ಮೇಳದವರು
ಹುಲಿಯಣ್ಣ ಮಾದಣ್ಣ ಮಂಗಣ್ಣ ಜೊತೆಗೂಡಿ
ಕೆಲಬಲ ನೋಡದೆ ನಡೆದು ಬಂದರು ಬೇಗ
ನಿಲಿಸಿದ್ದ ಬೋನಿನ ಬಳಿಗೆ
ಮಾದ : ಮಂಗಣ್ಣಾ, ಬೋನು ಇರುವ ಜಾಗ ಬಂದೇ ಬಿಟ್ಟಿತು ನೋಡು.
ಮಂಗ : ಈ ಹುಲಿಯಣ್ಣ ಇದ್ದ ಬೋನು ಇದೇ ಏನು?
ಮಾದ : ಹೌದು, ಈ ಬೋನಿನಲ್ಲೇ ಆತ ಸಿಕ್ಕಿ ಬಿದ್ದಿದ್ದ.
ಮಂಗ : ಹುಲಿಯಣ್ಣಾ, ಈ ಮನುಷ್ಯ ಇಲ್ಲಿ ಬಂದಾಗ ನೀನು ಇದರೊಳಗೆ ಹೇಗೆ ಇದ್ದೆ? ಏನು ಮಾಡುತ್ತಿದ್ದೆ? ಸರಿಯಾಗಿ ತೋರಿಸಿ ಬಿಡು.
ಹುಲಿ : (ಬೋನಿನೊಳಗೆ ಹೋಗುತ್ತ) ಏ ಮಂದಬುದ್ಧಿಯ ಮಂಗಾ, ಈ ಮನುಷ್ಯ ಇಲ್ಲಿ ಬಂದಾಗ ನಾನು ಈ ಬೋನಿನೊಳಗೆ ಹೀಗೆ ಇದ್ದೆ ನೋಡು.
ಮಂಗ : (ಮಾದನೆಡೆ ತಿರುಗಿ) ಏನಣ್ಣಾ, ಈ ಹುಲಿಯಣ್ಣ ಹೇಳುವುದು ನಿಜವೆ?
ಮಾದ : ಹೌದು. ಹೌದು. ಹುಲಿಯಣ್ಣ ಹೇಳುವುದು ನಿಜ ಬೋನಿನೊಳಗೆ ಅವನು ಇದ್ದ.
ಮಂಗ : ಬಾಗಿಲು ಹೇಗಿತ್ತು? ಈಗ ಇರುವ ಹಾಗೆ ತೆಗೆದುಕೊಂಡೇ ಇತ್ತೇ?
ಮಾದ : ಇಲ್ಲ. ಇಲ್ಲ. ಬಾಗಿಲು ಹೀಗೆ ಹಾಕಿಕೊಂಡಿತ್ತು. (ಬಾಗಿಲು ಹಾಕುವನು)
ಮಂಗ : ಸರಿ. ಸರಿ. ಈಗ ಎಲ್ಲ ಅರ್ಥವಾಯಿತು. ಹುಲಿಯಣ್ಣ ಹೀಗೆ ಬೋನಿನಲ್ಲಿದ್ದ. ಬಾಗಿಲು ಹೀಗೇ ಮುಚ್ಚಿಕೊಂಡಿತ್ತು. ಹೌದು ತಾನೇ?
ಮಾದ : ಹೌದು ಹೌದು. ಹೀಗೇ ಇತ್ತು.
ಮಂಗ : ಈ ಬಾಗಿಲು ಹೀಗೇ ಇರಲಿ. ಹುಲಿಯಣ್ಣಾ ನೀನಿಲ್ಲಿ ಹಾಯಾಗಿ ಮಲಗಿ ಬಿಡು. ನಾವಿನ್ನು ಬರುತ್ತೇವೆ.
ಹುಲಿ : ಏ ಮಂಗಾ, ಏನು ಬೊಗಳುತ್ತೀಯೇ ನೀನು?
ಮಂಗ : ನಾಯಿಗಳು ಮಾತ್ರ ಬೊಗಳುತ್ತವೆ ಮಂಗಣ್ಣಾ, ಅಷ್ಟೂ ಗೊತ್ತಿಲ್ಲವೆ ನಿನಗೆ? ಆಗ ನೀನೇ ಅಂದೆಯಲ್ಲ, ನನಗೆ ಮಂಡೆ ಇದೆ; ಒಳಗಡೆ ಏನೂ ಇಲ್ಲ ಎಂದು. ಈಗ ನಿನ್ನ ಮಂಡೆಯೊಳಗೆ ಏನಿದೆ ಹೇಳು?
ಹುಲಿ : ಏ ಹುಚ್ಚಪ್ಪಾ. ಮೊದಲು ಬೋನಿನ ಬಾಗಿಲು ತೆಗೆ, ಮತ್ತೆ ಮಾತಾಡು.
