ಚಲನಚಿತ್ರಗಳು

ಧಾರವಾಹಿಗಳ ಮುಂದುವರಿಕೆಯಾಗಿ ಹೆಚ್ಚು ಜನಪ್ರಿಯತೆಯಲ್ಲಿರುವುದು ಚಲನಚಿತ್ರಗಳು. ಪುರುಷ ಪ್ರಧಾನ ವ್ಯವಸ್ಥೆಯ ಭಾಗವೇ ಆಗಿದ್ದ ಚಲನಚಿತ್ರೋಧ್ಯಮದಲ್ಲಿಯೂ ಆರಂಭದಿಂದಲೂ ಅನಿವಾರ್ಯಗಿದ್ದ ಸ್ತ್ರೀಪಾತ್ರಗಳ ನಿರ್ವಹಣೆಗೆ ಮಾತ್ರ ಮಹಿಳೆಗೆ ಅವಕಾಶವಿತ್ತು. ನಾಟಕದಲ್ಲಿರುವಂತೆ ಈ ಪಾತ್ರವನ್ನು ಪುರುಷನೇ ನಿರ್ವಹಿಸುವ ಸಾಧ್ಯತೆ ಇದ್ದರೆ ಅವಕಾಶವೂ ಇರುತ್ತಿರಲಿಲ್ಲ. ಆದರೆ ಇಲ್ಲಿ ಯಾಕೋ ಅಂಥ ಪ್ರಯತ್ನಗಳಾಗಲಿಲ್ಲ. ಹೀಗಾಗಿ ಚಲನಚಿತ್ರ ರಂಗದಲ್ಲಿ ಮಹಿಳೆ ಅಭಿನಯ ಗಾಯನ, ಹಿನ್ನಲೆಗಾಯನ, ನೃತ್ಯ ಸಂಯೋಜನೆ, ಹಣವಿದ್ದರೆ ನಿರ್ಮಾಣ ಈ ಹಂತಗಳಲ್ಲಿ ತೃಪ್ತಿಗೊಳ್ಳಬೇಕಾಯಿತು. ನಿರ್ದೇಶನ ಮಾಡುವ ಹಂತ ತಲುಪಲು ದಶಕಗಳ ಕಳೆಯಬೇಕಾಯಿತು. ಈ ಹಿನ್ನೆಲೆಯಲ್ಲಿ ಚಲನಚಿತ್ರೋದ್ಯಮದಲ್ಲಿ ಮಹಿಳೆಯನ್ನು ಅಭಿನಯ, ನಿರ್ಮಾಣ, ನಿರ್ದೇಶನ ಹಿನ್ನೆಲೆಗಾಯನ ಈ ಮುಂತಾದ ತಾಂತ್ರಿಕ ಕ್ರಿಯೆಗಳಲ್ಲಿ ಗುರುತಿಸುವುದು ಒಂದು ಆಯಾಮವಾದರೆ, ಮಹಿಳೆಯನ್ನು ಚಲನಚಿತ್ರಗಳಲ್ಲಿ ಯಾವ ಯಾವ ರೀತಿ ಪ್ರತಿನಿಧಿಸಲಾಗುತ್ತದೆ ಎಂಬುದನ್ನು ಗುರುತಿಸುವುದು ಭಿನ್ನವಾದ ಆಯಾಮವಾಗುತ್ತದೆ.

ಚಲನಚಿತ್ರ ಕಥೆಯಿಂದ ಚಲನಚಿತ್ರ ಗೀತಸಾಹಿತ್ಯದವರೆಗೂ ಹೆಣ್ಣಿನ ಬಗೆಗೆ ಇರುವ ಧೋರಣೆಗಳೇನೆಂಬುದನ್ನು ಅರ್ಥಮಾಡಿಕೊಳ್ಳಲು ಹಲವು ಸಂಗತಿಗಳು ದೊರಕುತ್ತವೆ. ಕೆಲವು ಚಲನಚಿತ್ರಗಳು ವೈಚಾರಿಕವಾದವುಗಳು ಇವೆ. ಆದರೆ ಇತ್ತೀಚಿನ ಚಲನಚಿತ್ರಗಳು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರೂ ಕೇವಲ ಮನರಂಜನೆಗೆ ಸೀಮಿತವಾಗಿವೆ. ಇನ್ನೂ ಕೆಲವು ಅದರಲ್ಲೂ ಚಲನಚಿತ್ರ ಶೀರ್ಷಿಗಳತ್ತ ಕಣ್ಣು ಹಾಯಿಸಿದರೆ ‘ತಾಯಿ’ ಪದದ ಭಾವನಾತ್ಮಕತೆಯನ್ನು ಪ್ರಧಾನವಾಗಿರಿಸಿಕೊಂಡು ಪ್ರೇಕ್ಷಕರನ್ನು ಸೆಳೆಯುವ ಯತ್ನವೇ ವಿಶೇಷವಾಗಿ ಕಾಣುತ್ತದೆ. ಉದಾಹರಣೆಗೆ, ತಾಯಿಯ ಮಡಿಲು, ತಾಯಿಯ ಕನಸು, ತಾಯಿಯ ಹೊಣೆ, ತಾಯಿಯೇ ದೇವರು, ಹೆತ್ತಕರುಳು, ತಾಯಿಕೊಟ್ಟ ಸೀರೆ, ಮಾತೃದೇವತೆ, ತಾಯಿಗೆ ತಕ್ಕ ಮಗ ಮುಂತಾದವು. ಇದರಂತೆ ‘ತವರಿನ’ ಬಳಕೆಯೂ ಅಷ್ಟೆ ಸಾಮಾನ್ಯ-ಹಾಲುಂಡ ತವರು, ತಾಯಿಯಿಲ್ಲದ ತವರು, ತವರುಮನೆ ಉಡುಗೊರೆ, ತವರಿನ ತೊಟ್ಟಿಲು, ತವರಿನ ಕಾಣಿಕೆ, ತವರಿಗೆ ಬಾ ತಂಗಿ, ದೇವರು ಕೊಟ್ಟ ತಂಗಿ, ಅಕ್ಕ ಹೀಗೇ ಪಟ್ಟಿ ಬೆಳೆಯುತ್ತದೆ. ಇನ್ನು ‘ತಾಳಿಯ’ ಮಹತ್ವವು ಅಷ್ಟೆ ಜೋರಾಗಿದೆ. ಅರಿಷಿಣ-ಕುಂಕುಮ, ತಾಳಿಯ ಭಾಗ್ಯ, ಮಾಂಗಲ್ಯಭಾಗ್ಯ, ತಾಳಿ ತಂದ ಭಾಗ್ಯ, ಮಾಂಗಲ್ಯಂ ತಂತು ನಾನೇನ, ತಾಳಿಯ ಆಣೆ, ಬೆಳ್ಳಿಕಾಲುಂಗರ ಇನ್ನು ಮುಂತಾಗಿ ಒಂದಕ್ಕೊಂದು ಬೆಳೆಯುತ್ತಲೇ ಹೋಗುತ್ತವೆ.

