ಮೇಳದವರು
ಹುಲಿಯಣ್ಣ ಬಿಂಕದಿ ನಡೆದನು ಮುಂದೆ
ಇಲಿಯಂತೆ ಮಾದನು ಸಾಗಿದ ಹಿಂದೆ
ತುಸುದೂರ ಬಂದಾಗ ಬಯಲಲ್ಲಿ ಒಂದು
ಹಸು ಮೇಯುತಿರುವುದ ಕಂಡರು ಅಂದು
ಹುಲಿ : ನೋಡು ಮಾದಾ, ಮೊದಲ ಸಾಕ್ಷಿ ಸಿಕ್ಕೇಬಿಟ್ಟಿತು.
ಮಾದ : ಹೌದು. ದನವೊಂದು ಇದಿರಲ್ಲಿದೆ. ಆದರೆ ಆಶ್ಚರ್ಯ. ನಿನ್ನನ್ನು ನೋಡಿದರೂ ಅದು ಹೆದರಿದಂತೆ ಕಾಣುವುದಿಲ್ಲ.
ಹುಲಿ : ಆದುದರಿಂದ ನಾನೇ ಅದನ್ನು ಮೊದಲು ಮಾತಾಡಿಸುತ್ತೇನೆ “ಕಪಿಲಮ್ಮಾ, ಕಪಿಲಮ್ಮಾ, ಎಲ್ಲಿಗೆ ಹೊರಟಿದ್ದಿಯಾ?”
ಕಪಿಲೆ : ಊರು ಬಿಟ್ಟು ಹೊರಟಿದ್ದೇನೆ. ಸದ್ಯ ಕಾಡಿಗೆ ಬಂದಿದ್ದೇನೆ.
ಮಾದ : ದನಗಳಿಗೆ ಹುಲಿಯ ಹೆದರಿಕೆ ಬಹಳ. ಹುಲಿಯನ್ನು ಕಂಡರೆ ಊರು ಬಿಟ್ಟು ಓಡುತ್ತವೆ ಅವು, ಆದರೆ ………
ಕಪಿಲೆ : ಆದರೇನು? ಅದೇಕೆ ನಿಲ್ಲಿಸಿದೆ?
ಮಾದ : ನೀನು ಹುಲಿಯಣ್ಣನನ್ನು ಕಂಡರೂ ಹೆದರಲಿಲ್ಲ; ಓಡಿ ಹೋಗಲಿಲ್ಲ.
ಕಪಿಲೆ : ಹೋ, ಅದಕ್ಕಾಗಿ ನಿನಗೆ ಆಶ್ಚರ್ಯವೆ? ನೀನು ಹೇಳುವುದು ನಿಜ. ನನಗೆ ಹುಲಿಯ ಹೆದರಿಕೆ ಇಲ್ಲ.
ಮಾದ : ಕಾರಣ ಕೇಳಬಹುದೆ?
ಕಪಿಲೆ : ಜೀವದಲ್ಲಿ ಆಸೆ ಇರುವವರಿಗೆ ಮಾತ್ರ ಹೆದರಿಕೆ ಇರುತ್ತದೆ.
ಮಾದ : ಹಾಗಾದರೆ ನಿನಗೆ?
ಕಪಿಲೆ : ನನಗೆ ಜೀವದಾಸೆ ಇಲ್ಲ.
ಹುಲಿ : ಏನು, ನಿನಗೆ ಜೀವದಾಸೆ ಇಲ್ಲವೆ? ಅದೇಕೆ ಹಾಗೆ ಹೇಳುವೆ?
ಕಪಿಲೆ : ಅದರ ಕಾರಣ ಮತ್ತೆ ಹೇಳುತ್ತೇನೆ. ನೀವಿಬ್ಬರೂ ಜೊತೆಗೂಡಿ ಹೊರಟಿದ್ದೀರಿ, ಎಲ್ಲಿಗೆ? ಏಕೆ? ಅದನ್ನು ಮೊದಲು ತಿಳಿಸುವಿರಾ?
