ವಸ್ತುಗಳು. ಉಡುಗೆ-ತೊಡುಗೆಗಳು, ಆಹಾರ ಪದಾರ್ಥಗಳು ಮೊದಲಾದಂತಹ ಪರಿಕರಗಳೆಲ್ಲವು ತನ್ನದೆ ಆದಂತಹ ಒಂದೊಂದು ಕತೆಯನ್ನು ಒಳಗೊಂಡಿವೆ. ಏಕೆಂದರೆ ಪ್ರತಿ ಹಂತದಲ್ಲಿಯೂ ಸಹ ವಿಶಿಷ್ಟತೆಯನ್ನು ಸಾಧಿಸುವುದು ಅವರ ಅದಮ್ಯ ಆಸೆಯಾಗಿರುವುದರಿಂದ ಅವರ ಪ್ರತಿ ಕದಲಿಕೆಯಲ್ಲಿಯೂ ವಿಶಿಷ್ಟವಾದಂತಹ ಆಕಾರ ರೂಪಿಕೆಯಿರುವುದನ್ನು ನಾವಿಂದು ಕಾಣಬಹುದು. ಅದಕ್ಕಾಗಿ ಅವರ ಆಚರಣೆಗಳಿಗೆ ಒಂದು ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನೆಲೆಯಿರುವುದು. ಈ ತೆರನಾದಂತಹ ಹಿನ್ನೆಲೆಯಿರುವುದನ್ನು ಇನ್ನಿತರ ಬೇರೆ ಯಾವುದೇ ಸಮುದಾಯದ ಆಚರಣೆಯಲ್ಲಿ ಕಾಣಲು ಸಿಗುವುದಿಲ್ಲ. ಅದಕ್ಕಾಗಿಯೇ ಮಾದಿಗ ಸಮುದಾಯವನ್ನು “ಆದಿ ಪುರುಷರು” “ಆದಿ ಜನಾಂಗ” ಮತ್ತು ಭಾರತದ ಮೂಲ ವಾಸಿಗಳೆಂದು ಕರೆಯುತ್ತಾರೆ. ಇಂತಹ ಹಿನ್ನೆಲೆಯಿಂದ ಬಂದಂತಹ ಇವರು ಅವರ ಸಂಸ್ಕೃತಿಯನ್ನು ನಾಲಿಗೆಯ ಮೇಲೆ ತೆಲೆಮಾರಿನಿಂದ ತಲೆಮಾರಿಗೆ ಹೊತ್ತುಕೊಂಡು ಬಂದು ಸಾಂಸ್ಕೃತಿಕ ವಾಹಕರೆಂಬ ಬಿರುದಿಗೆ ಪಾತ್ರರಾದರು. ಇಂತಹ ಇವರ ಮೇಲೆ ಆದಿಯಿಂದ ಪ್ರಧಾನ ಸಂಸ್ಕೃತಿಯ ಆಳುವ ವರ್ಗ ದಬ್ಬಾಳಿಕೆಯನ್ನು ನಡೆಸುತ್ತಲೇ ಬಂದಿದೆ. ಅದನ್ನೆಲ್ಲಾ ಮೆಟ್ಟಿನಿಂತು ತಮಗಾದ ಸಾಂಸ್ಕೃತಿಕ ತಾರತಮ್ಯದ ನೋವಿನ ಎಳೆಗಳನ್ನು ಸಹಿಸುತ್ತ ಅದನ್ನೇ ತಮ್ಮ ಉಡುಪೆಂದು ಸುತ್ತಿಕೊಂಡು ಉತ್ಸಾಹದಿಂದ ಬದುಕು ಸವೆಸುತ್ತಿರುವ ಈ ತಳಸಮುದಾಯದ ಜೀವನ ಉತ್ಸಾಹವನ್ನು ನೋಡಿದರೆ ಅಲ್ಲಿ ನಮಗೆ ಕಾಣಸಿಗುವುದು ಅವರ ಕನಸುಗಳಲ್ಲಿ ಜೀವಂತಿಕೆ.

ಇಂತಹ ಈ ಕನಸಗುಳ ಜೀವಂತಿಕೆಯನ್ನು ಅವರು ಬಳಸುತ್ತಿದ್ದಂತಹ ಪರಿಕರಗಳಲ್ಲಿ, ಆಡುತ್ತಿದ್ದ ಮಾತುಗಳಲ್ಲಿ, ಕಟ್ಟುತ್ತಿದ್ದ ಕಥೆಗಳಲ್ಲಿ, ಪ್ರದರ್ಶಿಸುತ್ತದ್ದ ಆಚರಣೆ-ಸಂಪ್ರದಾಯಗಳಲ್ಲಿ ಕಾಣಬಹುದು. ಇವೆಲ್ಲಾ ಅವರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿ ಎಂದರೆ ತಪ್ಪಾಗಲಾರದು. ಹೀಗೆ ಒಂದು ಸಂಸ್ಕೃತಿಯ ವಿರುದ್ಧ ಸೆಟೆದು ನಿಂತು ತನ್ನಲ್ಲಿಯ ಸಂಸ್ಕೃತಿಯನ್ನು ಪ್ರದರ್ಶಿಸಿ ಪ್ರತಿ ಸಂಸ್ಕೃತಿಯೊಂದನ್ನು ಹುಟ್ಟು ಹಾಕಿದ ಸಂಪ್ರದಾಯವನ್ನು ಎಲ್ಲಾ ಕೆಳವರ್ಗದ ಜಾತಿ ಬುಡಕಟ್ಟುಗಳಲ್ಲಿ ಕಾಣಬಹುದು. ಈ ಹುಟ್ಟು ಹಾಕುವಂತಹ ಸಂದರ್ಭದಲ್ಲಿ ಆಳುವ ವರ್ಗದ ಸಂಸ್ಕೃತಿಯಲ್ಲಿಯೇ ಇವರ ಆಚಾರ-ವಿಚಾರದ ಪದ್ಧತಿಗಳು ಇಣುಕಿ ನೋಡಿರುವಂತಹದ್ದನ್ನು ನಾವು ಗಮನಿಸಬಹುದು. ಇದೆಲ್ಲವನ್ನು ನೋಡುತ್ತಿದ್ದರೆ ಇನ್ನೂ ಕೆಳಸ್ತರದ ಬುಡಕಟ್ಟುಗಳಲ್ಲಿ ಬದುಕು ಕಟ್ಟುವ ಆಸೆ ಮತ್ತು ಸಾಮರ್ಥ್ಯ ಇದೆ ಎಂದು ಗೊತ್ತಾಗುತ್ತದೆ.

