ಉಧೋ ಉಧೋ ರಾಮಲಿಂಗಪ್ಪ ಉಧೋ ಉಧೋ

ಈ ಎಲ್ಲಾ ಸ್ಥಿತ್ಯಂತರಗಳ ನಡುವೆ ನಾನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಿಸಿದಂತಹ ಮತ್ತೊಂದು ವಿಚಿತ್ರ ಆಚರಣೆಯೆಂದರೆ ರಾಮಲಿಂಗಪ್ಪ ಸ್ವಾಮಿಯ ಜಾತ್ರೆ ಈಗಲೂ ಊರಿನ ಶ್ರೇಷ್ಟ ಕುಲಗಳೆಂದು ಬಣ್ಣಿಸುವಂತಹ ಬ್ರಾಹ್ಮಣ, ವೈಶ್ಯ, ಕ್ಷತ್ರಿಯರನ್ನು ದೇವಸ್ಥಾನದ ಹೊರಗೆ ನಿಲ್ಲಿಸಿ ಆಳುವ ಸಂಸ್ಕೃತಿಯನ್ನು ತನ್ನ ಹಿಡಿತರದಲ್ಲಿಟ್ಟುಕೊಂಡಿರುವಂತಹ ಸಂಪ್ರದಾಯ. ಇದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಚೂಡುಗೊಂಡನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದ ನಡೆಯುತ್ತ ಬರುತ್ತಿರುವ ಸಂಪ್ರದಾಯ. ಈ ಗ್ರಾಮದಲ್ಲಿ ಸರಿಸುಮಾರು ಒಂದು ೬೦ ಮನೆಗಳಿವೆ. ಅದರಲ್ಲಿ ಕೆಲವು ಹೊಲೆಯರ ಮನೆಗಳು, ಕೆಲವು ನಾಯಕರದ್ದು, ಗೌಡ, ರೆಡ್ಡಿ ಮನೆತನಕ್ಕೆ ಸೇರಿದ ಇನ್ನೂ ಕೆಲವು ಮನೆಗಳನ್ನು ಬಿಟ್ಟರೆ ಒಂದು ಮನೆ ಮಾತ್ರ ಬ್ರಾಹ್ಮಣರಿಗೆ ಸೇರಿರುವಂತಹದ್ದು.

ಇಂತಹ ಈ ಊರಿನಲ್ಲಿ ನೆಲೆನಿಂತಿರುವ ರಾಮಲಿಂಗಪ್ಪ ಒಬ್ಬ ಕೆಳವರ್ಗದ ಅನುಭಾವಿಸಂತ. ಈತ ಸರಿಸುಮಾರು ೨೫೦ ವರ್ಷಗಳ ಹಿಂದೆ ತಿಪ್ಪೆಯ ಮೇಲೆ ಸಿಕ್ಕಿದವನಂತೆ. ಇಂತಹ ಈತನನ್ನು ತಂದು ಅಲ್ಲಿಯ ಅಸ್ಪೃಶ್ಯ ಮನೆತನವೊಂದು ಸಾಕಿ ಸಲುಹಿದರು. ನಂತರದ ದಿನಗಳಲ್ಲಿ ಆ ವ್ಯಕ್ತಿ ಬದುಕಿನ ನಿರ್ವಹಣೆಗಾಗಿ ಅದೇ ಊರಿನ ಗೌಡನ ಮನೆಯಲ್ಲಿ ಜೀತಕ್ಕೆ ಇದ್ದು ಬದುಕು ಸಾಗಿಸಿದನಂತೆ. ಹೀಗೆ ದಿನಕಳೆದಂತೆ ಒಂದು ದಿನ ಹೊದಲ್ಲಿ ಕೆಲಸ ಮಾಡುತ್ತಿದ್ದ ರಾಮಲಿಂಗಪ್ಪ ಮತ್ತು ಗೌಡನಿಗೆ ಗೌಡತಿಯು ಊಟ ತಂದು ಇವರಿಬ್ಬರನ್ನು ಊಟಕ್ಕೆ ಆಹ್ವಾನಿಸಿದಳಂತೆ, ಆ ಆಹ್ವಾನವನ್ನು ಮುನ್ನಿಸಿ ರಾಮಲಿಂಗಪ್ಪ ಬಾವಿಯಲ್ಲಿ ಕೈತೊಳೆದುಕೊಂಡು ಬರಲು ಹೋದವನ್ನು ಎಷ್ಟು ಹೊತ್ತು ಕಳೆದರೂ ಬರದೆ ಇದ್ದುದರಿಂದ ಭಯಗೊಂಡ ದಂಪತಿಗಳಿಬ್ಬರು ಬಾವಿಯ ಬಳಿ ಹೋದರು. ಅಲ್ಲಿ ಅವರಿಬ್ಬರು ಕಂಡ ದೃಶ್ಯದಿಂದ ದಿಗ್ಮೂಡರಾದರು. ಅದು ರಾಮಲಿಂಗಪ್ಪ ಬಾವಿಯಂಚಿನಲ್ಲಿ ಕೂತು ತನ್ನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಹೊರತೆಗೆದು ಅದನ್ನೆಲ್ಲಾ ಗಂಗೆಯಿಂದ ತೊಳೆಯುತ್ತಿದ್ದನಂತೆ. ಈ ಒಂದು ದೃಶ್ಯ ಅವರಿಬ್ಬರಲ್ಲಿ ಆ ಕ್ಷಣಕ್ಕೆ ಮೂಡಿಸಿದ್ದು ಭಯವಲ್ಲ. ಭಕ್ತಿ. ನಂತರ ರಾಮಲಿಂಗಪ್ಪನನ್ನು ಅವರು ಮನೆತನದ ದೇವರಾಗಿ ಪೂಜೆ ಮಾಡಲು ಶುರು ಮಾಡಿದರಂತೆ.

