ಕುಟುಂಬದ ರಚನೆಯಲ್ಲಿ ಮಹಿಳೆಯ ಪಾತ್ರ

ಮಾದಿಗರ ಆಚರಣೆಗಳಂತೆ ಅವರ ಕುಟುಂಬವು ಸಹ ಒಂದು ತೆರನಾದಂತಹ ವಿಭಿನ್ನತೆಯನ್ನು ಪಡೆದಿದೆ. ಈ ಕುಟುಂಬದಲ್ಲಿ ಮಹಿಳೆಯನ್ನು ಪೂಜ್ಯನೀಯವಾಗಿ ಗೌರವಿಸುವ ಇವರು ಮಹಿಳೆಯರಿಗೆ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ತುಂಬ ಸಡಿಲತೆಯನ್ನು ಒದಗಿಸಿದ್ದಾರೆ. ಸಾಮಾಜಿಕವಾಗಿ ಇವರಿಗೆ ಯಾವುದೇ ತೆರನಾದಂತಹ ಕಟ್ಟುಪಾಡುಗಳಿಲ್ಲದೆ ಹೋದರೂ ಧಾರ್ಮಿಕವಾಗಿ ಕೆಲವೊಂದು ಕಟ್ಟುಪಾಡುಗಳನ್ನು ಹೊಂದಿರುವುದನ್ನು ನಾವು ಕಾಣಬಹುದು.

ಮಾದಿಗರು ವಾಸಿಸುವಂತಹ ಕೇರಿಗಳು ಊರಿಗೆ ಅನತಿ ದೂರದಲ್ಲಿ ದಕ್ಷಿಣ ಮುಖವಾಗಿರುತ್ತಿದ್ದವು. ಇವುಗಳು ಊರಿನ ಹೊಲೆಯಕೇರಿಗಳಿಗೂ ಮತ್ತು ಸ್ಪೃಶ್ಯ ಜನಾಂಗದ ಮನೆತನಗಳಿಗೂ ಯಾವುದೇ ತೆರನಾದಂತಹ ಸಂಬಂಧ ಇಲ್ಲದೆ ಇರುತ್ತಿದ್ದದ್ದು ವಿಶೇಷ. ಬಹುಶಃ ಮಾದಿಗರ ಕುಲಕಸುಬಾದ ಚರ್ಮಗಾರಿಕೆ ಮತ್ತು ಮಾಂಸದ ದುರ್ವಾಸನೆಯಿಂದ ಇವರನ್ನು ಊರಿನ ಹೊರಗೆ ಇಟ್ಟಿರಬಹುದೆಂದು ಇದು ನಂತರದಲ್ಲಿ ಸಾಮಾಜಿಕ ಕಟ್ಟಳೆಯಾಗಿ ಉಳಿದಂತಹ ಅಸ್ಪೃಶ್ಯ ಉಪಪಂಗಡಗಳಾದ ಮಾದಿಗ ಮಾಸ್ರೀಕರು, ಸಿಂದ್‌ಮಾದಿಗರಿಗೆ ವಿಸ್ತರಣೆಯಾಗಿರಬಹುದು. ಹೀಗೆ ಸಾಮಾಜಿಕವಾಗಿ ಬಹಿಷ್ಕೃತರಂತೆ ಬದುಕಿದ ಮಾದಿಗರು ಊರಿನ ಹೊರಗೆ ಇದ್ದುಕೊಂಡು ತಮ್ಮ ಆಚರಣೆಗಳ ಮುಖಾಂತರ ಸಮುದಾಯಕ್ಕೆ ಹತ್ತಿರವಾದರು.

ನಾನು ಕ್ಷೇತ್ರ ಕಾರ್ಯಕ್ಕೆ ಹೊರಟಂತಹ ಸಂದರ್ಭದಲ್ಲಿ ಮಾದಿಗರ ಕುಟುಂಬಗಳು ಯಾಕೆ ದಕ್ಷಿಣ ದಿಕ್ಕಲ್ಲಿಯೇ ರಚನೆಯಾಗುತ್ತಿದ್ದವು. ಎಂಬುದಕ್ಕೆ ಒಂದು ಮೌಖಿಕ ಕಥೆಯ ಮುಖಾಂತರ ಉತ್ತರ ಸಿಕ್ಕಿತ್ತು. ಒಂದು ಕಥಾ ಮೂಲದ ಪ್ರಕಾರ ಒಂದೂರಲ್ಲಿ ಮಳೆ ಬೆಳೆ ಇಲ್ಲದೆ ಜನ ಸಾಯುತ್ತಿರಬೇಕಾದ ಸ್ಥಿತಿ ಉಂಟಾಯಿತು. ಅಂತಹ ಸಂದರ್ಭದಲ್ಲಿ ಆ ಊರಿನ ಗೌಡತಿ ತನ್ನ ನಾಲ್ಕು ಜನ ಗಂಡು ಮಕ್ಕಳನ್ನು ಕರೆದು ನೀವು ನಾಲ್ಕೂ ದಿಕ್ಕಿಗೂ ಒಬ್ಬೊಬ್ಬರಂತೆ ಹೋಗಿ ಸಂಜೆಯ ಹೊತ್ತಿಗೆ ಏನಾದರೂ ಸಿಕ್ಕರೆ ತಗೊಂಡು ಬನ್ನಿ, ಪಾಪ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ ಎಂದಳು. ತಾಯಿಯ ಮಾತಿಗೆ ಕಟ್ಟುಬಿದ್ದಂತಹ ಆ ನಾಲ್ಕೂ ಜನರು ನಾಲ್ಕೂ ದಿಕ್ಕುಗಳಿಗೆ ಪ್ರಯಾಣ ಬೆಳೆಸಿ ತಮಗೆ ಸಿಕ್ಕಂತಹ ಹಣ್ಣು, ಹಂಪಲು, ಸೊಪ್ಪು ಸೊದೆ ಈ ಎಲ್ಲವನ್ನು ತೆಗೆದುಕೊಂಡು ಸಂಜೆಯ ಹೊತ್ತಿಗೆ ಹಿಂತಿರುಗಿದರು. ಆದರೆ ದಕ್ಷಿಣದ ದಿಕ್ಕಿಗೆ ಹೋದ ಮಗ ಸಂಜೆಯಾದರೂ ಬರಲಿಲ್ಲ. ಮೂರನೆ ದಿನವೂ ಬರಲಿಲ್ಲ, ಚಿಂತಾಕ್ರಾಂತಳಾದ ತಾಯಿ ತನ್ನ ಉಳಿದ ಮೂರು ಜನ ಮಕ್ಕಳನ್ನು ಅದೇ ದಕ್ಷಿಣ ದಿಕ್ಕಿಗೆ ಕಳುಹಿಸಿದಳು. ದಿನಗಳು ಕಳೆದವು. ಹೋದ ಮಕ್ಕಳ ಸುಳಿವಿಲ್ಲ. ಇದರಿಮದ ನೊಂದ ತಾಯಿ ದಕ್ಷಿಣ ದಿಕ್ಕನ್ನು “ದರಿದ್ರದ ದಿಕ್ಕು” ಮಕ್ಕಳನ್ನೆಲ್ಲ ನುಂಗಿ ಹಾಕಿದ ದಿಕ್ಕು ಎಂದು ಶಪಿಸುತ್ತ ಸತ್ತಳು. ದಿನಗಳು ಕಳೆದು ದಕ್ಷಿಣದ ದಿಕ್ಕಿನಿಂದ ಯಾರೋ ಆಗಂತಕರು ಆ ಊರಿಗೆ ಬಂದು ಈ ದಿಕ್ಕಿನಲ್ಲಿ ಕೆಲವು ಯೋಜನೆಗಳ ಆ ಕಡೆಗೆ ಯಾರದೋ ನಾಲ್ಕು ಹೆಣಗಳು ಬಿದ್ದವೆ ಎಂದು ಆ ಊರಿನ ಗೌಡನಿಗೆ ಸುದ್ದಿಮುಟ್ಟಿಸಿದರು. ಹಾಗೆ ಬಿದ್ದಿರುವ ಹೆಣಗಳು ಬರೀ ಮೂಳೆಯ ಪಂಜರವಾಗಿದೆ. ಅದರಲ್ಲಿ ಯಾವುದೇ ಮಾಂಸವಿಲ್ಲ ಎಂದು ಹೇಳಿ ತಮ್ಮ ದಾರಿ ಹಿಡಿದು ಹೊರಟುಬಿಟ್ಟ ಮೇಲೆ ಆ ಊರಿನ ಗೌಡ ಊರು ಪಂಚಾಯಿತಿ ಸೇರಿಸಿ ಮಾದಿಗರನ್ನು ದಕ್ಷಿಣ ದಿಕ್ಕಲ್ಲಿ ನೆಲಸಬೇಕೆಂದು ಕಟ್ಟಪ್ಪಣೆ ಮಾಡಿದರು. ಕಾರಣ ಅವರು ಮೂಲತಃ ಹಸು, ಎತ್ತಿನ ಮಾಂಸಭಕ್ಷಕರಾಗಿದ್ದು ಬೇರೆ ಜನಾಂಗದಲ್ಲಿ ಹಸು ಮತ್ತು ಎತ್ತನ್ನು ಪೂಜ್ಯನಿಯವಾಗಿ ಕಾಣುತ್ತಿದ್ದರಿಂದ ಆ ಪೂಜ್ಯನಿಯವಾದಂತಹ ಹಸುಗಳನ್ನು ಮತ್ತು ಎತ್ತುಗಳನ್ನು ತಿಂದ ಇವರು ಮನುಷ್ಯರನ್ನು ತಿನ್ನದೇ ಬಿಟ್ಟಿರಲಾರರು, ಬಹುಶಃ ಆಹಾರದ ಸಂಗ್ರಹಣೆ ಹೋದ ಆ ನಾಲ್ಕೂ ಜನರನ್ನು ಇವರೆ ಕೊಂದಿರಬಹುದೆಂದು ಊಹಿಸಿ ಮಾದಿಗರನ್ನು ಊರಿನ ಒಳಗೆ ಬರದಂತೆ ದಕ್ಷಿಣದ ಕಡೆಗೆ ನೆಲೆಸುವಂತೆ ಕಟ್ಟುನಿಟ್ಟಿನ ನಿರ್ಧಾರವನ್ನು ಮಾಡಿದರು.

ಈ ಮೇಲ್ಕಂಡ ಕಥೆಯು ಒಂದು ಕಾಲ್ಪನಿಕ ಆಧಾರದ ಕತೆಯಾದರೂ ಸಹ ಇದನ್ನೆ ನಿಜವೆಂದು ಸ್ಪೃಶ್ಯ ಜನಾಂಗದ ಅನೇಕ ಜನಸಮುದಾಯದವರು ಅದು ನಿಜವೆಂದು ಭಾವಿಸಿ ಅದನ್ನೆ ನಾಲಿಗೆಯಿಂದ ನಾಲಿಗೆಗೆ ಹರಡಿಕೊಂಡು ಬಂದಿರುವ ಸಾಧ್ಯತೆಯನ್ನು ಗಮನಿಸಬಹುದು. ಈ ಕತೆಯು ಈ ತೆರನಾದರೆ ಇನ್ನೊಂದು ಕಥಾ ಮೂಲಕ ಪ್ರಕಾರ ಬಹುವರ್ಷಗಳ ಹಿಂದೆ ಒಂದು ಊರನ್ನು ಒಬ್ಬ ರಾಜ ಆಳುತ್ತಿದ್ದ. ಯಾವುದೋ ಯುದ್ಧದ ಸಮಯದಲ್ಲಿ ಆ ರಾಜನಿಗೆ ಆಯುಧದಿಂದ ಒಬ್ಬನಿಗೆ ಗಾಯವಾಗಿ, ಆ ಗಾಯ ಹುಣ್ಣಾಗಿ ವಾಸಿಯಾಗದ ರಾಜನಿಗೆ ಹುಣ್ಣು ಆಯಿತು. ಆ ರಾಜ ರಾಜ್ಯದಲ್ಲಿ ಡಂಗುರ ಹೊಡೆಸಿದ ಯಾರು ರಾಜನ ಹುಣ್ಣನ್ನು ವಾಸಿಮಾಡುತ್ತಾರೊ ಅವರಿಗೆ ಈ ರಾಜ್ಯದ ಅರ್ಧ ಭಾಗವನ್ನು ಇನಾಮಾಗಿ ಕೊಟ್ಟು ತನ್ನ ಮಗಳನ್ನು ಅವನಿಗೆ (ಗಂಡಸಾದರೆ ಹೆಣ್ಣಾದರೆ ಅದೇ ಮೌಲ್ಯದ ಬೇರೊಂದು ವಸ್ತು ಕೊಡುವುದಾಗಿ) ಕೊಟ್ಟು ಮದುವೆ ಮಾಡುತ್ತೇನೆ ಎಂದು ಸಾರಿದ, ದಿನಕಳೆದಂತೆ ದಕ್ಷಿಣ ದಿಕ್ಕಿನ ಕಡೆಯಿಂದ ಕೊಳಕು ಬಟ್ಟೆ ತೊಟ್ಟಂತಹ ಒಬ್ಬ ವ್ಯಕ್ತಿ ಬಂದು ರಾಜನಿಗೆ ಚಿಕಿತ್ಸೆ ಕೊಟ್ಟು ಗಾಯವನ್ನು ವಾಸಿ ಮಾಡಿ ಯಾವುದೇ ಪ್ರತಿಫಲ ಆಪೇಕ್ಷಿಸದೆ ಹೊರಟುನಿಂತ. ರಾಜನು ಅವನನ್ನು ತಡೆದು ವಿಚಾರಿಸಲು ನಾನೋ ಮತಂಗ ವಂಶಸ್ಥನಾಗಿದ್ದು, ದಕ್ಷಿಣ ದಿಕ್ಕಿನ ಮತಂಗ ಪರ್ವತದಲ್ಲಿ ಸಿಗುವ ಗಿಡಮೂಲಿಕೆಗಳಿಂದ ರೋಗವನ್ನು ವಾಸಿಮಾಡಿದ್ದಾಗಿ, ನಮ್ಮ ವಂಶದ ಕಟ್ಟಳೆಯ ಪ್ರಕಾರ ಪ್ರತಿಫಲ ಆಪೇಕ್ಷೆ ಮಾಡಬಾರದೆಂದು ಹೊರಟು ಹೋಗುತ್ತಾನೆ. ಅವನು ಹೊರಟ ದಿಕ್ಕನ್ನು ಆ ರಾಜ್ಯದ ರಾಜ ಪವಿತ್ರವೆಂದು ಭಾವಿಸಿ ದಿನ ಬೆಳಗಾದರೆ ಆ ದಕ್ಷಿಣ ದಿಕ್ಕನ್ನು ಪೂಜೆ ಮಾಡುತ್ತಾನೆ. ನಂತರ ತಾನು ಸತ್ತರೆ ನನ್ನನ್ನು ಅದೇ ದಿಕ್ಕಲ್ಲಿ ಮಣ್ಣು ಮಾಡಿ ಎಂದು ಭಾಷೆ ತೆಗೆದುಕೊಂಡು ಒಂದು ದಿನ ಸತ್ತು ಹೋಗುತ್ತಾನೆ. ರಾಜನ ಮಕ್ಕಳು ರಾಜನನ್ನು ದಕ್ಷಣಾಭಿಮುಖವಾಗಿ ಮಲಗಿಸಿ ಮಣ್ಣು ಮಾಡುತ್ತಾರೆ. ಇದೇ ಪದ್ಧತಿಯನ್ನು ರಾಜನ ವಂಶಸ್ಥರು, ಊರಿನ ಇನ್ನಿತರ ಎಲ್ಲರೂ ಅನುಸರಿಸಿಕೊಂಡು ಬರುತ್ತಾರೆ. ಅದಕ್ಕೆ ಈಗ ಯಾರಾದರು ಸತ್ತರೆ ಅವರನ್ನು ದಕ್ಷಿಣ ಎತ್ತರ ದಿಕ್ಕಿನ ಕಡೆಗೆ ಮಲಗಿಸಿ ಮಣ್ಣು ಮಾಡುತ್ತಾರೆ.

ಈ ಕತೆಯ ಪ್ರಕಾರ ಮತಂಗ ವಂಶಸ್ಥರೆಂದರೆ ಮಾದಿಗ ಕುಲದವರೆಂದು, ಅವರು ಮನುಷ್ಯನಿಗೆ ಒದಗುವ ಕಷ್ಟವನ್ನು ತನ್ನ ಕಷ್ಟವೆಂದು ಭಾವಿಸಿ ಯಾವುದೇ ಪ್ರತಿಫಲ ಆಪೇಕ್ಷೆಯಿಲ್ಲದ ಕೆಲಸ ಮಾಡಿಕೊಡುವಂತಹ ಜನಾಂಗವೆಂದು ಗೊತ್ತಾಗುತ್ತದೆ.

ಇದರ ಹೊರತಾಗಿ ಊರಿನ ಹೊರಗಡೆ ಊರಿಗಿಂತ ದೂರವಾಗಿ ಪ್ರತ್ಯೇಕವಾಗಿ ಊರಿಗೆ ಕೊಂಚವೂ ಸಂಬಂಧಪಡದ ರೀತಿಯಲ್ಲಿ ವಾಸಿಸುವ ಮಾದಿಗರು ತಮ್ಮ ಕೇರಿಯಂತೆ ಅವರ ಸ್ಮಶಾನ ಭೂಮಿಯನ್ನು ಸಹ ಪ್ರತ್ಯೇಕವಾಗಿ ಪಡೆದಿರುವವರಾಗಿದ್ದಾರೆ. ಈ ಎರಡೂ ತೆರನಾದಂತಹ ಮಡಿವಂತಿಕೆ ಭಾವನೆ ಇರಬಹುದು. ಅಥವಾ ಇನ್ನಿತರರನ್ನು ಭೌತಿಕವಾಗಿ ಮುದ್ರಿಸಿಕೊಳ್ಳದೆ ಪವಿತ್ರವಾಗಿರಬೇಕೆಂಬುದು ಇವರ ಪ್ರತ್ಯೇಕತೆಗೆ ಕಾರಣವಿರಬಹುದು.

ಧಾರ್ಮಿಕತೆಯ ಹಿನ್ನೆಲೆಯಲ್ಲಿ ಗ್ರಹಿಸಿದರೆ ಮಾದಿಗರ ಮಹಿಳೆಗೆ ವಿಶೇಷ ಸ್ಥಾನಮಾನವಿರುವುದನ್ನು ಕಾಣಬಹುದು. ಮದುವೆ, ಹಬ್ಬ ಹರಿದಿನಗಳು, ಸಾವು ಮುಂತಾದ ಆಚರಣೆಗಳಲ್ಲಿ ಈ ಕುಲದ ಹೆಣ್ಣು ಮಗಳು ಸ್ವಾತಂತ್ರ್ಯವನ್ನು ಪಡೆದಿದ್ದಳು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾನು ಗಂಡಿಗಿಂತ ಕಮ್ಮಿಯಲ್ಲವೆಂದು ತೋರಿಸಿಕೊಟ್ಟವಳು. ಇವಳ ಈ ಧೈರ್ಯ ಎಂತಹದ್ದೆಂದರೆ ಸ್ಮಶಾನ ಕಾಯುವಾಗ ಗಂಡನ ಜೊತೆ ಇರುವುದು, ಸತ್ತು ಹಸುವನ್ನು ಗಂಡ ಕೊಯ್ಯುವಾಗ ಯಾವುದೇ ಬೇಧ-ಭಾವವಿಲ್ಲದೆ ಮಾಂಸ ಸಂಗ್ರಹಿಸುವುದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮತ್ತು ಸಾಲ ಕೊಟ್ಟಂತಹ ಊರ ಯಜಮಾನ ಸಾಲ ವಸೂಲಿಗೆ ಮನೆಗೆ ಬಂದಾಗ ತಾನೇ ಮನೆಯ ಯಜಮಾನಿ ಎಂದು ಊರ ಗೌಡನ ಮುಂದೆ ಕಾಣಿಸಿಕೊಂಡು ಮಾತು ಆರಂಭಿಸುವುದು ಇವೆಲ್ಲವೂ ಹೆಣ್ಣಿನ ಧೈರ್ಯ ಕುರಿತಾದ ಸೆಳಕುಗಳಾಗಿವೆ.