ಚಿತ್ರಶೀರ್ಷಿಕೆಗಳಿಗೆ ಈ ಧೋರಣೆಯವಾದರೆ ಇನ್ನು ಚಿತ್ರ ಕಥೆಗಳು ಹೇಗಿರಬಹುದು? ಇವುಗಳನ್ನು ವಿಶ್ಲೇಷಿಸಲು ಇನ್ನೊಂದು ಅಧ್ಯಯನದ ಅಗತ್ಯವೇ ಇದೆ. ಆದಾಗ್ಯೂ ಇವುಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಭಾವನಾತ್ಮಕತೆಯಿಂದ ಸಂಬಂಧಗಳನ್ನು ಬೆಸೆಯುವ, ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಮಹಿಳೆಯನ್ನು ಹೆಚ್ಚೆಚ್ಚು ಅಳುಮುಂಜಿ ಪಾತ್ರಗಳಲ್ಲಿಯೇ ಪ್ರತಿನಿಧಿಸುವ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು ತಮ್ಮ ಬಂಡವಾಳವನ್ನು ಹೆಚ್ಚು ಮಾಡಿಕೊಳ್ಳುವಲ್ಲಿ ಮುಂದಾಗಿವೆ. ಒಂದು ಹಂತದಲ್ಲಿ ಸಂಪೂರ್ಣವಾಗಿ ಕೌಟುಂಬಿಕ ಮೂಲಕ್ಕೆ ಸೀಮಿತವಾದ ಸದಾ ಕಷ್ಟ, ತ್ಯಾಗದಲ್ಲಿಯೇ ಕಣ್ಣೀರಿನ, ಗೋಳಿನ ನಾಯಕಿಯರನ್ನು ಪ್ರತಿನಿಧಿಸಿದರೆ, ಇನ್ನೊಂದು ಹಂತದಲ್ಲಿ ಪ್ರತಿ ಚಿತ್ರದಲ್ಲಿಯೂ ಅನಾವಶ್ಯಕವಾಗಿ ‘ಐಟಂ ಸಾಂಗನ್ನು’ ಪ್ರಸ್ತುತಪಡಿಸಿ ಅದಕ್ಕೆ ತಕ್ಕಂತೆ ಬಿಕೆನಿ ಧರಿಸಿ ಕುಣಿಯುವ ಮಹಿಳೆಯನ್ನು ಪ್ರತಿನಿಧಿಸಲಾಗುತ್ತದೆ. ಹಾಗೆ ಅತಿ ಸೊಕ್ಕಿನ ಹೆಣ್ಣನ್ನು ಚಿತ್ರಿಸಿ ಅವಳ ಸೊಕ್ಕಡಗಿಸಿ, ಅಂದರೆ ‘ಗಂಡುಬೀರಿ’ಯಾದ ಹೆಣ್ಣನ್ನು ನಾಯಕ ಸೊಕ್ಕಡಗಿಸಿ ‘ಸ್ತ್ರೀತ್ವದ’ ಗುಣಗಳನ್ನು ಬೆಳೆಸಿ ನಾಯಕನಿಗೆ ಶರಣಾಗುವ ನಾಯಕಿಯನ್ನು ಚಿತ್ರಿಸುವ ಮೂಲಕ ಹೆಣ್ಣಿಗೆ ಅಂತಿಮವಾಗಿ ತ್ಯಾಗ, ಸಹನೆ, ಶರಣಾಗತಿಯೇ ಮುಖ್ಯ ಎಂಬಂತೆ ಪ್ರತಿನಿಧಿಸಲಾಗುತ್ತದೆ. ಚಲನಚಿತ್ರಗಳಷ್ಟೆ, ಚಲನಚಿತ್ರಗೀತೆಗಳ ಮೋಡಿ ವಿಶಾಲವಾದದ್ದು. ದೃಶ್ಯ ಮಾಧ್ಯಮಕ್ಕಿಂತಲೂ ಸುಲಭವಾಗಿ ಕಿವಿಗೆ ನಿಲುಕುವಂಥದ್ದು. ಹೆಚ್ಚೆಚ್ಚು ಆಪ್ತವಾಗಿ ಜನರನ್ನು ಎಲ್ಲಾ ಸಮಯದಲ್ಲೂ ಮುಟ್ಟುವಂಥದ್ದು. ‘‘ಬಾಳ ಬಂಗಾರ ನೀನು,, ಹಣೆಯ ಸಿಂಗಾರ ನೀನು, ನಿನ್ನ ಕೈಲಾಡೋ ಗೊಂಬೆ ನಾನಯ್ಯಾ, ಗೊಂಬೆ ನಾನಯ್ಯ” ಎನ್ನುವಲ್ಲಿ ಇಲ್ಲಿರುವ ಧೋರಣೆಯನ್ನು ಹೆಚ್ಚು ವಿಸ್ತರಿಸುವ ಅವಶ್ಯಕತೆ ಇಲ್ಲವೆನಿಸುತ್ತದೆ. “ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಎಂದು ಪ್ರಾರಂಭವಾಗುವ ಗೀತೆ……..ಕ್ಷಮಿಸುವ ನೀ ಕಿನ್ನರಿ ನುಡಿಸಲೇ ನಿನ್ನನು…… ಎನ್ನುವುದಾಗಲಿ “ನುಡಿಸಲು ನೀನು ನುಡಿವೆನು ನಾನು, ನೀ ಸೂತ್ರಧಾರ ನಾ ಪಾತ್ರಧಾರಿ”…..ಎನ್ನುವುದಾಗಲಿ ಇವುಗಳಲ್ಲಿ ಗಂಡಿನ ಸಾಂಗತ್ಯವಿಲ್ಲದೆ ಅವಳಿಗೆ ಅಸ್ತಿತ್ವವೇ ಇಲ್ಲವೆಂಬಂತೆ ಜೊತೆಗೆ ಅವನ ಅಧೀನದಲ್ಲಿರುವುದೇ ಅವಳ ಅಸ್ತಿತ್ವವೆಂಬಂತೆ ಪ್ರತಿನಿಧಿಸಿದೆ. ಇನ್ನು ಕೆಲವು ದೃಶ್ಯ ಶ್ರವ್ಯ ಎರಡೂ ರೀತಿಯಿಂದ ನೋಡುಗರನ್ನು ಆಕರ್ಷಿಸುತ್ತವೆ. ಗಂಡು ಹೆಣ್ಣಿಗೆ ಹಾಕುವ ಸವಾಲು “ಛಲವೇತಕೆ? ಎಲ್ಲರೆದುರು ಮಾನ ಹೋಗಿ ಕಡೆಗೆ ಮನೆಗೆ ಹೋಗುವೆ”…….ಗೀತ ಸಾಹಿತ್ಯದ ಪೂರಕ ದೃಶ್ಯದಲ್ಲಿ ನಾಯಕ ತನ್ನ ಒಂದೊಂದೇ ಬಟ್ಟೆ ತೆಗೆದೆಸೆಯುತ್ತಾನೆ. ಹಾಗೆ ಮಾಡಲಾಗದ ನಾಯಕಿಗೆ ಸೋಲು ಅನಿವಾರ್ಯವೆಂದು ಹೇಳಬೇಕಾಗಿಲ್ಲ.