ಹೀಗೆ ರಾಮಲಿಂಗಪ್ಪ ಬರಬರುತ್ತ ರಾಮಲಿಂಗಪ್ಪ ಸ್ವಾಮಿಯಾದರು. ಮನುಷ್ಯತ್ವದಿಂದ ದೈವತ್ವಕ್ಕೆ ಏರಿದರು. ಆದಾದ ನಂತರ ಒಂದು ನೂಲಿನ ಈಚಲ, ಒಂದು ಬಿದಿರು ಕೋಲು ಮತ್ತು ಒಂದು ಎತ್ತನ್ನು ಹಿಡಿದು ರಾಮಲಿಂಗಪ್ಪ ಭಿಕ್ಷಾಟಣೆಗೆ ಹೊರಟು ನಿಂತರಂತೆ. ಎಲ್ಲೇ ಹೋದರೂ ಸಂಜೆಗೆಲ್ಲಾ ಊರಿಗೆ ಮರಳುತ್ತಿದ್ದರಂತೆ. ಈ ಭಿಕ್ಷೆಯನ್ನು ಪಡೆಯುವ ಸಂದರ್ಭದಲ್ಲಿ ಆ ಊರಿನ ಜನರಿಗಿದ್ದ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದನಂತೆ. ಮಾರಕ ಖಾಯಿಲೆಗಳನ್ನು ವಾಸಿ ಮಾಡುವುದು, ಮಳೆ ಸುರಿಸುವುದು, ಜನಾಂಗಗಳ ನಡುವಿನ ದ್ವೇಷವನ್ನು ಶಮನ ಮಾಡುವುದು, ಅಂಗವಿಕಲತೆಯನ್ನು ಹೋಗಲಾಡಿಸುವಂತಹ ಅನೇಕ ಪವಾಡಗಳನ್ನು ಮಾಡಿ ಪವಾಡ ಪುರುಷನಾದ. ಹೀಗೆ ಜನರ ಮನಸ್ಸಲ್ಲಿ ದೇವರಾಗಿ ನೆಲೆನಿಂತ ರಾಮಲಿಂಗಪ್ಪ ಕೊನೆಗೊಂದು ದಿನ ಚೂಡಗೊಂಡನಹಳ್ಳಿಯಲ್ಲಿ ಬದುಕಿರುವಂತೆ ಸಮಾಧಿಯಾದರು.

ಹೀಗೆ ಸಮಾಧಿಯಾದ ರಾಮಲಿಂಗಪ್ಪನಿಗೆ ಊರಲ್ಲೇ ಒಂದು ದೇವಸ್ಥಾನ ಕಟ್ಟಿಸಿ ವರ್ಷ ವರ್ಷ ಆತನ ಹೆಸರಿನಲ್ಲಿ ಜಾತ್ರೆ ಮಾಡಿಕೊಂಡು ಬರುವುದು ಅಂದಿನಿಂದ ಇಂದಿನವರೆಗೆ ನಡೆದು ಬಂದಿರುವಂತಹ ಸಂಪ್ರದಾಯವಾಗಿದೆ. ಇಂತಹ ಈ ಆಚರಣೆಯಲ್ಲಿರುವ ವಿಶೇಷವೆಂದರೆ ರಾಮಲಿಂಗಪ್ಪನ ದೇವಾಲಯದ ಮೇಲ್ವಿಚಾರಣೆ, ಪೂಜೆ, ಪುನಸ್ಕಾರ, ಜಾತ್ರೆ ನಡೆಸುವುದು ಎಲ್ಲವೂ ಕೆಳವರ್ಗದವರೆ. ಅಷ್ಟೆ ಅಲ್ಲ ಪ್ರಧಾನ ಸಂಸ್ಕೃತಿಯವರೆಂದು ಬಿಂಬಿತವಾಗುತ್ತಿರುವ ಬ್ರಾಹ್ಮಣರನ್ನು ದೇವಸ್ಥಾನದ ಹೊರಗೆ ನಿಲ್ಲಿಸಿ ಆರತಿ, ತೀರ್ಥ ಕೊಡುವುದು ಇಲ್ಲಿಯ ವಿಶೇಷ. ಅವರಿಗೆ ದೇವಾಲಯದ ಒಳಗೆ ನಿಷೇಧವಿರುವುದಕ್ಕೆ ಕಾರಣ ಈವರೆಗೂ ಗೊತ್ತಿಲ್ಲ. ಇಂತಹ ಈ ದೇವಸ್ಥಾನದ ಉಸ್ತುವಾರಿಯನ್ನು ರಾಮಲಿಂಗಪ್ಪ ಸ್ವಾಮಿಯ ವಂಶಸ್ಥರು ನಡೆಸುತ್ತಾ ಬರುತ್ತಾರೆ. ಅಷ್ಟೇ ಅಲ್ಲದೆ ಈ ಊರಲ್ಲಿರುವ ಪ್ರತಿ ಮನೆಯಲ್ಲಿ ಯಾರಿಗಾದರೂ ಒಬ್ಬ ವ್ಯಕ್ತಿಗೆ ರಾಮಲಿಂಗಪ್ಪ ಎಂಬ ಹೆಸರನ್ನು ಇಟ್ಟಿರುವುದು. ಅದಕ್ಕೆ ಎಂಬಂತೆ ಈ ಊರಲ್ಲಿ ರಾಮಲಿಂಗಪ್ಪ ಎಂಬ ಹೆಸರುಗಳು ಸಾಕಷ್ಟಿವೆ. ಹೀಗೆ ದೇವಾಲಯದ ಹೊರಗೆ ನಿಲ್ಲಿಸಿ ವೈದಿಕರಿಗೆ ಆರತಿ ಕೊಡುವಂತಹ ಸಂಪ್ರದಾಯ ಬಹುಶಃ ಕರ್ನಾಟಕ ಬೇರೆ ಯಾವ ಕಡೆಯಲ್ಲೂ ನಾನು ಗಮನಿಸಿಲ್ಲ.

