ಮಾಧವ ಶ್ರೀಹರಿ ಅಣೆ —ದೇಶದ ಹಿತವನ್ನೇ ಮುಖ್ಯ ಗುರಿಯಾಗಿಟ್ಟು ಕೊಂಡು ಹಲವು ರೀತಿಗಳಲ್ಲಿ ದುಡಿದರು. ಬ್ರಿಟಿಷರ ಕಾನೂನು ಮುರಿದು ಸೆರೆಮನೆ ಸೇರಿದರು. ವೈಸರಾಯರ ಸಲಹಾಮಂಡಲಿಯಲ್ಲಿ ಕೆಲಸ ಮಾಡಿದರು. ವೈಸರಾಯಿ ತಪ್ಪು ಮಾಡಿದನೆಂದು ಕಂಡಾಗ ರಾಜೀನಾಮೆ ಕೊಟ್ಟರು. ಸ್ವತಂತ್ರ ಭಾರತದಲ್ಲಿಯೂ ಸೇವೆ ಸಲ್ಲಿಸಿದರು.

ಮಾಧವ ಶ್ರೀಹರಿ ಅಣೆ

ನಮ್ಮ ಪ್ರಜಾಪ್ರಭುತ್ವ ನಶಿಸಿ ಹೋಗುವಂತಹ ದುರ್ಧರ ಪ್ರಸಂಗದಲ್ಲಿ ಅದನ್ನು ಉಳಿಸುವುದಕ್ಕಾಗಿ  ಶತಾಯ ಗತಾಯವಾಗಿ ಹೋರಾಡಿದ ಜಯಪ್ರಕಾಶ ನಾರಾಯಣರನ್ನು ನಮ್ಮ ಜನ ಲೋಕ ನಾಯಕ ಜಯಪ್ರಕಾಶ ನಾರಾಯಣ ಎಂದು ಪ್ರೀತಿಯಿಂದ ಕರೆದರು. ‘ಲೋಕ ನಾಯಕ’ ಎನ್ನುವ ಗೌರವಕ್ಕೆ ಜಯಪ್ರಕಾಶರು ಅರ್ಹತೆಯನ್ನು ಪಡೆದಿದ್ದರು ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಆದರೆ ಈ ‘ಲೋಕ ನಾಯಕ’  ಬಿರುದು ಈ ಮೊದಲೇ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಷ್ಠೆಯಿಂದ ದುಡಿದ ವರ‍್ವಾಡದ ಮಾಧವ  ಶ್ರೀಹರಿ ಅಣೆ ಇವರಿಗೆ ದೊರಕಿದ್ದಿತು ಎಂಬ ಮಾತನ್ನು ನಾವು ಮರೆಯುವಂತಿಲ್ಲ.

ಬ್ರಿಟಿಷರ ಈಸ್ಟ್ ಇಂಡಿಯ ಕಂಪೆನಿ ಭಾರತ ವನ್ನು ಅನ್ಯಾಯದಿಂದ ಆಕ್ರಮಿಸಿತ್ತು. ೧೮೫೭ರಲ್ಲಿ  ಈ ದೇಶದಲ್ಲಿ ಸಿಪಾಯಿಗಳು ಬಂಡಾಯವೆದ್ದು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದಾಗ ಕಂಪೆನಿ ಸರ್ಕಾರ ತತ್ತರಿಸಿಹೋಗಿತ್ತು. ಸಿಪಾಯಿಗಳ ಬಂಡಾಯದ ನಂತರ, ಇಂಗ್ಲಿಷರು ಭಾರತೀಯರ ಮೇಲೆ ನಡೆಸಿದ ಅತ್ಯಾಚಾರವನ್ನು ವರ್ಣಿಸಲು ಅಸಾಧ್ಯ. ಅವರ ನ್ಯಾಯದೇವತೆ ಆಗ ಕುರುಡಾಗಿದ್ದಳು. ‘ಇಂದು ವಿಚಾರಣೆ, ನಾಳೆಯೇ ಗಲ್ಲು’. ಇದು ಇಂಗ್ಲಿಷರ ನ್ಯಾಯಪದ್ಧತಿ ಆಗಿದ್ದಿತು. ಗಲ್ಲು ಕಂಬಗಳು ಸಾಕಷ್ಟು ಸಿಗದೇ ಹೋದಾಗ  ಅವರು ಹತ್ತಿರದ ಗಿಡಮರಗಳನ್ನೇ ಗಲ್ಲುಕಂಬಗಳನ್ನಾಗಿ  ಪರಿವರ್ತಿಸಿ ಲಕ್ಷಾಂತರ ನಿರಪರಾಧಿ ಭಾರತೀಯರನ್ನು ನಿಷ್ಕಾರಣವಾಗಿ  ಅಮಾನುಷವಾಗಿ ಕೊಲೆಗೈದರು.

ಕ್ರಾಂತಿಕಾರಿಗಳ ಜನಕ

ಈ ಬಂಡಾಯದ ಫಲವಾಗಿ ಭಾರತದ ಆಡಳಿತವನ್ನು ಇಂಗ್ಲೆಂಡಿನ ವಿಕ್ಟೋರಿಯ ಮಹಾರಾಣಿಯು ವಹಿಸಿಕೊಂಡು ಕಂಪೆನಿ ಸರ್ಕಾರದ ಆಡಳಿತವನ್ನು ಕೊನೆಗಾಣಿಸಿದಳು. ಮುಂದೆ ರಾಣಿಯ ಪ್ರತಿನಿಧಿಯಾಗಿ ವೈಸ್‌ರಾಯ್‌ಗಳು ಭಾರತವನ್ನು ಆಳತೊಡಗಿದರು. ಈ ಬದಲಾವಣೆಯಿಂದ ಭಾರತೀಯರ ಸ್ಥಾನಮಾನಗಳಲ್ಲಿ ಯಾವ ಹೆಚ್ಚು ಕಡಿಮೆಯೂ ಆಗಲಿಲ್ಲ. ಅಗಸನ ಕತ್ತೆಗೆ ಯಜಮಾನ ಯಾವನಾದರೇನು, ಅದು ಗುಲಾಮಸ್ಥಿತಿಯನ್ನು ಬಿಟ್ಟು ಹೊರಹೋಗುವಂತಿರಲಿಲ್ಲ. ಸಿಪಾಯಿಗಳ ಬಂಡಾಯದ ಸಮಯದಲ್ಲಿ ಬ್ರಿಟಿಷರು ಮಾಡಿದ ಅನ್ಯಾಯದ ನೆನಪು ಹಚ್ಚ ಹಸುರಾಗಿ ಭಾರತೀಯರ ಮನದಲ್ಲಿ ಉಳಿದಿದ್ದಿತು. ಅದರ ಫಲವಾಗಿ ಕ್ರಾಂತಿಕಾರಿಯ ಬೀಜ ಕೆಲವರ ಹೃದಯದಲ್ಲಿ ಮೊಳಕೆ ಒಡೆದು ಹೆಮ್ಮರವಾಗಿ ಬೆಳೆಯತೊಡಗಿದ್ದಿತು. ವಾಸುದೇವ ಬಲವಂತ ಫಡಕೆ ಭಾರತೀಯ ಕ್ರಾಂತಿಕಾರಿಗಳ ಜನಕನೆಂದು ಪ್ರಸಿದ್ಧಿ ಹೊಂದಿದರು. ಹೀಗಾಗಿ ಬ್ರಿಟಿಷರ ಸರ್ಕಾರವು ಭಾರತೀಯರನ್ನು ಮೇಲೆ ನೋಡಲು ಪ್ರೀತಿಯಿಂದ ಕಾಣುವಂತಿದ್ದರೂ ಒಳಗೊಳಗೆ ಸಂಶಯ ದೃಷ್ಟಿಯಿಂದಲೇ ನೋಡುತ್ತಿದ್ದಿತು.

೧೮೮೫ರಲ್ಲಿ ಒಬ್ಬ ಬ್ರಿಟಿಷ್ ನಿವೃತ್ತ ಅಧಿಕಾರಿಯೇ ಅಖಿಲ ಭಾರತ ಕಾಂಗ್ರೆಸ್ಸನ್ನು ಸ್ಥಾಪಿಸಿದ. ಇದರ ಮೂಲ ಉದ್ದೇಶ ಭಾರತೀಯರು ತಮ್ಮ ಸಣ್ಣ ಸಣ್ಣ ಸುಧಾರಣೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಬೇಕೆನ್ನುವುದೇ ಆಗಿತ್ತು. ಆದರೆ ಮುಂದೆ ಈ ಸಂಸ್ಥೆಯಲ್ಲಿ ಜಾಜ್ವಲ್ಯ ಮೌನ ದೇಶಾಭಿಮಾನದಿಂದ ಪ್ರೇರಿತರಾದಂತಹ ವ್ಯಕ್ತಿಗಳು ಸೇರಿಕೊಂಡರು. ಅಖಿಲ ಭಾರತ ಕಾಂಗ್ರೆಸ್ಸಿನ ಸ್ವರೂಪವೇ ಬದಲಾಗತೊಡಗಿತು. ಇದರಲ್ಲಿ ಪ್ರಮುಖರೆನಿಸಿದವರು ಬಾಲಗಂಗಾಧರ ತಿಲಕರು. “ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು” ಎಂದು ಘರ್ಜಿಸಿದ ತಿಲಕರು ಕಾಂಗ್ರೆಸ್ ಸಂಸ್ಥೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟರು.

ಲೋಕಮಾನ್ಯ ತಿಲಕರ ಅಸಂಖ್ಯ ಅಭಿಮಾನಿಗಳಲ್ಲಿ ವರ‍್ವಾಡದ ಮಾಧವ ಶ್ರೀಹರಿ ಅಣೆ ಅವರು ಪ್ರಮುಖರಾಗಿದ್ದರು.

