ನಮ್ಮ ಸಾಮಾಜಿಕ ವ್ಯವಸ್ಥೆಯು ಒಂದು ಕಾಲಘಟ್ಟದಲ್ಲಿ ನಿರ್ಮಾಣವಾದಂತಹ ವ್ಯವಸ್ಥೆಯಲ್ಲ. ಅನೇಕ ಕಾಲಘಟ್ಟಗಳಲ್ಲಿ ವಿವಿಧ ಹಂತಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ನಿರ್ದೇಶಿತವಾಗುತ್ತ ಬಂದು ಪೂರ್ವಗ್ರಹಿಕೆಯೊಂದಿಗೆ ಮತ್ತು ಸ್ಥಿತ್ಯಂತರದೊಂದಿಗೆ ನಿರ್ಮಾಣವಾಗುತ್ತ ಬಂದಿರುವಂತಹದ್ದು. ಇಲ್ಲಿ ಆಳುವ ಸಂಸ್ಕೃತಿ ಮತ್ತು ತಿಳಿಸಿಕೊಳ್ಳುವ ಸಂಸ್ಕೃತಿ ಎಂಬ ಎರಡು ಪರಿಕಲ್ಪನೆಗಳನ್ನು ನಾವು ಗಮನಿಸಬಹುದು. ಆಳುವ ಸಂಸ್ಕೃತಿಯು ಯಾವಾಗಲೂ ಯಜಮಾನ್ಯ ಸಂಸ್ಕೃತಿಯಾಗಿಯೇ ಉಳಿದರೆ ಆಳಿಸಿಕೊಳ್ಳುವಂತಹ ಸಂಸ್ಕೃತಿಯು (ಪುಟ ೧. ಸಿಂದ್‌ಮಾದಿಗರ ಸಂಸ್ಕೃತಿ-ಕೋಟಿಗಾನಹಳ್ಳಿ ರಾಮಯ್ಯ) ಪ್ರಧಾನ ಸಂಸ್ಕೃತಿಯ ಪ್ರಾಬಲ್ಯದಡಿ ತನ್ನತನ ಕಾಪಾಡಿಕೊಳ್ಳಲು ಶತಾಯಗತಾಯವಾಗಿ ಹೆಣಗುತ್ತಿರುವ ಸಂಸ್ಕೃತಿಯಾಗಿಯೇ ತನ್ನ ತನವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಉಳಿವಿಗೆ ಅಗತ್ಯವಾದ ಒಳನೋಟಗಳನ್ನು ಒದಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಸ್ಕೃತಿಯಾಗಿ ಹೊಸ ರೂಪುರೇಷೆಗಳನ್ನು ಕಟ್ಟಿಕೊಂಡು ಪ್ರಧಾನ ಸಂಸ್ಕೃತಿಯ ಪ್ರವಾಹಕ್ಕೆ ವಿರುದ್ಧವಾದ ಹಾಗೂ ಭಿನ್ನವಾದ ನಾನಾ ಮೂಲಾಧಾರೆಗಳು ಆಶ್ಚರ್ಯಕರ ರೀತಿಯಲ್ಲಿ ಇನ್ನೂ ಉಳಿಸಿಕೊಂಡಿರುವ “ದೇಶಿ” ಜೀವಜಲ ಜೀವಹೀನ ಸಂಸ್ಕೃತಿಯ ಏಕತಾನತೆಯನ್ನು ಮೀರಿ ಜೀವಪರ ಸಾಂಸ್ಕೃತಿಕ ಪರ್ಯಾಯವೊಂದಕ್ಕೆ ದಾರಿ ಮಾಡಿಕೊಡಬಲ್ಲ ಸಂಸ್ಕೃತಿಯಾಗಿ ನಮ್ಮ ಕಣ್ಮುಂದೆಯೇ ಇರುವುದನ್ನು ಪ್ರಸ್ತುತ ನಾವು ಕಾಣಬಹುದಾಗಿದೆ.

ಇಂತಹ ಪ್ರಧಾನ ಸಂಸ್ಕೃತಿಯು ವಿವಿಧ ಕಾಲಘಟ್ಟಗಳ ಬಹುಸಂಸ್ಕೃತಿಯ ಅಂತಃಶಕ್ತಿಯ ಸಾರವನ್ನು ಹೀರಿಕೊಂಡು ಬೃಹದಾಗಿ ಬೆಳೆಯುವುದರ ಜೊತೆಗೆ ಇನ್ನೊಂದು ಸಂಸ್ಕೃತಿಗೆ ಮೇಲೆ ಏಳಲಾರದಂತಹ ಪೆಟ್ಟನ್ನು ಕೊಡುತ್ತ ಬೆಳೆಯುತ್ತ ಬಂದು, ಈ ಪ್ರಧಾನ ಸಂಸ್ಕೃತಿಯಡಿಗೆ ಸಿಕ್ಕಂತಹ ಬಹುಮುಖಿ ಸಂಸ್ಕೃತಿಗಳು ದಿಟ್ಟತನದಿಂದ ಈ ಎಲ್ಲಾ ಒತ್ತಡಗಳನ್ನು ಸಮುದಾಯ ಕೇಂದ್ರಿತ ನೆಲೆಯೊಂದಿಗೆ ಎದುರಿಸುತ್ತ ಬಂದುದಲ್ಲದೆ ಕತ್ತರಿಸಿಕೊಂಡಂತಹ ಸಾಂಸ್ಕೃತಿಕ, ಸಾಮಾಜಿಕ ಬೇರುಗಳನ್ನು ಮತ್ತೆ ದಿಟ್ಟವಾಗಿ ಬೆಳೆಸಿಕೊಳ್ಳುತ್ತ ನಿಂತಿದೆ.

ಇಂತಹ ಪ್ರಧಾನ ಸಂಸ್ಕೃತಿಯಡಿಗೆ ಸಿಕ್ಕಿ ನಲುಗಿದ ಬಹುಮುಖಿ ಸಂಸ್ಕೃತಿಗಳನ್ನು ಪರಿಶೋಧಿಸುವ ಆಧಾರಗಳು ಎರಡು ಬಗೆಯವು. ಮೊದಲಿನದು ಸಾಮಾಜಿಕ ಆಧಾರಗಳು, ಎರಡನೆಯದು ಸಾಹಿತ್ಯಕ ಆಧಾರಗಳು.

ಸಾಮಾಜಿಕ ಆಧಾರಗಳೆಂದರೆ ಯಜಮಾನ್ಯ ಸಮುದಾಯವು ವಿಧಿಸಿದಂತಹ ಕಟ್ಟಳೆಗಳು, ರೂಪಿಸಿದಂತಹ ರೂಪಿಕೆಗಳು.

ಕಟ್ಟಿಕೊಟ್ಟಂತಹ ಜಾತಿ ಆಧಾರದ ನಿರ್ಮಿತಿಗಳು (ಜಾತಿಗನುಗುಣವಾದಂತಹ ವೃತ್ತಿಗಳು)

ನಂತರದ ಸಾಹಿತ್ಯಕ ಆಧಾರಗಳ ಕಡೆ ಬಂದರೆ ಮತ, ಧಾರ್ಮಿಕ ಪುರಾಣ ಮೊದಲಾದ ಗ್ರಂಥಗಳು: ಕಲ್ಪನೆಯಾಧಾರಿತ ಸೃಜನಶೀಲ ಕಾವ್ಯಾದಿ ಕೃತಿಗಳು, ರಾಜವಂಶಗಳ ಅನುವಂಶಿಕ ಆಸ್ಥಾನ ಚರಿತ್ರೆಗಳು, ಆಡಳಿತ ಸಂಬಂಧಿ ದಾಖಲೆಗಳು ಮೊದಲಾದವು.

ಹೀಗೆ ಅಕ್ರಮಣಶೀಲ ಸಂಸ್ಕೃತಿಯ ಎದುರು ತಲೆ ಎತ್ತಿದ ಬಹುಮುಖಿ ಸಂಸ್ಕೃತಿಗಳನ್ನು ಯಾರು ಕಟ್ಟಿಬೆಳೆಸಿದರೆಂಬುದು ನಿಗೂಢವಾಗಿಯೇ ಉಳಿದುಬಿದ್ದಿದೆ. * ಹೀಗಾಗಿ ಇಂದು ಯಾವುದನ್ನು “ಸಂಸ್ಕೃತಿ” ಎಂದು, ಯಾರನ್ನ ಸಂಸ್ಕೃತಿಯ ವಕ್ತಾರರೆಂದು ಪರಿಗಣಿಸಲಾಗಿದೆಯೋ ಅದೆಲ್ಲವೂ ಕಾಲಾನುಕ್ರಮದ ನಕಲಿ ನಿರ್ಮಿತಿಗಳಾಗಿರುವ ಸಂಭವವೇ ಹೆಚ್ಚು ಎಂದು ಸಂಸ್ಕೃತಿ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯನವರು ತಮ್ಮ ಸಿಂದ್‌ಮಾದಿಗರ ಸಂಸ್ಕೃತಿಯಲ್ಲಿ ಅಭಿಪ್ರಾಯಪಡುತ್ತಾರೆ.