ಇಂತಹ ಈ ರಾಮಲಿಂಗಪ್ಪನ ಆಚರಣೆಯಲ್ಲಿ ಪುರುಷರಂತೆ ಮಹಿಳೆಯರು ಸಮಪಾಲಿನ ಕೆಲಸ ಮಾಡುವುದು ವಿಶೇಷ. ಇಲ್ಲಿ ಮಕ್ಕಳು, ಯುವತಿಯರು, ಮಹಿಳೆ-ಮುದುಕಿ ಎಂಬ ಯಾವ ಭೇದ ಭಾವವಿಲ್ಲದೆ ದೇವಸ್ಥಾನದ ಎಲ್ಲಾ ಕಡೆ ಮಹಿಳೆಯರು ಓಡಾಡಲು ಮುಕ್ತ ಅವಕಾಶವಿದೆ. ಅಂದೂ-ಮುಟ್ಟು ಎಂಬ ಯಾವ ಭೇದವೂ ಇಲ್ಲಿ ಸುಳಿದಾಡುವುದಿಲ್ಲ.

ಇಲ್ಲಿ ಮಹಿಳೆಯು ರಾಮಲಿಂಗಪ್ಪನ ಸಮಾಧಿ ಸ್ವಚ್ಚ ಮಾಡಿ ಆತನ ಉಪಯೋಗಿಸುತ್ತಿದ್ದ ಬೆತ್ತ, ಚೀಲವನ್ನು ಶುಚಿಗೊಳಿಸಿ ದೀಪ ಹಚ್ಚುವವರೆಗೂ ತಾನೇ ಮುಂದೆ ನಿಂತು ಭಕ್ತಿಯಿಂದ ನಿರ್ವಹಿಸುತ್ತಾಳೆ. ನಂತರ ರಥೋತ್ಸವ ಆಮೇಲೆ ರಾಮಲಿಂಗಪ್ಪನಿಗೆ ಕುರಿಯನ್ನೋ-ಮೇಕೆಯನ್ನೋ ಕಡಿದು ಅದರ ಮಾಂಸವನ್ನು ಉಕ್ಕೆಯಲ್ಲಿ ತುಂಬಿಕೊಂಡು ಹೋಗಿ ಆಹಾರ ಸಿದ್ಧ ಮಾಡಿ ರಾಮಲಿಂಗಪ್ಪನ ಹೆಸರಲ್ಲಿ ಎಡೆ ಹಿಡುವವರೆಗೂ ಮಹಿಳೆ ಪುರುಷರಂತೆ ದುಡಿಯುವುದು ಈ ಆಚರಣೆಯ ವಿಶೇಷ.

ಭಾರತದ ಹುಣ್ಣಿಮೆ

ಕರ್ನಾಟಕದ ಗಡಿ ಭಾಗಗಳಾದ ಕೋಲಾರ, ಪಾವಗಡ, ತುಮಕೂರು, ಬಳ್ಳಾರಿ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಆಚರಿಸುವಂತಹ ಈ ಹಬ್ಬವು ತೆಲುಗು ಮಿಶ್ರಿತ ಭಾಷೆಯ ಆಡುಗಬ್ಬವಾಗಿದೆ. ಹೆಚ್ಚಾಗಿ ಮಾದಿಗರು ಆಚರಿಸುವಂತಹ ಈ ಹಬ್ಬವು ಅವರ ಕುಲದ ಹಬ್ಬವಾಗಿಯೂ ಪ್ರಸಿದ್ಧವಾಗಿದೆ. ಈ ಹಬ್ಬವನ್ನು ಹೆಚ್ಚಾಗಿ ಕೋಲಾರ ಜಿಲ್ಲೆಯ ಗಡಿಪ್ರದೇಶದ ತಾಲೂಕುಗಳಲ್ಲಿ ಆಚರಿಸುತ್ತಾರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾನಾ ಕಡೆಗಳಲ್ಲಿ ಊರ ಹಬ್ಬವಾಗಿ ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿರುವುದು ಒಂದು ವಿಶೇಷವಾಗಿದೆ. ಇಂತಹ ಈ ಹಬ್ಬಕ್ಕೆ ಆಯಾ ಪ್ರದೇಶಕ್ಕೆ ಅನುಸಾರವಾಗಿ ಒಂದೊಂದು ಪುರಾಣವು ಹುಟ್ಟಿಕೊಂಡಿದೆ. ನಾನಾ ಕಡೆಗಳಲ್ಲಿ ನಾನಾ ತೆರನಾದಂತಹ ವಿಶಿಷ್ಟ ಸ್ಥಾನ ಮತ್ತು ಹಿನ್ನೆಲೆಯಿರುವುದು ಈ ಹಬ್ಬದ ಆಚರಣಾ ವಿಧಾನದ ಮೂಲಕ ನಮಗೆ ಗೋಚರಿಸುವ ಸತ್ಯವಾಗಿದೆ.

ಮೂಲತಃ ಯುದ್ಧ ಕಲೆಗಳನ್ನು ಅರಿತಿದ್ದ ಮಾದಿಗರ ಪುರುಷರು ನೋಡಲು ಬಲಿಷ್ಠವಾಗಿ ಕಾಣುತ್ತಿದ್ದರು. ಇಂತಹ ಇವರು ಯುದ್ಧಕ್ಕೆ ಹೋಗಿ ಅಲ್ಲಿ ಯುದ್ಧ ಜಯಿಸಿ ಬಂದವರು ಪ್ರತೀಕವಾಗಿ ಕೆಲವು ಕಡೆ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲವು ಕಡೆ ತಮ್ಮ ಮನೆಯಿಂದ ಹೊರಗೆ ಕೆಲಸದ ನಿಮಿತ್ತ ಹೋಗಿ ಎಷ್ಟು ವರ್ಷಗಳಾದರೂ ಬರದೆ ಈ ದಿನ ತಪ್ಪದೆ ಬುರುವುದಕ್ಕೆ, ಅವರನ್ನು ಸ್ವಾಗತಿಸುವ ಸಲುವಾಗಿ ಈ ಭಾರತದ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇಂತಹ ಈ ಹಬ್ಬದ ಕುರಿತು ಹಿರಿಯಜ್ಜಿ ತಿಮ್ಮಕ್ಕ ಹೀಗೆ ಹೇಳುತ್ತಾರೆ.