ಬಾಲ್ಯ ಜೀವನ

ಮಾಧವ  ಶ್ರೀ ಹರಿ ಅಣೆ ವರ‍್ವ್ಪಾಡದ ವಣಿ ಎಂಬ ಊರಲ್ಲಿ ೧೮೮೦ನೇ ಕೃಷ್ಣಜನ್ಮಾಷ್ಟಮಿಯ ಮರುದಿನ ಅಂದರೆ ೧೮೮೦ರ ಆಗಸ್ಟ್ ೨೯ರಂದು ಒಂದು ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದರು. ಅವರ ತಾತ ಅವರನ್ನು ಸಂಸ್ಕೃತ ಪಂಡಿತರನ್ನಾಗಿ ಮಾಡಬೇಕೆನ್ನುವ ಬಲವಾದ ಆಸೆಯನ್ನು ಹೊಂದಿದ್ದರು. ೬-೭ ವರ್ಷದ ಬಾಲಕನನ್ನು ಸಂಸ್ಕೃತ ಪಾಠಶಾಲೆಗೆ ಕಳುಹಿಸಿದರು. ಆದರೆ ಅವರ ತಾತ ಮುಂದೆರಡು ವರ್ಷಗಳಲ್ಲಿಯೇ ತೀರಿಕೊಂಡರು. ಆದ್ದರಿಂದ ಅಣೆ ಅವರ ಸಂಸ್ಕೃತ ಶಿಕ್ಷಣವು ಅಲ್ಲಿಗೆ ನಿಂತು ಹೋಯಿತು. ಆದರೆ ಚಿಕ್ಕ ವಯಸ್ಸಿನಲ್ಲಿ ಮೂಡಿದ ಸಂಸ್ಕೃತ ಪ್ರೇಮ ಅವರಲ್ಲಿ ಚಿರಕಾಲ ಉಳಿಯಿತು.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದ ನಂತರ ಕಾಲೇಜು ಶಿಕ್ಷಣವನ್ನು ಮುಗಿಸಿಕೊಂಡರು. ಮಧ್ಯಪ್ರದೇಶದ ಅಮರಾವತಿ ಯಲ್ಲಿ ಕಾಶಿ ಬಾಯಿ ಖಾಸಗಿ ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಈ ಶಿಕ್ಷಕ ವೃತ್ತಿಯನ್ನು ಮಾಡುವಾಗಲೇ ಅವರು ಕಲ್ಕತ್ತ ವಿಶ್ವವಿದ್ಯಾನಿಲಯದ ಎಲ್.ಎಲ್.ಬಿ ಪರೀಕ್ಷೆಗೆ ಕುಳಿತು ಕಾನೂನು ಪದವಿಯನ್ನು ಪಡೆದುಕೊಂಡರು. ಈ ಸುಮಾರಿಗೆ ಲೋಕಮಾನ್ಯ ತಿಲಕರ ಪರಿಚಯ ಅವರಿಗೆ ಲಭಿಸಿತು. ಲೋಕಮಾನ್ಯ ತಿಲಕರ ಧೋರಣೆಯನ್ನು ಅಂದೇ ಅವರು ಮೆಚ್ಚಿ ಕೊಂಡು ಅವರ ಪರಮ ಶಿಷ್ಯರಾದರು.

ಲೋಕಮಾನ್ಯ ತಿಲಕರು ‘ಕೇಸರಿ’ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರಲ್ಲಿ ಬ್ರಿಟಿಷ್ ಸರ್ಕಾರದ ಅನ್ಯಾಯಗಳನ್ನು ನಿರ್ಭಯವಾಗಿ, ಶಕ್ತಿಯುತವಾದ ಭಾಷೆಯಲ್ಲಿ ಹೊರಗೆಳೆಯುತ್ತಿದ್ದರು. ಇದರಿಂದ ಪ್ರಭಾವಿತರಾಗಿ ಅಣೆಯವರು ತಮ್ಮ  ಊರಿನಿಂದ ‘ಹರಿಕಿಶೋರ್’ ಎನ್ನುವ ಪತ್ರಿಕೆಯನ್ನು ಹೊರಡಿಸತೊಡಗಿದರು. ಈಗ ಕಾನೂನು ಪದವಿಯನ್ನು ಪಡೆದುಕೊಂಡದ್ದರಿಂದ ಅವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆಯನ್ನು ನೀಡಿ ಮಧ್ಯಪ್ರದೇಶದ ಯವತ ಮಾಳದಲ್ಲಿ  ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು.

ತಮ್ಮ ಜೀವನವೆಲ್ಲವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡುಪಿಡಬೇಕೆಂದು ಪ್ರತಿಜ್ಞೆ ಮಾಡಿದರು. ಈ ಪ್ರತಿಜ್ಞೆಯನ್ನು ಅವರು ನಡೆಸುತ್ತಿದ್ದ ರೀತಿ ಬಹು ಸ್ವಾರಸ್ಯಕರವಾಗಿದೆ.  ವೃತ್ತಿಯಿಂದ ಅವರು ವಕೀಲರಷ್ಟೇ? ತಿಂಗಳಲ್ಲಿ ಏಳು ದಿನ ತಮ್ಮ ವಕೀಲಿ ವೃತ್ತಿಯನ್ನು ನಡೆಸುತ್ತಿದ್ದರು. ಇದು ತಮ್ಮ ಸಂಸಾರದ ನಿರ್ವಹಣೆಗೆ ಸಾಕು ಎಂದು ಅವರ ತೀರ್ಮಾನ. ಉಳಿದ ದಿನಗಳನ್ನು ದೇಶದ ಕೆಲಸಕ್ಕೆ ಮುಡಿಪು ಮಾಡುತ್ತಿದ್ದರು. ಜನರಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಜಾಗೃತಿಯನ್ನು ಉಂಟು ಮಾಡುವುದಕ್ಕಾಗಿ ತಿಲಕರ ಆಂದೋಲನದ ಅಭಿಪ್ರಾಯಗಳನ್ನು ಜನಮನದಲ್ಲಿ ಬಿಂಬಿಸ ತೊಡಗಿದರು. ಇದರಿಂದಾಗಿ ಜನರು ಅವರನ್ನು ’ವಿದರ್ಭದ ತಿಲಕ’ರೆಂದು ಕರೆಯತೊಡಗಿದರು.

ಲೋಕಮಾನ್ಯ ತಿಲಕರು ಒಂದು ಸಲ ವಿದರ್ಭದ ಪ್ರವಾಸಕ್ಕೆ ಹೋದಾಗ ಅವರು ಮಾಡಿದಂತಹ ಕಾರ್ಯವನ್ನು ಮೆಚ್ಚಿಕೊಂಡು ಒಂದು ಸಭೆಯಲ್ಲಿ ಬಹಿರಂಗವಾಗಿ ಅಣೆ ಅವರು ನಿಜವಾಗಿಯೂ ಲೋಕನಾಯಕರಾಗಿದ್ದಾರೆಂದು ಉದ್ಗರಿಸಿದರು. ಅಂದಿನಿಂದ ಲೋಕನಾಯಕ ಎನ್ನುವ ಬಿರುದು ಅವರ ಹೆಸರಿನೊಂದಿಗೆ ಸೇರಿಹೋಯಿತು.

ಅಖಿಲಭಾರತದ  ನಾಯಕತ್ವ

೧೯೩೦-೩೧-೩೨ ರ ಸಮಯದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಆ ದಿನಗಳಲ್ಲಿಯೇ ಗಾಂಧೀಜಿ ಅಣೆಯವರಿಗೆ ನಾಯಕರಾಗುವ ಯೋಗ್ಯತೆ ಇದೆ ಎಂದು ಗುರುತಿಸಿದರು (ಬ್ರಿಟಿಷರು ಈ ದೇಶದ ಸ್ವಾತಂತ್ರ್ಯವನ್ನು ಅಪಹರಿಸಿದ್ದರು. ಜನ ಸಾಮಾನ್ಯರು ಅವರ ವಿರುದ್ಧ ಪ್ರತಿಭಟಿಸಿ ಹೋರಾಡಲು ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದರು. ಆಗಿನ ಪ್ರಕಾರ ಸರ್ಕಾರದ ಅಪ್ಪಣೆ ಇಲ್ಲದೆ ಉಪ್ಪನ್ನು ತಯಾರು ಮಾಡುತ್ತಿರಲಿಲ್ಲ. ಉಪ್ಪು ಎಲ್ಲರಿಗೂ ಬೇಕಾದ ವಸ್ತು. ಆದುದರಿಂದ ಸರ್ಕಾರಕ್ಕೆ ತಪ್ಪು ತೀರ್ಮಾನವನ್ನು ತಿಳಿಸಿ ಎಲ್ಲರೂ ಸಮುದ್ರದ ನೀರಿನಿಂದ ಉಪ್ಪನ್ನು ಮಾಡಿ ಸರ್ಕಾರದ ಕಾನೂನನ್ನು ಮುರಿಯುವುದು ಉಪ್ಪಿನ ಸತ್ಯಾಗ್ರಹ. ಗಾಂಧೀಜಿಯವರೇ ಇದನ್ನು ಪ್ರಾರಂಭಿಸಿದರು). ಅವರನ್ನು ಅಖಿಲ ಭಾರತೀಯ ನಾಯಕತ್ವದ ಪಟ್ಟಕ್ಕೇರಿಸಿದರು. ಈ ಸತ್ಯಾಗ್ರಹದ ಫಲವಾಗಿ ಗಾಂಧೀಜಿಯವರನ್ನು ಬ್ರಿಟಿಷರು ಜೈಲಿಗೆ ಕಳಿಸಿದರು. ಅನೇಕ ಮಂದಿ ನಾಯಕರೂ ಸೆರೆಮನೆ ಸೇರಿದರು ಆಗ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷಪದವನ್ನು ಅಣೆಯವರೇ ಸ್ವೀಕರಿಸಬೇಕಾಯಿತು.

ಒಂದು ವರ್ಷಕ್ಕೂ ಹೆಚ್ಚುಕಾಲ ಅಣೆಯವರು ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.

ಗಾಂಧೀಜಿ ಮೆಚ್ಚಿಗೆ

ಗಾಂಧೀಜಿ ಶಿಷ್ಯತ್ವವನ್ನು ಅಣೆಯವರು ಸ್ವೀಕರಿಸಿದ್ದರೂ ಇಬ್ಬರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗಳಿದ್ದವು. ಲೋಕಮಾನ್ಯ ತಿಲಕರ ಒಂದು ಕಾಲದ ನಿಷ್ಠಾವಂತ ಶಿಷ್ಯರಾಗಿದ್ದ ಅಣೆಯವರಲ್ಲಿ ತಿಲಕರ ಒಂದು ಕಾಲದ ನಿಷ್ಠಾವಂತ ಶಿಷ್ಯರಾಗಿದ್ದ ಅಣೆಯವರಲ್ಲಿ ತಿಲಕರ ಅಭಿಪ್ರಾಯಗಳು ಅಚ್ಚೊತ್ತಿದ್ದುದರಿಂದ ಹೀಗಾಗುವುದು ಸ್ವಾಭಾವಿಕವೇ ಆಗಿದ್ದಿತು. ಆದಾಗ್ಯೂ ಗಾಂಧೀಜಿ ಅಣೆಯವರ ಕಾರ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸ್ಪಷ್ಟೋಕ್ತಿಗಳನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಮಹಾತ್ಮಾ ಗಾಂಧೀಜಿ ತಮ್ಮ ‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ಮಹಾರಾಷ್ಟ್ರ ಪಾರ್ಟಿ ಎನ್ನುವ ಲೇಖದಲ್ಲಿ ಅಣೆಯವರ ಬುದ್ಧಿಮತ್ತೆ, ಖಾರವಾದ ಮಾತು, ಸ್ಪಷ್ಟ ಅಭಿಪ್ರಾಯಗಳನ್ನು ಬಾಯಿತುಂಬ ಹೊಗಳಿದ್ದರು.

