ಮೇಳದವರು

ಪಟ್ಟಣದೆಡೆಗೆ ಹೋದ ಮಾದನು ಅಂದು
ದಟ್ಟಡವಿಯ ಹಾದು ಮನೆಕಡೆಗೆಂದು
ಬರುವಾಗ ಬೋನಿನ ಹುಲಿಯನು ಕಂಡು
ಸೆರೆಯಿಂದ ಬಿಡಿಸಿದ ಕನಿಕರಗೊಂಡು
ಮುಂದೇನು ನಡೆಯಿತು ನೋಡಿರಿ ನೀವು
ಚೆಂದs ನಾಟಕವಾಡಿ ತೋರ್ವೆವು ನಾವು

ತೆರೆಸರಿದಾಗ

[ಕಾಡು ಹಾದಿಯಲ್ಲಿ ಮಾದ]

ಮಾದ : ಮುಂಜಾನೆ ಪಟ್ಟಣಕ್ಕೆ ಹೋಗಿದ್ದೆ. ಈಗ ಸಂಜೆಗೆ ಹಿಂದಿರುಗುತ್ತಿದ್ದೇನೆ. ಮನೆ ಇನ್ನೂ ದೂರವಿದೆ, ಕತ್ತಲಾಗುವ ಮೊದಲು ಈ ಕಾಡು ದಾರಿಯನ್ನು ಮುಗಿಸಬೇಕು. ತಪ್ಪಿದರೆ ಹುಲಿ-ಸಿಂಹಗಳ ಬಾಯಿಗೆ ಬೀಳುವ ಪರಿಸ್ಥಿತಿ. ದೇವರೇ ಕಾಪಾಡಬೇಕು. (ಘುರ್ ಘುರ್ ಘುರ್ ಘುರ್ ಸದ್ದು) ಅಬ್ಬಾ ಇದೇಹನು ಸದ್ದು! ಹುಲಿಯದೆ? ಹಾಂ ಹೌದು ಹೌದು. ಹುಲಿ ಗುರುಗುಟ್ಟುವ ಸದ್ದು! ಹತ್ತಿರದಲ್ಲೆ ಕೇಳಿಸುತ್ತಿದೆ ಅಯ್ಯೋ, ಈಗೇನು ಮಾಡಲಿ? ಎಲ್ಲಿಗೆ ಓಡಲಿ? ಹೇಗೆ ಜೀವ ಉಳಿಸಿಕೊಳ್ಳಲಿ?

ಹುಲಿ : ಹೋಯ್‌, ಯಾರಪ್ಪಅದು?

ಮಾದ : ನ… ನ… ನ್ನಾ ನು ಮ…. ಮ…. ಮ್ಮಾದ.

ಹುಲಿ : ಯಾರು? ಮಾದಣ್ಣನೆ? ನಮಸ್ಕಾರ ಮಾದಣ್ಣ.

ಮಾದ : ನ… ನ… ನಮಸ್ಕಾರ. ಯಾರು ಮಾತಾಡುವುದು?

ಹುಲಿ : ನಾನು; ಹುಲಿಯಣ್ಣ. ಇಗೋ, ಇಲ್ಲಿದ್ದೇನೆ-ಬೋನಿನಲ್ಲಿ.

ಮಾದ : ಬೋನಿನಲ್ಲಿ?

ಹುಲಿ : ಹೌದು, ಬೋನಿನಲ್ಲಿ ಬಿದ್ದಿದ್ದೇನೆ. ದಯಮಾಡಿ ಇತ್ತ ಬಾ.

ಮಾದ : ಬೇಡಪ್ಪಾ, ಬೇಡ. ನಾನು ಬರುವುದಿಲ್ಲ.

ಹುಲಿ : ಬರುವುದಿಲ್ಲ? ಯಾಕೆ? ಅಷ್ಟೂ ಹೆದರಿಕೆಯ ನಿನಗೆ?

ಮಾದ : ದುಷ್ಟರಿಂದ ದೂರನಿರಬೇಕೆಂದು ಹಿರಿಯರು ಹೇಳುತ್ತಾರೆ.

ಹುಲಿ : ಆದರೆ ನಾನು ದುಷ್ಟನಲ್ಲ ಮಾದಣ್ಣ. ನಿನಗೆ ನಾನೇನೂ ಮಾಡುವುದಿಲ್ಲ. ದಯವಿಟ್ಟು ಹತ್ತಿರ ಬಾ. ಈ ಬೋನಿನ ಬಾಗಿಲು ತೆಗೆ. ಅಷ್ಟು ಉಪಕಾರ ಮಾಡು.

ಮಾದ : ನಾನು ನಿನ್ನ ಬಳಿ ಬರುವುದೂ ಇಲ್ಲ, ಬೋನಿನ ಬಾಗಿಲು ತೆರೆಯುವುದೂ ಇಲ್ಲ.