ಹುಲಿ : ಮನುಷ್ಯರಲ್ಲಿ ಉಪಕಾರಕ್ಕೆ ಪ್ರತಿ ಉಪಕಾರ ಮಾಡುವವರೇ ಹೆಚ್ಚು ಮಂದಿ ಎಂದು ಈ ಮನುಷ್ಯ ಹೇಳುತ್ತಾನೆ. ಅದು ಸತ್ಯವಲ್ಲ ಎಂದು ನಾನು ಹೇಳುತ್ತೇನೆ. ನಮ್ಮಲ್ಲಿ ಯಾರ ಅನಿಸಿಕೆ ಸರಿ ಎಂಬುದನ್ನು ತಿಳಿಯಬೇಕಾಗಿದೆ. ಅದಕ್ಕಾಗಿ ನಿನ್ನನ್ನೀಗ ಕೇಳುತ್ತಿದ್ದೇವೆ. ನಿಹನ್ನ ಅಭಿಪ್ರಾಯವೇನು?
ಕಪಿಲೆ : ಹುಲಿಯಣ್ಣಾ, ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವನ್ನು ನಾನೂ ಒಪ್ಪಿಕೊಳ್ಳುತ್ತೇನೆ, ಅದು ನನ್ನ ಅನುಭವವೂ ಹೌದು.
ಹುಲಿ : ಏನದು ನಿನ್ನ ಅನುಭವ? ಅದನ್ನು ನಮ್ಮಲ್ಲಿ ಹಂಚಿಕೊಳ್ಳುವಿಯಾ?
ಕಪಿಲೆ : ಕಳೆದ ಹದಿನೈದು ವರ್ಷಗಳಿಂದ ನಾನೊಬ್ಬನ ಮನೆಯಲ್ಲಿದ್ದೇನೆ. ಅವನು ಭಾರೀ ಶ್ರೀಮಂತ ಬೇಕಷ್ಟು ಆಸ್ತಿ ಪಾಸ್ತಿ ಹಣಕಾಸು ಉಳ್ಳವ. ಅವನಲ್ಲಿರುವಾಗ ಹತ್ತು ಬಾರಿ ನಾನು ಕರು ಹಾಕಿದ್ದೆ. ಆ ಕರುಗಳಲ್ಲಿ ಆರು ಹೆಣ್ಣು, ನಾಲ್ಕು ಗಂಡು. ಆ ಶ್ರೀಮಂತನ ಹಟ್ಟಿ ತುಂಬ ಇದೆ ನನ್ನ ಸಂತಾನ. ಆ ಮನೆಯವರಿಗೆ ಕೊಡಗಟ್ಟಲೆ ಹಾಲು ಕೊಟ್ಟವಳು ನಾನು ಕರೆವ ಹಸುಗಳನ್ನು ಕೊಟ್ಟವಳೂ ನಾನೇ. ಅವರಿಗೆ ಉಳುವ ಎತ್ತುಗಳು ದೊರೆತುದು ನನ್ನಿಂದ, ಹೊಲಗದ್ದೆಗಳಿಗೆ ಗೊಬ್ಬರವೂ ನನ್ನಿಂದ. ಆದರೆ….
ಮಾದ : ಆದರೆ!!! ಎಂದು ನಿಲ್ಲಿಸಿಬಿಟ್ಟೆಯಲ್ಲ? ಮುಂದೇನಾಯಿತು ಹೇಳು?
ಕಪಿಲೆ : ಆಗುವುದೇನು ಮಣ್ಣು? ಕಾಲ ಮುಂದಾಯಿತು. ಶಕ್ತಿ ಹಿಂದಾಯಿತು. ಮತ್ತೆ ನಾನು ಕರು ಹಾಕಲಿಲ್ಲ. ಕೆಚ್ಚಲಿನ ಹಾಲು ಬತ್ತಿತ್ತು, ಈಗ….
ಹುಲಿ : ಏನಾಗಿದೆ ಈಗ?
ಕಪಿಲೆ : ಈಗ ನಾನು ಯಾರಿಗೂ ಬೇಡಾದವವಳು. ಯಾರೂ ನನ್ನನ್ನು ಪ್ರೀತಿಸುವುದಿಲ್ಲ. ಯಾರಿಗೂ ನನ್ನ ಮೇಲೆ ಕರುಣೆ ಇಲ್ಲ, ಮುದ್ದೆ ಮುದ್ದೆ ಹಿಂಡಿ ಇಡುತ್ತಿದ್ದ ಯಜಮಾನಿ ನನ್ನನ್ನೀಗ ಕಣ್ಣೆತ್ತಿಯೂ ನೋಡುವುದಿಲ್ಲ, ತಿನ್ನಲ್ಲು ಹುಲ್ಲು ಇಲ್ಲ, ಕುಡಿಯಲು ನೀರು ಇಲ್ಲ ಎನ್ನುವಂತಾಗಿದೆ ನನ್ನ ಸ್ಥಿತಿ.
