ಮೇಳದವರು

ಸುತ್ತ ಮುತ್ತ ನೋಡಿಕೊಂಡು
ಅವರು ಮುಂದೆ ಬಂದರು
ಮತ್ತೆ ಅಲ್ಲೆ ಹರಿಯುತ್ತಿದ್ದ
ನದಿಯನೊಂದು ಲಕಂಡರ,

ಹುಲಿ : ಮಾದ,  ನೋಡಿಲ್ಲಿ ನದಿಯೊಂದು ಹರಿಯುತ್ತಾ ಇದೆ.

ಮಾದ : ನಿಜ ನಿಜ. ಹರಿವ ನದಿ ಎದುರಿಗಿದೆ. ಇದನ್ನೇ ವಿಚಾರಿಸೋಣವೇ?

ಹುಲಿ : ಆಗಲಿ, ಮಾತಾಡಿಸಿ ನೋಡು. ಉತ್ತರ ಸಿಕ್ಕಿದರೆ ಆಯಿತಲ್ಲ ಇಲ್ಲವಾದರೆ ಬೇರೊಬ್ಬರನ್ನು ಹುಡುಕೋಣ.

ಮಾದ : ಈಗಿನ ಸರದಿ ನಿನಗೇ ಇರಲಿ. ನದಿಯನ್ನು ನೀನೇ ಮಾತಾಡಿಸು.

ಹುಲಿ : ಆಯಿತು. ಒಪ್ಪಿಕೊಳ್ಳುತ್ತೇನೆ. ನದಿಯಮ್ಮಾ, ನದಿಯಮ್ಮಾ, ನಮ್ಮದೊಂದು ಪ್ರಶ್ನೆಯಿದೆ. ಉತ್ತರ ಹೇಳಬಲ್ಲೆಯಾ?

ನದಿ : ಪ್ರಶ್ನೆ ಇಂತಹದುದೆಂದು ಗೊತ್ತಾಗಲಿ. ಮತ್ತಲ್ಲವೆ ಉತ್ತರಿಸುವ ವಿಚಾರ? ಮನುಷ್ಯರಲ್ಲಿ ಉಪಕಾರ ಸ್ಮರಣೆ ಉಂಟೇ ಇಲ್ಲವೆ? ಅವರು ಪ್ರತ್ಯುಪಕಾರ ಬುದ್ಧಿಯವರು ಹೌದೇ ಅಲ್ಲವೆ? ಇದು ನಮ್ಮ ಪ್ರಶ್ನೆ? ಈ ಬಗ್ಗೆ ನಿನಗೇನು ಗೊತ್ತಿದ ಹೇಳು?

ನದಿ : ನಾನು ಯಾವುದೋ ಗಿರಿಯಲ್ಲಿ ಹುಟ್ಟುತ್ತೇನೆ. ಎಲ್ಲೆಲ್ಲೋ ಹರಿದು ಸಾಗರ ಸೇರುತ್ತೇನೆ. ಪಯಣದ ಹಾದಿಯಲ್ಲಿ ಸಾವಿರಾರು ಜನರ ಪರಿಚಯ ನನಗಾಗುತ್ತದೆ.

ಮಾದ : ಅಂದರೆ ನಮ್ಮ ಪ್ರಶ್ನೆಗೆ ಉತ್ತರ ನಿನ್ನಲ್ಲಿದೆ ಅಂದಂತಾಯಿತು.

ನದಿ : ಉತ್ತರವೇನೋ ಇದೆ. ಅದು ಸರಿಯೋ ತಪ್ಪೋ ನೀವೇ ನಿರ್ಧರಿಸಬೇಕು. ನನಗಾದ ಅನುಭವ ನಾನು ಹೇಳಬಲ್ಲೆ.

ಹುಲಿ : ಅನುಭವದ ಮಾತು ಅಂದಮೇಲೆ ಅದು ಸತ್ಯವಾಗಿಯೇ ಇರುತ್ತದೆ. ತಿಳಿದುದನ್ನು ಹೇಳಿಬಿಡು.