ಹುಲಿ : ನಿನ್ನ ದಮ್ಮಯ್ಯ. ಹಾಗೆ ಹೇಳಬೇಡ ಮಾದಣ್ಣ ನನ್ನ ಮೇಲೆ ಕರುಣೆ ಇಡು. ಬೋನಿನ ಬಾಗಿಲು ತೆರೆದು ಬಿಡು.

ಮಾದ : ಊಹುಂ. ಅದು ಸಾಧ್ಯವೇ ಇಲ್ಲ.

ಹುಲಿ : ಯಾಕಣ್ಣ? ಯಾಕೆ ಹಾಗೆ ಹೇಳುತ್ತಿಯಾ?

ಮಾದ : ನಾನು ಬಾಗಿಲು ತೆರೆದರೆ ನೀನು ಹೊರಗೆ ಬಂದು ಬಿಡುತ್ತಿ. ಮತ್ತೆ ನನ್ನನ್ನೇ ತಿಂದು ಬಿಡುತ್ತಿ ಅಷ್ಟೆ.

ಹುಲಿ : ಆಣೆಯಿಟ್ಟು ಹೇಳುತ್ತೇನೆ ಮಾದಣ್ಣ; ನಾನು ನಿನಗೇನೂ ಮಾಡುವುದಿಲ್ಲ. ಉಪಕಾರಕ್ಕೆ ಅಪಕಾರ ಮಾಡುವವ ನಾನಲ್ಲ. ನನ್ನ ಮಾತನ್ನು ನಂಬು. ನನ್ನನ್ನು ಸೆರೆಯಿಂದ ಬಿಡಿಸಿ ಕಾಪಾಡು. ದೇವರಾಣೆಗೂ ನಾನು ನಿನ್ನನ್ನು ನೋಯಿಸುವುದಿಲ್ಲ.

ಮಾದ : ಆಗಲಿ, ನಾನು ನಿನ್ನ ಮಾತನ್ನು ನಂಬುತ್ತೇನೆ. ನಿನ್ನನ್ನು ಸೆರಿಯಿಂದ ಬಿಡಿಸುತ್ತೇನೆ. ಆದರೆ ಕೊಟ್ಟ ಮಾತಿಗೆ ತಪ್ಪಬೇಡ. ನೆನಪಿರಲಿ.

ಹುಲಿ : ಖಂಡಿತಕ್ಕೂ ತಪ್ಪುವುದಿಲ್ಲ. ನಿನ್ನ ಉಪಕಾರ ಮರೆಯುವುದಿಲ್ಲ.

ಮಾದ : ನೋಡು, ಬೋನಿನ ಬಾಗಿಲು ತೆರೆದೇ ಬಿಟ್ಟೆ.

ಹುಲಿ : ನೋಡು, ನಾನು ಹೊರಗೆ ಬಂದೇ ಬಿಟ್ಟೆ (ಪಕ್ಕನೆ ಮಾದನನ್ನು ಹಿಡಿದುಕೊಳ್ಳುತ್ತ) ಏ ಬೆಪ್ಪು ತಕ್ಕಡೀ ಕೊನೆಗೂ ಸಿಕ್ಕಿ ಬಿದ್ದೆಯಲ್ಲಾ! ಇನ್ನು ನಿನ್ನನ್ನು ಬಿಡುವ ಹಾಗಿಲ್ಲ.

ಮಾದ : ಹುಲಿಯಣ್ಣಾ, ಇದೇನು ಹೇಳುತ್ತಿಯಾ? ಈಗ ತಾನೆ ದೇವರಾಣೆ ಹಾಕಿದೆಯಲ್ಲಾ?

ಹುಲಿ : ದೇವರ ಹೆಸರು ಹೇಳಿಯೇ ಕೆಲಸ ಮಾಡಿಸುವುದು ಬುದ್ಧಿವಂತರ ಲಕ್ಷಣ. ಅಷ್ಟೂ ಗೊತ್ತಿಲ್ಲವೆ ನಿನಗೆ?

ಮಾದ : ನನಗೇನೂ ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದಿಯಾ. ಕೊಟ್ಟ ಮಾತು ಅಷ್ಟು ಬೇಗ ಮರೆತು ಹೋಯಿತೆ?

ಹುಲಿ : ಸಿಟ್ಟುಗೊಂಡಾಗ ಮತ್ತು ಹೊಟ್ಟೆ ಹಸಿದಾಗ ಕೊಟ್ಟ ಮಾತು ಮರೆತು ಹೋಗುತ್ತದೆ. ಕೆಲವು ದಿನಗಳಿಂದ ನನಗೆ ಆಹಾರ ಸಿಕ್ಕಿಲ್ಲ. ನಾನು ತುಂಬ ಹಸಿದಿದ್ದೇನೆ; ಬಳಲಿದ್ದೇನೆ. ಹಸಿದವರಿಗೆ ಮೊದಲು ಆಹಾರ ಮತ್ತೆ ನೀತಿ ಪಾಠ.