ಹೀಗೆ ಸಾಮಾಜಿಕವಾಗಿ ಆರ್ಥಿಕವಾಗಿ “ತಳ”ಸ್ತರಕ್ಕೆ ಸೇರಿದ ಸಮುದಾಯಗಳಿಗೆ ಬದುಕಲೇಬೇಕೆಂಬ ಆದಮ್ಯ ಆಸೆಗಳಿರುತ್ತವೆ. ತಮ್ಮಾಸೆ ಕನಸುಗಳ ಈಡೇರಿಕೆಗೆ ವಾಸ್ತವದ ಹೊಳೆ ಅಡ್ಡಬಂದರೆ, ಅವು ಈಸುಬಿದ್ದು ಸೆಣಸುವ ಹಠ ತೋರುತ್ತವೆ. ತಮ್ಮನ್ನು ಆಧರಿಸಿರುವ ಎಲ್ಲ ತಲ್ಲಣಗಳ ನಡುವೆ ಕೂಡ ಅವು ಪ್ರತಿರೋಧದ ವಿಚಿತ್ರ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ಪ್ರತಿ ಸಂಸ್ಕೃತಿಯ ಸಾಧ್ಯತೆಗಳು ಸಾಮಾನ್ಯವಾಗಿ ರೂಪು ತಳೆಯುವುದೇ ಇಕ್ಕಟ್ಟುಗಳಲ್ಲಿ. ಹಾಗೆಂದು, ವ್ಯವಸ್ಥೆಯೊಡ್ಡಿದ ಇಕ್ಕಟ್ಟುಗಳಲ್ಲಿ ಪಾರಾಗಿ ತಪ್ಪಿಸಿಕೊಳ್ಳುವ ಜಾಣತನಗಳೇ ಪ್ರತಿ ಸಂಸ್ಕೃತಿಯಲ್ಲ. ಪ್ರತಿ ಸಂಸ್ಕೃತಿಯು ಸಂಕಟಗಳಲ್ಲಿರುವ ಸಮುದಾಯಕ್ಕೆ ಪ್ರತಿರೋಧಿಸುವ ಚೈತನ್ಯವನ್ನು ತುಂಬಿ, ಪರ್ಯಾಯಗಳ ಶೋಧನೆಗೆ ಪ್ರೇರೇಪಿಸಬಲ್ಲ ಸಮುದಾಯಿಕ ಪ್ರತಿಭೆ ಕೂಡ. ಆದರೆ “ಪರ್ಯಾಯ”ವೊಂದು ಒಮ್ಮೆ ರೂಪುಗೊಂಡ ಮೇಲೆ ಅದು ಸಮುದಾಯಗಳೆಂಬ ಕೆಳಗದ್ದೆಗಳಿಗೆ ಯಾವತ್ತೂ ನೀರುಣಿಸಬಲ್ಲ ಬತ್ತದ ತೊರೆಯಾಗಿ ಉಳಿಯುವುದಿಲ್ಲ. ಒಂದು ಕಾಲಕ್ಕೆ “ಪ್ರತಿ ಸಂಸ್ಕೃತಿ” ಎಂಬಂತೆ ಮೈತಳೆದ ವಚನ ಚಳಿವಳಿಯು ಈಗ ಏನಾಗಿ ನಿಂತಿದೆ ಎಂಬುದು ಇದಕ್ಕೆ ಸಾಕ್ಷಿ. ಈ ಅರ್ಥದಲ್ಲಿ ಬದಲಾಗುವ ಚಾರಿತ್ರಿಕ ಸನ್ನಿವೇಶಗಳಲ್ಲಿ “ಪ್ರತಿ ಸಂಸ್ಕೃತಿ”ಗಳು ಮತ್ತೆ ಮತ್ತೆ ಮೂಡುತ್ತಲೇ ಇರುತ್ತವೆ. ಇದೊಂದು ನಿಲ್ಲದ ಪ್ರಕ್ರಿಯೆ ಎಂದು ಖ್ಯಾತ ಸಂಸ್ಕೃತಿ ತಜ್ಞರಾದ ಡಾ|| ರಹಮತ್‌ತರೀಕೆರೆಯವರು ಕೆಳಸ್ತರದ ಸಮುದಾಯದವರ ಶಕ್ತಿ ಸಾಮರ್ಥ್ಯದ ಕುರಿತು ತಮ್ಮ ಮರದೊಳಗಣ ಕಿಚ್ಚು ಪ್ರಸ್ತಕದಲ್ಲಿ ಅಭಿಪ್ರಾಯಪಡುತ್ತಾರೆ.

ಇಂತಹ ಈ ಸಮುದಾಯಗಳಲ್ಲಿ ಇಂತಹ ಆಚರಣಾತ್ಮಕ ಶಕ್ತಿಗಳು ಪ್ರದರ್ಶನವಾಗುವುದು ಅವರ ಆಚಾರ-ವಿಚಾರಗಳಲ್ಲಿ. ರೂಢಿ-ಸಂಪ್ರದಾಯಗಳಲ್ಲಿ, ಕಲೆಗಳನ್ನು ಸಮುದಾಯದ ಆಚರಣೆಗಳಲ್ಲಿ, ಇಂತಹ ಇವರು ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿರುವಂತಹ ಹಬ್ಬ ಹರಿದಿನಗಳಲ್ಲಿ. ಇಂತಹ ಈ ಆಚರಣೆಗಳಿಗೆ ತನ್ನದೇ ಆದಂತಹ ಒಂದು ಚಾರಿತ್ರಿಕ ಇತಿಹಾಸವಿದೆ. ಈ ಚಾರಿತ್ರಿಕ ಐತಿಹ್ಯವು ಗತವನ್ನು ವಾಸ್ತವದಲ್ಲಿ ಪ್ರತಿಬಿಂಬಿಸುವುದರಿಂದ ಅದರ ಹೊಸತನವು ಪ್ರತಿಸಾರಿ ಪ್ರದರ್ಶನವಾದಾಗಲೆಲ್ಲಾ ಅದೊಂದು ನವನವೀನವಾದಂತಹ ಅನುಭವವನ್ನು ಕಟ್ಟಿಕೊಡುತ್ತ ಸಾಗುತ್ತದೆ. ಅದಕ್ಕೆ ಇವರನ್ನು ಸಂಸ್ಕೃತಿಯ ಹರಿಕಾರರೂ, ಸಂಸ್ಕೃತಿಯ ವಕ್ತಾರರೆಂದು ಗತವನ್ನು ವಾಸ್ತವದಲ್ಲಿ ಬಿಂಬಿಸುವ ಕೊಂಡಿ ಎಂದು ಭಾವಿಸುವುದು.