ನದಿ : ನಾನು ಬಹಳ ಜನರನ್ನು ಕಂಡಿದ್ದೇನೆ. ಅವರ ಸಹವಾಸದ ಅನುಭವ ಉಂಡಿದ್ದೇನೆ. ಆ ಅನುಭವ ಸವಿಯಾದುದಲ್ಲ. ಸಿಹಿಗಿಂತ ಕಹಿಯೇ ಹೆಚ್ಚು ಅದರಲ್ಲಿ.

ಹುಲಿ : ಉದ್ದುದ್ದ ಮಾತಾಡಬೇಡ. ಹೇಳುವುದನ್ನು ನೇರವಾಗಿ ಹೇಳಿಬಿಡು. ಮನುಷ್ಯರ ವರ್ತನೆಯ ಬಗ್ಗೆ ನನ್ನ ಅನುಭವವೇನು? ಅದನ್ನು ಹೇಳು, ಅಷ್ಟೇ ಸಾಕು ನಮಗೆ.

ನದಿ : ಲೋಕಕ್ಕೇ ಉಪಕಾರ ಮಾಡುವವಳು ನಾನು. ನನ್ನಿಂದ ಅತಿ ಹೆಚ್ಚು ಪ್ರಯೋಜನ ಪಡೆದವರು ಮನುಷ್ಯ ವರ್ಗದವರು ಆದರೆ ……….

ಮಾದ : ಆದರೇನು? ಹೇಳಲುವುದನ್ನೆಲ್ಲ ಹೇಳಿಬಿಡು.

ನದಿ : ಮನುಷ್ಯರು ಪ್ರತ್ಯುಪಕಾರ ಬುದ್ಧಿ ಇರುವವರಂತೆ ವರ್ತಿಸುವುದಿಲ್ಲ.

ಹುಲಿ : ಹಾಗೆ ಹೇಳಲು ಕಾರಣ ಇರಬೇಕಲ್ಲ?

ನದಿ : ಹೌದು. ನನ್ನ ಅನುಭವ ನನ್ನಿಂದ ಹಾಗೆ ಹೇಳಿಸುತ್ತದೆ.

ಮಾದ : ಏನದು ನಿನ್ನ ಅನುಭವ? ಸ್ವಲ್ಪ ವಿವರಿಸಬಾರದೆ?

ನದಿ : ನೀರಿನ ಮಹತ್ವ ನಿಮಗೆ ಗೊತ್ತೆದೆಯಷ್ಟೆ? ನೀರು ಇಲ್ಲದಿದ್ದರೆ ಜಗತ್ತಿನಲ್ಲಿ ಜೀವ ರಾಶಿಗಳೇ ಇರುತ್ತಿರಲಿಲ್ಲ. ಎಲ್ಲರ, ಎಲ್ಲವುಗಳ ಜೀವನಕ್ಕೆ ನೀರೇ ಆಧಾರ.

ಹುಲಿ : ಅದು ನಮಗೂ ಗೊತ್ತಿದೆ ಬಿಡು.

ನದಿ : ಜೀವನಾಧಾರವಾದ ನನ್ನ ನೀರನ್ನು ಅತಿಹೆಚ್ಚು ಬಳಸುವವರು, ವಿವಿಧ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವವರು ಮನುಷ್ಯರೇ. ಆದರೆ ಉಪಕಾರ ಸ್ಮರಣೆ ಮಾತ್ರ ಅವರಲ್ಲಿಲ್ಲ. ಉದಾಹರಣೆ ಸಹಿತ ಇದನ್ನು ಸ್ಪಷ್ಟಗೊಳಿಸಬಲ್ಲೆ.

ಹುಲಿ : ಅದೇ ನಮಗೆ ಬೇಕಾದ ಮುಖ್ಯ ಸಂಗತಿ. ಅದನ್ನೇ ನಾವೀಗ ಕೇಳುತ್ತಿರುವುದು.