ಮಾದಿಗರ ಕುಲದ ಉಪಪಂಗಡವಾದ ಮಾಸ್ರೀಕರಲ್ಲಿ ಹೆಂಗಸೊಬ್ಬಳು ಗೋ ಮಾಂಸವನ್ನು ಪುಟಿಕೆಯಲ್ಲಿಟ್ಟು ಕೇರಿಗೆ ಹೊತ್ತು ತರುವಾಗ ಹದ್ದುಗಳಿಂದ ಮಾಂಸವನ್ನು ರಕ್ಷಿಸಲು ತಾನಾಗಿ ಹದ್ದನ್ನು ಹೊಡೆದೋಡಿಸುವ ಶಕ್ತಿಯುತ ಕತ್ತಿಯೊಂದನ್ನು ಪುಟಿಕೆಯ ಮೇಲಿಟ್ಟುಕೊಮಡು ಬರುತ್ತಿದ್ದುದನ್ನು ನೋಡಿ, ಆ ಕತ್ತಿಯನ್ನು ಪಾಳೇಗೌರ ಬಿಸೇಗೌಡ ಕೇಳಿ ಪಡೆದು ಚಂದ್ರಗಿರಿಯನ್ನು ಕೊಳ್ಳೆಯ ಹೊಡೆದನೆಂಬ ಐತಿಹ್ಯದೊಂದಿಗೆ ಬೆರೆತಿರುವ ಚರಿತ್ರೆಯ ಕಥೆಯೊಂದಿದೆ. ಅಂದರೆ ಇದನ್ನು ಕತೆಯಂತೆ ಕಂಡರು ಅಲ್ಲಿ ಬರುವ ಆ ಮಹಿಳೆ ಕತ್ತಿಯಂತಹ ವಸ್ತುವನ್ನು ಮಾಂಸ ರಕ್ಷಿಸಲು ಹಿಡಿದಿರುವುದು ಬಹುಶಃ ಅವರು ಯುದ್ಧಕಲೆಯನ್ನು ಬಲ್ಲವಳಾಗಿದ್ದಳೆಂದು ಗೊತ್ತಾಗುತ್ತದೆ. ಅಷ್ಟೇ ಅಲ್ಲದೆ ಅದೇ ಕತ್ತಿಯಿಂದ ಬಿಸೇಗೌಡ ಚಂದ್ರಗಿರಿಯನ್ನು ಕೊಳ್ಳೆ ಹೊಡೆದನೆಂದು ಹೇಳುವುದರಲ್ಲಿ ಆ ಕತ್ತಿಗೆ ಆ ಮಹಿಳೆಯು ಮಾಂತ್ರಿಕ ಶಕ್ತಿಯನ್ನು ತುಂಬಿರಬಹುದು, ಅವಳು ಮುಟ್ಟಿದ ಒಂದೇ ಒಂದು ಕಾರಣದಿಂದ ಕತ್ತಿಗೆ ಮಾಂತ್ರಿಕ ಶಕ್ತಿ ಒದಗಿ ಬಂದಿರಬಹುದು. ಈ ಎಲ್ಲವನ್ನು ಗಮನಿಸಿದಾಗ ಹೆಣ್ಣನ್ನು ಪವಿತ್ರದ ದೃಷ್ಟಿಯಿಂದ ಅದರಲ್ಲೂ ಮಾದಿಗರ ಹೆಣ್ಣನ್ನು ಈ ದೃಷ್ಟಿಕೋನದಿಂದ ಅಂದಿನ ಸಾಮಾಜಿಕ ವ್ಯವಸ್ಥೆ ಕಾಣುತ್ತಿದ್ದಿರಬೇಕೆಂಬ ಕಲ್ಪನೆ ಎಂದಾಗುತ್ತದೆ.

ಅಂದಿನ ಸಮಾಜದಲ್ಲಿ ಇನ್ನಿತರ ವರ್ಗದ ಸ್ತ್ರೀಯರಿಗೆ ಅನೇಕ ಸಾಮಾಜಿಕ ಕಟ್ಟುಪಾಡುಗಳನ್ನು ಆ ಸಮಾಜ ವಿಧಿಸಿತ್ತು. ಮದುವೆಯಾಗಿ ಗಂಡ ಸತ್ತರೆ ತಲೆ ಬೋಳಿಸಿ ಊರ ಒಳಗೆ ಸುಳಿದಾಡದಂತೆ ಕಟ್ಟಪಣೆ ವಿಧಿಸುತ್ತಿದ್ದ ವೈದಿಕರು ಸ್ತ್ರೀಯರನ್ನು ಒಂದು ಉಪಭೋಗದ ವಸ್ತುವಾಗಿ ಕಾಣುತ್ತಿದ್ದರು. ಆದರೆ ಮಾದಿಗರ ಸಮುದಾಯದ ಸ್ತ್ರೀ ಇದಕ್ಕೆಲ್ಲಾ ಮಿರುದ್ಧವಾಗದ ನಿಯಮವನ್ನು ಅನುಸರಿಸುತ್ತಿದ್ದಳು. ಮದುವೆಯಾಗಿ ಗಂಡ ಸತ್ತ ಮೇಲೆ ಮಾದಿಗರ ಸಮುದಾಯದಲ್ಲಿ ಆ ಹೆಣ್ಣು ಇನ್ನೊಬ್ಬ ತನ್ನದೇ ಕಾಲದ ವಿದುರನನ್ನು ಮದುವೆಯಾಗಬಹುದಿತ್ತು. ಅದಕ್ಕೆ ಕಾರಣ ಮಾದಿಗರ ಸಮುದಾಯದಲ್ಲಿದ್ದ “ಕೊಲಗ ತಾಳಿಗಳು” (ತೂಮುಂದಿ ಬೊಟ್ಟುಲು) ಪರಿಕಲ್ಪನೆ. ಅಂದರೆ ಒಂದು ಕೊಳಗ ಎಷ್ಟು ತಾಳಿಗಳನ್ನು ತುಂಬಿಸಿಕೊಳ್ಳುವುದೊ ಅಷ್ಟು ಜನರನ್ನು ವರಿಸುವಂತಹ ಅವಕಾಶ ಇವರಿಗಿತ್ತು. ಇದನ್ನೆ ಮಾದಿಗರಲ್ಲಿ “ಕಟ್ಟುಬಡಿ” ಎಂದು ಕರೆಯುತ್ತಾರೆ. ಮಾದಿಗರ ಪುರಾಣದ ಐತಿಹ್ಯದ ಪ್ರಕಾರ * ೨ ಈ ಕಾಲದ ಹೆಣ್ಣು ಮಗಳಿಗೆ ಮೊದಲ ಮದುವೆಯು ಸಾಂಪ್ರದಾಯಿಕವಾಗಿ, ಆಚಾರದಂತೆ ನೇಗಿಲ ಮೇಲೆ ಮದುವೆಯಾಗುತ್ತಿತ್ತು.

ಈ ನೇಗಿಲ ಮೇಲೆಯೆ ಯಾಕೆ ಮದುವೆಯಾಗುತ್ತಿತ್ತೆಂದರೆ, ಆ ನೇಗಿಲಿಗೆ ಎಂತಹ ಎತ್ತುಗಳನ್ನಾದರೂ ಕಟ್ಟಲಿ ಅದು ಬಂಡಿಯನ್ನು ಎಳೆದುಕೊಂಡು ಸಾಗುತ್ತದೆ ಎಂಬ ನಂಬಿಕೆ. ಹಾಗೆ ಹೆಣ್ಣಿಗೆ ಎಂತಹ ಗಂಡನ್ನಾದರೂ ಮದುವೆ ಮಾಡಲಿ ಸಂಸಾರವನ್ನು ನಡೆಸಿಕೊಂಡು ಹೋಗುವಂತಹ ಶಕ್ತಿ ಆ ಹೆಣ್ಣಿಗಿರುತ್ತದೆ ಎಂಬ ಉದ್ದೇಶದಿಂದ ಮದುವೆಯನ್ನು ನೇಗಿಲ ಮೇಲೆ ಮಾಡುತ್ತಿದ್ದರು.

ಹೀಗೆ ಮೊದಲ ಬಾರಿಗೆ ಈ ಕುಲದ ಹೆಣ್ಣು ಭಾರತೀಯ ಸಾಮಾಜಿಕ ವ್ಯವಸ್ಥೆಯ ವೈವಾಹಿಕ ಸಂಪ್ರದಾಯದಲ್ಲಿ ಅನೇಕ ಗಂಡರನ್ನು ವರಿಸುವುದರಿಂದ ಸಾಮಾಜಿಕ ಸಂಚಲನೆಯನ್ನು ಉಂಟುಮಾಡಿದಳು.

ಇದರ ಹೊರತಾಗಿ ಈ ಕುಲದಲ್ಲಿ ಶನಿವಾರ ಮತ್ತು ಸೋಮವಾರಗಳನ್ನು ಪವಿತ್ರ ದಿನಗಳೆಂಬಂತೆ ಭಾವಿಸಿ ಹೆಣ್ಣು ಮಗಳು ಆ ದಿನ ಮನೆಯನ್ನೆಲ್ಲಾ ಸಗಣೆಯಿಂದ ರುಚಿ ಮಾಡಿ, ಸ್ನಾನಾದಿಗಳನ್ನು ಮುಗಿಸಿ ಪೂಜೆಗೆ ಅಣೆಯಾಗುತ್ತಿದ್ದಳು. ಇದೆಲ್ಲವನ್ನು ಗಮನಿಸಿದರೆ ಧಾರ್ಮಿಕತೆಯನ್ನು ಬೇರೆ ವರ್ಗದವರಂತೆ ಇಲ್ಲೂ ಸಹ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವುದನ್ನು ಗಮನಿಸಬಹುದು. ಅಂದಿನ ಸಾಮಾಜಿಕ ಸ್ಥಿತನಾಂತರಕ್ಕೆ ಕಾರಣೇಭೂತರಾದ ವೈದಿಕರು ಮಾದಿಗರ ಹೆಣ್ಣನ್ನು ಪವಿತ್ರದ ಸಂಕೇತವೆಂದು ಬೆಳಿಗ್ಗೆ ಸಂಜೆ ಅವರ ಮುಖ ನೋಡಿದರೆ ಮಂಗಳಕರವೆಂದು ಹೇಳುವುದನ್ನು ನಾವು ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಗಮನಿಸಿದೆ. ಬ್ರಾಹ್ಮಣರ ಈ “ಪವಿತ್ರ”ವೆಂಬ ಸಂಕೇತ ಒಂದು ಹುನ್ನಾರವೆಂದು ತದನಂತರ ನನಗೆ ಗೊತ್ತಾಯಿತು. ಮಾದಿಗರ ಕುಲದ ಯಾವುದೇ ಹೆಣ್ಣನ್ನು ಕಾಮಕ್ರೀಡೆಯಲ್ಲಿ ತೊಡಗಿಸಿದರೆ ಅದರಿಂದ ಅವಳೊಂದಿಗೆ ಸುಖ ಅನುಭವಿಸಿದ ಗಂಡಿಗೆ ಸಕಲ ಐಶ್ವರ್ಯ ಪ್ರಾಪ್ತವಾಗುತ್ತದೆ. ಅದೇ ವೈದಿಕರ ಹೆಣ್ಣಿನ ಸಂಗ ಬಯಸಿದರೆ ಅವರ ವಂಶ ನಿರ್ವಂಶವಾಗುವುದಲ್ಲದೆ ದಟ್ಟದರಿದ್ರ ಉಂಟಾಗುತ್ತದೆ. ಇದರ ಅರ್ಥ ವೈದಿಕರ ಹೆಣ್ಣು ಮಗಳು “ಶ್ರೇಷ್ಠತೆ”ಯ ಸಂಕೇತವಾಗಿಯೂ, ಮಾದಿಗರ ಕುಲದ ಮಗಳು ದರಿದ್ರದ ಸಂಕೇತವಾಗಿ ಪ್ರತಿಬಿಂಬಿಸಿರುವುದು ವೈದಿಕರ ಒಂದು ಸಾಮಾಜಿಕ ಹುನ್ನಾರವಾಗಿ ಕಾಣುತ್ತದೆ.

ಆದರೂ ಸಾಮಾಜಿಕ ಪರಿಚಲನೆಯಲ್ಲಿ ಹೆಣ್ಣಿಗೊಂದು ಪ್ರತ್ಯೇಕ ಸ್ಥಾನಮಾನವಿರುವುದನ್ನು ಮಾದಿಗರಲ್ಲಿ ಕಾಣಬಹುದು. ಇಲ್ಲಿ ಮಹಿಳೆಯು ನಾಟಕ, ಕತೆ, ಪುರಾಣ ಮುಂತಾದ ಕಡೆ ಮುಕ್ತವಾಗಿ ಪಾಲ್ಗೊಳ್ಳುವುದು, ಯಾವುದೇ ನಾಚಿಕೆಯಿಲ್ಲದ ಸತ್ತ ದನದ ಮಾಂಸದ ಸೇವನೆ ಮಾಡುವುದು ಸಾಮಾಜಿಕ ಸಮಾನತೆಗೊಂದು ಕುರುಹು ಎಂದು ಹೇಳಿದರೆ ತಪ್ಪಾಗಲಾರದು. ಇದಲ್ಲೆದರ ನಡುವೆ ಸಾಂಸ್ಕೃತಿಕವಾಗಿಯೂ ಮಹಿಳೆ ಸಮುದಾಯದಲ್ಲಿ ಹಿಡಿತ ಸಾಧಿಸಿದ್ದಳು. ಹಾಡು, ಕತೆ, ಪುರಾಣ ಮುಂತಾದವುಗಳನ್ನು ಹಾಡುತ್ತ ಕುಣಿಯುತ್ತ ಸಾಂಸ್ಕೃತಿಕ ಪ್ರತಿನಿಧಿಯಾಗಿ ಸಮಾಜಕ್ಕೆ ಕಾಣಸಿಗುತ್ತಾಳೆ. ಪ್ರಧಾನ ಸಂಸ್ಕೃತಿಯ ಭೌತಿಕ ಮತ್ತು ಮಾನಸಿಕ, ಸಾಂಸ್ಕೃತಿಕ ಒತ್ತಡದ ನಡುವೆಯೂ, ದಬ್ಬಾಳಿಕೆಯ ನಡುವೆಯೂ ತನ್ನ ಗಾನ, ನಾಟ್ಯದ ಮುಖಾಂತರ ಎಲ್ಲಾ ಒತ್ತಡಗಳನ್ನು ಗೆಲ್ಲುತ್ತ ಬರುವ ಸ್ತ್ರೀ ಸಮುದಾಯದ ಸಾಂಸ್ಕೃತಿಕ ಮತ್ತು ಧಾರ್ಮಿಕ ರಾಯಬಾರಿಯಾಗಿ ಕಾಣುತ್ತಾಳೆ. ಇಲ್ಲಿ ಕುಲದ ಹೆಣ್ಣು ಸಮುದಾಯದಲ್ಲಿ ಅನಾದಿ ಕಾಲದಿಂದಲೂ ಸಾಂಸ್ಕೃತಿಕ, ಧಾರ್ಮಿಕ ಹಿತಾಸಕ್ತಿಯನ್ನು ಕಾಪಾಡುವುದಲ್ಲದೆ ಸಂಸ್ಕೃತಿಯನ್ನು ಬೇರೆ ಬೇರೆ ಕಡೆಗೆ ವಿಸ್ತರಿಸುತ್ತ ಯಜಮಾನ್ಯ ಸಂಸ್ಕೃತಿಗೆ ಅಡಿಯಾಳಾಗಿ ಮೇಲ್ಮುಖದಲ್ಲಿ ಕಂಡು ಬಂದರೂ ತನ್ನೊಳಗೆ ಜೀವಂತಿಕೆಯ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೆ ಬರುತ್ತಾಳೆ. ಪುರುಷರಂತೆ ಇವಳಲ್ಲಿಯೂ ಸಹ ಕಲೆಯೊಂದಿಗೆ ನಂಟುವಂಶ ಪಾರಂಪರ್ಯವಾಗಿ ರಕ್ತದ ಜೊತೆಗೆ ತನ್ನ ಕುಲದ ಎಲ್ಲಮ್ಮನ ಪುರಾಣ, ವಸಿಷ್ಟ ಆರಂಜ್ಯೋತಿಯ ಕತೆ, ಆದಿ ಜಾಂಬವ ಪುರಾಣದ ಪೌರಾಣಿಕ ಮತ್ತು ಇನ್ನಿತರ ಮೌಖಿಕ ಜನಪದ ಕತೆಗಳಲ್ಲಿನ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತ ಅದರ ಮುಖಾಂತರ ಸಾಂಸ್ಕೃತಿಕ ಅನನ್ಯತೆಯನ್ನು ಔನ್ನತ್ಯವನ್ನು ಆ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು ತಲೆಮಾರಿನಿಂದ ತಲೆಮಾರಿಗೆ, ಪೀಳಿಗೆಯಿಂದ ಪೀಳಿಗೆಗೆ ಈ ಸಾಂಸ್ಕೃತಿಕ ಪುರಾಣ ಪ್ರಜ್ಞೆಯನ್ನು ನಿರಂತರವಾಗಿ ಹೊತ್ತುಕೊಳ್ಳುತ್ತಲೆ ಬಂದು ಸಂಸ್ಕೃತಿಯ ವಾಹಕವಾಗಿರುವುದು ಒಂದು ಅದ್ಭುತವೆಂದರೆ ಸಾಲದೆ ಹೋದಿತು. ಆ ಮೂಲಕ ಮಾದಿಗ ಕುಲದ ಚೌಕಟ್ಟನ್ನು ದಾಟಿ ಸಮಾಜದ ಎಲ್ಲಾ ವರ್ಗಗಳ ಅಂತರ್ಯದಲ್ಲಿ ಪುರಾಣ ಪ್ರಪಂಚದ ಅದ್ಭುತಗಳನ್ನು ಸೃಷ್ಟಿಸಲು (ಪುರಾಣಗಳಲ್ಲಿ ಕಂಡುಬರುವ ಎಲ್ಲಮ್ಮ, ಆರಂಜ್ಯೋತಿ, ಮಾರೆಮ್ಮ, ದ್ರೌಪತಿ ಮೊದಲಾದ) ಸಫಲಳಾದಳು.

ಹೀಗೆ ಮಾದಿಗ ಸಮುದಾಯದಲ್ಲಿ ಮಹಿಳೆಯು ಯುದ್ಧರಂಗಭೂಮಿ ಸೈನಿಕಳಂತೆ, ಧಾರ್ಮಿಕತೆಯ ಪುರಾಣಗಳಲ್ಲಿ ಪೂಜೆಗೊಳಪಡುವ ದೇವತೆಯಂತೆ, ಸಂಸ್ಕೃತಿಯನ್ನು ವಾಹಕವಾಗಿ ನಾಲಿಗೆಯಲ್ಲಿ ಹೊತ್ತು ನಡೆದು ಬಂದ ಸಾಂಸ್ಕೃತಿಕ ಹರಕಾರಳಂತೆ ಕಂಡು ಬರುತ್ತಾಳೆ.