ನಿಗದಿಯಾದ ಹಬ್ಬದ ದಿನದಂದು ಹದ್ದಿ ಮಡುಕುಗಳನ್ನೆಲ್ಲಾ ಶುದ್ದಿ ಮಾಡುತ್ತಾರೆ. ಮನೆಯನ್ನು ಸುಣ್ಣ-ಬಣ್ಣದಿಂದ ಮದುವೆಯ ಹೆಣ್ಣಂತೆ ಅಲಂಕಾರಗೊಳಿಸುತ್ತಾರೆ. ಮನೆಯ ಮುಂದಿನ ಜಗುಲಿ, ಪಡಸಾಲೆ ಎಲ್ಲವನ್ನು ಸಗಣೆಯಿಂದ ಸಾರಿಸಿ ಗಂಜಲದ ಬಟ್ಟೆಯನ್ನು ಮನೆಯ ದಾರಂದದ ಬಳಿ ಇಡುತ್ತಾರೆ. ಮನೆಗೆ ಯಾರೇ ಬಂದರೂ ಅದನ್ನು ತುಳಿದು ಮನೆಯೊಳಗೆ ಹೋಗಬೇಕು. ಏಕೆಂದರೆ ಅಂಟು-ಮುಟ್ಟು ಸೋಕದೆ ಇರುವುದಕ್ಕೆ ಜಂಗಲ ಅದನ್ನೆಲ್ಲ ಪವಿತ್ರೀಕರಿಸುವುದರಿಂದ ಅದನ್ನು ತುಳಿದುಕೊಂಡು ಹೋಗಬೇಕು. ನಂತರ ಮನೆಯಲ್ಲಿರುವ ಹೆಣ್ಣು ಮಕ್ಕಳೆಲ್ಲಾ ಮನೆ ದೇವತೆಗೆ ಆ ದಿನವೆಲ್ಲಾ ಉಪವಾಸ ಇರಬೇಕಾಗುತ್ತದೆ. ಉಪವಾಸ ಯಾರು ಇರುತ್ತಾರೋ ಅವರು ತಂಬಿಟ್ಟು ಮಾಡಿ ಅದಕ್ಕೆ ಗ್ರಾಮದಲ್ಲಿ ಸಿಗುವಂತಹ ಹೂಗಳು (ಕಣಗಿಲೆ, ದಾಸವಾಳ, ಮುತ್ತಗ, ನಾಗಸಂಪಿಗೆ)ಗಳಿಂದ ಸಿಂಗಾರ ಮಾಡಿ ದೇವರಿಗೆ ಹರಕೆ ಬಿಟ್ಟಂತಹ ಕುರಿ, ಕೋಳಿ, ಎಮ್ಮೆಯೊಂದಿಗೆ ರಾತ್ರಿಗೆ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಸಾಗಬೇಕಾಗುತ್ತದೆ. ಇದೆಲ್ಲದರ ನಡುವೆ ಹಬ್ಬದ ದಿನದಂದು ಮಾಡಿಟ್ಟ ಅಡುಗೆ ಪದಾರ್ಥಗಳನ್ನು ಬಾಳೆ ಎಲೆಗೆ ಒಪ್ಪವಾಗಿ ಬಡಿಸಿ, ಹೊಸ ಚೆಂಬಿನಲ್ಲಿ ಗಂಗೆಯನ್ನಿಟ್ಟು ಮನೆಯ ಅಂಗಳದಲ್ಲಿ ನಿರ್ಧರಿತವಾದ ಸಮಯಕ್ಕೆ ಸರಿಯಾಗಿ ಇಟ್ಟು ಮನೆಗೆ ಬಂದು ಬಾಗಿಲನ್ನು ಹಾಕಿಬಂದುಬಿಡುತ್ತಾರೆ. ಆ ಸಂಜೆಗೆ ಆ ಊರಿನ ಎಲ್ಲರೂ ಇದೇ ಪದ್ಧತಿಯನ್ನು ಅನುಸರಿಸುವುದರಿಂದ ಕ್ಷಣ ಹೊತ್ತು ಊರಿಗೆ ಊರೇ ಮಲಗಿರುವಂತೆ, ಕರ್ಫ್ಯೂವಿಧಿಸಿದಂತೆ ಮೌನ ಆವರಿಸಿರುತ್ತದೆ. ಅಂತಹ ಹೊತ್ತಲ್ಲಿ ಊರೊಳಗಿನ ಕಾಗೆ, ನಾಯಿಗಳೆಲ್ಲ ಆ ಹಳ್ಳಿಯನ್ನು ರಾಜ್ಯಭಾರ ಮಾಡುತ್ತೇವೆ. ಬಹುಶಃ ಈ ತೆರನಾಗಿ ಬಾಗಿಲು ಮುಚ್ಚಿಕೊಂಡು ಆಚರಿಸುವಂತಹ ವ್ಯವಧಾನವನ್ನು ನೋಡಿದರೆ ಆ ಸಂಜೆಗೆ ತಮ್ಮ ಕುಲದ ಹಿರಿಯರು ಆ ಮನೆಗೆ ಕಾಗೆಯ ರೂಪದಲ್ಲಿ, ನಾಯಿಯ ರೂಪದಲ್ಲಿ ಆಗಮಿಸಿ ಮನೆಯವರು ಪ್ರೀತಿಯಿಂದ ಬಿಡಿಸಿದಂತಹ ಭಕ್ಷ ಭೋಜನಗಳನ್ನು ತಿನ್ನುತ್ತಾರೆ ಎಂಬ ನಂಬಿಕೆ ಈ ಊರಿನವರಿಗೆ ಇರಬೇಕು. ಹೀಗೆ ಅವರು ತಿನ್ನುವುದನ್ನು ನೋಡುವುದು ಪಾಪವಾಗಿರಬಹುದಾಗಿದ್ದರಿಂದ ಈ ತೆರನಾಗಿ ಬಾಗಿಲು ಮುಚ್ಚಿಕೊಳ್ಳುವುದು ಬಂದಿರಬಹುದು.