ನದಿ : ಕುಡಿಯಲು, ಮೀಯಲು, ಪಾತ್ರೆ ಪದಾರ್ಥಗಳನ್ನು ತೊಳೆಯಲು ಜನರು ನನ್ನ ನೀರನ್ನು ಬಳಸುತ್ತಾರೆ. ಸ್ವಚ್ಛತೆಗೆ, ನೈರ್ಮಲ್ಯಕ್ಕೆ ನನ್ನ ನೀರು ಅನಿವಾರ್ಯ. ಕೃಷಿ-ಕೈಗಾರಿಕೆಗಳಿಗೂ ನನ್ನ ನೀರು ಬೇಕೇ ಬೇಕು. ವಿದ್ಯುತ್‌ ಉತ್ಪಾದನೆ, ಮೀನುಗಾರಿಕೆ, ಸಾರಿಗೆ, ಸೌಕರ್ಯ, ವಿನೋದ ವಿಹಾರಗಳಿಗೂ ಮಾನವರು ನನ್ನ ನೀರನ್ನು ಬಳಸುತ್ತಾರೆ. ಆದರೆ ನನ್ನ ಕಡೆಗೆ ಪ್ರತ್ಯುಪಕಾರ ಬುದ್ಧಿ ಮಾತ್ರ ಅವರಲ್ಲಿಲ್ಲ.

ಮಾದ : ನದಿಯಮ್ಮಾ, ನಿನ್ನ ಮಾತನ್ನು ಸ್ಪಷ್ಟಗೊಳಿಸಬೇಕು. ಉದಾಹರಣೆ ಸಹಿತ ಸ್ಪಷ್ಟಗೊಳಿಸಬೇಕು.

ನದಿ : ಅದನ್ನೇ ಹೇಳುತ್ತಿದ್ದೇನೆ. ಈಗ ಮನುಷ್ಯರೂ ಸೇರಿದಂತೆ ಸಾವಿರಾರು ಜೀವರಾಶಿಗಳು ಕುಡಿವ ನೀರು ನನ್ನದು. ಕೊಳೆಯನ್ನು ಮಲಿನತೆಯನ್ನು-ಹೋಗಲಾಡಿಸುವ ನೀರು ನನ್ನದು. ಆದರೆ ನನ್ನ ನೀರನ್ನು ಮಲಿನಗೊಳಿಸುವುದರಲ್ಲಿ ಮನುಷ್ಯರೇ ಮೊದಲಿಗರು; ಪ್ರಮುಖರು.

ಮಾದ : ಅದು ಹೇಗೆ? ನಿನ್ನ ನೀರಿಗೆ ಅವರೇನು ಮಾಡುತ್ತಾರೆ?

ನದಿ : ಅವರು ಎಲ್ಲೆಲ್ಲೋ ಹೋಗುತ್ತಾರೆ. ಏನೇನೋ ಮಾಡುತ್ತಾರೆ ಬಟ್ಟೆ ತುಂಬ ಮೈತುಂಬ ಕೊಳೆ ಹತ್ತಿಸಿಕೊಂಡು ಬರುತ್ತಾರೆ. ಮತ್ತೆ ಅದೆಲ್ಲವನ್ನೂ ತಂದು ನನ್ನ ನೀರಿನಲ್ಲಿ ಬಿಟ್ಟು ಬಿಡುತ್ತಾರೆ. ದಾರಿಹೋಕರ ದಣಿವಾರಿಸಿ ತಂಪು ನೀಡುವವಳು ನಾನು. ಆದರೆ ಅವರೇನು ಮಾಡುತ್ತಾರೆ ಗೊತ್ತೆ? ನನ್ನ ಎದೆಯ ಮೇಲೆಯೇ ನಿಂತು, ನನ್ನ ತಣ್ಣೀರಿನಲ್ಲೇ ಬಾಯಿ ಮುಕ್ಕಳಿಸುತ್ತಾರೆ ಮತ್ತು ಆ ಎಂಜಲು ನೀರನ್ನು ನನ್ನ ಮುಖಕ್ಕೇ ಉಗುಳಿ ಬಿಡುತ್ತಾರೆ. ಕಾರ್ಖಾನೆಗಳನ್ನೋ ಕರ್ಮಶಾಲೆಗಳನ್ನೋ ನಡೆಸುವವರು ಅವುಗಳ ಕೊಳಕು ನೀರನ್ನು, ವಿಷ ತುಂಬಿದ ರಾಸಾಯನಿಕ ವಸ್ತುಗಳನ್ನು ನನ್ನಲ್ಲಿಗೇ ಹರಿಸಿ ಬಿಡುತ್ತಾರೆ. ಆಗ ನನ್ನ ಹೊಟ್ಟೆಯ ಮಕ್ಕಳಂತಿರುವ ಮೀನು, ಕಪ್ಪೆ, ಏಡಿ, ಹಾವು ಇತ್ಯಾದಿಗಳೆಲ್ಲ ಸಾಯುತ್ತವೆ. ನನ್ನ ನೀರು ಕುಡಿವ ಪ್ರಾಣಿ-ಪಕ್ಷಿಗಳೂ ಸತ್ತು ಬೀಳುತ್ತವೆ.