ಇನ್ನು ತಾಯ್ತನ ಮತ್ತು ‘ಪತಿವ್ರತಾ’ ಗುಣಗಳನ್ನು ವರ್ಣಿಸುವ ಗೀತೆಗಳಂತೂ ನಾಮುಂದು ತಾಮುಂದು ಎನ್ನುವಷ್ಟಿವೆ. ಉದಾ. “ಸುಮತಿ ಸುಮತಿ ಶ್ರೀಮತಿ ಆರು ಗುಣಗಳೇ ನಿನ ಕೀರುತಿ” ಎಂದು ಪ್ರಾರಂಭವಾಗಿ ಕಾರ್ಯೇಶು ದಾಸಿ, ಕರುಣೇಶು ಮಂತ್ರಿ, ಶಯನೇಶು ವೇಶ್ಯೆ,ರೂಪೇಶು ಲಕ್ಷ್ಮಿ, ಬೋಚೇಶು ಮಾತಾ ಕ್ಷಮಯಾಧರಿತ್ರಿ”….. ಎಂದು ಹೆಣ್ಣಿಗೆ ಇರಬೇಕಾದ ಆರು ಗುಣಗಳೆಂದು ಪುನರ್ ಉತ್ಪಾದಿಸುತ್ತದೆ. “ಬೆಳ್ಳಿಕಾಲುಂಗರ ಶ್ರೀಮತಿಗೆ ಶೃಂಗಾರ” ಎಂದು ಪ್ರಾರಂಭವಾಗುವ ಹಾಡು ಒಂದೊಂದು ಆಭರಣವು ಹೆಣ್ಣಿಗೆ ಇರುವ ನಿರ್ದೇಶನಗಳೆಂಬಂತೆ ಧ್ವನಿಸುತ್ತದೆ. ಹೆಣ್ಣು ಎಂಬ ಸಂಯಮವನ್ನು ಮೀರಬಾರದು ಎಂಬ ಕಾರಣಕ್ಕೆ ಬಳೆ, ಕಾಲುಂಗರ, ಕಾಲಗೆಜ್ಜೆ ಇವುಗಳಿವೆ ಎಂದು ವರ್ಣಿಸಲಾಗಿದೆ. ಜೊತೆಗೆ ಇವಲ್ಲದೆ ಪ್ರೀತಿ, ಪ್ರೇಮ, ವಿರಸ, ವಿರಹ ಮುಂತಾದ ವಸ್ತುಗಳನ್ನು ಪ್ರಧಾನವಾಗಿಟ್ಟುಕೊಂಡು ಹೆಣ್ಣಿನ ಸುತ್ತಲೇ ಗಿರಕಿ ಹೊಡೆಯುವ ಅಪಾರ ಚಿತ್ರಗಳೂ ಇವೆ. ಒಟ್ಟಾರೆ ಹೇಳುವುದಾದರೆ ಚಲನಚಿತ್ರ ಮಾಧ್ಯಮವು ಸಂಪೂರ್ಣ ಬಂಡವಾಳಶಾಹಿ ಧೋರಣೆಯದು. ಪ್ರತಿ ಪೈಸೆಯನ್ನು ಖರ್ಚು ಮಾಡಿದ ಪ್ರತಿಕ್ಷಣದಲ್ಲಿ ಅದನ್ನು ಹಿಂದಕ್ಕೆ ಪಡೆಯುವುದು ಹೇಗೆಂಬ ಚಿಂತನೆಯನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಹಾಗಾಗಿ ಪರಿವರ್ತನೆ ತರಬಲ್ಲ ಶಕ್ತಿ ಚಿತ್ರಮಾಧ್ಯಮಕ್ಕೆ ಇದೆ. ಆದರೆ ಅದರ ಮನೋಧೋರಣೆ ಮಾತ್ರ ಬಂಡವಾಳಶಾಹಿ ಮತ್ತು ಪುರುಷ ಪ್ರಧಾನ ವ್ಯವಸ್ಥೆಯ ವ್ಯತ್ಯಾಸಗಳಿಂದಾವೃತ್ತವಾಗಿದೆ.

ರಿಯಾಲಿಟಿ ಶೋಗಳು ಮತ್ತು ಇತರ ಕಾರ್ಯಕ್ರಮಗಳು

ಇತ್ತೀಚಿನ ದಿನಗಳಲ್ಲಿ ಚಲನಚಿತ್ರಕ್ಕಿಂತಲೂ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಕಾರ್ಯಕ್ರಮಗಳೆಂದರೆ  ‘ರಿಯಾಲಿಟಿ ಶೋಗಳು; ಇವುಗಳಲ್ಲಿ ಹೆಚ್ಚೆಚ್ಚು ಮನರಂಜನೆಗಳಿರುತ್ತವೆ. ಜೊತೆಗೆ ಹಲವು ಸಂದೇಶಗಳನ್ನು ಸಹ ಹಲವು ಪಾತ್ರಗಳ ಮೂಲಕ ಪ್ರತಿನಿಧಿಸುತ್ತದೆ. ಇಂಥ ಕಾರ್ಯಕ್ರಮಗಳಲ್ಲಿ ನೇರವಾಗಿ ಜನಮಾನಸವೇ ಪಾತ್ರವಹಿಸುತ್ತದೆ. ಇಲ್ಲಿ ಕೇವಲ ನಿರೂಪಕ, ನಿರೂಪಕಿಯರು ಮಾತ್ರ ಇರುತ್ತಾರೆ. ಉಳಿದಂತೆ ಜನಸಾಮಾನ್ಯರೆ ಈ ಕಾರ್ಯಕ್ರಮಗಳ ಪಾತ್ರಧಾರಿಗಳು. ಹಾಗಾಗಿ ಈ ಕಾರ್ಯಕ್ರಮಗಳು ಜನಮಾನಸದಲ್ಲಿ ಹೆಚ್ಚಿನ ಆಕರ್ಷಣೆಯನ್ನು ಉಳಿಸಿಕೊಂಡಿವೆ. ಇದುವರೆಗೆ ವಿಶ್ಲೇಷಿಸಿದ ಹಾಗೆ ಇಲ್ಲಿಯೂ ಸಹ ಮಹಿಳೆಯರು ಸಕ್ರಿಯಾಗಿ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ ಮಹಿಳಾ ಅಧ್ಯಯನ ವಿಶ್ಲೇಷಿಸುವುದು ಮಹಿಳೆಯ ಸಹಭಾಗಿತ್ವದ ಬಗ್ಗೆ ಅಲ್ಲ. ಬದಲಾಗಿ ಈ ಕಾರ್ಯಕ್ರಮಗಳ ಧೋರಣೆಗಳ ಬಗ್ಗೆ.