ಇಂತಹ ಅಕ್ರಮಣಶೀಲ ಸಂಸ್ಕೃತಿಯನ್ನು ಆಚರಿಸುವ ಸಮುದಾಯಗಳು ನಡೆಸುತ್ತ ಬಂದಿರುವ ಅನೇಕ ಮೂಲಮಾತೃಕೆಯ ಸಂಸ್ಕೃತಿ ಬಡಲೊಳಗೆ ಆಳಿಸಿಕೊಳ್ಳುವ ಸಮುದಾಯದ ಸಾಂಪ್ರದಾಯಿಕ ಬೇರಿರುವದು ಮೇಲುನೋಟಕ್ಕೆ ಕಾಣಿಸದೆ ಇದ್ದರೂ ಆಳದಲ್ಲಿ ತನ್ನದೇ ಆದಂತಹ ಪ್ರತಿಭಟನೆಯ, ಪರಂಪರೆಯನ್ನು ರಕ್ಷಿಸಿಡುವ ಒಳನೇಯ್ಗೆಯಲ್ಲಿ ಕಾರ್ಯವನ್ನು ನಿರಂತರ ನಡೆಸುತ್ತ ಬಂದಿದೆ. ಈ ಕಾರ್ಯವನ್ನು ಸಾಂಸ್ಕೃತಿಕ ಎಚ್ಚರ ಎನ್ನಬಹುದೇನೋ, ಮೂಲ ಸಂಸ್ಕೃತಿಗಳ ಒಳಲೋಕವನ್ನು ಪ್ರವೇಶಿಸಿದಾಗ ಇಂತಹ ಸಾಂಸ್ಕೃತಿಕ ಎಚ್ಚರ ದಟ್ಟವಾಗಿಯೇ ಇರುವುದು ಕಂಡು ಬರುತ್ತದೆ. ಅವು ಪುರಾಣ, ಸೃಷ್ಟಿಕತೆ, ಆಚರಣೆ, ಹಾಡು, ಗಾದೆ ಮುಂತಾದ ಅನೇಕ ರೂಪಗಳಲ್ಲಿ ಪ್ರಕಾರಗಳಲ್ಲಿ ಕಾಣಿಸಿಕೊಂಡಿರುತ್ತದೆ. ಮೇಲುನೋಟಕ್ಕೆ ಇವು ಪ್ರಧಾನ ಸಂಸ್ಕೃತಿಯ ಪಕ್ಷಗಳನ್ನೇ ಪ್ರತಿನಿಧಿಸುವಂತೆ ತೋರಿದರೂ ಆಳದಲ್ಲಿ ಪ್ರತಿಭಟನೆ ಪರ್ಯಾಯ ಪರಂಪರೆಯ ಪ್ರಾಚೀನ ರೂಪಗಳನ್ನು ಪುರಾಣದ ಚೌಕಟ್ಟನ್ನೋ ಅತಿಮಾನುಷ ಆವರಣವನ್ನೋ ತೊಡಿಸಿ ಹಿಡಿದಿಟ್ಟುಕೊಂಡಿರುತ್ತದೆ.*

ಇಂತಹ ಸಂಸ್ಕೃತಿಯು ಒಂದು ಜನಾಂಗದ ಮೂಲ ಸೆಲೆಯಾಗಿ ಸಮುದಾಯದೊಳಗೆ ಹೇಗೆ ನುಸುಳಿತು: ಅದನ್ನು ಯಾಕೆ ಸಮುದಾಯಗಳು ಸ್ವೀಕರಿಸಿಕೊಂಡು ಇಲ್ಲಿಯವರೆಗೂ ತಲೆಮಾರಿನಿಂದ ತಲೆಮಾರಿಗೆ, ನಾಲಿಗೆಯ ಮೇಲೆಯೇ ಯಾಕೆ ಹೊತ್ತುಕೊಂಡು ಬಂತು ಎಂಬುದನ್ನು ಅರಿಯುವ ಅಗತ್ಯವಿದೆ. ಅದಕ್ಕೂ ಮೊದಲು ಈ “ಸಂಸ್ಕೃತಿ” ಎಂದರೇನು? ಈ “ಸಂಸ್ಕೃತಿ” ಹೇಗೆ ನಿಷ್ಪನ್ನವಾಯಿತು ? ಯಾವ ಕ್ರಮಾಧಾರಿತ ಮೂಲಾದಾರದಿಂದ ಇದು ಒದಗಿ ಬಂತು ಅದರಿಂದ ಸಂಸ್ಕೃತಿ ಸಮುದಾಯಗಳೊಂದಿಗೆ ಹೇಗೆ ವಿಕಾಸವಾಯಿತು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಈ ಮೇಲ್ಕಂಡ ಎಲ್ಲ ಅಂಶಗಳನ್ನು ಅರಿಯಬೇಕಾದರೆ ನಾವು ಪ್ರಾಚೀನ ಭಾರತದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಬೇಕಾಗುತ್ತದೆ. ಅಲ್ಲಿಯ ದಟ್ಟ ನಾಗಿಕತೆಗಳ ಒಡಲು ನಮಗೆ ಸಂಸ್ಕೃತಿಯ ಉಗಮಕ್ಕೂ ಮತ್ತು ವಿಕಾಸಕ್ಕೂ ಹಾಗೂ ಸಂಸ್ಕೃತಿಯು ಸಮುದಾಯದ ಚೌಕಟ್ಟಿನೊಳಗೆ ಬರಲು ಏನೇನು ಕಾರಣಗಳಿವೆ ಎಂಬುದನ್ನು ಸ್ವಲ್ಪ ಅರಿಯುವುದಕ್ಕೆ ಪ್ರಾಚೀನ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ.

ಸಂಸ್ಕೃತಿ”ಯ ಉಗಮ ಮತ್ತು ವಿಕಾಸ

“ಸಂಸ್ಕೃತಿ” ಎಂದರೆ ಸಾಮಾಜಿಕ ಸ್ಥಿತಿಗತಿಗಳ ಪಟ್ಟಿ ಮಾತ್ರವೇ ಆಗುವುದಾದರೆ ಭಾರತೀಯ ಸಂಸ್ಕೃತಿಯನ್ನು ಬರೆಯುವುದು ಅಸಾಧ್ಯವೇ ಸರಿ. ಏಕೆಂದರೆ ಒಂದು ಪ್ರಾಂತ್ಯದ ದೊರೆಯಾರಾಗಿದ್ದ ಎಂಬ ಪ್ರಶ್ನೆಗಿಂತ ಆ ಪ್ರಾಂತ್ಯದ ಜನರಿಗೆ ನೇಗಿಲನ್ನು ಬಳಸುವುದು ತಿಳಿದಿತ್ತೊ ಇಲ್ಲವೋ, ಆಚಾರ-ವಿಚಾರಗಳ ವಿನಿಮಯ ಗೊತ್ತಿತ್ತೋ ಇಲ್ಲವೋ ಎಂಬುವುದೇ ಹೆಚ್ಚು ಮುಖ್ಯವೆನಿಸುವ ಪ್ರಶ್ನೆ. ಇಂತಹದೊಂದು ದೃಷ್ಟಿಕೋನವನ್ನಿರಿಸಿಕೊಂಡರೆ ಭಾರತ ದೇಶಕ್ಕೆ ಖಚಿತವಾದೊಂದು ಸಂಸ್ಕೃತಿ ಇದೆ ಮತ್ತು ಅದು ಯಾವಯಾವ ಸಮುದಾಯದೊಳಗೆ ಸೇರಿಹೋಗಿದೆ ಎಂಬುದನ್ನು ನಿರೂಪಿಸಬಹುದು.