ಹೀಗೆ ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆಗೆದು ಅಳಿದುಳಿದ ಎಡೆಗೆ, ಪೂಜೆ ಮಾಡಿ ಅದನ್ನು ಆ ಮನೆಯ ಹೆಣ್ಣು ಮಗಳು ಎತ್ತಿಕೊಂಡು ಹೋಗಿ ತುಂಬಿನಿಂತ ಕೆರೆಯಲ್ಲಿ ತೇಲಿಬಿಟ್ಟು ನಂತರ ತಂಬಿಟ್ಟಿನ ದೀಪಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾಳೆ. ಹೀಗೆ ನಡೆಯುವಂತಹ ಹಬ್ಬವು ರಾತ್ರಿಗೆ ಬಹು ವೈವಿಧ್ಯವಾಗಿ ರೂಪಾಂತರವಾಗುತ್ತದೆ. ಆ ದಿನ ರಾತ್ರಿಗೆ ಗೊತ್ತು ಮಾಡಿದಂತೆ ದೇವತೆಗೆಂದು ಹರಕೆಗೆ ಬಿಟ್ಟಂತಹ ಕುರಿ, ಕೋಳಿ, ಎಮ್ಮೆಯನ್ನು ತಂಬಿಟ್ಟಿನ ದೀಪಗಳೊಂದಿಗೆ ಕೊಂಡೊಯ್ದು ದೇವತೆಗೆ ಬಲಿಕೊಡುತ್ತಾರೆ. ಮೊದಲೆ ಹೊಸ ಮಡಿಕೆಯಲ್ಲಿ ತಯಾರಿಸಿದ ಅನ್ನಕ್ಕೆ ಆ ಪ್ರಾಣಿಗಳ ತಕ್ಷವನ್ನು ಬೆರೆಸಿ ಮಾದಿಗರ ಸಮುದಾಯದ ಹಿರಿಯ ವ್ಯಕ್ತಿಗೆ ಆ ಅನ್ನವನ್ನು ಹಸ್ತಾಂತರ ಮಾಡುತ್ತಾರೆ. ಆ ಹಿರಿಯ ವ್ಯಕ್ತಿ ಆ ಅನ್ನಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಅಲ್ಲಿದ್ದ ಎಲ್ಲರಿಗೂ ಹಂಚುತ್ತಾನೆ. ಅಂತಹ ಅನ್ನವನ್ನು ಪಡೆದು ಊರಿನ ಇತರೆ ಸದಸ್ಯರು ಅನ್ನವನ್ನು ಪಡೆದುಕೊಂಡು ಹೋಗಿ ತಮ್ಮ ಹೊಲಗಳಿಗೆ, ತೋಟಗಳಿಗೆ, ಬಾವಿಗೆ ಎಸೆಯುತ್ತಾರೆ. ಇದರಿಂದ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ.

ಹಾಗೆ ಹಂಚಿ ಉಳಿದ ಅನ್ನಕ್ಕೆ ಮತ್ತೆ ದೊಡ್ಡಕ್ಕಿಯಿಂದ ಇನ್ನಷ್ಟು ಅನ್ನ ಮಾಡಿ ರಕ್ತದ ಅನ್ನದೊಂದಿಗೆ ಅದನ್ನು ಬೆರೆಸಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದಂತಹ ಮಾದಿಗ ಕುಲದ ಪೂಜಾರಿಗೆ ತಿನ್ನಲು ಕೊಡುತ್ತಾರೆ. ಮೊದಲೇ ಹಸಿದಿರುವ ಪೂಜಾರಿ ಆ ಅನ್ನವನ್ನು ಗಬಗಬನೆ ತಿನ್ನಲು ಶುರು ಮಾಡುತ್ತಾನೆ. ಈ ಅನ್ನವನ್ನು ತಿನ್ನುವ ದೃಶ್ಯವನ್ನು ಕುಲದ ಹಿರಿಯ ವ್ಯಕ್ತಿ ಮಾತ್ರ ನೋಡಬಹುದು. ಅದಕ್ಕಾಗಿ ದೇವಸ್ಥಾನದ ಒಳಗೆ ಪೂಜಾರಿಗೆ ಅನ್ನಸಂತರ್ಪಣೆಯಾಗುತ್ತದೆ. ಹೀಗೆ ಅನ್ನ ತಿಂದ ನಂತರ ಪೂಜಾರಿ ಮತ್ತೆ ಹಸಿವು-ಹಸಿವು ಎಂದು ಕೇಕೆಯಾಕುತ್ತಾನೆ. ಆಗ ಕುಲದ ಹಿರಿಯ ವ್ಯಕ್ತಿ ಮುಂದಿನ ವರ್ಷದ ಭಾರತದ ಹುಣ್ಣಿಮೆಗೆ ನಿನಗೆ ಹೊಟ್ಟೆ ತುಂಬ ಅನ್ನ ಕೊಡುವುದಾಗಿ, ಅಲ್ಲಿಯವರೆಗೂ ನೀನು ಇಲ್ಲೇ ಈ ಊರಿನಲ್ಲಿಯೇ ನೆಲೆಸಿರಬೇಕೆಂದು ಭಾಷೆ (ಮಾತು) ತೆಗೆದುಕೊಳ್ಳತ್ತಾನೆ.