ಮಾಂಗಲ್ಯಂ ತಂತು ನಾನೇನ, ಸ್ವಯಂವರ, ಕನಸಿನ ಕಣ್ಮಣಿ, ಲೇಡಿಬಾಸ್‌, ಹೋಂ ಮಿನಿಸ್ಟರ್, ಗೆಲ್ರಮ್ಮ ಗೆಲ್ಲಿ, ಸುಹಾಸಿನಿ, ವನಿತಾ, ಬದುಕು ಜಟಕಾ ಬಂಡಿ, ಪ್ಯಾಟೆ ಹುಡ್ಗೇರು ಹಳ್ಳಿಗೆ ಬಂದ್ರು, ಹಳ್ಳಿ ಹೈದ ಪ್ಯಾಟೆಗೆ ಬಂದ, ಈ ರೀತಿ ಕಾರ್ಯಕ್ರಮಗಳ ಪಟ್ಟ ಬೆಳೆಯುತ್ತಲೇ ಹೋಗುತ್ತದೆ. ಜೊತೆಗೆ ಇಲ್ಲಿಯ ಕೆಲವು ಕಾರ್ಯಕ್ರಮಗಳ ಶೀರ್ಷಿಕೆಗಳು ಹೇಳುತ್ತವೆ. ಕಾರ್ಯಕ್ರಮ ಧೋರಣೆ ಏನೆಂಬುದನ್ನು. ‘ರುಚಿ ಅಭಿರುಚಿಯಂಥ’, ನಳಪಾಕ ಕಾರ್ಯಕ್ರಮಗಳು ಹೆಸರೇ ಹೇಳುವಂತೆ ನಳ ಚರಿತ್ರೆಯಿಂದಲೇ ಅಡುಗೆ ಮಾಡುವ ಪ್ರಕ್ರಿಯೆಯಲ್ಲಿ ಗಂಡಸರದೇ ಮೇಲುಗೈ ಎಂದಿದ್ದರೂ, ಈ ಹೊತ್ತಿನ ಕಾರ್ಯಕ್ರಮಕಗಳಲ್ಲಿ ಮಾತ್ರ ಮಹಿಳೆಯನ್ನೇ ಉದ್ದೇಶಿಸಿ ಮಹಿಳೆಯನ್ನು ಬಳಸಿಕೊಂಡು ಗಂಡು, ಮಕ್ಕಳಿಗಾಗಿಯೇ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಸಂಭ್ರಮದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಧ್ಯಮಗಳು ಪ್ರೇರೇಪಿಸುತ್ತವೆ. ಆದಾಗ್ಯೂ ಕೆಲವು ಚಾನಲ್‌ಗಳಲ್ಲಿ ಗಂಡಸರನ್ನು ಇಂಥ ಕಾರ್ಯಕ್ರಮಗಳಲ್ಲಿ ಪ್ರತಿನಿಧಿಸುವುದುಂಟು. ಆದರೆ ಪ್ರಮಾಣ ಅತ್ಯಲ್ಪ, ಜೊತೆಗೆ ಇದರ ಸ್ವರೂಪವೂ ಭಿನ್ನ.

‘ಮಾಂಗಲ್ಯ ತಂತು ನಾನೇನ’‘ಕನಸಿನ ಕಣ್ಮಣಿ’ಯಂತಹ ಕಾರ್ಯಕ್ರಮಕಗಳು ವೈವಾಹಿಕ ಜೀವನಕ್ಕೆ ಸಂಬಂಧಪಟ್ಟವೂ, ಅದರಲ್ಲೂ ‘ಕನಸಿನ ಕಣ್ಮಣಿ’ ಕಾರ್ಯಕ್ರಮ ಹೆಣ್ಣಿನ ವೈವಾಹಿಕ ಜೀವನಕ್ಕೆ ಒಂದು ಬಗೆಯ ತರಬೇತಿ ಕೊಡುವ ನಿಟ್ಟಿನಲ್ಲಿದೆ. ಸೊಸೆಯಾದವಳು ಹೇಗಿರುತ್ತಾಳೆ, ಅತ್ತೆಯಾದವಳು ಹೇಗಿರುತ್ತಾಳೆ ಎಂಬುದನ್ನು ಹೆಚ್ಚು ನಕರಾತ್ಮಕ ಮೌಲ್ಯಗಳನ್ನು ವೈಭವೀಕರಿಸಿ ಸಾಂಪ್ರದಾಯಿಕ ಮೌಲ್ಯಗಳನ್ನೇ ಸ್ಥಿರೀಕರಿಸುವ ಸಂಗತಿಗಳು ಹೆಚ್ಚೆಚ್ಚು ಪ್ರತಿನಿಧಿತವಾಗುತ್ತಿವೆ. ವಾಸ್ತವದಲ್ಲಿ ಎಷ್ಟೇ ಅವಿಭಕ್ತ ಕುಟುಂಬಗಳು ಸಹಭಾಳ್ವೆಯಿಂದ ಇರುವ ನಿದರ್ಶನಗಳಿದ್ದರೂ ಸಹ ಇಂತಹ ಕೆಲವು ಕಾರ್ಯಕ್ರಮಗಳು ಮಾತ್ರ ನಕಾರಾತ್ಮಕ ಮೌಲ್ಯಗಳನ್ನೇ ಪ್ರತಿನಿಧಿಸುತ್ತವೆ. ಜೊತೆಗೆ ಹೆಣ್ಣಿನ ವಿವಾಹ ಅವಶ್ಯಕ ಮತ್ತು ವೈವಾಹಿಕ ಜೀವನದಲ್ಲಿ ಹೀಗೆ ಇರಬೇಕು ಎನ್ನುವ ನಿರ್ದೇಶನಗಳನ್ನು ಸಹ ಕೊಡುತ್ತವೆ.

ಇನ್ನು ಸುಹಾಸಿನಿ, ವನಿತಾ ಮುಂತಾದ ಕಾರ್ಯಕ್ರಮಗಳೂ ‘ಮಹಿಳೆಯ ಪರಿಪೂರ್ಣತೆಗಾಗಿ’ ಎಂಬ ಸಂದೇಶಗಳನ್ನೇ ಹೊತ್ತು ಬರುವ ಈ ಕಾರ್ಯಕ್ರಮಗಳು ಮಹಿಳೆ ಸುಂದರವಾಗಿ ಕಾಣಬೇಕಾದರೆ ಏನು ಮಾಡಬೇಕು, ಅಲಂಕಾರ ಹೇಗೆ ಮಾಡಿಕೊಳ್ಳಬೇಕು. ಎಲ್ಲೆಲ್ಲಿ ಏನೇನು ವಿಶೇಷ ಉಡುಗೆ, ತೊಡುಗೆಗಳು ಸಿಗುತ್ತವೆ. ಆಭರಣಗಳ ವಿನ್ಯಾಸ, ಕೇಶ ವಿನ್ಯಾಸ, ವಸ್ತ್ರ ವಿನ್ಯಾಸಗಳು ಹೇಗಿರಬೇಕು ಮತ್ತು ಸ್ಲಿಮ್‌ ಅಂಡ್‌ ಫಿಟ್‌ ಆಗಿ ಹೇಗಿರಬೇರಬೇಕು. ಮಗುವಿನ ಲಾಲನೆಪಾಲನೆ, ಕುಟುಂಬದ ನಿರ್ವಹಣೆ ಗೃಹಾಲಂಕಾರ ಇವುಗಳ ಬಗೆಗಿನ ವೈಭವೀಕರಣವೇ ಹೆಚ್ಚಾಗಿರುತ್ತವೆ. ಹಾಗೇ ‘ಬದುಕು ಜಟಕಾಬಂಡಿ’ ‘ಕಥೆ ಅಲ್ಲ ಜೀವನ’ ಇಂತಹ ಕಾರ್ಯಕ್ರಮಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಅದರಲ್ಲೂ ಕೌಟುಂಬಿಕ ಸಮಸ್ಯೆಗಳಿಗೆ ಮತ್ತು ಮಹಿಳಾ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳಾದರೂ ಇಲ್ಲಿ ಹೆಚ್ಚಾಗಿ ಮಧ್ಯಮವರ್ಗದ ಮಹಿಳೆಯ ಸಮಸ್ಯೆಗಳ ವೈಭವೀಕರಣವೇ ಹೆಚ್ಚು, ಪರಿಹಾರೋಪಾಯಗಳು ಕಡಿಮೆ. ಇನ್ನು `Deal or No Deal’ ನಂಥ ಕಾರ್ಯಕ್ರಮಗಳಲ್ಲಿ ಬ್ರೀಫ್‌ಕೇಸನ್ನು ಹಿಡಿದು ಬರುವ ಯುವತಿಯರು ತಮ್ಮ ತಳುಕು ಬಳುಕಿನ ದೇಹವನ್ನು ಪ್ರದರ್ಶಿಸಲೆಂದೇ ಬರುವವರೆಂಬಂತೆ, ಜೊತೆಗೆ ನಿರ್ಜೀವ ವಸ್ತುಗಳಂತೆ ಅವರನ್ನು ಅಲ್ಲಿ ಪ್ರತಿನಿಧಿಸಲಾಗುತ್ತದೆ. ಹಾಗೇ ಗೆಲ್ರಮ್ಮ ಗೆಲ್ರಿ, ಲೇಡಿಬಾಸ್‌, ಹೋಮ್‌ ಮಿನಿಸ್ಟರ್ ಮುಂತಾದ ಕಾರ್ಯಕ್ರಮಗಳಂತೂ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಜೊತೆಗೆ ಆಟಗಳನ್ನು ಆಡಿಸುವ ಒಂದು ರೀತಿ ಕಾಮಿಡಿಶೋಗಳೆಂಬಂತೆ, ಗೃಹಿಣಿಯನ್ನು ನಗಿಸಲು ಬರುವ ಜೋಕರಗಳೆಂಬಂತೆ ಪ್ರತಿನಿಧಿಸಲಾಗುತ್ತದೆ. ಜೊತೆ ಸರಿಯಾದ ಉತ್ತರವನ್ನು ಹೇಳಿದವರಿಗೆ ಸೀರೆಯ ಉಡುಗೊರೆ, ಆಟದಲ್ಲಿ ಗೆದ್ದವರಿಗೆ ಬೇರೆ ಬೇರೆ ಉಡುಗೊರೆಗಳನ್ನು ಕೊಡುವ ಮೂಲಕ ಇಂತಹ ಕಾರ್ಯಕ್ರಮಗಳು ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಹಲವು ತಂತ್ರಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುತ್ತವೆ.