ಮಾದ : ಹುಲಿಯಣ್ಣಾ, ಬೋನಿನ ಬಾಗಿಲು ತೆಗೆದು ನಿನ್ನನ್ನು ನಾನು ಬದುಕಿಸಿದೆ. ನೀನೀಗ ನನ್ನನ್ನೇ ತಿನ್ನುತ್ತೇನೆ ಅನ್ನುತ್ತೀಯಾ.

ಹುಲಿ : ಹೌದು. ಅದರಲ್ಲೇನು ತಪ್ಪು?

ಮಾದ : ಒಳ್ಳೆಯವರು ಅಪಕಾರಕ್ಕೂ ಉಪಕಾರ ಮಾಡುತ್ತಾರೆ. ನೀನು ಉಪಕಾರಕ್ಕೂ ಅಪಕಾರ ಬಗೆಯುತ್ತಿಯಲ್ಲಾ!

ಹುಲಿ : ಯಾರು ನಿನ್ನ “ಒಳ್ಳೆಯವರು” ಮನುಷ್ಯರೇನು?

ಮಾದ : ಇರಬಹುದಲ್ಲ. ಮನುಷ್ಯರೆಲ್ಲ ಕೆಟ್ಟವರೆಂಬುದು ನಿನ್ನ ಅಭಿಪ್ರಾಯವೆ?

ಹುಲಿ : ಮಾದ, ನೀನು ಮನುಷ್ಯ ನೋಡು. ಹಾಗಾಗಿ ನಿಮ್ಮ ಜಾತಿಯವರನ್ನೆಲ್ಲ ಸುಮ್ಮ ಸುಮ್ಮನೆ ಹೊಗಳುತ್ತಿರುವೆ. ಇತರ ಜೀವಿಗಳಲ್ಲಿರುವ ಒಳ್ಳೆಯತನ ಮನುಷ್ಯರಲ್ಲಿಲ್ಲ. ನಾಕು ದಿನ ಅನ್ನ ಹಾಕಿದವನನ್ನು ನಾಯಿಯಾದರೂ ನೆನೆಯುತ್ತದೆ. ಮನುಷ್ಯ ಮರೆಯುತ್ತಾನೆ. ಉಪಕಾರ ಸ್ಮರಣೆ ಅವನಲ್ಲಿಲ್ಲ.  ಈ ಮಾತು ಸತ್ಯ.

ಮಾದ : ಇಲ್ಲ ಹುಲಿಯಣ್ಣಾ, ನಿನ್ನ ಮಾತನ್ನು ನಾನು ಒಪ್ಪುವುದಿಲ್ಲ ಅನುಕೂಲಕ್ಕೆ ತಕ್ಕ ಹಾಗೆ ನೀನೀಗ ಮಾತಾಡುತ್ತೀಯಾ ದಯವಿಟ್ಟು ಕೆಟ್ಟಯೋಚನೆ ಮಾಡಬೇಡ. ನನ್ನನ್ನು ಬಿಟ್ಟು ಬಿಡು.

ಹುಲಿ : ಮಾದಾ ಮನುಷ್ಯರೆಲ್ಲ ಉಪಕಾರಕ್ಕೆ ಪ್ರತಿ ಉಪಕಾರವನ್ನೇ ಮಾಡುವುದು ನಿಜವಾದರೆ ನಾನೂ ಹಾಗೆ ಮಾಡಲು ಸಿದ್ಧನಿದ್ದೇನೆ. ನಿನ್ನ ಉಪಕಾರಕ್ಕೆ ಪ್ರತಿಯಾಗಿ ನಿನ್ನನ್ನೂ ಬಿಟ್ಟು ಬಿಡುತ್ತೇನೆ. ಅದಕ್ಕಾಗಿ ನಾವೀಗ ಒಂದು ಪಂಥ ಕಟ್ಟೋಣ. ಕಾಡಿನಲ್ಲಿ ನಮಗೆದುರಾಗುವ ಐದು ಮಂದಿಯಲ್ಲಿ ವಿಚಾರಿಸೋಣ. ಅವರಲ್ಲಿ ಒಬ್ಬನಾದರೂ ಮನುಷ್ಯರ ಪ್ರತ್ಯುಪಕಾರ ಬುದ್ಧಿಯ ಬಗ್ಗೆ ಸಾಕ್ಷಿ ನುಡಿದರೆ ಸಾಕು. ನಿನ್ನನ್ನು ಏನೂ ಮಾಡುವುದಿಲ್ಲ. ಸರಿತಾನೆ?

ಮಾದ : ಆಗಲಿ ಹುಲಿಯಣ್ಣ, ಒಪ್ಪಿಕೊಳ್ಳುತ್ತೇನೆ.

ಹುಲಿ : ಸರಿ,  ನಡೆ ಹಾಗಾದರೆ.