“ಸಂಸ್ಕೃತಿ” ಎಂಬುದನ್ನು ಒಂದು ಬೌದ್ಧಿಕ ಅಥವಾ ಆಧ್ಯಾತ್ಮ ವಿಷಯವೆಂದು ಮತ, ತತ್ವ, ಧರ್ಮ, ಸಾಹಿತ್ಯ, ಸಂಗೀತ, ಕಲೆಗಳಂತಹವುಗಳೇ ಅಲ್ಲದೆ ಕೆಲವೊಮ್ಮೆ ರಾಜರುಗಳ ಜೀವನ ವಿನ್ಯಾಸಗಳನ್ನೂ ಒಳಗೊಂಡ ಸಂಗತಿಗಳು ಎಂದು ಅರ್ಥಮಾಡಿಕೊಳ್ಳುತ್ತಾರೆ ಎಂದು ಆಕ್ಷೇಪಿಸಿ ಮಾನವನೆಂದರೆ ಆಹಾರಕ್ಕಾಗಿ ಜೀವಿಸುತ್ತಾನೆ ಎಂಬುದು ವಾಸ್ತವವೇ ಹೊರತು ಆಹಾರವಿಲ್ಲದೆ ಜೀವಿಸಬಲ್ಲ ಯಾವ ಪಂಗಡವನ್ನೂ ಈವರೆಗೂ ಯಾರು ಕಂಡಿಲ್ಲ ಎಂದು ಹೇಳಬಹುದು. ಮೇಲೆ ವಿವರಿಸಿದ “ಸಂಸ್ಕೃತಿ”ಯ ಯಾವುದೇ ಸಾಧ್ಯತೆಗಳು ಸಂಭವಿಸಬೇಕಾದರೆ, ಅಲ್ಲಿನ ಉತ್ಪಾದನಾ ಸಾಮರ್ಥ್ಯ ಉತ್ತಮ ರೀತಿಯದಾಗಿದ್ದರೆ ಮಾತ್ರವೇ ಸಾಧ್ಯ. “ಮೆಸಟೋಮಿಯಾ ದೇವಾಲಯಗಳು, ಚೈನಾದ ಮಾವನ ನಿರ್ಮಿತ ಮಹಾಗೋಡೆಗಳು, ಈಜಿಪ್ಪಿನ ಪಿರಮಿಡ್‌ಗಳು, ಆಧುನಿಕ ಆಕಾರ ಉಡ್ಡಾಯನಗಳು” ಸಾಧ್ಯವಾಗಬೇಕಾದರೆ ಉತ್ಪಾದನು ಸಾಮರ್ಥ್ಯ ಅಗಾಧವಾಗಿ ಬೆಳೆದಿರಬೇಕೆಂಬುದು ಅಗತ್ಯ. ಅಲ್ಲದೆ ಈ ಉತ್ಪಾದನೆ ಕೆಲವರ ಕೈಯಲ್ಲಿ ಮಾತ್ರ ಸೇರಿರುತ್ತದೆ ಎಂಬೂದೂ ವಾಸ್ತವ ಎಂದು ಡಿ.ಡಿ.ಕೋಸುಂಬಿ ಸಂಸ್ಕೃತಿಯ ಉಗಮದ ಕುರಿತು ಅಭಿಪ್ರಾಯ ಪಡುತ್ತಾರೆ.

ಅಂದರೆ ಒಂದು ಸಮುದಾಯವು ನೆಲೆನಿಲ್ಲಬೇಕಾದರೆ ಅದರ ಉತ್ಪಾದನಾ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಬಹುದು. ಈ ಸಮುದಾಯ ಅಲ್ಲಿ ನೆಲೆನಿಂತ ಮೇಲೆ ಅಲ್ಲಿ ಏಣಿ-ಶ್ರೇಣಿಗಳು ಏರ್ಪಟ್ಟು “ಸಂಸ್ಕೃತಿ”ಯು ಹಂಚಿಕೆಯಾಗಿರಬಹುದು. ಅಂದರೆ “ಅಸ್ಪೃಶ್ಯ” ಜನ ಸಮುದಾಯಗಳು “ಸಂಸ್ಕೃತಿ” ಉಗಮಕ್ಕೂ ಮೊದಲು ವ್ಯವಸಾಯ ಮೊದಲಾದ ಕಸುಬುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಂತರದಲ್ಲಿ ಏಣಿ-ಶ್ರೇಣಿ ಆಧಾರದ ಮೇಲೆ ಬೇರೆಯಾಗಿರಬಹುದೆಂದು ಊಹಿಸಬಹುದು.

ಅದು ಏನೇ ಇದ್ದರೂ ಸಹ ಈ “ಸಂಸ್ಕೃತಿ”ಯ ಮುಂದುವರಿಕೆಗೆ ಕಾರಣವಾಗುವ ಮುಖ್ಯ ಸಂಗತಿಗಳಲ್ಲಿ “ಹೆಚ್ಚುವರಿ ಉತ್ಪನ್ನ”ವು ಒಂದು ಎಂದಾಗಿದೆ ಎಂಬ ಮಾತ್ರಕ್ಕೆ ಉಳಿದ ಯಾವ ಸಂಗತಿಗಳಿಗೂ ಸಂಸ್ಕೃತಿಯೊಳಗೆ ಸ್ಥಾನವಿಲ್ಲವೆಂದಲ್ಲ. ಮನುಷ್ಯರು-ಮುಖ್ಯವಾಗಿ ಉತ್ಪಾದನಾ ಕ್ಷೇತ್ರವನ್ನು ಅವಲಂಬಿಸಿದ ಸಮಾಜಗಳು-ತಮ್ಮ ಭೌತಿಕ ವೈರುಧ್ಯಗಳನ್ನು ವಿಶೇಷವಾಗಿ ಸಾಂಸ್ಕೃತಿಕ ಸಂಘರ್ಷಗಳ ರೂಪದಲ್ಲಿ ಪರಿಹರಿಸಿಕೊಳ್ಳುತ್ತಾರೆ. ಈ ಮೇಲ್ಕಂಡ ಆಧಾರಗಳಿಂದ “ಸಂಸ್ಕೃತಿ” ಚರಿತ್ರೆಯನ್ನು ಕೆದಕಲು ಹೊರಟರೆ ಅಲ್ಲಿ ನಮಗೆ ಮತ್ತೆ ಎರಡು ಸ್ತರಗಳು ಎದುರಾಗುತ್ತದೆ. ಅವುಗಳಲ್ಲಿ ಮೊದಲನೆಯದು ಈ “ಸಂಸ್ಕೃತಿ” ಚರಿತ್ರೆಗೆ ಕಾರಣವಾದ ಭೌತಿಕ ಪ್ರೇರಣಾ ಶಕ್ತಿಗಳನ್ನು ಗುರಿತಿಸಿದ ಕ್ರಮ, ಆಹಾರ ಶೇಖರಣೆಯ ಹಂತದಿಂದ ಆಹಾರ ಉತ್ಪಾದನೆಯ, ಕಡೆ ಆದ ಪಾಲನೆ, ಆಹಾರ ಉತ್ಪಾದನೆಯ ಕಾರಣವಾಗಿ ಹುಟ್ಟಿಕೊಂಡ ಸ್ಥಿರ ವ್ಯವಸಾಯ ಗ್ರಾಮಗಳು, ಈ ಸ್ಥಿರ ವ್ಯವಸಾಯ ಗ್ರಾಮಗಳು ಸಾವಯವ ಪೋಷಕಗಳಾಗಿ ಭೂಸ್ವಾಮ್ಯು ವ್ಯವಸ್ಥೆಗೆ ಬುನಾದಿಯನ್ನು ಹಾಕಿದ್ದು, ಈ ಆರ್ಥಿಕ ಕ್ರಮವೇ ನಮ್ಮ ದೇಶದ ಪ್ರಾಚೀನ ಚರಿತ್ರೆಯ ಮೂಲವಾಗಿರಬಹುದೆಂದು ಡಿ.ಡಿ.ಕೋಸಾಂಬಿ (The culture and civilization of Ancient India in Historical out Line (CCAI) ಯವರು ಅಭಿಪ್ರಾಯಪಡುತ್ತಾರೆ.