ಇತ್ತೀಚೆಗೆ ಸುವರ್ಣವಾಹಿನಿಯಲ್ಲಿ ಹೆಚ್ಚು ಜನಪ್ರಿಯಗೊಳಿಸುತ್ತಿರುವ ಕಾರ್ಯಕ್ರಮವೆಂದರೆ ‘ಪ್ಯಾಟೆ ಹುಡ್ಗೇರು ಹಳ್ಳಿಗೆ ಬಂದ್ರು’ ಇದಕ್ಕೆ ವಿರುದ್ಧವಾಗಿ ‘ಹಳ್ಳಿ ಹುಡ್ಗುರು ಪ್ಯಾಟೆಗೆ ಬಂದ್ರು’, ಈ ಕಾರ್ಯಕ್ರಮದ ಪರಿಕಲ್ಪನೆ ಒಂದು ರೀತಿ ಉತ್ತಮದ್ದೆಂದರೂ ಅಂದರೆ ಎರಡು ಸಂಸ್ಕೃತಿಗಳ ನಗರದಲ್ಲಿರುವವರಿಗೆ ಹಳ್ಳಿಯ ಬದುಕಿನ ಅನುಭವ, ಹಳ್ಳಿಯಲ್ಲಿರುವ ನಗರ ಬದುಕಿನ ಅನುಭವವನ್ನು ಮಾಡುಕೊಡುವುದಾಗಿದ್ದರೂ ಹುಡುಗ, ಹುಡುಗಿಯರನ್ನು ಪ್ರತಿನಿಧಿಸಿದ ಕ್ರಮದಲ್ಲಿ ಭಿನ್ನತೆಗಳಿವೆ. ಉದಾಹರಣೆಗೆ ಪ್ಯಾಟೆ ಹುಡ್ಗೇರು ಹಳ್ಳಿಗೆ ಬಂದ್ರು ಎನ್ನುವಲ್ಲಿ ಹಳ್ಳಿಯ ಎಲ್ಲಾ ಕೆಲಸಕಾರ್ಯಗಳನ್ನು, ಎಲ್ಲಾ ಚಟುವಟಿಕೆಗಳಲ್ಲಿಯೂ ಈ ಹುಡುಗಿಯರು ಭಾಗವಹಿಸುವುದಾಗಿರಬಹುದು. ಜೊತೆಗೆ ಮಕ್ಕಳ ಲಾಲನೆ, ಪಾಲನೆಯಾಗಿರಬಹುದು. ಅಡುಗೆ ಮಾಡುವುದಾಗಿರಬಹುದು, ಇಲ್ಲೆಲ್ಲಾ ಹುಡುಗಿಯರು ಹುಡುಗಿಯರು ಹುಡುಗರ ಸಹಾಯವಿಲ್ಲದ ಹಳ್ಳಿಯ ಜನರ ಸಹಕಾರದೊಟ್ಟಿಗೆ ಸಕ್ರಿಯವಾಗಿ ಭಾಗಿಯಾಗುವುದು ಕಾಣುತ್ತದೆ. ಆದರೆ ‘ಹಳ್ಳಿ ಹುಡ್ಗರು ಪ್ಯಾಟೆಗೆ ಬಂದ್ರು’ ಇಲ್ಲಿ ಹಳ್ಳಿ ಹುಡುಗರಿಗೂ ಪ್ರತಿಯೊಂದು ಹಂತದಲ್ಲೂ ತರಬೇತಿದಾರಳಾಗಿ ಹುಡುಗಿಯರನ್ನು ಪ್ರತಿನಿಧಿಸುವುದು. ಇಲ್ಲಿ ಹುಡುಗರ ತರಬೇತಿ ಎಂದರೆ ಕಂಪ್ಯೂಟರನ್ನು ಉಪಯೋಗಿಸುವುದು ಆಧುನಿಕ ಜೀವನಶೈಲಿಯನ್ನು ಕಲಿಸುವುದು ಮುಂತಾಗಿ ಪತ್ರಿಕೆಯ ವರದಿಯೊಂದು ಹೇಳುವಂತೆ “ಮಹಿಳೆಯರನ್ನು ಸೆಳೆಯುವ ಆಕರ್ಷಣೆ ಹಾಗೂ ಮುಗ್ಧ ಮುಖದಿಂದ ಮಕ್ಕಳಿಗೆ ಕಾಜೋಲ್‌ ಪ್ರಿಯವಾಗುವುದರಿಂದ ಜಾಹೀರಾತಿಗೆ ಆಕೆ ಬೇಕೆ ಬೇಕು. ಮದುವೆಯ ನಂತರವೂ ಗ್ಲಾಮರ್ ಉಳಿಸಿಕೊಂಡಿರುವುದೂ ಪ್ಲಸ್‌ಪಾಯಿಂಟ್‌ ಎನ್ನುತ್ತಾರೆ ಜಾಹೀರಾತು ತಜ್ಞರು (೧೧ ಸೆಪ್ಟೆಂಬರ್ ೨೦೧೦, ವಿಜಯ ಕರ್ನಾಟಕ). ಇದುವರೆಗಿನ ಹಲವು ಮಾಧ್ಯಮ ಪಠ್ಯಗಳ ವಿಶ್ಲೇಷಣೆಯ ಜೊತೆ ಈ ವರದಿಯನ್ನು ನೋಡಿದರೆ ಗೊತ್ತಾಗುತ್ತದೆ. ಮಹಿಳೆಯನ್ನು ಪ್ರತಿನಿಧಿಸುವುದರ ಹಿಂದಿನ ಉದ್ದೇಶ ಏನೆಂಬುದು. ಹಾಗಾಗಿಯೇ ಮಾಧ್ಯಮ ತನ್ನ ಉದ್ದೇಶಿತ ಗ್ರಾಹಕರನ್ನಾಗಿ ವೀಕ್ಷಕರನ್ನಾಗಿ ರೂಪದರ್ಶಿಗಳಾಗಿ, ಮಹಿಳೆಯನ್ನು ಆಯ್ಕೆಮಾಡಿಕೊಳ್ಳುತ್ತದೆ, ಈ ಮೂಲಕ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತದೆ.