ಆನಂತರ ಪೂಜಾ ಕಾರ್ಯಕ್ರಮ ಒಂದು ಹಂತಕ್ಕೆ ಬರುತ್ತದೆ. ನಂತರ ಊರವರು ಮೈಮೇಲೆ (ದೇವತೆ ಬರುವುದು) ಬಂದ ಪೂಜಾರಿ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಪಡೆಯುತ್ತಾರೆ. ಆ ಮೇಲೆ ದೇವತೆಯಿಂದ ಹೂವು ಪಡೆಯುವಂತಹ ಕಾರ್ಯಕ್ರಮ ನಡೆಯುತ್ತದೆ.

ಇಂತಹ ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ತೆರನಾಗಿ ಆಚರಿಸುತ್ತಾರೆ. ಪ್ರಸ್ತುತ ದೊಡ್ಡಹಾಲ್ಲೂರು ಗ್ರಾಮದಲ್ಲಿ ಈ ಹಬ್ಬಕ್ಕೆ ಒಂದು ವಿಶೇಷವಾದಂತಹ ಹಿನ್ನೆಲೆಯಿದೆ. ಅದು ಏನೆಂದರೆ ಬಹಳ ವರ್ಷಗಳ ಹಿಂದೆ ವನವಾಸಕ್ಕೆಂದು ಪಾಂಡವರು ಬರುತ್ತಿರಬೇಕಾದರೆ ರಾತ್ರಿಯಾಗಿ ಹೋಯಿತು. ಅಂತಹ ರಾತ್ರಿಯನ್ನು ಕಳೆಯುವ ಪಾಂಡವರಲ್ಲಿ ಒಂದು ಪದ್ಧತಿಯಿದೆ. ಅದು ಏನೆಂದರೆ ಅರ್ಧ ಸೇರು ಅಕ್ಕಿ ಬೇಯುವುದರೊಳಗೆ ಒಂದು ದೇವಸ್ಥಾನವನ್ನು ಕಟ್ಟುವುದು, ಮತ್ತು ಅದಕ್ಕೆ ಸೂರ್ಯ ಉದಯದ ಒಳಗೆ ಪೂಜೆ ಮಾಡುವುದು. ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಂತಹ ಪಾಂಡವರು ಅವರು ಕಟ್ಟಿದ ದೇವಸ್ಥಾನಗಳ ಅಡಿಗೆ ಧನ, ಕನಕ, ವಜ್ರಗಳನ್ನು ಇಡುತ್ತಿದ್ದರಂತೆ. ಅದನ್ನು ಕಾಯಲು ಅಲ್ಲಿ ಒಂದು ನಾಗರಹಾವನ್ನು ನೇಮಿಸಿ ಅವರು ತಮ್ಮ ಮುಂದಿನ ಪ್ರಯಾಣಕೈಗೊಳ್ಳುತ್ತಿದ್ದರು. ಹೀಗೆ ನಮ್ಮೂರಿಗೆ ಬಂದಂತಹ ಪಾಂಡವರನ್ನು ನೋಡಲು ಹೋಗಿದ್ದ ಊರಿನ ಹೆಂಗಸರು, ಮಕ್ಕಳು, ಗಂಡಸರು ಅವರನ್ನು ನೋಡಿ ಕುಶಲ ವಿಚಾರಿಸಿ ಬಂದರಂತೆ. ಹಾಗೆ ಬರುವಾಗ ಪಾಂಡವರ ಸಹಾಯಕ್ಕಾಗಿ ಒಂದಷ್ಟು ಮಾದಿಗ ಸಮುದಾಯದ ಪುರುಷರು ಅಲ್ಲೇ ಉಳಿದುಕೊಂಡರಂತೆ. ಅವರು ತಮ್ಮ ಮನೆಯವರಿಗೆ “ಪಾಂಡವರನ್ನು ಬೇರೆ ಊರಿಗೆ ಕಳುಹಿಸಿ ನಾವು ಬರುತ್ತೇವೆ” ಎಂದು ಹೇಳಿದವರು ಎಷ್ಟು ವರ್ಷಗಳಾದರೂ ಬರಲಿಲ್ಲವಂತೆ. ಒಂದು ದಿನ ಆ ಕುಲದ ಹಿರಿಯನಿಗೆ ಕನಸಲ್ಲಿ ಬಂದು ನಾವು ಪಾಂಡವರ ಜೊತೆಗೆ ಹೋಗುತ್ತಿದ್ದೇವೆ. ವರ್ಷಕ್ಕೊಮ್ಮೆ ಬರುತ್ತೇವೆ ಎಂದು ಹೇಳಿ ಮಾಯವಾದರು. ಅಂತಹ ಅವರ ಬರುವಿಕೆಯ ಸ್ವಾಗತ ಕೋರಲು ಭಾರತದ ಹುಣ್ಣಿಮೆಯನ್ನು ಮಾದಿಗರ ಕುಲಸ್ಥರು ಆಚರಿಸುತ್ತಾರೆ. ಈಗ ಈ ಹಬ್ಬ ಸಾಮಾಜಿಕ ಸ್ವರೂಪ ಪಡೆದುಕೊಂಡು ಊರಿನ ಹಬ್ಬವಾಗಿರುವುದು ವಿಶೇಷ.