ಹೀಗೆ ಕಾಲಾನುಕ್ರಮದಲ್ಲಿ “ಭೂಸ್ವಾಮ್ಯ” ವ್ಯವಸ್ಥೆಗಳು ಸಾಮಾಜಿಕ ಚೌಕವನ್ನು ಬಿಗಿದುಕೊಂಡು ಜಾತಿಗಳನ್ನು ಏರ್ಪಡಿಸಕೊಂಡು ಸಾಮಾಜಿಕ ಕಟ್ಟುಪಾಡುಗಳನ್ನು ವಿಧಿಸಿ “ಆಳುವ ಸಂಸ್ಕೃತಿ” ಮತ್ತು ಆಳಿಸಿಕೊಳ್ಳುವ ಅಥವಾ ಅಸ್ಪೃಶ್ಯ ವರ್ಗಗಳಾಗಿ ವಿಂಗಡನೆಯಾಗಿರಬಹುದಾದ ಸಾಧ್ಯತೆಗಳನ್ನು ಗುರುತಿಸಬಹುದು. ಈ ವಿಂಗಡನೆಯಾದ ನಂತರ ಯಜಮಾನ್ಯ ಸಂಸ್ಕೃತಿಗೆ ಅಡಿಯಾಳಾಗಿದ್ದುಕೊಂಡೆ ಬಹುಸಂಸ್ಕೃತಿಯನ್ನು ಅಸ್ಪೃಶ್ಯರು ಹುಟ್ಟುಹಾಕಿರಬಹುದು ಎಂದು ಈ ಮೂಲಕ ವಿಶ್ಲೇಷಿಸಬಹುದು.

ಹಾಗಾದರೆ ಇಂತಹ “ಉತ್ಪಾದನ ಪದ್ದತಿ” ಯಿಂದ ಸಮುದಾಯಗಳು ಮತ್ತು ಅದರ “ಸಂಸ್ಕೃತಿ” ಹೇಗೆ ನಿಷ್ಪನ್ನವಾಯಿತು ಎಂದು ನೋಡೋಣ. ಇದಕ್ಕಾಗಿ ಮತ್ತೆ ನಾನು ಡಿ.ಡಿ.ಕೋಸಾಂಬಿಯವರ ಹೇಳಿಕೆಯನ್ನೆ ಇಲ್ಲಿ ಪುನರುಚ್ಚರಿಸಬೇಕಾಗುತ್ತದೆ. ಅದೆಂದರೆ ಒಂದು ನಿಗದಿತ ಪ್ರಾಂತ್ಯದಲ್ಲಿ ಸಂಚಾರ ಮಾಡುತ್ತ ಅಲ್ಲಿನ ಆಹಾರವನ್ನು ಸಂಗ್ರಹಿಸಿ ಹೊಟ್ಟೆ ತುಂಬಿಸಿಕೊಳ್ಳುವ ಜೀವನವನ್ನು ಸಾಗಿಸುತ್ತ ಬರುವಾಗ ಆ ಸಮುದಾಯ ಹೆಚ್ಚು ಕಮ್ಮಿ ಒಂದೇ ಬಗೆಯ ವಸ್ತುಗಳಿಗೆ ಹೊಂದಿಕೊಳ್ಳುತ್ತದೆ. ಅಷ್ಟಿಷ್ಟೂ ಬದಲಾವಣೆಯಾದರೂ ಪ್ರಧಾನವಾಗಿ ಒಂದೇ ಬಗೆಯ ವಸ್ತುವಿನ ಪರಿಮಿತಿಯವರೆಗೂ ಒದಗುತ್ತದೆ. ಇಡೀ ಸಮುದಾಯ ಯಾವುದೋ ಒಂದು ಬಗೆಯ ಹಣ್ಣು, ಹಂಪಲು, ಕಾಳುಕಡ್ಡಿ ಅಥವಾ ಒಂದು ಬಗೆಯ ಪ್ರಾಣಿಯ ಬೇಟೆಯ ಮೂಲಕ ಆಹಾರ ಸಂಗ್ರಹಿಸುವ ವಿಧಾನವನ್ನು ಕ್ರಮೇಣ ಕರಗತ ಮಾಡಿಕೊಂಡು ಪರಿಣಿತವೆನಿಸಿಬಿಡುತ್ತದೆ. ಹೀಗೆ ಒಂದು ಸಮುದಾಯ ತನಗೆ ಮಾತ್ರ ವಿಶಿಷ್ಟವೆನಿಸಿದ ಪದಾರ್ಥವನ್ನು ಗುರುತಿಸಿ ಅದನ್ನು ತನ್ನ ಅಂಕಿತವೆಂದೇ ಭಾವಿಸಿ ತಿಳಿಯಲಾರಂಭಿಸುತ್ತದೆ. ಆ ಸಮುದಾಯಕ್ಕೆ ಹೀಗೆ ಅಂಕಿತವೆನಿಸಿದ ಆಹಾರ ಪದಾರ್ಥದೊಂದಿಗಿನ ಸಂಬಂಧ ಕೇವಲ ಭೋಜನ. ಬೋಕ್ತ ಮಾತ್ರವೇ ಎಂಬಂತೆ ನಿಲ್ಲದೆ, ಒಂದು ಬಗೆಯ ಅಧ್ಯಾತ್ಮ ಸಂಬಂಧವಿರುವಂತೆ ತೋರ ತೊಡಗುತ್ತದೆ. ಆಗ ತಾವೆಲ್ಲರೂ ಅದರ ಅಂಶವೇ ಎಂಬಂತೆಯೂ, ಅದರೊಂದಿಗೆ ತಾವು ಸಹಧರ್ಮಿಗಳೆಂದೂ ಆ ಸಮುದಾಯದವರು ಒಪ್ಪಿಕೊಳ್ಳುತ್ತಾರೆ. ಅದನ್ನೇ ಪೂಜಿಸುತ್ತಾರೆ. ಇದರ ಉಪಾಸನೆಯ ಅಂಗವಾಗಿಯೇ ಅವರಲ್ಲಿ ವಿಶಿಷ್ಟವಾಗಿ ಮಂತ್ರ-ತಂತ್ರಗಳು, ಗಾನ-ನಾಟ್ಯಗಳು, ಚಿತ್ರರಚನೆಗಳು ಸೃಷ್ಟಿಯಾಗಿ ಕಲೆಗಳಿಗೆ ಕಾರಣವಾಗುತ್ತವೆ. ಹೀತೆ ಅತ್ಯಂತ ಸಂಕೀರ್ಣವಾದ ಅರಣ್ಯ ಕಲೆಗಳು, ಅವರ ಅಪಾರ ಸಂಪ್ರದಾಯಗಳು, ಮಂತ್ರ-ತಂತ್ರಗಳು ಸಹ ಇದೆ ತತ್ವವನ್ನಾಧರಿಸಿ ಹುಟ್ಟಿದವುಗಳಾಗಿವೆ. ನಂತರದ ಕಾಲದಲ್ಲಿ ಅರಣ್ಯ ಸಮುದಾಯಗಳ ಆಹಾರ ಸಂಗ್ರಹಣಾ ವಿಧಾನ ಆಹಾರ ಉತ್ಪಾದನಾ ವಿಧಾನವಾಗಿ ಪರಿವರ್ತಿತವಾಗಿ ಆ ಸಮುದಾಯಗಳು ಕೃಷಿ ಸಮಾಜದ ಕೆಳಸ್ತರದಲ್ಲಿ ಒಂದು ಕೂಡಿಕೊಂಡಾಗ ಅವರ ಸಮುದಾಯದ ಅಂಕಿತ ಚಿಹ್ನೆ ಮನೆಯ ಹೆಸರಾಗಿ ಉಳಿದುಕೊಳ್ಳುತ್ತದೆ.

ಉದಾ: ಮಹಾರಾಷ್ಟ್ರ ಮೋರೆ (ನವಿಲು) ಎನ್ನುವ ಮನೆತನದ ಹೆಸರು ಈ ವಿಧದ ಸಮುದಾಯದ ಅಂಕಿತ ಚಿಹ್ನೆಯಿಂದಲೇ ಬಂದಿದ್ದು ಎನ್ನುತ್ತಾರೆ. ಕೋಸಾಂಬಿ.