ಮಾದ : ನಿನಗೆ ಮಕ್ಕಳು ಇರಬೇಕಲ್ಲವೆ? ಅವೂ ನಿನ್ನನ್ನು ಪ್ರೀತಿಸುವುದಿಲ್ಲವೆ?
ಕಪಿಲೆ : ಎಲ್ಲರೂ ಇದ್ದಾರೆ. ಈಗ ಮಾತ್ರ ಇದ್ದೂ ಇಲ್ಲದಂತೆ ಆಗಿದ್ದಾರೆ.
ಹುಲಿ : ಅದೇಕೆ ಹಾಗೆ ಹೇಳುತ್ತೀಯಾ?
ಕಪಿಲೆ : ಕೆಚ್ಚಲಿನ ಹಾಲು ಸಿಗುವಷ್ಟು ಕಾಲ ಮಕ್ಕಳಿಗೆ ನನ್ನಲ್ಲಿ ಪ್ರೀತಿ ಇತ್ತು. ಹಾಲು ಬತ್ತಿದಂತೆ ಅವರ ಪ್ರೀತಿಯೂ ಬತ್ತಿ ಹೋಯಿತು. ಈಗ ಹೆಣ್ಣು ಮಕ್ಕಳ ಪ್ರೀತಿ ತಮ್ಮ ಮಕ್ಕಳ ಕಡೆಗೆ. ಗಂಡು ಮಕ್ಕಳ ಪ್ರೀತಿ ಬೇರೆ ಹೆಣ್ಣುಗಳ ಕಡೆಗೆ.
ಮಾದ : ನಿನಗೆ ಮೊಮ್ಮಕ್ಕಳೂ ಇದ್ದಾರೆಯೆ?
ಕಪಿಲೆ : ಮೊಮ್ಮಕ್ಕಳು ಇದ್ದಾವೆ ನಿಜ. ಆದರೆ ಅವುಗಳಿಗೆ ನನ್ನ ಪರಿಚಯವೇ ಇಲ್ಲ.
ಮಾದ : ಅದೇಕೆ ಹಾಗಾಯಿತು?
ಕಪಿಲೆ : ನಾನೀಗ ಬತ್ತಿದ ದನ, ಮುದಿಗೊಡ್ಡು. ಎಲ್ಲರಿಗೂ ಭಾರವಾಗಿ ಬದುಕುವವಳು. ಹಟ್ಟಿಯಲ್ಲಿ ನನ್ನ ಸ್ನಾನ ಕೊನೆಯದು. ಹಿಂಬದಿಯ ಮೂಲೆಯಲ್ಲಿ ಕಟ್ಟಿಬಿಡುತ್ತಾರೆ ನನ್ನನ್ನು. ಮಕ್ಕಳು ಮೊಮ್ಮಕ್ಕಳು ಒಂದು ಕಡೆಯಲ್ಲಿದ್ದರೆ ನಾನಿರುವುದು ಇನ್ನೊಂದು ಕಡೆಯಲ್ಲಿ, ಒಮ್ಮೆಮ್ಮೆ ಬೆಳಗು ಬೈಗುಗಳಲ್ಲಿ ಎಲ್ಲರೂ ಒಟ್ಟಾಗುವುದಿದೆ, ಆಗ ನೋಡಬೇಕು ಮೊಮ್ಮಕ್ಕಳ ರಂಪಾಟ! ಕೆಲವು ನನನಗೆ ಹಾಯುತ್ತವೆ. ಕೆಲವು ಒದೆಯಲಿಲಕ್ಕೂ ಸಿದ್ಧ, ಸೊಕ್ಕಿನ ಕೆಲವು ನನ್ನ ಮೇಲೆಯೇ ಹಾರುವುದಿದೆ, ನೋವಿನ ಸಂಗತಿಯೆಂದರೆ ಅವುಗಳಲ್ಲಿ ಹೆಚ್ಚಿನವಕ್ಕೆ ನನ್ನ ಪರಿಚಯವೂ ಇಲ್ಲ; ನನ್ನ ಮೇಲೆ ಪ್ರೀತಿಯೂ ಇಲ್ಲ. ಒಮ್ಮೊಮ್ಮೆ ನಾನೇಕೆ ಬದುಕಬೇಕು ಎನಿಸುತ್ತದೆ ನನಗೆ (ಅಳುವಳು)
ಮಾದ : ಅಳಬೇಡ ಕಪಿಲಮ್ಮ ; ಸಮಾಧಾನ ತಂದಕೊ. ನಿಜವಾಗಿಯೂ ಹೀಗೆ ಆಗಬಾರದಿತ್ತು.