೧೯೨೦ರಲ್ಲಿ ತಿಲಕರು ಮರಣ ಹೊಂದಿದ ನಂತರ ಗಾಂಧೀಯುಗ ಪ್ರಾರಂಭವಾಯಿತು. ಕಲ್ಕತ್ತೆಯಲ್ಲಿ ಸೇರಿದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ತಮ್ಮ ಅಸಹಕಾರ ಆಂದೋಲನದ ಧೋರಣೆಗೆ ಮನ್ನಣೆಯನ್ನು ಪಡೆದುಕೊಂಡರು. ಆದರೆ, ಈ ಅಸಹಕಾರ ಆಂದೋಲನದಲ್ಲಿಯ ಕೆಲವು ಅಂಶಗಳಿಗೆ ತಿಲಕರ ಅನುಯಾಯಿಗಳು ತಮ್ಮ ತೀವ್ರ ಅಸಮ್ಮತಿಯನ್ನು ತೋರಿದರು. ಹೀಗೆ ಅಸಮ್ಮತಿಯನ್ನು ತೋರಿದ ಗುಂಪಿನ ಪ್ರಮುಖರು ಅಣೆಯವರೇ. ಬಾಪ್ಟಿಸ್ಟ್, ಜಿನ್ನಾ, ಬಿಪಿನ್ ಚಂದ್ರಪಾಲ್ ಹಾಗೂ ನರಸಿಂಹ ಚಿಂತಾಮಣಿ ಕೇಳಕರ್ ಇವರೆಲ್ಲರೂ ಆಗ ಅಣೆಯವರಿಗೆ ತಮ್ಮ ಬೆಂಬಲವನ್ನು ನೀಡಿದ್ದರು. ಆದರೆ ಮುಂದೆ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಗುವ ಕಾಲದವರೆಗೆ ಅಂದರೆ, ಹತ್ತು ಹನ್ನೆರಡು ವರುಷಗಳ ಅವಧಿಯಲ್ಲಿ ಅಣೆಯವರು ಗಾಂಧೀಜಿಯತ್ತ ವಾಲತೊಡಗಿದರು.  ಅವರ ಅಭಿಪ್ರಾಯಗಳು ಬದಲಾಗತೊಡಗಿದವು. ಈ ವಿಷಯದಲ್ಲಿ ಅವರ ಅಭಿಪ್ರಾಯಗಳನ್ನು ಅವರ ಮಾತಿನಲ್ಲಿಯೇ ಹೇಳುವುದು ಉಚಿತವಾಗಿದೆ.

‘ಲೋಕಮಾನ್ಯ ತಿಲಕರ ಮಾರ್ಗದರ್ಶನದಲ್ಲಿ ನಾನು ೨೫-೩೦ ವರುಷ ಸಾರ್ವಜನಿಕ ಜೀವನದಲ್ಲಿ ಯಾವ ಭಾವನೆಯಿಂದ ದುಡಿದೆನೋ, ಅದೇ ಭಾವನೆಯಿಂದಲೇ ಈಗಲೂ ನಾನು ಯಥಾಶಕ್ತಿ ಕಾರ್ಯ ಮಾಡುತ್ತಲೇ ಬಂದಿದ್ದೇನೆ. ನಮ್ಮ ಸರ್ವಶಕ್ತಿಯನ್ನು ಪಣಕ್ಕಿಟ್ಟು ನಮ್ಮ ದೇಶವನ್ನು ಪಾರತಂತ್ರ್ಯದಿಂದ ಮುಕ್ತಗೊಳಿಸುವುದೇ ಲೋಕಮಾನ್ಯ ತಿಲಕರ ಉದ್ದೇಶವಾಗಿದ್ದಂತೆ, ಮಹಾತ್ಮಾ ಗಾಂಧೀಜಿ ಯವರ ಉದ್ದೇಶವೂ ಆಗಿದೆ. ಅಹಿಂಸಾತ್ಮಕ ಪ್ರತಿಭಟನೆಯೇ ಗಾಂಧೀಜಿಯವರ ಅಸ್ತ್ರವಾಗಿದೆ. ಅವರ ಈ ಅಹಿಂಸಾತ್ಮಕ ಚಳವಳಿಯಿಂದ ನನಗೆ ಇಮ್ಮಡಿ ಸ್ಫೂರ್ತಿ ದೊರಕಿದಂತಾಗಿದೆ. ಅವರ ಈ ಶಂಖನಾದದಿಂದ ನಾನು ಅನ್ಯ ಮಾರ್ಗವನ್ನು ತ್ಯಜಿಸಿ ರಣರಂಗದಲ್ಲಿ ಪಾದಾರ್ಪಣ ಮಾಡುತ್ತಿದ್ದೇನೆ. ಆದುದರಿಂದ  ಗಾಂಧೀಜಿಯವರು  ನನಗೆ ವಹಿಸಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಶ್ರಮಿಸುತ್ತೇನೆ.’

ಹೀಗೆ ಅಣೆಯವರು ಗಾಂಧೀಜಿಯತ್ತ ಪೂರ್ತಿಯಾಗಿ ವಾಲಿದರು. ಇಲ್ಲಿ ಇನ್ನೊಂದು ಮಾತನ್ನು ಸ್ಪಷ್ಟಗೊಳಿಸಲೇ ಬೇಕು. ೧೯೦೭ರಲ್ಲಿ ಅಣೆಯವರು ತಮ್ಮ ‘ಹರಿ ಕಿಶೋರ’ ಪತ್ರಿಕೆಯಲ್ಲಿ ಒಂದು ಲೇಖವನ್ನು ಬರೆದು  ಸದದ ಪರಿಸ್ಥಿತಿಯಲ್ಲಿ ನಾವು ನಿಶ್ಯಸ್ತ್ರರಾಗಿಯೇ ಬ್ರಿಟಿಷರ ವಿರುದ್ಧ ಬಂಡೇಳಬೇಕಾಗಿದೆ ಎಂದು ಬರೆದರು. ಇದು ಗಮನಿಸಬೇಕಾದ ವಿಷಯ. ಏಕೆಂದರೆ ೧೯೦೭ರಲ್ಲಿ   ರಾಜಕೀಯ ರಂಗದಲ್ಲಿ ತಿಲಕರ ಪ್ರಭಾವವೇ ಹಬ್ಬಿತ್ತು. ೧೯೨೦ರ ನಂತರವೇ ಗಾಂಧೀಜಿ ತಮ್ಮ ಅಸಹಕಾರ ಆಂದೋಲನವನ್ನು ಪ್ರಾರಂಭಿಸಿದ್ದು.  ಒಂದು ದೃಷ್ಟಿಯಿಂದ ಅಣೆಯವರು ೧೯೦೭ರಷ್ಟು ಹಿಂದೆಯೇ ‘ನಿಶ್ಯಸ್ತ್ರ ಪ್ರತಿಭಟನೆ’ಯ ಹೊಸ ಮಂತ್ರವನ್ನು ಘೋಷಿಸಿದರು.

ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದಕ್ಕಾಗಿ ಯಾವುದೇ ಆಂದೋಲನ ಪ್ರಾರಂಭವಾದ ಕೂಡಲೇ, ಅದರಲ್ಲಿ  ಎಲ್ಲರೂ ಸೇರಿ ತಮ್ಮ ಸಹಕಾರ ನೀಡಲೇಬೇಕೆಂಬುದು ಅಣೆಯವರ ಅಭಿಪ್ರಾಯವಾಗಿದ್ದಿತು. ಹೀಗಾಗಿ, ವಿದೇಶಿ ವಸ್ತ್ರ ಬಹಿಷ್ಕಾರ, ಹೋಮ್ ರೂಲ್ ಅಸಹಕಾರ, ಕಾಯಿದೆ ಭಂಗ ಚಳುವಳಿಯಲ್ಲಿ ಅವರು ಪೂರ್ಣ ನಿಷ್ಠೆಯಿಂದ ಭಾಗವಹಿಸಿದರು. ಈ ಚಳುವಳಿ ಜನತೆಯ ಚಳುವಳಿ ಆಗಬೇಕು ಎಂಬುದು ಅವರ ಹಂಬಲ. ಅದಕ್ಕಾಗಿ ಅವರು ತಮ್ಮ ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಂಡು, ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದರು. ಈಗಲೂ ನಮ್ಮಲ್ಲಿ ಅಕ್ಷರಸ್ಥರು ಕಡಿಮೆ. ಆಗ ಇನ್ನೂ ಕಡಿಮೆ. ಹಳ್ಳಿಯ ಜನರೇ ಹೆಚ್ಚು. ಸ್ವಾತಂತ್ರ್ಯ ಏಕೆ ಬೇಕು, ಸ್ವಾತಂತ್ರ್ಯ ಬಂದರೆ ದೇಶದ ಗೌರವ ಹೇಗೆ ಉಳಿಯುತ್ತದೆ, ಜನ ಸಾಮಾನ್ಯಕ್ಕೆ ಪ್ರಯೋಜನವೇನು ಎಂದು ಅಣೆಯವರು ವಿವರಿಸಿದರು. ಸ್ವರಾಜ್ಯಪ್ರಾಪ್ತಿಯ ನಂತರ ನಮ್ಮ ಸಾಮಾನ್ಯಜನರ ಜೀವನಮಟ್ಟ ಹೇಗೆ ಉನ್ನತಗೊಳ್ಳುತ್ತದೆ ಎಂಬುದನ್ನು ನಮ್ಮ ಮಂದಾಳುಗಳು ಸುಲಭವಾಗಿ ಜನಕ್ಕೆ ಅರ್ಥ ವಾಗುವಂತೆ ತಿಳಿಯಹೇಳಬೇಕು ಎಂದು ಅವರು ಹೇಳಿದರು.