ಹಾಗೆಯೇ ಅಸ್ಪೃಶ್ಯ ಜನಸಮುದಾಯದ ಮಾದಿಗ, ಹೊಳೆಯ ಪಂಗಡಗಳಲ್ಲಿ ಮತ್ತು ಅವರ ಕುಲಸ್ಥರಲ್ಲಿ ಬೆಕ್ಕು, ಎತ್ತು, ಹಸು, ಹಾವು ಮೊದಲಾದ ಮನೆತನದ ಹೆಸರುಗಳಿರುವುದನ್ನು ನಾವು ಕಾಣಬಹುದು. ಇವರು ಹಿಂದೊಮ್ಮೆ ಆಯಾ ಪ್ರಾಣಿಗಳನ್ನು ಸಮುದಾಯದ ಅಂಕಿತ ಚಿಹ್ನೆಯಾಗಿ ಪಡೆದಿದ್ದ ಅರಣ್ಯವಾಸಿಗಳೇ ಇರಬಹುದು. ನಾಗರಿಕ ಸಮಾಜವು ಅವರ ಬೇಟೆಯ ಅಭ್ಯಾಸವನ್ನು ತಪ್ಪಿಸಿ ತಮ್ಮ ಕೂಲಿಗಳಾಗಿ, ಗುಲಾಮರನ್ನಾಗಿ ಅಡಿಯಾಳಾಗಿ ದುಡಿಯುವಂತೆ ಮಾಡಿ ಬಿದ್ದಾಗ ಅವರ ಸಮುದಾಯದ ಚಿಹ್ನೆಗಳು ಅವರ ಮನೆಯ ಸಂಕೇತಗಳಾದವು. ಉಳಿದಂತೆ ಕಾಪು, ಕಮ್ಮ, ರೆಡ್ಡಿ ಮೊದಲಾದ ಸ್ಪೃಶ್ಯ ಕೃಷಿ ಕುಲಸ್ಥರಲ್ಲಿ ವಿವಿಧ ರೀತಿಯ ಮರಗಿಡಗಳ ಹೆಸರುಗಳು ಮನೆತನಗಳ ಹೆಸರುಗಳಾಗಿ ಉಳಿದವು. ಹೊಂಗೆ, ಬೇವು, ನಿಂಬೆ………ಹೀಗೆ ಈ ಮರಗಿಡಗಳೆಲ್ಲವೂ ಆಯಾ ಪ್ರಾಂತ್ಯಗಳಲ್ಲಿ ಪವಿತ್ರವೆಂದು ಭಾವಿಸಿದ್ದವುಗಳಾದ್ದರಿಂದ ಅವು ಸಮುದಾಯದ ಅಂಕಿತ ಚಿಹ್ನೆಗಳಾಗಿದ್ದಿರಬಹುದು.

ಹೀಗೆ ಸಮುದಾಯಗಳಿಗೆ, ಮನೆತನಗಳಿಗೆ ಅಂಕಿತ ಚಿಹ್ನೆಗಳನ್ನು ಪಡೆದರೂ ಸಹ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಯಾವುದೇ ಬದಲಾವಣೆಯ ಜವಾಬ್ದಾರಿಯನ್ನು ಹೊರದ ಈ ಸಮುದಾಯಗಳು ಯಾಕೆ ಪರಿವರ್ತನೆಯ ದಾರಿ ತುಳಿಯಲಿಲ್ಲ ಎಂಬುದು ರಹಸ್ಯವಾಗಿಯೇ ಉಳಿದುಬಿಟ್ಟಿದೆ. ಬಹುಶಃ ಇದಕ್ಕೆ ಕಾರಣ ಸಾಮಾಜಿಕವಾಗಿ ನಾವು ಪರಿವರ್ತನೆಯಾಗದೆ ಉಳಿದಬಿಟ್ಟಿರಬಹುದೆಂದು ನನ್ನ ಅಭಿಪ್ರಾಯ. ಏಕೆಂದರೆ ನಮ್ಮ ಸಾಮಾಜಿಕ ಚರಿತ್ರೆಯಲ್ಲಿ ಒದಗಿ ಬಂದ ಯಾವ ಬದಲಾವಣೆಯೂ ಪೂರ್ಣತೆಯನ್ನು ಪಡೆಯಲೇ ಇಲ್ಲೆಂಬುದು ಐದು ಸಾವಿರ ವರ್ಷಗಳಿಗೂ ಹಿಂದೆ ನಮ್ಮ ದೇಶದಲ್ಲಿ ಎಲ್ಲರೂ ಆಹಾರ ಸಂಗ್ರಹಣೆಯ ಜೀವನ ವಿಧಾನವನ್ನೇ ಅನುಸರಿಸುತ್ತಿದ್ದರಾದ್ದರಿಂದ ಅವರೆಲ್ಲರನ್ನೂ ಅಲೆಮಾರಿಗಳೆಂದೇ ಕರೆಯಬೇಕು. ಅಂದರೆ ಕೈಗೆ ಸಿಕ್ಕ ಆಹಾರವನ್ನು ಗಿಡ ಮರಗಳಿಂದ ಕಿತ್ತುಕೊಳ್ಳುತ್ತಲೋ, ಬೇಟೆಯಾಡುತ್ತಲೋ ದಕ್ಕಿಸಿಕೊಂಡು ತಿನ್ನುತ್ತಾ ಒಂದೆಡೆ ನಿಲ್ಲದೆ ಸಂಚರಿಸುತ್ತಲೇ ಇದ್ದವರು. ಆ ನಂತರದಲ್ಲಿ ಆಹಾರ ಸಂಗ್ರಹ ಸ್ಥಿತಿಯಿಂದ ಆಹಾರ ಉತ್ಪಾದನೆಯ ಹಂತವನ್ನು ಕಂಡುಕೊಂಡರು. ಹೀಗೆ ಹೇಳಿದರೂ, ಐದು ಸಾವಿರ ವರ್ಷಗಳ ನಂತರದ ಇಂದಿನ ವೇಳೆಯಲ್ಲೂ ಆ ಹಂತಕ್ಕೆ ದಾಟುವ ಕ್ರಿಯೆ ಮುಗಿದಿದೆಯೇ ಎಂದರೆ ಇಲ್ಲ ಎಂಬುದೇ ಉತ್ತರ. ಆಹಾರ ಸಂಗ್ರಹ ಸ್ಥಿತಿಯನ್ನಾಧರಿಸಿ ಕಾಡು ಬದುಕನ್ನು ಸಾಗಿಸಿದ್ದರ ಗುರುತುಗಳೂ ಇನ್ನೂ ಉಳಿದೇ ಬಂದಿವೆ. ಆ ನಂತರದಲ್ಲಿ ಬಂದ ಇತರ ಪರಿವರ್ತನೆಗಳ ಕತೆಯೂ ಇದೇ, ನೇಗಿಲು ಹಿಡಿದು ವ್ಯವಸಾಯಕ್ಕೆ ತೊಡಗಿದ್ದು, ಕಬ್ಬಿಣದ ಸಾಧನ ಸಲಕರಣೆಗಳನ್ನು ಬಳಸಲು ಕಲಿತದ್ದು, ಸ್ಥಿರವಾಗಿ ಒಂದು ಕಡೆ ನೆಲೆ ನಿಂತದ್ದು, ಗ್ರಾಮಗಳ ರಚನೆ, ಭೂಮಿಯ ಮೇಲೆ ವ್ಯಕ್ತಿಗಳ ಒಡೆತನವನ್ನು ಸ್ಥಾಪಿಸಲಾರಂಭಿಸಿದ್ದು, ಸಾಂಸ್ಕೃತಿಕ ರಂಗದಲ್ಲಿ ಅನಾಗರಿಕ ಪ್ರಾಣಿಗಳ ಪೂಜೆಯಿಂದ ನಾಗರಿಕ ಪೂಜಾ ವಿಧಾನಗಳು ರೂಪುಗೊಂಡದ್ದು, ಈ ಯಾವ ಪರಿವರ್ತನೆಗಳೂ ಇಂದಿಗೂ ಸಂಪೂರ್ಣವಾಗಿ ಮುಗಿದಿವೆ ಎಂಬಂತಿಲ್ಲ. ಈ ಎಲ್ಲ ವಿಚಾರಗಳಲ್ಲೂ ಹಳೆಯ ವ್ಯವಸ್ಥೆಯ ಅವಶೇಷಗಳನ್ನು ಇಂದಿಗೂ ಉಳಿಸಿಕೊಂಡು ಬಂದ ಜನಸಮುದಾಯದ ಜನರು ಇರುವುದನ್ನು ನಾವು ಕಾಣಬಹುದು.