ವಸತಿ ವ್ಯವಸ್ಥೆ

ಮಾದಿಗರು ಮೂಲತಃ ಅಲೆಮಾರಿಗಳಾಗಿದ್ದವರು. ತಮ್ಮ ಕುಲದ ಹಕ್ಕುದಾರಿಕೆಯಾಗಿ ಬಂದಂತಹ ಆರಂಜ್ಯೋತಿ ಕಥೆ, ತಂಗಡಿದ್ಯಾವು ಮತ್ತು ಜಾಂಬವ ಪುರಾಣಗಳಿಂದ ಕೂಡಿದಂತಹ ಮೌಖಿಕ ಕಥನಗಳನ್ನು ಹಾಡುತ್ತ, ಕುಣಿಯುತ್ತ ಊರೂರು ತಿರುಗುತ್ತಿದ್ದ ಇವರು ತಮ್ಮ ಮೌಖಿಕ ಗೇಯ ಗೀತೆಗಳಿಂದ ಹೊಟ್ಟೆ ತುಂಬದೆ ಹೋದಾಗ ಅಥವಾ ಜನರು ಆಧುನಿಕತೆಯ ಗುಂಗಿನೊಳಗೆ ಸಿಕ್ಕಿ ಭ್ರಮೆಯಲ್ಲಿ ತೇಲಾಡಿದಾಗ ಇವರ ಪದಸಂಪತ್ತು, ಗೇಯತೆಗಳನ್ನು ಕಡೆಗಾಣಿಸಿದರಿಂದಲೊ ಏನೋ ಆಗ ಇವರು ತಮ್ಮ ಕುಲಕಸುಬಾದ ಚರ್ಮಗಾರಿಕೆ (ಚಪ್ಪಲಿ ಹೊಲಿಯುವುದು) ಶರಣಾದರು. ಅದನ್ನು ಮುಂದುವರೆಸುವ ಸಲುವಾಗಿ ಒಂದೆಡೆ ನೆಲೆ ನಿಲ್ಲಬೇಕಾದಂತಹ ಅನಿವಾರ್ಯತೆ ಏರ್ಪಟ್ಟು ಕೊನೆಗೆ ಅದು ಕೈತಪ್ಪುವಂತಹ ಸ್ಥಿತಿ ಏರ್ಪಟ್ಟಾಗ (ಬಹುಶಃ ಜನರು ಚಪ್ಪಲಿಗಳನ್ನು ಕಡೆಗಣಿಸಿ ಅದರ ಬದಲಿ ವಸ್ತುವಾದ ಬಾಟಾ, ಪಾರಾಗಾನ್‌ಗೆ ಜೋತುಬಿದ್ದಿರುವಾಗ) ವ್ಯವಸಾಯದ ಕಾರ್ಯಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಾ ಒಂದು ಕಡೆ ನೆಲೆ ನಿಲ್ಲುವಂತಹ ಸ್ಥಿತಿ ಉಂಟಾಯಿತು. ಇಂತಹ ನೆಲೆ ನಿಲ್ಲುವಂತಹ ಪ್ರಕ್ರಿಯೆ ಆದಿಯಿಂದ ಏನೂ ಕಂಡುಬರುವುದಿಲ್ಲ. ಅದು ಏನಿದ್ದರೂ ಆರೇಳು ದಶಕಗಳ ಈಚೆಗೆ ಆಗಿರುವಂತಹ ಮಾರ್ಪಾಟಾಗಿದೆ.

ಹೀಗೆ ಒಂದು ಕಡೆ ನೆಲೆಯನ್ನು ಕಂಡುಕೊಂಡ ಮಾದಿಗರು ಆ ನೆಲೆಯನ್ನೆ ತಮ್ಮ ತಮ್ಮ ಸಾಂಸ್ಕೃತಿಕ ಶಕ್ತಿ ಕೇಂದ್ರಗಳನ್ನಾಗಿಸಿಕೊಂಡು ಅದರ ಜೊತೆಗೆ ಚರ್ಮಗಾರಿಕೆಯನ್ನು, ಮೌಖಿಕ ಪರಂಪರೆಯನ್ನು ತಮ್ಮ ಕುಲದ ಪವಿತ್ರ ಕಸುಬಾಗಿಸಿಕೊಂಡು ಮುನ್ನಡೆದರು. ಮಾದಿಗರು ನೆಲೆನಿಂತ ಈ ಗುಡಿಸಲುಗಳ ಮುಂದೆ ಸಂಸ್ಕೃತಿಯನ್ನು ಕಟ್ಟುವ, ಹರಡುವ ಬೃಹತ್‌ಶಕ್ತಿ ಕೇಂದ್ರಗಳಾಗಿ ಮಾರ್ಪಟ್ಟವು. ಇಂತಹ ಮಾದಿಗರು ಅಲ್ಲಿಂದಲೆ ತಮ್ಮ ಮೌಖಿಕ ಸಂಪ್ರದಾಯವನ್ನು ಸಮುದಾಯದೊಳಗೆ ಪುನರ್ ರೂಪಿಸುತ್ತ ಅದರ ಒಳಗೂ ಮತ್ತು ಹೊರಗನ್ನು ಮಡಿವಂತಿಕೆಯನ್ನಾಗಿ ಪೋಷಿಸಿಕೊಳ್ಳುತ್ತಲೇ ಬಂದರು.

ಇಂತಹ ಮಾದಿಗರನ್ನೇ ನಂಬಿಕೊಂಡು ಬದುಕಿನ ಬಂಡಿಯನ್ನು ಸಾಗಿಸಿಕೊಂಡು ಬರುತ್ತಿದ್ದ ದಕ್ಕಲರು, ಸಿಂದ್‌, ಮಾದಿಗರು, ಮಾದಿಗ ಮಾಸ್ವೀಕರು ಮೊದಲಾದ ಮಾದಿಗ ಉಪಪಂಗಡಗಳಿಗೆ ಮಾದಿಗರು ಮೊದಲಿನಂತೆ ಆಶ್ರಯ ಕೊಡುತ್ತ ತಮ್ಮ ಮಾನವೀಯತೆಯನ್ನು ಮರೆಯುತ್ತ ಬಂದರು. ಮೊದ-ಮೊದಲು ವ್ಯವಸಾಯಕ್ಕೆ ಅನುಕೂಲವಾಗುವಂತಹ ಉಪಕರಣಗಳಾದ ಗುದ್ದಲಿ, ಹಾರೆಕ, ಪಿಕಾಸಿ, ನೇಗಿಲು ಮೊದಲಾದ ಲೋಹಗಳಿಂದ, ಮರಮುಟ್ಟುಗಳಿಂದ ಆಯುಧಗಳನ್ನು ತಯಾರಿಸಿಕೊಡುತ್ತಿದ್ದರು. ಅಂದರೆ ಮಾದಿಗರು ಕೇವಲ ಸಂಸ್ಕೃತಿಯನ್ನೇ ನಂಬಿ ಬದುಕು ಸಾಗಿಸದೆ ಸಕಲ ವಿದ್ಯಾ ಪ್ರವೀಣರಾಗಿದ್ದರೆಂಬುದಕ್ಕೆ ಇದು ಸಾಕ್ಷಿ. ಅದರ ಜೊತೆಗೆ ಪಶುಪಾಲನೆ ಮತ್ತು ಚರ್ಮಗಾರಿಕೆಯಂತಹ ವೃತ್ತಿಗಳನ್ನು ಮಾಡುತ್ತ ಸಾಮಾಜಿಕತೆಯನ್ನೊಳಗೊಂಡ ಸಮಾಜದೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತ ಸಮಾಜದ ಒಂದು ಮುಖ್ಯವಾಹಿನಿಯ ಕಡೆಗೆ ಬರಲು ಪ್ರಯತ್ನಿಸಿದರು.

ಹೀಗೆ ಸಮಾಜದ ಪ್ರಗತಿಗೆ ಕಾರಣವಾಗುತ್ತ ಒಂದೆಡೆ ನೆಲೆನಿಂತಂತಹ ಮಾದಿಗರು ತಮ್ಮ ವಾಸ್ತವ್ಯಕ್ಕಾಗಿ ನಿರ್ಮಿಸಿಕೊಂಡಂತಹ ಗುಡಿಸಲುಗಳು ಒಂದು ತೆರನಾದಂತಹ ವೈಶಿಷ್ಟತೆಯಿಂದ ಕೂಡಿದಂತಹ ಕಲಾತ್ಮಕತೆಯನ್ನು ಪ್ರದರ್ಶಿಸದ ಮಾದಿಗರು ತಮ್ಮ ಸಂಸ್ಕೃತಿ ಒಪ್ಪಂದವನ್ನು ಮನೆಯ ಒಳಗೆ ಪ್ರದರ್ಶಿಸುವುದನ್ನು ಕಾಣಬಹುದಾಗಿದೆ. ಅವರು ನಿರ್ಮಿಸಿಕೊಂಡಂತಹ ಮನೆಗಳ ಗೋಡಗಳಿಗೆ ಕೆಮ್ಮಣ್ಣು ಬಳಿದಿರುತ್ತಾರೆ. ಅಲ್ಲಲ್ಲಿ ಉಂಟಾದ ಲೋಪ-ದೋಷಗಳು ಮೇಲೆ ಕಾಣಿಸದಂತೆ ಪುರಾಣದ ತುಣುಕುಗಳನ್ನೊ, ಆರಂಜ್ಯೋತಿ ವಹಿಷ್ಟರು, ಆದಿಜಾಂಬವ ಪುರಾಣದ ಸೂಕ್ಷ್ಮ ಕೆತ್ತನೆಯ ಚಿತ್ರಗಳನ್ನೊ ಬಣ್ಣದಿಂದ ಚಿತ್ರಿಸಿರುತ್ತಾರೆ. ಇವರು ಕೆಮ್ಮಣ್ಣನ್ನು ಗೋಡಗಳಿಗೆ ಬಳಿಯುತ್ತಿರುವುದನ್ನು ಕಂಡೆ ಸುಣ್ಣ, ಬಣ್ಣ ಬಳಿಯದಂತೆ ಸಾಮಾಜಿಕ ನಿರ್ಬಂಧವನ್ನು ವಿಧಿಸರಬಹುದು. ಇಲ್ಲವಾದರೆ ಆ ಊರಿಗೆ ಯಾರಾದರೂ ಬೇರೆಯವರು ಬಂದಾಗ ಊರ ಹೊರವಲಯದಲ್ಲಿ ಸಿಗುವ ಈ ಮನೆಗಳಿಗೆ ಹೋಗದಂತೆ, ಈ ಮನೆಗಳು ಹೊಲೆಯರದೊ, ಮಾದಿಗರದೊ ಇರಬೇಕೆಂಬುದನ್ನು ಸುಲಭವಾಗಿ ಗ್ರಹಿಸಲು ಈ “ಕೆಂಪುಮಣ್ಣಿನ” ರೂಪವನ್ನು ಆಳುವ ಸಂಸ್ಕೃತಿ ಇವರಿಗೆ ವಿಧಿಸಿರಬಹುದು ಎಂದು ಕಾಣುತ್ತದೆ. ಆದರೆ ಈ ಇಂತಹ ನಿರ್ಬಂಧಗಳು ಸಡಿಲವಾಗಿವೆ. ಆಧುನಿಕತೆ ಕರಾಳ ಹಸ್ತಗಳು ಎಲ್ಲವನ್ನು ನುಂಗುತ್ತಿರುವ ಪರಿಣಾಮವಾಗಿ ಇವರ ಬದುಕಿನ ಚಿತ್ರಣ, ಮನೆಗಳ ರೂಪುರೇಷೆಗಳು ಬದಲಾಗಿ ಕೆಮ್ಮಣ್ಣಿನ ಬದಲಾಗಿ ಆ ಸ್ಥಳವನ್ನು ನೊರೋಲ್ಯಾಕ್‌, ಏಷ್ಯಿಯನ್ನ ಪೈಂಟ್‌ಆಕ್ರಮಿಸಿಕೊಂಡಿದ್ದರೆ, ಮಾರ್ಬಲ್‌ಕಲ್ಲುಗಳನ್ನು ಹಾಸಿಕೊಂಡು ಮಲಗಿರುವ ಮನೆಗಳು ಮುಗಿದು ಹೋದ ಮೇಲೆ ಯುದ್ಧ ಭೂಮಿಯಲ್ಲಿನ ರಕ್ತದ ಕಲೆಗಳಂತೆ ಮೂಕಸಾಕ್ಷಿಯಾಗಿ ನಿಂತಿವೆ.

ಆರೇಳು ದಶಕಗಳ ಹಿಂದಿನ ಮಾದಿಗರ ಮನೆಗಳನ್ನು ಈಗ ಎಲ್ಲಿಯೂ ಕಾಣಸಿಗದಂತೆ ಮಾಡಿರುವ ಆಧುನಿಕತೆ ಇವರ ಕಲೆಯನ್ನು ನುಂಗಿ ನೀರು ಕುಡಿಯಲು ಒಂಟಿ ಕಾಲಿನ ಮೇಲೆ ನಿಂತಿರುವುದು ನಮ್ಮ ಸಂಸ್ಕೃತಿಯ ಅವಸಾನಕ್ಕೆ ಕ್ಷಣಗಣನೆ ಎಂದು ಪ್ರಸ್ತುತ ತೋರಿಸಿಕೊಡುತ್ತಿದೆ.

ಮಾದಿಗರ ಮನೆಯ ವಿಶಿಷ್ಟತೆಯಂತೆ ಇವರು ಬಳಸುತ್ತಿದ್ದ ದಾರಿಗಳು, ಬಾವಿಗಳು (ಕುಡಿಯುವ ನೀರಿನ) ಸ್ಮಶಾನ ಭೂಮಿಯು ಪ್ರತ್ಯೇಕವಾಗಿತ್ತು. ಇದು ಹೊಲೆಯರು ಕುಡಿಯುವ ನೀರಿನ ಬಾವಿ, ಇದು ಮಾದಿಗರ ಬಾವಿ ಎಂದು ವರ್ಗೀಕರಣ ಮಾಡಲಾಗಿತ್ತು. ಇದು ಮಾದಿಗರಿಗೆ ಸೇರಿರುವಂತಹ ಬಾವಿಯೆಂದು ಸುಲಭವಾಗಿ ಗುರುತಿಸಲು ಬಾವಿಯ ಸುತ್ತ ದನದ ಮೂಳೆಗಳನ್ನೊ, ಎತ್ತಿನ ಕೊಂಬುಗಳನ್ನೊ, ಹಳೆಯ ಮಾಸಿದ ಬಟ್ಟೆಯ ಹರಿದುಹೋದ ಸಣ್ಣ-ಸಣ್ಣ ಗಂಟುಗಳನ್ನೊ ಬಾವಿಯ ದಾರಿಯಲ್ಲೇ, ಬಾವಿಯ ಹಾಸುಪಾಸಿನಲ್ಲೊ ಇಡುತ್ತಿದ್ದರು. ಇಲ್ಲಿ ಮಾದಿಗರ ವಿನಹ ಬೇರೆ ಯಾರು ಸಹ ನೀರು ತೆಗೆಯಬಾರದೆಂಬ ನಿರ್ಬಂಧವನ್ನು ವಿಧಿಸಿದರು. ಈ ನಿರ್ಬಂಧವು ಅವರನ್ನು ಎಲ್ಲಾ ವಿಧಗಳಿಂದ ಪ್ರಧಾನ ಸಂಸ್ಕೃತಿಯು, ಭಿನ್ನವಾಗಿ, ಪ್ರತ್ಯೇಕವಾಗಿ, ಕೀಳಾಗಿ ಕಾಣಲು ಏರ್ಪಡಿಸಿದಂತಹ ದೃಷ್ಟಾಂತಗಳಾಗಿವೆ.

ಈ ಪ್ರತ್ಯೇಕತೆಯ ವಿಭಿನ್ನತೆಯನ್ನು ಇವರು ಸೃಜನಶೀಲ ಪ್ರಕ್ರಿಯೆಯನ್ನಾಗಿ ಮಾರ್ಪಡಿಸಿಕೊಂಡು ಅಲ್ಲೊಂದು ಹೊಸತನವನ್ನು ಹುಟ್ಟು ಹಾಕಿದರು. ತಮಗೆ ಮೀಸಲಾದ ದಾರಿಯನ್ನು, ಬಾವಿಯನ್ನು ಬೇರೆಯವರು ಬಳಸದೆ ನೋಡಿಕೊಂಡರು. ಅಷ್ಟೇ ಅಲ್ಲದೆ ಅದನ್ನು ಯಾರಾದರೂ ಅತಿಕ್ರಮಿಸಿದರೆ ನ್ಯಾಯ ಪಂಚಾಯಿತಿ ಸೇರಿಸಿ ಅವರಿಂದ ಕಪ್ಪ ಕಾಣಿಕೆಯಾಗಿ ಹಣವನ್ನೋ, ಧವಸ ಧಾನ್ಯವನ್ನೋ ಸ್ವೀಕರಿಸಿ ಅದನ್ನು ಅವರಲ್ಲೇ ಹಂಚಿಕೊಳ್ಳುತ್ತಿದ್ದರು. ಈ ಪ್ರತ್ಯೇಕತೆಯನ್ನು ಕಲೆಯನ್ನಾಗಿ ಹೀಗೆ ಮಾರ್ಪಡಿಸಿಕೊಂಡರು ಎಂಬುದಕ್ಕೆ ಅವರು ನಿರ್ಮಿಸಿಕೊಂಡಂತಹ ವಸತಿ ಮನೆಗಳೇ ಸಾಕ್ಷಿಯಾಗಿವೆ.* ಸಾಮಾನ್ಯವಾಗಿ ಈ ಮಾದಿಗರ ಕೇರಿಗಳಲ್ಲಿನ ಮನೆಗಳು ಮಣ್ಣಿನಿಂದ ಗೋಡೆಗಳನ್ನು ಕಟ್ಟಿ, ಮೇಲೆ ಸೋಗೆ, ಜಂಬು, ಕಾಸಿ, ತಾಳೆಗರಿಗಳ ಸೂರನ್ನು ಹೊದಿಸಿರುತ್ತಾರೆ. ಇವುಗಳನ್ನು ಮನೆಗಳೆನ್ನುವುದಕ್ಕಿಂತ ಗುಡಿಸಲುಗಳು ಎನ್ನುವುದು ಸಮಂಜಸ. ಈ ಮನೆ ಅಥವಾ ಗುಡಿಸಲು ನಿರ್ಮಾಣದಲ್ಲಿ ಅಂತಹ ವಿಶೇಷ (ಗುಡಿಸಲು)ಯಿಂದ ಹಿಡಿದು ನಡುಮನೆ, ಮೂಲೆ, ಕೊಟ್ಟಿಗೆ ಮುಂತಾದ ಎಲ್ಲ ಜಾಗಗಳ ಅಂಗುಲಂಗುಲವೂ ನಿತ್ಯ ಬಳಕೆಗೆ ಬರುವಂತೆ ಕಟ್ಟಲಾಗುತ್ತದೆ. ಮನೆಯ ಮುಂದೆ ಚಿಕ್ಕ ಹಟ್ಟಿ (out house) (ಬಹುಶಃ ಇದು ಚರ್ಮ ಹದ ಮಾಡಲು, ಒಣಗಿಸಲು) ಬಾಗಿಲಲ್ಲಿ ಗಲಬಾನೆ, ಹಟ್ಟಿಯಂಚಲ್ಲಿ ಬಚ್ಚಲು ಇವಿಷ್ಟು ಮನೆಯ ಹೊಸ್ತಿಲಾಚೆಯ ವಾಸ್ತವ್ಯ ವಿವರಗಳು.