ಹೀಗೆ ಬಂದು ಹೋಗುತ್ತಿದ್ದ ಪಾಂಡವರು ಅವರು ಬಂದು ಹೋದುದರ ನೆನಪಾಗಿ ಒಂದು ಸಾಂಸ್ಕೃತಿಕ ಚರಿತ್ರೆಯ ಅಗುಳನ್ನು ಅಲ್ಲಿ ಬಿಟ್ಟು ಹೋಗುತ್ತಿದ್ದರು. ಹೀಗೆ ಅವರು ಕಟ್ಟಿ ಹೋದಂತಹ ಗುಡಿಗಳು, ದೇವಸ್ಥಾನಗಳು ಇಂದಿಗೂ ಅಂದಿನವರ ಕಲೆಯ ಜೀವಂತಿಕೆಯ ಸಂಕೇತವಾಗಿರುವುದನ್ನು ಕಾಣಬಹುದು. ಹೀಗೆ ಪಾಂಡವರು ಪೂರ್ವಾಭಿಮುಖವಾಗಿ ಬಿಳಿ ಬೆಣಚು ಕಲ್ಲುಗಳಿಂದ ದೇವಾಲಯಗಳನ್ನು ಕಟ್ಟುತ್ತಿದ್ದರು. ಹೀಗೆ ದೇವಸ್ಥಾನಗಳನ್ನು ಕಟ್ಟುವಾಗ ಅಲ್ಲಿ ಮಾದಿಗರ ಪುರುಷರು ಏನು ಮಾಡುತ್ತಿದ್ದರು ಎಂಬುದು ಒಂದು ನಿಗೂಢ ಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಬಹುಶಃ ಕುಂತಿ ಮತ್ತು ದ್ರೌಪದಿಗೆ ಅಂದಿನ ರಾತ್ರಿ ಕಳೆಯಲು ಹಾಡು, ಕತೆ, ಪುರಾಣ, ನಾಟಕ ಮೊದಲಾದವುಗಳನ್ನು ಹೇಳಲು ಅವರು ಅಲ್ಲಿ ಉಳಿದುಕೊಂಡಿರಬಹುದು. ಇಲ್ಲಿ ಬಲಿಷ್ಠವಾಗಿದ್ದ ಇವರು ಪಾಂಡವರು ಮಾಡುತ್ತಿದ್ದ ಕೆಲಸಕ್ಕೆ ಸಹಾಯ ಮಾಡುವ ಸಲುವಾಗಿ ಅಲ್ಲಿ ಉಳಿದುಕೊಂಡಿರಬಹುದು. ನಂತರ ಇವರ ಸಾಂಸ್ಕೃತಿಕ ಪ್ರತಿಭೆಗೆ ಬೆರಗಾಗಿ ಪಾಂಡವರು ಇವರನ್ನು ತಮ್ಮೊಂದಿಗೆ ಕರೆದೊಯ್ದಿರಬಹುದು. ಹೀಗೆ ಹೊರಟು ಹೋದ ಅವರು ಬರುವಾಗ ಪಾಂಡವರಿಂದ ಇನಾಮಾಗಿ ಪಡೆದಂತಹ ದನ, ಕನಕ, ವಜ್ರ, ವೈಡೂರ್ಯ ತರಬಹುದೆಂಬ ನಂಬಿಕೆ ಇವರಲ್ಲಿ. ಇದಕ್ಕೆ ಇಂಬು ಕೊಡುವಂತೆ ಆ ಗ್ರಾಮದಲ್ಲಿ ಆಗಾಗ ಚಿನ್ನದ ಭತ್ತ, ಕುರೂಹುಗಳು ಸಿಕ್ಕಿವೆ.

ಇಂತಹ ಈ ಹಬ್ಬದ ಪ್ರತಿ ಹಂತದಲ್ಲಿಯೂ ಸಹ ಆ ಕುಲದ ಮಹಿಳೆಯು ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತಾಳೆ. ಪಾಂಡವರ ಜತೆಗೆ ಹೋದಂತಹ ತಮ್ಮ ಮನೆಯ ಅಣ್ಣ, ತಮ್ಮ, ತಂದೆ, ಗಂಡನಿಗಾಗಿ ಕಾಯುವ ಶಬರಿಯಂತೆ, ಶಕುಂತಲೆಯಂತೆ, ಊರ್ಮಿಳೆಯಂತೆ ಮಾನಸಿಕವಾಗಿ, ದೈಹಿಕವಾಗಿ ಬಂಡೆಗಲ್ಲಂತೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕಾಯುತ್ತಾಳೆ. ಇಂತಹ ಈ ಹಬ್ಬವನ್ನು ಮೂಲದಿಂದ ಚಾಚು ತಪ್ಪದೆ ಸಂಪ್ರದಾಯದಂತೆ ಆಚರಿಸಿಕೊಂಡು ಬರುವಲ್ಲಿ ಅವಳ ಶಿಸ್ತು ಮತ್ತು ಸಮಯ ಪ್ರಜ್ಞೆಯ ಅನಾವರಣವಾಗುತ್ತದೆ. ಇದರ ಹೊರತಾಗಿ ಅನಾದಿ ಕಾಲದಿಂದಲೂ ಮಾತೃ ಸಂಸ್ಕೃತಿ ಬೇರನ್ನೇ ನಂಬಿ ಬದುಕು ಸಾಗಿಸುತ್ತ ಜಲಸಂಸ್ಕೃತಿ ಮತ್ತು ಅಗ್ನಿ ಸಂಸ್ಕೃತಿಯನ್ನು ಜೊತೆಯಾಗಿಸಿಕೊಂಡು ಬರುತ್ತಿರುವ ಈ ಸಮುದಾಯಗಳು ಹೆಣ್ಣಿಗೆ ಕೊಟ್ಟಿರುವ ಪಾವಿತ್ರತೆ ಎಂತಹುದು ಎಂಬುದಕ್ಕೆ ಅವರು ಈವರೆಗೂ ಆಚರಿಸುವಂತಹ ಮಾತೃದೇವತಾ ಆಚರಣೆಯ ಸಂಸ್ಕೃತಿಯು ಉದಾಹರಣೆಯಾಗಿದೆ. ಇದನ್ನು ಎತ್ತಿ ಹಿಡಿಯುವಂತೆ ಈಗಲೂ ಈ ಕುಲಗಳಲ್ಲಿ ಜೀವಂತವಾಗಿ ಮಾರೆಮ್ಮ, ಮದ್ದೂರಮ್ಮ, ಎಲ್ಲಮ್ಮ, ಗಂಗಮ್ಮ ಮೊದಲಾದ ಮಾತೃ ಪ್ರಧಾನ ದೇವತೆಗಳ ಹೆಸರಲ್ಲಿ ಹಬ್ಬ ಆಚರಣೆಗಳು ನಡೆಯುವುದು ಮಾತೃ ಸಂಸ್ಕೃತಿಗೆ ಮಾದಿಗ ಸಮುದಾಯಗಳು ಕೊಟ್ಟಂತಹ ಪ್ರಾಮುಖ್ಯತೆ ಸಾಕ್ಷಿ.