ಹಾಗೆ ಮುಂದುವರೆದು ಹೇಳುವುದಾದರೆ,-ಪರಿವರ್ತನೆಯೆಂಬುದು ಉಂಟಾದಲ್ಲಿಯೂ ಕೂಡ ಹೊಸ ವ್ಯವಸ್ಥೆ ಹಳೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸದೆ, ಅದರದೇ ಹೊಸ ರೂಪದಲ್ಲಿ ಕೆಲವೊಮ್ಮೆ ಕೇವಲ ಬದಲಾದ ವೇಷದಲ್ಲಿ, ತನ್ನೊಳಗೆ ಆಹ್ವಾನಿಸಿಕೊಳ್ಳುತ್ತದೆ. ಚಾರಿತ್ರಿಕವಾಗಿ ಉನ್ನತವಾದ ವ್ಯವಸ್ಥೆಯೊಂದು ಚಾರಿತ್ರಿಕವಾಗಿ ಹಿಂದುಳಿದ ವ್ಯವಸ್ಥೆಯೊಂದರ ಮೇಲೆ ತನ್ನ ವಿಜಯ ಸಾಧಿಸಿರುವುದು ಇದೆಯಾದರೂ, ಹಾಗೆ ಸೋತು ಓಡಿ ಹೋದ ಸಮಾಜದ ಆಚಾರ ವ್ಯವಹಾರಗಳ ಮೇಲೆ ತನ್ನ ಮುದ್ರೆಯನ್ನೊತ್ತಿ ಅವುಗಳನ್ನು ತನ್ನದರೊಂದಿಗೆ ಬೆರೆಸಿ ಉಳಿಸಿಕೊಳ್ಳುತ್ತದೆ. ಇದಕ್ಕೊಂದು ಭೂತಕಾಲವಿಲಾರದು ಎಂಬಂತೆ ಉಳಿದುಕೊಂಡ ಸಂದರ್ಭಗಳಲ್ಲೂ, ಸೂಕ್ಷ್ಮ ದೃಷ್ಟಿಗೆ ಮಾತ್ರ ವೇದ್ಯವಾಗುವಂತೆ ಉಳಿದೇ ಇರುತ್ತದೆ. ಈ ಸೂಕ್ಷ್ಮ ಸ್ವರೂಪಗಳಲ್ಲಿ ಸಹ ಗತಕಾಲದ ಛಾಯೆಗಳು, ಅದು ಆಕ್ರಮಣಕ್ಕೆ ಒಳಗಾಗಿ ಬಾಗಿದ ಕ್ರಮದ ಛಾಯೆಗಳು, ಇದ್ದೇ ಇರುತ್ತದೆ. ಗತಕಾಲವನ್ನು ಇಷ್ಟ ಮಟ್ಟಿಗೆ ಉಳಿಸಿಕೊಂಡು ಬಂದಂತಹ ಸಮುದಾಯಗಳು ಅದೆಲ್ಲವನ್ನೊಳಗೊಂಡ ದೇಶ ಭಾರತ ಬಿಟ್ಟರೆ ಬೇರೊಂದಿಲ್ಲ.

ಹೀಗೆ ಸಂಸ್ಕೃತಿಯು ಉಗಮವಾಗಿ ವಿಕಾಸವಾಗುತ್ತ ಬಂದಿರಬಹುದು. ಇದರ ಒಡಲೊಳಗಿನ ಸಾಮಾಜಿಕ ಸ್ತಿತ್ಯಂತರದ ಕಾವಲ್ಲಿ ಕಲೆಗಳು ಅರಳಿ ಅವು ಈವರೆಗೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ನಾಲಿಗೆಯ ಮೇಲೆ ಹೊತ್ತುಕೊಂಡು ಬಂದಿರುವುದುನ್ನು ಕಂಡರೆ ಅಸ್ಪೃಶ್ಯ ಕುಲಗಳ ಜ್ಞಾಪಕಶಕ್ತಿ ಅರಿವು ಮತ್ತು ಆಕ್ರಮಣಗಳನ್ನು ಎದುರಿಸಿನಿಂತ ಬಂಡೆ ಧೈರ್ಯ ದಿಗಿಲು ಹುಟ್ಟಿಸುತ್ತದೆ.

ಇದೆಲ್ಲವನ್ನು ಗಮನಿಸಿದರೆ ನಮ್ಮ ದೇಶವು ಭೂತವನ್ನು ಹೊತ್ತುಕೊಂಡೇ ಬಂದಿದೆ ಎಂಬುದು ಜನಜೀವನದ ಪಾಲಿನ ಶಾಪ ಹೌದಾದರೂ, ಅದು ಸಂಸ್ಕೃತಿ ಚಿಂತಕನ ಪಾಲನ ವರವೂ ಹೌದು. ನಾಲ್ಕೈದು ಸಾವಿರ ವರ್ಷಗಳ ಸಾಂಸ್ಕೃತಿಕ ಚರಿತ್ರೆಯೊಳಗಣ ಎಲ್ಲಾ ಸ್ಥಿತ್ಯಂತರಗಳೂ, ಅವುಗಳಲ್ಲಿನ ಸಂಘರ್ಷಗಳೂ ತಮ್ಮ ಕುರುಹುಗಳನ್ನು ನಮ್ಮ ಸಮಾಜದಲ್ಲಿ ಉಳಿಸಿಯೇ ಹೋಗಿವೆ. ಅವು ನಮ್ಮ ಸುತ್ತಮುತ್ತಲಿನಲ್ಲೇ ಇವೆ. ಅವುಗಳನ್ನು ಗುರುತಿಸಿ ವಿಶ್ಲೇಷಿಸಬೇಕಾಗಿದೆ ಅಷ್ಟೇ.

ಇಂತಹ ಒತ್ತಡದ ಸಂದರ್ಭದ ಕಣ್ಣಿನಿಂದ ನಾವಿಂದು ಮಾದಿಗರ ಸಾಂಸ್ಕೃತಿಕ ಅನುಭವವನ್ನು, ಸಾಮಾಜಿಕ ದೃಷ್ಟಿಕೋನವನ್ನು ನೋಡಲು ಅಣಿಯಾಗಬೇಕು.

ಮಾದಿಗರ ಸಂಸ್ಕೃತಿ

ಅನಾದಿ ಕಾಲದಿಂದಲೂ ಮಾದಿಗರ ಜೀವನ ವಿಧಾನ, ಆಚರಣೆ ಮತ್ತು ಸಾಮಾಜಿಕ ನುಡಿ ಗದ್ದುಳ ದಾರಿಯನ್ನು ಅವರೆ ರೂಪಿಸಿಕೊಂಡಿರುವಂತಹ ಮೌಖಿಕ ಪದಸಂಪತ್ತು. ಹಾಡು-ಪದ, ಪುರಾಣಗಳು ಮುಂತಾದ ಸಾಂಸ್ಕೃತಿಕ ಅಂಶಗಳೇ ರೂಪಿಸುತ್ತ ಬಂದಿವೆ. ಮಾದಿಗರಿಗೂ ಮತ್ತು ಅವರು ಆಚರಿಸುವಂತಹ ಸಂಸ್ಕೃತಿಗೂ ನಡುವೆ ತಲೆ-ತಲೆಮಾರಿನಿಂದ ರೂಢಿ ಸಂಪ್ರದಾಯಕ್ಕನುಗುಣವಾಗಿ ನಡೆದುಕೊಂಡು ಬಂದಂತಹ ಅವರ ಮೌಖಿಕ ಸಂಪ್ರದಾಯಗಳು ಮಾದಿಗರನ್ನು ಇಲ್ಲಿಯವರೆಗೂ ಸಾಂಸ್ಕೃತಿಕ ವಕ್ತಾರರೆಂದು ಪಡಿಮೂಡಿಸುತ್ತ ಬಂದಿದೆ. ಮಾದಿಗರನ್ನು ಸಂಸ್ಕೃತಿಯ ರಾಯಬಾರಿಗಳೆಂದು ಗತವನ್ನು ಮತ್ತು ವಾಸ್ತವವನ್ನು ಜೋಡಿಸುವ ಕೊಂಡಿ ಎಂದರೆ ತಪ್ಪಾಗಲಾರದು.