ಹೊಸ್ತಿಲನ್ನು ಕಡಪ ಅಥವಾ ದಾರಬಂದ್ರ ಎಂದು ಕರೆಯುತ್ತಾರೆ. ಇದು ತುಂಬಾ ಪವಿತ್ರವೆಂಬ ನಂಬಿಕೆ ಇವರಲ್ಲಿದೆ. ಬೆಳಗ್ಗೆ ಹೊರಗೆ ಹೋಗುವಾಗ ಮತ್ತು ದಿನದ ಕೊನೆಯಲ್ಲಿ ಹಳೆಯ ನಾಣ್ಯ ಈ ನಾಣ್ಯವನ್ನು ತಮಗೆ ಪ್ರೀತಿ ಪಾತ್ರರು ಸತ್ತು ಹೋದಾಗ ಮೇಲೆ ಹಣ ಎಸೆದಾಗ ಅದನ್ನು ಅಲ್ಲಿಂದ ಸಂಗ್ರಹಿಸಿ ಎಳೆ ಮಕ್ಕಳ ಕುತ್ತಿಗೆ ದಾರದಿಂದ ಕಟ್ಟಿರುತ್ತಾರೆ. ಅಥವಾ ದಾರಂದ್ರದ ಬಾಗಿಲ ಕಡಪಕ್ಕೆ ಬಡಿದಿರುತ್ತಾರೆ. ಇದರ ಅರ್ಥ ಸತ್ತವರು ಆ ನಾಣ್ಯದ ರೂಪದಲ್ಲಿ ಸದಾ ನಮ್ಮ ಕಣ್ಮುಂದೆ ಮಕ್ಕಳ ಕತ್ತಿನಲ್ಲೋ, ಬಾಗಿಲಲ್ಲೊ ಇರುತ್ತಾರೆ ಎಂಬ ನಂಬಿಕೆ ಕಡಪಕ್ಕೆ ಮೊಳೆ ಹೊಡೆದು ಬಂಧಿಸಲಾಗಿರುತ್ತದೆ. ಕೆಲವರ ಮನೆ ದಾರಂದ್ರಕ್ಕೆ ನಾಣ್ಯದ ಜೊತೆ ಕುದುರೆ ಲಾಳವನ್ನೂ ಬಿಗಿಯಲಾಗಿರುತ್ತದೆ. ಮಾದಿಗರ ಮೂಲ ನೆಲೆ “ಆಂಧ್ರದ ಕಡಪ” ಆಗಿರುವುದರಿಂದ “ಕಡಪ” ಎಂದರೆ ಹೊಸ್ತಿಲು ಎನ್ನುವ ಅರ್ಥವೂ ಇರುವುದರಿಂದ ಇವರ ಈ ನಂಬಿಕೆಗೆ ಇವರ ಆ ಮೂಲಸ್ಥಾನಕ್ಕೂ ಸಂಬಂಧ ಇರುವಂತಿದೆ.

ಈ ಹೊಸ್ತಿಲಾಚೆಯ ಒಳಗೆ ನಡುಮನೆ, ಕೊಟ್ಟಿಗೆ, ಮೂಲೆಮನೆ, (ಅಡುಗೆ ಮನೆ) ಇರುತ್ತದೆ. ನಾಲ್ಕು ಗೋಡೆಯ ಒಳಗಿನ ಜಾಗವನ್ನೇ ಹೀಗೆ ಬಳಸುತ್ತಾರೆಯೇ ಹೊರತು ಇವೇನೂ ಪ್ರತ್ಯೇಕ ಕೋಣೆಗಳಲ್ಲ. ಮೂಲೆಮನೆ ಮತ್ತು ನಡುಮನೆಯ ಅರ್ಧದವರೆಗೆ ಬೇರ್ಪಡಿಸಲು ಮೂರಡಿಯ ಚಿಕ್ಕಗೋಡೆಯನ್ನು ಕಟ್ಟಿರುತ್ತಾರೆ. ಇದೇ ಇವರ ಅಡ್ಡಗೋಡೆ. ಈ ಅಡ್ಡಗೋಡೆಯ ಮೇಲೆ ಬುಡ್ಡಿ ದೀಪವನ್ನಿಡುವುದರಿಂದ ಮೂಲೆಮನೆ ಮತ್ತು ನಡುಮನೆಗೂ ಬೆಳಕು ಹರಡುತ್ತದೆ. ಈ ಕಾರಣದಿಂದಾಗಿಯೇ ಇರಬೇಕು “ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ” ಎಂಬ ರೂಢಿಯ ಗಾದೆ ನುಡಿಕಟ್ಟು ಹುಟ್ಟಿರಬಹುದೆನ್ನಿಸುತ್ತದೆ. ಈ ಬುಡ್ಡಿ ದೀಪವನ್ನು ನಡುಮನೆಯ ಗೋಡೆಯಲ್ಲಿ ಮಾಡಿರುವ ಪುಟ್ಟ ಗೂಡಿನಲ್ಲಿಯೂ ಇಡುತ್ತಾರೆ.

ನಡುಮನೆ ಮನೆಯ ಸದಸ್ಯರು, ಬರುವ ನೆಂಟರಿಷ್ಟರು ಕೂತು ಮಾತುಕತೆಯಾಡುವ ಜಾಗ. ನೆಂಟರು ಅಥವಾ ಹೊರಗಿನವರು ಬಂದ ಕೂಡಲೇ ನಡುಮನೆಯ ಗೋಡೆಗೆ ಬರಗಿಕೊಳ್ಳುವ ಅನುಕೂಲವಾಗುವಂತೆ ಚಾಪೆಯನ್ನು ಹಾಸುತ್ತಾರೆ. ಹಾಗೆಯೇ ಈ ಜಾಗವನ್ನು ಊಟ ಮಾಡುವದಕ್ಕೂ, ಮಲಗುವುದಕ್ಕೂ ಬಳಸುತ್ತಾರೆ. ಮೂಲೆ ಮನೆಯಲ್ಲಿ ಅಡುಗೆ ಮಾಡುತ್ತಾರೆ. ಮಾಂಸ ತಂದಾಗ ಅದನ್ನು ಕೊಯ್ದು ಒಪ್ಪ ಮಾಡುವುದು ಕೂಡ ಇದೇ ಜಾಗದಲ್ಲಿ.

ನಡುಮನೆಯ ಒಂದು ಕಡೆ ಮೂಲೆಯಿದ್ದರೆ ಇನ್ನೊಂದು ಕಡೆ ದನಕಟ್ಟುವ ಜಾಗ ಇರುತ್ತದೆ. ಇದಕ್ಕೆ ಪ್ರತ್ಯೇಕ ಗೋಡೆಯಾಗಲಿ, ಕೊಟ್ಟಿಗೆಯಾಗಲಿ ಇರುವುದಿಲ್ಲ. ದನಗಳಿಗೆ ಮೇವು ಹಾಕಲು ಒಂದು ಮರದ ತುಂಡನ್ನೋ ಅಥವಾ ಹಲಗೆಯನ್ನೋ ಅಡ್ಡ ಇಟ್ಟಿರುತ್ತಾರೆ…. ಇದೇ ನಡುಮನೆ ಮತ್ತು ದನಕ ಕೊಟ್ಟಿಗೆಯನ್ನು ಬೇರ್ಪಡಿಸುವ ಗಡಿಯಾಗುತ್ತದೆ. ಕೊಂಚ ಅನುಕೂಲಸ್ಥರಾದರೆ ಪ್ರತ್ಯೇಕ ದನದ ಕೊಟ್ಟಿಗೆಯೂ ಇರುತ್ತದೆ.

ನಡುಮನೆಯ ಗೋಡೆಯ ಮೇಲೆ ಮೊಳೆ ಹೊಡೆದು ದೇವರ ಪಟಗಳನ್ನು ತೂಗುಹಾಕುತ್ತಾರೆ. ಅವುಗಳ ಅಡಿಯಲ್ಲಿ ಒಂದು ಮರದ ಪಟ್ಟಿಯನ್ನು ಹೊಡೆದು ಅದರ ಮೇಲೆ ಈ ಪಟಗಳು ಓರೆಯಾಗಿ ನಿಲ್ಲುವಂತೆ ಮಾಡುತ್ತಾರೆ. ದೇವರ ಪಟಗಳಲ್ಲಿ ಈಶ್ವರ-ಪಾರ್ವತಿ, ತಿರುಪತಿ ವೆಂಕಟರಮಣಸ್ವಾಮಿ, ಆಂಜನೇಯ, ಕಮಲದ ಮೇಲೆ ಕೂತ ಲಕ್ಷ್ಮೀ, ಗಣೇಶ ಮುಂತಾದವು ಇರುತ್ತವೆ. ಈ ಪಟ್ಟಿಯ ಮೇಲೆ ಹಣತೆ, ಊದುಕಡ್ಡಿ, ವಿಭೂತಿ ತುಂಡು ಇತ್ಯಾದಿ ಇಡುತ್ತಾರೆ. ಪಟಗಳ ಹಿಂದೆ ಕಾಗದ ಪತ್ರ ಜಮೀನು ವ್ಯವಹಾರಕ್ಕೆ ಸಂಬಂಧಿಸಿದ ಅರ್ಜಿಗಳು, ಪಹಣೆ ಇತ್ಯಾದಿ ಇಡುತ್ತಾರೆ.

ದನದ ಕೊಟ್ಟಿಗೆಯ ಗೋಡೆಗೆ ಮರದ ಗೂಟವನ್ನೋ, ಮೂಳೆಯನ್ನೋ ಹೊಡೆದು ಅಲ್ಲಿ ತಮ್ಮ ಚರ್ಮ ವ್ಯಾದ್ಯಗಳಾದ ತಮಟೆ, ಜಾಂತಿಣಿ, ಮೃದಂಗ ಇತ್ಯಾದಿ ನೇತು ಹಾಕುತ್ತಾರೆ. ಕುಡುಗೋಲು, ಸುರಕತ್ತಿ, ಮಚ್ಚು ಇತ್ಯಾದಿ ಕಬ್ಬಿಣದ ಆಯುಧಗಳನ್ನು ಸೂರಿನಡಿ ಬಾಗಿಲ ಚೌಕಟ್ಟಿನ ಮೇಲಿನ ಜಾಗದಲ್ಲಿ ಇಟ್ಟಿರುತ್ತಾರೆ. ಇದಕ್ಕೆ ನಾಗೊಂದು ಎಂದು ಕರೆಯುತ್ತಾರೆ.*

ಹೀಗೆ ನಿರ್ಮಾಣವಾದಂತಹ ಮಾದಿಗರ ಮನೆಗಳು ಹೊರಗೆ ಶುಚಿಯಾಗಿರುತ್ತಿರಲಿಲ್ಲ. ಸದಾ ಕುಡಿತದ ದಾಸರಾಗಿದ್ದ ಇವರು ಮಾಂಸ ಸೇವಿಸುತ್ತ ಅದರ ಮೂಳೆಗಳನ್ನು ಅಲ್ಲಲ್ಲಿ ಬಿಸಾಕಿರುತ್ತಿದ್ದರು. ಇದರಿಂದ ಮನೆಯ ವಾತಾವರಣವು ಕುಲಷಿತವಾದಂತಹ ವಾತಾವರಣವನ್ನುಂಟು ಮಾಡುತ್ತಿತ್ತು. ಇವರು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಎಲ್ಲಿಯೂ ಕೊಡದೆ ಇರುವುದು ಬಹುಶಃ ಅವರ ಒಳಗಿನ ಆಕೃತಿಯನ್ನು ಸೃಜನಶೀಲವಾಗಿ ಒಗ್ಗಿಸಿಕೊಳ್ಳುವುದಾಗಿತ್ತು. ಅದಕ್ಕೆ ಪೂರಕವೆಂಬಂತೆ ಇವರನ್ನು ನೋಡಲು ಎಷ್ಟೇ ನಿಕೃಷ್ಟವಾಗಿದ್ದರೂ, ಅಸಹ್ಯವಾಗಿದ್ದರೂ ಇವರು ಒಮ್ಮೆ ತೊಡೆ ತಟ್ಟಿ ರಾಗದ, ನಾಟಕದ ಅಖಾಡಕ್ಕೆ ಇಳಿದರೆ ಮುಗಿದೆ ಹೋಯ್ತು. ಆ ರಾಗಕ್ಕೆ, ಆ ಕುಣಿತಕ್ಕೆ ಕೇಳುತ್ತ ತನಗರಿವಿಲ್ಲದಂತೆ ತಾವು ರಾಗವನ್ನು ಗುನುಗುತ್ತಲೊ ಇಲ್ಲ ಒಂದು ಸ್ಟೆಪ್ಪು ಹಾಕದೆ ಮುಂದಕ್ಕೆ ಹೋಗಲಾರರು. ಅಂತಹ ಮಾಂತ್ರಿಕತೆಯನ್ನು ಸ್ವರವಿನ್ಯಾಸವನ್ನು ಮತ್ತು ಕುಣಿತದ ನಾವಿನ್ಯತೆಯನ್ನು ಹೊಂದಿದವರಾಗಿರುತ್ತಾರೆ.

ಇಂತಹ ಇವರ ಮನೆಯ ಒಳಗಿನ ವ್ಯವಹಾರವೆಲ್ಲ ಮಹಿಳೆಯರಿಗೆ ಸಂಬಂಧಪಟ್ಟಿರುವಂತಹುದು. ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು, ಸಾಮಗ್ರಿಗಳಾದ ತಮಟೆ, ಜಾಂಕಿಣೆ, ಮೃದಂಗ, ಕುಡಗೋಲು ಮೊದಲಾದವುನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೈಗೆಟುಕುವಂತೆ ಇಡುವುದರಿಂದ ಹಿಡಿದು ಬಹುಮುಖ್ಯವಾಗಿ ಸಾಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಇಡುವ ಕಾಯಕದವರೆಗೂ ಎಲ್ಲವೂ ಮಹಿಳೆಗೆ ಸಂಬಂಧಪಟ್ಟಿರುವುದಕ್ಕೆ ಯಾವ ನಿರ್ಬಂಧವಿಲ್ಲದ ಕಾರಣ ಗೋಡೆಗಳನ್ನು ಸುಣ್ಣ ಬಣ್ಣದಿಂದ ಅಲಂಕರಿಸಿ ಅದರ ಮೇಲೆ ನವಿಲು, ಹಂಸ, ಗಿಳಿ, ಹೂಬಳ್ಳಿ ಮೊದಲ್ಗೊಂಡು ಕೆಲವೊಂದು ಶಕ್ತಿ ದೇವತೆಗಳ ಜೀವನಗಾಥೆಯನ್ನು ನೆನಪಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸುತ್ತಿದ್ದರು. ಈ ಚಿತ್ರಗಳು ಭಕ್ತಿ ಪ್ರಧಾನವಾದ ಭಕ್ತಿರಸದಿಂದ ಕೂಡಿರುವಂತಿರಲಿಲ್ಲ. ಅಂದರೆ ಕಲೆಗೆ ಯಾವುದೇ ತೆರನಾದಂತಹ ಶಿಷ್ಟ ಆಕೃತಿಗಳನ್ನು ತ್ಯಜಿಸಿರುವುದು ಇವರ ಈ ಕಲೆಗೆ ಕಾರಣವಿರಬಹುದು. ಇಂತಹ ಮನೆಗಳಲ್ಲಿ ಮಹಿಳೆಯೇ ಪ್ರಧಾನವಾದಂತಹ ಪಾತ್ರ ಎಂದರೆ ತಪ್ಪಾಗಲಾರದು. ಏಕೆಂದರೆ ಮನೆಯೊಳಗಿನ ವ್ಯವಹಾರದಿಂದ ಮನೆಯಾಚೆಗಿನ ವ್ಯವಹಾರವೆಲ್ಲ ಇವರ ಉಪಸ್ಥಿತಿಯಲ್ಲಿಯೇ ನಡೆಯುತ್ತಿತ್ತು.

ಬಹುಮುಖ್ಯವಾಗಿ ಪ್ರತಿ ಮಾದಿಗರ ಮನೆಗೂ ಒಂದೊಂದು ದೇವರು ಮನೆ ದೇವರಾಗಿತ್ತು. ಎಲ್ಲಮ್ಮ, ಮಾರೆಮ್ಮ, ಮದ್ದೂರಮ್ಮ, ಸಪ್ಪಲ್ಲಮ್ಮ, ಮುನೇಶ್ವರ, ಕಾಳಿ ಮೊದಲಾದ ಶಕ್ತಿದೇವತೆಗಳನ್ನೇ ಇವರು ಮನೆ ದೇವರುಗಳಾಗಿ, ಆ ಮನೆಯ ಕುಲದ ಗುರುತಾಗಿ ಇಟ್ಟುಕೊಳ್ಳುತ್ತಿದ್ದರು. ಇದನ್ನು ಪುಷ್ಟೀಕರಿಸುಲೆಂಬಂತೆ ಅವರ ಮನೆಯ ದೇವರಿನ ಹೆಸರನ್ನು ಆ ಮನೆಯ ಯಾರಾದರು ಒಬ್ಬ ಸದಸ್ಯನಿಗೆ ಇಟ್ಟು ಮನೆಯ ದೇವರ ಹೆಸರನ್ನು ಜೀವಂತವಾಗಿರಿಸಲು ಮುಂದಾಗುತ್ತಿದ್ದರು. ಅದಕ್ಕೆ ಮಾದಿಗರ ಮನೆಯಲ್ಲಿ ಗಂಗಮ್ಮ, ಗೌರಮ್ಮ, ಮುನೇಶ್ವರ, ಮುನಿಯಪ್ಪ ಎಂಬಿತ್ಯಾದಿ ಹೆಸರುಗಳು ಇರುವುದನ್ನು ಕಾಣಬಹುದು. ಇದಕ್ಕೆ ಕಾರಣವನ್ನು ಇವರ ಆಚರಣೆಗಳು ಎಂಬ ಅಧ್ಯಾಯದಲ್ಲಿ ಪರಿಶೀಲಿಸೋಣ.

ಹೀಗೆ ಬಹುಸಂಸ್ಕೃತಿಯನ್ನಾಗಿ ನಿರ್ಮಾಣವಾದಂತಹ ಕೇರಿಯೊಳಗಿನ ಮನೆಗಳಿಗೆ ಬೇರೆ ಯಾರಿಗೂ ಮನೆಯೊಳಗೆ ಬರಲು ಅವಕಾಶವಿರಲಿಲ್ಲ. ತಮ್ಮ ಸಮುದಾಯದ ಹಿರಿಯರಿಗೆ, ಕುಲಸ್ಥರಿಗೆ, ಕುಲದ ಮುಖ್ಯಸ್ಥರಿಗೆ ಮಾತ್ರ ಮುಕ್ತ ಅವಕಾಶವಿತ್ತು. ಅದು ಬಿಟ್ಟು ಬೇರೆ ಯಾರಿಗೂ ಇಲ್ಲಿ ಬರುವುದಕ್ಕೆ ಅವಕಾಶವಿರದಂತೆ ನಿಷೇಧವಿರುದನ್ನು ಗಮನಿಸಬಹುದು. ಈ ನಿಷೇಧದ ಅರ್ಥ ಸಾಮಾಜಿಕ ಸ್ಥಿತಿಯಲ್ಲಿ ಶ್ರೇಣಿಕರಣಗೊಂಡ ಬೇರೆಯ ಕುಲದವರು ಇವರಿಗೆ ಕೆಳವರ್ಗದವರಂತೆ ಕಂಡಿರಬಹುದು. ಅಥವಾ ತಮ್ಮ ಸಾಮಾಜಿಕತೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಕಾರಣವಿರಬಹುದು. ಇದನ್ನು ಮೀರಿ ಬೇರೆಯವರು ತಮ್ಮ ಮನೆಯೊಳಗೆ ಬಂದರೆ ಅದು ದರಿದ್ರವೆಂದೂ, ಪಾಪ ಸುತ್ತಿಕೊಳ್ಳುತ್ತದೆಯೆಂಬ ನಂಬಿಕೆ ಇವರಲ್ಲಿತ್ತು. ಹಾಗೆ ಏನಾದರೂ ಇವರ ಮನೆ ಹೊಕ್ಕಿಬಿಟ್ಟರೆ ನೀರಿನಿಂದಲೋ, ಗಂಜಲದಿಂದಲೋ ಮನೆಯನ್ನು ಶುದ್ಧೀಕರಿಸಿ ಸಗಣೆಯಿಂದ ಮನೆಯನ್ನು ಪವಿತ್ರೀಕರಿಸುತ್ತಿದ್ದರು. ಈ ಪವಿತ್ರೀಕರಿಸುವಂತಹ ಕೆಲಸವನ್ನು ಆ ಮನೆಯ ಮಹಿಳೆಯರ ಕೆಲಸ ಮತ್ತು ಹಕ್ಕಾಗಿತ್ತು. ಅದಕ್ಕೆಂಬಂತೆ ಬೇರೆಯವರು ಯಾರಾದರು ಇವರ ಮನೆಗೆ ಬಂದರೆ ತಮ್ಮ ವ್ಯವಹಾರವನ್ನು ಮನೆಯ ಹೊರಗೆ ನಿಂತುಕೊಂಡು ಮಾತಾಡಿ ಮುಗಿಸಿಕೊಂಡು ಹೊರಟು ಹೋಗುತ್ತಿದ್ದರು. ಇಂತಹ ಕ್ರಮಬದ್ಧವಾದಂತಹ ವ್ಯವಸ್ಥೆ ಮಾದಿಗರ ಸಂಸ್ಕೃತಿಯ ಚಿಹ್ನೆಯಾಗಿದೆ ಎಂದರೆ ತಪ್ಪಾಗಲಾರದು.