ಕಪಿಲೆ : ಆಗ ಬಾರದ್ದು ಆಗಿ ಹೋಗಿದೆ ಅಣ್ಣಾ. ಅಷ್ಟೇ ಅಲ್ಲ….
ಹುಲಿ : ಇನ್ನೇನಿದೆ ಕಪಿಲಮ್ಮಾ ಹೇಳಲು ಇರುವವುದನ್ನೆಲ್ಲಲ ಹೇಳಿಬಿಡು.
ಕಪಿಲೆ : ನಿನ್ನ ತಾನೆ ನಮ್ಮ ಶ್ರೀಮಂತ ಯಜಮಾನನ ಮಾತು ಕೇಳಿಸಿಲಕೊಂಡೆ, ತಕ್ಷಣ ಆ ಮನೆಯ ಆಸೆಬಿಟ್ಟು ಹೊರಟು ಬಂದೆ.
ಹುಲಿ : ಯಜಮಾನ ಏನು ಹೇಳುತ್ತಿದ್ದ? ಯಾರೊಡನೆ?
ಕಪಿಲೆ : ನಿನ್ನೆ ಯಜಮಾನ ತನ್ನ ಹೆಂಡತಿಯೊಡನೆ ಮಾತಾಡುತ್ತಿದ್ದ. ನನ್ನ ಕುರಿತು ಅವರ ಮಾತುಕತೆ ನಡೆದಿತ್ತು. ನಾನು ಮುದಿಯಾಗಿದ್ದೇನೆ. ಇನ್ನು ಕರು ಹಾಕುವಂತಿಲ್ಲ; ಹಾಲು ಕೊಡುವಂತಿಲ್ಲ. ನನಗಾಗಿ ಮಾಡಿದ ಪೈಸೆ ವೆಚ್ಚವೂ ಹಿಂದೆ ಬರುವಂತಿಲ್ಲ. ಆದುದರಿಂದ…
ಮಾದ : ಆದುದರಿಂದ?
ಕಪಿಲೆ : ನನ್ನನ್ನು ಕಸಾಯಿಖಾನೆಗೆ ಅಟ್ಟಲು ಯೋಚಿಸುತ್ತಿದ್ದಾರೆ. ನನ್ನ ಸರ್ವಸ್ವವನ್ನೂ ನಾನು ಅವರಿಗೆ ನೀಡಿದೆ. ಅವರ ಸೇವೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಅವರೀಗ ಕಡುಕನಿಗೆ ನನ್ನನ್ನೂ ಮಾರಲಿದ್ದಾರೆ. ಆದುದರಿಂದಲೇ ನಾನು ಊರು ಬಿಟ್ಟು ಕಾಡು ಸೇರಿದೆ.
ಹುಲಿ : ಕಪಿಲಮ್ಮಾ, ಮನುಷ್ಯರು ಎಷ್ಟು ಕೃತಘ್ನರು ಎಂಬುದನ್ನು ಚೆನ್ನಾಗಿ ಹೇಳಿದೆ. ಉಪಕಾರವಾಯಿತು. ನಾವಿನ್ನು ಬರುತ್ತೇವೆ.
ಕಪಿಲೆ : ಒಳ್ಳೆಯದು ಹೋಗಿ ಬನ್ನಿ.
ಹುಲಿ : ಮಾದಾ ಕಪಿಲಮ್ಮನ ಮಾತು ಕೇಳಿದೆಯಷ್ಟೆ?
ಮಾದ : ಹೌದು. ಆಕೆ ನಿನ್ನ ಪರವಾಗಿಯೇ ಸಾಕ್ಷಿ ಹೇಳಿದಳು. ಆಗಲಿ ಮುಂದೆ ಹೋಗೋಣ.
Leave A Comment