ಮೇಳದವರು

ಹೀಗೆ ಮಾತಾಡುತ್ತ ನಡೆದಿರೆ ಅವರಲ್ಲಿ
ಆಗ ಕಂಡರು ಮಂಗವೊಂದು
ಬೇಗ ಬೇಗನೆ ಮರಗಳಲಿ ಸಂತಸದಿಂದ
ಲಾಗ ಹೊಡೆಯುವುದನ್ನು ಅಂದು

ಮಾದ : ಹುಲಿಯಣ್ಣಾ, ಅಗೋ ಅಲ್ಲಿ ನೋಡು.

ಹುಲಿ : ಮಂಗಣ್ಣ! ಭಾರೀ ಖುಷಿಯಲ್ಲಿದ್ದಾನೆ ಮರದಿಂದ ಮರಕ್ಕೆ, ಗೆಲ್ಲಿನಿಂದ ಗೆಲ್ಲಿಗೆ ಜಿಗಿಯುತ್ತ ಇದ್ದಾನೆ.

ಮಾದ : ಹೌದು. ಅವನನ್ನು ಒಂದು ಮಾತು ಕೇಳೋಣವೇ:

ಹುಲಿ : ಆಗಲಿ ಅದಕ್ಕೇನಂತೆ?

ಮಾದ : ಈಗಿನ ಸರದಿ ನನ್ನದು ತಾನೆ?

ಹುಲಿ : ಹೌದು ನೀನೇ ಮಾತಾಡಿಸು. ನಿನ್ನ ಅಜ್ಜನಂತೆಯೇ ಇದ್ದಾನೆ. ಅವನಾದರೂ ನಿನ್ನ ಪರವಾಗಿ ಸಾಕ್ಷಿ ನುಡಿಯುತ್ತಾನೋ ನೋಡೋಣ.

ಮಾದ : ಮಂಗಣ್ಣಾ ನಿನ್ನಿಂದ ನಮಗೊಂದು ಉಪಕಾರ ಆಗಬೇಕಲ್ಲ?

ಮಂಗ : ಏನು, ನನ್ನಿಂದ ಉಪಕಾರವೇ? ಏನಾಗಬೇಕು ಹೇಳು?

ಮಾದ : ಈ ಹುಲಿಯಣ್ಣ ಬೋನಿನಲ್ಲಿ ಬಿದ್ದಿದ್ದ. ನಾನು ಅವನನ್ನು ಬಿಡುಗಡೆಗೊಳಿಸಿದೆ. ಈಗ ಇವನು ನನ್ನನ್ನೇ ತಿನ್ನುವುದಾಗಿ ಬೆದರಿಸುತ್ತಿದ್ದಾನೆ. ಮನುಷ್ಯರು ಸಹ ಉಪಕಾರಕ್ಕೆ ಪ್ರತಿ ಉಪಕಾರ ಮಾಡುವುದಿಲ್ಲ. ತಾನು ಹೀಗೆ ಮಾಡುವುದು ತಪ್ಪಲ್ಲ ಎನ್ನುತ್ತಾನೆ ಈತ. ದಯಮಾಡಿ ನಿನ್ನ ಅಭಿಪ್ರಾಯ ತಿಳಿಸು. ಈ ಸಂಕಟದಿಂದ ನನ್ನನ್ನು ಉಳಿಸು.

ಹುಲಿ : ಏ ಮಾದಾ, ಮನುಷ್ಯರ ವರ್ತನೆಯ ಬಗ್ಗೆ ಮಾತ್ರ ಕೇಳು. ನಿನ್ನ ಗೋಳು ಹೇಳಿಕೊಳ್ಳಬೇಡ. ಅವನ ಮನಸ್ಸನ್ನು ತಿರುಗಿಸಬೇಡ.

ಮಂಗ : ಹುಲಿಯಣ್ಣಾ, ಮನುಷ್ಯರಲ್ಲಿ ಪ್ರತ್ಯುಪಕಾರ ಬುದ್ಧಿ ಇರಲೂಬಹುದು, ಇಲ್ಲದಿರಲೂಬಹುದು. ನಿನಗೆ ಅದೊಂದು ಸಮಸ್ಯೆಯಾಗಿ ಕಾಣಿಸುವುದೇ ಇಲ್ಲ.

ಹುಲಿ : ಹಾಗಾದರೆ ನಿನಗಿರುವ ಸಮಸ್ಯೆ ಯಾವುದು?