ತಳಸ್ತರದ ಮಾದಿಗ ಕುಲಗಳಲ್ಲಿನ ಸಂಸ್ಕೃತಿಯ ನಿರ್ಮಾಣವು ಇಕ್ಕಟ್ಟುಗಳಲ್ಲಿಯೇ ಉಂಟಾದಂತಹುದು. ಅದು ಸಾಮಾಜಿಕ ಇಕ್ಕಟ್ಟಾಗಿರಬಹುದು. ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಇಕ್ಕಟ್ಟಾಗಿರಬಹುದು. ಇಂತಹ ಇಕ್ಕಟ್ಟಿನ ನಡುವೆ ಅದನ್ನು ಮೀರಿ ನಿಲ್ಲುವಂತಹ ಪರ್ಯಾಯವೊಂದನ್ನು ಕಟ್ಟಿಕೊಟ್ಟ ಇವರು ಅದನ್ನೆಲ್ಲಾ ತಾವು ಆಚರಿಸುವಂತಹ ಆಚರಣೆಗಳಲ್ಲಿ ಇಂದಿಗೂ ಆ ಪರ್ಯಾಯದ ಛಾಯೆ ಇರುವುದನ್ನು ಕಾಣಬಹುದು. ಇಂತಹ ಇವರ ಆಚರಣೆಗಳಲ್ಲಿ ಚರಿತ್ರೆಯ ಮಹಾಪುರುಷರ ದರ್ಶನವಾಗುತ್ತದೆ. ಸಾಂಸ್ಕೃತಿಕ ನೇತಾರರು ಪರಿಚಯವಾಗುತ್ತಾರೆ. ತೀರ ನಿಕೃಷ್ಟವಾದಂತಹ ಬದುಕು ಸಾಗಿಸುತ್ತಿದ್ದಂತಹ ಮಹಿಳೆಯರ ಸ್ಥಾನ-ಮಾನ ಅರಿವಾಗುತ್ತದೆ. ಅದಕ್ಕೂ ಮಿಗಿಲಾಗಿ ಗಾಢವಾದಂತಹ ಅನುಭವ ಏರ್ಪಡುತ್ತದೆ. ಇದೆಲ್ಲಕ್ಕೂ ಮೂಲ ಸೆಲೆಯಾಗಿರುವುದು ಮಾದಿಗ ಸಮುದಾಯದವರು ಅನಾದಿಯಿಂದ ಆಚರಿಸಿಕೊಂಡು ಬಂದಂತಹ ಆಚರಣೆಗಳು.

ಪ್ರಸ್ತುತ ಈ ಅಧ್ಯಾಯದಲ್ಲಿ ಮಾದಿಗರ ಆಚರಣೆಗಳಲ್ಲಿನ ಜೀವ ದ್ರವ್ಯ ಎಂತಹದು, ಆ ಸೆಲೆ ಇಲ್ಲಿಯವರೆಗೆ ಯಾಕೆ ಹೀರುತ್ತ ಬಂತು. ಅದರ ಜೀವಂತಿಕೆ ಯಾಕೆ ಪ್ರತಿಸಾರಿ ಹೊಸ ತೆರನಾಗಿ ಕಾಣುತ್ತದೆ ಎಂಬುದನ್ನು ತಿಳಿಯೋಣ.

ಝಂಝವಾರದ ಪರಿಕಲ್ಪನೆಗಳು:

