ಹಿಂದೂಸ್ಥಾನಿ ಹಾಗೂ ಕರ್ನಾಟಕೀ ಸಂಗೀತ ಪದ್ಧತಿಗಳೆರಡರಲ್ಲೂ ತರಬೇತಿ ಹೊಂದಿ, ತಬಲಾ ವಾದನದಲ್ಲಿ ಪರಿಣತಿ ಪಡೆದು ಅನೇಕ ಶಿಷ್ಯರನ್ನು ತಯಾರು ಮಾಡಿರುವ ಉಡುಪಿಯ ಶ್ರೀ ಮಾಧವ ಭಟ್‌ ಅವರು ಕರ್ನಾಟಕದ ಹಿರಿಯ ತಲೆಮಾರಿನ ಸಂಗೀತಗಾರರಲ್ಲೊಬ್ಬರು. ೧೯೧೬ರಲ್ಲಿ ಜನಿಸಿದ ಶ್ರೀ ಮಾಧವಭಟ್‌, ತಮ್ಮ ೧೨ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಪ್ರಾರಂಭಿಸಿದವರು. ಮೈಸೂರು ಅರಮನೆಯ ಗಾಯಕರದ ಅಡಪ್ಪನವರ ಶಿಷ್ಯ ಜನಾರ್ಧನ್‌ ಮತ್ತು ಗ್ವಾಲಿಯರ್ ಘರಾಣಾದ ಪಂಡಿತ ಪುರುಷೋತ್ತಮರಾವ್‌ ಪುತ್ತೂರ್ ಕರ್ ಅವರಲ್ಲಿ ಕ್ರಮವಾಗಿ ಕರ್ನಾಟಕ ಹಾಗೂ ಹಿಂದೂಸ್ಥಾನಿ ಪದ್ಧತಿಯಲ್ಲಿ ಹಾಗೂ ರತ್ನಾಕರ್ ಭಟ್‌ ಅವರಲ್ಲಿ ಪಿಟೀಲು ಮತ್ತು ಎನ್‌.ಆರ್. ಬಂಟ್ವಾಳಕರರಲ್ಲಿ ತಬಲ ಅಭ್ಯಾಸ ಮಾಡಿದ ಶ್ರೀ ಭಟ್‌ ಅವರು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲದ ‘ಸಂಗೀತ ವಿಶಾರದ’ ಪದವಿಯನ್ನು ಪಡೆದವರು.

ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿರುವ ಶ್ರೀಯುತರಿಗೆ, ‘ಸಂಗೀತ ಕಲಾನಿಧಿ’, ‘ಸಂಗೀತ ಕಲಾ ಭೂಷಣ’ ಬಿರುದಗಳೂ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಮಂಗಳೂರು ಆಕಾಶವಾಣಿಯ ಅಡಿಶನ್‌ ಬೋರ್ಡಿನ ಸದಸ್ಯರಾಗಿ, ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ ಮಂಡಲದ ಸದಸ್ಯರಾಗಿ, ಪ್ರತಿ ವರ್ಷದ ಮೇ ತಿಂಗಳಲ್ಲಿ ಜರುಗುವ ವಿಶೇಷ ಸಂಗೀತ ಮತ್ತು ತಾಳವಾದ್ಯ ಪರೀಕ್ಷೆಗಳ ಪರೀಕ್ಷಕರಾಗಿ ಹಾಗೂ ಬೋರ್ಡಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ಮಾಧವ ಭಟ್‌ ಅವರ ಉಡುಪಿಯ ತಮ್ಮ ‘ಮಾಧವ ಸಂಗೀತ ವಿದ್ಯಾಲಯ’ದ ಮೂಲಕ ಹಲವಾರು ಶಿಷ್ಯಂದಿರಿಗೆ ಸಂಗೀತದ ಮಾರ್ಗದರ್ಶನ ನೀಡುತ್ತಿದ್ದಾರೆ.

ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.