ಕೀರ್ತನಕಾರರ ಮನೆತನದಲ್ಲಿ ಹುಟ್ಟಿ, ಪದ್ಮ ವಿಭೂಷಣ ಪಂ. ಭೀಮಸೇನ ಜೋಶಿ ಅವರ ಜೇಷ್ಠ ಹಾಗೂ ಶ್ರೇಷ್ಠ ಶಿಷ್ಯರೆನಿಸಿ ದೇಶ-ವಿದೇಶಗಳಲ್ಲಿ ತಮ್ಮ ಸುಮಧುರ ಕಂಠದಿಂದ ಸಂಗೀತ ನಾದ ಹೊಮ್ಮಿಸಿ ನಾಡಿನೆಲ್ಲೆಡೆ ಖ್ಯಾತಿ ಪಡೆದಿರುವ ಕಿರಾಣಾ ಘರಾಣೆಯ ಅದ್ವಿತೀಯ ಗಾಯಕ ಪಂ. ಮಾಧವಗುಡಿ ಧಾರವಾಡದ ‘ನಾದಭೂಮಿಯ’ ಗಾನಕಂದರು.

ಪಂ. ಮಾಧವ ಗುಡಿ ಅವರು ಜನಿಸಿದ್ದು ೧೯೪೨ರ ಡಿಸೆಂಬರ ೨೩ ರಂದು ಧಾರವಾಡದಲ್ಲಿ. ಅವರದು ಕೀರ್ತನ-ಸಂಗೀತ-ವೈದಿಕ ಪರಂಪರೆಯ ಮನೆತನ. ಅವರ ತಂದೆ ಗುರುಚಾರ್ಯರು ಪ್ರಸಿದ್ಧ ಕೀರ್ತನಕಾರರು. ತಾಯಿ ಸುಭದ್ರಾ ಬಾಯಿ ಸಂಗೀತದ ಪರಮ ಭಕ್ತೆ. ಇಂತಹ ವಾತಾವರಣದಲ್ಲಿ ಬೆಳೆದ ಪಂ. ಮಾಧವರಿಗೆ ಎಳೆ ವಯಸ್ಸಿನಲ್ಲಿಯೇ ಸಂಗೀತದ ಗುಂಗು ಹಿಡಿಯಿತು. ಸಂಗೀತಕ್ಕೆ ಮನಸೋತ ಅವರು ಶಾಲಾ ಶಿಕ್ಷಣಕ್ಕೆ ಶರಣು ಹೇಳಿದರು. ನಾಗೇಶರಾವ ದೇಶಪಾಂಡೆ ಅವರಲ್ಲಿ ಪ್ರಾರಂಭಿಕ ಸಂಗೀತ ಶಿಕ್ಷಣ ಪಡೆದು ೧೬ನೇ ವಯಸ್ಸಿಗೆ ಪುಣೆಗೆ ಹೋಗಿ ಪಂ. ಭೀಮಸೇನ ಜೋಶಿಯವರ ಶಿಷ್ಯತ್ವ ಪಡೆದು ೨೫ ವರ್ಷಗಳ ಗುರುಕುಲ ಪದ್ಧತಿಯಲ್ಲಿ ಕಿರಾಣಾ ಘರಾಣೆಯ ತಾಲೀಮು ಪಡೆದ ಪಂ. ಮಾಧವರು ಗುರುವಿನ ಆಶೀರ್ವಾದ ಹಾಗೂ ತಮ್ಮ ನಿರಂತರ ಸಂಗೀತ ಸಾಧನೆಯ ಫಲವಾಗಿ ದೇಶದ ಮಹಾನ್‌  ಗಾಯಕರೆನಿಸಿದ್ದಾರೆ.

ಗುರು ಪಂ. ಭೀಮಸೇನ ಜೋಶಿಯವರೊಂದಿಗೆ ಅಮೇರಿಕಾ, ಇಂಗ್ಲೆಂಡ್‌, ಜರ್ಮನಿ, ದುಬೈ ಮುಂತಾದ ದೇಶಗಳಲ್ಲಿ ಸಹ ಗಾಯಕರಾಗಿ ಹಾಡಿದ್ದಾರೆ. ಲಂಡನ್ನಿನ ಭಾರತೀಯ ವಿದ್ಯಾ ಭವನದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಶಿಕ್ಷಣ ನೀಡಿದ್ದಾರೆ. ಬೆಂಗಳೂರು, ಮೈಸೂರು, ಪುಣೆ, ದೆಹಲಿ, ನಾಗಪುರ ಮುಂತಾದ ಪಟ್ಟಣಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥದಲ್ಲಿ ನೆಲೆಸಿ ‘ಕಿರಾಣಾ ಘರಾಣಾ ಸಂಗೀತ ಅಕಾಡೆಮಿ’ ಸ್ಥಾಪಿಸಿ ಅನೇಕ ಆಸಕ್ತ ಶಿಷ್ಯರಿಗೆ ಕಿರಾಣಾ ಘರಾಣೆಯ ಸಂಗೀತವನ್ನು ಧಾರೆಯೆರೆಯುತ್ತ ಸಂಗೀತ ಸೇವೆಯಲ್ಲಿ ನಿರತರಾಗಿದ್ದಾರೆ. ಅವರದು ಸಂಗೀತ ಸಂಸಾರ. ಅವರ ಮಕ್ಕಳಾದ ಗಾಯತ್ರಿ, ಅನುಪಮಾ, ಪ್ರಸನ್ನ, ಭಾರ್ಗವಿ ಎಲ್ಲರೂ ಸುಶ್ರಾವ್ಯ ಕಂಠದ ಸಂಗೀತಗಾರರಾಗಿದ್ದು ತಂದೆಯ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪಂ. ಮಾಧವ ಗುಡಿ ಅವರ ಶಿಷ್ಯರಾದ ಡಾ. ನಾಗರಾಜ ಹವಾಲ್ದಾರ (ಬೆಂಗಳೂರು), ರಾಘವೇಂದ್ರ ಗುಡಿ, ಶೇಷಗಿರಿ ಗುಡಿ, ಶ್ಯಾಮ ಆಲೂರು (ಹುಬ್ಬಳ್ಳಿ), ವೆಂಕಟೇಶ ವರಖೇಡಿ (ಮುಂಬೈ), ಸಂಜೀವ ಚಿಮ್ಮಲಗಿ, ಗೋವಿಂದ ರೊಟ್ಟಿ, ಎಂ. ಭೀಮಸೇನಾಚಾರ್ಯ, ರಮೇಶ ಕುಲಕರ್ಣಿ, ಅನುರಾಧಾ ಭಾದ್ರಿ – ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಪಂ. ಮಾಧವ ಗುಡಿ ಅವರಿಗೆ ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ’ ೧೦೦೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.