ಮಾದಿಗರಲ್ಲಿ ಬಹು ಹಿಂದಿನಿಂದಲೂ ಈ ಝಂಝವಾರ (ಜನಿವಾರ)ವನ್ನು ಬಳಸುತ್ತಿದ್ದರು. ಸಂಸ್ಕೃತಿಯ ಪಲ್ಲಟದಿಂದಲೊ, ಸಾಮಾಜಿಕ ಶ್ರೇಣೀಕರಣದಿಂದಲೊ ಅಥವಾ ಬೇರೆ ಯಾವುದೋ ಉದ್ದೇಶದಿಂದಲೋ ಅದು ಪ್ರಧಾನ ಸಂಸ್ಕೃತಿಯ ಅದರಲ್ಲೂ ವೈದಿಕರ ಪಾಲಾಯಿತು. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಈ ಜನಿವಾರ ವೈದಿಕರ ಪಾಲು ಯಾಕಾಯಿತು ಎಂಬುದರ ಕುರಿತು ಮುನಿತಿಪ್ಪಯ್ಯ ಹೀಗೆ ಹೇಳುತ್ತಾರೆ. ಅನೇಕ ವರ್ಷಗಳ ಹಿಂದೆ ಬಹುದೊಡ್ಡ ಮಳೆ ಬಂದಿತ್ತಂತೆ. ಯಾರು ಕೇಳಿರದ, ಕಂಡಿರದ ಆ ಮಳೆಗೆ ಊರಿನ ಎಲ್ಲಾ ಮನೆಗಳು ನೆಲೆನಿಲ್ಲಲು ಜಾಗವಿಲ್ಲದ ಸ್ಥಿತಿ ಉಂಟಾಗಿತ್ತು. ಅಂತಹ ಸಮಯದಲ್ಲಿ ಮಳೆ ನಿಲ್ಲುವವರೆಗೆ ಊರಿನ ಎಲ್ಲರೂ ಆಶ್ರಯ ಪಡೆಯಲು ಒಂದು ದೇವಸ್ಥಾನದ ಮೊರೆ ಹೋದರು. ಕೆಲವರು ಅದರಲ್ಲಿ ದೇವಸ್ಥಾನದ ಒಳಗಿನ ಗರ್ಭಗುಡಿಯಲ್ಲಿ ಆಶ್ರಯ ಪಡೆದರು. ಕೆಲವರು ಪಡಸಾಲೆಯಲ್ಲಿ, ಇನ್ನೂ ಕೆಲವರು ದೇವಸ್ಥಾನದ ಮೂಲೆಯಲ್ಲಿ, ಕೆಲವರು ದೇವಾಲಯದ ಬಾಗಿಲುಗಳಲ್ಲಿ ಆ ಕಡೆ ಈ ಕಡೆ ಆಶ್ರಯ ಪಡೆದರು. ಆಗಿನ ಕಾಲದಲ್ಲಿ ಅವರು ಐನೋರು. ಕಾಪು, ಕಮ್ಮ, ರೆಡ್ಡಿ, ಹೊಲೆಯ, ಮಾದಿಗ ಎಂಬ ಭೇದ-ಭಾವದ ಜಾತಿ ಪದ್ಧತಿ ಇರಲಿಲ್ಲ. ಅದಕ್ಕೆ ಎಲ್ಲರೂ ಒಂದೇ ಕಡೆ ನೆಲೆನಿಂತು ಆಶ್ರಯ ಪಡೆದಿದ್ದರು. ಒಂದು ದಿನ ಕಳೆಯಿತು. ಎರಡು ದಿನ, ಒಂದು ವಾರ, ತಿಂಗಳು ಕಳೆಯಿತು. ತಂದಿದ್ದ ಆಹಾರ ಎಲ್ಲಾ ಮುಗಿದು ಹೋಯಿತು. ನಂತರ ಅಲ್ಲಲ್ಲಿ ಸಿಕ್ಕ ಗೆಡ್ಡೆ-ಗೆಣಸು ತಂದು ತಿಂದರು. ಅದು ಮುಗಿದು ಹೋದ ಮೇಲೆ ಅಲ್ಲಿ ತಮ್ಮ ಜೊತೆಗಿದ್ದಂತಹ ಸಾಕು ಪ್ರಾಣಿಗಳಾದ ಕುರಿ, ಕೋಳಿ, ಮೇಕೆಯನ್ನು ಕೊಂದು ತಿಂದರು. ಅದು ಬರ-ಬರುತ್ತ ಮುಗಿದು ಹೋಯಿತು. ನಂತರ ಇನ್ನು ಉಳಿದದ್ದು ಎಮ್ಮೆ, ಹಸುಗಳು. ಅದನ್ನು ಕೊಂದು ತಿಂದರು. ಆ ಸಮಯದಲ್ಲಿ ಅಳಿದುಳಿದಿದ್ದನ್ನು ದೇವಸ್ಥಾನದ ಹೊರಗೆ ಆಶ್ರಯ ಪಡೆದಿದ್ದ ಜನರಿಗೆ ಹಂಚಿದ್ದರು. ಅಳಿದು ಉಳಿದಿದ್ದು ಎಂದರೆ ದೇವಸ್ಥಾನ ಒಳಗಿದ್ದ ಜನ ತಿಂದು ಉಳಿದಂತಹ, ಹೆಚ್ಚಾಂತಹ ಕೊಬ್ಬು, ಮೂಳೆ ಮೊದಲಾದವನ್ನು ಉಣ್ಣಲು ಕೊಟ್ಟರು. ತಿಂದಂತಹ ಜನರಲ್ಲಿ ಚರ್ಚೆ ಆರಂಭವಾಯಿತು. ಅದು ಇವರು ಕೊಟ್ಟ ಮೂಳೆ, ಕೊಬ್ಬೇ ಎಷ್ಟು ರುಚಿಯಾಗಿರುವಾಗ ಅದರ ಮಾಂಸ ಇನ್ನೆಷ್ಟು ರುಚಿಯಾಗಿರಬಾರದು? ಅದು ಯಾವ ಪ್ರಾಣಿಯ ಮಾಂಸವಾಗಿರಬೇಕು? ಎಂದು ಆ ಪ್ರಾಣಿಯ ಹೆಸರನ್ನು ತಿಳಿಯಲು ದೇವಸ್ಥಾನದ ಒಳಗಿದ್ದ ಜನರ ಮುಖಂಡನನ್ನು ಇವರು ಹೋಗಿ ವಿಚಾರಿಸಿದರು. ಮೊದ-ಮೊದಲು ಅವನು ಇದು ನಮ್ಮ ಆಹಾರ, ಇದು ನಮಗೆ ಮಾತ್ರ ಸೀಮಿತ. ಪಾಪ ಅಂತ ಕೊಟ್ಟರೆ ಬುಡಕ್ಕೆ ಕೈ ಹಾಕುತ್ತೀರಲ್ಲ” ಎಂದು ಅವನು ಇವರನ್ನು ದಬಾಯಿಸಿದ. ಪಟ್ಟು ಬಿಡದೆ ಕೂತ ಇವರನ್ನು ಕಳುಹಿಸಲು ಆಗದೆ ಅವರು “ಹಾಗಾದರೆ ಆ ಪ್ರಾಣಿಯ ಹೆಸರನ್ನು ಹೇಳುತ್ತೇನೆ. ನನಗೆ ಏನು ಕೊಡುತ್ತೀಯಾ? ಎಂದಾಗ ಇವರು ತಮ್ಮಲ್ಲಿದ್ದಂತಹ ಚಿನ್ನ, ವಜ್ರ, ವೈಡೂರ್ಯ, ಆಸ್ತಿ ಎಲ್ಲವನ್ನು ಅವರಿಗೆ ಕೊಟ್ಟರು. ಜೊತೆಗೆ ಇವರಲ್ಲಿರುವಂತಹ ಸುಂದರ ಸ್ತ್ರೀಯರನ್ನು ಕೊಟ್ಟರು. ಇನ್ನು ಇವರಲ್ಲಿ ಏನೂ ಉಳಿದಿರಲಿಲ್ಲ. ಮೈಮೇಲೆ ಬಟ್ಟೆ ಮತ್ತು ಒಂದು ಸಣ್ಣದಾದ ದಾರವನ್ನು ಧರಿಸಿದ್ದರು. ಕೊನೆಗೆ ಆ ವ್ಯಕ್ತಿ ಆ ದಾರ ಕೊಡು ಎಂದು ಒತ್ತಾಯಿಸಿದ. ಮಾಂಸದ ಆಸೆಗೆ ಬಟ್ಟೆಯನ್ನು ಬಿಟ್ಟು ಈ ಜನಿವಾರವನ್ನು ಅವರಿಗೆ ಹಸ್ತಾಂತರ ಮಾಡಿ ಆ ಪ್ರಾಣಿಯ ಹೆಸರನ್ನು ತಿಳಿದುಕೊಂಡು ಇವರ ವಾಪಸ್ಸಾದರು.