ಸೆರೆಮನೆ ವಾಸ

ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಪ್ರಾರಂಭಿಸಿದಾಗ ವಿದರ್ಭದಲ್ಲಿ ಅದನ್ನು ಮಾಡುವ ಬಗೆ ಹೇಗೆ ಎಂದು ಅಣೆ ಯೋಚಿಸತೊಡಗಿದರು. ವಿದರ್ಭದಲ್ಲಿ ಸಾಗರವಿಲ್ಲ, ಅದಕ್ಕಾಗಿ ಬೇರೆಡೆ ತಯಾರಿಸಿದ ಉಪ್ಪನ್ನು ಇಲ್ಲಿಯ ಜನರಿಗೆ ತಂದು ಮಾರುವುದರಲ್ಲೂ ಯಾವ ಪುರುಷಾರ್ಥವೂ ಇಲ್ಲವೆಂದು ಅವರು ಬಗೆದರು. ಉಪ್ಪಿನ ಸತ್ಯಾಗ್ರಹದ ಬದಲಾಗಿ ಅವರು ವಿದರ್ಭದಲ್ಲಿ ರೈತರಿಗೆ ತೊಂದರೆ ದಾಯಕವೆನಿಸಿದ ಸರ್ಕಾರಿ ಕಾಡುಗಳಲ್ಲಿ ಮರಗಳನ್ನು ಕಡಿಯುವ ಸತ್ಯಾಗ್ರಹ ಪ್ರಾರಂಭಿಸಿದರು. ಕಾಡನ್ನು ಕಡಿಯುವ ಈ ಸತ್ಯಾಗ್ರಹದಲ್ಲಿ ವಿದರ್ಭದ ರೈತರು ಭಾಗವಹಿಸತೊಡಗಿದರು. ಈ ಸಂದರ್ಭದಲ್ಲಿಯೇ ಅವರು ಜಿಲ್ಲಾ ಪರಿಷತ್ತುಗಳನ್ನು ರೂಪಿಸಿದರು. ಈ ಜಿಲ್ಲಾ ಪರಿಷತ್ತುಗಳ ಮುಖಾಂತರ, ಸರ್ಕಾರಿ ಕಾಡನ್ನು ಕಡಿದು ಕಾಯಿದೆ ಭಂಗಮಾಡುವ ತಮ್ಮ ಯೋಜನೆಗೆ ಅಖಿಲ ಕಾಂಗ್ರೆಸ್ ಪಕ್ಷದ ಸಮ್ಮತಿ ಯನ್ನು ಪಡೆದು ಅಣೆ ತಮ್ಮ ಕಾಯಿದೆ ಭಂಗ ಚಳುವಳಿ ಯನ್ನು ವಿದರ್ಭ ರಾಜ್ಯದಲ್ಲಿ ಪ್ರಾರಂಭಿಸಿದರು. ಈ ರೀತಿಯಲ್ಲಿ ಕಾಯಿದೆ ಭಂಗಗೊಳಿಸಿದ್ದರಿಂದ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿತು. ಅವರು ಸರ್ಕಾರದ ಕಾಡಿನಲ್ಲಿ ಅಪ್ಪಣೆ ಇಲ್ಲದೆ ಹುಲ್ಲು ಕತ್ತರಿಸಿ ಕದ್ದರೆಂದು ಆಪಾದನೆ ಹೊರಿಸಿತು. ಅವರಿಗೆ ಆರು ತಿಂಗಳ ಸೆರೆಮನೆ ವಾಸದ ಶಿಕ್ಷೆಯಾಯಿತು.

ಜಾಗೃತಿಯ ವಸ್ತು ಪಾಠ

ಯವತಮಾಳ ಜಿಲ್ಲೆಯಲ್ಲಿ ಅಣೆಯವರು ೧೯೧೪ರಲ್ಲಿಯೇ ಜಿಲ್ಲಾ ಪರಿಷತ್ತನ್ನು ಪ್ರಾರಂಭಿಸಿ ತನ್ಮೂಲಕ ಜಿಲ್ಲೆಯ ರೈತರ ಸಂಘಟನೆಯನ್ನು ಮಾಡಿದ್ದರು. ರೈತರಿಗೆ ಜಮೀನುದಾರರಿಂದ ಅಥವಾ ಸರ್ಕಾರದಿಂದ ಆಗುವ ತೊಂದರೆಗಳ ನಿವಾರಣೆಗಾಗಿ ಅವರು ಅಹೋರಾತ್ರಿ ದುಡಿಯತೊಡಗಿದರು. ರೈತರು ಸತ್ಯಾಗ್ರಹದಲ್ಲಿ ಭಾಗವಹಿಸಿದಾಗ ಸರ್ಕಾರವು ಅವರನ್ನು ದಸ್ತಗಿರಿ ಮಾಡಿ ಅವರ ಮೇಲೆ ಮೊಕದ್ದಮೆ ಹೂಡುತ್ತಿತ್ತು. ಅಣೆಯವರು ವಕಾಲತ್ತನ್ನು ವಹಿಸಿ ಕೋರ್ಟುಗಳಲ್ಲಿ ಹೋರಾಡತೊಡಗಿದರು. ರೈತರಿಂದ ಫೀಸನ್ನು ತೆಗೆದುಕೊಳ್ಳುತ್ತಿರಲಿಲ್ಲ. ಯವತಮಾಳ ಜಿಲ್ಲೆಯಲ್ಲಿ, ಮಧ್ಯಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಇಂತಹ ಜಿಲ್ಲಾ ಪರಿಷತ್ತನ್ನು ಪ್ರಾರಂಭಿಸಬೇಕೆಂಬುದು ಅವರ ಇಚ್ಛೆಯಾಗಿದ್ದಿತು. ಈಗ ಸರ್ಕಾರಿ ಕಾಡನ್ನು ಕಡಿಯುವ ಕಾಯಿದೆ ಭಂಗ ಚಳುವಳಿಯ ಸಂದರ್ಭದಲ್ಲಿ ಅವರ ಈ ಇಚ್ಛೆ ಈಡೇರಿತು.

ಪ್ರಸ್ತುತ ರೂಢವಾಗಿರುವ ಕಾಯಿದೆಗಳನ್ನು ಜನರು ತಮ್ಮ ಹಿತಕ್ಕಾಗಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಜನತೆಗೆ ಮಾರಕವೆನಿಸುವ ಕಾನೂನುಗಳನ್ನು ಹೇಗೆ ಭಂಗಗೊಳಿಸಬೇಕು ಎನ್ನುವ ಬಗೆಗೆ ಅಣೆ ಒಂದು ಪಾಠವನ್ನೇ ರಚಿಸಿದ್ದರು. ತಮ್ಮ ಹೋರಾಟದಲ್ಲಿ ಸಮಯಬಿದ್ದಲ್ಲಿ ವಿವಿಧ ಪಕ್ಷಗಳ ಸಹಕಾರವನ್ನು ಕೋರುವುದರಲ್ಲಿ ಯಾವ ತಪ್ಪೂ ಇಲ್ಲವೆಂದು ಅವರು ಭಾವಿಸಿದ್ದರು.

ಸ್ವರಾಜ್ಯಪಕ್ಷದ ಉದಯ

೧೯೨೧-೨೨ರ ಅಸಹಕಾರ ಆಂದೋಲನದ ರಭಸ ಇಳಿಮುಖವಾಗುತ್ತಿರುವ ಕಾಲದಲ್ಲಿ ದೇಶಬಂಧು ಚಿತ್ತರಂಜನದಾಸರು ಹಾಗೂ ಮೋತಿಲಾಲ ನೆಹರು ಇಬ್ಬರೂ ಕೂಡಿಕೊಂಡು ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷದಲ್ಲಿ ಮುಂಬಯಿ ರಾಜ್ಯದಿಂದ ವಿಠ್ಠಲಭಾಯಿ ಪಟೇಲ್, ಮುಕುಂದರಾವ್ ಜಯಕರ್, ಜಮನಾದಾಸ ಮೆಹತಾ, ನರಸಿಂಹ ಚಿಂತಾಮಣಿ ಕೇಳಕರ್ ಹಾಗೂ ಅಣೆ ಪ್ರತಿನಿಧಿಗಳಾಗಿ ಚುನಾಯಿತ ರಾದರು. ಈ ಎಲ್ಲ ಮುಂದಾಳುಗಳು ಕೇಂದ್ರ ಲೆಜಿಸ್ಲೆಟಿವ್ ಅಸೆಂಬ್ಲಿಗೆ ಚುನಾಯಿತರಾಗಿ ಹೋದ ಮೇಲೆ, ಲೆಜಿಸ್ಲೆಟಿವ್ ಅಸೆಂಬ್ಲಿಯ ಅಧ್ಯಕ್ಷರನ್ನಾಗಿ ವಿಠ್ಠಲಭಾಯಿ ಪಟೇಲರನ್ನು ನಾಮಕರಣ ಮಾಡಲಾಯಿತು.

ಲೆಜಿಸ್ಲೆಟಿವ್ ಅಸೆಂಬ್ಲಿಯಲ್ಲಿ ವಿಠ್ಠಲಭಾಯಿ ಪಟೇಲರು ಅಧ್ಯಕ್ಷರಾದ ಕಾಲದ ಕೀರ್ತಿಯು ಅತ್ಯಂತ ಮಹತ್ವಪೂರ್ಣ ಎನಿಸಿತ್ತು. ಅದಕ್ಕೆ ಮುಖ್ಯ ಕಾರಣ ಎಂದರೆ ‘ಪಬ್ಲಿಕ್ ಸೇಫ್ಟಿ ಬಿಲ್’. ಈ ಮಸೂದೆಯ ಮೂಲಕ ಸರ್ಕಾರ ತನಗೆ ಸಮೃದ್ಧವಾಗಿ ಅಧಿಕಾರ ಪಡೆದುಕೊಳ್ಳಲು ಪ್ರಯತ್ನಪಟ್ಟಿತ್ತು. ಲೆಜಿಸ್ಲೆಟಿವ್ ಅಸೆಂಬ್ಲಿಯಲ್ಲಿ ಸರ್ಕಾರ ನಾಮಕರಣ ಮಾಡಿದ್ದ ಸದಸ್ಯರಿದ್ದರು. ಅವರನ್ನು ಬಳಸಿಕೊಂಡು ವೈಸರಾಯರ ಸರ್ಕಾರ ತನ್ನ ಪ್ರಯತ್ನಕ್ಕೆ ಲೆಜಿಸ್ಲೆಟಿವ್ ಅಸೆಂಬ್ಲಿಯ ಒಪ್ಪಿಗೆಯ ಮುದ್ರೆಯನ್ನು ಒತ್ತಿಸಿಕೊಂಡು ತಾನು ಜನರ ಪ್ರತಿನಿಧಿಗಳ ಬೆಂಬಲದಿಂದ ಆಳುತ್ತಿರುವಂತೆ  ತೋರಿಸಿಕೊಳ್ಳುವ ಹಂಚಿಕೆ ಹೂಡಿತ್ತು. ಅದರ ಕುತಂತ್ರವನ್ನು ಹೇಗೆ ಸೋಲಿಸಬೇಕೆಂದು ವಿಠ್ಠಲ ಭಾಯಿ ಪಟೇಲರು ಮತ್ತಿತರರು ಯೋಚಿಸಿದರು. ಅಸೆಂಬ್ಲಿಯ ಅಧ್ಯಕ್ಷರಾಗಿದ್ದ ಪಟೇಲರು ಅಣೆ ಯವರೊಡನೆ ಸಮಾಲೋಚನೆ ಮಾಡಿ ಒಂದು ತೀರ್ಮಾನಕ್ಕೆ ಬಂದರು. ಸರ್ಕಾರ ಮಸೂದೆಯನ್ನು ಮಂಡಿಸಿತು. ಅದರ ಮೇಲೆ ಬೇಕಾದಷ್ಟು ಚರ್ಚೆಯಾಯಿತು. ಅನಂತರ ಅಧ್ಯಕ್ಷ ವಿಠ್ಠಲಭಾಯಿ ಪಟೇಲರು ಮಸೂದೆ ಕಾನೂನಿಗೆ ವಿರುದ್ಧ ಎಂದು ಸಾರಿ ಅದನ್ನು ತಳ್ಳಿ ಹಾಕಿದರು. ಈ ವಿಷಯದಲ್ಲಿ ಪಟೇಲರು ಅಸೆಂಬ್ಲಿಯ ಸ್ವರಾಜ್ಯಪಕ್ಷದ ಇನ್ನುಳಿದ ಸದಸ್ಯರಿಗಿಂತಲೂ ಹೆಚ್ಚಿನ ವಿಶ್ವಾಸವನ್ನು ಅಣೆ ಅವರ ಬಗ್ಗೆ ಹೊಂದಿದ್ದರು. ಇಲ್ಲಿಂದಲೇ  ಅಣೆ ಅವರು ಕಾಯಿದೆ ಮಂಡಲದಲ್ಲಿಯ ಕಾರ್ಯಕಲಾಪಗಳ ಬಗ್ಗೆ ಪರಿಚಯ ಮಾಡಿಕೊಂಡರು.