ಇಂತಹ ಮಾದಿಗರು ಸಾಂಸ್ಕೃತಿಕ ಹರಿಕಾರರೆಂದು ಕರೆಯಲು ಅವರು ಪರಂಪರಾಗತವಾಗಿ ರೂಪಿಸಿಕೊಂಡು, ಆಚರಿಸಿಕೊಂಡು ಬಂದಂತಹ ಸಂಸ್ಕೃತಿಯ ಆಕೃತಿಗಳು, ಜೀವನ ವಿಧಾನ, ಕುಟುಂಬದ ವ್ಯವಸ್ಥೆ, ವೃತ್ತಿವಿಧಾನ, ಸಾಮಾಜಿಕ ವ್ಯವಸ್ಥೆ, ಸಮುದಾಯ ಪ್ರಜ್ಞೆ ಮತ್ತು ಮೌಖಿಕ ಸಂಪ್ರದಾಯಗಳೇ ಕಾರಣ. ಇಂತಹ ಕೆಲವೊಂದು ನಂಬಿಕೆಗಳ ಗಟ್ಟಿ ನೆಲೆಗಳಾದಂತಹ ಇವರು ಸಂಸ್ಕೃತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುವಂತಹ ವಾಹಕವಾಗಿಯೂ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ಅನೇಕ ಸಾರಿ ಪ್ರಧಾನ ಸಂಸ್ಕೃತಿಯ ವಿರುದ್ಧ ಸಂಘರ್ಷವನ್ನು ಸಹ ಏರ್ಪಡಿಸಿಕೊಂಡರು. ಅದನ್ನೆಲ್ಲಾ ದಿಟ್ಟವಾಗಿಯೇ ಎದುರಿಸುತ್ತ ಸಾಂಸ್ಕೃತಿಕ ಹೋರಾಟಕ್ಕೆ ನಾಂದಿ ಹಾಡಿದರು. ಇಂತಹ ಹೋರಾಟದ ಕಾವನ್ನು ಆದಿಕಾಲದಿಂದಲೂ ನಡೆಸುತ್ತ ಬರುತ್ತಿರುವ ಇವರಲ್ಲಿ ಸಂಸ್ಕೃತಿಯನ್ನು ಹಾಗೆ ಬರುವ ದಾರಿಯಲ್ಲಿ ಮತ್ತಷ್ಟು ಕಲಿಯುತ್ತ, ಕಲಿಸುತ್ತ ಸಾಂಸ್ಕೃತಿಕ ಎಚ್ಚರವನ್ನು ಕಾಯ್ದುಕೊಂಡೆ ಬರುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಎಚ್ಚರವನ್ನು ಒಳಗೊಂಡಿರುವ ಈ ನೆಲದ ಆದಿ ಮೂಲಕ ಮೂಲನಿವಾಸಿಗಳಾದ ಮಾದಿಗರು ಪ್ರಾಚೀನ ಕಾಲದಿಂದಲೂ ತತ್ವ, ಆದರ್ಶಗಳಿಗೆ, ಸಂಸ್ಕೃತಿ ನಿರ್ಮಾಣಕ್ಕೆ ವಕ್ತಾರರಾಗಿ ಕಂಡು ಬರುತ್ತಾರೆ. ಯಾವುದೇ ಪ್ರಧಾನ ಸಂಸ್ಕೃತಿಯ ಒತ್ತಡಗಳಿಗೆ ಮಣಿಯದೆ ಅದನ್ನೆಲ್ಲ ದಿಟ್ಟವಾಗಿ ಸಹಿಸಿಕೊಂಡು ಸಂಕರೂಪಿಯಾಗಿ ತನ್ನೊಳಗೊಂದು ಆಕೃತಿಯನ್ನು ಕಟ್ಟಿಕೊಳ್ಳುತ್ತಲೇ ಬೃಹತ್‌ಆಗಿ ಬೆಳೆಯುತ್ತ ಬಂದಿರುವುದು ನಮ್ಮ ಕಣ್ಣ ಮುಂದೆಯೆ ಇದೆ.

ಮಾದಿಗರ ಜೀವನ ವಿಧಾನ ಮತ್ತು ಕುಟುಂಬದ ರಚನೆ

ಮೊದ-ಮೊದಲು ಮಾದಿಗರು ಹಾಡು, ಕತೆ, ಪುರಾಣಗಳನ್ನು ಹೇಳುತ್ತ ಊರೂರು ಸುತ್ತುತ್ತಿದ್ದರು. ಹಾಗಂತ ಅವರು ಅಲೆಮಾರಿ ಜೀವನವನ್ನೇನು ಹೊಂದಿರಲಿಲ್ಲ. ಅಂತಹ ಇವರು ತಮ್ಮ ಕುಲಕಸುಬು ಆದಂತಹ ಚರ್ಮಗಾರಿಕೆಯನ್ನು ವೃತ್ತಿಯಾಗಿಸಿಕೊಂಡು ಸಮಾಜದಲ್ಲಿ ನೆಲೆನಿಂತರು ಇಂತಹ ಇವರು ತಮ್ಮ ಜಾತಿಯೊಳಗಿನ ಉಪಪಂಗಡಗಳಿಂದ ಗಮನ ಸೆಳೆಯುತ್ತಾರೆ. ಇವರ ಉಪಪಂಗಡಗಳಾದ ಮಾದಿಗ ಮಾಸ್ರೀಕರು, ದಕ್ಕಲರು ಮತ್ತು ಸಿಂದ್‌ಮಾದಿಗರು ಇವರನ್ನು ನಂಬಿಕೊಂಡೆ ಬುದಕು ಸಾಗಿಸುತ್ತಿದ್ದರು. ಇವರಲ್ಲಿ ಉಪಪಂಗಡಗಳಾದ ಮಾದಿಗ ಮಾಸ್ರೀಕರು ಮಾದಿಗದಿಂದ ಮತ್ತು ಇನ್ನುಳಿದ ಒಂಬತ್ತು ಪಣಕಟ್ಟಿನ ಜನಾಂಗಗಳಾದ ಮಾದಿಗ, ಜ್ಯೋತಿ ನಗರಶೆಟ್ಟಿ, ಗೊಲ್ಲಗೌಡ ವಂಶ, ವಿಶ್ವ ಬ್ರಾಹ್ಮಣ ಪಾಂಚಾಲ ಆಚಾರಿಗಳು, ವಾಲ್ಮೀಕಿ ಕುಲಸ್ಕರು, ನಗರ್ತರು ವಶಿಷ್ಟರು, ವಕಲಿಯವರು, ಕಮ್‌ಆ ಕಾಪುದೊರೆಗಳು ಮತ್ತು ಚಂದ್ರವಂಶದ ಕ್ಷತ್ರಿಯ ವಹ್ನಿ ಕುಲದವರಿಂದ ತಮಗೆ ಪರಂಪರಾಗತವಾಗಿ ಬಂದಂತಹ ಹಕ್ಕಿನ ಭಿಕ್ಷೆಯನ್ನು ಪಡೆದು ಜೀವನ ಸಾಗಿಸುತ್ತಿದ್ದರೆ ಸಿಂದ್‌ಮಾದಿಗರು ತಮ್ಮ ಕುಲಕಸುಬಾದ ಚರ್ಮಗಾರಿಕೆ ಬಿಟ್ಟು ಕಲೆಯನ್ನೇ ಕಸುಬು ಮಾಡಿಕೊಂಡು ಹಾಡು, ನಾಟಕ, ಸಂಗೀತವನ್ನು ಹೇಳುತ್ತ ಅಲೆಮಾರಿಗಳಾಗಿ ಊರಿಂದ, ಊರಿಗೆ ತಮ್ಮ ನೆಲೆಯನ್ನು ವಿಸ್ತರಿಸಿಕೊಂಡು ಮಾದಿಗರನ್ನು ಆಶ್ರಯಿಸಿ ಬದುಕುತ್ತಿದ್ದರು. ನಂತರದ ಪಂಗಡವಾದ ದಕ್ಕಲರು ಮಾದಿಗರ ಮಕ್ಕಳೆಂದು ಪುರಾಣಗಳು ಗುರುತಿಸುತ್ತವೆಯಾದರಿಂದ ಇವರು ಸಹ ಮಾದಿಗರನ್ನು ಆಶ್ರಯಿಸಿ ಬದುಕು ಸಾಗಿಸುತ್ತಿದ್ದರು.

ಇಂತಹ ಅನೇಕ ವೈರುದ್ಯಗಳ ನಡುವೆ ಬದುಕು ಸಾಗಿಸುವ ಮಾದಿಗರ ಜೀವನ ವಿಧಾನವು ಯಾವ ಪ್ರಧಾನ ಸಂಸ್ಕೃತಿಯೊಳಗೂ ಹುಡುಕಿದರೂ ಸಿಗದು. ಇವರು ಕುಲದಲ್ಲಿ ಕುಲದ ಗುರುಗಳು ಇವರ ಸಾಮಾಜಿಕ ವ್ಯವಸ್ಥೆಯ ಪ್ರತಿನಿಧಿಯಾಗಿ ಕಂಡುಬರುತ್ತಾನೆ. ಮೊದಲು ವ್ಯವಸ್ಥೆಯ ಪ್ರತಿನಿಧಿಯಾಗಿ ಕಂಡುಬರುತ್ತಾನೆ. ಮೊದಲು ಚರ್ಮಗಾರಿಕೆಯಂತಹ ಕಸುಬು ನಿರ್ವಹಿಸುತ್ತಿದ್ದ ಇವರು ಆಧುನಿಕತೆಯ ಸುಳಿಗೆ ಸಿಕ್ಕಿ ವ್ಯವಸಾಯ ಇನ್ನಿತರ ಕಾರ್ಯಕ್ಕೆ ಒಗ್ಗಿಕೊಂಡರು. ತಮ್ಮ ಮೌಖಿಕ ಸಂಪ್ರದಾಯವನ್ನು ಬಿಡದೇ ಪಾಲಿಸಿಕೊಂಡು ಬಂದಂತವರಾಗಿದ್ದಾರೆ. ಇವರು ಜೀವನ ನಿರ್ವಹಣೆಗಾಗಿ ಕೂಲಿಯನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿದ್ದಾರೆ. ಈ ಮೊದಲು ತಮ್ಮ ಜಾತಿಗೆ ವರವಾಗಿ ಬಂದಂತಹ ಅರುಂಧತಿ, ಎಲ್ಲಮ್ಮ, ತಂಗಡಿ ದ್ರಾವ್ರದ ಕತೆಗಳನ್ನು ಹೇಳಿ ಜೀವನ ಸಾಗಿಸುತ್ತಿದ್ದರು.