ಹೀಗೆ ಇವರಿಂದ ಪಡೆದ ಧನ ಕನಕದಿಂದ ಶ್ರೀಮಂತರಾದರು. ಇವರು ಕೊಟ್ಟಂತಹ ಸುಂದರ ತರುಣಿಯರನ್ನು ಮದುವೆಯಾದರು. ಕಾಲಾನಂತರದಲ್ಲಿ ಶ್ರೇಷ್ಠತೆ ಮೆರೆಯಲು ಇವರು ಶ್ರೇಣಿಕರಣವನ್ನು ಪ್ರಾರಂಭ ಮಾಡಿ ನಾವು ದೇವಸ್ಥಾನದ ಗರ್ಭಗುಡಿಯಲ್ಲಿ ನೆಲೆನಿಂತವರೆಂದು ದೇವರ ನಂತರದ ದೇವರುಗಳು ನಾವು ಎಂದು ಬ್ರಾಹ್ಮಣರಾದರು. ಹಾಗೆ ಪಡಸಾಲೆಯಲ್ಲಿ ನಿಂತವರು ವೈಶ್ಯ, ಶೂದ್ರ, ಕ್ಷತ್ರಿಯರಂತೆ ವಿಭಾಗವಾದರು. ದೇವಸ್ಥಾನದ ಹೊರಗೆ ನಿಂತು ಮಾಂಸಕ್ಕಾಗಿ ಎಲ್ಲವನ್ನು ಕಳೆದುಕೊಂಡ ಜನರು ನಿಕೃಷ್ಟರೆಂದು ಮೇಲಿನ ಎಲ್ಲಾ ವರ್ಗಕ್ಕೆ ತಲೆಬಾಗಿ ನಡೆಯುತ್ತ ಅವರಿಗೆ ಸೇವೆ ಮಾಡಬೇಕೆಂಬ ನಿರ್ಧಾರ ಕೈಗೊಂಡು ಆಳುವುದಕ್ಕೆ ಶುರು ಮಾಡಿದರು. ಹೀಗೆ ಸಮಸ್ತವನ್ನು ಕಳೆದುಕೊಂಡ ಇವರು ಹೊಲೆಯ -ಮಾದಿಗರೆಂಬ ಜಾತಿ ಸೂತಕದ ಹಣೆಪಟ್ಟಿ ಹಚ್ಚಿಕೊಂಡರು.

ಹೀಗೆ ನಮಗೆ ಬಂದಂತಹ ಜನಿವಾರ, ದನ, ಕನಕ, ಮಣೆ, ರತ್ನಹಾರಗಳೆಲ್ಲ ಮೇಲ್ವರ್ಗದವರ ಪಾಲಾಯಿತು. ಹಸುವಿನ ಮಾಂಸ ಮಾತ್ರ ನಮಗೆ ಉಳಿಯಿತು ಎಂದು ನೋವಿನಿಂದ ೮೫ರ ವಯಸ್ಸಿನ ಮುನಿತಿಪ್ಪಯ್ಯ ಹೇಳುತ್ತಾರೆ. ಈ ಕತೆ ಹೇಳುವಾಗ ಮುನಿತಿಮ್ಮಪ್ಪಯ್ಯನ ಮುಖದಲ್ಲಿ ಬ್ರಾಹ್ಮಣರು ಎಸಗಿದ ಮೋಸಕ್ಕೆ ಆಗಾಗ ಹಲ್ಲು ಕಡಿಯುತ್ತಿದ್ದುದು ಕಾಣಿಸಿತು. ಜೊತೆಗೆ ಕೋಪ ಸಹ ಇತ್ತು. ಹೀಗೆ ಮಾಂಸಕ್ಕಾಗಿ ಸಮಸ್ತವನ್ನು ಕಳೆದುಕೊಂಡ ಹೊಲೆಯ-ಮಾದಿಗರು ನಂತರ ಅದನ್ನು (ಮಾಂಸವನ್ನು) ಬಿಡದೆ ಮುಂದುವರೆಸಿಕೊಂಡು ಬಂದರು. ಹೀಗೆ ಬಹಶಃ ಬ್ರಾಹ್ಮಣರು ಮಾದಿಗರು, ಹೊಲೆಯರಿಂದ ಪಡೆದಂತಹ ವಸ್ತುಗಳಿಂದ ಸ್ಥಿತಿವಂತರಾದರು ಎಂದು ಮುನಿತಿಪ್ಪಯ್ಯ ಅಭಿಪ್ರಾಯಪಡುತ್ತಾರ.

ಈ ತೆರನಾಗಿ ಬಹುಶ್ರೀಮಂತಿಕೆಯಿಂದ ಬದುಕು ಸಾಗಿಸುತ್ತಿದ್ದ ಬ್ರಾಹ್ಮಣರು, ಕೋಮಟಿಗರು ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳಲು ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡರು. ಅದರಂತೆ ಪಶು, ಪಕ್ಷಿ, ಗಿಡ, ಮರ, ದಿಕ್ಕುಗಳು, ಬಣ್ಣಗಳು, ಉಣ್ಣುವುದು, ಉಡುವುದು, ಆಡುವ ಮಾತು, ಮಾಡುವ

ಕಸುಬುಗಳಾದಿಯಾಗಿ ತಮ್ಮ ಬದುಕಲ್ಲೊಂದು ಕ್ರಾಂತಿಕಾರವಾದಂತಹ ಮಾರ್ಪಟನ್ನು ಮಾಡುತ್ತ ಬಂದರು. ಅದಕ್ಕಾಗಿ ಅವರಾಡುವ ಭಾಷೆ, ಮಾಡುವ ಕಸುಬುಗಳು ಬದಲಾಯಿತು. ತಿನ್ನುವ ಆಹಾರ ಭಿನ್ನವಾಯಿತು. ಉಡುಗೆ, ತೊಡುಗೆಗೆಲ್ಲಾ ಬದಲಾಯಿತು. ಈ ಬದಲಾವಣೆಯನ್ನು ಪಡೆಯುವುದರಿಂದ ಅವರಿಗಾದ ಲಾಭ ಒಂದೇ ಅದು ಇತರರಿಗಿಂತ ತಾವು ಭಿನ್ನ ಶ್ರೇಷ್ಠ ಎಂದು ಸಾಬೀತುಪಡಿಸಿಕೊಂಡದ್ದು. ಇದರಿಂದ ಇನ್ನಿತರ ಜನರನ್ನು ಆಳಬಹುದೆಂಬ ದೃಷ್ಟಿಕೋನ. ಅದಕ್ಕಾಗಿ ಅವರ ಮೂಲ ಆಹಾರವಾದಂತಹ ದನದ, ಹಸುವಿನ ಮಾಂಸವನ್ನು ತಳಸಮುದಾಯದ ವ್ಯಕ್ತಿಗಳಿಗೆ ಉಣಬಡಿಸುತ್ತಾ ಬಂದರು. ಇದರ ಬದಲಾವಣೆ ಅವರು ತಳಸಮುದಾಯದಿಂದ ಬೇರೆ ಬೇರೆ ಪರಿಕರಗಳನ್ನು ಪಡೆದರು. ಇದೆಲ್ಲದರಲ್ಲಿಯೇ ಮಾದಿಗರ ಝಂಝವಾರ (ಜನಿವಾರ) ವೈದಿಕರ ಪಾಲಾಗಿರಬಹುದು.