ಮಂಗ : ಹುಲಿಯಣ್ಣಾ, ನಾನು ಹುಚ್ಚಪ್ಪ ಹೌದಾದರೆ ಖಂಡಿತ ಬಾಗಿಲು ತೆಗೆಯುತಿದ್ದೆ. ನಾನು ಹುಚ್ಚನಲ್ಲ. ಹಾಗಾಗಿ ಬಾಗಿಲು ತೆಗೆಯುವುದಿಲ್ಲ. ಈ ಮನುಷ್ಯನೂ ಹುಚ್ಚಪ್ಪ; ಬೋನಿನಲ್ಲಿ ಸಿಕ್ಕಿಬಿದ್ದುದು ಮಾತ್ರವಲ್ಲದೆ ತನ್ನ ಜೀವ ಉಳಿಸಿದವನನ್ನೇ ಕೊಲ್ಲ ಬಯಸಿದ ನೀನೂ ಹುಚ್ಚಪ್ಪ.
ಹುಲಿ : ಏ ಮಂಗಣ್ಣಾ, ಬಾಗಿಲು ತೆಗೆ. ಏ ಮಾದಣ್ಣಾ, ಬಾಗಿಲು ತೆಗೆ ಇದು ಅನ್ಯಾಯ, ಶುದ್ಧ ಅನ್ಯಾಯ. ಶುದ್ಧ ಅನ್ಯಾಯ….
ಮಂಗ ಮತ್ತು ಮಾದ : (ನರ್ತಿಸುತ್ತ) ಶುದ್ಧ ಅನ್ಯಾಯ ಇದು-ಶುದ್ಧ ಅನ್ಯಾಯ/ ಹುಲಿಯೆ ನೀನು ಮಾಡಿದುದು/ ಶುದ್ಧ ಅನ್ಯಾಯ.
ಮಾದ : ಗೂಡಿನಿಂದ ಬಿಡಿಸು ಎಂದು ಬೇಡಿ ಕಾಡಿದೆ. ನಿನ್ನ ಪ್ರಾಣ ಉಳಿಸಿದವನ ಕೊಲ್ಲಲು ನೋಡಿದೆ.
ಇಬ್ಬರೂ : ಶುದ್ಧ ಅನ್ಯಾಯ ಇದು ಶುದ್ಧ ಅನ್ಯಾಯ….
ಹುಲಿ : ಮಂಗಣ್ಣಾ, ದಯವಿಟ್ಟು ಇಲ್ಲಿ ಕೇಳು. ಕ್ಷಣಕಾಲ ನಿನ್ನ ಹಾಡು ಕುಣಿತ ನಿಲ್ಲಿಸು. ನಾನೊಂದು ಕಾಡುಪ್ರಾಣಿ. ಹೆಚ್ಚು ತಿಳುವಳಿಕೆ ಇಲ್ಲದವನು. ಆದಾಗ್ಯೂ ಹಸಿವು ಹಿಂಗಿಸಲು ಮಾತ್ರ ನಾನು ಹಿಂಸೆ ಮಾಡುತ್ತೇನೆ; ಪ್ರಾಣಿಗಳನ್ನು ಕೊಲ್ಲುತ್ತೇನೆ. ಆದರೆ ಮನುಷ್ಯನ ಸಂಗತಿಯೇ ಬೇರೆ. ಆರೋಗ್ಯ ಜೀವನಕ್ಕೆ ಆಧಾರವಾದ ನೀರಿಗೂ ಆತ ವಿಷ ಬೆರಸುತ್ತಾನೆ. ಹಣದಾಸೆಗಾಗಿ ಜಗತ್ತಿನ ಉಳಿವಿಗೆ-ಚೆಲುವಿಗೆ ಅನಿವಾರ್ಯವಾದ ಕಾಡನ್ನೂ ನಾಶ ಮಾಡುತ್ತಾನೆ. ಕೇವಲ ನಾಲಿಗೆಯ ಚಪಲಕ್ಕಾಗಿ ಪ್ರೀತಿಯಿಂದ ಸಾಕಿದ ಪ್ರಾಣಿ ಪಕ್ಷಿಗಳನ್ನು ಸಹ ಕೈಯಾರೆ ಕೊಲ್ಲುತ್ತಾನೆ. ಹೀಗಿದ್ದರೂ ಈಗ ನೀನೇನು ಮಾಡಿದೆ ನೋಡು. ನನ್ನ ತುತ್ತನ್ನು ಕಸಿದುಕೊಂಡೆ. ನನ್ನನ್ನು ಬೋನಿನಲ್ಲಿ ಸಾಯಲು ಬಿಟ್ಟೆ. ನಿನ್ನ ಸಂತಾನದವನೇ ಆದ ಈ ಮನುಷ್ಯನ ಪ್ರಾಣವನ್ನು ಬದುಕಿಸಿಬಿಟ್ಟೆ. ಸ್ವಜನ ಪಕ್ಷಪಾತ ಮಾಡಿದೆ. ಇಲ್ಲೀಗ ಅನ್ಯಾಯ ಮಾಡಿದವರು ಯಾರು? ನೀನೇ? ನಾನೇ? ತಿಳಿದವರು ನಿರ್ಣಯಿಸಲಿ.
ನಾನಂತೂ ನಮ್ಮ ಬಡಜನರ ಹಾಗೆ ಈ ಕಷ್ಟದ ಕತ್ತಲು ಕಳೆದಾಗ ಸುಖದ ಹಗಲು ಬಂದೀತೆಂದು ಕಾಯುತ್ತಲೇ ಇರುತ್ತೇನೆ.
-ತೆರೆ-
Leave A Comment