ಇಂತಹ ಮಾದಿಗರಲ್ಲಿರುವ ಆಹಾರ ಪದ್ಧತಿಯು ಬಹು ವಿಚಿತ್ರವಾಗಿರುವಂತಹ ಅಂಶವಾಗಿದೆ. ಇವರು ನೆಲೆನಿಂತಿರುವ ಕೇರಿಗಳ ಅಸುಪಾಸುಗಳಲ್ಲಿ ಬಿದ್ದಿರುವಂತಹ ಎತ್ತಿನ, ಎಮ್ಮೆಯ ಎಲುಬಿನ ತುಂಡುಗಳು ಇವರು ಮಾಂಸಹಾರಿಗಳೆಂದು ಸಾರಿ ಹೇಳುತ್ತವೆ. ಇವರು ಸಹಜವಾಗಿಯೇ ಮಾಂಸಹಾರಿಗಳು. ಇವರು ಹುಟ್ಟು ಸಾವು, ಮದುವೆಗಳಲ್ಲಿ ಮಾಂಸದ ಬಳಕೆಯನ್ನು ಸಹಜ ಆಹಾರವಾಗಿ ಮಾದಿಗರು ಬಳಸುತ್ತಾರೆ. ಮದುವೆ, ಸಂತೋಷಕೂಟ, ಕಪ್ಪುಕಾಣಿಕೆ ಮತ್ತು ಸಾವಿನ ಆಚರಣೆಗಳಲ್ಲಿ ಇದೊಂದು ಪವಿತ್ರ ವಿಧಿಯೆಂಬಂತೆ ನಿರ್ವಹಿಸುವ ಇವರು ಮಾಂಸದ ನಂತರದ ಸ್ಥಾನವನ್ನು ಮದ್ಯಕ್ಕೆ ಮೀಸಲಿಡುತ್ತಾರೆ. ಇದೆಲ್ಲ ಇವರ ಆಚರಣೆಯ ಪ್ರಧಾನವಾದ ಅಂಶವಾಗಿಯೇ ಕಂಡುಬರುತ್ತದೆ. ಬಹುಶಃ ಈ ಮಾಂಸ ಮತ್ತು ಮದ್ಯದ ದಾಸರಾದಿ ಇವರು ಈ ಎರಡನ್ನು ಯಾಕಾಗಿ ಸ್ವೀಕರಿಸಿದ್ದಾರೆಂದರೆ ಇದಕ್ಕೆ ಲಕ್ಷ್ಮೀಪತಿ ಕೋಲಾರ ಹೀಗೆ ಅಭಿಪ್ರಾಯಪಡುತ್ತಾರೆ. ಮಾದಿಗರ ಮಾಂಸ ಮತ್ತು ಮದ್ಯ ಪ್ರಿಯತೆಗಳು ಬಹುಶಃ ಏಳನೆಯ ಶತಮಾನಕ್ಕೆ ಪೂರ್ವದಲ್ಲಿ ಅವರು ತಂತ್ರ ಪಂಥಕ್ಕೆ ಸುಲಭವಾಗಿ ಬಲಿಯುವಂತೆ ಮಾಡುವಲ್ಲಿ ಮಾಂಸ ಮತ್ತು ಮದ್ಯ ತನ್ನ ಪ್ರಭಾವವನ್ನು ಬೀರಿರಿರಬಹುದು ಎಂದು ತಮ್ಮ ಮಾಸ್ರೀಕರ ಸಂಸ್ಕೃತಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಮಾಸ್ರೀಕರು ಮಾದಿಗರ ಒಂದು ಉಪಪಂಗಡವಾದ್ದರಿಂದ ಇದೇ ಅಂಶ ಮಾದಿಗರಿಗೂ ಸಂದಾಯವಾಗುವುದರಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.

ಇದೆಲ್ಲವನ್ನು ಗಮನಿಸಿದರೆ ಮಾದಿಗರು ತಮ್ಮ ಆಚರಣಾ ವಿಧಿವಿಧಾನಗಳಲ್ಲಿ ಮದುವೆ ಮುಂತಾದ ಸಂದರ್ಭಗಳಲ್ಲಿ ಮಾಂಸ ಮತ್ತು ಮದ್ಯವು ಅವರ ಆದಿಮೂಲ ಸಂಸ್ಕೃತಿಯ ಅಪ್ಪಟ ಪ್ರತೀಕಗಳಂತೆ ಕೆಲಸ ಮಾಡುವಂತಹ ಆಕೃತಿಗಳಾಗಿರಬಹುದು. ಇದನ್ನು ಪುರಾಣ ಕೇಂದ್ರೀತ ನೆಲೆಯಿಂದ ನೋಡಿದರೆ ಕಥಾ ಮೂಲವೊಂದರ ಪ್ರಕಾರ ಪಾರ್ವತಿಯ ಮುಟ್ಟುಬಟ್ಟೆಯಲ್ಲ ಹುಟ್ಟಿದ ಮಾದಿಗ ಮಾಸ್ರೀಕ (ಮಾದಿಗರಿಗೂ ಇದೇ ಕತೆ ಅನ್ವಯಿಸುತ್ತದೆ) ಕಾಮಧೇನುವಿನ ಹಾಲಿನ ಕೆನೆಯ ರುಚಿ ಸವಿದು, ಈ ಕೆನೆಯೇ ಎಷ್ಟು ರುಚಿಯಿರಬೇಕಾದರೆ ಇನ್ನೂ ಕಾಮಧೇನುವಿನ ಮಾಂಸಖಂಡದ ರುಚಿ ಹೀಗಿರಬೇಡ ಎಂದು ಯೋಚಿಸಿ ಕಾಮಧೇನುವನ್ನೇ ಕೊಂದು ತಿನ್ನುತ್ತಾನೆ. ಹೀಗೆ ಮಾಂಸದ ರುಚಿ ಹತ್ತಿದ ಮಾದಿಗರು ಈ ಮಾಂಸವನ್ನು ವೈವಾಹಿಕ ಕ್ರಿಯೆಯ ಧಾರೆಯ ಹಿಂದಿನ ರಾತ್ರಿ ದಿನ ನಡೆಸುವ ಮೂಲಗಂಗೆಯ ಉಪವಾಸದ ಬಲಿ ಆಚರಣೆಯಂತಹ ಪವಿತ್ರ ಧಾರ್ಮಿಕ ವಿಧಿಗಳಲ್ಲಿಯೂ ಮಾಂಸವನ್ನು ಪವಿತ್ರ ಆಚರಣೆಯಂತೆ ಆಚರಿಸುವ ಇದರ ಹಿಂದೆ ಮಾದಿಗರು ಶಾಕ್ತಾರಾಧನೆಯ ತಂತ್ರಪಂಥ ಮೂಲದವರೆಂದು ಸಾರಿ ಹೇಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಇದೆಲ್ಲವನ್ನು ಒಂದು ಧಾರ್ಮಿಕ ಆಚರಣೆಯ ಗೌರವಪೂರ್ವಕವೆಂದು ಮಾದಿಗರು ನಂಬಿದ್ದರು. ಇವೆಲ್ಲವನ್ನು ಗಮನಿಸಿದಾಗ ಮಾಂಸ, ಮೈಥುನ, ಮದ್ದುಗಳೆ ಧಾರ್ಮಿಕ ಆಚರಣೆಯ ದ್ರಮ್ಮಗಳಾಗಿ ದೇವರನ್ನು ತಾತ್ವಿಕ ನೆಲೆಯಲ್ಲಿ ಗ್ರಹಿಸಲು ಅಥವಾ ಒಲಿಸಿಕೊಳ್ಳಲು ಮಾಂಸ, ಮದ್ದುಗಳು ಒಳದಾರಿಗಳೆಂದು ಮಾದಿಗರಿಗೆ ತೋಚಿರಬಹುದು.