ಮಂಗ : ನನಗೆ ಸಮಸ್ಯೆ ಇಲ್ಲ. ಈ ಮನುಷ್ಯನ ಮಾತಿನಲ್ಲಿ ಸಂದೇಹ ಮಾತ್ರ ಇದೆ.

ಹುಲಿ : ಯಾವ ಮಾತಿನಲ್ಲಿ?

ಮಂಗ : ದೊಡ್ಡ ಹುಲಿರಾಯ ನೀನು ನಿನ್ನಂಥವರು ಬೋನಿನೊಳಗೆ ಬಿದ್ದಿರುವುದೆ? ಕಣ್ಣಾರೆ ಕಂಡ ಹೊರತು ನಾನಿದನ್ನು ನಂಬುವಂತಿಲ್ಲ.

ಮಾದ : ನಾನು ಸುಳ್ಳಾಡಿಲ್ಲ ಮಂಗಣ್ಣಾ. ಮತ್ತೆ ನಿನಗೇಕೆ ಸಂದೇಹ?

ಮಂಗ : ನಾನು ಹಲವು ಬೋನುಗಳನ್ನು ಕಂಡವನು. ಬೋನುಗಳೆಲ್ಲ ಚಿಕ್ಕವೇ ಇರುತ್ತವೆ. ನಿನ್ನಂಥ ದೊಡ್ಡ ಹುಲಿ ಯಾವ ಬೋನಿನಲ್ಲೂ ಹಿಡಿಸುವಂತಿಲ್ಲ.

ಹುಲಿ : ಏ ಮಂಗಾ ನಾನೇ ಹೇಳುತ್ತೇನೆ. ಕಿವಿಗೊಟ್ಟು ಕೇಳಿಬಿಡು. ಬೋನಿನಲ್ಲಿ ನಾನು ಬಿದ್ದುದೂ ಹೌದು. ಈತ ನನ್ನನ್ನು ಬಿಡಿಸಿದ್ದೂ ಹೌದು. ಈಗ ನಂಬಿಕೆ ಬಂತಷ್ಟೆ?

ಮಂಗ : ಹುಲಿಯಣ್ಣಾ, ದಯವಿಟ್ಟು ಕೋಪಿಸಿಕೊಳ್ಳಬೇಡ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕಂತೆ. ಹಾಗೆ ಹಿರಿಯರು ಹೇಳಿದ್ದಾರೆ. ಹೀಗಿರುವಾಗ ನೋಡದಿದ್ದುದನ್ನು ನಾನಂತೂ ನಂಬಲಾರೆ. ಸಂಗತಿ ಇದ್ದುದನ್ನು ಇದ್ದಂತೆ ಒಮ್ಮೆ ತೋರಿಸಿಬಿಡಿ ಮರುಕ್ಷಣದಲ್ಲೆ ನನ್ನ ತೀರ್ಮಾನ ಹೇಳುತ್ತೇನೆ.

ಹುಲಿ : ಈ ಮಂಗನಿಗೆ ಮಂಡೆ ಇದೆ. ಒಳಗಡೆ ಮಾತ್ರ ಏನೂ ಇಲ್ಲ. ಹಾಗಾಗಿ ಹೇಳಿದ ಮಾತಿನ ಅರ್ಥವೂ ಆಗುವುದಿಲ್ಲ; ಅದರಲ್ಲಿ ನಂಬಿಕೆಯೂ ಬರುವುದಿಲ್ಲ. ಬರೇ ಹುಚ್ಚಪ್ಪ ಇದು.

ಮಾದ : ಏನೇ ಆಗಲಿ ಹುಲಿಯಣ್ಣಾ. ನಾವೀಗ ಬೋನಿನ ಬಳಿಗೆ ಹೋಗೋಣ. ನಡೆದಿದನ್ನು ಪ್ರತ್ಯಕ್ಷ ತೋರಿಸಿ ಬಿಡೋಣ. ಅನಂತರವೇ ಮಂಗಣ್ಣ ತನ್ನ ಅಭಿಪ್ರಾಯ ತಿಳಿಸಲಿ.

ಹುಲಿ : ಈ ಮಂಗನನ್ನು ವಿಚಾರಿಸಿದ್ದೇ ತಪ್ಪಾಯಿತು. ಹೂಂ, ನಡೆಯಿರಿ, ಬೋನು ಇದ್ದಲ್ಲಿಗೆ ಹೋಗಿ ಬರೋಣ. ಈಗಲೇ ಬಹಳ ತಡವಾಯಿತು. ಇನ್ನು ಹಸಿವನ್ನು ತಡೆಯುವುದು ನನ್ನಿಂದ ಸಾಧ್ಯವಿಲ್ಲ.