ಒಟ್ಟಾರೆ ವಿದ್ಯುನ್ಮಾನ ಮಾಧ್ಯಮ ಬಹಳಷ್ಟು ಪರಿಣಾಮಕಾರಿಯಾದ ಮಾಧ್ಯಮ. ಇದುವರೆಗಿನ ಎಲ್ಲಾ ಹಂತಗಳಲ್ಲಿ ವಿಶ್ಲೇಷಿಸಿದಂತೆ ಇನ್ನು ವಿಶ್ಲೇಷಿಸಬಹುದಾದ ಹಲವು ಸಂಗತಿಗಳಿದ್ದರೂ ಒಟ್ಟಾರೆ ಮಾಧ್ಯಮದ ಧೋರಣೆಯನ್ನು ಗ್ರಹಿಸಲು ಕೆಲವು ಪ್ರಾತಿನಿಧಿಕ ಸಂಗತಿಗಳನ್ನು ವಿಶ್ಲೇಷಿಸಿದ ಹಿನ್ನೆಲೆಯಲ್ಲಿ ಹೇಳುವುದಾದರೆ, ಜಾಹೀರಾತಿನಿಂದ ಹಿಡಿದು ಚಲನಚಿತ್ರ ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಹಿಳೆಯನ್ನು ಪ್ರತಿನಿಧಿಸಿದ ಕ್ರಮದಲ್ಲಿ ಏನೂ ಭಿನ್ನತೆಗಳಿಲ್ಲ. ಹಿಡಿಯಾಗಿ ಮಾಧ್ಯಮದ ಧೋರಣೆ ಹೇಳುವುದಾದರೆ ಇಲ್ಲಿ ಸ್ತ್ರೀ ಅಥವಾ ಪುರುಷ ಮುಖ್ಯ ಎನ್ನುವುದಕ್ಕೆ ಬದಲಾಗಿ ಸಮಾಜದ ಮೌಲ್ಯಗಳು ಮುಖ್ಯವಾಗುತ್ತವೆ. ಇವುಗಳ ಉದ್ದೇಶ ಲಿಂಗಭೇದವನ್ನು ಸೃಷ್ಟಿಮಾಡುವುದಲ್ಲ, ಬದಲಾಗಿ ‘ಲಾಭ’. ಇದಕ್ಕಾಗಿ ಸಮಾಜ ಒಪ್ಪಿದ ಮತ್ತು ಒಪ್ಪಬಹುದಾದ ಮೌಲ್ಯಗಳೊಂದಿಗೆ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ವಿದ್ಯುನ್ಮಾನ ಮಾಧ್ಯಮ ಅಂತಿಮವಾಗಿ ಮಾರ್ಕೆಟ್‌ ಪ್ರೇಣಿತ ವ್ಯವಸ್ಥೆಯಲ್ಲಿ ಮಹಿಳೆಯೇ ಸರಕಾಗಿಬಿಡುವ ಆತಂಕವನ್ನು ಸೃಷ್ಟಿಸುತ್ತದೆ. ಇದು ವಿದ್ಯುನ್ಮಾನ ಮಾಧ್ಯಮದ ಬಗೆಗಿನ ಸಂಗತಿಯಾದರೆ, ಇನ್ನು ಮುದ್ರಣ ಮಾಧ್ಯಮದ ಧೋರಣೆ ಎಂತಹದ್ದು ಎನ್ನುವುದನ್ನು ನೋಡುವುದಾದರೆ; ಅವಳು: “ಇದು ನಿಜಕ್ಕೂ ಅವಳ ಲೋಕ ಮಹಿಳೆಯ ಅಂತರಂಗದ ಅನಾವರಣವೇ ಅವಳು. ವಿವಿಧ ರೀತಿಯ ಅಡುಗೆ, ಆರೋಗ್ಯಯುತ ಅಡುಗೆಯನ್ನು ಪ್ರತಿ ಬುಧವಾರ ನಿಮ್ಮ ಮನೆ ಬಾಗಿಲಿಗೆ ಬಂದು ಕಲಿಸುತ್ತಾಳೆ. ಅವಳು ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾಳೆ. ಜೊತೆಗೆ ಒಡವೆ ವಸ್ತ್ರಗಳ ಸಂರಕ್ಷಣೆ ಕುರಿತು ಹೇಳುತ್ತಾಳೆ. ಪ್ರತಿ ಬುಧವಾರ ಅವಳಿಗಾಗಿ ಕಾಯಿರಿ” (ಉದಯ ವಾಣಿ ದಿ. ೨೦ ಅಕ್ಟೋಬರ್ ೨೦೧೦). ಇದು ಜನಪ್ರಿಯ ಪತ್ರಿಕೆಯೊಂದರ ಮಹಿಳಾ ಅಂಕಣದ ಮುಖವಾಣಿ. ಅಂಕಣದ ಬಗೆಗೆ ಒಂದು ರೀತಿ ಜಾಹಿರಾತು ಎಂದು ಹೇಳಬಹುದು.

“ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ನಡೆದದ್ದು ‘ಮಾಗಯೀನ್‌ ಭೂಮ್‌” ಏಕಾಏಕಿ ಭಾರತೀಯಾ ಪತ್ರಿಕಾ ಕ್ಷೇತ್ರದಲ್ಲಿ ನಿಯತಕಾಲಿಕೆಗಳ ಸಂಖ್ಯೆ ಏರಿತು. ಅತಿ ಹೆಚ್ಚಿನ ನಿಯತಕಾಲಿಕೆಗಳು ಪ್ರಕಟವಾಗಿ, ಪ್ರಮುಖವಾಗಿ ಎಂಬತ್ತರ ದಶಕವನ್ನು ನಿಯತಕಾಲಿಕಾ ದಶಕವೆಂದು ಘೋಷಿಸಲಾಯಿತು (ಡಾ.ಎನ್‌. ಉಷಾರಾಣಿ, ೨೦೦೨, ೨೨). ನಂತರ ೯೦ರ ದಶಕದಲ್ಲಿ ದಿನಪತ್ರಿಕೆಗಳಲ್ಲಿಯೂ ಒಂದು ಮಹಿಳಾ ಅಂಕಲಣ ಆರಂಭವಾಯಿತು. ಹಾಗಾಗಿ ಮಹಿಳಾ ವಿಜಯ, ಮಹಿಳಾ ಸಂಪದ, ಭೂಮಿಕಾ, ‘ಶಿ’, ಮಹಿಳಾ ಸ್ಪಂದನ, ಸಿಂಧೂರ, ಅವಳು, ಇನ್ನು ಹಲವು ಅಂಕಣಗಳಲ್ಲಿ ಮಹಿಳೆಯ ಅಭಿವೃದ್ಧಿಗೆ ಪೂರಕವಾಗುವ ವಿಷಯಗಳು ಅತ್ಯಲ್ಪ, ಹೆಚ್ಚಾಗಿ ಈ ಮುಂಚೆ ಉಲ್ಲೇಖಿಸಿದಂತೆ ‘ಅವಳು’ ಎನ್ನುವ ಮುಖವಾಣಿಯಲ್ಲಿ ಮಹಿಳೆಯ ಬಗೆಗೆ ಗ್ರಹಿಸಿರುವ ಸಂಗತಿಗಳೇನು ಎಂಬುದು ವಾಚ್ಯವಾಗಿಯೇ ತಿಳಿಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬರುವುದು ಸೌಂದರ್ಯದ ಕಾಳಜಿ, ಅಲಂಕಾರ, ಮಕ್ಕಳ ಪೋಷಣೆ, ಕಸೂತಿ, ಫ್ಯಾಶನ್‌, ಧಡೂತಿಯರಿಗೂ ಫ್ಯಾಶನ್‌ ರೆವಲ್ಯೂಶನ್‌ (ಸಿಂಧೂರ) ಇತ್ಯಾದಿ. ಇನ್ನೂ ಹೆಚ್ಚಿನ ಆಸಕ್ತಿಯ ವಿಷಯಗಳೆಂದರೆ, ಕೆಲವೊಂದು ವಿಷಯಗಳನ್ನು ಕೊಟ್ಟು ಓದುಗರಿಂದ ಪ್ರತಿಕ್ರಿಯೆ ತೆಗೆದುಕೊಳ್ಳುವುದು. ಉದಾಹರಣೆ ‘ನಿಮ್ಮ ಪತಿಗೆ ಸಿಟ್ಟು ಬಂದಾಗ ನೀವೇನು ಮಾಡುವಿರಿ, ನಿಮ್ಮ ಗಂಡ ನಿಮ್ಮನ್ನು ಹೊಗಳಿದಾಗ ನಿಮ್ಮ ಪ್ರತಿಕ್ರಿಯೆ’ (ಮಹಿಳಾ ವಿಜಯ),. ‘ಗಂಡಸರ ಭ್ರಷ್ಟಾಚಾರಕ್ಕೆ ಹೆಂಡತಿಯರ ಕುಮ್ಮಕ್ಕು’(ಸುಧಾ) ಇಂಥ ವಿಷಯಗಳನ್ನು ಕೊಟ್ಟು ಓದುಗರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ಓದುಗರನ್ನು ಆಕರ್ಷಿಸುತ್ತವೆ. ಇನ್ನು ನಿಯತಕಾಲಿಕೆಗಳಿಗೆ ಬಂದರೆ, ಫೆಮಿನಾ, ನಾರಿಟುಡೆ, ವುಮಜೆನ್ಸ್‌ ಎರಾ, ನಾರಿ, ಸ್ಯಾವಿ, ಸರಿತಾ, ಖೂಬ್‌ಸೂರತ್‌, ಗೃಹಶೋಭಾ, ಮುಂತಾದ ಪತ್ರಿಕೆಗಳು ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಗೃಹಲಂಕಾರ ಮಕ್ಕಳ ಲಾಲನೆ, ಪಾಲನೆ, ಹೊಸ ರುಚಿ(ಅಡುಗೆ) ಉಡುಗೆ ತೊಡುಗೆ, ಆಭರಣ, ಈ ವಿಷಯಗಳಿಗೆ ಸೀಮಿತವಾಗಿದ್ದು, ಈ ಎಲ್ಲಾ ಸಂಗತಿಗಳೇ ಅವಳ ‘ಕೆರಿಯರ್ ನ್ನು’ ರೂಪಿಸುತ್ತವೆ ಎನ್ನುವಷ್ಟರ ಮಟ್ಟಿಗೆ ಈ ವಿಷಯಗಳನ್ನು ಈ ಪತ್ರಿಕೆಗಳು ವೈಭವೀಕರಿಸುತ್ತವೆ.

ಒಟ್ಟಾರೆ ಹೆಚ್ಚಿನ ಮಹಿಳಾ ಪತ್ರಿಕೆಗಳು “ಸ್ತ್ರೀವಾದಿ” ನಿಲುವಿಗಿಂತ “ಸ್ತ್ರೀತನದ” ಹಿರಿಮೆಯನ್ನೇ ಎತ್ತಿಹಿಡಿಯುತ್ತವೆ. ಸ್ತ್ರೀಯರ ಪ್ರಪಂಚವೇ ಸೀಮಿತವೆಂಬಂತೆ ಈ ಪ್ರಪಂಚದಲ್ಲಿ ಕುಟುಂಬ ಮಕ್ಕಳು, ಗಂಡ, ಮದುವೆ, ಒಡವೆ, ಅಡುಗೆ, ತ್ಯಾಗ, ದುಡಿಮೆ, ಇಷ್ಟನ್ನು ಮಾತ್ರ ಪರಿಗಣಿಸಲಾಗುತ್ತದೆ. ಗೃಹಶೋಭಾ ಮೊದಲೇ ಮಹಿಳೆಗೆ ಗೃಹಿಣಿಯ ಪಾತ್ರವೇ ಹೆಚ್ಚು ಸೂಕ್ತ. ಆಕೆ ಮನೆಗೆ ಶೋಭೆ ಮುಂತಾದ ಕಲ್ಪನೆಗಳ ಸಮಾಜದಲ್ಲಿ ಹೆಚ್ಚಾಗಿದ್ದು ಈ ಪತ್ರಿಕೆ ಇದನ್ನೆ ಪುನರ್ ಉತ್ಪಾದಿಸುತ್ತದೆ.

ಒಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮ ಇರಬಹುದು. ಮುದ್ರಣ ಮಾಧ್ಯಮ ಇರಬಹುದು. ಇವುಗಳಿಗೆ ಸ್ತ್ರೀವಾದದ ಅಥವಾ ಮಹಿಳೆಯ ವಾಸ್ತವಸ್ಥಿತಿಗತಿ ಗೊತ್ತಿಲ್ಲವೆ ಎಂದರೆ ಖಂಡಿತಾ ಗೊತ್ತು. ಯಾಕೆಂದರೆ ಕೆಲವು ಪ್ರಗತಿಪರವಾದ ವಿಚಾರಗಳನ್ನು ಪ್ರಸಾರಮಾಡುತ್ತವೆ. ಆದರೆ ಪ್ರಮಾಣದ ದೃಷ್ಟಿಯಿಂದ ಅತ್ಯಲ್ಪ. ಇನ್ನು ಕೆಲವು ಬದಲಾವಣೆಗಳನ್ನು ತರಲು ಹೊಸ ಹೊಸ ಪ್ರಯೋ