೧೯೨೨ರಲ್ಲಿ ಕಾಯಿದೆ ಮಂಡಲವನ್ನು ಬಹಿಷ್ಕರಿಸುವ ನಿರ್ಣಯವನ್ನು ಕಾಂಗ್ರೆಸ್ ಸ್ವೀಕರಿಸಿದ್ದರಿಂದ ಆಗಲೇ ಕಾಯಿದೆ ಮಂಡಲದ ಸದಸ್ಯರಾಗುವ ಸುಯೋಗ ಅಣೆ ಅವರಿಗೆ ತಪ್ಪಿದ್ದಿತು. ಮುಂದೆ ಪಂಡಿತ ಮದನಮೋಹನ ಮಾಳವೀಯರು ಚುನಾವಣೆಗೆ ನಿಲ್ಲಬೇಕೆಂದು  ತೀರ್ಮಾನವಾಯಿತು. ಆದರೆ ಮಾಳವೀಯರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರಿಂದ ನ್ಯಾಷನಲ್ ಅಸೆಂಬ್ಲಿಯಲ್ಲಿ ನ್ಯಾಷನಲಿಷ್ಟ್ ಪಕ್ಷದ ನೇತೃತ್ವವು ಸಹಜವಾಗಿ ಅಣೆ ಅವರ ಪಾಲಿಗೆ ಬಂದಿತು. ಇದರಿಂದಾಗಿ ಅಣೆ ಅವರ ವ್ಯಕ್ತಿತ್ವ ಬೆಳೆಯಿತು. ಇದಕ್ಕೂ ಮುಂಚೆ ಈ ರಾಷ್ಟ್ರೀಯ ಸಭೆಯಲ್ಲಿ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕೆನ್ನುವ ನೆಹರು ವರದಿಯನ್ನು ಸಲ್ಲಿಸಲಾಗಿತ್ತು.

ಆಗಲೇ ಮೋತಿಲಾಲ್ ನೆಹರು ಹಾಗೂ ತೇಜಬಹಾದ್ದೂರ ಸಪ್ರು ಅವರಿಗೆ ಅಣೆ ಅವರ ಸಾಮರ್ಥ್ಯದ ಅರಿವಾಯಿತು. (ಡೊಮಿನಿಯನ್ ಸ್ಟೇಟಸ್ ಎಂದರೆ ಬ್ರಿಟಿಷ್ ಚಕ್ಯಾಧಿಪತ್ಯದ ಒಳಗೇ ಉಳಿದು, ಬಹುಮಟ್ಟಿನ ಸ್ವಾತಂತ್ರ್ಯವನ್ನು ಪಡೆಯುವುದು). ಸ್ಪಷ್ಟ ಅಭಿಪ್ರಾಯ ಹಾಗೂ ನಿಶ್ಚಿತ ಧೋರಣೆಯನ್ನು ಅಂಗೀಕರಿಸಿದ ಅಣೆ ಅವರನ್ನು ಅವರಿಬ್ಬರೂ ಬಾಯಿತುಂಬ ಹೊಗಳಿದರು.

ಪ್ರಾಮಾಣಿಕ

‘ಅಹಿಂಸಾತ್ಮಕ ವಿರೋಧ’ ಗಾಂಧೀಜಿಯವರ ಅಸ್ತ್ರವಾಗಿತ್ತು. ಈ ತತ್ವವನ್ನು ಅಣೆಯವರು ಒಪ್ಪಿಕೊಂಡಿದ್ದರೂ, ಅದರ ಸಾಧನೆಯ ಬಗೆಗೆ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟವಾಗಿ ಗಾಂಧೀಜಿ ಯವರ ಎದುರಿನಲ್ಲಿಯೇ ಸಕಾರಣವಾಗಿ ವಿವರಿಸುತ್ತಿದ್ದರು. ಈ ಭಿನ್ನಾಭಿಪ್ರಾಯಗಳ ಪ್ರಸಂಗಗಳು ಮೇಲಿಂದಮೇಲೆ ಸ್ಫೋಟಗೊಳ್ಳುತ್ತಿದ್ದವು. ವಿದ್ಯಾರ್ಥಿ ಗಳು ಶಾಲಾಕಾಲೇಜುಗಳನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಬೇಕೆಂದು ಗಾಂಧೀಜಿಯ ಅಭಿಪ್ರಾಯ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಡೆತಡೆ ಆಗಬಾರದೆಂದು ಅಣೆ ಹೇಳುತ್ತಿದ್ದರು. ಹಾಗೆಯೇ ವಕೀಲರು ತಮ್ಮ ವೃತ್ತಿಯನ್ನು ಬಿಡುವುದು, ಶಾಸನಸಭೆಗಳಿಗೆ ಬಹಿಷ್ಕಾರ ಹಾಕುವುದುನ್ನು ಉಚಿತವಲ್ಲವೆಂಬುದು ಅವರ ನಿಶ್ಚಿತ ಅಭಿಪ್ರಾಯ ವಾಗಿದ್ದಿತು.

ತಮ್ಮ ಅಭಿಪ್ರಾಯಕ್ಕೆ ಅನುಗುಣವಾಗಿ ಜನಮತವನ್ನು ರೂಪಿಸಲು ಸಾಕಷ್ಟು ಶ್ರಮಿಸಿದರು. ಯಶಸ್ಸು ಸಿಗಲಿ ಬಿಡಲಿ ಅಣೆ ತಮ್ಮ ಅಭಿಪ್ರಾಯದಿಂದ ಯಾವಾಗಲೂ ವಿಚಲಿತರಾಗಲಿಲ್ಲ. ಅವರಿಗೆ ಗಾಂಧೀಜಿಯವರಲ್ಲಿ ವಿಶೇಷ ಗೌರವವಿದ್ದರೂ ತಮ್ಮ ಅಭಿಪ್ರಾಯಗಳನ್ನು ಬಿಡಲಿಲ್ಲ. ತಮ್ಮ ನಿಲುವನ್ನು ಬದಲಾಯಿಸಲಿಲ್ಲ. ಅಣೆಯವರಿಗೆ ತಮ್ಮ ಅಭಿಪ್ರಾಯಗಳಲ್ಲಿ ಇದ್ದ ನಿಷ್ಠೆಯನ್ನು ಗಾಂಧೀಜಿ ಮೆಚ್ಚಿಕೊಂಡರು. ೧೯೪೧ರಲ್ಲಿ ಗಾಂಧೀಜಿ ತಮ್ಮ ‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ‘ಅಣೆಯವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದರೂ, ಅವರ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಬರೆದರು.

ಗಾಂಧೀಜಿ ಅಣೆಯವರಲ್ಲಿ ಇಟ್ಟ ವಿಶ್ವಾಸದ ಬಗೆಗೆ ಒಂದು ಉದಾಹರಣೆಯನ್ನು ಕೊಡಬಹುದು. ಬಂಗಾಳದ ಸೇನ್‌ಗುಪ್ತಾ ಮತ್ತು ಸುಭಾಷ್ ಚಂದ್ರ ಬೋಸ್ ಇಬ್ಬರೂ ದೇಶಭಕ್ತರೇ. ದುರದೃಷ್ಟದಿಂದ ಇವರ ನಡುವೆ ವಾದ ವಿವಾದ ಎದ್ದಿತು. ಆಗ ಮಧ್ಯಸ್ತಿಕೆಯನ್ನು ವಹಿಸಿ ಅವರಲ್ಲಿ ಒಮ್ಮತವನ್ನು ರೂಪಿಸುವಂತೆ ಗಾಂಧೀಜಿಯವರು ಅಣೆಯವರನ್ನು ಕಲ್ಕತ್ತೆಗೆ ಕಳುಹಿಸಿದರು. ಆದರೆ ಬಂಗಾಲದ ಈ ಧುರೀಣರಿಬ್ಬರೂ ಅಣೆಯವರ ವಿರುದ್ಧವೇ ಗಾಂಧೀಜಿಯ ಬಳಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದರು. ಆಗ ಗಾಂಧೀಜಿ ಖಡಾಖಂಡಿತವಾಗಿ ಅಣೆಯವರಲ್ಲಿ ತಮ್ಮ ನಿತಾಂತ ವಿಶ್ವಾಸವಿದ್ದುದನ್ನು ಸ್ಪಷ್ಟಪಡಿಸಿದರು.

ಮಹಾತ್ಮಾಜಿಯರೊಡನೆ ಅಣೆಯವರ ಭಿನ್ನಾಭಿಪ್ರಾಯಕ್ಕೆ ಮೂಲತಃ ರಾಷ್ಟ್ರಹಿತವೇ ಆಧಾರವಾಗಿತ್ತು. ಉದಾಹರಣೆಗೆ ಬ್ರಿಟಿಷ್ ಸರ್ಕಾರವು ಒಡೆದು ಆಳುವ ತನ್ನ ನೀತಿಗೆ ಅನುಗುಣವಾಗಿ ಹಿಂದು-ಮುಸ್ಲಿಂ-ಹರಿಜನರನ್ನು ಪ್ರತ್ಯೇಕವಾಗಿ ಪರಿಗಣಿಸುವ ‘ಜಾತಿಯ ತೀರ್ಪು’ (ಕಮ್ಯೂನಲ್ ಅವಾರ್ಡ್) ನೀಡಿತು.