ಇಂತಹ ಮಾದಿಗರ ಕೇರಿಯೊಳಗೆ ಊರಿನ ಬೇರೆ ಜನಾಂಗದವರು ಮೇಲಿನ ಕಾರಣದಿಂದಲೇ ಏನೋ ಬರುತ್ತಿರಲಿಲ್ಲ. ಬಂದರೂ ಮಾದಿಗರನ್ನು ಕೂಲಿ ಕೆಲಸಕ್ಕೆ ಕರೆಯಲೋ, ಹೆಣ ಹೂಳುವುದಕ್ಕೆ, ಗುಂಡಿ ತೋಡಲು, ಸತ್ತ ದನಕರುಗಳನ್ನು ವಿಲೇವಾರಿ ಮಾಡಲೋ, ಸಾಲ ವಸೂಲಿಗೊ ಯಾವುದೊ ಒಂದು ಕಾರಣದಿಂದ ಮಾತ್ರ ಬರುತ್ತಿದ್ದರು. ಅದರ ವಿನಹಃ ಇವರ ಮನೆಯ ಕಡೆ ತಲೆ ಹಾಕಿ ಸಹ ಅವರು ಮಲಗುತ್ತಿರಲಿಲ್ಲ.

ಇಂತಹ ಇವರ ಕೇರಿಗಳಿಗೆ ಬ್ರಾಹ್ಮಣರ ಪ್ರವೇಶಕ್ಕೆ ಕಟ್ಟುನಿಟ್ಟಾದ ನಿಷೇಧವಿತ್ತು. ಬ್ರಾಹ್ಮಣ ಮನೆಯ ಅಂಗಳಕ್ಕಿರಲಿ, ಕೇರಿಯ ಒಳಗೆ ಕಾಲಿಡುವುದು ಕೂಡ ಅನಿಷ್ಟದ ಸೂಚನೆ, ಸರ್ವನಾಶಕ್ಕೆ ದಾರಿ ಎಂಬ ವಿಚಿತ್ರ ನಂಬಿಕೆಯೊಂದು ಇವರಲ್ಲಿ ಬೇರು ಬಿಟ್ಟುಕೊಂಡಿದೆ. ಬಹುಶಃ ವಿಶಿಷ್ಟ ಆರಂಜ್ಯೋತಿಯನ್ನು ಮರಳು ಮಾಡಿ ಆ ಮೂಲಕ ತಾತ ಜಾಂಬವನ ಬಳಿ ಇದ್ದ “ಪಂಚಾಂಗ”ವನ್ನು ಅಪಹರಿಸಿಕೊಂಡು ಹೋದನೆಂಬ ಐತಿಹ್ಯ ಇದಕ್ಕೆ ಕಾರಣವಿರಬಹುದು ಒಟ್ಟಿನಲ್ಲಿ ಬ್ರಾಹ್ಮಣ ಘನವಾದ ಉದ್ದೇಶವಿಲ್ಲದೆ ಕೇರಿಯತ್ತ ಕಾಲಿಡಲಾರ ಎಂಬುದು ಇವರ ತಿಳುವಳಿಕೆ. ಆಕಸ್ಮಾತ್‌ಬ್ರಾಹ್ಮಣ ಇವರ ಕೇರಿಯತ್ತ ಕಾಲಿಟ್ಟರೆ ಓಡಿ ಹೋಗಿ ಅವರ ಅಂಗಿಯ ತುಂಡನ್ನು ಹರಿದಿಟ್ಟುಕೊಳ್ಳಬೇಕು ಹಾಗೂ ಸಗಣಿ ನೀರು ಎರಚಿ ಪೊರಕೆಯಿಂದ ಹೊಡೆದು ಹೊರಗಟ್ಟಬೇಕೆಂದು ನಂಬಿದ್ದಾರೆ. ಈ ನಂಬಿಕೆಯು ನಿಜ ನೆಲೆ ಏನೆಂಬುದು ತಿಳಿದಿಲ್ಲವಾದರೂ ತಮ್ಮ ಅವನತಿಗೆ ಬ್ರಾಹ್ಮಣರೇ ಕಾರಣವೆಂಬ ರಕ್ತಗತ ಹುಟ್ಟರಿವು ಇದಾಗಿರುವಂತಿದೆ.

ಭಾರತೀಯ ಸಂಸ್ಕೃತಿಯಲ್ಲಿ ಬ್ರಾಹ್ಮಣರಿಗೆ ಒಂದು ಪವಿತ್ರ ಸ್ಥಾನವಿದೆ. ಅವರು ದೇವರ ಪ್ರತಿರೂಪವೆಂದು, ದೇವರ ನಂತರದ ದೇವರೆಂಬ ಕಲ್ಪನೆ ಭಾರತೀಯರಲ್ಲಿ ಪ್ರಾಚೀನದಿಂದಲೂ ನೆಲೆಯೂರಿ ಬಿಟ್ಟಿದೆ. ಅಂತಹ ಬ್ರಾಹ್ಮಣರನ್ನು ಅನಿಷ್ಟದ ಸಂಕೇತವಾಗಿ ಪರಿಭಾವಿಸಿದಂತಹ ಒಂದು ಸಮುದಾಯ ಮಾದಿಗರದು. ಇಂತಹ ಈ ಶಕ್ತಿಯು ಅವರನ್ನೊಳಗೊಂಡ ಪುರಾಣಗಳೇ ಅವರಿಗೆ ಈ ಮಾಂತ್ರಿಕ ಶಕ್ತಿಯನ್ನು ಕೊಟ್ಟಿರಬಹುದು. ಈ ಶಕ್ತಿಯ ಆಧಾರದಿಂದ ಬ್ರಾಹ್ಮಣರನ್ನು ತಮ್ಮ ಕೇರಿಯ ಒಳಗೆ ಬರದಂತೆ ಮಾದಿಗರು ನಿರ್ಬಂಧಿಸಿರಬಹುದು. ಇದೊಂದು ಸಾಮಾಜಿಕ ಕ್ರಾಂತಿ ಎಂದರೆ ತಪ್ಪಾಗಲಾರದು. ಏಕೆಂದರೆ ಅಂದಿನ ಸಮಾಜಿಕ ವ್ಯವಸ್ಥೆಯನ್ನು ರೂಪಿಸಿದ ಬ್ರಾಹ್ಮಣರನ್ನು ಮಾದಿಗರು ನಡೆಸಿಕೊಳ್ಳುತ್ತಿದ್ದ ಈ ರೀತಿಯ ಮಾದಿಗರ ಒಟ್ಟು ಶಕ್ತಿಯ ಸಾಂಸ್ಕೃತಿಕತೆಗೆ ಹಿಡಿದು ಕನ್ನಡಿಯಾಗಿದೆ.

ಹತ್ತಾರು ಸಣ್ಣ-ಪುಟ್ಟ ಗುಡಿಸಲುಗಳನ್ನು ಒಳಗೊಂಡಿರುವ ಮಾದಿಗರ ಕೇರಿಯು ಪ್ರತಿದಿನ ರಾತ್ರಿ ಮದುವೆಯ ವಧುವಂತೆ ಸಿಂಗಾರವಾಗುತ್ತಿತ್ತು. ಅದಕ್ಕೆ ಕಾರಣ ಪ್ರತಿ ರಾತ್ರಿ ಯಾವುದೊ ನಾಟಕದ ಡೈಲಾಗೊ, ಹಾಡಿನ ರಾಗದ ಸಾಲುಗಳ ತುಣುಕೊ ಆ ಕೇರಿಯೊಳಗಿಂದ ಮಧುರವಾಗಿ ಕೇಳಿಬರುತ್ತಿತ್ತು. ಇದನ್ನು ದೊಡ್ಡ ಹುಲ್ಲೂರಿನ ಆವಲಪ್ಪ ಹೀಗೆ ಬಣ್ಣಿಸುತ್ತಾರೆ. “ಪ್ರತಿರಾತ್ರಿ ಸಾರಾಯಿ ಕುಡಿದು ನಾಟಕಕ್ಕೆ ತಯಾರಿ ನಡೆಸುತ್ತಿದರೆ ಊರಿನ ಆ ವೈಭೋಗ ನೋಡಲು ರೆಡ್ಡಿಗರ ಮನೆಯವರು, ಒಕ್ಕಲಿಗರ ಮನೆಯವರು, ಶೆಟ್ಟರು, ಐನೋರ ಮನೆ ಹೆಣ್ಮಕ್ಕಳು ಸಾಲಾಗಿ ನಿಂತು ಮೈಮರೆಯುತ್ತ ಕೇಳುತ್ತಿದ್ದರು. ನಮ್ಮ ರಾಗಗಳು, ನಾಟಕದ ಡೈಲಾಗುಗಳು ಮತ್ತು ಸುಂದರವಾದ ಹೆಣ್ಮಕ್ಕಳು ಇದಕ್ಕಿಂತ ಸ್ವರ್ಗವಿರುತ್ತಿತ್ತು” ಎಂದು ಅಂದಿನ ದಿನಗಳನ್ನು ಆವಲಪ್ಪ ಮೆಲುಕು ಹಾಕಿಕೊಳ್ಳುತ್ತಾರೆ. ಮಾದಿಗರ ಆ ಬೆಳದಿಂಗಳ ರಾತ್ರಿಯನ್ನು ವರ್ಣರಂಜಿತವಾಗಿ ಕಳೆಯಲು ಕಾರಣ ಬೆಳಗ್ಗೆಯಿಂದ ದುಡಿದು ಸುಸ್ತಾಗಿ ಅದನ್ನು ನೀಗಿಸಿಕೊಳ್ಳಲು ಬೆಳದಿಂಗಳೆದುರು ಬೆಂಕಿಯನ್ನಾಕಿ ಅದರ ಸುತ್ತ ಮಕ್ಕಳು, ಮರಿಗಳು, ಮುದುಕರು, ಹೆಂಗಸರೆನ್ನುವ ಯಾವ ಬೇಧ-ಭಾವವಿಲ್ಲದೆ ಮಾಂಸದ ತುಣುಕುಗಳನ್ನು ಚಪ್ಪರಿಸುತ್ತ, ಮದ್ಯ ಸೇವಿಸುತ್ತ ಆ ರಾತ್ರಿಯನ್ನು ಬಹು ವರ್ಣರಂಜಿತವಾಗಿ ಕಳೆಯುತ್ತಿದ್ದರು. ಇವರ ಈ ರಾಗಲಾಪನೆಗಳನ್ನು ಕೇಳಿದರೆ ಸಾಕು ಇದು ಮಾದಿಗರ ಕೇರಿಯಂದು ಗುರುತಿಸಬಹುದಾಗಿತ್ತು.

ಮಾದಿಗರ ಸಮುದಾಯಕ್ಕೆ ಇಂತಹ ಸಾಂಸ್ಕೃತಿಕ ಶಕ್ತಿಯು ಪರಂಪರಾಗತವಾಗಿ ಬಂದರೂ ಸಹ ಹಾಗೆ ಬಂದಂತಹ ಗಾನ, ನೃತ್ಯ ಕಲೆಗಳನ್ನು ಸದಾ ತಮ್ಮ ನಾಲಿಗೆಯ ತುದಿಯಲ್ಲಿಯೇ ಹೊತ್ತುಕೊಂಡಿದ್ದರಿಂದ ಈ ಕಲೆಗಳು ಮತ್ತಷ್ಟು ಹೊಸ ಚೈತನ್ಯವನ್ನು ಹೊಂದಿ ಕಾಲದಿಂದ ಕಾಲಕ್ಕೆ ನವನವೋನ್ಮೇಷ ಶಾಲಿನಿಯಾಗಿ ಇವರನ್ನು ಬಿಟ್ಟು ಹೋಗಲಿಲ್ಲ.

ಮಾತೃದೇವತಾ ಆರಾಧಕರಾದ ಮಾದಿಗರು ಮಾತೃದೇವತೆಗಳನ್ನೇ ಯಾಕೆ ಹೆಚ್ಚಾಗಿ ಆರಾಧಿಸುತ್ತಿದ್ದರೆಂಬುದರ ಕುರಿತು ಅನುಮಾನಗಳಿವೆ. ಆದರೂ ಬಹುತೇಕವಾಗಿ ಇವರು ಶಾಕ್ತಾಪರಂಪರೆಯ ಒತ್ತಾಸೆಯಿಂದಲೊ ಹೆಣ್ಣನ್ನು ಪವಿತ್ರೀಕರಿಸುವ ಉದ್ದೇಶದಿಂದಲೋ, ತನ್ನ ಕುಲದ ಹೆಣ್ಣನ್ನು ಅಪಹರಿಸಿಕೊಂಡು ಹೋದ ವಸಿಷ್ಟನ ಕಪಟ ಶಕ್ತಿಯಿಂದಲೋ ಏನೋ ಹೆಣ್ಣನ್ನು ವಿಶೇಷವಾಗಿ ಪೂಜಿಸುತ್ತಾರೆ. ಅದಕ್ಕೆ ಎಂಬಂತೆ ಇವರ ಹತ್ತಾರು ಗುಡಿಸಲುಗಳೊಳಗೆ ಗಂಗಮ್ಮ, ಎಲ್ಲಮ್ಮನ ಪದಗಳಿರುವುದು ಇದಕ್ಕೆ ಸಾಕ್ಷಿ. ಬಹುತೇಕ ಇವರ ಎಲ್ಲಾ ಗುಡಿಗಳನ್ನು ಈ ಮಾತೃದೇವತೆಗಳೇ ಅಲಂಕರಿಸಿರುವುದನ್ನು ಇವರ ಕೇರಿಯ ಒಳಹೊಕ್ಕರೆ ಕಾಣಬಹುದು. ಇಂತಹ ಇವರು ನಿರ್ಮಿಸುವ ದೇವಸ್ಥಾನಗಳನ್ನು ದೇವಾಲಯಗಳು ಅಥವಾ ಗುಡಿ ಎನ್ನುವುದಕ್ಕೆ ಯಾವುದೇ ಪುರಾವೆ ನಮಗೆ ಕಾಣಿಸುವುದಿಲ್ಲ. ಏಕೆಂದರೆ ಎರಡು ಕಲ್ಲು ಚಪ್ಪಡಿಗಳನ್ನು ನಿಲ್ಲಿಸಿ ಅದರ ಮೇಲೊಂದು ಬಂಡೆಯನ್ನು ಹೊದಿಸಿ ಗುಡಿ ನಿರ್ಮಿಸುತ್ತಾರೆ. ಅದರ ಒಳಗೆ ಆಕಾರ ಕಳೆದುಕೊಂಡ ಒಂದು ಕಲ್ಲನ್ನು ನೆಟ್ಟು ಅದಕ್ಕೆ ಅರಿಶಿಣ, ಕುಂಕುಮದಿಂದ ಸಿಂಗರಿಸುತ್ತಾರೆ. ಹೀಗೆ ಸಿಂಗಾರವಾದ ಆ ದೇವರು ಕೆಂಪಗೆ ನೋಡಲು ಭಯಾನಕವಾಗಿಯೂ ಕಾಣಿಸುತ್ತದೆ. ಈ ಕೆಂಪು ಬಣ್ಣ, ಕೆಂಪು ವಸ್ತ್ರ ಅವರು ಕಾಲದ ಸಂಕೇತವಾಗಿ ಪರಿಭಾವಿಸುತ್ತಾರೆ. ಈ ಸಮುದಾಯದ ಚಿಹ್ನೆ ಹೇಗೆ ಬಂತು ಎಂಬುದನ್ನು ಇದರಲ್ಲಿಯ ಮೊದಲ ಅಧ್ಯಾಯನದಲ್ಲಿಯೇ ಈ ಹಿಂದೆ ವಿಸ್ತ್ರೃತವಾಗಿ ಚರ್ಚಿಸಿದ್ದೇವೆ. ಹೀಗೆ ಅಲಂಕಾರವಾದ ದೇವತೆಗೆ ಆಡುಮಲ್ಲಿಗೆ, ಚೆಂಡು ಹೂವು, ದಾಸವಾಳ, ಬೇವಿನ ಎಲೆಗಳಿಂದ ಮಾಲೆ ಕಟ್ಟಿ ಸಿಂಗರಿಸುತ್ತಾರೆ. ಹೀಗೆ ಸಿಂಗಾರವಾದ ನಂತರವೇ ಆ ಗುಡಿಯು ನೋಡುಗರಿಗೆ ಭಕ್ತಿ ಪರವಶದಂತೆ ಕಾಣಬಹುದು. ಮಾದಿಗರ ಕೇರಿಯ ಇಂತಹ ಗುಡಿಗಳ ಸುತ್ತ ಒಣಗಿದ ರಕ್ತದ ಕಲೆಯನ್ನು ಕಾಣಬಹುದು. ಇದರ ಅರ್ಥ ಹೆಚ್ಚಾಗಿ ಇವರು ಮಾಂಸವನ್ನು ಬಳಸುತ್ತಾರೆಂಬ ಪ್ರತೀಕ ಇದರಿಂದ ಸಿಗುತ್ತದೆ.

ಇಂತಹ ಮಾದಿಗರ ಗುಡಿಯ ಆಂತರಿಕ ಮೇಲ್ವಿಚಾರಣೆಯನ್ನು ಆ ಕುಲದ ಸ್ತ್ರೀಯರೇ ವಹಿಸಿಕೊಂಡಿರುತ್ತಾರೆ. ಗುಡಿಯನ್ನು ಗಂಜಲದಿಂದ ತೊಳೆದು ಸಗಣಿಯಿಂದ ಸಾರಿಸಿ ರಂಗೋಲಿಯಿಟ್ಟು ದೇವರನ್ನು ಅಲಂಕರಿಸುವಂತಹ ಪವಿತ್ರ ಕಾರ್ಯಗಳಿಗೆ ಇವರನ್ನು ಬಿಟ್ಟು ಪುರುಷರಿಗೆ ಇಲ್ಲಿ ಅಧಿಕಾರವಿಲ್ಲ. ನಂತರ ಆ ಗುಡಿಯನ್ನು ಸಾರ್ವಜನಿಕರಿಗೆ ದರ್ಶಿಸಲು ಅನುವು ಮಾಡಿಕೊಟ್ಟು ಆ ಕುಲದ ಯಾರಾದರು ಹಿರಿಯ ವ್ಯಕ್ತಿಯ ಮಗನು ಆ ಗುಡಿಗೆ ಪೂಜಾರಿಯಾಗಿ ನೇಮಕವಾಗುತ್ತಾನೆ.