ಗಗಳನ್ನು ಮಾಡುತ್ತವೆ. ಆದರೆ ಇವು ಕೇವಲ ತಾಂತ್ರಿಕ ಮಟ್ಟದಲ್ಲಿ ಜೊತೆಗೆ ಬದಲಾದ ಜೀವನ ಶೈಲಿಗಳ ಹಂತಕ್ಕೆ ಮಾತ್ರ. ಅದರಲ್ಲೂ ಮಹಿಳೆಯ ವಿಷಯದಲ್ಲಿ ಕೇವಲ ಬಾಹ್ಯವಾಗಿ ಅಂದರೆ ಅವಳ ಉಡುಗೆ, ತೊಡುಗೆಯ ಸಂಗತಿಗೆ ಮಾತ್ರ ಬದಲಾವಣೆ ನಿಂತಿದೆ. ಈ ಮುಂಚೆಯೇ ಹೇಳಿದಂತೆ ಮಾಧ್ಯಮ ಸಮಾಜದೊಟ್ಟಿಗೆ ನಿರಂತರವಾದ ಸಂಬಂಧವನ್ನಿಟ್ಟು ಕೊಂಡಿರುತ್ತದೆ. ಹಾಗಾಗಿಯೇ ಸಮಾಜದಲ್ಲಿ ನಡೆಯುವ ಎಲ್ಲಾ ಸಂಗತಿಗಳನ್ನು ಗ್ರಹಿಸುತ್ತದೆ. ಉದಾಹರಣೆಗೆ ಜಾಹಿರಾತುಗಳ ಬಗ್ಗೆ ಜನರ ಮನೋಭಾವ ಹೇಗಿರುತ್ತದೆಂಬುದನ್ನು ಜಾಹಿರಾತಿನಲ್ಲಿಯೇ ನಾವು ನೋಡಬಹುದು. ಅಂದರೆ ಅದು ತನ್ನ ಸೃಜನಶೀಲತೆಯಿಂದ ನಿರಂತರವಾದ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ. ಹಾಗಾಗಿಯೇ ಜನಪ್ರಿಯ ಮಾಧ್ಯಮವಾಗಬೇಕಾದರೆ ಅದು ನೋಡುಗರಿಗೆ ಓದುಗರಿಗೆ, ಒಟ್ಟಾರೆ ಸಮಾಜಕ್ಕೆ ಇಷ್ಟವಾಗಬೇಕು. ಎಲ್ಲಾ ಧರ್ಮ, ಸಂಸ್ಕೃತಿಗಳಿಗೂ ಅನ್ವಯವಾಗುವ ಕಾಮನ್‌ ಅಜೆಂಡ ಹೊಂದಿರಬೇಕು ಮತ್ತು ಸಮಾಜದಲ್ಲಿರುವ ಮೌಲ್ಯಗಳನ್ನೇ ಇದು ಅಳವಡಿಸಿಕೊಂಡಿರಬೇಕು. ಆಗ ನೋಡುಗರೂ, ಓದುಗರೂ ಇದನ್ನು ಒಪ್ಪುತ್ತಾರೆ ಎಂಬ ಗ್ರಹಿಕೆಯಲ್ಲಿ ಮಾಧ್ಯಮ ತನ್ನನ್ನು ರೂಪಿಸಿಕೊಳ್ಳುತ್ತದೆ.

ಮಾಧ್ಯಮಗಳು ಒಂದು ರೀತಿ ಸಮಾಜದ ಪ್ರತಿಬಿಂಬಗಳು ಮಾತ್ರವಲ್ಲ ಸಾಮಾಜಿಕ ಬದಲಾವಣೆಯ ಜವಾಬ್ದಾರಿಯನ್ನು ಹೊಂದಿರುವಂಥವು. ಆದ್ದರಿಂದ ಇರುವ ಸಾಮಾಜಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಸಮಾಜ ಏನನ್ನು ಬಯಸುತ್ತದೆ ಮತ್ತು ಏನನ್ನು ಬಯಸಬೇಕು ಎಂಬುದರ ಬಗ್ಗೆಯೂ ಕೆಲವು ಮೌಲ್ಯಗಳನ್ನು ಮಾಧ್ಯಮಗಳು ಹೇರುತ್ತವೆ. ಈ ಹೇರಿಕೆ ಸಾಮಾಜಿಕ ಬದಲಾವಣೆಗೆ ಕಾರಣವಾದರೆ ಒಳಿತು. ಆದರೆ ಬಂಡವಾಳಶಾಹಿ ದೇಶಕಾಲಬದ್ಧವಾದ ಪುರುಷ ಪ್ರಧಾನತೆಯನ್ನು ಬಳಸಿಕೊಂಡು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ.

ಕೊನೆ ಟಿಪ್ಪಣಿಗಳು

೧. ವಿಶೇಷ ದಿನಗಳಲ್ಲಿ ಪ್ರಸಾರವಾಗುವ ಚಲನಚಿತ್ರಗಳಲ್ಲಿ ಈಗಲೂ ಹೆಚ್ಚಿನ ಜಾಹಿರಾತುಗಳು ಪ್ರಸಾರವಾಗುತ್ತವೆ. ಅಂದರೆ Peak-timeನ್ನು ಗಮನಿಸಿ ಜಾಹಿರಾತುಗಳು ಪ್ರಸಾರವಾಗುತ್ತವೆ.

೨. ಸ್ಥಿರಮಾದರಿ ಎಂದರೆ ನಮ್ಮ ಮನಸ್ಸಿನಲ್ಲಿರುವ ಚಿತ್ರಣವಾಗಿದ್ದು, ಅರ್ಥಮಾಡಿಕೊಳ್ಳುವ ಶ್ರಮವನ್ನು ಉಳಿಸಿದೆ. ಆದರೆ ಬೇರೆಯವರ ವಾದವೆಂದರೆ ಸ್ಥಿರಮಾದರಿಗಳು ಶಾರ್ಟ್ ಸರ್ಕ್ಯೂಟ್‌ಗಳಾಗಿದ್ದು, ವಸ್ತುನಿಷ್ಠೆತೆಗಿರುವ ಸಾಮರ್ಥ್ಯವನ್ನು ಮುಚ್ಚಿಹಾಕುತ್ತವೆ ಎಂಬುದಾಗಿದೆ.

೩. ಇಂತಹ ಕಾರ್ಯಕ್ರಮಗಳ ಬಗೆಗೆ ಬೇರೊಂದು ಅಧ್ಯಯನದ ಅಗತ್ಯವಿದೆ. ಆದರೂ ಸಾಮಾನ್ಯ ಗ್ರಹಿಕೆಯಲ್ಲಿ ಹೇಳುವುದಾದರೆ ಅದರಲ್ಲೂ ಮಹಿಳೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳಿಂದಾಗುವ ಪ್ರಯೋಜನವನ್ನು ನೋಡಿದಾಗ ಇಲ್ಲಿ ಮಧ್ಯಮ ವರ್ಗದವರ ಸಮಸ್ಯೆಗಳ ಅನಾವರಣವೇ ಹೆಚ್ಚು.

ಉಲ್ಲೇಖಗಳು

  1. Arthur As a Berger, 1989, Media Analysis Techniques, Sage publication, New Delhi.
  2. IIajoshe, 1991, women Dimension on Television Concept publishing Company, New Delhi.
  3. Martin Lister and liz wells, 2001, Seeing beyond belief: cultural Studies as an approach to analysing the Visual, Handbook of Visual Analysis, the van Leeowon And Carey Jewitt(ed). Sage publication, New Delhi.

೪. ಕಲಾವತಿ ಬಿ.ಜಿ., ೨೦೦೭ ಜಾಹಿರಾತುಗಳಲ್ಲಿ ಮಹಿಳಾ ಪ್ರತಿನಿಧೀಕರಣ, ಕನ್ನಡ ವಿಶ್ವವಿದ್ಯಾಲಯ, ಪಿಎಚ್‌.ಡಿ. ಮಹಾಪ್ರಬಂಧ.

೫. ಡಾ. ಎನ್‌. ಉಷಾರಾಣಿ, ೨೦೦೨, ಮಾಧ್ಯಮ ಮತ್ತು ಮಹಿಳೆ, ರಾಧಾ ಟ್ರಸ್ಟ್‌, ಮಂಡ್ಯ.