ಮ್ಯಾಕ್ಡೊನಾಲ್ಡ್ ಇವರ ಈ ತೀರ್ಪು ಅಣೆಯವರಿಗೆ ಸರ್ವಥಾ ಮಾನ್ಯವಿರಲಿಲ್ಲ. ಭವಿಷ್ಯದಲ್ಲಿ ಭಾರತದ ವಿಭಜನೆಯ ಬೀಜವನ್ನು ಇದು ಇಂದು ಬಿತ್ತುತ್ತದೆ ಎಂದೇ ಅವರು ತಿಳಿದುಕೊಂಡಿದ್ದರು. ಆದರೆ ಕಾಂಗ್ರೆಸ್ ಈ ತೀರ್ಪಿನ ಬಗ್ಗೆ ತಟಸ್ಥವಾಗಿ ಉಳಿಯಿತು. ‘ಮಾನ್ಯತೆಯೂ ಇಲ್ಲ, ತಿರಸ್ಕಾರವೂ ಇಲ್ಲ’ ಎಂಬ ಧೋರಣೆಯನ್ನು ಅದು ತಾಳಿತು. ಆಗ ಅವರು ನಿರುಪಾಯರಾಗಿ ಕಾಂಗ್ರೆಸನ್ನು ತ್ಯಜಿಸಿ ಈ ಜಾತಿಯ ತೀರ್ಪನ್ನು ವಿರೋಧಿಸಲು ಪಂಡಿತ ಮದನಮೋಹನ ಮಾಲವೀಯರ ನಾಯಕತ್ವದಲ್ಲಿ ‘ರಾಷ್ಟ್ರೀಯ ಪಕ್ಷ’ವನ್ನು ಸ್ಥಾಪಿಸಿದರು.

ಸ್ವಾತಂತ್ರ್ಯ ಹೋರಾಟವು ಕೇವಲ ಭಾರತದಲ್ಲೇ ನಡೆದರೆ ಸಾಲದು, ಇಂಗ್ಲೆಂಡಿನಲ್ಲೂ ನಮ್ಮ ಪರವಾಗಿ ಪ್ರಚಾರ ನಡೆಯಬೇಕು. ಅಲ್ಲಿ ನಮಗೆ ಅನುಕೂಲ ವಾಗಿದ್ದ ಮಜೂರ ಪಕ್ಷದ ಮುಖಂಡರಿಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿ, ಅವರು ನಮಗೆ ಅನುಕೂಲವಾದ ಅಭಿಪ್ರಾಯವನ್ನು ಬ್ರಿಟನ್ನಿನ ಸಂಸತ್ತಿನಲ್ಲಿ ಮಂಡಿಸಿ, ಆ ಸರ್ಕಾರದ ನೀತಿ ಭಾರತಕ್ಕೆ ಅನುಕೂಲವಾಗುವಂತೆ ಮಾಡಬೇಕು ಎಂದು ಅಣೆಯವರು ದೃಢವಾಗಿ ಪ್ರತಿಪಾದಿಸುತ್ತಿದ್ದರು. ಮ್ಯಾಕ್ಡೊನಾಲ್ಡರ ಜಾತೀಯ ತೀರ್ಪನ್ನು ಬದಲಾಯಿಸಲು ಬ್ರಿಟಿಷ್ ಮಜೂರ ಪಕ್ಷದ ಸಂಸತ್ಸದಸ್ಯರ ಮನವೊಲಿಸಲು ಸಹ ಅವರು ನಿರ್ಧರಿಸಿದರು.

ಈ ಬಗ್ಗೆ ಮದನಮೋಹನ ಮಾಲವೀಯ, ಮುಕ್ತಿಯಾರ್‌ಸಿಂಗ್ ಮತ್ತು ಪಂಡಿತ ಹೃದಯನಾಥ ಕುಂಝ್ರು ಇವರೊಡನೆ ಸಮಾಲೋಚಿಸಿದರು. ೧೯೩೯ರ ಮಧ್ಯದಲ್ಲಿ ಈ ಉದ್ದೇಶದಿಂದ ಲಂಡನ್ನಿನ ಯಾತ್ರೆ ಕೈಗೊಳ್ಳುವ ಸಿದ್ಧತೆಯನ್ನು ಮಾಡಿದರು. ಆದರೆ ಆಗ ದ್ವೀತಿಯ ಮಹಾಯುದ್ಧವು ಆರಂಭ ವಾದುದರಿಂದ ಅವರ ಈ ಯೋಜನೆ ಫಲಿಸದಾಯಿತು.

ಬ್ರಿಟಿಷ್ ಸರ್ಕಾರದ ಆಮಂತ್ರಣ

೧೯೩೩ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅಣೆ ಚುನಾಯಿತಗೊಂಡರು. ಆದರೆ ಮುಂದೆ ಅವರು ವೈಸರಾಯರ ಸಲಹಾಮಂಡಲಿಯ ಸದಸ್ಯರಾಗಿ ನಾಮಕರಣಗೊಂಡರು. (ಆ ದಿನಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಇರಲಿಲ್ಲ. ಬ್ರಿಟಿಷ್ ಸರ್ಕಾರದ ಪರವಾಗಿ ಇಲ್ಲಿ ಆಡಳಿತ ನಡೆಸುತ್ತಿದ್ದವನು ವೈಸ್‌ರಾಯ್. ಆತ ತನಗೆ ಇಷ್ಟ ಬಂದವರನ್ನು ಸಲಹಾಮಂಡಲಿಗೆ ನೇಮಿಸಿಕೊಳ್ಳುತ್ತಿದ್ದ. ಅವರನ್ನು ಜನರು ಚುನಾಯಿಸುತ್ತಿರಲಿಲ್ಲ. ಅವರು ಮಂತ್ರಿಗಳಂತೆ ಕೆಲಸ ಮಾಡುತ್ತಿದ್ದರು. ಆದರೆ ಕಟ್ಟಕಡೆಯ ಅಧಿಕಾರ ವೈಸರಾಯನದೇ). ಅವರು ಅದನ್ನು ಸ್ವೀಕರಿಸಿದ್ದಕ್ಕೆ ಭಾರತಾದ್ಯಂತ ಅವರ ಮೇಲೆ ಟೀಕೆಗಳ ಸುರಿಮಳೆಯಾಗತೊಡಗಿತು. ಇಡೀ ದೇಶವೆ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಲು ಹೆಣಗಾಡು ತ್ತಿರುವಾಗ ಅಣೆಯವರಂತಹ ದೇಶಭಕ್ತರು ಬ್ರಿಟಿಷ್ ಸರ್ಕಾರದ ಈ ಆಮಂತ್ರಣ ಸ್ವೀಕರಿಸದ್ದರ ಔಚಿತ್ಯ ಜನರಿಗೆ ಅರ್ಥವಾಗುವಂತಿರಲಿಲ್ಲ.

ಯುದ್ಧ ಆರಂಭವಾದ ನಂತರ ಪುನಃ ಕಾಂಗ್ರೆಸ್ ವಿಧಾನಮಂಡಲಿಗಳನ್ನು ಬಹಿಷ್ಕರಿಸಿತು. ಆದರೆ ಈ ರೀತಿ ಬಹಿಷ್ಕರಿಸಿ ಹೊರಗೆ ಬರುವ ಸದಸ್ಯರು ಸ್ವಾತಂತ್ರ್ಯಕ್ಕಾಗಿ ಏನು ಮಾಡಬೇಕೆಂಬ ಬಗ್ಗೆ ಮಾತ್ರ ನಿಖರವಾದ ನಿಲುವಿರಲಿಲ್ಲ. ನಿಷ್ಕ್ರಿಯವಾಗಿ ಇರಲು ಅಣೆಯವರು ಬಯಸುತ್ತಿರಲಿಲ್ಲ. ಅವರು ಈ ಮೊದಲೇ ಕಾಂಗ್ರೆಸಿಗೆ ರಾಜೀನಾಮೆ ನೀಡಿದ್ದರಿಂದ ಅದರ ಸದಸ್ಯರಾಗಿ ವಿಧಾನಮಂಡಲಿಗೆ ಆಯ್ಕೆಯಾಗಿರಲಿಲ್ಲ. ಆದುದರಿಂದ ಕಾಂಗ್ರೆಸಿನ ಈ ಕರೆ ಅವರಿಗೆ ಅನ್ವಯವಾಗುವ ಪ್ರಶ್ನೆಯೂ ಇರಲಿಲ್ಲ. ದೇಶದ ಹಿತವೇ ಅವರ ಮುಖ್ಯ ಗುರಿಯಾಗಿತ್ತು. ಆದುದರಿಂದ ಅವರು ವಿಧಾನಮಂಡಲಿಗೆ ರಾಜೀನಾಮೆ ನೀಡದೆ, ಸ್ವಾತಂತ್ರ್ಯಕ್ಕಾಗಿ ಸಕ್ರಿಯರಾಗಿ ದುಡಿಯುವುದನ್ನು ಮುಂದುವರಿಸಿದರು. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಿಂದುಗಳಿಗೆ ಸೈನಿಕ ತರಬೇತಿ ಸಿಗಬೇಕು, ಅವರಿಗೆ ಪ್ರತ್ಯಕ್ಷ ಯುದ್ಧದ ಅನುಭವ ಇರಬೇಕು, ಇದರಿಂದ ಸ್ವತಂತ್ರ ಭಾರತದ ರಕ್ಷಣೆಗೆ ಅನುಕೂಲವಾಗುವುದು ಎಂದು ನಂಬಿದ ಅವರು ಹೆಚ್ಚು ಹೆಚ್ಚು ಜನರನ್ನು ಸೈನ್ಯದಲ್ಲಿ ಸೇರಿಸಲು ಯುದ್ಧದ ಆ ಅವಕಾಶವನ್ನು ಉಪಯೋಗಿಸಿ ಕೊಂಡರು.