ಈ ಹಿನ್ನೆಲೆಯಿಂದ ಗಮನಿಸಿದರೆ ಮೂಲತಃ ತಳಸಮುದಾಯ ಜನರು ಶಾಖಾಹಾರಿಗಳಾಗಿಬಹುದು. ನಂತರದಲ್ಲಿ ವೈದಿಕರು ಕೊಡುತ್ತಿದ್ದ ಮಾಂಸದ ರುಚಿಗೆ ಜೋತುಬಿದ್ದು ಸಮಸ್ತವನ್ನು ಕಳೆದುಕೊಂಡಿರಬಹುದು. ಅಂದರೆ ಮೂಲದಲ್ಲಿ ವೈದಿಕರು ಮಾಂಸಾಹಾರಿಗಳು ಎಂಬ ಅಂಶ ಇಲ್ಲಿ ನಾವು ಗಮನಿಸಬಹುದು. ಅಂದರೆ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು. ತಮ್ಮ ಯಜ್ಞ ಶ್ರಾದ್ಧಗಳಲ್ಲಿ ಪ್ರಾಣಿಬಲಿ, ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು. ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ ಎಂದು ಸಂಸ್ಕೃತಿ ಚಿಂತಕರಾದ ರಹಮತ್‌ತರೀಕೆರೆಯವರು ಅಭಿಪ್ರಾಯ ಪಡುತ್ತಾರೆ. ಇಂತಹ ಮಾಂಸದ ಆಚರಣೆಯನ್ನು ಬಹುಶಃ ಮೇಲ್ವರ್ಗದವರು ಸಾಮಾಜಿಕ ಸ್ಥಾನಮಾನದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ವೈದಿಕರು ಮತ್ತು ವೈದಿಕೇತರರು ಕೈಬಿಟ್ಟಿರಬಹುದು. ಈ ಆಚರಣೆಯನ್ನು ಅಳವಡಿಸಿಕೊಂಡಾಗ ಅದನ್ನು “ಪವಿತ್ರ”ವೆಂದು ಅದನ್ನು ವರ್ಗಾಯಿಸಿದಾಗ ಅದೊಂದು “ಅಪವಿತ್ರ”ವೆಂದು, ಅದನ್ನು ಬಿಡದೆ ಪಾಲಿಸಿಕೊಂಡು ಬರುವವರನ್ನು “ಅಸ್ಪೃಶ್ಯರು” “ಅಂತ್ಯಜರು” ಎಂದು ಅವರನ್ನು ಸಮಾಜದಿಂದ ಹೊರಗಿಟ್ಟಿರಬಹುದು. ಒಟ್ಟಿನಲ್ಲಿ ಈ ವಂಶದ ಆಚರಣೆ ಒಂದು ಸಾಂಸ್ಕೃತಿಕ ಹುನ್ನಾರವೆಂಬುದು ಅರಿವಾಗುತ್ತದೆ.

ಆದರೂ ಇಲ್ಲಿ ಈ ಆಹಾರ ಪದ್ಧತಿಯನ್ನು ಬಿಡದೆ ಅನುಸರಿಕೊಂಡು ಬಂದಂತಹ ಹಿನ್ನೆಲೆಯಲ್ಲಿ ಮಾಂಸವನ್ನು ಪಡೆದು ಅದರ ಬದಲಿಯಾಗಿ ಜನಿವಾರವನ್ನು ಆಳುವ ಸಂಸ್ಕೃತಿಗೆ ಕೊಟ್ಟದ್ದು ಎನ್ನುವ ಮುನಿತಿಪ್ಪಯ್ಯ ಈ ಜನಿವಾರವನ್ನು ಅವರಿಗೆ ಕೊಟ್ಟ ಮಾತ್ರಕ್ಕೆ ಅದು ಅವರ ಆಸ್ತಿಯಾಗಲಿಲ್ಲ. ಅದನ್ನು ನಾವು ಇಂದು ಅನೇಕ ಸಂದರ್ಭದಲ್ಲಿ ಬಳಸುತ್ತೇವೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಲೂರು ತಾಲೂಕಿನ ಮಾತಂಗಿ ಪುರದಲ್ಲಿ ಇಂದು ಸಹ ಜನನ, ಮರಣ, ಮದುವೆ ಮೊದಲಾದ ಆಚರಣೆಗಳಲ್ಲಿ ಮಾದಿಗರು ಈ ಜನಿವಾರವನ್ನು ಹುಟ್ಟಿನ ಸೂತಕ ಕಳೆಯಲು ಒಂದಷ್ಟು ದಿನ ತೆಗೆದಿಡುವ ಈ ಜನರು ಆ ನಂತರ ಹುಟ್ಟಿದ ಮಗುವಿಗೆ ಮೊದಲ ಸ್ನಾನವಾದ ಬಳಿಕ ಆ ಮಗುವಿಗೆ ತೊಡಗಿಸುತ್ತಾರೆ. ಇಂತಹ ಆಚರಣೆಯನ್ನು ಅನಾದಿ ಕಾಲದಿಂದಲೂ ಬಳಸುವ ಅವರ ವ್ಯಕ್ತಿ ಯಾರಾದರೂ ಸತ್ತರೆ ಅಂತಹ ವ್ಯಕ್ತಿಗೆ ಸ್ನಾನಾದಿಗಳನ್ನು ಮುಗಿಸಿ ಹೊಸ ಬಟ್ಟೆ ತೊಡಿಸಿ ಆ ನಂತರ ಈ ಜನಿವಾರವನ್ನು ಆ ಶವಕ್ಕೆ ತೊಡಿಸುತ್ತಾರೆ. ನಂತರ ಸ್ಮಶಾನದಲ್ಲಿ ಅದನ್ನು ತೆಗೆದುಬಿಡುತ್ತಾರೆ. ಇಂತಹ “ಪವಿತ್ರ” ಸಂಕೇತವಾದ ಈ ಜನಿವಾರದ ವಿಷಯದಲ್ಲಿ ಈಗಲೂ ಮಾದಗರಿಗೂ ಮತ್ತು ಕೋಮಟಿಗರಿಗೆ ಹಳೆ ವೈಷಮ್ಯ ಇದೆ. ಬಹುಶಃ ಈ ಭಿನ್ನಾಭಿಪ್ರಾಯಕ್ಕೆ ಕಾರಣ ಅರುಂಧತಿಯನ್ನು ಮೋಸಗೊಳಿಸಿ ಮದುವೆಯಾಗಿರುವುದು ಅಥವಾ ಮಾಂಸದ ರುಚಿ ತೋರಿಸಿ ಜನಿವಾರವನ್ನು ಕಬಳಿಸಿರುವುದು ಆಗಿರಬಹುದು. ಈ ಕಾರಣದಿಂದಲೇ ಮಾದಿಗರು ವೈದಿಕರನ್ನು ಮತ್ತು ಕೋಮಟಿಗರನ್ನು ವಿನಾಕಾರಣ ದೂರುತ್ತಾರೆ. ಅದಕ್ಕೆ ಇಂಬು ಕೊಡುವಂತೆ ಮಾದಿಗರಲ್ಲಿ ಕೆಲವೊಂದು ನಂಬಿಕೆಗಳು ನೆಲೆಯೂರಿಬಿಟ್ಟಿವೆ. ಅದೆಂದರೆ