ಇವರ ಪ್ರತಿ ಹಂತದಲ್ಲಿಯೂ ಸ್ತ್ರೀಯೂ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾಳೆ ಎಂಬುದಕ್ಕೆ ಇವರ ಕುಟುಂಬದ ಒಳಾಡಳಿತವೇ ಕುರುಹು. ಇಲ್ಲಿ ಕುಟುಂಬದ ಮುಖ್ಯ ಪೋಷಕಳಾಗಿ ಹೆಣ್ಣೇ ಇರುತ್ತಾಳೆ. ಏಕೆಂದರೆ ಮನೆಯ ವಾರಸುದಾರನಾದ ಗಂಡಸು ಒಂದಲ್ಲ ಒಂದು ಕಾರಣದಿಂದ ಕುಡಿತಕ್ಕೆ ಶರಣಾಗಿರುತ್ತಾನೆ. ಅಥವಾ ನಾಟಕದ ಗುಂಗಿನಲ್ಲೇ ಮೈಮರೆತು ಬಿಟ್ಟಿರುವಾಗ ಆ ಕುಟುಂಬದ ನಿರ್ವಹಣೆಯನ್ನು ಆ ಮನೆಯ ಹೆಣ್ಣು ಮಗಳು ನಿರ್ವಹಿಸಬೇಕು. ಮಕ್ಕಳ ಪೋಷಣೆ, ಸಂಸಾರದ ಜವಾಬ್ದಾರಿ, ಕುಟುಂಬದ ಮರ್ಯಾದೆಯನ್ನು ಕಾಪಾಡುವ ಸಲುವಾಗಿ ಅವಳೇ ಗಂಡಾಗುತ್ತಾಳೆ. ಇದನ್ನೆಲ್ಲ ಗಮನಿಸಿದರೆ ಈ ಸಮುದಾಯದಲ್ಲಿ ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಪೋಷಕಳಾಗಿ ಎಲ್ಲಾ ಹಂತದಲ್ಲಿಯೂ ಕೆಲಸವನ್ನು ನಿರ್ವಹಿಸುವುದನ್ನು ನಾವು ಕಾಣಬಹುದು. ಅಷ್ಟೇ ಅಲ್ಲದೆ ತನ್ನ ಬಿಡುವಿನ ವೇಳೆಯಲ್ಲಿ ತಾವು ಗಂಡಸಿಗಿಂತ ಕಡಿಮೆ ಏನೂ ಅಲ್ಲ ಎಂಬಂತೆ ರಂಗಕ್ಕೆ ಇಳಿಯುವ ಇವಳು ಹಾಡು ಗುನುಗುತ್ತ, ನಾಟಕದ ಪಾತ್ರ ಮಾಡುತ್ತ ಸಂಸ್ಕೃತಿಯ ವಕ್ತಾರಳಂತೆ ಕಂಡುಬರುತ್ತಾಳೆ.

ಒಟ್ಟಾರೆಯಾಗಿ ಭಾರತೀಯ ಸಾಮಾಜಿಕ ವ್ಯವಸ್ಥೆಯ ಯಾವ ಹಂತದಲ್ಲಿಯೂ ಕಾಣಸಿಗದಂತಹ ಮುಕ್ತ ಸ್ವಾತಂತ್ರವನ್ನು ಸ್ತ್ರೀಗೆ ಮಾದಿಗರ ಸಮುದಾಯ ಕೊಟ್ಟಿರುವುದನ್ನು, ಅದನ್ನು ಶಕ್ತಿಯುತವಾಗಿ, ಸಮರ್ಥವಾಗಿ ನಿರ್ವಹಿಸಿರುವದನ್ನು ಕಾಣಬಹುದು. ಈ ತೆರನಾದಂತಹ ಸಂಸ್ಕೃತಿಯನ್ನು ಹೊಂದಿರುವಂತಹ ಈ ಸಮುದಾಯದೊಳಗೆ ನಮಗೆ ಮತ್ತೊಂದು ಅದ್ಭುತವೊಂದು ಕಾಣುತ್ತದೆ. ಅದೆಂದರೆ ಅವರು ತೊಡುವಂತಹ ಉಡುಗೆ, ತೊಡುಗೆಗಳು. ಈ ಕಾಲದಲ್ಲಿ ಹೆಣ್ಣು ಮತ್ತು ಗಂಡು ತೊಡುವಂತಹ ಉಡುಗೆಗಳು ಬಹಳ ವಿಶಿಷ್ಟತೆಯಿಂದ ಕೂಡಿರುವಂತಹುದು.

ಇವರ ಕುಲದಲ್ಲಿ ಹೆಣ್ಣು ಮಕ್ಕಳು ತೊಡುವ ಉಡುಗೆ ತೊಡುಗೆಯು ಸಹ ಸಂಸ್ಕೃತಿಯನ್ನು ಬಿಂಬಿಸುವಂತಹ ಲಾಂಛನವಾಗಿದೆ. ಈ ಮೊದಲೆ ತಿಳಿಸಿದಂತೆ ಈ ಸಮುದಾಯದ ಸಂಕಟಗಳ ಕುರಿತು ಇದೇ ಅಧ್ಯಾಯದ ಮೊದಲಲ್ಲಿ ಪ್ರಸ್ತಾಪಿಸಿದ್ದೇನೆ. ಅದರಂತೆ ಮಾದಿಗ ಕುಲಗಳಲ್ಲಿ ಸ್ತ್ರೀಯರು ಉಡುಗೆ-ತೊಡುಗೆಯನ್ನು, ರವಿಕೆಯನ್ನು ಸಾಂಪ್ರದಾಯಿಕ ಉಡುಗೆಯಾಗಿ ಬಳಸುತ್ತಿದ್ದರು. ಇವರಲ್ಲಿ ಕುಡಿಪೈಟ (ಬಲಗಡೆಗೆ ಸೆರಗು) ಮತ್ತು ಎಡಮುಪೈದ (ಎಡಗಡೆಯ ಸೆರಗು) ಎಂಬ ಎರಡು ತೆರನಾದಂತಹ ಉಡುಪು ಪ್ರಕಾರಗಳಿರುವುದನ್ನು ಕಾಣುತ್ತೇವೆ. ಆದರೆ ಮಾದಿಗರು ಮೂಲದಿಂದಲೂ “ಕುಡ್ಡಿಪೈಟ” (ಬಲಗಡೆಯ ಸೆರಗು) ಪದ್ಧತಿಯನ್ನು ಅನುಸರಿಸುತ್ತಿದ್ದರು. ಬಹುಶಃ ಈ “ಕಡಿಪೈಟ” ಸೆರಗಿಗೆ ಕಾರಣ ಈವರೆಗೂ ಕಂಡುಬಂದಿಲ್ಲ. ಇದು ಸಮಾಜದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಬೇರೆ ಕಡೆ ನೆಲೆಸಿದ ಸಂದರ್ಭದಲ್ಲಿ ಪ್ರತ್ಯೇಕತೆಯನ್ನು ತೋರ್ಪಡಿಸುವ ಕಾಯಕದಿಂದ ಇದನ್ನು ಅನುಸರಿಸಬಹುದೆಂದು ಅನುಮಾನಿಸುಬಹುದು. ಆದರೆ ಇವರ ಈ ಬಲಗಡೆಯ ಸೆರಗು ಪದ್ಧತಿಯನ್ನೇ ಕಾಲಾನಂತರದಲ್ಲಿ ಸಮಾಜದಲ್ಲಿನ ಇತರ ಜನಾಂಗದವರು ಅನುಸರಿಸಲು ತೊಡಗಿರುವುದನ್ನು ಪ್ರಸ್ತುತ ಕಾಣಬಹುದು. ಈ “ಅನುಸರಿಸುವಿಕೆ” ಎಂಬುದು ಸಂಸ್ಕೃತಿಯ ವಿಲೇವಾರಿ ಅಥವಾ ಸಂಸ್ಕೃತಿಯ ಹಂಚಿಕೆಯಾಗಿ ವ್ಯಕ್ತವಾಗುತ್ತಿರುವುದನ್ನು ಪರೋಕ್ಷವಾಗಿ ಕಾಣಬಹುದಾಗಿದೆ.

ಇದಿಷ್ಟು ಸ್ತ್ರೀಯರ ಕುರಿತಾದರೆ ಪುರುಷರು ನಿಕ್ಕರು, ಬನೀನು, ಟವಲು, ಅಂಗಿಧರಿಸುತ್ತಾರೆ. ನೆಂಟರಿಷ್ಟರ ಊರಿಗೋ, ಪ್ಯಾಟೆಗೋ ಹೋಗುವಾಗ ಅದಕ್ಕೆಂದೇ ಒಗೆದಿಟ್ಟಿರುವ ಅಂಗಿ, ಪಂಚೆ ಉಟ್ಟು, ಹಳಬರಾದರೆ ಕೋಟು, ರುಮಾಲು ತೊಡುತ್ತಾರೆ. ಉಳಿದವರು ಟವಲನ್ನೊ (ಟರ್ಕಿ ಟವಲನ್ನೊ) ಬಳಸುತ್ತಾರೆ. ಇವರು ಬಳಸುವಂತಹ ಈ ಉಡುಪಲ್ಲಿ ಕೆಂಪು ಬಣ್ಣದ ಯಾವುದಾದರೂ ಒಂದು ವಸ್ತ್ರವಿರುವುದು ಕಡ್ಡಾಯ. ಏಕೆಂದರೆ ಈ “ಕೆಂಪು” ಬಣ್ಣವು ಅವರು ಬಳಸುತ್ತಿದ್ದುದು ಕೆಂಪು ಭಾವುಟ ಎನ್ನುವ ಉಲ್ಲೇಖವೊಂದು ಇವರ ಮಾದಿಗರ ಕತೆಯಲ್ಲಿದೆ.

ಈ ತೆರನಾದಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಂತಹ ಈ ಕುಲದ ಸ್ತ್ರೀಯರು ಮತ್ತು ಪುರುಷರಲ್ಲಿ ಉಡುಗೆ-ತೊಡುಗೆ ವಿಚಾರಕ್ಕೆ ಬಂದರೆ ಸ್ತ್ರೀಯರು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಕಾಣಬಹುದು. ಸ್ತ್ರೀಯರ ಸೆರಗು ಪದ್ಧತಿಯು ಅದಕ್ಕೊಂದು ಮೇರು ಉದಾಹರಣೆ. ಈ ಮೊದಲೆ ತಿಳಿಸಿರುವಂತೆ ಈ ಪದ್ಧತಿಯು ಪುರಾಣದ ಹಿನ್ನೆಲೆಯನ್ನು ಒಳಗೊಂಡಿರಬಹುದು. ಇವರ ಪುರಾಣ ಪ್ರತೀಕವಾದಂತಹ ಕತೆಯನ್ನು ಪ್ರತಿನಿಧಿಸುವುದಾಗಿರಬಹುದು. ಇಂತಹ ಈ ಕುಲದ ಸ್ತ್ರೀಯರು ಅವರು ತೊಡಗುವಂತಹ ವೇಷ ಭೂಷಣದ ಉಡುಗೆಯಿಂದ ಸಮಾಜದಲ್ಲೊಂದು ಸ್ಥಾನವನ್ನು ಸಂಪಾದಿಸಿದ್ದರು. ಮೈತುಂಬುವಂತಹ ಸೀರೆ, ಕುಪ್ಪಸವನ್ನು ಹೊದ್ದುಕೊಂಡು, ಹಣೆಗೆ ಕುಂಕುಮವನ್ನು ಇಟ್ಟುಕೊಂಡು ತಮಗೆ ಕೈಗೆಟುಕುವ ಯಾವುದಾದರೂ ಜಾತಿಯ ಹೂವನ್ನು ಮುಡಿದುಕೊಂಡು ಆ ಮೂಲಕ ಸಂಸ್ಕೃತಿಯನ್ನು ವಿಭಿನ್ನವಾದಂತಹ ಪದ್ಧತಿಯನ್ನು ಅನುಸರಿಸುವುದರ ಮೂಲಕ ಮಾದಿಗ ಸಮುದಾಯದ ಕೊಂಡಿಯಾದವರು ಎಂದರೆ ತಪ್ಪಾಗಲಾರದು.ಆದರೆ ಈಗ ಇದೆ ಪದ್ಧತಿಯನ್ನು ಎಲ್ಲ (ಉಡುಗೆ-ತೊಡುಗೆ) ಜನಾಂಗದವರು ಅನುಸರಿಸುವುದನ್ನು ಕಾಣಬಹುದಾಗಿದ. ಹೀಗೆ ಸಾಮಾಜಿಕ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತ ಆಧುನಿಕತೆಯಲ್ಲಿ ಮೇಲ್ಮಟ್ಟಕ್ಕೆ ಚಲಿಸಲು ಈ ಕುಲ ಪ್ರಯತ್ನಿಸುತ್ತಿದೆ.

ಇವರ ಸಂಸ್ಕೃತಿಯಲ್ಲಿನ ಈ ವಿಭಿನ್ನತೆಯಂತೆ ಇವರು ನಡೆಸುತ್ತ ಬಂದಂತಹ ಒಳಾಡಳಿತ ವ್ಯವಸ್ಥೆಯು ಸಹ ಇತರ ಸಮುದಾಯಗಳಲ್ಲಿ ಕಾಣಸಿಗದಂತಹ ವೈಶಿಷ್ಟತೆಯನ್ನು ಹೊಂದಿತ್ತು. ಇವರು ಹುಟ್ಟು ಹಾಕಿದಂತಹ ಈ ಒಳಾಡಳಿತ ಪದ್ಧತಿಯನ್ನೇ ಕಾಲಾ ನಂತರದಲ್ಲಿ ಸಮಾಜದ ವಿವಿಧ ಜನಾಂಗದವರು ತದನಂತರದಲ್ಲಿ ಅನುಸರಿಸಿಕೊಂಡು ಬಂದಿರುವಂತಹ ಸಾಧ್ಯತೆಗಳಿವೆ. ಏಕೆಂದರೆ ಇವರು ಮದುವೆ, ಸಾವು ಮೊದಲಾದ ಆಚರಣೆಗಳನ್ನು ಮಾಡುತ್ತಿದ್ದ ರೀತಿ ಸೋಜಿಗದಂತೆ ತೋರುತ್ತದೆ. ಇವರಲ್ಲಿನ ಐಕ್ಯತೆ, ಕಾರ್ಯದಕ್ಷತೆ, ಸಂಪ್ರದಾಯ ಪಾಲನೆಯನ್ನು ಗಮನಿಸಿದರೆ ಅದನ್ನು ಅವರ ಸಮುದಾಯ ಜವಾಬ್ದಾರಿಯಂತೆ ನಡೆಸಿಕೊಂಡು ಬರದೆ ಅದನ್ನು ಒಂದು ಕರ್ತವ್ಯದಂತೆ ಪಾಲಿಸುತ್ತ ಬರುತ್ತಿತ್ತು.

ಮೊದಲಿಗೆ ನಮ್ಮ ಅದ್ಭುತವನ್ನು ಸೃಷ್ಟಿಸುವುದು ಅವರಲ್ಲಿದ್ದಂತಹ ನಾಯಕತ್ವ. ಆ ನಾಯಕತ್ವ ಮಾದಿಗರ ಕುಲಗಳಲ್ಲಿ ವಂಶಪಾರ್ಯವಾಗಿ ನಡೆದುಕೊಂಡು ಬರುತ್ತಿತ್ತು. ಈ ನಾಯಕತ್ವದ ಆಯ್ಕೆಯು ಸಹ ಬಹುಕಠಿಣವಾದಂತಹ ವಿಧಾನವಾಗಿತ್ತು. ಆ ನಾಯಕತ್ವ ಆಯ್ಕೆಯ ವಿಧಾನ ಈ ಕೆಳಕಂಡಂತೆ ಕೂಡಿತ್ತು.

  • ನಾಯಕತ್ವ ವಹಿಸಿಕೊಳ್ಳುವಂತಹ ವ್ಯಕ್ತಿ ಸತ್‌ಚಾರಿತ್ರ್ಯವಂತನಾಗಿರಬೇಕು.
  • ಆ ವ್ಯಕ್ತಿಯನ್ನು ಸಮುದಾಯ ಗೌರವಿಸುವಂತಹ ವ್ಯಕ್ತಿಯಾಗಿರಬೇಕು. ಮತ್ತು ಕುಟುಂಬದ ಹಿನ್ನೆಲೆಯು ಸಮಾಧಾನ ತರುವಂತಿರಬೇಕು.
  • ನಾಯಕತ್ವ ವಹಿಸಿಕೊಳ್ಳುವ ವ್ಯಕ್ತಿಯು ಮಾದಿಗರ ಕುಲಸ್ಥನೆ ಆಗಿರಬೇಕು.

ಇದರ ಜೊತೆಗೆ ನಾಯಕನಾಗುವಂತಹ ವ್ಯಕ್ತಿಯು ಮಾದಿಗರ ಉಪ ಪಂಗಡದ ವ್ಯಕ್ತಿಯಾಗಿದ್ದರೆ ಅದು ಅಸಿಂಧುವಾಗುತ್ತದೆ. ಈ ಮೇಲ್ಕಂಡ ಎಲ್ಲಾ ಅರ್ಹತೆಗಳ ಜೊತೆಗೆ ಜೀವನದಲ್ಲಿ ಸಾಕಷ್ಟು ಅನುಭವವಿರಬೇಕು. ಅಂದರೆ ಹಿರಿಯ ಮುತ್ಸದಿಯಾಗಿರಬೇಕು. ಇಂತಹ ವ್ಯಕ್ತಿಯನ್ನು ಆ ಕುಲಸ್ಥರೆಲ್ಲ ಸೇರಿ ಆಯಕಟ್ಟಿನ ಜಾಗದಲ್ಲಿ ನಾಯಕನನ್ನು ಆಯ್ಕೆ ಮಾಡುತ್ತಿದ್ದರು. ನಾಯಕನಾದುದಕ್ಕೆ ವೀಳ್ಯದ ಎಲೆ ಫಲತಾಂಬೂಲ ಕೊಟ್ಟು ಅವನನ್ನು ಆಯ್ಕೆ ಮಾಡುತ್ತಿದ್ದರು. ಇಂತಹ ಆಯ್ಕೆಯಲ್ಲಿ ಆ ಕುಲದ ಸ್ತ್ರೀಯರು ಮುಕ್ತವಾಗಿ ಭಾಗವಹಿಸಿ ಅವರ ಬಹುಮತವನ್ನು ಸೂಚಿಸುವಂತಹ ಸ್ವಾತಂತ್ರ ಮಹಿಳೆಯರಿಗಿತ್ತು.

ಹೀಗೆ ಆಯ್ಕೆಯಾದ ವ್ಯಕ್ತಿ ಸಮುದಾಯದಲ್ಲಿ ಯಾರಿಗಾದರೂ ಕಷ್ಟ ಬಂದರೆ, ಯಾರಾದರೂ ಸಾವಿಗೀಡಾದರೆ ಅದು ತನ್ನ ಕಷ್ಟವೆಂಬಂತೆ ಭಾವಿಸಿ ಮುಂದೆ ನಿಂತು ಸಂಪ್ರದಾಯವನ್ನು ಪಾಲಿಸಿ ಬಂದೊದಗಿದ ಕಷ್ಟವನ್ನು ಪರಿಹರಿಸುತ್ತಿದ್ದ. ಅಲ್ಲದೆ ಹಬ್ಬ ಹರಿದಿನಗಳಲ್ಲಿ ನಾಯಕನ ಪಾತ್ರ ಬಹು ವಿಶಿಷ್ಟತೆಯಿಂದ ಕೂಡಿತ್ತು. ಕುಲದ ಇತರ ಸದಸ್ಯರಿಗೆ ಕೆಲಸಗಳನ್ನು ಹಂಚುತ್ತಿದ್ದ. ನಾಯಕನಾದಂತಹ ವ್ಯಕ್ತಿಯು ಊರಿನ ಬೇರೆ ಜನಾಂಗದವರೊಂದಿಗೆ ಮಾತುಕತೆ ನಡೆಸಿ ತಮ್ಮ ಕೇರಿಯ ಹಬ್ಬಕ್ಕೆ ಅವರನ್ನು ಆಹ್ವಾನಿಸುತ್ತಿದ್ದ. ಹೀಗೆ ಯಾರಿಗೂ ಮೋಸವಾಗದಂತೆ ಹಬ್ಬದ ಕಾರ್ಯವನ್ನು ಯಶಸ್ವಿಗೊಳಿಸುತ್ತಿದ್ದ.