ದೇಶಹಿತಕ್ಕಾಗಿ

ಅಣೆಯವರು ವೈಸರಾಯರ ಸಲಹಾ ಮಂಡಲಿಯ ಸದಸ್ಯರಾಗಲು ಒಪ್ಪಿದ್ದು ಅಧಿಕಾರದ ಆಸೆಯಿಂದ ಅಲ್ಲ. ಘೋರ ಯುದ್ಧ ನಡೆಯುತ್ತಿತ್ತು. ಇಂಗ್ಲೆಂಡ್ ಕಷ್ಟದಲ್ಲಿತ್ತು. ಅಂತಹ ಸಮಯದಲ್ಲಿ ವೈಸರಾಯರ ಸಲಹಾ ಮಂಡಲಿಗೆ ಸದಸ್ಯರಾಗಿದ್ದರೆ, ಭಾರತಕ್ಕೆ ಅನುಕೂಲವಾದ ನಿರ್ಧಾರಗಳನ್ನು ಬ್ರಿಟಿಷ್ ಸರ್ಕಾರ ಕೈಕೊಳ್ಳುವಂತೆ ಸಾಧಿಸಲು ಅನುಕೂಲ ವಾಗುವುದೆಂದೇ ಅಣೆಯವರು ಈ ಸದಸ್ಯತ್ವನ್ನು ಸ್ವೀಕರಿಸಿದ್ದರು. ಬರ್ಮಾದಿಂದ ಭಾರತೀಯರನ್ನು ನಿರ್ದಯವಾಗಿ ಜಾಡಿಸಲು ಆರಂಭಿಸಿದಾಗ, ಈ ಅಧಿಕಾರದ ಸದುಪಯೋಗವನ್ನು ಮಾಡಿಕೊಂಡು ಅಣೆಯವರು ಲಕ್ಷಾವಧಿ ಭಾರತೀಯರ ಪ್ರಾಣ-ಆಸ್ತಿಗಳನ್ನು ಸುರಕ್ಷಿತವಾಗಿ ಉಳಿಸಿದರು. ಈ ರೀತಿ ಭಾರತಕ್ಕೆ ಬಂದವರನ್ನು ಪುನಃ ನೆಲೆಸುವಂತೆ ಎಲ್ಲ ಕ್ರಮಗಳನ್ನೂ ಕೈಕೊಂಡರು. ಅಂದಿನ ತಮ್ಮ ದುರ್ಭಾಗ್ಯದ ದಿನಗಳನ್ನು ನೆನೆದು ಇಂದಿಗೂ ಈ ಜನರು ಅಣೆಯವರನ್ನು ‘ದೇವರು’ ಎಂದೇ ಗೌರವಿಸುತ್ತಾರೆ. ಈ ಸಂದರ್ಭದಲ್ಲೂ ಕಾಂಗ್ರೆಸ್ ಬರ್ಮಾದಲ್ಲಿದ್ದ ಭಾರತೀಯರ ಸಂಕಷ್ಟದ ಬಗ್ಗೆ ಚಕಾರ ಎತ್ತಲಿಲ್ಲ ಎಂಬುದನ್ನು ಗಮನಿಸಿದಾಗ ಅಣೆಯವರು ಅಧಿಕಾರದಲ್ಲಿರಲು ಬಯಸಿದುದರ ಉದ್ದೇಶ ಮತ್ತು ಔಚಿತ್ಯವು ಎಷ್ಟು ದೇಶಭಕ್ತಿಯುತವಾಗಿತ್ತೆಂಬುದು ಸ್ಪಷ್ಟವಾಗುತ್ತದೆ.

ಗಾಂಧೀಜಿಗಾಗಿ ಅಧಿಕಾರ ತ್ಯಾಗ

ಅಣೆಯವರ ಮೇಲಿನ ಟೀಕೆಗಳ ಬೆಂಕಿಗೆ ಸೀಮೆಎಣ್ಣೆ ಸುರುವಿದಂತೆ ಮತ್ತೊಂದು ಪ್ರಸಂಗ ನಡೆಯಿತು. ೧೯೪೨ರಲ್ಲಿ ಗಾಂಧೀಜಿ ಕ್ವಿಟ್ ಇಂಡಿಯ ಚಳುವಳಿ ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರದ ವಿರುದ್ಧ ತೀವ್ರ ಚಳುವಳಿ ಪ್ರಾರಂಭವಾಯಿತು. ಆಗ ಬ್ರಿಟಿಷ್ ಸರ್ಕಾರದ ಶಾಸನ ಸಾಮರ್ಥ್ಯ ಪ್ರದರ್ಶನದ ಜವಾಬ್ದಾರಿಯನ್ನು ಅಣೆ ಹೊತ್ತುಕೊಂಡರು. ಸರ್ಕಾರವು ಗಾಂಧೀಜಿಯವರನ್ನು ಬಂಧಿಸಿ ಪುಣೆಯ ಆಗಾಖಾನ ಅರಮನೆಯಲ್ಲಿ ಇಟ್ಟಿತು. ಅಲ್ಲಿ ಅವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಆ ಸುದ್ದಿಯನ್ನು ತಿಳಿದಾಗ ಅಧಿಕಾರದಲ್ಲಿದ್ದ ಅಣೆಯವರಿಗೆ ಚಿಂತೆಯಾಯಿತು. ಮಹಾತ್ಮಾಜಿಯವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ತುಂಬು ಗಾಂಭೀರ್ಯದಿಂದ ವೈಸರಾಯರಿಗೆ ಸೂಚಿಸಿದರು. ಆದರೆ ಗಾಂಧೀಜಿ ಉಪವಾಸಹೂಡಿ ಸತ್ತರೆ ಸ್ವಾತಂತ್ರ್ಯ ಹೋರಾಟ ನಿಲ್ಲುವುದು ಎಂದು ಬಲವಾಗಿ ನಂಬಿದ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿದ್ದ ವೈಸರಾಯ್ ಇದಕ್ಕೆ ಸಿದ್ಧನಾಗಲಿಲ್ಲ. ಈ ಮೊಂಡುತನದ ಧೋರಣೆಯಿಂದ ಮುಂದೆ ಗಾಂಧೀಜಿಗೆ ಏನಾದರೂ ಅಪಾಯವಾದರೆ ದೇಶದಲ್ಲಿ ಹಿಂಸೆ, ಅರಾಜಕತೆ ತಾಂಡವವಾಡುವುದು ನಿಶ್ಚಿತ ಎಂದು ಅಣೆಯವರು ವೈಸರಾಯರಿಗೆ ಎಚ್ಚರಿಕೆಕೊಟ್ಟರು. ವೈಸ್‌ರಾಯ್ ಅದಕ್ಕೂ ಜಗ್ಗದಿದ್ದಾಗ ಗಾಂಧೀಜಿಯವರನ್ನು ಉಳಿಸುವ ಏಕಮಾತ್ರ ಉಪಾಯವಾಗಿ ತಾವು ಅಧಿಕಾರಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದರು. ಜೊತೆಗೆ ಇನ್ನಿಬ್ಬರು ಸದಸ್ಯರಾಗಿದ್ದ ಸರ್ ಹೋಮಿ ಮೋದಿ ಮತ್ತು ನಳಿನಿರಂಜನ ಸರ್ಕಾರರೂ ರಾಜೀನಾಮೆ ನೀಡಿ ಹೊರಬರುವಂತೆ ಪ್ರೇರೇಪಿಸಿದರು. ಅಣೆಯವರು ರಾಜೀನಾಮೆ ಕೊಟ್ಟು ಪುಣೆಗೆ ಹೋಗಿ ಗಾಂಧೀಜಿ ಯವರ ಭೇಟಿ ಮಾಡಿದರು. ಮೂವರು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರ ರಾಜಿನಾಮೆಯ ಪರಿಣಾಮ ಬ್ರಿಟಿಷ್ ಸರ್ಕಾರದ ಮೇಲೆ ಆಯಿತು. ಅಣೆ ಮತ್ತು ಇನ್ನಿಬ್ಬರ ರಾಜೀನಾಮೆಯ ಕೆಲವೇ ದಿನಗಳಲ್ಲಿ ಮಹಾತ್ಮಾಜಿ ಯವರ ಬಿಡುಗಡೆ ಆಯಿತು.

ಅಣೆಯವರ ಪ್ರಖರ ದೇಶಭಕ್ತಿ ಮತ್ತು ರಾಜಕೀಯ ಮುತ್ಸದ್ದಿತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ?

ಅವರ ಈ ಕೃತಿಯಿಂದ ಜನರಿಗೆ ಅವರ ವಿಷಯದಲ್ಲಿದ್ದ ಅಸಮಾಧಾನ ಸ್ವಲ್ಪಮಟ್ಟಿಗೆ ಕಡಿಮೆಗೊಳ್ಳುತ್ತಿರುವಾಗಲೆ, ಇನ್ನೊಂದು ಪ್ರಸಂಗ ನಡೆಯಿತು. ಬ್ರಿಟಿಷ್ ಸರ್ಕಾರವು ಅಣೆಯವರನ್ನು ಶ್ರೀಲಂಕಾ (ಆಗ ಸಿಲೋನ್)ದಲ್ಲಿ ಬ್ರಿಟಿಷ್ ಸರ್ಕಾರದ ಹೈಕಮಿಶನರ್ ಎಂದು ನೇಮಕಮಾಡಿತು. ಹೊಸದಾಗಿ ಬಂದ ಈ ಪದವಿಯನ್ನು ಅಣೆಯವರು ಸ್ವೀಕರಿಸಿದರು. ಇದರಿಂದ ಜನ ಪುನಃ ರೊಚ್ಚಿಗೆದ್ದರು. ಜನರ ಟೀಕೆಗೆ ಅಣೆ ಪುನಃ ತುತ್ತಾದರು. ಸಿಲೋನಿನಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೆಲಸಗಾರರಾಗಿದ್ದರು, ವ್ಯಾಪಾರಗಾರರಾಗಿದ್ದರು. ಅವರಿಗೆ ಅಲ್ಲಿ ಅನ್ಯಾಯಗಳಾಗುತ್ತಿದ್ದವು. ಅವರಿಗೆ ಸಹಾಯ ಮಾಡುವುದಕ್ಕಾಗಿಯೇ ಅಣೆಯವರು ಅಲ್ಲಿಗೆ ರಾಯಭಾರಿಯಾಗಿ ಹೋಗಲು ಒಪ್ಪಿದ್ದು. ಇದನ್ನು ಬಹು ಮಂದಿ ಅರ್ಥಮಾಡಿಕೊಳ್ಳಲಿಲ್ಲ.