  • ಎಲ್ಲಾದರು ಹೋಗುತ್ತಿದ್ದರೆ ಬ್ರಾಹ್ಮಣ ಅಡ್ಡಬಂದರೆ ದರಿದ್ರ
  • ಮಾದಿಗರ ಕೇರಿಯೊಳಗೆ ಬ್ರಾಹ್ಮಣರು ಹೆಜ್ಜೆ ಇಟ್ಟರೆ ದರಿದ್ರ, ಅನಿಷ್ಟ
  • ಬ್ರಾಹ್ಮಣರ ಹೆಣ್ಣನ್ನು ಲೈಂಗಿಕತೆಗೆ ಬಳಸಿಕೊಂಡರೆ ಪಾಪ ಸುತ್ತಿಕೊಂಡು ಬಿಡುತ್ತದೆ.

ಹೀಗೆ ಬ್ರಾಹ್ಮಣರು ದರ್ಶನ ಮಾಡಿಸಿದರೆ ಹೋಗುವ ಕೆಲಸ ಕೈಗೂಡುವುದಿಲ್ಲವೆಂಬ ನಂಬಿಕೆ ಮಾದಿಗರಲ್ಲಿ. ಹೀಗೆ ಬ್ರಾಹ್ಮಣರನ್ನು ತನ್ನ ಕೇರಿಯೊಳಗೆ ಬರದಂತೆ ಸಾಮಾಜಿಕ ಕಟ್ಟುಪಾಡನ್ನು ಮಾದಿಗರು ಬ್ರಾಹ್ಮಣರಿಗೆ ವಿಧಿಸಿದ್ದಾರೆ.

ಹೀಗೆ ಜನಿವಾರವನ್ನು ಬಿಡದೆ ಬಳಸಿಕೊಂಡು ಬಂದಿರುವ ಮಾದಿಗರು ಈ ಸಂಪ್ರದಾಯವನ್ನು ಹುಟ್ಟು, ಸಾವು, ಮದುವೆ ಮೊದಲಾದ ಆಚರಣೆಗಳಿಗೆ ಮಾತ್ರ ಸೀಮಿತ ಮಾಡಿಕೊಂಡಿರುವುದು ಯಕ್ಷ ಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಯಾಕೆ ಅದನ್ನು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಬಳಸುವುದಿಲ್ಲ? ಎಂಬುದು ಕಾಡುತ್ತದೆ. ಬಹುಶಃ ಈ ಮದುವೆ, ಸಾವು, ಹುಟ್ಟು ಮೊದಲಾದಂತಹ ಆಚರಣೆಯಲ್ಲಿ ಬಳಸುವುದು ತಾವಿನ್ನೂ  ಸಮಾಜದಲ್ಲಿ ಸಾಮಾಜಿಕ ಹಿನ್ನೆಲೆಯಲ್ಲಿ ಶ್ರೇಣಿಕರಣಗೊಳ್ಳದೆ ತಮ್ಮ ಪವಿತ್ರತೆಯನ್ನು ಹಾಗೆ ಉಳಿಸಿಕೊಂಡಿದ್ದೇವೆಯೆಂಬ ಪ್ರತೀಕವಿರಬಹುದು. ಅಥವಾ ಸಮುದಾಯದೊಳಗಿನ ಆಚರಣೆ, ಸಂಪ್ರದಾಯಗಳ ನಂಬಿಕೆಗಳು ಕಳೆದು ಹೋಗಬಾರದೆಂಬ ನಿರ್ಧಾರವಾಗಿರಬಹುದು.

ಇಂತಹ “ಜನಿವಾರ”ದ ಕಲ್ಪನೆಯ ಕುರಿತು ಹಿರಿಯ ತಲೆಮಾರಿನ ವ್ಯಕ್ತಿ ಪೂಜಪ್ಪ ಹೇಳುವುದು ಹೀಗೆ. ಅದು ಬಿಳಿಯರ ಕಾಲ, ಆಗ ಜಾತಿ, ಕುಲ ಅಂತ ತುಂಬ ಶಿಸ್ತಿನ ಕಾಲ, ಅಂತಹ ಸ್ಥಿತಿಯಲ್ಲಿ ಹೊಲೆಯರನ್ನು, ಮಾದಿಗರನ್ನು ಊರಿನೊಳಗೆ ಬಿಟ್ಟುಕೊಳ್ಳುವದಲ್ಲ ಅವರ ಮುಖ ಕಂಡರೆ ಸಾಕು ಬಯ್ಯುತ್ತ ನಡೆದಾಡುತ್ತಿದ್ದರು. ಊರಿನ ದೊಡ್ಡ ಕುಲಗಳು, ನಮ್ಮಂತಹ ಜನರಿಗೆ ಊರಿನ ಆಚೆಗೆ ಒಂದಷ್ಟು ಪ್ರತ್ಯೇಕವಾದ ಭೂಮಿ ಕೊಟ್ಟಿದ್ದ ಊರವರು ನಾವು ಅಲ್ಲಿಂದ ಊರಿನೊಳಗೆ ಬರದಂತೆ ನಿರ್ಬಂಧಿಸಿದ್ದರು. ಕೂಲಿನಾಲಿ ಮಾಡಿ ಸತ್ತ ದನಗಳನ್ನು ಕೊಯ್ಯುತ ಬದುಕು ಸಾಗಿಸುತ್ತಿದ್ದ ನಾವು ಯಾವೊತ್ತು ನಮ್ಮ ಕುಲದ ಹಿರಿಯರ ಮಾತನ್ನು ಮೀರಿ ನಡೆದವರಲ್ಲ. ಅಂತಹ ನಮ್ಮಲ್ಲಿಗೆ ಆಗಾಗ ಊರಿನ ಶಾನುಭೋಗರು, ಗೌಡರು ಇನ್ನು ಯಾರಾರೋ ನಮ್ಮ ಮನಗೆ ನಮ್ಮ ತಾತನಾದ ಬಂಗಾರು ಬಾಲಗುರಪ್ಪನ ಹತ್ತಿರ ಶಾಸ್ತ್ರ ಕೇಳಲು, ಮಳೆ-ಬೆಳೆ ಕುರಿತು, ಬಿತ್ತನೆ ಮಾಡುವ ಕುರಿತು, ಹಬ್ಬ ಹರಿದಿನದ ಕುರಿತು, ಐನೋರು, ಕ್ವಾಮಟಿಗರು ಸತ್ತರೆ ಸುಡಲು ಬೆಂಕಿ ತೆಗೆದುಕೊಂಡು ಹೋಗಲು ಬರುತ್ತಿದ್ದರು. ಆಗ ನಾನು ಇವರು ಬರುವಿಕೆಯನ್ನು ಮಡಿಕೆಗಳ ಸಂಧಿಯಲ್ಲಿ ಕುಳಿತು ನೋಡುತ್ತಿದ್ದೆ. ಇವರು ಬಂದು ನಮ್ಮ ಅಜ್ಜನನ್ನು ಮಾತನಾಡಿಸುತ್ತಿದ್ದು, ಅದು-ಇದು ಕೇಳುತ್ತಿದ್ದದ್ದು ಎಲ್ಲವೂ ಒಂದು ತೆರನಾದ ಸೋಜಿಗದ ತೆರನಾಗಿ ನನಗೆ ಕಾಣುತ್ತಿತ್ತು. ಏಕೆಂದರೆ ಸಮಾಜದಲ್ಲಿ ಒಂದು ಉತ್ತಮವಾದಂತಹ ಸ್ಥಾನ ಪಡೆದಿದ್ದ ಇವರು ನಮ್ಮ ಮನೆಗೆ ಬುರುವುದು ಶ್ರೇಷ್ಟತೆಯ ಸಂಕೇತದಂತೆ ಕೇರಿಯ ಎಲ್ಲರು ಭಾವಿಸುತ್ತಿದ್ದರು. ಆಗ ನಮ್ಮ ತಾತ ಆಯಕಟ್ಟಿನ ಸ್ಥಳದಲ್ಲಿ ಹೂತಿದ್ದ ಮಡಿಕೆಯನ್ನು ತೆಗೆದು ಅದರಲ್ಲಿಟ್ಟದ್ದ ಜನಿವಾರವನ್ನು ನಮಸ್ಕರಿಸಿಕೊಂಡು ಧರಿಸುತ್ತಿದ್ದರು. ನಂತರ ಬಂದವರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಅವರನ್ನು ಕಳುಹಿಸುತ್ತಿದ್ದು. ಈ ಸಂದರ್ಭದಲ್ಲಿ ನಮ್ಮ ಅಜ್ಜಿ ಬಂದವರನ್ನು ನಗುಮುಖದಿಂದ ಸ್ವಾಗತಿಸಿ ಅವರು ಆಸೀನರಾಗಲು ದೇವಸ್ಥಾನದ ಪಡಸಾಲೆಯನ್ನು ಶುಚಿ ಮಾಡಿ ಈಚಲು ಚಾಪೆಯನ್ನು ಹಾಸುತ್ತಿದ್ದರು. ನಂತರ ತಲೆಗೆ ಸೆರಗು ಹೊದ್ದು ದೂರಕ್ಕೆ ಹೋಗಿ ನಿಂತು ಬಿಡುತ್ತಿದ್ದರು.