ಈ ಕುಲದಲ್ಲಿ ಯಾರಾದರೂ ಸಾವಿಗೀಡಾದರೆ ನಾಯಕನಾದವನು ಬಂದು ಸತ್ತ ವ್ಯಕ್ತಿಯ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಲು ಯಾರನ್ನಾದರೂ ಕಳಿಸಿ ಶವಸಂಸ್ಕಾರಕ್ಕೆ ಸಿದ್ಧ ಮಾಡುತ್ತಿದ್ದ. ಹೊಕ್ಕೆ ಸಂಪ್ರದಾಯದಂತೆ ಸ್ನಾನ ಮಾಡಿಸಿ ಹೊಸಬಟ್ಟೆ, ಹೊಸ ಮಡಿಕೆ ತಂದು ಸಂಸ್ಕಾರದ ಕಾರ್ಯವನ್ನು ಮುಗಿಸುತ್ತಿದ್ದರು. ಅನಂತರ ಪ್ರತ್ಯೇಕವಾದ ಸ್ಮಶಾನಕ್ಕೆ ಕೊಂಡೊಯ್ದು ಹೆಣವನ್ನು ಹೂತು ಬಂದು ಸೇರಿದ ಕುಲದ ಜನರಿಗೆ ತಿಥಿಯ ದಿನವನ್ನು ನಿಗದಿ ಮಾಡಿ ಆ ದಿನ ಎಲ್ಲರು ಬಂದು ಸೇರಬೇಕೆಂದು ಕಟ್ಟಪ್ಪಣೆ ಮಾಡುತ್ತಿದ್ದ. ಹೀಗೆ ಸತ್ತ ವ್ಯಕ್ತಿಗೆ ಸತ್ತ ದಿನದಿಂದ ಮೂರನೇ ದಿನಕ್ಕೆ “ಹಾಲು” ಎಂದು, ಹನ್ನೆರಡು ದಿನಕ್ಕೆ ತಿಥಿ ಎಂದು ನಿಗದಿ ಮಾಡುತ್ತಿದ್ದರು. ತಿಥಿಗೆ ಮಾಂಸಹಾರದ ಊಟವನ್ನು ಮಾಡುವ ಸಂಪ್ರದಾಯ ಇವರದು. ಆ ದಿನ ಹೆಣವನ್ನು ಹೂತ್ತವರನ್ನು ಸಂಪ್ರದಾಯದಂತೆ “ಒನಕೆ”ಯ ಮೇಲೆ ಸಾಲಾಗಿ ಕುಳಿಸಿ ಉತ್ತರ ದಕ್ಷಿಣಾಭಿಮುಖವಾಗಿ ಅವರಿಗೆ ಹೊಳ್ಳೆಣ್ಣೆ ತೆಲೆಗೆ ಹಚ್ಚಿ, ಸೀಗೆಕಾಯಿ ಮೊದಲಾದವುದನ್ನು ತಲೆಗೆ ಹಚ್ಚಿ ಸ್ನಾನ ಮಾಡಿಸಿ ಊಟಕ್ಕೆ ಇಡುತ್ತಿದ್ದರು.

ಹೀಗೆ ಊಟ ಈ ನಾಲ್ಕು ಜನ ಮಾಡುತ್ತಿದ್ದರೆ ಇನ್ನುಳಿದ ಮನೆಯ ಸದಸ್ಯರು ಹೆಣವನ್ನು ಹೂತಂತಹ ಸ್ಥಳಕ್ಕೆ ಹೋಗಿ ಸತ್ತ ವ್ಯಕ್ತಿಗೆ ಇಷ್ಟವಾದಂತಹ ವಸ್ತುಗಳನ್ನು ಇಟ್ಟು ಅದನ್ನು ಕಾಗೆ ಮುಟ್ಟುವವರೆಗೂ ಅಲ್ಲೇ ಇದ್ದು ಮತ್ತೆ ಮನೆಗೆ ಬರುತ್ತಿದ್ದರು. ಹಾಗೆ ಬರುತ್ತಿರುವಂತಹ ವ್ಯಕ್ತಿಗಳಿಗೆ ಈ ನಾಲ್ಕು ಜನ ಎದುರಾಗಿ ನಿಮ್ಮ ಸಾಮ್ರಾಜ್ಯ ಹೇಗಿದೆ? ಮಳೆ, ಬೆಳೆ ಚೆನ್ನಾಗಿದೆಯಾ? ಎಂದು ಪ್ರಶ್ನೆ ಮಾಡುತ್ತಿದ್ದರು. ಅವರು ಈ ಪ್ರಶ್ನೆಗೆ ಉತ್ತರಿಸಿ ಅದೇ ಪ್ರಶ್ನೆಯನ್ನು ಮತ್ತೆ ತಮ್ಮ ಎದುರಿರುವವರಿಗೆ ಕೇಳುತ್ತಿದ್ದರು. ಇವರ ಈ ತಿಥಿಯ ಕಾರ್ಯಕ್ರಮದಲ್ಲಿ ಮಾಂಸ ಮತ್ತು ಮದ್ಯ ಕಡ್ಡಾಯವಾಗಿತ್ತು. ಹೀಗೆ ತಿಥಿಯ ಕಾರ್ಯಕ್ರಮವನ್ನು ಮುಗಿಸುತ್ತಿದ್ದರು.

ಈ ಕುಲದಲ್ಲಿ ಸುಡುವುದು ಅಪರೂಪವಾಗಿತ್ತು. ಯಾರೇ ಸಾಯಲಿ ಅವರನ್ನು ಹೂಳುತ್ತಿದ್ದರು. ಸುಡುವಂತಹ ವ್ಯಕ್ತಿಯೆಂದರೆ ಅವನಿಗೆ “ದೊಡ್ಡ ರೋಗ” ಇದ್ದರೆ ಮಾತ್ರ ಅಂತಹ ವ್ಯಕ್ತಿಯನ್ನು ಸುಡುತ್ತಿದ್ದರು. ಮತ್ತೆ ಮದುವೆಯಾಗದ ವ್ಯಕ್ತಿ ಏನಾದರೂ ಸತ್ತರೆ ಅಂತಹ ವ್ಯಕ್ತಿಗೆ ಒಂಟಿ ಕೋಲಿಗೆ ಎರಡು ಕಾಲು ಮತ್ತು ಕೈಯನ್ನು ಕಟ್ಟಿ “ಒಂಟಿ ಕೋಲಿನ ಪಟ್ಟ”ದಿಂದ ಅವನನ್ನು ಸ್ಮಶಾನಕ್ಕೆ ಕೊಂಡೊಯುತ್ತಿದ್ದರು. ಅಂತಹ ವ್ಯಕ್ತಿಗೆ ಯಾವುದೇ ತೆರನಾದಂತಹ ತಿಥಿ, ಹಾಲು ಏನು ಮಾಡುತ್ತಿರಲಿಲ್ಲ. ಈ ಪದ್ಧತಿಯು ಅವನಿಗೆ “ತಿಥಿ” ಮಾಡಿದರೆ ಮುಕ್ತಿ ಸಿಗುವುದಿಲ್ಲ ಎಂಬ ನಂಬಿಕೆ ಅವರಲ್ಲಿ.

ಇಂತಹ ವಿಶಿಷ್ಟ ಸಂಪ್ರದಾಯದ ಈ ಸಾವಿನ ಆಚರಣೆಯಲ್ಲಿ ಮೂರನೆಯ ದಿನ ತಿಥಿ ಮತ್ತು ಹನ್ನೆರಡನೆ ದಿನದ ತಿಥಿಗೆ ಸ್ಮಶಾನಕ್ಕೆ ಪುರುಷರು ಹೋಗಲು ಅವಕಾಶವಿರುತ್ತಿರಲಿಲ್ಲ. ಮಹಿಳೆಯರು ಮಕ್ಕಳು ಮತ್ತು ಮುದುಕರು ಮಾತ್ರ ಸ್ಮಶಾನಕ್ಕೆ ಹೋಗಿ ಸಂಪ್ರದಾಯಗಳನ್ನು ಮುಗಿಸಿಕೊಂಡು ಬರುತ್ತಿದ್ದರು.

ಈ ತೆರನಾಗಿ ಮಹಿಳೆಯರು ಸ್ಮಶಾನಕ್ಕೆ ಹೋಗಿ ಬರುವುದು ಪೂರ್ವದಲ್ಲಿ ಇರಲಿಲ್ಲ (ಬೇರೆ ಜನಾಂಗಗಳಲ್ಲಿ) ಬಹುಶಃ ಮಾದಿಗರಿಂದ ಈ ನಿಯಮವನ್ನು ಇನ್ನಿತರ ಜನಾಂಗದವರು ಕಲಿತಿರಬಹುದು. ಹೀಗೆ ಒಂದು ವಿಶಿಷ್ಟ ರೀತಿಯ ಸಾವಿನ ಆಚರಣೆ ಇವರಲ್ಲಿದೆ.

ಇಂತಹ ನಾಯಕತ್ವದ ಕುರುಹನ್ನು ಅಂದಿನ ಕಾಲಘಟ್ಟದಲ್ಲಿ ಬೇರೆ ಜನಾಂಗದಲ್ಲಿ ಕಂಡರೂ ಸಹ ಇಷ್ಟೊಂದು ಕ್ರಮಬದ್ಧವಾಗಿ ನಡೆಯುತ್ತಿದ್ದುದನ್ನು ಎಲ್ಲಿ ನೋಡಲು ಸಿಗುವುದಿಲ್ಲ. ಬೇರೆ ಜನಾಂಗದಲ್ಲಿ ಮಹಿಳೆ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಹೊಂದುವುದು ಅಪರಾಧವಾಗಿತ್ತು. ಆದರೆ ಮಾದಿಗ ಸಮುದಾಯದಲ್ಲಿ ಸ್ತ್ರೀಯು ಮುಕ್ತವಾಗಿ ಬದುಕುತ್ತಿರುವುದನ್ನು ಕಾಣಬಹುದು.

ಅಷ್ಟೊಂದು ಮುಕ್ತ ವಾತಾವರಣ ಈ ಕುಲ ಅವರಿಗೆ ಕಲ್ಪಿಸಿತ್ತು. ಇಲ್ಲಿ ಮಹಿಳೆಯು ತನ್ನ ಕುಲಕುಟುಂಬದ ಕಷ್ಟ-ಸುಖಗಳನ್ನು ಕುಲದ ಪಂಚಾಯಿತಿಯ ಮುಂದೆ ಇಟ್ಟು ತನಗಾದ ಕಷ್ಟಕ್ಕೆ ಪರಿಹಾರವನ್ನು ಕೇಳುವಂತಹ ಅಧಿಕಾರ ಹೊಂದಿದ್ದಳು. ಇಂತಹ ಆಯ್ಕೆ ಮಾಡುವ ಸ್ವಾತಂತ್ರ ಮತ್ತು ನ್ಯಾಯ ಕೇಳುವ ದಿಟ್ಟತನದ ಮುಕ್ತ ಅವಕಾಶ ಇತರ ಯಾವ ಜನಾಂಗದ ಮಹಿಳೆಗೂ ಇರಲಿಲ್ಲ. ಇಂತಹ ಮಾದಿಗ ಕುಲದೊಳಗಿನ ಆಡಳಿತ ವ್ಯವಸ್ಥೆ ಸ್ವರೂಪವನ್ನು ಗಮನಿಸಿದರೆ ಮೂಲಭೂತವಾಗಿ ವಂಶಶುದ್ಧಿಯನ್ನು ಕಾಪಾಡುವುದಕ್ಕಾಗಿಯೇ ರೂಪುಗೊಂಡಿರುವಂತಿದೆ. ಹೀಗೆ ರೂಪುಗೊಂಡ ವ್ಯವಸ್ಥೆಯೇ ಇತರ ಸಮುದಾಯದ ಬದುಕಿನ ಉಳಿದೆಲ್ಲ ಸ್ತರಗಳಿಗೂ ಹಬ್ಬಿರುವಂತಿದೆ ಎಂದು ಖ್ಯಾತ ಸಂಸ್ಕೃತಿ ಚಿಂತಕರಾದ ಕೆ.ರಾಮಯ್ಯನವರು ತಮ್ಮ ಸಿಂದ್ ಮಾದಿಗರ ಸಂಸ್ಕೃತಿಯಲ್ಲಿ ಅಭಿಪ್ರಾಯಪಡುತ್ತಾರೆ. ಒಂದು ತೆರನಾಗಿ ನೋಡಿದರೆ ಮಾದಿಗರ ಒಳಾಡಳಿತ ಪದ್ಧತಿಯಲ್ಲಿನ ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳನ್ನು ಗಮನಿಸಿದರೆ ಕೆಲವೊಂದು ಬದಲಾವಣೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲವೂ ಸಿಂದ್‌ಮಾದಿಗರಲ್ಲಿ, ಮಾಸ್ತಿಕರಲ್ಲಿ ಕಂಡುಬರುತ್ತದೆ. ಹೀಗೆ ಹಬ್ಬಿದಂತಹ ಈ ಮಾದಿಗ ಕುಲದ ಪದ್ಧತಿಯನ್ನೇ ಇತರ ಜನಾಂಗದ ಸಮುದಾಯಗಳು ವಿವಿಧ ಕಾಲ ಘಟ್ಟಗಳಲ್ಲಿ ಅನುಸರಿಸಿಕೊಂಡು ಇಲ್ಲಿಯವರೆಗೂ ಬಂದಿರಬಹುದು.

ಹೀಗೆ ನಾಯಕನಾದ ಈ ಸಮುದಾಯದ ವ್ಯಕ್ತಿಯು ಕುಲದ ಯಾವ ವ್ಯಕ್ತಿಗೆ ಕುಲದ ಯಾವ ವ್ಯಕ್ತಿಯೊಂದಿಗೂ ಸಂಪರ್ಕಿಸುವ ಹಾಗಿರಲಿಲ್ಲ. ಸಮುದಾಯದೊಂದಿಗಿನ ಎಲ್ಲಾ ಬಾಹ್ಯ ಮತ್ತು ಆಂತರಿಕ ಸಂಬಂಧಗಳಿಂದ ವಂಚಿತನಾಗುತ್ತಿದ್ದ. ಮುಂಜಿ, ಮದುವೆ, ಹಬ್ಬ-ಹರಿದಿನ ಮತ್ತು ಸಾವು ಮೊದಲಾದ ಆಚರಣೆಗಳಲ್ಲಿ ಅಂತಹ ಹೊರಗುಳಿದ ವ್ಯಕ್ತಿಯ ಪಾಲ್ಗೊಳ್ಳುವಿಕೆಗೆ ನಿಷೇಧವಿರುತ್ತಿತ್ತು.

ಹೀಗೆ ಕುಲದ ವ್ಯಕ್ತಿಯನ್ನು ಮಾಡಿದಂತಹ ಕಾರ್ಯದ ಮೇಲೆ ಸಮುದಾಯದಿಂದ ಹೊರಹಾಕುವುದು, ದಂಡ ವಿಧಿಸುವುದು, ಶಿಕ್ಷೆಗೆ ಗುರಿಪಡಿಸುವುದು ನಿಗದಿ ಮಾಡುವ ಹಕ್ಕು, ತಪ್ಪನ್ನು ಸರಿಪಡಿಸಿ ಕುಲದ ಜತೆ ಸೇರಿಕೊಳ್ಳುವ ಅಧಿಕಾರ ಎಲ್ಲವೂ ಆ ಕುಲದ ನಾಯಕನಿಗೆ ಇರುತ್ತಿತ್ತು. ಈ ಕುಲದಲ್ಲಿ ತಪ್ಪು ಮಾಡಿ ಶಿಕ್ಷೆಯನ್ನು ಅನುಭವಿಸಿ, ದಂಡತೆತ್ತಂತಹ ವ್ಯಕ್ತಿಯನ್ನು ಕುಲದ ಒಳಗೆ ಸೇರಿಸಿಕೊಳ್ಳುವಂತಹ ಪ್ರಕ್ರಿಯೆ ವಿಶಿಷ್ಟವಾಗಿತ್ತು.

ಉದಾ: ಈ ಕುಲದ ಹೆಣ್ಣು ಬೇರೆ ಕುಲದ ವ್ಯಕ್ತಿಯೊಂದಿಗೆ ಮನೆಬಿಟ್ಟು ಹೋಗಿ ಮದುವೆಯಾದರೆ ಅಥವಾ ಬೇರೆ ಕುಲದ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಸಿಕ್ಕಿಬಿದ್ದರೆ ಅಂತಹ ವ್ಯಕ್ತಿಗೆ ಶಿಕ್ಷೆ ವಿಧಿಸಿ ಕುಲದಿಂದ ಹೊರಗಿರಿಸುತ್ತಿದ್ದರು. ಈ ಹೊರಗಿಡುವಂತಹದ್ದು ಇಂತಿಷ್ಟು ವರ್ಷಗಳು ಮಾತ್ರ ಸೀಮಿತವಾಗಿತ್ತು. ಆ ನಂತರ ಆ ವ್ಯಕ್ತಿಗೆ ದಂಡ ವಿಧಿಸಿ ಆ ವ್ಯಕ್ತಿಯನ್ನು ಪಂಚಾಯಿತಿಗೆ ಕರೆತಂದು ನಾಯಕನ ಸಮ್ಮುಖದಲ್ಲಿ ಚಿನ್ನದ ತುಣುಕಿನಿಂದ ತಪ್ಪು ಮಾಡಿದ ವ್ಯಕ್ತಿಯ ನಾಲಿಗೆಯನ್ನು ಸ್ವಲ್ಪವೇ ಸುಟ್ಟು ಆ ನಂತರ ಕುಲದೊಳಗೆ ಸೇರಿಸಿಕೊಳ್ಳುತ್ತಿದ್ದರು.

ಹೀಗೆ ಬಂಗಾರದಿಂದ ನಾಲಿಗೆ ಸುಡುವಂತಹ, ಪ್ರಕ್ರಿಯೆಯು ಬಹುಶಃ ಹೆಣ್ಣನ್ನು ಪವಿತ್ರೀಕರಿಸುವುದರ ದೋತ್ಯಕವಾಗಿರಬಹುದು. ಇದಕ್ಕೆ ಕಾರಣ ಇವರಲ್ಲಿ ರೂಢಿಗತವಾಗಿ ನಡೆದುಕೊಂಡು ಬಂದಿರತಕ್ಕ “ಅಗ್ನಿ ಸಂಪ್ರದಾಯ” ಮತ್ತು “ಜಲ ಸಂಪ್ರದಾಯ”ವೇ ಕಾರಣ. ಏಕೆಂದರೆ ಇವರ ಶಕ್ತಿ ದೇವತೆಗಳಲ್ಲಿ ಒಂದಾದ ಗಂಗಮ್ಮ ಜಲಸಂಪ್ರದಾಯಕ್ಕೆ ಉದಾಹರಣೆ. ಇಲ್ಲಿ ಇವರು ಬೆಟ್ಟ, ಗುಡ್ಡ, ಕಾಡು, ನದಿ, ಝರಿ, ಗಿಡ, ಮರಗಳನ್ನೇ ಸಮುದಾಯ ಚಿಹ್ಹೆಯಾಗಿ ಬಳಸುತ್ತಿದ್ದುದು ಈ ಹಿಂದೆ ತಿಳಿಸಿದ್ದೇನೆ. ಹಾಗೆ ಈ ಜಲಸಂಪ್ರದಾಯವು ಸಹ ರೂಢಿತಗವಾಗಿ ಇವರ ಸಮುದಾಯದೊಳಗೆ ಪ್ರವೇಶಿಸಿರುವುದನ್ನು ಕಾಣಬಹುದು. ಇಡೀ ದೇಶವೇ ಇವರನ್ನು ನೀರು ಮುಟ್ಟಿಸದಂತೆ ಬಹಿಷ್ಕಾರ ಮಾಡಿದಾಗ ಅದಕ್ಕೆ ಹೆದರದೆ ಇವರು ನಮ್ಮೊಳಗೆ ನೀರನ್ನು ಬಂಧಿಸಿಕೊಂಡಿದ್ದೇವೆ ಎಂದು ಗಂಗಮ್ಮನ ಕುರಿತಾಗಿ ಹೇಳುತ್ತಾರೆ. ಇದರ ಕುರುಹಾಗಿ ಈ ಸಮುದಾಯದವರು “ಗಂಗ ಪಂಡಗ” ಗಂಗ ಜಾತಕ (ಗಂಗೆ ಹಬ್ಬ, ಗಂಗೆ ಜಾತ್ರೆ) ಮಾಡುತ್ತಾರೆ. ಇದು ಜಲಕ್ಕೆ ಸಂಬಂಧಿಸಿದರೆ ಇನ್ನು ಬಳೆದಂತೆ ಅಗ್ನಿಯನ್ನು ಇವರು ಸಮುದಾಯದೊಳಕ್ಕೆ ಬಿಟ್ಟುಕೊಳ್ಳುತ್ತಿದ್ದದ್ದು ಈ ತೆರನಾದಂತಹ “ಪವಿತ್ರೀಕರಿಸಿ”ಕೊಳ್ಳುವಂತಹ ಸಂದರ್ಭದಲ್ಲಿ ಇದು ಪುರಾಣಗಳಲ್ಲಿ ಈ ಅಗ್ನಿ ಸಂಪ್ರದಾಯದ ಸೆಳಕಿರುವುದನ್ನು ಕಾಣಬಹುದು.