ಹುಲಿ : ಮಾದಾ, ನಿನ್ನ ಸಂತಾನದವರು-ಮನುಷ್ಯರು-ಎಂಥ ಅನ್ಯಾಯಗಾರರು ಗೊತ್ತಾಯಿತೆ ನಿನಗೆ?

ನದಿ : ಅವರ ಅನ್ಯಾಯ ಇಷ್ಟಕ್ಕೇ ಮುಗಿಯುವುದಿಲ್ಲ. ಹೇಳಿ ಮುಗಿಸಬಹುದಾದ ಸಂಗತಿ ಅದಲ್ಲ. ಪೇಟೆ ಪಟ್ಟಣಗಳ ಜನರಂತೂ ಬಚ್ಚಲು ಮನೆ. ಪಾಯಿಖಾನೆ, ಚರಂಡಿಗಳ ಹೊಲಸು ನೀರನ್ನೆಲ್ಲ ನನ್ನೆಡೆಗೇ ಕಳಿಸಿ ಬಿಡುತ್ತಾರೆ. ಇನ್ನೂ ಹೇಳಬೇಕೆಂದರೆ ನನ್ನನ್ನೆ ಕಕ್ಕಸಿನಂತೆ ಬಳಸುವ ಅವಿವೇಕಿಗಳೂ ಮನುಷ್ಯರಲ್ಲಿದ್ದಾರೆ. ಅವರ ವರ್ತನೆಯಿಂದ ನಾನು ರೋಸಿ ಹೋಗಿದ್ದೇನೆ. ದೇವರು ಇನ್ನಾದರೂ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ, ನನ್ನ ವಿಚಾರವನ್ನೆಲ್ಲ ನಿಮ್ಮ ಮುಂದೆ ಇರಿಸಿದ್ದೇನೆ. ಮನುಷ್ಯರು ಕೃತಜ್ಞರೋ ಕೃತಘ್ನರೋ ನೀವೇ ತೀರ್ಮಾನಿಸಿಕೊಳ್ಳಿ.

ಹುಲಿ : ನದಿಯಮ್ಮಾ, ನಿನ್ನ ಮನದಲ್ಲಿದ್ದುದನ್ನು ಸ್ಪಷ್ಟವಾಗಿ ಹೇಳಿದ್ದೀಯಾ. ಮನುಷ್ಯರಲ್ಲಿ ಸ್ಮರಣೆ ಇಲ್ಲ ಎಂಬುದಕ್ಕೆ ಬಲವಾದ ಸಾಕ್ಷಿ ನಿನ್ನದು. ಧನ್ಯವಾದಗಳು, ನಾವಿನ್ನು ಬರುತ್ತೇವೆ. ನಮಸ್ಕಾರ!

ನದಿ : ನಮಸ್ಕಾರ.

ಹುಲಿ : ಮಾದಾ, ಐದರಲ್ಲಿ ನಾಲ್ಕು ಸಾಕ್ಷಿಗಳು ನನ್ನ ಪರವಾದವು ನೆನಪಿದೆಯಷ್ಟೆ?

ಮಾದ : ಹೌದು. ನೆನಪಿದೆ. ನಾನಿನ್ನು ನಿರಾಶನಾಗಿಲ್ಲ. ಇನ್ನೂ ಒಂದು ಸಾಕ್ಷಿ ಉಳಿದಿದೆಯಲ್ಲ?

ಹುಲಿ : ಅದರ ವಿಚಾರಣೆ ಮುಗಿದಾಗ ನಿನ್ನ ಆಸೆಯು ಕೊನೆಗೊಂಡೀತು.