ಹೀಗೆ ವಿವಿಧ ಸಂದರ್ಭದಲ್ಲಿ ಜನಿವಾರವನ್ನು ಬಳಸುತ್ತಿದ್ದರೆಂದು ಪೂಜಪ್ಪ ಹೇಳುತ್ತಾರೆ. ಅಂದರೆ ತಳಸಮುದಾಯದವರು ನುಡಿಯುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ವೈದಿಕರಿಗಿರಬಹುದು. ನುಡಿಯುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ವೈದಿಕರಿಗಿರಬಹುದು. ಅದಕ್ಕೆ ಅವರು ಮಾದಿಗರ ಹಬ್ಬಗಳನ್ನು ಹುಡುಕಿಕೊಂಡು ಬಂದು ಶಾಸ್ತ್ರ ಹೇಳಿಸಿಕೊಂಡು ಹೋಗುತ್ತಿದ್ದರು. ಇಂತಹ ಭವಿಷ್ಯ ನುಡಿಯುವ ಮಾದಿಗರನ್ನು ಮತ್ತೆ ಇನ್ಯಾವ ಕಾರಣದಿಂದ ಊರಿನ ಹೊರಗೆ ಇಟ್ಟರು ಎಂಬುದು ಈಗಲೂ ಕಾಡುವ ಪ್ರಶ್ನೆಯಾಗಿದೆ. ಬಹುಶಃ ತಳವರ್ಗದಲ್ಲಿ ಆದಂತಹ ಆಹಾರ ಪದ್ಧತಿಯ ಬದಲಾವಣೆ ಇದಕ್ಕೆ ಕಾರಣವಿರಬಹುದು. ಇಲ್ಲಿ ವೈದಿಕರು ತಾವು ಶ್ರೇಷ್ಟವಾಗುವ ಧಾವಂತದಲ್ಲಿ ಇತರರನ್ನು ಕನಿಷ್ಟಗೊಳಿಸುವ ಉದ್ದೇಶದಿಂದ ಮಾದಿಗರನ್ನು ದೂರವಿಟ್ಟು ಇವರು ಅನಾದಿ ಕಾಲದಿಂದ ಬಳಸುತ್ತಿದ್ದ ಜನಿವಾರ ಮೊದಲಾದಂತಹ ಪರಿಕರಗಳನ್ನು ತಮ್ಮ-ತಮ್ಮ ಸ್ವತ್ತುಗಳೆಂದು ಆಕ್ರಮಿಸಿಕೊಂಡಿರುವುದನ್ನು ಗಮನಿಸಿದರೆ ಸಮಾಜದ ಸ್ಥಾನಮಾನದ ಹಂಚಿಕೆಯಲ್ಲಿ ತಾವು ಶ್ರೇಷ್ಟರಾಗುವುದಕ್ಕಾಗಿ ಇವರು ಕಂಡುಕೊಂಡಂತಹ ಸಾಮಾಜಿಕ ಹುನ್ನಾರ ಇದಾಗಿರಬಹುದುದೆಂದು ಊಹಿಸಬಹುದು.

ಯಾವುದು ಏನೇ ಇರಲಿ ಈಗಲೂ ಜನಿವಾರವನ್ನು ಬಿಡದೆ ಪಾಲಿಸಿಕೊಂಡು ಬರುತ್ತಿರುವ ಮಾದಿಗ ಕುಲಗಳು ಇಂತಹ ಸ್ತಿತ್ಯಂತರದಲ್ಲಿ ಅದನ್ನು ಜತನದಿಂದ ಕಾಪಾಡುತ್ತಿರುವುದನ್ನು ನೋಡಿದರೆ ಅವರಲ್ಲಿರುವ ಛಲಗಾರಿಕೆ ಎಂತಹದು ಎಂದು ಗೊತ್ತಾಗುತ್ತದೆ.