“ಸೀತೆಯು ರಾವಣನಲ್ಲಿ ಬಂಧಿಯಾಗಿದ್ದಂತಹ ಸಂದರ್ಭದಲ್ಲಿ ಶ್ರೀರಾಮ ಕಪಿಸೈನ್ಯದ ಸಹಾಯದಿಂದ ರಾವಣನ ಮೇಲೆ ಯುದ್ಧ ಸಾರಿ ಅವರನ್ನು ಯುದ್ಧದಲ್ಲಿ ಸೋಲಿಸಿ, ಮಣಿಸಿ ಕೊನೆಗೆ ಆಕೆಯನ್ನು ರಾಜ್ಯಕ್ಕೆ ಕರೆತಂದ ನಂತರ ಅಗಸನೊಬ್ಬನ ಕ್ಷುಲ್ಲಕ ಮಾತಿಗೆ ಅವಳನ್ನು ಅಗ್ನಿಯಲ್ಲಿ ಸ್ನಾನ ಮಾಡಿಸಿ ಶುದ್ಧಿಯಾಗಿರಬೇಕೆಂದು ಸೂಚಿಸುತ್ತಾನೆ. ಈ ತೆರನಾಗಿ ಸೀತೆಯು ಪವಿತ್ರಗೊಂಡ ನಂತರ ಹೆಂಡತಿಯಾಗಿ ಶ್ರೀರಾಮ ಸೀತೆಯನ್ನು ಸ್ವೀಕರಿಸುತ್ತಾನೆ”

ಬಹುಶಃ ಇದೇ ಪುರಾಣದ ಪ್ರತೀಕವನ್ನು ಈ ಸಮುದಾಯದವರು ಮುಂದುವರೆಸಿಕೊಂಡು ಬಂದು ಹೆಣ್ಣನ್ನು ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಅಲಂಕರಿಸಲು ಅವಳನ್ನು ಅಗ್ನಿಯಲ್ಲಿ ಪವಿತ್ರೀಕರಿಸಿ ಸಮುದಾಯದಲ್ಲಿ ಸೇರಿಸಿಕೊಳ್ಳುವ ಪರಿಪಾಠ ಇವರು ಪುರಾಣಗಳಿಂದ ಕಲಿತರಬಹುದು. ಏಕೆಂದರೆ ಈ ಪುರಾಣ, ಮಹಾಕಾವ್ಯಗಳನ್ನು ಜನರಿಗೆ ಕಾಲದಿಂದ ಕಾಲಕ್ಕೆ ಈ ಸಮುದಾಯದವರೆ ಗೆಜ್ಜೆ ಕಟ್ಟಿ ಕುಣಿದು ಹೇಳುತ್ತಿದ್ದರಿಂದ ಅವುಗಳನ್ನು ಸ್ವತಃ ಆಚರಣೆಗೆ ತಂದಿರಬಹುದು. ಅದು ಬರಬರುತ್ತ ಇವರ ಜೀವನದ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಹೋಗಿರಬಹುದು.

ಹೀಗೆ ಅಪವಿತ್ರಕ್ಕೆ ಒಳಗಾದ ಹೆಣ್ಣನ್ನು “ಅಗ್ನಿ”ಯ ಮುಖಾಂತರ ಶುದ್ಧಿಗೊಳಿಸಿ ಆ ನಂತರ “ಜಲ”ದಿಂದ ಅವಳಿಗೆ ಸ್ನಾನ ಮಾಡಿಸಿ ಸಮುದಾಯದೊಳಗೆ ಬಿಟ್ಟುಕೊಳ್ಳುವ ಪರಿಪಾಠ ಇವರಲ್ಲಿ ಮೊದಲಾಗಿ ಅನಂತರದಲ್ಲಿ ಸಮಾಜದ ಎಲ್ಲಾ ಜಾತಿಗಳಿಗೂ ಹಬ್ಬಿರುವುದನ್ನು ಕಾಣಬಹುದು. ಇಂತಹ ಈ ಸಮುದಾಯವು ಹೆಣ್ಣನ್ನು ಶುದ್ಧೀಕರಿಸಿ ನಂತರ ತನ್ನ ಸಮುದಾಯದೊಳಕ್ಕೆ ಸೇರಿಸಿಕೊಳ್ಳುವುದು “ಹೆಣ್ಣು” ಒಂದು ಪವಿತ್ರವೆಂದು. ಆದರೆ ಬೇರೆ ಸಂಸ್ಕೃತಿಯ ಜನಸಮುದಾಯವು ಹೆಣ್ಣನ್ನು ಕೀಳಾಗಿ ಕಾಣುತ್ತಾರೆ. ಕಾರಣ ಅವಳು ಧಾರ್ಮಿಕವಾಗಿ, ಸಾಮಾಜಿಕವಾಗಿ ಅನರ್ಹಳೆಂದು. ಮಕ್ಕಳನ್ನು ಹೆತ್ತು ಸಾಕುವಂತಹ ಉಪಕರಣವೆಂಬುದು ಅವರ ಭಾವನೆ. ಅದಕ್ಕೆ ಮುಟ್ಟಾದ ಹೆಣ್ಣನ್ನು ವೈದಿಕ ಸಂಸ್ಕೃತಿ, ಚಾಂಡಾಲನಿಗೆ ಸಮನಾದ ಅಸ್ಪೃಶ್ಯಳೆಂದು ತಿಳಿಯುತ್ತದೆ. ಜಾತ ರಜಸ್ವಲಾ ಮೃತ ಉಚ್ಚಿಷ್ಟ ಕುಲಿ ಮೈಲಿಗೆಯ ಈ ಐದು ಸಂದರ್ಭಗಳಲ್ಲಿ ಮೊದಲೆರಡು ಹೆಣ್ಣಿಗೆ ಸಂಬಂಧಪಟ್ಟವು. ಪ್ರತಿಷ್ಠವೆಂಬ ಹೆಸರು ಪಡೆದ ಬ್ರಾಹ್ಮಣ ಸಂಸ್ಕೃತಿಯನ್ನು ಅನುಸರಿಸುವ ಮೂಲಕ ಶ್ರೇಷ್ಠವಾಗುತ್ತೇವೆಂದು ತಮ್ಮನ್ನು ಅನೇಕ ಸಮುದಾಯಗಳು ಬದಲಿಸಿಕೊಂಡವು. ಅವು ಸಂಸ್ಕೃತೀಕರಣದ ಜತೆ ಮುಖ್ಯ ದೃಷ್ಟಿಕೋನದಲ್ಲಿ ಸ್ತ್ರೀನಿಕರಣಿಯದು ಒಂದು. “ಅವೈದಿಕ” ಭೌತಮದೀ ದರ್ಶನಗಳಲ್ಲಿ “ದ್ರಾವಿಡ” ಸಂಸ್ಕೃತಿಗಳಲ್ಲಿ, ಜನನ ಮತ್ತು ಋತುಸ್ರಾವಗಳು ಫಲವಂತಿಕೆಯ ಪವಿತ್ರ ಸಂದರ್ಭಗಳು. ಕೃಷಿ ಸಂಸ್ಕೃತಿಗಳಲ್ಲಿ ಮುಟ್ಟಿನ ರಕ್ತವನ್ನು ಹೊಲಗಳಿಗೆ ಉಗ್ಗುವ ಮೂಲಕ ಸಮೃದ್ಧಿಯನ್ನು ಹಾರೈಸಲಾಗುತ್ತದೆ. ಭೂಮಿಯಿಂದ ಸಸ್ಯ ಹುಟ್ಟುವುದು ಮತ್ತು ಯೋನಿಯಿಂದ ಶಿಶು ಜನಿಸುವುದು ಒಂದೇ ಆಗಿರುವುದರಿಂದ, ಕೃಷಿ ಮೂಲಕ ಸಂಸ್ಕೃತಿಗಳು ಹೆಣ್ಣನ್ನು ಮೈಲಿಗೆಯೆಂದು ತಿಳಿಯಲಿಲ್ಲ ಎಂದು ರಹಮತ್‌ಕೃಷಿ ಮೂಲ ಸಂಸ್ಕೃತಿಗಳಲ್ಲಿನ ಹೆಣ್ಣಿನ ಸ್ಥಾನಮಾನದ ಕುರಿತು ಅಭಿಪ್ರಾಯಪಡುತ್ತಾರೆ.

ಇಲ್ಲಿ ಕೃಷಿ ಮೂಲ ಅಥವಾ ಕೃಷಿ ಆಧಾರಿತವೆಂದರೆ ತಳಸಮುದಾಯದ ಹೊಲೆಯ, ಮಾದಗರೆ. ಏಕೆಂದರೆ ಉನ್ನತ ಜಾತಿಗೆ ಎಲ್ಲಾ ವಿಧದಲ್ಲಿಯು ಅದರ ಬದುಕಿನ ನಿರ್ವಹಣೆಗಾಗಿ ಇವರು ಜೀವನವನ್ನು ಸವೆಸಬೇಕಾಗಿತ್ತು. ಇಂತಹ ಸವೆಸುವಿಕೆಯು ತಳವರ್ಗದವರಿಗೆ ಸಾಮಾಜಿಕವಾಗಿ ವಿಧಿಸಿರುವಂತಹ ಶಿಕ್ಷೆಯಾಗಿತ್ತು. ಇದೆಲ್ಲದರ ನಡುವೆಯು ಸಹ ಈ ಸಮುದಾಯ ಚರಿತ್ರಿಕೆತೆಯನ್ನು ನಿರ್ಮಿಸಲು ಹೆಣಗಿತು ಎಂದರೆ ಅದು ಆ ಸಮುದಾಯದೊಳಗಿನ ಜೀವಂತಿಕೆಯ, ಅನನ್ಯತೆಯ ಮತ್ತು ಛಲದ ಕುರುಹು ಎಂದರೆ ತಪ್ಪಾಗಲಾರದು.

ಹೀಗೆ ಮಾದಿಗರು “ಜಲ ಸಂಸ್ಕೃತಿ” ಮತ್ತು “ಅಗ್ನಿ ಸಂಸ್ಕೃತಿ”ಯನ್ನು ಜೊತೆ-ಜೊತೆಯಲ್ಲಿಯೇ ಕರೆದುಕೊಂಡು ಬರುತ್ತೆ. ಆ ಎರಡನ್ನು ಮನುಷ್ಯನನ್ನು ಶುದ್ಧೀಕರಿಸುವಂತಹ ಸಂಕೇತಗಳೆಂದು, ಮುಖ್ಯವಾಗಿ ಸ್ತ್ರೀಯನ್ನು ಪವಿತ್ರೀಕರಿಸುವಂತಹ ರೂಪಕಗಳೆಂದು ಭಾವಿಸಿಕೊಂಡು ಬಂದವರು. ಇವರ ಈ ಅನುಸರಿಸುವಿಕೆಯು, ಪಾಲಿಸುವಿಕೆಯೇ ಈ ಎರಡೂ ಸಂಸ್ಕೃತಿಗಳು ತನ್ನ ಜೀವನವನ್ನು ಈಗಲೂ ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿ ನಿಂತಿರುವುದನ್ನು ನಾವಿಂದು ಅನೇಕ ಸಮುದಾಯಗಳಲ್ಲಿ ಕಾಣಬಹುದು. ಇದು ಇತರೆ ಸಮುದಾಯಗಳಿಗೆ ಕಾಲಾನಂತರದಲ್ಲಿ ಏಣಿ-ಶ್ರೇಣಿಯ ಸಾಮಾಜಿಕತೆಯಿಂದ ಪಲ್ಲಟವಾಗಿರುವುದರ ಅನುಮಾನಗಳಿವೆ. ಏಕೆಂದರೆ ಪ್ರಧಾನ ಸಂಸ್ಕೃತಿಯು ಯಾವಾಗಲೂ ಸಮಾಜದಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವಂತಹ ಯತ್ನದಲ್ಲಿತ್ತು. ಅದಕ್ಕಾಗಿ ಅದು ಪವಿತ್ರವಾದಂತಹ ಆಚರಣೆಗಳನ್ನು, ಸಿದ್ಧಾಂತಗಳನ್ನು ತಾನು ವಶಪಡಿಸಿಕೊಂಡು ಅದು ತನ್ನಸ್ಥಾನ ಮಾನವನ್ನು ಹೆಚ್ಚಿಸಿಕೊಂಡು ಬಂದಿರುವುದನ್ನು ನಾವು ಗತಿಸಿದ ಚರಿತ್ರೆಯೊಳಗೆ ಕಾಣಬಹುದು. ಅದರಂತೆ ಈ ಎರಡೂ ಪ್ರಮುಖವಾದ ಸಂಸ್ಕೃತಿಗಳು ಕಾಲಘಟ್ಟದ ಮಡುಕುಗಳಲ್ಲಿ ಪ್ರಧಾನ ಸಂಸ್ಕೃತಿಯ ಒಡಲಿಗೆ ಬಂದು ಬಿದ್ದಿರಬಹುದು.

ಇಂತಹ ಈ ಎರಡೂ ಸಂಸ್ಕೃತಿಗಳನ್ನು ಆಯಾ ಸಮುದಾಯದವರು ಅದರದೆ ಆದಂತಹ ರೀತಿ-ನೀತಿಗಳಿಂದ ಆಚರಿಸುತ್ತಾರೆ. ತಳಸಮುದಾಯದ ಮಾದಿಗರು ಈ ಸಂಸ್ಕೃತಿಗಳ ಆಚರಣೆಯಲ್ಲಿ ಹೆಣ್ಣನ್ನು ಪವಿತ್ರ ದೇವತೆಯಂತೆ ಭಾವಿಸಿ ಅವಳನ್ನು ಪೂಜಿಸುವ ಸಲುವಾಗಿ ಅಲ್ಲಿ ಮಾಂಸ, ಮದ್ಯವನ್ನು ಪೂಜಾ ಸಾಮಗ್ರಿಗಳಂತೆ ತಂದು ಆದಿಯಿಂದ ಬಂದಂತಹ ಶಾಕ್ತಾರಾಧನೆಯನ್ನು ಜೀವಂತವಾಗಿರಿಸಿಕೊಳ್ಳಲು ಹೆಣಗಾಡುತ್ತಾರೆ.

ಉದಾ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಆಚರಿಸುವಂತಹ “ಅತ್ಯಾವಾನ ಪೊಂಗಲಿ” (ಅತ್ತಮಳೆ ಹುಬ್ಬಿದ್ದು) “ಕದರಿ ಪುಣ್ಯಮಿ” (ಕದರಿ ಹುಣ್ಣಿಮೆ) ಮೊದಲಾದಹಬ್ಬಗಳಲ್ಲಿ ಮಾಂಸಾಹಾರವನ್ನು ಪ್ರಧಾನವೆಂದು ಭಾವಿಸುವುದು ಮಾದಿಗರ ನಂಬಿಕೆ. ಇಂತಹ ಶಾಕ್ತಾರಾಧನೆಯನ್ನು ಬಿಡದೆ ಪಾಲಿಸಿಕೊಂಡು ಆ ಮೂಲಕ “ಜಲ” ಮತ್ತು “ಅಗ್ನಿ” ಸಂಸ್ಕೃತಿಗೆ “ರಕ್ತ” ತರ್ಪಣವು ಒಂದು ಆಹುತಿಯಾಗಿ ಕೊಡುವುದು ನಮ್ಮ ಪದ್ಧತಿ ಎಂದು ಇಲ್ಲಿ ಇವರು ನಂಬುತ್ತಾರೆ.

ಅದರಂತೆ ಇದೇ ಸಂಸ್ಕೃತಿಯನ್ನು ಸಾಮಾಜಿಕ ಸ್ಥಿತ್ಯಂತರದಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವಂತಹ ಪ್ರಧಾನ ಕುಲದ ಇತರ ಸಮುದಾಯದವರು ಮಾಂಸವನ್ನು, ಮದ್ಯವನ್ನು ಹೊರತುಪಡಿಸಿ ಇನ್ನು ಉಳಿದಂತಹ ಎಲ್ಲಾ ವಿಧಿ ವಿಧಾನಗಳನ್ನು ಆಚರಿಸುತ್ತ ಈ ಸಂಸ್ಕೃತಿಯನ್ನು ಜೀವಂತಗೊಳಿಸಿರುವುದನ್ನು ಮೇಲ್ಕಂಡ ಜಿಲ್ಲೆಯ ನಾನಾ ಊರುಗಳಲ್ಲಿ ಕಾಣಬಹುದು.

ಉದಾ: ಮೇಲಿನ ಊರುಗಳಲ್ಲಿ ಕೆದರಿ ಹುಣ್ಣಿಮೆ ಮತ್ತು ಅತ್ತೆಮಳೆ ಬಿದ್ದಾಗ ಆಚರಿಸುವ ಹಬ್ಬಗಳಲ್ಲಿ ಪ್ರಧಾನ ಕುಲದ ಮನೆತನದವರು ಹಬ್ಬ ನಿಗದಿಯಾದ ದಿನಾಂಕಕ್ಕೆ ಹಿಂದಿನ ದಿನ ಉಪವಾಸವಿದ್ದು, ಹಬ್ಬ ಮುಗಿಯುವವರೆಗೂ ಯಾವುದೇ ಲೋಪವಾಗದಂತೆ ಶಕ್ತಿ ದೇವತೆಗಳಿಗೆ ಸಿಹಿ ತಿಂಡಿಗಳು (ತಂಬಿಟ್ಟು, ಕಜ್ಜಾಯ) ಮೊದಲಾದ ಆಹಾರ ಪದಾರ್ಥಗಳ ಮುಖಾಂತರ ಪೂಜೆಗೈಯುವುದು ಇವರಲ್ಲಿ ರೂಢಿಗತವಾಗಿ ಬಂದಂತಹ ಸಂಪ್ರದಾಯ.

ಹೀಗೆ ಸಾಗಿ ಬಂದಂತಹ ಈ ಜಲ ಮತ್ತು ಅಗ್ನಿ ಸಂಸ್ಕೃತಿಯ ಆಚರಣೆಗಳು ಪ್ರಧಾನ ಸಂಸ್ಕೃತಿಯಲ್ಲಿ ಮತ್ತು ತಳವರ್ಗದ ಸಮುದಾಯದಲ್ಲಿ ಸಸ್ಯಾಹಾರ, ಮಾಂಸಹಾರವೆಂದು ವಿಂಗಡೆಯಾಗಿರುವುದು ಬಹುಶಃ ಮಾಂಸಾಹಾರವನ್ನು ಈ ಮೊದಲು ಶ್ರೇಷ್ಠವೆಂದು ಭಾವಿಸಿ ಆನಂತರ ಸಾಮಾಜಿಕ ಸ್ಥಾನಮಾನದ ಪೈಪೋಟಿಯಲ್ಲಿ ಅದನ್ನು ಬಿಟ್ಟಂತಹ ಆಳುವ ವರ್ಗ ನಂತರದಲ್ಲಿ ಅದನ್ನು ತಳವರ್ಗಕ್ಕೆ ವರ್ಗಾಯಿಸಿ ಆ ಮುಖಾಂತರ ಆ ಸಮುದಾಯವನ್ನು ಮತ್ತಷ್ಟು “ಕನಿಷ್ಠ”ವೆಂದು ಭಾವಿಸುವುದಕ್ಕೆ ಇದನ್ನು ರೂಢಿಸಿಕೊಂಡಿರಬಹುದು.