ದ್ವಿತೀಯ ಮಹಾಯುದ್ಧ ೧೯೪೫ರಲ್ಲಿ ಕೊನೆಗೊಂಡಿತು. ಬ್ರಿಟಿನ್ನಿನಲ್ಲಿ ಚುನಾವಣೆಗಳು ನಡೆಯಲಿದ್ದವು. ಆಗ ಭಾರತದಲ್ಲಿ ವಿಭಜನೆಯ ಮಾತು ಬಲವಾಗಿ ಕೇಳಿಬರುತ್ತಿತ್ತು. ಕಾಂಗ್ರೆಸಿನ ನಿಲುವು ಅಣೆಯವರಿಗೆ ಗೊತ್ತಿತ್ತು. ಬ್ರಿಟಿಷರು ಭಾರತವನ್ನು ಒಡೆಯುವ ಸನ್ನಾಹದಲ್ಲಿದ್ದರು. ಆಗಲೇ ಇಂಗ್ಲೆಂಡಿಗೆ ಹೋಗಿ ಅಲ್ಲಿನ ಮಜೂರ ಪಕ್ಷದ ನಾಯಕರೊಡನೆ ಮಾತುಕತೆಯಾಡಿ ಭಾರತದ ವಿಭಜನೆಯನ್ನು ತಪ್ಪಿಸುವ ಪ್ರಯತ್ನ ಮಾಡಲು ಅಣೆಯವರು ಬಯಸಿದರು. ಮಜೂರ ಪಕ್ಷವು ಗೆಲ್ಲುವುದೆಂಬ ಮುನ್ನೋಟ ಅವರದಾಗಿತ್ತು. ಅದಕ್ಕಾಗಿ ಮಜೂರ ಪಕ್ಷದ ಚುನಾವಣಾ ಘೋಷಣೆಯಲ್ಲಿ, ‘ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ, ಜಾತಿ ನಿರಪೇಕ್ಷ, ಧರ್ಮ ನಿರಪೇಕ್ಷ ತತ್ವಗಳನ್ನು ಒಪ್ಪುವ ಸರ್ಕಾರಕ್ಕೇ ಅಧಿಕಾರವನ್ನು ಹಸ್ತಾಂತರಿಸುವುದು’ ಎಂಬ ಧೋರಣೆಯನ್ನು ಸ್ಪಷ್ಟವಾಗಿ ನಮೂದಿಸಿ ಸೇರಿಸುವಂತೆ ಆ ಪಕ್ಷದ ನಾಯಕರ ಮನವೊಲಿಸಲು ಅವರು ಬಯಸಿದ್ದರು. ಆಗ ಭಾರತದ ವಿಭಜನೆಯು ನಿಶ್ಚಿತವಾಗಿಯೂ ಆಗುತ್ತಿರಲಿಲ್ಲ. ಇಂತಹ ಪ್ರಯತ್ನವನ್ನು ೧೯೧೮-೧೯ರಲ್ಲಿ ಲೋಕಮಾನ್ಯ ತಿಲಕರು ಮಾಡಿ, ಆಗಿನ ಚುನಾವಣೆಗಳಲ್ಲಿ ಮಜೂರ ಪಕ್ಷದ ಚುನಾವಣೆಯ ಘೋಷಣಾಪತ್ರದಲ್ಲಿ ‘ಭಾರತಕ್ಕೆ ಸ್ವಾಯತ್ತ ಅಧಿಕಾರ ನೀಡುವುದು’ ಎಂಬ ಕಾರ್ಯಕ್ರಮವನ್ನು ಸೇರಿಸು ವುದರಲ್ಲಿ ಯಶಸ್ವಿಯಾಗಿದ್ದರು. ತಿಲಕರ ಶಿಷ್ಯರಾಗಿ ಅಣೆಯವರು ಈ ಪ್ರಯತ್ನ ನಿಶ್ಚಿತವಾಗಿಯೂ ಯಶಸ್ವಿ ಯಾಗುವುದೆಂದು ಆಶಿಸಿದ್ದರು. ಆದರೆ ದುರ್ದೈವ ದಿಂದ ಅದು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಭಾರತದ ವಿಭಜನೆಯನ್ನು ತಪ್ಪಿಸಲು ಆಗಲಿಲ್ಲ!

ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ದೇಶವನ್ನು ಹೇಗೆ ಆಳಬೇಕೆಂದು ನಿಶ್ಚಯಿಸಲು ಒಂದು ರಾಜ್ಯಾಂಗ ಘಟನಾ ಸಮಿತಿಯನ್ನು ರಚಿಸಲಾಯಿತು. ಈ ರಾಜ್ಯಾಂಗ ಘಟನಾ ಸಭೆಯ ಹೊಣೆ ಬಹು ದೊಡ್ಡದು. ಅಣೆಯವರು ಅದಕ್ಕೆ ಸದಸ್ಯರಾಗಬೇಕೆಂದು ಜವಹರಲಾಲರು ಬಯಸಿದರು. ಅಣೆಯವರು ಸಿಲೋನಿನಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಭಾರತಕ್ಕೆ ಬಂದರು. ರಾಜ್ಯಾಂಗ ಘಟನಾ ಸಮಿತಿಯ ಸದಸ್ಯರಾದರು.

ದಕ್ಷ ಆಡಳಿತ  

೧೯೫೨ರಲ್ಲಿ ಅಣೆಯವರನ್ನು ಬಿಹಾರದ ಗೌರ‍್ನರ್ ಆಗಿ ನೇಮಕ ಮಾಡಲಾಯಿತು. ಆಗ ಆ ರಾಜ್ಯವು ಬರಗಾಲ ಪೀಡಿತವಾಗಿದ್ದಿತು. ಆ ಸಂದರ್ಭದಲ್ಲಿ ಅಣೆ ಅವರು ಬರಗಾಲ ಪೀಡಿತ ಪ್ರದೇಶಗಳಲ್ಲೆಲ್ಲ ಸಂಚರಿಸಿ ಜನರ ಕಷ್ಟಗಳನ್ನು ಕಣ್ಣಾರೆ ಕಂಡರು. ಕೈಗೊಳ್ಳಬೇಕಾದ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸಿದರು. ಅನೇಕ ಪ್ರದೇಶಗಳನ್ನು ತಲುಪುವುದೇ ಕಷ್ಟವಾಗಿತ್ತು. ಕೆಲವು ಸಲ  ಆನೆ ಮೇಲೆ ಕೆಲವು ಸಲ ಒಂಟೆ ಮೇಲೆ ಕೆಲವ ಸಲ ಎತ್ತಿನ ಗಾಡಿಗಳಲ್ಲಿ ಪ್ರವಾಸ ಮಾಡಿದರು. ತಾತ್ಕಾಲಿಕವಾಗಿ ತೀವ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಸ್ಥಳದಲ್ಲಿಯೇ ಆಜ್ಞೆಯನ್ನು ನೀಡುತ್ತಿದ್ದರು. ಅವರು ಮಾಡಿದ ಕೆಲಸ ಕಂಡು ಬಿಹಾರದ ಜನತೆ ಅವರನ್ನು ಅತ್ಯಂತ ಗೌರವದಿಂದ ಮತ್ತು ಪ್ರೀತಿಯಿಂದ ಕಾಣತೊಡಗಿದರು. ತಮ್ಮ ಗೌರ‍್ನರ್ ಪದವಿಯನ್ನು ಮುಗಿಸಿಕೊಂಡು ನಂತರ ಅಣೆ ಅವರು ತಮ್ಮ ರಾಜ್ಯವಾದ ಮಹಾರಾಷ್ಟ್ರಕ್ಕೆ ಮರಳಿ ಬಂದರು.

೧೯೬೮ರ ಜನವರಿ೨೬ ಗಣರಾಜ್ಯ ದಿನಾಚರಣೆಯಂದು ಸರ್ಕಾರ ಅಣೆಯವರಿಗೆ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಈ ಸುದ್ದಿ ಅಂದು ಬೆಳಿಗ್ಗೆ  ಪತ್ರಿಕೆಗಳಲ್ಲಿ ಪ್ರಕಟ ವಾಯಿತು. ಅಂದೇ ಸಂಜೆ ಅಣೆಯವರು ತೀರಿ ಕೊಂಡರು. ಆಗ ಅವರಿಗೆ ೭೮ ವರ್ಷ. ಮುಂಬಯಿಯಲ್ಲಿ ಚೌಪಾತಿಯಲ್ಲಿ ಲೋಕಮಾನ್ಯ ತಿಲಕರ ವಿಗ್ರಹ ವಿದೆ. ಅದರ ಬಳಿಯೇ ಅಣೆಯವರ ಅಂತ್ಯ ಸಂಸ್ಕಾರ ಆಯಿತು.

ಹಿರಿಯ ನಾಯಕರೊಡನೆ

ತಮ್ಮ ಸಾರ್ವಜನಿಕ ಜೀವನದಲ್ಲಿ ಅಣೆಯವರು ಮೂವರು ಮಹಾನ್ ನಾಯಕರೊಡನೆ ಕೆಲಸ ಮಾಡಿದರು. ಮೊದಲು ತಿಲಕರು, ಅನಂತರ ಗಾಂಧೀಜಿ, ಕಡೆಗೆ ಜವಹರಲಾಲ್ ನೆಹರು. ಮೂವರ ಪ್ರೀತಿಗೌರವಗಳನ್ನು ಅವರು ಗಳಿಸಿದರು. ಮೂವರೂ ಅವರಿಗೆ ಹೊಣೆಗಾರಿಕೆಯ ಕೆಲಸಗಳನ್ನು ಒಪ್ಪಿಸಿದರು. ಅಣೆಯವರಿಗೆ ಭಾರತದ ಪರಂಪರೆಯಲ್ಲಿ ಗೌರವ, ವಿಶ್ವಾಸ, ಜೊತೆಗೆ ಭಾರತದ ಸ್ವಾತಂತ್ರ್ಯವನ್ನು ಗಳಿಸುವ ಹಂಬಲ. ಭಾರತದ ಹಿತಕ್ಕಾಗಿ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು, ಸರ್ಕಾರ ಕೊಡುವ ಅಧಿಕಾರವನ್ನು ಉಪಯೋಗಿಸಿಕೊಂಡರೆ ಒಳ್ಳೆಯದು ಎಂದು ಕಂಡಾಗ ಉಪಯೋಗಿಸಿಕೊಳ್ಳಬೇಕು. ವಿರೋಧಿಸಿದರೆ ದೇಶಕ್ಕೆ ಒಳ್ಳೆಯದು ಎಂದು ಕಂಡಾಗ ವಿರೋಧಿಸಿ ಸೆರೆಮನೆಗಾದರೂ ಹೋಗಬೇಕು. ಹೀಗೆ ದೇಶದ ಹಿತ ಒಂದನ್ನೇ ಗುರಿಯಾಗಿಟ್ಟುಕೊಂಡು ಅವರು ಶ್ರಮಿಸಿದರು.

ತಮ್ಮ ತಾತನ ಆಸೆಯಂತೆ ಅಣೆ ಅವರು ಪಂಡಿತರಾಗಲಿಲ್ಲ. ಅವರು ತಮ್ಮ ಜೀವನದ  ಕೊನೆಯವರೆಗೆ ಸ್ವರಾಜ್ಯಕ್ಕಾಗಿ ಹೋರಾಟವನ್ನು ಮಾಡಿ ಸಾರ್ವಜನಿಕರ ಸೇವೆಯನ್ನು ಒಂದು ವೃತ್ತಿಯಂತೆ ನಡೆಸಿಕೊಂಡು ಬಂದು ನಮ್ಮ ಪ್ರಾತಃಸ್ಮರಣೀಯರ ಗುಂಪಿನಲ್ಲಿ ಒಬ್ಬರಾಗಿ ಅಮರರಾದರು.