ಇದು ಭಾರತದ ಹುಣ್ಣಿಮೆಯ ಹಬ್ಬದ ಒಂದು ತೆರನಾದಂತಹ ಆಚರಣೆಯಾದರೆ ಇನ್ನೊಂದು ತೆರನಾದಂತಹ ಆಚರಣೆಯನ್ನು ನಾವು ಇಲ್ಲಿ ಗಮನಿಸಬಹುದು. ಅದು ಖ್ಯಾತ ಸಂಸ್ಕೃತಿ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯನವರ ಸಿಂದ್‌ಮಾದಿಗರ ಸಂಸ್ಕೃತಿಯಲ್ಲಿ ಈ ತೆರನಾಗಿದೆ. ಕೋಲಾರ ಜಿಲ್ಲೆಯ “ಹರಿಜನರು” (ಮಾದಿಗರು) ಆಚರಿಸುವ “ಭಾರತದ ಹುಣ್ಣಿಮೆ” (ಭಾರತಾಲ ಪುನ್ನಮು) ದಿನ ಸಾಯಂಕಾಲ ಊರ ಮುಂದಿನ ಗಂಗಮ್ಮನ ಗುಡಿಯ ಮುಂದೆ ಒಂದು ಹೊಸ ಮಡಿಕೆಯ ತುಂಬಾ ನೀರು, ಹೊಸದಾರ ಮತ್ತು ಸೂಜಿಯನ್ನು ಇಟ್ಟಿರುತ್ತಾರೆ. ಅವರ ಪ್ರಕಾರ ಮಹಾಭಾರತ ಯುದ್ಧದಲ್ಲಿ ಭಾಗವಹಿಸಲು ಹೋದ ತಮ್ಮ ವೀರರು ಆ ದಿನ ಹಿಂತಿರುಗುತ್ತಾರೆ. ಅವರು ಯುದ್ಧದಲ್ಲಿ ದಣಿದು ಬಂದಿರುತ್ತಾರೆ. ಅದಕ್ಕಾಗಿ ಅವರಿಗೆ ಕುಡಿಯಲು ಮಡಿಕೆಯಲ್ಲಿ ನೀರು, ಯುದ್ಧದಲ್ಲಿ ಅವರ ದೇಹ ಶಸ್ತ್ರಗಳಿಂದ ಹರಿದು ಹೋಗಿರುತ್ತದೆ. ಹರಿದು ಹೋದ ದೇಹದ ಭಾಗಗಳನ್ನು ಹೊಲಿದುಕೊಳ್ಳಲು ಸೂಜಿ ಮತ್ತು ದಾರ. ಆ ದಿನ ರಾತ್ರಿಯೆಲ್ಲ ಹಾಡುಗಳನ್ನು ಹಾಡುತ್ತಾ ಕಳೆಯುತ್ತಾರೆ.

ಈ ಎರಡು ಆಚರಣೆಗಳನ್ನು ಗಮನಿಸಿದರೆ ಮಾದಿಗರು ಯುದ್ಧ ಭೂಮಿಯ ರಣತಂತ್ರಗಳನ್ನು ಮತ್ತು ಸಾಂಸ್ಕೃತಿಕ ಹಾಡು, ಕತೆ, ಪುರಾಣ, ನಾಟಕಗಳಲ್ಲಿ ಸಿದ್ಧಹಸ್ತರಾಗಿದ್ದವರೆಂಬುದು ಗೊತ್ತಾಗುತ್ತದೆ.

ಹೀಗೆ ಸಾಂಸ್ಕೃತಿಕ ಪ್ರಪಂಚಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಂತಹ ಮಾದಿಗರು ಇಂದು ಅದೇ ಸಂಸ್ಕೃತಿಯನ್ನು ಜಾಗತೀಕರಣದ ಕರಾಳ ಹಸ್ತಗಳೊಂದಿಗೆ ಸೋಸುತ್ತ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದರಿಂದ ಬಂದಂತಹ ಮಾತೃ ಸಂಸ್ಕೃತಿ ಇಂದು ಜಗತ್ತಿನಾದ್ಯಂತ ಹರಡಿ ನಿಂತಿರುವುದು ಇವರ ಸಾಂಸ್ಕೃತಿಕ ಪರಂಪರೆ ಎಂತಹದ್ದು ಎಂಬುದಕ್ಕೆ ಸಾಕ್ಷಿ. ಇಂತಹ ಈ ಸಮುದಾಯಗಳಲ್ಲಿನ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವುದು ಮತ್ತು ಇವರ ಅಭಿವೃದ್ಧಿಗೆ ದಾರಿ ತೋರುವುದು ಪ್ರಸ್ತುತ ಸರ್ಕಾರ ಮಾಡಬೇಕಾದಂತಹ ಬಹುದೊಡ್ಡ ಕೆಲಸವಾಗಿದೆ.

ಗ್ರಂಥ ಸೂಚಿ

  • ಸಿಂದ್‌ಮಾದಿಗರ ಸಂಸ್ಕೃತಿ – ಕೋಟಿಗಾನಹಳ್ಳಿ ರಾಮಯ್ಯ
  • ಮಾಸ್ರೀಕರ ಸಂಸ್ಕೃತಿ – ಲಕ್ಷ್ಮೀಪತಿ ಕೋಲಾರ
  • ಭಾರತದ ಪ್ರಾಚೀನ ಚರಿತ್ರೆ – ಡಿ.ಡಿ.ಕೋಸಂಬಿ
  • ಮರದೊಳಗಣ ಕಿಚ್ಚು – ಡಾ. ರಹಮತ್‌ತರೀಕೆರೆ
  • (Caste and Tribes of Southern India.
    – Edgar Thurston.